ಜೂನ್
ಭಾನುವಾರ, ಜೂನ್ 1
ತುಂಬ ಕಷ್ಟಗಳನ್ನ ಎದುರಿಸಿ ನಾವು ದೇವ್ರ ಆಳ್ವಿಕೆಯಲ್ಲಿ ಸೇರಬೇಕು.—ಅ. ಕಾ. 14:22.
ಪರಿಸ್ಥಿತಿ ಬದಲಾದಾಗ ಅದಕ್ಕೆ ಹೊಂದ್ಕೊಂಡಿದ್ರಿಂದ ಒಂದನೇ ಶತಮಾನದ ಕ್ರೈಸ್ತರನ್ನ ಯೆಹೋವ ಆಶೀರ್ವದಿಸಿದನು. ಅವ್ರಿಗೆ ಕೆಲವೊಮ್ಮೆ ದಿಢೀರಂತ ಹಿಂಸೆ ವಿರೋಧಗಳು ಬರ್ತಿತ್ತು. ಪೌಲ ಮತ್ತು ಬಾರ್ನಬನ ಉದಾಹರಣೆ ನೋಡಿ. ಅವರು ಲುಸ್ತ್ರಕ್ಕೆ ಸಿಹಿಸುದ್ದಿ ಸಾರೋಕೆ ಹೋದಾಗ ಅಲ್ಲಿನ ಜನ ಚೆನ್ನಾಗಿ ಕೇಳಿಸ್ಕೊಂಡ್ರು. ಆದ್ರೆ ಆಮೇಲೆ ಆ ಜನ್ರನ್ನ ವಿರೋಧಿಗಳು “ತಮ್ಮ ಪಕ್ಷಕ್ಕೆ ಸೇರಿಸ್ಕೊಂಡ್ರು.” ಅವ್ರಲ್ಲಿ ಕೆಲವರು ವಿರೋಧಿಗಳ ಜೊತೆ ಸೇರ್ಕೊಂಡು ಪೌಲನಿಗೆ ಕಲ್ಲು ಹೊಡೆದು ಕೊಲ್ಲೋಕೆ ಪ್ರಯತ್ನ ಮಾಡಿದ್ರು. (ಅ. ಕಾ. 14:19) ಇಷ್ಟೆಲ್ಲಾ ಕಷ್ಟಗಳು ಬಂದಾಗ ಪೌಲ ಮತ್ತು ಬಾರ್ನಬ ಸಿಹಿಸುದ್ದಿ ಸಾರೋದನ್ನ ನಿಲ್ಲಿಸಿಬಿಟ್ರಾ? ಇಲ್ಲ. ಅವರು ಬೇರೆ ಕಡೆ ಹೋಗಿ ಸಾರಿದ್ರು. ಇದ್ರಿಂದ ‘ತುಂಬ ಜನ ಶಿಷ್ಯರಾದ್ರು.’ ಅಷ್ಟೇ ಅಲ್ಲ, ಅವ್ರಿಬ್ರನ್ನ ನೋಡಿ ಅಲ್ಲಿದ್ದ ಸಹೋದರ ಸಹೋದರಿಯರ ನಂಬಿಕೆನೂ ಜಾಸ್ತಿ ಆಯ್ತು. (ಅ. ಕಾ. 14:21, 22) ಇದ್ರಿಂದ ನಾವೇನು ಕಲಿಬಹುದು? ಪೌಲ ಮತ್ತು ಬಾರ್ನಬನಿಗೆ ದಿಢೀರಂತ ಹಿಂಸೆ ಬಂದಾಗ ಅವರು ನಂಬಿಕೆ ಕಳಕೊಳ್ಳಲಿಲ್ಲ. ಸಿಹಿಸುದ್ದಿ ಸಾರೋದನ್ನ ಬಿಟ್ಟುಬಿಡಲಿಲ್ಲ. ನಾವೂ ಅವ್ರ ತರಾನೇ ಇರಬೇಕು. ಯೆಹೋವ ಕೊಟ್ಟಿರೋ ಕೆಲಸನ ನಾವು ಭಯಪಡದೆ ಮಾಡ್ತಾ ಇದ್ರೆ ಯೆಹೋವ ನಮ್ಮನ್ನೂ ಆಶೀರ್ವದಿಸ್ತಾನೆ. w23.04 16-17 ¶13-14
ಸೋಮವಾರ, ಜೂನ್ 2
ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ, ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು. ನನಗೆ ಕಷ್ಟ ಬಂದಾಗ ನಾನು ನಿನ್ನನ್ನ ಕೂಗ್ತೀನಿ, ಯಾಕಂದ್ರೆ ನೀನು ನನಗೆ ಉತ್ರ ಕೊಡ್ತೀಯ.—ಕೀರ್ತ. 86:6, 7.
ರಾಜ ದಾವೀದನ ಬಗ್ಗೆ ನೋಡಿ. ಅವನಿಗೆ ತುಂಬ ಶತ್ರುಗಳಿದ್ರು. ಅವನ ಪ್ರಾಣ ತೆಗೀಬೇಕು ಅಂತ ಕಾಯ್ತಾ ಇದ್ರು. ಆಗೆಲ್ಲ ದಾವೀದ ಪ್ರಾರ್ಥನೆ ಮಾಡ್ತಿದ್ದ. ಯೆಹೋವ ನಮ್ಮ ಪ್ರಾರ್ಥನೆಗಳನ್ನ ಕೇಳಿ ಉತ್ರ ಕೊಡ್ತಾನೆ ಅಂತ ದಾವೀದನಿಗೆ ನಂಬಿಕೆ ಇತ್ತು. ನಾವೂ ಅದನ್ನ ನಂಬಬಹುದು. ಯೆಹೋವ ದೇವರು ನಮಗೆ ವಿವೇಕ ಕೊಡ್ತಾನೆ, ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಶಕ್ತಿ ಕೊಡ್ತಾನೆ ಅಂತ ಬೈಬಲ್ ತಿಳಿಸುತ್ತೆ. ಅಷ್ಟೇ ಅಲ್ಲ, ಸಹೋದರ ಸಹೋದರಿಯರಿಂದ ಮತ್ತು ಬೇರೆಯವರಿಂದ ಸಹಾಯ ಸಿಗೋ ತರ ಮಾಡ್ತಾನೆ. ನಾವು ಪ್ರಾರ್ಥನೆ ಮಾಡಿದಾಗೆಲ್ಲ ನಾವು ಅಂದ್ಕೊಂಡ ರೀತಿಯಲ್ಲಿ ಯೆಹೋವ ಉತ್ರ ಕೊಡದೇ ಇರಬಹುದು. ಆದ್ರೆ ಉತ್ರ ಕೊಟ್ಟೇ ಕೊಡ್ತಾನೆ. ನಮಗೆ ಏನು ಬೇಕು, ಯಾವಾಗ ಬೇಕು ಅಂತ ಆತನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನು ಸಹಾಯ ಮಾಡೇ ಮಾಡ್ತಾನೆ. ಯೆಹೋವ ಈಗ್ಲೂ ನಮ್ಮನ್ನ ಚೆನ್ನಾಗಿ ನೋಡ್ಕೊಳ್ತಿದ್ದಾನೆ. ಮುಂದೆ ಹೊಸ ಲೋಕದಲ್ಲೂ ಚೆನ್ನಾಗಿ ನೋಡ್ಕೊಳ್ತಾನೆ. ಯಾಕಂದ್ರೆ ಆಗ ‘ಎಲ್ಲ ಜೀವಿಗಳ ಬಯಕೆಯನ್ನ ಈಡೇರಿಸ್ತೀನಿ’ ಅಂತ ಆತನು ಮಾತು ಕೊಟ್ಟಿದ್ದಾನೆ. ಆ ನಂಬಿಕೆ ಇಟ್ಕೊಂಡು ಯಾವಾಗ್ಲೂ ಪ್ರಾರ್ಥನೆ ಮಾಡೋಣ.—ಕೀರ್ತ. 145:16. w23.05 8 ¶4; 13 ¶17-18
ಮಂಗಳವಾರ, ಜೂನ್ 3
ಯೆಹೋವ ನನಗೆ ಮಾಡಿರೋ ಎಲ್ಲ ಒಳ್ಳೇ ವಿಷ್ಯಗಳಿಗಾಗಿ ಆತನ ಋಣನ ನಾನು ಹೇಗೆ ತೀರಿಸಲಿ?—ಕೀರ್ತ. 116:12.
ಗುರಿ ಮುಟ್ಟೋದ್ರಿಂದ ಏನೆಲ್ಲಾ ಪ್ರಯೋಜನ ಆಗುತ್ತೆ ಅಂತ ಯೋಚ್ನೆ ಮಾಡಿ. ನೀವು ಯಾವ ಗುರಿ ಇಟ್ಟಿದ್ದೀರಾ? ಬೈಬಲ್ ಓದಬೇಕು, ಪ್ರಾರ್ಥನೆ ಮಾಡಬೇಕು ಅನ್ನೋ ಗುರಿ ಇಟ್ಟಿದ್ದೀರಾ? ಹಾಗಾದ್ರೆ ಇದನ್ನ ಮಾಡೋದ್ರಿಂದ ಯೆಹೋವನ ಜೊತೆಗಿರೋ ನಿಮ್ಮ ಸ್ನೇಹ ಹೇಗೆ ಜಾಸ್ತಿಯಾಗುತ್ತೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. (ಕೀರ್ತ. 145:18, 19) ಒಳ್ಳೇ ಗುಣಗಳನ್ನ ಬೆಳೆಸ್ಕೊಳ್ಳೋ ಗುರಿ ಇಟ್ಟಿದ್ದೀರಾ? ಹಾಗಿದ್ರೆ ಅದ್ರಿಂದ ಜನ್ರ ಜೊತೆಗಿರೋ ನಿಮ್ಮ ಸ್ನೇಹ ಎಷ್ಟು ಚೆನ್ನಾಗಿ ಆಗುತ್ತೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. (ಕೊಲೊ. 3:14) ಈ ರೀತಿ ನೀವು ಏನೇ ಗುರಿ ಇಟ್ರೂ ಅದ್ರಿಂದ ಏನೇನ್ ಪ್ರಯೋಜನ ಸಿಗುತ್ತೆ ಅಂತ ಒಂದ್ ಕಡೆ ಬರೆದಿಡಿ. ಅದನ್ನ ಆಗಾಗ ನೋಡ್ತಾ ಇರಿ. ಗುರಿ ಮುಟ್ಟೋಕೆ ಸಹಾಯ ಮಾಡೋ ಫ್ರೆಂಡ್ಸ್ ಜೊತೆ ಸಮಯ ಕಳೀರಿ. (ಜ್ಞಾನೋ. 13:20) ಛಲ ಇದ್ದಾಗ ಮಾತ್ರ ಗುರಿ ಮುಟ್ಟೋಕೆ ಆಗುತ್ತೆ. ನಾವು ಪ್ರಯತ್ನ ಹಾಕಿಲ್ಲಾಂದ್ರೆ ಗುರಿ ಮುಟ್ಟೋಕೆ ಆಗೋದೇ ಇಲ್ಲ. ಆದ್ರೆ ಗುರಿ ಮುಟ್ಟೋ ತನಕ ನಮ್ಮಲ್ಲಿ ಯಾವಾಗ್ಲೂ ಛಲ ಇರುತ್ತೆ ಅಂತ ಹೇಳಕ್ಕಾಗಲ್ಲ. ಒಂದಿನ ಇರುತ್ತೆ, ಇನ್ನೊಂದಿನ ಇರಲ್ಲ. ಹಾಗಂತ ನಮ್ಮಿಂದ ಗುರಿ ಮುಟ್ಟೋಕೇ ಆಗಲ್ಲ ಅಂತಾನಾ? ಹಾಗೇನಿಲ್ಲ. ಛಲ ಕಮ್ಮಿ ಆದಾಗ್ಲೂ ನಮ್ಮಿಂದ ಗುರಿ ಮುಟ್ಟೋಕೆ ಆಗುತ್ತೆ. ಅದಕ್ಕೋಸ್ಕರ ನಾವು ಕೆಲವು ವಿಷ್ಯಗಳನ್ನ ಮಾಡಬೇಕು. ಅದು ನಮಗೆ ಇಷ್ಟ ಇಲ್ಲಾಂದ್ರೂ ಮಾಡಬೇಕು. w23.05 27-28 ¶5-8
ಬುಧವಾರ, ಜೂನ್ 4
ಒಬ್ಬನು ಏನು ಬಿತ್ತುತ್ತಾನೋ ಅದನ್ನೇ ಕೊಯ್ತಾನೆ.—ಗಲಾ. 6:7.
ನಾವೇನೇ ಮಾಡಿದ್ರು ಅದಕ್ಕೆ ನಾವೇ ಜಾವಾಬ್ದಾರರು ಅನ್ನೋ ಪ್ರಜ್ಞೆ ನಮ್ಮಲ್ಲಿದ್ರೆ ತಪ್ಪಾದಾಗ, ಅದನ್ನ ಒಪ್ಕೊತೀವಿ. ‘ನಾನು ಮಾಡಿದ್ದೇ ಸರಿ’ ಅಂತ ಸಮರ್ಥಿಸಿಕೊಳ್ಳೋಕೆ ಹೋಗಲ್ಲ. ಹಾಗಂತ ಇದಕ್ಕೆಲ್ಲ ನಾನೇ ಕಾರಣ ಅಂತ ಕೊರಗ್ತಾ ಇರಬೇಡಿ. ಬೇರೆಯವ್ರ ತಲೆ ಮೇಲೂ ಹಾಕಬೇಡಿ. ಅದ್ರ ಬದ್ಲು ನಿಮ್ಮ ತಪ್ಪನ್ನ ಒಪ್ಕೊಂಡು ಈಗ ಏನು ಮಾಡಕ್ಕಾಗುತ್ತೋ ಅದನ್ನ ಮಾಡಿ. ಒಂದು ತಪ್ಪಾದ ತೀರ್ಮಾನ ತಂಗೊಂಡ ಮೇಲೆ ಅದನ್ನ ಹಿಂದೆ ಹೋಗಿ ಸರಿ ಮಾಡಕ್ಕಾಗದೇ ಇರಬಹುದು. ಅದ್ರಿಂದ ಮನಸ್ಸು ಚುಚ್ತಾ ಇದ್ರೆ ಯೆಹೋವ ದೇವರ ಹತ್ರ ತಪ್ಪನ್ನ ಒಪ್ಕೊಂಡು, ಕ್ಷಮೆ ಕೇಳಿ. (ಕೀರ್ತ. 25:11; 51:3, 4) ಬೇರೆಯವ್ರ ಮನಸ್ಸನ್ನ ನೋವು ಮಾಡಿರೋದಾದ್ರೆ ಅವ್ರ ಹತ್ರಾನೂ ಕ್ಷಮೆ ಕೇಳಿ. ಅಗತ್ಯ ಬಿದ್ರೆ ಹಿರಿಯರ ಸಹಾಯನೂ ಪಡ್ಕೊಳ್ಳಿ. (ಯಾಕೋ. 5:14, 15) ನೀವು ಮಾಡಿರೋ ತಪ್ಪಿಂದ ಪಾಠ ಕಲಿತು ಅದನ್ನ ಮತ್ತೆ ಮಾಡೋಕೆ ಹೋಗಬೇಡಿ. ಇದನ್ನೆಲ್ಲ ಮಾಡಿದಾಗ ಯೆಹೋವ ನಿಮಗೆ ಕರುಣೆ ತೋರಿಸ್ತಾನೆ. ನಿಮಗೆ ಬೇಕಾದ ಸಹಾಯವನ್ನ ಕೊಟ್ಟೇ ಕೊಡ್ತಾನೆ.—ಕೀರ್ತ. 103:8-13. w23.08 28-29 ¶8-9
ಗುರುವಾರ, ಜೂನ್ 5
ಎಲ್ಲಿ ತನಕ ಪುರೋಹಿತ ಯೆಹೋಯಾದ ಯೆಹೋವಾಷನನ್ನ ಮಾರ್ಗದರ್ಶಿಸ್ತಾ ಇದ್ದನೋ ಅಲ್ಲಿ ತನಕ ಅವನು ಯೆಹೋವನಿಗೆ ಇಷ್ಟ ಆಗೋದ್ದನ್ನೇ ಮಾಡ್ತಾ ಇದ್ದ.—2 ಅರ. 12:2.
