ಮತ್ತಾಯ
25 “ಸ್ವರ್ಗದ ರಾಜ್ಯವು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳುವುದಕ್ಕೆ ಹೋದ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವುದು. 2 ಅವರಲ್ಲಿ ಐದು ಮಂದಿ ಬುದ್ಧಿಹೀನೆಯರೂ ಐದು ಮಂದಿ ಬುದ್ಧಿವಂತೆಯರೂ ಆಗಿದ್ದರು. 3 ಬುದ್ಧಿಹೀನೆಯರು ತಮ್ಮ ದೀಪಗಳನ್ನು ತೆಗೆದುಕೊಂಡುಹೋದರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಂಡುಹೋಗಲಿಲ್ಲ. 4 ಬುದ್ಧಿವಂತೆಯರಾದರೋ ತಮ್ಮ ದೀಪಗಳೊಂದಿಗೆ ಪಾತ್ರೆಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡುಹೋದರು. 5 ಮದುಮಗನು ಬರಲು ತಡಮಾಡುತ್ತಿರುವಾಗ ಅವರೆಲ್ಲರೂ ತೂಕಡಿಸಿ ನಿದ್ರಿಸಿದರು. 6 ಮಧ್ಯರಾತ್ರಿಯಲ್ಲಿ ‘ಮದುಮಗನು ಬರುತ್ತಿದ್ದಾನೆ! ಅವನನ್ನು ಎದುರುಗೊಳ್ಳಲು ಹೊರಡಿರಿ’ ಎಂಬ ಕೂಗು ಕೇಳಿಸಿತು. 7 ಆಗ ಆ ಎಲ್ಲ ಕನ್ಯೆಯರು ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು. 8 ಬುದ್ಧಿಹೀನೆಯರು ಬುದ್ಧಿವಂತೆಯರಿಗೆ, ‘ನಮ್ಮ ದೀಪಗಳು ಇನ್ನೇನು ಆರಿಹೋಗಲಿಕ್ಕಿರುವುದರಿಂದ ನಿಮ್ಮ ಎಣ್ಣೆಯಲ್ಲಿ ಸ್ವಲ್ಪವನ್ನು ನಮಗೆ ಕೊಡಿರಿ’ ಎಂದು ಹೇಳಿದರು. 9 ಅದಕ್ಕೆ ಬುದ್ಧಿವಂತೆಯರು ಅವರಿಗೆ, ‘ಹಾಗೆ ಕೊಟ್ಟರೆ ನಮಗೂ ನಿಮಗೂ ಸಾಕಾಗದೇ ಹೋಗಬಹುದು. ನೀವು ಮಾರುವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡುಕೊಳ್ಳಿರಿ’ ಎಂದು ಉತ್ತರಿಸಿದರು. 10 ಅವರು ಕೊಂಡುಕೊಳ್ಳಲು ಹೋಗುತ್ತಿರುವಾಗ ಮದುಮಗನು ಬಂದನು ಮತ್ತು ಸಿದ್ಧರಾಗಿದ್ದ ಕನ್ಯೆಯರು ಅವನೊಂದಿಗೆ ಒಳಗೆ ಮದುವೆಯ ಔತಣಕ್ಕೆ ಹೋದರು; ಹಾಗೂ ಬಾಗಿಲು ಮುಚ್ಚಲ್ಪಟ್ಟಿತು. 11 ಬಳಿಕ ಉಳಿದ ಕನ್ಯೆಯರು ಸಹ ಬಂದು ‘ಸ್ವಾಮಿ, ಸ್ವಾಮಿ, ನಮಗೆ ಬಾಗಿಲನ್ನು ತೆರೆ’ ಅಂದರು. 12 ಅದಕ್ಕೆ ಉತ್ತರವಾಗಿ ಅವನು, ‘ನಿಮ್ಮ ಪರಿಚಯ ನನಗಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಎಂದನು.
