ಲೂಕ
9 ಬಳಿಕ ಅವನು ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ಎಲ್ಲ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿಯನ್ನೂ ಅಧಿಕಾರವನ್ನೂ ಕೊಟ್ಟನು. 2 ಅವನು ಅವರನ್ನು ದೇವರ ರಾಜ್ಯದ ಕುರಿತು ಸಾರುವುದಕ್ಕೂ ಗುಣಪಡಿಸುವುದಕ್ಕೂ ಕಳುಹಿಸುವಾಗ 3 ಅವರಿಗೆ, “ಪ್ರಯಾಣಕ್ಕಾಗಿ ಕೋಲನ್ನಾಗಲಿ ಆಹಾರದ ಚೀಲವನ್ನಾಗಲಿ ರೊಟ್ಟಿಯನ್ನಾಗಲಿ ಬೆಳ್ಳಿಯ ಕಾಸನ್ನಾಗಲಿ ತೆಗೆದುಕೊಂಡು ಹೋಗಬೇಡಿ; ಎರಡು ಒಳಉಡುಪುಗಳೂ ಬೇಡ. 4 ನೀವು ಒಂದು ಮನೆಗೆ ಹೋದಾಗ ಅಲ್ಲಿಯೇ ಉಳಿದುಕೊಳ್ಳಿರಿ ಮತ್ತು ಅಲ್ಲಿಂದಲೇ ಹೊರಡಿರಿ. 5 ಜನರು ನಿಮ್ಮನ್ನು ಬರಮಾಡಿಕೊಳ್ಳದಿದ್ದರೆ ನೀವು ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಅವರಿಗೆ ವಿರುದ್ಧವಾದ ಸಾಕ್ಷಿಯಾಗಿ ಝಾಡಿಸಿಬಿಡಿರಿ” ಎಂದು ಹೇಳಿದನು. 6 ಅವರು ಅಲ್ಲಿಂದ ಹೊರಟು ಕ್ಷೇತ್ರದಾದ್ಯಂತ ಹಳ್ಳಿಯಿಂದ ಹಳ್ಳಿಗೆ ಹೋಗಿ ಎಲ್ಲ ಕಡೆಗಳಲ್ಲಿ ಸುವಾರ್ತೆಯನ್ನು ಪ್ರಕಟಿಸಿದರು ಮತ್ತು ರೋಗಗಳನ್ನು ವಾಸಿಮಾಡಿದರು.
7 ಉಪಾಧಿಪತಿಯಾದ ಹೆರೋದನು ನಡೆಯುತ್ತಿದ್ದ ಎಲ್ಲ ಸಂಗತಿಗಳನ್ನು ಕೇಳಿಸಿಕೊಂಡು ಬಹಳ ಕಳವಳಗೊಂಡನು; ಏಕೆಂದರೆ ಯೋಹಾನನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ ಎಂದು ಕೆಲವರೂ 8 ಎಲೀಯನು ಕಾಣಿಸಿಕೊಂಡನು ಎಂದು ಇತರರೂ ಪುರಾತನ ಪ್ರವಾದಿಗಳಲ್ಲಿ ಒಬ್ಬನು ಎದ್ದಿದ್ದಾನೆ ಎಂದು ಇನ್ನಿತರರೂ ಹೇಳುತ್ತಿದ್ದರು. 9 ಆಗ ಹೆರೋದನು, “ನಾನೇ ಯೋಹಾನನ ತಲೆಯನ್ನು ಕಡಿಸಿದ್ದೇನೆ. ಹೀಗಿರುವಾಗ, ನಾನು ಯಾರ ಕುರಿತು ಈ ವಿಷಯಗಳನ್ನು ಕೇಳಿಸಿಕೊಳ್ಳುತ್ತಿದ್ದೇನೋ ಅವನು ಯಾರು?” ಎಂದು ಕೇಳಿದನು. ಆದುದರಿಂದ ಹೆರೋದನು ಅವನನ್ನು ನೋಡಲು ಪ್ರಯತ್ನಿಸುತ್ತಿದ್ದನು.
