ಮಾರ್ಕ
10 ಅವನು ಅಲ್ಲಿಂದ ಎದ್ದು ಯೂದಾಯದ ಗಡಿಪ್ರದೇಶಕ್ಕೂ ಯೋರ್ದನ್ ನದಿಯ ಆಚೆಯ ಸೀಮೆಗೂ ಬಂದನು. ಅಲ್ಲಿ ಜನರ ಗುಂಪು ಪುನಃ ಅವನ ಬಳಿ ಕೂಡಿಬಂತು ಮತ್ತು ಅವನು ಎಂದಿನಂತೆ ಅವರಿಗೆ ಬೋಧಿಸಲಾರಂಭಿಸಿದನು. 2 ಆಗ ಫರಿಸಾಯರು ಅಲ್ಲಿಗೆ ಬಂದು ಅವನನ್ನು ಪರೀಕ್ಷಿಸಲಿಕ್ಕಾಗಿ, “ಒಬ್ಬನು ತನ್ನ ಹೆಂಡತಿಗೆ ವಿಚ್ಛೇದನ ನೀಡುವುದು ಧರ್ಮಸಮ್ಮತವೊ?” ಎಂದು ಪ್ರಶ್ನಿಸಿದರು. 3 ಅದಕ್ಕೆ ಉತ್ತರವಾಗಿ ಅವನು, “ಮೋಶೆಯು ನಿಮಗೆ ಯಾವ ಆಜ್ಞೆಯನ್ನು ಕೊಟ್ಟನು?” ಎಂದು ಕೇಳಿದನು. 4 ಅದಕ್ಕೆ ಅವರು, “ತ್ಯಾಗಪತ್ರವನ್ನು ಬರೆದುಕೊಟ್ಟು ಅವಳಿಗೆ ವಿಚ್ಛೇದನ ನೀಡಲು ಮೋಶೆಯು ಸಮ್ಮತಿಸಿದನು” ಎಂದು ಹೇಳಿದರು. 5 ಆಗ ಯೇಸು ಅವರಿಗೆ ಹೇಳಿದ್ದು: “ನಿಮ್ಮ ಹೃದಯದ ಕಾಠಿಣ್ಯದ ನಿಮಿತ್ತವಾಗಿ ಅವನು ಆ ಆಜ್ಞೆಯನ್ನು ಬರೆದಿಟ್ಟನು. 6 ಆದರೆ ಸೃಷ್ಟಿಯ ಆರಂಭದಿಂದಲೇ ‘ಆತನು ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು. 7 ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಡುವನು 8 ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು’; ಹೀಗೆ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. 9 ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” 10 ಪುನಃ ಅವನು ಮನೆಗೆ ಬಂದಾಗ ಅವನ ಶಿಷ್ಯರು ಅದೇ ವಿಷಯದಲ್ಲಿ ಅವನನ್ನು ಪ್ರಶ್ನಿಸತೊಡಗಿದರು. 11 ಅವನು ಅವರಿಗೆ, “ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ಅವಳ ವಿರುದ್ಧ ವ್ಯಭಿಚಾರ ಮಾಡುವವನಾಗಿದ್ದಾನೆ. 12 ಮತ್ತು ಒಬ್ಬ ಸ್ತ್ರೀಯು ತನ್ನ ಗಂಡನಿಗೆ ವಿಚ್ಛೇದನ ನೀಡಿ ಇನ್ನೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ” ಎಂದು ಹೇಳಿದನು.
13 ಬಳಿಕ ಜನರು ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಅವನ ಬಳಿಗೆ ತರಲಾರಂಭಿಸಿದರು; ಆದರೆ ಶಿಷ್ಯರು ಅವರನ್ನು ಗದರಿಸಿದರು. 14 ಇದನ್ನು ನೋಡಿ ಯೇಸು ಕೋಪಗೊಂಡು ಅವರಿಗೆ, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ; ಅವುಗಳನ್ನು ತಡೆಯಲು ಪ್ರಯತ್ನಿಸಬೇಡಿ, ಏಕೆಂದರೆ ದೇವರ ರಾಜ್ಯವು ಇಂಥವರಿಗೆ ಸೇರಿದ್ದಾಗಿದೆ. 15 ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಎಂದನು. 16 ಬಳಿಕ ಅವನು ಮಕ್ಕಳನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಅವುಗಳ ಮೇಲೆ ತನ್ನ ಕೈಗಳನ್ನಿಟ್ಟು ಆಶೀರ್ವದಿಸತೊಡಗಿದನು.
