ಸಮಯಪಾಲನೆ ರೂಢಿ ಮಾಡಿಕೊಳ್ಳಿ
1. ಯೆಹೋವನು ನಮಗೆ ಯಾವ ಮಾದರಿಯನ್ನು ಇಟ್ಟಿದ್ದಾನೆ?
1 ಸಮಯಪಾಲನೆ ಮಾಡುವುದನ್ನು ನಾವು ಯೆಹೋವನನ್ನು ನೋಡಿ ಕಲಿಯಬೇಕು. ಉದಾಹರಣೆಗೆ, ಆತನು ತಕ್ಕ ಸಮಯಕ್ಕೆ ತನ್ನ ಸೇವಕರಿಗೆ ಸಹಾಯ ಮಾಡುತ್ತಾನೆ. (ಇಬ್ರಿ. 4:16) ಆಧ್ಯಾತ್ಮಿಕ ‘ಆಹಾರವನ್ನೂ ತಕ್ಕ ಸಮಯಕ್ಕೆ’ ಕೊಡುತ್ತಿದ್ದಾನೆ. (ಮತ್ತಾ. 24:45) ಆದ್ದರಿಂದ ತನ್ನ ಕೋಪದ ದಿನವನ್ನು ತಾನು ನಿರ್ಧರಿಸಿರುವ ಸಮಯದಲ್ಲೇ ತರುತ್ತಾನೆ. (ಹಬ. 2:3) ಹೇಳಿದ ಸಮಯಕ್ಕೆ ಸರಿಯಾಗಿ ಯೆಹೋವನು ಹೀಗೆ ತನ್ನ ಮಾತನ್ನು ಪೂರೈಸುವುದರಿಂದ ನಮಗೆಷ್ಟೊಂದು ಪ್ರಯೋಜನ ಇದೆ ಅಲ್ವಾ! (ಕೀರ್ತ. 70:5) ಆದರೆ ಪ್ರಶ್ನೆ, ನಾವು ಸಮಯಪಾಲನೆ ಮಾಡುತ್ತಿದ್ದೇವಾ? ನಮಗೆ ತುಂಬ ಕೆಲಸ ಇರುವುದರಿಂದ ಮತ್ತು ನಾವು ಸಾಮಾನ್ಯ ಮನುಷ್ಯರಾಗಿರುವುದರಿಂದ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡುವುದು ಸ್ವಲ್ಪ ಕಷ್ಟನೇ. ಆದರೂ ನಾವ್ಯಾಕೆ ಸಮಯಪಾಲನೆಯನ್ನು ರೂಢಿ ಮಾಡಿಕೊಳ್ಳಬೇಕು?
2. ನಾವು ಸಮಯಪಾಲನೆ ಮಾಡುವುದರಿಂದ ಯೆಹೋವನಿಗೆ ಹೇಗೆ ಮಹಿಮೆ ತರುತ್ತೇವೆ?
2 ಈ ಕಡೇ ದಿವಸಗಳಲ್ಲಿ ಸ್ವಾರ್ಥಿಗಳೂ, ಶಿಸ್ತು ಇಲ್ಲದವರು ಹೆಚ್ಚುತ್ತಿರುವುದರಿಂದ ಸಮಯಪಾಲಕರು ಸಿಗುವುದು ತುಂಬ ಅಪರೂಪ ಆಗಿಬಿಟ್ಟಿದೆ. (2 ತಿಮೊ. 3:1-3) ಆದರೆ ಕ್ರೈಸ್ತರಾದ ನಾವು ಕೆಲಸಕ್ಕೆ ಹೋಗುವಾಗ, ಯಾರನ್ನಾದರೂ ಇಂಥ ಸಮಯದಲ್ಲಿ ಭೇಟಿಯಾಗುತ್ತೇವೆ ಅಂತ ಮಾತು ಕೊಟ್ಟಾಗ ಸಮಯಕ್ಕೆ ಸರಿಯಾಗಿ ಹೋಗುತ್ತೇವೆ. ಜನರು ಇದನ್ನು ಗಮನಿಸುತ್ತಾರೆ, ಇದು ಯೆಹೋವನಿಗೆ ಮಹಿಮೆ ತರುತ್ತದೆ. (1 ಪೇತ್ರ 2:12) ಕೆಲಸಕ್ಕೇ ನಾವು ಸಮಯಕ್ಕೆ ಸರಿಯಾಗಿ ಹೋಗುತ್ತೇವೆ ಅಂದ ಮೇಲೆ ಕೂಟಕ್ಕೂ ಮತ್ತು ಸೇವೆಗೂ ಹೋಗಬೇಕಲ್ಲವಾ? ಆರಂಭದ ಗೀತೆ ಮತ್ತು ಪ್ರಾರ್ಥನೆ ಶುರುವಾಗುವ ಮುಂಚೆಯೇ ನಾವು ಕೂಟಗಳಿಗೆ ಹೋಗುವುದಾದರೆ ತುಂಬ ಚೆನ್ನಾಗಿರುತ್ತದೆ. ಹೀಗೆ ಮಾಡಿದರೆ ನಮ್ಮ ದೇವರಾದ ಯೆಹೋವನನ್ನು ಅನುಕರಿಸಲು ಇಷ್ಟಪಡುತ್ತೇವೆ ಅಂತ ತೋರಿಸಿಕೊಡುತ್ತೇವೆ.—1 ಕೊರಿಂ. 14:33, 40.