10 ಅಪೊಸ್ತಲರು ಹಿಂದಿರುಗಿ ಬಂದಾಗ ತಾವು ಮಾಡಿದ್ದೆಲ್ಲವನ್ನೂ ಯೇಸುವಿಗೆ ತಿಳಿಸಿದರು. ಆಗ ಅವನು ಅವರನ್ನು ತನ್ನೊಂದಿಗೆ ಕರೆದುಕೊಂಡು ಬೇತ್ಸಾಯಿದ ಎಂದು ಕರೆಯಲ್ಪಡುವ ಒಂದು ಊರಿಗೆ ಪ್ರತ್ಯೇಕವಾಗಿ ಹೋದನು. 11 ಜನರ ಗುಂಪಿಗೆ ಇದು ತಿಳಿದುಬಂದಾಗ ಅವರು ಅವನ ಹಿಂದೆ ಹೋದರು. ಅವನು ಅವರನ್ನು ಆದರದಿಂದ ಬರಮಾಡಿಕೊಂಡು ದೇವರ ರಾಜ್ಯದ ಕುರಿತು ಅವರೊಂದಿಗೆ ಮಾತಾಡಲಾರಂಭಿಸಿದನು ಮತ್ತು ಗುಣಪಡಿಸುವ ಅಗತ್ಯವಿದ್ದವರನ್ನೆಲ್ಲ ವಾಸಿಮಾಡಿದನು. 12 ಆಗ ಹೊತ್ತು ಮುಳುಗಲಾರಂಭಿಸಿತು. ಹನ್ನೆರಡು ಮಂದಿ ಶಿಷ್ಯರು ಅವನ ಬಳಿಗೆ ಬಂದು, “ನಾವು ನಿರ್ಜನವಾದ ಸ್ಥಳದಲ್ಲಿರುವುದರಿಂದ ಈ ಜನರು ಸುತ್ತಲಿರುವ ಹಳ್ಳಿಗಳಿಗೆ ಮತ್ತು ಗ್ರಾಮಪ್ರದೇಶಕ್ಕೆ ಹೋಗಿ ಉಳುಕೊಳ್ಳಲು ಸ್ಥಳವನ್ನೂ ಊಟಕ್ಕೆ ಬೇಕಾದ ಪದಾರ್ಥಗಳನ್ನೂ ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡು” ಎಂದು ಹೇಳಿದರು. 13 ಆದರೆ ಅವನು ಅವರಿಗೆ, “ನೀವೇ ಅವರಿಗೆ ಏನನ್ನಾದರೂ ಊಟಕ್ಕೆ ಕೊಡಿರಿ” ಅಂದನು. ಅದಕ್ಕೆ ಅವರು, “ನಾವು ಹೋಗಿ ಈ ಜನರಿಗೆಲ್ಲ ಆಹಾರಪದಾರ್ಥಗಳನ್ನು ಕೊಂಡುತಂದ ಹೊರತು ನಮ್ಮ ಬಳಿ ಐದು ರೊಟ್ಟಿಗಳು ಮತ್ತು ಎರಡು ಮೀನುಗಳನ್ನು ಬಿಟ್ಟು ಬೇರೇನೂ ಇಲ್ಲ” ಎಂದರು. 14 ಅಲ್ಲಿ ಸುಮಾರು ಐದು ಸಾವಿರ ಮಂದಿ ಗಂಡಸರಿದ್ದರು. ಅವನು ತನ್ನ ಶಿಷ್ಯರಿಗೆ, “ಇವರನ್ನು ಪ್ರತಿಯೊಂದು ಗುಂಪಿನಲ್ಲಿ ಸುಮಾರು ಐವತ್ತು ಮಂದಿಯಂತೆ ಊಟಕ್ಕೆ ಕೂರಿಸಿ” ಎಂದು ಹೇಳಿದನು. 15 ಅವರು ಹಾಗೆಯೇ ಮಾಡಿ ಎಲ್ಲರನ್ನೂ ಕುಳ್ಳಿರಿಸಿದರು. 16 ಬಳಿಕ ಅವನು ಐದು ರೊಟ್ಟಿಗಳು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಸ್ತೋತ್ರಮಾಡಿ ಅವುಗಳನ್ನು ಮುರಿದು ಜನರಿಗೆ ಹಂಚಿಕೊಡಲಿಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು. 17 ಅವರೆಲ್ಲರೂ ಊಟಮಾಡಿ ತೃಪ್ತರಾದರು ಮತ್ತು ಉಳಿದ ತುಂಡುಗಳನ್ನು ಕೂಡಿಸಲಾಗಿ ಹನ್ನೆರಡು ಬುಟ್ಟಿಗಳು ತುಂಬಿದವು.