17 ಅವನು ತನ್ನ ದಾರಿಹಿಡಿದು ಹೋಗುತ್ತಿದ್ದಾಗ ಒಬ್ಬ ಮನುಷ್ಯನು ಓಡುತ್ತಾ ಬಂದು ಅವನ ಎದುರು ಮೊಣಕಾಲೂರಿ, “ಒಳ್ಳೇ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು. 18 ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಬೇರೆ ಯಾವನೂ ಒಳ್ಳೆಯವನಲ್ಲ. 19 ‘ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿಯನ್ನು ಹೇಳಬಾರದು, ವಂಚಿಸಬಾರದು, ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು’ ಎಂಬ ಆಜ್ಞೆಗಳು ನಿನಗೆ ತಿಳಿದಿವೆಯಲ್ಲಾ” ಎಂದು ಹೇಳಿದನು. 20 ಅದಕ್ಕೆ ಆ ಮನುಷ್ಯನು, “ಬೋಧಕನೇ, ನಾನು ಚಿಕ್ಕಂದಿನಿಂದಲೂ ಈ ಎಲ್ಲ ವಿಷಯಗಳನ್ನು ಪಾಲಿಸುತ್ತಾ ಬಂದಿದ್ದೇನೆ” ಎಂದನು. 21 ಯೇಸು ಅವನನ್ನು ದೃಷ್ಟಿಸಿ ನೋಡಿದನು ಮತ್ತು ಅವನಿಗೆ ಆ ಮನುಷ್ಯನ ಮೇಲೆ ಪ್ರೀತಿ ಉಂಟಾಗಿ, “ನಿನ್ನಲ್ಲಿ ಒಂದು ಕೊರತೆ ಇದೆ: ಹೋಗು, ನಿನ್ನ ಬಳಿ ಇರುವುದನ್ನೆಲ್ಲ ಮಾರಿ ಬಡವರಿಗೆ ಕೊಡು; ಆಗ ಸ್ವರ್ಗದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನ ಹಿಂಬಾಲಕನಾಗು” ಎಂದು ಅವನಿಗೆ ಹೇಳಿದನು. 22 ಆದರೆ ಆ ಮನುಷ್ಯನ ಬಳಿ ಬಹಳ ಆಸ್ತಿಯಿದ್ದ ಕಾರಣ ಅವನು ಆ ಮಾತನ್ನು ಕೇಳಿ ವ್ಯಸನಗೊಂಡು ದುಃಖದಿಂದ ಹೊರಟುಹೋದನು.