ಯೆಹೋಯಾದ ಯೆಹೋವಾಷನಿಗೆ ಯೆಹೋವನ ಬಗ್ಗೆ ಕಲಿಸ್ತಿದ್ದ. (2 ಅರ. 12:2) ಇದ್ರಿಂದ ರಾಜ ಯೆಹೋವಾಷ ತುಂಬ ಒಳ್ಳೆಯವನಾಗಿದ್ದ. ಯೆಹೋವ ದೇವರಿಗೆ ಏನಿಷ್ಟನೋ ಅದನ್ನೇ ಮಾಡ್ತಿದ್ದ. ಆದ್ರೆ ಯೆಹೋಯಾದ ತೀರಿಹೋದ ಮೇಲೆ ಈ ಯೆಹೋವಾಷ ಧರ್ಮಭ್ರಷ್ಟ ಅಧಿಕಾರಿಗಳ ಮಾತನ್ನ ಕೇಳೋಕೆ ಶುರುಮಾಡಿದ. (2 ಪೂರ್ವ. 24:4, 17, 18) ಆಗ ಯೆಹೋವ ದೇವರಿಗೆ ತುಂಬ ನೋವಾಯ್ತು. ಆತನು “ಅವ್ರನ್ನ ಮತ್ತೆ ತನ್ನ ಹತ್ರ ವಾಪಸ್ ಕರ್ಕೊಂಡು ಬರೋಕೆ ಪ್ರವಾದಿಗಳನ್ನ ಕಳಿಸ್ತಾನೇ ಇದ್ದನು . . . ಆದ್ರೆ ಅವರು ಆತನ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ.” ಯೆಹೋಯಾದನ ಮಗ ಜೆಕರ್ಯನ ಮಾತನ್ನೂ ಯೆಹೋವಾಷ ಕೇಳಲಿಲ್ಲ. ಜೆಕರ್ಯ ಯೆಹೋವನ ಪ್ರವಾದಿ ಅಷ್ಟೇ ಅಲ್ಲ, ಪುರೋಹಿತನೂ ಆಗಿದ್ದ ಮತ್ತು ಯೆಹೋವಾಷನ ಅತ್ತೆ ಮಗನಾಗಿದ್ದ. ಯೆಹೋವಾಷ ಇದೆಲ್ಲವನ್ನ ಮರೆತು ಜೆಕರ್ಯನನ್ನ ಕೊಲ್ಲಿಸಿದ. (2 ಪೂರ್ವ. 22:11; 24:19-22) ಯೆಹೋವಾಷ ದೇವರಿಗೆ ಭಯಪಡಲೇ ಇಲ್ಲ. “ನನ್ನನ್ನ ಬೇಡ ಅಂದವ್ರನ್ನ ನಾನೂ ಬೇಡ ಅಂತೀನಿ” ಅಂತ ಯೆಹೋವ ಮುಂಚೆನೇ ಹೇಳಿದ್ದನು. ಈ ಮಾತು ಯೆಹೋವಾಷನ ಜೀವನದಲ್ಲಿ ನಿಜ ಆಯ್ತು. (1 ಸಮು. 2:30) ಅರಾಮ್ಯರ ಒಂದು ಚಿಕ್ಕ ಸೈನ್ಯ ಯೆಹೋವಾಷನ “ದೊಡ್ಡ ಸೈನ್ಯನ” ಸೋಲಿಸಿಬಿಡ್ತು. ಆಗ ‘ಯೆಹೋವಾಷನಿಗೆ ತುಂಬ ಗಾಯ’ ಆಯ್ತು. (2 ಪೂರ್ವ. 24:24,25) ಆ ಸಮಯದಲ್ಲಿ ಅವನ ಸ್ವಂತ ಸೇವಕರೇ ಸಂಚು ಮಾಡಿ ಅವನನ್ನ ಸಾಯಿಸಿಬಿಟ್ರು. w23.06 18-19 ¶16-17
ಶುಕ್ರವಾರ, ಜೂನ್ 6
ಒಂದು ಕಾಲದಲ್ಲಿ ನೀವು ಕತ್ತಲಲ್ಲಿದ್ರಿ. ಆದ್ರೆ ಈಗ . . . ಬೆಳಕಲ್ಲಿದ್ದೀರ.—ಎಫೆ. 5:8.
ಪೌಲ ಮುಂಚೆ ಎಫೆಸದಲ್ಲಿ ಇದ್ದಾಗ, ಜನ್ರಿಗೆ ಸಿಹಿಸುದ್ದಿ ಸಾರಿದ್ದ ಮತ್ತು ಯೆಹೋವನ ಬಗ್ಗೆ ಕಲಿಸಿದ್ದ. (ಅ. ಕಾ. 19:1, 8-10; 20:20, 21) ಅವನಿಗೆ ಅಲ್ಲಿನ ಸಹೋದರರ ಮೇಲೆ ತುಂಬ ಪ್ರೀತಿ ಇತ್ತು. ಅವರು ಯೆಹೋವನಿಗೆ ನಿಯತ್ತಾಗಿ ಇರಬೇಕು ಅನ್ನೋ ಆಸೆನೂ ಇತ್ತು. ಅದಕ್ಕೇ ಅವ್ರಿಗೆ ಪತ್ರಗಳನ್ನ ಬರೆದ. ಎಫೆಸದಲ್ಲಿದ್ದ ಕ್ರೈಸ್ತರು ಮುಂಚೆ ಅಲ್ಲಿನ ಆಚಾರ-ವಿಚಾರಗಳನ್ನ ಮಾಡ್ತಿದ್ರು. ಅವ್ರಿಗೆ ಮೂಢ ನಂಬಿಕೆನೂ ಇತ್ತು. ಎಫೆಸದಲ್ಲಿ ಲೈಂಗಿಕ ಅನೈತಿಕತೆ, ನಾಚಿಕೆಗೆಟ್ಟ ನಡತೆ ಸರ್ವೇಸಾಮಾನ್ಯ ಆಗಿಬಿಟ್ಟಿತ್ತು. ಅವರು ನಾಟಕಗಳಲ್ಲಿ, ಹಬ್ಬ-ಹರಿದಿನಗಳಲ್ಲಿ ಅಶ್ಲೀಲ ವಿಷ್ಯಗಳ ಬಗ್ಗೆನೇ ಮಾತಾಡ್ತಿದ್ರು. (ಎಫೆ. 5:3) ಅಲ್ಲಿನ ಜನ್ರಿಗೆ “ನೈತಿಕ ಪ್ರಜ್ಞೆ ಒಂಚೂರು” ಇರ್ಲಿಲ್ಲ. ಒಂದರ್ಥದಲ್ಲಿ ಅವ್ರ ಮನಸ್ಸು ‘ಮರಗಟ್ಟಿ’ ಹೋಗಿತ್ತು. (ಎಫೆ. 4:17-19, ಪಾದಟಿಪ್ಪಣಿ) ಸತ್ಯ ಕಲಿಯೋಕೂ ಮುಂಚೆ ಅವ್ರಿಗೆ ಸರಿ ಯಾವುದು ತಪ್ಪು ಯಾವುದು ಅಂತ ಗೊತ್ತಿರ್ಲಿಲ್ಲ. ಹಾಗಾಗಿ ಅವರು ಮಾಡಿದ ತಪ್ಪಿಂದ ಅವ್ರ ಮನಸಾಕ್ಷಿನೂ ಚುಚ್ಚಲಿಲ್ಲ. ಅದಕ್ಕೇ ಪೌಲ “ಅವ್ರ ಮನಸ್ಸು ಕತ್ತಲಲ್ಲಿದೆ. ದೇವರು ನಮಗೆ ಕೊಡೋ ಜೀವವನ್ನ ಅವರು ಪಡ್ಕೊಳ್ಳಲ್ಲ” ಅಂತ ಹೇಳಿದ್ದ. ಆದ್ರೆ ಎಫೆಸದಲ್ಲಿದ್ದ ಕೆಲವರು ಕತ್ತಲಲ್ಲೇ ಇರ್ಲಿಲ್ಲ, ಬೆಳಕಿಗೆ ಬಂದ್ರು. w24.03 20 ¶2, 4; 21 ¶5-6
ಶನಿವಾರ, ಜೂನ್ 7
ಯೆಹೋವನಲ್ಲಿ ನಿರೀಕ್ಷೆ ಇಡೋರು ಹೊಸಬಲ ಪಡಿತಾರೆ. ಅವರು . . . ಬಳಲಿ ಹೋಗಲ್ಲ.—ಯೆಶಾ. 40:31.
ಗಿದ್ಯೋನ ನ್ಯಾಯಾಧೀಶನಾಗಿ ಕೆಲಸ ಮಾಡೋಕೆ ತುಂಬ ಶ್ರಮ ಹಾಕಬೇಕಿತ್ತು. ಅವನು ಮಧ್ಯರಾತ್ರಿಯಲ್ಲಿ ಮಿದ್ಯಾನ್ಯರ ಮೇಲೆ ದಾಳಿ ಮಾಡಿದ. ಆದ್ರೆ ಮಿದ್ಯಾನ್ಯರು ತಪ್ಪಿಸ್ಕೊಂಡು ಓಡಿದ್ರು. ಆಗ ಗಿದ್ಯೋನ ಇಜ್ರೇಲ್ ಕಣಿವೆಯಿಂದ ಯೋರ್ದನ್ ನದಿ ತನಕ ಅವ್ರನ್ನ ಅಟ್ಟಿಸ್ಕೊಂಡು ಹೋದ. (ನ್ಯಾಯ. 7:22) ಗಿದ್ಯೋನನಿಗೆ ತುಂಬ ಸುಸ್ತಾಗಿ ಹೋಯ್ತು. ಹಾಗಂತ ಅವನು ‘ಸಾಕು ಹೋಗ್ಲಿ’ ಅಂತ ಅಂದ್ಕೊಂಡ್ನಾ? ಇಲ್ಲ. ಅವನು ಮತ್ತು ಅವನ 300 ಸೈನಿಕರು ಆ ನದಿಯನ್ನ ದಾಟಿ ಅವ್ರನ್ನ ಅಟ್ಟಿಸ್ಕೊಂಡು ಹೋದ್ರು. ಕೊನೆಗೆ ಅವ್ರನ್ನ ಸೋಲಿಸಿಬಿಟ್ರು. (ನ್ಯಾಯ. 8:4-12) ಗಿದ್ಯೋನ ಯೆಹೋವ ಶಕ್ತಿ ಕೊಡ್ತಾನೆ ಅಂತ ನಂಬಿದ. ಅದು ಸುಳ್ಳಾಗಲಿಲ್ಲ, ಯೆಹೋವ ಅವನಿಗೆ ಶಕ್ತಿ ಕೊಟ್ಟನು. (ನ್ಯಾಯ. 6:14, 34) ಒಂದು ಸಲ ಇಬ್ರು ಮಿದ್ಯಾನ್ಯ ರಾಜರನ್ನ ಗಿದ್ಯೋನ ಮತ್ತು ಅವನ ಸೈನಿಕರು ಅಟ್ಟಿಸ್ಕೊಂಡು ಹೋಗ್ತಿದ್ರು. ಆದ್ರೆ ಆ ರಾಜರು ಒಂಟೆ ಮೇಲೆ ಹೋಗ್ತಾ ಇದ್ದಿರಬಹುದು. ಹಾಗಾಗಿ ಓಡ್ತಾ ಅವ್ರನ್ನ ಹಿಡಿಯೋಕೆ ಇಸ್ರಾಯೇಲ್ಯರಿಗೆ ಕಷ್ಟ ಆಗಿರುತ್ತೆ. (ನ್ಯಾಯ. 8:12, 21) ಆದ್ರೂ ಯೆಹೋವ ದೇವರ ಸಹಾಯದಿಂದ ಇವರು ಆ ರಾಜರನ್ನ ಹಿಡಿದ್ರು. ಹಿರಿಯರು ಕೂಡ ಗಿದ್ಯೋನನ ತರ ತಮ್ಮ ನೇಮಕನ ಮಾಡೋಕೆ ಯೆಹೋವ ಶಕ್ತಿ ಕೊಡ್ತಾನೆ ಅಂತ ನಂಬಬೇಕು. ಯಾಕಂದ್ರೆ ಯೆಹೋವ “ಯಾವತ್ತೂ ದಣಿಯಲ್ಲ, ಯಾವತ್ತೂ ಬಳಲಿ ಹೋಗಲ್ಲ.” ಆತನು ಅವ್ರಿಗೆ ಬೇಕಾದ ಶಕ್ತಿನ ಕೊಟ್ಟೇ ಕೊಡ್ತಾನೆ.—ಯೆಶಾ. 40:28, 29. w23.06 6 ¶14, 16
ಭಾನುವಾರ, ಜೂನ್ 8
[ಯೆಹೋವನು] ಕೈಬಿಡಲ್ಲ, ನಿಮ್ಮನ್ನ ಬಿಟ್ಟುಬಿಡಲ್ಲ.—ಧರ್ಮೋ. 31:6.
