ಅ. ಕಾರ್ಯ
5 ಆದರೆ ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿಯಾದ ಸಪ್ಫೈರಳೊಂದಿಗೆ ಆಸ್ತಿಯನ್ನು ಮಾರಿ 2 ಇದರ ಅರಿವಿದ್ದ ತನ್ನ ಹೆಂಡತಿಯ ಜೊತೆಗೆ ಅದರಲ್ಲಿ ಒಂದಿಷ್ಟು ಹಣವನ್ನು ಗುಪ್ತವಾಗಿ ತೆಗೆದಿಟ್ಟುಕೊಂಡು, ಕೇವಲ ಒಂದು ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು. 3 ಆಗ ಪೇತ್ರನು, “ಅನನೀಯನೇ, ನೀನು ಪವಿತ್ರಾತ್ಮವನ್ನು ವಂಚಿಸಲು ಪ್ರಯತ್ನಿಸುವಂತೆ ಮತ್ತು ಹೊಲವನ್ನು ಮಾರಿ ಬಂದ ಹಣದಲ್ಲಿ ಸ್ವಲ್ಪವನ್ನು ಗುಪ್ತವಾಗಿ ತೆಗೆದಿಟ್ಟುಕೊಳ್ಳುವಂತೆ ಸೈತಾನನು ನಿನ್ನಲ್ಲಿ ಧೈರ್ಯವನ್ನು ತುಂಬಿಸಿದ್ದೇಕೆ? * 4 ಅದು ನಿನ್ನ ಬಳಿ ಇರುವಷ್ಟು ಕಾಲ ನಿನ್ನದಾಗಿತ್ತಲ್ಲವೊ? ಅದನ್ನು ಮಾರಿದ ಬಳಿಕವೂ ಅದರಿಂದ ಬಂದ ಹಣವು ನಿನ್ನ ಸ್ವಾಧೀನದಲ್ಲೇ ಇತ್ತಲ್ಲವೊ? ನಿನ್ನ ಹೃದಯದಲ್ಲಿ ನೀನು ಇಂಥ ಒಂದು ಕಾರ್ಯವನ್ನು ಉದ್ದೇಶಿಸಿದ್ದೇಕೆ? ನೀನು ವಂಚಿಸಲು ಪ್ರಯತ್ನಿಸಿದ್ದು ಮನುಷ್ಯರನ್ನಲ್ಲ, ದೇವರನ್ನೇ” ಎಂದು ಹೇಳಿದನು. 5 ಈ ಮಾತುಗಳನ್ನು ಕೇಳಿದಾಗ ಅನನೀಯನು ಕೆಳಗೆ ಬಿದ್ದು ಪ್ರಾಣಬಿಟ್ಟನು. ಇದನ್ನು ಕೇಳಿದವರೆಲ್ಲರಿಗೂ ಮಹಾ ಭೀತಿಯುಂಟಾಯಿತು. 6 ಆಗ ಅಲ್ಲಿದ್ದ ಯೌವನಸ್ಥರು ಎದ್ದು ಅವನನ್ನು ಬಟ್ಟೆಯಲ್ಲಿ ಸುತ್ತಿ ಹೊತ್ತುಕೊಂಡು ಹೋಗಿ ಹೂಣಿಟ್ಟರು.
