ಮಾರ್ಕ
15 ಬೆಳಗಾದ ಕೂಡಲೆ ಮುಖ್ಯ ಯಾಜಕರೂ ಹಿರೀಪುರುಷರೂ ಶಾಸ್ತ್ರಿಗಳೂ ಹಿರೀಸಭೆಯವರೆಲ್ಲರೂ ಒಟ್ಟುಗೂಡಿ ಸಮಾಲೋಚನೆ ಮಾಡಿದ ನಂತರ ಯೇಸುವನ್ನು ಬಂಧಿಸಿ ಅವನನ್ನು ಕರೆದುಕೊಂಡು ಹೋಗಿ ಪಿಲಾತನ ಕೈಗೆ ಒಪ್ಪಿಸಿದರು. 2 ಆಗ ಪಿಲಾತನು ಅವನಿಗೆ, “ನೀನು ಯೆಹೂದ್ಯರ ಅರಸನೊ?” ಎಂದು ಪ್ರಶ್ನಿಸಿದನು. ಅದಕ್ಕೆ ಅವನು, “ನೀನೇ ಅದನ್ನು ಹೇಳುತ್ತಾ ಇದ್ದೀ” ಎಂದು ಉತ್ತರಿಸಿದನು. 3 ಆದರೆ ಮುಖ್ಯ ಯಾಜಕರು ಅವನ ಮೇಲೆ ಅನೇಕ ಆರೋಪಗಳನ್ನು ಹೊರಿಸಲಾರಂಭಿಸಿದರು. 4 ಪಿಲಾತನು ತಿರಿಗಿ ಅವನನ್ನು ಪ್ರಶ್ನಿಸುತ್ತಾ, “ನೀನು ಯಾವುದೇ ಉತ್ತರವನ್ನು ಕೊಡುವುದಿಲ್ಲವೊ? ಅವರು ನಿನ್ನ ವಿರುದ್ಧ ಎಷ್ಟು ಆರೋಪಗಳನ್ನು ತರುತ್ತಿದ್ದಾರೆ ನೋಡು” ಅಂದನು. 5 ಆದರೆ ಯೇಸು ಯಾವುದೇ ಉತ್ತರವನ್ನು ಕೊಡದಿದ್ದ ಕಾರಣ ಪಿಲಾತನು ಆಶ್ಚರ್ಯಪಡಲಾರಂಭಿಸಿದನು.
6 ಪ್ರತಿ ಹಬ್ಬದ ಸಮಯದಲ್ಲಿ ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಅವನು ಅವರಿಗಾಗಿ ಬಿಡುಗಡೆಮಾಡುತ್ತಿದ್ದನು. 7 ಆ ಸಮಯದಲ್ಲಿ ಬರಬ್ಬನೆಂದು ಹೆಸರು ಹೊಂದಿದ್ದವನೊಬ್ಬನು ರಾಜದ್ರೋಹಿಗಳೊಂದಿಗೆ ಬಂದಿಯಾಗಿದ್ದನು; ಅವರು ತಮ್ಮ ರಾಜದ್ರೋಹದಲ್ಲಿ ಕೊಲೆಮಾಡಿದ್ದರು. 8 ಜನರ ಗುಂಪು ಬಂದು ಪದ್ಧತಿಯಂತೆ ಈ ಬಾರಿಯೂ ಒಬ್ಬ ಸೆರೆಯಾಳನ್ನು ಬಿಡುಗಡೆಮಾಡುವಂತೆ ಬೇಡಿಕೊಂಡಿತು. 9 ಪಿಲಾತನು ಅವರಿಗೆ, “ನಾನು ನಿಮಗಾಗಿ ಯೆಹೂದ್ಯರ ಅರಸನನ್ನು ಬಿಡುಗಡೆಮಾಡಬೇಕೆಂದು ನೀವು ಬಯಸುತ್ತೀರೊ?” ಎಂದು ಕೇಳಿದನು. 10 ಏಕೆಂದರೆ ಮುಖ್ಯ ಯಾಜಕರು ಮತ್ಸರದಿಂದಲೇ ಇವನನ್ನು ತನಗೆ ಒಪ್ಪಿಸಿದ್ದಾರೆ ಎಂಬುದು ಅವನಿಗೆ ತಿಳಿದಿತ್ತು. 11 ಆದರೆ ಅವನಿಗೆ ಬದಲಾಗಿ ಬರಬ್ಬನನ್ನೇ ಬಿಡುಗಡೆಮಾಡಬೇಕೆಂದು ಬೇಡಿಕೊಳ್ಳುವಂತೆ ಮುಖ್ಯ ಯಾಜಕರು ಜನರ ಗುಂಪನ್ನು ಚಿತಾಯಿಸಿದರು. 