ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 3/8 ಪು. 30-31
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಶಿಶು ವೇಶ್ಯಾವೃತ್ತಿಯು ಹರಡುತ್ತಿದೆ
  • ಕಳಪೆಯ ದೀರ್ಘ ಜೀವನ
  • ಮಾನವ ಹಕ್ಕುಗಳು ಅರ್ಥರಹಿತ
  • ಕುಳಿಗಳು ಸಾಂಕ್ರಾಮಿಕವಾಗಿವೆ
  • ನೆಟ್ಟಗೆ ನಿಲ್ಲಿರಿ
  • ಏಷಿಯದಲ್ಲಿ ಸಂತೋಷ
  • ಸಂಸರ್ಗ ಮಾಡುವುದರಲ್ಲಿ ವೈಫಲ್ಯ
  • ಕೆಲಸವನ್ನು ಅದರ ಸ್ಥಾನದಲ್ಲಿಡಿರಿ
  • ಸಂಭವಿಸಲು ಕಾದಿರುವ ಆಕಸ್ಮಿಕ ಘಟನೆಗಳು
  • ಮಾರಕ ವ್ಯಾಪಾರವೊಂದು ಹಿಂದಿರುಗಿ ಬರುತ್ತದೆ
  • ಜಗತ್ತನ್ನು ಗಮನಿಸುವುದು
    ಎಚ್ಚರ!—1993
  • ಜಗತ್ತನ್ನು ಗಮನಿಸುವುದು
    ಎಚ್ಚರ!—1999
  • ಜಗತ್ತನ್ನು ಗಮನಿಸುವುದು
    ಎಚ್ಚರ!—1993
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
ಇನ್ನಷ್ಟು
ಎಚ್ಚರ!—1994
g94 3/8 ಪು. 30-31

ಜಗತ್ತನ್ನು ಗಮನಿಸುವುದು

ಶಿಶು ವೇಶ್ಯಾವೃತ್ತಿಯು ಹರಡುತ್ತಿದೆ

“ಅವರನ್ನು ‘ಅಪಾಯರಹಿತ’ರೆಂದು ಮತ್ತು ಬಹುಶಃ ಏಯ್ಡ್ಸ್‌ ರೋಗದಿಂದ ಮುಕ್ತರೆಂದು ಗಿರಾಕಿಗಳು ನೋಡುವುದರಿಂದ, ಮಕ್ಕಳು ಮತ್ತು ಹದಿವಯಸ್ಕರು ಹೆಚ್ಚೆಚ್ಚಾಗಿ ದೇಹವಿಕ್ರಯದ ಬೇಡಿಕೆಯಲ್ಲಿದ್ದಾರೆಂದು . . . ವೈದ್ಯರು, ಪೊಲೀಸ್‌ ಅಧಿಕಾರಿಗಳು ಮತ್ತು ಸಮಾಜ ಸೇವಕರು ವರದಿಸುತ್ತಿದ್ದಾರೆ,” ಎಂದು ಪ್ಯಾರಿಸ್‌ನ ಇಂಟರ್‌ನ್ಯಾಷನಲ್‌ ಹೆರಲ್ಡ್‌ ಟ್ರಿಬ್ಯೂನ್‌ ಹೇಳುತ್ತದೆ. ಬೆಲ್ಜಿಯಮ್‌ನ ಬ್ರಸೆಲ್ಸ್‌ನಲ್ಲಿ “ಲೈಂಗಿಕ ವ್ಯಾಪಾರ ಮತ್ತು ಮಾನವ ಹಕ್ಕುಗಳು” ಎಂಬ ವಿಷಯದ ಮೇಲೆ ನಡೆಸಲಾದ ಇತ್ತೀಚೆಗಿನ ಯುನೆಸ್ಕೋವಿನ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಒಂದು ಸಭೆಯಲ್ಲಿ, ಕನ್ಯೆಯರೆಂದು ಪರಿಗಣಿಸಲ್ಪಟ್ಟ ಮಕ್ಕಳಿಗಾಗಿ ಗ್ರಾಹಕರು ಅತಿ ಹೆಚ್ಚಿನ ಬೆಲೆಗಳನ್ನು ಸಲ್ಲಿಸಲು ಸಿದ್ಧರೆಂದು ಪರಿಣತರು ಸ್ಥಿರಪಡಿಸಿದರು. ಭೂವ್ಯಾಪಕ ಏಯ್ಡ್ಸ್‌ ಸಾಂಕ್ರಾಮಿಕವು ಶ್ರೇಷ್ಠವಾದೊಂದು ಅಂಶವಾಗಿದೆ ಎಂಬುದನ್ನು ಅಂಗೀಕರಿಸಿದರೂ, ಅತಿ ಹೆಚ್ಚು ಲಾಭದಾಯಕವಾದ ಲೈಂಗಿಕ ಉದ್ಯಮದ ಅನೇಕ ಮುಖಗಳು “ಕಾಮದ ಬಹಿರಂಗ ಖರೀದಿ ಮತ್ತು ಮಾರಾಟವನ್ನು ಸಾಮಾನ್ಯೀಕರಿಸಿವೆ ಮತ್ತು ಮಕ್ಕಳ ಲೈಂಗಿಕ ಶೋಷಣೆಯ ವಿರುದ್ಧ ಇರುವ ನಿಷೇಧಗಳನ್ನು ನಾಶಮಾಡಿವೆ” ಎಂದು ಕೂಡ ಪರಿಣತರು ಸೂಚಿಸಿದರು. ಸಮಸ್ಯೆಯು ಪ್ರತ್ಯೇಕವಾಗಿ ಬೆನಿನ್‌, ಬ್ರೆಸಿಲ್‌, ಕೊಲಂಬಿಯ, ಥಾಯ್ಲೆಂಡ್‌, ಮತ್ತು ಫಿಲಿಪ್ಪೀನ್ಸ್‌ನಲ್ಲಿ ಅತಿಯಾಗಿದೆ ಎಂದು ಯುನೆಸ್ಕೋವಿನ ಅಧ್ಯಯನಗಳು ತೋರಿಸುತ್ತವೆ. ಇಪ್ಪತ್ತು ಲಕ್ಷ ಥಾಯ್‌ ಹೆಣ್ಣು ವೇಶ್ಯೆಯರಲ್ಲಿ ಅಂದಾಜು ಮಾಡಲಾದ 8,00,000 ವೇಶ್ಯೆಯರು ಮಕ್ಕಳು ಮತ್ತು ಹದಿವಯಸ್ಕರು ಆಗಿದ್ದಾರೆ, ಮತ್ತು ಶ್ರೀ ಲಂಕದಲ್ಲಿ 6ರಿಂದ 14 ವರ್ಷಗಳ ವಯಸ್ಸಿನ 10,000ಕ್ಕಿಂತಲೂ ಅಧಿಕ ಹುಡುಗರು ದೇಹವಿಕ್ರಯದ ಕೆಲಸಮಾಡುತ್ತಾರೆಂದು ಹೇಳಲಾಗಿದೆ. (g93 11/22)

