ಅ. ಕಾರ್ಯ
16 ಹೀಗೆ ಅವನು ದೆರ್ಬೆಗೂ ಲುಸ್ತ್ರಕ್ಕೂ ಬಂದನು. ಅಲ್ಲಿ ತಿಮೊಥೆಯನೆಂಬ ಒಬ್ಬ ಶಿಷ್ಯನಿದ್ದನು. ಅವನ ತಾಯಿ ವಿಶ್ವಾಸಿಯಾಗಿದ್ದ ಯೆಹೂದ್ಯ ಸ್ತ್ರೀಯಾಗಿದ್ದಳು, ಆದರೆ ಅವನ ತಂದೆ ಗ್ರೀಕನಾಗಿದ್ದನು. 2 ಲುಸ್ತ್ರ ಮತ್ತು ಇಕೋನ್ಯದಲ್ಲಿದ್ದ ಸಹೋದರರು ಅವನ ಕುರಿತಾಗಿ ಒಳ್ಳೇ ಸಾಕ್ಷಿಹೇಳುತ್ತಿದ್ದರು. 3 ಇವನು ತನ್ನ ಸಂಗಡ ಬರಬೇಕೆಂಬ ಅಪೇಕ್ಷೆಯನ್ನು ಪೌಲನು ವ್ಯಕ್ತಪಡಿಸಿದನು ಮತ್ತು ಅವನನ್ನು ಕರೆದುಕೊಂಡು ಹೋಗಿ ಆ ಸ್ಥಳಗಳಲ್ಲಿದ್ದ ಯೆಹೂದ್ಯರ ನಿಮಿತ್ತ ಅವನಿಗೆ ಸುನ್ನತಿಮಾಡಿಸಿದನು. ಏಕೆಂದರೆ ಅವನ ತಂದೆಯು ಒಬ್ಬ ಗ್ರೀಕನೆಂದು ಎಲ್ಲರಿಗೂ ತಿಳಿದಿತ್ತು. 4 ಅವರು ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಾ ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಹಿರೀಪುರುಷರೂ ತೀರ್ಮಾನಿಸಿದ ನಿಯಮಗಳನ್ನು ಪಾಲಿಸುವಂತೆ ಆ ಜನರಿಗೆ ತಿಳಿಯಪಡಿಸಿದರು. 5 ಆದುದರಿಂದ ಸಭೆಗಳು ನಂಬಿಕೆಯಲ್ಲಿ ಬಲಗೊಳಿಸಲ್ಪಡುತ್ತಾ ದಿನೇ ದಿನೇ ಸಂಖ್ಯೆಯಲ್ಲಿ ಹೆಚ್ಚುತ್ತಾ ಬಂದವು.
6 ಮಾತ್ರವಲ್ಲದೆ, ಏಷ್ಯಾ ಪ್ರಾಂತದಲ್ಲಿ ವಾಕ್ಯವನ್ನು ಸಾರುವುದನ್ನು ಪವಿತ್ರಾತ್ಮವು ನಿಷೇಧಿಸಿದ್ದರಿಂದ ಅವರು ಫ್ರುಗ್ಯ ಮತ್ತು ಗಲಾತ್ಯ ಸೀಮೆಯ ಮಾರ್ಗವಾಗಿ ಪ್ರಯಾಣಿಸಿದರು. 7 ಅವರು ಮೂಸ್ಯದ ಹತ್ತಿರ ಬಂದಾಗ ಬಿಥೂನ್ಯಕ್ಕೆ ಹೋಗಲು ಪ್ರಯತ್ನಿಸಿದರು. ಆದರೆ ಯೇಸು ಪವಿತ್ರಾತ್ಮದ ಮೂಲಕ ಅವರನ್ನು ಅನುಮತಿಸಲಿಲ್ಲ. 8 ಆದುದರಿಂದ ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು. 9 ರಾತ್ರಿವೇಳೆಯಲ್ಲಿ ಪೌಲನು ಒಂದು ದರ್ಶನವನ್ನು ಕಂಡನು. ಆ ದರ್ಶನದಲ್ಲಿ ಮಕೆದೋನ್ಯದವನಾದ ಒಬ್ಬ ಮನುಷ್ಯನು ನಿಂತುಕೊಂಡು, “ಮಕೆದೋನ್ಯಕ್ಕೆ ಬಂದು ನಮಗೆ ಸಹಾಯಮಾಡು” ಎಂದು ಅವನನ್ನು ಬೇಡಿಕೊಳ್ಳುತ್ತಿದ್ದನು. 10 ಅವನು ಈ ದರ್ಶನವನ್ನು ನೋಡಿದ ಕೂಡಲೆ, ಮಕೆದೋನ್ಯದ ಜನರಿಗೆ ಸುವಾರ್ತೆಯನ್ನು ಸಾರಲಿಕ್ಕಾಗಿ ದೇವರು ನಮ್ಮನ್ನು ಕರೆದಿದ್ದಾನೆಂಬ ತೀರ್ಮಾನಕ್ಕೆ ಬಂದು ನಾವು ಅಲ್ಲಿಗೆ ಹೊರಟೆವು.
