ಯೆರೆಮೀಯ
41 ಏಳನೇ ತಿಂಗಳಲ್ಲಿ ನೆತನ್ಯನ ಮಗನೂ ಎಲೀಷಾಮನ ಮೊಮ್ಮಗನೂ ಆದ ಇಷ್ಮಾಯೇಲ+ ಹತ್ತು ಗಂಡಸರ ಜೊತೆ ಮಿಚ್ಪಾದಲ್ಲಿದ್ದ ಅಹೀಕಾಮನ ಮಗನಾದ ಗೆದಲ್ಯನ ಹತ್ರ ಬಂದ. ಇಷ್ಮಾಯೇಲ ರಾಜವಂಶದವನಾಗಿದ್ದ, ರಾಜನ ಪ್ರಮುಖ ಗಂಡಸರಲ್ಲಿ ಒಬ್ಬನೂ ಆಗಿದ್ದ. ಮಿಚ್ಪಾದಲ್ಲಿ+ ಅವ್ರೆಲ್ಲ ಒಟ್ಟಿಗೆ ಊಟ ಮಾಡ್ತಿದ್ದಾಗ 2 ನೆತನ್ಯನ ಮಗನಾದ ಇಷ್ಮಾಯೇಲ, ಅವನ ಜೊತೆ ಇದ್ದ ಹತ್ತು ಗಂಡಸರು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನ ಕತ್ತಿಯಿಂದ ಕೊಂದುಬಿಟ್ರು. ಹೀಗೆ ಬಾಬೆಲಿನ ರಾಜ ಯೆಹೂದ ದೇಶದ ಮೇಲಿಟ್ಟಿದ್ದ ಅಧಿಕಾರಿಯನ್ನ ಇಷ್ಮಾಯೇಲ ಕೊಂದುಹಾಕಿದ. 3 ಅವನು ಮಿಚ್ಪಾದಲ್ಲಿ ಗೆದಲ್ಯನ ಜೊತೆ ಇದ್ದ ಎಲ್ಲ ಯೆಹೂದ್ಯರನ್ನ ಅಲ್ಲಿದ್ದ ಕಸ್ದೀಯ ಸೈನಿಕರನ್ನ ಕೊಂದ.
4 ಗೆದಲ್ಯ ಕೊಲೆಯಾದ ಎರಡನೇ ದಿನ, ಆ ವಿಷ್ಯ ಬೇರೆಯವ್ರಿಗೆ ಗೊತ್ತಾಗೋ ಮುಂಚೆ 5 ಶೆಕೆಮ್,+ ಶೀಲೋ,+ ಸಮಾರ್ಯದಿಂದ+ 80 ಗಂಡಸರು ಬಂದ್ರು. ಅವರು ಗಡ್ಡ ಬೋಳಿಸ್ಕೊಂಡಿದ್ರು, ಬಟ್ಟೆ ಹರ್ಕೊಂಡಿದ್ರು, ದೇಹಕ್ಕೆ ಗಾಯ ಮಾಡ್ಕೊಂಡಿದ್ರು.+ ಯೆಹೋವನ ಆಲಯಕ್ಕೆ ಕೊಡೋಕೆ ಅಂತ ಅವರು ತಂದಿದ್ದ ಧಾನ್ಯ ಅರ್ಪಣೆಗಳು, ಸಾಂಬ್ರಾಣಿ+ ಅವರ ಕೈಯಲ್ಲಿತ್ತು. 6 ಆಗ ನೆತನ್ಯನ ಮಗ ಇಷ್ಮಾಯೇಲ ಅವ್ರನ್ನ ಭೇಟಿ ಮಾಡೋಕೆ ಮಿಚ್ಪಾದಿಂದ ಹೊರಟ. ಅವನು ದಾರಿ ಉದ್ದಕ್ಕೂ ಅಳ್ತಾ ಹೋದ. ಅವನು ಅವ್ರನ್ನ ಭೇಟಿಯಾದಾಗ “ಬನ್ನಿ, ಅಹೀಕಾಮನ ಮಗ ಗೆದಲ್ಯನ ಹತ್ರ ಬನ್ನಿ” ಅಂದ. 7 ಆದ್ರೆ ಅವರು ಪಟ್ಟಣದ ಒಳಗೆ ಬಂದಾಗ ನೆತನ್ಯನ ಮಗ ಇಷ್ಮಾಯೇಲ, ಅವನ ಜೊತೆ ಇದ್ದ ಗಂಡಸರು ಅವ್ರನ್ನ ಕೊಂದು ನೀರು ಗುಂಡಿಯಲ್ಲಿ ಬಿಸಾಕಿದ್ರು.
8 ಆದ್ರೆ ಅವ್ರಲ್ಲಿ ಹತ್ತು ಜನ ಇಷ್ಮಾಯೇಲನಿಗೆ “ನಮ್ಮನ್ನ ಸಾಯಿಸಬೇಡ. ನಮ್ಮ ಹತ್ರ ರಾಶಿರಾಶಿ ಗೋದಿ, ಬಾರ್ಲಿ* ಇದೆ, ಬೇಕಾದಷ್ಟು ಎಣ್ಣೆ, ಜೇನುತುಪ್ಪನೂ ಇದೆ. ನಾವು ಅವುಗಳನ್ನ ಹೊಲದಲ್ಲಿ ಬಚ್ಚಿಟ್ಟಿದ್ದೀವಿ” ಅಂದ್ರು. ಹಾಗಾಗಿ ಅವನು ಅವ್ರನ್ನ ಕೊಂದುಹಾಕಲಿಲ್ಲ. 9 ಇಷ್ಮಾಯೇಲ ಕೊಂದವರನ್ನೆಲ್ಲ ಒಂದು ದೊಡ್ಡ ನೀರು ಗುಂಡಿಯಲ್ಲಿ ಎಸೆದ. ಆ ಗುಂಡಿಯನ್ನ ರಾಜ ಆಸ ಇಸ್ರಾಯೇಲಿನ ರಾಜನಾದ ಬಾಷನ+ ಜೊತೆ ಯುದ್ಧ ಮಾಡ್ತಿದ್ದ ಸಮಯದಲ್ಲಿ ತೋಡಿದ್ದ. ಆ ಗುಂಡಿಯಲ್ಲೇ ನೆತನ್ಯನ ಮಗ ಇಷ್ಮಾಯೇಲ ಹೆಣಗಳನ್ನ ತುಂಬಿಸಿದ.
10 ನೆತನ್ಯನ ಮಗನಾದ ಇಷ್ಮಾಯೇಲ ಮಿಚ್ಪಾದಲ್ಲಿ+ ಉಳಿದಿದ್ದ ಎಲ್ಲ ಜನ್ರನ್ನ ಹಿಡ್ಕೊಂಡು ಹೋದ. ಅವ್ರಲ್ಲಿ ರಾಜಕುಮಾರಿಯರು ಇದ್ರು, ಮಿಚ್ಪಾದಲ್ಲಿ ಉಳಿದಿದ್ದ ಜನ್ರೂ ಇದ್ರು. ಕಾವಲುಗಾರರ ಮುಖ್ಯಸ್ಥ ನೆಬೂಜರದಾನ ಅಹೀಕಾಮನ ಮಗನಾದ ಗೆದಲ್ಯನ+ ಕೈಗೆ ಕೊಟ್ಟ ಈ ಎಲ್ಲ ಜನ್ರನ್ನ ಇಷ್ಮಾಯೇಲ ಹಿಡ್ಕೊಂಡು ಆಕಡೆ ಇದ್ದ ಅಮ್ಮೋನಿಯರ+ ಹತ್ರ ಹೊರಟ.
11 ನೆತನ್ಯನ ಮಗ ಇಷ್ಮಾಯೇಲ ಮಾಡಿದ ಈ ಎಲ್ಲ ಕೆಟ್ಟ ಕೆಲಸಗಳ ಸುದ್ದಿ ಕಾರೇಹನ ಮಗನಾದ ಯೋಹಾನಾನನಿಗೆ,+ ಅವನ ಜೊತೆ ಇದ್ದ ಎಲ್ಲ ಸೇನಾಪತಿಗಳ ಕಿವಿಗೆ ಬಿತ್ತು. 12 ಆಗ ಅವರು ಎಲ್ಲ ಗಂಡಸರನ್ನ ಕರ್ಕೊಂಡು ನೆತನ್ಯನ ಮಗನಾದ ಇಷ್ಮಾಯೇಲನ ವಿರುದ್ಧ ಹೋರಾಡೋಕೆ ಹೊರಟ್ರು. ಗಿಬ್ಯೋನಲ್ಲಿ ತುಂಬ ನೀರಿದ್ದ* ಜಾಗದ ಹತ್ರ ಅವ್ರಿಗೆ ಅವನು ಸಿಕ್ಕಿದ.
13 ಇಷ್ಮಾಯೇಲ ಸೆರೆ ಹಿಡ್ಕೊಂಡು ಹೋಗಿದ್ದ ಜನ ಕಾರೇಹನ ಮಗನಾದ ಯೋಹಾನಾನನನ್ನ, ಅವನ ಜೊತೆ ಇದ್ದ ಎಲ್ಲ ಸೇನಾಪತಿಗಳನ್ನ ನೋಡಿ ತುಂಬ ಸಂತೋಷಪಟ್ರು. 14 ತಕ್ಷಣ ಅವರು+ ಇಷ್ಮಾಯೇಲನನ್ನ ಬಿಟ್ಟು ಕಾರೇಹನ ಮಗನಾದ ಯೋಹಾನಾನನ ಹತ್ರ ಬಂದ್ರು. 15 ಆದ್ರೆ ನೆತನ್ಯನ ಮಗನಾದ ಇಷ್ಮಾಯೇಲ, ಅವನ ಜೊತೆ ಇದ್ದ ಎಂಟು ಗಂಡಸರು ಯೋಹಾನಾನನಿಂದ ತಪ್ಪಿಸ್ಕೊಂಡು ಅಮ್ಮೋನಿಯರ ಹತ್ರ ಓಡಿಹೋದ್ರು.
16 ಅಹೀಕಾಮನ ಮಗ ಗೆದಲ್ಯನನ್ನ+ ಹತಿಸಿದ ಮೇಲೆ ನೆತನ್ಯನ ಮಗ ಇಷ್ಮಾಯೇಲ ಯಾರನ್ನೆಲ್ಲ ಮಿಚ್ಪಾದಿಂದ ಹಿಡ್ಕೊಂಡು ಹೋಗಿದ್ನೋ ಅವ್ರನ್ನ ಕಾರೇಹನ ಮಗ ಯೋಹಾನಾನ, ಅವನ ಜೊತೆ ಇದ್ದ ಎಲ್ಲ ಸೇನಾಪತಿಗಳು ಗಿಬ್ಯೋನಿಂದ ಕರ್ಕೊಂಡು ಹೋದ್ರು. ಅವ್ರಲ್ಲಿ ಗಂಡಸರು, ಹೆಂಗಸರು, ಮಕ್ಕಳು, ಸೈನಿಕರು, ಆಸ್ಥಾನದ ಅಧಿಕಾರಿಗಳು ಇದ್ರು. 17 ಅವರು ಅಲ್ಲಿಂದ ಕಿಮ್ಹಾಮನ ವಸತಿಗೃಹಕ್ಕೆ ಬಂದು ಅಲ್ಲಿ ಉಳ್ಕೊಂಡ್ರು. ಅದು ಬೆತ್ಲೆಹೇಮಿನ ಪಕ್ಕದಲ್ಲಿತ್ತು.+ ಆಮೇಲೆ ಅವರು ಈಜಿಪ್ಟಿಗೆ ಹೋಗಬೇಕಂತ ಯೋಚಿಸಿದ್ರು.+ 18 ಅವರು ಕಸ್ದೀಯರಿಗೆ ಹೆದರಿ ಅಲ್ಲಿಗೆ ಹೋಗಬೇಕಂತ ಇದ್ರು. ಯಾಕಂದ್ರೆ ಬಾಬೆಲಿನ ರಾಜ ಯೆಹೂದ ದೇಶದ ಮೇಲೆ ಅಧಿಕಾರಿಯಾಗಿ ಇಟ್ಟ ಅಹೀಕಾಮನ ಮಗನಾದ ಗೆದಲ್ಯನನ್ನ ನೆತನ್ಯನ ಮಗನಾದ ಇಷ್ಮಾಯೇಲ ಕೊಂದುಹಾಕಿದ್ದ.+