“ಹುರುಪಿನ ರಾಜ್ಯ ಘೋಷಕರು” ಆನಂದಭರಿತರಾಗಿ ಕೂಡಿಬರುತ್ತಾರೆ
ನೈತಿಕ, ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳು ಜಗತ್ತನ್ನೇ ಅಲುಗಾಡಿಸುತ್ತಿವೆ. ಆದರೂ, ಈ ಎಲ್ಲಾ ಅಶಾಂತಿಯ ನಡುವೆ, ಯೆಹೋವನ ಸಾಕ್ಷಿಗಳು ಶಾಂತಿಭರಿತವಾದ “ಹುರುಪಿನ ರಾಜ್ಯ ಘೋಷಕರು” ಎಂಬ ಮೂರು ದಿನದ ಜಿಲ್ಲಾ ಅಧಿವೇಶನಕ್ಕಾಗಿ ಕೂಡಿಬಂದರು. 2002ರ ಮೇ ತಿಂಗಳಿನಿಂದ ಆರಂಭಿಸಿ, ಈ ನೆರೆದು ಬರುವಿಕೆಗಳು ಭೂಗೋಲದಾದ್ಯಂತ ನಡೆಸಲ್ಪಟ್ಟವು.
ಈ ಅಧಿವೇಶನಗಳು ಖಂಡಿತವಾಗಿಯೂ ಆನಂದಭರಿತ ಸಂದರ್ಭಗಳಾಗಿ ಪರಿಣಮಿಸಿದವು. ನಾವು ಈಗ ಭಕ್ತಿವೃದ್ಧಿಯನ್ನುಂಟುಮಾಡುವ ಆ ಬೈಬಲ್ ಆಧಾರಿತ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸೋಣ.
ಮೊದಲನೆಯ ದಿನವು ಯೇಸುವಿನ ಹುರುಪನ್ನು ಒತ್ತಿಹೇಳುತ್ತದೆ
ಅಧಿವೇಶನದ ಮೊದಲನೆಯ ದಿನದ ಮುಖ್ಯ ವಿಷಯವು “ನಮ್ಮ ಕರ್ತನಾದ ಯೇಸುವಿನ ಹುರುಪನ್ನು ಅನುಕರಿಸಿರಿ” ಎಂದಾಗಿತ್ತು. (ಯೋಹಾನ 2:17, NW) “ರಾಜ್ಯ ಘೋಷಕರೋಪಾದಿ ಒಟ್ಟಿಗೆ ಸೇರಿರುವುದಕ್ಕಾಗಿ ಹರ್ಷಿಸಿರಿ” ಎಂಬ ಭಾಷಣವು, ಯಾವಾಗಲೂ ದೇವಜನರ ಅಧಿವೇಶನಗಳ ವೈಶಿಷ್ಟ್ಯವಾಗಿರುವ ಆನಂದದಲ್ಲಿ ಪಾಲ್ಗೊಳ್ಳಲಿಕ್ಕಾಗಿ, ಹಾಜರಿರುವವರನ್ನು ಹೃತ್ಪೂರ್ವಕವಾಗಿ ಆಮಂತ್ರಿಸಿತು. (ಧರ್ಮೋಪದೇಶಕಾಂಡ 16:15) ಈ ಭಾಷಣದ ನಂತರ ಸುವಾರ್ತೆಯ ಹುರುಪಿನ ಘೋಷಕರೊಂದಿಗೆ ಇಂಟರ್ವ್ಯೂಗಳು ನಡೆಸಲ್ಪಟ್ಟವು.
“ಯೆಹೋವನಲ್ಲಿ ಸಂತೋಷಿಸಿರಿ” ಎಂಬ ಭಾಷಣವು, ಕೀರ್ತನೆ 37:1-11ರ ಪ್ರತಿಯೊಂದು ವಚನವನ್ನೂ ಆವರಿಸಿತು. ಹೊರತೋರಿಕೆಗೆ ದುಷ್ಟರು ಯಶಸ್ಸನ್ನು ಪಡೆದುಕೊಳ್ಳುತ್ತಿರುವುದನ್ನು ನೋಡಿ “ಉರಿಗೊಳ್ಳ”ದಿರುವಂತೆ ಅದು ನಮ್ಮನ್ನು ಉತ್ತೇಜಿಸಿತು. ದುಷ್ಟಜನರು ನಮ್ಮ ಬಗ್ಗೆ ಸುಳ್ಳುಗಳನ್ನು ಹಬ್ಬಿಸುವುದಾದರೂ, ನಿಜವಾಗಿಯೂ ಯಾರು ತನ್ನ ನಂಬಿಗಸ್ತ ಜನರಾಗಿದ್ದಾರೆ ಎಂಬುದನ್ನು ಯೆಹೋವನು ಸಕಾಲದಲ್ಲಿ ಸ್ಪಷ್ಟಪಡಿಸುವನು. “ಕೃತಜ್ಞತೆಯುಳ್ಳವರಾಗಿರಿ” ಎಂಬ ಭಾಷಣವು, ನಾವು ದೇವರಿಗೆ ಹೇಗೆ ಕೃತಜ್ಞತೆಯನ್ನು ತೋರಿಸಸಾಧ್ಯವಿದೆ ಎಂಬುದನ್ನು ಚರ್ಚಿಸಿತು. ಎಲ್ಲಾ ಕ್ರೈಸ್ತರು ಯೆಹೋವನಿಗೆ “ಸ್ತೋತ್ರಯಜ್ಞವನ್ನು” ಸಮರ್ಪಿಸಬೇಕು. (ಇಬ್ರಿಯ 13:15) ಆದರೆ ಯೆಹೋವನ ಸೇವೆಗಾಗಿ ನಾವು ವಿನಿಯೋಗಿಸುವ ಸಮಯವು, ನಮ್ಮ ಗಣ್ಯತೆ ಹಾಗೂ ಸನ್ನಿವೇಶಗಳ ಮೇಲೆ ಆಧಾರಿತವಾಗಿದೆ ಎಂಬುದಂತೂ ನಿಜ.
ಮುಖ್ಯ ಭಾಷಣದ ಶೀರ್ಷಿಕೆಯು “ಹುರುಪಿನಿಂದ ಪ್ರಚೋದಿಸಲ್ಪಟ್ಟ ರಾಜ್ಯ ಘೋಷಕರು” ಎಂಬುದಾಗಿತ್ತು. ಯೇಸು ಕ್ರಿಸ್ತನು ಹುರುಪಿನ ವಿಷಯದಲ್ಲಿ ನಮಗೆ ಅತ್ಯುತ್ತಮ ಮಾದರಿಯಾಗಿದ್ದಾನೆ ಎಂಬದನ್ನು ಇದು ಸೂಚಿಸಿತು. 1914ರಲ್ಲಿ ಸ್ವರ್ಗೀಯ ರಾಜ್ಯವು ಸ್ಥಾಪಿತವಾದ ಬಳಿಕ, ಸುವಾರ್ತೆಯನ್ನು ಪ್ರಕಟಿಸಲಿಕ್ಕಾಗಿ ನಿಜ ಕ್ರೈಸ್ತರಿಗೆ ಹುರುಪಿನ ಆವಶ್ಯಕತೆಯಿತ್ತು. ಭಾಷಣಕರ್ತರು 1922ರಲ್ಲಿ ಅಮೆರಿಕದ ಒಹಾಯೋದ ಸೀಡರ್ ಪಾಯಿಂಟ್ನಲ್ಲಿ ನಡೆದ ಅಧಿವೇಶನವನ್ನು ಸೂಚಿಸಿ ಮಾತಾಡಿದರು ಮತ್ತು “ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ”! ಎಂಬ ಐತಿಹಾಸಿಕ ಕರೆಯನ್ನು ನಮಗೆ ನೆನಪು ಹುಟ್ಟಿಸಿದರು. ಕಾಲಕ್ರಮೇಣ, ದೇವರ ನಂಬಿಗಸ್ತ ಸೇವಕರ ಹುರುಪು, ಅದ್ಭುತಕರವಾದ ರಾಜ್ಯ ಸತ್ಯಗಳನ್ನು ಎಲ್ಲಾ ಜನಾಂಗಗಳಿಗೆ ಪ್ರಕಟಿಸುವಂತೆ ಅವರನ್ನು ಪ್ರಚೋದಿಸಿತು.
