1 ತಿಮೊತಿ
1 ನಮ್ಮ ರಕ್ಷಕನಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಕೆಳಗಿರುವ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು 2 ನಂಬಿಕೆಯಲ್ಲಿ ನಿಜವಾದ ಮಗನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ,
ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ಅಪಾತ್ರ ದಯೆಯೂ * ಕರುಣೆಯೂ ಶಾಂತಿಯೂ ಉಂಟಾಗಲಿ.
3 ನಾನು ಮಕೆದೋನ್ಯಕ್ಕೆ ಹೋಗಲಿದ್ದಾಗ ನೀನು ಎಫೆಸದಲ್ಲಿಯೇ ಉಳಿದುಕೊಂಡು ಅಲ್ಲಿದ್ದ ಕೆಲವರಿಗೆ ಬೇರೊಂದು ಸಿದ್ಧಾಂತವನ್ನು ಕಲಿಸಬಾರದೆಂದೂ 4 ಸುಳ್ಳು ಕಥೆಗಳಿಗೆ ಮತ್ತು ವಂಶಾವಳಿಗಳಿಗೆ ಲಕ್ಷ್ಯಕೊಡಬಾರದೆಂದೂ ಆಜ್ಞಾಪಿಸುವಂತೆ ನಾನು ನಿನ್ನನ್ನು ಉತ್ತೇಜಿಸಿದಂತೆಯೇ ಈಗಲೂ ಉತ್ತೇಜಿಸುತ್ತೇನೆ. ಅಂಥ ವಿಷಯಗಳಿಂದ ಯಾವುದೇ ಪ್ರಯೋಜನವಿಲ್ಲ, ಅವು ಸಂಶೋಧನೆಗಾಗಿ ಪ್ರಶ್ನೆಗಳನ್ನು ಎಬ್ಬಿಸುತ್ತವೆಯೇ ಹೊರತು ನಂಬಿಕೆಯ ಸಂಬಂಧದಲ್ಲಿ ದೇವರಿಂದ ಏನನ್ನೂ ಒದಗಿಸುವುದಿಲ್ಲ. 5 ಶುದ್ಧವಾದ ಹೃದಯದಿಂದಲೂ ಒಳ್ಳೇ ಮನಸ್ಸಾಕ್ಷಿಯಿಂದಲೂ ನಿಷ್ಕಪಟವಾದ ನಂಬಿಕೆಯಿಂದಲೂ ಹುಟ್ಟಿದ ಪ್ರೀತಿಯೇ ಈ ಆಜ್ಞೆಯ ನಿಜವಾದ ಉದ್ದೇಶವಾಗಿದೆ. 6 ಈ ವಿಷಯಗಳಿಂದ ವಿಮುಖರಾಗಿರುವ ಕೆಲವರು ವ್ಯರ್ಥವಾದ ಮಾತುಗಳಿಗೆ ತಿರುಗಿಕೊಂಡಿದ್ದಾರೆ; 7 ಅವರು ಧರ್ಮಶಾಸ್ತ್ರದ ಬೋಧಕರಾಗಿರಲು ಬಯಸುತ್ತಾರಾದರೂ ತಾವು ಹೇಳುತ್ತಿರುವ ಸಂಗತಿಗಳನ್ನಾಗಲಿ ತಾವು ದೃಢವಾಗಿ ಪ್ರತಿಪಾದಿಸುತ್ತಿರುವ ವಿಷಯಗಳನ್ನಾಗಲಿ ಗ್ರಹಿಸದವರಾಗಿದ್ದಾರೆ.
8 ಧರ್ಮಶಾಸ್ತ್ರವು ಒಳ್ಳೇದೆಂದು ನಾವು ಬಲ್ಲೆವು, ಆದರೆ ಒಬ್ಬನು ಅದನ್ನು ನ್ಯಾಯಸಮ್ಮತವಾಗಿ ಉಪಯೋಗಿಸುವಾಗ ಮಾತ್ರ ಅದು ಒಳ್ಳೇದಾಗಿರುತ್ತದೆ. 9 ಧರ್ಮಶಾಸ್ತ್ರವು ನೀತಿವಂತನಿಗೋಸ್ಕರ ಅಲ್ಲ, ಅಧರ್ಮಿಗಳಿಗೆ, ಸ್ವಚ್ಛಂದವಾಗಿ ವರ್ತಿಸುವವರಿಗೆ, ಭಕ್ತಿಹೀನರಿಗೆ, ಪಾಪಿಗಳಿಗೆ, ಪ್ರೀತಿಪೂರ್ವಕ ದಯೆಯ ಕೊರತೆಯುಳ್ಳವರಿಗೆ, ಅಪವಿತ್ರರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ, ನರಹತ್ಯೆಮಾಡುವವರಿಗೆ, 10 ಜಾರರಿಗೆ, ಪುರುಷಗಾಮಿಗಳಿಗೆ, ಅಪಹರಣಕಾರರಿಗೆ, ಸುಳ್ಳುಗಾರರಿಗೆ, ಸುಳ್ಳಾಣೆಯಿಡುವವರಿಗೆ ಮತ್ತು ಸ್ವಸ್ಥಬೋಧನೆಗೆ ವಿರುದ್ಧವಾಗಿರುವ ಬೇರೆ ಯಾವುದೇ ವಿಷಯಗಳನ್ನು ನಡಿಸುವವರಿಗೋಸ್ಕರ ಜಾರಿಗೆ ತರಲ್ಪಟ್ಟಿದೆ ಎಂಬುದನ್ನು ತಿಳಿದವನಾಗಿ ಅದನ್ನು ಉಪಯೋಗಿಸಬೇಕು. 11 ಈ ಸ್ವಸ್ಥಬೋಧನೆಯು ಸಂತೋಷದ ದೇವರ ಮಹಿಮಾಭರಿತ ಸುವಾರ್ತೆಗೆ ಅನುಸಾರವಾಗಿದ್ದು ಈ ಸುವಾರ್ತೆಯು ನನಗೆ ಒಪ್ಪಿಸಲ್ಪಟ್ಟಿದೆ.
