ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • es25 ಪು. 90-102
  • ಆಗಸ್ಟ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌
  • ದಿನದ ವಚನ ಓದಿ ಚರ್ಚಿಸೋಣ—2025
  • ಉಪಶೀರ್ಷಿಕೆಗಳು
  • ಶುಕ್ರವಾರ, ಆಗಸ್ಟ್‌ 1
  • ಶನಿವಾರ, ಆಗಸ್ಟ್‌ 2
  • ಭಾನುವಾರ, ಆಗಸ್ಟ್‌ 3
  • ಸೋಮವಾರ, ಆಗಸ್ಟ್‌ 4
  • ಮಂಗಳವಾರ, ಆಗಸ್ಟ್‌ 5
  • ಬುಧವಾರ, ಆಗಸ್ಟ್‌ 6
  • ಗುರುವಾರ, ಆಗಸ್ಟ್‌ 7
  • ಶುಕ್ರವಾರ, ಆಗಸ್ಟ್‌ 8
  • ಶನಿವಾರ, ಆಗಸ್ಟ್‌ 9
  • ಭಾನುವಾರ, ಆಗಸ್ಟ್‌ 10
  • ಸೋಮವಾರ, ಆಗಸ್ಟ್‌ 11
  • ಮಂಗಳವಾರ, ಆಗಸ್ಟ್‌ 12
  • ಬುಧವಾರ, ಆಗಸ್ಟ್‌ 13
  • ಗುರುವಾರ, ಆಗಸ್ಟ್‌ 14
  • ಶುಕ್ರವಾರ, ಆಗಸ್ಟ್‌ 15
  • ಶನಿವಾರ, ಆಗಸ್ಟ್‌ 16
  • ಭಾನುವಾರ, ಆಗಸ್ಟ್‌ 17
  • ಸೋಮವಾರ, ಆಗಸ್ಟ್‌ 18
  • ಮಂಗಳವಾರ, ಆಗಸ್ಟ್‌ 19
  • ಬುಧವಾರ, ಆಗಸ್ಟ್‌ 20
  • ಗುರುವಾರ, ಆಗಸ್ಟ್‌ 21
  • ಶುಕ್ರವಾರ, ಆಗಸ್ಟ್‌ 22
  • ಶನಿವಾರ, ಆಗಸ್ಟ್‌ 23
  • ಭಾನುವಾರ, ಆಗಸ್ಟ್‌ 24
  • ಸೋಮವಾರ, ಆಗಸ್ಟ್‌ 25
  • ಮಂಗಳವಾರ, ಆಗಸ್ಟ್‌ 26
  • ಬುಧವಾರ, ಆಗಸ್ಟ್‌ 27
  • ಗುರುವಾರ, ಆಗಸ್ಟ್‌ 28
  • ಶುಕ್ರವಾರ, ಆಗಸ್ಟ್‌ 29
  • ಶನಿವಾರ, ಆಗಸ್ಟ್‌ 30
  • ಭಾನುವಾರ, ಆಗಸ್ಟ್‌ 31
ದಿನದ ವಚನ ಓದಿ ಚರ್ಚಿಸೋಣ—2025
es25 ಪು. 90-102

ಆಗಸ್ಟ್‌

ಶುಕ್ರವಾರ, ಆಗಸ್ಟ್‌ 1

ನೀತಿವಂತನಿಗೆ ಒಂದಲ್ಲ ಎರಡಲ್ಲ ನೂರಾರು ಕಷ್ಟಸಂಕಟಗಳು, ಆದ್ರೆ ಯೆಹೋವ ಅವುಗಳಿಂದ ಅವನನ್ನ ಬಿಡಿಸ್ತಾನೆ.—ಕೀರ್ತ. 34:19.

ಈ ಮೇಲಿನ ಕೀರ್ತನೆಯಲ್ಲಿ 2 ವಿಷ್ಯಗಳಿದೆ. (1) ನೀತಿವಂತರಿಗೂ ಕಷ್ಟಗಳು ಬಂದೇ ಬರುತ್ತೆ. (2) ಆ ಕಷ್ಟಗಳಿಂದ ಯೆಹೋವ ದೇವರು ನಮ್ಮನ್ನ ಬಿಡಿಸ್ತಾನೆ. ಆದ್ರೆ, ಯೆಹೋವ ಯಾವ ಅರ್ಥದಲ್ಲಿ ನಮ್ಮನ್ನ ಬಿಡಿಸ್ತಾನೆ? ಈ ಲೋಕದಲ್ಲಿ ನಮಗೆ ಕಷ್ಟಗಳು ಇದ್ದಿದ್ದೇ ಅಂತ ಮೊದಲು ನಮಗೆ ಅರ್ಥ ಮಾಡಿಸ್ತಾನೆ. ಅಂದ್ರೆ ನಮಗೆ ಕಷ್ಟಗಳು ಬರದೇ ಇರೋ ತರ ಮಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿಲ್ಲ. ಆದ್ರೆ, ಎಷ್ಟೇ ಕಷ್ಟಗಳಿದ್ರೂ ಆತನ ಸೇವೆ ಮಾಡ್ತಾ ಖುಷಿಯಾಗಿರೋ ತರ ನೋಡ್ಕೊಳ್ತಾನೆ. (ಯೆಶಾ. 66:14) ಜೊತೆಗೆ ಮುಂದೆ ಹೊಸ ಲೋಕದಲ್ಲಿ ಕಷ್ಟಗಳೇ ಇರಲ್ಲ ಅನ್ನೋದನ್ನ ಮನಸ್ಸಲ್ಲಿ ಇಡೋಕೆ ಹೇಳ್ತಿದ್ದಾನೆ. (2 ಕೊರಿಂ. 4:16-18) ಆದ್ರೆ ಅಲ್ಲಿ ತನಕ ಒಂದೊಂದು ದಿನಾನೂ ನಾವು ಆತನ ಸೇವೆ ಮಾಡ್ತಾ ಖುಷಿಯಾಗಿರೋಕೆ ಸಹಾಯ ಮಾಡ್ತಾನೆ. (ಪ್ರಲಾ. 3:22-24) ಹಿಂದಿನ ಕಾಲದಲ್ಲಿದ್ದ ಮತ್ತು ಈಗಿರೋ ಯೆಹೋವನ ಸೇವಕರ ಉದಾಹರಣೆಗಳಿಂದ ನಾವು ಏನು ಕಲಿಬಹುದು? ಅವ್ರ ತರಾನೇ ನಮ್ಮ ಜೀವನದಲ್ಲೂ ದಿಢೀರಂತ ಕಷ್ಟಗಳು ಬಂದುಬಿಡಬಹುದು. ಆಗ ನಾವು ಯೆಹೋವನನ್ನ ನಂಬಿದ್ರೆ ಆತನು ನಮಗೆ ಖಂಡಿತ ಸಹಾಯ ಮಾಡ್ತಾನೆ ಅಂತ ಅವ್ರ ಉದಾಹರಣೆಗಳಿಂದ ಗೊತ್ತಾಗುತ್ತೆ.—ಕೀರ್ತ. 55:22. w23.04 14-15 ¶3-4

ಶನಿವಾರ, ಆಗಸ್ಟ್‌ 2

ಅಧಿಕಾರಿಗಳ ಮಾತು ಕೇಳಬೇಕು.—ರೋಮ. 13:1.

ಯೋಸೇಫ ಮತ್ತು ಮರಿಯ ಏನು ಮಾಡಿದ್ರು ನೋಡಿ. ಇವರು ತುಂಬ ಕಷ್ಟದ ಪರಿಸ್ಥಿತಿಯಲ್ಲೂ ಅಧಿಕಾರಿಗಳ ಮಾತು ಕೇಳಿದ್ರು. (ಲೂಕ 2:1-6) ಮರಿಯ ತುಂಬು ಗರ್ಭಿಣಿ ಆಗಿದ್ದಳು. ಆಗ ರೋಮಿನ ಅಧಿಕಾರಿಯಾಗಿದ್ದ ಅಗಸ್ಟಸ್‌ ಜನಗಣತಿ ಮಾಡಿಸಬೇಕು ಅಂತ ಆಜ್ಞೆ ಕೊಟ್ಟ. ಇದಕ್ಕೋಸ್ಕರ ಯೋಸೇಫ ಮತ್ತು ಮರಿಯ ಬೆತ್ಲೆಹೇಮ್‌ ತನಕ ಪ್ರಯಾಣ ಮಾಡಬೇಕಿತ್ತು. ಅದು 150 ಕಿಲೋಮೀಟರ್‌ ದೂರ. ಬೆಟ್ಟ ಗುಡ್ಡಗಳ ಪ್ರದೇಶವನ್ನ ಹತ್ತಿ ಇಳಿದು ಅವರು ಹೋಗಬೇಕಿತ್ತು. ಈ ತರ ಪ್ರಯಾಣ ಮಾಡೋದು ಮರಿಯಗೆ ಸುಲಭ ಆಗಿರ್ಲಿಲ್ಲ. ಯಾಕಂದ್ರೆ ಅವಳಿಗೆ ಅಥವಾ ಮಗುಗೆ ಏನಾದ್ರೂ ಅಪಾಯ ಆಗೋ ಸಾಧ್ಯತೆ ಇತ್ತು. ದಾರಿ ಮಧ್ಯದಲ್ಲೇ ಹೆರಿಗೆ ನೋವು ಶುರು ಆಗೋ ಸಾಧ್ಯತೆನೂ ಇತ್ತು. ಅವಳ ಹೊಟ್ಟೆಯಲ್ಲಿ ಮೆಸ್ಸೀಯ ಇದ್ದಾನೆ ಅಂತ ಹೇಳಿ ಅವರು ಸರ್ಕಾರದ ನಿಯಮವನ್ನ ಪಾಲಿಸದೇ ಹೋದ್ರಾ? ಇಲ್ಲ, ಕಷ್ಟ ಆದ್ರೂ ಅವರು ಬೆತ್ಲೆಹೇಮಿಗೆ ಹೋದ್ರು. ಅದಕ್ಕೆ ಯೆಹೋವ ಅವ್ರನ್ನ ಆಶೀರ್ವದಿಸಿದನು. ಮರಿಯ ಬೆತ್ಲೆಹೇಮಿಗೆ ಹುಷಾರಾಗಿ ತಲುಪಿದ್ದಷ್ಟೇ ಅಲ್ಲ, ಮಗು ಹುಟ್ಟಿದಾಗ ಅದು ಆರೋಗ್ಯವಾಗೂ ಇತ್ತು. ಅವರು ಹೀಗೆ ಮಾಡಿದ್ರಿಂದ ಬೈಬಲ್‌ ಭವಿಷ್ಯವಾಣಿನೂ ನೆರವೇರಿತು.—ಮೀಕ 5:2. w23.10 8 ¶9; 9 ¶11-12

ಭಾನುವಾರ, ಆಗಸ್ಟ್‌ 3

ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸ್ತಾ ಇರೋಣ.—ಇಬ್ರಿ. 10: 25.

ಉತ್ರ ಕೊಡೋಕೆ ತುಂಬ ಜನ್ರಿಗೆ ಭಯ ಆಗುತ್ತೆ. ನಿಮಗೂ ಭಯ ಆಗುತ್ತಾ? ಹಾಗಾದ್ರೆ ಚೆನ್ನಾಗಿ ತಯಾರಿ ಮಾಡಿ. (ಜ್ಞಾನೋ. 21:5) ನೀವು ಚೆನ್ನಾಗಿ ತಯಾರಿ ಮಾಡಿದ್ರೆ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತೀರ. ಆಗ ಉತ್ರ ಹೇಳೋಕೆ ಸುಲಭ ಆಗುತ್ತೆ. ಅಷ್ಟೇ ಅಲ್ಲ, ನೀವು ಉತ್ರಗಳನ್ನ ಚಿಕ್ಕ-ಚಿಕ್ಕದಾಗಿ ಕೊಡೋಕೆ ಪ್ರಯತ್ನ ಮಾಡಿ. (ಜ್ಞಾನೋ. 15:23; 17:27) ಆಗ ನಿಮಗೆ ಭಯ ಆಗಲ್ಲ. ನಿಮ್ಮ ಸ್ವಂತ ಮಾತಲ್ಲಿ ಚಿಕ್ಕ-ಚಿಕ್ಕ ಉತ್ರಗಳನ್ನ ಹೇಳಿ. ಆಗ ನೀವು ಚೆನ್ನಾಗಿ ತಯಾರಿ ಮಾಡಿದ್ದೀರ, ನೀವು ಹೇಳ್ತಿರೋದು ನಿಮಗೆ ಚೆನ್ನಾಗಿ ಅರ್ಥ ಆಗಿದೆ ಅಂತ ತೋರಿಸ್ತೀರ. ಇಷ್ಟೆಲ್ಲ ಮಾಡಿದ ಮೇಲೂ ಒಂದು ಉತ್ರ ಹೇಳೋಕೂ ಆಗ್ತಿಲ್ಲಾಂದ್ರೆ ಬೇಜಾರ್‌ ಮಾಡ್ಕೊಬೇಡಿ. ಯೆಹೋವ ನಿಮ್ಮ ಪ್ರಯತ್ನನ ನೋಡ್ತಾ ಇದ್ದಾನೆ. ಅದನ್ನ ತುಂಬ ಮೆಚ್ಕೊಳ್ತಾನೆ. (ಲೂಕ 21:1-4) ಆತನು ಯಾವತ್ತೂ ನಿಮ್ಮಿಂದ ಮಾಡೋಕೆ ಆಗದೇ ಇರೋದನ್ನ ಕೇಳಲ್ಲ. (ಫಿಲಿ. 4:5) ಹಾಗಾಗಿ ನಿಮ್ಮಿಂದ ಏನು ಮಾಡಕ್ಕಾಗುತ್ತೆ ಅಂತ ಚೆನ್ನಾಗಿ ಯೋಚ್ನೆ ಮಾಡಿ. ಆಮೇಲೆ ಅದಕ್ಕೆ ತಕ್ಕ ಹಾಗೆ ಗುರಿಗಳನ್ನ ಇಡಿ. ಧೈರ್ಯ ಕೊಡಪ್ಪಾ ಅಂತ ಯೆಹೋವನ ಹತ್ರ ಬೇಡ್ಕೊಳ್ಳಿ. ಒಂದು ಉತ್ರ ಆದ್ರೂ ಹೇಳಬೇಕು ಅನ್ನೋ ಗುರಿ ಇಡಿ. w23.04 21 ¶6-8

ಸೋಮವಾರ, ಆಗಸ್ಟ್‌ 4

ಎದೆಕವಚ . . . ಶಿರಸ್ತ್ರಾಣ ಹಾಕೊಳ್ಳೋಣ.—1 ಥೆಸ. 5:8.