ಕಳಪೆಯ ದೀರ್ಘ ಜೀವನ

ಸಾಮಾನ್ಯ ಕಳಪೆಗೆ ಕೊಳೆತು ಹೋಗಲು ಎಷ್ಟು ಸಮಯ ಹಿಡಿಯುತ್ತದೆ? ಇಟ್ಯಾಲಿಯನ್‌ ನಿಯತ ಕಾಲಿಕ ಫೋಕಸ್‌ನ ಮೂಲಕ ಪ್ರಕಟಿಸಲಾದ ಸಂಖ್ಯೆಗಳನುಸಾರ, ಕಾಗದದ ಕರವಸ್ತ್ರಗಳು ಯಾ ಸಸ್ಯ ಹಿಪ್ಪೆಗಳಿಗೆ ನಾಶವಾಗಲು ಮೂರರಿಂದ ಆರು ತಿಂಗಳು ಹಿಡಿಯುತ್ತದೆ, ಸಿಗರೇಟ್‌ ತುದಿಗಳಿಗೆ ಒಂದರಿಂದ ಎರಡು ವರ್ಷಗಳು, ಅಂಟು ಮಿಠಾಯಿ (ಚೂಇಂಗ್‌ಗಮ್‌)ಗೆ 5 ವರ್ಷಗಳು, ಮತ್ತು ಅಲ್ಯೂಮಿನಿಯಂ ಡಬ್ಬಗಳಿಗೆ 10ರಿಂದ 100 ವರ್ಷಗಳು ಹಿಡಿಯುತ್ತವೆ. ಆದರೆ ಕೆಲವು ಪ್ಲ್ಯಾಸ್ಟಿಕ್‌ ಸಾಮಗ್ರಿಗಳು “ಶತಮಾನಗಳ ವರೆಗೆ ಬದಲಾಗದೆ ಉಳಿಯುತ್ತವೆ. . . . ಅವು ನೀರಿನ ಮೂಲಕ ಕರಗುವುದಿಲ್ಲ . . . , ಮತ್ತು ಯಾವುದೇ ಸೂಕ್ಷ್ಮ ಜೀವಿಗಳು ಅವುಗಳನ್ನು ತಿನ್ನಲು ಸಿದ್ಧವಿರುವುದಿಲ್ಲ.” ಸಾಮಗ್ರಿಗಳನ್ನು ಕಟ್ಟಲು ಮತ್ತು ಆಹಾರ ಹಾಗೂ ಪಾನೀಯ ಪಾತ್ರೆಗಳಿಗೆ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಪಾಲಿಸ್ಟೀರೀನ್‌, ಬಹುಶಃ ಒಂದು ಸಹಸ್ರ ವರ್ಷದ ಸಮಯದಲ್ಲಿ ಮಾತ್ರ ನಾಶವಾಗುವುದು, ಮತ್ತು ಗಾಜಿನ ಸೀಸೆಗಳು ನೈಸರ್ಗಿಕ ಚಕ್ರದಲ್ಲಿ ತಮ್ಮ ಸ್ಥಾನಕ್ಕೆ ಹಿಂದಿರುಗುವ ಮೊದಲು 4,000 ವರ್ಷಗಳು ಗತಿಸಿ ಹೋಗಬೇಕು. (g93 11/22)

