ಲೂಕ
10 ಇವುಗಳಾದ ಮೇಲೆ ಕರ್ತನು ಬೇರೆ ಎಪ್ಪತ್ತು ಮಂದಿಯನ್ನು ನೇಮಿಸಿ ತಾನೇ ಸ್ವತಃ ಹೋಗಲಿಕ್ಕಿದ್ದ ಪ್ರತಿಯೊಂದು ಊರಿಗೂ ಪ್ರತಿಯೊಂದು ಸ್ಥಳಕ್ಕೂ ತನಗಿಂತ ಮುಂದಾಗಿ ಇಬ್ಬಿಬ್ಬರನ್ನಾಗಿ ಕಳುಹಿಸಿದನು. 2 ಕಳುಹಿಸುವಾಗ ಅವನು ಅವರಿಗೆ, “ಕೊಯ್ಲು ನಿಶ್ಚಯವಾಗಿಯೂ ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ. 3 ನೀವು ಹೋಗಿರಿ; ತೋಳಗಳ ಮಧ್ಯೆ ಕುರಿಮರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. 4 ನೀವು ಹಣದ ಚೀಲವನ್ನಾಗಲಿ ಆಹಾರದ ಚೀಲವನ್ನಾಗಲಿ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ; ದಾರಿಯಲ್ಲಿ ಯಾರಿಗೂ ವಂದನೆಯಲ್ಲಿ ಅಪ್ಪಿಕೊಳ್ಳಬೇಡಿ. 5 ನೀವು ಯಾವುದಾದರೊಂದು ಮನೆಯೊಳಗೆ ಹೋಗುವಾಗ, ‘ಈ ಮನೆಗೆ ಶಾಂತಿಯಿರಲಿ’ ಎಂದು ಮೊದಲು ಹೇಳಿರಿ. 6 ಶಾಂತಿಪಾತ್ರನು ಅಲ್ಲಿರುವುದಾದರೆ ನಿಮ್ಮ ಶಾಂತಿಯು ಅವನ ಮೇಲೆ ನೆಲೆಸುವುದು. ಇಲ್ಲದಿದ್ದರೆ ಅದು ನಿಮಗೆ ಹಿಂದಿರುಗುವುದು. 7 ಆದುದರಿಂದ, ಅದೇ ಮನೆಯಲ್ಲಿ ಉಳಿದು ಅವರು ಒದಗಿಸುವುದನ್ನು ತಿನ್ನಿರಿ, ಕುಡಿಯಿರಿ; ಏಕೆಂದರೆ ಕೆಲಸಗಾರನು ತನ್ನ ಕೂಲಿಗೆ ಅರ್ಹನಾಗಿದ್ದಾನೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿ ಇಳುಕೊಳ್ಳಬೇಡಿರಿ.
8 “ನೀವು ಯಾವುದಾದರೊಂದು ಊರನ್ನು ಪ್ರವೇಶಿಸುವಾಗ ಅವರು ನಿಮ್ಮನ್ನು ಬರಮಾಡಿಕೊಂಡರೆ, ನಿಮಗೆ ಬಡಿಸಿದ್ದನ್ನು ತಿನ್ನಿರಿ. 9 ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ ಮತ್ತು ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ’ ಎಂದು ಹೇಳುತ್ತಾ ಇರಿ. 10 ನೀವು ಯಾವುದಾದರೊಂದು ಊರನ್ನು ಪ್ರವೇಶಿಸುವಾಗ ಅವರು ನಿಮ್ಮನ್ನು ಬರಮಾಡಿಕೊಳ್ಳದಿದ್ದರೆ ಆ ಊರಿನ ಅಗಲವಾದ ಬೀದಿಗಳ ಬಳಿಗೆ ಹೋಗಿ, 11 ‘ನಿಮ್ಮ ಊರಿನಿಂದ ನಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಸಹ ನಿಮಗೆ ವಿರುದ್ಧವಾಗಿ ಒರಸಿಬಿಡುತ್ತೇವೆ. ಆದರೂ ದೇವರ ರಾಜ್ಯವು ಸಮೀಪಿಸಿದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ’ ಎಂದು ಹೇಳಿರಿ. 12 ಆ ದಿನದಲ್ಲಿ ಆ ಊರಿಗಿಂತಲೂ ಸೊದೋಮಿನ ಗತಿಯು ಹೆಚ್ಚು ಸಹನೀಯವಾದುದಾಗಿರುವುದು ಎಂದು ನಿಮಗೆ ಹೇಳುತ್ತೇನೆ.
