ಫಲಕಾರಿಯಾಗುವ ನಿರೂಪಣೆಗಳನ್ನು ಬಳಸಿ
1. ಒಂದನೇ ಶತಮಾನದ ಕ್ರೈಸ್ತರು ಜನರಿಗೆ ತಕ್ಕಂಥ ನಿರೂಪಣೆಗಳನ್ನು ಬಳಸಿದ್ದರಿಂದ ನಾವೇನು ಕಲೀಬಹುದು?
1 ಒಂದನೇ ಶತಮಾನದ ಕ್ರೈಸ್ತರು ವಿಭಿನ್ನ ಸಂಸ್ಕೃತಿ, ಧರ್ಮಗಳ ಜನರಿಗೆ ಸುವಾರ್ತೆ ಸಾರಿದರು. (ಕೊಲೊ. 1:23) ಅವರು ಎಲ್ಲರಿಗೂ ತಿಳಿಸುತ್ತಿದ್ದ ವಿಷ್ಯ ಒಂದೇ. ದೇವರ ರಾಜ್ಯದ ಬಗ್ಗೆ. ಹಾಗಿದ್ದರೂ ಅವರು ಬಳಸುತ್ತಿದ್ದ ನಿರೂಪಣೆ ಜನರಿಂದ ಜನರಿಗೆ ಭಿನ್ನವಾಗಿತ್ತು. ಉದಾ: ಧರ್ಮಶಾಸ್ತ್ರವನ್ನು ಆಳವಾಗಿ ಗೌರವಿಸುತ್ತಿದ್ದ ಯೆಹೂದ್ಯರೊಂದಿಗೆ ಪೇತ್ರನು ಯೋವೇಲನ ಪ್ರವಾದನೆಯ ಬಗ್ಗೆ ತಿಳಿಸುತ್ತಾ ಮಾತು ಆರಂಭಿಸಿದ. (ಅ. ಕಾ. 2:14-17) ಆದರೆ ಗ್ರೀಕರೊಂದಿಗೆ ಪೌಲನು ಮಾತಾಡಿದ ವಿಧ ಭಿನ್ನವಾಗಿತ್ತು. ಇದನ್ನು ಅಪೊಸ್ತಲರ ಕಾರ್ಯಗಳು 17:22-31ರಲ್ಲಿ ನೋಡಬಹುದು. ಇಂದು ಸಹ, ಕೆಲವು ಸೇವಾಕ್ಷೇತ್ರದಲ್ಲಿ ಹೆಚ್ಚಿನ ಜನರು ಬೈಬಲನ್ನು ಗೌರವಿಸುತ್ತಾರೆ. ಅಂಥ ಕ್ಷೇತ್ರದಲ್ಲಿ ನಾವು ನೇರವಾಗಿ ಬೈಬಲನ್ನು ತೆರೆದೇ ಮಾತಾಡಬಹುದು. ಆದರೆ ಕ್ರೈಸ್ತರಲ್ಲದವರೊಂದಿಗೆ ಇಲ್ಲವೆ ಬೈಬಲಿನಲ್ಲಾಗಲಿ ಧರ್ಮದಲ್ಲಾಗಲಿ ಆಸಕ್ತಿ ಇಲ್ಲದಂಥ ಜನರೊಂದಿಗೆ ಮಾತಾಡುವಾಗ ಜಾಗ್ರತೆ ವಹಿಸಬೇಕು.
2. ಜನರೊಂದಿಗೆ ಮಾತಾಡುವಾಗ ತಿಂಗಳ ಸಾಹಿತ್ಯ ನೀಡುವಿಕೆಯನ್ನು ಹೇಗೆ ಉಪಯೋಗಿಸಬೇಕು?