ಮಾನವ ಹಕ್ಕುಗಳು ಅರ್ಥರಹಿತ

ಸ್ವಿಟ್ಸರ್ಲೆಂಡ್‌ನ ಜಿನೀವಾದಲ್ಲಿ, ಮಾನವ ಹಕ್ಕುಗಳಿಗಾಗಿರುವ ಯುಎನ್‌ ಕೇಂದ್ರವು, “ಮಾನವಕುಲದ ಅರ್ಧದಷ್ಟು ಜನರು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ಬಲಿಪಶುಗಳಾಗಿದ್ದಾರೆ” ಎಂಬುದಾಗಿ ಅಂದಾಜು ಮಾಡುತ್ತದೆಂದು ಜರ್ಮನ್‌ ವಾರ್ತಾಪತ್ರಿಕೆ ಸ್ಯೂಟ್‌ಡೈಚ ಸೈಟುಂಗ್‌ ವರದಿಸುತ್ತದೆ. ಈ ಉಲ್ಲಂಘನೆಗಳು ಕ್ರೂರ ಯಾತನೆ, ಬಲಾತ್ಕಾರ ಸಂಭೋಗ, ಮತ್ತು ಶಿರಚ್ಛೇದನದಿಂದ ಗುಲಾಮಗಿರಿ, ಹಸಿವು, ಮತ್ತು ಮಕ್ಕಳ ದುರುಪಯೋಗದ ವರೆಗೆ ವ್ಯಾಪಿಸುತ್ತವೆ. ಐವತ್ತಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ 15ರಿಂದ 20 ಕೋಟಿ ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸಮಾಡಲು ಒತ್ತಾಯಿಸಲ್ಪಡುತ್ತಾರೆ ಎಂದು ಕೇಂದ್ರವು ಅಂದಾಜು ಮಾಡುತ್ತದೆ. ಅದರ ಜೊತೆಗೆ ಲಕ್ಷಾಂತರ ವ್ಯಕ್ತಿಗಳು, ವಿದೇಶಿಗಳ ಕಡೆಗಿರುವ ಕುಲ ಸಂಬಂಧವಾದ ಕಷ್ಟಗಳ ಮತ್ತು ಹಗೆತನದ ಬಲಿಪಶುಗಳಾಗಿದ್ದಾರೆ. “ಬಡತನ ಮತ್ತು ನಷ್ಟದ ಒಂದು ಪರಿಸರದಲ್ಲಿ, ಮಾನವ ಹಕ್ಕುಗಳು ಅರ್ಥರಹಿತವಾಗಿವೆ,” ಎಂದು ಕೇಂದ್ರದ ಮುಖ್ಯಸ್ಥ ಶ್ರೀ. ಇಬ್ರಾಹಿಮ್‌ ಫೊಲ್‌ ಹೇಳಿದರು. “ಚಂದ್ರಲೋಕಕ್ಕೆ ಒಬ್ಬ ಮನುಷ್ಯನನ್ನು ನಾವು ಕಳುಹಿಸಿರುವುದೇನೊ ನಿಜ, ಆದರೆ ನಾವು ಜೀವಿಸುತ್ತಿರುವ ಲೋಕವು ಕಷ್ಟಕರವೂ, ಅಪಾಯಕಾರಿಯೂ, ಮತ್ತು ಅನೇಕ ವೇಳೆ ಮಾರಕವಾಗಿಯೂ ಉಳಿದಿದೆ.” (g93 11/22)

