ಬೀದಿ ಸಾಕ್ಷಿಕಾರ್ಯ ಫಲಕಾರಿ ಆಗಲು . . .
1. ನಾವು ಯೇಸುವನ್ನು ಅನುಕರಿಸುವ ಒಂದು ವಿಧ ಯಾವುದು?
1 ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಜನರು ಸಿಕ್ಕಲ್ಲೆಲ್ಲಾ ಅಂದರೆ ದಾರಿಯಲ್ಲಾಗಲಿ ಸಾರ್ವಜನಿಕ ಸ್ಥಳದಲ್ಲಾಗಲಿ ಮಾತಾಡಲು ಹಿಂಜರಿಯಲಿಲ್ಲ. (ಲೂಕ 9:57-61; ಯೋಹಾ. 4:7) ತನ್ನಲ್ಲಿದ್ದ ಪ್ರಾಮುಖ್ಯ ಸಂದೇಶವನ್ನು ಸಾಧ್ಯವಿರುವಷ್ಟು ಜನರಿಗೆ ತಿಳಿಸಬೇಕು ಎನ್ನುವುದು ಅವನ ಬಯಕೆಯಾಗಿತ್ತು. ಇಂದು ಸಹ ದೈವಿಕ ವಿವೇಕವನ್ನು ಗಳಿಸಲು ಜನರಿಗೆ ಸಹಾಯ ಮಾಡುವ ಅತ್ಯುತ್ತಮ ವಿಧಾನ ಬೀದಿ ಸಾಕ್ಷಿಕಾರ್ಯ. (ಜ್ಞಾನೋ. 1:20) ಇದರಲ್ಲಿ ನಾವು ಸಫಲರಾಗಬಲ್ಲೆವು. ಅದಕ್ಕಾಗಿ ಜನರನ್ನು ಭೇಟಿಯಾಗಲು ನಾವೇ ಮುಂದಾಗಬೇಕು ಮತ್ತು ವಿವೇಚನೆ ಉಪಯೋಗಿಸಬೇಕು.
2. ಬೀದಿ ಸಾಕ್ಷಿಕಾರ್ಯದಲ್ಲಿ ಏನೆಲ್ಲ ಮಾಡಲು ನಾವು ಮುಂದಾಗಬೇಕು?
2 ಮುಂದಾಗಬೇಕು: ಜನರು ನಮ್ಮ ಬಳಿ ಬರಲಿ, ಆಗ ಮಾತಾಡುವ ಎಂದು ನೆನಸಿ ಒಂದೇ ಸ್ಥಳದಲ್ಲಿ ನಿಂತಿರುವುದು ಅಥವಾ ಕುಳಿತಿರುವುದು ಸೂಕ್ತವಲ್ಲ. ನಾವಾಗಿ ಜನರ ಬಳಿ ಹೋಗಿ ಮಾತಾಡಲು ಮುಂದಾಗಬೇಕು. ಮೊದಲಾಗಿ ನಗೆ ಮುಖ ಬೀರಿ. ಮಾತಾಡುವಾಗ ಅಲ್ಲಿಲ್ಲಿ ನೋಡದೆ ಜನರ ಮುಖ ನೋಡಿ ಸ್ನೇಹದಿಂದ ಮಾತಾಡಿ. ನಿಮ್ಮೊಂದಿಗೆ ಇತರ ಪ್ರಚಾರಕರು ಇರುವುದಾದರೆ ಎಲ್ಲರು ಒಟ್ಟಿಗೆ ಹೋಗಿ ಮಾತಾಡಬೇಡಿ. ಒಬ್ಬೊಬ್ಬರೆ ಪ್ರತ್ಯೇಕವಾಗಿ ಹೋಗಿ ಸಾಕ್ಷಿನೀಡಿ. ಆಸಕ್ತಿ ಕಂಡುಬರುವಲ್ಲಿ ಪುನಃ ಭೇಟಿಮಾಡಲು ಸಹ ಮುಂದಾಗಿ, ತಡಮಾಡಬೇಡಿ. ಸಾಧ್ಯವಾದರೆ, ಸಂಭಾಷಣೆಯ ಕೊನೆಯಲ್ಲಿ ಆ ವ್ಯಕ್ತಿಯನ್ನು ಪುನಃ ಎಲ್ಲಿ ಭೇಟಿಯಾಗಬಹುದು ಎಂದು ಕೇಳಿ. ಕೆಲವು ಪ್ರಚಾರಕರು ಯಾವಾಗಲೂ ಒಂದೇ ಸ್ಥಳದಲ್ಲಿ ಬೀದಿ ಸಾಕ್ಷಿಕಾರ್ಯ ಮಾಡುತ್ತಾರೆ. ಒಮ್ಮೆ ಭೇಟಿಯಾದ ವ್ಯಕ್ತಿಗಳನ್ನೇ ಪುನಃ ಪುನಃ ಭೇಟಿಯಾಗಿ ಅವರ ಆಸಕ್ತಿಗೆ ನೀರೆರೆಯಲು ಇದು ಸಾಧ್ಯಮಾಡಿದೆ.
