ಅ. ಕಾರ್ಯ
24 ಐದು ದಿವಸಗಳ ಬಳಿಕ ಮಹಾ ಯಾಜಕನಾದ ಅನನೀಯನು ಹಿರೀಪುರುಷರಲ್ಲಿ ಕೆಲವರನ್ನೂ ತೆರ್ತುಲ್ಲನೆಂಬ ಒಬ್ಬ ವಕೀಲನನ್ನೂ ಕರೆದುಕೊಂಡು ಬಂದು ಪೌಲನ ವಿರುದ್ಧ ರಾಜ್ಯಪಾಲನಿಗೆ ದೂರಿಟ್ಟನು. 2 ಪೌಲನನ್ನು ಕರೆಸಿದಾಗ ತೆರ್ತುಲ್ಲನು ಅವನ ಮೇಲೆ ಆರೋಪಹೊರಿಸಲಾರಂಭಿಸಿ ಹೇಳಿದ್ದು:
“ಮಹಾಪ್ರಭುವಾಗಿರುವ ಫೇಲಿಕ್ಸನೇ, ನಿನ್ನ ಮೂಲಕ ನಾವು ಬಹು ಶಾಂತಿಯನ್ನು ಅನುಭವಿಸುತ್ತಿದ್ದೇವೆ ಮತ್ತು ನಿನ್ನ ಮುಂದಾಲೋಚನೆಯಿಂದಾಗಿ ಈ ದೇಶದಲ್ಲಿ ಸುಧಾರಣೆಗಳಾಗುತ್ತಿವೆ; 3 ಎಲ್ಲ ಸಮಯಗಳಲ್ಲಿಯೂ ಎಲ್ಲ ಸ್ಥಳಗಳಲ್ಲಿಯೂ ನಾವು ಇದನ್ನು ಬಹಳ ಕೃತಜ್ಞತೆಯಿಂದ ಸ್ವೀಕರಿಸುತ್ತೇವೆ. 4 ಆದರೆ ನಿನಗೆ ಇನ್ನಷ್ಟು ತೊಂದರೆ ಕೊಡಲು ಬಯಸದೆ, ನಾವು ಸಂಕ್ಷಿಪ್ತವಾಗಿ ಹೇಳುವ ಮಾತುಗಳನ್ನು ದಯೆಯಿಂದ ಕೇಳಿಸಿಕೊಳ್ಳುವಂತೆ ಬೇಡಿಕೊಳ್ಳುತ್ತೇನೆ. 5 ಈ ಮನುಷ್ಯನು ಒಂದು ಪೀಡೆಯಂತಿದ್ದು ನಿವಾಸಿತ ಭೂಮಿಯಾದ್ಯಂತವಿರುವ ಎಲ್ಲ ಯೆಹೂದ್ಯರ ಮಧ್ಯೆ ರಾಜದ್ರೋಹವನ್ನು ಎಬ್ಬಿಸುತ್ತಿದ್ದಾನೆ ಮತ್ತು ನಜರೇತಿನವರ ಭಿನ್ನಪಂಥದ ನಾಯಕನಾಗಿದ್ದಾನೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ; 6 ಇವನು ದೇವಾಲಯವನ್ನೂ ಹೊಲೆಮಾಡಲು ಪ್ರಯತ್ನಿಸಿದನು, ಆದುದರಿಂದ ನಾವು ಇವನನ್ನು ಹಿಡಿದೆವು. 7 *—— 8 ನೀನೇ ಇವನನ್ನು ವಿಚಾರಿಸಿದರೆ ನಾವು ಇವನ ಮೇಲೆ ಹೊರಿಸುತ್ತಿರುವ ಈ ಎಲ್ಲ ಆಪಾದನೆಗಳು ಸರಿಯೋ ತಪ್ಪೋ ಎಂಬುದನ್ನು ಇವನಿಂದಲೇ ತಿಳಿದುಕೊಳ್ಳಸಾಧ್ಯವಿದೆ.”
