ಜುಲೈ
ಮಂಗಳವಾರ, ಜುಲೈ 1
ಆತನು ಆ ಇಡೀ ಪ್ರದೇಶ ತಿರುಗಾಡ್ತಾ ಒಳ್ಳೇ ಕೆಲಸಗಳನ್ನ ಮಾಡಿದನು . . . ಜನ್ರನ್ನ ವಾಸಿಮಾಡಿದನು.—ಅ. ಕಾ. 10:38.
ಯೇಸು ಹೇಳಿದ ಮಾತುಗಳಲ್ಲಿ, ಆತನು ನಡ್ಕೊಳ್ತಿದ್ದ ರೀತಿಯಲ್ಲಿ ಯೆಹೋವನ ಗುಣಗಳು ಎದ್ದು ಕಾಣ್ತಿತ್ತು. ಹಾಗಾಗಿ ಯೇಸು ಮಾಡಿದ ಅದ್ಭುತಗಳಿಂದಾನೂ ಯೆಹೋವನ ಯೋಚ್ನೆ ಏನು, ಆತನ ಆಸೆಗಳೇನು ಅಂತ ನಮಗೆ ಗೊತ್ತಾಗುತ್ತೆ. (ಯೋಹಾ. 14:9) ಹಾಗಾಗಿ ಯೇಸು ಮಾಡಿದ ಅದ್ಭುತಗಳಿಂದ ನಾವೇನು ಕಲಿತೀವಿ? ಯೆಹೋವ ಮತ್ತು ಯೇಸುಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ. ಯೇಸುಗೆ ಜನ್ರ ಮೇಲೆ ಪ್ರೀತಿ ಇತ್ತು. ಅದಕ್ಕೆ ಅವರು ಕಷ್ಟಪಡ್ತಿದ್ದಾಗ ಅವ್ರಿಗೆ ಸಹಾಯ ಮಾಡೋಕೆ ಅದ್ಭುತಗಳನ್ನ ಮಾಡಿದನು. ಒಂದು ಸಲ, ಇಬ್ರು ಕುರುಡರು ಯೇಸು ಹತ್ರ ಬಂದು ತಮ್ಮನ್ನ ವಾಸಿ ಮಾಡು ಅಂತ ಅಂಗಲಾಚಿ ಬೇಡ್ಕೊಂಡ್ರು. (ಮತ್ತಾ. 20:30-34) ಅವ್ರನ್ನ ನೋಡಿದಾಗ ಆತನಿಗೆ “ತುಂಬ ಕನಿಕರ ಆಯ್ತು.” “ಕನಿಕರ ಆಯ್ತು” ಅನ್ನೋ ಪದಕ್ಕೆ ಬಳಸಿರೋ ಗ್ರೀಕ್ ಕ್ರಿಯಾಪದ ‘ಕರುಳು’ ಅನ್ನೋ ಪದಕ್ಕೆ ಸಂಬಂಧಪಟ್ಟಿದೆ. ಯೇಸುಗೆ ಅವ್ರನ್ನ ನೋಡಿದಾಗ ಕರುಳು ಕಿತ್ತು ಬಂದ ಹಾಗಾಯ್ತು. ಅದಕ್ಕೆ ಅವ್ರಿಗೆ ಕಣ್ಣು ಬರೋ ತರ ಮಾಡಿದನು. ಜನ್ರನ್ನ ನೋಡಿ ಯೇಸುಗೆ ಅಯ್ಯೋ ಪಾಪ ಅನಿಸಿದ್ರಿಂದಾನೇ ಸಹಾಯ ಮಾಡೋಕೆ ಮುಂದೆ ಬಂದನು. ಹಸಿದವ್ರಿಗೆ ಊಟ ಕೊಟ್ಟನು. ಕುಷ್ಠರೋಗಿಗಳನ್ನ ವಾಸಿ ಮಾಡಿದನು. (ಮತ್ತಾ. 15:32; ಮಾರ್ಕ 1:41) ಇದ್ರಿಂದ ನಮಗೇನು ಗೊತ್ತಾಗುತ್ತೆ? ಯೆಹೋವ ದೇವರಿಗೂ ನಮ್ಮ ಮೇಲೆ ಕೋಮಲ ಕರುಣೆ ಇದೆ. ಆತನು ಮತ್ತು ಯೇಸು ನಮ್ಮನ್ನ ತುಂಬ ಪ್ರೀತಿಸ್ತಾರೆ. ನಮಗೆ ಕಷ್ಟ ಬಂದ್ರೆ ಅವ್ರಿಗೂ ತುಂಬ ನೋವಾಗುತ್ತೆ. (ಲೂಕ 1:78; 1 ಪೇತ್ರ 5:7) ಹಾಗಾಗಿ ನಮ್ಮ ಕಷ್ಟಗಳನ್ನ ತೆಗೆದುಹಾಕೋಕೆ ಅವ್ರಿಬ್ರು ತುದಿಗಾಲಲ್ಲಿ ನಿಂತಿದ್ದಾರೆ. w23.04 3 ¶4-5
ಬುಧವಾರ, ಜುಲೈ 2
ಯೆಹೋವನನ್ನ ಪ್ರೀತಿಸೋರೇ, ಕೆಟ್ಟದ್ದನ್ನ ದ್ವೇಷಿಸಿ. ಆತನು ತನ್ನ ನಿಷ್ಠಾವಂತರ ಪ್ರಾಣವನ್ನ ಕಾದು ಕಾಪಾಡ್ತಾನೆ, ದುಷ್ಟರ ಕೈಯಿಂದ ಆತನು ಅವ್ರನ್ನ ಬಿಡಿಸ್ತಾನೆ.—ಕೀರ್ತ. 97:10.
ಕೆಟ್ಟ ಆಸೆಗಳನ್ನ ಜಾಸ್ತಿ ಮಾಡೋ ವಿಷ್ಯಗಳೇ ಈ ಲೋಕದಲ್ಲಿ ತುಂಬ್ಕೊಂಡಿದೆ. ಜನ್ರಿಗೂ ಅಂಥ ಮನರಂಜನೆನೇ ಇಷ್ಟ. ಆದ್ರೆ ನಾವು ಅಂಥ ವಿಷ್ಯಗಳನ್ನ ಓದಬಾರದು, ನೋಡಬಾರದು, ಕೇಳಿಸ್ಕೊಬಾರದು. ಬದಲಿಗೆ ಒಳ್ಳೇ ವಿಷ್ಯಗಳನ್ನ ಮನಸ್ಸಲ್ಲಿ ತುಂಬಿಸ್ಕೊಬೇಕು. ಅದಕ್ಕೆ ಬೈಬಲ್ ಓದಬೇಕು, ಸಂಶೋಧನೆ ಮಾಡಬೇಕು, ಕೂಟಗಳಿಗೆ ಹೋಗಬೇಕು, ಸಿಹಿಸುದ್ದಿ ಸಾರಬೇಕು. ಯೆಹೋವ ದೇವರು ಕೂಡ ನಮಗೆ ಸಹಿಸ್ಕೊಳ್ಳೋಕೆ ಆಗದೆ ಇರೋಷ್ಟರ ಮಟ್ಟಿಗೆ ಕೆಟ್ಟ ಆಸೆಗಳು ಬರೋಕೆ ಬಿಡಲ್ಲ ಅಂತ ಮಾತು ಕೊಟ್ಟಿದ್ದಾನೆ. (1 ಕೊರಿಂ. 10:12, 13) ನಾವು ಯೆಹೋವನಿಗೆ ನಿಯತ್ತಾಗಿ ಇರೋಕೆ ಪ್ರಾರ್ಥನೆ ಮಾಡ್ತಾ ಇರಬೇಕು. ಯಾಕಂದ್ರೆ ನಾವು ಜೀವಿಸ್ತಾ ಇರೋದು ಕೊನೇ ದಿನಗಳಲ್ಲಿ. ಹಾಗಾಗಿ ಯೆಹೋವನ ಹತ್ರ “ಮನಸ್ಸನ್ನ ತೋಡ್ಕೊಳ್ಳಿ.” (ಕೀರ್ತ. 62:8) ಆತನನ್ನ ಹಾಡಿ ಹೊಗಳಿ. ಆತನು ನಿಮಗೋಸ್ಕರ ಏನೆಲ್ಲ ಮಾಡಿದ್ದಾನೋ ಅದಕ್ಕೆಲ್ಲ ಥ್ಯಾಂಕ್ಸ್ ಹೇಳಿ. ಸಿಹಿಸುದ್ದಿ ಸಾರೋಕೆ ಧೈರ್ಯ ಕೊಡಪ್ಪಾ ಅಂತ ಬೇಡ್ಕೊಳ್ಳಿ. ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಸಹಾಯ ಮಾಡು ಅಂತ ಕೇಳಿ. ಕೆಟ್ಟ ಆಸೆಗಳಿಂದ ನಮ್ಮನ್ನ ಕಾಪಾಡಪ್ಪಾ ಅಂತ ಪ್ರಾರ್ಥನೆ ಮಾಡಿ. ಯೆಹೋವನ ಹತ್ರ ಮಾತಾಡೋಕೆ ಕೊಡೋ ಸಮಯವನ್ನ ಬೇರೆ ಯಾವುದಕ್ಕೂ ಯಾರಿಗೂ ಕೊಡಬೇಡಿ. ಇದನ್ನೆಲ್ಲ ಮಾಡಿದ್ರೆ ಯೆಹೋವ ನಮ್ಮ ಪ್ರಾರ್ಥನೆ ಕೇಳಿ ಉತ್ರ ಕೊಡ್ತಾನೆ. w23.05 7 ¶17-18
ಗುರುವಾರ, ಜುಲೈ 3
ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ . . . ಪ್ರೋತ್ಸಾಹಿಸ್ತಾ ಇರೋಣ.—ಇಬ್ರಿ. 10:24, 25.
ನಾವು ಕೂಟಗಳಿಗೆ ಯಾಕೆ ಹೋಗ್ತೀವಿ? ಒಂದು, ಯೆಹೋವನನ್ನ ಹೊಗಳೋಕೆ. (ಕೀರ್ತ. 26:12; 111:1) ಇನ್ನೊಂದು, ಕಷ್ಟದಲ್ಲಿರೋ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸೋಕೆ. (1 ಥೆಸ. 5:11) ನಾವು ಕೂಟಗಳಲ್ಲಿ ಕೈಯೆತ್ತಿ ಉತ್ರ ಕೊಟ್ಟಾಗ ಈ ಎರಡೂ ವಿಷ್ಯಗಳನ್ನ ಮಾಡ್ತೀವಿ. ಆದ್ರೆ ಕೆಲವರಿಗೆ ಉತ್ರ ಹೇಳೋಕೆ ತುಂಬ ಭಯ ಆಗುತ್ತೆ. ಇನ್ನೂ ಕೆಲವರಿಗೆ ತುಂಬ ಉತ್ರಗಳನ್ನ ಹೇಳಬೇಕು ಅಂತ ಆಸೆ ಇರುತ್ತೆ. ಆದ್ರೆ ಅಷ್ಟು ಅವಕಾಶಗಳು ಸಿಗದೆ ಹೋಗಬಹುದು. ಆಗ ನಾವೇನು ಮಾಡೋದು? ಅದಕ್ಕೆ ಪೌಲ ಏನು ಹೇಳಿದ ಅಂತ ನೋಡಿ. ಅವನು ನಮ್ಮ ಗಮನ ‘ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸೋದ್ರ’ ಮೇಲೆ ಇರಬೇಕು ಅಂತ ಹೇಳಿದ. ಹಾಗಾಗಿ ನಾವು ಕೊಡೋ ಚಿಕ್ಕ ಚಿಕ್ಕ ಉತ್ರಗಳಿಂದಾನೂ ಬೇರೆಯವರಿಗೆ ಪ್ರೋತ್ಸಾಹ ಸಿಗುತ್ತೆ. ಇದನ್ನ ಮನಸ್ಸಲ್ಲಿಟ್ರೆ ನಮಗೆ ಉತ್ರ ಹೇಳೋಕೆ ಧೈರ್ಯ ಬರುತ್ತೆ. ಒಂದುವೇಳೆ ನಮಗೆ ಜಾಸ್ತಿ ಉತ್ರಗಳನ್ನ ಹೇಳೋಕೆ ಅವಕಾಶ ಸಿಕ್ಕಿಲ್ಲ ಅಂದ್ರೆ ಬೇಜಾರ್ ಮಾಡ್ಕೊಬಾರದು, ಬೇರೆಯವರಿಗೆ ಅವಕಾಶ ಸಿಕ್ಕಿದ್ದಕ್ಕೆ ಖುಷಿಪಡಬೇಕು.—1 ಪೇತ್ರ 3:8. w23.04 20 ¶1-3
ಶುಕ್ರವಾರ, ಜುಲೈ 4
ಯೆರೂಸಲೇಮಿಗೆ ಹೋಗಬೇಕು. ಇಸ್ರಾಯೇಲಿನ ದೇವರಾದ ಯೆಹೋವನ ಆಲಯವನ್ನ ಪುನಃ ಕಟ್ಟಬೇಕು.—ಎಜ್ರ 1:3.
ಬಾಬೆಲಲ್ಲಿ ಯೆಹೂದ್ಯರು 70 ವರ್ಷ ಕೈದಿಗಳಾಗಿ ಇದ್ರು. ಆಮೇಲೆ ಅದರ ರಾಜ, ಯೆಹೂದ್ಯರು ತಮ್ಮ ತಾಯ್ನಾಡಿಗೆ ಅಂದ್ರೆ ಇಸ್ರಾಯೇಲ್‌ಗೆ ವಾಪಸ್ ಹೋಗಬಹುದು ಅಂತ ಪ್ರಕಟಣೆ ಮಾಡಿದ. (ಎಜ್ರ 1:2-4) ಸಾಮಾನ್ಯವಾಗಿ ಬಾಬೆಲಿನವರು ಕೈದಿಗಳನ್ನ ವಾಪಸ್ ಕಳಿಸ್ತಾ ಇರಲಿಲ್ಲ. (ಯೆಶಾ. 14:4, 17) ಆದ್ರೆ ಬಾಬೆಲ್ ಈಗ ಬೇರೆಯವ್ರ ಕೈವಶ ಆಗಿದೆ. ಅದ್ರ ಹೊಸ ರಾಜ ಈ ಪ್ರಕಟಣೆ ಮಾಡಿದ. ಇದೆಲ್ಲ ಆಗೋ ತರ ಮಾಡಿದ್ದು ಯೆಹೋವ ದೇವರೇ. ಅಲ್ಲಿದ್ದ ಯೆಹೂದ್ಯರು ಮುಖ್ಯವಾಗಿ ಕುಟುಂಬದ ಯಜಮಾನರು ಒಂದು ಮುಖ್ಯವಾದ ನಿರ್ಧಾರ ಮಾಡಬೇಕಿತ್ತು. ಅವರು ತಾಯ್ನಾಡಿಗೆ ಹೋಗಬೇಕಾ ಅಥವಾ ಅಲ್ಲೇ ಇರಬೇಕಾ ಅನ್ನೋ ನಿರ್ಧಾರನ ಮಾಡಬೇಕಿತ್ತು. ಇದನ್ನ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ. ಕೆಲವ್ರಿಗೆ ತುಂಬ ವಯಸ್ಸಾಗಿತ್ತು. ಅಷ್ಟು ದೂರ ಪ್ರಯಾಣ ಮಾಡೋದು ಅವ್ರಿಗೆ ಸುಲಭ ಆಗಿರಲಿಲ್ಲ. ಇನ್ನು ಕೆಲವರು ಹುಟ್ಟಿ ಬೆಳೆದಿದ್ದು ಬಾಬೆಲಲ್ಲೇ. ಇಸ್ರಾಯೇಲ್ ಅವ್ರ ತಾತ-ಮುತ್ತಾತರ ಊರಾಗಿತ್ತು. ಹಾಗಾಗಿ ಹೊಸ ಜಾಗಕ್ಕೆ ಹೋಗಿ ಜೀವನ ಮಾಡೋದು ಅವ್ರಿಗೆ ಕಷ್ಟ ಅನಿಸಿರುತ್ತೆ. ಅಷ್ಟೇ ಅಲ್ಲ, ಇನ್ನು ಕೆಲವರು ಬಾಬೆಲಲ್ಲೇ ಆಸ್ತಿ ಪಾಸ್ತಿ ಮಾಡ್ಕೊಂಡಿದ್ರು. ಅಲ್ಲಿ ಅವ್ರಿಗೆ ಒಳ್ಳೇ ವ್ಯಾಪಾರನೂ ಆಗ್ತಿತ್ತು. ಇದನ್ನೆಲ್ಲ ಬಿಟ್ಟುಹೋಗೋಕೆ ಅವ್ರಿಗೆ ಇಷ್ಟ ಆಗದೇ ಇದ್ದಿರಬಹುದು. w23.05 14 ¶1-2
ಶನಿವಾರ, ಜುಲೈ 5
ಸಿದ್ಧವಾಗಿರಿ.—ಮತ್ತಾ. 24:44.