18 ತರುವಾಯ ಅವನೊಬ್ಬನೇ ಪ್ರಾರ್ಥಿಸುತ್ತಿದ್ದಾಗ ಶಿಷ್ಯರು ಅವನ ಬಳಿಗೆ ಕೂಡಿಬಂದರು; ಆಗ ಅವನು ಅವರಿಗೆ, “ನಾನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದನು. 19 ಅದಕ್ಕವರು, “ಕೆಲವರು ಸ್ನಾನಿಕನಾದ ಯೋಹಾನನೆಂದೂ ಇತರರು ಎಲೀಯನೆಂದೂ ಮತ್ತಿತರರು ಪುರಾತನ ಪ್ರವಾದಿಗಳಲ್ಲಿ ಒಬ್ಬನು ಎದ್ದಿದ್ದಾನೆಂದೂ ಹೇಳುತ್ತಾರೆ” ಅಂದರು. 20 ಆಗ ಅವನು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದಾಗ ಪೇತ್ರನು ಅವನಿಗೆ, “ದೇವರಿಂದ ಕಳುಹಿಸಲ್ಪಟ್ಟಿರುವ ಕ್ರಿಸ್ತನು” ಎಂದು ಉತ್ತರಿಸಿದನು. 21 ಇದನ್ನು ಯಾರಿಗೂ ತಿಳಿಸಬಾರದೆಂದು ಅವನು ಅವರಿಗೆ ಕಟ್ಟುನಿಟ್ಟಾಗಿ ಹೇಳುತ್ತಾ, 22 “ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಿ ಹಿರೀಪುರುಷರಿಂದಲೂ ಮುಖ್ಯ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಡುವನು ಮತ್ತು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವನು” ಎಂದನು.
23 ಬಳಿಕ ಅವನು ಮುಂದುವರಿಸುತ್ತಾ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ದಿನೇದಿನೇ ತನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ. 24 ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಬಯಸುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನೇ ಅದನ್ನು ಉಳಿಸಿಕೊಳ್ಳುವನು. 25 ಒಬ್ಬ ಮನುಷ್ಯನು ಇಡೀ ಲೋಕವನ್ನೇ ಸಂಪಾದಿಸಿಕೊಂಡರೂ ತನ್ನ ಜೀವವನ್ನು ಕಳೆದುಕೊಂಡರೆ ಅಥವಾ ನಷ್ಟವನ್ನು ಅನುಭವಿಸುವುದಾದರೆ ಅವನಿಗೆ ಏನು ಪ್ರಯೋಜನ? 26 ಯಾವನು ನನ್ನ ವಿಷಯವಾಗಿಯೂ ನನ್ನ ಮಾತುಗಳ ವಿಷಯವಾಗಿಯೂ ನಾಚಿಕೆಪಡುವನೊ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ಮತ್ತು ತನ್ನ ತಂದೆಯ ಹಾಗೂ ಪವಿತ್ರ ದೇವದೂತರ ಮಹಿಮೆಯಲ್ಲಿ ಬರುವಾಗ ನಾಚಿಕೆಪಡುವನು. 27 ಇಲ್ಲಿ ನಿಂತಿರುವವರಲ್ಲಿ ಕೆಲವರು ಮೊದಲು ದೇವರ ರಾಜ್ಯವನ್ನು ನೋಡುವ ವರೆಗೆ ಮರಣಹೊಂದುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಅಂದನು.
