ಪ್ರಕಟನೆ
9 ಐದನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ನಾನು ಆಕಾಶದಿಂದ ಭೂಮಿಗೆ ಬಿದ್ದಿದ್ದ ಒಂದು ನಕ್ಷತ್ರವನ್ನು ನೋಡಿದೆನು ಮತ್ತು ಅದಕ್ಕೆ * ಅಗಾಧ ಸ್ಥಳದ ಕೂಪದ ಬೀಗದ ಕೈ ಕೊಡಲ್ಪಟ್ಟಿತು. 2 ಆ ನಕ್ಷತ್ರವು * ಅಗಾಧ ಸ್ಥಳದ ಕೂಪವನ್ನು ತೆರೆದಾಗ ಅದರಿಂದ ಬಂದ ಹೊಗೆಯು ದೊಡ್ಡ ಕುಲುಮೆಯ ಹೊಗೆಯಂತೆ ಏರಿತು; ಕೂಪದ ಆ ಹೊಗೆಯಿಂದ ಸೂರ್ಯನು ಕತ್ತಲಾದನು, ವಾಯುಮಂಡಲವೂ ಕತ್ತಲಾಯಿತು. 3 ಆ ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಹೊರಟು ಬಂದವು ಮತ್ತು ಭೂಮಿಯಲ್ಲಿರುವ ಚೇಳುಗಳಿಗೆ ಇರುವಂಥ ಅಧಿಕಾರವೇ ಅವುಗಳಿಗೂ ಕೊಡಲ್ಪಟ್ಟಿತು. 4 ಭೂಮಿಯ ಯಾವ ಸಸ್ಯವನ್ನಾಗಲಿ ಯಾವ ಹಸಿರನ್ನಾಗಲಿ ಯಾವ ಮರವನ್ನಾಗಲಿ ಕೆಡಿಸದೆ, ತಮ್ಮ ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರಿಗೆ ಮಾತ್ರ ಕೇಡುಮಾಡುವಂತೆ ಅವುಗಳಿಗೆ ಹೇಳಲಾಯಿತು.
5 ಇವರನ್ನು ಕೊಲ್ಲದೆ ಐದು ತಿಂಗಳುಗಳ ವರೆಗೆ ಪೀಡಿಸುವಂತೆ ಮಿಡತೆಗಳಿಗೆ ಅನುಮತಿಯನ್ನು ಕೊಡಲಾಯಿತು ಮತ್ತು ಅವರಿಗೆ ಉಂಟಾದ ಪೀಡೆಯು ಚೇಳು ಮನುಷ್ಯನನ್ನು ಕಚ್ಚಿದಾಗ ಉಂಟಾಗುವ ಪೀಡೆಯಂತಿತ್ತು. 6 ಆ ದಿನಗಳಲ್ಲಿ ಮನುಷ್ಯರು ಮರಣವನ್ನು ಹುಡುಕುವರು, ಆದರೆ ಅದನ್ನು ಕಂಡುಕೊಳ್ಳುವುದೇ ಇಲ್ಲ; ಅವರು ಸಾಯಲು ಇಷ್ಟಪಡುವರು, ಆದರೆ ಮರಣವು ಅವರಿಂದ ಓಡಿಹೋಗುತ್ತಿರುವುದು.
7 ಆ ಮಿಡತೆಗಳ ರೂಪವು ಯುದ್ಧಕ್ಕಾಗಿ ಸಿದ್ಧವಾಗಿರುವ ಕುದುರೆಗಳ ರೂಪದಂತಿತ್ತು; ಅವುಗಳ ತಲೆಗಳ ಮೇಲೆ ಚಿನ್ನದಂಥ ಕಿರೀಟಗಳ ಹಾಗಿದ್ದವುಗಳು ಇದ್ದವು ಮತ್ತು ಅವುಗಳ ಮುಖಗಳು ಮನುಷ್ಯರ ಮುಖಗಳಂತಿದ್ದವು, 8 ಆದರೆ ಸ್ತ್ರೀಯರ ಕೂದಲಿನಂತಿರುವ ಕೂದಲು ಅವುಗಳಿಗೆ ಇತ್ತು. ಅವುಗಳ ಹಲ್ಲುಗಳು ಸಿಂಹಗಳ ಹಲ್ಲುಗಳ ಹಾಗಿದ್ದವು; 9 ಅವುಗಳಿಗೆ ಕಬ್ಬಿಣದ ಎದೆಕವಚಗಳಂತಿದ್ದ ಎದೆಕವಚಗಳು ಇದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುತ್ತಿರುವ ಅನೇಕ ರಥಾಶ್ವಗಳ ಶಬ್ದದ ಹಾಗಿತ್ತು. 10 ಇದಲ್ಲದೆ ಚೇಳುಗಳಿಗಿರುವಂತೆ ಅವುಗಳಿಗೆ ಬಾಲಗಳೂ ಕೊಂಡಿಗಳೂ ಇವೆ; ಮನುಷ್ಯರನ್ನು ಐದು ತಿಂಗಳುಗಳ ವರೆಗೆ ಬಾಧಿಸುವ ಅಧಿಕಾರವಿರುವುದು ಅವುಗಳ ಬಾಲಗಳಲ್ಲಿಯೇ. 11 ಅವುಗಳಿಗೆ ಒಬ್ಬ ರಾಜನಿದ್ದಾನೆ, ಅಗಾಧ ಸ್ಥಳದ ದೂತನೇ ಅವನು. ಹೀಬ್ರು ಭಾಷೆಯಲ್ಲಿ ಅಬ್ಯಾಡನ್, ಗ್ರೀಕ್ ಭಾಷೆಯಲ್ಲಿ ಅಪಾಲ್ಯನ್ ಎಂಬ ಹೆಸರು ಅವನಿಗಿದೆ.