11 ಆದುದರಿಂದ ನಾವು ತ್ರೋವದಿಂದ ಸಮುದ್ರಪ್ರಯಾಣ ಮಾಡಿ ನೇರವಾಗಿ ಸಮೊಥ್ರಾಕೆಗೆ ಬಂದೆವು. ಆದರೆ ಮರುದಿನ ನೆಯಾಪೊಲಿಗೆ ಹೋಗಿ 12 ಅಲ್ಲಿಂದ ಫಿಲಿಪ್ಪಿಗೆ ತಲಪಿದೆವು; ಇದು ರೋಮ್ನ ವಸಾಹತು ಆಗಿದ್ದು ಮಕೆದೋನ್ಯ ಜಿಲ್ಲೆಯ ಪ್ರಮುಖ ಪಟ್ಟಣವಾಗಿತ್ತು. ನಾವು ಈ ಪಟ್ಟಣದಲ್ಲಿ ಕೆಲವು ದಿವಸ ಉಳಿದೆವು. 13 ಸಬ್ಬತ್ ದಿನದಂದು, ನಾವು ಪ್ರಾರ್ಥನೆ ನಡೆಯುವ ಸ್ಥಳವಿರಬಹುದೆಂದು ಭಾವಿಸಿ ಊರಬಾಗಿಲಿನ ಹೊರಗೆ ನದೀತೀರಕ್ಕೆ ಹೋದೆವು; ನಾವು ಅಲ್ಲಿ ಕುಳಿತುಕೊಂಡು ಕೂಡಿಬಂದಿದ್ದ ಸ್ತ್ರೀಯರೊಂದಿಗೆ ಮಾತಾಡಲಾರಂಭಿಸಿದೆವು. 14 ನಮ್ಮ ಮಾತುಗಳನ್ನು ಕೇಳಿದವರಲ್ಲಿ ಕೆನ್ನೀಲಿ ಬಣ್ಣದ ವಸ್ತ್ರಗಳನ್ನು ಮಾರುತ್ತಿದ್ದವಳೂ ಥುವತೈರದವಳೂ ದೇವಭಕ್ತಳೂ ಆಗಿದ್ದ ಲುದ್ಯಳೆಂಬ ಒಬ್ಬ ಸ್ತ್ರೀಯೂ ಇದ್ದಳು. ಪೌಲನು ಹೇಳುತ್ತಿದ್ದ ಮಾತುಗಳಿಗೆ ನಿಕಟವಾಗಿ ಗಮನಕೊಡುವಂತೆ ಯೆಹೋವನು ಅವಳ ಹೃದಯವನ್ನು ವಿಶಾಲವಾಗಿ ತೆರೆದನು. 15 ಅವಳೂ ಅವಳ ಮನೆಯವರೂ ದೀಕ್ಷಾಸ್ನಾನಪಡೆದುಕೊಂಡ ಬಳಿಕ ಅವಳು ನಮಗೆ, “ನಾನು ಯೆಹೋವನಿಗೆ ನಂಬಿಗಸ್ತಳಾಗಿದ್ದೇನೆಂದು ನೀವು ತೀರ್ಮಾನಿಸುವಲ್ಲಿ ನನ್ನ ಮನೆಗೆ ಬಂದು ತಂಗಿರಿ” ಎಂದು ಬೇಡಿಕೊಂಡು ನಮ್ಮನ್ನು ಬರುವಂತೆ ಮಾಡಿದಳು.