23 ಆಗ ಯೇಸು ಸುತ್ತಲೂ ನೋಡಿ ತನ್ನ ಶಿಷ್ಯರಿಗೆ, “ಹಣವಂತರು ದೇವರ ರಾಜ್ಯವನ್ನು ಸೇರುವುದು ಎಷ್ಟು ಕಷ್ಟಕರವಾಗಿರುವ ಸಂಗತಿ!” ಎಂದು ಹೇಳಿದನು. 24 ಆದರೆ ಶಿಷ್ಯರಿಗೆ ಅವನ ಮಾತುಗಳನ್ನು ಕೇಳಿ ಆಶ್ಚರ್ಯವಾಯಿತು. ಅದಕ್ಕೆ ಯೇಸು ಪುನಃ ಅವರಿಗೆ, “ಮಕ್ಕಳಿರಾ, ದೇವರ ರಾಜ್ಯವನ್ನು ಸೇರುವುದು ಎಷ್ಟೋ ಕಷ್ಟ! 25 ಒಬ್ಬ ಐಶ್ವರ್ಯವಂತನು ದೇವರ ರಾಜ್ಯವನ್ನು ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗಿಹೋಗುವುದು ಹೆಚ್ಚು ಸುಲಭ” ಅಂದನು. 26 ಇದನ್ನು ಕೇಳಿ ಅವರು ಇನ್ನಷ್ಟು ಆಶ್ಚರ್ಯಗೊಂಡು ಅವನಿಗೆ, “ಹಾಗಾದರೆ ರಕ್ಷಿಸಲ್ಪಡುವ ಸಾಧ್ಯತೆ ಯಾರಿಗಿರಬಲ್ಲದು?” ಎಂದು ಕೇಳಿದರು. 27 ಯೇಸು ಅವರನ್ನು ನೇರವಾಗಿ ನೋಡಿ, “ಮನುಷ್ಯರಿಂದ ಇದು ಅಸಾಧ್ಯ. ಆದರೆ ದೇವರಿಗೆ ಅಸಾಧ್ಯವಲ್ಲ, ದೇವರಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು. 28 ಪೇತ್ರನು ಅವನಿಗೆ, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸುತ್ತಿದ್ದೇವೆ” ಎಂದು ಹೇಳಲಾರಂಭಿಸಿದನು. 29 ಆಗ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಹೊಲವನ್ನಾಗಲಿ ಬಿಟ್ಟುಬಂದ ಯಾವನಿಗೂ 30 ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ಮನೆಗಳೂ ಅಣ್ಣತಮ್ಮಂದಿರೂ ಅಕ್ಕತಂಗಿಯರೂ ತಾಯಂದಿರೂ ಮಕ್ಕಳೂ ಹೊಲಗಳೂ ನೂರರಷ್ಟು ಸಿಗುತ್ತವೆ ಮತ್ತು ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ನಿತ್ಯಜೀವವು ದೊರೆಯುವುದು. 31 ಆದರೆ ಮೊದಲಿನವರಾದ ಅನೇಕರು ಕೊನೆಯವರಾಗುವರು, ಕೊನೆಯವರು ಮೊದಲಿನವರಾಗುವರು” ಎಂದು ಹೇಳಿದನು.
32 ಅವರು ಯೆರೂಸಲೇಮಿನ ದಾರಿಯನ್ನು ಹಿಡಿದು ಹೋಗುತ್ತಿರುವಾಗ ಯೇಸು ಅವರೆಲ್ಲರಿಗಿಂತ ಮುಂದೆ ನಡೆಯುತ್ತಿರುವುದನ್ನು ಕಂಡು ಶಿಷ್ಯರು ಆಶ್ಚರ್ಯಪಟ್ಟರು; ಆದರೆ ಅವನ ಹಿಂದೆ ಬರುತ್ತಿದ್ದ ಇತರರು ಭಯಪಟ್ಟರು. ಪುನಃ ಒಮ್ಮೆ ಅವನು ಹನ್ನೆರಡು ಮಂದಿಯನ್ನು ಪಕ್ಕಕ್ಕೆ ಕರೆದು ತನಗೆ ಸಂಭವಿಸಲಿದ್ದ ವಿಷಯಗಳನ್ನು ಹೇಳಲಾರಂಭಿಸಿದನು: 33 “ಈಗ ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ ಮತ್ತು ಮನುಷ್ಯಕುಮಾರನು ಮುಖ್ಯ ಯಾಜಕರ ಹಾಗೂ ಶಾಸ್ತ್ರಿಗಳ ಕೈಗೆ ಒಪ್ಪಿಸಲ್ಪಡುವನು; ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅನ್ಯಜನರ ಕೈಗೆ ಒಪ್ಪಿಸುವರು. 34 ಮತ್ತು ಅವರು ಅವನನ್ನು ಅಪಹಾಸ್ಯಮಾಡಿ ಅವನ ಮೇಲೆ ಉಗುಳಿ ಅವನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು; ಆದರೆ ಮೂರು ದಿನಗಳ ತರುವಾಯ ಅವನು ಏಳುವನು.”
