ಸತ್ಯಕ್ಕೆ ಸಾಕ್ಷಿ ಕೊಡಿರಿ
1 ತಾನೀ ಲೋಕಕ್ಕೆ ಬಂದದ್ದು ಸತ್ಯಕ್ಕೆ ಸಾಕ್ಷಿಕೊಡಲಿಕ್ಕಾಗಿ ಎಂಬದನ್ನು ಯೇಸು ಸ್ಪಷ್ಟಪಡಿಸಿದ್ದನು. ಆತನು ಘೋಷಿಸಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.”—ಯೋಹಾ. 18:37.
2 ತನ್ನ ಹುರುಪಿನ ಸಾಕ್ಷಿಕೊಡುವಿಕೆಯ ಮೂಲಕ ಯೇಸು ಯೆಹೋವನ ನಾಮವನ್ನು ಗೌರವಿಸಿದನು. ಅವರ ವಿಷಾಧಕರ ಆತ್ಮಿಕ ಸ್ಥಿತಿಗತಿಗಳನ್ನು ಅರಿತುಕೊಂಡು ಅವರ ಕಡೆಗೆ ಅವನು ನಿಜ ಪ್ರೀತಿಯನ್ನೂ ತೋರಿಸಿದನು. ಆತನ ಚಟುವಟಿಕೆಯ ಕುರಿತು ಮತ್ತಾಯನು ಬರೆದದ್ದು: “ಯೇಸು ಎಲ್ಲಾ ಊರುಗಳನ್ನೂ ಹಳ್ಳಿಪಳ್ಳಿಗಳನ್ನೂ ಸುತ್ತಿಕೊಂಡು ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿಹೇಳುತ್ತಾ ಬಂದನು. ಆದರೆ ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲಾ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾ. 9:35, 36) ಯೇಸುವಿನಂತೆ, ಯೆಹೋವನಿಗೆ ನಮ್ಮ ಭಕ್ತಿ ಹಾಗೂ ಇತರರಲ್ಲಿ ನಮಗಿರುವ ಪ್ರೀತಿಯು ಸಾರುವಂತೆ ನಮ್ಮನ್ನು ಪ್ರಚೋದಿಸಬೇಕು.
ನಮ್ಮ ಪ್ರಾಮುಖ್ಯ ನೇಮಕ
3 ಜನರಲ್ಲಿ ಮತ್ತು ಯೆಹೋವನಲ್ಲಿ ನಮಗಿರುವ ನಿಜ ಪ್ರೀತಿಯು, ದೊರೆಯುವ ಪ್ರತಿಯೊಂದು ಸಂಧಿಯನ್ನು ತಕ್ಕೊಂಡು ಜನರಿಗೆ ಯೆಹೋವನ ಮತ್ತು ಆತನ ಮಹತ್ಕಾರ್ಯಗಳ ಕುರಿತು ಸತ್ಯವನ್ನು ಕಲಿಸಲು ನಮ್ಮನ್ನು ಪ್ರೇರೇಪಿಸುತ್ತದೆ. (ಕೀರ್ತ. 96:2, 3; 145:10-13) ಆದರೂ, ದೈನಿಕ ಜೀವನದ ಒತ್ತಡಗಳು, ಜೀವಿತದ ಚಿಂತೆಗಳು, ಅನೇಕಾನೇಕ ಅಪಕರ್ಶಣೆಗಳು ನಮ್ಮನ್ನು ಸಾಕ್ಷಿ ಚಟುವಟಿಕೆಯಿಂದ ಸುಲಭವಾಗಿ ದಾರಿತಪ್ಪಿಸಬಹುದು. ಆದ್ದರಿಂದ, ದೇವರ ಮತ್ತು ಆತನ ರಾಜ್ಯದ ಕುರಿತಾದ ಸತ್ಯಕ್ಕೆ ಸಾಕ್ಷಿಕೊಡುವ ಜರೂರಿಯ ಕಡೆಗೆ ಮನಸ್ಸನ್ನು ಕೇಂದ್ರೀಕರಿಸುವ ಅಗತ್ಯ ನಮಗಿದೆ. ನಮಗೆ ನೇಮಕವಾದ ಈ ಸರ್ವಪ್ರಧಾನ ಜೀವರಕ್ಷಕ ಕಾರ್ಯದಿಂದ ಓರೆ ಹೋಗಲು ನಮ್ಮನ್ನು ಬಿಟ್ಟುಕೊಡಬಾರದು. (ಮತ್ತಾ. 24:14; 28:19, 20) ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದು ನಮಗೊಂದು ಭದ್ರತೆಯು, ಮತ್ತು ಸತ್ಯದ ಸಂದೇಶವನ್ನು ಕೇಳುವ ಅಗತ್ಯವಿರುವ ಜನರಿಗೂ ಅದು ಬಾಳುವ ಪ್ರಯೋಜನಗಳನ್ನು ತರಬಲ್ಲದು.—1ಕೊರಿ. 15:58.
4 ನೀವು ಕ್ರಮದ ಅಥವಾ ಸಹಾಯಕ ಪಯನೀಯರಾಗಿ ಸೇವೆ ಮಾಡಬಲ್ಲಿರೋ? ಈ ರೀತಿ ನಿಮ್ಮ ಸೇವೆಯನ್ನು ವಿಸ್ತಾರ್ಯಗೊಳಿಸುವಂತೆ ನಿಮ್ಮ ಪರಿಸ್ಥಿತಿಗಳನ್ನು ಯಾಕೆ ಪರೀಕ್ಷಿಸಬಾರದು? ಐಹಿಕ ಉದ್ಯೋಗದಿಂದ ನೀವು ನಿವೃತ್ತಿ ಪಡೆದವರೋ? ಹಾಗಿದ್ದರೆ, ನಿಮ್ಮ ಸಮಯವನ್ನು ಸಾರುವ ಕಾರ್ಯದಲ್ಲಿ ಅಧಿಕ ಪೂರ್ಣವಾಗಿ ಯಾಕೆ ಬಳಸ ಬಾರದು? ಇನ್ನೂ ಶಾಲೆಯಲ್ಲಿರುವ ಅನೇಕ ಯುವಕರು ಕ್ರಮವಾಗಿ ಸಹಾಯಕ ಪಯನೀಯರ ಸೇವೆ ಮಾಡಿರುತ್ತಾರೆ. ಅದು ಆತ್ಮಿಕ ಮತ್ತು ದೈಹಿಕ ಚೈತನ್ಯವನ್ನು ಕೊಟ್ಟು ಹೃದಯಾನಂದವನ್ನು ತಂದಿರುವುದನ್ನು ಅವರು ಕಂಡಿರುತ್ತಾರೆ.
5 ಸತ್ಯಕ್ಕೆ ಪರಿಣಾಮಕರ ಸಾಕ್ಷಿಯನ್ನು ನೀಡಬೇಕಾದರೆ ನಮ್ಮ ಸಮಯದ ಜಾಗ್ರತೆಯ ಶೆಡ್ಯೂಲ್ ಅಗತ್ಯವಿದೆ. (ಎಫೆ. 5:15, 16) ಸಹಾಯಕ ಪಯನೀಯರ ಸೇವೆಗೆ ತಿಂಗಳಲ್ಲಿ ಪ್ರತಿದಿನ ಸರಾಸರಿ ಎರಡು ತಾಸಿನ ಸೇವೆಯು ಬೇಕು. ಕೆಲವರು ಶಾಲೆಗೆ ಅಥವಾ ಕೆಲ್ಸಕ್ಕೆ ಹೋಗುವ ಮುಂಚೆ ಸೇವೆ ಮಾಡಲಾಗುವಂತೆ ಬೆಳಿಗ್ಗೆ ಒಂದು ತಾಸು ಬೇಗನೇ ಏಳಲು ಆರಿಸುತ್ತಾರೆ. ಅನೇಕ ಸಭೆಗಳು ಸಂಜೆಯ ಸಾಕ್ಷಿಕಾರ್ಯವನ್ನು ಏರ್ಪಡಿಸಿದ ಮೂಲಕ ಸಹಾಯಕ ಪಯನೀಯರರಿಗೆ ಸಹಾಯ ಮಾಡಿವೆ. ಸಹಾಯಕ ಪಯನೀಯರಾಗಲು ತಮ್ಮ ಸಮಯವನ್ನು ಒಳ್ಳೇದಾಗಿ ಶೆಡ್ಯೂಲ್ ಮಾಡಿರುವ ಇತರರೊಂದಿಗೆ ಮಾತಾಡುವ ಮೂಲಕವೂ ನಿಮಗೆ ಉತ್ತೇಜನ ಮತ್ತು ಸಹಾಯಕಾರಿ ಸಲಹೆಗಳು ದೊರೆಯಬಹುದು.
6 ಯೆಹೋವ ದೇವರು ಯಾವಾಗಲೂ ತನ್ನ ಸೇವಕರಿಗೆ ಒಳ್ಳೇತನವನ್ನು ತೋರಿಸಿದ್ದಾನೆ. ಆತನನ್ನು ನಂಬಿಗೆಯಿಂದ ಸೇವಿಸುವವರು ಆತನಿಂದ ವಿಫುಲವಾದ ಆಶೀರ್ವಾದಗಳನ್ನು ಪಡೆದಿದ್ದಾರೆ. ಯಾರು ಆತನನ್ನು ಪ್ರೀತಿಸುತ್ತಾರೋ ಅವರ ಕಡೆಗೆ ಯೆಹೋವನು ಇನ್ನೂ ಒಳ್ಳೇದನ್ನೇ ಮಾಡುವಾತನು. ಹೀಗೆ ನಾವು ಸತ್ಯಕ್ಕೆ ಸಾಕ್ಷಿಕೊಡುತ್ತಾ ನಮ್ಮ ಪರಿಸ್ಥಿತಿಗನುಸಾರ ಮಾಡುವ ಯಾವುದೇ ಸೇವೆಯನ್ನು ಸ್ವೀಕರಿಸಲು ಆತನು ಸಂತೋಷಿಸುವನು.—ಇಬ್ರಿ. 6:10.