16 ಆ ಬಳಿಕ ನಾವು ಪ್ರಾರ್ಥನೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಾಗ, ಕಣಿಹೇಳುವ ದೆವ್ವಹಿಡಿದಿದ್ದ ಒಬ್ಬ ಸೇವಕಿಯು ನಮ್ಮೆದುರಿಗೆ ಬಂದಳು. ಅವಳು ಭವಿಷ್ಯ ನುಡಿಯುವ ವೃತ್ತಿಯ ಮೂಲಕ ತನ್ನ ಯಜಮಾನರಿಗೆ ಬಹಳ ಆದಾಯವನ್ನು ಒದಗಿಸುತ್ತಿದ್ದಳು. 17 ಆ ಹುಡುಗಿಯು ನಮ್ಮನ್ನೂ ಪೌಲನನ್ನೂ ಹಿಂಬಾಲಿಸುತ್ತಾ, “ಈ ಮನುಷ್ಯರು ಮಹೋನ್ನತನಾದ ದೇವರ ದಾಸರು; ಇವರು ನಿಮಗೆ ರಕ್ಷಣೆಯ ಮಾರ್ಗವನ್ನು ಪ್ರಕಟಪಡಿಸುತ್ತಿದ್ದಾರೆ” ಎಂದು ಕೂಗಿ ಹೇಳುತ್ತಿದ್ದಳು. 18 ಹೀಗೆ ಅವಳು ಅನೇಕ ದಿವಸಗಳ ವರೆಗೆ ಮಾಡುತ್ತಲೇ ಇದ್ದಳು. ಇದರಿಂದಾಗಿ ಪೌಲನು ಬೇಸರಗೊಂಡು ಹಿಂದೆ ತಿರುಗಿ ಆ ದೆವ್ವಕ್ಕೆ, “ಅವಳನ್ನು ಬಿಟ್ಟು ಹೊರಗೆ ಬರುವಂತೆ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿನಗೆ ಅಪ್ಪಣೆಕೊಡುತ್ತೇನೆ” ಅಂದನು. ಅದೇ ಗಳಿಗೆಯಲ್ಲಿ ಅದು ಹೊರಗೆಬಂತು.
19 ಅವಳ ಯಜಮಾನರು ತಮ್ಮ ಆದಾಯದ ನಿರೀಕ್ಷೆ ಕೈತಪ್ಪಿತಲ್ಲಾ ಎಂದು ತಿಳಿದು ಪೌಲ ಸೀಲರನ್ನು ಹಿಡಿದು ಸಾರ್ವಜನಿಕ ಸಭಾಸ್ಥಾನದ ಅಧಿಪತಿಗಳ ಬಳಿಗೆ ಎಳೆದುಕೊಂಡು ಹೋದರು. 20 ಅವರನ್ನು ಪೌರ ನ್ಯಾಯಾಧಿಪತಿಗಳ ಮುಂದೆ ನಿಲ್ಲಿಸಿ, “ಯೆಹೂದ್ಯರಾಗಿರುವ ಈ ಜನರು ನಮ್ಮ ಪಟ್ಟಣವನ್ನು ಬಹಳವಾಗಿ ಗಲಿಬಿಲಿಗೊಳಿಸುತ್ತಿದ್ದಾರೆ. 21 ಇವರು ರೋಮನರಾದ ನಮಗೆ ಅಂಗೀಕರಿಸಲು ಅಥವಾ ಅನುಸರಿಸಲು ಕಾನೂನುಬದ್ಧವಲ್ಲದ ಪದ್ಧತಿಗಳನ್ನು ಪ್ರಚಾರಮಾಡುತ್ತಿದ್ದಾರೆ” ಎಂದು ಹೇಳಿದರು. 22 ಆಗ ಜನರು ಒಟ್ಟುಗೂಡಿ ಅವರ ವಿರುದ್ಧ ಎದ್ದರು; ಮತ್ತು ಪೌರ ನ್ಯಾಯಾಧಿಪತಿಗಳು ಅವರ ಮೇಲಂಗಿಗಳನ್ನು ಹರಿದು ಅವರನ್ನು ಕೋಲುಗಳಿಂದ ಹೊಡೆಯುವಂತೆ ಅಪ್ಪಣೆಕೊಟ್ಟರು. 23 ಅವರಿಗೆ ತುಂಬ ಹೊಡೆದ ಬಳಿಕ ಸೆರೆಮನೆಗೆ ಹಾಕಿಸಿ ಅವರನ್ನು ಭದ್ರವಾಗಿ ಕಾಯುವಂತೆ ಸೆರೆಯ ಯಜಮಾನನಿಗೆ ಆಜ್ಞಾಪಿಸಿದರು. 24 ಅವನಿಗೆ ಇಂಥ ಆಜ್ಞೆಯು ಕೊಡಲ್ಪಟ್ಟದ್ದರಿಂದ ಅವನು ಅವರನ್ನು ಸೆರೆಮನೆಯ ಒಳಕೋಣೆಯಲ್ಲಿ ಹಾಕಿ ಅವರ ಕಾಲುಗಳಿಗೆ ಬೇಡಿಗಳನ್ನು * ತೊಡಿಸಿದನು.