ಕುಳಿಗಳು ಸಾಂಕ್ರಾಮಿಕವಾಗಿವೆ

“ಹುಳುಕು ಹಲ್ಲು ಸಾಂಕ್ರಾಮಿಕವಾಗಿದೆ.” ಸ್ವಿಸ್‌ ದಂತ ಶಾಲೆ ಮತ್ತು ಲೋಕ ಆರೋಗ್ಯ ಸಂಸ್ಥೆಯ ಮೂಲಕ ನಡೆಸಲಾದ ಅಧ್ಯಯನದ ಮೇಲೆ ಆಜನ್ಸ್‌ ಫ್ರಾನ್ಸ್‌ ಪ್ರೆಸ್‌ ಸಮಾಚಾರ ಸೇವೆಯ ಒಂದು ವರದಿ ಹೀಗೆ ಹೇಳುತ್ತದೆ. ಹುಳುಕು ಹಲ್ಲನ್ನುಂಟುಮಾಡುವ ಸ್ಟ್ರೆಪ್ಟೊಕಾಕಸ್‌ ಮ್ಯೂಟನ್ಸ್‌ ಎಂಬ ಬ್ಯಾಕ್ಟೀರಿಯವು, ಹೆತ್ತವರು ತಮ್ಮ ಮಗುವಿಗೆ ಉಪಯೋಗಿಸಿದ ಚಮಚವೊಂದನ್ನು ತಾವು ಉಪಯೋಗಿಸುವಾಗ ಅಥವಾ ಉಣಿಸುವ ಸಮಯದ ಮೊದಲು ಮಗುವಿನ ಹಾಲಿನ ಸೀಸೆಯ ರುಚಿನೋಡುವಾಗ ಅನೇಕ ವೇಳೆ ಕುಟುಂಬದ ಒಬ್ಬ ಸದಸ್ಯನ ಬಾಯಿಂದ ಇನ್ನೊಬ್ಬನಿಗೆ ಸಾಗಿಸಲ್ಪಡುತ್ತದೆ. ವ್ಯಕ್ತಿಯೊಬ್ಬನ ಉಗುಳಿನಲ್ಲಿರುವ ಬ್ಯಾಕ್ಟೀರಿಯದ ಮೊತ್ತದ ಅನುಸಾರ ಗಂಡಾಂತರವು ಹೆಚ್ಚಾಗುತ್ತದೆ. ಸಕ್ಕರೆಗಳನ್ನು ಹಲ್ಲುಗಳನ್ನು ಆಕ್ರಮಿಸುವ ಆಮ್ಲವಾಗಿ ಪರಿವರ್ತಿಸುವ ಬ್ಯಾಕ್ಟೀರಿಯವು, ಹುಳುಕು ದಂತಕ್ಕೆ ಮಕ್ಕಳ ಹಲ್ಲುಗಳು ವಿಶೇಷವಾಗಿ ದುರ್ಬಲವಿರುವಾಗ—ಒಂದರಿಂದ ನಾಲ್ಕು ವರ್ಷ ವಯಸ್ಸಿನ ಮಕ್ಕಳ ಬಾಯಿಗಳಲ್ಲಿ ಪ್ರತ್ಯೇಕವಾಗಿ ಅಭಿವೃದ್ಧಿ ಹೊಂದುವುದಾಗಿ ತೋರುತ್ತದೆ. (g93 11/22)

ನೆಟ್ಟಗೆ ನಿಲ್ಲಿರಿ

ನೀವು ಬಗ್ಗಿಕೊಂಡಿದ್ದರೆ, ನಿಮ್ಮ ಬೆನ್ನು ಕಷ್ಟಾನುಭವಿಸುತ್ತದೆ. ಇಂಟರ್‌ನ್ಯಾಷನಲ್‌ ಹೆರಲ್ಡ್‌ ಟ್ರಿಬ್ಯೂನ್‌ನಲ್ಲಿನ ಒಂದು ವರದಿಗನುಸಾರ, ಕೆಟ್ಟ ಭಂಗಿಯು ನೆಟ್ಟಗೆ ನಿಲ್ಲುವುದಕ್ಕಿಂತ 15 ಪಟ್ಟಷ್ಟು ಹೆಚ್ಚಿನ ಒತ್ತಡವನ್ನು ಬೆನ್ನಿನ ಕೆಳಭಾಗದ ಮೇಲೆ ಹಾಕುತ್ತದೆ. ಬಗ್ಗಿರುವುದು ಆಳವಲ್ಲದ ಉಸಿರಾಟವನ್ನೂ ಫಲಿಸುತ್ತದೆ, ಮತ್ತು ಹಾಗೆಂದರೆ ದೇಹವನ್ನು ಪೋಷಿಸಲು ಕಡಿಮೆ ಆಮ್ಲಜನಕವೆಂದರ್ಥ. ಅದು ನಿಮ್ಮ ಶಕ್ತಿಯನ್ನು ಬರಿದುಮಾಡಿ ವಿಶೇಷವಾಗಿ ಕುತ್ತಿಗೆ ಮತ್ತು ಬೆನ್ನಿನಲ್ಲಿ ನೋವು ಮತ್ತು ವೇದನೆಗಳನ್ನು ಉಂಟುಮಾಡಬಲ್ಲದು. ನೀವು ನೆಟ್ಟಗೆ ನಿಲ್ಲುವಾಗ ಕಾಣುವುದಕ್ಕಿಂತ ವೃದ್ಧರಾಗಿ, ದಪ್ಪಗೆ, ಮತ್ತು ಕಡಿಮೆ ಆತ್ಮ ಸ್ಥೈರ್ಯವುಳ್ಳವರಾಗಿಯೂ ಕೂಡ ಅದು ನಿಮ್ಮನ್ನು ಮಾಡಬಹುದು. ಯೋಗ್ಯವಾದ ಭಂಗಿಯ ಅರ್ಥವು, ನಿಮ್ಮ ಕರ್ಣಪಾಲಿಗಳು, ಭುಜಗಳು, ಟೊಂಕದ ಮಧ್ಯಭಾಗವು, ಮಂಡಿಚಿಪ್ಪು, ಮತ್ತು ಕಾಲಂದಿಗೆಗಳು ಲಂಬವಾಗಿ ಸರಿಹೊಂದಬೇಕು ಎಂಬುದಾಗಿದೆ ಎಂದು ವರದಿಯು ಹೇಳುತ್ತದೆ. ಹಾಗಿದ್ದರೂ, ಮಂಡಿಚಿಪ್ಪುಗಳು ಮುಚ್ಚಿಕೊಂಡು, ತಲೆ ಮತ್ತು ಭುಜಗಳು ಹಿಂದಕ್ಕೆ ತಳ್ಳಲ್ಪಟ್ಟ ಸೈನಿಕ ಭಂಗಿಯನ್ನು ಅದು ಅರ್ಥೈಸುವುದಿಲ್ಲ. ಇದು ಅತಿರೇಕದ ಒತ್ತಡವನ್ನು ಬೆನ್ನೆಲುಬಿನ ಮೇಲೆ ಹಾಕುತ್ತದೆ. ಕೆಟ್ಟ ಭಂಗಿಯು ಸಾಮಾನ್ಯವಾಗಿ ಸರಿಮಾಡಬಹುದಾದ ಒಂದು ಕೆಟ್ಟ ರೂಢಿಯಾಗಿದೆ ಎಂದು ಪರಿಣತರು ಹೇಳುತ್ತಾರೆ. (g93 12/8)