2 ತಿಂಗಳ ಸಾಹಿತ್ಯ ನೀಡುವಿಕೆಯನ್ನು ಉಪಯೋಗಿಸಿ: ಈ ಸೇವಾ ವರ್ಷದಲ್ಲಿ “ಪ್ರಕಟಣೆಗಳು” ಎಂಬ ವಿಭಾಗದಲ್ಲಿ ಬದಲಾವಣೆ ಇದೆ. ಪ್ರತಿ ತಿಂಗಳಿಗೆ ಬೇರೆ ಬೇರೆ ಸಾಹಿತ್ಯ ನೀಡುವಿಕೆ ಇರುವುದಿಲ್ಲ. ಎರಡೆರಡು ತಿಂಗಳ ಸಾಹಿತ್ಯ ನೀಡುವಿಕೆಯನ್ನು ಒಟ್ಟಿಗೆ ಕೊಡಲಾಗುತ್ತದೆ. ಇದರಲ್ಲಿ ಪತ್ರಿಕೆಗಳು, ಕರಪತ್ರಗಳು ಮತ್ತು ಕಿರುಹೊತ್ತಗೆಗಳು ಇರುತ್ತವೆ. ಬೈಬಲಿನಲ್ಲಿ ಆಸಕ್ತಿ ಇಲ್ಲದ ಜನರು ಸೇವೆಯಲ್ಲಿ ಸಿಗುವಾಗ ಇವುಗಳಿಂದ ನೀವು ಓದಿರುವ ಆಸಕ್ತಿಕರ ವಿಷ್ಯವೊಂದನ್ನು ಅವರೊಂದಿಗೆ ಮಾತಾಡಿ. ಆರಂಭದ ಭೇಟಿಯಲ್ಲಿ ಬೈಬಲನ್ನು ತೆರೆದು ಮಾತಾಡಿಲ್ಲ ಅಥವಾ ಬೈಬಲಿನ ಬಗ್ಗೆ ಏನೂ ತಿಳಿಸಿಲ್ಲ ಎಂದು ಸುಮ್ಮನಿದ್ದು ಬಿಡಬೇಡಿ. ಮನೆಯವರು ಆಸಕ್ತಿ ತೋರಿಸುವಲ್ಲಿ ಪುನರ್ಭೇಟಿ ಮಾಡಿ. ಸೃಷ್ಟಿಕರ್ತನಲ್ಲಿ ಮತ್ತು ಆತನ ವಾಕ್ಯದಲ್ಲಿ ಅವರು ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿ. ಆದರೆ ಬೈಬಲನ್ನು ಗೌರವಿಸುವ ಜನರೊಂದಿಗೆ ಮಾತಾಡುವಾಗ ನೇರವಾಗಿ ಸಾಹಿತ್ಯವನ್ನು ತೋರಿಸಿ ಅದರಿಂದಲೇ ವಿಷ್ಯವನ್ನು ತಿಳಿಸಬಹುದು. ತಿಂಗಳ ನೀಡುವಿಕೆ ಏನೇ ಆಗಿರಲಿ ಬೈಬಲ್ ಬೋಧಿಸುತ್ತದೆ ಪುಸ್ತಕ ಇಲ್ಲವೆ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಗಳನ್ನು ಯಾವಾಗ ಬೇಕಾದರೂ ನೀಡಬಹುದು. ಮುಖ್ಯ ವಿಷ್ಯವೇನೆಂದರೆ ಜನರಿಗೆ ಆಸಕ್ತಿ ಹುಟ್ಟುವಂಥ ನಿರೂಪಣೆಯನ್ನು ಉಪಯೋಗಿಸಿ.
3. ಜನರ ಹೃದಯ ನೆಲದಂತಿರುವುದು ಯಾವ ಅರ್ಥದಲ್ಲಿ?
3 ಹೃದಯವೆಂಬ ನೆಲವನ್ನು ಸಿದ್ಧಗೊಳಿಸಿ: ಜನರ ಹೃದಯ ನೆಲದಂತಿದೆ. (ಲೂಕ 8:15) ಕೆಲವು ನೆಲಕ್ಕೆ ಹೆಚ್ಚಿನ ಸಿದ್ಧತೆ ಅಗತ್ಯ. ಅಂತೆಯೇ ಬೈಬಲ್ ಸತ್ಯವೆಂಬ ಬೀಜ ಮೊಳೆತು ಬೇರೂರಬೇಕಾದರೆ ಕೆಲವರ ಹೃದಯಕ್ಕೆ ಹೆಚ್ಚಿನ ಸಿದ್ಧತೆ ಅಗತ್ಯ. ಒಂದನೇ ಶತಮಾನದ ಕ್ರೈಸ್ತರು ಎಲ್ಲ ರೀತಿಯ ನೆಲದಲ್ಲಿ ಸತ್ಯದ ಬೀಜ ಬಿತ್ತಿ ಫಲ ಕೊಯ್ದರು. ಅದವರಿಗೆ ಸಂತೃಪ್ತಿ, ಆನಂದ ತಂದಿತು. (ಅ. ಕಾ. 13:48, 52) ನಾವು ಸಹ ಜನರಿಗೆ ತಕ್ಕಂತೆ ನಿರೂಪಣೆಯನ್ನು ಬದಲಾಯಿಸೋಣ. ಆಗ ಯಶಸ್ಸು ನಮ್ಮದಾಗುವುದು.