4 “ಹಾದರ”—ಪ್ರತಿಯೊಂದು ರೀತಿಯ ನಿಷಿದ್ಧ ಲೈಂಗಿಕ ಸಂಭೋಗ
ಮತ್ತಾಯ 5:32—ಗ್ರೀಕ್, πορνεία (ಪೋರ್ನಿಯ); ಲ್ಯಾಟಿನ್, ಫಾರ್ನಿಕೇಷಿಯೊ
ಪೋರ್ನಿಯ ಎಂಬ ಗ್ರೀಕ್ ಪದವು ವಿಶಾಲವಾದ ಅರ್ಥವುಳ್ಳದ್ದಾಗಿದೆ. ಡಬ್ಲ್ಯೂ. ಬಾವರ್ರ ಹೊಸ ಒಡಂಬಡಿಕೆ ಮತ್ತು ಇತರ ಆದಿ ಕ್ರೈಸ್ತ ಸಾಹಿತ್ಯದ ಗ್ರೀಕ್-ಇಂಗ್ಲಿಷ್ ನಿಘಂಟು (ಇಂಗ್ಲಿಷ್), ಎಫ್. ಡಬ್ಲ್ಯೂ. ಗಿಂಗ್ರಿಚ್ ಹಾಗು ಎಫ್. ಡಬ್ಲ್ಯೂ. ಡ್ಯಾಂಕರ್, ಶಿಕಾಗೊ ಮತ್ತು ಲಂಡನ್ (1979)ರ ಎರಡನೆಯ ಇಂಗ್ಲಿಷ್ ಮುದ್ರಣದ ಪುಟ 693ರಲ್ಲಿ ಪೋರ್ನಿಯ ಎಂಬ ಪದದ ಕೆಳಗೆ ಹೇಳುವುದೇನೆಂದರೆ, “ವೇಶ್ಯಾವೃತ್ತಿ, ಶೀಲವಿಲ್ಲದಿರುವುದು, ಹಾದರ [ಅಥವಾ ಜಾರತ್ವ], ಪ್ರತಿಯೊಂದು ರೀತಿಯ ನಿಷಿದ್ಧ ಲೈಂಗಿಕ ಸಂಭೋಗ” ಎಂಬುದು ಈ ಪದದ ಅರ್ಥವಾಗಿದೆ.
ಮತ್ತಾಯ 5:32 ಮತ್ತು 19:9 ರಲ್ಲಿರುವ ಯೇಸುವಿನ ಮಾತುಗಳ ಕುರಿತು ಹೇಳಿಕೆ ನೀಡುತ್ತಾ ಹೊಸ ಒಡಂಬಡಿಕೆಯ ದೇವತಾಶಾಸ್ತ್ರೀಯ ಶಬ್ದಕೋಶವು (ಇಂಗ್ಲಿಷ್) ಸಂಪುಟ VI, ಪುಟ 592ರಲ್ಲಿ ತಿಳಿಸುವುದೇನೆಂದರೆ, “πορνεία [ಪೋರ್ನಿಯ] ಎಂಬ ಪದವು ವಿವಾಹಬಾಹಿರ ಸಂಭೋಗವನ್ನು ಸೂಚಿಸುತ್ತದೆ.” ಆದುದರಿಂದ, ಶಾಸ್ತ್ರಗ್ರಂಥವು ವಿವಾಹಿತ ವ್ಯಕ್ತಿಗಳ ವಿಷಯದಲ್ಲಿ ಪೋರ್ನಿಯ ಎಂಬ ಪದವನ್ನು ಉಪಯೋಗಿಸುತ್ತದೆ. ಇದೇ ಶಬ್ದಕೋಶವು ಪುಟ 594ರಲ್ಲಿ ಎಫೆಸ 5:3, 5 ರ ಸಂಬಂಧದಲ್ಲಿ ತಿಳಿಸುವುದೇನೆಂದರೆ, “ಪ್ರತಿಯೊಬ್ಬನಿಗೂ ಇಂದ್ರಿಯನಿಗ್ರಹದ ವರದಾನ ಇರುವುದಿಲ್ಲ ಎಂಬುದನ್ನು [ಪೌಲನು] ಗ್ರಹಿಸುತ್ತಾನೆ, 1 ಕೊ. 