ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 35 ಪು. 206-ಪು. 208 ಪ್ಯಾ. 3
  • ಒತ್ತಿಹೇಳಲಿಕ್ಕಾಗಿ ಪುನರಾವರ್ತಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒತ್ತಿಹೇಳಲಿಕ್ಕಾಗಿ ಪುನರಾವರ್ತಿಸುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಮುಖ್ಯಾಂಶಗಳಿಗೆ ಪ್ರಾಮುಖ್ಯತೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಪರಿಣಾಮಕಾರಿಯಾದ ಸಮಾಪ್ತಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಭಾಷಣದ ಹೊರಮೇರೆಯನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 35 ಪು. 206-ಪು. 208 ಪ್ಯಾ. 3

ಅಧ್ಯಾಯ 35

ಒತ್ತಿಹೇಳಲಿಕ್ಕಾಗಿ ಪುನರಾವರ್ತಿಸುವುದು

ನೀವೇನು ಮಾಡುವ ಅಗತ್ಯವಿದೆ?

ನಿಮ್ಮ ಸಭಿಕರು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ನೀವು ವಿಶೇಷವಾಗಿ ಬಯಸುವ ಅಂಶಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಹೇಳಿರಿ.

ಇದು ಪ್ರಾಮುಖ್ಯವೇಕೆ?

ಪುನರಾವರ್ತನೆಯು ಜ್ಞಾಪಕಕ್ಕೆ ನೆರವಾಗುವುದು ಮಾತ್ರವಲ್ಲ, ಪ್ರಧಾನ ವಿಚಾರಗಳನ್ನು ಪರಿಣಾಮಕಾರಿಯಾಗಿ ಎತ್ತಿಹೇಳಲು ಮತ್ತು ನಿಮ್ಮ ಸಭಿಕರು ಅವುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲು ನೀವು ಅದನ್ನು ಉಪಯೋಗಿಸಸಾಧ್ಯವಿದೆ.

ಪರಿಣಾಮಕಾರಿಯಾದ ಬೋಧಿಸುವಿಕೆಯಲ್ಲಿ, ಪುನರಾವರ್ತನೆಯ ಉಪಯೋಗವು ಸೇರಿರುತ್ತದೆ. ಪ್ರಮುಖ ವಿಷಯವೊಂದನ್ನು ಒಂದಕ್ಕಿಂತ ಹೆಚ್ಚು ಬಾರಿ ಹೇಳುವಾಗ, ಸಭಿಕರು ಅದನ್ನು ಜ್ಞಾಪಿಸಿಕೊಳ್ಳುವುದು ಹೆಚ್ಚು ಸಂಭವನೀಯ. ಅದೇ ವಿಚಾರವನ್ನು ತುಸು ಭಿನ್ನವಾದ ರೀತಿಯಲ್ಲಿ ಹೇಳಿದರಂತೂ ಅವರು ಅದನ್ನು ಇನ್ನೂ ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಶಕ್ತರಾಗಬಹುದು.

ನೀವು ಏನು ಹೇಳುತ್ತೀರೋ ಅದನ್ನು ನಿಮ್ಮ ಕೇಳುಗರು ನೆನಪಿನಲ್ಲಿಡದಿರುವಲ್ಲಿ, ನಿಮ್ಮ ಮಾತುಗಳು ಅವರು ಏನು ನಂಬುತ್ತಾರೊ ಅಥವಾ ಅವರು ಹೇಗೆ ಜೀವಿಸುತ್ತಾರೊ ಅದರ ಮೇಲೆ ಪ್ರಭಾವವನ್ನು ಬೀರುವುದಿಲ್ಲ. ಆದರೆ ನೀವು ವಿಶೇಷ ಒತ್ತನ್ನು ಕೊಡುವ ಅಂಶಗಳ ಕುರಿತು ಅವರು ಪ್ರಾಯಶಃ ಯೋಚಿಸುವುದನ್ನು ಮುಂದುವರಿಸಬಹುದು.

