ವಿಮೋಚನಕಾಂಡ
37 ಆಮೇಲೆ ಬೆಚಲೇಲ+ ಅಕೇಶಿಯ ಮರದಿಂದ* ಮಂಜೂಷ+ ಮಾಡಿದ. ಹೇಗಂದ್ರೆ ಎರಡೂವರೆ ಮೊಳ* ಉದ್ದ, ಒಂದೂವರೆ ಮೊಳ ಅಗಲ, ಒಂದೂವರೆ ಮೊಳ ಎತ್ತರದ ಒಂದು ಪೆಟ್ಟಿಗೆ ಮಾಡಿದ.+ 2 ಅದ್ರ ಒಳಗೆ ಹೊರಗೆ ಶುದ್ಧ ಚಿನ್ನದ ತಗಡನ್ನ ಹೊದಿಸಿದ. ಅದ್ರ ಮೇಲೆ ಸುತ್ತ ಅಲಂಕಾರ ಇರೋ ಚಿನ್ನದ ಅಂಚು ಮಾಡಿದ.+ 3 ಅಚ್ಚಲ್ಲಿ ಚಿನ್ನ ಹೊಯ್ದು ನಾಲ್ಕು ಬಳೆಗಳನ್ನ ಮಾಡಿ ನಾಲ್ಕು ಕಾಲುಗಳಿಗೆ ಜೋಡಿಸಿದ. ಒಂದು ಬದಿಗೆ ಎರಡು ಬಳೆಗಳನ್ನ, ಇನ್ನೊಂದು ಬದಿಗೆ ಎರಡು ಬಳೆಗಳನ್ನ ಜೋಡಿಸಿದ. 4 ಆಮೇಲೆ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡನ್ನ ಹೊದಿಸಿದ.+ 5 ಮಂಜೂಷ ಹೊತ್ಕೊಂಡು ಹೋಗೋಕೆ ಆಗೋ ತರ ಆ ಕೋಲುಗಳನ್ನ ಮಂಜೂಷದ ಎರಡೂ ಬದಿಗಳಲ್ಲಿರೋ ಬಳೆಗಳ ಒಳಗೆ ಹಾಕಿದ.+
6 ಅವನು ಮಂಜೂಷಕ್ಕಾಗಿ ಶುದ್ಧ ಚಿನ್ನದಿಂದ ಒಂದು ಮುಚ್ಚಳ ಮಾಡಿದ.+ ಆ ಮುಚ್ಚಳ ಎರಡೂವರೆ ಮೊಳ ಉದ್ದ ಒಂದೂವರೆ ಮೊಳ ಅಗಲ ಇತ್ತು.+ 7 ಆಮೇಲೆ ಅವನು ಮುಚ್ಚಳದ+ ಮೇಲೆ ಎರಡು ಕೊನೆಗಳಲ್ಲಿ ಚಿನ್ನದಿಂದ ಎರಡು ಕೆರೂಬಿಯರನ್ನ+ ಮಾಡಿದ. ಇದನ್ನ ಅವನು ಚಿನ್ನವನ್ನ ಸುತ್ತಿಗೆಯಿಂದ ಬಡಿದು ಮಾಡಿದ. 8 ಮುಚ್ಚಳದ ಮೇಲೆ ಒಂದು ಕೊನೇಲಿ ಒಂದು ಕೆರೂಬಿ, ಇನ್ನೊಂದು ಕೊನೇಲಿ ಒಂದು ಕೆರೂಬಿ ಹೀಗೆ ಎರಡು ಕೊನೆಗಳಲ್ಲೂ ಕೆರೂಬಿಯರನ್ನ ಮಾಡಿದ. 9 ಆ ಕೆರೂಬಿಯರ ಎರಡೆರಡು ರೆಕ್ಕೆಗಳು ಬಿಚ್ಕೊಂಡು ಮೇಲಕ್ಕೆ ಚಾಚ್ಕೊಂಡಿತ್ತು. ಆ ರೆಕ್ಕೆಗಳು ಮುಚ್ಚಳವನ್ನ ಆವರಿಸ್ಕೊಂಡಿತ್ತು.+ ಕೆರೂಬಿಯರು ಎದುರುಬದುರಾಗಿ ಇದ್ರು. ಅವರ ಮುಖ ಮುಚ್ಚಳದ ಕಡೆಗೆ ಬಾಗಿತ್ತು.+
10 ಆಮೇಲೆ ಅವನು ಅಕೇಶಿಯ ಮರದಿಂದ ಮೇಜು ಮಾಡಿದ.+ ಅದು ಎರಡು ಮೊಳ ಉದ್ದ, ಒಂದು ಮೊಳ ಅಗಲ ಒಂದೂವರೆ ಮೊಳ ಎತ್ತರ ಇತ್ತು.+ 11 ಅದಕ್ಕೆ ಶುದ್ಧ ಚಿನ್ನದ ತಗಡನ್ನ ಹೊದಿಸಿದ, ಮೇಜಿನ ಸುತ್ತ ಚಿನ್ನದ ಅಂಚು ಮಾಡಿದ. 12 ಅದ್ರ ಮೇಲೆ ಕೈ ಅಗಲದಷ್ಟು* ಇರೋ ಪಟ್ಟಿಯನ್ನ ಆ ಪಟ್ಟಿಯ ಸುತ್ತ ಚಿನ್ನದ ಅಂಚನ್ನ ಮಾಡಿದ. 13 ಮೇಜಿಗಾಗಿ ಅಚ್ಚಲ್ಲಿ ಚಿನ್ನ ಹೊಯ್ದು ನಾಲ್ಕು ಬಳೆಗಳನ್ನ ಮಾಡಿದ. ಮೇಜಿನ ನಾಲ್ಕು ಕಾಲುಗಳನ್ನ ಜೋಡಿಸಿರೋ ನಾಲ್ಕು ಮೂಲೆಗಳಲ್ಲಿ ಆ ಬಳೆಗಳನ್ನ ಹಾಕಿದ. 14 ಬಳೆಗಳು ಪಟ್ಟಿಯ ಹತ್ರ ಇತ್ತು. ಮೇಜನ್ನ ಹೊತ್ಕೊಂಡು ಹೋಗೋಕೆ ಬಳಸೋ ಕೋಲುಗಳಿಗೆ ಆ ಬಳೆಗಳು ಹಿಡಿಗಳಾಗಿ ಇತ್ತು. 15 ಮೇಜನ್ನ ಹೊತ್ಕೊಂಡು ಹೋಗೋಕೆ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿದ. ಅವುಗಳಿಗೆ ಚಿನ್ನದ ತಗಡನ್ನ ಹೊದಿಸಿದ. 16 ಮೇಜಿನ ಮೇಲೆ ಇಡಬೇಕಾದ ತಟ್ಟೆಗಳನ್ನ, ಲೋಟಗಳನ್ನ ಮಾಡಿದ. ಪಾನ ಅರ್ಪಣೆಗಳನ್ನ ಸುರಿಯೋಕೆ ಬಳಸೋ ಬೋಗುಣಿಗಳನ್ನ, ಹೂಜಿಗಳನ್ನ ಮಾಡಿದ. ಅದನ್ನೆಲ್ಲ ಶುದ್ಧ ಚಿನ್ನದಿಂದ ಮಾಡಿದ.+
17 ಆಮೇಲೆ ಶುದ್ಧ ಚಿನ್ನದಿಂದ ದೀಪಸ್ತಂಭ+ ಮಾಡಿದ. ಚಿನ್ನವನ್ನ ಸುತ್ತಿಗೆಯಿಂದ ಬಡಿದು ಅದನ್ನ ಮಾಡಿದ. ದೀಪಸ್ತಂಭದ ಬುಡ, ದಿಂಡು, ಪುಷ್ಪಪಾತ್ರೆಗಳು, ಮೊಗ್ಗುಗಳು, ಹೂಗಳನ್ನ ಚಿನ್ನದ ಒಂದೇ ತುಂಡಿಂದ ಮಾಡಿದ.+ 18 ದೀಪಸ್ತಂಭದ ದಿಂಡಿಗೆ ಆರು ಕೊಂಬೆ ಇತ್ತು. ದಿಂಡಿನ ಒಂದು ಬದಿಯಲ್ಲಿ ಮೂರು ಕೊಂಬೆ, ಇನ್ನೊಂದು ಬದಿಯಲ್ಲಿ ಮೂರು ಕೊಂಬೆ ಇತ್ತು. 19 ಒಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆ ಇತ್ತು. ಒಂದೊಂದು ಪುಷ್ಪಪಾತ್ರೆಯ ನಂತ್ರ ಒಂದು ಮೊಗ್ಗು, ಒಂದು ಹೂ ಇತ್ತು. ಇನ್ನೊಂದು ಕೊಂಬೆಯಲ್ಲಿ ಬಾದಾಮಿ ಹೂವಿನ ಆಕಾರದ ಮೂರು ಪುಷ್ಪಪಾತ್ರೆ ಇತ್ತು. ಒಂದೊಂದು ಪುಷ್ಪಪಾತ್ರೆಯ ನಂತ್ರ ಒಂದು ಮೊಗ್ಗು, ಒಂದು ಹೂ ಇತ್ತು. ದೀಪಸ್ತಂಭದ ಆರು ಕೊಂಬೆಗಳಲ್ಲಿ ಪ್ರತಿಯೊಂದ್ರಲ್ಲೂ ಅವನು ಹೀಗೇ ಮಾಡಿದ. 20 ದೀಪಸ್ತಂಭದ ದಿಂಡಲ್ಲಿ ಬಾದಾಮಿ ಹೂವಿನ ಆಕಾರದ ನಾಲ್ಕು ಪುಷ್ಪಪಾತ್ರೆ ಇತ್ತು. ಒಂದೊಂದು ಪುಷ್ಪಪಾತ್ರೆಯ ನಂತ್ರ ಒಂದು ಮೊಗ್ಗು, ಒಂದು ಹೂ ಇತ್ತು. 21 ದಿಂಡಿಂದ ಕವಲು ಒಡೆದಿದ್ದ ಎರಡು ಕೊಂಬೆಗಳ ಕೆಳಗೆ ಒಂದು ಮೊಗ್ಗಿತ್ತು. ಹೀಗೆ ಆರು ಕೊಂಬೆಗಳ ಕೆಳಗೂ ಒಂದೊಂದು ಮೊಗ್ಗು ಇತ್ತು. 22 ಮೊಗ್ಗುಗಳನ್ನ ಕೊಂಬೆಗಳನ್ನ ಇಡೀ ದೀಪಸ್ತಂಭವನ್ನ ಶುದ್ಧ ಚಿನ್ನದ ಒಂದೇ ತುಂಡಿಂದ ಮಾಡಿದ. ಚಿನ್ನವನ್ನ ಸುತ್ತಿಗೆಯಿಂದ ಬಡಿದು ಇದನ್ನೆಲ್ಲ ಮಾಡಿದ. 23 ಶುದ್ಧ ಚಿನ್ನದಿಂದ ದೀಪಸ್ತಂಭದ ಏಳು ದೀಪಗಳನ್ನ+ ಚಿಮಟಗಳನ್ನ* ಮಾಡಿದ. ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆಗಳನ್ನೂ ಮಾಡಿದ. 24 ದೀಪಸ್ತಂಭ, ಅದ್ರ ಎಲ್ಲ ಉಪಕರಣಗಳನ್ನ ಒಂದು ತಲಾಂತು* ಶುದ್ಧ ಚಿನ್ನದಿಂದ ಮಾಡಿದ.
25 ಅವನು ಅಕೇಶಿಯ ಮರದಿಂದ ಧೂಪವೇದಿ+ ಮಾಡಿದ. ಅದು ಚೌಕಾಕಾರ ಆಗಿತ್ತು. ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇತ್ತು. ಧೂಪವೇದಿಗೆ ಕೊಂಬುಗಳು ಇತ್ತು. ಧೂಪವೇದಿ, ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಿದ.+ 26 ಶುದ್ಧ ಚಿನ್ನದಿಂದ ತಗಡನ್ನ ಮಾಡಿ ಧೂಪವೇದಿಯ ಮೇಲೆ, ಎಲ್ಲ ಬದಿಗಳಿಗೆ, ಕೊಂಬುಗಳಿಗೆ ಹೊದಿಸಿದ. ಧೂಪವೇದಿ ಮೇಲೆ ಸುತ್ತ ಒಂದು ಚಿನ್ನದ ಅಂಚು ಮಾಡಿದ. 27 ಧೂಪವೇದಿಯ ಎದುರುಬದುರು ಇರೋ ಎರಡು ಬದಿಗಳಲ್ಲಿ ಎರಡು ಚಿನ್ನದ ಬಳೆಗಳನ್ನ ಮಾಡಿದ. ಆ ಬಳೆಗಳು ಅಂಚಿನ ಕೆಳಗೆ ಇತ್ತು. ಅವು ಧೂಪವೇದಿನ ಎತ್ತೋಕೆ ಬಳಸೋ ಕೋಲುಗಳಿಗೆ ಹಿಡಿಗಳಾಗಿ ಇತ್ತು. 28 ಆಮೇಲೆ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡು ಹೊದಿಸಿದ. 29 ಅಭಿಷೇಕ ತೈಲ,+ ಪರಿಮಳ ಬರೋ ಶುದ್ಧ ಧೂಪನ+ ಕೌಶಲದಿಂದ* ತಯಾರಿಸಿದ. ಇದು ಪವಿತ್ರವಾದ ಅಭಿಷೇಕ ತೈಲ.