12 ಪುನಃ ಪಿಲಾತನು ಅವರಿಗೆ, “ನೀವು ಯೆಹೂದ್ಯರ ಅರಸನೆಂದು ಕರೆಯುವ ಈ ಮನುಷ್ಯನನ್ನು ನಾನು ಏನು ಮಾಡಲಿ?” ಎಂದು ಕೇಳಿದಾಗ 13 “ಅವನನ್ನು ಶೂಲಕ್ಕೇರಿಸು” ಎಂದು ಪುನಃ ಒಮ್ಮೆ ಅವರು ಬೊಬ್ಬೆಹಾಕಿದರು. 14 ಆದರೆ ಪಿಲಾತನು ಅವರಿಗೆ, “ಏಕೆ? ಇವನು ಯಾವ ಅಪರಾಧವನ್ನು ಮಾಡಿದ್ದಾನೆ?” ಎಂದು ಕೇಳಿದನು. ಆಗ ಅವರು, “ಅವನನ್ನು ಶೂಲಕ್ಕೇರಿಸು” ಎಂದು ಇನ್ನಷ್ಟು ಜೋರಾಗಿ ಬೊಬ್ಬೆಹಾಕಿದರು. 15 ಅದಕ್ಕೆ ಪಿಲಾತನು ಜನರ ಗುಂಪನ್ನು ತೃಪ್ತಿಪಡಿಸಲು ಬಯಸುತ್ತಾ ಬರಬ್ಬನನ್ನು ಬಿಡುಗಡೆಮಾಡಿದನು; ನಂತರ ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶೂಲಕ್ಕೇರಿಸಲು ಒಪ್ಪಿಸಿದನು.
16 ಸೈನಿಕರು ಅವನನ್ನು ರಾಜ್ಯಪಾಲನ ಅರಮನೆಯ ಅಂಗಳಕ್ಕೆ ಕರೆದುಕೊಂಡುಹೋದರು ಮತ್ತು ತಮ್ಮ ದಳದವರನ್ನೆಲ್ಲ ಒಟ್ಟುಗೂಡಿಸಿದರು. 17 ಮತ್ತು ಅವರು ಅವನಿಗೆ ಕೆನ್ನೀಲಿ ಬಣ್ಣದ ವಸ್ತ್ರವನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಅವನ ಮೇಲಿಟ್ಟರು. 18 ಅನಂತರ ಅವರು ಅವನಿಗೆ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಎಂದು ವಂದಿಸತೊಡಗಿದರು. 19 ಇದಲ್ಲದೆ ಅವರು ಬೆತ್ತದಿಂದ ಅವನ ತಲೆಯ ಮೇಲೆ ಹೊಡೆದು ಅವನ ಮೇಲೆ ಉಗುಳಿ ಅವನ ಮುಂದೆ ಮೊಣಕಾಲೂರಿ ಅವನಿಗೆ ಪ್ರಣಾಮಮಾಡುತ್ತಿದ್ದರು. 20 ಈ ರೀತಿಯಲ್ಲಿ ಅವನನ್ನು ಪರಿಹಾಸ್ಯಮಾಡಿದ ಬಳಿಕ ಅವರು ಅವನ ಮೇಲೆ ಹೊದಿಸಿದ ಕೆನ್ನೀಲಿ ಬಣ್ಣದ ವಸ್ತ್ರವನ್ನು ತೆಗೆದು ಅವನ ಮೇಲಂಗಿಯನ್ನೇ ಅವನಿಗೆ ಉಡಿಸಿ ಅವನನ್ನು ಶೂಲಕ್ಕೇರಿಸಲು ಕರೆದುಕೊಂಡುಹೋದರು. 21 ಆಗ ಅವರು ಗ್ರಾಮದಿಂದ ಬರುತ್ತಿದ್ದ ಒಬ್ಬನನ್ನು ಅಂದರೆ ಅಲೆಕ್ಸಾಂದ್ರ ಮತ್ತು ರೂಫ ಎಂಬವರ ತಂದೆಯಾದ ಕುರೇನೆ ಪಟ್ಟಣದ ಸೀಮೋನ ಎಂಬ ವ್ಯಕ್ತಿಯನ್ನು ಯೇಸುವಿನ ಯಾತನಾ ಕಂಬವನ್ನು ಹೊರುವ ಕೆಲಸಕ್ಕೆ ಬಲವಂತವಾಗಿ ನೇಮಿಸಿದರು.
