ಗಲಾತ್ಯ
4 ಈಗ ನಾನು ಹೇಳುವುದೇನೆಂದರೆ, ಬಾಧ್ಯಸ್ಥನು ಎಲ್ಲದ್ದಕ್ಕೆ ಒಡೆಯನಾಗಿದ್ದರೂ ಬಾಲಕನಾಗಿರುವಾಗ ಒಬ್ಬ ದಾಸನಿಗಿಂತ ಭಿನ್ನನಾಗಿರುವುದಿಲ್ಲ. 2 ಅವನ ತಂದೆಯು ಮುಂಚಿತವಾಗಿಯೇ ನೇಮಿಸಿದ ದಿನದ ವರೆಗೆ ಅವನು ಮೇಲ್ವಿಚಾರಕರ ಮತ್ತು ಮನೆವಾರ್ತೆಗಾರರ ಕೈಕೆಳಗಿರುತ್ತಾನೆ. 3 ತದ್ರೀತಿಯಲ್ಲಿ ನಾವು ಸಹ ಬಾಲಕರಾಗಿದ್ದಾಗ ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳಿಗೆ ದಾಸರಾಗಿದ್ದೆವು. 4 ಆದರೆ ಕಾಲವು ಪೂರ್ಣವಾದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು; ಅವನು ಒಬ್ಬ ಸ್ತ್ರೀಯಲ್ಲಿ ಹುಟ್ಟಿದವನಾಗಿದ್ದನು ಮತ್ತು ಧರ್ಮಶಾಸ್ತ್ರದ ಕೆಳಗಿದ್ದನು. 5 ಹೀಗೆ ಅವನು ಧರ್ಮಶಾಸ್ತ್ರದ ಕೆಳಗಿದ್ದವರನ್ನು ಕೊಂಡುಕೊಳ್ಳುವ ಮೂಲಕ ಅವರನ್ನು ವಿಮೋಚಿಸುವಂತಾಯಿತು ಮತ್ತು ನಾವು ಪುತ್ರರಾಗಿ ದತ್ತು ತೆಗೆದುಕೊಳ್ಳಲ್ಪಡುವಂತಾಯಿತು.
6 ಈಗ ನೀವು ಪುತ್ರರಾಗಿರುವುದರಿಂದ, ದೇವರು ತನ್ನ ಮಗನು ಹೊಂದಿರುವ ಪವಿತ್ರಾತ್ಮವನ್ನು ನಮ್ಮ ಹೃದಯಗಳೊಳಗೆ ಕಳುಹಿಸಿದ್ದಾನೆ ಮತ್ತು ಅದು “ಅಪ್ಪಾ, ತಂದೆಯೇ!” ಎಂದು ಕೂಗುತ್ತದೆ. 7 ಆದುದರಿಂದ ನೀನು ಇನ್ನು ದಾಸನಲ್ಲ, ಪುತ್ರನಾಗಿದ್ದೀ; ಪುತ್ರನಾಗಿರುವುದಾದರೆ ದೇವರ ಮೂಲಕ ಬಾಧ್ಯನೂ ಆಗಿದ್ದೀ.
8 ಆದರೂ ನೀವು ದೇವರನ್ನು ತಿಳಿಯದೇ ಇದ್ದ ಸಮಯದಲ್ಲಿ ಸ್ವಭಾವತಃ ದೇವರುಗಳಲ್ಲದವರಿಗೆ ದಾಸರಾಗಿದ್ದಿರಿ. 9 ಆದರೆ ಈಗ ನೀವು ದೇವರನ್ನು ತಿಳಿದುಕೊಂಡಿರುವುದರಿಂದ ಅಥವಾ ಸರಿಯಾಗಿ ಹೇಳಬೇಕಾದರೆ, ದೇವರು ನಿಮ್ಮನ್ನು ಈಗ ತಿಳಿದುಕೊಂಡಿರುವುದರಿಂದ ನೀವು ಪುನಃ ದುರ್ಬಲವೂ ದರಿದ್ರವೂ ಆಗಿರುವಂಥ ಪ್ರಾಥಮಿಕ ವಿಷಯಗಳ ಕಡೆಗೆ ತಿರುಗಿಕೊಂಡು ಪುನಃ ಅವುಗಳಿಗೆ ದಾಸರಾಗಲು ಇಷ್ಟಪಡುತ್ತಿರುವುದು ಹೇಗೆ? 10 ನೀವು ದಿನಗಳನ್ನೂ ತಿಂಗಳುಗಳನ್ನೂ ಕಾಲಗಳನ್ನೂ ವರ್ಷಗಳನ್ನೂ ಅತಿ ಜಾಗರೂಕತೆಯಿಂದ ಆಚರಿಸುತ್ತಿದ್ದೀರಿ. 11 ನಿಮ್ಮ ಸಂಬಂಧದಲ್ಲಿ ನಾನು ಪಟ್ಟ ಪ್ರಯಾಸವು ಯಾವುದೇ ಉದ್ದೇಶವಿಲ್ಲದಂತಾಯಿತೋ ಎಂದು ನಿಮ್ಮ ವಿಷಯದಲ್ಲಿ ಭಯಪಡುತ್ತೇನೆ.