ನಮ್ಮ ಮಹಾನ್‌ ಶಿಕ್ಷಕನಾದ ಯೆಹೋವನು, ಪುನರಾವರ್ತನೆಯನ್ನು ಉಪಯೋಗಿಸುವ ವಿಷಯದಲ್ಲಿ ನಮಗೆ ಮಾದರಿಯನ್ನಿಡುತ್ತಾನೆ. ಆತನು ಇಸ್ರಾಯೇಲ್‌ ಜನಾಂಗಕ್ಕೆ ದಶಾಜ್ಞೆಗಳನ್ನು ಕೊಟ್ಟನು. ಆತನು ತನ್ನ ದೇವದೂತ ವದನಕನೊಬ್ಬನ ಮೂಲಕ, ಸೀನಾಯಿ ಬೆಟ್ಟದಲ್ಲಿ ಆ ಜನಾಂಗವು ಆ ಆಜ್ಞೆಗಳನ್ನು ಕೇಳಿಸಿಕೊಳ್ಳುವಂತೆ ಮಾಡಿದನು. ತರುವಾಯ ಆತನು ಅವುಗಳನ್ನು ಮೋಶೆಗೆ ಲಿಖಿತ ರೂಪದಲ್ಲಿ ಕೊಟ್ಟನು. (ವಿಮೋ. 20:1-17; 31:18; ಧರ್ಮೋ. 5:22) ಆ ಜನಾಂಗವು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು ಮೋಶೆಯು ಯೆಹೋವನ ನಿರ್ದೇಶಕ್ಕನುಸಾರ ಆ ಆಜ್ಞೆಗಳನ್ನು ಅವರ ಮುಂದೆ ಪುನರಾವರ್ತಿಸಿದನು. ಮತ್ತು ಧರ್ಮೋಪದೇಶಕಾಂಡ 5:6-21 ರಲ್ಲಿ ಕಂಡುಬರುವಂತೆ, ಪವಿತ್ರಾತ್ಮದ ಮೂಲಕ ಮೋಶೆಯು ಅದನ್ನು ದಾಖಲಿಸಿದನು. ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಆಜ್ಞೆಗಳಲ್ಲಿ, ಅವರು ತಮ್ಮ ಪೂರ್ಣ ಹೃದಯ, ಪ್ರಾಣ ಮತ್ತು ಶಕ್ತಿಯಿಂದ ಯೆಹೋವನನ್ನು ಪ್ರೀತಿಸಿ, ಆತನ ಸೇವೆಮಾಡಬೇಕೆಂಬ ಆವಶ್ಯಕತೆಯೂ ಸೇರಿತ್ತು. ಇದನ್ನೂ ಪುನಃ ಪುನಃ ಹೇಳಲಾಯಿತು. (ಧರ್ಮೋ. 6:5; 10:12; 11:13; 30:6) ಏಕೆ? ಏಕೆಂದರೆ ಯೇಸು ಹೇಳಿದಂತೆ, ಈ “ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು” ಆಗಿತ್ತು. (ಮತ್ತಾ. 22:34-38) ಪ್ರವಾದಿಯಾದ ಯೆರೆಮೀಯನ ಮೂಲಕ ಯೆಹೋವನು, ತಾನು ಯೆಹೂದದ ಜನರಿಗೆ ಕೊಟ್ಟ ಎಲ್ಲ ಆಜ್ಞೆಗಳಿಗೆ ವಿಧೇಯರಾಗುವುದರ ಗಂಭೀರತೆಯ ಕುರಿತು 20ಕ್ಕೂ ಹೆಚ್ಚು ಬಾರಿ ಅವರಿಗೆ ಜ್ಞಾಪಕ ಹುಟ್ಟಿಸಿದನು. (ಯೆರೆ. 7:23; 11:4; 12:17; 19:15) ಮತ್ತು ದೇವರು ಯೆಹೆಜ್ಕೇಲನ ಮೂಲಕ 60ಕ್ಕೂ ಹೆಚ್ಚು ಬಾರಿ ಜನಾಂಗಗಳಿಗೆ, “ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವದು” ಎಂದು ತಿಳಿಯಪಡಿಸಿದನು.—ಯೆಹೆ. 6:10; 38:23.

