2 ತಿಮೊತಿ
2 ಆದುದರಿಂದ ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ಅಪಾತ್ರ ದಯೆಯಲ್ಲಿ ಬಲವನ್ನು ಹೊಂದುತ್ತಾ ಇರು. 2 ಅನೇಕ ಸಾಕ್ಷಿಗಳ ಬೆಂಬಲದಿಂದ ನೀನು ನನ್ನಿಂದ ಕೇಳಿಸಿಕೊಂಡ ಸಂಗತಿಗಳನ್ನು ಇತರರಿಗೆ ಬೋಧಿಸಲು ತಕ್ಕಷ್ಟು ಅರ್ಹರಾಗಿರುವಂಥ ನಂಬಿಗಸ್ತ ಪುರುಷರಿಗೆ ಒಪ್ಪಿಸಿಕೊಡು. 3 ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಂತೆ ಕಷ್ಟವನ್ನು ಅನುಭವಿಸುವುದರಲ್ಲಿ ನಿನ್ನ ಭಾಗವನ್ನು ವಹಿಸಿಕೊ. 4 ಸೈನಿಕನಾಗಿ ಸೇವೆಸಲ್ಲಿಸುತ್ತಿರುವ ಯಾವನೂ ತನ್ನನ್ನು ಸೈನಿಕನಾಗಿ ನೇಮಿಸಿಕೊಂಡವನ ಮೆಚ್ಚಿಗೆಯನ್ನು ಪಡೆಯಲಿಕ್ಕಾಗಿ ಜೀವನದ ವಾಣಿಜ್ಯ ವ್ಯವಹಾರಗಳಲ್ಲಿ ತನ್ನನ್ನು ಒಳಗೂಡಿಸಿಕೊಳ್ಳುವುದಿಲ್ಲ. 5 ಮಾತ್ರವಲ್ಲದೆ, ಯಾವನಾದರೂ ಕ್ರೀಡೆಗಳಲ್ಲಿ ಸ್ಪರ್ಧಿಸುವಾಗ ನಿಯಮಗಳಿಗನುಸಾರ ಸ್ಪರ್ಧಿಸದಿದ್ದರೆ ಅವನಿಗೆ ಕಿರೀಟವು ಸಿಕ್ಕುವುದಿಲ್ಲ. 6 ಕಷ್ಟಪಟ್ಟು ಕೆಲಸಮಾಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲ ಪಾಲುಗಾರನಾಗಬೇಕು. 7 ನಾನು ಹೇಳುತ್ತಿರುವ ಮಾತುಗಳಿಗೆ ಸತತವಾದ ಗಮನವನ್ನು ಕೊಡು; ಎಲ್ಲ ವಿಷಯಗಳಲ್ಲಿ ಕರ್ತನು ನಿನಗೆ ನಿಜವಾಗಿಯೂ ವಿವೇಚನೆಯನ್ನು ಕೊಡುವನು.
8 ನಾನು ಸಾರುವ ಸುವಾರ್ತೆಗನುಸಾರ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನು ಮತ್ತು ಅವನು ದಾವೀದನ ಸಂತತಿಯವನಾಗಿದ್ದನು ಎಂಬುದನ್ನು ಜ್ಞಾಪಕಮಾಡಿಕೊ. 9 ಈ ಸುವಾರ್ತೆಯ ಸಂಬಂಧದಲ್ಲಿಯೇ ನಾನು ದುಷ್ಕರ್ಮಿಯಂತೆ ಬೇಡಿಗಳಿಂದ ಬಂಧಿಸಲ್ಪಡುವ ಹಂತದ ವರೆಗೆ ಕಷ್ಟವನ್ನು ಅನುಭವಿಸುತ್ತಿದ್ದೇನೆ. ಹಾಗಿದ್ದರೂ ದೇವರ ವಾಕ್ಯವು ಬಂಧನದಲ್ಲಿಲ್ಲ. 10 ಈ ಕಾರಣದಿಂದಲೇ ಆರಿಸಿಕೊಳ್ಳಲ್ಪಟ್ಟವರು ಸಹ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ನಿತ್ಯವಾದ ಮಹಿಮೆಯೊಂದಿಗೆ ರಕ್ಷಣೆಯನ್ನು ಹೊಂದುವಂತೆ ನಾನು ಅವರಿಗೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುತ್ತಾ ಇದ್ದೇನೆ. 