ಗಲಾತ್ಯ
3 ಎಲೈ ಬುದ್ಧಿಹೀನರಾದ ಗಲಾತ್ಯದವರೇ, ನಿಮ್ಮನ್ನು ಕೆಟ್ಟ ಪ್ರಭಾವಕ್ಕೆ ಒಳಪಡಿಸಿದವನು ಯಾರು? ಯೇಸು ಕ್ರಿಸ್ತನು ಶೂಲಕ್ಕೇರಿಸಲ್ಪಟ್ಟದ್ದು ನಿಮ್ಮ ಕಣ್ಣುಗಳ ಮುಂದೆ ಸ್ಪಷ್ಟವಾಗಿ ವರ್ಣಿಸಲ್ಪಟ್ಟಿತಲ್ಲವೆ? 2 ನಾನು ಇದನ್ನು ಮಾತ್ರ ನಿಮ್ಮಿಂದ ತಿಳಿದುಕೊಳ್ಳಲು ಬಯಸುತ್ತೇನೆ: ನೀವು ಪವಿತ್ರಾತ್ಮವನ್ನು * ಹೊಂದಿದ್ದು ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಕಾರ್ಯಗಳಿಂದಲೊ ಅಥವಾ ನಂಬಿಕೆಯಿಂದ ಕೇಳಿಸಿಕೊಂಡದ್ದರಿಂದಲೊ? 3 ನೀವು ಅಷ್ಟು ಬುದ್ಧಿಹೀನರಾಗಿದ್ದೀರೊ? ನೀವು ಪವಿತ್ರಾತ್ಮದಲ್ಲಿ ಆರಂಭಿಸಿ ಈಗ ಶರೀರದಲ್ಲಿ ಪೂರ್ಣಗೊಳಿಸಲ್ಪಡುತ್ತಿದ್ದೀರೊ? 4 ನೀವು ಇಷ್ಟೆಲ್ಲ ಕಷ್ಟಗಳನ್ನು ಯಾವ ಉದ್ದೇಶವೂ ಇಲ್ಲದೆ ಅನುಭವಿಸಿದಿರೊ? ಯಾವುದೇ ಉದ್ದೇಶವಿಲ್ಲದೆ ಅನುಭವಿಸಲಿಲ್ಲ ಎಂಬ ಖಾತ್ರಿ ನನಗಿದೆ. 5 ನಿಮಗೆ ಪವಿತ್ರಾತ್ಮವನ್ನು ಕೊಡುವವನು ಮತ್ತು ನಿಮ್ಮ ಮಧ್ಯೆ ಮಹತ್ಕಾರ್ಯಗಳನ್ನು ನಡಿಸುವವನು, ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಕಾರ್ಯಗಳ ದೆಸೆಯಿಂದ ಅದನ್ನು ಮಾಡುತ್ತಾನೋ ಅಥವಾ ನಂಬಿಕೆಯಿಂದ ಕೇಳಿಸಿಕೊಂಡದ್ದರಿಂದ ಮಾಡುತ್ತಾನೊ? 6 ಅಬ್ರಹಾಮನು “ಯೆಹೋವನಲ್ಲಿ ನಂಬಿಕೆಯನ್ನಿಟ್ಟನು ಮತ್ತು ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು” ಎಂದು ಬರೆಯಲ್ಪಟ್ಟಿದೆಯಲ್ಲಾ.
