ಜ್ಞಾಪಕಾಚರಣೆಯನ್ನು ಪ್ರಚುರಪಡಿಸಲು ವಿಶೇಷ ಕಾರ್ಯಾಚರಣೆ!
1. ಮಾರ್ಚ್ 21, 2009ರಿಂದ ಲೋಕಾದ್ಯಂತ ರಾಜ್ಯ ಘೋಷಕರು ಏನನ್ನು ಮಾಡುವುದರಲ್ಲಿ ನಿರತರಾಗಿರುತ್ತಾರೆ, ಮತ್ತು ಏಕೆ?
1 ಯೆಹೋವನು ಮಾನವಕುಲದ ಕಡೆಗೆ ತೋರಿಸಿದ ಪ್ರೀತಿಯ ಮಹಾನ್ ಕೃತ್ಯವನ್ನು ಸ್ಮರಿಸಲಿಕ್ಕಾಗಿ ಆತನ ಆರಾಧಕರು ಲೋಕಾದ್ಯಂತವಾಗಿ ಏಪ್ರಿಲ್ 9, 2009ರ ಗುರುವಾರದಂದು ಕೂಡಿಬರುತ್ತಾರೆ. (ರೋಮಾ. 5:6-8) ಆ ದಿನ ನಾವು ಯೇಸುವಿನ ಮರಣವನ್ನು ಸ್ಮರಿಸುವಾಗ ನಮ್ಮೊಂದಿಗೆ ಲಕ್ಷಾಂತರ ಆಸಕ್ತ ಜನರು ಇರುವುದನ್ನು ನಾವು ಕಾತರದಿಂದ ಎದುರುನೋಡುತ್ತೇವೆ. ಮಾರ್ಚ್ 21ರಿಂದ ಆರಂಭಿಸಿ ಜ್ಞಾಪಕಾಚರಣೆಯ ಒಂದು ವಿಶೇಷ ಆಮಂತ್ರಣ ಪತ್ರವು ಭೂಮಿಯಾದ್ಯಂತ ವಿತರಿಸಲ್ಪಡಲಿದೆ.
2. ಆಮಂತ್ರಣ ಪತ್ರವನ್ನು ನೀಡುವಾಗ ಯಾವ ಅಂಶಗಳನ್ನು ಮನಸ್ಸಿನಲ್ಲಿಡಬೇಕು?
2 ಮನಸ್ಸಿನಲ್ಲಿಡಬೇಕಾದ ಅಂಶಗಳು: ಈಗಾಗಲೇ ವಿರೋಧ ವ್ಯಕ್ತವಾಗಿರುವ ಟೆರಿಟೊರಿಗಳಲ್ಲಿ ತುಂಬಾ ಜಾಗರೂಕತೆ ಹಾಗೂ ವಿವೇಚನೆಯಿಂದ ಕೆಲಸ ಮಾಡಿರಿ. ಆಮಂತ್ರಣ ಪತ್ರವನ್ನು ಎಲ್ಲರಿಗೂ ಹಂಚುತ್ತಾ ಹೋಗದೆ ಯಾರಿಗೆ ನಿಜವಾಗಿಯೂ ಸತ್ಯವನ್ನು ಕಲಿಯಲು ಆಸಕ್ತಿಯಿದೆಯೋ ಅವರಿಗೆ ಮಾತ್ರ ಕೊಡಿರಿ. ಆಮಂತ್ರಣ ಪತ್ರದಲ್ಲಿರುವ ಚಿತ್ರಗಳು, ಪ್ರಶ್ನೆಗಳು ಮತ್ತು ಉದ್ಧರಿಸಲಾಗಿರುವ ಶಾಸ್ತ್ರವಚನಗಳ ಪೂರ್ಣ ಉಪಯೋಗವನ್ನು ಮಾಡಿರಿ. ಉದಾಹರಣೆಗೆ, ಮುಖಪುಟದಲ್ಲಿರುವ ಚಿತ್ರವನ್ನು ತೋರಿಸಿ ಹೀಗೆ ಹೇಳಬಹುದು: “ನಾವು ಯೇಸುವಿನ ಮರಣದ ಜ್ಞಾಪಕಾಚರಣೆಯನ್ನು ಏಪ್ರಿಲ್ 9, 2009ರ ಗುರುವಾರ ಆಚರಿಸುತ್ತಿದ್ದೇವೆ. ಆ ಆಚರಣೆಗೆ ನಿಮ್ಮನ್ನು ಸಹ ಆಮಂತ್ರಿಸುತ್ತಿದ್ದೇವೆ.” ಅನಂತರ, ಅವರ ಗಮನವನ್ನು ಆಮಂತ್ರಣದ ಶೀರ್ಷಿಕೆಗೂ, ಕೊಡಲಾಗಿರುವ ಪ್ರಶ್ನೆಗಳಿಗೂ ತಿರುಗಿಸಿರಿ. ಕುಟುಂಬವನ್ನೂ ಇತರರನ್ನೂ ಈ ಆಚರಣೆಗೆ ಕರೆದುಕೊಂಡು ಬರಬಹುದೆಂಬದನ್ನು ಮನೆಯವನಿಗೆ ಮನಗಾಣಿಸಲು ಮರೆಯದಿರಿ.