11 ಈ ಮಾತು ನಂಬತಕ್ಕದ್ದಾಗಿದೆ. ಏನೆಂದರೆ, ನಾವು ಅವನೊಂದಿಗೆ ಸತ್ತಿರುವುದಾದರೆ ನಿಶ್ಚಯವಾಗಿಯೂ ಅವನೊಂದಿಗೆ ಜೀವಿಸುವೆವು ಸಹ; 12 ನಾವು ಸಹಿಸಿಕೊಳ್ಳುತ್ತಾ ಇರುವುದಾದರೆ ಅವನೊಂದಿಗೆ ನಾವು ಸಹ ಅರಸರಾಗಿ ಆಳುವೆವು; ನಾವು ಅವನನ್ನು ಅಲ್ಲಗಳೆಯುವುದಾದರೆ ಅವನು ಸಹ ನಮ್ಮನ್ನು ಅಲ್ಲಗಳೆಯುವನು. 13 ನಾವು ಅಪನಂಬಿಗಸ್ತರಾದರೆ ಅವನು ನಂಬಿಗಸ್ತನಾಗಿಯೇ ಇರುವನು, ಏಕೆಂದರೆ ಅವನು ತನ್ನನ್ನೇ ಅಲ್ಲಗಳೆಯಲಾರನು.
14 ಈ ವಿಷಯಗಳನ್ನು ಅವರ ಜ್ಞಾಪಕಕ್ಕೆ ತರುತ್ತಾ ಇರು; ಪದಗಳ ವಿಷಯದಲ್ಲಿ ವಾಗ್ವಾದಗಳನ್ನು ಮಾಡಬಾರದೆಂದು ಅವರಿಗೆ ದೇವರ ಮುಂದೆ ಖಂಡಿತವಾಗಿ ಹೇಳು; ಇದು ಕೇಳುಗರನ್ನು ಕೆಡವುತ್ತದೆಯೇ ಹೊರತು ಯಾವ ಪ್ರಯೋಜನಕ್ಕೂ ಬಾರದು. 15 ನಿನ್ನನ್ನು ದೇವರ ಮುಂದೆ ಮೆಚ್ಚಿಗೆಯಾಗುವ ರೀತಿಯಲ್ಲಿ ಒಪ್ಪಿಸಿಕೊಳ್ಳಲು ನಿನ್ನಿಂದಾದಷ್ಟು ಶ್ರಮಿಸು; ಯಾವುದರಿಂದಲೂ ಲಜ್ಜಿತನಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವವನೂ ಆಗಿರು. 16 ಆದರೆ ಪವಿತ್ರವಾದುದನ್ನು ಹೊಲೆಮಾಡುವಂಥ ಪೊಳ್ಳು ಮಾತುಗಳಿಗೆ ದೂರವಾಗಿರು; ಏಕೆಂದರೆ ಅಂಥ ಮಾತುಗಳನ್ನಾಡುವವರು ಹೆಚ್ಚೆಚ್ಚು ಭಕ್ತಿಹೀನರಾಗುತ್ತಾ ಹೋಗುವರು 17 ಮತ್ತು ಅವರ ಮಾತು ಕೊಳಕು ಹುಣ್ಣಿನಂತೆ ಹರಡಿಕೊಳ್ಳುವುದು. ಹುಮೆನಾಯನೂ ಪಿಲೇತನೂ ಇವರಲ್ಲಿ ಸೇರಿದ್ದಾರೆ. 18 ಈ ಮನುಷ್ಯರು ಪುನರುತ್ಥಾನವು ಈಗಾಗಲೇ ಆಗಿಹೋಯಿತೆಂದು ಹೇಳುತ್ತಾ ಸತ್ಯಮಾರ್ಗದಿಂದ ಭ್ರಷ್ಟರಾಗಿದ್ದಾರೆ; ಮತ್ತು ಅವರು ಕೆಲವರ ನಂಬಿಕೆಯನ್ನು ಕೆಡಿಸುತ್ತಿದ್ದಾರೆ. 19 ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಂತೇ ಇರುತ್ತದೆ; ಆ ಅಸ್ತಿವಾರದ ಮೇಲೆ, “ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ” ಮತ್ತು “ಯೆಹೋವನ ನಾಮವನ್ನು ಹೇಳಿಕೊಳ್ಳುವ ಪ್ರತಿಯೊಬ್ಬರು ಅನೀತಿಯನ್ನು ಬಿಟ್ಟುಬಿಡಲಿ” ಎಂಬ ಮುದ್ರೆಯಿದೆ.