7:7. ಜಾರತ್ವದ ಕೆಡುಕಿನ ವಿರುದ್ಧ ಒಂದು ಸಂರಕ್ಷಣೆಯಾಗಿ [ಇಂದ್ರಿಯನಿಗ್ರಹ]ವಿಲ್ಲದಿರುವಂಥ [ಅವಿವಾಹಿತ] ಪುರುಷನು ದೈವಿಕವಾಗಿ ಸೂಚಿಸಲ್ಪಟ್ಟಿರುವ ಕಾನೂನುಬದ್ಧ ವಿವಾಹ ರೀತಿಯನ್ನು ಅನುಸರಿಸತಕ್ಕದ್ದು, 1 ಕೊ. 7:2.” ಆದುದರಿಂದಲೇ, ನಿಷಿದ್ಧ ಲೈಂಗಿಕ ಸಂಬಂಧಗಳಲ್ಲಿ ಮತ್ತು ಕೃತ್ಯಗಳಲ್ಲಿ ಒಳಗೂಡುವಂಥ ಅವಿವಾಹಿತ ವ್ಯಕ್ತಿಗಳ ಸಂಬಂಧದಲ್ಲಿಯೂ ಶಾಸ್ತ್ರಗ್ರಂಥವು ಪೋರ್ನಿಯ ಎಂಬ ಪದವನ್ನು ಉಪಯೋಗಿಸುತ್ತದೆ.—1 ಕೊರಿಂಥ 6:9 ನ್ನು ನೋಡಿ.
ವೆಸ್ಟ್ಕಾಟ್ ಮತ್ತು ಹೋರ್ಟ್ ಗ್ರೀಕ್ ಗ್ರಂಥಪಾಠದ ಜೊತೆಸಂಪಾದಕರಾದ ಬಿ. ಎಫ್. ವೆಸ್ಟ್ಕಾಟ್ರವರು 1906ರಲ್ಲಿ ಲಂಡನ್ ಮತ್ತು ನ್ಯೂ ಯಾರ್ಕ್ನಲ್ಲಿ, ಸಂತ ಪೌಲನು ಎಫೆಸದವರಿಗೆ ಬರೆದ ಪತ್ರ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದ ಪುಟ 76ರಲ್ಲಿ ಶಾಸ್ತ್ರಗ್ರಂಥದಲ್ಲಿ ಉಪಯೋಗಿಸಿರುವ ಪೋರ್ನಿಯ ಎಂಬ ಪದದ ಬೇರೆ ಬೇರೆ ಅರ್ಥಗಳ ಕುರಿತು ಹೇಳಿಕೆ ನೀಡುತ್ತಾ ಎಫೆಸ 5:3 ನೇ ವಚನದ ಕುರಿತಾದ ಒಂದು ಟಿಪ್ಪಣಿಯಲ್ಲಿ ತಿಳಿಸಿದ್ದು: “ಇದು ಎಲ್ಲ ರೀತಿಯ ನಿಷಿದ್ಧ ಸಂಭೋಗವನ್ನು ಸೂಚಿಸಲಿಕ್ಕಾಗಿರುವ ಒಂದು ಸಾರ್ವತ್ರಿಕ ಪದವಾಗಿದೆ, (I) ವ್ಯಭಿಚಾರ: ಹೋಶೇ. ii. 2, 4 (LXX.); ಮತ್ತಾ. v. 32; xix. 9; (2) ಕಾನೂನುಬಾಹಿರ ವಿವಾಹ, I ಕೊರಿಂ. v. I; (3) ಹಾದರ, [ಎಫೆಸ 5:3]ರಲ್ಲಿರುವಂತೆ ಸರ್ವಸಾಮಾನ್ಯ ಅರ್ಥ.” “ಸರ್ವಸಾಮಾನ್ಯ ಅರ್ಥ” ಎಂದು ಹೇಳುವಾಗ ಅವಿವಾಹಿತ ವ್ಯಕ್ತಿಗಳು ಮಾತ್ರವೇ ಒಳಗೂಡಿರುವ ಆಧುನಿಕ, ಸೀಮಿತವಾದ ಅರ್ಥಕ್ಕೆ ಸೂಚಿಸಲಾಗಿದೆ ಎಂಬುದು ಸುಸ್ಪಷ್ಟ.