3. ಕಾರ್ಯಾಚರಣೆಯ ಸಮಯದಲ್ಲಿ ಆಮಂತ್ರಣವನ್ನು ನೀಡುವುದಲ್ಲದೆ ಇನ್ನೇನನ್ನು ಮಾಡಬಹುದು?
3 ವಾರಾಂತ್ಯಗಳಲ್ಲಿ ಆಮಂತ್ರಣ ಪತ್ರದೊಂದಿಗೆ ಪತ್ರಿಕೆಗಳನ್ನೂ ನೀಡಿರಿ. ನಿಮ್ಮ ಪುನರ್ಭೇಟಿ, ಬೈಬಲ್ ವಿದ್ಯಾರ್ಥಿ, ಸಂಬಂಧಿಕರು, ಸಹಪಾಠಿಗಳು, ಸಹೋದ್ಯೋಗಿಗಳು, ನೆರೆಯವರು ಹೀಗೆ ಪರಿಚಯವಿರುವ ಎಲ್ಲರನ್ನು ಆಮಂತ್ರಿಸುವ ಗುರಿಯನ್ನಿಡಿರಿ. ಕಳೆದ ವರ್ಷ ಒಬ್ಬ ಸಹೋದರಿಯು ತನ್ನ ಸಂಬಂಧಿಕರಲ್ಲಿ 30 ಜನರನ್ನು ಜ್ಞಾಪಕಾಚರಣೆಗೆ ಆಮಂತ್ರಿಸಿದಳು. ಮಾತ್ರವಲ್ಲ, ಆಚರಣೆಯ ಮಹತ್ವದ ಕುರಿತು ಆಗಾಗ ಅವರಿಗೆ ಮರುಜ್ಞಾಪಿಸುತ್ತಾ ಇದ್ದಳು. ಅವರಲ್ಲಿ 25 ಮಂದಿ ಜ್ಞಾಪಕಾಚರಣೆಗೆ ಹಾಜರಾದಾಗ ಮತ್ತು 4 ಮಂದಿ ಬೈಬಲ್ ಅಧ್ಯಯನ ಸ್ವೀಕರಿಸಿದಾಗ ಅವಳಿಗಾದ ಸಂತೋಷ ಅಷ್ಟಿಷ್ಟಲ್ಲ!
4. ಯಾವೆಲ್ಲ ಯೋಜನೆಗಳನ್ನು ನಾವು ಈಗಲೇ ಮಾಡಬೇಕು, ಮತ್ತು ಏಕೆ?
4 ಈಗಲೇ ಯೋಜನೆ ಮಾಡಿ: ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ತಮ್ಮ ಸೇವಾ ಚಟುವಟಿಕೆಯನ್ನು ಹೆಚ್ಚಿಸಲು ಅನೇಕ ಪ್ರಚಾರಕರಿಗೆ ಸಾಧ್ಯವಿರಬಹುದು. ನಿಮ್ಮ ಮಕ್ಕಳು ಅಥವಾ ಬೈಬಲ್ ವಿದ್ಯಾರ್ಥಿಗಳು ಉತ್ತಮವಾಗಿ ಆಧ್ಯಾತ್ಮಿಕ ಪ್ರಗತಿ ಮಾಡುತ್ತಿರುವಲ್ಲಿ ಅವರು ಅಸ್ನಾತ ಪ್ರಚಾರಕರಾಗಲು ಇದು ಬಹು ಒಳ್ಳೆಯ ಸಂದರ್ಭವಾಗಿರುವುದು. ಪ್ರೀತಿಯ ಎರಡು ಅತ್ಯುತ್ಕೃಷ್ಟ ಅಭಿವ್ಯಕ್ತಿಗಳನ್ನು ಸ್ಮರಿಸುವುದನ್ನು ಪ್ರಚುರಪಡಿಸುವ ಈ ಕಾರ್ಯಾಚರಣೆಯಲ್ಲಿ ಪೂರ್ಣ ಪಾಲು ತೆಗೆದುಕೊಳ್ಳಲು ಎಲ್ಲಾ ತಯಾರಿಗಳನ್ನು ಮಾಡುವ ಸಮಯವು ಇದೇ ಆಗಿದೆ.—ಯೋಹಾ. 3:16; 15:13.