13 “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ! ಬೇತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ಏಕೆಂದರೆ ನಿಮ್ಮಲ್ಲಿ ನಡೆಸಲ್ಪಟ್ಟ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿರುತ್ತಿದ್ದರೆ ಬಹಳ ಸಮಯದ ಹಿಂದೆಯೇ ಅಲ್ಲಿಯವರು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತು ಪಶ್ಚಾತ್ತಾಪಪಡುತ್ತಿದ್ದರು. 14 ಆದುದರಿಂದ ನ್ಯಾಯತೀರ್ಪಿನಲ್ಲಿ ನಿಮಗಿಂತಲೂ ತೂರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ಸಹನೀಯವಾದುದಾಗಿರುವುದು. 15 ಎಲೈ ಕಪೆರ್ನೌಮೇ, ನೀನು ಒಂದುವೇಳೆ ಸ್ವರ್ಗಕ್ಕೆ ಏರಿಸಲ್ಪಡುವಿಯೊ? ನೀನು ಹೇಡೀಸ್ಗೆ* ಇಳಿಯುವಿ.
16 “ನಿಮಗೆ ಕಿವಿಗೊಡುವವನು ನನಗೂ ಕಿವಿಗೊಡುವವನಾಗಿದ್ದಾನೆ; ನಿಮ್ಮನ್ನು ಅಲಕ್ಷ್ಯಮಾಡುವವನು ನನ್ನನ್ನೂ ಅಲಕ್ಷ್ಯಮಾಡುವವನಾಗಿದ್ದಾನೆ; ಇದಲ್ಲದೆ, ನನ್ನನ್ನು ಅಲಕ್ಷ್ಯಮಾಡುವವನು ನನ್ನನ್ನು ಕಳುಹಿಸಿದಾತನನ್ನೂ ಅಲಕ್ಷ್ಯಮಾಡುವವನಾಗಿದ್ದಾನೆ” ಎಂದು ಹೇಳಿದನು.
17 ತರುವಾಯ ಆ ಎಪ್ಪತ್ತು ಮಂದಿ ಆನಂದದಿಂದ ಹಿಂದಿರುಗಿ, “ಕರ್ತನೇ, ನಿನ್ನ ಹೆಸರನ್ನು ಉಪಯೋಗಿಸಿದ್ದರಿಂದ ದೆವ್ವಗಳು ಸಹ ನಮಗೆ ಅಧೀನಮಾಡಲ್ಪಟ್ಟವು” ಎಂದು ಹೇಳಿದರು. 18 ಆಗ ಅವನು ಅವರಿಗೆ, “ಸೈತಾನನು ಈಗಾಗಲೇ ಮಿಂಚಿನಂತೆ ಆಕಾಶದಿಂದ ಬಿದ್ದಿರುವುದನ್ನು ನಾನು ನೋಡತೊಡಗಿದೆ. 19 ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ಪಾದಗಳ ಕೆಳಗೆ ತುಳಿದುಹಾಕುವುದಕ್ಕೂ ವೈರಿಯ ಸಮಸ್ತ ಶಕ್ತಿಯ ಮೇಲೂ ನಾನು ನಿಮಗೆ ಅಧಿಕಾರಕೊಟ್ಟಿದ್ದೇನೆ; ಯಾವುದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡುಮಾಡದು. 