ಯುದ್ಧಕ್ಕಾಗಿ ಯಾವಾಗ್ಲೂ ಎಚ್ಚರವಾಗಿದ್ದು ತಯಾರಾಗಿ ಇರೋ ಸೈನಿಕರಿಗೆ ಪೌಲ ನಮ್ಮನ್ನ ಹೋಲಿಸಿದ್ದಾನೆ. ಯುದ್ಧಕ್ಕೆ ಒಬ್ಬ ಸೈನಿಕ ಯಾವಾಗ್ಲೂ ರೆಡಿ ಇರಬೇಕು. ಅದೇ ತರ ನಾವು ಕೂಡ ಯೆಹೋವನ ದಿನಕ್ಕೆ ರೆಡಿ ಇರಬೇಕು. ಯಾಕಂದ್ರೆ ಯೆಹೋವನ ದಿನ ಯಾವಾಗ ಬೇಕಾದ್ರೂ ಬರಬಹುದು. ಹಾಗಾಗಿ ನಂಬಿಕೆ ಮತ್ತು ಪ್ರೀತಿಯ ಎದೆಕವಚ ಮತ್ತು ನಿರೀಕ್ಷೆಯ ಶಿರಸ್ತ್ರಾಣವನ್ನ ಹಾಕೊಂಡು ನಾವು ಯಾವಾಗ್ಲೂ ತಯಾರಾಗಿ ಇರಬೇಕು. ಎದೆಕವಚ ಸೈನಿಕರ ಹೃದಯ ಕಾಪಾಡ್ತಿತ್ತು. ಅದೇ ತರ ನಂಬಿಕೆ ಮತ್ತು ಪ್ರೀತಿ ಅನ್ನೋ ಗುಣಗಳು ನಮ್ಮ ಹೃದಯನ ಕಾಪಾಡುತ್ತೆ. ಈ ಗುಣಗಳು ನಾವು ಯೆಹೋವನ ಸೇವೆಯನ್ನ ಮಾಡ್ತಾ ಇರೋಕೆ ಮತ್ತು ಯೇಸು ತೋರಿಸ್ಕೊಟ್ಟ ದಾರಿಯಲ್ಲಿ ನಡೀತಾ ಇರೋಕೆ ಸಹಾಯ ಮಾಡುತ್ತೆ. ನಮಗೆ ನಂಬಿಕೆ ಇದ್ರೆ ಯೆಹೋವನನ್ನ ಪೂರ್ಣ ಹೃದಯದಿಂದ ಆರಾಧನೆ ಮಾಡುವವ್ರಿಗೆ ಆತನು ಪ್ರತಿಫಲ ಕೊಟ್ಟೇ ಕೊಡ್ತಾನೆ ಅನ್ನೋ ಗ್ಯಾರಂಟಿ ನಮಗೆ ಇರುತ್ತೆ. (ಇಬ್ರಿ. 11:6) ಅಷ್ಟೇ ಅಲ್ಲ, ಏನೇ ಕಷ್ಟ ಬಂದ್ರೂ ನಮ್ಮ ನಾಯಕನಾದ ಯೇಸುಗೆ ನಿಯತ್ತಾಗಿ ಇರ್ತೀವಿ. ನಮ್ಮಲ್ಲಿ ನಂಬಿಕೆ ಜಾಸ್ತಿ ಇದ್ರೆ ಕಷ್ಟಗಳು ಬಂದಾಗ ಅದನ್ನ ಧೈರ್ಯವಾಗಿ ಎದುರಿಸ್ತೀವಿ. ನಾವು ನಂಬಿಕೆ ಬೆಳೆಸ್ಕೊಳ್ಳೋದು ಹೇಗೆ? ಹಣಕಾಸಿನ ಸಮಸ್ಯೆ ಅಥವಾ ಹಿಂಸೆ ಬಂದಾಗ ನಮ್ಮ ಸಹೋದರ ಸಹೋದರಿಯರು ಹೇಗೆ ನಂಬಿಕೆ ತೋರಿಸಿದ್ರು ಅನ್ನೋದನ್ನ ತಿಳ್ಕೊಬೇಕು. ಆಗ ಅವ್ರ ತರ ನಾವು ಕೂಡ ಹಣದ ಹಿಂದೆ ಹೋಗಲ್ಲ. ನಮ್ಮ ಜೀವನವನ್ನ ಸರಳ ಮಾಡ್ಕೊಳ್ತೀವಿ. ನಮಗೆ ಯೆಹೋವ ದೇವರ ಸೇವೆ ಮಾಡೋದೇ ಮುಖ್ಯ ಅಂತ ತೋರಿಸ್ಕೊಡ್ತೀವಿ. w23.06 10 ¶8-9

ಮಂಗಳವಾರ, ಆಗಸ್ಟ್‌ 5

ಮೋಡ ನೋಡ್ಕೊಂಡು ಇರುವವನು ಬೆಳೆ ಕೊಯ್ಯಲ್ಲ.—ಪ್ರಸಂ. 11:4.

ಸ್ವನಿಯಂತ್ರಣ ಬೆಳೆಸ್ಕೊಳ್ಳೋಕೆ ಯೆಹೋವನ ಸಹಾಯ ಕೇಳಿ. ಸ್ವನಿಯಂತ್ರಣ ಅಂದ್ರೆ ನಾವು ನಡ್ಕೊಳ್ಳೋ ರೀತಿಯನ್ನ, ನಮ್ಮ ಭಾವನೆಗಳನ್ನ ಹಿಡಿತದಲ್ಲಿ ಇಟ್ಕೊಂಡು ಇರೋದು. ಒಂದು ಒಳ್ಳೇ ವಿಷ್ಯವನ್ನ ಮಾಡೋಕೆ ಮನಸ್ಸು ಇಲ್ಲದೆ ಇದ್ದಾಗ್ಲೂ ಅದನ್ನ ಮಾಡೋಕೆ ನಮಗೆ ಸ್ವನಿಯಂತ್ರಣ ಬೇಕು. ಸ್ವನಿಯಂತ್ರಣ ಪವಿತ್ರಶಕ್ತಿಯಿಂದ ಬರೋ ಒಂದು ಗುಣ. ಹಾಗಾಗಿ ಅದನ್ನ ಬೆಳೆಸ್ಕೊಳ್ಳೋಕೆ ನಮಗೆ ಯೆಹೋವನ ಸಹಾಯ ಬೇಕೇ ಬೇಕು. (ಲೂಕ 11:13; ಗಲಾ. 5:22, 23) ಸರಿಯಾದ ಸಮಯ ಬರಲಿ ಅಂತ ಕಾಯ್ತಾ ಇರಬೇಡಿ. ನೀವು ಆ ತರ ಕಾಯ್ತಾ ಕೂತ್ರೆ ನಿಮ್ಮ ಗುರಿನ ಮುಟ್ಟೋಕೇ ಆಗಲ್ಲ. ಯಾಕಂದ್ರೆ ಈ ಲೋಕದಲ್ಲಿ ಪರಿಸ್ಥಿತಿ ಯಾವಾಗ್ಲೂ ನಾವು ಅಂದ್ಕೊಂಡ ಹಾಗೆ ಇರಲ್ಲ. ಕೆಲವೊಮ್ಮೆ ನಾವು ತುಂಬ ದೊಡ್ಡ ಗುರಿಗಳನ್ನ ಇಟ್ಟಾಗ ಅದನ್ನ ಮುಟ್ಟೋಕೆ ಕಷ್ಟ ಅಂತ ಅನಿಸಬಹುದು. ಅದಕ್ಕೆ ಮೊದಲು ಚಿಕ್ಕಚಿಕ್ಕ ಗುರಿಗಳನ್ನ ಇಡಿ. ಉದಾಹರಣೆಗೆ, ಒಂದು ಗುಣ ಬೆಳೆಸ್ಕೊಬೇಕು ಅಂತ ನೀವು ಗುರಿ ಇಟ್ಟಿದ್ರೆ, ಆ ಗುಣನ ಚಿಕ್ಕಚಿಕ್ಕ ವಿಷ್ಯಗಳಲ್ಲಿ ತೋರಿಸೋಕೆ ಪ್ರಯತ್ನ ಮಾಡಿ. ಒಂದುವೇಳೆ ನೀವು ಬೈಬಲನ್ನ ಓದಿ ಮುಗಿಸಬೇಕು ಅನ್ನೋ ಗುರಿ ಇಟ್ಟಿದ್ರೆ, ಮೊದ್ಲು ಸ್ವಲ್ಪ ಸಮಯ ಮಾತ್ರ ಓದೋಕೆ ಶೆಡ್ಯೂಲ್‌ ಮಾಡ್ಕೊಳ್ಳಿ. w23.05 29 ¶11-13

ಬುಧವಾರ, ಆಗಸ್ಟ್‌ 6

ಆದ್ರೆ ನೀತಿವಂತನ ದಾರಿ ಬೆಳಿಗ್ಗೆ ಕಾಣೋ ಕಿರಣಗಳ ತರ ಹೊಳೆಯುತ್ತೆ, ಮಟಮಟ ಮಧ್ಯಾಹ್ನ ಆಗ್ತಾ ಆ ಬೆಳಕು ಹೆಚ್ಚಾಗ್ತಾನೇ ಹೋಗುತ್ತೆ.—ಜ್ಞಾನೋ. 4:18.

ಕೊನೇ ದಿನಗಳಲ್ಲಿ ನಾವು ‘ಪವಿತ್ರ ದಾರಿಯಲ್ಲಿ’ ನಡೀತಾ ಮುಂದೆ ಸಾಗೋಕೆ ಬೇಕಾದ ಸಹಾಯವನ್ನ ದೇವರು ತನ್ನ ಸಂಘಟನೆಯಿಂದ ಕೊಡ್ತಾ ಇದ್ದಾನೆ. (ಯೆಶಾ. 48:17; 60:17) ಒಬ್ಬ ವ್ಯಕ್ತಿ ಬೈಬಲನ್ನ ಕಲಿಯೋಕೆ ಶುರು ಮಾಡಿದಾಗ ‘ಪವಿತ್ರ ದಾರಿಯಲ್ಲಿ’ ಕಾಲಿಟ್ಟ ಹಾಗೆ ಇರುತ್ತೆ. ಕೆಲವರು ಆ ದಾರಿಯಲ್ಲಿ ಸ್ವಲ್ಪ ದೂರ ಹೋಗಿ ಬಿಟ್ಟುಬಿಟ್ಟಿದ್ದಾರೆ. ಇನ್ನು ಕೆಲವರು ಏನೇ ಆದ್ರೂ ಆ ದಾರಿಯಲ್ಲೇ ನಡೀತಾ ಇದ್ದಾರೆ. ಆ ದಾರಿ ಅವ್ರನ್ನ ಎಲ್ಲಿಗೆ ಕರ್ಕೊಂಡು ಹೋಗುತ್ತೆ? “ಪವಿತ್ರ ದಾರಿ” ಕೆಲವ್ರನ್ನ ‘ಸ್ವರ್ಗದಲ್ಲಿರೋ ದೇವರ ಪರದೈಸಿಗೆ’ ಕರ್ಕೊಂಡು ಹೋಗುತ್ತೆ. (ಪ್ರಕ. 2:7) ಇನ್ನು ಕೆಲವ್ರನ್ನ 1,000 ವರ್ಷದ ಆಳ್ವಿಕೆ ಕೊನೇ ತನಕ ಕರ್ಕೊಂಡು ಹೋಗುತ್ತೆ. ಅಲ್ಲಿ ಅವರು ಪರಿಪೂರ್ಣರಾಗ್ತಾರೆ. ಹಾಗಾಗಿ ನಾವು ಆ ‘ಪವಿತ್ರ ದಾರಿಯಲ್ಲೇ’ ನಡೀತಾ ಇರೋಣ. ಹಿಂದೆ ಬಿಟ್ಟುಬಂದಿರೋ ವಿಷ್ಯಗಳ ಬಗ್ಗೆ ಯೋಚ್ನೆ ಮಾಡದೆ ಮುಂದೆ ಸಾಗುತ್ತಾ ಇರೋಣ. ಹೊಸ ಲೋಕಕ್ಕೆ ಹೋಗಿ ತಲುಪೋಣ. w23.05 17 ¶15; 19 ¶16-18

ಗುರುವಾರ, ಆಗಸ್ಟ್‌ 7

ದೇವರು ಮೊದ್ಲು ನಮ್ಮನ್ನ ಪ್ರೀತಿಸಿರೋದ್ರಿಂದ ನಾವು ಪ್ರೀತಿ ತೋರಿಸ್ತೀವಿ.—1 ಯೋಹಾ. 4:19.

ಯೆಹೋವ ನಿಮಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ಯೋಚ್ನೆ ಮಾಡುವಾಗ, ಆತನಿಗೆ ನಿಮ್ಮನ್ನ ಸಮರ್ಪಿಸ್ಕೊಬೇಕು ಅನ್ನೋ ಆಸೆ ಬರುತ್ತೆ. (ಕೀರ್ತನೆ 116:12-14) “ಎಲ್ಲ ಒಳ್ಳೇ ಬಹುಮಾನ, ಒಳ್ಳೇ ವರ” ಕೊಟ್ಟಿರೋದು ಯೆಹೋವನೇ ಅಂತ ಬೈಬಲ್‌ ಹೇಳುತ್ತೆ. (ಯಾಕೋ. 1:17) ಯೆಹೋವ ಕೊಟ್ಟಿರೋದ್ರಲ್ಲೇ ದೊಡ್ಡ ಗಿಫ್ಟ್‌ ಯಾವುದು ಗೊತ್ತಾ? ಯೇಸು ಕ್ರಿಸ್ತನ ಬಿಡುಗಡೆ ಬೆಲೆ. ಆ ಬಿಡುಗಡೆ ಬೆಲೆಯಿಂದ ನಿಮಗೆ ಯೆಹೋವನ ಜೊತೆ ಒಳ್ಳೇ ಫ್ರೆಂಡ್‌ಶಿಪ್‌ ಬೆಳೆಸ್ಕೊಳ್ಳೋಕೆ ಆಗಿದೆ, ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಸಿಕ್ಕಿದೆ. (1 ಯೋಹಾ. 4:9, 10) ಯೆಹೋವ ನಿಮಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅಂತ ನೆನಸ್ಕೊಂಡಾಗ ನಿಮ್ಮನ್ನ ಆತನಿಗೆ ಸಮರ್ಪಿಸ್ಕೊಳ್ಳೋಕೆ ಮುಂದೆ ಬರ್ತೀರ.—ಧರ್ಮೋ. 16:17; 2 ಕೊರಿಂ. 5:15. w24.03 5 ¶8

ಶುಕ್ರವಾರ, ಆಗಸ್ಟ್‌ 8

ಸರಿಯಾದ ದಾರಿಯಲ್ಲಿ ನಡಿಯುವವನಿಗೆ ಯೆಹೋವನ ಭಯ ಇರುತ್ತೆ.—ಜ್ಞಾನೋ. 14:2.

ಲೋಟನ ಕಾಲದಲ್ಲಿ ಜನ ತುಂಬ ಕೆಟ್ಟುಹೋಗಿದ್ರು. “ನಾಚಿಕೆ ಇಲ್ಲದ ಕೆಟ್ಟ ಕೆಲಸಗಳನ್ನ ಮಾಡ್ತಿದ್ದ ಜನ್ರನ್ನ ನೋಡಿ [ಅವನು] ತುಂಬ ನೊಂದುಕೊಂಡಿದ್ದ.” (2 ಪೇತ್ರ 2:7, 8) ತನ್ನ ಸುತ್ತಮುತ್ತ ಜನ ಹೀಗಿದ್ರೂ ಲೋಟ ಅವ್ರ ತರ ಆಗಲಿಲ್ಲ. ಯಾಕಂದ್ರೆ ಅವನಿಗೆ ದೇವರ ಮೇಲೆ ಭಯ ಇತ್ತು, ಪ್ರೀತಿ ಇತ್ತು. ದೇವರಿಗೆ ಇಂಥ ಕೆಟ್ಟ ನಡತೆ ಇಷ್ಟ ಇಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಇವತ್ತು ಕೂಡ ನಮ್ಮ ಸುತ್ತಮುತ್ತ ಇರೋ ಜನ್ರು ಹೀಗೇ ಇದ್ದಾರೆ. ಆದ್ರೆ ನಾವು ನೈತಿಕವಾಗಿ ಶುದ್ಧವಾಗಿ ಇರಬೇಕಂದ್ರೆ ನಮಗೆ ಯೆಹೋವನ ಮೇಲೆ ಭಯ ಮತ್ತು ಪ್ರೀತಿ ಇರಬೇಕು. ಅದಕ್ಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಅದಕ್ಕಂತಾನೇ ಜ್ಞಾನೋಕ್ತಿ ಪುಸ್ತಕದಲ್ಲಿ ಎಷ್ಟೋ ಬುದ್ಧಿಮಾತುಗಳನ್ನ ಬರೆಸಿಟ್ಟಿದ್ದಾನೆ. ಗಂಡಸರು, ಹೆಂಗಸರು, ಚಿಕ್ಕವರು, ದೊಡ್ಡವರು ಎಲ್ರೂ ಈ ಬುದ್ಧಿಮಾತುಗಳನ್ನ ಪಾಲಿಸಿದ್ರೆ ತುಂಬ ಪ್ರಯೋಜನ ಆಗುತ್ತೆ. ನಮಗೆ ಯೆಹೋವ ದೇವರ ಮೇಲೆ ಭಯ ಇದ್ರೆ ಕೆಟ್ಟವ್ರ ಸಹವಾಸ ಮಾಡೋಕೆ ಹೋಗಲ್ಲ. w23.06 20 ¶1-2; 21 ¶5

ಶನಿವಾರ, ಆಗಸ್ಟ್‌ 9

ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ಪ್ರತಿದಿನ ತನ್ನ ಹಿಂಸಾ ಕಂಬ ಹೊತ್ಕೊಂಡು ನನ್ನ ಹಿಂದೆನೇ ಬರಲಿ.—ಲೂಕ 9:23.

ನಿಮ್ಮಲ್ಲಿ ಕೆಲವರು ಕುಟುಂಬದವ್ರಿಂದಾನೇ ಹಿಂಸೆ ಅನುಭವಿಸ್ತಾ ಇರಬಹುದು. ಇನ್ನು ಕೆಲವರು ಯೆಹೋವನ ಸೇವೆ ಜಾಸ್ತಿ ಮಾಡೋಕೆ ಹಣ, ಆಸ್ತಿನೆಲ್ಲ ಬಿಟ್ಟು ಬಂದಿರಬಹುದು. (ಮತ್ತಾ. 6:33) ನೀವು ಮಾಡೋ ಈ ತ್ಯಾಗಗಳನ್ನ ಯೆಹೋವ ನೋಡ್ತಿದ್ದಾನೆ ಅನ್ನೋದನ್ನ ಯಾವತ್ತೂ ಮರಿಬೇಡಿ. (ಇಬ್ರಿ. 6:10) ಯೇಸು ತನ್ನ ಶಿಷ್ಯರಿಗೆ, “ನನ್ನ ಶಿಷ್ಯರಾಗಿರೋ ಕಾರಣ ಮತ್ತು ಸಿಹಿಸುದ್ದಿಯ ಕಾರಣ ಮನೆ, ಅಣ್ಣತಮ್ಮ, ಅಕ್ಕತಂಗಿ, ಅಪ್ಪಅಮ್ಮ, ಮಕ್ಕಳು, ಹೊಲಗದ್ದೆಯನ್ನ ಬಿಟ್ಟುಬಂದವನಿಗೆ ಈಗಿನ ಲೋಕದಲ್ಲಿ ಹಿಂಸೆಯ ಜೊತೆಗೆ ಮನೆ, ಅಣ್ಣತಮ್ಮ, ಅಕ್ಕತಂಗಿ, ಅಮ್ಮ, ಮಕ್ಕಳು, ಹೊಲ ನೂರರಷ್ಟು ಸಿಗುತ್ತೆ ಮತ್ತು ಮುಂದೆ ಬರೋ ಹೊಸ ಲೋಕದಲ್ಲಿ ಶಾಶ್ವತ ಜೀವ ಸಿಗುತ್ತೆ” ಅಂತ ಹೇಳಿದನು. (ಮಾರ್ಕ 10:29, 30) ಈ ಮಾತು ನಿಮ್ಮ ಜೀವನದಲ್ಲೂ ನಿಜ ಆಗಿದೆ ಅಲ್ವಾ? ನಿಮಗೆ ಸಿಕ್ಕಿರೋ ಆಶೀರ್ವಾದಗಳಿಗೆ ಹೋಲಿಸಿದ್ರೆ ನೀವು ಮಾಡಿರೋ ತ್ಯಾಗಗಳು ಏನೇನೂ ಅಲ್ಲ ಅಂತ ನಿಮಗೆ ಅನಿಸಬಹುದು.—ಕೀರ್ತ. 37:4. w24.03 9 ¶5

ಭಾನುವಾರ, ಆಗಸ್ಟ್‌ 10

ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.—ಜ್ಞಾನೋ. 17:17.

ಒಂದು ಸಲ ಯೂದಾಯದಲ್ಲಿ ದೊಡ್ಡ ಬರಗಾಲ ಬಂತು. ಇದ್ರಿಂದ ಅಲ್ಲಿದ್ದ ಕ್ರೈಸ್ತರಿಗೆ ತುಂಬ ಕಷ್ಟ ಆಯ್ತು. ಈ ವಿಷ್ಯ ಅಂತಿಯೋಕ್ಯ ಸಭೆಗೆ ಗೊತ್ತಾಯ್ತು. ಅಲ್ಲಿದ್ದ ಕ್ರೈಸ್ತರು ಯೂದಾಯದಲ್ಲಿದ್ದ ಸಹೋದರರ ಪರಿಸ್ಥಿತಿ ಬಗ್ಗೆ ಕೇಳಿ ‘ತಮ್ಮಿಂದಾದಷ್ಟು ಸಹಾಯ ಮಾಡಿ’ ಅವ್ರಿಗೆ ಅನುಕಂಪ ತೋರಿಸಿದ್ರು. (ಅ. ಕಾ. 11:27-30) ಬರಗಾಲದಿಂದ ಕಷ್ಟಪಡ್ತಿದ್ದ ಸಹೋದರರು ಅಂತಿಯೋಕ್ಯದಿಂದ ತುಂಬ ದೂರ ಇದ್ರು. ಆದ್ರೂ ಅಂತಿಯೋಕ್ಯದ ಸಹೋದರರು ಅವ್ರಿಗೆ ಹೇಗಾದ್ರೂ ಮಾಡಿ ಸಹಾಯ ಮಾಡ್ಲೇಬೇಕು ಅಂತ ನಿರ್ಧಾರ ಮಾಡಿದ್ರು. (1 ಯೋಹಾ. 3:17, 18) ನಾವು ಕೂಡ ವಿಪತ್ತಿಂದ ಕಷ್ಟಪಡ್ತಿರೋ ನಮ್ಮ ಸಹೋದರ ಸಹೋದರಿಯರಿಗೆ ಅನುಕಂಪ ತೋರಿಸಬೇಕು. ಹೇಗೆ? ಅವ್ರಿಗೆ ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರಬೇಕು. ವಿಪತ್ತು ಪರಿಹಾರ ಕೆಲಸ ನಡೀತಾ ಇದ್ರೆ ‘ನಾನು ಅಲ್ಲಿ ಹೋಗಿ ಸಹಾಯ ಮಾಡಬಹುದಾ?’ ಅಂತ ಹಿರಿಯರ ಹತ್ರ ನೀವು ಕೇಳಬಹುದು. ಕಷ್ಟದಲ್ಲಿರೋ ಸಹೋದರರಿಗೋಸ್ಕರ ಪ್ರಾರ್ಥನೆ ಮಾಡಬಹುದು. ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳನ್ನ ಕೊಡಬಹುದು. ಕೆಲವು ಸಲ ನಮ್ಮ ಸಹೋದರ ಸಹೋದರಿಯರಿಗೆ ಜೀವನ ಸಾಗಿಸೋಕೂ ಕಷ್ಟ ಆಗಬಹುದು. ಆಗ ನಾವು ಅವ್ರಿಗೆ ಬೇಕಾದ ವಸ್ತುಗಳನ್ನ ಕೊಟ್ಟು ಸಹಾಯ ಮಾಡಬೇಕು. ಯೇಸು ಕ್ರಿಸ್ತ ನ್ಯಾಯತೀರ್ಪು ಮಾಡೋಕೆ ಬರುವಾಗ ನಾವು ಹೀಗೆ ಅನುಕಂಪ ತೋರಿಸೋದನ್ನ ನೋಡಿ “ದೇವರ ಆಳ್ವಿಕೆಯ ಆಶೀರ್ವಾದಗಳನ್ನ ಆಸ್ತಿಯಾಗಿ” ಕೊಡ್ತಾನೆ.—ಮತ್ತಾ. 25:34-40. w23.07 4 ¶9-10; 6 ¶12

ಸೋಮವಾರ, ಆಗಸ್ಟ್‌ 11

ನಾನು ಹೇಳಿದ್ದೇ ಆಗಬೇಕು ಅನ್ನೋ ಗುಣ ನಿಮ್ಮಲ್ಲಿಲ್ಲ ಅಂತ ಎಲ್ರಿಗೂ ಗೊತ್ತಾಗ್ಲಿ.—ಫಿಲಿ. 4:5.

ಯೇಸು ಕೂಡ ಯೆಹೋವನ ತರಾನೇ ನಡ್ಕೊಂಡನು. ಆತನು ಜನ್ರ ಜೊತೆ ತುಂಬ ಕಟ್ಟುನಿಟ್ಟಾಗಿ ಇರಲಿಲ್ಲ. ಅವ್ರನ್ನ ಅರ್ಥ ಮಾಡ್ಕೊಳ್ತಿದ್ದನು. ಉದಾಹರಣೆಗೆ, ‘ದಾರಿತಪ್ಪಿದ ಕುರಿಗಳ ತರ ಇದ್ದ ಇಸ್ರಾಯೇಲ್ಯರಿಗೆ’ ಮಾತ್ರ ಸಾರೋಕೆ ಯೆಹೋವ ಯೇಸುನ ಭೂಮಿಗೆ ಕಳಿಸಿದ್ದನು. ಆದ್ರೂ ಒಂದು ಸಮಯದಲ್ಲಿ ಒಬ್ಬ ಸ್ತ್ರೀ ಯೇಸು ಹತ್ರ ಬಂದು “ಕೆಟ್ಟ ದೇವದೂತನ ಕಾಟದಿಂದ” ಕಷ್ಟಪಡ್ತಿದ್ದ ತನ್ನ ಮಗಳನ್ನ ವಾಸಿ ಮಾಡೋಕೆ ಬೇಡ್ಕೊಂಡಳು. ಆದ್ರೆ ಅವಳು ಇಸ್ರಾಯೇಲ್‌ ಜನಾಂಗದವಳಾಗಿರಲಿಲ್ಲ. ಆದ್ರೂ ಯೇಸು ಅವಳಿಗೆ ಕರುಣೆ ತೋರಿಸಿ ಅವಳ ಮಗಳನ್ನ ವಾಸಿ ಮಾಡಿದನು. (ಮತ್ತಾ. 15:21-28) ಇನ್ನೊಂದು ಉದಾಹರಣೆ ನೋಡಿ. ಯೇಸು ತನ್ನ ಸೇವೆಯನ್ನ ಶುರುಮಾಡಿದಾಗ್ಲೇ ಒಂದು ಮಾತು ಹೇಳಿದ್ದನು. ‘ಯಾರಾದ್ರೂ “ಯೇಸು ಯಾರಂತ ನಂಗೊತ್ತಿಲ್ಲ” ಅಂತ ಹೇಳಿದ್ರೆ ನಾನು ಕೂಡ “ಅವನು ಯಾರಂತ ನಂಗೂ ಗೊತ್ತಿಲ್ಲ” ಅಂತ ಹೇಳ್ತೀನಿ’ ಅಂದಿದ್ದನು. (ಮತ್ತಾ. 10:33) ಆದ್ರೆ ಪೇತ್ರ ‘ಯೇಸು ಯಾರಂತ ನಂಗೊತ್ತಿಲ್ಲ’ ಅಂತ ಮೂರು ಸಲ ಹೇಳಿದ. ಹಾಗಂತ ಯೇಸು ಪೇತ್ರನ ಕೈಬಿಟ್ನಾ? ಇಲ್ಲ, ಪೇತ್ರ ಪಶ್ಚಾತ್ತಾಪ ಪಟ್ಟಿದ್ದನ್ನ, ಅವನ ನಂಬಿಕೆಯನ್ನ ಗಮನಿಸಿದನು. ಯೇಸು ಮತ್ತೆ ಜೀವ ಪಡ್ಕೊಂಡು ಎದ್ದು ಬಂದಮೇಲೆ ಪೇತ್ರನಿಗೆ ಕಾಣಿಸ್ಕೊಂಡು ಅವನನ್ನ ಕ್ಷಮಿಸಿದ್ದೀನಿ, ಅವನನ್ನ ಈಗ್ಲೂ ಪ್ರೀತಿಸ್ತೀನಿ ಅಂತ ತೋರಿಸ್ಕೊಟ್ಟನು. (ಲೂಕ 24: 33, 34.) ಯೆಹೋವ ಮತ್ತು ಯೇಸು ಬಿಟ್ಕೊಡೋ ಗುಣವನ್ನ ತೋರಿಸೋ ತರ ನಾವು ತೋರಿಸಬೇಕು ಅಂತ ಯೆಹೋವ ಇಷ್ಟಪಡ್ತಾನೆ. w23.07 21 ¶6-7

ಮಂಗಳವಾರ, ಆಗಸ್ಟ್‌ 12

ಇನ್ಮುಂದೆ ಸಾವೇ ಇರಲ್ಲ.—ಪ್ರಕ. 21:4.

ಪರದೈಸ್‌ ಬಂದೇ ಬರುತ್ತೆ ಅಂತ ನಾವು ಮತ್ತು ಬೇರೆಯವರು ನಂಬಿಕೆ ಇಡೋಕೆ ಏನು ಮಾಡಬೇಕು? ಮೊದಲನೇದಾಗಿ, ಆ ಮಾತು ಕೊಟ್ಟಿರೋದು ಯೆಹೋವ. ಅದಕ್ಕೇ ಪ್ರಕಟನೆ ಪುಸ್ತಕದಲ್ಲಿ “ಸಿಂಹಾಸನದ ಮೇಲೆ ಕೂತಿದ್ದ ದೇವರು ಹೀಗೆ ಹೇಳಿದನು: ‘ನೋಡು, ನಾನು ಎಲ್ಲ ಹೊಸದಾಗಿ ಮಾಡ್ತೀನಿ’” ಅಂತಿದೆ. ತಾನು ಕೊಟ್ಟ ಮಾತನ್ನ ನಿಜ ಮಾಡೋಕೆ ಯೆಹೋವನಿಗೆ ಆಸೆ ಇದೆ. ಅಷ್ಟೇ ಅಲ್ಲ, ವಿವೇಕ ಮತ್ತು ಶಕ್ತಿನೂ ಇದೆ. ಎರಡನೇದಾಗಿ, ಯೆಹೋವನಿಗೆ ತಾನು ಅಂದ್ಕೊಂಡಿದ್ದು ಮುಂದೆ ಖಂಡಿತ ಆಗುತ್ತೆ ಅನ್ನೋ ಗ್ಯಾರಂಟಿ ಇರೋದ್ರಿಂದ, ಅದೆಲ್ಲ ಆತನ ದೃಷ್ಟಿಯಲ್ಲಿ ಈಗಾಗ್ಲೇ ಆಗಿದೆ. ಅದಕ್ಕೇ “ಇದನ್ನ ಜನ್ರು ನಂಬಬಹುದು ಯಾಕಂದ್ರೆ ಇದು ಸತ್ಯ. . . . ಅದೆಲ್ಲ ನಿಜ ಆಗಿದೆ!” ಅಂತ ಆತನು ಹೇಳ್ತಿದ್ದಾನೆ. ಮೂರನೇದಾಗಿ, ಯೆಹೋವ ಒಂದು ವಿಷ್ಯ ಶುರು ಮಾಡಿದ್ರೆ ಅದನ್ನ ಕೊನೆ ಮಾಡೇ ಮಾಡ್ತಾನೆ. ಅದಕ್ಕೇ “ನಾನೇ ಆಲ್ಫ, ನಾನೇ ಒಮೇಗ” ಅಂತ ಹೇಳಿದ್ದಾನೆ. (ಪ್ರಕ. 21:6) ಹೀಗೆ ಸೈತಾನ ಒಬ್ಬ ಸುಳ್ಳುಗಾರ, ತಾನು ಅಂದ್ಕೊಂಡಿದ್ದನ್ನ ತಡೆಯೋಕೆ ಅವನಿಗೆ ಆಗೋದೇ ಇಲ್ಲ ಅಂತ ಯೆಹೋವ ನಿರೂಪಿಸ್ತಾನೆ. ಬೇರೆಯವ್ರು “ಇದು ಕೇಳೋಕಷ್ಟೇ ಚೆನ್ನಾಗಿರುತ್ತೆ, ನಿಜ ಆಗಲ್ಲ” ಅಂತ ಹೇಳಬಹುದು. ಆಗ ಏನು ಮಾಡ್ತೀರ? ಪ್ರಕಟನೆ 21: 5 ಮತ್ತು 6ನೇ ವಚನವನ್ನ ಅವರಿಗೆ ತೋರಿಸಿ. ಆಗ ಯೆಹೋವ ದೇವರು ಈ ಮಾತುಗಳನ್ನ ಹೇಳಿ ಅದಕ್ಕೆ ಸಹಿ ಹಾಕಿದ್ದಾನೆ ಅಂತ ಅವ್ರಿಗೆ ಗೊತ್ತಾಗುತ್ತೆ.—ಯೆಶಾ. 65:16. w23.11 7 ¶18-19

ಬುಧವಾರ, ಆಗಸ್ಟ್‌ 13

ನಾನು ನಿನ್ನಿಂದ ಒಂದು ದೊಡ್ಡ ಜನಾಂಗ ಆಗೋ ತರ ಮಾಡ್ತೀನಿ.—ಆದಿ. 12:2.

ಅಬ್ರಹಾಮನಿಗೆ 75 ವರ್ಷ ಆಗಿದ್ದಾಗ ಯೆಹೋವ ಅವನಿಗೆ ಈ ಮಾತನ್ನ ಕೊಟ್ಟನು. ಈ ಮಾತು ಪೂರ್ತಿಯಾಗಿ ನೆರವೇರೋ ತನಕ ಅಬ್ರಹಾಮ ಬದುಕಿರಲಿಲ್ಲ. ಅವನು ಯೂಫ್ರೆಟಿಸ್‌ ನದಿ ದಾಟಿ 25 ವರ್ಷ ಆದ್ಮೇಲೆ ಅವನ ಮಗ ಹುಟ್ಟೋದನ್ನ, ಅದಾಗಿ 60 ವರ್ಷ ಆದ್ಮೇಲೆ ಮೊಮ್ಮಕ್ಕಳು ಹುಟ್ಟೋದನ್ನ ನೋಡಿದ ನಿಜ. (ಇಬ್ರಿ. 6:15) ಆದ್ರೆ ತನ್ನ ವಂಶದವರು ದೊಡ್ಡ ಜನಾಂಗ ಆಗೋದನ್ನ, ದೇವರು ಮಾತು ಕೊಟ್ಟ ದೇಶನ ಅವರು ವಶ ಮಾಡ್ಕೊಳ್ಳೋದನ್ನ ಅವನು ನೋಡಲಿಲ್ಲ. ಆದ್ರೂ ಅವನು ಸಾಯೋ ತನಕ ಯೆಹೋವನಿಗೆ ಒಳ್ಳೇ ಸ್ನೇಹಿತನಾಗಿದ್ದ. (ಯಾಕೋ. 2:23) ಅಬ್ರಹಾಮ ಹೊಸ ಲೋಕದಲ್ಲಿ ಮತ್ತೆ ಜೀವ ಪಡ್ಕೊಂಡು ಎದ್ದುಬಂದಾಗ ಅವನಿಗೆ ಹೇಗೆ ಅನಿಸಬಹುದು ಅಂತ ಸ್ವಲ್ಪ ಯೋಚ್ನೆ ಮಾಡಿ. ಅವನು ತೋರಿಸಿದ ತಾಳ್ಮೆ ಮತ್ತು ನಂಬಿಕೆಯಿಂದ ಭೂಮಿಯಲ್ಲಿರೋ ಎಲ್ಲಾ ಜನ್ರಿಗೆ ಆಶೀರ್ವಾದ ಸಿಕ್ಕಿರೋದನ್ನ ನೋಡಿದಾಗ ಅವನಿಗೆ ಎಷ್ಟು ಖುಷಿ ಆಗುತ್ತೆ ಅಲ್ವಾ! (ಆದಿ. 22:18) ಯೆಹೋವ ಕೊಟ್ಟಿರೋ ಎಲ್ಲಾ ಮಾತು ನಿಜ ಆಗೋದನ್ನ ನಮಗೂ ನೋಡೋಕೆ ಆಗದೆ ಇರಬಹುದು. ಆದ್ರೂ ನಾವು ಅಬ್ರಹಾಮನ ತರ ತಾಳ್ಮೆ ತೋರಿಸಬೇಕು. ಆಗ ಯೆಹೋವ ಈಗಷ್ಟೇ ಅಲ್ಲ ಹೊಸ ಲೋಕದಲ್ಲೂ ನಮ್ಮನ್ನ ಆಶೀರ್ವದಿಸ್ತಾನೆ.—ಮಾರ್ಕ 10:29, 30. w23.08 24 ¶14

ಗುರುವಾರ, ಆಗಸ್ಟ್‌ 14

ಉಜ್ಜೀಯ ಯೆಹೋವನನ್ನ ಹುಡುಕ್ತಿದ್ದಾಗೆಲ್ಲ ಸತ್ಯ ದೇವರ ಆಶೀರ್ವಾದದಿಂದ ಅಭಿವೃದ್ಧಿ ಆಗ್ತಾ ಹೋದ.—2 ಪೂರ್ವ. 26:5.

ಇವನು ಚಿಕ್ಕ ವಯಸ್ಸಲ್ಲಿ ತುಂಬ ದೀನನಾಗಿದ್ದ. ‘ಸತ್ಯ ದೇವರ ಮೇಲೆ ಭಯ-ಭಕ್ತಿ ಬೆಳೆಸ್ಕೊಂಡಿದ್ದ.’ ಹೀಗೆ 68 ವರ್ಷಗಳ ತನಕ ಖುಷಿಯಾಗಿದ್ದ ಮತ್ತು ಯೆಹೋವನ ಆಶೀರ್ವಾದ ಅವನ ಮೇಲಿತ್ತು. (2 ಪೂರ್ವ. 26:1-4) ಅದಿಕ್ಕೆ ಅವನು ಎಷ್ಟೋ ಶತ್ರುಗಳನ್ನ ಸೋಲಿಸಿ ಯೆರೂಸಲೇಮನ್ನ ಕಾಪಾಡ್ತಾ ಬಂದ. (2 ಪೂರ್ವ. 26:6-15) ಹಾಗಾಗಿ ಉಜ್ಜೀಯ ಜೀವನದಲ್ಲಿ ಸಂತೋಷವಾಗಿದ್ದ. (ಪ್ರಸಂ. 3:12, 13) ಇವನು ರಾಜನಾಗಿದ್ರಿಂದ ಎಲ್ರಿಗೂ ಆಜ್ಞೆ ಕೊಡ್ತಿದ್ದ. ಜನ್ರೂ ಅದನ್ನೇ ಮಾಡಬೇಕಿತ್ತು. ಇದು ಅವನಲ್ಲಿ ‘ನಾನು ಏನು ಮಾಡಿದ್ರೂ ನಡಿಯುತ್ತೆ’ ಅನ್ನೋ ಭಾವನೆ ಬರೋ ತರ ಮಾಡ್ತಾ? ಒಂದಿನ ಉಜ್ಜೀಯ ಆಲಯದಲ್ಲಿ ಧೂಪ ಹಾಕೋಕೆ ಆಲಯದ ಒಳಗೇ ಹೋಗಿಬಿಟ್ಟ. ರಾಜರು ಇದನ್ನ ಮಾಡೋ ಹಾಗಿರಲಿಲ್ಲ. (2 ಪೂರ್ವ. 26:16-18) ಹೀಗೆ ಮಾಡಬೇಡ ಅಂತ ಮಹಾ ಪುರೋಹಿತ ಅಜರ್ಯ ಹೇಳಿದ. ಆದ್ರೆ ಉಜ್ಜೀಯ ಅವನ ಮಾತು ಕೇಳಲಿಲ್ಲ, ತುಂಬ ಕೋಪ ಮಾಡ್ಕೊಂಡ. ಈ ತರ ಅಹಂಕಾರ ತೋರಿಸಿದ್ರಿಂದ ಇಷ್ಟು ವರ್ಷ ಮಾಡಿದ ಸೇವೆಯೆಲ್ಲಾ ಮಣ್ಣುಪಾಲು ಆಯ್ತು. ಯೆಹೋವ ಇವನಿಗೆ ಕುಷ್ಠರೋಗ ಬರೋ ತರ ಮಾಡಿದನು. (2 ಪೂರ್ವ. 26:19-21) ಒಂದುವೇಳೆ ಉಜ್ಜೀಯ ದೀನನಾಗಿ ಇದ್ದಿದ್ರೆ ಅವನ ಜೀವನ ಎಷ್ಟು ಚೆನ್ನಾಗಿ ಇರ್ತಿತ್ತು ಅಲ್ವಾ! w23.09 10 ¶9-10

ಶುಕ್ರವಾರ, ಆಗಸ್ಟ್‌ 15

ಅವರು ಬಂದಾಗ ಇವ್ರನ್ನ ಬಿಟ್ಟು ದೂರಹೋದ. ಯಾಕಂದ್ರೆ ಸುನ್ನತಿ ಆದವ್ರಿಗೆ ಅವನು ಹೆದರಿದ.—ಗಲಾ. 2:12.

ಪೇತ್ರ ಅಭಿಷಿಕ್ತನಾದ ಮೇಲೂ ಅವನಿಂದ ಕೆಲವು ತಪ್ಪುಗಳಾಯ್ತು. ಕ್ರಿಸ್ತ ಶಕ 36ರಲ್ಲಿ ಯೆಹೋವ ದೇವರು ಪೇತ್ರನನ್ನ ಕೊರ್ನೇಲ್ಯನ ಹತ್ರ ಕಳಿಸಿದ್ರು. ಕೊರ್ನೇಲ್ಯ ಯೆಹೂದ್ಯನಾಗಿರಲಿಲ್ಲ. ಆದ್ರೂ ಯೆಹೋವ ದೇವರು ಅವನನ್ನ ಪವಿತ್ರಶಕ್ತಿಯಿಂದ ಅಭಿಷೇಕಿಸಿದನು. ಇದ್ರಿಂದ ಪೇತ್ರನಿಗೆ “ದೇವರು ಭೇದಭಾವ ಮಾಡಲ್ಲ,” ಯೆಹೂದ್ಯರಲ್ಲದ ಜನ್ರನ್ನೂ ಸಭೆಗೆ ಸೇರಿಸ್ಕೊಳ್ತಾನೆ ಅಂತ ಗೊತ್ತಾಯ್ತು. (ಅ. ಕಾ. 10:34, 44, 45) ಅವತ್ತಿಂದ ಪೇತ್ರ ಯೆಹೂದ್ಯರಲ್ಲದವ್ರ ಜೊತೆ ಊಟ ಮಾಡೋಕೆ ಶುರು ಮಾಡಿದ. ಆದ್ರೆ ಈ ತರ ಮಾಡೋದು ತಪ್ಪು ಅಂತ ಕೆಲವು ಯೆಹೂದಿ ಕ್ರೈಸ್ತರು ಅಂದ್ಕೊಳ್ತಿದ್ರು. ಅಂಥವ್ರಲ್ಲಿ ಕೆಲವರು ಅಂತಿಯೋಕ್ಯಕ್ಕೆ ಬಂದ್ರು. ಪೇತ್ರ ಅವ್ರಿಗೆ ಹೆದರಿ ಬೇರೆ ಜನಾಂಗದವರ ಜೊತೆ ಊಟ ಮಾಡೋದನ್ನ ನಿಲ್ಲಿಸಿಬಿಟ್ಟ. ತಾನು ಹೀಗೆ ಊಟ ಮಾಡೋದನ್ನ ನೋಡಿ ಅವ್ರಿಗೆಲ್ಲಿ ಬೇಜಾರಾಗುತ್ತೋ ಅಂತ ಅವನು ಅಂದ್ಕೊಂಡಿರಬಹುದು. ಆಗ ಪೌಲ ಎಲ್ರ ಮುಂದೆ ಪೇತ್ರನನ್ನ ತಿದ್ದಿದ. (ಗಲಾ. 2:13, 14) ಆಗ ಪೇತ್ರ ತನ್ನ ತಪ್ಪನ್ನ ತಿದ್ಕೊಂಡು ಸರಿಯಾಗಿ ಇರೋದನ್ನ ಮಾಡೋಕೆ ಪ್ರಯತ್ನ ಮಾಡಿದ. w23.09 22 ¶8

ಶನಿವಾರ, ಆಗಸ್ಟ್‌ 16

ನಿಮ್ಮನ್ನ ಗಟ್ಟಿ ನೆಲದ ಮೇಲೆ ನಿಲ್ಲಿಸ್ತಾನೆ.—1 ಪೇತ್ರ 5:10.

ನೀವು ನಿಮ್ಮನ್ನೇ ಪರೀಕ್ಷೆ ಮಾಡ್ಕೊಳ್ಳುವಾಗ ಯಾವುದೋ ಒಂದು ವಿಷ್ಯನ ನೀವು ಸರಿಯಾಗಿ ಮಾಡ್ತಿಲ್ಲ ಅಂತ ಗೊತ್ತಾದ್ರೆ ಬೇಜಾರ್‌ ಮಾಡ್ಕೊಬೇಡಿ. ‘ನಮ್ಮ ಒಡೆಯ ದಯೆ ತೋರಿಸ್ತಾನೆ,’ ನಮಗೆ ಸಹಾಯನೂ ಮಾಡ್ತಾನೆ. (1 ಪೇತ್ರ 2:3) ಅಷ್ಟೇ ಅಲ್ಲ, “ದೇವರೇ ನಿಮ್ಮ ಆ ತರಬೇತಿಯನ್ನ ಮುಗಿಸಿ ನಿಮ್ಮನ್ನ ಬಲಪಡಿಸ್ತಾನೆ” ಅಂತ ಪೇತ್ರ ಹೇಳಿದ್ದಾನೆ. ಯೇಸು ಮುಂದೆ ನಿಂತ್ಕೊಳ್ಳೋಕೂ ತನಗೆ ಯೋಗ್ಯತೆ ಇಲ್ಲ ಅಂತ ಪೇತ್ರ ಒಂದು ಕಾಲದಲ್ಲಿ ಅಂದ್ಕೊಂಡಿದ್ದ. (ಲೂಕ 5:8) ಆದ್ರೆ ಯೆಹೋವ ಮತ್ತು ಯೇಸು ಅವನಿಗೆ ಸಹಾಯ ಮಾಡಿದ್ರು. ಇದ್ರಿಂದ ಅವನು ಎಷ್ಟು ಸಲ ತಪ್ಪು ಮಾಡಿದ್ರೂ ಅದನ್ನ ಸರಿ ಮಾಡ್ಕೊಂಡು ಯೇಸು ಜೊತೆನೇ ಇದ್ದ. ಆತನನ್ನ ಬಿಟ್ಟುಹೋಗಲಿಲ್ಲ. ಹೀಗೆ ‘ಅವನಿಗೆ ನಮ್ಮ ಪ್ರಭು ಯೇಸು ಕ್ರಿಸ್ತನ ಆಳ್ವಿಕೆಯಲ್ಲಿ ಇರೋಕೆ’ ಅವಕಾಶ ಸಿಕ್ತು. (2 ಪೇತ್ರ 1:11) ಎಂಥ ದೊಡ್ಡ ಬಹುಮಾನ ಅಲ್ವಾ? ನೀವು ಕೂಡ ಪೇತ್ರನ ತರ ಸರಿಯಾಗಿರೋದನ್ನ ಮಾಡೋಕೆ ಪ್ರಯತ್ನ ಮಾಡ್ತಾ ಇದ್ರೆ, ಯೆಹೋವನಿಂದ ಸಿಗೋ ತರಬೇತಿನ ಪಡ್ಕೊಳ್ತಾ ಇದ್ರೆ, ‘ನಿಮಗೂ ಶಾಶ್ವತ ಜೀವ’ ಸಿಗುತ್ತೆ. ನಿಮ್ಮ ನಂಬಿಕೆ ನಿಮ್ಮನ್ನ ಕಾಪಾಡುತ್ತೆ ಅನ್ನೋ ಭರವಸೆ ಸುಳ್ಳಾಗಲ್ಲ.—1 ಪೇತ್ರ 1:9. w23.09 31 ¶16-17

ಭಾನುವಾರ, ಆಗಸ್ಟ್‌ 17

ಹಾಗಾಗಿ ದೇವರನ್ನ ಆರಾಧಿಸಿ. ಯಾಕಂದ್ರೆ ಆಕಾಶ, ಭೂಮಿ . . . ಸೃಷ್ಟಿಮಾಡಿದ್ದು ಆತನೇ.—ಪ್ರಕ. 14:7.

ಪವಿತ್ರ ಡೇರೆಯ ಮುಂದೆ ಒಂದು ದೊಡ್ಡ ಅಂಗಳ ಇತ್ತು. ಅದಕ್ಕೆ ಬೇಲಿ ಹಾಕಿದ್ರು. ಆ ಅಂಗಳದಲ್ಲಿ ತಾಮ್ರದ ಬಲಿಪೀಠ ಇತ್ತು. ಅಲ್ಲಿ ಪುರೋಹಿತರು ಪ್ರಾಣಿಗಳನ್ನ ಅರ್ಪಿಸ್ತಿದ್ರು. ಅಲ್ಲಿ ಒಂದು ತಾಮ್ರದ ಬೋಗುಣಿ ಇತ್ತು. ಅದ್ರಲ್ಲಿ ನೀರು ತುಂಬಿತ್ತು. ಪುರೋಹಿತರು ಸೇವೆ ಮಾಡೋ ಮುಂಚೆ ಅದ್ರಲ್ಲಿ ಕೈಕಾಲುಗಳನ್ನ ತೊಳೀತಿದ್ರು. (ವಿಮೋ. 30:17-20; 40:6-8) ಭೂಮಿಯಲ್ಲಿ ಉಳಿದಿರೋ ಅಭಿಷಿಕ್ತರು ಯೆಹೋವನ ಆಧ್ಯಾತ್ಮಿಕ ಆಲಯದ ಒಳಗಿನ ಅಂಗಳದಲ್ಲಿ ಸೇವೆ ಮಾಡ್ತಿದ್ದಾರೆ. ಅಲ್ಲಿ ನೀರು ತುಂಬಿದ್ದ ದೊಡ್ಡ ಬೋಗುಣಿ ಅಭಿಷಿಕ್ತರಿಗೆ ಮತ್ತು ನಮಗೆ ಒಂದು ವಿಷ್ಯನ ನೆನಪಿಸುತ್ತೆ. ಅದೇನಂದ್ರೆ ನಾವು ಎಲ್ಲಾ ವಿಷ್ಯದಲ್ಲೂ ಶುದ್ಧರಾಗಿರಬೇಕು. ಯೆಹೋವನಿಗೆ ಇಷ್ಟ ಆಗೋ ತರಾನೇ ಜೀವಿಸಬೇಕು ಮತ್ತು ಆರಾಧಿಸಬೇಕು. ಆದ್ರೆ ‘ದೊಡ್ಡ ಗುಂಪಿನ’ ಜನ್ರು ಎಲ್ಲಿ ನಿಂತು ಸೇವೆ ಮಾಡ್ತಿದ್ದಾರೆ? ಅವರು “ದೇವರ ಸಿಂಹಾಸನದ ಮುಂದೆ ಇದ್ದಾರೆ” ಅಂತ ಅಪೊಸ್ತಲ ಯೋಹಾನ ಹೇಳಿದ. ಅಂದ್ರೆ ಅವರು ಹೊರಗಿನ ಅಂಗಳದಲ್ಲಿ “ಹಗಲೂರಾತ್ರಿ [ದೇವರ] ಪವಿತ್ರ ಸೇವೆ ಮಾಡ್ತಿದ್ದಾರೆ.” (ಪ್ರಕ. 7:9, 13-15) ತನ್ನ ಆಧ್ಯಾತ್ಮಿಕ ಆಲಯದಲ್ಲಿ ನಮಗೂ ಒಂದು ಜಾಗ ಕೊಟ್ಟಿದ್ದಕ್ಕೆ ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಬೇಕಲ್ವಾ? w23.10 28 ¶15-16

ಸೋಮವಾರ, ಆಗಸ್ಟ್‌ 18

ದೇವರು ಕೊಟ್ಟ ಮಾತಲ್ಲಿ . . . ಅವನಲ್ಲಿದ್ದ ನಂಬಿಕೆಯಿಂದ ಅವನು ಬಲಶಾಲಿಯಾದ.—ರೋಮ. 4:20.

ಯೆಹೋವ ಹಿರಿಯರಿಂದಾನೂ ನಮಗೆ ಶಕ್ತಿ ಕೊಡ್ತಾನೆ. (ಯೆಶಾ. 32:1, 2) ಹಾಗಾಗಿ ನಿಮಗೇನಾದ್ರೂ ಚಿಂತೆ ಕಾಡ್ತಿದ್ರೆ ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಅವ್ರ ಹತ್ರ ಹೇಳ್ಕೊಳ್ಳಿ. ಅವ್ರೇನಾದ್ರೂ ಸಹಾಯ ಮಾಡೋಕೆ ಮುಂದೆ ಬಂದಾಗ ಅದನ್ನ ಪಡ್ಕೊಳ್ಳಿ. ಹೀಗೆ ಮಾಡಿದಾಗ ಯೆಹೋವ ಕೊಡೋ ಶಕ್ತಿಯನ್ನ ಪಡ್ಕೊಂಡ ಹಾಗೆ ಇರುತ್ತೆ. ಮುಂದೆ ನಮಗೆ ಸಿಗೋ ಆಶೀರ್ವಾದದ ಬಗ್ಗೆನೂ ಬೈಬಲ್‌ ಹೇಳುತ್ತೆ. ಅದು ಈ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ಅವಕಾಶ ಅಥವಾ ಕೆಲವ್ರಿಗೆ ಸ್ವರ್ಗದಲ್ಲಿ ಶಾಶ್ವತವಾಗಿ ಜೀವಿಸೋ ಅವಕಾಶ. (ರೋಮ. 4:3, 18, 19) ಈ ಆಶೀರ್ವಾದದ ಬಗ್ಗೆ ನೆನಸ್ಕೊಂಡಾಗ ಈಗಿರೋ ಕಷ್ಟಗಳನ್ನ ತಾಳ್ಕೊಳ್ಳೋಕೆ, ಸಿಹಿಸುದ್ದಿ ಸಾರೋಕೆ ಮತ್ತು ಸಭೆಯಲ್ಲಿ ಯಾವ ನೇಮಕ ಸಿಕ್ಕಿದ್ರೂ ಅದನ್ನ ಮಾಡೋಕೆ ನಮಗೆ ಶಕ್ತಿ ಸಿಗುತ್ತೆ. (1 ಥೆಸ. 1:3) ಅಪೊಸ್ತಲ ಪೌಲ ಕೂಡ ತನಗಿರೋ ಆಶೀರ್ವಾದದ ಬಗ್ಗೆ ಯೋಚನೆ ಮಾಡಿನೇ ಶಕ್ತಿ ಪಡ್ಕೊಂಡ. ಪೌಲನು ನನ್ನನ್ನ “ಜಜ್ಜಲಾಗಿದೆ”, “ಒದ್ದಾಡ್ತಾ” ಇದ್ದೀನಿ, ನನಗೆ “ಹಿಂಸೆ ಬರ್ತಾನೇ ಇದೆ”, ನನ್ನನ್ನ “ಕೆಳಗೆ ಬೀಳಿಸಿದ್ದಾರೆ” ಅಂತ ಹೇಳಿದ. ಅಷ್ಟೇ ಅಲ್ಲ, ಅವನ ಜೀವನೂ ಅಪಾಯದಲ್ಲಿತ್ತು. (2 ಕೊರಿಂ. 4:8-10) ಆದ್ರೆ ಪೌಲ ಮುಂದೆ ತನಗೆ ಸಿಗೋ ಆಶೀರ್ವಾದಗಳ ಬಗ್ಗೆ ಯೋಚಿಸಿದ್ರಿಂದ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಅವನಿಗೆ ಬಲ ಸಿಕ್ತು. (2 ಕೊರಿಂ. 4:16-18) ಪೌಲ ಮುಂದೆ ತನಗೆ ಸ್ವರ್ಗದಲ್ಲಿ ಸಿಗೋ ಶಾಶ್ವತ ಜೀವದ ಬಗ್ಗೆ ಯೋಚಿಸ್ತಿದ್ದ. ಈ ತರ ಆಶೀರ್ವಾದದ ಬಗ್ಗೆ ಯೋಚಿಸಿದ್ರಿಂದ ಅವನ ಮನಸ್ಸು ‘ದಿನದಿನ ಹೊಸದಾಗ್ತಾ’ ಇತ್ತು. w23.10 15-16 ¶14-17

ಮಂಗಳವಾರ, ಆಗಸ್ಟ್‌ 19

ಯೆಹೋವ ತನ್ನ ಜನ್ರಿಗೆ ಬಲ ಕೊಡ್ತಾನೆ. ಯೆಹೋವ ತನ್ನ ಜನ್ರಿಗೆ ಶಾಂತಿ-ಸಮಾಧಾನ ಕೊಟ್ಟು ಆಶೀರ್ವದಿಸ್ತಾನೆ.—ಕೀರ್ತ. 29:11.

ಯೆಹೋವ ಸರಿಯಾದ ಸಮಯಕ್ಕೆ ಉತ್ರ ಕೊಡೋ ತನಕ ನಾನು ಕಾಯಬೇಕಾ? ಅಂತ ಯೋಚನೆ ಮಾಡಿ. ನಾವು ಮಾಡಿದ ಪ್ರಾರ್ಥನೆಗೆ ತಕ್ಷಣ ಉತ್ರ ಸಿಗಬೇಕು ಅಂತ ಅಂದ್ಕೊತೀವಿ. ಆದ್ರೆ ನಮ್ಮ ಪ್ರಾರ್ಥನೆಗೆ ಯಾವಾಗ ಉತ್ರ ಕೊಡಬೇಕು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. (ಇಬ್ರಿ. 4:16) ಹಾಗಾಗಿ ನಮ್ಮ ಪ್ರಾರ್ಥನೆಗೆ ಉತ್ರ ಸಿಕ್ಕಿಲ್ಲ ಅಂದ ತಕ್ಷಣ ನಾವೇನು ಅಂದ್ಕೊಬಾರದು? ಯೆಹೋವ ನಮ್ಮ ಪ್ರಾರ್ಥನೆಗೆ ಉತ್ರ ಕೊಡಲ್ಲ ಅಂತ ಅಂದ್ಕೊಬಾರದು. ಬದ್ಲಿಗೆ ‘ಕೊಡ್ತಾನೆ’ ಆದ್ರೆ ‘ಈಗಲ್ಲ’ ಅಂತ ನೆನಸಬೇಕು. ತನ್ನ ಕಾಯಿಲೆ ವಾಸಿ ಆಗಬೇಕು ಅಂತ ಪ್ರಾರ್ಥನೆ ಮಾಡ್ತಿದ್ದ ಒಬ್ಬ ಯುವ ಸಹೋದರನ ಕುರಿತು ಯೋಚಿಸಿ. ಅವನು ಅಂದ್ಕೊಂಡ ಹಾಗೆ ಯೆಹೋವ ಅವನನ್ನ ಅದ್ಭುತವಾಗಿ ವಾಸಿ ಮಾಡಿದ್ದಿದ್ರೆ ಏನಾಗ್ತಿತ್ತು? ‘ನೀನು ಅವನನ್ನ ವಾಸಿ ಮಾಡಿದ್ದಕ್ಕೆ ಅವನು ನಿನ್ನನ್ನ ಆರಾಧಿಸುತ್ತಿದ್ದಾನೆ’ ಅಂತ ಸೈತಾನ ಯೆಹೋವನಿಗೆ ಹೇಳಿರುತ್ತಿದ್ದ ಅಲ್ವಾ? (ಯೋಬ 1:9-11; 2:4) ಅದೂ ಅಲ್ಲದೇ ತನ್ನ ಸರ್ಕಾರ ಬಂದಾಗ ಎಲ್ಲ ಕಾಯಿಲೆನೂ ವಾಸಿ ಮಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಯೆಶಾ. 33:24; ಪ್ರಕ. 21:3, 4) ಹಾಗಾಗಿ ಈಗ ಯೆಹೋವ ನಮ್ಮ ಕಾಯಿಲೆನ ಅದ್ಭುತವಾಗಿ ವಾಸಿ ಮಾಡ್ತಾನೆ ಅಂತ ಅಂದ್ಕೊಬಾರದು. ಹಾಗಾದ್ರೆ ಆ ಸಹೋದರ ಏನಂತ ಪ್ರಾರ್ಥನೆ ಮಾಡಬಹುದಿತ್ತು? ನನಗೆ ಆಗ್ತಿರೋ ಕಷ್ಟನ ಸಹಿಸ್ಕೊಳ್ಳೋಕೆ ಸಹಾಯ ಮಾಡು, ಮನಶ್ಶಾಂತಿ ಕೊಡು, ನಿನ್ನನ್ನ ಕೊನೆವರೆಗೂ ನಂಬಿಕೆಯಿಂದ ಸೇವೆ ಮಾಡೋಕೆ ಸಹಾಯ ಮಾಡು ಅಂತ ಕೇಳಬಹುದಿತ್ತು. w23.11 24 ¶13

ಬುಧವಾರ, ಆಗಸ್ಟ್‌ 20

ಆತನು ನಮ್ಮ ಪಾಪಗಳಿಗೆ ತಕ್ಕ ಹಾಗೆ ನಮ್ಮ ಜೊತೆ ನಡ್ಕೊಳ್ಳಲಿಲ್ಲ, ನಾವು ಮಾಡಿದ ತಪ್ಪುಗಳಿಗೆ ತಕ್ಕ ಶಿಕ್ಷೆ ಕೊಡಲಿಲ್ಲ.—ಕೀರ್ತ. 103:10.

ಸಂಸೋನ ದೊಡ್ಡ ತಪ್ಪು ಮಾಡಿದ ಅನ್ನೋದೇನೋ ನಿಜ. ಹಾಗಂತ ಅವನು ಸೋತುಹೋಗಿ ಯೆಹೋವನ ಮೇಲೆ ನಂಬಿಕೆ ಕಳ್ಕೊಳ್ಳಲಿಲ್ಲ. ಫಿಲಿಷ್ಟಿಯರ ವಿರುದ್ಧ ಹೋರಾಡೋಕೆ ತನಗೆ ಸಿಕ್ಕಿರೋ ನೇಮಕನ ಅವನು ಮರೆತುಬಿಡಲಿಲ್ಲ. (ನ್ಯಾಯ. 16:28-30) “ಫಿಲಿಷ್ಟಿಯರ ಮೇಲೆ ಸೇಡು ತೀರಿಸೋಕೆ ಬಿಡು,” ‘ಒಂದು ಅವಕಾಶ ಕೊಡು’ ಅಂತ ಬೇಡ್ಕೊಂಡ. ಆಗ ಯೆಹೋವ ಅವನ ಪ್ರಾರ್ಥನೆಗೆ ಉತ್ರ ಕೊಟ್ಟನು. ಅವನಿಗೆ ಮತ್ತೆ ಶಕ್ತಿ ಬರೋ ತರ ಮಾಡಿದನು. ಇದ್ರಿಂದ ಸಂಸೋನ ತುಂಬ ಫಿಲಿಷ್ಟಿಯರನ್ನ ಕೊಲ್ಲಕ್ಕಾಯ್ತು. ಅವನು ಇಷ್ಟೊಂದು ಫಿಲಿಷ್ಟಿಯರನ್ನ ಯಾವತ್ತೂ ಕೊಂದಿರ್ಲಿಲ್ಲ. ಸಂಸೋನ ತನ್ನ ತಪ್ಪಿನ ಪರಿಣಾಮಗಳನ್ನ ಅನುಭವಿಸಬೇಕಾಗಿ ಬಂದ್ರೂ ಯೆಹೋವನಿಗೆ ಏನಿಷ್ಟನೋ ಅದನ್ನ ಮಾಡೋಕೆ ಪ್ರಯತ್ನ ಮಾಡ್ತಾ ಇದ್ದ. ನಾವೂ ಅವನ ತರ ಇರಬೇಕು. ನಾವು ಏನಾದ್ರೂ ತಪ್ಪು ಮಾಡಿದ್ರೆ ಶಿಸ್ತು ಸಿಗಬಹುದು ಅಥವಾ ನಮಗೆ ಇರೋ ಸುಯೋಗನ ಕಳ್ಕೊಬಹುದು. ಆಗ ನಾವು ಸೋತು ಹೋಗಬಾರದು. ಪ್ರಯತ್ನ ಮಾಡ್ತಾ ಇರಬೇಕು. ಯಾಕಂದ್ರೆ ಯೆಹೋವ ನಮ್ಮನ್ನ ಕ್ಷಮಿಸೋಕೆ ಕಾಯ್ತಾ ಇರ್ತಾನೆ. (ಕೀರ್ತ. 103:8, 9) ತಪ್ಪು ಮಾಡಿದ ತಕ್ಷಣ ನಮ್ಮನ್ನ ಮೂಲೆಗುಂಪು ಮಾಡಲ್ಲ. ಆತನಿಗೆ ಇಷ್ಟ ಆಗೋದನ್ನ ಮಾಡೋಕೆ ಸಂಸೋನನಿಗೆ ಶಕ್ತಿ ಕೊಟ್ಟ ತರಾನೇ ನಮಗೂ ಶಕ್ತಿ ಕೊಡ್ತಾನೆ. w23.09 6 ¶15-16

ಗುರುವಾರ, ಆಗಸ್ಟ್‌ 21

ಸಹಿಸ್ಕೊಂಡ್ರೆ ನಮ್ಮನ್ನ ದೇವರು ಮೆಚ್ತಾನೆ. ಆ ಮೆಚ್ಚುಗೆ ನಮಗೆ ನಿರೀಕ್ಷೆ ಕೊಡುತ್ತೆ.—ರೋಮ. 5:4.

ಇಲ್ಲಿ ಪೌಲ ಸಹಿಸ್ಕೊಂಡ್ರೆ “ನಮ್ಮನ್ನ ದೇವರು ಮೆಚ್ತಾನೆ” ಅಂತ ಹೇಳ್ತಿದ್ದಾನೆ. ನಾವು ಪಡೋ ಕಷ್ಟಗಳನ್ನ ನೋಡಿ ಯೆಹೋವ ಖುಷಿಪಡ್ತಾನೆ ಅಂತ ಹೇಳ್ತಿಲ್ಲ, ಬದ್ಲಿಗೆ ನಾವು ನಂಬಿಕೆಯಿಂದ ಸಹಿಸ್ಕೊಳ್ಳೋದನ್ನ ನೋಡಿ ಆತನು ನಮ್ಮನ್ನ ಮೆಚ್ಕೊಳ್ತಾನೆ ಅಂತ ಹೇಳ್ತಾ ಇದೆ. ಇದು ಎಂಥ ದೊಡ್ಡ ಆಶೀರ್ವಾದ ಅಲ್ವಾ? (ಕೀರ್ತ. 5:12) ಅಬ್ರಹಾಮ ಸಹಿಸ್ಕೊಂಡಿದ್ದಕ್ಕೆ ಯೆಹೋವ ಅವನನ್ನ ಮೆಚ್ಕೊಂಡನು. ಆತನು ಅವನನ್ನ ತನ್ನ ಸ್ನೇಹಿತ ಅಂತ ಕರೆದನು, ನೀತಿವಂತ ಅಂತನೂ ಹೇಳಿದನು. (ಆದಿ. 15:6; ರೋಮ. 4:13, 22) ಯೆಹೋವ ನಮ್ಮನ್ನೂ ಮೆಚ್ಕೊಳ್ತಾನೆ. ಹಾಗಂತ ನಾವೆಷ್ಟು ಕೆಲಸ ಮಾಡ್ತೀವಿ, ನಮಗೆ ಯಾವ ಸುಯೋಗ ಇದೆ ಅಂತ ನೋಡಿ ಆತನು ನಮ್ಮನ್ನ ಮೆಚ್ಕೊಳ್ಳಲ್ಲ. ಬದ್ಲಿಗೆ ನಾವು ನಂಬಿಕೆಯಿಂದ ಸಹಿಸ್ಕೊಳ್ಳೋದನ್ನ ನೋಡಿ ಆತನು ಮೆಚ್ಕೊಳ್ತಾನೆ. ನಮ್ಮ ವಯಸ್ಸು, ಸಾಮರ್ಥ್ಯ, ಸನ್ನಿವೇಶ ಏನೇ ಆಗಿದ್ರೂ ನಮ್ಮೆಲ್ರಿಗೂ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗೇ ಆಗುತ್ತೆ. ಈಗ ನೀವು ಯಾವುದಾದ್ರೂ ಕಷ್ಟಗಳನ್ನ ಅನುಭವಿಸ್ತಿದ್ದೀರಾ? ಅದನ್ನ ಸಹಿಸ್ಕೊಂಡ್ರೆ ಯೆಹೋವ ನಿಮ್ಮನ್ನ ಮೆಚ್ಕೊಳ್ತಾನೆ. ಇದ್ರಿಂದ ನಿಮಗೆ ಮುಂದೆ ಆಶೀರ್ವಾದಗಳು ಸಿಕ್ಕೇ ಸಿಗುತ್ತೆ ಅನ್ನೋ ನಿಮ್ಮ ನಿರೀಕ್ಷೆ ಗಟ್ಟಿಯಾಗುತ್ತೆ. w23.12 11 ¶13-14

ಶುಕ್ರವಾರ, ಆಗಸ್ಟ್‌ 22

ಮಗು ತರ ಇರದೆ, ದೊಡ್ಡವ್ರ ತರ ಇರಿ.—1 ಕೊರಿಂ. 14:20.

ಕ್ರೈಸ್ತ ಸಹೋದರರು ಚೆನ್ನಾಗಿ ಮಾತಾಡೋಕೆ ಕಲಿಬೇಕು. ಈ ಕೌಶಲ ಇರೋ ವ್ಯಕ್ತಿ ಬೇರೆಯವರು ಮಾತಾಡುವಾಗ ಚೆನ್ನಾಗಿ ಕೇಳಿಸ್ಕೊಳ್ತಾನೆ ಮತ್ತು ಅವ್ರ ಭಾವನೆಗಳನ್ನ, ಯೋಚ್ನೆಗಳನ್ನ ಅರ್ಥ ಮಾಡ್ಕೊಳ್ತಾನೆ. (ಜ್ಞಾನೋ. 20:5) ಅವರ ಸ್ವರದಿಂದ, ಮುಖಭಾವದಿಂದ, ಕೈಸನ್ನೆಯಿಂದ ಅವರ ಭಾವನೆಗಳನ್ನ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸ್ತಾನೆ. ಆದ್ರೆ ಈ ಕೌಶಲ ಬೆಳೆಸ್ಕೊಬೇಕಂದ್ರೆ ಬೇರೆಯವ್ರ ಜೊತೆ ಚೆನ್ನಾಗಿ ಸಮಯ ಕಳಿಬೇಕು. ಹಾಗಂತ ಮೇಲ್‌ನಲ್ಲಿ ಅಥವಾ ಮೆಸೇಜಲ್ಲೇ ಮಾತಾಡ್ತಾ ಇದ್ರೆ ಏನೂ ಪ್ರಯೋಜನ ಆಗಲ್ಲ, ಮುಖಾಮುಖಿಯಾಗಿ ಮಾತಾಡಬೇಕು. (2 ಯೋಹಾ. 12) ಪ್ರೌಢ ಸಹೋದರರು ತಮ್ಮನ್ನ ಮತ್ತು ತಮ್ಮ ಕುಟುಂಬವನ್ನ ಚೆನ್ನಾಗಿ ನೋಡ್ಕೋಬೇಕು. (1 ತಿಮೊ. 5:8) ಒಳ್ಳೆ ಕೆಲಸ ಸಿಗಬೇಕಂದ್ರೆ ಕೆಲವು ಕೌಶಲಗಳನ್ನ ನಾವು ಕಲಿತಿರಬೇಕು. (ಅ. ಕಾ. 18:2, 3; 20:34; ಎಫೆ. 4:28) ನಿಮಗೆ ಕೊಟ್ಟ ಕೆಲಸನ ಚೆನ್ನಾಗಿ ಮಾಡಿ ಮುಗಿಸಿದ್ರೆ ನೀವು ಬೇರೆಯವ್ರ ನಂಬಿಕೆ ಗಳಿಸ್ತೀರ ಮತ್ತು ಒಳ್ಳೇ ಹೆಸ್ರು ಸಂಪಾದಿಸ್ತೀರ. ಇದ್ರಿಂದ ನಿಮಗೆ ಒಳ್ಳೆ ಕೆಲಸ ಸಿಗುತ್ತೆ ಮತ್ತು ಯಾರೂ ನಿಮ್ಮನ್ನ ಕೆಲಸದಿಂದ ತೆಗೆದುಹಾಕೋಕೆ ಇಷ್ಟಪಡಲ್ಲ. w23.12 27 ¶12-13

ಶನಿವಾರ, ಆಗಸ್ಟ್‌ 23

ಯೆಹೋವನ ದಿನ ರಾತ್ರಿಯಲ್ಲಿ ಕಳ್ಳ ಬರೋ ತರ ಬರುತ್ತೆ.—1 ಥೆಸ. 5:2.

“ಯೆಹೋವನ ದಿನ” ಅಂದ್ರೇನು? ಅದು ಹೇಗಿರುತ್ತೆ? ಆ ದಿನದಲ್ಲಿ ಯೆಹೋವ ತನ್ನ ಶತ್ರುಗಳನ್ನ ನಾಶ ಮಾಡ್ತಾನೆ ಮತ್ತು ತನ್ನ ಜನ್ರನ್ನ ಕಾಪಾಡ್ತಾನೆ. ಹಿಂದಿನ ಕಾಲದಲ್ಲೂ ಇದೇ ತರ ಆತನು ಕೆಲವು ದೇಶಗಳಿಗೆ ಶಿಕ್ಷೆ ಕೊಟ್ಟಿದ್ದಾನೆ. (ಯೆಶಾ. 13:1, 6; ಯೆಹೆ. 13:5; ಚೆಫ. 1:8) ನಮ್ಮ ಕಾಲದಲ್ಲೂ ಇದು ನಡಿಯುತ್ತೆ. ಮಹಾ ಬಾಬೆಲ್‌ ಮೇಲೆ ಆಕ್ರಮಣ ಆದಾಗ “ಯೆಹೋವನ ದಿನ” ಶುರು ಆಗುತ್ತೆ. ಹರ್ಮಗೆದೋನ್‌ ಯುದ್ಧದಲ್ಲಿ ಕೊನೆ ಆಗುತ್ತೆ. ಆ “ದಿನ” ಬಂದಾಗ ಜೀವ ಕಾಪಾಡ್ಕೊಳ್ಳೋಕೆ ನಾವು ಈಗಿಂದಾನೇ ತಯಾರಾಗಿ ಇರಬೇಕು. ಅದಕ್ಕೆ ಯೇಸು, ‘ಮಹಾ ಸಂಕಟಕ್ಕೆ’ ಸಿದ್ಧರಾಗೋಕೆ ಅಷ್ಟೇ ಅಲ್ಲ, ‘ಸಿದ್ಧರಾಗಿ ಇರೋಕೆ’ ಹೇಳಿದ್ದಾನೆ. ಅಂದ್ರೆ ನಾವು ಯಾವಾಗ್ಲೂ ಸಿದ್ಧರಾಗಿ ಇರಬೇಕು. (ಮತ್ತಾ. 24:21; ಲೂಕ 12:40) ಪೌಲ ಒಂದನೇ ಥೆಸಲೊನೀಕ ಪತ್ರದಲ್ಲಿ ಕೆಲವು ಉದಾಹರಣೆಗಳನ್ನ ಬಳಸಿದ್ದಾನೆ. ಅದು ಕ್ರೈಸ್ತರಿಗೆ ಯೆಹೋವನ ದಿನಕ್ಕೆ ಸಿದ್ಧರಾಗಿ ಇರೋಕೆ ಸಹಾಯ ಮಾಡ್ತು. ಆ ದಿನ ಆಗ್ಲೇ ಬಂದುಬಿಡಲ್ಲ ಅಂತ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. (2 ಥೆಸ. 2:1-3) ಆದ್ರೂ ಅದು ನಾಳೆನೇ ಬಂದುಬಿಡುತ್ತೆ ಅನ್ನೋ ತರ ಇರೋಕೆ ಸಹೋದರರಿಗೆ ಹೇಳಿದ. ನಾವು ಕೂಡ ಹಾಗೇ ಇರಬೇಕು. w23.06 8 ¶1-2

ಭಾನುವಾರ, ಆಗಸ್ಟ್‌ 24

ನನ್ನ ಪ್ರಿಯ ಸಹೋದರರೇ, ಸ್ಥಿರವಾಗಿರಿ, ಕದಲಬೇಡಿ.—1 ಕೊರಿಂ. 15:58.

1978ರಲ್ಲಿ ಜಪಾನಿನ ಟೋಕಿಯೊದಲ್ಲಿ 60 ಅಂತಸ್ತಿನ ಒಂದು ದೊಡ್ಡ ಕಟ್ಟಡ ಕಟ್ಟಿದ್ರು. ಅಲ್ಲಿ ಆಗಾಗ ಭೂಕಂಪ ಆಗ್ತಿತ್ತು. ಆದ್ರೂ ಈ ಕಟ್ಟಡ ಬಿದ್ದುಹೋಗಲಿಲ್ಲ. ಯಾಕಂದ್ರೆ ಇಂಜಿನೀಯರುಗಳು ಅದನ್ನ ಗಟ್ಟಿಯಾಗಿ ಕಟ್ಟಿದ್ರು. ಅಷ್ಟೇ ಅಲ್ಲ, ಅಲುಗಾಡಿದ್ರೂ ಬೀಳದೆ ಇರೋ ಹಾಗೆ ಕಟ್ಟಿದ್ರು. ನಾವೂ ಈ ದೊಡ್ಡ ಕಟ್ಟಡದ ತರ ಇರಬೇಕು. ನಾವು ಸ್ಥಿರವಾಗಿ ನಿಲ್ಲಬೇಕು, ಕದಲಬಾರದು. ಅಂದ್ರೆ ಎಷ್ಟೇ ಕಷ್ಟ ಆದ್ರೂ ಯೆಹೋವನ ನೀತಿನಿಯಮಗಳನ್ನ ಪಾಲಿಸಬೇಕು. ಎಲ್ಲಾ ಸಮಯದಲ್ಲೂ ‘ಆತನ ಮಾತನ್ನ ಕೇಳೋ ಮನಸ್ಸು’ ನಮಗಿರಬೇಕು. ಅದ್ರ ಜೊತೆಗೆ, “ನಾನು ಹೇಳಿದ್ದೇ ನಡಿಬೇಕು ಅನ್ನೋ ಸ್ವಭಾವ” ನಮಗೆ ಇರಬಾರದು. ಬಿಟ್ಕೊಡೋ ಮನಸ್ಸು ಇರಬೇಕು. (ಯಾಕೋ. 3:17) ಆಗ ನಾವು ನಮ್ಮ ಮನಸ್ಸಿಗೆ ಬಂದ ಹಾಗೂ ನಡಿಯಲ್ಲ, ತುಂಬ ಕಟ್ಟುನಿಟ್ಟಾಗೂ ಇರಲ್ಲ. w23.07 14 ¶1-2

ಸೋಮವಾರ, ಆಗಸ್ಟ್‌ 25

ನೀವು ಕ್ರಿಸ್ತನನ್ನ ಯಾವತ್ತೂ ನೋಡಿಲ್ಲ, ಆದ್ರೂ ಆತನನ್ನ ಪ್ರೀತಿಸ್ತೀರ.—1 ಪೇತ್ರ 1:8.

ಸೈತಾನ ಯೇಸುನ ಪರೀಕ್ಷಿಸಿದ. (ಮತ್ತಾ. 4:1-11) ಯೇಸು ತಪ್ಪು ಮಾಡಬೇಕು ಅಂತ ಕುತಂತ್ರ ಮಾಡಿದ. ಯೆಹೋವನ ಮಾತು ಕೇಳಬೇಡ ಅಂತ ಹೇಳಿದ. ಯಾಕಂದ್ರೆ ಯೇಸು ಪಾಪ ಮಾಡಿಬಿಟ್ರೆ ಬಿಡುಗಡೆ ಬೆಲೆ ಕೊಡೋಕೇ ಆಗಲ್ಲ ಅಂತ ಸೈತಾನನಿಗೆ ಚೆನ್ನಾಗಿ ಗೊತ್ತಿತ್ತು. ಯೇಸು ಸಿಹಿಸುದ್ದಿ ಸಾರೋಕೆ ಶುರುಮಾಡಿದಾಗ್ಲೂ ತುಂಬ ಕಷ್ಟ ಅನುಭವಿಸಿದನು. ವಿರೋಧಿಗಳು ಆತನನ್ನ ಕೊಲ್ಲೋಕೆ ಹೊಂಚುಹಾಕ್ತಿದ್ರು. (ಲೂಕ 4:28, 29; 13:31) ಆತನ ಶಿಷ್ಯರು ಪದೇಪದೇ ತಪ್ಪು ಮಾಡಿದಾಗ ಅದನ್ನ ಸಹಿಸ್ಕೊಂಡನು. (ಮಾರ್ಕ 9:33, 34) ಯೇಸು ಸಾಯೋ ಮುಂಚೆ ಜನ್ರು ತುಂಬ ಹಿಂಸೆ ಕೊಟ್ರು, ಹೀಯಾಳಿಸಿದ್ರು, ಅವಮಾನ ಮಾಡಿದ್ರು. ಕೊನೆಗೆ ತುಂಬ ನೋವಿಂದ ನರಳಾಡ್ತಾ ಆತನು ಸಾಯಬೇಕಾಯ್ತು. (ಇಬ್ರಿ. 12:1-3) ಇದನ್ನೆಲ್ಲ ಆತನು ಒಬ್ಬನೇ ಸಹಿಸ್ಕೊಬೇಕಿತ್ತು. ಯಾಕಂದ್ರೆ ಆ ಸಮಯದಲ್ಲಿ ಯೆಹೋವ ತನ್ನನ್ನ ಕಾಪಾಡಲ್ಲ ಅಂತ ಆತನಿಗೆ ಚೆನ್ನಾಗಿ ಗೊತ್ತಿತ್ತು. (ಮತ್ತಾ. 27:46) ಯೇಸು ಬಿಡುಗಡೆ ಬೆಲೆ ಕೊಡೋಕೆ ತುಂಬ ಕಷ್ಟ ಹಿಂಸೆ ಅನುಭವಿಸಿದನು. ಇಷ್ಟೆಲ್ಲ ಅನುಭವಿಸಬೇಕಾಗುತ್ತೆ ಅಂತ ಗೊತ್ತಿದ್ರೂ ನಮಗೋಸ್ಕರ ಜೀವ ಕೊಡೋಕೆ ಆತನು ಮುಂದೆ ಬಂದನು. ಇದನ್ನ ನೆನಸ್ಕೊಂಡಾಗ ಆತನ ಮೇಲೆ ಪ್ರೀತಿ ಉಕ್ಕಿ ಬರುತ್ತಲ್ವಾ? w24.01 10-11 ¶7-9

ಮಂಗಳವಾರ, ಆಗಸ್ಟ್‌ 26

ಆತುರಪಡುವವರು ಬಡತನಕ್ಕೆ ಬೀಳ್ತಾರೆ.—ಜ್ಞಾನೋ. 21:5.

ತಾಳ್ಮೆ ಇದ್ರೆ ನಾವು ಬೇರೆಯವ್ರ ಜೊತೆ ಪ್ರೀತಿಯಿಂದ ನಡ್ಕೊಳ್ತೀವಿ. ಉದಾಹರಣೆಗೆ ಬೇರೆಯವರು ಮಾತಾಡುವಾಗ ನಾವು ಗಮನಕೊಟ್ಟು ಕೇಳಿಸ್ಕೊಳ್ತೀವಿ. (ಯಾಕೋ. 1:19) ಅಷ್ಟೇ ಅಲ್ಲ, ತಾಳ್ಮೆ ಇದ್ರೆ ಬೇರೆಯವ್ರ ಜೊತೆ ವೈಮನಸ್ಸು ಬರದೆ ಇರೋ ತರ ನೋಡ್ಕೊಳ್ತೀವಿ. ನಾವು ತುಂಬ ಟೆನ್ಶನಲ್ಲಿ ಇದ್ದಾಗ ಯಾರಾದ್ರೂ ಬಂದು ಮಾತಾಡಿದ್ರೆ ನಾವು ರೇಗಾಡಲ್ಲ, ಬಾಯಿಗೆ ಬಂದ ಹಾಗೆ ಮಾತಾಡಲ್ಲ. ಬೇರೆಯವರು ನಮಗೆ ಬೇಜಾರಾಗೋ ತರ ನಡ್ಕೊಂಡಾಗ ಕೋಪ ಮಾಡ್ಕೊಳ್ಳಲ್ಲ. ‘ಬೇರೆಯವರು ತಪ್ಪು ಮಾಡಿದ್ರೂ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರ್ತೀವಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಉದಾರವಾಗಿ ಕ್ಷಮಿಸ್ತಾ ಇರ್ತೀವಿ.’ (ಕೊಲೊ. 3:12, 13) ನಮ್ಮಲ್ಲಿ ತಾಳ್ಮೆ ಇದ್ರೆ ತೀರ್ಮಾನಗಳನ್ನ ಮಾಡುವಾಗ ದುಡುಕಲ್ಲ. ಸಮಯ ಮಾಡ್ಕೊಂಡು ಚೆನ್ನಾಗಿ ಯೋಚ್ನೆ ಮಾಡಿ ಒಳ್ಳೇ ತೀರ್ಮಾನಗಳನ್ನ ಮಾಡ್ತೀವಿ. ಉದಾಹರಣೆಗೆ ನಾವೊಂದು ಕೆಲಸ ಹುಡುಕ್ತಾ ಇದ್ದೀವಿ ಅಂದ್ಕೊಳ್ಳೋಣ. ನಮಗೆ ತಾಳ್ಮೆ ಇಲ್ಲಾಂದ್ರೆ, ಮೊದ್ಲು ಯಾವ ಕೆಲಸ ಸಿಗುತ್ತೋ ಅದನ್ನೇ ಒಪ್ಕೊಂಡುಬಿಡ್ತೀವಿ. ಆದ್ರೆ ನಮ್ಮಲ್ಲಿ ತಾಳ್ಮೆ ಇದ್ರೆ ಒಂದು ಕೆಲಸ ಸಿಕ್ಕಿದಾಗ ಚೆನ್ನಾಗಿ ಯೋಚ್ನೆ ಮಾಡ್ತೀವಿ. ಇದ್ರಿಂದ ನನ್ನ ಕುಟುಂಬಕ್ಕೆ, ಯೆಹೋವ ದೇವರ ಸೇವೆ ಮಾಡೋಕೆ ಸಮಯ ಕೊಡಕ್ಕಾಗುತ್ತಾ ಅಂತ ಯೋಚ್ನೆ ಮಾಡ್ತೀವಿ. ಆಮೇಲೆ ಸರಿಯಾದ ನಿರ್ಧಾರ ಮಾಡ್ತೀವಿ. w23.08 22 ¶8-9

ಬುಧವಾರ, ಆಗಸ್ಟ್‌ 27

ಆದ್ರೆ ನನ್ನ ದೇಹದಲ್ಲಿ ಪಾಪದ ನಿಯಮ ಇದೆ. ಅದು ನನ್ನ ಮನಸ್ಸಿನ ನಿಯಮದ ವಿರುದ್ಧ ಹೋರಾಡುತ್ತೆ ಮತ್ತು ನನ್ನನ್ನ ನನ್ನ ದೇಹದಲ್ಲಿರೋ ಪಾಪಕ್ಕೆ ಕೈದಿಯಾಗಿ ಮಾಡುತ್ತೆ.—ರೋಮ. 7:23.