22 ತರುವಾಯ ಅವರು ಅವನನ್ನು ಗೊಲ್ಗೊಥಾ ಎಂಬಲ್ಲಿಗೆ ಕರೆದುಕೊಂಡು ಬಂದರು. ಇದನ್ನು ಭಾಷಾಂತರಿಸಿದಾಗ ಕಪಾಲ ಸ್ಥಳ ಎಂಬರ್ಥ ಬರುತ್ತದೆ. 23 ಅಲ್ಲಿ ಅವರು ರಕ್ತಬೋಳ ಬೆರಸಿದ ದ್ರಾಕ್ಷಾಮದ್ಯವನ್ನು ಅವನಿಗೆ ಕೊಡಲು ಪ್ರಯತ್ನಿಸಿದರು, ಆದರೆ ಅವನು ಅದನ್ನು ತೆಗೆದುಕೊಳ್ಳಲಿಲ್ಲ. 24 ಅವರು ಅವನನ್ನು ಶೂಲಕ್ಕೇರಿಸಿ ಅವನ ಮೇಲಂಗಿಗಳಲ್ಲಿ ಯಾವುದು ಯಾರಿಗೆ ಸೇರಬೇಕೆಂದು ಚೀಟಿಎತ್ತಿ ಹಂಚಿಕೊಂಡರು. 25 ಬೆಳಗ್ಗೆ ಸುಮಾರು ಒಂಬತ್ತು ಗಂಟೆಗೆ ಅವನನ್ನು ಶೂಲಕ್ಕೇರಿಸಿದರು. 26 ಇದಲ್ಲದೆ ಅವನ ವಿರುದ್ಧ ಮಾಡಲಾದ “ಯೆಹೂದ್ಯರ ಅರಸನು” ಎಂಬ ಆಪಾದನೆಯ ಅಭಿಲೇಖವನ್ನು ಮೇಲೆ ಬರೆಯಲಾಗಿತ್ತು. 27 ಮಾತ್ರವಲ್ಲದೆ ಅವರು ಅವನ ಬಲಗಡೆಯಲ್ಲಿ ಮತ್ತು ಎಡಗಡೆಯಲ್ಲಿ ಇಬ್ಬರು ಕಳ್ಳರನ್ನು ಶೂಲಕ್ಕೇರಿಸಿದರು. 28 *—— 29 ಅಲ್ಲಿ ಹಾದುಹೋಗುತ್ತಿದ್ದವರು ತಮ್ಮ ತಲೆಗಳನ್ನು ಆಡಿಸುತ್ತಾ, “ಆಹಾ, ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟಲಿರುವವನೇ, 30 ಯಾತನಾ ಕಂಬದಿಂದ ಕೆಳಗಿಳಿದು ನಿನ್ನನ್ನು ರಕ್ಷಿಸಿಕೋ” ಎಂದು ಅವನನ್ನು ಹಂಗಿಸಿದರು. 31 ಅಂತೆಯೇ ಮುಖ್ಯ ಯಾಜಕರೂ ಶಾಸ್ತ್ರಿಗಳೂ ಸೇರಿ ಅವನನ್ನು ಅಪಹಾಸ್ಯಮಾಡುತ್ತಾ, “ಇವನು ಇತರರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. 32 ನಾವು ನೋಡಿ ನಂಬಸಾಧ್ಯವಾಗುವಂತೆ ಇಸ್ರಾಯೇಲ್ಯರ ಅರಸನಾದ ಕ್ರಿಸ್ತನು ಈಗ ಯಾತನಾ ಕಂಬದಿಂದ ಕೆಳಗಿಳಿದು ಬರಲಿ” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. ಅವನೊಂದಿಗೆ ಶೂಲಕ್ಕೇರಿಸಲ್ಪಟ್ಟಿದ್ದವರು ಸಹ ಅವನನ್ನು ನಿಂದಿಸುತ್ತಿದ್ದರು.