ಯೇಸುವಿನ ಶುಶ್ರೂಷೆಯ ದಾಖಲೆಯಲ್ಲಿಯೂ ಪರಿಣಾಮಕಾರಿಯಾದ ಪುನರಾವರ್ತನೆಯ ಉಪಯೋಗವನ್ನು ನಾವು ನೋಡುತ್ತೇವೆ. ಉದಾಹರಣೆಗೆ, ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ಪ್ರತಿಯೊಂದು, ಒಂದು ಅಥವಾ ಅದಕ್ಕಿಂತಲೂ ಹೆಚ್ಚು ಸುವಾರ್ತಾ ಪುಸ್ತಕಗಳಲ್ಲಿ ವರದಿಸಲ್ಪಟ್ಟಿರುವ ಪ್ರಮುಖ ಘಟನೆಗಳನ್ನು ಆವರಿಸುತ್ತದೆ. ಆದರೆ ಆ ಎಲ್ಲ ಸುವಾರ್ತಾ ಪುಸ್ತಕಗಳು ಈ ಘಟನೆಗಳನ್ನು ತುಸು ಭಿನ್ನವಾದ ಕೋನಗಳಿಂದ ನೋಡುತ್ತವೆ. ಯೇಸು ತನ್ನ ಸ್ವಂತ ಬೋಧನಾ ರೀತಿಯಲ್ಲಿ, ಸಲಹೆಯ ಒಂದೇ ಮೂಲಾಂಶವನ್ನು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಆವರಿಸಿದರೂ ಅವುಗಳನ್ನು ವಿಭಿನ್ನ ರೀತಿಗಳಲ್ಲಿ ಉಪಯೋಗಿಸಿದನು. (ಮಾರ್ಕ 9:34-37; 10:35-45; ಯೋಹಾ. 13:2-17) ಮತ್ತು ತನ್ನ ಮರಣಕ್ಕೆ ಕೆಲವೇ ದಿನಗಳ ಮುಂಚೆ ಯೇಸು ಎಣ್ಣೆಯ ಮರಗಳ ಗುಡ್ಡದ ಮೇಲಿದ್ದಾಗ, “ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ” ಎಂಬ ಮಹತ್ವಪೂರ್ಣ ಸಲಹೆಯನ್ನು ಒತ್ತಿಹೇಳಲು ಪುನರಾವರ್ತನೆಯನ್ನು ಉಪಯೋಗಿಸಿದನು.—ಮತ್ತಾ. 24:42; 25:13.

ಕ್ಷೇತ್ರ ಶುಶ್ರೂಷೆಯಲ್ಲಿ. ನೀವು ಜನರಿಗೆ ಸಾಕ್ಷಿ ನೀಡುವಾಗ, ನೀವು ಏನು ಹೇಳುತ್ತೀರೊ ಅದನ್ನು ಅವರು ನೆನಪಿನಲ್ಲಿಡುವರೆಂದು ನಿರೀಕ್ಷಿಸುತ್ತೀರಿ. ಪುನರಾವರ್ತನೆಯ ಪರಿಣಾಮಕಾರಿಯಾದ ಉಪಯೋಗವು, ಆ ಗುರಿಯನ್ನು ಸಾಧಿಸಲು ನಿಮಗೆ ಸಹಾಯಮಾಡಬಲ್ಲದು.

ಆಗಾಗ, ಒಂದು ವಿಷಯವು ಚರ್ಚಿಸಲ್ಪಡುತ್ತಿರುವಾಗ ಅದನ್ನು ಪುನರಾವರ್ತಿಸಿ ಹೇಳುವುದು, ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಅದನ್ನು ಅಚ್ಚೊತ್ತಿಸಲು ಸಹಾಯಮಾಡುವುದು. ಆದುದರಿಂದ, ಒಂದು ವಚನವನ್ನು ಓದಿದ ಬಳಿಕ, ಅದರ ಮುಖ್ಯ ಭಾಗವನ್ನು ತೋರಿಸುತ್ತಾ, “ಈ ವಚನದಲ್ಲಿ ಉಪಯೋಗಿಸಲ್ಪಟ್ಟಿರುವ ಪದವಿನ್ಯಾಸವನ್ನು ನೀವು ಗಮನಿಸಿದಿರೊ?” ಎಂದು ಕೇಳುವ ಮೂಲಕ ನೀವು ಅದನ್ನು ಒತ್ತಿಹೇಳಸಾಧ್ಯವಿದೆ.

