ಮಾರ್ಕ
8 ಆ ದಿವಸಗಳಲ್ಲಿ ಪುನಃ ಜನರ ಒಂದು ದೊಡ್ಡ ಗುಂಪು ಕೂಡಿಬಂದಿದ್ದಾಗ ಅವರಿಗೆ ಊಟಕ್ಕೆ ಏನೂ ಇರಲಿಲ್ಲ. ಆಗ ಯೇಸು ಶಿಷ್ಯರನ್ನು ಕರೆದು ಅವರಿಗೆ, 2 “ಈ ಜನರ ಗುಂಪನ್ನು ನೋಡಿ ನನಗೆ ಕನಿಕರವಾಗುತ್ತಿದೆ, ಏಕೆಂದರೆ ಈಗಾಗಲೇ ಮೂರು ದಿವಸಗಳಿಂದ ಇವರು ನನ್ನೊಂದಿಗಿದ್ದಾರೆ ಮತ್ತು ಇವರ ಬಳಿ ಊಟಕ್ಕೆ ಏನೂ ಇಲ್ಲ; 3 ಇವರನ್ನು ನಾನು ಉಪವಾಸವಾಗಿಯೇ ಮನೆಗಳಿಗೆ ಕಳುಹಿಸಿಬಿಟ್ಟರೆ ದಾರಿಯಲ್ಲಿ ಇವರು ಬಳಲಿ ಹೋಗುವರು. ಇವರಲ್ಲಿ ಕೆಲವರು ಬಹಳ ದೂರದಿಂದ ಬಂದಿದ್ದಾರೆ” ಎಂದನು. 4 ಅದಕ್ಕೆ ಪ್ರತ್ಯುತ್ತರವಾಗಿ ಅವನ ಶಿಷ್ಯರು ಅವನಿಗೆ, “ಈ ನಿರ್ಜನ ಪ್ರದೇಶದಲ್ಲಿ ಇಲ್ಲಿರುವ ಯಾವನಾದರೂ ರೊಟ್ಟಿಗಳನ್ನು ಎಲ್ಲಿಂದ ತಂದು ಈ ಜನರನ್ನು ತೃಪ್ತಿಪಡಿಸಶಕ್ತನಾದಾನು?” ಎಂದು ಕೇಳಿದರು. 5 ಆದರೂ ಅವನು ಅವರಿಗೆ, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದನು. ಅದಕ್ಕವರು, “ಏಳು” ಎಂದು ಉತ್ತರಿಸಿದರು. 6 ಆಗ ಅವನು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು, ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆ ಸಲ್ಲಿಸಿ ಅವುಗಳನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟು ಹಂಚುವಂತೆ ತಿಳಿಸಿದನು. ಅವರು ಜನರ ಗುಂಪಿಗೆ ಹಂಚಿಕೊಟ್ಟರು. 7 ಅವರ ಬಳಿ ಕೆಲವು ಸಣ್ಣ ಮೀನುಗಳೂ ಇದ್ದವು; ಅವುಗಳಿಗಾಗಿ ದೇವರಿಗೆ ಸ್ತೋತ್ರಮಾಡಿದ ಬಳಿಕ ಅವುಗಳನ್ನೂ ಜನರಿಗೆ ಹಂಚಿಕೊಡುವಂತೆ ಹೇಳಿದನು. 8 ಅವರೆಲ್ಲರೂ ಊಟಮಾಡಿ ತೃಪ್ತರಾದರು ಮತ್ತು ಉಳಿದ ತುಂಡುಗಳನ್ನು ಕೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು. 9 ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ ಗಂಡಸರು. ಕೊನೆಗೆ ಅವನು ಅವರನ್ನು ಕಳುಹಿಸಿಬಿಟ್ಟನು.
10 ಆ ಕೂಡಲೆ ಅವನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ದಲ್ಮನೂಥ ಸೀಮೆಗೆ ಬಂದನು. 11 ಅಲ್ಲಿ ಫರಿಸಾಯರು ಬಂದು ಅವನನ್ನು ಪರೀಕ್ಷಿಸಲಿಕ್ಕಾಗಿ ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ತೋರಿಸಿಕೊಡಬೇಕೆಂದು ಕೇಳುತ್ತಾ ಅವನೊಂದಿಗೆ ತರ್ಕಿಸಲಾರಂಭಿಸಿದರು. 12 ಅವನು ಹೃದಯದಾಳದಲ್ಲಿ ಬಹಳವಾಗಿ ನೊಂದುಕೊಂಡು, “ಈ ಸಂತತಿಯು ಒಂದು ಸೂಚಕಕಾರ್ಯವನ್ನು ತೋರಿಸುವಂತೆ ಕೇಳುವುದೇಕೆ? ಈ ಸಂತತಿಗೆ ಯಾವುದೇ ಸೂಚಕಕಾರ್ಯವು ತೋರಿಸಲ್ಪಡುವುದಿಲ್ಲ ಎಂದು ನಿಜವಾಗಿ ಹೇಳುತ್ತೇನೆ” ಎಂದನು. 13 ಬಳಿಕ ಅವರನ್ನು ಬಿಟ್ಟು ಪುನಃ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೋದನು.