ಮೊದಲನೆಯ ದಿನದ ಮಧ್ಯಾಹ್ನದಂದು, “ಯೆಹೋವನು ನಮ್ಮೊಂದಿಗೆ ಇದ್ದಾನೆಂಬುದನ್ನು ತಿಳಿದವರಾಗಿ ನಿರ್ಭೀತಿಯಿಂದಿರಿ” ಎಂಬ ಭಾಷಣವು ಕೊಡಲ್ಪಟ್ಟಿತು. ಇದು, ದೇವಜನರು ಸೈತಾನನ ವಿಶೇಷ ಗುರಿಹಲಗೆಯಾಗಿದ್ದಾರೆ ಎಂಬುದನ್ನು ತೋರಿಸಿತು. ಆದರೂ, ನಾವು ಎಷ್ಟೇ ವಿರೋಧವನ್ನು ಎದುರಿಸಿದರೂ, ನಂಬಿಕೆಯ ಅನೇಕ ಬೈಬಲ್ ಉದಾಹರಣೆಗಳನ್ನು ಹಾಗೂ ಆಧುನಿಕ ಮಾದರಿಗಳನ್ನು ಪರಿಗಣಿಸುವುದು, ಪರೀಕ್ಷೆಗಳನ್ನು ಹಾಗೂ ಶೋಧನೆಗಳನ್ನು ನಿರ್ಭೀತಿಯಿಂದ ಎದುರಿಸಲು ಬೇಕಾದ ಧೈರ್ಯವನ್ನು ನಮಗೆ ಕೊಡುತ್ತದೆ.—ಯೆಶಾಯ 41:10.
ಕಾರ್ಯಕ್ರಮದಲ್ಲಿ ಮುಂದಿನ ಭಾಷಣವು ಮೂರು ಭಾಗಗಳುಳ್ಳ ಭಾಷಣಮಾಲೆಯಾಗಿದ್ದು, “ಮೀಕನ ಪ್ರವಾದನೆಯು ಯೆಹೋವನ ಹೆಸರಿನಲ್ಲಿ ನಡೆಯುವಂತೆ ನಮ್ಮನ್ನು ಬಲಪಡಿಸುತ್ತದೆ” ಎಂಬುದು ಅದರ ಮುಖ್ಯ ವಿಷಯವಾಗಿತ್ತು. ಮೊದಲನೆಯ ಭಾಷಣಕರ್ತರು ಮೀಕನ ದಿನದಲ್ಲಿದ್ದ ನೈತಿಕ ಕುಸಿತ, ಧರ್ಮಭ್ರಷ್ಟತೆ ಮತ್ತು ಪ್ರಾಪಂಚಿಕತೆಯನ್ನು ನಮ್ಮ ಸಮಯಗಳೊಂದಿಗೆ ಹೋಲಿಸಿದರು. ಅವರು ಹೇಳಿದ್ದು: “ನಾವು ವಿಧೇಯ ಹೃದಯವನ್ನು ಬೆಳೆಸಿಕೊಳ್ಳುವುದಾದರೆ ಮತ್ತು ನಮ್ಮ ನಡತೆಯು ಪವಿತ್ರವಾಗಿದೆ ಹಾಗೂ ನಮ್ಮ ಜೀವಿತವು ದೈವಿಕ ಭಕ್ತಿಯ ಕೃತ್ಯಗಳಿಂದ ತುಂಬಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಾದರೆ ಮತ್ತು ಯೆಹೋವನ ದಿನವು ಬರುವುದು ಎಂಬುದನ್ನು ಎಂದೂ ಮರೆಯದಿರುವುದಾದರೆ, ಭವಿಷ್ಯತ್ತಿಗಾಗಿರುವ ನಮ್ಮ ನಿರೀಕ್ಷೆಯು ನಿಶ್ಚಿತವಾಗಿರುತ್ತದೆ.”—2 ಪೇತ್ರ 3:11, 12.
ಭಾಷಣಮಾಲೆಯ ಎರಡನೆಯ ಭಾಷಣಕರ್ತರು, ಮೀಕನು ಯೆಹೂದದ ಮುಖಂಡರನ್ನು ಖಂಡಿಸಿದ್ದನ್ನು ತಿಳಿಯಪಡಿಸಿದರು. ಯೆಹೂದದ ಮುಖಂಡರು ಬಡವರಾದ, ರಕ್ಷಣಾರಹಿತ ಜನರ ಮೇಲೆ ದೌರ್ಜನ್ಯ ನಡೆಸಿದರು. ಇದಲ್ಲದೆ ಮೀಕನು ಸತ್ಯಾರಾಧನೆಯ ವಿಜಯದ ಕುರಿತು ಸಹ ಮುಂತಿಳಿಸಿದನು. (ಮೀಕ 4:1-5) ಯೆಹೋವನ ಪವಿತ್ರಾತ್ಮದಿಂದ ಬಲವನ್ನು ಪಡೆದವರಾದ ನಾವು, ನಿರೀಕ್ಷೆಯ ಈ ಚೈತನ್ಯದಾಯಕ ಸಂದೇಶವನ್ನು ಘೋಷಿಸಲು ದೃಢನಿರ್ಧಾರವನ್ನು ಮಾಡಿದ್ದೇವೆ. ಆದರೆ ಅಸ್ವಸ್ಥತೆಯಿಂದ ಅಥವಾ ಯಾವುದಾದರೊಂದು ವಿಧದ ನಿರ್ಬಂಧದಿಂದ ನಾವು ತಡೆಹಿಡಿಯಲ್ಪಟ್ಟಿದ್ದೇವೆ ಎಂದು ಅನಿಸುವಲ್ಲಿ ಆಗೇನು? ಮೂರನೆಯ ಭಾಷಣಕರ್ತರು ಹೇಳಿದ್ದು: “ಯೆಹೋವನ ಆವಶ್ಯಕತೆಗಳು ನ್ಯಾಯಸಮ್ಮತವಾಗಿವೆ ಮತ್ತು ತಲಪಬಲ್ಲವುಗಳಾಗಿವೆ.” ಅವರು ಮೀಕ 6:8ರ ಬೇರೆ ಬೇರೆ ಅಂಶಗಳನ್ನು ಚರ್ಚಿಸಿದರು. ಆ ವಚನದಲ್ಲಿ ನಾವು ಓದುವುದು: “ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”
ಲೋಕದ ನೈತಿಕ ಪತನವು ಕ್ರೈಸ್ತರ ಮೇಲೂ ಪ್ರಭಾವ ಬೀರಸಾಧ್ಯವಿರುವುದರಿಂದ, “ನಿಮ್ಮ ಹೃದಯವನ್ನು ಕಾಯುವ ಮೂಲಕ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಿರಿ” ಎಂಬ ಶೀರ್ಷಿಕೆಯಿರುವ ಭಾಷಣದಿಂದ ನಾವೆಲ್ಲರೂ ಪ್ರಯೋಜನವನ್ನು ಪಡೆದುಕೊಂಡೆವು. ಉದಾಹರಣೆಗಾಗಿ, ನಾವು ಪರಿಶುದ್ಧರಾಗಿರುವುದು ಒಂದು ಸಂತೋಷಭರಿತ ವಿವಾಹವನ್ನು ಹೊಂದಿರಲು ನಮಗೆ ಸಹಾಯಮಾಡುವುದು. ಕ್ರೈಸ್ತರೋಪಾದಿ ನಾವು, ಲೈಂಗಿಕ ಅನೈತಿಕತೆಯಲ್ಲಿ ಒಳಗೂಡುವ ವಿಚಾರವು ಸಹ ನಮ್ಮ ಮನಸ್ಸಿಗೆ ಬರಬಾರದು.—1 ಕೊರಿಂಥ 6:18.
“ಮೋಸದ ವಿರುದ್ಧ ಎಚ್ಚರದಿಂದಿರಿ” ಎಂಬ ಭಾಷಣವು, ಧರ್ಮಭ್ರಷ್ಟರಿಂದ ಹಬ್ಬಿಸಲ್ಪಡುವ ತಪ್ಪು ಬೋಧನೆಗಳು, ಅರ್ಧಸತ್ಯಗಳು, ಹಾಗೂ ನೇರವಾದ ಸುಳ್ಳುಗಳನ್ನು ವಿಷದಂತೆ ಪರಿಗಣಿಸುವುದು ವಿವೇಕಪ್ರದವಾಗಿದೆಯೆಂದು ತೋರಿಸಿತು. (ಕೊಲೊಸ್ಸೆ 2:8) ತದ್ರೀತಿಯಲ್ಲಿ, ಯಾವುದೇ ಹಾನಿಕರ ಪರಿಣಾಮಗಳಿಲ್ಲದೆ ನಾವು ನಮ್ಮ ಪಾಪಪೂರ್ಣ ಬಯಕೆಗಳನ್ನು ತಣಿಸಸಾಧ್ಯವಿದೆ ಎಂದು ಯೋಚಿಸುತ್ತಾ ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳಬಾರದು.
“ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ” ಎಂಬುದು ಮೊದಲನೆಯ ದಿನದ ಕೊನೆಯ ಭಾಷಣದ ಮೇಲ್ವಿಷಯವಾಗಿತ್ತು. ಲೋಕದಲ್ಲಿರುವ ಸನ್ನಿವೇಶಗಳು ಇನ್ನಷ್ಟು ಕಠಿನವಾಗುತ್ತಾ ಇರುವಾಗ, ಅತಿ ಬೇಗನೆ ಯೆಹೋವನು ತನ್ನ ನೀತಿಯ ನೂತನ ಲೋಕವನ್ನು ತರಲಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ಎಷ್ಟು ಉತ್ತೇಜನದಾಯಕವಾಗಿದೆ! ಅದರಲ್ಲಿ ಯಾರು ವಾಸಿಸುವರು? ಯೆಹೋವನನ್ನು ಆರಾಧಿಸುವಂಥ ಜನರು ಮಾತ್ರ. ಈ ಗುರಿಯನ್ನು ಸಾಧಿಸುವಂತೆ ನಮಗೆ, ನಮ್ಮ ಮಕ್ಕಳಿಗೆ, ಮತ್ತು ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಲಿಕ್ಕಾಗಿ, ಭಾಷಣಕರ್ತರು ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ (ಇಂಗ್ಲಿಷ್) ಎಂಬ ಹೊಸ ಅಧ್ಯಯನ ಪುಸ್ತಕವನ್ನು ಬಿಡುಗಡೆಮಾಡಿದರು. ಇದನ್ನು ಪಡೆದುಕೊಳ್ಳಲು ನಾವೆಷ್ಟು ಹರ್ಷಗೊಂಡಿದ್ದೆವು!
ಎರಡನೆಯ ದಿನವು ಯಾವುದು ಒಳ್ಳೇದಾಗಿದೆಯೋ ಅದಕ್ಕಾಗಿ ಹುರುಪುಳ್ಳವರಾಗಿರುವುದನ್ನು ಎತ್ತಿತೋರಿಸಿತು
ಅಧಿವೇಶನದ ಎರಡನೆಯ ದಿನಕ್ಕೆ “ಒಳ್ಳೇದನ್ನು ಮಾಡುವುದಕ್ಕಾಗಿ ಹುರುಪುಳ್ಳವರಾಗಿರಿ” ಎಂಬ ಮುಖ್ಯ ವಿಷಯವಿತ್ತು. (1 ಪೇತ್ರ 3:13, NW) ಮೊದಲನೆಯ ಭಾಷಣಕರ್ತರು ಆ ದಿನದ ಬೈಬಲ್ ವಚನವನ್ನು ಚರ್ಚಿಸಿದರು. ದೈನಂದಿನ ವಚನದ ಕ್ರಮವಾದ, ಅರ್ಥಭರಿತ ಪರಿಗಣನೆಯು ನಮ್ಮ ಹುರುಪನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿಹೇಳಿದರು.
ತದನಂತರ “ತಮ್ಮ ಶುಶ್ರೂಷೆಯನ್ನು ಮಹಿಮೆಪಡಿಸುವ ರಾಜ್ಯ ಘೋಷಕರು” ಎಂಬ ಭಾಷಣಮಾಲೆಯು ನೀಡಲ್ಪಟ್ಟಿತು. ಇದರ ಮೊದಲ ಭಾಗವು, ದೇವರ ವಾಕ್ಯವನ್ನು ಸರಿಯಾಗಿ ಉಪದೇಶಿಸುವುದರ ಆವಶ್ಯಕತೆಯನ್ನು ಒತ್ತಿಹೇಳಿತು. (2 ತಿಮೊಥೆಯ 2:15) ನಾವು ಬೈಬಲನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು, ಅದು ಜನರ ಜೀವಿತಗಳಲ್ಲಿ ‘ಕಾರ್ಯಸಾಧಕ’ವಾಗಿರುವಂತೆ ಮಾರ್ಗವನ್ನು ತೆರೆಯುತ್ತದೆ. (ಇಬ್ರಿಯ 4:12) ನಾವು ಬೈಬಲಿನ ಕಡೆಗೆ ಗಮನವನ್ನು ಸೆಳೆಯಬೇಕು ಮತ್ತು ಮನಗಾಣಿಸುವಂಥ ರೀತಿಯಲ್ಲಿ ಅದರ ಕುರಿತು ತರ್ಕಿಸಬೇಕು. ಭಾಷಣಮಾಲೆಯ ಎರಡನೆಯ ಭಾಗವು, ಆಸಕ್ತ ಜನರಿಗೆ ಅನೇಕಾವರ್ತಿ ಪುನರ್ಭೇಟಿಮಾಡುವಂತೆ ನಮ್ಮನ್ನು ಹುರಿದುಂಬಿಸಿತು. (1 ಕೊರಿಂಥ 3:6) ಎಲ್ಲಾ ಆಸಕ್ತ ಜನರೊಂದಿಗೆ ಸಂಪರ್ಕವನ್ನು ಕಾಪಾಡಿಕೊಳ್ಳಲಿಕ್ಕಾಗಿ, ಮುಂತಯಾರಿ ಹಾಗೂ ಧೈರ್ಯದ ಆವಶ್ಯಕತೆಯಿದೆ. ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಭಾವ್ಯ ಶಿಷ್ಯನಾಗಿ ಪರಿಗಣಿಸುವಂತೆ ಮೂರನೇ ಭಾಗವು ಶಿಫಾರಸ್ಸು ಮಾಡಿತು ಮತ್ತು ಆರಂಭದ ಭೇಟಿಯಲ್ಲೇ ಒಂದು ಬೈಬಲ್ ಅಧ್ಯಯನವನ್ನು ಮಾಡುವಂತೆ ಕೇಳಿಕೊಳ್ಳುವುದು, ಶಿಷ್ಯರಾಗುವಂತೆ ಜನರಿಗೆ ಸಹಾಯಮಾಡುವ ಆನಂದಕ್ಕೆ ನಡಿಸಬಲ್ಲದು ಎಂಬುದನ್ನು ತೋರಿಸಿತು.
“‘ಎಡೆಬಿಡದೆ ಪ್ರಾರ್ಥಿಸಬೇಕು’ ಏಕೆ?” ಎಂಬುದೇ ಮುಂದಿನ ಭಾಷಣದ ಮುಖ್ಯ ವಿಷಯವಾಗಿತ್ತು. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಾರ್ಗದರ್ಶನಕ್ಕಾಗಿ ದೇವರ ಕಡೆಗೆ ನೋಡುವಂತೆ ಬೈಬಲು ಕ್ರೈಸ್ತರಿಗೆ ಬುದ್ಧಿಹೇಳುತ್ತದೆ. ಖಾಸಗಿ ಪ್ರಾರ್ಥನೆಗಾಗಿ ನಾವು ಸಮಯವನ್ನು ಮಾಡಿಕೊಳ್ಳಬೇಕು. ಅಷ್ಟುಮಾತ್ರವಲ್ಲ, ನಾವು ಎಡೆಬಿಡದೆ ಪ್ರಾರ್ಥಿಸುತ್ತಾ ಇರಬೇಕು. ಏಕೆಂದರೆ ತನ್ನ ಉತ್ತರವು ಸುವ್ಯಕ್ತವಾಗುವುದಕ್ಕೆ ಮೊದಲು ನಾವು ಪ್ರಾರ್ಥಿಸುತ್ತಾ ಇರುವಂತೆ ಯೆಹೋವನು ಅನುಮತಿಸಬಹುದು.—ಯಾಕೋಬ 4:8.
“ಆತ್ಮಿಕ ಸಂಭಾಷಣೆಯು ಭಕ್ತಿವೃದ್ಧಿಮಾಡುತ್ತದೆ” ಎಂಬ ಭಾಷಣವು, ನಮ್ಮ ಮಾತಾಡುವ ಸಾಮರ್ಥ್ಯವನ್ನು ನಮ್ಮ ಪ್ರಯೋಜನಕ್ಕಾಗಿ ಹಾಗೂ ಇತರರ ಸಹಾಯಾರ್ಥವಾಗಿ ಉಪಯೋಗಿಸುವಂತೆ ಉತ್ತೇಜಿಸಿತು. (ಫಿಲಿಪ್ಪಿ 4:8) ವಿವಾಹ ಸಂಗಾತಿಗಳು ಹಾಗೂ ಮಕ್ಕಳು ದಿನಾಲೂ ಆತ್ಮಿಕ ಸಂಭಾಷಣೆಯನ್ನು ನಡೆಸುವ ಅಗತ್ಯವಿದೆ. ಇದನ್ನು ಸಾಧಿಸಲಿಕ್ಕಾಗಿ, ಕುಟುಂಬಗಳು ಕಡಿಮೆಪಕ್ಷ ದಿನಕ್ಕೆ ಒಂದು ಬಾರಿ ಒಟ್ಟಿಗೆ ಕುಳಿತು ಊಟಮಾಡಲು ಪ್ರಯತ್ನಿಸಬೇಕು. ಇದು ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗೆ ಅವಕಾಶಮಾಡಿಕೊಡುತ್ತದೆ.
“ಸಮರ್ಪಣೆ ಮತ್ತು ದೀಕ್ಷಾಸ್ನಾನವು ಹೇಗೆ ರಕ್ಷಣೆಗೆ ನಡೆಸುತ್ತದೆ?” ಎಂಬ ಹೃತ್ಪೂರ್ವಕವಾದ ಭಾಷಣದೊಂದಿಗೆ ಬೆಳಗ್ಗಿನ ಕಾರ್ಯಕ್ರಮವು ಕೊನೆಗೊಂಡಿತು. ದೀಕ್ಷಾಸ್ನಾನದ ಅಭ್ಯರ್ಥಿಗಳು ಜ್ಞಾನವನ್ನು ಪಡೆದುಕೊಂಡಿದ್ದರು, ನಂಬಿಕೆಯನ್ನು ತೋರಿಸಿದ್ದರು, ಪಶ್ಚಾತ್ತಾಪಪಟ್ಟಿದ್ದರು, ಕೆಟ್ಟದ್ದನ್ನು ಮಾಡುವುದರಿಂದ ವಿಮುಖರಾಗಿದ್ದರು ಮತ್ತು ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ದೀಕ್ಷಾಸ್ನಾನ ಪಡೆದುಕೊಂಡ ಬಳಿಕ, ಅವರು ಆತ್ಮಿಕವಾಗಿ ಬೆಳೆಯುತ್ತಾ ಹೋಗಬೇಕು ಮತ್ತು ತಮ್ಮ ಹುರುಪು ಹಾಗೂ ಅತ್ಯುತ್ತಮ ನಡತೆಯನ್ನು ಕಾಪಾಡಿಕೊಳ್ಳುತ್ತಾ ಮುಂದುವರಿಯಬೇಕೆಂದು ಭಾಷಣಕರ್ತರು ತಿಳಿಸಿದರು.—ಫಿಲಿಪ್ಪಿ 2:15, 16.
ಆ ದಿನ ಮಧ್ಯಾಹ್ನ, “ವಿನಯಶೀಲರಾಗಿರಿ, ಮತ್ತು ನಿಮ್ಮ ಕಣ್ಣನ್ನು ಸರಳವಾಗಿಡಿರಿ” ಎಂಬ ಭಾಷಣದಲ್ಲಿ ಎರಡು ಮುಖ್ಯ ಅಂಶಗಳನ್ನು ಒತ್ತಿಹೇಳಲಾಯಿತು. ವಿನಯಶೀಲರಾಗಿರುವುದು ಅಂದರೆ, ನಮ್ಮ ಇತಿಮಿತಿಗಳು ಹಾಗೂ ದೇವರ ಮುಂದೆ ನಮ್ಮ ನಿಲುವಿನ ಕುರಿತು ವಾಸ್ತವಿಕ ನೋಟವುಳ್ಳವರಾಗಿರುವುದು ಎಂದರ್ಥ. ವಿನಯಶೀಲತೆಯು ನಾವು ನಮ್ಮ ಕಣ್ಣನ್ನು “ಸರಳ”ವಾಗಿಟ್ಟುಕೊಳ್ಳುವಂತೆ (NW), ಪ್ರಾಪಂಚಿಕ ವಸ್ತುಗಳ ಮೇಲಲ್ಲ ಬದಲಾಗಿ ದೇವರ ರಾಜ್ಯದ ಮೇಲೆ ಕೇಂದ್ರೀಕರಿಸುವಂತೆ ಸಹಾಯಮಾಡುತ್ತದೆ. ನಾವಿದನ್ನು ಮಾಡುವಲ್ಲಿ, ಚಿಂತಿತರಾಗಿರಬೇಕಾದ ಅಗತ್ಯವಿಲ್ಲ; ಏಕೆಂದರೆ ಯೆಹೋವನೇ ನಮ್ಮ ಆವಶ್ಯಕತೆಗಳನ್ನು ಪೂರೈಸುವನು.—ಮತ್ತಾಯ 6:22-24, 33, 34.