3. ಸಮಯಪಾಲನೆ ಮಾಡುವ ಮೂಲಕ ಇತರರನ್ನು ಹೇಗೆ ಗೌರವಿಸಬಹುದು?
3 ಸಮಯಪಾಲನೆ ಮಾಡುವ ಮೂಲಕ ನಾವು ಇತರರನ್ನು ಗೌರವಿಸುತ್ತೇವೆ. (ಫಿಲಿ. 2:3, 4) ಉದಾಹರಣೆಗೆ, ನಮ್ಮ ಸಭಾ ಕೂಟಗಳಿಗೆ ಅಥವಾ ಕ್ಷೇತ್ರ ಸೇವೆಯ ಕೂಟಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವುದಾದರೆ ನಮ್ಮ ಸಹೋದರರಿಗೆ ಅಡಚಣೆಯಾಗುವುದಿಲ್ಲ. ಆದರೆ ನಾವು ಯಾವಾಗಲೂ ತಡವಾಗಿ ಬರುವುದಾದರೆ ‘ನಮಗೇನು ಕೆಲಸ ಇಲ್ಲವಾ? ಬರೀ ಇವರಿಗೆ ಮಾತ್ರನಾ ಕೆಲಸ ಇರೋದು’ ಎಂದು ಇತರರು ಯೋಚಿಸುವಂತೆ ಮಾಡುತ್ತೇವೆ. ಸಮಯಪಾಲನೆ ಮಾಡುವುದಾದರೆ ಇತರರು ನಮ್ಮನ್ನು ನಂಬುತ್ತಾರೆ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆಂದು ನಮ್ಮನ್ನು ಮೆಚ್ಚುತ್ತಾರೆ.
4. ಸಮಯಕ್ಕೆ ಸರಿಯಾಗಿ ಬರಲು ಏನು ಮಾಡಬಹುದು?
4 ನೀವು ಪದೇ ಪದೇ ತಡವಾಗಿ ಬರುತ್ತಿರುವುದಾದರೆ ಅದಕ್ಕೇನು ಕಾರಣ ಅಂತ ಯೋಚಿಸಿ. ನಿಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಲು ಯಾವ್ಯಾವ ಕೆಲಸಗಳನ್ನು ಯಾವಾಗ ಮಾಡಬೇಕೆಂದು ಬರೆದಿಡಿ. (ಪ್ರಸಂ. 3:1; ಫಿಲಿ. 1:10) ಈ ಪ್ರಯತ್ನವನ್ನು ಆಶೀರ್ವದಿಸುವಂತೆ ಯೆಹೋವನಿಗೆ ಪ್ರಾರ್ಥಿಸಿ. (1 ಯೋಹಾ. 5:14) ಹೀಗೆ ಸಮಯಪಾಲನೆ ಮಾಡುವ ಮೂಲಕ ದೇವರನ್ನೂ ನೆರೆಯವರನ್ನೂ ಪ್ರೀತಿಸಬೇಕೆಂಬ ಅತಿ ಪ್ರಾಮುಖ್ಯ ನಿಯಮಗಳಿಗೆ ವಿಧೇಯರಾಗಿ.—ಮತ್ತಾ. 22:37-39.