33 ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯ ವರೆಗೆ ದೇಶದಲ್ಲೆಲ್ಲ ಕತ್ತಲೆ ಕವಿಯಿತು. 34 ಮತ್ತು ಮೂರು ಗಂಟೆಗೆ ಯೇಸು, “ಏಲೀ, ಏಲೀ, ಲಮಾ ಸಬಕ್ತಾನೀ?” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು. ಇದನ್ನು ಭಾಷಾಂತರಿಸಿದಾಗ, “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದರ್ಥ. 35 ಆಗ ಹತ್ತಿರದಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿಸಿಕೊಂಡು, “ನೋಡಿ, ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದು ಹೇಳಿದರು. 36 ಅಷ್ಟರಲ್ಲಿ ಒಬ್ಬ ಮನುಷ್ಯನು ಓಡಿಹೋಗಿ ಸ್ಪಂಜನ್ನು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಜೊಂಡು ಕೋಲಿಗೆ ಸಿಕ್ಕಿಸಿ ಅವನಿಗೆ ಕುಡಿಯುವುದಕ್ಕೆ ಕೊಟ್ಟು, “ಬಿಡಿರಿ, ಎಲೀಯನು ಇವನನ್ನು ಕೆಳಗಿಳಿಸುವುದಕ್ಕೆ ಬರುತ್ತಾನೋ ನೋಡೋಣ” ಅಂದನು. 37 ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಮೃತಪಟ್ಟನು. 38 ಆಗ ಪವಿತ್ರ ಸ್ಥಳದ ಪರದೆಯು ಮೇಲಿಂದ ಕೆಳಗಿನ ವರೆಗೆ ಹರಿದು ಇಬ್ಭಾಗವಾಯಿತು. 39 ಅಲ್ಲಿ ನಿಂತಿದ್ದ ಶತಾಧಿಪತಿಯು ಅವನು ಈ ಎಲ್ಲ ಸನ್ನಿವೇಶಗಳ ಕೆಳಗೆ ಮೃತಪಟ್ಟದ್ದನ್ನು ಕಂಡು, “ಖಂಡಿತವಾಗಿಯೂ ಈ ಮನುಷ್ಯನು ದೇವಕುಮಾರನಾಗಿದ್ದನು” ಎಂದನು.
40 ಇದಲ್ಲದೆ ಕೆಲವು ಸ್ತ್ರೀಯರು ಸಹ ದೂರದಿಂದ ಇದನ್ನು ನೋಡುತ್ತಿದ್ದರು; ಅವರಲ್ಲಿ ಮಗ್ದಲದ ಮರಿಯಳೂ ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿಯಾದ ಮರಿಯಳೂ ಸಲೋಮೆಯೂ ಇದ್ದರು. 41 ಅವನು ಗಲಿಲಾಯದಲ್ಲಿದ್ದಾಗ ಇವರು ಅವನ ಜೊತೆಯಲ್ಲಿದ್ದು ಅವನಿಗೆ ಸೇವೆಮಾಡಿದ್ದರು. ಮಾತ್ರವಲ್ಲದೆ ಅವನೊಂದಿಗೆ ಯೆರೂಸಲೇಮಿಗೆ ಬಂದಿದ್ದ ಇನ್ನೂ ಬೇರೆ ಸ್ತ್ರೀಯರೂ ಅಲ್ಲಿದ್ದರು.
42 ಇಷ್ಟರಲ್ಲಾಗಲೇ ಸಂಜೆಯಾಗಿತ್ತು ಮತ್ತು ಆ ದಿನವು ಸಬ್ಬತ್ ದಿನದ ಹಿಂದಿನ ಸಿದ್ಧತೆಯ ದಿನವಾಗಿದ್ದುದರಿಂದ, 43 ಅರಿಮಥಾಯದ ಯೋಸೇಫನೆಂಬವನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಕೇಳಿಕೊಂಡನು. ಇವನು ಹಿರೀಸಭೆಯ ಘನವಂತ ಸದಸ್ಯನಾಗಿದ್ದು ದೇವರ ರಾಜ್ಯಕ್ಕಾಗಿ ಎದುರುನೋಡುತ್ತಿದ್ದ ವ್ಯಕ್ತಿಯಾಗಿದ್ದನು. 44 ಆದರೆ ಯೇಸು ಈಗಾಗಲೇ ಸತ್ತಿದ್ದಾನೊ ಇಲ್ಲವೊ ಎಂದು ಪಿಲಾತನು ಸಂಶಯಪಟ್ಟದ್ದರಿಂದ ಶತಾಧಿಪತಿಯನ್ನು ಕರೆದು, “ಅವನು ಸತ್ತಾಯಿತೋ?” ಎಂದು ಅವನನ್ನು ಕೇಳಿದನು. 45 ಶತಾಧಿಪತಿಯಿಂದ ಈ ವಿಷಯವನ್ನು ಖಚಿತಪಡಿಸಿಕೊಂಡ ಬಳಿಕ ಅವನು ಶವವನ್ನು ಯೋಸೇಫನಿಗೆ ಕೊಡಿಸಿದನು. 46 ಅವನು ನಾರುಮಡಿಯನ್ನು ಕೊಂಡು ತಂದು ಅವನನ್ನು ಕೆಳಗಿಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇರಿಸಿ ಆ ಸ್ಮರಣೆಯ ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು. 47 ಆದರೆ ಮಗ್ದಲದ ಮರಿಯಳೂ ಯೋಸೆಯ ತಾಯಿಯಾದ ಮರಿಯಳೂ ಅವನನ್ನು ಇಟ್ಟಿದ್ದ ಸ್ಥಳವನ್ನು ನೋಡುತ್ತಾ ಇದ್ದರು.