ನಮಗೆ ಏನೇ ಕಷ್ಟ ಬಂದ್ರೂ ನಮ್ಮ ಮನಸ್ಸು ಸ್ಥಿರವಾಗಿ ಇರೋಕಾಗುತ್ತೆ. ಹಾಗಾಗಿ ಯೆಹೋವ ದೇವರನ್ನ ನಂಬಿ. ಬಾರಾಕ ಯೆಹೋವನ ಮೇಲೆ ನಂಬಿಕೆ ಇಟ್ಟಿದ್ರಿಂದಾನೇ ಯುದ್ಧದಲ್ಲಿ ಗೆಲ್ಲೋಕೆ ಆಯ್ತು. ಬಾರಾಕ ಕಾನಾನಿನ ಸೇನಾಪತಿಯಾದ ಸಿಸೆರನ ವಿರುದ್ಧ ಯುದ್ಧಕ್ಕೆ ಹೋಗಬೇಕಾಗಿತ್ತು. ಸಿಸೆರನ ಸೈನ್ಯದ ಹತ್ರ ಎಲ್ಲಾ ಆಯುಧಗಳಿತ್ತು, 900 ರಥಗಳಿತ್ತು. ಆದ್ರೆ ಬಾರಾಕನ ಸೈನಿಕರ ಹತ್ರ ಈಟಿ, ಗುರಾಣಿ ಏನೂ ಇರಲಿಲ್ಲ. (ನ್ಯಾಯ. 5:8) ಆದ್ರೆ ದೆಬೋರ ‘ನೀನು ಬೆಟ್ಟದಿಂದ ಇಳಿದು ಸಮತಟ್ಟಾದ ಪ್ರದೇಶಕ್ಕೆ ಹೋಗಿ ಯುದ್ಧ ಮಾಡು’ ಅಂತ ಬಾರಾಕನಿಗೆ ಹೇಳಿದಳು. ಮೈದಾನದಲ್ಲಿ ರಥಗಳು ಸುಲಭವಾಗಿ ಓಡುತ್ತೆ. ಹಾಗಾಗಿ ಕಾನಾನ್ಯರಿಗೆ ಯುದ್ಧ ಮಾಡೋಕೆ ಕಷ್ಟ ಆಗಲ್ಲ ಅಂತ ಗೊತ್ತಿದ್ರೂ ಬಾರಾಕ ದೆಬೋರ ಹೇಳಿದ ಹಾಗೆನೇ ಮಾಡಿದ. ಅವನು ಮತ್ತು ಅವನ ಸೈನಿಕರು ತಾಬೋರ್ ಬೆಟ್ಟದಿಂದ ಇಳಿತಾ ಇರುವಾಗ್ಲೇ ಯೆಹೋವ ಮಳೆ ಬರೋ ತರ ಮಾಡಿದನು. ಆಗ ಸಿಸೆರನ ಸೈನ್ಯದ ರಥಗಳು ಕೆಸರಲ್ಲಿ ಸಿಕ್ಕಿಹಾಕೊಂಡ್ವು. ಬಾರಾಕ ಗೆದ್ದುಬಿಟ್ಟ. (ನ್ಯಾಯ. 4:1-7, 10, 13-16) ಬಾರಾಕನ ತರ ನಾವು ಕೂಡ ಯೆಹೋವನನ್ನ ನಂಬಬೇಕು. ಆತನು ಯಾರಿಂದ ನಿರ್ದೇಶನ ಕೊಡ್ತಾ ಇದ್ದಾನೋ ಅವ್ರನ್ನೂ ನಂಬಬೇಕು. ಆಗ ಯೆಹೋವ ನಮ್ಮನ್ನೂ ಗೆಲ್ಲಿಸ್ತಾನೆ. w23.07 19 ¶17-18
ಸೋಮವಾರ, ಜೂನ್ 9
ಆದ್ರೆ ಕೊನೇ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ.—ಮತ್ತಾ. 24:13.
ನಮಗೆ ಶಾಶ್ವತ ಜೀವ ಸಿಗಬೇಕಂದ್ರೆ ನಮಗೆ ತಾಳ್ಮೆ ಇರಲೇಬೇಕು. ಇದೇ ತರದ ತಾಳ್ಮೆಯನ್ನ ಹಿಂದಿನ ಕಾಲದಲ್ಲಿದ್ದ ನಂಬಿಗಸ್ತ ಸೇವಕರು ತೋರಿಸಿದ್ರು. ಇವತ್ತಲ್ಲ ನಾಳೆ ದೇವರು ಕೊಟ್ಟಿರೋ ಮಾತು ಖಂಡಿತ ನಿಜ ಆಗುತ್ತೆ ಅಂತ ನಾವು ಅವರ ತರ ನಂಬಬೇಕು. (ಇಬ್ರಿ. 6:11, 12) ಬೈಬಲ್ ನಮ್ಮನ್ನ ರೈತರಿಗೆ ಹೋಲಿಸುತ್ತೆ. (ಯಾಕೋ. 5:7, 8) ಹೇಗಂದ್ರೆ ಒಬ್ಬ ರೈತ ಕಷ್ಟ ಪಟ್ಟು ಬೀಜ ಬಿತ್ತಿ ನೀರು ಹಾಯಿಸ್ತಾನೆ. ಯಾವ ದಿನ ಬೆಳೆ ಕೈಗೆ ಸಿಗುತ್ತೆ ಅಂತ ಅವನಿಗೆ ಗೊತ್ತಿರಲ್ಲ. ಆದ್ರೂ ಒಂದಲ್ಲಾ ಒಂದಿನ ಬೆಳೆ ಸಿಕ್ಕೇ ಸಿಗುತ್ತೆ ಅಂತ ತಾಳ್ಮೆಯಿಂದ ಕಾಯ್ತಾನೆ. ಅದೇ ತರ ನಮಗೂ “[ನಮ್ಮ] ಒಡೆಯ ಯಾವ ದಿನ ಬರ್ತಾನೆ ಅಂತ . . . ಗೊತ್ತಿಲ್ಲ.” ಆದ್ರೂ ಯೇಸು ಕಲಿಸಿದ್ದನ್ನ ಪಾಲಿಸ್ತಾ ಇರ್ತೀವಿ. (ಮತ್ತಾ. 24:42) ಯೆಹೋವನ ಸೇವೆ ಮಾಡ್ಕೊಂಡು ಆ ದಿನಕ್ಕೋಸ್ಕರ ತಾಳ್ಮೆಯಿಂದ ಕಾಯ್ತೀವಿ. ಒಂದುವೇಳೆ ನಾವು ತಾಳ್ಮೆ ತೋರಿಸಲಿಲ್ಲಾಂದ್ರೆ ಕಾದು-ಕಾದು ಸುಸ್ತಾಗಿ ಕೂಡಲೆ ಎಲ್ಲಿ ಲಾಭ ಸಿಗುತ್ತೋ ಅದ್ರ ಹಿಂದೆ ಹೋಗಿಬಿಡ್ತೀವಿ. ಹೀಗೆ ಸತ್ಯದಿಂದಾನೇ ದೂರ ಆಗಿಬಿಡ್ತೀವಿ. ಆದ್ರೆ ನಾವು ತಾಳ್ಮೆಯಿಂದ ಕೊನೇ ವರೆಗೂ ಕಾಯೋದಾದ್ರೆ ರಕ್ಷಣೆ ಸಿಗುತ್ತೆ.—ಮೀಕ 7:7. w23.08 22 ¶7
ಮಂಗಳವಾರ, ಜೂನ್ 10
ಪಾದ ಮತ್ತು ಬೆರಳುಗಳು ಕಬ್ಬಿಣ ಮತ್ತು ಜೇಡಿಮಣ್ಣಿನಿಂದ ಬೆರೆತಿತ್ತು. —ದಾನಿ. 2:42.
ದಾನಿಯೇಲ 2:41-43ರಲ್ಲಿರೋ ಭವಿಷ್ಯವಾಣಿಯನ್ನ ದಾನಿಯೇಲ ಪುಸ್ತಕ ಮತ್ತು ಪ್ರಕಟನೆ ಪುಸ್ತಕದಲ್ಲಿರೋ ಬೇರೆ ಭವಿಷ್ಯವಾಣಿಗಳ ಜೊತೆ ಹೋಲಿಸಿದಾಗ ಈ ಪಾದ ಶಕ್ತಿಶಾಲಿ ಆಗಿರೋ ಆ್ಯಂಗ್ಲೋ-ಅಮೆರಿಕನ್ ಲೋಕಶಕ್ತಿಯನ್ನ ಸೂಚಿಸುತ್ತೆ ಅಂತ ಗೊತ್ತಾಗುತ್ತೆ. ಈ ಲೋಕಶಕ್ತಿಯ “ಒಂದು ಭಾಗ ಗಟ್ಟಿಯಾಗಿರುತ್ತೆ, ಇನ್ನೊಂದು ಭಾಗ ನಾಜೂಕಾಗಿ ಇರುತ್ತೆ” ಅಂತ ದಾನಿಯೇಲ ಹೇಳಿದ. ಯಾಕಂದ್ರೆ ಕಬ್ಬಿಣದ ತರ ಬಲಶಾಲಿಯಾಗಿರೋ ಲೋಕಶಕ್ತಿ ಜೊತೆ ಜೇಡಿಮಣ್ಣನ್ನ ಸೂಚಿಸೋ ಜನ್ರು ಬೆರೆಯದೇ ಇರೋದ್ರಿಂದ ಅದನ್ನ ಬಲಹೀನ ಮಾಡ್ತಿದ್ದಾರೆ. ದೊಡ್ಡ ಮೂರ್ತಿಯ ಕನಸಿನ ಅರ್ಥನ ದಾನಿಯೇಲ ವಿವರಿಸಿದ್ರಿಂದ ನಮಗೆ ತುಂಬ ವಿಷ್ಯ ಗೊತ್ತಾಗುತ್ತೆ. ಒಂದು, ಅಮೆರಿಕ ಮತ್ತು ಬ್ರಿಟನ್ ಕೆಲವು ವಿಷ್ಯಗಳಲ್ಲಿ ತಮಗೆ ತುಂಬ ಶಕ್ತಿ ಇದೆ ಅಂತ ತೋರಿಸ್ಕೊಟ್ಟಿವೆ. ಉದಾಹರಣೆಗೆ, ಒಂದನೇ ಮತ್ತು ಎರಡನೇ ಮಹಾ ಯುದ್ಧಗಳನ್ನ ಗೆದ್ದಿರೋ ದೇಶಗಳಲ್ಲಿ ಈ ಎರಡು ದೇಶಗಳೂ ಇತ್ತು. ಈ ಲೋಕಶಕ್ತಿಯ ಒಂದು ಭಾಗ ನಾಜೂಕಾಗಿದೆ, ಇನ್ಮುಂದೆನೂ ನಾಜೂಕಾಗಿ ಇರುತ್ತೆ. ಯಾಕಂದ್ರೆ ಆ ದೇಶಗಳಲ್ಲಿರೋ ಜನ್ರು ಒಳಗೊಳಗೇ ಕಚ್ಚಾಡ್ತಾ ಇದ್ದಾರೆ. ಸರ್ಕಾರದ ವಿರುದ್ಧ ಆಗಾಗ ದಂಗೆ ಏಳ್ತಿದ್ದಾರೆ. ಎರಡು, ಈ ಲೋಕಶಕ್ತಿನೇ ಕೊನೇ ಲೋಕಶಕ್ತಿ ಆಗಿರುತ್ತೆ. ದೇವರ ಆಳ್ವಿಕೆ ಇದನ್ನು ಸಹ ನಾಶ ಮಾಡೋ ಮೂಲಕ ಎಲ್ಲಾ ಮಾನವ ಸರ್ಕಾರಗಳಿಗೆ ಅಂತ್ಯ ತರುತ್ತೆ. w23.08 10-11 ¶12-13.
ಬುಧವಾರ, ಜೂನ್ 11
ನಾನು ಸಂಕಟದಲ್ಲಿ ಇರುವಾಗ ಯೆಹೋವನನ್ನ ಕರೆದೆ, ಸಹಾಯಕ್ಕಾಗಿ ನಾನು ನನ್ನ ದೇವರಿಗೆ ಮೊರೆಯಿಡ್ತಾನೇ ಇದ್ದೆ. ಆತನು ನನ್ನ ಕೂಗನ್ನ ತನ್ನ ಆಲಯದಿಂದಾನೇ ಕೇಳಿಸ್ಕೊಂಡ.—ಕೀರ್ತ. 18:6.
ದಾವೀದನಿಗೆ ಕಷ್ಟಗಳು, ಸಮಸ್ಯೆಗಳು ಬಂದಾಗ ಕೆಲವೊಂದು ಸಲ ಅವನು ಕುಗ್ಗಿಹೋದ. (ಕೀರ್ತ. 18:4,5) ಆಗ ಯೆಹೋವ ತೋರಿಸಿದ ಪ್ರೀತಿ, ಕಾಳಜಿ ಅವನಿಗೆ ಹೊಸಬಲ ಕೊಡ್ತು. ಅಷ್ಟೇ ಅಲ್ಲ ಯೆಹೋವ ಅವನನ್ನ “ಹಚ್ಚಹಸುರಾಗಿ ಬೆಳೆದಿರೋ ಹುಲ್ಲುಗಾವಲಲ್ಲಿ” ಮತ್ತು “ಚೆನ್ನಾಗಿ ನೀರು ಹರಿಯೋ ಪ್ರದೇಶಗಳಿಗೆ” ನಡೆಸಿದನು. ಹೀಗೆ ಆತನು ದಾವೀದನಿಗೆ ಬೆನ್ನೆಲುಬಾಗಿ ನಿಂತು ತನ್ನ ಸೇವೆನ ಖುಷಿಖುಷಿಯಾಗಿ ಮಾಡೋಕೆ ಶಕ್ತಿ ಕೊಟ್ಟನು. (ಕೀರ್ತ. 18:28-32) “ಯೆಹೋವ ಶಾಶ್ವತ ಪ್ರೀತಿ ತೋರಿಸಿದ್ರಿಂದಾನೇ” ಇವತ್ತು ನಮಗೂ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗ್ತಿದೆ. (ಪ್ರಲಾ. 3:22; ಕೊಲೊ. 1:11) ದಾವೀದನಿಗೆ ತುಂಬ ಶತ್ರುಗಳು ಇದ್ದಿದ್ರಿಂದ ಅವನ ಜೀವ ಅಪಾಯದಲ್ಲಿತ್ತು. ಆದ್ರೆ ಯೆಹೋವ ಅವನನ್ನ ಪ್ರೀತಿಸಿದ್ರಿಂದ ತನ್ನನ್ನ ಕಾಪಾಡ್ತಾನೆ ಅನ್ನೋ ನಂಬಿಕೆ ಅವನಿಗಿತ್ತು. ಅದಕ್ಕೇ ಅವನು ನೆಮ್ಮದಿಯಿಂದ ಇದ್ದ. ಅಷ್ಟೇ ಅಲ್ಲ ಪ್ರತಿಕ್ಷಣನೂ ಯೆಹೋವ ತನ್ನ ಜೊತೆ ಇರ್ತಾನೆ, ತನ್ನನ್ನ ಕಾಪಾಡ್ತಾನೆ ಅನ್ನೋ ಭರವಸೆ ಅವನಿಗೆ ಇತ್ತು. ಅದಕ್ಕೇ ಅವನು “[ಯೆಹೋವ] ಎಲ್ಲ ಭಯಗಳಿಂದ ನನ್ನನ್ನ ಕಾಪಾಡಿದ” ಅಂತ ಹಾಡಿದ. (ಕೀರ್ತ. 34:4) ದಾವೀದನಿಗೆ ಭಯ ಇತ್ತು ನಿಜ, ಆದ್ರೆ ಯೆಹೋವನ ಪ್ರೀತಿ ಆ ಭಯದಿಂದ ಹೊರಗೆ ಬರೋಕೆ ಅವನಿಗೆ ಸಹಾಯ ಮಾಡ್ತು. w24.01 30 ¶15-17
ಗುರುವಾರ, ಜೂನ್ 12
ಪಾಪಿಗಳ ಮೋಡಿಗೆ ಮರುಳಾಗಬೇಡ.—ಜ್ಞಾನೋ. 1:10.