7 ಸುಮಾರು ಮೂರು ತಾಸುಗಳ ಬಳಿಕ ಅವನ ಹೆಂಡತಿಯು ಏನು ಸಂಭವಿಸಿತೆಂಬುದನ್ನು ತಿಳಿಯದೆ ಅಲ್ಲಿಗೆ ಬಂದಳು. 8 ಪೇತ್ರನು ಅವಳಿಗೆ, “ನೀವಿಬ್ಬರು ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೊ? ನನಗೆ ಹೇಳು” ಎಂದನು. ಅದಕ್ಕೆ ಅವಳು, “ಹೌದು, ಇಷ್ಟಕ್ಕೇ” ಎಂದಳು. 9 ಆಗ ಪೇತ್ರನು ಅವಳಿಗೆ, “ನೀವಿಬ್ಬರೂ ಯೆಹೋವನ ಆತ್ಮವನ್ನು * ಪರೀಕ್ಷಿಸಲು ಒಡಂಬಟ್ಟದ್ದೇಕೆ? ನೋಡು, ನಿನ್ನ ಗಂಡನನ್ನು ಹೂಣಿಟ್ಟವರು ಬಾಗಿಲ ಬಳಿಯಲ್ಲಿದ್ದಾರೆ, ಅವರು ನಿನ್ನನ್ನೂ ಹೊತ್ತುಕೊಂಡು ಹೋಗುವರು” ಎಂದನು. 10 ಆ ಕ್ಷಣವೇ ಅವಳು ಅವನ ಪಾದಗಳ ಬಳಿ ಬಿದ್ದು ಪ್ರಾಣಬಿಟ್ಟಳು. ಯೌವನಸ್ಥರು ಒಳಗೆ ಬಂದಾಗ ಅವಳು ಸತ್ತಿರುವುದನ್ನು ಕಂಡು ಅವಳನ್ನು ಹೊತ್ತುಕೊಂಡು ಹೋಗಿ ಅವಳ ಗಂಡನ ಬದಿಯಲ್ಲೇ ಹೂಣಿಟ್ಟರು. 11 ಇದರಿಂದಾಗಿ ಇಡೀ ಸಭೆಗೂ ಈ ವಿಷಯಗಳ ಕುರಿತು ಕೇಳಿದವರೆಲ್ಲರಿಗೂ ಮಹಾ ಭೀತಿಯುಂಟಾಯಿತು.
12 ಇದಲ್ಲದೆ ಅಪೊಸ್ತಲರ ಕೈಗಳಿಂದ ಜನರ ನಡುವೆ ಅನೇಕ ಸೂಚಕಕಾರ್ಯಗಳೂ ಆಶ್ಚರ್ಯಕಾರ್ಯಗಳೂ ನಡೆಯುತ್ತಾ ಇದ್ದವು; ಅವರೆಲ್ಲರೂ ಒಮ್ಮತದಿಂದ ಸೊಲೊಮೋನನ ಕಂಬಸಾಲು ಎಂದು ಕರೆಯಲ್ಪಡುತ್ತಿದ್ದ ಸ್ಥಳದಲ್ಲಿದ್ದರು. 13 ಮಿಕ್ಕಾದವರೊಳಗೆ ಒಬ್ಬರಿಗೂ ಇವರೊಂದಿಗೆ ಸೇರುವ ಧೈರ್ಯವಿರಲಿಲ್ಲ; ಆದರೂ ಜನರು ಅವರನ್ನು ಬಹಳವಾಗಿ ಹೊಗಳುತ್ತಿದ್ದರು. 14 ಅಷ್ಟುಮಾತ್ರವಲ್ಲದೆ ಬಹಳ ಮಂದಿ ಗಂಡಸರೂ ಹೆಂಗಸರೂ ಕರ್ತನಲ್ಲಿ ನಂಬಿಕೆಯಿಡುವವರಾಗಿ ಅವರೊಂದಿಗೆ ಸೇರಿಕೊಳ್ಳುತ್ತಾ ಇದ್ದರು. 15 ಜನರು ವ್ಯಾಧಿಗ್ರಸ್ತರನ್ನು ಚಿಕ್ಕ ಹಾಸಿಗೆಗಳ ಮೇಲೆಯೂ ದೋಲಿಗಳ ಮೇಲೆಯೂ ಇಟ್ಟು, ಪೇತ್ರನು ಹಾದುಹೋಗುತ್ತಿರುವಾಗ ಅವನ ನೆರಳಾದರೂ ಅವರಲ್ಲಿ ಯಾವನ ಮೇಲಾದರೂ ಬೀಳಲಿ ಎಂದು ಅವರನ್ನು ಅಗಲವಾದ ಬೀದಿಗಳಿಗೆ ತೆಗೆದುಕೊಂಡು ಬಂದರು. 16 ಇದಲ್ಲದೆ ಯೆರೂಸಲೇಮಿನ ಸುತ್ತಲೂ ಇದ್ದ ಊರುಗಳಿಂದ ಜನರು ವ್ಯಾಧಿಗ್ರಸ್ತರನ್ನೂ ದೆವ್ವಗಳಿಂದ ತೊಂದರೆಗೊಳಗಾದವರನ್ನೂ ಹೊತ್ತುಕೊಂಡು ಗುಂಪುಗುಂಪಾಗಿ ಬರುತ್ತಿದ್ದರು; ಅವರೆಲ್ಲರೂ ವಾಸಿಮಾಡಲ್ಪಟ್ಟರು.
