ಜಗತ್ತನ್ನು ಗಮನಿಸುವುದು
ಅಸೂಯೆಯ ದೇವತೆ?
ಉತ್ತರ ಜಪಾನಿನ ಒಂದು ಸುರಂಗ ಮಾರ್ಗವು ಮುಕ್ತಾಯವಾದುದಕ್ಕೆ ಇತ್ತೀಚೆಗೆ ನಡೆದ ಸಮಾರಂಭಕ್ಕೆ ಸುದ್ದಿಗಾರರನ್ನು ಆಮಂತ್ರಿಸಲಾಗಿತ್ತಾದರೂ ಒಬ್ಬ ಸುದ್ದಿಗಾರ್ತಿಯನ್ನು ನಿಷೇಧಿಸಲಾಯಿತು. ಆ ಯೋಜನೆಯ ಉಪ ಮೇಲ್ವಿಚಾರಕರು ವಿವರಿಸಿದ್ದು: “ಅದರಲ್ಲಿ ಅಶುಭವಿದೆ. ಪರ್ವತದ ದೇವತೆ ಸ್ತ್ರೀ, ಮತ್ತು ಇತರ ಸ್ತ್ರೀಯರು ನಿವೇಶನವನ್ನು ಪ್ರವೇಶಿಸುವಲ್ಲಿ ಆಕೆ ಸಿಟ್ಟೇರಿ ಅಪಘಾತಗಳನ್ನು ಉಂಟುಮಾಡುವಳು. ಸ್ತ್ರೀಯೊಬ್ಬಳು ಒಳಗೆ ಬಂದರೆ ತಾವು ಅಗೆಯುವುದನ್ನು ನಿಲ್ಲಿಸುತ್ತೇವೆಂದು ಕೆಲಸಗಾರರು ಹೇಳುತ್ತಾರೆ.” ಈ ಕಲ್ಪನೆ ಸ್ತ್ರೀಯರು ಮಲಿನವಾದವರು ಎಂಬ ಲಿಂಗಭೇದಾನುಸಾರಿಗಳ ನಂಬಿಕೆಯಲ್ಲಿ ಆಧಾರಿತವಾಗಿದೆ, ಎಂದರು ಒಬ್ಬ ಬೇಸರ ಬಂದ ಪುರುಷ ಸೈಖಾಲಜಿ ಪ್ರೊಫೆಸರರು. ಈ ಪದ್ಧತಿ “ಭೇದಭಾವದ್ದು” ಆದರೂ , “ಕಟ್ಟಡದ ಕೆಲಸಗಾರರ ಅನಿಸಿಕೆಗಳನ್ನು ಅಸಡ್ಡೆ ಮಾಡಸಾಧ್ಯವಿಲ್ಲ” ಎಂದರು ಕಟ್ಟಡ ಸಚಿವಾಲಯದ ಒಬ್ಬ ಅಧಿಕಾರಿ.