20 ಆದರೂ, ದೆವ್ವಗಳು ನಿಮಗೆ ಅಧೀನಮಾಡಲ್ಪಟ್ಟಿವೆ ಎಂದು ನೀವು ಹರ್ಷಿಸದೆ, ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಬರೆಯಲ್ಪಟ್ಟಿವೆ ಎಂದು ಹರ್ಷಿಸಿರಿ” ಎಂದು ಹೇಳಿದನು. 21 ಅದೇ ಗಳಿಗೆಯಲ್ಲಿ ಅವನು ಪವಿತ್ರಾತ್ಮದಿಂದ ಅತ್ಯಾನಂದಗೊಂಡು, “ತಂದೆಯೇ, ಸ್ವರ್ಗ ಭೂಲೋಕಗಳ ಒಡೆಯನೇ, ನೀನು ವಿವೇಕಿಗಳಿಗೂ ಜ್ಞಾನಿಗಳಿಗೂ ಈ ವಿಷಯಗಳನ್ನು ಜಾಗರೂಕತೆಯಿಂದ ಮರೆಮಾಡಿ ಶಿಶುಗಳಿಗೆ ಪ್ರಕಟಪಡಿಸಿರುವುದರಿಂದ ನಾನು ನಿನ್ನನ್ನು ಬಹಿರಂಗವಾಗಿ ಕೊಂಡಾಡುತ್ತೇನೆ. ಹೌದು ತಂದೆಯೇ, ಹೀಗೆ ಮಾಡುವುದು ನಿನಗೆ ಒಪ್ಪಿಗೆಯಾದ ಮಾರ್ಗವಾಗಿತ್ತು. 22 ನನ್ನ ತಂದೆ ನನಗೆ ಎಲ್ಲ ವಿಷಯಗಳನ್ನು ಒಪ್ಪಿಸಿಕೊಟ್ಟಿದ್ದಾನೆ ಮತ್ತು ಮಗನು ಯಾರೆಂಬುದು ತಂದೆಯ ಹೊರತು ಯಾವನಿಗೂ ತಿಳಿದಿಲ್ಲ; ತಂದೆಯು ಯಾರೆಂಬುದು ಮಗನ ಹೊರತು ಮತ್ತು ಮಗನು ಯಾರಿಗೆ ಆತನನ್ನು ತಿಳಿಯಪಡಿಸಲು ಇಷ್ಟಪಡುತ್ತಾನೊ ಅವನ ಹೊರತು ಯಾವನಿಗೂ ತಿಳಿದಿರುವುದಿಲ್ಲ” ಎಂದು ಹೇಳಿದನು.
23 ತದನಂತರ ಶಿಷ್ಯರ ಕಡೆಗೆ ತಿರುಗಿ ವಿಂಗಡವಾಗಿ ಹೇಳಿದ್ದೇನೆಂದರೆ, “ನೀವು ನೋಡುತ್ತಿರುವ ವಿಷಯಗಳನ್ನು ನೋಡುವವರು ಸಂತೋಷಿತರು. 24 ಏಕೆಂದರೆ ಅನೇಕ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು ನೋಡಲು ಬಯಸಿದರು, ಆದರೆ ಅವುಗಳನ್ನು ನೋಡಲಿಲ್ಲ. ನೀವು ಕೇಳಿಸಿಕೊಳ್ಳುತ್ತಿರುವ ಸಂಗತಿಗಳನ್ನು ಕೇಳಿಸಿಕೊಳ್ಳಲು ಬಯಸಿದರು, ಆದರೆ ಅವುಗಳನ್ನು ಕೇಳಿಸಿಕೊಳ್ಳಲಿಲ್ಲ ಎಂದು ನಿಮಗೆ ಹೇಳುತ್ತೇನೆ.”