17 ಮಹಾ ಯಾಜಕನೂ ಆಗ ಅಸ್ತಿತ್ವದಲ್ಲಿದ್ದ ಸದ್ದುಕಾಯರ ಪಂಥಕ್ಕೆ ಸೇರಿದವರಾದ ಅವನ ಜೊತೆಯಲ್ಲಿದ್ದವರೆಲ್ಲರೂ ಎದ್ದು ಮತ್ಸರ ತುಂಬಿದವರಾಗಿ 18 ಅಪೊಸ್ತಲರನ್ನು ಹಿಡಿದು ಸಾರ್ವಜನಿಕ ಸೆರೆಮನೆಗೆ ಹಾಕಿದರು. 19 ಆದರೆ ರಾತ್ರಿಯಲ್ಲಿ ಯೆಹೋವನ ದೂತನು ಸೆರೆಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಗೆ ತಂದು, 20 “ನೀವು ಹೋಗಿ ದೇವಾಲಯದಲ್ಲಿ ನಿಂತುಕೊಂಡು ಈ ಜೀವದ ಕುರಿತಾದ ಎಲ್ಲ ವಿಷಯಗಳನ್ನು ಜನರಿಗೆ ತಿಳಿಸುತ್ತಾ ಇರಿ” ಎಂದು ಹೇಳಿದನು. 21 ಇದನ್ನು ಕೇಳಿದ ಬಳಿಕ ಅವರು ಮುಂಜಾನೆಯೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು.
ಮಹಾ ಯಾಜಕನೂ ಅವನ ಜೊತೆಯಲ್ಲಿದ್ದವರೂ ಹಿರೀಸಭೆಯನ್ನು ಮತ್ತು ಇಸ್ರಾಯೇಲ್ಯರ ಹಿರೀಪುರುಷರ ಮಂಡಲಿಯನ್ನು ಒಟ್ಟುಗೂಡಿಸಿ, ಅಪೊಸ್ತಲರನ್ನು ಕರೆತರುವುದಕ್ಕೆ ಅಧಿಕಾರಿಗಳನ್ನು ಸೆರೆಮನೆಗೆ ಕಳುಹಿಸಿದರು. 22 ಆದರೆ ಅಧಿಕಾರಿಗಳು ಅಲ್ಲಿಗೆ ಹೋದಾಗ ಅವರನ್ನು ಸೆರೆಮನೆಯಲ್ಲಿ ಕಾಣಲಿಲ್ಲ. ಅವರು ಹಿಂದಿರುಗಿ ಬಂದು, 23 “ಸೆರೆಮನೆಯು ಪೂರ್ಣ ಭದ್ರತೆಯಿಂದ ಮುಚ್ಚಲ್ಪಟ್ಟಿರುವುದನ್ನೂ ಬಾಗಿಲುಗಳಲ್ಲಿ ಕಾವಲುಗಾರರು ನಿಂತಿರುವುದನ್ನೂ ನಾವು ಕಂಡೆವು, ಆದರೆ ತೆರೆದು ನೋಡಿದಾಗ ಒಳಗೆ ಯಾರೂ ಇರಲಿಲ್ಲ” ಎಂದು ವರದಿಮಾಡಿದರು. 24 ದೇವಾಲಯದ ಮುಖ್ಯಸ್ಥನೂ ಮುಖ್ಯ ಯಾಜಕರೂ ಈ ಮಾತುಗಳನ್ನು ಕೇಳಿಸಿಕೊಂಡಾಗ ಇದರಿಂದ ಏನಾಗುವುದೋ ಎಂದು ಕಳವಳಪಟ್ಟರು. 25 ಆದರೆ ಯಾರೋ ಒಬ್ಬನು ಬಂದು, “ನೀವು ಸೆರೆಮನೆಗೆ ಹಾಕಿಸಿದ ಆ ಪುರುಷರು ದೇವಾಲಯದಲ್ಲಿ ನಿಂತುಕೊಂಡು ಜನರಿಗೆ ಬೋಧಿಸುತ್ತಿದ್ದಾರೆ” ಎಂದು ಅವರಿಗೆ ತಿಳಿಸಿದನು. 26 ಆಗ ಮುಖ್ಯಸ್ಥನು ತನ್ನ ಅಧಿಕಾರಿಗಳೊಂದಿಗೆ ಹೋಗಿ ಅವರನ್ನು ಕರೆತಂದನು; ಆದರೆ ಜನರು ತಮಗೆ ಕಲ್ಲೆಸೆದಾರೆಂಬ ಭಯ ಅವರಿಗಿದ್ದುದರಿಂದ ಅಪೊಸ್ತಲರ ಮೇಲೆ ಬಲಪ್ರಯೋಗಿಸಲಿಲ್ಲ.
27 ಅವರನ್ನು ಕರೆದುಕೊಂಡು ಬಂದು ಹಿರೀಸಭೆಯ ಸಭಾಂಗಣದಲ್ಲಿ ನಿಲ್ಲಿಸಿದರು. ಮತ್ತು ಮಹಾ ಯಾಜಕನು ಅವರನ್ನು ಪ್ರಶ್ನಿಸುತ್ತಾ, 28 “ಈ ಹೆಸರನ್ನು ಎತ್ತಿ ಬೋಧಿಸುತ್ತಾ ಇರಬಾರದೆಂದು ನಾವು ನಿಮಗೆ ಕಟ್ಟುನಿಟ್ಟಾಗಿ ಆಜ್ಞಾಪಿಸಿದೆವು. ನೀವಾದರೋ ಯೆರೂಸಲೇಮನ್ನು ನಿಮ್ಮ ಬೋಧನೆಯಿಂದ ತುಂಬಿಸಿದ್ದೀರಿ ಮತ್ತು ಈ ಮನುಷ್ಯನ ರಕ್ತಾಪರಾಧವನ್ನು ನಮ್ಮ ಮೇಲೆ ತರಲು ನಿರ್ಧರಿಸಿದ್ದೀರಿ” ಎಂದು ಹೇಳಿದನು. 29 ಇದಕ್ಕೆ ಉತ್ತರವಾಗಿ ಪೇತ್ರನೂ ಇತರ ಅಪೊಸ್ತಲರೂ, “ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ. 30 ನೀವು ಕಂಬಕ್ಕೆ ತೂಗಹಾಕಿ ಕೊಂದ ಯೇಸುವನ್ನು ನಮ್ಮ ಪೂರ್ವಜರ ದೇವರು ಎಬ್ಬಿಸಿದನು. 31 ದೇವರು ಅವನನ್ನು ಇಸ್ರಾಯೇಲ್ಯರಿಗೆ ಪಶ್ಚಾತ್ತಾಪವನ್ನೂ ಪಾಪಗಳಿಗೆ ಕ್ಷಮಾಪಣೆಯನ್ನೂ ಕೊಡಲಿಕ್ಕಾಗಿ ಮುಖ್ಯ ನಿಯೋಗಿಯಾಗಿ ಮತ್ತು ರಕ್ಷಕನಾಗಿ ತನ್ನ ಬಲಗಡೆಯಲ್ಲಿ ಉನ್ನತ ಸ್ಥಾನಕ್ಕೇರಿಸಿದನು. 32 ಈ ಸಂಗತಿಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ ಮತ್ತು ಪ್ರಭುವಾಗಿರುವ ದೇವರಿಗೆ ವಿಧೇಯರಾಗುವವರಿಗೆ ಆತನು ಕೊಟ್ಟಿರುವ ಪವಿತ್ರಾತ್ಮವೂ ಸಾಕ್ಷಿಯಾಗಿದೆ” ಎಂದು ಹೇಳಿದರು.
33 ಅವರು ಇದನ್ನು ಕೇಳಿಸಿಕೊಂಡಾಗ ತುಂಬ ಕೋಪಗೊಂಡವರಾಗಿ ಅವರನ್ನು ಕೊಲ್ಲಬೇಕೆಂದುಕೊಂಡರು. 34 ಆಗ ಎಲ್ಲ ಜನರಿಂದ ಗೌರವಿಸಲ್ಪಡುತ್ತಿದ್ದ ನ್ಯಾಯಶಾಸ್ತ್ರಿಯಾದ ಗಮಲಿಯೇಲನೆಂಬ ಫರಿಸಾಯನು ಹಿರೀಸಭೆಯಲ್ಲಿ ಎದ್ದುನಿಂತು, ಈ ಮನುಷ್ಯರನ್ನು ಸ್ವಲ್ಪ ಹೊತ್ತು ಹೊರಗೆ ಕಳುಹಿಸುವಂತೆ ಅಪ್ಪಣೆಕೊಟ್ಟನು. 35 ಬಳಿಕ ಅವನು ಅವರಿಗೆ ಹೇಳಿದ್ದು: “ಇಸ್ರಾಯೇಲ್ ಜನರೇ, ಈ ಮನುಷ್ಯರಿಗೆ ನೀವು ಏನು ಮಾಡಬೇಕೆಂದಿದ್ದೀರೋ ಅದರ ಕುರಿತು ಜಾಗ್ರತೆಯುಳ್ಳವರಾಗಿರಿ. 36 ಇದಕ್ಕಿಂತ ಮುಂಚೆ ಥೈದನು ಎದ್ದು ತಾನೊಬ್ಬ ದೊಡ್ಡ ಮನುಷ್ಯನೆಂದು ಹೇಳಿಕೊಂಡನು ಮತ್ತು ಸುಮಾರು ನಾನೂರು ಮಂದಿ ಪುರುಷರು ಅವನ ಪಕ್ಷಕ್ಕೆ ಸೇರಿದರು. ಆದರೆ ಅವನು ಕೊಲ್ಲಲ್ಪಟ್ಟನು ಮತ್ತು ಅವನಿಗೆ ವಿಧೇಯರಾದವರೆಲ್ಲರು ಚೆದರಿಸಲ್ಪಟ್ಟು ಇಲ್ಲವಾದರು. 37 ಅವನ ಬಳಿಕ ಖಾನೇಷುಮಾರಿಯ ದಿನಗಳಲ್ಲಿ ಗಲಿಲಾಯದವನಾದ ಯೂದನು ಎದ್ದು ಜನರು ತನ್ನನ್ನು ಹಿಂಬಾಲಿಸುವಂತೆ ಪ್ರೇರೇಪಿಸಿದನು. ಆದರೆ ಆ ಮನುಷ್ಯನೂ ಹಾಳಾದನು ಮತ್ತು ಅವನಿಗೆ ವಿಧೇಯರಾದವರೆಲ್ಲರು ಚೆದರಿಹೋದರು. 38 ಹೀಗಿರುವುದರಿಂದ ನಾನು ನಿಮಗೆ ಹೇಳುವುದೇನೆಂದರೆ, ಇಂದಿನ ಸನ್ನಿವೇಶಗಳಲ್ಲಿ ನೀವು ಈ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿರಿ; (ಈ ಯೋಚನೆಯು ಅಥವಾ ಕೆಲಸವು ಮನುಷ್ಯರಿಂದಾಗಿರುವುದಾದರೆ ಅದು ಕೆಡವಲ್ಪಡುವುದು; 39 ಅದು ದೇವರಿಂದಾಗಿರುವುದಾದರೆ ಅದನ್ನು ಕೆಡವಿಬಿಡಲು ನಿಮ್ಮಿಂದ ಸಾಧ್ಯವಿಲ್ಲ.) ಇಲ್ಲದಿದ್ದರೆ ಪ್ರಾಯಶಃ ನೀವು ದೇವರಿಗೆ ವಿರುದ್ಧವಾಗಿ ಹೋರಾಡುವವರಾಗಿ ಕಂಡುಬರಬಹುದು.” 40 ಅವರು ಅವನ ಮಾತಿಗೆ ಕಿವಿಗೊಟ್ಟು ಅಪೊಸ್ತಲರನ್ನು ಕರೆಸಿ ಚಡಿಗಳಿಂದ ಹೊಡೆಸಿ ಯೇಸುವಿನ ಹೆಸರನ್ನು ಎತ್ತಿ ಮಾತಾಡುವುದನ್ನು ನಿಲ್ಲಿಸುವಂತೆ ಅಪ್ಪಣೆಕೊಟ್ಟು ಅವರನ್ನು ಕಳುಹಿಸಿಬಿಟ್ಟರು.
41 ಆದರೆ ಅವನ ಹೆಸರಿನ ನಿಮಿತ್ತ ತಾವು ಅವಮಾನಪಡಲು ಯೋಗ್ಯರೆನಿಸಿಕೊಂಡದ್ದಕ್ಕಾಗಿ ಸಂತೋಷಿಸುತ್ತಾ ಅವರು ಹಿರೀಸಭೆಯಿಂದ ಹೊರಟುಹೋದರು. 42 ಮತ್ತು ಪ್ರತಿ ದಿನ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಅವರು ಎಡೆಬಿಡದೆ ಬೋಧಿಸುತ್ತಾ ಕ್ರಿಸ್ತ ಯೇಸುವಿನ ಕುರಿತಾದ ಸುವಾರ್ತೆಯನ್ನು ಸಾರುತ್ತಾ ಇದ್ದರು.