20 ದೊಡ್ಡ ಮನೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಅವುಗಳಲ್ಲಿ ಕೆಲವು ಗೌರವಾರ್ಹವಾದ ಉದ್ದೇಶಕ್ಕಾಗಿಯೂ ಉಳಿದವು ಗೌರವಹೀನವಾದ ಉದ್ದೇಶಕ್ಕಾಗಿಯೂ ಉಪಯೋಗಿಸಲ್ಪಡುತ್ತವೆ. 21 ಆದುದರಿಂದ ಒಬ್ಬನು ತನ್ನನ್ನು ಗೌರವಹೀನ ವಿಷಯಗಳಿಂದ ದೂರವಿಟ್ಟುಕೊಳ್ಳುವುದಾದರೆ ಅವನು ಪವಿತ್ರೀಕರಿಸಲ್ಪಟ್ಟವನೂ ತನ್ನ ಯಜಮಾನನಿಗೆ ಉಪಯುಕ್ತನೂ ಸಕಲ ಸತ್ಕ್ರಿಯೆಗಳಿಗೆ ಸಿದ್ಧನೂ ಆಗಿರುವ ಗೌರವಾರ್ಹವಾದ ಉದ್ದೇಶಕ್ಕಾಗಿರುವ ಪಾತ್ರೆಯಾಗಿರುವನು. 22 ಆದುದರಿಂದ ಯೌವನ ಸಹಜವಾದ ಇಚ್ಛೆಗಳನ್ನು ಬಿಟ್ಟು ಓಡಿಹೋಗು; ಶುದ್ಧ ಹೃದಯದಿಂದ ಕರ್ತನನ್ನು ಬೇಡಿಕೊಳ್ಳುವವರೊಂದಿಗೆ ನೀತಿ, ನಂಬಿಕೆ, ಪ್ರೀತಿ ಮತ್ತು ಶಾಂತಿ ಇವುಗಳನ್ನು ಬೆನ್ನಟ್ಟು.
23 ಇದಲ್ಲದೆ, ಬುದ್ಧಿಯಿಲ್ಲದ ಮತ್ತು ವಿಚಾರಹೀನವಾದ ಪ್ರಶ್ನೆಗಳು ಜಗಳಗಳನ್ನು ಉಂಟುಮಾಡುತ್ತವೆ ಎಂಬುದನ್ನು ತಿಳಿದವನಾಗಿದ್ದು ಅವುಗಳನ್ನು ತಿರಸ್ಕರಿಸು. 24 ಆದರೆ ಕರ್ತನ ದಾಸನು ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು; ಅವನು ಬೋಧಿಸಲು ಅರ್ಹನೂ ಕೇಡನ್ನು ಅನುಭವಿಸುತ್ತಿರುವಾಗ ತಾಳಿಕೊಳ್ಳುವವನೂ 25 ಎದುರಿಸುವವರನ್ನು ಸೌಮ್ಯಭಾವದಿಂದ ಉಪದೇಶಿಸುವವನೂ ಆಗಿರಬೇಕು; ಒಂದುವೇಳೆ ದೇವರು ಅವರಿಗೆ ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ನಡೆಸುವ ಪಶ್ಚಾತ್ತಾಪವನ್ನು ಕೊಡಬಹುದು. 26 ಆಗ ಅವರು, ತಮ್ಮನ್ನು ಪಿಶಾಚನು ತನ್ನ ಚಿತ್ತಕ್ಕಾಗಿ ಸಜೀವವಾಗಿ ಹಿಡಿದಿದ್ದಾನೆಂದು ತಿಳಿದು, ಅವನ ಉರ್ಲಿನಿಂದ ಸರಿಯಾದ ಬುದ್ಧಿಗೆ ಹಿಂದಿರುಗಿ ಬರಬಹುದು.