12 ಒಂದು ವಿಪತ್ತು ಗತಿಸಿತು. ಇಗೋ, ಇವುಗಳಾದ ಮೇಲೆ ಇನ್ನೂ ಎರಡು ವಿಪತ್ತುಗಳು ಬರುತ್ತಿವೆ.
13 ಆರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೇವರ ಮುಂದೆ ಇರುವ ಚಿನ್ನದ ಯಜ್ಞವೇದಿಯ ಕೊಂಬುಗಳಿಂದ ಒಂದು ಧ್ವನಿಯು 14 ತುತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ, “ಯೂಫ್ರೇಟೀಸ್ ಮಹಾ ನದಿಯ ಬಳಿಯಲ್ಲಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳುವುದನ್ನು ನಾನು ಕೇಳಿಸಿಕೊಂಡೆನು. 15 ಆಗ ಮನುಷ್ಯರೊಳಗೆ ಮೂರನೆಯ ಒಂದು ಭಾಗದಷ್ಟು ಜನರನ್ನು ಕೊಲ್ಲುವ ಗಳಿಗೆ, ದಿನ, ತಿಂಗಳು ಮತ್ತು ವರ್ಷಕ್ಕಾಗಿ ಸಿದ್ಧಗೊಳಿಸಲ್ಪಟ್ಟಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡಲಾಯಿತು.
16 ಕುದುರೆಯ ದಂಡಿನವರ ಸಂಖ್ಯೆಯು ಇಪ್ಪತ್ತುಕೋಟಿ: ಅವುಗಳ ಸಂಖ್ಯೆಯನ್ನು ನಾನು ಕೇಳಿಸಿಕೊಂಡೆನು. 17 ದರ್ಶನದಲ್ಲಿ ಕುದುರೆಗಳನ್ನು ಮತ್ತು ಅವುಗಳ ಮೇಲೆ ಕುಳಿತುಕೊಂಡಿದ್ದವರನ್ನು ನಾನು ನೋಡಿದ್ದು ಹೀಗೆ: ಅವರ ಎದೆಕವಚಗಳು ಅಗ್ನಿ-ಕೆಂಪು, ಧೂಮ್ರ-ನೀಲಿ ಮತ್ತು ಗಂಧಕ-ಪೀತ ಬಣ್ಣದವುಗಳಾಗಿದ್ದವು; ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು ಮತ್ತು ಅವುಗಳ ಬಾಯಿಂದ ಬೆಂಕಿಯೂ ಹೊಗೆಯೂ ಗಂಧಕಗಳೂ ಹೊರಡುತ್ತಿದ್ದವು. 18 ಈ ಮೂರು ಉಪದ್ರವಗಳಿಂದ, ಅಂದರೆ ಅವುಗಳ ಬಾಯಿಂದ ಹೊರಟ ಬೆಂಕಿ, ಹೊಗೆ ಮತ್ತು ಗಂಧಕಗಳಿಂದ ಮನುಷ್ಯರಲ್ಲಿ ಮೂರನೆಯ ಒಂದು ಭಾಗವು ಕೊಲ್ಲಲ್ಪಟ್ಟಿತು. 19 ಆ ಕುದುರೆಗಳ ಅಧಿಕಾರವು ಅವುಗಳ ಬಾಯಿಗಳಲ್ಲಿಯೂ ಬಾಲಗಳಲ್ಲಿಯೂ ಇದೆ; ಅವುಗಳ ಬಾಲಗಳು ಸರ್ಪಗಳಂತಿದ್ದು ಅವುಗಳಿಗೆ ತಲೆಗಳಿವೆ ಮತ್ತು ಇವುಗಳಿಂದ ಅವು ಕೇಡನ್ನುಂಟುಮಾಡುತ್ತವೆ.
20 ಆದರೆ ಈ ಉಪದ್ರವಗಳಿಂದ ಕೊಲ್ಲಲ್ಪಟ್ಟಿರದ ಮನುಷ್ಯರು ತಮ್ಮ ಕೈಕೆಲಸಗಳಿಗಾಗಿ, ತಾವು ದೆವ್ವಗಳನ್ನು ಮತ್ತು ಚಿನ್ನ, ಬೆಳ್ಳಿ, ತಾಮ್ರ, ಶಿಲೆ ಹಾಗೂ ಮರದಿಂದ ಮಾಡಿದ ನೋಡಲಾರದ, ಕೇಳಲಾರದ ಮತ್ತು ನಡೆಯಲಾರದ ವಿಗ್ರಹಗಳನ್ನು ಆರಾಧಿಸಬಾರದೆಂಬ ವಿಷಯದಲ್ಲಿ ಪಶ್ಚಾತ್ತಾಪಪಡಲಿಲ್ಲ. 21 ಮತ್ತು ಅವರು ತಮ್ಮ ಕೊಲೆಗಳಿಗಾಗಲಿ ತಮ್ಮ ಪ್ರೇತವ್ಯವಹಾರದ ಆಚಾರಗಳಿಗಾಗಲಿ ತಮ್ಮ ಜಾರತ್ವಕ್ಕಾಗಲಿ ತಮ್ಮ ಕಳ್ಳತನಗಳಿಗಾಗಲಿ ಪಶ್ಚಾತ್ತಾಪಪಡಲಿಲ್ಲ.