12 ಸಹೋದರರೇ, ನಾನು ಸಹ ನಿಮ್ಮ ಹಾಗೆ ಇರುತ್ತಿದ್ದುದರಿಂದ ನೀವೂ ನನ್ನ ಹಾಗೆ ಆಗುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೆ ಯಾವ ತಪ್ಪನ್ನೂ ಮಾಡಲಿಲ್ಲ. 13 ನನ್ನ ಶರೀರದಲ್ಲಿ ಅಸ್ವಸ್ಥತೆಯಿದ್ದಾಗ ನಾನು ಮೊದಲ ಬಾರಿ ನಿಮಗೆ ಸುವಾರ್ತೆಯನ್ನು ಸಾರಿದೆನು ಎಂಬುದು ನಿಮಗೆ ತಿಳಿದಿದೆ. 14 ನನ್ನ ಶರೀರದ ಅಸ್ವಸ್ಥತೆಯು ನಿಮಗೊಂದು ಪರೀಕ್ಷೆಯಾಗಿತ್ತಾದರೂ ನೀವು ನನ್ನನ್ನು ಹೀನೈಸಲಿಲ್ಲ ಅಥವಾ ನನ್ನ ಮೇಲೆ ಹೇವರಿಕೆಯಿಂದ ಉಗಿಯಲಿಲ್ಲ; ಅದರ ಬದಲಿಗೆ ನೀವು ನನ್ನನ್ನು ದೇವರ ಒಬ್ಬ ದೂತನಂತೆ, ಕ್ರಿಸ್ತ ಯೇಸುವಿನಂತೆ ಬರಮಾಡಿಕೊಂಡಿರಿ. 15 ಆಗ ನಿಮಗಿದ್ದ ಸಂತೋಷವು ಎಲ್ಲಿ ಹೋಯಿತು? ಸಾಧ್ಯವಾಗಿರುತ್ತಿದ್ದರೆ ನೀವು ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಡುತ್ತಿದ್ದಿರಿ ಎಂದು ನಿಮಗೆ ಸಾಕ್ಷಿಹೇಳುತ್ತೇನೆ. 16 ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳುವುದರಿಂದ ನಿಮಗೆ ಶತ್ರುವಾಗಿ ಪರಿಣಮಿಸಿದ್ದೇನೊ? 17 ಅವರು ನಿಮ್ಮನ್ನು ಮೆಚ್ಚಿಸಲು ಹುರುಪಿನಿಂದ ಪ್ರಯತ್ನಿಸುತ್ತಿದ್ದಾರೆ; ಒಳ್ಳೇ ರೀತಿಯಲ್ಲಿ ಅಲ್ಲ. ಆದರೆ ನೀವು ಅವರನ್ನು ಹುರುಪಿನಿಂದ ಹುಡುಕುವವರಾಗುವಂತೆ ನಿಮ್ಮನ್ನು ನನ್ನಿಂದ ತಡೆಯಲು ಅವರು ಬಯಸುತ್ತಾರೆ. 18 ಆದರೂ ನಾನು ನಿಮ್ಮೊಂದಿಗಿರುವಾಗ ಮಾತ್ರವಲ್ಲದೆ ಎಲ್ಲ ಸಮಯಗಳಲ್ಲಿ ಒಳ್ಳೇ ಕಾರಣಕ್ಕಾಗಿ ನಿಮ್ಮನ್ನು ಮೆಚ್ಚಿಸಲು ಹುರುಪಿನಿಂದ ಪ್ರಯತ್ನಿಸುವುದು ನಿಮಗೆ ಒಳ್ಳೇದೇ. 19 ನನ್ನ ಚಿಕ್ಕ ಮಕ್ಕಳೇ, ಕ್ರಿಸ್ತನು ನಿಮ್ಮಲ್ಲಿ ರೂಪಿಸಲ್ಪಡುವ ತನಕ ನಾನು ನಿಮ್ಮ ವಿಷಯದಲ್ಲಿ ಪುನಃ ಪ್ರಸವವೇದನೆಪಡುತ್ತೇನೆ. 20 ಆದರೆ ನಾನು ಈಗಲೇ ನಿಮ್ಮೊಂದಿಗೆ ಉಪಸ್ಥಿತನಾಗಿದ್ದು ಬೇರೆ ರೀತಿಯಲ್ಲಿ ಮಾತಾಡುತ್ತಿದ್ದರೆ ಚೆನ್ನಾಗಿರುತ್ತಿತ್ತು. ಏಕೆಂದರೆ ನಿಮ್ಮ ವಿಷಯದಲ್ಲಿ ನಾನು ಗೊಂದಲದಲ್ಲಿದ್ದೇನೆ.