3. ಬೀದಿ ಸಾಕ್ಷಿಕಾರ್ಯದಲ್ಲಿ ವಿವೇಚನೆ ಉಪಯೋಗಿಸುವುದು ಹೇಗೆ?
3 ವಿವೇಚನೆ ಉಪಯೋಗಿಸಿ: ಎಲ್ಲಿ ನಿಲ್ಲಬೇಕು, ಯಾರನ್ನು ಮಾತಾಡಿಸಬೇಕು ಎನ್ನುವ ವಿಷ್ಯದಲ್ಲಿ ವಿವೇಚನೆ ಉಪಯೋಗಿಸಿ. ದಾರಿಹೋಕರಲ್ಲಿ ಪ್ರತಿಯೊಬ್ಬರೊಂದಿಗೆ ಮಾತಾಡಬೇಕೆಂದಿಲ್ಲ. ಸುತ್ತುಮುತ್ತು ಗಮನವಿರಲಿ. ಒಬ್ಬ ವ್ಯಕ್ತಿ ಗಡಿಬಿಡಿಯಿಂದ ಹೋಗುತ್ತಿದ್ದರೆ ಮಾತಾಡಬೇಡಿ. ಸಮಸ್ಯೆ ಉಂಟುಮಾಡುವವನಂತೆ ಕಂಡರೆ ಜಾಗ್ರತೆ ವಹಿಸಿ. ಅಂಗಡಿ ಮುಂದೆ ನಿಂತು ಸಾಕ್ಷಿ ನೀಡುತ್ತಿರುವಲ್ಲಿ ಅಂಗಡಿ ಮಾಲೀಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಅಂಗಡಿಗೆ ಹೋಗುತ್ತಿರುವ ಜನರಿಗೆ ಸಾಕ್ಷಿನೀಡಬೇಡಿ. ಅಂಗಡಿಯಿಂದ ಹೊರಬರುತ್ತಿರುವವರಿಗೆ ಸಾಕ್ಷಿನೀಡಿ. ಜನರ ಬಳಿ ಹೋಗಿ ಮಾತಾಡುವಾಗ ಅವರನ್ನು ಒಮ್ಮೆಲೆ ಹೆದರಿಸಿ ಬಿಡುವ ರೀತಿಯಲ್ಲಿ ಹೋಗಬೇಡಿ. ಮಾತ್ರವಲ್ಲ, ಯಾವಾಗ ಪತ್ರಿಕೆ ನೀಡಬೇಕೆಂದು ಸಹ ವಿವೇಚನೆ ಉಪಯೋಗಿಸಿ. ಸ್ವಲ್ಪವೇ ಆಸಕ್ತಿ ತೋರಿಸುವಲ್ಲಿ ಪತ್ರಿಕೆಯ ಬದಲು ಕರಪತ್ರ ನೀಡಿ.
4. ಬೀದಿ ಸಾಕ್ಷಿಕಾರ್ಯ ಏಕೆ ನಿಜಕ್ಕೂ ಆನಂದಕರ ಹಾಗೂ ಫಲಕಾರಿ?
4 ಕಡಿಮೆ ಸಮಯದಲ್ಲಿ ಸತ್ಯದ ಅನೇಕ ಬೀಜಗಳನ್ನು ಬಿತ್ತಲು ಬೀದಿ ಸಾಕ್ಷಿಕಾರ್ಯ ಸಾಧ್ಯಮಾಡುತ್ತದೆ. (ಪ್ರಸಂ. 11:6) ಮನೆಮನೆ ಸಾಕ್ಷಿಕಾರ್ಯದಲ್ಲಿ ಭೇಟಿಯಾಗಲು ಸಾಧ್ಯವಾಗದ ಜನರನ್ನು ಬೀದಿ ಸಾಕ್ಷಿಕಾರ್ಯದಲ್ಲಿ ಭೇಟಿಯಾಗಲು ಸಾಧ್ಯ. ಇದು ನಿಜಕ್ಕೂ ಆನಂದಕರ ಹಾಗೂ ಫಲಕಾರಿ. ನೀವೇಕೆ ಇದರಲ್ಲಿ ಭಾಗವಹಿಸಲು ಏರ್ಪಾಡು ಮಾಡಬಾರದು?