14 ಆದರೆ ಶಿಷ್ಯರು ತಮ್ಮೊಂದಿಗೆ ರೊಟ್ಟಿಯನ್ನು ತೆಗೆದುಕೊಂಡುಹೋಗಲು ಮರೆತರು. ದೋಣಿಯಲ್ಲಿ ಅವರ ಬಳಿ ಒಂದು ರೊಟ್ಟಿ ಮಾತ್ರ ಇತ್ತು. 15 ಅವನು ಅವರಿಗೆ, “ಎಚ್ಚರಿಕೆಯಿಂದಿರಿ, ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿಯೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿಯೂ ಜಾಗ್ರತೆಯಿಂದಿರಿ” ಎಂದು ಖಂಡಿತವಾಗಿ ಹೇಳಿದನು. 16 ಆಗ ಅವರು ನಮ್ಮಲ್ಲಿ ರೊಟ್ಟಿಯಿಲ್ಲವಲ್ಲಾ ಎಂದು ಪರಸ್ಪರ ಚರ್ಚಿಸಲಾರಂಭಿಸಿದರು. 17 ಇದನ್ನು ತಿಳಿದು ಅವನು ಅವರಿಗೆ, “ನೀವು ರೊಟ್ಟಿಯಿಲ್ಲವಲ್ಲಾ ಎಂದು ಚರ್ಚಿಸುತ್ತಿರುವುದೇಕೆ? ನೀವು ಇನ್ನೂ ಗ್ರಹಿಸದೆಯೂ ತಿಳಿದುಕೊಳ್ಳದೆಯೂ ಇದ್ದೀರೊ? ನಿಮ್ಮ ಹೃದಯಗಳು ವಿಷಯಗಳನ್ನು ಅರ್ಥಮಾಡಿಕೊಳ್ಳಲಾರದಷ್ಟು ಮಂದವಾಗಿವೆಯೊ? 18 ‘ನಿಮಗೆ ಕಣ್ಣಿದ್ದರೂ ಕಾಣುವುದಿಲ್ಲವೊ? ಕಿವಿಯಿದ್ದರೂ ಕೇಳುವುದಿಲ್ಲವೊ?’ 19 ನಾನು ಆ ಐದು ರೊಟ್ಟಿಗಳನ್ನು ಮುರಿದು ಐದು ಸಾವಿರ ಗಂಡಸರಿಗೆ ಹಂಚಿಸಿದಾಗ ನೀವು ಎಷ್ಟು ಬುಟ್ಟಿಗಳ ತುಂಬ ರೊಟ್ಟಿತುಂಡುಗಳನ್ನು ಒಟ್ಟುಗೂಡಿಸಿದಿರಿ ಎಂಬುದು ನಿಮಗೆ ನೆನಪಿಲ್ಲವೊ?” ಎಂದು ಕೇಳಿದ್ದಕ್ಕೆ ಅವರು “ಹನ್ನೆರಡು” ಎಂದು ಉತ್ತರಕೊಟ್ಟರು. 20 “ನಾನು ಏಳು ರೊಟ್ಟಿಗಳನ್ನು ಮುರಿದು ನಾಲ್ಕು ಸಾವಿರ ಗಂಡಸರಿಗೆ ಹಂಚಿಸಿದಾಗ ನೀವು ಎಷ್ಟು ಬುಟ್ಟಿಗಳ ತುಂಬ ರೊಟ್ಟಿತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಕೇಳಿದ್ದಕ್ಕೆ ಅವರು “ಏಳು” ಎಂದು ಉತ್ತರಕೊಟ್ಟರು. 21 ಅದಕ್ಕೆ ಅವನು, “ನೀವು ಇನ್ನೂ ಅರ್ಥವನ್ನು ಗ್ರಹಿಸಲಿಲ್ಲವೊ?” ಎಂದು ಅವರನ್ನು ಕೇಳಿದನು.
22 ತದನಂತರ ಅವರು ಬೇತ್ಸಾಯಿದಕ್ಕೆ ಬಂದರು. ಅಲ್ಲಿ ಜನರು ಒಬ್ಬ ಕುರುಡನನ್ನು ಅವನ ಬಳಿಗೆ ಕರೆತಂದು ಅವನನ್ನು ಮುಟ್ಟುವಂತೆ ಬೇಡಿಕೊಂಡರು. 23 ಅವನು ಆ ಕುರುಡನ ಕೈಹಿಡಿದುಕೊಂಡು ಊರ ಹೊರಗೆ ಕರೆದುಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳಿ ಅವನ ಮೇಲೆ ಕೈಗಳನ್ನಿಟ್ಟು, “ನಿನಗೇನಾದರೂ ಕಾಣುತ್ತಿದೆಯೊ?” ಎಂದು ಕೇಳಿದನು. 24 ಆ ಮನುಷ್ಯನು ಮೇಲಕ್ಕೆ ನೋಡಿ, “ನನಗೆ ಮನುಷ್ಯರು ಕಾಣುತ್ತಿದ್ದಾರೆ; ಅವರು ಮರಗಳಂತೆ ಕಾಣಿಸಿದರೂ ನಡೆದಾಡುತ್ತಾ ಇದ್ದಾರೆ” ಎಂದನು. 25 ಆಗ ಅವನು ಪುನಃ ಆ ಮನುಷ್ಯನ ಕಣ್ಣುಗಳ ಮೇಲೆ ಕೈಗಳನ್ನಿಟ್ಟನು ಮತ್ತು ಅವನು ಕಣ್ಣುಬಿಟ್ಟು ನೋಡಲು ಅವನಿಗೆ ಗುಣವಾಗಿತ್ತು; ಅವನಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. 26 ಅವನು ಆ ಮನುಷ್ಯನಿಗೆ, “ನೀನು ಊರೊಳಗೆ ಹೋಗಬೇಡ” ಎಂದು ಹೇಳಿ ಮನೆಗೆ ಕಳುಹಿಸಿಬಿಟ್ಟನು.