28 ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಅವನು ಪೇತ್ರ, ಯೋಹಾನ ಮತ್ತು ಯಾಕೋಬರನ್ನು ತನ್ನೊಂದಿಗೆ ಕರೆದುಕೊಂಡು ಪ್ರಾರ್ಥಿಸಲಿಕ್ಕಾಗಿ ಬೆಟ್ಟವನ್ನು ಹತ್ತಿದನು. 29 ಅವನು ಪ್ರಾರ್ಥಿಸುತ್ತಿದ್ದಾಗ ಅವನ ಮುಖದ ತೋರಿಕೆಯು ಬದಲಾಯಿತು ಮತ್ತು ಅವನ ಉಡುಪು ಬೆಳ್ಳಗಾಗಿ ಮಿಂಚುತ್ತಾ ಇತ್ತು. 30 ಇದಲ್ಲದೆ ಇಬ್ಬರು ಪುರುಷರು ಅವನೊಂದಿಗೆ ಮಾತಾಡುತ್ತಾ ಇದ್ದರು; ಅವರು ಮೋಶೆ ಮತ್ತು ಎಲೀಯರಾಗಿದ್ದರು. 31 ಅವರು ಮಹಿಮೆಯಿಂದ ಕಾಣಿಸಿಕೊಂಡು ಅವನು ಯೆರೂಸಲೇಮಿನಲ್ಲಿ ಪೂರೈಸಬೇಕಾಗಿದ್ದ ಅವನ ನಿರ್ಗಮನದ ಕುರಿತು ಮಾತಾಡತೊಡಗಿದರು. 32 ಆಗ ಪೇತ್ರನಿಗೂ ಅವನೊಂದಿಗಿದ್ದವರಿಗೂ ತುಂಬ ನಿದ್ರೆಹತ್ತಿತು; ಅವರು ಪೂರ್ಣವಾಗಿ ಎಚ್ಚೆತ್ತಾಗ ಅವನ ಮಹಿಮೆಯನ್ನೂ ಅವನೊಂದಿಗೆ ನಿಂತುಕೊಂಡಿದ್ದ ಇಬ್ಬರು ಪುರುಷರನ್ನೂ ಕಂಡರು. 33 ಅವರು ಅವನನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ, “ಉಪದೇಶಕನೇ, ನಾವು ಇಲ್ಲೇ ಇರುವುದು ಒಳ್ಳೇದು; ಆದುದರಿಂದ ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದರಂತೆ ನಾವು ಮೂರು ಗುಡಾರಗಳನ್ನು ಕಟ್ಟೋಣ” ಎಂದು ಹೇಳಿದನು; ತಾನು ಏನು ಹೇಳುತ್ತಿದ್ದೇನೆ ಎಂಬುದು ಅವನಿಗೆ ತಿಳಿದಿರಲಿಲ್ಲ. 34 ಅವನು ಈ ಮಾತುಗಳನ್ನು ಹೇಳುತ್ತಿರುವಾಗಲೇ ಒಂದು ಮೋಡವು ಅವರನ್ನು ಕವಿಯಿತು. ಅವರು ಆ ಮೋಡದೊಳಗೆ ಸೇರಿದಾಗ ಶಿಷ್ಯರು ಭಯಗೊಂಡರು. 35 ಆಗ ಆ ಮೋಡದೊಳಗಿಂದ, “ಇವನು ನಾನು ಆರಿಸಿಕೊಂಡಿರುವ ನನ್ನ ಮಗನು. ಇವನ ಮಾತಿಗೆ ಕಿವಿಗೊಡಿರಿ” ಎಂಬ ವಾಣಿಯು ಕೇಳಿಬಂತು. 36 ಆ ವಾಣಿಯು ಕೇಳಿಬಂದಾಗ ಅವರು ಯೇಸುವನ್ನು ಮಾತ್ರ ಕಂಡರು. ಅವರು ಸುಮ್ಮನಿದ್ದು ತಾವು ನೋಡಿದ ಯಾವುದೇ ಸಂಗತಿಗಳನ್ನು ಆ ದಿನಗಳಲ್ಲಿ ಯಾರೊಬ್ಬರಿಗೂ ತಿಳಿಸಲಿಲ್ಲ.