ಅನಿರ್ಬಂಧ-ಬೀಳಿಕೆಯ ಗೋಪುರ
ವಿಜ್ಞಾನಿಗಳು ಅನೇಕ ವೇಳೆ ಗುರುತ್ವಾಕರ್ಷಣರಹಿತ ಪರಿಸರದಲ್ಲಿ ಕೆಲಸಮಾಡಬೇಕಾಗಿ ಬರುತ್ತದಾದರೂ ಅವರು ಇದಕ್ಕಾಗಿ ಹೊರಾಂತರಿಕ್ಷಕ್ಕೆ ಹೋಗಸಾಧ್ಯವಾಗುವುದು ವಿರಳ. ಆದುದರಿಂದ, ಜರ್ಮನಿಯ ಬ್ರೆಮೆನ್‌ನಲ್ಲಿ ವಿಜ್ಞಾನಿಗಳು ಅನಿರ್ಬಂಧ-ಬೀಳಿಕೆಯ ಸ್ಥಿತಿಯಲ್ಲಿ ವಸ್ತುಗಳನ್ನು ನೋಡಸಾಧ್ಯವಾಗುವ ಒಂದು ಗೋಪುರವನ್ನು ಕಟ್ಟಲಾಗಿದೆ. ಈ ಗೋಪುರದ ಎತ್ತರ 146 ಮೀ. ಇದರಲ್ಲಿ 110 ಮೀ. ಎತ್ತರ ಮತ್ತು 3.5 ಮೀ. ಅಗಲದ ಒಂದು ಕೊಳವೆಯಿದೆ. ಈ ಕೊಳವೆಯೊಳಗೆ 2 ಮೀ. ಉದ್ದದ ಕೋಶದಲ್ಲಿ ಇಡಲ್ಪಟ್ಟ ವಸ್ತುಗಳು ಅನಿರ್ಬಂಧ-ಬೀಳಿಕೆಯಲ್ಲಿ 4.74 ಸೆಕೆಂಡುಗಳನ್ನು ತೆಗೆದುಕೊಂಡು ತಾಸಿಗೆ 167 ಕಿ.ಮೀ.ನಷ್ಟೂ ವೇಗದಲ್ಲಿ ಕೆಳಗಿಳಿಯುತ್ತವೆ. ಒಂದು ಸೆಕೆಂಡಿಗೆ 6,000 ಚಿತ್ರಗಳನ್ನು ಹಿಡಿಯುವ ಕ್ಯಾಮರ ಬೀಳಿಕೆಯ ಸಮಯ ಸಂಖ್ಯಾಸಂಗ್ರಹಣವನ್ನು ಮಾಡುವ ಉಪಕರಣಗಳಲ್ಲಿ ಒಂದಾಗಿದೆ.
ಬ್ರಿಟಿಷ್ ಕಾರ್ ಬೋನುಗಳು
ಬ್ರಿಟನಿನಲ್ಲಿ ಕಳೆದ ವರ್ಷ ಕಳವಾದ 3,78,000 ಕಾರುಗಳ ವಿಮೆಯ ಮೊತ್ತ 50 ಕೋಟಿ ಡಾಲರುಗಳು. ಕಳ್ಳರನ್ನು ಹಿಡಿಯಲು ಪೊಲೀಸರು ಈಗ ಅನೇಕ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಪರಿವರ್ತಿಸಿದ ಮತ್ತು ಸಾಮಾನ್ಯವಾಗಿ ಇಲಿ ಕತ್ತರಿ ಎಂದು ಕರೆಯಲ್ಪಡುವ ಕಾರುಗಳನ್ನು ಉಪಯೋಗಿಸುತ್ತಾರೆ. ಪರಿವರ್ತಿಸಲು ಸುಮಾರು 1,800 ಡಾಲರು ತಗಲುವ ಈ ವಾಹನಗಳನ್ನು ಕಳ್ಳರು ನಡಿಸಿಕೊಂಡು ಹೋಗುವಂತೆ ಪ್ರೇರಿಸಲಿಕ್ಕಾಗಿ ಅವುಗಳ ಕೀಲಿಕೈಯೊಂದಿಗೆ ಬಿಡಲಾಗುತ್ತದೆ. ಆದರೆ ಈ ಕಾರುಗಳಲ್ಲಿ ಒಂದು 15 ಮೀಟರುಗಳಷ್ಟು ಹೋಗುವುದರೊಳಗೆ, ಅದರ ಇಂಜಿನು ನಿಂತುಹೋಗಿ, ಕದಗಳು ಮುಚ್ಚುತ್ತವೆ. ಮತ್ತು