27 ಯೇಸುವೂ ಅವನ ಶಿಷ್ಯರೂ ಕೈಸರೈಯ ಫಿಲಿಪ್ಪೀ ಗ್ರಾಮಗಳಿಗೆ ಹೊರಟರು. ದಾರಿಯಲ್ಲಿ ಅವನು ತನ್ನ ಶಿಷ್ಯರಿಗೆ, “ನಾನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದನು. 28 ಅದಕ್ಕವರು, “ಕೆಲವರು ಸ್ನಾನಿಕನಾದ ಯೋಹಾನನೆಂದೂ ಇತರರು ಎಲೀಯನೆಂದೂ ಮತ್ತಿತರರು ಪ್ರವಾದಿಗಳಲ್ಲಿ ಒಬ್ಬನೆಂದೂ ಹೇಳುತ್ತಾರೆ” ಅಂದರು. 29 ಅದಕ್ಕೆ ಅವನು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದಾಗ ಪೇತ್ರನು, “ನೀನು ಕ್ರಿಸ್ತನು” ಎಂದು ಉತ್ತರಕೊಟ್ಟನು. 30 ಅದಕ್ಕೆ ಅವನು ತನ್ನ ವಿಷಯವಾಗಿ ಯಾರಿಗೂ ಹೇಳಬಾರದೆಂದು ಅವರಿಗೆ ಕಟ್ಟುನಿಟ್ಟಾಗಿ ಹೇಳಿದನು. 31 ಮಾತ್ರವಲ್ಲದೆ, ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಿ ಹಿರೀಪುರುಷರಿಂದಲೂ ಮುಖ್ಯ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಡುವನು ಮತ್ತು ಮೂರು ದಿನಗಳಾದ ಮೇಲೆ ಎದ್ದುಬರುವನು ಎಂದು ಅವರಿಗೆ ಬೋಧಿಸಲಾರಂಭಿಸಿದನು. 32 ಇದನ್ನು ಅವನು ಸ್ಪಷ್ಟವಾದ ಮಾತುಗಳಲ್ಲಿ ಹೇಳಿದನು. ಆದರೆ ಪೇತ್ರನು ಅವನನ್ನು ಬದಿಗೆ ಕರೆದುಕೊಂಡು ಹೋಗಿ ಗದರಿಸಲಾರಂಭಿಸಿದನು. 33 ಆಗ ಅವನು ತಿರುಗಿ ತನ್ನ ಶಿಷ್ಯರನ್ನು ನೋಡಿ ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು. ಏಕೆಂದರೆ ನೀನು ಆಲೋಚಿಸುವುದು ಮನುಷ್ಯರ ಆಲೋಚನೆಗಳೇ ಹೊರತು ದೇವರದಲ್ಲ!” ಎಂದು ಗದರಿಸಿದನು.
34 ಅನಂತರ ಅವನು ಶಿಷ್ಯರ ಜೊತೆಗೆ ಜನರ ಗುಂಪನ್ನೂ ತನ್ನ ಹತ್ತಿರ ಕರೆದು ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ. 35 ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಬಯಸುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು. 36 ಒಬ್ಬ ಮನುಷ್ಯನು ಇಡೀ ಲೋಕವನ್ನೇ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? 37 ಒಬ್ಬನು ನಿಜವಾಗಿಯೂ ತನ್ನ ಪ್ರಾಣಕ್ಕೆ ಪ್ರತಿಯಾಗಿ ಏನನ್ನು ಕೊಡುವನು? 38 ಈ ವ್ಯಭಿಚಾರದ ಮತ್ತು ಪಾಪಿಷ್ಠ ಸಂತತಿಯಲ್ಲಿ ಯಾವನು ನನ್ನ ವಿಷಯವಾಗಿಯೂ ನನ್ನ ಮಾತುಗಳ ವಿಷಯವಾಗಿಯೂ ನಾಚಿಕೆಪಡುವನೊ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆಯಲ್ಲಿ ಪವಿತ್ರ ದೇವದೂತರೊಡನೆ ಬರುವಾಗ ನಾಚಿಕೆಪಡುವನು.”