ಒಂದು ಸಂಭಾಷಣೆಯಲ್ಲಿರುವ ಕೊನೆಯ ವಾಕ್ಯಗಳನ್ನು ಸಹ ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ. ಉದಾಹರಣೆಗೆ, “ನಮ್ಮ ಸಂಭಾಷಣೆಯಿಂದ ನೀವು . . . ಎಂಬ ಮುಖ್ಯಾಂಶವನ್ನು ನೆನಪಿನಲ್ಲಿಡುವಿರೆಂದು ನಾನು ನಿರೀಕ್ಷಿಸುತ್ತೇನೆ” ಎಂದು ನೀವು ಹೇಳಬಹುದು. ಆ ಬಳಿಕ ಆ ಮುಖ್ಯಾಂಶವನ್ನು ಸರಳವಾಗಿ ಪುನಃ ಹೇಳಿರಿ. ಅದು ಹೀಗಿರಬಹುದು: “ಭೂಮಿಯನ್ನು ಪರದೈಸಾಗಿ ಮಾರ್ಪಡಿಸುವುದು ದೇವರ ಉದ್ದೇಶವಾಗಿದೆ. ಆ ಉದ್ದೇಶವು ಖಂಡಿತವಾಗಿಯೂ ಕೈಗೂಡುವುದು.” ಅಥವಾ ಅದು ಹೀಗಿರಬಹುದು: “ಈ ವಿಷಯಗಳ ವ್ಯವಸ್ಥೆಯ ಕೊನೆಯ ದಿನಗಳಲ್ಲಿ ನಾವು ಜೀವಿಸುತ್ತಿದ್ದೇವೆಂದು ಬೈಬಲು ಸ್ಪಷ್ಟವಾಗಿ ತೋರಿಸುತ್ತದೆ. ನಾವು ಅದರ ಅಂತ್ಯವನ್ನು ಪಾರಾಗಿ ಉಳಿಯಬೇಕಾದರೆ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ನಾವು ಕಲಿಯುವ ಅಗತ್ಯವಿದೆ.” ಅಥವಾ, “ನಾವು ನೋಡಿರುವಂತೆ, ಕುಟುಂಬ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೇಗೆ ನಿಭಾಯಿಸುವುದು ಎಂಬುದಕ್ಕೆ ಬೈಬಲು ಪ್ರಾಯೋಗಿಕ ಸಲಹೆಯನ್ನು ನೀಡುತ್ತದೆ.” ಕೆಲವು ಸಂದರ್ಭಗಳಲ್ಲಿ, ಜ್ಞಾಪಕದಲ್ಲಿಡಬೇಕಾದ ಅಂಶದೋಪಾದಿ ನೀವು ಬೈಬಲಿನ ಒಂದು ಉಲ್ಲೇಖವನ್ನು ಪುನರಾವರ್ತಿಸಿ ಹೇಳುವುದಷ್ಟೇ ಸಾಕಾಗಬಹುದು. ಇದನ್ನು ಪರಿಣಾಮಕಾರಿಯಾಗಿ ಮಾಡಬೇಕಾದರೆ, ಮುಂದಾಲೋಚನೆಯು ಅಗತ್ಯವೆಂಬುದು ನಿಶ್ಚಯ.

ಪುನರ್ಭೇಟಿಗಳು ಮತ್ತು ಬೈಬಲ್‌ ಅಧ್ಯಯನಗಳಲ್ಲಿ ನೀವು ಮಾಡುವ ಪುನರಾವರ್ತನೆಯಲ್ಲಿ ಪುನರ್ವಿಮರ್ಶೆಯ ಪ್ರಶ್ನೆಗಳು ಒಳಗೂಡಿರಬಹುದು.

ಒಬ್ಬ ವ್ಯಕ್ತಿಗೆ ಬೈಬಲ್‌ ಸಲಹೆಯನ್ನು ಅರ್ಥಮಾಡಿಕೊಳ್ಳುವುದು ಅಥವಾ ಅದನ್ನು ಅನ್ವಯಿಸುವುದು ಕಷ್ಟಕರವಾಗಿರುವಾಗ, ಆ ವಿಷಯದ ಬಗ್ಗೆ ನೀವು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಮಾತಾಡಬೇಕಾಗಬಹುದು. ಅದನ್ನು ವಿವಿಧ ಕೋನಗಳಿಂದ ಪರಿಗಣಿಸಲು ಪ್ರಯತ್ನಿಸಿರಿ. ಚರ್ಚೆಗಳು ದೀರ್ಘವಾಗಿರಬೇಕೆಂದಿಲ್ಲವಾದರೂ, ವಿದ್ಯಾರ್ಥಿಯು ಆ ವಿಷಯದ ಕುರಿತು ಆಲೋಚಿಸುತ್ತಾ ಇರುವಂತೆ ಪ್ರೋತ್ಸಾಹಿಸಲ್ಪಡಬೇಕು. ತನ್ನ ಶಿಷ್ಯರು ಪ್ರಥಮ ಸ್ಥಾನದಲ್ಲಿರಬೇಕೆಂಬ ತಮ್ಮ ಬಯಕೆಯನ್ನು ಜಯಿಸುವಂತೆ ಸಹಾಯಮಾಡುವುದರಲ್ಲಿ ಯೇಸು ಈ ರೀತಿಯ ಪುನರಾವರ್ತನೆಯನ್ನು ಉಪಯೋಗಿಸಿದನೆಂಬುದನ್ನು ನೆನಪಿಸಿಕೊಳ್ಳಿ.—ಮತ್ತಾ. 18:1-6; 20:20-28; ಲೂಕ 22:24-27.

ಭಾಷಣಗಳನ್ನು ಕೊಡುವಾಗ. ನೀವು ವೇದಿಕೆಯ ಮೇಲಿಂದ ಭಾಷಣವನ್ನು ನೀಡುವಲ್ಲಿ, ಕೇವಲ ಮಾಹಿತಿಯನ್ನು ಪ್ರಸ್ತುತಪಡಿಸುವುದು ಮಾತ್ರ ನಿಮ್ಮ ಉದ್ದೇಶವಾಗಿರುವುದಿಲ್ಲ. ಸಭಿಕರು ಅದನ್ನು ಅರ್ಥಮಾಡಿಕೊಳ್ಳಬೇಕು, ಅದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು ಮತ್ತು ಅನ್ವಯಿಸಿಕೊಳ್ಳಬೇಕು ಎಂಬುದು ನಿಮ್ಮ ಅಪೇಕ್ಷೆಯಾಗಿದೆ. ಇದನ್ನು ಸಾಧಿಸಲಿಕ್ಕಾಗಿ ಪುನರಾವರ್ತನೆಯ ಸದುಪಯೋಗವನ್ನು ಮಾಡಿರಿ.

ಆದರೆ ನೀವು ಮುಖ್ಯಾಂಶಗಳನ್ನು ವಿಪರೀತವಾಗಿ ಪುನರಾವರ್ತಿಸುವುದಾದರೆ, ನಿಮ್ಮ ಸಭಿಕರ ಗಮನವನ್ನು ನೀವು ಕಳೆದುಕೊಳ್ಳಬಹುದು. ವಿಶೇಷವಾಗಿ ಒತ್ತಿಹೇಳಲು ಯೋಗ್ಯವಾಗಿರುವ ಅಂಶಗಳನ್ನು ಜಾಗರೂಕತೆಯಿಂದ ಆರಿಸಿಕೊಳ್ಳಿರಿ. ಸಾಮಾನ್ಯವಾಗಿ ಇವು ನಿಮ್ಮ ಭಾಷಣಕ್ಕೆ ಆಧಾರವಾಗಿರುವ ಮುಖ್ಯಾಂಶಗಳಾಗಿರುತ್ತವೆ. ಆದರೆ ನಿಮ್ಮ ಸಭಿಕರಿಗೆ ವಿಶೇಷ ಬೆಲೆಯುಳ್ಳದ್ದಾಗಿ ಪರಿಣಮಿಸುವ ಬೇರೆ ವಿಚಾರಗಳೂ ಇದರಲ್ಲಿ ಒಳಗೂಡಿರಬಹುದು.

ಪುನರಾವರ್ತನೆಯನ್ನು ಉಪಯೋಗಿಸಲಿಕ್ಕಾಗಿ, ಪ್ರಥಮವಾಗಿ ನೀವು ನಿಮ್ಮ ಮುಖ್ಯಾಂಶಗಳನ್ನು ಪೀಠಿಕೆಯಲ್ಲಿ ಬರೆದಿಡಬಹುದು. ಇದನ್ನು, ನೀವು ಆವರಿಸಲಿರುವ ವಿಷಯದ ವಿಸ್ತಾರವಾದ ಹೊರನೋಟವನ್ನು ಕೊಡುವ ಚಿಕ್ಕ ಹೇಳಿಕೆಗಳು, ಪ್ರಶ್ನೆಗಳು ಅಥವಾ ಬಗೆಹರಿಸಬೇಕಾದ ಸಮಸ್ಯೆಗಳನ್ನು ಮುಂದಿಡುವಂಥ ಚಿಕ್ಕ ಉದಾಹರಣೆಗಳನ್ನು ಉಪಯೋಗಿಸಿ ಮಾಡಬಹುದು. ಎಷ್ಟು ಮುಖ್ಯಾಂಶಗಳಿವೆ ಎಂಬುದನ್ನು ನೀವು ಹೇಳಿ, ಅವುಗಳನ್ನು ಸಂಖ್ಯಾನುಕ್ರಮದಲ್ಲಿ ಪಟ್ಟಿಮಾಡಬಹುದು. ಬಳಿಕ ಅವುಗಳಲ್ಲಿ ಪ್ರತಿ ಅಂಶವನ್ನು ನಿಮ್ಮ ಭಾಷಣದ ಪ್ರಧಾನ ಭಾಗದಲ್ಲಿ ವಿವರಿಸಿ ಹೇಳಿರಿ. ಮುಂದಿನ ಮುಖ್ಯಾಂಶಕ್ಕೆ ಹೋಗುವ ಮೊದಲು ಪ್ರತಿಯೊಂದು ಮುಖ್ಯಾಂಶವನ್ನು ಪುನಃ ಹೇಳುವ ಮೂಲಕ, ನಿಮ್ಮ ಭಾಷಣದ ಪ್ರಧಾನ ಭಾಗದಲ್ಲಿ ಒತ್ತಿಹೇಳುವಿಕೆಯನ್ನು ಬಲಪಡಿಸಸಾಧ್ಯವಿದೆ. ಅಥವಾ, ಮುಖ್ಯಾಂಶದ ಅನ್ವಯವು ಸೇರಿರುವ ಒಂದು ಉದಾಹರಣೆಯನ್ನು ಉಪಯೋಗಿಸುವ ಮೂಲಕವೂ ಇದನ್ನು ಸಾಧಿಸಸಾಧ್ಯವಿದೆ. ಮುಖ್ಯಾಂಶಗಳನ್ನು ಪುನಃ ತಿಳಿಸುವ, ವೈದೃಶ್ಯಗಳನ್ನು ಉಪಯೋಗಿಸುವ ಮೂಲಕ ಅವುಗಳನ್ನು ಎತ್ತಿತೋರಿಸುವ, ಎಬ್ಬಿಸಲ್ಪಟ್ಟ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವ, ಅಥವಾ ಎಬ್ಬಿಸಲ್ಪಟ್ಟ ಸಮಸ್ಯೆಗಳಿಗೆ ಸಂಕ್ಷಿಪ್ತ ಪರಿಹಾರಗಳನ್ನು ಒದಗಿಸುವಂಥ ಒಂದು ಸಮಾಪ್ತಿಯನ್ನು ಉಪಯೋಗಿಸುವ ಮೂಲಕ, ನಿಮ್ಮ ಮುಖ್ಯಾಂಶಗಳಿಗೆ ಇನ್ನೂ ಹೆಚ್ಚಿನ ಒತ್ತನ್ನು ನೀಡಸಾಧ್ಯವಿದೆ.

ಇದಕ್ಕೆ ಕೂಡಿಸಿ, ಒಬ್ಬ ಅನುಭವಿ ಭಾಷಣಕಾರನು ತನ್ನ ಸಭಿಕರಲ್ಲಿ ಯಾವ ಯಾವ ರೀತಿಯ ವ್ಯಕ್ತಿಗಳಿದ್ದಾರೆಂಬುದನ್ನು ಜಾಗರೂಕತೆಯಿಂದ ಗಮನಿಸುತ್ತಾನೆ. ಅವರಲ್ಲಿ ಕೆಲವರಿಗೆ ಒಂದು ವಿಚಾರವನ್ನು ಗ್ರಹಿಸುವುದು ಕಷ್ಟಕರವಾಗಿರುವುದಾದರೆ, ಭಾಷಣಕಾರನಿಗೆ ಅದು ತಿಳಿದಿರುತ್ತದೆ. ಆ ಅಂಶವು ಪ್ರಾಮುಖ್ಯವಾಗಿರುವಲ್ಲಿ ಅವನು ಅದನ್ನು ಪುನಃ ಆವರಿಸುತ್ತಾನೆ. ಆದರೂ, ಅವೇ ಪದಗಳನ್ನು ಪುನರಾವರ್ತಿಸುವುದು ಅವನ ಉದ್ದೇಶವನ್ನು ಸಾಧಿಸದಿರಬಹುದು. ಬೋಧಿಸುವುದರಲ್ಲಿ ಅದಕ್ಕಿಂತ ಹೆಚ್ಚಿನ ಸಂಗತಿಯು ಒಳಗೂಡಿದೆ. ಅವನು ಹೊಂದಿಸಿಕೊಳ್ಳುವವನಾಗಿರಬೇಕು. ಪೂರ್ವಸಿದ್ಧತೆಯಿಲ್ಲದೆ ಅವನು ತನ್ನ ಭಾಷಣಕ್ಕೆ ಕೆಲವೊಂದು ವಿಷಯಗಳನ್ನು ಕೂಡಿಸಬೇಕಾಗಿ ಬರಬಹುದು. ಈ ರೀತಿಯಲ್ಲಿ ನೀವು ನಿಮ್ಮ ಸಭಿಕರ ಆವಶ್ಯಕತೆಗಳನ್ನು ಸಂಬೋಧಿಸಿ ಮಾತನಾಡಲು ಕಲಿಯುವುದು, ನೀವು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾದ ಬೋಧಕರಾಗಿದ್ದೀರಿ ಎಂಬುದನ್ನು ನಿರ್ಣಯಿಸುವುದು.

ಇದನ್ನು ಯಾವಾಗ ಮಾಡುವುದು?

  • ಒಂದು ಪ್ರಧಾನ ಅಂಶವನ್ನು ಹೇಳಿದ ಕೂಡಲೆ ಅಥವಾ ಒಂದು ಮುಖ್ಯ ವಿಚಾರವನ್ನು ಪೂರ್ತಿಯಾಗಿ ವಿವರಿಸಿ ಹೇಳಿದ ಮೇಲೆ.

  • ನಿಮ್ಮ ಸಂಭಾಷಣೆಯ ಅಥವಾ ಭಾಷಣದ ಸಮಾಪ್ತಿಯಲ್ಲಿ.

  • ನಿಮ್ಮ ಕೇಳುಗರು ಕೆಲವು ಪ್ರಮುಖ ಅಂಶಗಳನ್ನು ಗ್ರಹಿಸುವುದನ್ನು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತಿದ್ದಾರೆ ಎಂದು ನೀವು ವಿವೇಚಿಸಿ ತಿಳಿದಾಗ.

  • ಪುನರ್ಭೇಟಿ ಮತ್ತು ಬೈಬಲ್‌ ಅಧ್ಯಯನಗಳಲ್ಲಿ ಪ್ರಾಯಶಃ ಅನೇಕ ದಿನಗಳ ಮತ್ತು ವಾರಗಳ ಅಂತರದಲ್ಲಿ, ಒಂದಕ್ಕಿಂತ ಹೆಚ್ಚು ಬಾರಿ.

ಅಭ್ಯಾಸಪಾಠಗಳು: (1) ಕ್ಷೇತ್ರ ಶುಶ್ರೂಷೆಯಲ್ಲಿ ನೀವು ಪ್ರಥಮ ಬಾರಿ ಭೇಟಿಯಾದಂಥ ಒಬ್ಬ ವ್ಯಕ್ತಿಯೊಂದಿಗೆ ಸಂಭಾಷಣೆಯನ್ನು ಮುಗಿಸುವಾಗ, ನೀವು ಚರ್ಚಿಸಿದ ಮತ್ತು ಅವನು ನೆನಪಿನಲ್ಲಿಟ್ಟುಕೊಳ್ಳುವಂತೆ ನೀವು ಬಯಸುವ ಕೇವಲ ಒಂದು ಮುಖ್ಯಾಂಶವನ್ನು ಪುನರಾವರ್ತಿಸಿರಿ. (2) ಒಂದು ಪುನರ್ಭೇಟಿಯನ್ನು ಮುಗಿಸುವಾಗ, ನಿಮ್ಮ ಚರ್ಚೆಯಿಂದ ಆ ಆಸಕ್ತನು ನೆನಪಿನಲ್ಲಿಟ್ಟುಕೊಳ್ಳುವಂತೆ ಒಂದೊ ಎರಡೊ ಮುಖ್ಯಾಂಶಗಳನ್ನು ಪುನಃ ಹೇಳಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