9 ಈ ಎಲ್ಲ ವಿಷಯಗಳು ನಿಜವೆಂದು ಹೇಳುವ ಮೂಲಕ ಯೆಹೂದ್ಯರೂ ಈ ದಾಳಿಯಲ್ಲಿ ಸೇರಿಕೊಂಡರು. 10 ರಾಜ್ಯಪಾಲನು ಪೌಲನಿಗೆ ಮಾತಾಡುವಂತೆ ಸನ್ನೆಮಾಡಿದಾಗ ಅವನು ಉತ್ತರಿಸಿದ್ದು:
“ನೀನು ಅನೇಕ ವರ್ಷಗಳಿಂದ ಈ ದೇಶದಲ್ಲಿ ನ್ಯಾಯಾಧಿಪತಿಯಾಗಿದ್ದೀ ಎಂಬುದನ್ನು ಬಲ್ಲವನಾಗಿದ್ದು ನನ್ನ ಕುರಿತು ನಾನು ಸಂತೋಷದಿಂದ ಪ್ರತಿವಾದ ಮಾಡುತ್ತೇನೆ; 11 ನಾನು ಆರಾಧನೆಗೋಸ್ಕರ ಯೆರೂಸಲೇಮಿಗೆ ಹೋಗಿ ಹನ್ನೆರಡಕ್ಕಿಂತ ಹೆಚ್ಚು ದಿವಸಗಳು ಆಗಲಿಲ್ಲ ಎಂಬುದನ್ನು ತಿಳಿದುಕೊಳ್ಳುವ ಸ್ಥಾನದಲ್ಲಿ ನೀನಿದ್ದೀ; 12 ದೇವಾಲಯದಲ್ಲಾಗಲಿ ಸಭಾಮಂದಿರದಲ್ಲಾಗಲಿ ಇಡೀ ಪಟ್ಟಣದಲ್ಲಾಗಲಿ ನಾನು ಯಾರೊಂದಿಗಾದರೂ ವಾದಿಸುವುದನ್ನಾಗಲಿ ಜನರನ್ನು ಗುಂಪುಗೂಡಿಸುವುದನ್ನಾಗಲಿ ಇವರು ನೋಡಲಿಲ್ಲ. 13 ಇದಲ್ಲದೆ ಈಗ ನನ್ನ ವಿರುದ್ಧ ಇವರು ಹೊರಿಸುವ ಆಪಾದನೆಗಳನ್ನು ನಿನ್ನ ಮುಂದೆ ಸಾಬೀತುಪಡಿಸಲಾರರು. 14 ಆದರೆ ಇವರು ‘ಭಿನ್ನಪಂಥ’ ಎಂದು ಕರೆಯುವ ಮಾರ್ಗಕ್ಕನುಸಾರ ನಾನು ನನ್ನ ಪೂರ್ವಜರ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ; ಧರ್ಮಶಾಸ್ತ್ರದಲ್ಲಿ ಮತ್ತು ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವ ಎಲ್ಲ ವಿಷಯಗಳನ್ನು ನಾನು ನಂಬುತ್ತೇನೆ; 15 ಮತ್ತು ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು ಈ ಜನರು ನಿರೀಕ್ಷೆ ಇಟ್ಟಿರುವಂತೆಯೇ ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ. 16 ಆದುದರಿಂದಲೇ ದೇವರ ಮತ್ತು ಮನುಷ್ಯರ ವಿರುದ್ಧ ಯಾವುದೇ ತಪ್ಪನ್ನು ಮಾಡದ ಪ್ರಜ್ಞೆಯನ್ನು ಹೊಂದಿರಲಿಕ್ಕಾಗಿ ನಾನು ಸತತ ಪ್ರಯತ್ನವನ್ನು ಮಾಡುತ್ತಿದ್ದೇನೆ. 17 ಬಹಳ ವರ್ಷಗಳ ನಂತರ ನಾನು ನನ್ನ ಸ್ವದೇಶದವರಿಗೆ ದಾನಧರ್ಮಗಳನ್ನು ತರಲಿಕ್ಕಾಗಿ ