ಕ್ಷೇತ್ರ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ
ಭಾಗ 1: ಯೆಹೋವನಿಗಾಗಿ ಗಣ್ಯತೆಯ ಮೌಲ್ಯ
1 ಕ್ಷೇತ್ರಸೇವೆಯಲ್ಲಿ ಪೂರ್ಣಾತ್ಮವು, ಯೆಹೋವನಿಗಾಗಿ ಮತ್ತು ಆತನು ನಮಗಾಗಿ ಮಾಡಿರುವ ಎಲ್ಲಾ ವಿಷಯಗಳಿಗಾಗಿ ಆಳವಾದ ಗಣ್ಯತೆಯಿಂದ ಹೊರಹುಮ್ಮುತ್ತದೆ. (2 ಸಮು. 22:2, 3) ದೇವರನ್ನು ತೊರೆದಿರುವ ಮಾನವ ಕುಲದ ಶೋಚನೀಯ ಪಾಡು, ಸೇವೆಯಲ್ಲಿ ನಾವು ಪರಿಶ್ರಮ ಪಡುವಂತೆ ನಮ್ಮನ್ನು ಪ್ರೇರಿಸತಕ್ಕದ್ದು. (ಮತ್ತಾ. 9:36; 2 ಕೊರಿ. 5:14, 15) ಯೆಹೋವನನ್ನು ನಾವೆಷ್ಟು ಹೆಚ್ಚು ಪ್ರೀತಿಸುವೋ ಅಷ್ಟು ಹೆಚ್ಚು ಜನರ ವಿಷಯವಾಗಿ ಚಿಂತಿತರಾಗುತ್ತೇವೆ ಮತ್ತು ಕ್ಷೇತ್ರಸೇವೆಯಲ್ಲಿ ಉತ್ಸಾಹದಿಂದ ಹೆಚ್ಚೆಚ್ಚಾಗಿ ಪಾಲಿಗರಾಗಲು ಪ್ರಚೋದಿಸಲ್ಪಡುತ್ತೇವೆ. (ಮತ್ತಾ. 22:37-39) ಆಗ ನಮ್ಮ ಶುಶ್ರೂಷೆಯು ಒಂದು ಬಹು ಬೆಲೆಯುಳ್ಳ ಮೂಲ್ಯವಾದ ನಿಕ್ಷೇಪವಾಗುತ್ತದೆ. (2 ಕೊರಿ. 4:7) ಆದರೆ ಶುಶ್ರೂಷೆಗಾಗಿ ಅಂಥ ಗಣ್ಯತೆಯನ್ನು ಬೆಳೆಸಿಕೊಳ್ಳುವದು ಹೇಗೆ?
ಗಣ್ಯತೆಯನ್ನು ಕಟ್ಟುವುದಕ್ಕೆ ಕೀಲಿಕೆಗಳು
2 ವೈಯಕ್ತಿಕ ಮತ್ತು ಸಭಾ ಬೈಬಲಧ್ಯಯನ ಮತ್ತು ಅದರೊಂದಿಗೆ ಪ್ರಾರ್ಥನಾ ಪೂರ್ವಕವಾದ ಮನನವು, ಯೆಹೋವನೊಂದಿಗೆ ಒಂದು ವ್ಯಕ್ತಿಪರ ಸಂಬಂಧವನ್ನು ಕಟ್ಟಲು ನಮಗೆ ಸಹಾಯ ಮಾಡುತ್ತವೆ. ಆತನ ಗುಣಗಳ ಮತ್ತು ವ್ಯಕ್ತಿತ್ವದ ಸೌಂದರ್ಯವನ್ನು ಆಗ ನಾವು ವಿವೇಚಿಸಶಕ್ತರು. ವಾರದ ಬೈಬಲ್ ವಾಚನದ ವೇಳಾಪತ್ರವನ್ನು ನೀವು ಹಿಂಬಾಲಿಸುತ್ತೀರೋ? ಸೊಸೈಟಿಯ ಪ್ರಕಾಶನಗಳ ಅಧ್ಯಯನ ಮಾಡಲು ಕ್ರಮವಾಗಿ ಸಮಯ ಬದಿಗಿಡುತ್ತೀರೋ? ಎಲ್ಲಾ ಸಭಾಕೂಟಗಳಿಗಾಗಿ ನೀವು ತಯಾರಿಸುತ್ತೀರೋ, ಹಾಜರಿರುತ್ತೀರೋ, ಪಾಲಿಗರಾಗುತ್ತೀರೋ? (ಇಬ್ರಿ. 10:24, 25) ಪ್ರತಿಯೊಂದು ವೈಯಕ್ತಿಕ ಅಧ್ಯಯನದ ಅವಧಿಯನಂತರ, ಉದ್ದೇಶಭರಿತ ಮನನವು, ನಮ್ಮ ದಯಾಳು ದೇವರ ಪ್ರಸನ್ನತೆಗೆ ಮತ್ತು ಆತನ ಸತ್ಯಾರಾಧನೆಯ ಏರ್ಪಾಡಿಗೆ ನಮ್ಮ ಹೃದಯ ಗಣ್ಯತೆಯನ್ನು ಕಟ್ಟುತ್ತದೆ—ಕೀರ್ತ. 27:4
3 ನಮ್ಮ ಗಣ್ಯತೆಯ ಮಟ್ಟವನ್ನು ಹೆಚ್ಚಿಸುವ ಇನ್ನೊಂದು ವಿಧಾನವು, ದೇವರ ಇತರ ಪೂರ್ಣಾತ್ಮದ ಶುಶ್ರೂಷಕರ ಮಾದರಿಯನ್ನು ನಿಕಟವಾಗಿ ಗಮನಿಸುವದೇ. ಪ್ರವಾದಿ ಯೆರೆಮೀಯನು ತನಗೆ ವಹಿಸಲ್ಪಟ್ಟ ಕೆಲಸವನ್ನು ಮಾಡಲು ತೀವ್ರ ಉತ್ಸಾಹದಿಂದ ದಹಿಸಲ್ಪಟ್ಟನು. (ಯೆರೆ. 20:9) ಗಣ್ಯತೆಯ ಆತ್ಮ ಮತ್ತು ಹುರುಪನ್ನು ಪ್ರದರ್ಶಿಸುವುದರಲ್ಲಿ, ಯೇಸು ಮಾದರಿಯನ್ನಿಟ್ಟನು. (ಯೋಹಾ. 4:34) ಶುಶ್ರೂಷೆಯಲ್ಲಿ ಪರಿಶ್ರಮದ ದುಡಿತಗಳ ಮೂಲಕ, ಅಪೊಸ್ತಲ ಪೌಲನು ತನಗೆ ತೋರಿಸಲ್ಪಟ್ಟ ದೈವಿಕ ಕೃಪೆಗಾಗಿ ಕೃತಜ್ಞತೆಯನ್ನು ಪ್ರದರ್ಶಿಸಿದನು. (1 ತಿಮೋ. 1:12, 13, 17) ಅಂಥ ಆದರ್ಶ ಮಾದರಿಗಳ, ಹಾಗೂ ಆಧುನಿಕ ಕಾಲದ ಮಾದರಿಗಳ ಕುರಿತು ನಾವು ಯೋಚಿಸುವಾಗ, ಶುಶ್ರೂಷೆಯನ್ನು ಪೂರ್ಣಾತ್ಮದಿಂದ ಮಾಡುವಂಥ ಗಣ್ಯತೆಯು ನಮ್ಮಲ್ಲಿ ಕಟ್ಟಲ್ಪಡುವದು.
4 ಯೆಹೋವನ ಪ್ರಭಾವಯುಕ್ತ ಮಹಿಮೆಯ ಕುರಿತು ನಾವು ಕಲಿಯುವಾಗ ಮತ್ತು ಆತನ ಮಹತ್ಕಾರ್ಯಗಳ ಕುರಿತು ಧ್ಯಾನಿಸುವಾಗ, ಆತನ ಮಹತ್ತನ್ನು ಪ್ರಕಟಿಸಲು ಮತ್ತು ಆತನ ಸ್ತುತಿಗಾಗಿ ಹರ್ಷಘೋಷ ಮಾಡಲು ನಾವು ಪ್ರೇರಿಸಲ್ಪಡುವೆವು. (ಕೀರ್ತ. 145: 5-7) ರಾಜ್ಯ ಸಂದೇಶವನ್ನು ಪ್ರಸಾರಮಾಡುವ ವಿಧಾನಗಳನ್ನು ಕ್ರಿಯಾಶೀಲವಾಗಿ ಹುಡುಕುವ ಮೂಲಕ, ಆ ದೈವಿಕ ನಾಮಕ್ಕೆ ಸಾಕ್ಷಿಕೊಡುವ ನಮ್ಮ ಸಂದರ್ಭಗಳನ್ನು ನಾವು ನಿಕ್ಷೇಪವಾಗಿ ಎಣಿಸುತ್ತೇವೆಂದು ತೋರಿಸಿಕೊಡುವೆವು.—ಲೂಕ 6:45.
5 ಆದರೆ ಸೇವೆಯಲ್ಲಿ ಪೂರ್ಣಾತ್ಮದಿಂದ ಭಾಗವಹಿಸಲು ನಮ್ಮನ್ನು ಪ್ರಚೋದಿಸಬಲ್ಲ ಬೇರೆ ವಿಷಯಗಳು ಇವೆಯೋ? ಇದ್ದರೆ, ಅವು ಯಾವುವು? ಹಿರಿಯರು, ಶುಶ್ರೂಷಕ ಸೇವಕರು, ಪಯನೀಯರರು ಮತ್ತು ಇತರ ಅನುಭವಸ್ಥ ರಾಜ್ಯ ಪ್ರಚಾರಕರು ಹೇಗೆ ಸಹಾಯವಾಗುವರು? ಉತ್ಸಾಹವನ್ನು ಬೆಳೆಸುವದರಲ್ಲಿ ಗುರಿಗಳು ಯಾವ ಪಾತ್ರವನ್ನು ವಹಿಸುತ್ತವೆ? ಯಾವ ಪ್ರಯೋಜನಗಳನ್ನು ನಿರೀಕ್ಷಿಸಬಹುದು? ಈ ಪ್ರಶ್ನೆಗಳು ಮತ್ತು ಬೇರೆಯವುಗಳು, ಈ ಐದು-ಭಾಗ ಲೇಖನಮಾಲೆಯಲ್ಲಿ ಉತ್ತರಿಸಲ್ಪಡಲಿವೆ ಮತ್ತು ನಮ್ಮ ರಾಜ್ಯದ ಸೇವೆಯ ಮುಂದಿನ ಸಂಚಿಕೆಗಳಲ್ಲಿ ಅವು ಮುಂದರಿಸಲ್ಪಡುವವು.