13 “ಆದುದರಿಂದ ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದ ಕಾರಣ ಸದಾ ಎಚ್ಚರವಾಗಿರಿ.
14 “ಇದು ವಿದೇಶಕ್ಕೆ ಪ್ರಯಾಣಿಸಲಿಕ್ಕಿದ್ದ ಒಬ್ಬ ಮನುಷ್ಯನು ತನ್ನ ಆಳುಗಳನ್ನು ಕರೆದು ತನ್ನ ಆಸ್ತಿಯನ್ನು ಅವರ ವಶಕ್ಕೆ ಒಪ್ಪಿಸಿಕೊಟ್ಟದ್ದಕ್ಕೆ ಹೋಲಿಕೆಯಾಗಿದೆ. 15 ಅವನು ಒಬ್ಬನಿಗೆ ಐದು ತಲಾಂತುಗಳನ್ನೂ ಇನ್ನೊಬ್ಬನಿಗೆ ಎರಡು ತಲಾಂತುಗಳನ್ನೂ ಮತ್ತೊಬ್ಬನಿಗೆ ಒಂದು ತಲಾಂತನ್ನೂ ಹೀಗೆ ಪ್ರತಿಯೊಬ್ಬನಿಗೆ ಅವನವನ ಸ್ವಂತ ಸಾಮರ್ಥ್ಯಕ್ಕನುಸಾರ ಕೊಟ್ಟು ವಿದೇಶಕ್ಕೆ ಹೊರಟುಹೋದನು. 16 ಐದು ತಲಾಂತುಗಳನ್ನು ಪಡೆದುಕೊಂಡವನು ಆ ಕೂಡಲೆ ಹೋಗಿ ಅವುಗಳಿಂದ ವ್ಯಾಪಾರಮಾಡಿ ಇನ್ನೂ ಐದು ತಲಾಂತುಗಳನ್ನು ಸಂಪಾದಿಸಿದನು. 17 ಇದೇ ರೀತಿಯಲ್ಲಿ ಎರಡು ತಲಾಂತುಗಳನ್ನು ಪಡೆದುಕೊಂಡವನು ಇನ್ನೂ ಎರಡು ತಲಾಂತುಗಳನ್ನು ಸಂಪಾದಿಸಿದನು. 18 ಆದರೆ ಒಂದೇ ಒಂದು ತಲಾಂತನ್ನು ಪಡೆದುಕೊಂಡವನು ಹೋಗಿ ನೆಲವನ್ನು ಅಗೆದು ತನ್ನ ಯಜಮಾನನ ಬೆಳ್ಳಿಯ ಹಣವನ್ನು ಬಚ್ಚಿಟ್ಟನು.
19 “ಬಹುಕಾಲದ ಬಳಿಕ ಆ ಆಳುಗಳ ಯಜಮಾನನು ಬಂದು ಅವರಿಂದ ಲೆಕ್ಕ ತೆಗೆದುಕೊಂಡನು. 20 ಆಗ ಐದು ತಲಾಂತುಗಳನ್ನು ಪಡೆದುಕೊಂಡವನು ಮುಂದೆ ಬಂದು ಇನ್ನೂ ಐದು ತಲಾಂತುಗಳನ್ನು ತಂದು, ‘ಯಜಮಾನನೇ, ನೀನು ಐದು ತಲಾಂತುಗಳನ್ನು ನನ್ನ ವಶಕ್ಕೆ ಒಪ್ಪಿಸಿದ್ದೆ; ಇಗೋ, ನಾನು ಇನ್ನೂ ಐದು ತಲಾಂತುಗಳನ್ನು ಸಂಪಾದಿಸಿದ್ದೇನೆ’ ಎಂದು ಹೇಳಿದನು. 