ನಾವು ತಾಳ್ಮೆ, ಅನುಕಂಪ, ಪ್ರೀತಿ ಅನ್ನೋ ಗುಣಗಳನ್ನ ತೋರಿಸ್ತಾನೇ ಇರಬೇಕು ಅಂತ ಬೈಬಲ್ ಹೇಳುತ್ತೆ. ಲೂಕ 21:19 “ನಿಮ್ಮ ತಾಳ್ಮೆನೇ ನಿಮ್ಮ ಪ್ರಾಣ ಕಾಪಾಡುತ್ತೆ” ಅಂತ ಹೇಳುತ್ತೆ. ಕೊಲೊಸ್ಸೆ 3:12 ‘ಅನುಕಂಪನ ಬಟ್ಟೆ ತರ ಹಾಕ್ಕೊಳ್ಳಿ’ ಅನ್ನುತ್ತೆ. 1 ಥೆಸಲೊನೀಕ 4:9, 10 “ಒಬ್ರನ್ನೊಬ್ರು . . . ಪ್ರೀತಿಸಬೇಕಂತ ದೇವರೇ ನಿಮಗೆ ಕಲಿಸಿದ್ದಾನೆ . . . ಆದ್ರೆ ಸಹೋದರರೇ, ನೀವು ಇನ್ನೂ ಜಾಸ್ತಿ ಪ್ರೀತಿ ತೋರಿಸ್ತಾ ಇರಬೇಕಂತ ಪ್ರೋತ್ಸಾಹಿಸ್ತಾ ಇದ್ದೀವಿ” ಅಂತ ಹೇಳುತ್ತೆ. ಈ ಮಾತುಗಳನ್ನ ಯಾರಿಗೆ ಬರೆದ್ರೋ ಆ ಕ್ರೈಸ್ತರು ಈ ಗುಣಗಳನ್ನ ಈಗಾಗ್ಲೇ ತೋರಿಸ್ತಿದ್ರು. ಆದ್ರೂ ಯಾಕೆ ಈ ತರ ಹೇಳಿದ್ರು? ಯಾಕಂದ್ರೆ ಅವರು ಈ ಗುಣಗಳನ್ನ ತೋರಿಸ್ತಾನೇ ಇರಬೇಕಿತ್ತು. ನಾವೂ ಈ ಗುಣಗಳನ್ನ ತೋರಿಸ್ತಾ ಇರಬೇಕು. ಆಗ ಮಹಾ ಸಂಕಟಕ್ಕೆ ರೆಡಿಯಾಗ್ತೀವಿ. ಹಾಗಾಗಿ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಆ ಗುಣಗಳನ್ನ ಹೇಗೆ ತೋರಿಸಿದ್ರು ಅಂತ ನೋಡಬೇಕು ಮತ್ತು ನಾವೂ ಆ ಗುಣಗಳನ್ನ ಹೇಗೆ ತೋರಿಸಬಹುದು ಅಂತ ಕಲಿಬೇಕು. ಹೀಗೆ ಮಾಡಿದಾಗ, ಮಹಾ ಸಂಕಟ ಶುರು ಆಗೋಷ್ಟರಲ್ಲಿ ನಾವು ಸಹಿಸ್ಕೊಳ್ಳೋದನ್ನ ಕಲ್ತಿರ್ತೀವಿ. ಆಗ ಏನೇ ಕಷ್ಟ ಬಂದ್ರೂ ಸಹಿಸ್ಕೊಳ್ತೀವಿ. w23.07 3 ¶4, 8
ಭಾನುವಾರ, ಜುಲೈ 6
ಒಂದು ಹೆದ್ದಾರಿ ಇರುತ್ತೆ . . . ಪವಿತ್ರ ದಾರಿ ಅನ್ನೋ ದಾರಿ ಇರುತ್ತೆ.—ಯೆಶಾ. 35:8.
ನಾವು ಅಭಿಷಿಕ್ತರಾಗಿರಲಿ, ‘ಬೇರೆ ಕುರಿಗಳಾಗಿರಲಿ’ ಇದ್ರಿಂದ ಎಲ್ರಿಗೂ ಪ್ರಯೋಜನ ಇದೆ. ಯಾಕಂದ್ರೆ ನಾವೆಲ್ರೂ ‘ಪವಿತ್ರ ದಾರಿಯಲ್ಲಿ’ ನಡೀತಾ ಇದ್ದೀವಿ. ಆ ದಾರಿಯಲ್ಲೇ ನಡೀತಾ ಇದ್ರೆ ಈಗ ನಾವು ಯೆಹೋವನನ್ನ ಚೆನ್ನಾಗಿ ಆರಾಧನೆ ಮಾಡಕ್ಕಾಗುತ್ತೆ. ಮುಂದೆ ಹೊಸ ಲೋಕದಲ್ಲೂ ನಮಗೆ ತುಂಬಾ ಆಶೀರ್ವಾದಗಳು ಸಿಗುತ್ತೆ. (ಯೋಹಾ. 10:16) ಕ್ರಿಸ್ತ ಶಕ 1919ರಿಂದ ಲಕ್ಷಗಟ್ಟಲೆ ಜನ್ರು ಸುಳ್ಳು ಧರ್ಮಗಳ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲನ್ನ ಬಿಟ್ಟುಬಂದಿದ್ದಾರೆ. ಅವರು ಈ ‘ಪವಿತ್ರ ದಾರಿಯಲ್ಲಿ’ ನಡೀತಾ ಇದ್ದಾರೆ. ಅದ್ರಲ್ಲಿ ತುಂಬ ಜನ ಹೆಂಗಸರು, ಗಂಡಸರು, ಮಕ್ಕಳು ಇದ್ದಾರೆ. ಯೆಹೂದ್ಯರು ಬಾಬೆಲಿಂದ ಇಸ್ರಾಯೇಲಿಗೆ ಬರೋ ದಾರಿಯಲ್ಲಿದ್ದ ಅಡೆತಡೆಗಳನ್ನ ಯೆಹೋವ ತೆಗೆದು ಹಾಕಿದನು. (ಯೆಶಾ. 57:14) ನಮ್ಮ ಕಾಲದಲ್ಲಿ ದಾರಿಯಲ್ಲಿದ್ದ ಅಡೆತಡೆಗಳನ್ನ ಯೆಹೋವ ಹೇಗೆ ತೆಗೆದು ಹಾಕಿದನು? ಇದಕ್ಕೆ ಆತನು ದೇವರ ಮೇಲೆ ಭಯಭಕ್ತಿ ಇದ್ದ ಕೆಲವ್ರನ್ನ ಉಪಯೋಗಿಸಿದನು. ಅವರು 1919ಕ್ಕೂ ನೂರಾರು ವರ್ಷ ಮುಂಚೆನೇ ‘ಪವಿತ್ರ ದಾರಿಯನ್ನ’ ಸಿದ್ಧ ಮಾಡೋಕೆ ಶುರುಮಾಡಿದ್ರು. ಇದ್ರಿಂದ ತುಂಬ ಜನ್ರು ಮುಂದೆ ಸುಳ್ಳು ಧರ್ಮನ ಬಿಟ್ಟುಬರೋಕೆ ಆಯ್ತು. (ಯೆಶಾಯ 40:3 ಹೋಲಿಸಿ.) ಅವರು ಕೂಡ ಶುದ್ಧಾರಾಧನೆ ಮಾಡ್ತಿದ್ದ ಜನ್ರ ಜೊತೆ ಸೇರಿ ಯೆಹೋವ ದೇವರನ್ನ ಆರಾಧಿಸೋಕೆ ಆಯ್ತು. w23.05 15-16 ¶8-9
ಸೋಮವಾರ, ಜುಲೈ 7
ಸಂತೋಷದಿಂದ ಯೆಹೋವನ ಸೇವೆ ಮಾಡಿ. ಸಂತೋಷದಿಂದ ಜೈಕಾರ ಹಾಕ್ತಾ ಆತನ ಸನ್ನಿಧಿಗೆ ಬನ್ನಿ.—ಕೀರ್ತ. 100:2.
ನಾವು ಯೆಹೋವನ ಸೇವೆಯನ್ನ ಖುಷಿಖುಷಿಯಾಗಿ ಮನಸ್ಸಾರೆ ಮಾಡಬೇಕು ಅಂತ ಆತನು ಆಸೆ ಪಡ್ತಾನೆ. (2 ಕೊರಿಂ. 9:7) ಆದ್ರೆ ಛಲ ಕಡಿಮೆ ಆದಾಗ ನಮಗೆ ಏನು ಮಾಡೋಕೂ ಮನಸ್ಸೇ ಆಗಲ್ಲ. ಅರೆಮನಸ್ಸಿಂದ ಗುರಿ ಮುಟ್ಟೋಕೆ ಪ್ರಯತ್ನ ಮಾಡ್ತೀವಿ. ಈ ತರ ಮನಸ್ಸಿಲ್ಲದೆ ಇದ್ದಾಗ್ಲೂ ನಾವು ಮಾಡೋ ಪ್ರಯತ್ನನ ಯೆಹೋವ ಮೆಚ್ಕೊಳ್ತಾನಾ ಅನ್ನೋ ಸಂಶಯ ನಮಗೆ ಬರಬಹುದು. ಅಪೊಸ್ತಲ ಪೌಲನಿಗೂ ಕೂಡ ಕೆಲವೊಮ್ಮೆ ಛಲ ಕಮ್ಮಿ ಆಗಿಬಿಡ್ತಿತ್ತು. ಮನಸ್ಸಿಲ್ಲದೆ ಇದ್ರೂ ಯೆಹೋವನ ಸೇವೆ ಮಾಡೋಕೆ ಅವನು ಪ್ರಯತ್ನ ಹಾಕ್ತಿದ್ದ. “ನನ್ನ ದೇಹವನ್ನೇ ಜಜ್ಜಿ ಜಜ್ಜಿ ದಾಸನ ತರ ಮಾಡ್ಕೊಳ್ತೀನಿ” ಅಂತ ಅವನು ಹೇಳಿದ. (1 ಕೊರಿಂ. 9:25-27, ಪಾದಟಿಪ್ಪಣಿ) ಅವನು ಮಾಡಿದ ಸೇವೆಯನ್ನ ಯೆಹೋವ ಮೆಚ್ಕೊಂಡ್ನಾ? ಹೌದು, ಅವನನ್ನ ಆಶೀರ್ವದಿಸಿದನು. (2 ತಿಮೊ. 4:7, 8.) ಛಲ ಕಡಿಮೆ ಆದಾಗ್ಲೂ ನಾವು ಹಾಕೋ ಪ್ರಯತ್ನನ ಯೆಹೋವ ಮೆಚ್ಕೊಳ್ತಾನೆ. ಯಾಕಂದ್ರೆ ಗುರಿ ಮುಟ್ಟೋಕೆ ನಾವೇನು ಮಾಡ್ತಾ ಇದ್ದೀವೋ ಅದು ನಮಗೆ ಇಷ್ಟ ಇಲ್ಲದೆ ಇರಬಹುದು. ಆದ್ರೆ ಅದನ್ನ ಯೆಹೋವನ ಮೇಲಿರೋ ಪ್ರೀತಿಯಿಂದ ಮಾಡ್ತಾ ಇದ್ದೀವಿ. ಅದನ್ನ ಯೆಹೋವ ನೋಡ್ತಾನೆ. ಪೌಲನ ತರ ನಮ್ಮನ್ನೂ ಆಶೀರ್ವದಿಸ್ತಾನೆ. (ಕೀರ್ತ. 126:5) ನಾವು ಒಂದು ಸಲ ಯೆಹೋವನ ಆಶೀರ್ವಾದದ ರುಚಿ ನೋಡಿದ್ರೆ ಸಾಕು, ಆಮೇಲೆ ಛಲ ತನ್ನಿಂದ ತಾನೇ ಬಂದುಬಿಡುತ್ತೆ. w23.05 29 ¶9-10
ಮಂಗಳವಾರ, ಜುಲೈ 8
ಯೆಹೋವನ ದಿನ . . . ಬರುತ್ತೆ.—1 ಥೆಸ. 5:2.
ಯೆಹೋವನ ದಿನದಲ್ಲಿ ಯಾರು ಉಳಿಯಲ್ವೋ ಅವ್ರನ್ನ ನಿದ್ದೆ ಮಾಡ್ತಾ ಇರುವವ್ರಿಗೆ ಪೌಲ ಹೋಲಿಸಿದ್ದಾನೆ. ನಿದ್ದೆ ಮಾಡ್ತಾ ಇರುವವ್ರಿಗೆ ಹೊತ್ತು ಹೋಗೋದೂ ಗೊತ್ತಾಗಲ್ಲ, ಸುತ್ತಮುತ್ತ ಏನು ನಡಿತಿದೆ ಅಂತಾನೂ ಗೊತ್ತಾಗಲ್ಲ. ಹಾಗಾಗಿ ಒಂದು ದೊಡ್ಡ ಘಟನೆ ನಡೆದಾಗ ಅದು ನಡೆದಿದೆ ಅಂತಾನೂ ಗೊತ್ತಾಗಲ್ಲ, ಏನು ಮಾಡೋಕೂ ಆಗಲ್ಲ. ಇವತ್ತು ತುಂಬ ಜನ ಒಂದರ್ಥದಲ್ಲಿ ನಿದ್ದೆ ಮಾಡ್ತಾ ಇದ್ದಾರೆ. (ರೋಮ. 11:8) ನಾವು “ಕೊನೇ ದಿನಗಳಲ್ಲಿ” ಜೀವಿಸ್ತಾ ಇದ್ದೀವಿ ಮತ್ತು ಮಹಾ ಸಂಕಟ ತುಂಬ ಬೇಗ ಶುರು ಆಗುತ್ತೆ ಅನ್ನೋದಕ್ಕೆ ಕಣ್ಮುಂದೆನೇ ಸಾಕ್ಷಿಗಳಿದ್ರೂ ತುಂಬ ಜನ ಅದನ್ನ ತಲೆಗೇ ಹಾಕೊಳ್ಳಲ್ಲ. (2 ಪೇತ್ರ 3:3, 4) ಆದ್ರೆ ನಾವು ಈ ಜನ್ರ ತರ ಇಲ್ಲ. ಒಂದೊಂದು ದಿನ ಕಳೆದ ಹಾಗೆ ಇನ್ನೂ ಎಚ್ಚರವಾಗಿ ಇರ್ತೀವಿ. ಇದೆಷ್ಟು ಮುಖ್ಯ ಅಂತ ನಮಗೆ ಗೊತ್ತು. (1 ಥೆಸ. 5:6) ಹಾಗಾಗಿ ನಾವು ಶಾಂತವಾಗಿ ಯೋಚಿಸಬೇಕು ಮತ್ತು ನಮ್ಮ ಯೋಚ್ನೆ ನಮ್ಮ ಹತೋಟಿಯಲ್ಲಿ ಇರಬೇಕು. ಯಾಕೆ? ಹಾಗಿದ್ರೆನೇ ನಾವು ರಾಜಕೀಯ ಮತ್ತು ಸಾಮಾಜಿಕ ವಿಷ್ಯಗಳಲ್ಲಿ ಪಕ್ಷ ವಹಿಸಲ್ಲ. ಯೆಹೋವನ ದಿನ ಹತ್ರ ಆಗ್ತಾ ಹೋದ ಹಾಗೆ ಆ ವಿಷ್ಯಗಳಲ್ಲಿ ನಾವು ಪಕ್ಷ ವಹಿಸಬೇಕು ಅನ್ನೋ ಒತ್ತಡ ಜಾಸ್ತಿ ಆಗ್ತಾ ಹೋಗುತ್ತೆ. ಆಗ ನಾವೇನು ಮಾಡ್ತೀವಿ ಅಂತ ಈಗ ಚಿಂತಿಸೋ ಅಗತ್ಯ ಇಲ್ಲ. ಯಾಕಂದ್ರೆ ನಾವು ಶಾಂತ ಮನಸ್ಸಿಂದ ಸ್ಪಷ್ಟವಾಗಿ ಯೋಚಿಸ್ತಾ, ಸರಿಯಾದ ತೀರ್ಮಾನಗಳನ್ನ ಮಾಡೋಕೆ ಪವಿತ್ರಶಕ್ತಿ ಸಹಾಯ ಮಾಡುತ್ತೆ.—ಲೂಕ 12:11, 12. w23.06 10 ¶6-7
ಬುಧವಾರ, ಜುಲೈ 9
ವಿಶ್ವದ ರಾಜ ಯೆಹೋವನೇ, ದಯವಿಟ್ಟು ನನ್ನನ್ನ ನೆನಪಿಸ್ಕೊ. ದಯವಿಟ್ಟು ಇದೊಂದು ಸಲ ನನಗೆ ಶಕ್ತಿ ಕೊಡು.—ನ್ಯಾಯ. 16:28.
ಸಂಸೋನ ಅಂದ ತಕ್ಷಣ ನಿಮಗೆ ಏನು ನೆನಪಾಗುತ್ತೆ? ಅವನು ಒಬ್ಬ ಬಲಶಾಲಿ ವ್ಯಕ್ತಿ ಅಂತ ನಿಮಗೆ ನೆನಪಾಗಬಹುದು. ಅದು ನಿಜಾನೇ. ಆದ್ರೆ ಅವನು ತಗೊಂಡ ಒಂದು ತೀರ್ಮಾನದಿಂದ ತುಂಬ ಕಷ್ಟ ಅನುಭವಿಸಬೇಕಾಯ್ತು. ಆದ್ರೂ ಅವನು ಜೀವನ ಇಡೀ ತೋರಿಸಿದ ನಂಬಿಕೆಯನ್ನ ಯೆಹೋವ ಗಮನಿಸಿ ಆಶೀರ್ವದಿಸಿದನು. ಅವನ ಕಥೆಯಿಂದ ನಮಗೆ ಪ್ರಯೋಜನ ಆಗಲಿ ಅಂತ ಅದನ್ನ ಬೈಬಲಲ್ಲಿ ಬರೆಸಿಟ್ಟನು. ಯೆಹೋವ ಇಸ್ರಾಯೇಲ್ಯರಿಗೆ ಸಹಾಯ ಮಾಡೋಕೆ ಸಂಸೋನನನ್ನ ಬಳಸಿದನು. ಅವನ ಕೈಯಿಂದ ದೊಡ್ಡದೊಡ್ಡ ಕೆಲಸಗಳನ್ನ ಮಾಡಿಸಿದನು. ಅವನು ಸತ್ತು ನೂರಾರು ವರ್ಷ ಆದ್ಮೇಲೂ ಅವನು ತೋರಿಸಿದ ನಂಬಿಕೆನ ಯೆಹೋವ ಮರಿಲಿಲ್ಲ. ಅಪೊಸ್ತಲ ಪೌಲ ನಂಬಿಕೆ ತೋರಿಸಿದವ್ರ ಪಟ್ಟಿ ಮಾಡ್ತಿದ್ದಾಗ ಅದ್ರಲ್ಲಿ ಸಂಸೋನನ ಹೆಸ್ರನ್ನೂ ಬರೆಸಿದನು. (ಇಬ್ರಿ. 11:32-34) ಯಾಕಂದ್ರೆ ಕಷ್ಟದ ಸಮಯದಲ್ಲೂ ಸಂಸೋನ ಯೆಹೋವನನ್ನ ನಂಬಿದ್ದ. ಸಂಸೋನನಿಂದ ಕಲಿಯೋಕೆ ಎಷ್ಟೋ ವಿಷ್ಯಗಳಿದೆ. ಅದ್ರಿಂದ ನಮಗೆ ತುಂಬ ಪ್ರೋತ್ಸಾಹನೂ ಸಿಗುತ್ತೆ. w23.09 2 ¶1-2
ಗುರುವಾರ, ಜುಲೈ 10
ದೇವರಿಗೆ . . . ಅಂಗಲಾಚಿ ಬೇಡಿ.—ಫಿಲಿ. 4:6.
ನಮ್ಮ ಮನಸ್ಸಲ್ಲಿರೋ ಚಿಂತೆನೆಲ್ಲಾ ಯೆಹೋವ ದೇವ್ರ ಹತ್ರ ಹೇಳ್ಕೊಬೇಕು. ಅಷ್ಟೇ ಅಲ್ಲ, ಪದೇ ಪದೇ ಪ್ರಾರ್ಥನೆ ಮಾಡಬೇಕು. ಆಗ ನಮಗೆ ಬರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಆಗುತ್ತೆ. (1 ಥೆಸ. 5:17) ಈಗ ನಿಮಗೆ ಅಂಥ ದೊಡ್ಡ ಸಮಸ್ಯೆ ಏನೂ ಇಲ್ಲದೆ ಇರಬಹುದು. ಆದ್ರೆ ಚಿಕ್ಕಚಿಕ್ಕ ವಿಷ್ಯಗಳಿಂದ ನಿಮಗೆ ಕಿರಿಕಿರಿ ಆಗ್ತಾ ಇರಬಹುದು, ಬೇಜಾರ್ ಆಗ್ತಾ ಇರಬಹುದು. ಅಂಥ ಚಿಕ್ಕಚಿಕ್ಕ ವಿಷ್ಯಗಳಿಗೂ ಯೆಹೋವ ದೇವರ ಹತ್ರ ಸಹಾಯ ಕೇಳೋ ರೂಢಿ ಮಾಡ್ಕೊಳ್ಳಿ. ಇದ್ರಿಂದ ಯೆಹೋವ ದೇವರಿಗೆ ಯಾವಾಗ, ಹೇಗೆ ಸಹಾಯ ಮಾಡಬೇಕು ಅಂತ ಚೆನ್ನಾಗಿ ಗೊತ್ತಿದೆ ಅನ್ನೋ ನಂಬಿಕೆ ನಿಮಗೆ ಬರುತ್ತೆ. ಆಗ ಮುಂದೆ ದೊಡ್ಡದೊಡ್ಡ ಕಷ್ಟಗಳು ಬಂದಾಗ ಯೆಹೋವನ ಹತ್ರ ಸಹಾಯ ಕೇಳೋಕೆ ನೀವು ಹಿಂಜರಿಯಲ್ಲ. (ಕೀರ್ತ. 27:1, 3) ನಾವು ಈಗ ಕಷ್ಟಗಳನ್ನ ತಾಳ್ಕೊಂಡ್ರೆ ಮುಂದೆ ಮಹಾ ಸಂಕಟದಲ್ಲಿ ಬರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಆಗುತ್ತೆ. (ರೋಮ. 5:3) ಇದು ನಮಗೆ ಎಷ್ಟೋ ಸಹೋದರರ ಅನುಭವದಿಂದ ಗೊತ್ತಾಗಿದೆ. ಅವರು ತಮಗೆ ಒಂದು ಕಷ್ಟ ಬಂದಾಗ ಅದನ್ನ ತಾಳ್ಕೊಂಡ್ರು. ಇದ್ರಿಂದ ಯೆಹೋವ ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಅವ್ರಿಗೆ ಬಂತು. ಆಗ ಅವ್ರಿಗೆ ಬಂದ ಇನ್ನೊಂದು ಕಷ್ಟನೂ ತಾಳ್ಕೊಳ್ಳೋಕೆ ಆಯ್ತು.—ಯಾಕೋ. 1:2-4. w23.07 3 ¶7-8
ಶುಕ್ರವಾರ, ಜುಲೈ 11
ನಾನು ನಿನಗೆ ಈ ವಿಷ್ಯದಲ್ಲೂ ದಯೆ ತೋರಿಸ್ತೀನಿ.—ಆದಿ. 19:21.
ಯೆಹೋವ ದೇವರಲ್ಲಿ ದೀನತೆ ಮತ್ತು ಕರುಣೆ ಇದೆ. ಹಾಗಾಗಿ ಕೆಲವೊಮ್ಮೆ ತಾನು ಅಂದ್ಕೊಂಡಿದ್ದನ್ನ ಮಾಡದೆ ಬಿಟ್ಕೊಟ್ಟಿದ್ದಾನೆ. ಉದಾಹರಣೆಗೆ, ಆತನು ಸೊದೋಮ್‌ನಲ್ಲಿದ್ದ ಕೆಟ್ಟ ಜನ್ರನ್ನೆಲ್ಲ ನಾಶ ಮಾಡಬೇಕು ಅಂತ ನಿರ್ಧಾರ ಮಾಡಿದನು. ಅದಕ್ಕೆ ತನ್ನ ದೂತರನ್ನ ಕಳಿಸಿ ಅಲ್ಲಿದ್ದ ಲೋಟನಿಗೆ ಬೆಟ್ಟದ ಪ್ರದೇಶಕ್ಕೆ ಓಡಿಹೋಗೋಕೆ ಹೇಳಿದನು. ಆದ್ರೆ ಲೋಟನಿಗೆ ಅಲ್ಲಿಗೆ ಹೋಗೋಕೆ ಭಯ ಆಯ್ತು. ಅದಕ್ಕೆ ಅವನು ‘ನಾನು ಮತ್ತು ನನ್ನ ಕುಟುಂಬದವರು ಚೋಗರ್ ಅನ್ನೋ ಚಿಕ್ಕ ಊರಿಗೆ ಓಡಿ ಹೋಗ್ತೀವಿ’ ಅಂತ ಕೇಳ್ಕೊಂಡ್ರು. ಆಗ ಯೆಹೋವ ದೇವರು ‘ನಾನು ಹೇಳಿದಷ್ಟು ಮಾಡು’ ಅಂತ ಗದರಿಸಲಿಲ್ಲ. ದೀನತೆ ತೋರಿಸಿದನು. ಚೋಗರ್ ಅನ್ನೋ ಊರನ್ನ ನಾಶ ಮಾಡಬೇಕು ಅಂತ ಅಂದ್ಕೊಂಡಿದ್ರೂ ಲೋಟನಿಗೋಸ್ಕರ ನಾಶ ಮಾಡದೆ ಬಿಟ್ಟುಬಿಟ್ಟನು. ಲೋಟನಿಗೆ ಅಲ್ಲಿಗೆ ಹೋಗೋಕೆ ಅನುಮತಿ ಕೊಟ್ಟನು. (ಆದಿ. 19:18-22) ಇದಾಗಿ ನೂರಾರು ವರ್ಷ ಆದ್ಮೇಲೆ ಯೆಹೋವ ನಿನೆವೆಯಲ್ಲಿದ್ದ ಜನ್ರಿಗೂ ಕರುಣೆ ತೋರಿಸಿದನು. ಅಲ್ಲಿದ್ದ ಜನ್ರು ತುಂಬ ಕೆಟ್ಟವರಾಗಿದ್ರಿಂದ ಅವ್ರನ್ನ, ಆ ಊರನ್ನ ನಾಶ ಮಾಡಬೇಕು ಅಂತ ಅಂದ್ಕೊಂಡಿದ್ದನು. ಅವ್ರನ್ನ ಎಚ್ಚರಿಸೋಕೆ ಪ್ರವಾದಿ ಯೋನನನ್ನೂ ಅವ್ರ ಹತ್ರ ಕಳಿಸಿದ್ದನು. ಆದ್ರೆ ನಿನೆವೆಯ ಜನ್ರು ಪಶ್ಚಾತ್ತಾಪಪಟ್ಟು ತಿದ್ಕೊಂಡಿದ್ರಿಂದ ಯೆಹೋವ ಅವ್ರಿಗೆ ಕರುಣೆ ತೋರಿಸಿದನು. ಅವ್ರನ್ನ ನಾಶ ಮಾಡದೆ ಬಿಟ್ಟುಬಿಟ್ಟನು.—ಯೋನ 3:1, 10; 4:10, 11. w23.07 21 ¶5
ಶನಿವಾರ, ಜುಲೈ 12
ಅವರು ಅವನನ್ನ [ಯೆಹೋವಾಷನನ್ನ] ಸಾಯಿಸಿಬಿಟ್ರು . . . ಆದ್ರೆ ರಾಜರ ಸಮಾಧಿಯಲ್ಲಿ ಹೂಣಿಡಲಿಲ್ಲ.—2 ಪೂರ್ವ. 24:25.
ಯೆಹೋವಾಷನ ಉದಾಹರಣೆಯಿಂದ ನಾವೇನು ಕಲಿಬಹುದು? ಅವನು ಆಳವಾಗಿ ಬೇರುಬಿಟ್ಟಿರದ ಮರದ ತರ ಇದ್ದ. ಯೆಹೋಯಾದ ಅವನಿಗೆ ಬೆಂಬಲವಾಗಿ ನಿಂತಿದ್ದ. ಯಾವಾಗ ಯೆಹೋಯಾದ ತೀರಿ ಹೋದ್ನೋ ಆಗ ಯೆಹೋವಾಷ ಧರ್ಮಭ್ರಷ್ಟತೆ ಅನ್ನೋ ಬಿರುಗಾಳಿಗೆ ಬಿದ್ದುಹೋದ. ಅದೇ ತರ ನಮ್ಮ ಮನೆಯವರು ಸತ್ಯದಲ್ಲಿ ಇದ್ದಾರೆ ಅಥವಾ ನಮ್ಮ ಸುತ್ತಮುತ್ತ ಸಹೋದರ ಸಹೋದರಿಯರು ಇದ್ದಾರೆ ಅಂದ ತಕ್ಷಣ ನಮ್ಮಲ್ಲೂ ದೇವಭಯ ಇದೆ ಅಂತ ಅರ್ಥ ಅಲ್ಲ. ಅದನ್ನ ನಾವೇ ಬೆಳೆಸ್ಕೊಬೇಕು. ಯೆಹೋವನ ಜೊತೆ ನಮ್ಮ ಸಂಬಂಧನ ಬಲವಾಗಿ ಇಟ್ಕೊಂಡು ಯಾವಾಗ್ಲೂ ಭಯಭಕ್ತಿಯಿಂದ ಇರಬೇಕಂದ್ರೆ ನಾವು ಬೈಬಲ್ ಓದಬೇಕು. ಓದಿದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. ಪ್ರಾರ್ಥನೆ ಮಾಡಬೇಕು. (ಯೆರೆ. 17:7, 8; ಕೊಲೊ. 2:6, 7) ಯೆಹೋವ ನಮ್ಮ ಹತ್ರ ಜಾಸ್ತಿ ಏನೂ ಕೇಳಲ್ಲ. ಆತ ನಮ್ಮ ಹತ್ರ ಕೇಳೋದು ಇಷ್ಟೆನೇ: “ಸತ್ಯ ದೇವರಿಗೆ ಭಯಪಡು ಮತ್ತು ಆತನ ಆಜ್ಞೆಗಳನ್ನ ಪಾಲಿಸು. ಇದೇ ಎಲ್ಲಾ ಮನುಷ್ಯರ ಕರ್ತವ್ಯ.” (ಪ್ರಸಂ. 12:13) ನಮಗೆ ದೇವರ ಮೇಲೆ ಭಯ ಇದ್ರೆ ಮುಂದೆ ಏನೇ ಕಷ್ಟ ಬಂದ್ರೂ ಹೆದರಲ್ಲ. ಯಾವ ಕಾರಣಕ್ಕೂ ಯೆಹೋವನ ಜೊತೆ ಇರೋ ನಮ್ಮ ಸ್ನೇಹನ ಬಿಟ್ಟುಕೊಡಲ್ಲ. w23.06 19 ¶17-19
ಭಾನುವಾರ, ಜುಲೈ 13
ನೋಡು, ನಾನು ಎಲ್ಲ ಹೊಸದಾಗಿ ಮಾಡ್ತೀನಿ.—ಪ್ರಕ. 21:5.
“ಆಗ ಸಿಂಹಾಸನದ ಮೇಲೆ ಕೂತಿದ್ದ ದೇವರು ಹೀಗೆ ಹೇಳಿದನು” ಅಂತ ವಚನ 5 ಶುರುವಾಗುತ್ತೆ. (ಪ್ರಕ. 21:5ಎ) ಈ ಮಾತುಗಳು ತುಂಬ ವಿಶೇಷವಾಗಿದೆ. ಯಾಕಂದ್ರೆ ಯೆಹೋವ ದೇವರು ಪ್ರಕಟನೆ ಪುಸ್ತಕದಲ್ಲಿ ನೇರವಾಗಿ ಮಾತಾಡಿರೋದು ಮೂರೇ ಸಲ. ಅದ್ರಲ್ಲಿ ಇದೂ ಒಂದು. ಈ ಮಾತನ್ನ ದೇವದೂತರಾಗ್ಲಿ, ಯೇಸುವಾಗ್ಲಿ ಹೇಳಲಿಲ್ಲ. ಯೆಹೋವನೇ ನೇರವಾಗಿ ಹೇಳಿದ್ದು! ಯೆಹೋವ “ಸುಳ್ಳು ಹೇಳೋಕೆ ಸಾಧ್ಯಾನೇ ಇಲ್ಲದ ದೇವರು.” (ತೀತ 1:2) ಹಾಗಾಗಿ ಪ್ರಕಟನೆ 21:5, 6ರಲ್ಲಿ ಹೇಳಿರೋ ಮಾತು ಸುಳ್ಳಾಗಲ್ಲ ಅಂತ ನಾವು ಕಣ್ಮುಚ್ಚಿ ನಂಬಬಹುದು. “ನೋಡು” ಅನ್ನೋ ಪದದ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಣ. “ನೋಡು” ಅನ್ನೋ ಪದ ಪ್ರಕಟನೆ ಪುಸ್ತಕದಲ್ಲಿ ತುಂಬ ಸಲ ಇದೆ. ಬೈಬಲನ್ನ ಬರೆದ ಮೂಲ ಭಾಷೆಯಲ್ಲಿ “ನೋಡು” ಅನ್ನೋ ಪದ ಆದ್ಮೇಲೆ ಒಂದು ಆಶ್ಚರ್ಯ ಸೂಚಕ ಚಿಹ್ನೆ ಇದೆ. ಆ ವಚನದಲ್ಲಿ ಯೆಹೋವ “ನೋಡು” ಅಂತ ಹೇಳಿದ್ಮೇಲೆ ಮುಂದೆ ಏನು ಹೇಳ್ತಿದ್ದಾನೆ ನೋಡಿ. “ನಾನು ಎಲ್ಲ ಹೊಸದಾಗಿ ಮಾಡ್ತೀನಿ.” ಇದು ಯೆಹೋವ ಮುಂದೆ ಮಾಡ್ಲಿಕ್ಕಿರೋ ಬದಲಾವಣೆಯ ಬಗ್ಗೆ ಹೇಳುತ್ತೆ. ಆದ್ರೆ ಯೆಹೋವ ದೇವರಿಗೆ ಮುಂದೆ ಇದು ನಿಜ ಆಗೇ ಆಗುತ್ತೆ ಅಂತ ಗೊತ್ತಿರೋದ್ರಿಂದ ಈಗಾಗ್ಲೇ ಇದು ಆಗಿದೆ ಅನ್ನೋ ರೀತಿಯಲ್ಲಿ ಮಾತಾಡ್ತಿದ್ದಾನೆ.—ಯೆಶಾ. 46:10. w23.11 3-4 ¶7-8
ಸೋಮವಾರ, ಜುಲೈ 14
ಪೇತ್ರ . . . ಹೊರಗೆ ಹೋಗಿ ಜೋರಾಗಿ ಅತ್ತ.—ಮತ್ತಾ. 26:75.
ಯೇಸು ಜೊತೆನೇ ಇದ್ದು ಆತನು ಮಾಡಿದ ಅದ್ಭುತಗಳನ್ನೆಲ್ಲ ಕಣ್ಣಾರೆ ನೋಡಿದ್ರೂ ಪೇತ್ರ ಮತ್ತೆ ತಪ್ಪುಗಳನ್ನ ಮಾಡಿಬಿಟ್ಟ. ಉದಾಹರಣೆಗೆ, ಯೇಸು ತುಂಬ ಹಿಂಸೆ ಅನುಭವಿಸಿ ಸಾಯಬೇಕಾಗುತ್ತೆ ಅಂತ ಬೈಬಲಲ್ಲಿ ಭವಿಷ್ಯವಾಣಿ ಇತ್ತು. ಅದು ಹೇಗೆ ನಿಜ ಆಗುತ್ತೆ ಅಂತ ಯೇಸು ವಿವರಿಸ್ತಾ ಇದ್ದಾಗ ಪೇತ್ರ ‘ಹಾಗೆ ಆಗಬಾರದು’ ಅಂತ ಹೇಳಿಬಿಟ್ಟ. (ಮಾರ್ಕ 8:31-33) ಅಷ್ಟೇ ಅಲ್ಲ, ಪೇತ್ರ ಮತ್ತು ಬೇರೆ ಅಪೊಸ್ತಲರು ತಮ್ಮಲ್ಲಿ ಯಾರು ದೊಡ್ಡವರು ಅಂತ ಪದೇ ಪದೇ ವಾದ ಮಾಡ್ತಿದ್ರು. (ಮಾರ್ಕ 9:33, 34) ಯೇಸು ಸಾಯೋ ಹಿಂದಿನ ರಾತ್ರಿ ಪೇತ್ರ ಆತುರಪಟ್ಟು ಒಬ್ಬ ವ್ಯಕ್ತಿಯ ಕಿವಿನೇ ಕತ್ತರಿಸಿಬಿಟ್ಟ. (ಯೋಹಾ. 18:10) ಅದೇ ರಾತ್ರಿ ಜನ್ರಿಗೆ ಹೆದರಿ ‘ಯೇಸು ಯಾರಂತಾನೇ ನಂಗೊತ್ತಿಲ್ಲ’ ಅಂತ ಮೂರು ಸಲ ಹೇಳಿಬಿಟ್ಟ. (ಮಾರ್ಕ 14:66-72) ಆಮೇಲೆ ಹಾಗೆ ಹೇಳಿದ್ದಿಕ್ಕೆ ಬೇಜಾರ್ ಮಾಡ್ಕೊಂಡು ತುಂಬ ಅತ್ತ. ‘ನಾನ್ ಹೀಗ್ ತಪ್ಪು ಮಾಡಿಬಿಟ್ನಲ್ಲಾ’ ಅಂತ ಪೇತ್ರ ಬೇಜಾರಲ್ಲಿ ಇದ್ದಾಗ ಯೇಸು ಅವನನ್ನ ಬಿಟ್ಟುಬಿಡಲಿಲ್ಲ. ಮತ್ತೆ ಜೀವ ಪಡ್ಕೊಂಡು ಬಂದ ಮೇಲೆ ಅವನಿಗೆ ಸಹಾಯ ಮಾಡಿದನು. ಯೇಸು ಮೇಲೆ ಪ್ರೀತಿ ಇದೆ ಅಂತ ತೋರಿಸೋಕೆ ಅವಕಾಶ ಮಾಡ್ಕೊಟ್ಟನು. ಅಷ್ಟೇ ಅಲ್ಲ, “ನನ್ನ ಕುರಿಮರಿಗಳನ್ನ ಮೇಯಿಸು” ಅಂತ ಹೇಳಿ ದೊಡ್ಡ ಜವಾಬ್ದಾರಿನೂ ಕೊಟ್ಟನು. (ಯೋಹಾ. 21:15-17) ಅದನ್ನ ಮಾಡೋಕೆ ಪೇತ್ರ ರೆಡಿ ಇದ್ದ. 50ನೇ ದಿನದ ಹಬ್ಬ ನಡೀತಾ ಇದ್ದಾಗ ಅವನು ಯೆರೂಸಲೇಮಲ್ಲಿ ಇದ್ದ. ಆ ಸಮಯದಲ್ಲಿ ಕೆಲವ್ರಿಗೆ ಪವಿತ್ರಶಕ್ತಿಯ ಅಭಿಷೇಕ ಆಯ್ತು. ಅವ್ರಲ್ಲಿ ಇವನೂ ಒಬ್ಬನಾಗಿದ್ದ. w23.09 22 ¶6-7
ಮಂಗಳವಾರ, ಜುಲೈ 15
ನನ್ನ ಚಿಕ್ಕ ಕುರಿಗಳಿಗೆ ಕುರುಬನಾಗಿರು.—ಯೋಹಾ. 21:16.
“ದೇವರ ಮಂದೆಯನ್ನ ಚೆನ್ನಾಗಿ ನೋಡ್ಕೊಳ್ಳಿ” ಅಂತ ಪೌಲ ಹಿರಿಯರಿಗೆ ಹೇಳ್ತಿದ್ದಾನೆ. (1 ಪೇತ್ರ 5:1-4) ಹಿರಿಯರೇ, ಸಭೆಯಲ್ಲಿರೋ ಸಹೋದರ ಸಹೋದರಿಯರನ್ನ ಚೆನ್ನಾಗಿ ನೋಡ್ಕೊಬೇಕು ಅಂತ ನಿಮಗೆ ತುಂಬ ಆಸೆ ಇರುತ್ತೆ. ಆದ್ರೆ ಅದನ್ನ ಮಾಡೋಕೆ ಕೆಲವೊಮ್ಮೆ ನಿಮಗೆ ಕಷ್ಟ ಆಗಬಹುದು. ಯಾಕಂದ್ರೆ ನಿಮಗೆ ತುಂಬ ಜವಾಬ್ದಾರಿಗಳಿವೆ, ನೀವೂ ಅವನ್ನೆಲ್ಲ ಮಾಡಿ ಸುಸ್ತಾಗಿರ್ತೀರ. ಅಂಥ ಸಂದರ್ಭದಲ್ಲಿ ಯೆಹೋವನಿಗೆ ಪ್ರಾರ್ಥನೆ ಮಾಡಿ ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಆತನ ಹತ್ರ ಹೇಳ್ಕೊಳ್ಳಿ. ಆಗ ಯೆಹೋವ ನಿಮಗೆ ಶಕ್ತಿ ಕೊಡ್ತಾನೆ. ಯಾಕಂದ್ರೆ “ಬೇರೆಯವ್ರಿಗೆ ಸಹಾಯ ಮಾಡೋಕೆ ಯಾರಾದ್ರೂ ಮುಂದೆ ಬಂದ್ರೆ ಅವರು ದೇವರ ಶಕ್ತಿ ಮೇಲೆ ಹೊಂದ್ಕೊಂಡು ಸಹಾಯ ಮಾಡ್ಲಿ” ಅಂತ ಪೇತ್ರ ಹೇಳಿದ್ದಾನೆ. (1 ಪೇತ್ರ 4:11) ನೀವೆಷ್ಟೇ ಸಹಾಯ ಮಾಡಿದ್ರೂ ಸಹೋದರ ಸಹೋದರಿಯರ ಕಷ್ಟಗಳು ಪೂರ್ತಿಯಾಗಿ ಬಗೆಹರಿದೇ ಹೋಗಬಹುದು. ಆಗ ‘ನನ್ನ ಕೈಯಿಂದ ಏನೂ ಮಾಡೋಕೆ ಆಗ್ತಿಲ್ವಲ್ಲಾ’ ಅಂತ ಬೇಜಾರು ಮಾಡ್ಕೊಬೇಡಿ. ಯಾಕಂದ್ರೆ “ಪ್ರಧಾನ ಕುರುಬ” ಯೇಸು ಕ್ರಿಸ್ತ ಅದನ್ನ ಮಾಡ್ತಾನೆ. ಆತನು ಅದನ್ನ ಈಗ್ಲೂ ಮಾಡಕ್ಕಾಗುತ್ತೆ. ಹೊಸಲೋಕದಲ್ಲೂ ಮಾಡಕ್ಕಾಗುತ್ತೆ. ಹಾಗಾಗಿ ಯೆಹೋವ ದೇವರು ನಿಮ್ಮ ಹತ್ರ ಕೇಳ್ಕೊಳ್ಳೋದು ಇಷ್ಟೇ. ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸಿ, ಅವ್ರನ್ನ ಚೆನ್ನಾಗಿ ನೋಡ್ಕೊಳ್ಳಿ, “ಮಂದೆಗೆ ಮಾದರಿಯಾಗಿರಿ.” w23.09 29-30 ¶13-14
ಬುಧವಾರ, ಜುಲೈ 16
ವಿವೇಕಿಗಳ ಆಲೋಚನೆಗಳು ವ್ಯರ್ಥ ಅಂತ ಯೆಹೋವನಿಗೆ ಗೊತ್ತು.—1 ಕೊರಿಂ. 3:20.
ನಾವು ಲೋಕದ ಜನ್ರ ತರ ಯೋಚ್ನೆ ಮಾಡಿದ್ರೆ ಯೆಹೋವ ದೇವರನ್ನ ಬಿಟ್ಟುಹೋಗಿಬಿಡ್ತೀವಿ. ಆತನ ನೀತಿನಿಯಮಗಳಿಗೆ ಒಂಚೂರೂ ಬೆಲೆ ಕೊಡಲ್ಲ. (1 ಕೊರಿಂ. 3:19.) “ಲೋಕದ ವಿವೇಕ” ಬೈಬಲ್ ಯಾವುದನ್ನ ತಪ್ಪು ಅಂತ ಹೇಳುತ್ತೋ ಅದು ತಪ್ಪಲ್ಲ ಅಂತ ಯೋಚ್ನೆ ಮಾಡೋ ತರ ಮಾಡಿಬಿಡುತ್ತೆ. ಒಂದನೇ ಶತಮಾನದಲ್ಲಿದ್ದ ಕೆಲವು ಕ್ರೈಸ್ತರಿಗೂ ಇದೇ ತರ ಆಯ್ತು. ಪೆರ್ಗಮ ಮತ್ತು ಥುವತೈರ ಸಭೆಯಲ್ಲಿದ್ದ ಕ್ರೈಸ್ತರು ಮೂರ್ತಿಪೂಜೆ, ಲೈಂಗಿಕ ಅನೈತಿಕತೆ ಮಾಡ್ತಿದ್ರು. ಇದು ಆ ಊರಲ್ಲಿ ತುಂಬ ಸಾಮಾನ್ಯವಾಗಿತ್ತು. ಆದ್ರೆ ಆ ತಪ್ಪುಗಳನ್ನ ಮಾಡ್ತಿದ್ದ ಕ್ರೈಸ್ತರನ್ನ ಆ ಸಭೆಯವರು ಸಹಿಸ್ಕೊಂಡು ಸುಮ್ನೆ ಇದ್ರು. ಅದಕ್ಕೆ ಯೇಸು ಆ ಎರಡೂ ಸಭೆಗಳನ್ನ ಖಂಡಿಸಿದನು. (ಪ್ರಕ. 2:14, 20) ಇವತ್ತು ನಮಗೂ ಲೋಕದ ಜನ್ರ ತರ ಯೋಚ್ನೆ ಮಾಡೋಕೆ ಒತ್ತಡ ಬರುತ್ತೆ. ಉದಾಹರಣೆಗೆ, ‘ನಮಗಿಷ್ಟ ಬಂದ ಹಾಗೆ ಜೀವನ ಮಾಡಬಹುದು, ಬೈಬಲಲ್ಲಿರೋ ನೈತಿಕ ನಿಯಮಗಳೆಲ್ಲ ಈ ಕಾಲಕ್ಕೆ ಸರಿಹೋಗಲ್ಲ’ ಅಂತ ನಮ್ಮ ಕುಟುಂಬದವರು ಅಥವಾ ಪರಿಚಯ ಇರೋರು ನಮಗೆ ಹೇಳಬಹುದು. ‘ಅವರು ಹೇಳ್ತಿರೋದೆಲ್ಲ ಸರಿ,’ ‘ಬೈಬಲಲ್ಲಿ ಇರೋದನ್ನ ಪಾಲಿಸಿಲ್ಲಾಂದ್ರೆ ಏನೂ ತೊಂದ್ರೆ ಆಗಲ್ಲ’ ಅಂತ ಅನಿಸೋ ಹಾಗೆ ಅವರು ಮಾಡಿಬಿಡಬಹುದು. ಕೆಲವ್ರಿಗೆ ‘ಯೆಹೋವ ಕೊಟ್ಟಿರೋ ನಿರ್ದೇಶನ ಅರ್ಧಂಬರ್ಧ ಇದೆ, ಇನ್ನೂ ಸ್ವಲ್ಪ ಸ್ಪಷ್ಟವಾದ ನಿರ್ದೇಶನ ಕೊಟ್ಟಿದ್ರೆ ಚೆನ್ನಾಗಿ ಇರ್ತಿತ್ತು’ ಅಂತ ಅನಿಸಬಹುದು. ಆಗ ‘ಬೈಬಲಲ್ಲಿ ಬರೆದಿರೋ ವಿಷ್ಯಗಳನ್ನ ಅವರು ಮೀರಿ ಹೋಗಿಬಿಡಬಹುದು.’—1 ಕೊರಿಂ. 4:6. w23.07 16 ¶10-11
ಗುರುವಾರ, ಜುಲೈ 17
ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.—ಜ್ಞಾನೋ. 17:17.
ಯೇಸುವಿನ ತಾಯಿ, ಮರಿಯಳಿಗೆ ಬಲ ಬೇಕಿತ್ತು. ಅವಳಿಗಿನ್ನೂ ಮದುವೆನೇ ಆಗಿರ್ಲಿಲ್ಲ, ಆದ್ರು ಅವಳು ಗರ್ಭಿಣಿ ಆಗ್ತಾಳೆ ಅಂತ ಸುದ್ದಿ ಸಿಕ್ಕಿದ್ದಾಗ ಅವಳಿಗೆ ಎಷ್ಟು ಗಾಬರಿಯಾಗಿರಬೇಕು ಅಲ್ವಾ? ಇದುವರೆಗೂ ಅವಳು ಯಾವ ಮಕ್ಕಳನ್ನೂ ಬೆಳೆಸಿರಲಿಲ್ಲ. ಅದ್ರಲ್ಲೂ ಮೆಸ್ಸೀಯನನ್ನ ಅವಳು ಬೆಳೆಸಬೇಕಾಗಿತ್ತು. ಅವಳಿಗೆ ಇನ್ನೂ ಮದುವೆ ಆಗದೆ ಇದ್ದಿದ್ರಿಂದ ‘ನಾನು ಗರ್ಭಿಣಿ’ ಅಂತ ಯೋಸೇಫನಿಗೆ ಹೇಳೋಕೆ ಎಷ್ಟು ಕಷ್ಟ ಆಗಿರಬೇಕು ಅಂತ ಅವಳ ಜಾಗದಲ್ಲಿ ನಿಂತು ಯೋಚಿಸಿ. ಈಗ ಮರಿಯಗೆ ಖಂಡಿತ ಯಾರದ್ದಾದ್ರೂ ಸಹಾಯ ಬೇಕಾಗಿರುತ್ತೆ ಅಲ್ವಾ? (ಲೂಕ 1:26-33) ಮರಿಯಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಅದನ್ನ ಮಾಡಿ ಮುಗಿಸೋಕೆ ಅವಳಿಗೆ ಬೇರೆಯವ್ರ ಸಹಾಯ ಬೇಕೇ ಬೇಕಿತ್ತು. ಅದನ್ನ ಅವಳು ಪಡ್ಕೊಂಡಳು. ಅದಕ್ಕೆ ಅವಳು ಗಬ್ರಿಯೇಲನ ಹತ್ರ ಜಾಸ್ತಿ ವಿಷ್ಯ ಕೇಳಿ ತಿಳ್ಕೊಂಡಳು. (ಲೂಕ 1:34) ಅಷ್ಟೇ ಅಲ್ಲ, ಅವಳು ತನ್ನ ಸಂಬಂಧಿಕಳಾದ ಎಲಿಸಬೆತ್‌ನ ನೋಡೋಕೆ “ಬೆಟ್ಟಗುಡ್ಡಗಳ ಪ್ರದೇಶವಾಗಿದ್ದ” ಯೆಹೂದದ ಒಂದು ಪಟ್ಟಣಕ್ಕೆ ಹೋದಳು. ಎಲಿಸಬೆತ್ ಮರಿಯಳನ್ನ ನೋಡಿದ ತಕ್ಷಣ ಖುಷಿಪಟ್ಟಳು, ಅವಳನ್ನ ಹೊಗಳಿದಳು. ಅಷ್ಟೇ ಅಲ್ಲ, ಮರಿಯಳ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಒಂದು ಭವಿಷ್ಯವಾಣಿ ಹೇಳೋ ತರ ಯೆಹೋವ ಅವಳನ್ನ ಪ್ರೇರಿಸಿದನು. (ಲೂಕ 1:39-45) ಇದನ್ನೆಲ್ಲ ಕೇಳಿದಾಗ ಮರಿಯಾಗೆ ಪ್ರೋತ್ಸಾಹ ಸಿಕ್ತಾ? ಹೌದು. “ದೇವರು ತನ್ನ ಕೈಯಿಂದ ಶಕ್ತಿಶಾಲಿ ಕೆಲಸಗಳನ್ನ ಮಾಡಿದ್ದಾನೆ” ಅಂತ ಅವಳು ಹೇಳಿದಳು. (ಲೂಕ 1:46-51) ಹೀಗೆ ಗಬ್ರಿಯೇಲ ಮತ್ತು ಎಲಿಸಬೆತ್‌ನಿಂದ ಯೆಹೋವ ದೇವರು ಮರಿಯಗೆ ಸಹಾಯ ಮಾಡಿದನು. w23.10 14-15 ¶10-12
ಶುಕ್ರವಾರ, ಜುಲೈ 18
ಅಷ್ಟೇ ಅಲ್ಲ ತನ್ನ ತಂದೆ ಅಂದ್ರೆ ದೇವರಿಗೋಸ್ಕರ ನಮ್ಮನ್ನ ರಾಜರಾಗಿ, ಪುರೋಹಿತರಾಗಿ ಮಾಡ್ತಾನೆ.—ಪ್ರಕ. 1:6.
ಯೇಸುವಿನ ಶಿಷ್ಯರಲ್ಲಿ 1,44,000 ಜನ ಮಾತ್ರ ಪವಿತ್ರ ಶಕ್ತಿಯಿಂದ ಅಭಿಷೇಕ ಆಗಿದ್ದಾರೆ. ಅವ್ರಿಗೆ ಯೆಹೋವನ ಜೊತೆ ವಿಶೇಷವಾದ ಸಂಬಂಧ ಇದೆ. ಅವರು ಮುಂದೆ ಯೇಸು ಜೊತೆ ಸ್ವರ್ಗದಲ್ಲಿ ಪುರೋಹಿತರಾಗಿ ಸೇವೆ ಮಾಡ್ತಾರೆ. (ಪ್ರಕ. 14:1) ಅವರು ಭೂಮಿಯಲ್ಲಿ ಇರುವಾಗಲೇ ಯೆಹೋವ ಅವ್ರನ್ನ ತನ್ನ ಮಕ್ಕಳಾಗಿ ದತ್ತು ತಗೊಂಡಾಗ ಅವರು ಪವಿತ್ರ ಸ್ಥಳಕ್ಕೆ ಹೋದ ಹಾಗಿರುತ್ತೆ. (ರೋಮ. 8:15-17) ಅತಿ ಪವಿತ್ರ ಸ್ಥಳ ಅಂದ್ರೆ ಅದು ಯೆಹೋವ ಇರೋ ಜಾಗ. ಅದು ಸ್ವರ್ಗ. ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳದ ಮಧ್ಯ ಇದ್ದ “ಪರದೆ” ಯೇಸುವಿನ ದೇಹನ ಸೂಚಿಸುತ್ತೆ. ಯೆಹೋವನ ಆಧ್ಯಾತ್ಮಿಕ ಆಲಯದ ಶ್ರೇಷ್ಠ ಮಹಾ ಪುರೋಹಿತನಾಗಿ ಯೇಸು ಸ್ವರ್ಗಕ್ಕೆ ಹೋಗಬೇಕಾದ್ರೆ ಪರದೆ ತರ ಇದ್ದ ತನ್ನ ಮಾನವ ದೇಹವನ್ನ ತ್ಯಾಗ ಮಾಡಬೇಕಿತ್ತು. ತನ್ನ ಮಾನವ ಜೀವವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ರಿಂದ ಅಭಿಷಿಕ್ತ ಕ್ರೈಸ್ತರಿಗೆಲ್ಲ ಸ್ವರ್ಗಕ್ಕೆ ಹೋಗೋಕೆ ಅವಕಾಶ ಆತನು ಮಾಡ್ಕೊಟ್ಟನು. ಅಭಿಷಿಕ್ತರು ಸ್ವರ್ಗಕ್ಕೆ ಹೋಗಬೇಕಂದ್ರೆ ಅವರು ಕೂಡ ಯೇಸು ತರ ಮಾನವ ಶರೀರನ ಬಿಟ್ಟುಹೋಗಬೇಕು.—ಇಬ್ರಿ. 10:19, 20; 1 ಕೊರಿಂ. 15:50. w23.10 28 ¶13
ಶನಿವಾರ, ಜುಲೈ 19
ಗಿದ್ಯೋನ್ . . . ಬಗ್ಗೆ ನಾನು ವಿವ್ರವಾಗಿ ಹೇಳಬೇಕಾದ್ರೆ ನನಗೆ ಸಮಯ ಸಾಕಾಗಲ್ಲ.—ಇಬ್ರಿ. 11:32.
ಎಫ್ರಾಯೀಮ್ಯರು ಗಿದ್ಯೋನನ ಮೇಲೆ ಜಗಳಕ್ಕೆ ಬಂದಾಗ ಅವನು ತಕ್ಷಣ ಕೋಪ ಮಾಡ್ಕೊಳ್ಳಲಿಲ್ಲ. (ನ್ಯಾಯ. 8:1-3) ಅವರು ಹೇಳೋದನ್ನ ತಾಳ್ಮೆಯಿಂದ ಕೇಳಿಸ್ಕೊಂಡ. ಆಮೇಲೆ ಸಮಾಧಾನವಾಗಿ ಉತ್ರ ಕೊಟ್ಟ. ಹೀಗೆ ಅವ್ರ ಕೋಪನ ತಣ್ಣಗೆ ಮಾಡಿದ. ಗಿದ್ಯೋನನ ತರ ಹಿರಿಯರು ಕೂಡ ತಮ್ಮ ಬಗ್ಗೆ ಯಾರಾದ್ರೂ ತಪ್ಪಾಗಿ ಮಾತಾಡಿದಾಗ ತಕ್ಷಣ ಕೋಪ ಮಾಡ್ಕೊಬಾರದು. ಅವರು ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಬೇಕು. ಸಮಾಧಾನವಾಗಿ ಉತ್ರ ಕೊಡಬೇಕು. (ಯಾಕೋ. 3:13 ) ಹಿರಿಯರು ಹೀಗೆ ದೀನತೆ ತೋರಿಸಿದ್ರೆ ಸಭೆಯಲ್ಲಿ ಎಲ್ರೂ ಶಾಂತಿಯಿಂದ ಇರಕ್ಕಾಗುತ್ತೆ. ಮಿದ್ಯಾನ್ಯರ ವಿರುದ್ಧ ಹೋರಾಡಿ ಗೆದ್ದಾಗ ಜನ್ರೆಲ್ಲ ಗಿದ್ಯೋನನನ್ನ ಹೊಗಳಿದ್ರು. ಆಗ ಅವನು ಆ ಹೊಗಳಿಕೆನ್ನೆಲ್ಲ ಯೆಹೋವನಿಗೆ ಕೊಟ್ಟ. (ನ್ಯಾಯ. 8:22, 23) ಹಿರಿಯರು ಗಿದ್ಯೋನನ ತರ ಹೇಗೆ ನಡ್ಕೊಬಹುದು? ಏನೇ ಮಾಡಿದ್ರೂ ಯೆಹೋವನಿಗೆ ಹೊಗಳಿಕೆ ಹೋಗೋ ತರ ನಡ್ಕೊಬೇಕು. (1 ಕೊರಿಂ. 4:6, 7) ಉದಾಹರಣೆಗೆ, ಟಾಕ್ ಕೊಡುವಾಗ ‘ಹೊಗಳಿಕೆ ಯೆಹೋವನಿಗೆ ಸಿಗ್ತಾ ಇದ್ಯಾ, ಇಲ್ಲ ನನಗೆ ಸಿಕ್ತಾ ಇದ್ಯಾ’ ಅಂತ ಯೋಚ್ನೆ ಮಾಡಿ. ಸಹೋದರರು ಹೊಗಳಿದಾಗ ಅವ್ರ ಗಮನ ಬೈಬಲ್ ಕಡೆಗೆ ಅಥವಾ ಸಂಘಟನೆಯಿಂದ ಸಿಗೋ ತರಬೇತಿ ಕಡೆಗೆ ಹೋಗೋ ತರ ಮಾಡಿ. w23.06 4 ¶7-8
ಭಾನುವಾರ, ಜುಲೈ 20
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳ ತರ ಇಲ್ಲ.—ಯೆಶಾ. 55:8.
ನೀವು ಮಾಡಿದ ಪ್ರಾರ್ಥನೆಗೆ ಉತ್ರ ಸಿಕ್ತಿಲ್ಲ ಅಂತ ಅನಿಸಿದಾಗ ಬೇಜಾರು ಮಾಡ್ಕೋಬೇಡಿ. ಅದ್ರ ಬದ್ಲು ಮೂರು ಪ್ರಶ್ನೆಗಳ ಬಗ್ಗೆ ಯೋಚನೆ ಮಾಡಿ ನೋಡಿ. ಅದ್ರಲ್ಲೊಂದು, ನಾನು ಸರಿಯಾದ ವಿಷ್ಯಕ್ಕೆ ಪ್ರಾರ್ಥನೆ ಮಾಡ್ತಿದ್ದೀನಾ? ಅಂತ ಕೇಳ್ಕೋಬೇಕು. ಕೆಲವೊಮ್ಮೆ ನಮಗೇನು ಒಳ್ಳೇದು ಅಂತ ನಮಗೇ ಚೆನ್ನಾಗಿ ಗೊತ್ತಿದೆ ಅಂತ ಅಂದ್ಕೊಳ್ತೀವಿ. ಆದ್ರೆ ಯೆಹೋವನಿಗೆ ನಮಗಿಂತ ಚೆನ್ನಾಗಿ ಗೊತ್ತಿರುತ್ತೆ. ಹಾಗಾಗಿ ನಾವೊಂದು ವಿಷ್ಯದ ಬಗ್ಗೆ ಪ್ರಾರ್ಥನೆ ಮಾಡಿದಾಗ ಅದಕ್ಕೆ ಉತ್ರ ಸಿಗದೆ ಹೋದ್ರೆ ನಾವು ಅಂದ್ಕೊಂಡಿದ್ದಕ್ಕಿಂತ ಒಳ್ಳೇದನ್ನ ಕೊಡೋಕೆ ಯೆಹೋವ ಕಾಯ್ತಾ ಇದ್ದಾನೆ ಅಂತ ಅರ್ಥ. ಇನ್ನೂ ಕೆಲವೊಮ್ಮೆ ನಾವು ಕೇಳೋ ವಿಷ್ಯಗಳು ಯೆಹೋವನ ಇಷ್ಟದ ಪ್ರಕಾರ ಇಲ್ಲದೆ ಇರಬಹುದು. (1 ಯೋಹಾ. 5:14) ಉದಾಹರಣೆಗೆ ಒಂದು ದಂಪತಿ ಅವ್ರ ಮಗ ಸತ್ಯ ಬಿಟ್ಟು ಹೋಗಬಾರದು ಅಂತ ಪ್ರಾರ್ಥನೆ ಮಾಡಿದ್ರು. ಇದು ಸರಿಯಾಗಿತ್ತಾ? ಅವರಿಗೆ ಅದು ಸರಿ ಅಂತ ಅನಿಸಬಹುದು. ಆದ್ರೆ ಎಲ್ಲರೂ ತನ್ನನ್ನ ಆರಾಧಿಸಬೇಕು ಅಂತ ಯೆಹೋವ ಯಾವತ್ತೂ ಯಾರನ್ನು ಒತ್ತಾಯ ಮಾಡಲ್ಲ. ಬದ್ಲಿಗೆ ನಾವಾಗ್ಲಿ, ನಮ್ಮ ಮಕ್ಕಳಾಗ್ಲಿ ತನ್ನನ್ನ ಇಷ್ಟ ಪಟ್ಟು ಆರಾಧಿಸಬೇಕು ಅಂತ ಯೆಹೋವ ಆಸೆ ಪಡ್ತಾನೆ. (ಧರ್ಮೋ. 10:12, 13; 30:19, 20) ಹಾಗಾದ್ರೆ ಆ ದಂಪತಿ ಯೆಹೋವನ ಹತ್ರ ಏನು ಕೇಳಬಹುದಿತ್ತು? ‘ನಮ್ಮ ಮಗ ನಿನ್ನನ್ನ ಪ್ರೀತಿಸೋ ಹಾಗೆ, ನಿನ್ನ ಫ್ರೆಂಡ್ ಆಗೋ ಹಾಗೆ ಕಲಿಸೋಕೆ ನಮಗೆ ಸಹಾಯ ಮಾಡಪ್ಪ’ ಅಂತ ಕೇಳಬಹುದಿತ್ತು.—ಜ್ಞಾನೋ. 22:6; ಎಫೆ. 6:4. w23.11 21 ¶5; 23 ¶12
ಸೋಮವಾರ, ಜುಲೈ 21
ಒಬ್ರನ್ನೊಬ್ರು ಸಂತೈಸ್ತಾ ಇರಿ.—1 ಥೆಸ. 4:18.
“ಒಬ್ರನ್ನೊಬ್ರು ಸಂತೈಸ್ತಾ ಇರಿ” ಅಂತ ಪೌಲ ಯಾಕೆ ಹೇಳಿದ? ಯಾಕಂದ್ರೆ ನಾವು ಬೇರೆಯವ್ರನ್ನ ಸಂತೈಸಿದಾಗ್ಲೇ ನಮಗೆ ಅವ್ರ ಮೇಲೆ ಪ್ರೀತಿ ಇದೆ ಅಂತ ತೋರಿಸೋಕೆ ಆಗೋದು. ಇಲ್ಲಿ ಪೌಲ “ಸಂತೈಸು” ಅಂತ ಹೇಳಿರೋದ್ರ ಅರ್ಥ ಏನು? ಇದ್ರ ಬಗ್ಗೆ ಒಂದು ಬೈಬಲ್ ರೆಫರೆನ್ಸ್ ಹೀಗೆ ಹೇಳುತ್ತೆ: “ಒಬ್ಬ ವ್ಯಕ್ತಿ ತುಂಬ ಕಷ್ಟದಲ್ಲಿ ಇರುವಾಗ ಅವನ ಪಕ್ಕದಲ್ಲಿ ನಿಂತು ಅವನನ್ನ ಪ್ರೋತ್ಸಾಹಿಸೋದು.” ಹಾಗಾಗಿ ನಮ್ಮ ಸಹೋದರ ಸಹೋದರಿಯರಿಗೆ ಸಮಾಧಾನ ಮಾಡಿ ಅವ್ರಿಗೆ ಧೈರ್ಯ ತುಂಬೋಣ. ಆಗ ಅವ್ರನ್ನ ಮೇಲಕ್ಕೆ ಎತ್ತಿ ಜೀವದ ದಾರಿಲಿ ನಡೆಯೋಕೆ ಸಹಾಯ ಮಾಡಿದ ಹಾಗೆ ಆಗುತ್ತೆ. ಅವರು ಅಳುವಾಗ ಅವ್ರ ಕಣ್ಣೀರು ಒರೆಸೋಣ. ಹೀಗೆ ಅವ್ರ ಮೇಲೆ ನಮಗೆಷ್ಟು ಪ್ರೀತಿ ಇದೆ ಅಂತ ತೋರಿಸೋಣ. (2 ಕೊರಿಂ. 7:6, 7, 13) ಒಬ್ಬ ವ್ಯಕ್ತಿಗೆ ಅನುಕಂಪ ಇದ್ರೆನೇ ಬೇರೆಯವ್ರಿಗೆ ಸಮಾಧಾನ ಮಾಡೋಕೆ ಆಗೋದು. ಅವ್ರ ಕಷ್ಟ ಅರ್ಥ ಮಾಡ್ಕೊಂಡು ಅವ್ರಿಗೆ ಸಹಾಯ ಮಾಡೋಕೆ ಆಗೋದು. ಹಾಗಾಗಿ ನಮ್ಮಲ್ಲಿ ಅನುಕಂಪ ಅನ್ನೋ ಗುಣ ಇರಬೇಕು. ಯೆಹೋವನೂ ಅನುಕಂಪ ತೋರಿಸ್ತಾನೆ. ಅದಕ್ಕೇ ಪೌಲ ಯೆಹೋವ ದೇವರನ್ನ “ಕೋಮಲ ಕರುಣೆ ತೋರಿಸೋ ತಂದೆ, ಎಲ್ಲ ತರದ ಸಾಂತ್ವನ ಕೊಡೋ ದೇವರು” ಅಂತ ಹೇಳಿದ.—2 ಕೊರಿಂ. 1:3 w23.11 9-10 ¶8-10
ಮಂಗಳವಾರ, ಜುಲೈ 22
ಕಷ್ಟಗಳು ಬಂದಾಗ ಖುಷಿಪಡೋಣ.—ರೋಮ. 5:3.
ಕ್ರೈಸ್ತರಾದ ನಾವು ಕಷ್ಟಗಳನ್ನ ಅನುಭವಿಸಲೇಬೇಕು. ಅದಕ್ಕೆ ಪೌಲನ ಉದಾಹರಣೆನೇ ತಗೊಳಿ. ಅವನು ಥೆಸಲೊನೀಕದವ್ರಿಗೆ “ಮುಂದೆ ನಮಗೆ ಕಷ್ಟಗಳು ಬಂದೇ ಬರುತ್ತೆ ಅಂತ ನಾವು ನಿಮ್ಮ ಜೊತೆ ಇದ್ದಾಗ್ಲೇ ಹೇಳ್ತಿದ್ವಲ್ವಾ. ಈಗ ಅದೇ ತರ ಆಯ್ತು” ಅಂದ. (1 ಥೆಸ. 3:4) ಕೊರಿಂಥದವ್ರಿಗೆ ಕೂಡ “ಸಹೋದರರೇ, ನಾವು ತುಂಬ ಕಷ್ಟಗಳನ್ನ ಅನುಭವಿಸಿದ್ವಿ. ಅದನ್ನ ನಿಮಗೆ ಹೇಳೋಕೆ ಇಷ್ಟಪಡ್ತೀವಿ . . . ನಾವು ಬದುಕೋದೇ ಇಲ್ಲ ಅಂತ ಅಂದ್ಕೊಂಡಿದ್ವಿ” ಅಂತ ಬರೆದ. (2 ಕೊರಿಂ. 1:8; 11:23-27) ಪೌಲನ ತರ ನಾವೂ ಕಷ್ಟ ಅನುಭವಿಸಬೇಕಾಗುತ್ತೆ ಅಂತ ನಮಗೆ ಗೊತ್ತು. (2 ತಿಮೊ. 3:12) ಯೇಸು ಮೇಲೆ ನಂಬಿಕೆ ಇಟ್ಟು ಆತನ ತರ ನಡ್ಕೊಳ್ಳೋದ್ರಿಂದ ನಿಮ್ಮ ಕುಟುಂಬದವರು, ಸ್ನೇಹಿತರು ನಿಮಗೆ ಹಿಂಸೆ ಕೊಡ್ತಿದ್ದಾರಾ? ಕೆಲಸದ ಜಾಗದಲ್ಲಿ ನೀವು ಪ್ರಾಮಾಣಿಕರಾಗಿ ಇರೋದ್ರಿಂದ ನಿಮಗೆ ತೊಂದ್ರೆ ಆಗ್ತಿದ್ಯಾ? (ಇಬ್ರಿ. 13:18) ನಿರೀಕ್ಷೆ ಬಗ್ಗೆ ಜನ್ರಿಗೆ ಹೇಳೋದ್ರಿಂದ ಅಧಿಕಾರಿಗಳು ನಿಮ್ಮನ್ನ ವಿರೋಧಿಸ್ತಿದ್ದಾರಾ? ಒಂದು ವಿಷ್ಯ ನೆನಪಿಡಿ, ನಿಮಗೆ ಎಷ್ಟೇ ಹಿಂಸೆ ಬಂದ್ರೂ, ಯಾವ ತರ ಹಿಂಸೆ ಬಂದ್ರೂ ಖುಷಿ ಪಡೋಕೆ ಆಗುತ್ತೆ ಅಂತ ಪೌಲ ಹೇಳಿದ. w23.12 10-11 ¶9-10
ಬುಧವಾರ, ಜುಲೈ 23
ನೀವು ನನ್ನನ್ನ ಎಷ್ಟು ದೊಡ್ಡ ಆಪತ್ತಿಗೆ ಸಿಕ್ಕಿಸಿದ್ದೀರ.—ಆದಿ. 34:30.
ಯಾಕೋಬನಿಗೆ ತುಂಬ ಕಷ್ಟಗಳು ಬಂತು. ಆಮೇಲೆ ಸಿಮೆಯೋನ ಮತ್ತು ಲೇವಿ ತಮ್ಮ ಮನೆತನಕ್ಕೇ ಅವಮಾನ ಆಗೋ ಕೆಲಸ ಮಾಡಿಬಿಟ್ರು. ಇದ್ರಿಂದ ಯೆಹೋವನ ಹೆಸ್ರೂ ಹಾಳಾಯ್ತು. ಅದೂ ಅಲ್ಲದೆ, ಯಾಕೋಬನ ಪ್ರೀತಿಯ ಹೆಂಡತಿ ರಾಹೇಲ ಎರಡನೇ ಮಗುವನ್ನ ಹೆರುವಾಗ ತೀರಿ ಹೋದಳು. ಅಷ್ಟೇ ಅಲ್ಲ, ಬರಗಾಲ ಬಂದಾಗ ಯಾಕೋಬ ಊರು ಬಿಟ್ಟು ಈಜಿಪ್ಟ್‌ಗೆ ಹೋಗಬೇಕಾಯ್ತು. ಆಗ ಅವನಿಗೆ ತುಂಬ ವಯಸ್ಸಾಗಿತ್ತು. (ಆದಿ. 35:16-19; 37:28; 45:9-11, 28.) ಇಷ್ಟಾದ್ರೂ ಅವನುದೇವರು ಕೊಟ್ಟ ಮಾತಿನ ಮೇಲೆ ನಂಬಿಕೆ ಕಳ್ಕೊಳ್ಳಲಿಲ್ಲ. ಅದಕ್ಕೆ ಯೆಹೋವ ಅವನನ್ನ ತುಂಬ ಆಶೀರ್ವದಿಸಿದನು. ಉದಾಹರಣೆಗೆ, ಲಾಬಾನ ಎಷ್ಟೇ ಮೋಸ ಮಾಡಿದ್ರೂ ಯಾಕೋಬನ ಆಸ್ತಿ ಜಾಸ್ತಿ ಆಗೋ ತರ ಮಾಡಿದನು. ಯೋಸೇಫ ತೀರಿಹೋಗಿದ್ದಾನೆ ಅಂತ ಯಾಕೋಬ ಅಂದ್ಕೊಂಡಿದ್ದ. ಆದ್ರೆ ಅವನೂ ವಾಪಸ್ ಸಿಗೋ ತರ ಯೆಹೋವ ಮಾಡಿದನು. ಯಾಕೋಬನಿಗೆ ಬಂದ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಸಹಾಯ ಮಾಡಿದನು. ಯಾಕಂದ್ರೆ ಯಾಕೋಬ ಯೆಹೋವನ ಫ್ರೆಂಡ್ ಆಗಿದ್ದನು. (ಆದಿ. 30:43; 32:9, 10; 46:28-30) ನಾವೂ ಯೆಹೋವ ದೇವರಿಗೆ ಒಳ್ಳೇ ಫ್ರೆಂಡ್ ಆಗಿರಬೇಕು. ಆಗ ನಮಗೂ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆತನು ಸಹಾಯ ಮಾಡ್ತಾನೆ. w23.04 15 ¶6-7
ಗುರುವಾರ, ಜುಲೈ 24
ಯೆಹೋವ ನನ್ನ ಕುರುಬ. ನನಗೆ ಯಾವ ಕೊರತೆನೂ ಇರಲ್ಲ.—ಕೀರ್ತ. 23:1.
ದಾವೀದನಿಗೆ ಯೆಹೋವ ತನ್ನನ್ನ ಪ್ರೀತಿಸ್ತಾನೆ, ಚೆನ್ನಾಗಿ ನೋಡ್ಕೊಳ್ತಾನೆ ಅಂತ ಗೊತ್ತಿತ್ತು. ಯೆಹೋವನ ಜೊತೆಗಿರೋ ತನ್ನ ಫ್ರೆಂಡ್‌ಶಿಪ್ ಬಗ್ಗೆ ಅವನು ಕೀರ್ತನೆ 23ರಲ್ಲಿ ಚೆನ್ನಾಗಿ ವರ್ಣಿಸಿದ್ದಾನೆ. ಅಲ್ಲಿ ಅವನು ಆತನನ್ನ ತನ್ನ ಕುರುಬ ಅಂತ ಕರೆದಿದ್ದಾನೆ. ಯೆಹೋವ ಹೇಳೋ ತರ ನಡ್ಕೊಂಡ್ರೆ ‘ಖುಷಿಯಾಗಿ ಇರ್ತೀನಿ, ಸುರಕ್ಷಿತವಾಗಿ ಇರ್ತೀನಿ’ ಅಂತ ದಾವೀದನಿಗೆ ಗೊತ್ತಿತ್ತು. ಅದಕ್ಕೇ ಅವನು ಯಾವಾಗ್ಲೂ ಯೆಹೋವನ ಮಾತನ್ನ ಕೇಳ್ತಿದ್ದ. ಕೊನೆ ಉಸಿರಿರೋ ತನಕ ತನ್ನನ್ನ ಯೆಹೋವ ಪ್ರೀತಿಸ್ತಾನೆ ಅನ್ನೋ ಗ್ಯಾರಂಟಿನೂ ಅವನಿಗಿತ್ತು. ಯಾಕಷ್ಟು ಗ್ಯಾರಂಟಿ ಇತ್ತು? ದಾವೀದನಿಗೆ ಏನೆಲ್ಲಾ ಬೇಕಿತ್ತೋ ಅದನ್ನೆಲ್ಲ ಯೆಹೋವ ಕೊಟ್ಟನು. ಅದಕ್ಕೇ ಅವನು ಯೆಹೋವನನ್ನ ಒಬ್ಬ ಸ್ನೇಹಿತನಾಗಿ ನೋಡಿದ ಮತ್ತು ಆತನು ತನ್ನನ್ನ ಇಷ್ಟಪಡ್ತಾನೆ ಅಂತ ಅರ್ಥಮಾಡ್ಕೊಂಡ. ಅಷ್ಟೇ ಅಲ್ಲ ಅವನಿಗೆ, ಮುಂದೆ ಏನೇ ಆದ್ರೂ ಯೆಹೋವ ತನ್ನನ್ನ ನೋಡ್ಕೊಳ್ತಾನೆ, ತನ್ನನ್ನ ಪ್ರೀತಿಸ್ತಾನೆ ಅನ್ನೋ ನಂಬಿಕೆ ಇತ್ತು. ಈ ಭರವಸೆ ಇದ್ದಿದ್ದಕ್ಕೆ ಅವನು ಯಾವುದ್ರ ಬಗ್ಗೆನೂ ಚಿಂತೆ ಮಾಡದೆ ಖುಷಿಯಾಗಿ, ತೃಪ್ತಿಯಾಗಿ ಇರ್ತಿದ್ದ.—ಕೀರ್ತ. 16:11. w24.01 29 ¶12-13
ಶುಕ್ರವಾರ, ಜುಲೈ 25
ಈ ಲೋಕದ ಅಂತ್ಯಕಾಲ ಮುಗಿಯೋವರೆಗೂ ಯಾವಾಗ್ಲೂ ನಾನು ನಿಮ್ಮ ಜೊತೆ ಇರ್ತಿನಿ.—ಮತ್ತಾ. 28:20.
ಎರಡನೇ ಮಹಾಯುದ್ಧ ಮುಗಿದಾಗಿಂದ ಇಲ್ಲಿ ತನಕ ಯೆಹೋವನ ಜನ್ರಿಗೆ ಸಾರೋಕೆ ಎಷ್ಟೋ ಅವಕಾಶಗಳು ಸಿಕ್ಕಿವೆ. ಅದಕ್ಕೇ ಅವರು ಈ ಕೆಲಸನ ಎಲ್ಲಾ ಕಡೆ ಖುಷಿಖುಷಿಯಿಂದ ಮಾಡ್ತಾ ಇದ್ದಾರೆ. ಇದ್ರಿಂದ ತುಂಬ ಜನ್ರಿಗೆ ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ಆಗ್ತಿದೆ. ಇವತ್ತೂ ಕೂಡ ಆಡಳಿತ ಮಂಡಲಿಯ ಸಹೋದರರು ಯೇಸು ತರ ಯೋಚ್ನೆ ಮಾಡಿ ನಮಗೆ ನಿರ್ದೇಶನಗಳನ್ನ ಕೊಡ್ತಾರೆ. ಅದನ್ನ ಸಂಚರಣ ಮೇಲ್ವಿಚಾರಕರು ಮತ್ತು ಹಿರಿಯರು ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ತಿಳಿಸ್ತಾರೆ. ಈ ಅಭಿಷಿಕ್ತ ಹಿರಿಯರು ಯೇಸು ಕ್ರಿಸ್ತನ “ಬಲಗೈಯಲ್ಲಿ” ಇದ್ದಾರೆ. (ಪ್ರಕ. 2:1) ಈ ಹಿರಿಯರಿಂದನೂ ಕೆಲವೊಮ್ಮೆ ತಪ್ಪುಗಳು ಆಗುತ್ತೆ. ಯಾಕಂದ್ರೆ ಇವರೂ ನಮ್ಮ ತರಾನೇ ಅಪರಿಪೂರ್ಣರು. ಹಿಂದಿನ ಕಾಲದಲ್ಲಿದ್ದ ಮೋಶೆ, ಯೆಹೋಶುವ ಮತ್ತು ಅಪೊಸ್ತಲರೂ ಕೆಲವು ತಪ್ಪುಗಳನ್ನ ಮಾಡಿದ್ರು. (ಅರ. 20:12; ಯೆಹೋ. 9:14, 15; ರೋಮ. 3:23) ಹಾಗಿದ್ರೂ ನಾವು ಒಂದು ವಿಷ್ಯ ಮನಸ್ಸಲ್ಲಿ ಇಟ್ಕೊಬೇಕು. ಅದೇನಂದ್ರೆ ನಂಬಿಗಸ್ತನು ವಿವೇಕಿಯಾದ ಆಳನ್ನ ಮತ್ತು ಹಿರಿಯರನ್ನ ಯೇಸು ಕ್ರಿಸ್ತನೇ ಮುಂದೆ ನಿಂತು ನಡೆಸ್ತಿದ್ದಾನೆ ಮತ್ತು ಅವ್ರಿಗೆ ನಿರ್ದೇಶನಗಳನ್ನ ಕೊಡ್ತಿದ್ದಾನೆ. ಹಾಗಾಗಿ ಯೆಹೋವ ನೇಮಿಸಿರೋ ಈ ಸಹೋದರರ ಮೂಲಕ ಬರೋ ನಿರ್ದೇಶನಗಳು ಯಾವಾಗ್ಲೂ ಸರಿಯಾಗೇ ಇರುತ್ತೆ ಅಂತ ಕಣ್ಮುಚ್ಚಿ ನಂಬಬಹುದು. w24.02 23-24 ¶13-14
ಶನಿವಾರ, ಜುಲೈ 26
ನೀವು ದೇವರ ಪ್ರೀತಿಯ ಮಕ್ಕಳಾಗಿ ಇರೋದ್ರಿಂದ ಆತನನ್ನ ಅನುಕರಿಸಿ.—ಎಫೆ. 5:1.
ನಾವು ಯೆಹೋವನನ್ನ ಖುಷಿಪಡಿಸೋಕೆ ಏನು ಮಾಡಬೇಕು? ನಾವು ಆತನನ್ನ ಎಷ್ಟು ಪ್ರೀತಿಸ್ತೀವಿ, ಆತನಿಗೆ ಎಷ್ಟು ಋಣಿಗಳಾಗಿದ್ದೀವಿ ಅಂತ ಜನ್ರಿಗೆ ಹೇಳಬೇಕು. ಯೆಹೋವನಿಗೆ ಹತ್ರ ಆಗೋಕೆ ಮತ್ತು ಆತನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡಬೇಕು. (ಯಾಕೋ. 4:8) ಇದೇ ನಮ್ಮ ಮುಖ್ಯ ಗುರಿಯಾಗಿರಬೇಕು. ಯೆಹೋವನಲ್ಲಿರೋ ಪ್ರೀತಿ, ನ್ಯಾಯ, ವಿವೇಕ, ಶಕ್ತಿ ಮತ್ತು ಬೇರೆ ಗುಣಗಳ ಬಗ್ಗೆ ಬೈಬಲಿಂದ ತೋರಿಸಬೇಕು. ಅದಷ್ಟೇ ಅಲ್ಲ, ನಾವು ಇನ್ನೊಂದು ವಿಷ್ಯನೂ ಮಾಡಬೇಕು. ನಾವು ಯೆಹೋವನ ತರ ಇರೋಕೆ ಆದಷ್ಟು ಪ್ರಯತ್ನ ಮಾಡಬೇಕು. ಈ ತರ ಮಾಡೋದ್ರಿಂದ ಬೇರೆಯವ್ರಿಗೂ ನಮಗೂ ಎಷ್ಟು ವ್ಯತ್ಯಾಸ ಇದೆ ಅಂತ ಜನ್ರು ಗಮನಿಸ್ತಾರೆ. (ಮತ್ತಾ. 5:14-16) ನಾವು ಅವ್ರ ಜೊತೆ ಚೆನ್ನಾಗಿ ನಡ್ಕೊಂಡಾಗ್ಲೂ ಯೆಹೋವನನ್ನ ಹೊಗಳೋಕೆ ನಮಗೊಂದು ಅವಕಾಶ ಸಿಗುತ್ತೆ. ಇದ್ರಿಂದ ಒಳ್ಳೇ ಮನಸ್ಸಿನ ಜನ್ರು ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಳ್ತಾರೆ.—1 ತಿಮೊ. 2:3, 4. w24.02 10 ¶7
ಭಾನುವಾರ, ಜುಲೈ 27
ಬೇರೆಯವ್ರನ್ನ ಪ್ರೋತ್ಸಾಹಿಸೋಕೆ . . . ತಿದ್ದೋಕೆ ಆಗುತ್ತೆ.—ತೀತ 1:9.
ಒಬ್ಬ ಯುವ ಸಹೋದರ ಪ್ರೌಢ ಕ್ರೈಸ್ತನಾಗಬೇಕಂದ್ರೆ ಕೆಲವು ಕೌಶಲಗಳನ್ನ ಕಲಿಬೇಕು. ಆಗ ಅವನಿಗೆ ಸಭೆಯಲ್ಲಿ ಕೊಟ್ಟಿರೋ ಕೆಲಸನ ಚೆನ್ನಾಗಿ ಮಾಡೋಕಾಗುತ್ತೆ. ಒಂದು ಕೆಲಸ ಹುಡುಕೊಂಡು ಕುಟುಂಬನ ಚೆನ್ನಾಗಿ ನೋಡ್ಕೊಳ್ಳೋಕೂ ಆಗುತ್ತೆ. ಇದ್ರಿಂದ ಬೇರೆಯವ್ರ ಜೊತೆ ಒಳ್ಳೆ ಸ್ನೇಹ-ಸಂಬಂಧ ಇರುತ್ತೆ. ಉದಾಹರಣೆಗೆ, ಚೆನ್ನಾಗಿ ಓದೋಕೆ, ಬರಿಯೋಕೆ ಕಲಿಬೇಕು. ದೇವರ ವಾಕ್ಯ ಓದಿ ಅದ್ರ ಬಗ್ಗೆ ಯೋಚಿಸುವವನು ಖುಷಿಯಾಗಿರ್ತಾನೆ ಮತ್ತು ಯಶಸ್ಸು ಪಡಿತಾನೆ ಅಂತ ಬೈಬಲ್ ಹೇಳುತ್ತೆ. (ಕೀರ್ತ. 1:1-3) ಹಾಗಾಗಿ ಒಬ್ಬ ಸಹೋದರ ಪ್ರತಿದಿನ ಬೈಬಲ್ ಓದೋದ್ರಿಂದ ಯೆಹೋವ ಹೇಗೆ ಯೋಚಿಸ್ತಾನೆ ಅಂತ ತಿಳ್ಕೊಳ್ಳೋಕಾಗುತ್ತೆ ಮತ್ತು ತನ್ನ ಯೋಚ್ನೆ ಸರಿ ಮಾಡ್ಕೊಂಡು ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡ್ತಾನೆ. (ಜ್ಞಾನೋ. 1:3, 4) ಓದೋಕೆ ಬರಿಯೋಕೆ ಗೊತ್ತಿರೋ ಸಹೋದರರು ಸಭೆಲಿರೋ ಸಹೋದರ ಸಹೋದರಿಯರಿಗೆ ಬೈಬಲಿಂದ ಸಲಹೆ ಮತ್ತು ನಿರ್ದೇಶನ ಕೊಡೋಕೆ ಆಗುತ್ತೆ. ಅಷ್ಟೇ ಅಲ್ಲ ಬೇರೆಯವ್ರ ನಂಬಿಕೆಯನ್ನ ಕಟ್ಟೋ ಹಾಗೆ ಭಾಷಣಗಳನ್ನ ಮತ್ತು ಉತ್ತರವನ್ನ ಕೊಡೋಕೆ ಆಗುತ್ತೆ, ಟಿಪ್ಪಣಿಗಳನ್ನ ಬರೆದುಕೊಳ್ಳೋಕೆ ಆಗುತ್ತೆ. ಇದ್ರಿಂದ ತನ್ನ ನಂಬಿಕೆನೂ ಜಾಸ್ತಿಯಾಗುತ್ತೆ, ಬೇರೆಯವ್ರ ನಂಬಿಕೆಯನ್ನೂ ಜಾಸ್ತಿ ಮಾಡೋಕಾಗುತ್ತೆ. w23.12 26-27 ¶9-11
ಸೋಮವಾರ, ಜುಲೈ 28
ದೇವರು ನಿಮಗೆ ಬೆಂಬಲ ಕೊಡ್ತಿದ್ದಾನೆ. ಲೋಕವನ್ನ ಬೆಂಬಲಿಸೋ ಸೈತಾನನಿಗಿಂತ ದೇವರಿಗೆ ತುಂಬ ಶಕ್ತಿ ಇದೆ.—1 ಯೋಹಾ. 4:4.
ನಿಮಗೆ ಭಯ ಆದಾಗೆಲ್ಲಾ ಯೆಹೋವ ಮುಂದೆ ಏನೆಲ್ಲ ಮಾಡ್ತಾನೆ, ಸೈತಾನ ಇಲ್ಲದೇ ಇರುವಾಗ ನಿಮ್ಮ ಜೀವನ ಹೇಗಿರುತ್ತೆ ಅಂತ ಯೋಚಿಸಿ. 2014ರ ಪ್ರಾದೇಶಿಕ ಅಧಿವೇಶನದಲ್ಲಿ ಒಂದು ಅಭಿನಯ ಇತ್ತು. ಅದ್ರಲ್ಲಿ ಒಬ್ಬ ಅಪ್ಪ ತನ್ನ ಕುಟುಂಬದ ಜೊತೆ 2 ತಿಮೊತಿ 3:1-5ರಲ್ಲಿ ಪರದೈಸ್ ಬಗ್ಗೆ ಹೇಳಿದಿದ್ರೆ ಹೇಗಿರ್ತಿತ್ತು ಅಂತ ಚರ್ಚೆ ಮಾಡಿದ್ರು. “ಹೊಸ ಲೋಕದಲ್ಲಿ ಪರಿಸ್ಥಿತಿ ತುಂಬ ಚೆನ್ನಾಗಿರುತ್ತೆ. ಎಲ್ರೂ ಖುಷಿಯಾಗಿ ಇರ್ತಾರೆ. ಯಾಕಂದ್ರೆ ಅಲ್ಲಿ ಜನ್ರು ಬೇರೆಯವ್ರ ಬಗ್ಗೆ ಯೋಚಿಸೋರು, ಯೆಹೋವನನ್ನ ಇಷ್ಟ ಪಡೋರು, ತಮ್ಮ ಇತಿಮಿತಿಯನ್ನ ಅರ್ಥಮಾಡ್ಕೊಂಡಿರೋರು, ದೀನತೆ ಇರೋರು, ಯೆಹೋವನನ್ನ ಹೊಗಳೋರು, ಅಪ್ಪಅಮ್ಮನ ಮಾತು ಕೇಳೋರು, ಕೃತಜ್ಞತೆ ಇರೋರು, ನಂಬಿಕೆ ಉಳಿಸ್ಕೊಳ್ಳೋರು, ಕುಟುಂಬದವ್ರನ್ನ ಪ್ರೀತಿಸೋರು, ಒಪ್ಕೊಳ್ಳೋಕೆ ರೆಡಿ ಇರೋರು, ಬೇರೆಯವ್ರ ಬಗ್ಗೆ ಒಳ್ಳೇದನ್ನೇ ಮಾತಾಡೋರು, ಸ್ವನಿಯಂತ್ರಣ ಇರೋರು, ಮೃದು ಸ್ವಭಾವದವರು, ಒಳ್ಳೇತನವನ್ನ ಪ್ರೀತಿಸೋರು, ಬಿಟ್ಟುಕೊಡೋರು, ತಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡೋರು, ಆಸೆಗಳನ್ನ ತೀರಿಸ್ಕೊಳ್ಳದೆ ದೇವರನ್ನ ಇಷ್ಟ ಪಡೋರು, ದೇವರ ಮೇಲೆ ಭಕ್ತಿ ಇರೋರು ಇರ್ತಾರೆ. ಯಾವಾಗ್ಲೂ ಇಂಥವ್ರ ಜೊತೆನೇ ಇರು.” ಈ ತರ ನೀವೂ ನಿಮ್ಮ ಕುಟುಂಬದವ್ರ ಜೊತೆ ಯಾವತ್ತಾದ್ರೂ ಮಾತಾಡಿದ್ದೀರಾ? w24.01 6 ¶13-14
ಮಂಗಳವಾರ, ಜುಲೈ 29
ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.—ಲೂಕ 3:22.
ಯೆಹೋವ ದೇವರಿಗೆ ತನ್ನ ಜನ್ರಂದ್ರೆ ತುಂಬ ಇಷ್ಟ. ಆತನು ಅವ್ರನ್ನ ಮೆಚ್ಕೊಳ್ತಾನೆ. ಅದಕ್ಕೇ ಬೈಬಲ್ “ಯೆಹೋವ ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ” ಅಂತ ಹೇಳುತ್ತೆ. (ಕೀರ್ತ. 149:4) ಆದ್ರೆ ಕೆಲವು ಸಲ ನಾವು ಕುಗ್ಗಿಹೋದಾಗ ‘ಯೆಹೋವ ನನ್ನನ್ನ ಮೆಚ್ಕೊಳ್ತಾನಾ?’ ಅಂತ ಅನಿಸುತ್ತೆ. ಇದೇ ತರ ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರಿಗೂ ಅನಿಸಿತ್ತು. (1 ಸಮು. 1:6-10; ಯೋಬ 29:2, 4; ಕೀರ್ತ. 51:11) ನಾವು ಅಪರಿಪೂರ್ಣರಾಗಿದ್ರೂ ಯೆಹೋವನ ಮೆಚ್ಚಿಗೆ ಪಡ್ಕೊಳ್ಳೋಕೆ ಆಗುತ್ತೆ ಅಂತ ಬೈಬಲ್ ಹೇಳುತ್ತೆ. ಅದಕ್ಕೆ ಏನು ಮಾಡಬೇಕು? ನಾವು ಯೇಸು ಮೇಲೆ ನಂಬಿಕೆ ಇಟ್ಟು ದೀಕ್ಷಾಸ್ನಾನ ತಗೊಬೇಕು. (ಯೋಹಾ. 3:16) ಹೀಗೆ ಮಾಡೋದ್ರ ಮೂಲಕ ನಾವು ನಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟಿದ್ದೀವಿ, ಯೆಹೋವನ ಇಷ್ಟ ಮಾಡ್ತೀವಿ ಅಂತ ಮಾತು ಕೊಟ್ಟಿದ್ದೀವಿ ಅಂತ ಎಲ್ರಿಗೂ ತೋರಿಸ್ಕೊಡ್ತೀವಿ. (ಅ. ಕಾ. 2:38; 3:19) ಯೆಹೋವನ ಜೊತೆ ಫ್ರೆಂಡ್‌ಶಿಪ್ ಮಾಡ್ಕೊಳ್ಳೋಕೆ ನಾವು ಈ ಹೆಜ್ಜೆ ತಗೊಳ್ಳುವಾಗ ಆತನಿಗೆ ತುಂಬ ಖುಷಿ ಆಗುತ್ತೆ. ನಾವು ಸಮರ್ಪಣೆಯಲ್ಲಿ ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ಎಲ್ಲಿ ತನಕ ಪ್ರಯತ್ನ ಹಾಕ್ತೀವೋ ಅಲ್ಲಿ ತನಕ ಯೆಹೋವ ನಮ್ಮ ಸ್ನೇಹಿತನಾಗಿ ಇರ್ತಾನೆ ಮತ್ತು ನಮ್ಮನ್ನ ಮೆಚ್ಕೊಳ್ತಾನೆ.—ಕೀರ್ತ. 25:14. w24.03 26 ¶1-2
ಬುಧವಾರ, ಜುಲೈ 30
ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ ಅಂದ್ರು.—ಅ. ಕಾ. 4:20.
ಸಿಹಿಸುದ್ದಿ ಸಾರಬಾರದು ಅಂತ ಸರ್ಕಾರ ಹೇಳಿದ್ರೂ ನಾವು ಯೇಸುವಿನ ಶಿಷ್ಯರ ತರ ಸಾರುತ್ತಾ ಇರ್ತೀವಿ. ಯೆಹೋವ ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ನಾವು ನಂಬಬೇಕು. ಧೈರ್ಯ, ವಿವೇಕ ಕೊಡಪ್ಪಾ ಅಂತ ಬೇಡ್ಕೊಬೇಕು. ಅಷ್ಟೇ ಅಲ್ಲ, ಕಷ್ಟಗಳನ್ನ ನಿಭಾಯಿಸೋಕೆ ಯೆಹೋವನ ಹತ್ರ ಸಹಾಯ ಕೇಳಬೇಕು. ನಮಗೆ ಯಾವೆಲ್ಲ ಕಷ್ಟಗಳು ಬರಬಹುದು? ನಮ್ಮ ಆರೋಗ್ಯ ಹಾಳಾಗಬಹುದು, ಬೇಜಾರಲ್ಲಿ ಮುಳುಗಿ ಹೋಗಬಹುದು, ನಮ್ಮವರು ಯಾರಾದ್ರೂ ತೀರಿಹೋಗಬಹುದು, ಕುಟುಂಬದಲ್ಲಿ ಏನಾದ್ರೂ ಸಮಸ್ಯೆ ಬರಬಹುದು ಅಥವಾ ಹಿಂಸೆ ಬರಬಹುದು. ಈ ತರ ಸಮಸ್ಯೆಗಳು ಬಂದಾಗ ಜೀವನ ಮಾಡೋಕೆ ತುಂಬ ಕಷ್ಟ ಆಗುತ್ತೆ. ಇದ್ರ ಜೊತೆಗೆ ನಾವಿರೋ ಜಾಗದಲ್ಲಿ ಅಂಟುರೋಗ ಇದ್ರೆ ಅಥವಾ ಯುದ್ಧ ನಡೀತಾ ಇದ್ರೆ ಜೀವನ ಮಾಡೋಕೆ ಇನ್ನೂ ಕಷ್ಟ ಆಗುತ್ತೆ. ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಯೆಹೋವನ ಹತ್ರ ಎಲ್ಲಾ ಹೇಳ್ಕೊಬೇಕು. ಒಬ್ಬ ಸ್ನೇಹಿತನ ಹತ್ರ ಮನಸ್ಸುಬಿಚ್ಚಿ ಮಾತಾಡೋ ತರ ಮಾತಾಡಬೇಕು. ಆಗ ಯೆಹೋವನೇ ನಮ್ಮ “ಪರವಾಗಿ ಹೆಜ್ಜೆ ತಗೊತಾನೆ.” (ಕೀರ್ತ. 37:3, 5) ನಾವು ಪಟ್ಟುಬಿಡದೆ ಪ್ರಾರ್ಥನೆ ಮಾಡಿದ್ರೆ ‘ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗುತ್ತೆ.’ (ರೋಮ. 12:12) ನಾವು ಯಾವ ಕಷ್ಟದಲ್ಲಿ ಇದ್ದೀವಿ ಅಂತ ಯೆಹೋವನಿಗೆ ಗೊತ್ತು. ‘ಸಹಾಯಕ್ಕಾಗಿ ನಾವಿಡೋ ಮೊರೆಯನ್ನ ಆತನು ಕೇಳಿಸ್ಕೊಳ್ತಾನೆ.’—ಕೀರ್ತ. 145:18, 19. w23.05 5-6 ¶12-15
ಗುರುವಾರ, ಜುಲೈ 31
ದೇವರಿಗೆ ಏನು ಇಷ್ಟ ಅಂತ ಯಾವಾಗ್ಲೂ ಪರೀಕ್ಷೆ ಮಾಡಿ ತಿಳ್ಕೊಳ್ಳಿ.—ಎಫೆ. 5:10.
ನಾವು ಒಂದು ಮುಖ್ಯವಾದ ತೀರ್ಮಾನ ತಗೊಳ್ಳೋ ಮುಂಚೆ ಏನು ಮಾಡಬೇಕು? “ಯೆಹೋವನ ಇಷ್ಟ ಏನಂತ” ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕ ಹಾಗೆ ನಡ್ಕೊಬೇಕು. (ಎಫೆ. 5:17) ನಮ್ಮ ಸನ್ನಿವೇಶಕ್ಕೆ ಯಾವ ಬೈಬಲ್ ತತ್ವ ಪಾಲಿಸಬೇಕು ಅಂತ ಕಂಡುಹಿಡಿದ್ರೆ ಯೆಹೋವ ದೇವರ ತರ ಯೋಚಿಸೋಕೆ ಪ್ರಯತ್ನ ಮಾಡ್ತಿದ್ದೀವಿ ಅಂತ ತೋರಿಸೋಕಾಗುತ್ತೆ. ಆಮೇಲೆ ಆ ತತ್ವ ಪಾಲಿಸಿದ್ರೆ ಒಳ್ಳೇ ತೀರ್ಮಾನ ಮಾಡೋಕಾಗುತ್ತೆ. ಯಾಕಂದ್ರೆ ನಮ್ಮ ವೈರಿಯಾದ “ಸೈತಾನ” ನಾವು ಈ ಲೋಕದ ವಿಷ್ಯಗಳಲ್ಲೇ ಮುಳುಗಿಹೋಗೋ ತರ ಮಾಡ್ತಾನೆ. ಆಗ ಯೆಹೋವನ ಸೇವೆ ಮಾಡೋಕೆ ನಮಗೆ ಟೈಮೇ ಇಲ್ಲ ಅಂತ ಅನಿಸಿಬಿಡುತ್ತೆ. (1 ಯೋಹಾ. 5:19) ಒಂದುವೇಳೆ ನಮಗೆ ಹೀಗೆ ಅನಿಸಿದ್ರೆ ಯೆಹೋವನ ಸೇವೆ ಮಾಡೋದಕ್ಕಿಂತ ಹಣ, ಆಸ್ತಿ-ಪಾಸ್ತಿ, ಕೆಲಸ, ಶಿಕ್ಷಣ ಇದನ್ನ ಮಾಡೋದೇ ನಮ್ಮ ಜೀವನದಲ್ಲಿ ಮುಖ್ಯ ಆಗಿಬಿಡುತ್ತೆ. ಇದೆಲ್ಲ ನಮ್ಮ ಜೀವನಕ್ಕೆ ಬೇಕು ನಿಜ, ಆದ್ರೆ ಅದು ಯೆಹೋವನ ಸೇವೆಗಿಂತ ಮುಖ್ಯ ಆಗಬಾರದು. ಒಂದುವೇಳೆ ನಾವು ಹೀಗೇನಾದ್ರೂ ಮಾಡಿದ್ರೆ ನಾವೂ ಲೋಕದ ಜನ್ರ ತರ ಯೋಚ್ನೆ ಮಾಡ್ತಿದ್ದೀವಿ ಅಂತ ಅರ್ಥ. w24.03 24 ¶16-17