25 ಆಗ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದ ಒಬ್ಬ ಮನುಷ್ಯನು ಎದ್ದುನಿಂತು ಅವನನ್ನು ಪರೀಕ್ಷಿಸಲಿಕ್ಕಾಗಿ, “ಬೋಧಕನೇ, ಏನು ಮಾಡುವುದಾದರೆ ನಾನು ನಿತ್ಯಜೀವಕ್ಕೆ ಬಾಧ್ಯನಾಗುತ್ತೇನೆ?” ಎಂದು ಕೇಳಿದನು. 26 ಅದಕ್ಕೆ ಅವನು, “ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಅದನ್ನು ನೀನು ಹೇಗೆ ಓದುತ್ತೀ?” ಎಂದು ಕೇಳಿದನು. 27 ಉತ್ತರವಾಗಿ ಅವನು, “ ‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬಲದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು’ ಮತ್ತು ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದನ್ನೇ” ಅಂದನು. 28 ಆಗ ಯೇಸು ಅವನಿಗೆ, “ನೀನು ಸರಿಯಾಗಿಯೇ ಉತ್ತರಕೊಟ್ಟೆ; ‘ಇದನ್ನೇ ಮಾಡುತ್ತಾ ಇರು, ಆಗ ನೀನು ಜೀವವನ್ನು ಪಡೆಯುವಿ’ ” ಎಂದನು.
29 ಆದರೆ ಆ ಮನುಷ್ಯನು ತನ್ನನ್ನು ನೀತಿವಂತನೆಂದು ರುಜುಪಡಿಸಿಕೊಳ್ಳಲು ಬಯಸುತ್ತಾ, “ನಿಜವಾಗಿಯೂ ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಕೇಳಿದನು. 30 ಅದಕ್ಕೆ ಉತ್ತರವಾಗಿ ಯೇಸು, “ಒಬ್ಬ ಮನುಷ್ಯನು ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಸುಲಿಗೆಮಾಡಿ, ಚೆನ್ನಾಗಿ ಹೊಡೆದು ಅರೆಜೀವಮಾಡಿ ಬಿಟ್ಟುಹೋದರು. 31 ಆಗ ಆಕಸ್ಮಿಕವಾಗಿ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಿದ್ದನು; ಆದರೆ ಅವನು ಆ ಮನುಷ್ಯನನ್ನು ನೋಡಿದಾಗ ದಾರಿಯ ಆಚೇ ಬದಿಯಿಂದ ಹೊರಟುಹೋದನು. 32 ಅದೇ ರೀತಿಯಲ್ಲಿ ಒಬ್ಬ ಲೇವಿಯನು ಸಹ ಆ ಸ್ಥಳಕ್ಕೆ ಬಂದು ಅವನನ್ನು ಕಂಡಾಗ ಅವನೂ ದಾರಿಯ ಆಚೇ ಬದಿಯಿಂದ ಹೊರಟುಹೋದನು. 33 ಆದರೆ ಒಬ್ಬ ಸಮಾರ್ಯದವನು ಆ ದಾರಿಯಲ್ಲಿ ಪ್ರಯಾಣಿಸುತ್ತಾ ಆ ಮನುಷ್ಯನಿದ್ದಲ್ಲಿಗೆ ಬಂದಾಗ ಅವನನ್ನು ಕಂಡು ಕನಿಕರಪಟ್ಟು, 34 ಅವನ ಹತ್ತಿರ ಹೋಗಿ ಅವನ ಗಾಯಗಳ ಮೇಲೆ ಎಣ್ಣೆಯನ್ನೂ ದ್ರಾಕ್ಷಾಮದ್ಯವನ್ನೂ ಸುರಿದು ಅವುಗಳನ್ನು ಕಟ್ಟಿದನು. ಆಮೇಲೆ ಅವನನ್ನು ತನ್ನ ಸ್ವಂತ ಕತ್ತೆಯ ಮೇಲೆ ಹತ್ತಿಸಿಕೊಂಡು ಒಂದು ವಸತಿಗೃಹಕ್ಕೆ ಕರೆದುಕೊಂಡು ಹೋಗಿ ಅವನ ಆರೈಕೆಮಾಡಿದನು. 