21 ಅವನ ಯಜಮಾನನು ಅವನಿಗೆ, ‘ಭೇಷ್, ನಂಬಿಗಸ್ತನಾದ ಒಳ್ಳೇ ಆಳು ನೀನು! ನೀನು ಸ್ವಲ್ಪ ವಿಷಯಗಳಲ್ಲಿ ನಂಬಿಗಸ್ತನಾಗಿದ್ದೀ. ನಾನು ನಿನ್ನನ್ನು ಅನೇಕ ವಿಷಯಗಳ ಮೇಲೆ ನೇಮಿಸುವೆನು. ನಿನ್ನ ಯಜಮಾನನ ಸಂತೋಷದಲ್ಲಿ ಸೇರು’ ಎಂದು ಹೇಳಿದನು. 22 ಬಳಿಕ ಎರಡು ತಲಾಂತುಗಳನ್ನು ಪಡೆದುಕೊಂಡವನು ಮುಂದೆ ಬಂದು, ‘ಯಜಮಾನನೇ, ನೀನು ಎರಡು ತಲಾಂತುಗಳನ್ನು ನನ್ನ ವಶಕ್ಕೆ ಒಪ್ಪಿಸಿದ್ದೆ; ಇಗೋ, ನಾನು ಇನ್ನೂ ಎರಡು ತಲಾಂತುಗಳನ್ನು ಸಂಪಾದಿಸಿದ್ದೇನೆ’ ಎಂದು ಹೇಳಿದನು. 23 ಅದಕ್ಕೆ ಅವನ ಯಜಮಾನನು, ‘ಭೇಷ್, ನಂಬಿಗಸ್ತನಾದ ಒಳ್ಳೇ ಆಳು ನೀನು! ನೀನು ಸ್ವಲ್ಪ ವಿಷಯಗಳಲ್ಲಿ ನಂಬಿಗಸ್ತನಾಗಿದ್ದೀ. ನಾನು ನಿನ್ನನ್ನು ಅನೇಕ ವಿಷಯಗಳ ಮೇಲೆ ನೇಮಿಸುವೆನು. ನಿನ್ನ ಯಜಮಾನನ ಸಂತೋಷದಲ್ಲಿ ಸೇರು’ ಎಂದು ಹೇಳಿದನು.
24 “ಕೊನೆಯದಾಗಿ ಒಂದು ತಲಾಂತನ್ನು ಪಡೆದುಕೊಂಡವನು ಮುಂದೆ ಬಂದು ‘ಯಜಮಾನನೇ, ನೀನು ಕಠಿಣ ಮನುಷ್ಯನು; ನೀನು ಬಿತ್ತದಿರುವಲ್ಲಿ ಕೊಯ್ಯುವವನು, ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ನನಗೆ ತಿಳಿದಿತ್ತು. 25 ಆದುದರಿಂದ ನಾನು ಭಯಪಟ್ಟು ಹೋಗಿ ನಿನ್ನ ತಲಾಂತನ್ನು ನೆಲದಲ್ಲಿ ಬಚ್ಚಿಟ್ಟೆ. ಇಗೋ, ನಿನಗೆ ಸೇರಿದ್ದು ಇಲ್ಲಿಯೇ ಇದೆ’ ಎಂದನು. 26 ಅದಕ್ಕೆ ಉತ್ತರವಾಗಿ ಅವನ ಯಜಮಾನನು ಅವನಿಗೆ, ‘ಕೆಟ್ಟವನೂ ಮೈಗಳ್ಳನೂ ಆದ ಆಳು ನೀನು; ನಾನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ನಿನಗೆ ತಿಳಿದಿತ್ತಲ್ಲವೆ? 27 ಹಾಗಾದರೆ ನೀನು ನನ್ನ ಬೆಳ್ಳಿಯ ಹಣವನ್ನು ಲೇವಾದೇವಿಗಾರರಲ್ಲಿ ಇಡಬೇಕಾಗಿತ್ತು; ನಾನು ಬಂದಾಗ ನನ್ನ ಹಣದೊಂದಿಗೆ ಬಡ್ಡಿಯನ್ನೂ ಪಡೆದುಕೊಳ್ಳುತ್ತಿದ್ದೆ’ ಎಂದು ಹೇಳಿದನು.