21 ಧರ್ಮಶಾಸ್ತ್ರದ ಕೆಳಗಿರಲು ಬಯಸುವವರೇ, ನೀವು ಧರ್ಮಶಾಸ್ತ್ರಕ್ಕೆ ಕಿವಿಗೊಡುವುದಿಲ್ಲವೊ? ನನಗೆ ಹೇಳಿರಿ. 22 ಉದಾಹರಣೆಗೆ, ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರು; ಒಬ್ಬನನ್ನು ಅವನು ಸೇವಕಿಯಿಂದ ಪಡೆದನು, ಮತ್ತೊಬ್ಬನನ್ನು ಸ್ವತಂತ್ರ ಸ್ತ್ರೀಯಿಂದ ಪಡೆದನು ಎಂದು ಬರೆದಿದೆ. 23 ಸೇವಕಿಯಿಂದ ಹುಟ್ಟಿದವನು ಶಾರೀರಿಕ ರೀತಿಯಲ್ಲಿ ಹುಟ್ಟಿದವನಾಗಿದ್ದಾನೆ; ಸ್ವತಂತ್ರ ಸ್ತ್ರೀಯಿಂದ ಹುಟ್ಟಿದವನು ಒಂದು ವಾಗ್ದಾನದ ಮೂಲಕ ಹುಟ್ಟಿದವನಾಗಿದ್ದಾನೆ. 24 ಈ ಸಂಗತಿಗಳು ಸಾಂಕೇತಿಕ ನಾಟಕದಂತಿವೆ; ಈ ಸ್ತ್ರೀಯರು ಎರಡು ಒಡಂಬಡಿಕೆಗಳನ್ನು ಸೂಚಿಸುತ್ತಾರೆ. ಇದರಲ್ಲಿ ಒಂದು ಒಡಂಬಡಿಕೆಯು ಸೀನಾಯಿಬೆಟ್ಟದಿಂದ ಉಂಟಾಗಿ ದಾಸತ್ವಕ್ಕಾಗಿ ಮಕ್ಕಳನ್ನು ಹುಟ್ಟಿಸುತ್ತದೆ; ಇದೇ ಹಾಗರ್. 25 ಈ ಹಾಗರ್ ಅಂದರೆ ಅರೇಬಿಯದಲ್ಲಿರುವ ಸೀನಾಯಿಬೆಟ್ಟ. ಮತ್ತು ಅವಳು ತನ್ನ ಮಕ್ಕಳೊಂದಿಗೆ ದಾಸತ್ವದಲ್ಲಿರುವುದರಿಂದ ಇಂದಿನ ಯೆರೂಸಲೇಮ್ಗೆ ಹೋಲಿಕೆಯಾಗಿದ್ದಾಳೆ. 26 ಆದರೆ ಮೇಲಣ ಯೆರೂಸಲೇಮ್ ಸ್ವತಂತ್ರಳು ಮತ್ತು ಅವಳೇ ನಮ್ಮ ತಾಯಿ.
27 ಏಕೆಂದರೆ, “ಹೆರದ ಬಂಜೆಯೇ, ಸಂತೋಷವಾಗಿರು; ಪ್ರಸವವೇದನೆಯನ್ನು ಅನುಭವಿಸದ ಸ್ತ್ರೀಯೇ, ಸ್ವರವೆತ್ತಿ ಗಟ್ಟಿಯಾಗಿ ಕೂಗು; ಗಂಡನುಳ್ಳವಳಿಗಿಂತ ತ್ಯಜಿಸಲ್ಪಟ್ಟ ಹೆಂಗಸಿಗೆ ಮಕ್ಕಳು ಹೆಚ್ಚು” ಎಂದು ಬರೆದಿದೆ. 28 ಸಹೋದರರೇ, ಇಸಾಕನಂತೆ ನಾವೂ ವಾಗ್ದಾನಕ್ಕೆ ಸೇರಿದ ಮಕ್ಕಳಾಗಿದ್ದೇವೆ. 29 ಆದರೆ ಆಗ ಶಾರೀರಿಕ ರೀತಿಯಲ್ಲಿ ಹುಟ್ಟಿದವನು ಪವಿತ್ರಾತ್ಮಾನುಸಾರವಾಗಿ ಹುಟ್ಟಿದವನನ್ನು ಹಿಂಸಿಸಲು ಆರಂಭಿಸಿದಂತೆಯೇ ಇಂದು ಸಹ ಇದೆ. 30 ಆದರೂ ಶಾಸ್ತ್ರಗ್ರಂಥವು ಏನು ಹೇಳುತ್ತದೆ? “ಸೇವಕಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಏಕೆಂದರೆ ಸೇವಕಿಯ ಮಗನು ಸ್ವತಂತ್ರ ಸ್ತ್ರೀಯ ಮಗನೊಂದಿಗೆ ಎಷ್ಟು ಮಾತ್ರಕ್ಕೂ ಬಾಧ್ಯಸ್ಥನಾಗುವುದಿಲ್ಲ.” 31 ಆದುದರಿಂದ ಸಹೋದರರೇ, ನಾವು ಸೇವಕಿಯ ಮಕ್ಕಳಲ್ಲ, ಸ್ವತಂತ್ರ ಸ್ತ್ರೀಯ ಮಕ್ಕಳಾಗಿದ್ದೇವೆ.