ಯೆಹೋವಾಷ ಮಾಡಿದ ತಪ್ಪಾದ ತೀರ್ಮಾನಗಳಿಂದ ಪಾಠ ಕಲಿರಿ. ಮಹಾ ಯಾಜಕ ಯೆಹೋಯಾದ ತೀರಿಹೋದ ಮೇಲೆ ಯೆಹೋವಾಷ ಏನು ಮಾಡಿದ? ಅವನು ಯೆಹೂದದ ಅಧಿಕಾರಿಗಳ ಸಹವಾಸ ಮಾಡಿದ. (2 ಪೂರ್ವ. 24:17, 18) ಅವ್ರಿಗೆ ಯೆಹೋವನ ಮೇಲೆ ಒಂಚೂರು ಪ್ರೀತಿ ಇರ್ಲಿಲ್ಲ. ಯೆಹೋವಾಷ ಇಂಥವರ ಸಹವಾಸ ಮಾಡದೆ ದೂರ ಇರಬೇಕಿತ್ತು. ಆದ್ರೆ ಅವನು ಅವ್ರ ಮಾತನ್ನ, ಅವರು ಕೊಟ್ಟ ಕೆಟ್ಟ ಸಲಹೆಯನ್ನೇ ಕೇಳಿದ. ಆಗ ಅವನ ಚಿಕ್ಕಪ್ಪನ ಮಗನಾದ ಜೆಕರ್ಯ ಅವನನ್ನ ತಿದ್ದೋಕೆ ಬಂದ. ಆದ್ರೆ ಯೆಹೋವಾಷ ಅವನನ್ನೇ ಕೊಂದುಬಿಟ್ಟ. (2 ಪೂರ್ವ. 24:20, 21; ಮತ್ತಾ. 23:35) ಇದು ಎಂಥ ದಡ್ಡತನ ಅಲ್ವಾ! ಅವನು ಚಿಕ್ಕವನಿದ್ದಾಗ ಜೀವನ ತುಂಬ ಚೆನ್ನಾಗಿತ್ತು. ಆದ್ರೆ ಆಮೇಲೆ, ಅವನು ಕೊಲೆಗಾರನಾದ, ಧರ್ಮಭ್ರಷ್ಟನಾದ. ಕೊನೇಲಿ ಅವನ ಸ್ವಂತ ಸೇವಕರೇ ಅವನನ್ನ ಕೊಂದುಬಿಟ್ರು. (2 ಪೂರ್ವ. 24:22-25) ಒಂದುವೇಳೆ, ಯೆಹೋವಾಷ ಯೆಹೋವನ ಮಾತನ್ನ, ಯೆಹೋವನನ್ನ ಪ್ರೀತಿಸುವವ್ರ ಮಾತನ್ನ ಕೇಳಿದ್ದಿದ್ರೆ ಅವನ ಜೀವನ ಎಷ್ಟು ಚೆನ್ನಾಗಿ ಇರ್ತಿತ್ತು? w23.09 9 ¶6
ಶುಕ್ರವಾರ, ಜೂನ್ 13
ಹೆದ್ರಬೇಡ.—ಲೂಕ 5:10.
ಪೇತ್ರ ಕೊನೇ ತನಕ ನಿಯತ್ತಾಗಿ ಇರ್ತಾನೆ ಅನ್ನೋ ನಂಬಿಕೆ ಇದಿದ್ರಿಂದ “ಹೆದ್ರಬೇಡ” ಅಂತ ಯೇಸು ಅವನಿಗೆ ಹೇಳಿದನು. ಯೇಸುಗಿರೋ ನಂಬಿಕೆನ ನೋಡಿ ಪೇತ್ರ ಒಂದು ಒಳ್ಳೇ ತೀರ್ಮಾನ ಮಾಡಿದ. ಅವನು ಮತ್ತು ಅವನ ತಮ್ಮ ಅಂದ್ರೆಯ ಮೀನು ಹಿಡಿಯೋ ಕೆಲಸ ಬಿಟ್ಟು ಯೇಸು ಜೊತೆ ಸೇವೆ ಮಾಡೋಕೆ ಹೋದ್ರು. ಇದ್ರಿಂದ ಯೆಹೋವ ದೇವರು ಅವ್ರನ್ನ ತುಂಬ ಆಶೀರ್ವಾದ ಮಾಡಿದನು. (ಮಾರ್ಕ 1:16-18) ಯೇಸು ರೋಗಿಗಳನ್ನ ವಾಸಿ ಮಾಡಿದನು, ಕೆಟ್ಟ ದೇವದೂತರನ್ನ ಬಿಡಿಸಿದನು, ತೀರಿಹೋದವ್ರಿಗೆ ಮತ್ತೆ ಜೀವ ಕೊಟ್ಟನು. ಪೇತ್ರ ಯೇಸು ಜೊತೆನೇ ಇದ್ದು ಸೇವೆ ಮಾಡ್ತಾ ಇದ್ದಿದ್ರಿಂದ ಇದನ್ನೆಲ್ಲ ಕಣ್ಣಾರೆ ನೋಡಕ್ಕಾಯ್ತು. (ಮತ್ತಾ. 8:14-17; ಮಾರ್ಕ 5:37, 41, 42) ಅಷ್ಟೇ ಅಲ್ಲ ಮುಂದೆ ದೇವರ ಆಳ್ವಿಕೆಯಲ್ಲಿ ಯೇಸು ರಾಜನಾಗ್ತಾನೆ ಅನ್ನೋದನ್ನ ಒಂದು ದರ್ಶನದಲ್ಲಿ ನೋಡಿದ. (ಮಾರ್ಕ 9:1-8; 2 ಪೇತ್ರ 1:16-18) ಇದನ್ನೆಲ್ಲ ನೋಡ್ತೀನಿ ಅಂತ ಪೇತ್ರ ಅಂದ್ಕೊಂಡೇ ಇರಲಿಲ್ಲ. ಅವನು ಒಂದುವೇಳೆ ತನಗೆ ಯೋಗ್ಯತೆನೇ ಇಲ್ಲ ಅಂತ ಅಂದ್ಕೊಂಡು ಸುಮ್ಮನೆ ಇದ್ದಿದ್ರೆ ಈ ಆಶೀರ್ವಾದಗಳೆಲ್ಲ ಸಿಗ್ತಿತ್ತಾ? ಇಲ್ಲ ಅಲ್ವಾ? w23.09 21 ¶4-5
ಶನಿವಾರ, ಜೂನ್ 14
ಯೇಸು “ಏಳು ಸಾರಿ ಅಲ್ಲ, 77 ಸಾರಿ ಕ್ಷಮಿಸಬೇಕು” ಅಂದನು.—ಮತ್ತಾ. 18:22.
ಪೇತ್ರ ಬರೆದ ಒಂದನೇ ಪತ್ರದಲ್ಲಿ ನಮಗೆ ಬೇರೆಯವ್ರ ಮೇಲೆ “ತುಂಬ ಪ್ರೀತಿ” ಇರಬೇಕು ಅಂತ ಬರೆದ. ಅಂಥ ಪ್ರೀತಿ ನಮ್ಮಲ್ಲಿದ್ರೆ ಬರೀ ಒಂದ್ ಸಲ ಎರಡ್ ಸಲ ಅಲ್ಲ, “ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ” ಕ್ಷಮಿಸ್ತೀವಿ. (1 ಪೇತ್ರ 4:8) ಈ ಮಾತುಗಳನ್ನ ಬರೆದಾಗ ಪೇತ್ರನಿಗೆ ಏನು ನೆನಪಾಗಿರಬಹುದು? ಸುಮಾರು ವರ್ಷಗಳ ಹಿಂದೆ ಯೇಸು ಪೇತ್ರನಿಗೆ ಹೇಗೆ ಕ್ಷಮಿಸಬೇಕು ಅಂತ ಕಲಿಸಿದ ಪಾಠ ನೆನಪಾಗಿರಬಹುದು. ಆದ್ರೆ ಪೇತ್ರ ತಾನೆಷ್ಟು ಉದಾರಿ ಅಂತ ತೋರಿಸ್ಕೊಳ್ಳೋಕೆ ಯೇಸು ಹತ್ರ ಹೋಗಿ ‘ನಾನು ನನ್ನ ಸಹೋದರನನ್ನ 7 ಸಲ ಕ್ಷಮಿಸಿದ್ರೆ ಸಾಕಲ್ವಾ’ ಅಂತ ಕೇಳಿದ. ಆಗ ಯೇಸು “ಏಳು ಸಾರಿ ಅಲ್ಲ, 77 ಸಾರಿ ಕ್ಷಮಿಸಬೇಕು” ಅಂದನು. ಅಂದ್ರೆ ಜೀವನಪೂರ್ತಿ ಕ್ಷಮಿಸಬೇಕು ಅಂತ ಹೇಳಿದನು. (ಮತ್ತಾ. 18:21) ಈ ತರ ಮಾಡೋಕೆ ನಿಮಗೆ ಕೆಲವೊಮ್ಮೆ ಕಷ್ಟ ಆಗುತ್ತಾ? ಹಿಂದಿನ ಕಾಲದಲ್ಲಿದ್ದ ಕೆಲವು ಸೇವಕರಿಗೂ ಕೆಲವೊಮ್ಮೆ ಕಷ್ಟ ಆಗಿತ್ತು. ಆದ್ರೂ ಬೇರೆಯವ್ರನ್ನ ಕ್ಷಮಿಸಿ ಅವ್ರ ಜೊತೆ ಚೆನ್ನಾಗಿರೋದು ತುಂಬ ಮುಖ್ಯ. ಅದಕ್ಕೋಸ್ಕರ ಏನು ಮಾಡಬೇಕೋ ಅದನ್ನೆಲ್ಲ ಮಾಡಿ.w23.09 29 ¶12
ಭಾನುವಾರ, ಜೂನ್ 15
ಯೆಹೋವನಿಗೆ ಪ್ರಾರ್ಥನೆ ಮಾಡ್ದೆ, ಆತನು ನನಗೆ ಉತ್ರ ಕೊಟ್ಟನು.—ಯೋನ 2:2.
ಮೀನಿನ ಹೊಟ್ಟೆ ಒಳಗೆ ಇದ್ದಾಗ ಯೆಹೋವ ತನ್ನ ಪ್ರಾರ್ಥನೆಯನ್ನ ಖಂಡಿತ ಕೇಳಿಸ್ಕೊಳ್ತಾನೆ ಅಂತ ಯೋನ ಭರವಸೆ ಇಟ್ಟ. ಯೆಹೋವ ತನ್ನನ್ನ ಖಂಡಿತ ಕಾಪಾಡ್ತಾನೆ, ತನ್ನ ಕೈಬಿಡಲ್ಲ ಅನ್ನೋ ನಂಬಿಕೆ ಅವನಿಗಿತ್ತು. ಅವನ ನಂಬಿಕೆ ಸುಳ್ಳಾಗಲಿಲ್ಲ, ಯೆಹೋವ ಅವನನ್ನ ಕಾಪಾಡಿದನು. ಯೆಹೋವ ಕೊಟ್ಟ ನೇಮಕವನ್ನ ಮಾಡೋಕೂ ಅವನು ರೆಡಿಯಾದ. (ಯೋನ 2:10–3:4) ಸಿಕ್ಕಾಪಟ್ಟೆ ಚಿಂತೆ ಆದಾಗ ಎಲ್ಲಾನೂ ಯೆಹೋವ ದೇವ್ರ ಹತ್ರ ಹೇಳ್ಕೊಳ್ಳೋಕೆ ಕಷ್ಟ ಆಗ್ತಿದೆಯಾ? ಸುಸ್ತಾದಾಗ ಬೈಬಲ್ ಓದೋಕೆ ಶಕ್ತಿನೇ ಇಲ್ಲ ಅಂತ ಅನಿಸ್ತಿದೆಯಾ? ಹಾಗಿದ್ರೆ ಬೇಜಾರು ಮಾಡ್ಕೊಬೇಡಿ, ಯೆಹೋವ ದೇವರು ನಿಮ್ಮನ್ನ ಅರ್ಥಮಾಡ್ಕೊತಾನೆ. ನೀವೊಂದು ಚಿಕ್ಕ ಪ್ರಾರ್ಥನೆ ಮಾಡಿದ್ರೂ ಅದನ್ನ ಆತನು ಕೇಳಿಸ್ಕೊಳ್ತಾನೆ. ನಿಮಗೆ ನಿಜವಾಗ್ಲೂ ಏನು ಬೇಕು ಅಂತ ಅರ್ಥಮಾಡ್ಕೊಂಡು ಅದನ್ನ ಕೊಟ್ಟೇ ಕೊಡ್ತಾನೆ. (ಎಫೆ. 3:20) ನಿಮಗೆ ಹುಷಾರಿಲ್ಲದೆ ಇರೋದ್ರಿಂದ, ತುಂಬ ಸುಸ್ತಾಗಿ ಇರೋದ್ರಿಂದ ಅಥವಾ ಚಿಂತೆ ತುಂಬ್ಕೊಂಡಿರೋದ್ರಿಂದ ಬೈಬಲ್ ಓದೋಕೆ ಆಗದೇ ಇರಬಹುದು. ಆಗ ಬೈಬಲ್ ಮತ್ತು ನಮ್ಮ ಪುಸ್ತಕ, ಪತ್ರಿಕೆಗಳ ಆಡಿಯೋ ಕೇಳಿಸ್ಕೊಳ್ಳಿ. ಅಷ್ಟೇ ಅಲ್ಲ jw.orgನಲ್ಲಿರೋ ಒಂದು ಹಾಡನ್ನಾದ್ರೂ ಕೇಳಿಸ್ಕೊಳ್ಳಿ ಅಥವಾ ಒಂದು ವಿಡಿಯೋನಾದ್ರೂ ನೋಡಿ. ಆಗ ನಿಮಗೆ ಸಮಾಧಾನ ಆಗುತ್ತೆ. ನೀವು ಯೆಹೋವನಿಗೆ ಪ್ರಾರ್ಥನೆ ಮಾಡಿ, ಆತನು ನಿಮಗೆ ಹೇಗೆಲ್ಲಾ ಉತ್ತರ ಕೊಡ್ತಿದ್ದಾನೆ ಅಂತ ಕಂಡುಹಿಡಿಯೋಕೆ ಪ್ರಯತ್ನಿಸಿ. ಈ ತರ ಮಾಡಿದ್ರೆ ಯೆಹೋವನಿಂದ ಬಲ ಪಡ್ಕೊಳ್ಳೋಕೆ ನೀವೇ ಬಾಗಿಲು ತೆಗೆದ ಹಾಗಿರುತ್ತೆ. w23.10 13 ¶6; 14 ¶9
ಸೋಮವಾರ, ಜೂನ್ 16
ಈ ತರ, ಮೊದಲ್ನೇ ಡೇರೆ ಇರೋ ತನಕ ಪವಿತ್ರ ಸ್ಥಳಕ್ಕೆ ಹೋಗೋ ದಾರಿ ತೆರಿಲಿಲ್ಲ ಅಂತ ಪವಿತ್ರಶಕ್ತಿ ಸ್ಪಷ್ಟವಾಗಿ ತೋರಿಸ್ತು.—ಇಬ್ರಿ. 9:8.