ಏಷಿಯದಲ್ಲಿ ಸಂತೋಷ

ಟೈವಾನ್‌ ಮತ್ತು ರಿಪಬ್ಲಿಕ್‌ ಆಫ್‌ ಕೊರಿಯ—ಎರಡೂ ದೇಶಗಳಲ್ಲಿ ಅತ್ಯಂತ ಸಂತೋಷದಿಂದಿರುವ ಜನರು ಬಡವರೂ ತಮ್ಮ 30ರ ವಯೋಮಿತಿಯಲ್ಲಿರುವವರೂ ಆಗಿದ್ದಾರೆಂದು ಸರ್ವೇ ರಿಸರ್ಚ್‌ ಹಾಂಗ್‌ ಕಾಂಗ್‌ ಲಿಮಿಟೆಡ್‌ನ ಮೂಲಕ ತೆಗೆಯಲ್ಪಟ್ಟ ಒಂದು ಎಣಿಕೆ ಕಂಡುಕೊಂಡಿತು. ಜಿಎನ್‌ಪಿ (ಒಟ್ಟು ರಾಷ್ಟ್ರೀಯ ಉತ್ಪಾದನೆ)ಯು ಪ್ರತಿ ವ್ಯಕ್ತಿಗೆ ಕೇವಲ 500 (ಅಮೆರಿಕನ್‌) ಡಾಲರುಗಳಾಗಿದ್ದು 41 ಪ್ರತಿಶತ ಜನರು ಬಡತನದಲ್ಲಿ ಜೀವಿಸುತ್ತಿರುವ ಫಿಲಿಪ್ಪೀನ್ಸ್‌ನಲ್ಲಿ, 94 ಪ್ರತಿಶತ ಜನರು ತಾವು ಸಂತೋಷದಿಂದಿದ್ದೇವೆಂದು ಹೇಳುತ್ತಾರೆ. ಒಂದು ದೇಶವನ್ನು ಹೊರತು ಪಡಿಸಿ, ಏಷಿಯದಲ್ಲಿರುವ ಬಹುಮಟ್ಟಿಗೆ ಎಲ್ಲಾ ನರೆಹೊರೆಯವರು ಜೀವಿತದ ಕಡೆಗೆ ಅದೇ ಮನೋಭಾವದಲ್ಲಿ ಪಾಲಿಗರಾಗುತ್ತಾರೆ. “ಜನರು ಸಾಮಾನ್ಯವಾಗಿ ಸಂತೋಷದಿಂದಿರುವ ಪ್ರಾಂತದಲ್ಲಿ” ಏಷಿಯದ ಅತ್ಯಂತ ಐಶ್ವರ್ಯವಂತ ದೇಶವು, “ಸಂತೋಷವು ಅತೀ ಕಡಿಮೆಯಾಗಿರುವ ಸ್ಥಳವಾಗಿ ಪರಿಣಮಿಸಿತು” ಎಂದು ಮೈನೀಚಿ ಡೇಲಿ ನ್ಯೂಜ್‌ ಹೇಳಿತು. ಒಟ್ಟು ರಾಷ್ಟ್ರೀಯ ಉತ್ಪಾದನೆಯು ಪ್ರತಿ ವ್ಯಕ್ತಿಗೆ 27,000 (ಅಮೆರಿಕನ್‌) ಡಾಲರುಗಳಿಗಿಂತ ಹೆಚ್ಚಾಗಿದ್ದರೂ ಕೂಡ, 40 ಪ್ರತಿಶತ ಜಪಾನಿಯರು ತಾವು ಸಂತೋಷಿಗಳಲ್ಲವೆಂದು ಹೇಳಿಕೊಳ್ಳುತ್ತಾರೆ. (g93 12/8)