ಪೌಲನ ತರ ನಿಮಗೂ ಕೆಟ್ಟ ಆಸೆಗಳ ವಿರುದ್ಧ ಹೋರಾಡ್ತಾ ಹೋರಾಡ್ತಾ ಸಾಕಾಗಿ ಬಿಡಬಹುದು. ಆಗ ಏನು ಮಾಡೋದು? ಸಮರ್ಪಣೆಯ ಸಮಯದಲ್ಲಿ ನೀವು ಯೆಹೋವನಿಗೆ ಕೊಟ್ಟ ಮಾತನ್ನ ನೆನಪಿಸ್ಕೊಳ್ಳಿ. ಆಗ ನಿಮಗೆ ಶಕ್ತಿ ಸಿಗುತ್ತೆ. ಹೇಗೆ? ನೀವು ಯೆಹೋವನಿಗೆ ಸಮರ್ಪಿಸ್ಕೊಂಡ ಮೇಲೆ ಇನ್ಮುಂದೆ ನಿಮಗೋಸ್ಕರ ಜೀವಿಸಲ್ಲ. ಅಂದ್ರೆ ನಿಮಗೆ ಇಷ್ಟ ಆಗಿರೋ ವಿಷ್ಯಗಳು ಅಥವಾ ಗುರಿಗಳು ಯೆಹೋವನಿಗೆ ಇಷ್ಟ ಇಲ್ಲಾಂದ್ರೆ ಅದನ್ನ ಬಿಟ್ಟುಬಿಡ್ತೀರ. (ಮತ್ತಾ. 16:24) ಯಾಕಂದ್ರೆ ‘ಏನೇ ಆದ್ರೂ ನಾನು ಯಾವಾಗ್ಲೂ ಯೆಹೋವನಿಗೆ ನಿಯತ್ತಾಗಿ ಇರ್ತೀನಿ, ಆತನಿಗಿಷ್ಟ ಆಗಿರೋದನ್ನೇ ಮಾಡ್ತೀನಿ’ ಅಂತ ನೀವು ಈಗಾಗ್ಲೆ ತೀರ್ಮಾನ ಮಾಡಿರ್ತೀರ. ಹಾಗಾಗಿ ಪರೀಕ್ಷೆಗಳು ಬಂದಾಗ ‘ನಾನೇನು ಮಾಡಬೇಕು’ ಅಂತ ಯೋಚ್ನೆ ಮಾಡ್ತಾ ಕೂರಲ್ಲ. ಬದ್ಲಿಗೆ ಎಷ್ಟೇ ಕಷ್ಟ ಬಂದ್ರೂ “ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ!” ಅಂತ ಯೋಬನ ತರ ಹೇಳ್ತೀರ.—ಯೋಬ 27:5. w24.03 9 ¶6-7

ಗುರುವಾರ, ಆಗಸ್ಟ್‌ 28

ಯಾರೆಲ್ಲ ಆತನಿಗೆ ಮೊರೆ ಇಡ್ತಾರೋ, ಯಾರೆಲ್ಲ ಪ್ರಾಮಾಣಿಕ ಹೃದಯದಿಂದ ಪ್ರಾರ್ಥನೆ ಮಾಡ್ತಾರೋ, ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ.—ಕೀರ್ತ. 145:18.

‘ಪ್ರೀತಿಯ ದೇವರಾದ’ ಯೆಹೋವ ನಮ್ಮ ಜೊತೆ ಯಾವಾಗ್ಲೂ ಇರ್ತಾನೆ. (2 ಕೊರಿಂ. 13:11) ಆತನು ನಮ್ಮಲ್ಲಿ ಒಬ್ಬೊಬ್ರ ಬಗ್ಗೆನೂ ಯೋಚ್ನೆ ಮಾಡ್ತಾನೆ. “ಆತನ ಶಾಶ್ವತ ಪ್ರೀತಿ” ನಮ್ಮ ಜೊತೆ ಯಾವಾಗ್ಲೂ ಇರುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. (ಕೀರ್ತ. 32:10) ಆ ಪ್ರೀತಿ ಬಗ್ಗೆ ನಾವು ಜಾಸ್ತಿ ಯೋಚ್ನೆ ಮಾಡಿದಷ್ಟು ಆತನು ನಮ್ಮನ್ನ ಚೆನ್ನಾಗಿ ನೋಡ್ಕೊಳ್ತಾನೆ ಅನ್ನೋ ನಂಬಿಕೆ ಜಾಸ್ತಿ ಆಗುತ್ತೆ ಮತ್ತು ನಾವು ಆತನಿಗೆ ಇನ್ನೂ ಹತ್ರ ಆಗ್ತೀವಿ. ಅಷ್ಟೇ ಅಲ್ಲ ನಾವು ಆತನ ಹತ್ರ ಮಾತಾಡೋಕೆ, ಆತನ ಪ್ರೀತಿ ಪಡ್ಕೊಳ್ಳೋಕೆ ಎಷ್ಟು ಆಸೆಪಡ್ತಿದ್ದೀವಿ ಅಂತ ಹೇಳೋಕೆ ಹಿಂಜರಿಯಲ್ಲ. ಯೆಹೋವ ನಮ್ಮನ್ನ ಅರ್ಥಮಾಡ್ಕೊಳ್ತಾನೆ ಮತ್ತು ಸಹಾಯ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾನೆ. ಅದಕ್ಕೇ ನಮ್ಮ ಚಿಂತೆನೆಲ್ಲ ಆತನ ಹತ್ರ ಹೇಳ್ಕೊಬಹುದು. (ಕೀರ್ತ. 145:19) ಚಳಿಗಾಲದಲ್ಲಿ ಬೆಂಕಿ ಕಾಯಿಸ್ಕೊಂಡಾಗ ನಮಗೆ ಹೇಗೆ ಬೆಚ್ಚಗಾಗುತ್ತೋ ಅದೇ ತರದ ಬೆಚ್ಚಗಿನ ಪ್ರೀತಿನ ಯೆಹೋವ ನಮಗೆ ತೋರಿಸ್ತಾನೆ. ಆತನ ಪ್ರೀತಿಗೆ ತುಂಬ ಶಕ್ತಿ ಇದೆ, ಅದು ಕೋಮಲವಾಗೂ ಇದೆ. ಹಾಗಾಗಿ ಯೆಹೋವ ಪ್ರೀತಿ ತೋರಿಸ್ತಾ ಇರೋದ್ರಿಂದ ನೀವು ಸಂತೋಷಪಡಿ. ಅಷ್ಟೇ ಅಲ್ಲ, “ನಾನು ಯೆಹೋವನನ್ನ ಪ್ರೀತಿಸ್ತೀನಿ” ಅಂತ ಮನಸಾರೆ ಹೇಳಿ!—ಕೀರ್ತ. 116:1. w24.01 31 ¶19-20

ಶುಕ್ರವಾರ, ಆಗಸ್ಟ್‌ 29

ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ.—ಯೋಹಾ. 17:26.

ಯೆಹೂದ್ಯರಿಗೆ ದೇವರ ಹೆಸ್ರು ಏನು ಅಂತ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಯೇಸು ಅವ್ರಿಗೆ ದೇವರ ಹೆಸ್ರು “ಯೆಹೋವ” ಅಂತ ಹೇಳಿದ್ದಷ್ಟೇ ಅಲ್ಲ, ‘ದೇವರ ಬಗ್ಗೆ ವಿವರಿಸಿದನು.’ (ಯೋಹಾ. 1:17, 18) ಉದಾಹರಣೆಗೆ ಹೀಬ್ರು ವಚನಗಳಲ್ಲಿ ಯೆಹೋವ ಕರುಣೆ ಮತ್ತು ಕನಿಕರ ಇರೋ ದೇವರು ಅಂತ ಹೇಳುತ್ತೆ. (ವಿಮೋ. 34:5-7) ಅದನ್ನ ಯೇಸು, ದಾರಿತಪ್ಪಿದ ಮಗನ ಮತ್ತು ಅವನ ಅಪ್ಪನ ಉದಾಹರಣೆ ಹೇಳಿ ಅರ್ಥ ಮಾಡಿಸಿದನು. ಈ ಉದಾಹರಣೆಯಲ್ಲಿ ಅಪ್ಪ, “ಮಗ ಇನ್ನೂ ತುಂಬ ದೂರ ಇರುವಾಗಲೇ” ಅವನ ಹತ್ರ ಓಡಿಹೋಗಿ ಅವನನ್ನ ತಬ್ಬಿಕೊಳ್ತಾನೆ. ಅವನನ್ನ ಮನಸ್ಸಾರೆ ಕ್ಷಮಿಸ್ತಾನೆ. ಇದು ಯೆಹೋವನಿಗೆ ಎಷ್ಟು ಕರುಣೆ ಮತ್ತು ಕನಿಕರ ಇದೆ ಅಂತ ತೋರಿಸುತ್ತೆ. (ಲೂಕ 15:11-32) ಹೀಗೆ ಯೆಹೋವ ಎಷ್ಟು ಒಳ್ಳೇ ದೇವರು ಅಂತ ಯೇಸು ಜನ್ರಿಗೆ ಅರ್ಥಮಾಡಿಸಿದನು. w24.02 10 ¶8-9

ಶನಿವಾರ, ಆಗಸ್ಟ್‌ 30

ದೇವರು ನಮ್ಮನ್ನ ಸಮಾಧಾನ ಮಾಡಿರೋದ್ರಿಂದ ಎಂಥ ಕಷ್ಟದಲ್ಲಿ ಇರುವವ್ರನ್ನೂ ಸಮಾಧಾನ ಮಾಡೋಕೆ ನಮ್ಮಿಂದ ಆಗುತ್ತೆ.—2 ಕೊರಿಂ. 1:4.

ಕಷ್ಟದಲ್ಲಿರುವವ್ರಿಗೆ ಯೆಹೋವ ಸಮಾಧಾನ ಮಾಡ್ದಾಗ ಅವ್ರಿಗೆ ಧೈರ್ಯ ಸಿಗುತ್ತೆ. ನಾವೂ ಯೆಹೋವನ ತರನೇ ಬೇರೆಯವ್ರಿಗೆ ಅನುಕಂಪ ತೋರಿಸಬೇಕು. ಅವ್ರನ್ನ ಸಮಾಧಾನ ಮಾಡಬೇಕು. ಅದಕ್ಕೆ ಇನ್ನೂ ಕೆಲವು ಗುಣಗಳನ್ನ ಬೆಳೆಸ್ಕೊಬೇಕು. ಅದು ಯಾವುದು? ನಾವು “ಒಬ್ರನ್ನೊಬ್ರು ಸಂತೈಸ್ತಾ,” ಪ್ರೀತಿ ತೋರಿಸ್ತಾ ಇರಬೇಕಂದ್ರೆ ಏನು ಮಾಡಬೇಕು? (1 ಥೆಸ. 4:18) ನಾವು ದಯೆ ಅನ್ನೋ ಗುಣ ಬೆಳೆಸ್ಕೊಬೇಕು, ಬೇರೆಯವ್ರ ನೋವನ್ನ ಅರ್ಥ ಮಾಡ್ಕೊಬೇಕು. ಒಂದೇ ಕುಟುಂಬದವ್ರ ತರ ಪ್ರೀತಿ ತೋರಿಸಬೇಕು. (ಕೊಲೊ. 3:12; 1 ಪೇತ್ರ 3:8) ಈ ಗುಣಗಳನ್ನ ಮತ್ತು ಅನುಕಂಪವನ್ನ ನಾವು ಬೆಳೆಸ್ಕೊಂಡ್ರೆ ಕಷ್ಟದಲ್ಲಿ ಇರುವವ್ರನ್ನ ನೋಡಿದಾಗ ಸಹಾಯ ಮಾಡಬೇಕು ಅಂತ ನಮಗೇ ಅನಿಸುತ್ತೆ. ಅದಕ್ಕೇ ಯೇಸು “ಹೃದಯದಲ್ಲಿ ಇರೋದೇ ಬಾಯಲ್ಲಿ ಬರೋದು. ಒಳ್ಳೆಯವನು ಒಳ್ಳೇದನ್ನೇ ಮಾತಾಡ್ತಾನೆ. ಯಾಕಂದ್ರೆ ಅವನ ಹೃದಯದಲ್ಲಿ ಒಳ್ಳೇದೇ ತುಂಬಿರುತ್ತೆ” ಅಂತ ಹೇಳಿದ. (ಮತ್ತಾ. 12:34, 35) ಹಾಗಾಗಿ ನಮ್ಮ ಸಹೋದರ ಸಹೋದರಿಯರ ಮೇಲೆ ನಮಗೆ ನಿಜವಾದ ಪ್ರೀತಿ ಇದ್ರೆ ಅವ್ರಿಗೆ ಸಮಾಧಾನ ಮಾಡ್ತೀವಿ, ಧೈರ್ಯ ತುಂಬ್ತೀವಿ. w23.11 10 ¶10-11

ಭಾನುವಾರ, ಆಗಸ್ಟ್‌ 31

ತಿಳುವಳಿಕೆ ಇರುವವರು ಅರ್ಥ ಮಾಡ್ಕೊಳ್ತಾರೆ.—ದಾನಿ. 12:10.

ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಯೆಹೋವ ದೇವರ ಸಹಾಯ ಬೇಕು. ಒಂದು ಉದಾಹರಣೆ ನೋಡಿ. ನಿಮಗೆ ಗೊತ್ತಿಲ್ಲದಿರೋ ಜಾಗಕ್ಕೆ ಹೋಗ್ತಾ ಇದ್ದೀರ ಅಂತ ಅಂದ್ಕೊಳ್ಳಿ. ನಿಮ್ಮ ಜೊತೆ ನಿಮ್ಮ ಫ್ರೆಂಡೂ ಇದ್ದಾರೆ. ಅವ್ರಿಗೆ ಆ ಜಾಗದ ಬಗ್ಗೆ ಚೆನ್ನಾಗಿ ಗೊತ್ತು. ಯಾವ ದಾರಿ ಎಲ್ಲಿಗೆ ಹೋಗುತ್ತೆ ಅಂತಾನೂ ಅವ್ರಿಗೆ ಗೊತ್ತು. ಆಗ ನಿಮಗೆ ‘ಇವರು ನನ್ನ ಜೊತೆ ಬಂದಿದ್ದು ಒಳ್ಳೇದಾಯ್ತಪ್ಪಾ’ ಅಂತ ಅನಿಸುತ್ತೆ ಅಲ್ವಾ? ಯೆಹೋವ ದೇವರು ಈ ಫ್ರೆಂಡ್‌ ತರಾನೇ ಇದ್ದಾನೆ. ನಾವು ಯಾವ ಸಮಯದಲ್ಲಿ ಜೀವಿಸ್ತಾ ಇದ್ದೀವಿ, ಮುಂದೆ ಏನಾಗುತ್ತೆ ಅಂತ ನಮಗಿಂತ ಚೆನ್ನಾಗಿ ಆತನಿಗೆ ಗೊತ್ತು. ಹಾಗಾಗಿ ಭವಿಷ್ಯವಾಣಿಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ದೀನತೆಯಿಂದ ಆತನ ಸಹಾಯ ಕೇಳಬೇಕು. (ದಾನಿ. 2:28; 2 ಪೇತ್ರ 1:19, 20) ಅಪ್ಪಅಮ್ಮಂದಿರಿಗೆ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅನ್ನೋ ಆಸೆ ಇರುತ್ತೆ. ಅದೇ ತರ ಯೆಹೋವ ದೇವರೂ ತನ್ನೆಲ್ಲಾ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅಂತ ಇಷ್ಟಪಡ್ತಾನೆ. (ಯೆರೆ. 29:11) ಆದ್ರೆ ಅಪ್ಪಅಮ್ಮಂದಿರಿಗೆ ಇಲ್ಲದಿರೋ ಒಂದು ಸಾಮರ್ಥ್ಯ ಯೆಹೋವನಿಗೆ ಇದೆ. ಅದೇನಂದ್ರೆ ಮುಂದೆ ಏನಾಗುತ್ತೆ ಅಂತ ಆತನಿಗೆ ಸ್ಪಷ್ಟವಾಗಿ ಗೊತ್ತು. ನಾವು ಅದ್ರ ಬಗ್ಗೆ ತಿಳ್ಕೊಬೇಕು ಅಂತಾನೇ ಅದನ್ನೆಲ್ಲ ಬೈಬಲಲ್ಲಿ ಎಷ್ಟೋ ವರ್ಷಗಳ ಮುಂಚೆನೇ ಬರೆಸಿಟ್ಟಿದ್ದಾನೆ.—ಯೆಶಾ. 46:10. w23.08 8 ¶3-4

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