ದೇವದರ್ಶನ ಡೇರೆಯಲ್ಲಿ “ಪವಿತ್ರ ಸ್ಥಳ” ಮತ್ತು “ಅತಿ ಪವಿತ್ರ ಸ್ಥಳ” ಅನ್ನೋ ಎರಡು ಕೋಣೆಗಳಿದ್ವು. ಅದ್ರ ಮಧ್ಯ ಕಸೂತಿ ಹಾಕಿದ ಒಂದು ಪರದೆ ಇತ್ತು. ಯೆರೂಸಲೇಮಲ್ಲಿ ಕಟ್ಟಿದ ಆಲಯದಲ್ಲೂ ಹೀಗೇ ಇತ್ತು. (ಇಬ್ರಿ. 9:2-5; ವಿಮೋ. 26:31-33) ಪವಿತ್ರ ಸ್ಥಳದಲ್ಲಿ ಚಿನ್ನದ ದೀಪಸ್ತಂಭ, ಧೂಪವೇದಿ ಮತ್ತು ಅರ್ಪಣೆಯ ರೊಟ್ಟಿಗಳನ್ನ ಇಡೋ ಮೇಜಿತ್ತು. ‘ಪುರೋಹಿತರಾಗಿ ಸೇವೆ ಮಾಡೋಕೆ ಅಭಿಷೇಕ ಪಡ್ಕೊಂಡವರು’ ಮಾತ್ರ ಈ ಪವಿತ್ರ ಸ್ಥಳದೊಳಗೆ ಹೋಗಬೇಕಿತ್ತು. (ಅರ. 3:3, 7, 10) ಅತಿ ಪವಿತ್ರ ಸ್ಥಳದಲ್ಲಿ ಚಿನ್ನದಿಂದ ಮಾಡಿದ ಒಪ್ಪಂದದ ಮಂಜೂಷ ಇತ್ತು. ಆ ಮಂಜೂಷದಿಂದನೇ ಯೆಹೋವ ಮಾತಾಡ್ತಿದ್ದನು. (ವಿಮೋ. 25:21, 22) ವರ್ಷಕ್ಕೆ ಒಂದು ಸಲ ಮಾಡ್ತಿದ್ದ ಪ್ರಾಯಶ್ಚಿತ್ತ ದಿನದಲ್ಲಿ ಮಹಾ ಪುರೋಹಿತ ಮಾತ್ರ ಅತಿ ಪವಿತ್ರ ಸ್ಥಳಕ್ಕೆ ಹೋಗ್ತಿದ್ದ. (ಯಾಜ. 16:2, 17) ಅವನು ತನ್ನ ಪಾಪಗಳಿಗೆ ಮತ್ತು ಜನ್ರ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡೋಕೆ ಪ್ರಾಣಿಗಳ ರಕ್ತ ತಗೊಂಡು ಅತಿ ಪವಿತ್ರ ಸ್ಥಳಕ್ಕೆ ಹೋಗ್ತಿದ್ದ. ಈ ಎರಡೂ ಸ್ಥಳಗಳು ಮುಂದೆ ಏನನ್ನ ಸೂಚಿಸ್ತಿತ್ತು ಅನ್ನೋದನ್ನ ಯೆಹೋವ ತನ್ನ ಜನ್ರಿಗೆ ಅರ್ಥ ಮಾಡಿಸಿದನು.—ಇಬ್ರಿ. 9:6, 7. w23.10 27 ¶12
ಮಂಗಳವಾರ, ಜೂನ್ 17
ನೀವು ಒಬ್ಬರನ್ನೊಬ್ರು ಪ್ರೀತಿಸ್ತಾ ಇರಬೇಕು.—ಯೋಹಾ. 15:17.
ನಾವು “ಒಬ್ಬರನ್ನೊಬ್ರು ಪ್ರೀತಿಸ್ತಾ ಇರಬೇಕಂತ” ಬೈಬಲ್ ಯಾವಾಗ್ಲೂ ಹೇಳುತ್ತೆ. (ಯೋಹಾ. 15:12,; ರೋಮ. 13:8; 1 ಥೆಸ. 4:9; 1 ಪೇತ್ರ 1:22; 1 ಯೋಹಾ. 4:11) ಆದ್ರೆ ಈ ಪ್ರೀತಿ ನಮ್ಮ ಒಳಗಡೆ ಇರುತ್ತೆ. ಅಂದ್ರೆ ನಮ್ಮ ಹೃದಯದಲ್ಲಿರುತ್ತೆ. ಅದನ್ನ ಯಾರಿಗೂ ನೋಡೋಕೆ ಆಗಲ್ಲ. ಹಾಗಾದ್ರೆ ಅದು ಬೇರೆಯವ್ರಿಗೆ ಕಾಣಬೇಕು ಅಂದ್ರೆ ನಾವು ಏನು ಮಾಡಬೇಕು? ನಮ್ಮ ಮಾತಲ್ಲಿ ಮತ್ತು ನಡ್ಕೊಳ್ಳೋ ರೀತಿಯಲ್ಲಿ ಅದನ್ನ ತೋರಿಸಬೇಕು. ನೀವು ಹೇಗೆ ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸಬಹುದು? ‘ಒಬ್ಬರ ಜೊತೆ ಒಬ್ಬರು ಸತ್ಯನೇ ಮಾತಾಡಿ.’ (ಜೆಕ. 8:16) “ನಿಮ್ಮ ಮಧ್ಯ ಶಾಂತಿ ಕಾಪಾಡ್ಕೊಳ್ಳಿ.” (ಮಾರ್ಕ 9:50) “ಗೌರವ ತೋರಿಸೋದ್ರಲ್ಲಿ ಒಬ್ರಿಗಿಂತ ಒಬ್ರು ಮುಂದೆ ಬನ್ನಿ.” (ರೋಮ. 12:10) “ಒಬ್ರು ಇನ್ನೊಬ್ರನ್ನ ಸೇರಿಸ್ಕೊಳ್ಳಿ.” (ರೋಮ. 15:7) “ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ.” (ಕೊಲೊ. 3:13) “ಒಬ್ರು ಇನ್ನೊಬ್ರ ಭಾರಗಳನ್ನ ಯಾವಾಗ್ಲೂ ಹೊತ್ಕೊಳ್ಳಿ.” (ಗಲಾ. 6:2) “ಒಬ್ರನ್ನೊಬ್ರು ಸಂತೈಸ್ತಾ ಇರಿ.” (1 ಥೆಸ. 4:18) “ಒಬ್ರನ್ನೊಬ್ರು . . . ಬಲಪಡಿಸ್ತಾ ಇರಿ.” (1 ಥೆಸ. 5:11) “ಒಬ್ರು ಇನ್ನೊಬ್ರ ಬಗ್ಗೆ ಪ್ರಾರ್ಥನೆ ಮಾಡಿ.”—ಯಾಕೋ 5:16. w23.11 9 ¶7-8
ಬುಧವಾರ, ಜೂನ್ 18
ನಿರೀಕ್ಷೆ ಇರೋದ್ರಿಂದ ಖುಷಿಪಡಿ.—ರೋಮ. 12:12.
ಪ್ರತಿದಿನ ನಾವೆಲ್ರೂ ಒಂದಲ್ಲಾ ಒಂದು ನಿರ್ಧಾರ ಮಾಡ್ತೀವಿ. ಉದಾಹರಣೆಗೆ, ಯಾರನ್ನ ಫ್ರೆಂಡ್ಸ್ ಮಾಡ್ಕೊಬೇಕು, ಎಂಥ ಮನೋರಂಜನೆ ನೋಡಬೇಕು, ಇನ್ನೂ ಜಾಸ್ತಿ ಓದಬೇಕಾ, ಮದುವೆ ಮಾಡ್ಕೊಬೇಕಾ, ಮಕ್ಕಳು ಮಾಡ್ಕೊಬೇಕಾ, ಯಾವ ಕೆಲಸಕ್ಕೆ ಹೋಗಬೇಕು ಅನ್ನೋ ನಿರ್ಧಾರಗಳನ್ನ ಮಾಡಬೇಕಾಗುತ್ತೆ. ಆಗ ‘ನಾನು ಮಾಡೋ ನಿರ್ಧಾರಗಳು ಈ ಕೆಟ್ಟ ಲೋಕ ನಾಶ ಆಗುತ್ತೆ, ಹೊಸಲೋಕ ಬೇಗ ಬರುತ್ತೆ ಅನ್ನೋದನ್ನ ನಾನು ನಂಬ್ತೀನಿ ಅಂತ ತೋರಿಸ್ಕೊಡುತ್ತಾ?’ ಅಥವಾ ‘ಇರೋದೇ ಸ್ವಲ್ಪ ದಿನ ಚೆನ್ನಾಗಿ ಮಜಾ ಮಾಡೋಣ ಅಂತ ಬೇರೆ ಜನ್ರ ತರ ಯೋಚ್ನೆ ಮಾಡ್ತಿದ್ದೀನಿ ಅಂತ ತೋರಿಸ್ಕೊಡುತ್ತಾ?’ ಅಂತ ಕೇಳ್ಕೊಬೇಕು. (ಮತ್ತಾ. 6:19, 20; ಲೂಕ 12:16-21) ಯಾಕಂದ್ರೆ ಹೊಸಲೋಕ ಬಂದೇ ಬರುತ್ತೆ ಅನ್ನೋ ನಂಬಿಕೆ ಇದ್ರೆ ಮಾತ್ರ ನಾವು ಸರಿಯಾಗಿ ನಿರ್ಧಾರಗಳನ್ನ ಮಾಡೋಕೆ ಆಗುತ್ತೆ. ನಮಗೆ ಕಷ್ಟ ಬಂದಾಗಲೂ ಜಾಸ್ತಿ ನಂಬಿಕೆ ಬೇಕು. ಕೆಲವೊಮ್ಮೆ ನಮಗೆ ಹಿಂಸೆ ಬರಬಹುದು, ಆರೋಗ್ಯ ಹಾಳಾಗಬಹುದು ಅಥವಾ ಬೇರೆ ಯಾವುದಾದ್ರೂ ಕಷ್ಟ ಬರಬಹುದು. ಅದು ಸ್ವಲ್ಪ ದಿನ ಇದ್ರೆ ಸಹಿಸ್ಕೊಳ್ತೀವಿ. ತುಂಬ ದಿನ ಆದ್ರೆ ಕುಗ್ಗಿಹೋಗಿಬಿಡ್ತೀವಿ. ಹಾಗಾಗಿ ಆ ಕಷ್ಟ ಎಷ್ಟೇ ದಿನ ಇದ್ರೂ ಅದನ್ನ ಸಹಿಸ್ಕೊಂಡು ಖುಷಿಖುಷಿಯಾಗಿ ಯೆಹೋವನ ಸೇವೆ ಮಾಡ್ತಾ ಇರೋಕೆ ಜಾಸ್ತಿ ನಂಬಿಕೆ ಬೇಕು.—1 ಪೇತ್ರ 1:6, 7. w23.04 27 ¶4-5
ಗುರುವಾರ, ಜೂನ್ 19
ಯಾವಾಗ್ಲೂ ಪ್ರಾರ್ಥನೆ ಮಾಡಿ.—1 ಥೆಸ. 5:17.