ಒಡೆಯಲಾಗದ ಗಾಜು ಯಾ ಪ್ಲಾಸಿಕ್ಟಿನ ಕಿಟಿಕಿಗಳನ್ನು ತೆರೆಯಲು ಆಗುವುದಿಲ್ಲ. ಅದೇ ಸಮಯ ರೇಡಿಯೊ ಅಪಾಯ ಸೂಚನೆ ಪೊಲೀಸರನ್ನು ಎಚ್ಚರಿಸುತ್ತದೆ. ಅವರು ಒಡನೆ ಡ್ರೈವರನನ್ನು ದಸ್ತಗಿರಿ ಮಾಡಲು ಬರುತ್ತಾರೆ. ಈ ಅಭ್ಯಾಸದ ಕುರಿತು ಪ್ರಜಾ ಸ್ವಾತಂತ್ರ್ಯದ ರಾಷ್ಟ್ರೀಯ ಕೌನ್ಸಿಲು ತುಸು ಚಿಂತೆಯನ್ನು ವ್ಯಕ್ತಪಡಿಸಿರುವುದಾದರೂ ಹೋಮ್ ಆಫೀಸಿನ ರಾಷ್ಟ್ರೀಯ ಪಾತಕ ನಿರೋಧ ಕೇಂದ್ರದ ಡೈರೆಕ್ಟರು, ಈ ತಾವೇ ಬಂಧಿಸುವ ವಾಹನಗಳು “ವಾಹನಕಳ್ಳರ ವಿರುದ್ಧ ಹೋರಾಡಲು ಒಂದು ಬೆಲೆಬಾಳುವ ಆಯುಧ” ಎಂದು ಹೇಳಿದರು, ಎನ್ನುತ್ತದೆ ಲಂಡನಿನ ಸಂಡೆ ಟಯಿಮ್ಸ್.
ಆಮ್ಲಮಳೆಯಿಂದ ಚೇತರಿಸಿಕೊಳ್ಳುವುದು
ಆಮ್ಲಮಳೆಯು ಲೋಕವ್ಯಾಪಕವಾಗಿ ಸಿಹಿನೀರಿನ ಸರೋವರಗಳಿಗೆ ಮಾಡಿರುವ ಹಾನಿಯನ್ನು ಸರಿಪಡಿಸಬಹುದು, ಎನ್ನುತ್ತಾರೆ ಇಬ್ಬರು ಕೆನೇಡಿಯನ್ ಜೀವವಿಜ್ಞಾನಿಗಳು. ಕೆನಡದ ಒಂಟೇರಿಯೊದಲ್ಲಿರುವ ವೈಟ್‌ಪಾಯಿನ್ ಲೇಕಿನ ನೀರು ಆಮ್ಲದಿಂದ ಮಲಿನಗೊಳ್ಳತೊಡಗಿದಾಗ ಇವರು ತಮ್ಮ 10 ವರ್ಷಗಳ ಅಧ್ಯಯನವನ್ನು ಆರಂಭಿಸಿದರು. ನೀರಿನ ಆಮ್ಲತೆ ಹೆಚ್ಚಿದಾಗ ಸರೋವರದ ಟ್ರೌಟ್ ಮೊದಲಾದ ಮೀನುಗಳು ಕಡಮೆಯಾದವು. ಆದರೂ, ಮಾಲಿನ್ಯವನ್ನು ನಿಲ್ಲಿಸಿದ ಆರು ವರ್ಷಗಳ ನಂತರ ಸರೋವರದ ನೀರು ಸುಮಾರು ಸಾಮಾನ್ಯ ಸ್ಥಿತಿಗೆ ಬಂದಾಗ, ಮೊದಲಿನ ಸಂಖ್ಯೆ ಮೂರರಲ್ಲಿ ಎರಡಂಶ ಟ್ರೌಟ್‌ಗಳು ಪುನಃ ತೋರಿಬಂದದ್ದು ಮಾತ್ರವಲ್ಲ, ಇವು ಮತ್ತು ಇತರ ಜಲಚರಗಳು ವೃದ್ಧಿಯಾದವು. ಹೀಗೆ, ಆಮ್ಲಮಳೆಯಿಂದ ಪೆಟ್ಟಾಗಿರುವ ಕಡಮೆ ಪಕ್ಷ ಕೆಲವು ಸರೋವರಗಳಾದರೂ ಮಾನವರು ಕೈಹಾಕದೆ ಪ್ರಾಕೃತಿಕವಾಗಿ ಪೂರ್ವಸ್ಥಿತಿಗೆ—ಮಾಲಿನ್ಯ ಉಗಮ ತೊಲಗಿಸಲ್ಪಡುವಲ್ಲಿ—ಬರುತ್ತದೆಂದು ತೋರುತ್ತದೆ.
ಅಲೆದಾಡುವ ದ್ವೀಪ
ನೀವು 154 ಕಿ.ಮೀ. ಉದ್ದ, 35 ಕಿ.ಮೀ. ಅಗಲ 230 ಮೀಟರ್ ದಪ್ಪವಿರುವ, ಸಾಗರದಲ್ಲಿ ತೇಲಾಡುವ ಒಂದು ದ್ವೀಪದ ಕುರಿತು ಭಾವಿಸಿರಿ. ಇದು ಬಿ-9 ಎಂದು ವಿಜ್ಞಾನಿಗಳು ಹೆಸರಿಸಿರುವ ನೀರ್ಗಲ್ಲ ಗುಡ್ಡ. ಇದು ಎಂಟಾರ್ಕ್‌ಟಿಕ್ ರಾಸ್ ಐಸ್ ಶೆಲ್ಫಿನಿಂದ 1987ರಲ್ಲಿ ತಪ್ಪಿಸಿಕೊಂಡು ಬಂತು. ಮೊದಲು ಉಪಗೃಹಗಳು ಕಂಡುಹಿಡಿದ ಇದರ ಚಲನೆಯನ್ನು ವಿಜ್ಞಾನಿಗಳು ಕೊನೆಗೆ ಒಂದು ರೇಡಿಯೊ ಸಂಜ್ಞಾಜ್ಯೋತಿಯನ್ನು ಅದರ ಮೇಲೆ ಇಡುವುದರ ಮೂಲಕ ಪತ್ತೆ ಹಚ್ಚಿದರು. ಅದು ಎಂಟಾರ್ಕ್‌ಟಿಕದ ಪ್ರಸಿದ್ಧ ಭೌಗೋಲಿಕ ವೈಶಿಷ್ಟ್ಯವಾದ ಬೇ ಆಫ್ ವ್ಹೇಲ್ಸನ್ನು ನಿರ್ಮೂಲ ಮಾಡಿ ಹೊರಟುಹೋದಂದಿನಿಂದ, ಈ ಬಿ-9 ಸುಮಾರು 2,000 ಕಿ.ಮೀ. ಪ್ರಯಾಣ ಬೆಳೆಸಿದೆ. ಹೀಗೆ ಹೋಗುವಾಗ ಅದು ಮೂರು ಬೃಹದಾಕಾರದ ಭಾಗಗಳಾಗಿ ಒಡೆದು, ಎಂಟಾರ್ಕ್‌ಟಿಕದ ಸುತ್ತಲಿನ ಜಟಿಲವಾದ, ಅಳೆಯಲು ಕಷ್ಟವಾದ ಸಾಗರ ಪ್ರವಾಹಗಳ ಕುರಿತು ವಿಜ್ಞಾನಿಗಳಿಗೆ ಹೆಚ್ಚಿನದನ್ನು ಕಲಿಸಿದೆ. ಒಂದೇ ಆಗಿರುವಾಗ ಅದರಲ್ಲಿ 1,196 ಕ್ಯೂಬಿಕ್ ಕಿ.ಮೀ. ನೀರ್ಗಲ್ಲಾದ ಸಿಹಿನೀರಿತ್ತು. ಒಂದು ಅಂದಾಜು ಹೇಳುವುದೇನಂದರೆ, ಅದು ಸುಮಾರು ಎರಡು ಸಾವಿರ ವರ್ಷಗಳ ತನಕ ಭೂಮಿಯಲ್ಲಿರುವ ಪ್ರತಿಯೊಬ್ಬನಿಗೆ ಪ್ರತಿದಿನ ಎರಡು ಗ್ಲಾಸು ನೀರನ್ನು ಒದಗಿಸಲು ಸಾಕು. (g91 2/22)