35 ಆಗ ಜೆಬೆದಾಯನ ಇಬ್ಬರು ಮಕ್ಕಳಾದ ಯಾಕೋಬ ಯೋಹಾನರು ಅವನ ಬಳಿಗೆ ಬಂದು ಅವನಿಗೆ, “ಬೋಧಕನೇ, ನಾವು ಕೇಳುವುದನ್ನು ನೀನು ನಮಗೋಸ್ಕರ ನಡಿಸಿಕೊಡಬೇಕೆಂದು ನಮ್ಮ ಅಪೇಕ್ಷೆ” ಎಂದು ಹೇಳಿದರು. 36 ಅವನು ಅವರಿಗೆ, “ನಾನು ನಿಮಗೋಸ್ಕರ ಏನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರಿ?” ಎಂದು ಕೇಳಿದನು. 37 ಅವರು, “ನೀನು ಮಹಿಮೆಯಲ್ಲಿ ಬರುವಾಗ ನಮ್ಮಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ಅನುಗ್ರಹಿಸಬೇಕು” ಎಂದರು. 38 ಆದರೆ ಯೇಸು ಅವರಿಗೆ, “ನೀವು ಏನನ್ನು ಕೇಳಿಕೊಳ್ಳುತ್ತಿದ್ದೀರಿ ಎಂಬುದು ನಿಮಗೆ ತಿಳಿಯದು; ನಾನು ಕುಡಿಯುತ್ತಿರುವ ಪಾತ್ರೆಯಿಂದ ಕುಡಿಯಲು ಅಥವಾ ನಾನು ದೀಕ್ಷಾಸ್ನಾತನಾಗುತ್ತಿರುವ ದೀಕ್ಷಾಸ್ನಾನದಿಂದ ದೀಕ್ಷಾಸ್ನಾತರಾಗಲು ನಿಮಗೆ ಸಾಧ್ಯವೆ?” ಎಂದು ಕೇಳಿದನು. 39 ಅವರು ಅವನಿಗೆ, “ನಾವು ಸಮರ್ಥರು” ಎಂದರು. ಅದಕ್ಕೆ ಯೇಸು ಅವರಿಗೆ, “ನಾನು ಕುಡಿಯುತ್ತಿರುವ ಪಾತ್ರೆಯಿಂದ ನೀವು ಕುಡಿಯುವಿರಿ ಮತ್ತು ನಾನು ದೀಕ್ಷಾಸ್ನಾತನಾಗುತ್ತಿರುವ ದೀಕ್ಷಾಸ್ನಾನದಲ್ಲಿ ನೀವು ಸಹ ದೀಕ್ಷಾಸ್ನಾತರಾಗುವಿರಿ. 40 ಆದರೆ, ನನ್ನ ಬಲಗಡೆಯಲ್ಲಿ ಅಥವಾ ಎಡಗಡೆಯಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನ ಕೈಯಲ್ಲಿಲ್ಲ; ಅದು ಯಾರಿಗಾಗಿ ಸಿದ್ಧಪಡಿಸಲ್ಪಟ್ಟಿದೆಯೊ ಅವರಿಗೇ ಸೇರಿದ್ದಾಗಿದೆ” ಎಂದನು.
41 ಉಳಿದ ಹತ್ತು ಮಂದಿ ಇದನ್ನು ಕೇಳಿಸಿಕೊಂಡಾಗ ಯಾಕೋಬ ಯೋಹಾನರ ಮೇಲೆ ಕೋಪಗೊಂಡರು. 42 ಆದರೆ ಯೇಸು ಅವರನ್ನು ತನ್ನ ಬಳಿಗೆ ಕರೆದು ಹೇಳಿದ್ದು: “ಅನ್ಯಜನಾಂಗಗಳನ್ನು ಆಳುವವರೆನಿಸಿಕೊಳ್ಳುವವರು ಅವರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಮತ್ತು ಅವರಲ್ಲಿ ದೊಡ್ಡವರು ಅವರ ಮೇಲೆ ಅಧಿಕಾರ ಚಲಾಯಿಸುತ್ತಾರೆ ಎಂಬುದು ನಿಮಗೆ ತಿಳಿದಿದೆ. 43 ಆದರೆ ನಿಮ್ಮಲ್ಲಿ ಹೀಗಿರುವುದಿಲ್ಲ; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು, 44 ಮತ್ತು ನಿಮ್ಮಲ್ಲಿ ಮೊದಲಿನವನಾಗಬೇಕೆಂದಿರುವವನು ಎಲ್ಲರ ಆಳಾಗಿರಬೇಕು. 45 ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಸೇವೆಮಾಡುವುದಕ್ಕೂ ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು* ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೂ ಬಂದನು.”