28 ಮತ್ತು ತನ್ನ ಆಳುಗಳಿಗೆ, “ ‘ಇವನ ಬಳಿಯಿರುವ ಆ ತಲಾಂತನ್ನು ತೆಗೆದುಕೊಂಡು ಹತ್ತು ತಲಾಂತುಗಳಿರುವವನಿಗೆ ಕೊಡಿರಿ. 29 ಏಕೆಂದರೆ ಇದ್ದವನಿಗೆ ಹೆಚ್ಚು ಕೊಡಲ್ಪಡುವುದು ಮತ್ತು ಅವನು ಸಮೃದ್ಧಿ ಹೊಂದುವನು; ಆದರೆ ಇಲ್ಲದವನಿಂದ ಇದ್ದದ್ದೂ ತೆಗೆದುಕೊಳ್ಳಲ್ಪಡುವುದು. 30 ಮತ್ತು ಕೆಲಸಕ್ಕೆ ಬಾರದ ಈ ಆಳನ್ನು ಹೊರಗೆ ಕತ್ತಲೆಗೆ ಎಸೆಯಿರಿ. ಅಲ್ಲಿ ಅವನ ಗೋಳಾಟವೂ ಹಲ್ಲುಕಡಿಯೋಣವೂ ಇರುವುದು’ ಎನ್ನುವನು.
31 “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲ ದೂತರೊಡನೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು. 32 ಆಗ ಎಲ್ಲ ಜನಾಂಗಗಳವರು ಅವನ ಮುಂದೆ ಒಟ್ಟುಗೂಡಿಸಲ್ಪಡುವರು ಮತ್ತು ಒಬ್ಬ ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ಅವನು ಜನರನ್ನು ಪ್ರತ್ಯೇಕಿಸುವನು. 33 ಅವನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಆಡುಗಳನ್ನು ಎಡಗಡೆಯಲ್ಲಿಯೂ ನಿಲ್ಲಿಸುವನು.
34 “ಬಳಿಕ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ ಬನ್ನಿರಿ; ಲೋಕದ ಆದಿಯಿಂದ ನಿಮಗಾಗಿ ಸಿದ್ಧಪಡಿಸಲ್ಪಟ್ಟಿರುವ ರಾಜ್ಯವನ್ನು ಬಾಧ್ಯತೆಯಾಗಿ ಪಡೆದುಕೊಳ್ಳಿರಿ. 35 ಏಕೆಂದರೆ ನಾನು ಹಸಿದಿದ್ದೆನು, ನೀವು ತಿನ್ನಲು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ಕುಡಿಯಲು ಕೊಟ್ಟಿರಿ. ನಾನು ಅಪರಿಚಿತನಾಗಿದ್ದೆನು, ನೀವು ನನ್ನನ್ನು ಸತ್ಕಾರದಿಂದ ಸೇರಿಸಿಕೊಂಡಿರಿ; 36 ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಟ್ಟಿರಿ. ನಾನು ಅಸ್ವಸ್ಥನಾಗಿದ್ದೆನು, ನೀವು ನನ್ನ ಆರೈಕೆ ಮಾಡಿದಿರಿ. ನಾನು ಸೆರೆಮನೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ’ ಎಂದು ಹೇಳುವನು. 37 ಆಗ ನೀತಿವಂತರು ಅವನಿಗೆ, ‘ಕರ್ತನೇ, ಯಾವಾಗ ನೀನು ಹಸಿದಿರುವುದನ್ನು ನೋಡಿ ನಾವು ಊಟಕ್ಕೆ ಕೊಟ್ಟೆವು? ಅಥವಾ ಬಾಯಾರಿದ್ದನ್ನು ನೋಡಿ ಕುಡಿಯಲು ಕೊಟ್ಟೆವು? 38 ಯಾವಾಗ ನೀನು ಅಪರಿಚಿತನಾಗಿರುವುದನ್ನು ನೋಡಿ ನಿನ್ನನ್ನು ಸತ್ಕಾರದಿಂದ ಸೇರಿಸಿಕೊಂಡೆವು? ಅಥವಾ ಬಟ್ಟೆಯಿಲ್ಲದಿರುವುದನ್ನು ನೋಡಿ ಉಡುವುದಕ್ಕೆ ಕೊಟ್ಟೆವು? 39 ಯಾವಾಗ ನೀನು ಅಸ್ವಸ್ಥನಾಗಿ ಇದ್ದದ್ದನ್ನು ಇಲ್ಲವೆ ಸೆರೆಮನೆಯಲ್ಲಿ ಇದ್ದದ್ದನ್ನು ನೋಡಿ ನಿನ್ನ ಬಳಿಗೆ ಬಂದೆವು?’ ಎಂದು ಹೇಳುವರು. 40 ಅದಕ್ಕೆ ಉತ್ತರವಾಗಿ ಅರಸನು ಅವರಿಗೆ, ‘ನೀವು ಈ ನನ್ನ ಸಹೋದರರಲ್ಲಿ ಅಲ್ಪನಾದವನೊಬ್ಬನಿಗೆ ಏನೆಲ್ಲ ಮಾಡಿದಿರೋ ಅದನ್ನು ನನಗೆ ಕೂಡ ಮಾಡಿದಿರಿ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ’ ಅನ್ನುವನು.
41 “ಬಳಿಕ ಅವನು ತನ್ನ ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚನಿಗೂ ಅವನ ದೆವ್ವಗಳಿಗೂ ಸಿದ್ಧಪಡಿಸಿರುವ ನಿತ್ಯ ಬೆಂಕಿಯೊಳಗೆ ಹೋಗಿರಿ. 42 ಏಕೆಂದರೆ ನಾನು ಹಸಿದಿದ್ದೆನು, ನೀವು ತಿನ್ನಲು ಏನನ್ನೂ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ಕುಡಿಯಲು ಏನನ್ನೂ ಕೊಡಲಿಲ್ಲ. 43 ನಾನು ಅಪರಿಚಿತನಾಗಿದ್ದೆನು, ನೀವು ನನ್ನನ್ನು ಸತ್ಕಾರದಿಂದ ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ನಾನು ಅಸ್ವಸ್ಥನಾಗಿದ್ದೆನು ಮತ್ತು ಸೆರೆಮನೆಯಲ್ಲಿದ್ದೆನು, ನೀವು ನನ್ನ ಆರೈಕೆ ಮಾಡಲಿಲ್ಲ’ ಎಂದು ಹೇಳುವನು. 44 ಆಗ ಅವರು ಸಹ, ‘ಕರ್ತನೇ, ಯಾವಾಗ ನೀನು ಹಸಿದದ್ದನ್ನೂ ಬಾಯಾರಿದ್ದನ್ನೂ ಅಪರಿಚಿತನಾಗಿದ್ದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥನಾಗಿದ್ದದ್ದನ್ನೂ ಸೆರೆಮನೆಯಲ್ಲಿದ್ದದ್ದನ್ನೂ ನೋಡಿ ನಿನ್ನನ್ನು ಉಪಚರಿಸದೇ ಇದ್ದೆವು?’ ಎಂದು ಹೇಳುವರು. 45 ಅದಕ್ಕೆ ಉತ್ತರವಾಗಿ ಅವನು ಅವರಿಗೆ, ‘ನೀವು ಈ ನನ್ನ ಸಹೋದರರಲ್ಲಿ ಅಲ್ಪನಾದವನೊಬ್ಬನಿಗೆ ಏನೆಲ್ಲ ಮಾಡಲಿಲ್ಲವೋ ಅದನ್ನು ನನಗೆ ಕೂಡ ಮಾಡಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ’ ಅನ್ನುವನು. 46 ಇವರು ನಿತ್ಯಛೇದನಕ್ಕೆ ಹೋಗುವರು, ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು.”