35 ಮರುದಿನ ಅವನು ಎರಡು ದಿನಾರುಗಳನ್ನು ತೆಗೆದು ವಸತಿಗೃಹದವನಿಗೆ ಕೊಟ್ಟು, ‘ಇವನ ಆರೈಕೆಮಾಡು; ನೀನು ಇದಕ್ಕಿಂತ ಹೆಚ್ಚು ವೆಚ್ಚಮಾಡಿದರೆ ನಾನು ಇಲ್ಲಿಗೆ ಹಿಂದಿರುಗಿ ಬಂದಾಗ ಅದನ್ನು ನಿನಗೆ ಕೊಡುತ್ತೇನೆ’ ಎಂದನು. 36 ಈ ಮೂವರಲ್ಲಿ ಯಾರು ಕಳ್ಳರ ಕೈಗೆ ಸಿಕ್ಕಿಬಿದ್ದ ಮನುಷ್ಯನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ?” ಎಂದು ಕೇಳಿದನು. 37 ಅದಕ್ಕೆ ಅವನು, “ಅವನೊಂದಿಗೆ ಕರುಣೆಯಿಂದ ವರ್ತಿಸಿದವನೇ” ಎಂದನು. ಆಗ ಯೇಸು ಅವನಿಗೆ, “ನೀನೂ ಹೋಗಿ ಅದರಂತೆಯೇ ಮಾಡುತ್ತಾ ಇರು” ಎಂದು ಹೇಳಿದನು.
38 ಅವರು ಹೋಗುತ್ತಿರುವಾಗ ಅವನು ಒಂದು ಹಳ್ಳಿಯನ್ನು ಪ್ರವೇಶಿಸಿದನು. ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಅವನನ್ನು ತನ್ನ ಮನೆಗೆ ಅತಿಥಿಯಾಗಿ ಬರಮಾಡಿಕೊಂಡಳು. 39 ಆ ಸ್ತ್ರೀಗೆ ಮರಿಯಳೆಂಬ ಒಬ್ಬ ಸಹೋದರಿಯೂ ಇದ್ದಳು. ಅವಳು ಕರ್ತನ ಪಾದಗಳ ಬಳಿಯಲ್ಲಿ ಕುಳಿತುಕೊಂಡು ಅವನ ಮಾತಿಗೆ ಕಿವಿಗೊಡುತ್ತಾ ಇದ್ದಳು. 40 ಆದರೆ ಮಾರ್ಥಳು ಅನೇಕ ಕೆಲಸಗಳನ್ನು ಮಾಡುತ್ತಾ ಅಪಕರ್ಷಿತಳಾಗಿದ್ದಳು. ಅವಳು ಯೇಸುವಿನ ಬಳಿಗೆ ಬಂದು, “ಕರ್ತನೇ, ನಾನೊಬ್ಬಳೇ ಎಲ್ಲ ಕೆಲಸಗಳನ್ನು ಮಾಡುವಂತೆ ನನ್ನ ಸಹೋದರಿಯು ಬಿಟ್ಟಿರುವುದಕ್ಕೆ ನಿನಗೆ ಚಿಂತೆಯಿಲ್ಲವೆ? ನನಗೆ ಸಹಾಯಮಾಡುವಂತೆ ಅವಳಿಗೆ ಹೇಳು” ಅಂದಳು. 41 ಅದಕ್ಕೆ ಉತ್ತರವಾಗಿ ಕರ್ತನು ಅವಳಿಗೆ, “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳ ಬಗ್ಗೆ ಚಿಂತಿತಳಾಗಿದ್ದಿ ಮತ್ತು ಗಲಿಬಿಲಿಗೊಂಡಿದ್ದಿ. 42 ಆದರೆ ಬೇಕಾಗಿರುವುದು ಕೆಲವು ಮಾತ್ರ, ಅಥವಾ ಬರೀ ಒಂದೇ. ಮರಿಯಳಾದರೋ ಒಳ್ಳೆಯ ಭಾಗವನ್ನು ಆರಿಸಿಕೊಂಡಳು ಮತ್ತು ಅದು ಅವಳಿಂದ ತೆಗೆಯಲ್ಪಡುವುದಿಲ್ಲ” ಎಂದನು.