37 ಮರುದಿನ ಅವರು ಬೆಟ್ಟದಿಂದ ಇಳಿದುಬಂದಾಗ ಜನರ ಒಂದು ದೊಡ್ಡ ಗುಂಪು ಅವನನ್ನು ಎದುರುಗೊಂಡಿತು. 38 ಆಗ ಆ ಗುಂಪಿನಲ್ಲಿದ್ದ ಒಬ್ಬ ಮನುಷ್ಯನು, “ಬೋಧಕನೇ, ನನ್ನ ಮಗನ ಮೇಲೆ ದೃಷ್ಟಿಯಿಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ; ಇವನು ನನ್ನ ಒಬ್ಬನೇ ಮಗನು. 39 ಇವನನ್ನು ಒಂದು ದೆವ್ವ ಹಿಡಿಯುತ್ತದೆ ಮತ್ತು ಅದು ಹಿಡಿಯುತ್ತಲೇ ಇವನು ಕೂಗಿಕೊಳ್ಳುತ್ತಾನೆ ಮತ್ತು ಅದು ಇವನನ್ನು ಒದ್ದಾಡಿಸಿ ನೊರೆಕಾರುವಂತೆ ಮಾಡುತ್ತದೆ; ಹೀಗೆ ಜಜ್ಜಿದ ಬಳಿಕವೇ ತುಂಬ ಕಷ್ಟದಿಂದ ಅವನನ್ನು ಬಿಟ್ಟುಹೋಗುತ್ತದೆ. 40 ಅದನ್ನು ಬಿಡಿಸುವಂತೆ ನಾನು ನಿನ್ನ ಶಿಷ್ಯರಿಗೆ ಬೇಡಿಕೊಂಡೆ, ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಹೇಳಿದನು. 41 ಅದಕ್ಕೆ ಯೇಸು, “ನಂಬಿಕೆಯಿಲ್ಲದ ವಕ್ರ ಸಂತತಿಯೇ, ನಾನು ಇನ್ನೆಷ್ಟು ಸಮಯ ನಿಮ್ಮೊಂದಿಗಿರಬೇಕು ಮತ್ತು ಇನ್ನೆಷ್ಟು ಸಮಯ ನಿಮ್ಮನ್ನು ಸಹಿಸಿಕೊಳ್ಳಬೇಕು? ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಎಂದು ಹೇಳಿದನು. 42 ಅವನು ಹತ್ತಿರ ಬರುತ್ತಿರುವಾಗ ಆ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ಹಿಂಸಾತ್ಮಕವಾಗಿ ಒದ್ದಾಡಿಸಿತು. ಆದರೆ ಯೇಸು ಆ ದೆವ್ವವನ್ನು ಗದರಿಸಿ, ಆ ಹುಡುಗನನ್ನು ಗುಣಪಡಿಸಿ ಅವನ ತಂದೆಗೆ ಒಪ್ಪಿಸಿದನು. 43 ಆಗ ಅವರೆಲ್ಲರೂ ದೇವರ ಮಹೋನ್ನತ ಶಕ್ತಿಯನ್ನು ನೋಡಿ ಆಶ್ಚರ್ಯಚಕಿತರಾದರು.