ಮುಂದಿನ ಭಾಷಣಕರ್ತರು, “ಸಂಕಷ್ಟದ ಸಮಯಗಳಲ್ಲಿ ಯೆಹೋವನಲ್ಲಿ ಪೂರ್ಣ ಭರವಸೆಯಿಡಿರಿ” ಎಂಬ ವಿಷಯದ ಕುರಿತು ಮಾತಾಡಿದರು. ನಾವಿದನ್ನು ಏಕೆ ಮಾಡಬೇಕೆಂಬದನ್ನು ಅವರು ತಿಳಿಸಿದರು. ವೈಯಕ್ತಿಕ ದೌರ್ಬಲ್ಯಗಳು ಮತ್ತು ಹಣಕಾಸಿನ ಅಥವಾ ಆರೋಗ್ಯ ಸಮಸ್ಯೆಗಳನ್ನು ನಾವು ಹೇಗೆ ನಿಭಾಯಿಸಬಲ್ಲೆವು? ನಾವು ಯೆಹೋವನ ಬಳಿ ಪ್ರಾಯೋಗಿಕ ವಿವೇಕಕ್ಕಾಗಿ ಬೇಡಿಕೊಳ್ಳೋಣ ಮತ್ತು ಇತರರಿಂದ ಸಹಾಯವನ್ನು ಕೇಳಿಕೊಳ್ಳೋಣ. ಭಯ ಅಥವಾ ಹತಾಶೆಗೆ ಒಳಗಾಗುವುದಕ್ಕೆ ಬದಲಾಗಿ, ದೇವರ ವಾಕ್ಯವನ್ನು ಓದುವ ಮೂಲಕ ನಾವು ಆತನಲ್ಲಿನ ನಮ್ಮ ಭರವಸೆಯನ್ನು ಇನ್ನಷ್ಟು ಬಲಗೊಳಿಸೋಣ.—ರೋಮಾಪುರ 8:35-39.
ಅಧಿವೇಶನದ ಕೊನೆಯ ಭಾಷಣಮಾಲೆಯು “ವಿವಿಧ ಪರೀಕ್ಷೆಗಳಿಂದ ಶೋಧಿಸಲ್ಪಟ್ಟ ನಮ್ಮ ನಂಬಿಕೆಯ ಗುಣಮಟ್ಟ” ಎಂಬ ಮುಖ್ಯ ವಿಷಯವನ್ನು ಹೊಂದಿತ್ತು. ಮೊದಲನೆಯ ಭಾಗವು, ಸತ್ಯ ಕ್ರೈಸ್ತರೆಲ್ಲರೂ ಹಿಂಸೆಯನ್ನು ಎದುರಿಸುತ್ತಾರೆ ಎಂಬುದನ್ನು ನಮಗೆ ನೆನಪು ಹುಟ್ಟಿಸಿತು. ಅದು ಇತರರಿಗೆ ಸಾಕ್ಷಿಯೋಪಾದಿ ಕಾರ್ಯನಡಿಸುತ್ತದೆ, ನಮ್ಮ ನಂಬಿಕೆಯನ್ನು ಬಲಗೊಳಿಸುತ್ತದೆ, ಮತ್ತು ದೇವರ ಕಡೆಗೆ ನಮಗಿರುವ ನಿಷ್ಠೆಯನ್ನು ತೋರಿಸಲು ನಮಗೆ ಅವಕಾಶಗಳನ್ನು ನೀಡುತ್ತದೆ. ನಾವು ಅನಗತ್ಯವಾಗಿ ನಮ್ಮ ಜೀವಿತಗಳನ್ನು ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲವಾದರೂ, ಹಿಂಸೆಯನ್ನು ತಪ್ಪಿಸಲಿಕ್ಕಾಗಿ ನಾವು ಅಶಾಸ್ತ್ರೀಯವಾದ ಮಾಧ್ಯಮಗಳನ್ನು ಎಂದೂ ಉಪಯೋಗಿಸಬಾರದು.—1 ಪೇತ್ರ 3:16.
ಭಾಷಣಮಾಲೆಯ ಎರಡನೆಯ ಭಾಷಣಕರ್ತರು, ತಾಟಸ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳ ಕುರಿತು ಮಾತಾಡಿದರು. ಆದಿಕ್ರೈಸ್ತರು ಶಾಂತಿವಾದಿಗಳಾಗಿರಲಿಲ್ಲ, ಆದರೆ ತಮ್ಮ ಪೂರ್ಣ ನಿಷ್ಠೆಯು ದೇವರಿಗೆ ಸಲ್ಲತಕ್ಕದ್ದಾಗಿದೆ ಎಂಬುದನ್ನು ಅವರು ಮನಗಂಡರು. ತದ್ರೀತಿಯಲ್ಲಿ ಇಂದು, ಯೆಹೋವನ ಸಾಕ್ಷಿಗಳು ಈ ಮೂಲತತ್ತ್ವಕ್ಕೆ ಬಲವಾಗಿ ಅಂಟಿಕೊಳ್ಳುತ್ತಾರೆ: “ನೀವು ಲೋಕದ ಕಡೆಯವರಲ್ಲ.” (ಯೋಹಾನ 15:19) ನಮ್ಮ ತಾಟಸ್ಥ್ಯದ ಕುರಿತಾದ ಪರೀಕ್ಷೆಗಳು ಅನಿರೀಕ್ಷಿತವಾಗಿ ಏಳಸಾಧ್ಯವಿರುವುದರಿಂದ, ಈ ವಿಷಯದ ಕುರಿತಾದ ಬೈಬಲಿನ ಮಾರ್ಗದರ್ಶನಗಳನ್ನು ಪುನರ್ವಿಮರ್ಶಿಸಲು ಸಮಯವನ್ನು ಶೆಡ್ಯೂಲ್ಮಾಡತಕ್ಕದ್ದು. ಈ ಭಾಷಣಮಾಲೆಯ ಮೂರನೆಯ ಭಾಷಣವು ಸೂಚಿಸಿದಂತೆ, ಸೈತಾನನ ಗುರಿಯು ನಮ್ಮನ್ನು ಕೊಲ್ಲುವುದಾಗಿರಬೇಕೆಂದಿಲ್ಲ, ಬದಲಾಗಿ ನಾವು ಅಪನಂಬಿಗಸ್ತರಾಗಿ ಪರಿಣಮಿಸುವಂತೆ ನಮ್ಮ ಮೇಲೆ ಒತ್ತಡವನ್ನು ತರುವುದೇ ಆಗಿದೆ. ಅಪಹಾಸ್ಯ, ಅನೈತಿಕ ಒತ್ತಡಗಳು, ಭಾವನಾತ್ಮಕ ವೇದನೆ, ಮತ್ತು ಅಸ್ವಸ್ಥತೆಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವ ಮೂಲಕ, ನಾವು ಯೆಹೋವನಿಗೆ ಸ್ತುತಿಯನ್ನು ತರುತ್ತೇವೆ.
“ಯೆಹೋವನ ಸಮೀಪಕ್ಕೆ ಬನ್ನಿರಿ” ಎಂಬ ಹೃತ್ಪೂರ್ವಕ ಆಮಂತ್ರಣವು, ಆ ದಿನದ ಕೊನೆಯ ಭಾಷಣದ ಶೀರ್ಷಿಕೆಯಾಗಿತ್ತು. ಯೆಹೋವನ ಅತಿ ಮುಖ್ಯ ಗುಣಗಳನ್ನು ಅರ್ಥಮಾಡಿಕೊಳ್ಳುವುದು, ನಮ್ಮನ್ನು ಆತನ ಕಡೆಗೆ ಆಕರ್ಷಿಸುತ್ತದೆ. ಆತನು ತನ್ನ ಅಪಾರ ಶಕ್ತಿಯನ್ನು, ವಿಶೇಷವಾಗಿ ತನ್ನ ಜನರನ್ನು ಆತ್ಮಿಕವಾಗಿ ಸಂರಕ್ಷಿಸಲಿಕ್ಕಾಗಿ ಉಪಯೋಗಿಸುತ್ತಾನೆ. ಆತನ ನ್ಯಾಯವು ನಿರ್ದಯವಾದದ್ದಲ್ಲ, ಬದಲಾಗಿ ಅದು ನೀತಿಯಿಂದ ಕಾರ್ಯನಡಿಸುವ ಪ್ರತಿಯೊಬ್ಬರಿಗೂ ಅನಂತ ಜೀವನವನ್ನು ಲಭ್ಯಗೊಳಿಸುವಂತೆ ಆತನನ್ನು ಪ್ರಚೋದಿಸುತ್ತದೆ. ಬೈಬಲನ್ನು ಬರೆಯಲಿಕ್ಕಾಗಿ ಅಪರಿಪೂರ್ಣ ಮಾನವರನ್ನು ದೇವರು ಉಪಯೋಗಿಸಿದ ರೀತಿಯಲ್ಲಿ ಆತನ ವಿವೇಕವು ಸುವ್ಯಕ್ತವಾಗುತ್ತದೆ. ಎಲ್ಲದಕ್ಕಿಂತಲೂ ಹೆಚ್ಚು ಇಷ್ಟಕರವಾದುದು ಆತನ ಪ್ರೀತಿಯಾಗಿದೆ. ಯೇಸು ಕ್ರಿಸ್ತನ ಮೂಲಕ ಮಾನವಕುಲಕ್ಕೆ ರಕ್ಷಣೆಯ ಒದಗಿಸುವಿಕೆಯನ್ನು ಮಾಡುವಂತೆ ಆತನನ್ನು ಪ್ರಚೋದಿಸಿದ್ದು ಪ್ರೀತಿಯೇ ಆಗಿತ್ತು. (ಯೋಹಾನ 3:16) ಯೆಹೋವನ ಸಮೀಪಕ್ಕೆ ಬನ್ನಿರಿ (ಇಂಗ್ಲಿಷ್) ಎಂಬ ಹೃದಯೋತ್ತೇಜಕವಾದ ಹೊಸ ಪುಸ್ತಕವನ್ನು ಬಿಡುಗಡೆಗೊಳಿಸುವ ಮೂಲಕ ಭಾಷಣಕರ್ತರು ಭಾಷಣವನ್ನು ಮುಕ್ತಾಯಗೊಳಿಸಿದರು.
ಮೂರನೆಯ ದಿನವು ಸತ್ಕಾರ್ಯಗಳಿಗಾಗಿರುವ ಹುರುಪಿನ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ
ಅಧಿವೇಶನದ ಮೂರನೆಯ ದಿನದ ಮುಖ್ಯ ವಿಷಯವು “ಸತ್ಕಾರ್ಯಗಳಿಗಾಗಿ ಹುರುಪುಳ್ಳ ಜನರು” ಎಂಬುದಾಗಿತ್ತು. (ತೀತ 2:14, NW) ದಿನದ ವಚನದ ಒಂದು ಕೌಟುಂಬಿಕ ಚರ್ಚೆಯೊಂದಿಗೆ ಬೆಳಗ್ಗಿನ ಕಾರ್ಯಕ್ರಮವು ಆರಂಭಗೊಂಡಿತು. ಅದರ ನಂತರ “ನಿಮ್ಮ ಭರವಸೆ ಯೆಹೋವನಲ್ಲಿದೆಯೊ?” ಎಂಬ ಭಾಷಣವು ಕೊಡಲ್ಪಟ್ಟಿತು. ತಮ್ಮ ಸ್ವಂತ ವಿವೇಕ ಹಾಗೂ ಬಲದ ಮೇಲೆ ಆತುಕೊಂಡಿರುವ ಮೂಲಕ ಜನಾಂಗಗಳು ತಮ್ಮ ಭರವಸೆಯನ್ನು ತಪ್ಪಾದ ವಸ್ತುಗಳ ಮೇಲೆ ಅಥವಾ ಜನರ ಮೇಲೆ ಇಟ್ಟಿವೆ. ಇದಕ್ಕೆ ತದ್ವಿರುದ್ಧವಾಗಿ, ವಿಪತ್ತುಗಳು ಎದುರಾಗುವಾಗಲೂ ಯೆಹೋವನ ಸೇವಕರು ಧೈರ್ಯದಿಂದ ಹಾಗೂ ಆನಂದಭರಿತರಾಗಿ ಆತನ ಮೇಲೆ ಆತುಕೊಳ್ಳುತ್ತಾರೆ.—ಕೀರ್ತನೆ 46:1-3, 7-11.
“ಯುವ ಜನರೇ—ಯೆಹೋವನ ಸಂಸ್ಥೆಯೊಂದಿಗೆ ಭವಿಷ್ಯವನ್ನು ಕಟ್ಟಿರಿ” ಎಂಬ ಶೀರ್ಷಿಕೆಯಿದ್ದ ಭಾಗವು ಈ ಪ್ರಶ್ನೆಯ ಕುರಿತು ಮಾತಾಡಿತು: ಒಬ್ಬ ಯುವ ವ್ಯಕ್ತಿಯು ಜೀವನದಿಂದ ಅತ್ಯುತ್ತಮವಾದುದನ್ನು ನಿಜವಾಗಿಯೂ ಹೇಗೆ ಪಡೆದುಕೊಳ್ಳಸಾಧ್ಯವಿದೆ? ಹಣ, ಸಂಪತ್ತು ಹಾಗೂ ಸ್ಥಾನಮಾನವನ್ನು ಬೆನ್ನಟ್ಟುವ ಮೂಲಕ ಇದು ಸಾಧ್ಯವಿಲ್ಲ. ಯುವ ಜನರು ಇನ್ನೂ ಚಿಕ್ಕ ಪ್ರಾಯದವರಾಗಿರುವಾಗಲೇ ತನ್ನನ್ನು ಜ್ಞಾಪಿಸಿಕೊಳ್ಳುವಂತೆ ಸೃಷ್ಟಿಕರ್ತನು ಪ್ರೀತಿಯಿಂದ ಅವರನ್ನು ಉತ್ತೇಜಿಸುತ್ತಾನೆ. ಯುವ ಪ್ರಾಯದಲ್ಲಿ ಕ್ರೈಸ್ತ ಸೇವೆಯಲ್ಲಿ ತಮ್ಮನ್ನು ನಿಲುಕಿಸಿಕೊಂಡಿರುವಂಥ ಕೆಲವರನ್ನು ಭಾಷಣಕರ್ತರು ಇಂಟರ್ವ್ಯೂ ಮಾಡಿದರು, ಮತ್ತು ಅವರಿಗಾಗಿರುವ ಆನಂದದ ಅನಿಸಿಕೆ ನಮಗೂ ಆಯಿತು. ಮತ್ತು ಯೆಹೋವನ ಸಂಸ್ಥೆಯೊಂದಿಗೆ ನಿತ್ಯವಾದ ಭವಿಷ್ಯತ್ತಿಗಾಗಿ ತಳಪಾಯವನ್ನು ಹಾಕುವಂತೆ ಯುವ ಸಾಕ್ಷಿಗಳಿಗೆ ಸಹಾಯಮಾಡಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ, ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ? ಎಂಬ ಹೊಸ ಟ್ರ್ಯಾಕ್ಟನ್ನು ಪಡೆದುಕೊಳ್ಳುವುದು ಎಷ್ಟು ಪ್ರಯೋಜನಕರವಾಗಿತ್ತು!
ಇದಾದ ಬಳಿಕ, ಒಬ್ಬನ ಆಸಕ್ತಿಯನ್ನು ಪೂರ್ಣವಾಗಿ ಸೆರೆಹಿಡಿದಿದ್ದಂಥ “ಕಷ್ಟಕಾಲಗಳಲ್ಲಿ ಸ್ಥಿರವಾಗಿ ನಿಲ್ಲಿರಿ” ಎಂಬ ಬೈಬಲ್ ಡ್ರಾಮವು ತೋರಿಸಲ್ಪಟ್ಟಿತು. ಇದು ಯುವ ಪ್ರಾಯದಿಂದ ಹಿಡಿದು ಯೆರೂಸಲೇಮಿನ ನಾಶನದ ವರೆಗಿನ ಯೆರೆಮೀಯನ ದೀರ್ಘವಾದ ಜೀವನಮಾರ್ಗದ ಕುರಿತು ಸಂಕ್ಷಿಪ್ತ ವಿವರಣೆಯನ್ನು ನೀಡಿತು. ಆ ನಾಶನದ ಬಗ್ಗೆ ಅವನು ಹುರುಪಿನಿಂದ ಪ್ರವಾದಿಸಿದ್ದನು. ತನ್ನ ನೇಮಕಕ್ಕೆ ತಾನು ಅನರ್ಹನು ಎಂದು ಯೆರೆಮೀಯನು ನೆನಸಿದನಾದರೂ, ವಿರೋಧದ ಎದುರಿನಲ್ಲೂ ಅವನದನ್ನು ಪೂರೈಸಿದನು ಮತ್ತು ಯೆಹೋವನು ಅವನನ್ನು ಕಾಪಾಡಿದನು.—ಯೆರೆಮೀಯ 1:8, 18, 19.
ಡ್ರಾಮದ ಬಳಿಕ, “ಯೆರೆಮೀಯನಂತಿರ್ರಿ—ನಿರ್ಭೀತಿಯಿಂದ ದೇವರ ವಾಕ್ಯವನ್ನು ಘೋಷಿಸಿರಿ” ಎಂಬ ಭಾಷಣವು ಕೊಡಲ್ಪಟ್ಟಿತು. ಆಧುನಿಕ ದಿನದ ರಾಜ್ಯ ಘೋಷಕರು ಅನೇಕವೇಳೆ ಸುಳ್ಳಾರೋಪಗಳಿಗೆ ಹಾಗೂ ದುರುದ್ದೇಶದ ಪ್ರಾಪಗ್ಯಾಂಡಕ್ಕೆ ಗುರಿಯಾಗಿದ್ದಾರೆ. (ಕೀರ್ತನೆ 109:1-3) ಆದರೂ, ಯೆರೆಮೀಯನಂತೆ ನಾವು ಯೆಹೋವನ ವಾಕ್ಯದಲ್ಲಿ ಆನಂದವನ್ನು ಪಡೆದುಕೊಳ್ಳುವ ಮೂಲಕ ನಿರುತ್ಸಾಹವನ್ನು ನಿಭಾಯಿಸಸಾಧ್ಯವಿದೆ. ಅಷ್ಟುಮಾತ್ರವಲ್ಲ, ನಮ್ಮ ವಿರುದ್ಧ ಹೋರಾಡುವವರು ಖಂಡಿತವಾಗಿಯೂ ಜಯಶಾಲಿಗಳಾಗುವುದಿಲ್ಲ ಎಂಬ ಭರವಸೆ ನಮಗಿರಸಾಧ್ಯವಿದೆ.
“ಈ ಪ್ರಪಂಚದ ದೃಶ್ಯವು ಬದಲಾಗುತ್ತಾ ಇದೆ” ಎಂಬ ಶೀರ್ಷಿಕೆಯಿರುವ ಬಹಿರಂಗ ಭಾಷಣವು ಸಮಯೋಚಿತವಾಗಿತ್ತು ಎಂಬುದಂತೂ ನಿಜ. ನಮ್ಮ ಕಾಲಾವಧಿಯು ನಾಟಕೀಯ ಬದಲಾವಣೆಗಳಿಂದ ಗುರುತಿಸಲ್ಪಟ್ಟಿದೆ. “ಶಾಂತಿ ಮತ್ತು ಭದ್ರತೆ”ಗಾಗಿರುವ ಕೂಗನ್ನೂ ಒಳಗೊಂಡ ಇಂಥ ಪರಿಸ್ಥಿತಿಗಳು, ದೇವರ ನ್ಯಾಯತೀರ್ಪಿನ ಭಯಪ್ರೇರಕ ದಿನಕ್ಕೆ ಮುನ್ನಡಿಸುತ್ತವೆ ಎಂದು ಬೈಬಲು ಮುಂತಿಳಿಸಿತು. (1 ಥೆಸಲೊನೀಕ 5:3, NW) ಇದು ಅದ್ಭುತಕರವಾದ ಬದಲಾವಣೆಗಳನ್ನು ತರುವುದು—ಎಲ್ಲಾ ಯುದ್ಧಗಳು, ದುಷ್ಕೃತ್ಯ, ಹಿಂಸಾಚಾರ, ಮತ್ತು ಮರಣವನ್ನು ಸಹ ಇದು ಅಂತ್ಯಗೊಳಿಸುವುದು. ಆದುದರಿಂದ, ಈ ವಿಷಯಗಳ ವ್ಯವಸ್ಥೆಯಲ್ಲಿ ಭರವಸೆಯಿಡುವುದಕ್ಕೆ ಬದಲಾಗಿ, ದೈವಿಕ ಭಕ್ತಿಯನ್ನು ಬೆನ್ನಟ್ಟಲು ಹಾಗೂ ಪರಿಶುದ್ಧ ನಡವಳಿಕೆಯನ್ನು ಕಾಪಾಡಿಕೊಳ್ಳಲು ಸೂಕ್ತವಾದ ಸಮಯವು ಇದೇ ಆಗಿದೆ.
ಆ ವಾರದ ಕಾವಲಿನಬುರುಜು ಪಾಠದ ಸಾರಾಂಶವು ಕೊಡಲ್ಪಟ್ಟ ಬಳಿಕ, “ಹುರುಪಿನ ರಾಜ್ಯ ಘೋಷಕರೋಪಾದಿ ನಿಮ್ಮಲ್ಲಿ ಸತ್ಕಾರ್ಯಗಳು ಸಮೃದ್ಧವಾಗಿರಲಿ” ಎಂಬ ಶೀರ್ಷಿಕೆಯನ್ನು ಹೊಂದಿದ್ದ ಅಧಿವೇಶನದ ಅಂತಿಮ ಭಾಷಣವು ಕೊಡಲ್ಪಟ್ಟಿತು. ಯಾವ ರೀತಿಯಲ್ಲಿ ಕಾರ್ಯಕ್ರಮವು ನಮ್ಮನ್ನು ಆತ್ಮಿಕವಾಗಿ ಹುರಿದುಂಬಿಸಿದೆ ಹಾಗೂ ಯೆಹೋವನ ಮೇಲೆ ಆತುಕೊಳ್ಳುವಂತೆ ನಮ್ಮನ್ನು ಉತ್ತೇಜಿಸಿದೆ ಎಂಬುದನ್ನು ಭಾಷಣಕರ್ತರು ಸೂಚಿಸಿದರು. ಮುಕ್ತಾಯದಲ್ಲಿ, ನಾವು ದೇವರ ರಾಜ್ಯದ ಶುದ್ಧ, ಪ್ರೀತಿಭರಿತ ಹಾಗೂ ಹುರುಪಿನ ಘೋಷಕರಾಗಿರುವಂತೆ ನಮ್ಮನ್ನು ಪ್ರೋತ್ಸಾಹಿಸಲಾಯಿತು.—1 ಪೇತ್ರ 2:12.
ನೆಹೆಮೀಯನ ದಿನದಲ್ಲಿದ್ದ ಯೆಹೋವನ ಸೇವಕರ ಮನೋಭಾವದಂತೆಯೇ, ನಾವು ಸಹ “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನಗಳಲ್ಲಿ ಪಡೆದುಕೊಂಡ ಆತ್ಮಿಕ ಆಶೀರ್ವಾದಗಳ ವಿಷಯದಲ್ಲಿ ಆನಂದಿಸುವವರಾಗಿ ಮನೆಗೆ ಹಿಂದಿರುಗಿದೆವೆಂಬುದು ನಿಶ್ಚಯ. (ನೆಹೆಮೀಯ 8:12) ಈ ಭಾವಪ್ರಚೋದಕ ಅಧಿವೇಶನವು ನಿಮ್ಮಲ್ಲಿ ಆನಂದವನ್ನು ತುಂಬಿ, ಒಬ್ಬ ಹುರುಪಿನ ರಾಜ್ಯ ಘೋಷಕರೋಪಾದಿ ಮುಂದುವರಿಯುತ್ತಾ ಇರುವ ನಿರ್ಧಾರವನ್ನು ಮಾಡುವಂತೆ ನಿಮ್ಮನ್ನು ಪ್ರಚೋದಿಸಿಲ್ಲವೋ?
[ಪುಟ 23ರಲ್ಲಿರುವ ಚೌಕ/ಚಿತ್ರ]
ಒಂದು ಹೊಸ ಅಧ್ಯಯನ ಸಹಾಯಕ!
ಅಧಿವೇಶನದ ಮೊದಲನೆಯ ದಿನದ ಮುಕ್ತಾಯ ಭಾಗದಲ್ಲಿ, ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ (ಇಂಗ್ಲಿಷ್) ಎಂಬ ಹೊಸ ಪುಸ್ತಕದ ಬಿಡುಗಡೆಯಾದಾಗ, ಹಾಜರಿದ್ದವರು ತುಂಬ ಸಂತೋಷಪಟ್ಟರು. ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ ಅಧ್ಯಯನವನ್ನು ಪೂರ್ಣಗೊಳಿಸಿರುವವರೊಂದಿಗೆ ಅಧ್ಯಯನವನ್ನು ಮುಂದುವರಿಸಲಿಕ್ಕಾಗಿ ಇದನ್ನು ವಿನ್ಯಾಸಿಸಲಾಗಿದೆ. ಮತ್ತು ಇದು “ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರ” ನಂಬಿಕೆಯನ್ನು ಇನ್ನಷ್ಟು ಬಲಪಡಿಸುವುದು ಎಂಬುದಂತೂ ನಿಶ್ಚಯ.—ಅ. ಕೃತ್ಯಗಳು 13:48.
[ಕೃಪೆ]
ಪುಸ್ತಕದ ಆವರಣದ ಮೇಲಿರುವ ಚಿತ್ರ: U.S. Navy photo
[ಪುಟ 24ರಲ್ಲಿರುವ ಚೌಕ/ಚಿತ್ರಗಳು]
ದೇವರ ಸಮೀಪಕ್ಕೆ ಬರಲು ಸಹಾಯ
ಅಧಿವೇಶನದ ಎರಡನೆಯ ದಿನದ ಕೊನೆಯ ಭಾಷಣಕರ್ತನು, ಯೆಹೋವನ ಸಮೀಪಕ್ಕೆ ಬನ್ನಿರಿ (ಇಂಗ್ಲಿಷ್) ಎಂಬ ಹೊಸ ಪುಸ್ತಕದ ಬಿಡುಗಡೆಯನ್ನು ಪ್ರಕಟಿಸಿದನು. ಇದರಲ್ಲಿ ನಾಲ್ಕು ಮುಖ್ಯ ವಿಭಾಗಗಳು ಒಳಗೂಡಿದ್ದು, ಪ್ರತಿಯೊಂದು ವಿಭಾಗವು ಶಕ್ತಿ, ನ್ಯಾಯ, ವಿವೇಕ ಮತ್ತು ಪ್ರೀತಿ ಎಂಬ ಯೆಹೋವನ ಪ್ರಮುಖ ಗುಣಗಳಲ್ಲಿ ಪ್ರತಿಯೊಂದಕ್ಕೆ ಮೀಸಲಾಗಿಡಲ್ಪಟ್ಟಿದೆ. ಪುಸ್ತಕದ ಪ್ರತಿಯೊಂದು ವಿಭಾಗದಲ್ಲಿ, ಯೇಸು ಕ್ರಿಸ್ತನು ಯಾವ ರೀತಿಯಲ್ಲಿ ದೇವರ ಗುಣಗಳನ್ನು ಸುಸ್ಪಷ್ಟವಾಗಿ ಪ್ರದರ್ಶಿಸಿದನು ಎಂಬುದನ್ನು ತೋರಿಸುವ ಒಂದು ಅಧ್ಯಾಯವಿದೆ. ಈ ಹೊಸ ಪುಸ್ತಕದ ಪ್ರಾಮುಖ್ಯ ಉದ್ದೇಶವು, ಯೆಹೋವ ದೇವರೊಂದಿಗೆ ಹೆಚ್ಚು ನಿಕಟವಾದ ಹಾಗೂ ಬಲವಾದ ಸಂಬಂಧವನ್ನು ಬೆಳೆಸಿಕೊಳ್ಳುವಂತೆ, ನಮಗೆ ಮತ್ತು ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡುವುದೇ ಆಗಿದೆ.
[ಪುಟ 26ರಲ್ಲಿರುವ ಚೌಕ/ಚಿತ್ರಗಳು]
ಯುವ ಜನರಿಗಾಗಿ ವಿಶೇಷ ಮಾರ್ಗದರ್ಶನೆ
ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ? ಎಂಬ ಶೀರ್ಷಿಕೆಯಿರುವ ವಿಶೇಷ ಟ್ರ್ಯಾಕ್ಟ್ನ ಬಿಡುಗಡೆಯೇ, ಅಧಿವೇಶನದ ಮೂರನೆಯ ದಿನದ ವೈಶಿಷ್ಟ್ಯವಾಗಿತ್ತು. ಯುವ ಸಾಕ್ಷಿಗಳು ತಮ್ಮ ಭವಿಷ್ಯತ್ತಿನ ಬಗ್ಗೆ ಯೋಗ್ಯವಾದ ನಿರ್ಧಾರಗಳನ್ನು ಮಾಡುವಂತೆ ಅವರಿಗೆ ಸಹಾಯಮಾಡಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ಈ ಹೊಸ ಟ್ರ್ಯಾಕ್ಟ್, ಯೆಹೋವನ ಸೇವೆಯಲ್ಲಿ ನಿತ್ಯವಾದ ಜೀವನಮಾರ್ಗವನ್ನು ಸ್ಥಾಪಿಸಿಕೊಳ್ಳುವುದರ ಕುರಿತು ಶಾಸ್ತ್ರೀಯ ಬುದ್ಧಿವಾದವನ್ನು ನೀಡುತ್ತದೆ.