12 ನಮ್ಮ ಕರ್ತನಾದ ಕ್ರಿಸ್ತ ಯೇಸು ನನಗೆ ಬಲವನ್ನು ದಯಪಾಲಿಸಿ ನನ್ನನ್ನು ಶುಶ್ರೂಷೆಗೆ ನೇಮಿಸುವ ಮೂಲಕ ನನ್ನನ್ನು ನಂಬಿಗಸ್ತನಾಗಿ ಪರಿಗಣಿಸಿದ್ದಕ್ಕಾಗಿ ನಾನು ಅವನಿಗೆ ಕೃತಜ್ಞನಾಗಿದ್ದೇನೆ. 13 ಈ ಹಿಂದೆ ನಾನು ದೇವದೂಷಣೆಮಾಡುವವನೂ ಹಿಂಸಕನೂ ದುರಹಂಕಾರಿಯೂ ಆಗಿದ್ದೆನಾದರೂ ನಾನು ಅಜ್ಞಾನಿಯಾಗಿದ್ದು ನಂಬಿಕೆಯ ಕೊರತೆಯಿಂದ ಹೀಗೆ ವರ್ತಿಸಿದ್ದ ಕಾರಣ ನನಗೆ ಕರುಣೆಯು ತೋರಿಸಲ್ಪಟ್ಟಿತು. 14 ಆದರೆ ನಮ್ಮ ಕರ್ತನ ಅಪಾತ್ರ ದಯೆಯು ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ನಂಬಿಕೆ ಮತ್ತು ಪ್ರೀತಿಯೊಂದಿಗೆ ಬಹಳವಾಗಿ ಸಮೃದ್ಧಿಯಾಯಿತು. 15 ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ಹೇಳಿಕೆಯು ನಂಬತಕ್ಕದ್ದಾಗಿದೆ ಮತ್ತು ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿದೆ. ಆ ಪಾಪಿಗಳಲ್ಲಿ ನಾನೇ ಅಗ್ರಗಣ್ಯನು. 16 ಹಾಗಿದ್ದರೂ, ನಿತ್ಯಜೀವವನ್ನು ಹೊಂದಲಿಕ್ಕಾಗಿ ತನ್ನ ಮೇಲೆ ನಂಬಿಕೆಯಿಡಲಿರುವವರಿಗೆ ಕ್ರಿಸ್ತ ಯೇಸು ತನ್ನ ದೀರ್ಘ ಸಹನೆಯನ್ನು ಒಂದು ನಿದರ್ಶನವಾಗಿ ತೋರಿಸುವಂತೆ ಮುಖ್ಯ ಪಾಪಿಯಾಗಿರುವ ನನಗೆ ಕರುಣೆಯು ತೋರಿಸಲ್ಪಟ್ಟಿತು.
17 ನಿತ್ಯತೆಯ ಅರಸನೂ ನಿರ್ಲಯನೂ ಅದೃಶ್ಯನೂ ಏಕಮಾತ್ರ ದೇವರೂ ಆಗಿರುವಾತನಿಗೆ ಸದಾಕಾಲಕ್ಕೂ ಗೌರವ ಮತ್ತು ಮಹಿಮೆ ಸಲ್ಲುತ್ತಾ ಇರಲಿ. ಆಮೆನ್.
18 ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮುಂದಾಗಿಯೇ ತಿಳಿಸಲ್ಪಟ್ಟ ಭವಿಷ್ಯವಾಣಿಗಳಿಗನುಸಾರ ನೀನು ಉತ್ತಮವಾದ ಹೋರಾಟವನ್ನು ಮಾಡುತ್ತಾ ಮುಂದುವರಿಯಬೇಕೆಂಬ ಆದೇಶಕ್ಕೆ ನಾನು ನಿನ್ನನ್ನು ಬದ್ಧನನ್ನಾಗಿ ಮಾಡುತ್ತೇನೆ. 19 ನಂಬಿಕೆಯನ್ನೂ ಒಳ್ಳೇ ಮನಸ್ಸಾಕ್ಷಿಯನ್ನೂ ಕಾಪಾಡಿಕೋ; ಕೆಲವರು ಅದನ್ನು ಬದಿಗೊತ್ತಿ ತಮ್ಮ ನಂಬಿಕೆಯ ವಿಷಯದಲ್ಲಿ ಹಡಗೊಡೆತವನ್ನು ಅನುಭವಿಸಿದ್ದಾರೆ. 20 ಹುಮೆನಾಯನೂ ಅಲೆಕ್ಸಾಂದರನೂ ಇಂಥವರ ಗುಂಪಿಗೆ ಸೇರಿದವರಾಗಿದ್ದಾರೆ. ಇವರು ದೇವದೂಷಣೆಮಾಡಬಾರದೆಂಬುದನ್ನು ಶಿಕ್ಷೆಯ ಮೂಲಕ ಕಲಿತುಕೊಳ್ಳುವಂತೆ ಇವರನ್ನು ನಾನು ಸೈತಾನನಿಗೆ ಒಪ್ಪಿಸಿಕೊಟ್ಟಿದ್ದೇನೆ.