ಸಂಸರ್ಗ ಮಾಡುವುದರಲ್ಲಿ ವೈಫಲ್ಯ

“ಜರ್ಮನಿಯಲ್ಲಿ ಸರಾಸರಿ ಮದುವೆಯಾದ ದಂಪತಿಗಳು ದಿನಕ್ಕೆ ಪರಸ್ಪರವಾಗಿ ಮಾತಾಡಲು ಅಪರೂಪವಾಗಿ 10 ನಿಮಿಷಗಳನ್ನು ವ್ಯಯಿಸುತ್ತಾರೆ,” ಎಂದು ಜರ್ಮನ್‌ ವಾರ್ತಾಪತ್ರಿಕೆ, ನ್ಯಾಸ್‌ಐಶಿ ನೋಯಿ ಪ್ರೆಸಿ ವರದಿಸುತ್ತದೆ. ಆದುದರಿಂದ ಹೆಚ್ಚಿನ ದಂಪತಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವುದರಲ್ಲಿ ಅತಿ ಕಡಿಮೆ ಸಮಯವನ್ನು ಮೀಸಲಿಡುತ್ತಾರೆ. ಇನ್ನೂ ಹೆಚ್ಚಾಗಿ, ಪ್ರತ್ಯೇಕವಾಗಿ ಯುವ ದಂಪತಿಗಳಿಗೆ ತಮ್ಮ ಅಭಿಪ್ರಾಯಗಳ ಭಿನ್ನತೆಗಳನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿರುವುದಿಲ್ಲ ಎಂಬುದಾಗಿ ಜರ್ಮನಿಯಲ್ಲಿನ ಕುಟುಂಬ ಸಲಹೆಗಾರರು ಗಮನಿಸುತ್ತಾರೆ. ಸಹಭಾಗಿತ್ವಗಳ ಅತಿ ಶೀಘ್ರ ಕುಸಿತಕ್ಕೆ ಇದು ಶ್ರೇಷ್ಠವಾದೊಂದು ಕಾರಣವಾಗಿದೆ; ಐದು ಮದುವೆಗಳಲ್ಲಿ ಎರಡು, ಮೊದಲ ನಾಲ್ಕು ವರ್ಷಗಳಲ್ಲಿ ವಿಫಲವಾಗುತ್ತವೆ. “ಘರ್ಷಣೆಗಳನ್ನು ಹೇಗೆ ಪರಿಹರಿಸಬೇಕೆಂದು ಮಾದರಿಯ ಮೂಲಕ ತೋರಿಸುವ ಯಾವುದೇ ಆದರ್ಶಗಳು ಇರುವುದಿಲ್ಲ,” ಎಂದು ಸಲಹೆಗಾರರಾದ ರೋಜ್‌ಮಾರಿ ಬ್ರಿಂಡಲ್‌ ಹೇಳುವುದಾಗಿ ಪತ್ರಿಕೆಯು ತಿಳಿಸಿತು. ವರದಿಯು ಕೂಡಿಸುವುದು: “ಆದಕಾರಣ, ಮದುವೆಯ ಸಮಸ್ಯೆಗಳನ್ನು ಕೇವಲ ಅಗಲಿಕೆಯ ಮೂಲಕ ಬಿಟ್ಟುಬಿಡುವ ಹೆಚ್ಚಾಗುತ್ತಿರುವ ಸ್ವಇಚ್ಛೆಯು ಇದೆ.” (g93 12/8)

ಕೆಲಸವನ್ನು ಅದರ ಸ್ಥಾನದಲ್ಲಿಡಿರಿ

ಹುಣ್ಣುಗಳು, ಹೃದಯ ಬೇನೆಗಳು, ನರಗಳ ಬಳಲಿಕೆ, ಗೈರುಹಾಜರಿ, ಮತ್ತು ಅಪಘಾತಗಳು—ಇವು ನೌಕರನಿಗೂ ಯಜಮಾನನಿಗೂ ನಷ್ಟ ತರುವ ಅತಿ ಹೆಚ್ಚಿನ ಒತ್ತಡದ ಬೆಲೆಯಾಗಿವೆ. ಫ್ರೆಂಚ್‌ ಇಂಟರ್‌ನ್ಯಾಷ್‌ನಲ್‌ ಆಫೀಜ್‌ ಆಫ್‌ ಲೇಬರ್‌ನ ಮೂಲಕ ತಯಾರಿಸಲಾದ ಒಂದು ವರದಿಗನುಸಾರ, ಕೆಲಸಕ್ಕೆ ಸಂಬಂಧಿಸಿದ ಒತ್ತಡವು “ನಮ್ಮ ಸಮಯದ ಅತಿ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿ” ಪರಿಣಮಿಸಿದೆ. ಯೂರೋಪಿನಲ್ಲಿ, ಸಿಬ್ಬಂದಿ ವರ್ಗದಲ್ಲಿ ಕಡಿತ ಮತ್ತು ನೌಕರರ ಹೆಚ್ಚಾಗುತ್ತಿರುವ ಜವಾಬ್ದಾರಿಗಳೊಂದಿಗೆ ಹೆಚ್ಚಾದ ಉತ್ಪಾದನೆ ಮತ್ತು ಲಾಭಗಳ ಬಯಕೆಯೊಂದಿಗೆ ಜೊತೆಸೇರಿ, ಕೆಲಸದ ಸ್ಥಳದಲ್ಲಿ ಒತ್ತಡವನ್ನು ಸ್ಫುಟವಾಗಿ ಹೆಚ್ಚಿಸಿವೆ ಎಂಬುದಾಗಿ ಫ್ರೆಂಚ್‌ ವೈದ್ಯಕೀಯ ಪತ್ರಿಕೆ, ಲೆ ಕಾನ್‌ಕೂರ್‌ ಮೆಡೀಕಲ್‌ ಗಮನಿಸಿ, ಫ್ರಾನ್ಸ್‌ನಲ್ಲಿ ಕೆಲವರು ಹೆಚ್ಚಿನ ಕೆಲಸದಿಂದ ಮರಣವನ್ನೂ ಹೊಂದುತ್ತಿದ್ದಾರೆಂದು ಕೂಡಿಸಿತು. ರಸಕರವಾಗಿ, ವ್ಯಕ್ತಿಯೊಬ್ಬನು ತನ್ನ ಸುತ್ತಲೂ ಇರುವವರೊಂದಿಗೆ ಆದರದ ಹಾಗೂ ಪ್ರೀತಿಪರ ಗೆಳೆತನವನ್ನು ಬೆಳೆಸಿದಾಗ, ಒತ್ತಡವನ್ನು ಅತ್ಯುತ್ತಮವಾಗಿ ತಡೆಯುತ್ತಾನೆಂದು ಹಲವಾರು ಅಧ್ಯಯನಗಳು ತೋರಿಸುತ್ತವೆ. ವಿಶ್ರಾಂತಿ, ಶಾರೀರಿಕ ವ್ಯಾಯಾಮ, ಸಮತೂಕದ ಆಹಾರ ಕ್ರಮ, ಮತ್ತು ಕುಟುಂಬ ಹಾಗೂ ಮನೋರಂಜನೆಗಾಗಿ ಸಮಯವನ್ನು ಬದಿಗಿಡುತ್ತಾ, ಕೆಲಸವನ್ನು ಅದರ ಸ್ಥಾನದಲ್ಲಿಡುವುದನ್ನು ವೈದ್ಯರು ಕೂಡ ಶಿಫಾರಸ್ಸು ಮಾಡುತ್ತಾರೆ. (g93 12/8)

ಸಂಭವಿಸಲು ಕಾದಿರುವ ಆಕಸ್ಮಿಕ ಘಟನೆಗಳು

ಇಂಟರ್‌ನ್ಯಾಷನಲ್‌ ಎನ್‌ವೈರನ್‌ಮೆಂಟಲ್‌ ಅಪ್‌ಡೇಟ್‌ ಪತ್ರಿಕೆಗನುಸಾರ, “ಸಂಭವಿಸಲು ಕಾದಿರುವ ತೇಲುವ ದುರಂತಗಳ ಒಂದು ತಂಡ”—ಹೀಗೆಂದು ಕೆಲವು ವಿಮರ್ಶಕರು ಲೋಕದ ಎಣ್ಣೆ ತೊಟ್ಟಿ ಹಡಗುಗಳನ್ನು ಕರೆದಿದ್ದಾರೆ. “ಅದರ ಅತ್ಯಂತ ಸಂದಿಗ್ಧ ಉರುವಲನ್ನು ಸಾಗಿಸಲು ಸರಿಯಾಗಿ ತರಬೇತಿ ಪಡೆಯದ ನಾವಿಕರ ತಂಡಗಳೊಂದಿಗೆ ನೂರಾರು ಕಿಲುಬು ಹಿಡಿದಿರುವ, ಮುಪ್ಪಾಗುತ್ತಿರುವ, ಕ್ರಮಪಡಿಸದ ಎಣ್ಣೆ ಹಡಗುಗಳ ಮೇಲೆ ಲೋಕವು ಇನ್ನೂ ಆತುಕೊಂಡಿದೆ” ಎಂಬುದಾಗಿ ಪತ್ರಿಕೆಯು ಆರೋಪಿಸುತ್ತದೆ. ದೊಡ್ಡದಾದ ಎಣ್ಣೆ ತೊಟ್ಟಿಯ ಹಡಗು ಸುಮಾರು 15 ವರ್ಷಗಳ ವರೆಗೆ ಬಾಳುತ್ತದೆಂದು ನಿರೀಕ್ಷಿಸಲಾಗುತ್ತದೆ. ಆದರೆ ಭೂವ್ಯಾಪಕ ಎಣ್ಣೆ ಹಡಗಿನ ತಂಡದ ಸುಮಾರು 65 ಪ್ರತಿಶತವು ಕಡಿಮೆ ಪಕ್ಷ ಆ ವಯಸ್ಸಿನದ್ದಾಗಿದೆ. ಹಳತಾಗಿ ಹೋದ ಈ ತೊಟ್ಟಿ ಹಡಗುಗಳನ್ನು ರದ್ದುಮಾಡಬೇಕೆಂದು ಕೆಲವು ಎಣ್ಣೆ ಉದ್ಯೋಗದ ಅಧಿಕಾರಿಗಳೂ ಸಹಾ ಒಪ್ಪುತ್ತಾರೆ. ಯಾವುದೇ ಒಂದು ನಿಯೋಗಕ್ಕೆ ಹಡಗುಗಳನ್ನು ಸೇವೆಯಿಂದ ತೆಗೆದುಹಾಕುವ ಅಧಿಕಾರವಿಲ್ಲವೆಂದು ತೋರುತ್ತದೆ. ಹಾಗಿದ್ದರೂ, ಸಮಸ್ಯೆಯು ಸ್ವತಃ ಹಡಗುಗಳಿಗಿಂತ ಅವುಗಳು ಹೇಗೆ ನಿರ್ವಹಿಸಲ್ಪಡುತ್ತಿವೆ ಎಂಬುದರ ಮೇಲೆ ಹೆಚ್ಚಾಗಿ ಅವಲಂಬಿಸಿರಬಹುದು. “ತೊಟ್ಟಿ ಹಡಗುಗಳ ಅಪಘಾತಗಳ ಹೆಚ್ಚಿನ ಭಾಗವು ಮಾನವ ದೋಷದಿಂದ ಉಂಟಾಗುತ್ತದೆ,” ಎಂದು ಒಬ್ಬ ಎಣ್ಣೆ ಮಾಲಿನ್ಯ ಪರಿಣತನು ಹೇಳುವುದಾಗಿ ಪತ್ರಿಕೆಯು ನಮೂದಿಸುತ್ತದೆ. (g93 12/8)

ಮಾರಕ ವ್ಯಾಪಾರವೊಂದು ಹಿಂದಿರುಗಿ ಬರುತ್ತದೆ

ಇತ್ತೀಚೆಗಿನ ವರ್ಷಗಳಲ್ಲಿ ಸ್ವಲ್ಪ ಲಾಭದ ಹೊರತೂ, ಭಾರತದಲ್ಲಿನ ರಕ್ಷಣಾ ಪ್ರಯತ್ನಗಳು ಕಳ್ಳಬೇಟೆಗಾರರಿಂದ ಮರುಕೊಳಿಸಲ್ಪಟ್ಟಿವೆ ಎಂದು ಇಂಡಿಯ ಟುಡೇ ಪತ್ರಿಕೆಯು ವರದಿಸುತ್ತದೆ. ಇಸವಿ 1988ರಲ್ಲಿ ಅಂದಾಜು ಮಾಡಲಾದ 4,500 ಹುಲಿಗಳು ಭಾರತದ ಕಾಡುಗಳಲ್ಲಿ ಇದ್ದವು. ಇಸವಿ 1992ರೊಳಗಾಗಿ, ಆ ಸಂಖ್ಯೆಯು 1,500ಕ್ಕೆ ಇಳಿದಿತ್ತು. ಹುಲಿಯು ಅದರ ಚರ್ಮಕ್ಕಾಗಿ, ಅದರ ರಕ್ತ, (ಸಾಂಪ್ರದಾಯಿಕ ಔಷಧಗಳಲ್ಲಿ ಉಪಯೋಗಿಸಲ್ಪಡುವ) ಅದರ ಎಲುಬುಗಳು, ಅದರ ಪಂಜಗಳು, ಮತ್ತು ಅದರ ಜನನಾಂಗಗಳಿಗಾಗಿ ಕೂಡ ಮಾರಲ್ಪಡುತ್ತದೆ. ಆದರೆ ಹುಲಿಯು ಕಳ್ಳಬೇಟೆಗಾರರ ಸೇನೆಯ ಏಕಮಾತ್ರ ಬಲಿಪಶುವಾಗಿರುವುದಿಲ್ಲ. ಇಸವಿ 1992ರಲ್ಲಿ, ದಶಕಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಾದ—ನಾಲ್ವತ್ತೆಂಟು ಭಾರತೀಯ ಖಡ್ಗಮೃಗಗಳು ತಮ್ಮ ಕೊಂಬುಗಳಿಗಾಗಿ ಸಂಹರಿಸಲ್ಪಟ್ಟವು. ಭಾರತೀಯ ಆನೆಗಳ ಸಂಖ್ಯೆಯು, ಹತ್ತು ವರ್ಷಗಳ ಹಿಂದೆ ಇದ್ದ 5,000ದಿಂದ ಇಂದು ಸುಮಾರು 1,500ಕ್ಕೆ ಇಳಿದದೆ. ಇಂದಿನ ಹೆಚ್ಚು ಸಶಸ್ತ್ರವಾಗಿರುವ ಕಳ್ಳಬೇಟೆಗಾರರ ಕುರಿತು ವನರಕ್ಷಕರು ಎಷ್ಟು ಭಯಭರಿತರಾಗಿದ್ದಾರೆಂದರೆ, ಕೆಲವರು ತಮ್ಮ ಅಧಿಕೃತ ಸಮವಸ್ತ್ರಗಳನ್ನು ಹಾಕುವುದೇ ಇಲ್ಲ; ಇತರರು ಸ್ವತಃ ತಮ್ಮನ್ನು ರಕ್ಷಿಸಲು ಸರಿಯಾಗಿ ಸಜ್ಜಿತರಾಗುವ ತನಕ ತಮ್ಮ ಕೆಲಸವನ್ನು ಮಾಡಲು ನೇರವಾಗಿ ನಿರಾಕರಿಸುತ್ತಾರೆ. (g93 12/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