7 ನಂಬಿಕೆಗೆ ಬಲವಾಗಿ ಅಂಟಿಕೊಳ್ಳುವವರೇ ಅಬ್ರಹಾಮನ ಪುತ್ರರಾಗಿದ್ದಾರೆ ಎಂಬುದು ನಿಮಗೆ ಖಂಡಿತವಾಗಿಯೂ ತಿಳಿದಿದೆ. 8 ದೇವರು ನಂಬಿಕೆಯ ನಿಮಿತ್ತವಾಗಿ ಅನ್ಯಜನಾಂಗಗಳ ಜನರನ್ನು ನೀತಿವಂತರೆಂದು ನಿರ್ಣಯಿಸುವನು ಎಂಬುದನ್ನು ಶಾಸ್ತ್ರಗ್ರಂಥವು ಮುಂದಾಗಿಯೇ ಕಂಡು, “ನಿನ್ನ ಮೂಲಕ ಎಲ್ಲ ಜನಾಂಗಗಳು ಆಶೀರ್ವದಿಸಲ್ಪಡುವವು” ಎಂಬ ಸುವಾರ್ತೆಯನ್ನು ಅಬ್ರಹಾಮನಿಗೆ ಮೊದಲೇ ತಿಳಿಯಪಡಿಸಿತು. 9 ಆದುದರಿಂದ ನಂಬಿಕೆಗೆ ಬಲವಾಗಿ ಅಂಟಿಕೊಳ್ಳುವವರು ನಂಬಿಗಸ್ತನಾದ ಅಬ್ರಹಾಮನೊಂದಿಗೆ ಆಶೀರ್ವದಿಸಲ್ಪಡುತ್ತಿದ್ದಾರೆ.
10 ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಕಾರ್ಯಗಳ ಮೇಲೆ ಹೊಂದಿಕೊಂಡಿರುವವರೆಲ್ಲರೂ ಶಾಪದ ಕೆಳಗಿದ್ದಾರೆ; ಏಕೆಂದರೆ “ಧರ್ಮಶಾಸ್ತ್ರದ ಸುರುಳಿಯಲ್ಲಿ ಬರೆಯಲ್ಪಟ್ಟಿರುವ ಎಲ್ಲ ವಿಷಯಗಳನ್ನು ಕೈಕೊಳ್ಳುತ್ತಾ ಮುಂದುವರಿಯದಂಥ ಪ್ರತಿಯೊಬ್ಬನು ಶಾಪಗ್ರಸ್ತನು” ಎಂದು ಬರೆಯಲ್ಪಟ್ಟಿದೆ. 11 ಮಾತ್ರವಲ್ಲದೆ, ಧರ್ಮಶಾಸ್ತ್ರದಿಂದ ಯಾರೊಬ್ಬನೂ ದೇವರ ಮುಂದೆ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ; ಏಕೆಂದರೆ “ನೀತಿವಂತನು ತನ್ನ ನಂಬಿಕೆಯಿಂದಲೇ ಬದುಕುವನು.” 12 ಧರ್ಮಶಾಸ್ತ್ರವು ನಂಬಿಕೆಗೆ ಅಂಟಿಕೊಳ್ಳುವುದಿಲ್ಲ, ಆದರೆ “ಅವುಗಳನ್ನು ಮಾಡುವವನು ಅವುಗಳ ಮೂಲಕವೇ ಬದುಕುವನು.” 13 ಕ್ರಿಸ್ತನು ನಮ್ಮನ್ನು ಕೊಂಡುಕೊಂಡು ನಮಗೆ ಬದಲಾಗಿ ಶಾಪಗ್ರಸ್ತನಾಗುವ ಮೂಲಕ ಧರ್ಮಶಾಸ್ತ್ರದ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು; ಏಕೆಂದರೆ “ಕಂಬಕ್ಕೆ ತೂಗುಹಾಕಲ್ಪಟ್ಟ ಪ್ರತಿಯೊಬ್ಬ ಮನುಷ್ಯನೂ ಶಾಪಗ್ರಸ್ತನಾಗಿದ್ದಾನೆ” ಎಂದು ಬರೆದಿದೆ. 14 ಅಬ್ರಹಾಮನ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಅನ್ಯಜನಾಂಗಗಳಿಗೆ ದೊರಕುವಂತಾಗುವುದೇ ಇದರ ಉದ್ದೇಶವಾಗಿತ್ತು; ಹೀಗೆ ವಾಗ್ದಾನಿಸಲ್ಪಟ್ಟ ಪವಿತ್ರಾತ್ಮವನ್ನು ನಮ್ಮ ನಂಬಿಕೆಯ ಮೂಲಕ ನಾವು ಪಡೆದುಕೊಳ್ಳುವಂತಾಯಿತು.