25 ಆದರೆ ಮಧ್ಯರಾತ್ರಿಯಷ್ಟಕ್ಕೆ ಪೌಲ ಸೀಲರು ಪ್ರಾರ್ಥನೆ ಮಾಡುತ್ತಾ ಗೀತೆಯನ್ನು ಹಾಡುವ ಮೂಲಕ ದೇವರನ್ನು ಸ್ತುತಿಸುತ್ತಾ ಇದ್ದಾಗ ಇತರ ಸೆರೆಯಾಳುಗಳು ಅದನ್ನು ಕೇಳಿಸಿಕೊಳ್ಳುತ್ತಾ ಇದ್ದರು. 26 ಆಗ ಇದ್ದಕ್ಕಿದ್ದಂತೆ ದೊಡ್ಡ ಭೂಕಂಪವಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಆ ಕೂಡಲೆ ಸೆರೆಮನೆಯ ಎಲ್ಲ ಬಾಗಿಲುಗಳು ತೆರೆದುಕೊಂಡವು ಮತ್ತು ಎಲ್ಲರ ಬೇಡಿಗಳು ಕಳಚಿಬಿದ್ದವು. 27 ಸೆರೆಮನೆಯ ಯಜಮಾನನು ನಿದ್ರೆಯಿಂದ ಎಚ್ಚೆತ್ತು ಸೆರೆಮನೆಯ ಬಾಗಿಲುಗಳು ತೆರೆದಿರುವುದನ್ನು ಕಂಡು ಸೆರೆಯಾಳುಗಳು ತಪ್ಪಿಸಿಕೊಂಡರೆಂದು ಭಾವಿಸಿ ತನ್ನ ಕತ್ತಿಯನ್ನು ಹೊರಕ್ಕೆತ್ತಿ ತನ್ನನ್ನು ಹತಿಸಿಕೊಳ್ಳಬೇಕೆಂದಿದ್ದನು. 28 ಆದರೆ ಪೌಲನು, “ನಿನಗೇನೂ ಹಾನಿಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲಿಯೇ ಇದ್ದೇವೆ!” ಎಂದು ಗಟ್ಟಿಯಾಗಿ ಕೂಗಿ ಹೇಳಿದನು. 29 ಆಗ ಅವನು ದೀಪ ತರುವಂತೆ ಹೇಳಿ ಒಳಗೆ ಹಾರಿ ಭಯದಿಂದ ನಡುಗುತ್ತಾ ಪೌಲ ಸೀಲರ ಮುಂದೆ ಬಿದ್ದನು. 30 ಅನಂತರ ಅವರನ್ನು ಹೊರಗೆ ಕರೆದುಕೊಂಡು ಬಂದು, “ಸ್ವಾಮಿಗಳೇ, ನಾನು ರಕ್ಷಣೆಯನ್ನು ಹೊಂದಲು ಏನು ಮಾಡಬೇಕು?” ಎಂದು ಕೇಳಿದನು. 31 ಅದಕ್ಕೆ ಅವರು, “ಕರ್ತನಾದ ಯೇಸುವಿನಲ್ಲಿ ನಂಬಿಕೆಯಿಡು; ನೀನೂ ನಿನ್ನ ಮನೆಯವರೂ ರಕ್ಷಣೆಹೊಂದುವಿರಿ” ಎಂದರು. 32 ಆಗ ಅವರು ಅವನಿಗೂ ಅವನ ಮನೆಯವರೆಲ್ಲರಿಗೂ ಯೆಹೋವನ ವಾಕ್ಯವನ್ನು ತಿಳಿಸಿದರು. 33 ಬಳಿಕ ಅವನು ರಾತ್ರಿಯ ಆ ಗಳಿಗೆಯಲ್ಲಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು ಮತ್ತು ತಡಮಾಡದೆ ಅವನೂ ಅವನ ಮನೆಯವರೆಲ್ಲರೂ ದೀಕ್ಷಾಸ್ನಾನಪಡೆದುಕೊಂಡರು. 34 ಅನಂತರ ಅವನು ಅವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಊಟಕ್ಕಾಗಿ ಏರ್ಪಾಡುಮಾಡಿದನು. ಈಗ ಅವನು ದೇವರಲ್ಲಿ ನಂಬಿಕೆಯಿಟ್ಟದ್ದರಿಂದ ತನ್ನ ಮನೆಯವರೆಲ್ಲರ ಸಂಗಡ ಬಹಳವಾಗಿ ಆನಂದಿಸಿದನು.
35 ಬೆಳಗಾದ ಮೇಲೆ ಪೌರ ನ್ಯಾಯಾಧಿಪತಿಗಳು, “ಆ ಮನುಷ್ಯರನ್ನು ಬಿಟ್ಟುಬಿಡು” ಎಂದು ಜವಾನರ ಬಳಿ ಹೇಳಿಕಳುಹಿಸಿದರು. 36 ಸೆರೆಯ ಯಜಮಾನನು ಅವರ ಮಾತುಗಳನ್ನು ಪೌಲನಿಗೆ ತಿಳಿಸುತ್ತಾ, “ಪೌರ ನ್ಯಾಯಾಧಿಪತಿಗಳು ನಿಮ್ಮಿಬ್ಬರನ್ನು ಬಿಟ್ಟುಬಿಡುವಂತೆ ಹೇಳಿಕಳುಹಿಸಿದ್ದಾರೆ. ಆದುದರಿಂದ ನೀವೀಗ ಸಮಾಧಾನದಿಂದ ನಿಮ್ಮ ದಾರಿಹಿಡಿದು ಹೋಗಿರಿ” ಎಂದು ಹೇಳಿದನು. 37 ಆದರೆ ಪೌಲನು ಅವರಿಗೆ, “ಅವರು ರೋಮನರಾದ ನಮ್ಮನ್ನು ವಿಚಾರಣೆಮಾಡದೆ ಬಹಿರಂಗವಾಗಿ ಹೊಡೆಸಿ ಸೆರೆಮನೆಗೆ ಹಾಕಿಸಿದರು; ಈಗ ನಮ್ಮನ್ನು ರಹಸ್ಯವಾಗಿ ಹೊರಗೆ ಕಳುಹಿಸಬೇಕೆಂದಿದ್ದಾರೊ? ಇದು ಸಾಧ್ಯವಿಲ್ಲ! ಅವರೇ ಬಂದು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಲಿ” ಎಂದನು. 38 ಜವಾನರು ಈ ಮಾತುಗಳನ್ನು ಪೌರ ನ್ಯಾಯಾಧಿಪತಿಗಳಿಗೆ ವರದಿಮಾಡಿದರು. ಆ ಮನುಷ್ಯರು ರೋಮನರೆಂದು ಕೇಳಿ ಅವರು ಭಯಗೊಂಡರು. 39 ಆದುದರಿಂದ ಅವರು ಬಂದು ಇವರ ಬಳಿ ಕ್ಷಮೆಕೋರಿ ತದನಂತರ ಇವರನ್ನು ಹೊರಗೆ ಕರೆದುಕೊಂಡು ಬಂದು ಪಟ್ಟಣವನ್ನು ಬಿಟ್ಟುಹೋಗುವಂತೆ ಕೇಳಿಕೊಂಡರು. 40 ಅವರು ಸೆರೆಮನೆಯಿಂದ ಹೊರಗೆ ಬಂದು ಲುದ್ಯಳ ಮನೆಗೆ ಹೋದರು; ಅಲ್ಲಿ ಸಹೋದರರನ್ನು ಕಂಡು ಅವರನ್ನು ಉತ್ತೇಜಿಸಿದ ಬಳಿಕ ಅಲ್ಲಿಂದ ಹೊರಟುಹೋದರು.