ಅವನು ಮಾಡುತ್ತಿದ್ದ ಎಲ್ಲ ವಿಷಯಗಳನ್ನು ನೋಡಿ ಅವರು ಅತ್ಯಾಶ್ಚರ್ಯಪಡುತ್ತಿದ್ದಾಗ ಅವನು ತನ್ನ ಶಿಷ್ಯರಿಗೆ, 44 “ನೀವು ಈ ಮಾತುಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ. ಏಕೆಂದರೆ ಮನುಷ್ಯಕುಮಾರನು ಜನರ ಕೈಗೆ ಒಪ್ಪಿಸಲ್ಪಡಲಿಕ್ಕಿದ್ದಾನೆ” ಎಂದು ಹೇಳಿದನು. 45 ಆದರೆ ಅವರು ಈ ಮಾತನ್ನು ಅರ್ಥಮಾಡಿಕೊಳ್ಳಲಾರದೆ ಇದ್ದರು. ವಾಸ್ತವದಲ್ಲಿ ಅದನ್ನು ಗ್ರಹಿಸಲಾರದಂತೆ ಅದು ಅವರಿಂದ ಮರೆಯಾಗಿಡಲ್ಪಟ್ಟಿತ್ತು ಮತ್ತು ಈ ಮಾತಿನ ವಿಷಯದಲ್ಲಿ ಅವನನ್ನು ಕೇಳುವುದಕ್ಕೆ ಅವರು ಅಂಜಿದರು.
46 ತರುವಾಯ ತಮ್ಮೊಳಗೆ ಯಾರು ಅತಿ ದೊಡ್ಡವನು ಎಂಬ ವಿಷಯದಲ್ಲಿ ಅವರ ಮಧ್ಯೆ ತರ್ಕವುಂಟಾಯಿತು. 47 ಯೇಸು ಅವರ ಹೃದಯದ ಆಲೋಚನೆಗಳನ್ನು ತಿಳಿದವನಾಗಿ ಒಂದು ಚಿಕ್ಕ ಮಗುವನ್ನು ಕರೆದು ತನ್ನ ಪಕ್ಕದಲ್ಲಿ ನಿಲ್ಲಿಸಿ, 48 “ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನೂ ಸೇರಿಸಿಕೊಂಡಂತಾಗುವುದು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿದಾತನನ್ನೂ ಸೇರಿಸಿಕೊಂಡಂತಾಗುವುದು. ನಿಮ್ಮೆಲ್ಲರ ಮಧ್ಯದಲ್ಲಿ ತನ್ನನ್ನು ಚಿಕ್ಕವನಾಗಿ ನಡೆಸಿಕೊಳ್ಳುವವನೇ ದೊಡ್ಡವನಾಗಿದ್ದಾನೆ” ಎಂದು ಅವರಿಗೆ ಹೇಳಿದನು.
49 ಆಗ ಯೋಹಾನನು, “ಉಪದೇಶಕನೇ, ನಿನ್ನ ಹೆಸರನ್ನು ಉಪಯೋಗಿಸಿ ದೆವ್ವಗಳನ್ನು ಬಿಡಿಸುತ್ತಿದ್ದ ಒಬ್ಬ ಮನುಷ್ಯನನ್ನು ನಾವು ಕಂಡೆವು; ಅವನು ನಮ್ಮೊಂದಿಗೆ ನಿನ್ನನ್ನು ಹಿಂಬಾಲಿಸುವವನಲ್ಲದ ಕಾರಣ ನಾವು ಅವನನ್ನು ತಡೆಯಲು ಪ್ರಯತ್ನಿಸಿದೆವು” ಎಂದು ಹೇಳಿದನು. 50 ಅದಕ್ಕೆ ಯೇಸು ಅವನಿಗೆ, “ನೀವು ಅವನನ್ನು ತಡೆಯಲು ಪ್ರಯತ್ನಿಸಬೇಡಿ; ಏಕೆಂದರೆ ನಿಮ್ಮನ್ನು ಎದುರಿಸದವನು ನಿಮ್ಮ ಪಕ್ಷದವನೇ” ಎಂದನು.