46 ಆ ಮೇಲೆ ಅವರು ಯೆರಿಕೋವಿಗೆ ಬಂದರು. ಅವನೂ ಅವನ ಶಿಷ್ಯರೂ ಬಹು ಜನರ ಗುಂಪೂ ಯೆರಿಕೋವನ್ನು ಬಿಟ್ಟು ಹೋಗುತ್ತಿದ್ದಾಗ, (ತಿಮಾಯನ ಮಗನಾದ) ಬಾರ್ತಿಮಾಯ ಎಂಬ ಕುರುಡ ಭಿಕ್ಷುಕನು ದಾರಿಯ ಬದಿಯಲ್ಲಿ ಕೂತಿದ್ದನು. 47 ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆ ಎಂಬುದು ಆ ಭಿಕ್ಷುಕನಿಗೆ ತಿಳಿದುಬಂದಾಗ ಅವನು, “ದಾವೀದನ ಕುಮಾರನೇ, ಯೇಸುವೇ, ನನಗೆ ಕರುಣೆ ತೋರಿಸು” ಎಂದು ಗಟ್ಟಿಯಾಗಿ ಕೂಗತೊಡಗಿದನು. 48 ಆಗ ಅನೇಕರು ಅವನನ್ನು ಸುಮ್ಮನಿರುವಂತೆ ಗದರಿಸಿದರು; ಆದರೆ ಅವನು, “ದಾವೀದನ ಕುಮಾರನೇ, ನನಗೆ ಕರುಣೆ ತೋರಿಸು” ಎಂದು ಇನ್ನಷ್ಟು ಕೂಗತೊಡಗಿದನು. 49 ಆಗ ಯೇಸು ನಿಂತು, “ಅವನನ್ನು ಕರೆಯಿರಿ” ಎಂದು ಹೇಳಿದನು. ಅದಕ್ಕೆ ಅವರು ಆ ಕುರುಡನಿಗೆ, “ಧೈರ್ಯದಿಂದಿರು, ಏಳು, ಅವನು ನಿನ್ನನ್ನು ಕರೆಯುತ್ತಿದ್ದಾನೆ” ಎಂದರು. 50 ಅವನು ತನ್ನ ಮೇಲಂಗಿಯನ್ನು ತೆಗೆದುಹಾಕಿ ಥಟ್ಟನೆ ಎದ್ದು ಯೇಸುವಿನ ಬಳಿಗೆ ಹೋದನು. 51 ಯೇಸು ಅವನಿಗೆ, “ನಾನು ನಿನಗಾಗಿ ಏನು ಮಾಡಬೇಕೆಂದು ನೀನು ಬಯಸುತ್ತೀ?” ಎಂದು ಕೇಳಿದನು. ಅದಕ್ಕೆ ಆ ಕುರುಡನು ಅವನಿಗೆ, “ರಬ್ಬೋನಿ,* ನನಗೆ ದೃಷ್ಟಿ ಬರುವಂತೆ ಮಾಡು” ಎಂದನು. 52 ಆಗ ಯೇಸು ಅವನಿಗೆ, “ಹೋಗು, ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಪಡಿಸಿದೆ” ಎಂದು ಹೇಳಿದನು. ಕೂಡಲೆ ಅವನಿಗೆ ದೃಷ್ಟಿ ಬಂತು ಮತ್ತು ಆ ಮನುಷ್ಯನು ಅವನನ್ನು ಹಿಂಬಾಲಿಸಿದನು.