ನಮ್ಮ ಪ್ರಾರ್ಥನೆಗೆ ತಕ್ಕ ಹಾಗೆ ನಾವು ನಡ್ಕೊಬೇಕು ಅಂತ ಯೆಹೋವ ಇಷ್ಟ ಪಡ್ತಾನೆ. ಒಬ್ಬ ಸಹೋದರ ಅಧಿವೇಶನಕ್ಕೆ ಹೋಗೋಕೆ ತನ್ನ ಬಾಸ್ ಹತ್ರ ರಜೆ ಕೇಳೋಕೂ ಮುಂಚೆ ಯೆಹೋವನ ಹತ್ರ ಪ್ರಾರ್ಥಿಸ್ತಾನೆ ಅಂದ್ಕೊಳ್ಳಿ. ಆಗ ಯೆಹೋವ ಅವನ ಪ್ರಾರ್ಥನೆಗೆ ಹೇಗೆ ಉತ್ರ ಕೊಡ್ತಾನೆ? ಅವನ ಬಾಸ್ ಹತ್ರ ಹೋಗಿ ಮಾತಾಡೋಕೆ ಅವನಿಗೆ ಧೈರ್ಯ ಕೊಡಬಹುದು. ಆದ್ರೆ ಆ ಸಹೋದರ ಕೂಡ ತನ್ನ ಕಡೆಯಿಂದ ಪ್ರಯತ್ನ ಹಾಕಬೇಕಾಗುತ್ತೆ. ಅವನು ಒಂದು ಸಲ ಬಾಸ್ ಹತ್ರ ಹೋಗಿ ಕೇಳಿ ಸುಮ್ಮನಾಗೋದಲ್ಲ, ಪದೇಪದೇ ಕೇಳಬೇಕಾಗುತ್ತೆ. ಅಥವಾ ಬೇರೆ ಕೆಲಸದವ್ರ ಹತ್ರ ಶಿಫ್ಟ್ ಚೇಂಜ್ ಮಾಡ್ಕೊಳ್ಳೋಕೆ ಆಗುತ್ತಾ ಅಂತ ಕೇಳಿ ನೋಡಬೇಕಾಗುತ್ತೆ. ಇಲ್ಲಾಂದ್ರೆ ಅವತ್ತಿನ ಸಂಬಳ ಕೊಡದೇ ಇದ್ರೂ ಪರವಾಗಿಲ್ಲ ರಜೆ ಕೊಡಿ ಅಂತ ಬಾಸ್ ಹತ್ರ ಕೇಳಬೇಕಾಗುತ್ತೆ. ನಾವು ಪದೇಪದೇ ಪ್ರಾರ್ಥನೆ ಮಾಡಬೇಕು ಅಂತ ಯೆಹೋವ ಇಷ್ಟ ಪಡ್ತಾನೆ. ಕೆಲವೊಮ್ಮೆ ನಮ್ಮ ಪ್ರಾರ್ಥನೆಗಳಿಗೆ ತಕ್ಷಣ ಉತ್ರ ಸಿಗಲ್ಲ ಅಂತ ಯೇಸು ಹೇಳಿದನು. (ಲೂಕ 11:9) ಹಾಗಾಗಿ ಬಿಡದೇ ಪ್ರಾರ್ಥನೆ ಮಾಡ್ತಾ ಇರಿ. (ಲೂಕ 18:1-7) ಹಾಗೆ ಮಾಡಿದಾಗ ನಾವು ಕೇಳ್ತಾ ಇರೋ ವಿಷ್ಯ ಎಷ್ಟು ಮುಖ್ಯ ಅಂತ ತೋರಿಸ್ತೀವಿ. ಅಷ್ಟೇ ಅಲ್ಲ ನಮಗೆ ಸಹಾಯ ಮಾಡೋಕೆ ಯೆಹೋವನಿಗೆ ಆಗುತ್ತೆ ಅನ್ನೋ ನಂಬಿಕೆ ತೋರಿಸ್ತೀವಿ. w23.11 22 ¶10-11
ಶುಕ್ರವಾರ, ಜೂನ್ 20
ನಿರೀಕ್ಷೆ ನಮ್ಮನ್ನ ನಿರಾಶೆ ಮಾಡಲ್ಲ.—ರೋಮ. 5:5.
ಯೆಹೋವ ತನ್ನ ಸ್ನೇಹಿತನಾದ ಅಬ್ರಹಾಮನಿಗೆ, ಅವನಿಂದ ಒಂದು ದೊಡ್ಡ ಜನಾಂಗ ಆಗುತ್ತೆ ಅಂತ ಮಾತುಕೊಟ್ಟನು. (ಆದಿ. 15:5; 22:18) ಅವನಿಗೆ ಯೆಹೋವನ ಮೇಲೆ ತುಂಬ ನಂಬಿಕೆ ಇದ್ದಿದ್ರಿಂದ ಆತನು ಕೊಟ್ಟ ಮಾತು ನಡಿಯುತ್ತೆ ಅಂತ ಗ್ಯಾರಂಟಿ ಇತ್ತು. ಆದ್ರೆ ಅಬ್ರಹಾಮನಿಗೆ 100 ವರ್ಷ ಮತ್ತು ಸಾರಗೆ 90 ವರ್ಷ ಆದ್ರೂ ಅವ್ರಿಗೆ ಮಕ್ಕಳೇ ಇರ್ಲಿಲ್ಲ. (ಆದಿ. 21:1-7) ಆದ್ರೂ ಅಬ್ರಹಾಮ ಏನು ಮಾಡಿದ? “ಅವನು ತುಂಬ ಜನಾಂಗಗಳಿಗೆ ತಂದೆ ಆಗೋಕೆ ಆಗಲ್ಲ ಅಂತ ಅನಿಸಿದ್ರೂ ಆ ಮಾತು ನಿಜ ಆಗುತ್ತೆ ಅಂತ ಅವನು ಬಲವಾಗಿ ನಂಬಿದ” ಅಂದ್ರೆ ನಿರೀಕ್ಷೆ ಇಟ್ಟ. (ರೋಮ. 4:18) ಅಬ್ರಹಾಮ ಇಟ್ಟ ನಿರೀಕ್ಷೆ ಸುಳ್ಳಾಗಲಿಲ್ಲ. ಅವನಿಗೆ ಇಸಾಕ ಹುಟ್ಟಿದ. ಯೆಹೋವ ತಾನು ಕೊಟ್ಟ ಮಾತನ್ನ ಉಳಿಸ್ಕೊಳ್ತಾನೆ ಅಂತ ಅಬ್ರಹಾಮನಿಗೆ ಯಾಕೆ ಅಷ್ಟು ಗ್ಯಾರಂಟಿ ಇತ್ತು? ಅಬ್ರಹಾಮ ಯೆಹೋವ ದೇವರಿಗೆ ಒಳ್ಳೇ ಸ್ನೇಹಿತನಾಗಿದ್ರಿಂದ ದೇವರು ತಾನು ಕೊಟ್ಟ ಮಾತನ್ನ ನಿಜ ಮಾಡ್ತಾನೆ ಅಂತ “ಪೂರ್ತಿ ನಂಬಿದ.” (ರೋಮ. 4:21) ಆ ನಂಬಿಕೆ ಇದ್ದಿದ್ರಿಂದ ಯೆಹೋವ ಅಬ್ರಹಾಮನನ್ನ ಮೆಚ್ಚಿಕೊಂಡನು ಮತ್ತು ಅವನನ್ನ ನೀತಿವಂತ ಅಂತ ಕರೆದನು.—ಯಾಕೋ. 2:23. w23.12 8 ¶1-2
ಶನಿವಾರ, ಜೂನ್ 21
ದೇವರ ಮುಂದೆ ಚಿಕ್ಕಚಿಕ್ಕ ವಿಷ್ಯಗಳಲ್ಲಿ ನಂಬಿಕೆ ಉಳಿಸ್ಕೊಳ್ಳುವವರು ದೊಡ್ಡದೊಡ್ಡ ವಿಷ್ಯಗಳಲ್ಲೂ ನಂಬಿಕೆ ಉಳಿಸ್ಕೊಳ್ತಾರೆ. ಚಿಕ್ಕಚಿಕ್ಕ ವಿಷ್ಯಗಳಲ್ಲಿ ನಂಬಿಕೆ ಕಳ್ಕೊಳ್ಳುವವರು ದೊಡ್ಡದೊಡ್ಡ ವಿಷ್ಯಗಳಲ್ಲೂ ನಂಬಿಕೆ ಕಳ್ಕೊತಾರೆ.—ಲೂಕ 16:10.
ಒಬ್ಬ ಯುವ ಸಹೋದರ ತನಗೆ ಕೊಟ್ಟ ಕೆಲಸವನ್ನ ಜವಾಬ್ದಾರಿಯಿಂದ ಮಾಡಬೇಕು. ಯೇಸು ಬಗ್ಗೆ ಯೋಚಿಸಿ ನೋಡಿ. ಆತನು ಯೆಹೋವ ದೇವರು ಕೊಟ್ಟ ನೇಮಕವನ್ನ ಚೆನ್ನಾಗಿ ಮಾಡಿದ. ಯಾವತ್ತೂ ಬೇಜವಾಬ್ದಾರಿಯಿಂದ ನಡ್ಕೊಳ್ಳಲಿಲ್ಲ. ಕಷ್ಟ ಆದಾಗ್ಲೂ ಕೊಟ್ಟ ಕೆಲಸ ಮಾಡಿ ಮುಗಿಸಿದ. ಆತನಿಗೆ ಜನ್ರ ಮೇಲೆ ಮತ್ತು ತನ್ನ ಶಿಷ್ಯರ ಮೇಲೆ ತುಂಬ ಪ್ರೀತಿ ಇತ್ತು. ಎಷ್ಟರ ಮಟ್ಟಿಗೆ ಅಂದ್ರೆ ತನ್ನ ಜೀವಾನೇ ಅವ್ರಿಗಾಗಿ ಕೊಟ್ಟುಬಿಟ್ಟನು. (ಯೋಹಾ. 13:1) ಯುವ ಸಹೋದರರೇ, ನೀವೂ ಯೇಸು ತರ ಇರಿ, ಕೊಟ್ಟ ಕೆಲಸನ ಮಾಡಿ ಮುಗಿಸಿ. ಒಂದುವೇಳೆ ನಿಮಗೆ ಅದನ್ನ ಹೇಗೆ ಮಾಡಬೇಕು ಅಂತ ಗೊತ್ತಿಲ್ಲಾಂದ್ರೆ ದೀನತೆಯಿಂದ ಅನುಭವ ಇರೋ ಸಹೋದರರ ಹತ್ರ ಸಹಾಯ ಕೇಳಿ. ಏನೋ ಮಾಡಬೇಕಲ್ಲಾ ಅಂತ ಮಾಡಬೇಡಿ ಅಥವಾ ಅರ್ಧಂಬರ್ಧ ಮಾಡಬೇಡಿ. (ರೋಮ. 12:11) ಬದ್ಲಿಗೆ “ನೀವು ಏನೇ ಮಾಡಿದ್ರೂ ಅದನ್ನ ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ ಅಂತ ಪೂರ್ಣ ಮನಸ್ಸಿಂದ ಮಾಡಿ.” (ಕೊಲೊ. 3:23) ನೀವು ಪರಿಪೂರ್ಣರಲ್ಲ ಹಾಗಾಗಿ ಏನಾದ್ರೂ ತಪ್ಪು ಮಾಡಿದಾಗ ಅದನ್ನ ಒಪ್ಕೊಳ್ಳಿ, ದೀನತೆ ತೋರಿಸಿ.—ಜ್ಞಾನೋ. 11:2. w23.12 26 ¶8
ಭಾನುವಾರ, ಜೂನ್ 22
ಯೆಹೋವನಲ್ಲಿ ದೃಢವಿಶ್ವಾಸ ಇಡೋ ಮನುಷ್ಯ ಆಶೀರ್ವಾದ ಪಡಿತಾನೆ.—ಯೆರೆ. 17:7.
ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಗಳ ಕುಟುಂಬದಲ್ಲಿ ನಾವೂ ಒಬ್ರಾದಾಗ ನಮಗೆ ತುಂಬ ಖುಷಿಯಾಗುತ್ತೆ. ನಾವು ಯೆಹೋವನ ಫ್ರೆಂಡ್ಸ್ ಅಂತ ಹೇಳ್ಕೊಳ್ಳೋಕೆ ಹೆಮ್ಮೆ ಆಗುತ್ತೆ. ಅದಕ್ಕೇ ದಾವೀದ ಯೆಹೋವನಿಗೆ “ನಿನ್ನ ಅಂಗಳದಲ್ಲಿ ವಾಸಿಸೋಕೆ ನೀನು ಯಾರನ್ನ ಆರಿಸಿಕೊಳ್ತೀಯೋ ನೀನು ಯಾರನ್ನ ಕರೀತೀಯೋ ಅವನು ಭಾಗ್ಯವಂತ” ಅಂತ ಹೇಳಿದ. ಆ ಮಾತು ನೂರಕ್ಕೆ ನೂರು ಸತ್ಯ. (ಕೀರ್ತ. 65:4) ಆದ್ರೆ ಯೆಹೋವ ಎಲ್ರನ್ನೂ ತನ್ನ ಅಂಗಳಕ್ಕೆ ಬನ್ನಿ ಅಂತ ಕರಿಯಲ್ಲ. ಯಾರಿಗೆ ಆತನ ಸ್ನೇಹಿತರಾಗೋ ಆಸೆ ಇದ್ಯೋ ಅವ್ರನ್ನ ಮಾತ್ರ ತನ್ನ ಹತ್ರ ಸೆಳಿತಾನೆ. (ಯಾಕೋ. 4:8) ನೀವು ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಂಡ್ರೆ ಆತನಿಗೆ ಇನ್ನೂ ಹತ್ರ ಆಗ್ತೀರ. ಆಗ ಯೆಹೋವ ‘ನಿಮಗೆ ಯಾವ ವಿಷ್ಯದಲ್ಲೂ ಕೊರತೆಯಾಗದ ಹಾಗೆ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸ್ತಾನೆ.’ (ಮಲಾ. 3:10; ಯೆರೆ. 17:8) ದೀಕ್ಷಾಸ್ನಾನ ಅನ್ನೋದು ಯೆಹೋವನ ಸೇವೆ ಮಾಡೋಕೆ ಇರೋ ಮೊದಲನೇ ಹೆಜ್ಜೆ. ನೀವು ಆ ಹೆಜ್ಜೆಯನ್ನ ತಗೊಂಡ ಮೇಲೆ ಸಮರ್ಪಣೆಯ ಸಮಯದಲ್ಲಿ ಯೆಹೋವನಿಗೆ ಕೊಟ್ಟ ಮಾತಿಗೆ ತಕ್ಕ ಹಾಗೆ ಜೀವಿಸಬೇಕು. ಎಷ್ಟೇ ಕಷ್ಟ ಪರೀಕ್ಷೆಗಳು ಬಂದ್ರೂ, ತಪ್ಪು ಮಾಡೋಕೆ ನಿಮ್ಮ ಮನಸ್ಸು ಎಳಿತಾ ಇದ್ರೂ ಆತನಿಗೆ ನಿಯತ್ತಾಗಿ ಇರಬೇಕು. (ಪ್ರಸಂ. 5:4, 5) ಅಷ್ಟೇ ಅಲ್ಲ ನೀವು ಯೇಸುವಿನ ಶಿಷ್ಯರಾಗಿ ಇರೋದ್ರಿಂದ ಆತನ ತರನೇ ಇರೋಕೆ, ಆತನು ಕೊಟ್ಟ ಆಜ್ಞೆಗಳನ್ನ ಪಾಲಿಸೋಕೆ ತುಂಬ ಪ್ರಯತ್ನ ಮಾಡಬೇಕು.—ಮತ್ತಾ. 28:19, 20; 1 ಪೇತ್ರ 2:21. w24.03 8 ¶1-3
ಸೋಮವಾರ, ಜೂನ್ 23
ಪುರುಷ ತನ್ನ ಅಪ್ಪಅಮ್ಮನನ್ನ ಬಿಟ್ಟು ಹೆಂಡತಿ ಜೊತೆ ಇರ್ತಾನೆ.—ಆದಿ. 2:24.
ಕೆಲವೊಮ್ಮೆ ಗಂಡ-ಹೆಂಡತಿಗೆ ಒಟ್ಟಿಗೆ ಸಮಯ ಕಳಿಯೋಕೆ ಇಷ್ಟಾನೇ ಆಗಲ್ಲ. ಆಗೇನು ಮಾಡೋದು? ಕಟ್ಟಿಗೆಗೆ ಬೆಂಕಿ ಹಚ್ಚಿದ ತಕ್ಷಣ ಅದು ಜೋರಾಗಿ ಉರಿದು ಬಿಡುತ್ತಾ? ಇಲ್ಲ, ಮೊದ್ಲು ಚಿಕ್ಕಚಿಕ್ಕ ಕಟ್ಟಿಗೆಗಳನ್ನ ಹಾಕಬೇಕು. ಆಮೇಲೆ ದೊಡ್ಡ ದೊಡ್ಡ ಕಟ್ಟಿಗೆಗಳನ್ನ ಸೇರಿಸಿದಾಗ ಆ ಬೆಂಕಿ ಜಾಸ್ತಿ ಉರಿಯುತ್ತೆ. ಅದೇ ತರ ನೀವು ಮೊದ್ಲು ಸ್ವಲ್ಪ ಸಮಯ ಜೊತೆಯಾಗಿ ಇರೋಕೆ ಶುರುಮಾಡಿ. (ಯಾಕೋ. 3:18) ನಿಮ್ಮಿಬ್ರಿಗೂ ಇಷ್ಟ ಆಗೋ ವಿಷ್ಯಗಳನ್ನ ಮಾಡಿ. ಹೀಗೆ ಮಾಡ್ತಾ ಮಾಡ್ತಾ ನಿಮ್ಮ ಪ್ರೀತಿಯ ಜ್ವಾಲೆನೂ ಜೋರಾಗಿ ಉರಿಯುತ್ತೆ. ಗೌರವ ಅನ್ನೋದು ಆಕ್ಸಿಜನ್ ಇದ್ದ ಹಾಗೆ. ಆಕ್ಸಿಜನ್ ಇದ್ರೆನೇ ಬೆಂಕಿ ಉರಿತಾ ಇರುತ್ತೆ. ಅದೇ ತರ ಗಂಡ-ಹೆಂಡತಿ ಮಧ್ಯ ಗೌರವ ಇದ್ರೆನೇ ಪ್ರೀತಿ ಜಾಸ್ತಿ ಆಗುತ್ತೆ. ಆದ್ರೆ ಒಂದು ವಿಷ್ಯ ನೆನಪಿಡಿ. ನೀವು ನಿಮ್ಮ ಸಂಗಾತಿಯನ್ನ ಗೌರವಿಸ್ತಾ ಇದ್ದೀರ ಅಂತ ನಿಮಗೆ ಅನಿಸಿದ್ರೆ ಸಾಲದು. ಅವ್ರ ಮೇಲೆ ನಿಮಗೆ ಗೌರವ ಇದೆ ಅಂತ ಅವ್ರಿಗೆ ಅನಿಸಬೇಕು. w23.05 22 ¶9; 24 ¶14-15
ಮಂಗಳವಾರ, ಜೂನ್ 24
ಚಿಂತೆಗಳು ನನ್ನನ್ನ ಮುತ್ಕೊಂಡಿದ್ದಾಗ, ನೀನು ನನಗೆ ಸಾಂತ್ವನ, ಸಮಾಧಾನ ಕೊಟ್ಟೆ.—ಕೀರ್ತ. 94:19.
ಹಿಂದಿನ ಕಾಲದಲ್ಲಿ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡ್ತಿದ್ದವ್ರಿಗೂ ನಮ್ಮ ತರಾನೇ ಕಷ್ಟಗಳು ಬಂತು. ಶತ್ರುಗಳು ಅವ್ರನ್ನ ಆಕ್ರಮಣ ಮಾಡ್ತಿದ್ರು, ಇನ್ನೂ ಬೇರೆಬೇರೆ ಕಾರಣಗಳಿಂದ ಅವ್ರಿಗೆ ಭಯ, ಕಳವಳ ಆಗಿತ್ತು. (ಕೀರ್ತ. 18:4; 55:1, 5) ಇವತ್ತು ನಾವೂ ಶಾಲೆಯಲ್ಲಿ, ಕೆಲಸದ ಜಾಗದಲ್ಲಿ ವಿರೋಧ, ಹಿಂಸೆ ಎದುರಿಸ್ತೀವಿ. ಅಷ್ಟೇ ಅಲ್ಲ ಕುಟುಂಬದವ್ರಿಂದ ಮತ್ತು ಸರ್ಕಾರದಿಂದನೂ ನಮಗೆ ತೊಂದ್ರೆಗಳಾಗುತ್ತೆ. ಯಾವುದಾದ್ರೂ ದೊಡ್ಡ ಕಾಯಿಲೆಯಿಂದ ನಾವು ಇನ್ನೇನು ಸತ್ತು ಹೋಗ್ತೀವಿ ಅಂತ ಗೊತ್ತಾದಾಗಂತೂ ತುಂಬ ಭಯ ಆಗಬಹುದು. ಈ ತರ ಆದಾಗ ದಿಕ್ಕೇ ತೋಚದಿರೋ ಪುಟ್ಟ ಮಗು ತರ ಆಗಿಬಿಡ್ತೀವಿ. ಇಂಥ ಪರಿಸ್ಥಿತಿಯಲ್ಲಿ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ? ಆತನು ನಮಗೆ ಸಾಂತ್ವನ, ಸಮಾಧಾನ ಕೊಡ್ತಾನೆ. ಹಾಗಾದ್ರೆ ಯಾವಾಗ್ಲೂ ಯೆಹೋವನಿಗೆ ಪ್ರಾರ್ಥನೆ ಮಾಡಬೇಕು. ಆತನ ವಾಕ್ಯವಾದ ಬೈಬಲನ್ನ ಓದಬೇಕು. (ಕೀರ್ತ. 77:1, 12-14) ಈ ರೂಢಿ ಇದ್ರೆ ಭಯ, ಆತಂಕ ಅಥವಾ ಚಿಂತೆ ಆದಾಗ ತಕ್ಷಣ ನೀವು ಯೆಹೋವನ ಸಹಾಯ ಕೇಳ್ತೀರ. ಆತನ ಹತ್ರ ನಿಮ್ಮ ಭಾವನೆಗಳನ್ನ ಹೇಳ್ಕೊಳ್ತೀರ. ನಿಮಗ್ಯಾಕೆ ಭಯ ಆಗ್ತಿದೆ ಅಂತ ಮನಸ್ಸುಬಿಚ್ಚಿ ಮಾತಾಡ್ತೀರ. ಅಷ್ಟೇ ಅಲ್ಲ, ಯೆಹೋವ ನಿಮ್ಮ ಹತ್ರ ಮಾತಾಡೋಕೆ ಬಿಟ್ಕೊಡ್ತೀರ, ಅಂದ್ರೆ ತನ್ನ ವಾಕ್ಯದಿಂದ ಕೊಡೋ ಸಾಂತ್ವನ ಪಡ್ಕೊಳ್ತೀರ.—ಕೀರ್ತ. 119:28. w24.01 24-25 ¶14-16
ಬುಧವಾರ, ಜೂನ್ 25
ಕೆಲಸಗಳನ್ನ ಮಾಡೋಕೆ ನಮಗೆ ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ ದೇವರೇ ಕೊಡ್ತಾನೆ.—ಫಿಲಿ. 2:13.
ಗುರಿಗಳನ್ನ ಮುಟ್ಟೋಕೆ ಛಲ ಇರಬೇಕು. ಈ ಛಲ ಇದ್ರೆ ಗುರಿಗಳನ್ನ ಬೇಗ ಮುಟ್ಟಬೇಕು ಅನ್ನೋ ಆಸೆ ಜಾಸ್ತಿ ಆಗುತ್ತೆ. ಹಾಗಾಗಿ ನಮಗೆ ಛಲ ಬರಬೇಕಂದ್ರೆ ಏನ್ ಮಾಡಬೇಕು? ಛಲ ಕೊಡಪ್ಪಾ ಅಂತ ಪ್ರಾರ್ಥನೆ ಮಾಡಿ. ಆಗ ಯೆಹೋವ ದೇವರು ಪವಿತ್ರಶಕ್ತಿ ಕೊಟ್ಟು ಛಲ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಾನೆ. ಆದ್ರೆ ಕೆಲವೊಮ್ಮೆ ನಾವು ‘ಮನುಷ್ಯನಿಗೆ ಜೀವನದಲ್ಲಿ ಗುರಿ ಇರಬೇಕು’ ಅಂತ ಗುರಿ ಇಡ್ತೀವಿ. ಆದ್ರೆ ಅದನ್ನ ಮುಟ್ಟಬೇಕು ಅನ್ನೋ ಛಲ ನಮ್ಮಲ್ಲಿ ಇರಲ್ಲ. ಯೆಹೋವ ನಿಮಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. (ಕೀರ್ತ. 143:5) ಅಪೊಸ್ತಲ ಪೌಲನೂ ಅದನ್ನೇ ಮಾಡಿದ. ಯೆಹೋವ ದೇವರು ತನಗೆ ಅಪಾರ ಕೃಪೆ ತೋರಿಸಿದ್ದನ್ನ ಅಪೊಸ್ತಲ ಪೌಲ ಯಾವಾಗ್ಲೂ ನೆನಪಿಸ್ಕೊಳ್ತಿದ್ದ. ಇದ್ರಿಂದ ಯೆಹೋವನ ಸೇವೆ ಮಾಡಲೇಬೇಕು ಅನ್ನೋ ಛಲ ಅವನಿಗೆ ಬಂತು. (1 ಕೊರಿಂ. 15:9, 10; 1 ತಿಮೊ. 1:12-14) ಅದೇ ತರ ಯೆಹೋವ ನಮಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅಂತ ನೆನಪಿಸ್ಕೊಬೇಕು. ಆಗ ಗುರಿ ಮುಟ್ಟಬೇಕು ಅನ್ನೋ ಛಲ ಬರುತ್ತೆ.—ಕೀರ್ತ. 116:12. w23.05 27 ¶3-5
ಗುರುವಾರ, ಜೂನ್ 26
ಯೆಹೋವನ ಹೆಸ್ರನ್ನ ಕೊಂಡಾಡಿ.—ಕೀರ್ತ. 113:1.
ನಾವು ಯೆಹೋವನ ಹೆಸ್ರನ್ನ ಕೊಂಡಾಡಿದಾಗ ಆತನಿಗೆ ತುಂಬ ಖುಷಿಯಾಗುತ್ತೆ. (ಕೀರ್ತ. 119:108) ಮನುಷ್ಯರಾದ ನಾವು ಪ್ರೋತ್ಸಾಹ ಸಿಗೋಕೆ ಯಾರಾದ್ರೂ ನಮ್ಮನ್ನ ಹೊಗಳಲಿ ಅಂತ ಬಯಸ್ತೀವಿ. ಆದ್ರೆ ಯೆಹೋವ ದೇವರು ಈ ಕಾರಣಕ್ಕೆ ಜನ ತನ್ನನ್ನ ಹೊಗಳಬೇಕು ಅಂತ ಬಯಸಲ್ಲ. ನಾವು ಯೆಹೋವನನ್ನ ಹೊಗಳುವಾಗ ಸೈತಾನ ಹಾಕಿದ ಇನ್ನೊಂದು ಆರೋಪನೂ ಸುಳ್ಳು ಅಂತ ತೋರಿಸಿ ಕೊಡ್ತೀವಿ. ಅದೇನು? ಕಷ್ಟಗಳು ಬಂದಾಗ ಯಾವ ಮನುಷ್ಯನೂ ಯೆಹೋವನಿಗೆ ನಿಯತ್ತಾಗಿ ಇರೋದಿಲ್ಲ. ಲಾಭ ಇದ್ರೆ ಮಾತ್ರ ಯೆಹೋವನನ್ನ ಆರಾಧಿಸ್ತಾನೆ, ಇಲ್ಲಾಂದ್ರೆ ಬಿಟ್ಟುಬಿಡ್ತಾನೆ ಅಂತ ಸೈತಾನ ಹೇಳಿದ. (ಯೋಬ 1:9-11; 2:4) ಆದ್ರೆ ಅದು ಸುಳ್ಳು ಅಂತ ಯೋಬ ತೋರಿಸಿಕೊಟ್ಟ. ನಾವೂ ಅವನ ತರ ಇರಬಹುದು. ಯೆಹೋವನ ಹೆಸ್ರನ್ನ ಕೊಂಡಾಡ್ತಾ ನಿಯತ್ತಿಂದ ಆತನ ಸೇವೆ ಮಾಡಬಹುದು. (ಜ್ಞಾನೋ. 27:11) ಹೀಗೆ ಸೈತಾನ ಶುದ್ಧ ಸುಳ್ಳುಗಾರ ಅಂತ ತೋರಿಸ್ಕೊಡೋಕೆ ನಮ್ಮೆಲ್ರಿಗೂ ಒಂದು ಅವಕಾಶ ಇದೆ. w24.02 8-9 ¶3-5
ಶುಕ್ರವಾರ, ಜೂನ್ 27
ಆತನ ಪ್ರವಾದಿಗಳ ಮೇಲೆ ನಂಬಿಕೆಯಿಡಿ. ಆಗ ನೀವು ಗೆಲ್ತೀರ.—2 ಪೂರ್ವ. 20:20.
ಮೋಶೆ ಮತ್ತು ಯೆಹೋಶುವ ತೀರಿಹೋದ ಕೆಲವು ವರ್ಷಗಳಾದ ಮೇಲೆ ಯೆಹೋವ ತನ್ನ ಜನ್ರಿಗೆ ನ್ಯಾಯಾಧೀಶರಿಂದ ನಿರ್ದೇಶನಗಳನ್ನ ಕೊಡ್ತಿದ್ದನು. ಅದಾದ್ಮೇಲೆ ರಾಜರ ಕಾಲದಲ್ಲಿ ಪ್ರವಾದಿಗಳಿಂದ ನಿರ್ದೇಶನ ಕೊಟ್ಟನು. ಕೆಲವು ರಾಜರು ಆ ಪ್ರವಾದಿಗಳು ಕೊಡ್ತಿದ್ದ ಸಲಹೆಗಳನ್ನ ಪಾಲಿಸ್ತಿದ್ರು. ಉದಾಹರಣೆಗೆ ರಾಜ ದಾವೀದ ಪ್ರವಾದಿ ನಾತಾನನ ಮಾತನ್ನ ಕೇಳಿ ತಪ್ಪನ್ನ ತಿದ್ಕೊಂಡ. (2 ಸಮು. 12:7, 13; 1 ಪೂರ್ವ. 17:3, 4) ರಾಜ ಯೆಹೋಷಾಫಾಟ ಯಹಜೀಯೇಲ ಕೊಟ್ಟ ನಿರ್ದೇಶನ ಪಾಲಿಸಿದ ಮತ್ತು ಯೆಹೂದದ ಜನ್ರಿಗೆ “[ದೇವರ] ಪ್ರವಾದಿಗಳ ಮೇಲೆ ನಂಬಿಕೆಯಿಡಿ” ಅಂತ ಹೇಳಿದ. (2 ಪೂರ್ವ. 20:14, 15, 20) ಕಷ್ಟ ಬಂದಾಗ ರಾಜ ಹಿಜ್ಕೀಯ ಕೂಡ ಪ್ರವಾದಿ ಯೆಶಾಯನ ಹತ್ರ ತಾನೇನು ಮಾಡಬೇಕು ಅಂತ ಕೇಳಿದ. (ಯೆಶಾ. 37:1-6) ಹೀಗೆ ರಾಜರು ಯಾವಾಗೆಲ್ಲ ಯೆಹೋವನ ನಿರ್ದೇಶನ ಪಾಲಿಸ್ತಿದ್ರೋ ಆಗೆಲ್ಲ ಯೆಹೋವ ಅವ್ರನ್ನ ಆಶೀರ್ವದಿಸ್ತಿದ್ದನು ಮತ್ತು ತನ್ನ ಜನ್ರನ್ನ ಕಾಪಾಡ್ತಿದ್ದನು. (2 ಪೂರ್ವ. 20:29, 30; 32:22) ಯೆಹೋವ ಪ್ರವಾದಿಗಳಿಂದಾನೇ ನಿರ್ದೇಶನಗಳನ್ನ ಕೊಡ್ತಿದ್ದಾನೆ ಅಂತ ಎಲ್ರಿಗೂ ಗೊತ್ತಿತ್ತು. w24.02 21 ¶8
ಶನಿವಾರ, ಜೂನ್ 28
ಅವ್ರ ತರ ಇರಬೇಡಿ.—ಎಫೆ. 5:7.
ಯಾರು ಯೆಹೋವನ ನೀತಿ ನಿಯಮ ಪಾಲಿಸಲ್ವೋ, ಅಂಥವ್ರ ಜೊತೆ ನಾವು ಸಹವಾಸ ಮಾಡಬೇಕು ಅಂತ ಸೈತಾನ ಆಸೆಪಡ್ತಾನೆ. ಹಾಗೆ ಮಾಡಿದ್ರೆ ನಮಗೆ ಯೆಹೋವನಿಗೆ ಇಷ್ಟ ಆಗೋ ತರ ಜೀವಿಸೋಕೆ ಕಷ್ಟ ಆಗುತ್ತೆ. ಅದು ಸೈತಾನನಿಗೆ ಚೆನ್ನಾಗಿ ಗೊತ್ತು. ನಾವು ತುಂಬ ಹುಷಾರಾಗಿ ಇರಬೇಕು. ಯಾಕಂದ್ರೆ ಈಗ ನಾವು ನೇರವಾಗಷ್ಟೇ ಅಲ್ಲ ಆನ್‌ಲೈನ್‌ನಲ್ಲೂ ಫ್ರೆಂಡ್ಸ್ ಮಾಡ್ಕೊಳ್ತಿದ್ದೀವಿ. ಅನೈತಿಕ ವಿಷ್ಯಗಳನ್ನ ಮಾಡೋದ್ರಲ್ಲಿ ತಪ್ಪೇನಿಲ್ಲ ಅಂತ ಲೋಕದಲ್ಲಿರೋ ಜನ ಅಂದ್ಕೊಳ್ತಾರೆ. ಆದ್ರೆ ಆ ಯೋಚ್ನೆ ನಮ್ಮಲ್ಲಿ ಬರದೇ ಇರೋ ತರ ನೋಡ್ಕೊಬೇಕು. ಯಾಕಂದ್ರೆ ಅದು ತಪ್ಪು ಅಂತ ನಮಗೆ ಚೆನ್ನಾಗಿ ಗೊತ್ತು. (ಎಫೆ. 4:19, 20) ಹಾಗಾಗಿ ನಾವು ನಮ್ಮನ್ನ ಹೀಗೆ ಕೇಳ್ಕೊಬೇಕು: ‘ನನ್ನ ಜೊತೆ ಕೆಲಸ ಮಾಡೋರು, ನನ್ನ ಜೊತೆ ಓದ್ತಾ ಇರೋರು ಯೆಹೋವನ ನೀತಿ-ನಿಯಮಗಳಿಗೆ ಒಂಚೂರು ಬೆಲೆ ಕೊಡಲ್ಲ ಅಂತ ಗೊತ್ತಾದಾಗ ನಾನು ಅವ್ರ ಜೊತೆ ಸೇರೋದನ್ನ ನಿಲ್ಲಿಸ್ತೀನಾ? ಜನ ನನ್ನ ಬಗ್ಗೆ ತಪ್ಪು ತಿಳ್ಕೊಂಡ್ರೂ ಯೆಹೋವ ಯಾವುದನ್ನ ಸರಿ ಅಂತಾನೋ ಅದನ್ನ ಮಾಡೋಕೆ ನಾನು ಧೈರ್ಯ ತೋರಿಸ್ತೀನಾ?’ ಈ ಪ್ರಶ್ನೆಗಳನ್ನ ಕೇಳ್ಕೊಳ್ಳೋದಷ್ಟೇ ಅಲ್ಲ, 2 ತಿಮೊತಿ 2:20-22ರಲ್ಲಿ ಹೇಳೋ ಹಾಗೆ ಸಭೆಯಲ್ಲಿ ಫ್ರೆಂಡ್‌ಶಿಪ್ ಮಾಡ್ಕೊಳ್ಳುವಾಗ್ಲೂ ನಾವು ಹುಷಾರಾಗಿ ಇರಬೇಕು. ಯಾಕಂದ್ರೆ ಕೆಲವರು ನಾವು ಯೆಹೋವನಿಗೆ ನಿಯತ್ತಾಗಿರೋಕೆ ಸಹಾಯ ಮಾಡಲ್ಲ.w24.03 22-23 ¶11-12
ಭಾನುವಾರ, ಜೂನ್ 29
ಯೆಹೋವ ದೇವರು ಕೋಮಲ ಮಮತೆ ತೋರಿಸ್ತಾನೆ.—ಯಾಕೋ. 5:11.
ಯೆಹೋವ ನೋಡೋಕೆ ಹೇಗಿದ್ದಾನೆ ಅಂತ ನೀವು ಯಾವತ್ತಾದ್ರೂ ಯೋಚ್ನೆ ಮಾಡಿದ್ದೀರಾ? ಯೆಹೋವ ನಮ್ಮ ಕಣ್ಣಿಗೆ ಕಾಣಲ್ಲ ನಿಜ. ಆದ್ರೆ ಆತನು “ನಮ್ಮ ಸೂರ್ಯ, ನಮ್ಮ ಗುರಾಣಿ” ಮತ್ತು “ಸುಟ್ಟು ಬೂದಿ ಮಾಡೋ ಬೆಂಕಿ” ಅಂತ ಬೈಬಲ್ ಹೇಳುತ್ತೆ. (ಕೀರ್ತ. 84:11; ಇಬ್ರಿ. 12:29) ಅಷ್ಟೇ ಅಲ್ಲ ಯೆಹೆಜ್ಕೇಲ ಆತನನ್ನ ನೀಲಮಣಿ, ಪಳಪಳ ಅಂತ ಹೊಳಿಯೋ ಚಿನ್ನಬೆಳ್ಳಿ ಮತ್ತು ಮಳೆಬಿಲ್ಲು ಅಂತ ವರ್ಣಿಸ್ತಾನೆ. (ಯೆಹೆ. 1:26-28) ಯೆಹೋವನನ್ನ ನಾವು ನೋಡೋಕೆ ಆಗದೆ ಇರೋದ್ರಿಂದ ಆತನು ನಮ್ಮನ್ನ ಪ್ರೀತಿಸ್ತಾನೆ ಅಂತ ನಂಬೋಕೆ ನಮಗೆ ಕಷ್ಟ ಆಗಬಹುದು. ಕೆಲವ್ರಿಗೆ ತಮ್ಮ ಜೀವನದಲ್ಲಿ ನಡೆದಿರೋ ಕಹಿ ಘಟನೆಗಳಿಂದ ಯೆಹೋವನ ಪ್ರೀತಿಯನ್ನ ಅರ್ಥಮಾಡ್ಕೊಳ್ಳೋಕೆ ಆಗದೆ ಇರಬಹುದು. ಇದು ಯೆಹೋವನಿಗೆ ಚೆನ್ನಾಗಿ ಗೊತ್ತು. ಆತನಿಗೆ ಹತ್ರ ಆಗೋಕೆ ನಮಗ್ಯಾಕೆ ಆಗ್ತಿಲ್ಲ ಅಂತಾನೂ ಅರ್ಥ ಮಾಡ್ಕೊಳ್ತಾನೆ. ಅದಕ್ಕೇ ಆತನು ತನ್ನ ಬಗ್ಗೆ ಬೈಬಲಿನಲ್ಲಿ ಬರೆಸಿಟ್ಟಿದ್ದಾನೆ. ಅದನ್ನ ನಾವು ತಿಳ್ಕೊಬೇಕು ಅಂತ ಇಷ್ಟಪಡ್ತಾನೆ. ಒಂದೇ ಮಾತಲ್ಲಿ ಹೇಳೋದಾದ್ರೆ ಯೆಹೋವ ಪ್ರೀತಿಯಾಗಿದ್ದಾನೆ. (1 ಯೋಹಾ. 4:8) ಆತನು ಏನೇ ಮಾಡಿದ್ರು ಅದನ್ನ ಪ್ರೀತಿಯಿಂದ ಮಾಡ್ತಾನೆ. ತನ್ನನ್ನ ಇಷ್ಟಪಡದೇ ಇರೋರನ್ನೂ ಆತನು ಪ್ರೀತಿಸ್ತಾನೆ.— ಮತ್ತಾ. 5:44, 45. w24.01 26 ¶1-3
ಸೋಮವಾರ, ಜೂನ್ 30
ಆತನು ಮೋಡಗಳಿಂದ ಅವ್ರ ಜೊತೆ ಮಾತಾಡ್ತಿದ್ದ.—ಕೀರ್ತ. 99:7.
ಯೆಹೋವ ದೇವರು ಇಸ್ರಾಯೇಲ್ಯರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬರೋಕೆ ಮೋಶೆಯನ್ನ ನೇಮಿಸಿದನು. ಅವರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಅಂತ ನಿರ್ದೇಶನ ಕೊಡೋಕೆ ಹಗಲಲ್ಲಿ ಮೋಡವನ್ನ, ರಾತ್ರಿಯಲ್ಲಿ ಬೆಂಕಿಯನ್ನ ಕೊಟ್ಟನು. (ವಿಮೋ. 13:21) ಆ ಮೋಡ ಎಲ್ಲಿ ಹೋಗ್ತಿತ್ತೋ ಅಲ್ಲಿಗೆ ಮೋಶೆ ಜನ್ರನ್ನ ಕರ್ಕೊಂಡು ಹೋಗ್ತಿದ್ದ. ಹೀಗೆ ಯೆಹೋವ ತಮ್ಮನ್ನ ಮೋಶೆಯ ಮೂಲಕ ನಡೆಸ್ತಾ ಇದ್ದಾನೆ ಅನ್ನೋದಕ್ಕೆ ಜನ್ರ ಕಣ್ಮುಂದೆನೇ ತುಂಬ ಆಧಾರಗಳಿತ್ತು. ಕೊನೆಗೆ ಯೆಹೋವ ಇಸ್ರಾಯೇಲ್ಯರನ್ನ ಕೆಂಪು ಸಮುದ್ರಕ್ಕೆ ಕರ್ಕೊಂಡು ಬಂದಾಗ ಜನ್ರು ತುಂಬ ಹೆದರಿದರು. ಮುಂದೆ ಸಮುದ್ರ, ಹಿಂದೆ ಈಜಿಪ್ಟಿನ ಸೈನ್ಯ. ಆದ್ರೆ ಯೆಹೋವ ಬೇಕಂತಾನೇ ಮೋಶೆ ಮೂಲಕ ಅವ್ರನ್ನ ಅಲ್ಲಿಗೆ ಕರ್ಕೊಂಡು ಬಂದಿದ್ದನು. (ವಿಮೋ. 14:2) ಆಮೇಲೆ ಯೆಹೋವ ಅದ್ಭುತವಾಗಿ ಅವ್ರನ್ನ ಕಾಪಾಡಿದನು. (ವಿಮೋ. 14:26-28) ಇಸ್ರಾಯೇಲ್ಯರು 40 ವರ್ಷ ಕಾಡಲ್ಲಿದ್ರು. ಅಷ್ಟೂ ವರ್ಷ ಮೋಶೆ, ಮೋಡ ಎಲ್ಲಿ ಹೋಗ್ತಿತ್ತೋ ಅಲ್ಲಿಗೆ ಜನ್ರನ್ನ ಕರ್ಕೊಂಡು ಹೋಗ್ತಿದ್ದ. (ವಿಮೋ. 33:7, 9, 10) ಆ ಮೋಡದಿಂದಾನೇ ಯೆಹೋವ ಮೋಶೆಗೆ ನಿರ್ದೇಶನ ಕೊಡ್ತಾ ಇದ್ದನು. ಅದನ್ನ ಅವನು ಇಸ್ರಾಯೇಲ್ಯರಿಗೆ ಹೇಳ್ತಾ ಇದ್ದನು. ಆಗ್ಲೂ ಯೆಹೋವ ಮೋಶೆಯಿಂದಾನೇ ಮಾರ್ಗದರ್ಶನೆ ಕೊಡ್ತಿದ್ದಾನೆ ಅಂತ ಇಸ್ರಾಯೇಲ್ಯರು ಕಣ್ಣಾರೆ ನೋಡಿದ್ರು. w24.02 21 ¶4-5