51 ತಾನು ಸ್ವರ್ಗಾರೋಹಣವಾಗುವ ದಿನಗಳು ಸಮೀಪಿಸುತ್ತಿದ್ದಾಗ ಅವನು ಯೆರೂಸಲೇಮಿಗೆ ಹೋಗಲು ಮನಸ್ಸನ್ನು ದೃಢಮಾಡಿಕೊಂಡನು. 52 ಆದುದರಿಂದ ಅವನು ತನಗಿಂತ ಮುಂದಾಗಿ ಸಂದೇಶವಾಹಕರನ್ನು ಕಳುಹಿಸಿದನು. ಅವರು ಹೋಗಿ ಅವನಿಗೋಸ್ಕರ ಸಿದ್ಧತೆಯನ್ನು ಮಾಡಲಿಕ್ಕಾಗಿ ಸಮಾರ್ಯದವರ ಒಂದು ಹಳ್ಳಿಯನ್ನು ಪ್ರವೇಶಿಸಿದರು. 53 ಆದರೆ ಅವನು ಯೆರೂಸಲೇಮಿಗೆ ಹೋಗಲು ಮನಸ್ಸನ್ನು ದೃಢಮಾಡಿಕೊಂಡಿದ್ದರಿಂದ ಸಮಾರ್ಯದವರು ಅವನನ್ನು ಬರಮಾಡಿಕೊಳ್ಳಲಿಲ್ಲ. 54 ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ಕಂಡಾಗ, “ಕರ್ತನೇ, ಆಕಾಶದಿಂದ ಬೆಂಕಿಯು ಬಿದ್ದು ಇವರನ್ನು ನಾಶಮಾಡಿಬಿಡಲಿ ಎಂದು ನಾವು ಹೇಳಬೇಕೆಂದು ನೀನು ಬಯಸುತ್ತೀಯೊ?” ಎಂದು ಕೇಳಿದರು. 55 ಆದರೆ ಅವನು ಅವರ ಕಡೆಗೆ ತಿರುಗಿ ಅವರನ್ನು ಗದರಿಸಿದನು. 56 ಆದುದರಿಂದ ಅವರು ಬೇರೊಂದು ಹಳ್ಳಿಗೆ ಹೋದರು.
57 ಅವರು ದಾರಿಯಲ್ಲಿ ಹೋಗುತ್ತಿರುವಾಗ ಒಬ್ಬನು ಅವನಿಗೆ, “ನೀನು ಎಲ್ಲಿಗೆ ಹೋಗುವುದಾದರೂ ನಾನು ನಿನ್ನನ್ನು ಹಿಂಬಾಲಿಸುವೆ” ಎಂದನು. 58 ಅದಕ್ಕೆ ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ” ಎಂದು ಹೇಳಿದನು. 59 ಬಳಿಕ ಅವನು ಇನ್ನೊಬ್ಬನಿಗೆ, “ನನ್ನ ಹಿಂಬಾಲಕನಾಗು” ಎಂದಾಗ ಆ ಮನುಷ್ಯನು, “ನಾನು ಮೊದಲು ಹೋಗಿ ನನ್ನ ತಂದೆಯನ್ನು ಹೂಣಿಟ್ಟು ಬರಲು ಅನುಮತಿ ಕೊಡು” ಎಂದನು. 60 ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮ ಸತ್ತವರನ್ನು ಹೂಣಿಡಲಿ, ನೀನು ಹೋಗಿ ದೇವರ ರಾಜ್ಯದ ಕುರಿತು ಎಲ್ಲ ಕಡೆಗಳಲ್ಲೂ ಪ್ರಕಟಪಡಿಸು” ಎಂದು ಹೇಳಿದನು. 61 ಆಗ ಮತ್ತೊಬ್ಬನು, “ಕರ್ತನೇ, ನಾನು ನಿನ್ನನ್ನು ಹಿಂಬಾಲಿಸುವೆ; ಆದರೆ ಮೊದಲು ಹೋಗಿ ನನ್ನ ಮನೆಯವರಿಗೆ ವಿದಾಯ ಹೇಳಿ ಬರಲು ಅನುಮತಿ ನೀಡು” ಎಂದನು. 62 ಯೇಸು ಅವನಿಗೆ, “ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದೆ ಇರುವ ವಿಷಯಗಳನ್ನು ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಎಂದನು.