ಪ್ರಲಾಪ
א [ಆಲೆಫ್]*
1 ಅಯ್ಯೋ! ಜನ್ರಿಂದ ತುಂಬಿತುಳುಕ್ತಿದ್ದ ಯೆರೂಸಲೇಮ್ ಈಗ ಒಬ್ಬಳೇ ಕೂತಿದ್ದಾಳಲ್ಲಾ!+
ಬೇರೆ ಜನಾಂಗಗಳಿಗಿಂತ ಜನಸಂಖ್ಯೆ ಹೆಚ್ಚಾಗಿದ್ದ ಅವಳು ಈಗ ವಿಧವೆ ತರ ಆಗಿದ್ದಾಳಲ್ಲಾ!+
ಪ್ರಾಂತ್ಯಗಳಿಗೆ* ರಾಣಿಯಾಗಿದ್ದವಳು ಈಗ ದಾಸಿ ಆಗಿದ್ದಾಳಲ್ಲಾ!+
ב [ಬೆತ್]
2 ಅವಳು ರಾತ್ರಿಯೆಲ್ಲ ಬಿಕ್ಕಿಬಿಕ್ಕಿ ಅಳ್ತಾಳೆ,+ ಕಣ್ಣೀರಿಂದ ಅವಳ ಕೆನ್ನೆಗಳು ಒದ್ದೆ ಆಗಿವೆ.
ಅವಳ ಪ್ರಿಯತಮರಲ್ಲಿ ಒಬ್ಬನೂ ಅವಳನ್ನ ಸಮಾಧಾನ ಮಾಡೋಕೆ ಬಂದಿಲ್ಲ.+
ಅವಳ ಮಿತ್ರರೆಲ್ಲ ಶತ್ರುಗಳಾಗಿದ್ದಾರೆ, ಅವಳಿಗೆ ದ್ರೋಹ ಮಾಡಿದ್ದಾರೆ.+
ג [ಗಿಮೆಲ್]
3 ಯೆಹೂದ ಸೆರೆಯಾಗಿ ಹೋಗಿದ್ದಾಳೆ,+ ಅಲ್ಲಿ ದಾಸಿಯಾಗಿ ಕಡುಕಷ್ಟ, ವೇದನೆ ಅನುಭವಿಸ್ತಿದ್ದಾಳೆ.+
ಅವಳು ಬೇರೆ ಜನಾಂಗಗಳ ಮಧ್ಯ ವಾಸಿಸಬೇಕಾಗಿದೆ,+ ಅವಳಿಗೆ ಶಾಂತಿ ನೆಮ್ಮದಿನೇ ಇಲ್ಲ.
ಸಂಕಷ್ಟದಲ್ಲಿ ಇದ್ದಾಗ್ಲೇ ಅವಳ ಹಿಂಸಕರೆಲ್ಲ ಅವಳನ್ನ ಹಿಡಿದಿದ್ದಾರೆ.
ד [ಡಾಲತ್]
4 ಚೀಯೋನಿಗೆ ಹೋಗೋ ರಸ್ತೆಗಳು ಗೋಳಾಡ್ತಿವೆ. ಯಾಕಂದ್ರೆ ಹಬ್ಬಕ್ಕೆ ಯಾರೂ ಬರ್ತಿಲ್ಲ.+
ಅವಳ ಎಲ್ಲ ಬಾಗಿಲುಗಳು ಹಾಳುಬಿದ್ದಿವೆ,+ ಅವಳ ಪುರೋಹಿತರು ದುಃಖದ ನಿಟ್ಟುಸಿರು ಬಿಡ್ತಿದ್ದಾರೆ.
ಅವಳ ಕನ್ಯೆಯರು* ದುಃಖಪಡ್ತಿದ್ದಾರೆ, ಅವಳು ಕಡುಸಂಕಟದಿಂದ ಒದ್ದಾಡ್ತಿದ್ದಾಳೆ.
ה [ಹೆ]
5 ಅವಳ ವಿರೋಧಿಗಳೇ ಅವಳ ಯಜಮಾನರಾಗಿದ್ದಾರೆ.* ಅವಳ ಶತ್ರುಗಳು ನೆಮ್ಮದಿಯಿಂದ ಇದ್ದಾರೆ.+
ಅವಳು ಮಾಡಿದ ತುಂಬ ಅಪರಾಧಗಳಿಗಾಗಿ ಯೆಹೋವ ಅವಳನ್ನ ಈ ರೀತಿ ದುಃಖಪಡೋ ತರ ಮಾಡಿದ್ದಾನೆ.+
ಅವಳ ವಿರೋಧಿಗಳು ಅವಳ ಮಕ್ಕಳನ್ನ ಸೆರೆಹಿಡ್ಕೊಂಡು ಹೋಗಿದ್ದಾರೆ.+
ו [ವಾವ್]
6 ಚೀಯೋನ್ ಅನ್ನೋಳು ತನ್ನೆಲ್ಲ ವೈಭವ ಕಳ್ಕೊಂಡಿದ್ದಾಳೆ.+
ಅವಳ ಅಧಿಕಾರಿಗಳು ಹುಲ್ಲು ಸಿಗದೆ ಅಲೆದಾಡ್ತಿರೋ ಸಾರಂಗಗಳ ತರ ಇದ್ದಾರೆ,
ಅವರು ಬಲಗುಂದಿ ಹೋಗಿರೋದ್ರಿಂದ ಅವ್ರನ್ನ ಅಟ್ಟಿಸ್ಕೊಂಡು ಬರುವವ್ರ ಎದುರಲ್ಲಿ ನಡ್ಕೊಂಡು ಹೋಗ್ತಿದ್ದಾರೆ.
ז [ಜಯಿನ್]
7 ಸಂಕಷ್ಟದಲ್ಲಿರೋ, ಮನೆಯಿಲ್ಲದಿರೋ ಯೆರೂಸಲೇಮ್
ತುಂಬಕಾಲದ ಹಿಂದೆ ತನ್ನ ಹತ್ರ ಇದ್ದ ಬೆಲೆಬಾಳೋ ವಸ್ತುಗಳನ್ನೆಲ್ಲ ನೆನಪಿಸ್ಕೊಳ್ತಿದ್ದಾಳೆ.+
ಅವಳ ಜನ ವಿರೋಧಿಯ ಕೈವಶವಾದಾಗ ಮತ್ತು ಅವಳ ಸಹಾಯಕ್ಕೆ ಯಾರೂ ಬರದಿದ್ದಾಗ+
ח [ಹೆತ್]
8 ಯೆರೂಸಲೇಮ್ ಘೋರ ಪಾಪ ಮಾಡಿದ್ದಾಳೆ,+
ಹಾಗಾಗಿ ಅವಳು ಅಸಹ್ಯ ವಸ್ತು ಆಗಿದ್ದಾಳೆ.
ಅವಳನ್ನ ಸನ್ಮಾನಿಸ್ತಾ ಇದ್ದವ್ರೆಲ್ಲ ಈಗ ಅವಳನ್ನ ಕಾಲ ಕಸದ ಹಾಗೆ ಕಾಣ್ತಿದ್ದಾರೆ. ಯಾಕಂದ್ರೆ ಅವಳು ಬೆತ್ತಲೆ ಆಗಿರೋದನ್ನ ಅವರು ನೋಡಿದ್ದಾರೆ.+
ಅವಳು ನರಳ್ತಿದ್ದಾಳೆ+ ಮತ್ತು ಅವಮಾನದಿಂದ ಬೇರೆ ಕಡೆ ತಿರುಗ್ತಾಳೆ.
ט [ಟೆತ್]
9 ಅವಳ ಲಂಗಗಳು ಅಶುದ್ಧವಾಗಿವೆ.
ಮುಂದೆ ತನಗೆ ಏನಾಗಬಹುದು ಅಂತ ಅವಳು ಸ್ವಲ್ಪನೂ ಯೋಚಿಸಲಿಲ್ಲ.+
ಅವಳು ಹೇಗೆ ಬಿದ್ದಳಂದ್ರೆ ಅದನ್ನ ನೋಡಿದವರು ದಿಗಿಲುಗೊಂಡ್ರು, ಅವಳನ್ನ ಸಮಾಧಾನ ಮಾಡುವವರು ಒಬ್ರೂ ಇಲ್ಲ.
ಓ ಯೆಹೋವನೇ, ನನ್ನ ಕಷ್ಟವೇದನೆ ನೋಡು. ಯಾಕಂದ್ರೆ ಶತ್ರು ಕೊಚ್ಚಿಕೊಂಡಿದ್ದಾನೆ.+
י [ಯೋದ್]
10 ವಿರೋಧಿ ಕೈಚಾಚಿ ಅವಳ ಸಿರಿಸಂಪತ್ತನ್ನೆಲ್ಲ ಬಾಚ್ಕೊಂಡಿದ್ದಾನೆ.+
ಯಾವ ಜನಾಂಗಗಳು ನಿನ್ನ ಸಭೆಯೊಳಗೆ ಬರಬಾರದು ಅಂತ ನೀನು ಆಜ್ಞೆ ಕೊಟ್ಯೋ
ಅವ್ರೇ ಆರಾಧನಾ ಸ್ಥಳದೊಳಗೆ ಬರೋದನ್ನ ಅವಳು ನೋಡಿದ್ದಾಳೆ.+
כ [ಕಾಫ್]
11 ಅವಳ ಜನ್ರೆಲ್ಲ ದುಃಖದ ನಿಟ್ಟುಸಿರು ಬಿಡ್ತಿದ್ದಾರೆ, ಆಹಾರಕ್ಕಾಗಿ ಅಲೆದಾಡ್ತಿದ್ದಾರೆ.+
ಜೀವ ಉಳಿದ್ರೆ ಸಾಕಂತ ನೆನಸಿ ತಿನ್ನೋಕೆ ಏನಾದ್ರೂ ಪಡಿಯೋಕೆ ತಮ್ಮ ಅಮೂಲ್ಯ ವಸ್ತುಗಳನ್ನ ಕೊಟ್ಟಿದ್ದಾರೆ.
ನೋಡು, ಯೆಹೋವ ನೋಡು, ನಾನು ಕೆಲಸಕ್ಕೆ ಬಾರದ ಸ್ತ್ರೀ ತರ* ಆಗಿದ್ದೀನಿ.
ל [ಲಾಮೆದ್]
12 ರಸ್ತೆಯಲ್ಲಿ ದಾಟಿ ಹೋಗ್ತಿರೋರೇ, ನಿಮಗೇನೂ ಅನಿಸ್ತಿಲ್ವಾ?
ನನ್ನನ್ನ ನೋಡಿ! ನನ್ನ ಕಡೆ ಗಮನಕೊಡಿ!
ಯೆಹೋವ ತನ್ನ ಕೋಪದ ದಿನದಲ್ಲಿ ನಾನು ನೋವಿಂದ ನರಳೋ ತರ ಮಾಡಿದ್ದಾನೆ,+
ನನಗೆ ಬಂದಿರೋ ಈ ನೋವಿನ ತರ ಬೇರೆ ಯಾವ ನೋವಾದ್ರೂ ಇದ್ಯಾ?
מ [ಮೆಮ್]
13 ಆತನು ಸ್ವರ್ಗದಿಂದ ಬೆಂಕಿ ಕಳಿಸಿದ್ದಾನೆ,+ ಅದು ನನ್ನ ಪ್ರತಿಯೊಂದು ಎಲುಬನ್ನ ಸುಟ್ಟುಹಾಕಿದೆ.
ನನ್ನ ಕಾಲುಗಳನ್ನ ಸಿಕ್ಕಿಸೋಕೆ ಆತನು ಬಲೆ ಹರಡಿದ್ದಾನೆ, ನಾನು ತಿರುಗಿ ನೋಡ್ಲೇಬೇಕಾದ ಪರಿಸ್ಥಿತಿಗೆ ನನ್ನನ್ನ ತಂದಿದ್ದಾನೆ.
ಆತನು ನನ್ನನ್ನ ಒಂಟಿಯಾಗಿ ಮಾಡಿದ್ದಾನೆ.
ದಿನವೆಲ್ಲ ನಾನು ಹುಷಾರಿಲ್ಲದೆ ಒದ್ದಾಡ್ತಾ ಇದ್ದೀನಿ.
נ [ನೂನ್]
14 ಆತನು ತನ್ನ ಕೈಯಾರೆ ನನ್ನ ಅಪರಾಧಗಳನ್ನ ಒಂದು ನೊಗದ ತರ ಕಟ್ಟಿದ್ದಾನೆ.
ಅವುಗಳನ್ನ ನನ್ನ ಕುತ್ತಿಗೆ ಮೇಲೆ ಇಟ್ಟಿದ್ದಾನೆ, ನನ್ನ ಬಲ ಕುಂದಿಹೋಗಿದೆ.
ನನ್ನಿಂದ ಎದುರಿಸೋಕೆ ಆಗದವ್ರ ಕೈಗೆ ಯೆಹೋವ ನನ್ನನ್ನ ಕೊಟ್ಟಿದ್ದಾನೆ.+
ס [ಸಾಮೆಕ್]
15 ಯೆಹೋವ ನನ್ನ ಮಧ್ಯದಿಂದ ಎಲ್ಲ ಬಲಿಷ್ಠ ಗಂಡಸ್ರನ್ನ ತೆಗೆದು ಎಸೆದುಬಿಟ್ಟಿದ್ದಾನೆ.+
ನನ್ನ ಯುವಕರನ್ನ ಜಜ್ಜಿಹಾಕೋಕೆ ನನ್ನ ವಿರುದ್ಧ ಸಭೆ ಕರೆದಿದ್ದಾನೆ.+
ಯೆಹೂದ ಅನ್ನೋ ಕನ್ಯೆಯನ್ನ ದ್ರಾಕ್ಷಿತೊಟ್ಟಿಯಲ್ಲಿ ಹಾಕಿ ಯೆಹೋವ ತುಳಿದಿದ್ದಾನೆ.+
ע [ಅಯಿನ್]
16 ಹಾಗಾಗಿ ನಾನು ಅಳ್ತಿದ್ದೀನಿ,+ ಕಣ್ಣೀರಧಾರೆ ಹರಿದು ಬರ್ತಿದೆ.
ನನ್ನನ್ನ ಸಂತೈಸೋಕೆ, ನನ್ನಲ್ಲಿ ಚೈತನ್ಯ ತುಂಬೋಕೆ ಯಾರೂ ಇಲ್ಲ, ಎಲ್ರೂ ನನ್ನಿಂದ ದೂರ ಆಗಿದ್ದಾರೆ.
ಶತ್ರುಗಳು ಜಯಿಸಿದ್ರಿಂದ ನನ್ನ ಗಂಡು ಮಕ್ಕಳ ಬಾಳು ಹಾಳಾಗಿದೆ.
פ [ಪೇ]
17 ಚೀಯೋನ್ ತನ್ನ ಕೈಗಳನ್ನ ಚಾಚ್ಕೊಂಡಿದ್ದಾಳೆ,+ ಅವಳನ್ನ ಸಮಾಧಾನ ಮಾಡುವವರು ಯಾರೂ ಇಲ್ಲ.
ಯಾಕೋಬನ ಮೇಲೆ ದಾಳಿ ಮಾಡೋಕೆ ಅವನ ಸುತ್ತ ಇದ್ದ ವಿರೋಧಿಗಳಿಗೆ ಯೆಹೋವ ಅಪ್ಪಣೆ ಕೊಟ್ಟಿದ್ದಾನೆ.+
ಅವ್ರಿಗೆ ಯೆರೂಸಲೇಮ್ ಒಂದು ಅಸಹ್ಯ ವಸ್ತುವಾಗಿದೆ.+
צ [ಸಾದೆ]
18 ಯೆಹೋವ ನೀತಿವಂತನು,+ ಆತನ ಆಜ್ಞೆಗಳನ್ನ ಮೀರಿ ನಡೆದು ದಂಗೆಯೆದ್ದಿದ್ದು ನಾನೇ.+
ಜನಾಂಗಗಳೇ, ನೀವೆಲ್ರೂ ಕಿವಿಗೊಡಿ, ನನ್ನ ವ್ಯಥೆ ನೋಡಿ.
ನನ್ನ ಕನ್ಯೆಯರು* ಮತ್ತು ನನ್ನ ಯುವಕರು ಬಂದಿಗಳಾಗಿ ಹೋಗಿದ್ದಾರೆ.+
ק [ಕೊಫ್]
19 ನಾನು ನನ್ನ ಪ್ರಿಯತಮರನ್ನ ಕರೆದೆ, ಆದ್ರೆ ಅವರು ನನಗೆ ದ್ರೋಹ ಮಾಡಿದ್ರು.+
ಪಟ್ಟಣದಲ್ಲಿದ್ದ ನನ್ನ ಪುರೋಹಿತರು ಮತ್ತು ನನ್ನ ಹಿರಿಯರು ಪ್ರಾಣ ಉಳಿಸ್ಕೊಳ್ಳೋಕೆ ಆಹಾರ ಹುಡುಕ್ತಾ ಅಲೆದಾಡಿದ್ರು,
ಆದ್ರೆ ಆಹಾರ ಸಿಗದೆ ಸತ್ತುಹೋದ್ರು.+
ר [ರೆಶ್]
20 ಯೆಹೋವನೇ ನೋಡು, ನಾನು ತುಂಬ ವೇದನೆಯಲ್ಲಿದ್ದೀನಿ.
ನನ್ನ ಕರುಳು ಚುರ್ ಅಂತಿದೆ.
ನನ್ನ ಹೃದಯದ ಬೇಗುದಿ ಹೆಚ್ಚಾಗಿದೆ. ಯಾಕಂದ್ರೆ ನಾನು ಹದ್ದುಮೀರಿ ದಂಗೆ ಎದ್ದಿದ್ದೀನಿ.+
ಹೊರಗೆ ಕತ್ತಿ ನನ್ನ ಮಕ್ಕಳನ್ನ ಕೊಲ್ತಿದೆ,+ ಮನೆಯೊಳಗೂ ಹೆಣ ಬೀಳ್ತಿದೆ.
ש [ಶಿನ್]
21 ನನ್ನ ದುಃಖದ ನಿಟ್ಟುಸಿರು ಜನ್ರ ಕಿವಿಗೆ ಬಿದ್ದಿದೆ, ಒಬ್ರೂ ನನ್ನನ್ನ ಸಂತೈಸ್ತಾ ಇಲ್ಲ.
ನನ್ನ ವಿಪತ್ತಿನ ಬಗ್ಗೆ ನನ್ನೆಲ್ಲ ಶತ್ರುಗಳಿಗೆ ಸುದ್ದಿ ಸಿಕ್ಕಿದೆ.
ನೀನು ನನ್ನ ಮೇಲೆ ಈ ಕಷ್ಟ ತಂದಿರೋದ್ರಿಂದ ಅವರು ಉಲ್ಲಾಸಪಡ್ತಿದ್ದಾರೆ.+
ಆದ್ರೆ ನೀನು ಪ್ರಕಟಿಸಿದ ದಿನ ಬರುವಾಗ+ ನನಗೆ ತಂದ ಗತಿಯನ್ನೇ ಅವ್ರಿಗೂ ತರ್ತಿಯ.+
ת [ಟಾವ್]
22 ಅವ್ರ ಎಲ್ಲ ಕೆಟ್ಟ ಕೆಲಸಗಳಿಗೆ ಗಮನಕೊಡು,
ನನ್ನೆಲ್ಲ ಅಪರಾಧಗಳಿಗೆ ನೀನು ನನ್ನ ಜೊತೆ ಹೇಗೆ ಕಟುವಾಗಿ ನಡ್ಕೊಂಡ್ಯೋ
ಹಾಗೇ ಅವ್ರ ಜೊತೆನೂ ಕಟುವಾಗಿ ನಡ್ಕೊ.+
ನನ್ನ ದುಃಖದ ನಿಟ್ಟುಸಿರಿಗೆ ಲೆಕ್ಕ ಇಲ್ಲ, ನನ್ನ ಹೃದಯ ಕಾಯಿಲೆ ಬಿದ್ದಿದೆ.
א [ಆಲೆಫ್]
2 ಯೆಹೋವ ತನ್ನ ಕೋಪವನ್ನ ಚೀಯೋನ್ ಮೇಲೆ ಮೋಡದ ಹಾಗೆ ಕವಿಯೋ ತರ ಮಾಡಿದ್ದಾನೆ!
ಆತನು ಇಸ್ರಾಯೇಲಿನ ಸೌಂದರ್ಯವನ್ನ ಆಕಾಶದಿಂದ ಭೂಮಿಗೆ ಎಸೆದಿದ್ದಾನೆ.+
ತನ್ನ ಕೋಪದ ದಿನದಲ್ಲಿ ತನ್ನ ಪಾದಪೀಠವನ್ನ ನೆನಪಿಸ್ಕೊಂಡಿಲ್ಲ.+
ב [ಬೆತ್]
2 ಯೆಹೋವ ಯಾಕೋಬನ ಎಲ್ಲ ವಾಸಸ್ಥಳಗಳನ್ನ ಸ್ವಲ್ಪನೂ ಕನಿಕರಿಸದೆ ನುಂಗಿಬಿಟ್ಟಿದ್ದಾನೆ.
ಯೆಹೂದ ಅನ್ನುವವಳ ಭದ್ರ ಸ್ಥಳಗಳನ್ನ ರೋಷಾವೇಶದಿಂದ ಕೆಡವಿಹಾಕಿದ್ದಾನೆ.+
ಆತನು ಆ ರಾಜ್ಯವನ್ನೂ ಅವಳ ಅಧಿಕಾರಿಗಳನ್ನೂ ನೆಲಕ್ಕುರುಳಿಸಿ ಅವಮಾನಿಸಿದ್ದಾನೆ.+
ג [ಗಿಮೆಲ್]
3 ಆತನು ತನ್ನ ಕೋಪದ ಜ್ವಾಲೆಯಿಂದ ಇಸ್ರಾಯೇಲಿನ ಎಲ್ಲ ಶಕ್ತಿಯನ್ನ* ಸುಟ್ಟುಬಿಟ್ಟನು.
ಶತ್ರು ದಾಳಿ ಮಾಡಿದಾಗ ಆತನು ತನ್ನ ಬಲಗೈಯನ್ನ ಹಿಂತೆಗೆದುಕೊಂಡನು.+
ಯಾಕೋಬನ ಮೇಲೆ ಆತನ ಕೋಪ ಬೆಂಕಿ ತರ ಹೊತ್ತಿ ಉರಿತಾ ಅದ್ರ ಸುತ್ತಲಿದ್ದ ಎಲ್ಲವನ್ನ ಸುಟ್ಟು ಬೂದಿ ಮಾಡ್ತು.+
ד [ಡಾಲತ್]
4 ಆತನು ಶತ್ರುವಿನ ತರ ತನ್ನ ಬಿಲ್ಲನ್ನ ಬಗ್ಗಿಸಿದ್ದಾನೆ, ವಿರೋಧಿ ತರ ತನ್ನ ಬಲಗೈ ಎತ್ತಿದ್ದಾನೆ.+
ನಮ್ಮ ದೃಷ್ಟಿಯಲ್ಲಿ ಅಮೂಲ್ಯರಾಗಿ ಇರುವವರನ್ನೆಲ್ಲ ಆತನು ಕೊಲ್ತಾ ಇದ್ದನು.+
ಚೀಯೋನ್ ಅನ್ನುವವಳ ಡೇರೆ ಒಳಗೆ ಆತನು ತನ್ನ ಕೋಪವನ್ನ ಬೆಂಕಿ ತರ ಸುರಿದನು.+
ה [ಹೆ]
5 ಯೆಹೋವ ಶತ್ರು ತರ ಆಗಿದ್ದಾನೆ,+
ಆತನು ಇಸ್ರಾಯೇಲನ್ನ ನುಂಗಿದ್ದಾನೆ.
ಆತನು ಅವಳ ಎಲ್ಲ ಗೋಪುರಗಳನ್ನ ನುಂಗಿದ್ದಾನೆ,
ಆತನು ಅದ್ರ ಎಲ್ಲ ಭದ್ರ ಸ್ಥಳಗಳನ್ನ ನಾಶಮಾಡಿದ್ದಾನೆ.
ಯೆಹೂದ ಅನ್ನುವವಳ ಶೋಕ ರೋದನೆ ಹೆಚ್ಚಿಸಿದ್ದಾನೆ.
ו [ವಾವ್]
6 ಆತನು ತನ್ನ ಚಪ್ಪರವನ್ನ ತೋಟದಲ್ಲಿರೋ ಗುಡಿಸಲಿನ ತರ ಕಿತ್ತು ಛಿದ್ರಛಿದ್ರ ಮಾಡಿದ್ದಾನೆ.+
ಆತನು ತನ್ನ ಹಬ್ಬವನ್ನ ಕೊನೆ ಮಾಡಿದ್ದಾನೆ.+
ಯೆಹೋವ ಚೀಯೋನಲ್ಲಿ ಹಬ್ಬ ಮತ್ತು ಸಬ್ಬತ್ ಮರೆತು ಹೋಗೋ ತರ ಮಾಡಿದ್ದಾನೆ.
ಆತನು ಉಗ್ರ ಕೋಪದಿಂದ ರಾಜನನ್ನೂ ಪುರೋಹಿತನನ್ನೂ ಅಲಕ್ಷಿಸಿದ್ದಾನೆ.+
ז [ಜಯಿನ್]
7 ಯೆಹೋವ ತನ್ನ ಯಜ್ಞವೇದಿಯನ್ನ ತಿರಸ್ಕರಿಸಿದ್ದಾನೆ,
ತನ್ನ ಆರಾಧನಾ ಸ್ಥಳವನ್ನ ತೊರೆದಿದ್ದಾನೆ.+
ಆತನು ಅವಳ ಭದ್ರ ಕೋಟೆಗಳ ಗೋಡೆಗಳನ್ನ ಶತ್ರು ಕೈವಶ ಮಾಡಿದ್ದಾನೆ.+
ಹಬ್ಬದ ದಿನದಲ್ಲಿ ಹೇಗೋ ಹಾಗೆ ಅವರು ಯೆಹೋವನ ಆಲಯದಲ್ಲಿ ಜಯಘೋಷ ಮಾಡ್ತಿದ್ದಾರೆ.+
ח [ಹೆತ್]
8 ಚೀಯೋನ್ ಅನ್ನುವವಳ ಗೋಡೆಯನ್ನ ನಾಶಮಾಡೋಕೆ ಯೆಹೋವ ದೃಢನಿರ್ಧಾರ ಮಾಡಿದ್ದಾನೆ.+
ಆತನು ಆ ಗೋಡೆಗಳನ್ನ ದಾರ ಹಿಡಿದು ಅಳತೆ ಮಾಡಿದ್ದಾನೆ.+
ನಾಶ ತರೋಕೆ ಆತನು ತನ್ನ ಕೈ ಹಿಂತೆಗಿಲಿಲ್ಲ.
ಮಣ್ಣುದಿಬ್ಬ ಮತ್ತು ಗೋಡೆ ಶೋಕಿಸೋ ತರ ಮಾಡಿದ್ದಾನೆ.
ಅವೆರಡನ್ನೂ ದುರ್ಬಲ ಮಾಡಿದ್ದಾನೆ.
ט [ಟೆತ್]
9 ಅವಳ ಬಾಗಿಲುಗಳು ಮಣ್ಣಲ್ಲಿ ಹೂತು ಹೋಗಿವೆ.+
ಅವಳ ಕಂಬಿಗಳನ್ನ ತುಂಡುತುಂಡು ಮಾಡಿ ನಾಶಮಾಡಿದ್ದಾನೆ.
ಅವಳ ರಾಜ ಮತ್ತು ಅಧಿಕಾರಿಗಳು ಬೇರೆ ಜನಾಂಗಗಳ ಮಧ್ಯ ಇದ್ದಾರೆ.+
ನಿಯಮ ಪುಸ್ತಕವನ್ನ* ಯಾರೂ ಪಾಲಿಸ್ತಿಲ್ಲ, ಅವಳ ಪ್ರವಾದಿಗಳಿಗೂ ಯೆಹೋವನಿಂದ ದರ್ಶನ* ಸಿಗ್ತಿಲ್ಲ.+
י [ಯೋದ್]
10 ಚೀಯೋನ್ ಅನ್ನುವವಳ ಹಿರಿಯರು ನೆಲದ ಮೇಲೆ ಮೌನವಾಗಿ ಕೂತಿದ್ದಾರೆ.+
ಅವರು ತಮ್ಮ ತಲೆ ಮೇಲೆ ಧೂಳು ಎರಚಿ ಗೋಣಿ ಉಟ್ಕೊಂಡಿದ್ದಾರೆ.+
ಯೆರೂಸಲೇಮಿನ ಕನ್ಯೆಯರು ನೆಲದ ತನಕ ತಲೆ ತಗ್ಗಿಸಿದ್ದಾರೆ.
כ [ಕಾಫ್]
11 ಅತ್ತು ಅತ್ತು ನನ್ನ ಕಣ್ಣುಗಳು ಬತ್ತಿಹೋಗಿವೆ.+
ನನ್ನ ಕರುಳು ಚುರ್ ಅಂತಿದೆ.
ನನ್ನ ಪಿತ್ತಜನಕಾಂಗ ನೆಲದ ಮೇಲೆ ಸುರಿತಿದೆ. ಯಾಕಂದ್ರೆ ನನ್ನ ಮಗಳು* ಅಂದ್ರೆ ನನ್ನ ಜನ ಬಿದ್ದುಹೋಗ್ತಿದ್ದಾರೆ,+
ಮಕ್ಕಳು, ಹಸುಗೂಸುಗಳು ಪಟ್ಟಣದ ಮುಖ್ಯಸ್ಥಳಗಳಲ್ಲಿ* ಪ್ರಜ್ಞೆ ತಪ್ಪಿ ಬೀಳ್ತಿದ್ದಾರೆ.+
ל [ಲಾಮೆದ್]
12 “ಅಮ್ಮ, ತಿನ್ನೋಕೆ ಏನೂ ಇಲ್ವಾ? ಕುಡಿಯೋಕೆ ಏನೂ ಇಲ್ವಾ?”* ಅಂತ ಅವರು ಕೇಳ್ತಾ ಇದ್ದಾರೆ,+
ಗಾಯಗೊಂಡವ್ರ ತರ ಅವರು ಪಟ್ಟಣದ ಮುಖ್ಯಸ್ಥಳಗಳಲ್ಲಿ ಮೂರ್ಚೆ ಹೋಗ್ತಿದ್ದಾರೆ,
ತಮ್ಮ ತಾಯಂದಿರ ತೋಳುಗಳಲ್ಲಿ ಪ್ರಾಣ ಬಿಡ್ತಿದ್ದಾರೆ.
מ [ಮೆಮ್]
13 ಯೆರೂಸಲೇಮ್ ಅನ್ನುವವಳೇ, ನಾನು ನಿನಗೆ ಯಾವುದನ್ನ ಉದಾಹರಣೆಯಾಗಿ ತಿಳಿಸ್ಲಿ?
ನಾನು ನಿನ್ನನ್ನ ಯಾವುದಕ್ಕೆ ಹೋಲಿಸ್ಲಿ?
ಕನ್ಯೆಯಾದ ಚೀಯೋನೇ, ನಿನ್ನನ್ನ ಸಂತೈಸೋಕೆ ನಾನು ನಿನ್ನನ್ನ ಯಾವುದಕ್ಕೆ ಹೋಲಿಸ್ಲಿ?
ನಿನ್ನ ನಾಶ ಸಮುದ್ರದಷ್ಟು ವಿಸ್ತಾರವಾಗಿದೆ.+ ನಿನ್ನನ್ನ ಗುಣಪಡಿಸೋಕೆ ಯಾರಿಂದಾಗುತ್ತೆ?+
נ [ನೂನ್]
14 ನಿನ್ನ ಪ್ರವಾದಿಗಳು ನಿನ್ನ ಬಗ್ಗೆ ನೋಡಿದ ದರ್ಶನಗಳೆಲ್ಲ ಸುಳ್ಳು, ಪೊಳ್ಳು.+
ಅವರು ನಿನ್ನ ಪಾಪಗಳನ್ನ ನಿನಗೆ ತಿಳಿಸಲಿಲ್ಲ ಮತ್ತು ನೀನು ಸೆರೆಗೆ ಹೋಗೋದನ್ನ ತಪ್ಪಿಸ್ಲಿಲ್ಲ.+
ಆದ್ರೆ ಅವರು ಸುಳ್ಳಾದ ಮತ್ತು ದಾರಿತಪ್ಪಿಸೋ ದರ್ಶನಗಳನ್ನ ನಿನಗೆ ಹೇಳ್ತಾ ಇದ್ರು.+
ס [ಸಾಮೆಕ್]
15 ದಾರಿಯಲ್ಲಿ ಹೋಗೋರೆಲ್ಲ ನಿನ್ನನ್ನ ನೋಡಿ ತಿರಸ್ಕಾರದಿಂದ ಚಪ್ಪಾಳೆ ಹೊಡಿತಾರೆ.+
ಯೆರೂಸಲೇಮ್ ಅನ್ನೋಳನ್ನ ನೋಡಿ ಅತ್ಯಾಶ್ಚರ್ಯಪಟ್ಟು ಸೀಟಿ ಹೊಡಿತಾರೆ.+ ಅಷ್ಟೇ ಅಲ್ಲ ತಲೆಯಾಡಿಸ್ತಾ
“‘ಇದು ತುಂಬ ಸುಂದರ ಪಟ್ಟಣ, ಭೂಮಿಯಲ್ಲಿರೋ ಎಲ್ಲ ಜನ್ರಿಗೆ ಸಂತೋಷ ತರೋ ಪಟ್ಟಣ’ ಅಂತ ಹೇಳ್ತಾ ಇದ್ದಿದ್ದು ಈ ಪಟ್ಟಣ ಬಗ್ಗೆನಾ?” ಅಂತ ಮಾತಾಡ್ಕೊಳ್ತಾರೆ.+
פ [ಪೇ]
16 ನಿನ್ನನ್ನ ನೋಡಿ ನಿನ್ನ ಶತ್ರುಗಳೆಲ್ಲ ಗೇಲಿ ಮಾಡಿದ್ದಾರೆ.*
ಅವರು ಸೀಟಿ ಹೊಡಿತಾರೆ* ಮತ್ತು ಹಲ್ಲು ಕಡಿತಾ “ನಾವು ಅವಳನ್ನ ನುಂಗಿ ಬಿಟ್ಟಿದ್ದೀವಿ.+
ಈ ದಿನಕ್ಕೇ ನಾವು ಕಾಯ್ತಿದ್ವಿ!+ ಅಂತೂ ಆ ದಿನ ಬಂದಿದೆ, ನಾವು ಅದನ್ನ ಕಣ್ತುಂಬ ನೋಡಿದ್ದೀವಿ!” ಅಂತಾರೆ.+
ע [ಅಯಿನ್]
17 ಯೆಹೋವ ತಾನು ಅಂದ್ಕೊಂಡ ಹಾಗೆ ಮಾಡಿದ್ದಾನೆ,+ ಹೇಳಿದ ಮಾತನ್ನ ನಿಜ ಮಾಡಿದ್ದಾನೆ.+
ತುಂಬ ಮುಂಚೆನೇ ಕೊಟ್ಟ ಆಜ್ಞೆ ಪ್ರಕಾರ ನಡ್ಕೊಂಡಿದ್ದಾನೆ.+
ಆತನು ಕನಿಕರ ತೋರಿಸದೆ ನಿನ್ನನ್ನ ಹರಿದು ಛಿದ್ರಛಿದ್ರ ಮಾಡಿದ್ದಾನೆ.+
ಶತ್ರು ನಿನ್ನನ್ನ ನೋಡಿ ಖುಷಿಪಡೋ ತರ ಮಾಡಿದ್ದಾನೆ, ನಿನ್ನ ವಿರೋಧಿಗಳ ಬಲ ಹೆಚ್ಚಿಸಿದ್ದಾನೆ.*
צ [ಸಾದೆ]
18 ಚೀಯೋನ್ ಅನ್ನುವವಳ ಗೋಡೆಯೇ, ಜನ್ರ ಹೃದಯ ಯೆಹೋವನಿಗೆ ಮೊರೆಯಿಡುತ್ತೆ.
ಹಗಲಿರುಳು ನಿನ್ನ ಕಣ್ಣೀರು ತೊರೆ ತರ ಉಕ್ಕಿ ಹರಿಲಿ.
ನೀನು ವಿಶ್ರಮಿಸಬೇಡ, ನಿನ್ನ ಕಣ್ಣೀರು ನಿಲ್ಲದಿರಲಿ.
ק [ಕೊಫ್]
19 ಎದ್ದೇಳು! ರಾತ್ರಿಯಲ್ಲಿ, ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಅಳ್ತಿರು.
ನಿನ್ನ ಹೃದಯದಲ್ಲಿ ಇರೋದನ್ನೆಲ್ಲ ಯೆಹೋವನ ಮುಂದೆ ನೀರಿನ ತರ ಸುರಿದು ಬಿಡು.
ಬರದಿಂದ ಬೀದಿಯ ಮೂಲೆಮೂಲೆಗಳಲ್ಲಿ ಮೂರ್ಚೆ ಹೋಗ್ತಿರೋ
ನಿನ್ನ ಮಕ್ಕಳ ಜೀವ ಉಳಿಸಬೇಕಂತ ಕೈಗಳನ್ನೆತ್ತಿ ಪ್ರಾರ್ಥಿಸು.+
ר [ರೆಶ್]
20 ಯೆಹೋವನೇ ನೋಡು, ನೀನು ಯಾರ ಜೊತೆ ತುಂಬ ನಿಷ್ಠುರವಾಗಿ ನಡ್ಕೊಂಡಿಯೋ ಆ ನಿನ್ನ ಜನ್ರ ಕಡೆ ಗಮನ ಕೊಡು.
ಹೆಂಗಸರು ತಾವು ಹೆತ್ತುಹೊತ್ತ ಮಕ್ಕಳನ್ನೇ, ತಮ್ಮ ಆರೋಗ್ಯವಂತ ಮಕ್ಕಳನ್ನೇ ಹೀಗೆ ತಿಂತಿರಬೇಕಾ?+
ಯೆಹೋವನ ಆರಾಧನಾ ಸ್ಥಳದಲ್ಲಿ ಪುರೋಹಿತರ ಮತ್ತು ಪ್ರವಾದಿಗಳ ಕೊಲೆಯಾಗ್ತಾ ಇರಬೇಕಾ?+
ש [ಶಿನ್]
21 ಯುವಕರೂ ವೃದ್ಧರೂ ಬೀದಿಗಳಲ್ಲಿ ಸತ್ತು ಬಿದ್ದಿದ್ದಾರೆ.+
ನನ್ನ ಕನ್ಯೆಯರು* ಮತ್ತು ಯುವಕರು ಕತ್ತಿಯಿಂದ ಕೊಲೆಯಾಗಿದ್ದಾರೆ.+
ನೀನು ನಿನ್ನ ಕೋಪದ ದಿನದಲ್ಲಿ ಅವ್ರನ್ನ ಕೊಂದುಹಾಕ್ದೆ, ಕನಿಕರ ತೋರಿಸದೆ ಅವ್ರನ್ನ ಸಾಯಿಸಿದೆ.+
ת [ಟಾವ್]
22 ಹಬ್ಬಕ್ಕಾಗಿ+ ಜನ್ರನ್ನ ಕರೆಯೋ ತರ ಭಯ ಆತಂಕಗಳನ್ನ ನಾಲ್ಕೂ ದಿಕ್ಕುಗಳಿಂದ ಕರೆದೆ.
ಯೆಹೋವನ ಕೋಪದ ದಿನದಲ್ಲಿ ಒಬ್ರೂ ತಪ್ಪಿಸ್ಕೊಳ್ಳಲಿಲ್ಲ, ಒಬ್ರೂ ಉಳಿಲಿಲ್ಲ,+
ನಾನು ಹೆತ್ತು ಸಾಕಿ ಸಲಹಿದವ್ರನ್ನ ನನ್ನ ಶತ್ರು ನಾಶಮಾಡಿದ.+
א [ಆಲೆಫ್]
3 ದೇವರು ಕೋಪಗೊಂಡು ಶಿಕ್ಷೆ ಕೊಟ್ಟ ಕಾರಣ* ಜನ ಕಷ್ಟ ಅನುಭವಿಸೋದನ್ನ ನೋಡಿದ್ದೀನಿ.
2 ಆತನು ನನ್ನನ್ನ ಹೊರಗೆ ಅಟ್ಟಿಬಿಟ್ಟಿದ್ದಾನೆ. ಬೆಳಕಲ್ಲಲ್ಲ, ಕತ್ತಲಲ್ಲಿ ನಡಿಯೋ ತರ ಮಾಡ್ತಿದ್ದಾನೆ.+
3 ಎಷ್ಟರ ಮಟ್ಟಿಗಂದ್ರೆ ಆತನು ಇಡೀ ದಿನ ಪದೇಪದೇ ನನ್ನ ಮೇಲೆ ಕೈ ಮಾಡ್ತಿದ್ದಾನೆ.*+
ב [ಬೆತ್]
4 ಆತನು ನನ್ನ ದೇಹವನ್ನ ಬಲಹೀನಗೊಳಿಸಿ, ನನ್ನ ಚರ್ಮ ಸವೆದುಹೋಗೋ ತರ ಮಾಡಿದ್ದಾನೆ,
ನನ್ನ ಮೂಳೆಗಳನ್ನ ಮುರಿದಿದ್ದಾನೆ.
5 ಆತನು ನನಗೆ ಮುತ್ತಿಗೆ ಹಾಕಿದ್ದಾನೆ, ಕಡು ವಿಷಾನೂ+ ಸಂಕಷ್ಟಾನೂ ನನ್ನನ್ನ ಸುತ್ತುವರಿಯೋ ತರ ಮಾಡಿದ್ದಾನೆ.
6 ತುಂಬ ಕಾಲದ ಹಿಂದೆ ಸತ್ತು ಹೋದ ಜನ್ರ ಹಾಗೆ ನಾನು ಕತ್ತಲೆ ಸ್ಥಳಗಳಲ್ಲಿ ಕೂರೋ ತರ ಆತನು ಬಲವಂತ ಮಾಡಿದ್ದಾನೆ.
ג [ಗಿಮೆಲ್]
7 ನಾನು ತಪ್ಪಿಸ್ಕೊಂಡು ಹೋಗೋಕೆ ಆಗದ ಹಾಗೆ ಆತನು ನನ್ನ ಸುತ್ತಲೂ ಗೋಡೆ ಕಟ್ಟಿದ್ದಾನೆ,
ತಾಮ್ರದ ಭಾರವಾದ ಬೇಡಿಗಳಿಂದ ನನ್ನನ್ನ ಕಟ್ಟಿ ಹಾಕಿದ್ದಾನೆ.+
8 ಹತಾಶೆಯ ಸ್ಥಿತಿಯಲ್ಲಿ ಸಹಾಯಕ್ಕಾಗಿ ನಾನು ಆತನಿಗೆ ಮೊರೆಯಿಟ್ಟಾಗ ಆತನು ನನ್ನ ಪ್ರಾರ್ಥನೆ ತಿರಸ್ಕರಿಸ್ತಾನೆ.*+
9 ಕತ್ತರಿಸಿದ ಕಲ್ಲುಗಳಿಂದ ನನ್ನ ದಾರಿಗಳನ್ನ ಮುಚ್ಚಿದ್ದಾನೆ,
ನಾನು ಹೋಗೋ ರಸ್ತೆಗಳನ್ನ ಅಂಕುಡೊಂಕು ಮಾಡಿದ್ದಾನೆ.+
ד [ಡಾಲತ್]
10 ಆತನು ಕರಡಿ ತರ ಹೊಂಚುಹಾಕಿ, ಸಿಂಹದ ತರ ಅವಿತ್ಕೊಂಡು ನನ್ನನ್ನ ಹಿಡಿಯೋಕೆ ಕಾಯ್ತಿದ್ದಾನೆ.+
12 ಆತನು ಬಿಲ್ಲು ಬಗ್ಗಿಸಿ ತನ್ನ ಬಾಣಕ್ಕೆ ನನ್ನನ್ನ ಗುರಿಯಾಗಿ ಇಟ್ಕೊಂಡಿದ್ದಾನೆ.
ה [ಹೆ]
13 ಆತನು ತನ್ನ ಬತ್ತಳಿಕೆಯಲ್ಲಿರೋ ಬಾಣಗಳಿಂದ ನನ್ನ ಮೂತ್ರಪಿಂಡಗಳನ್ನ ತಿವಿದಿದ್ದಾನೆ.
14 ನಾನು ಎಲ್ಲ ಜನಾಂಗಗಳ ನಗೆಗೆ ಈಡಾಗಿದ್ದೀನಿ, ಅವರು ನನ್ನ ಮೇಲೆ ಹಾಡು ಕಟ್ಟಿ ಹಾಡ್ತಾ ಇಡೀ ದಿನ ಗೇಲಿ ಮಾಡ್ತಾರೆ.
15 ನಾನು ಯಾವಾಗ್ಲೂ ಕಹಿ ಆಹಾರವನ್ನ ತಿನ್ನೋ ತರ ಮತ್ತು ಮಾಚಿ ಪತ್ರೆಯನ್ನ* ಕುಡಿಯೋ ತರ ಮಾಡಿದ್ದಾನೆ.+
ו [ವಾವ್]
17 ನೀನು ನನ್ನಿಂದ ಶಾಂತಿ ನೆಮ್ಮದಿ ಕಿತ್ಕೊಂಡಿದ್ದೀಯ, ಸಂತೋಷ* ಅನ್ನೋದನ್ನೇ ಮರೆತುಬಿಟ್ಟಿದ್ದೀನಿ.
18 ಹಾಗಾಗಿ “ನನ್ನ ವೈಭವ ಮಾಸಿಹೋಗಿದೆ, ಯೆಹೋವನ ಮೇಲೆ ನಾನಿಟ್ಟ ನಿರೀಕ್ಷೆ ಸಹ ಅಳಿದುಹೋಗಿದೆ” ಅಂತ ನಾನು ಹೇಳ್ತೀನಿ.
ז [ಜಯಿನ್]
19 ನಾನು ಪಡ್ತಿರೋ ಕಷ್ಟ, ಮನೆಯಿಲ್ಲದೆ ನಾನಿರೋ ಸ್ಥಿತಿನ ನೆನಪಿಸ್ಕೊ,+ ನಾನು ಮಾಚಿಪತ್ರೆ ಮತ್ತು ಕಡು ವಿಷವನ್ನ ಕುಡಿತಿದ್ದೀನಿ+ ಅಂತ ಜ್ಞಾಪಿಸ್ಕೊ.
20 ನೀನು ಇವುಗಳನ್ನೆಲ್ಲ ಖಂಡಿತ ನೆನಪಿಸ್ಕೊಳ್ತೀಯ ಮತ್ತು ನನ್ನ ಕಡೆ ಬಗ್ಗಿ ನನಗೆ ಸಹಾಯ ಮಾಡ್ತೀಯ.+
21 ನಾನು ಇದನ್ನ ಮನಸ್ಸಲ್ಲಿಡ್ತೀನಿ. ಹಾಗಾಗಿ ನಿನಗಾಗಿ ತಾಳ್ಮೆಯಿಂದ ಕಾಯ್ತೀನಿ.*+
ח [ಹೆತ್]
23 ಪ್ರತಿದಿನ ಬೆಳಿಗ್ಗೆ ಆತನ ಕರುಣೆ ಹೊಸದಾಗುತ್ತೆ,+ ದೇವರೇ, ನೀನು ಯಾವಾಗ್ಲೂ ನಂಬಿಗಸ್ತ.+
24 “ಯೆಹೋವ ನನ್ನ ಪಾಲು.+ ಹಾಗಾಗಿ ನಾನು ಆತನಿಗಾಗಿ ತಾಳ್ಮೆಯಿಂದ ಕಾಯ್ತೀನಿ”+ ಅಂತ ಹೇಳಿದೆ.
ט [ಟೆತ್]
25 ಯೆಹೋವನ ಮೇಲೆ ಭರವಸೆ ಇಡುವವನಿಗೆ,+ ಆತನನ್ನ ಹುಡುಕ್ತಾ ಇರುವವನಿಗೆ ಆತನು ಒಳ್ಳೇದನ್ನ ಮಾಡ್ತಾನೆ.+
26 ಯೆಹೋವ ಕೊಡೋ ರಕ್ಷಣೆಗೆ ಮನುಷ್ಯ ಮೌನವಾಗಿದ್ದು*+ ಕಾಯೋದೇ ಒಳ್ಳೇದು.+
27 ಯೌವನದಲ್ಲಿ ಕಷ್ಟ ಪಡೋದು ಮನುಷ್ಯನಿಗೆ ಒಳ್ಳೇದು.+
י [ಯೋದ್]
28 ದೇವರು ಆ ಭಾರವನ್ನ ಅವನ ಮೇಲೆ ಇಟ್ಟಾಗ ಅವನು ಮೌನವಾಗಿದ್ದು ಒಬ್ಬನೇ ಕೂತ್ಕೊಳ್ಳಲಿ.+
29 ಅವನು ತನ್ನ ಬಾಯನ್ನ ನೆಲದ ಮಣ್ಣಿಗೆ ತಾಗಿಸ್ಲಿ,+ ಅವನಿಗೆ ರಕ್ಷಣೆ ಆಗಬಹುದು.+
30 ಹೊಡೆಯುವವನಿಗೆ ಅವನು ತನ್ನ ಕೆನ್ನೆ ತೋರಿಸ್ಲಿ, ಅವನು ಅವಮಾನವನ್ನ ಪೂರ್ತಿ ಸಹಿಸ್ಕೊಳ್ಳಲಿ.
כ [ಕಾಫ್]
31 ಯೆಹೋವ ನಮ್ಮನ್ನ ನಿರಂತರಕ್ಕೂ ತಳ್ಳಿಬಿಡಲ್ಲ.+
32 ಆತನು ನಮ್ಮನ್ನ ದುಃಖಪಡಿಸಿದ್ದಾನೆ ನಿಜ. ಆದ್ರೂ ಆತನು ಶಾಶ್ವತ ಪ್ರೀತಿಯನ್ನ ಹೇರಳವಾಗಿ ತೋರಿಸೋ ದೇವರು. ಹಾಗಾಗಿ ನಮಗೆ ಕರುಣೆ ಸಹ ತೋರಿಸ್ತಾನೆ.+
33 ಮನುಷ್ಯರಿಗೆ ದುಃಖನೋವು ಕೊಡೋಕೆ ಆತನಿಗೆ ಹೃದಯದಲ್ಲಿ ಸ್ವಲ್ಪನೂ ಇಷ್ಟ ಇಲ್ಲ.+
ל [ಲಾಮೆದ್]
34 ಭೂಮಿಯ ಎಲ್ಲ ಕೈದಿಗಳನ್ನ ಕಾಲ ಕೆಳಗೆ ಹಾಕಿ ಜಜ್ಜೋದು,+
35 ಸರ್ವೋನ್ನತ ದೇವರ ಮುಂದೆ ಒಬ್ಬನಿಗೆ ನ್ಯಾಯ ಸಿಗದೆ ಇರೋ ತರ ಮಾಡೋದು,+
36 ಮೊಕದ್ದಮೆಯಲ್ಲಿ ಒಬ್ಬನಿಗೆ ಮೋಸ ಮಾಡೋದು
ಇಂಥದ್ದನ್ನ ಯೆಹೋವ ಸಹಿಸಲ್ಲ.
מ [ಮೆಮ್]
37 ಯೆಹೋವ ಅಪ್ಪಣೆ ಕೊಡದೇ ಇದ್ರೆ, ಯಾರಾದ್ರೂ ಒಂದು ವಿಷ್ಯ ಹೇಳಿ ಅದನ್ನ ಮಾಡೋಕೆ ಆಗುತ್ತಾ?
38 ಸರ್ವೋನ್ನತ ದೇವರ ಬಾಯಿಂದ
ಒಳ್ಳೇದ್ರ ಜೊತೆಗೆ ಕೆಟ್ಟದ್ದೂ ಬರಲ್ಲ.
39 ಒಬ್ಬ ತನ್ನ ಪಾಪದ ಕೆಟ್ಟ ಪರಿಣಾಮಗಳನ್ನ ಅನುಭವಿಸ್ತಿರುವಾಗ ಅದ್ರ ಬಗ್ಗೆ ಅವನು ಯಾಕೆ ದೂರಬೇಕು?+
נ [ನೂನ್]
40 ನಾವು ನಮ್ಮ ನಡತೆ ಪರೀಕ್ಷಿಸೋಣ, ಸೂಕ್ಷ್ಮವಾಗಿ ಪರಿಶೀಲಿಸೋಣ+ ಮತ್ತು ಯೆಹೋವನ ಹತ್ರ ವಾಪಸ್ ಹೋಗೋಣ.+
41 ಸ್ವರ್ಗದಲ್ಲಿರೋ ದೇವರಿಗೆ ನಾವು ಯಥಾರ್ಥ ಹೃದಯದಿಂದ ಬೇಡ್ಕೊಳ್ಳೋಣ, ನಮ್ಮ ಕೈಗಳನ್ನ ಮೇಲಕ್ಕೆತ್ತಿ,+
42 “ನಾವು ಪಾಪ ಮಾಡಿದ್ದೀವಿ, ದಂಗೆ ಎದ್ದಿದ್ದೀವಿ,+ ನೀನು ನಮ್ಮನ್ನ ಕ್ಷಮಿಸಲಿಲ್ಲ.+
ס [ಸಾಮೆಕ್]
43 ನೀನು ಕೋಪ ಮಾಡ್ಕೊಂಡು ನಾವು ನಿನ್ನ ಹತ್ರ ಬರದ ಹಾಗೆ ತಡೆದಿದ್ದೀಯ,+
ನೀನು ನಮ್ಮನ್ನ ಹಿಂದಟ್ಟಿ ಬಂದು ಕನಿಕರ ತೋರಿಸದೆ ಕೊಂದು ಹಾಕಿದ್ದೀಯ.+
44 ನಮ್ಮ ಪ್ರಾರ್ಥನೆ ನಿನಗೆ ಮುಟ್ಟಬಾರದು ಅಂತ ಮೋಡ ಅಡ್ಡ ಇಟ್ಟಿದ್ದೀಯ.+
45 ನೀನು ನಮ್ಮನ್ನ ಜನಾಂಗಗಳ ಮಧ್ಯ ಹೊಲಸನ್ನಾಗಿ, ಕಸವನ್ನಾಗಿ ಮಾಡಿದ್ದೀಯ” ಅಂತ ಹೇಳೋಣ.
פ [ಪೇ]
46 ಶತ್ರುಗಳೆಲ್ಲ ನಮ್ಮನ್ನ ಅಪಹಾಸ್ಯ ಮಾಡ್ತಾರೆ.*+
47 ನಾವು ಯಾವಾಗ್ಲೂ ಭಯದಲ್ಲೇ ಜೀವಿಸ್ತಿದ್ದೀವಿ, ಗುಂಡಿಯಲ್ಲಿ ಬಿದ್ದಿದ್ದೀವಿ.+ ನಾವು ದಿಕ್ಕಿಲ್ಲದ ಜನ್ರಾಗಿದ್ದೀವಿ, ನಾಶಕ್ಕೆ ತುತ್ತಾಗಿದ್ದೀವಿ.+
48 ನನ್ನ ಮಗಳ ಅಂದ್ರೆ ನನ್ನ ಜನ್ರ ನಾಶನದಿಂದಾಗಿ ನನ್ನ ಕಣ್ಣುಗಳಿಂದ ಕಣ್ಣೀರ ಧಾರೆ ಹರಿದು ಬರ್ತಿದೆ.+
ע [ಅಯಿನ್]
49 ಸ್ವಲ್ಪನೂ ನಿಲ್ಲಿಸದೆ ಒಂದೇ ಸಮ ನಾನು ಅಳ್ತಿದ್ದೀನಿ,+
50 ಯೆಹೋವ ಸ್ವರ್ಗದಿಂದ ಕೆಳಗೆ ನೋಡಿ ತನ್ನ ಜನ್ರ ಕಡೆ ಗಮನ ಕೊಡೋ ತನಕ ನಾನು ಅಳ್ತಿರ್ತಿನಿ.+
51 ನನ್ನ ಪಟ್ಟಣದ ಎಲ್ಲ ಪುತ್ರಿಯರಿಗಾದ ಗತಿ ನೋಡಿ ನನಗೆ ತುಂಬ ದುಃಖವಾಗಿದೆ.+
צ [ಸಾದೆ]
52 ನನ್ನ ಶತ್ರುಗಳು ವಿನಾ ಕಾರಣ ನನ್ನನ್ನ ಪಕ್ಷಿ ತರ ಬೇಟೆ ಆಡಿದ್ದಾರೆ.
53 ಅವರು ನನ್ನನ್ನ ಗುಂಡಿಗೆ ತಳ್ಳಿ ನನ್ನ ಉಸಿರನ್ನ ನಿಲ್ಲಿಸಿ ಬಿಟ್ಟಿದ್ದಾರೆ, ನನ್ನ ಮೇಲೆ ಕಲ್ಲುಗಳನ್ನ ಎಸಿತಿದ್ರು.
54 ಪ್ರವಾಹ ನನ್ನನ್ನ ಮುಳುಗಿಸಿತು “ನನ್ನ ಕಥೆ ಮುಗಿತು” ಅಂತ ನಾನಾಗ ಹೇಳಿದೆ.
ק [ಕೊಫ್]
55 ಯೆಹೋವನೇ, ಆಳವಾದ ಗುಂಡಿಯ ತಳದಿಂದ ನಾನು ನಿನ್ನ ಹೆಸ್ರನ್ನ ಕೂಗಿ ಕರೆದೆ.+
56 ನನ್ನ ಕೂಗು ಕೇಳು, ಸಹಾಯಕ್ಕಾಗಿ, ಉಪಶಮನಕ್ಕಾಗಿ ನಾನು ಕೂಗಿಕೊಳ್ಳುವಾಗ ಕಿವಿ ಮುಚ್ಕೊಬೇಡ.
57 ನಾನು ನಿನ್ನನ್ನ ಕರೆದ ದಿನ ನೀನು ನನ್ನ ಹತ್ರ ಬಂದೆ. “ಭಯಪಡಬೇಡ” ಅಂತ ಹೇಳಿದೆ.
ר [ರೆಶ್]
58 ಯೆಹೋವನೇ, ನ್ಯಾಯಾಲಯದಲ್ಲಿ ನೀನು ನನ್ನ ಪರ ವಾದಿಸಿದ್ದೀಯ, ನನ್ನ ಜೀವವನ್ನ ಬಿಡಿಸಿದ್ದೀಯ.+
59 ಯೆಹೋವನೇ, ನನಗಾದ ಅನ್ಯಾಯವನ್ನ ನೀನು ನೋಡಿದ್ದೀಯಲ್ಲ, ದಯವಿಟ್ಟು ನನಗೆ ನ್ಯಾಯ ಕೊಡಿಸು.+
60 ಅವರು ನನಗೆ ಹೇಗೆಲ್ಲ ಸೇಡು ತೀರಿಸಿದ್ರು ಅಂತ, ನನ್ನ ವಿರುದ್ಧ ಹೇಗೆಲ್ಲ ಸಂಚು ಮಾಡಿದ್ರು ಅಂತ ನೀನು ನೋಡಿದ್ದೀಯ.
ש [ಸಿನ್] ಅಥವಾ [ಶಿನ್]
61 ಯೆಹೋವನೇ, ಅವ್ರ ಹಂಗಿಸೋ ಮಾತುಗಳನ್ನ ನೀನು ಕೇಳಿದ್ದೀಯ, ಅವರು ನನ್ನ ವಿರುದ್ಧ ಮಾಡಿದ ಪಿತೂರಿಗಳನ್ನೆಲ್ಲ ನೋಡಿದ್ದೀಯ.+
62 ದಿನವಿಡೀ ಶತ್ರುಗಳು ನನ್ನ ವಿರುದ್ಧ ಮಾತಾಡೋದನ್ನ ಪಿಸುಗುಟ್ಟೋದನ್ನ ನೀನು ಕೇಳಿದ್ದೀಯ.
63 ಅವ್ರನ್ನ ನೋಡು, ಕೂತ್ರೂ ನಿಂತ್ರೂ ಹಾಡುಗಳನ್ನ ಹಾಡಿ ನನ್ನನ್ನ ಗೇಲಿ ಮಾಡ್ತಾರೆ!
ת [ಟಾವ್]
64 ಯೆಹೋವನೇ, ನೀನು ಅವ್ರ ಕೆಲಸಗಳಿಗೆ ತಕ್ಕ ಪ್ರತಿಫಲ ಕೊಡ್ತೀಯ.
65 ನೀನು ಅವ್ರಿಗೆ ಶಾಪಕೊಟ್ಟು ಅವ್ರನ್ನ ಕಲ್ಲೆದೆಯ ಜನ್ರನ್ನಾಗಿ ಮಾಡ್ತೀಯ.
66 ಯೆಹೋವನೇ, ನೀನು ಕೋಪದಿಂದ ಅವ್ರನ್ನ ಅಟ್ಟಿಸ್ಕೊಂಡು ಹೋಗಿ ಭೂಮಿ ಮೇಲಿಂದ ಅವ್ರನ್ನ ನಾಶ ಮಾಡಿಬಿಡ್ತೀಯ.
א [ಆಲೆಫ್]
4 ಅಯ್ಯೋ! ಫಳಫಳ ಅಂತ ಹೊಳಿತಿದ್ದ ಶುದ್ಧ ಚಿನ್ನ ಈಗ ಕಾಂತಿಹೀನ ಆಗಿದೆ!+
ಪವಿತ್ರ ಕಲ್ಲುಗಳು*+ ಪ್ರತಿಯೊಂದು ಬೀದಿಯ ಮೂಲೆಮೂಲೆಗಳಲ್ಲಿ ಬಿದ್ದಿವೆ!+
ב [ಬೆತ್]
2 ಚೀಯೋನಿನ ಗೌರವಾನ್ವಿತ ಪುತ್ರರು ಶುದ್ಧೀಕರಿಸಿದ ಚಿನ್ನದಷ್ಟು ಅಮೂಲ್ಯರಾಗಿದ್ರು,
ಈಗ ಅವ್ರನ್ನ ಕುಂಬಾರನ ಕೈಕೆಲಸವಾಗಿರೋ ಮಣ್ಣಿನ ಮಡಿಕೆಗಳ ತರ ನೋಡಲಾಗ್ತಿದೆ!
ג [ಗಿಮೆಲ್]
3 ಗುಳ್ಳೆನರಿಗಳು ಸಹ ತಮ್ಮ ಮರಿಗಳಿಗೆ ಹಾಲುಣಿಸುತ್ತೆ,
ಆದ್ರೆ ನನ್ನ ಮಗಳು ಅಂದ್ರೆ ನನ್ನ ಜನ ಕಾಡಲ್ಲಿರೋ* ಉಷ್ಟ್ರಪಕ್ಷಿಗಳ+ ತರ ಕ್ರೂರಿ ಆಗಿದ್ದಾರೆ.+
ד [ಡಾಲತ್]
4 ಹಾಲು ಕುಡಿಯೋ ಮಗುವಿನ ನಾಲಿಗೆ ಬಾಯಾರಿಕೆಯಿಂದ ಒಣಗಿ ಅಂಗುಳಿಗೆ ಅಂಟ್ಕೊಂಡಿದೆ.
ಮಕ್ಕಳು ತುತ್ತು ಅನ್ನಕ್ಕಾಗಿ ಬೇಡ್ತಿದ್ದಾರೆ,+ ಆದ್ರೆ ಯಾರೂ ಅವ್ರಿಗೆ ಆಹಾರ ಕೊಡ್ತಿಲ್ಲ.+
ה [ಹೆ]
5 ರುಚಿರುಚಿಯಾಗಿ ತಿಂತಿದ್ದವರು ಈಗ ಹೊಟ್ಟೆಗಿಲ್ಲದೆ ಬೀದಿಗಳಲ್ಲಿ ಬಿದ್ದಿದ್ದಾರೆ.+
ಚಿಕ್ಕಂದಿನಿಂದ ದುಬಾರಿ* ಬಟ್ಟೆ ಹಾಕ್ತಿದ್ದವರು+ ಈಗ ಬೂದಿ ರಾಶಿಗಳಲ್ಲಿ ಬಿದ್ಕೊಂಡಿದ್ದಾರೆ.
ו [ವಾವ್]
6 ಸೊದೋಮ್ ಒಂದೇ ಕ್ಷಣದಲ್ಲಿ ನಾಶವಾಯ್ತು, ಅವಳಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ,+
ಸೊದೋಮಿನ ಪಾಪಕ್ಕೆ ಸಿಕ್ಕಿದ ಆ ಶಿಕ್ಷೆಗಿಂತ ನನ್ನ ಮಗಳಿಗೆ ಅಂದ್ರೆ ನನ್ನ ಜನ್ರಿಗೆ ಸಿಕ್ಕಿದ ಶಿಕ್ಷೆ ತೀವ್ರವಾಗಿದೆ.+
ז [ಜಯಿನ್]
7 ಅವಳ ನಾಜೀರರು+ ಹಿಮಕ್ಕಿಂತ ಶುಭ್ರರಾಗಿದ್ರು, ಹಾಲಿಗಿಂತ ಬೆಳ್ಳಗಿದ್ರು.
ಹವಳಗಳಿಗಿಂತ ಕೆಂಪಗಿದ್ರು, ಮೆರಗು ಕೊಟ್ಟ ನೀಲಮಣಿಗಳ ತರ ಇದ್ರು.
ח [ಹೆತ್]
8 ಈಗ ಅವರು ಹೊಗೆಮಸಿಗಿಂತ ಕಪ್ಪಾಗಿದ್ದಾರೆ,
ಬೀದಿಗಳಲ್ಲಿ ಯಾರಿಗೂ ಅವ್ರ ಗುರುತೇ ಸಿಗ್ತಿಲ್ಲ.
ಅವ್ರ ಚರ್ಮ ಸುಕ್ಕುಗಟ್ಟಿ ಮೂಳೆಗಳಿಗೆ ಅಂಟ್ಕೊಂಡಿದೆ,+ ಒಣಗಿಹೋದ ಕಟ್ಟಿಗೆ ತರ ಆಗಿದೆ.
ט [ಟೆತ್]
9 ಕ್ಷಾಮದಿಂದ ಸತ್ತು ಹೋದವ್ರಿಗಿಂತ ಕತ್ತಿಯಿಂದ ಸತ್ತವ್ರೇ ಮೇಲು,+
ಕತ್ತಿಯಿಂದ ಏಟಾಗಿ ನರಳೋ ಹಾಗೆ ಜನ ಆಹಾರ ಸಿಗದೆ ನರಳ್ತಿದ್ದಾರೆ.
י [ಯೋದ್]
10 ಮಮತೆ ತೋರಿಸ್ತಿದ್ದ ಸ್ತ್ರೀಯರು ತಾವು ಹೆತ್ತ ಮಕ್ಕಳನ್ನೇ ಬೇಯಿಸ್ತಿದ್ದಾರೆ.+
ನನ್ನ ಮಗಳು ಅಂದ್ರೆ ನನ್ನ ಜನ ನಾಶ ಆದ ಸಮಯದಲ್ಲಿ ಅವ್ರಿಗೆ ತಮ್ಮ ಮಕ್ಕಳೇ ಆಹಾರ ಆಗಿದ್ದಾರೆ.*+
כ [ಕಾಫ್]
11 ಯೆಹೋವ ತನ್ನ ಕೋಪ ತೋರಿಸಿದ್ದಾನೆ,
ಆತನು ತನ್ನ ಕೋಪಾಗ್ನಿ ಸುರಿಸಿದ್ದಾನೆ.+
ಆತನು ಚೀಯೋನಲ್ಲಿ ಬೆಂಕಿ ಹಚ್ಚಿದ್ದಾನೆ, ಅದು ಅವಳ ಅಡಿಪಾಯ ಸುಟ್ಟು ಹಾಕ್ತಿದೆ.+
ל [ಲಾಮೆದ್]
12 ವಿರೋಧಿ, ಶತ್ರು ಯೆರೂಸಲೇಮಿನ ಬಾಗಿಲೊಳಗೆ ನುಗ್ತಾರಂತ+
ಭೂಮಿಯ ರಾಜರಾಗಲಿ ಅದ್ರ ಎಲ್ಲ ಜನ್ರಾಗಲಿ ನಂಬಲಿಲ್ಲ.
מ [ಮೆಮ್]
13 ಅವಳ ಪ್ರವಾದಿಗಳು ಮಾಡಿದ ಪಾಪಗಳಿಂದಾಗಿ, ಅವಳ ಪುರೋಹಿತರು ಮಾಡಿದ ತಪ್ಪುಗಳಿಂದಾಗಿ ಅವಳಿಗೆ ಈ ಗತಿ ಬಂತು,+
ಅವರು ಅವಳ ಮಧ್ಯ ನೀತಿವಂತರ ರಕ್ತ ಸುರಿಸಿದ್ರು.+
נ [ನೂನ್]
14 ಅವರು ಬೀದಿಗಳಲ್ಲಿ ಕುರುಡರ ತರ+ ಅಲೆದಾಡಿದ್ದಾರೆ.
ಅವರು ರಕ್ತದಿಂದ ಕೊಳಕಾಗಿದ್ದಾರೆ,+
ಹಾಗಾಗಿ ಯಾರೂ ಅವ್ರ ಬಟ್ಟೆ ಮುಟ್ಟೋಕಾಗ್ತಿಲ್ಲ.
ס [ಸಾಮೆಕ್]
15 ಜನ ಅವ್ರಿಗೆ “ದೂರ ಹೋಗಿ, ನೀವು ಅಶುದ್ಧರು! ಹೋಗಿ, ದೂರ ಹೋಗಿ! ನಮ್ಮನ್ನ ಮುಟ್ಟಬೇಡಿ!” ಅಂತ ಹೇಳ್ತಿದ್ದಾರೆ.
ಪ್ರವಾದಿಗಳೂ ಪುರೋಹಿತರೂ ಮನೆಯಿಲ್ಲದೆ ಅಲೆದಾಡ್ತಿದ್ದಾರೆ.
ಜನಾಂಗಗಳ ಜನ “ನಮ್ಮ ಜೊತೆ* ಇಲ್ಲಿ ವಾಸಿಸಬಾರದು.+
פ [ಪೇ]
16 ಅವ್ರನ್ನ ಯೆಹೋವನೇ ಚದರಿಸಿ ಬಿಟ್ಟಿದ್ದಾನೆ,+
ಆತನು ಇನ್ನು ಅವ್ರನ್ನ ಮೆಚ್ಚಲ್ಲ.
ಜನ ಪುರೋಹಿತರಿಗೆ ಸ್ವಲ್ಪನೂ ಗೌರವ ಕೊಡಲ್ಲ,+ ಹಿರಿಯರಿಗೆ ದಯೆದಾಕ್ಷಿಣ್ಯ ತೋರಿಸಲ್ಲ”+ ಅಂತ ಹೇಳಿದ್ದಾರೆ.
ע [ಅಯಿನ್]
17 ಸಹಾಯಕ್ಕಾಗಿ ಎದುರು ನೋಡಿನೋಡಿ ನಮ್ಮ ಕಣ್ಣುಗಳು ಸೋತುಹೋಗಿವೆ, ಆದ್ರೆ ಯಾವ ಸಹಾಯನೂ ಸಿಗಲಿಲ್ಲ.+
ನಮ್ಮನ್ನ ರಕ್ಷಿಸೋಕೆ ಆಗದ ಜನಾಂಗದಿಂದ ಸಹಾಯಕ್ಕಾಗಿ ಕಾದು ಕಾದು ಸುಸ್ತಾಗಿದ್ದೀವಿ.+
צ [ಸಾದೆ]
18 ಅವರು ನಮ್ಮನ್ನ ಹೆಜ್ಜೆಹೆಜ್ಜೆಗೂ ಬೇಟೆಯಾಡಿದ್ದಾರೆ,+ ಪಟ್ಟಣದ ಮುಖ್ಯಸ್ಥಳಗಳಲ್ಲಿ ನಾವು ನಡೆಯದ ಹಾಗೆ ಮಾಡಿದ್ದಾರೆ.
ನಮ್ಮ ಅಂತ್ಯ ಹತ್ರ ಆಗಿದೆ, ನಮ್ಮ ಜೀವನ ಕೊನೆ ಆಗಿದೆ, ನಮ್ಮ ಅಂತ್ಯ ಬಂದಿದೆ.
ק [ಕೊಫ್]
19 ನಮ್ಮನ್ನ ಬೆನ್ನಟ್ಟಿದವರು ಆಕಾಶದಲ್ಲಿ ಹಾರೋ ಹದ್ದುಗಳಿಗಿಂತ ವೇಗವಾಗಿ ಅಟ್ಟಿಸ್ಕೊಂಡು ಬಂದಿದ್ರು.+
ಬೆಟ್ಟಗಳ ಮೇಲೆ ಅವರು ನಮ್ಮನ್ನ ಓಡಿಸ್ಕೊಂಡು ಹೋದ್ರು, ಕಾಡಲ್ಲಿ ನಮಗಾಗಿ ಹೊಂಚುಹಾಕಿ ಹಿಡಿದ್ರು.
ר [ರೆಶ್]
20 ನಾವು ನಮ್ಮ ಉಸಿರಾಗಿರುವವನ ಬಗ್ಗೆ, ಯೆಹೋವನ ಅಭಿಷಿಕ್ತನ ಬಗ್ಗೆ+ “ಜನಾಂಗಗಳ ಮಧ್ಯ ಅವನ ನೆರಳಲ್ಲಿ ನಾವು ವಾಸಿಸ್ತೀವಿ” ಅಂತ ಹೇಳ್ತಿದ್ವಿ,
ಆದ್ರೆ ಅವನನ್ನೇ ಅವರು ದೊಡ್ಡ ಗುಂಡಿಯಲ್ಲಿ ಹಿಡಿದಿದ್ದಾರೆ.+
ש [ಸಿನ್]
21 ಊಚ್ ದೇಶದಲ್ಲಿ ವಾಸಿಸ್ತಿರೋ ಎದೋಮ್ ಅನ್ನೋಳೇ,+ ಸಂಭ್ರಮಿಸು, ಹರ್ಷಿಸು.
ಆದ್ರೆ ನಿನಗೂ ಪಾತ್ರೆ ದಾಟಿಸಲಾಗುತ್ತೆ,+ ನೀನು ಅದನ್ನ ಕುಡಿದು ಅಮಲೇರಿ ನಿನ್ನನ್ನ ನೀನೇ ಬೆತ್ತಲೆ ಮಾಡ್ಕೊಳ್ತೀಯ.+
ת [ಟಾವ್]
22 ಚೀಯೋನ್ ಅನ್ನೋಳೇ, ನಿನ್ನ ತಪ್ಪಿಗಾಗಿ ಸಿಕ್ಕಿರೋ ಶಿಕ್ಷೆ ಕೊನೆ ಆಯ್ತು.
ಆತನು ನಿನ್ನನ್ನ ಮತ್ತೆ ಸೆರೆಗೆ ಹಾಕಲ್ಲ.+
ಆದ್ರೆ ಎದೋಮ್ ಅನ್ನೋಳೇ, ಆತನು ನಿನ್ನ ತಪ್ಪುಗಳ ಕಡೆ ಗಮನ ಕೊಡ್ತಾನೆ.
ಆತನು ನಿನ್ನ ಪಾಪಗಳನ್ನ ಬಯಲು ಮಾಡ್ತಾನೆ.+
5 ಯೆಹೋವನೇ, ನಮಗೆ ಬಂದಿರೋ ಕಷ್ಟ ನೆನಪಿಸ್ಕೊ.
ನೋಡು, ನಮಗಾದ ಅಪಮಾನಕ್ಕೆ ಗಮನಕೊಡು.+
2 ನಮ್ಮ ಆಸ್ತಿಪಾಸ್ತಿಯೆಲ್ಲ ಅಪರಿಚಿತರ ಪಾಲಾಯ್ತು, ನಮ್ಮ ಮನೆಗಳು ವಿದೇಶಿಯರ ವಶವಾಯ್ತು.+
3 ನಾವು ತಂದೆಯಿಲ್ಲದ ತಬ್ಬಲಿಗಳಾಗಿದ್ದೀವಿ, ನಮ್ಮ ತಾಯಂದಿರು ವಿಧವೆಯರ ತರ ಆಗಿದ್ದಾರೆ.+
4 ನೀರು ನಮ್ಮದಾಗಿದ್ರೂ ಹಣ ಕೊಟ್ಟು ಕೊಂಡ್ಕೊಳ್ಳಬೇಕಾಗಿದೆ,+ ಸೌದೆ ನಮ್ಮದೇ ಆಗಿದ್ರೂ ಅದನ್ನ ಖರೀದಿಸಬೇಕಾಗಿದೆ.
5 ಬೆನ್ನಟ್ಟುವವರು ಇನ್ನೇನು ನಮ್ಮನ್ನ ಹಿಡಿತಾರೆ,
ನಾವು ಬಳಲಿ ಬೆಂಡಾಗಿದ್ದೀವಿ, ವಿಶ್ರಾಂತಿ ಪಡಿಯೋಕೆ ಅವರು ಬಿಡ್ತಿಲ್ಲ.+
6 ನಮ್ಮ ಹೊಟ್ಟೆ ತುಂಬಿಸ್ಕೊಳ್ಳೋಕೆ ನಾವು ಈಜಿಪ್ಟ್*+ ಮತ್ತು ಅಶ್ಶೂರದ+ ಮುಂದೆ ಕೈಚಾಚ್ತಾ ಆಹಾರಕ್ಕಾಗಿ ಬೇಡ್ತಿದ್ದೀವಿ.
7 ಪಾಪ ಮಾಡಿದ ನಮ್ಮ ಪೂರ್ವಜರು ಈಗ ಇಲ್ಲ, ಆದ್ರೆ ಅವ್ರ ಪಾಪಗಳ ಪರಿಣಾಮವನ್ನ ನಾವೀಗ ಅನುಭವಿಸಬೇಕಾಗಿದೆ.
8 ಸೇವಕರು ನಮ್ಮನ್ನ ಈಗ ಆಳ್ತಿದ್ದಾರೆ, ಅವ್ರ ಕೈಯಿಂದ ನಮ್ಮನ್ನ ಬಿಡಿಸುವವರು ಯಾರೂ ಇಲ್ಲ.
9 ಕಾಡಲ್ಲಿ ಸೈನಿಕರು ಕತ್ತಿ ಹಿಡಿದು ನಿಂತಿದ್ದಾರೆ. ಹಾಗಾಗಿ ನಮ್ಮ ಜೀವವನ್ನ ಅಪಾಯಕೊಡ್ಡಿ ನಾವು ಆಹಾರ ತಗೊಂಡು ಬರ್ತಿವಿ.+
10 ಹಸಿವೆಯ ಸಂಕಟದಿಂದಾಗಿ ನಮ್ಮ ಚರ್ಮ ಕುಲುಮೆ ತರ ಸುಡ್ತಿದೆ.+
11 ಚೀಯೋನಲ್ಲಿರೋ ಹೆಂಡತಿಯರನ್ನ, ಯೆಹೂದದ ಪಟ್ಟಣಗಳಲ್ಲಿರೋ ಕನ್ಯೆಯರನ್ನ ಅವಮಾನ ಮಾಡಲಾಗಿದೆ.*+
12 ಅಧಿಕಾರಿಗಳನ್ನ ಅವ್ರ ಒಂದೊಂದು ಕೈಗಳಿಂದ ನೇತು ಹಾಕಲಾಯ್ತು,+ ಹಿರಿಯರಿಗೆ ಯಾರೂ ಗೌರವ ಕೊಡ್ತಿರ್ಲಿಲ್ಲ.+
13 ಯುವಕರು ಬೀಸೋ ಕಲ್ಲನ್ನ ಹೊರುತ್ತಿದ್ದಾರೆ, ಹುಡುಗರು ಭಾರವಾದ ಸೌದೆ ಹೊರೆಯನ್ನ ಹೊತ್ಕೊಂಡು ಹೋಗುವಾಗ ಮುಗ್ಗರಿಸಿ ಬೀಳ್ತಿದ್ದಾರೆ.
14 ಪಟ್ಟಣದ ಬಾಗಿಲ ಹತ್ರ ಹಿರಿಯರು ಇಲ್ವೇ ಇಲ್ಲ,+ ಯುವಕರು ಸಂಗೀತ ನುಡಿಸ್ತಿಲ್ಲ.+
15 ನಮ್ಮ ಹೃದಯದಲ್ಲಿ ಸಂತೋಷ ಅನ್ನೋದೇ ಇಲ್ಲ, ನಮ್ಮ ನೃತ್ಯ ನಿಂತುಹೋಗಿ ಶೋಕನೇ ನಮ್ಮ ಸಂಗಾತಿ ಆಗಿದೆ.+
16 ನಮ್ಮ ತಲೆ ಮೇಲಿದ್ದ ಕಿರೀಟ ಬಿದ್ದುಹೋಗಿದೆ. ನಮ್ಮ ಗತಿ ಏನಂತ ಹೇಳೋಣ, ನಾವು ಪಾಪ ಮಾಡಿದ್ದೀವಲ್ಲಾ!
17 ಅದಕ್ಕೇ ನಮ್ಮ ಹೃದಯ ಕಾಯಿಲೆ ಬಿದ್ದಿದೆ,+
ನಮ್ಮ ಕಣ್ಣುಗಳು ಮಬ್ಬಾಗಿ ಹೋಗಿವೆ,+
18 ಚೀಯೋನ್ ಬೆಟ್ಟ ನಿರ್ಜನವಾಗಿದೆ,+ ನರಿಗಳು ಅದ್ರ ಮೇಲೆ ಓಡಾಡ್ತಿವೆ.
19 ಯೆಹೋವನೇ, ನೀನಾದ್ರೋ ಸದಾಕಾಲಕ್ಕೂ ಸಿಂಹಾಸನದ ಮೇಲೆ ಕೂತ್ಕೊಂಡಿರ್ತೀಯ.
ನಿನ್ನ ಸಿಂಹಾಸನ ಎಲ್ಲ ತಲೆಮಾರು ತನಕ ಸ್ಥಿರವಾಗಿರುತ್ತೆ.+
20 ನೀನು ಯಾಕೆ ನಮ್ಮನ್ನ ಸದಾಕಾಲಕ್ಕೂ ಮರೆತು ಬಿಟ್ಟಿದ್ದೀಯ? ಇಷ್ಟೊಂದು ಸಮಯದ ತನಕ ಯಾಕೆ ನಮ್ಮ ಕೈಬಿಟ್ಟಿದ್ದೀಯ?+
21 ಯೆಹೋವನೇ, ನಮ್ಮನ್ನ ನಿನ್ನ ಹತ್ರ ವಾಪಸ್ ಕರ್ಕೊಂಡು ಹೋಗು, ನಾವು ಮನಸಾರೆ ನಿನ್ನ ಹತ್ರ ವಾಪಸ್ ಬರ್ತಿವಿ.+
ಮೊದಲಿದ್ದ ಹಾಗೇ ನಮ್ಮ ಬಾಳಲ್ಲಿ ಮತ್ತೆ ಒಳ್ಳೇ ದಿನಗಳು ಬರೋ ಹಾಗೆ ಮಾಡು.+
22 ಆದ್ರೆ ನೀನು ನಮ್ಮನ್ನ ಸಂಪೂರ್ಣವಾಗಿ ತಿರಸ್ಕರಿಸಿದ್ದೀಯ.
ನಿನಗೆ ಈಗ್ಲೂ ನಮ್ಮ ಮೇಲೆ ತುಂಬ ಕೋಪ ಇದೆ.+
1 ರಿಂದ 4ನೇ ಅಧ್ಯಾಯಗಳಲ್ಲಿ ಇರೋದು ಶೋಕಗೀತೆಗಳು. ಹೀಬ್ರು ಭಾಷೆಯಲ್ಲಿ ಈ ಗೀತೆಗಳನ್ನ ಅಕ್ಷರಮಾಲೆಯ ಕ್ರಮದಲ್ಲಿ ಅಥವಾ ಪದ್ಯಬಂಧದ ರೂಪದಲ್ಲಿ ರಚಿಸಲಾಗಿದೆ.
ಅಥವಾ “ರಾಜನ ಕೈಕೆಳಗಿದ್ದ ಜಿಲ್ಲೆಗಳಿಗೆ.”
ಅಥವಾ “ಯುವತಿಯರು.”
ಅಕ್ಷ. “ಶಿರಸ್ಸಾಗಿದ್ದಾರೆ.”
ಅಥವಾ “ಹಿಗ್ಗಿದ್ರು.”
ಇಲ್ಲಿ ಯೆರೂಸಲೇಮನ್ನ ಸ್ತ್ರೀಗೆ ಹೋಲಿಸಿ ಹೇಳಲಾಗಿದೆ.
ಅಥವಾ “ಯುವತಿಯರು.”
ಅಕ್ಷ. “ಕೊಂಬನ್ನ ಕಡಿದುಬಿಟ್ಟನು.”
ಅಥವಾ “ಬೋಧನೆಯನ್ನ.”
ಪದವಿವರಣೆ ನೋಡಿ.
ಕನಿಕರ ಅಥವಾ ಅನುಕಂಪ ವ್ಯಕ್ತಪಡಿಸೋಕೆ ಕಾವ್ಯಾತ್ಮಕವಾಗಿ ಮಗಳಿಗೆ ಸೂಚಿಸಿ ತಿಳಿಸಿರಬಹುದು.
ಪದವಿವರಣೆ ನೋಡಿ.
ಅಕ್ಷ. “ಧಾನ್ಯ ಮತ್ತು ದ್ರಾಕ್ಷಾಮದ್ಯ ಇಲ್ವಾ?”
ಅಕ್ಷ. “ಬಾಯಿ ತೆರೆದಿದ್ದಾರೆ.”
ಇದು ತುಂಬ ಆಶ್ಚರ್ಯಪಡೋದಕ್ಕೆ ಅಥವಾ ತಿರಸ್ಕಾರದಿಂದ ಕಾಣೋದಕ್ಕೆ ಸೂಚಿಸಬಹುದು.
ಅಕ್ಷ. “ಕೊಂಬನ್ನ ಎತ್ತಿದ್ದಾನೆ.”
ಅಥವಾ “ಯುವತಿಯರು.”
ಅಕ್ಷ. “ರೋಷ ಅನ್ನೋ ಕೋಲಿನಿಂದಾಗಿ.”
ಅಕ್ಷ. “ಆತನ ಕೈ ನನಗೆ ವಿರುದ್ಧವಾಗಿದೆ.”
ಅಥವಾ “ತಡೆಯೊಡ್ತಾನೆ; ಪ್ರಾರ್ಥನೆ ತನಗೆ ಮುಟ್ಟದ ಹಾಗೆ ಮಾಡಿದ್ದಾನೆ.”
ಬಹುಶಃ, “ಬಂಜರು ಪ್ರದೇಶವಾಗಿರೋ ತರ.”
ಪದವಿವರಣೆ ನೋಡಿ.
ಅಕ್ಷ. “ಒಳ್ಳೇದನ್ನ.”
ಅಥವಾ “ಕಾಯೋ ಮನೋಭಾವ ತೋರಿಸ್ತೀನಿ.”
ಅಥವಾ “ತಾಳ್ಮೆಯಿಂದ.”
ಅಕ್ಷ. “ಬಾಯಿ ತೆರೆದಿದ್ದಾರೆ.”
ಅಥವಾ “ಆರಾಧನಾ ಸ್ಥಳದ ಕಲ್ಲುಗಳು.”
ಪದವಿವರಣೆ ನೋಡಿ.
ಅಕ್ಷ. “ಕಡುಗೆಂಪು ಬಣ್ಣದ.”
ಅಥವಾ “ಶೋಕದ ಆಹಾರವಾಗಿದ್ದಾರೆ.”
ಅಥವಾ “ವಿದೇಶಿಯರಾಗಿ.”
ಅಥವಾ “ಐಗುಪ್ತ.”
ಅಥವಾ “ಅತ್ಯಾಚಾರ ಮಾಡಲಾಗಿದೆ.”