ಈ ಅಕ್ಷರಾರ್ಥದ ಜೊತೆಗೆ, ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ಕೆಲವೊಂದು ಸ್ಥಳಗಳಲ್ಲಿ ಪೋರ್ನಿಯ ಎಂಬ ಪದಕ್ಕೆ ಸಾಂಕೇತಿಕ ಅರ್ಥವೂ ಇದೆ. ಈ ಅರ್ಥದ ವಿಷಯದಲ್ಲಿ ಎಫ್. ಸೊರೆಲ್ರ 1961ರ ಲೆಕ್ಸಿಕನ್ ಗ್ರೇಕಮ್ ನೊವಿ ಟೆಸ್ಟಮೆಂಟಿ ಎಂಬ ಪುಸ್ತಕದ ಮೂರನೇ ಮುದ್ರಣವು 1106ನೇ ಅಂಕಣದಲ್ಲಿ ಪೋರ್ನಿಯ ಎಂಬ ಶೀರ್ಷಿಕೆಯ ಕೆಳಗೆ ಹೇಳುವುದೇನೆಂದರೆ, “ಸಂಪೂರ್ಣವಾಗಿ ಅಥವಾ ಸ್ವಲ್ಪಮಟ್ಟಿಗೆ ಸತ್ಯ ನಂಬಿಕೆಯಿಂದ ಧರ್ಮಭ್ರಷ್ಟರಾಗುವುದು, ಅನ್ಯ ದೇವದೇವತೆಗಳಿಗೋಸ್ಕರ ಒಬ್ಬನೇ ಸತ್ಯ ದೇವರಾದ ಯಾಹ್ವೆಯನ್ನು ತೊರೆಯುವುದು [4 ಅರ 9:22; ಯೆರೆ 3:2,9; ಹೋಶೇ. 6:10 ಮುಂತಾದವುಗಳು; ಏಕೆಂದರೆ ತನ್ನ ಜನರೊಂದಿಗಿನ ದೇವರ ಸಾಮರಸ್ಯವು ಒಂದು ರೀತಿಯ ಆಧ್ಯಾತ್ಮಿಕ ದಾಂಪತ್ಯದಂತೆ ಪರಿಗಣಿಸಲ್ಪಟ್ಟಿತ್ತು]: ಪ್ರಕ 14:8; 17:2, 4; 18:3; 19:2.” (ಆವರಣಗಳು ಮತ್ತು ಓರೆಅಕ್ಷರಗಳು ಅವರವು; LXXನಲ್ಲಿ 4ಅರ ಎಂಬುದು ಮ್ಯಾಸೊರೆಟಿಕ್ ಗ್ರಂಥಪಾಠದಲ್ಲಿ 2 ಅರಸುಗಳಿಗೆ ಸಮಾನವಾಗಿದೆ.)
ಗ್ರೀಕ್ ಗ್ರಂಥಪಾಠದಲ್ಲಿ ಪೋರ್ನಿಯ ಎಂಬ ಪದವು ಮುಂದಿನ 25 ಸ್ಥಳಗಳಲ್ಲಿ ಕಂಡುಬರುತ್ತದೆ: ಮತ್ತಾಯ 5:32; 15:19; 19:9; ಮಾರ್ಕ 7:21; ಯೋಹಾನ 8:41; ಅ. ಕಾರ್ಯಗಳು 15:20, 29; 21:25; 1 ಕೊರಿಂಥ 5:1, 1; 6:13, 18; 7:2; 2 ಕೊರಿಂಥ 12:21; ಗಲಾತ್ಯ 5:19; ಎಫೆಸ 5:3; ಕೊಲೊಸ್ಸೆ 3:5; 1 ಥೆಸಲೊನೀಕ 4:3; ಪ್ರಕಟನೆ 2:21; 9:21; 14:8; 17:2, 4; 18:3; 19:2.