15 ಸಹೋದರರೇ, ಒಂದು ಮಾನವ ದೃಷ್ಟಾಂತದಿಂದ ನಾನು ಮಾತಾಡುತ್ತೇನೆ; ಸ್ಥಿರಪಡಿಸಿದ ಒಂದು ಒಡಂಬಡಿಕೆಯು ಮನುಷ್ಯನದ್ದಾಗಿರುವುದಾದರೂ ಯಾರೂ ಅದನ್ನು ಬದಿಗೊತ್ತುವುದಿಲ್ಲ ಅಥವಾ ಅದಕ್ಕೆ ಹೆಚ್ಚನ್ನು ಕೂಡಿಸುವುದಿಲ್ಲ. 16 ಒಳ್ಳೇದು, ವಾಗ್ದಾನಗಳು ಅಬ್ರಹಾಮನಿಗೂ ಅವನ ಸಂತತಿಗೂ ತಿಳಿಸಲ್ಪಟ್ಟವು. ಅದು “ಸಂತತಿಗಳಿಗೆ” ಎಂದು ಅಂಥ ಅನೇಕರನ್ನು ಸೂಚಿಸಿ ಹೇಳದೆ, “ನಿನ್ನ ಸಂತತಿಗೆ” ಎಂದು ಒಬ್ಬನನ್ನೇ ಸೂಚಿಸಿ ಹೇಳುತ್ತದೆ; ಆ ಒಬ್ಬನು ಕ್ರಿಸ್ತನೇ. 17 ನಾನು ಇನ್ನೂ ಹೇಳುವುದೇನೆಂದರೆ, ದೇವರು ಮುಂಚೆ ಸ್ಥಿರಪಡಿಸಿದ ಒಡಂಬಡಿಕೆಯನ್ನು ನಾನೂರ ಮೂವತ್ತು ವರ್ಷಗಳ ಬಳಿಕ ಬಂದ ಧರ್ಮಶಾಸ್ತ್ರವು ಅಸ್ಥಿರಗೊಳಿಸಿ ಆ ವಾಗ್ದಾನವನ್ನು ರದ್ದುಮಾಡುವುದಿಲ್ಲ. 18 ನಿಯಮದಿಂದ ಬಾಧ್ಯತೆಯು ದೊರೆಯುವುದಾದರೆ ಅದು ಇನ್ನೆಂದಿಗೂ ವಾಗ್ದಾನದಿಂದ ದೊರೆಯುವಂಥದಲ್ಲ; ಆದರೆ ದೇವರು ಅದನ್ನು ಅಬ್ರಹಾಮನಿಗೆ ವಾಗ್ದಾನದ ಮೂಲಕ ದಯಪಾಲಿಸಿದ್ದಾನೆ.
19 ಹಾಗಾದರೆ ಧರ್ಮಶಾಸ್ತ್ರ ಯಾತಕ್ಕೆ? ಯಾರಿಗೆ ವಾಗ್ದಾನಮಾಡಲ್ಪಟ್ಟಿತೋ ಆ ಸಂತತಿಯಾದವನು ಬರುವ ವರೆಗೆ ಅಪರಾಧಗಳನ್ನು ಬಹಿರಂಗಪಡಿಸಲಿಕ್ಕಾಗಿ ಧರ್ಮಶಾಸ್ತ್ರವು ಕೂಡಿಸಲ್ಪಟ್ಟಿತು; ಮತ್ತು ಅದು ದೇವದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಿಂದ ರವಾನಿಸಲ್ಪಟ್ಟಿತು. 20 ಒಬ್ಬನೇ ಒಬ್ಬ ವ್ಯಕ್ತಿಯು ಒಳಗೂಡಿರುವುದಾದರೆ ಮಧ್ಯಸ್ಥನು ಇರುವುದಿಲ್ಲ; ದೇವರಾದರೊ ಒಬ್ಬನೇ. 21 ಹಾಗಾದರೆ ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರುದ್ಧವಾಗಿದೆಯೊ? ಹಾಗೆ ಎಂದಿಗೂ ಆಗದಿರಲಿ! ಕೊಡಲ್ಪಟ್ಟಿದ್ದ ಒಂದು ನಿಯಮವು ಜೀವವನ್ನು ಕೊಡಲು ಶಕ್ತವಾಗಿದ್ದರೆ, ವಾಸ್ತವದಲ್ಲಿ ನಿಯಮದ ಮೂಲಕ ನೀತಿಯುಂಟಾಗುತ್ತಿತ್ತು. 22 ಆದರೆ ಯೇಸು ಕ್ರಿಸ್ತನಲ್ಲಿರುವ ನಂಬಿಕೆಯ ಮೂಲಕ ಉಂಟಾಗುವ ಆ ವಾಗ್ದಾನವು ನಂಬಿಕೆಯುಳ್ಳವರಿಗೆ ಕೊಡಲ್ಪಡುವಂತೆ ಶಾಸ್ತ್ರಗ್ರಂಥವು ಸಮಸ್ತವನ್ನೂ ಒಟ್ಟಿಗೆ ಪಾಪದ ವಶಕ್ಕೆ ಒಪ್ಪಿಸಿಕೊಟ್ಟಿತು.
23 ಆದರೂ, ನಂಬಿಕೆಯು ಬರುವುದಕ್ಕೆ ಮುಂಚೆ, ಬಂಧನಕ್ಕೆ ಒಪ್ಪಿಸಲ್ಪಟ್ಟವರಾಗಿದ್ದ ಮತ್ತು ಪ್ರಕಟಿಸಲ್ಪಡಲಿಕ್ಕಿದ್ದ ನಂಬಿಕೆಗಾಗಿ ಎದುರುನೋಡುತ್ತಿದ್ದ ನಮ್ಮನ್ನು ನಿಯಮದ ಕೆಳಗೆ ಕಾಯಲಾಗುತ್ತಿತ್ತು. 24 ಆದುದರಿಂದ ನಾವು ನಂಬಿಕೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಡಲಿಕ್ಕಾಗಿ ಧರ್ಮಶಾಸ್ತ್ರವು ನಮ್ಮನ್ನು ಕ್ರಿಸ್ತನ ಬಳಿಗೆ ನಡಿಸುವ ಪಾಲಕನಾಗಿ * ಪರಿಣಮಿಸಿದೆ. 25 ಆದರೆ ಈಗ ನಂಬಿಕೆಯು ಬಂದಿರುವುದರಿಂದ ನಾವು ಇನ್ನೆಂದೂ ಪಾಲಕನ * ಕೆಳಗಿರುವುದಿಲ್ಲ.
26 ವಾಸ್ತವದಲ್ಲಿ, ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಮೂಲಕ ದೇವರ ಪುತ್ರರಾಗಿದ್ದೀರಿ. 27 ಏಕೆಂದರೆ ಕ್ರಿಸ್ತನೊಂದಿಗೆ ಐಕ್ಯರಾಗಲಿಕ್ಕಾಗಿ ದೀಕ್ಷಾಸ್ನಾನ ಪಡೆದುಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿದ್ದೀರಿ. 28 ನೀವೆಲ್ಲರೂ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ಒಂದೇ ವ್ಯಕ್ತಿ ಆಗಿರುವುದರಿಂದ ಯೆಹೂದ್ಯನು ಅಥವಾ ಗ್ರೀಕನು ಎಂದಾಗಲಿ, ಆಳು ಅಥವಾ ಸ್ವತಂತ್ರನು ಎಂದಾಗಲಿ, ಗಂಡು ಅಥವಾ ಹೆಣ್ಣು ಎಂದಾಗಲಿ ಭೇದವಿಲ್ಲ. 29 ಆದುದರಿಂದ ನೀವು ಕ್ರಿಸ್ತನಿಗೆ ಸೇರಿದವರಾಗಿರುವಲ್ಲಿ, ನೀವು ನಿಜವಾಗಿಯೂ ಅಬ್ರಹಾಮನ ಸಂತತಿಯವರೂ ವಾಗ್ದಾನದ ಸಂಬಂಧದಲ್ಲಿ ಬಾಧ್ಯರೂ ಆಗಿದ್ದೀರಿ.