ಇದಕ್ಕೆ ಸಂಬಂಧಿತವಾದ ಪೋರ್ನಿಯುಒ ಎಂಬ ಕ್ರಿಯಾಪದವು ನೂತನ ಲೋಕ ಭಾಷಾಂತರದಲ್ಲಿ ‘ಜಾರತ್ವವನ್ನು ರೂಢಿಮಾಡಿಕೊಂಡಿರುವುದು’ ಅಥವಾ ‘ಜಾರತ್ವಮಾಡುವುದು’ ಎಂದು ಭಾಷಾಂತರಿಸಲ್ಪಟ್ಟಿದ್ದು, ಮುಂದಿನ ಎಂಟು ಸ್ಥಳಗಳಲ್ಲಿ ಕಂಡುಬರುತ್ತದೆ: 1 ಕೊರಿಂಥ 6:18; 10:8, 8; ಪ್ರಕಟನೆ 2:14, 20; 17:2; 18:3, 9.
ಇದಕ್ಕೆ ಸಂಬಂಧಿತವಾದ ಎಕ್ಪೋರ್ನಿಯುಒ ಎಂಬ ಕ್ರಿಯಾಪದವು ನೂತನ ಲೋಕ ಭಾಷಾಂತರದಲ್ಲಿ ‘ವಿಪರೀತ ಜಾರತ್ವವನ್ನು ನಡಿಸು’ ಎಂದು ಭಾಷಾಂತರಿಸಲ್ಪಟ್ಟಿದ್ದು, ಒಂದು ಬಾರಿ ಯೂದ 7ನೆಯ ವಚನದಲ್ಲಿ ಕಂಡುಬರುತ್ತದೆ.
ಇದಕ್ಕೆ ಸಂಬಂಧಿತವಾದ ಪೋರ್ನೆ ಎಂಬ ನಾಮಪದವು ನೂತನ ಲೋಕ ಭಾಷಾಂತರದಲ್ಲಿ “ವೇಶ್ಯೆ” ಎಂದು ಭಾಷಾಂತರಿಸಲ್ಪಟ್ಟಿದ್ದು, ಮುಂದಿನ 12 ಸ್ಥಳಗಳಲ್ಲಿ ಕಂಡುಬರುತ್ತದೆ: ಮತ್ತಾಯ 21:31, 32; ಲೂಕ 15:30; 1 ಕೊರಿಂಥ 6:15, 16; ಇಬ್ರಿಯ 11:31; ಯಾಕೋಬ 2:25; ಪ್ರಕಟನೆ 17:1, 5, 15, 16; 19:2.
ಇದಕ್ಕೆ ಸಂಬಂಧಿತವಾದ ಪೋರ್ನೋಸ್ ಎಂಬ ನಾಮಪದವು ನೂತನ ಲೋಕ ಭಾಷಾಂತರದಲ್ಲಿ “ಜಾರ” ಎಂದು ಭಾಷಾಂತರಿಸಲ್ಪಟ್ಟಿದ್ದು, ಮುಂದಿನ ಹತ್ತು ಸ್ಥಳಗಳಲ್ಲಿ ಕಂಡುಬರುತ್ತದೆ: 1 ಕೊರಿಂಥ 5:9, 10, 11; 6:9; ಎಫೆಸ 5:5; 1 ತಿಮೊಥೆಯ 1:10; ಇಬ್ರಿಯ 12:16; 13:4; ಪ್ರಕಟನೆ 21:8; 22:15. ಏಚ್. ಲಿಡ್ಡೆಲ್ ಮತ್ತು ಆರ್. ಸ್ಕಾಟ್ರವರ 1968ರ ಒಂದು ಗ್ರೀಕ್-ಇಂಗ್ಲಿಷ್ ನಿಘಂಟು (ಇಂಗ್ಲಿಷ್) ಎಂಬ ಪುಸ್ತಕದ ಪುಟ 1450ರಲ್ಲಿ ಈ ಪದದ ಅರ್ಥವನ್ನು “ಪುರುಷಮೈಥುನಕ್ಕಾಗಿ ಇಟ್ಟುಕೊಂಡಿರುವ ಸೇವಕ, ಪುರುಷಗಾಮಿ, ಜಾರ, ವಿಗ್ರಹಾರಾಧಕ” ಎಂದು ನಿರೂಪಿಸಲಾಗಿದೆ.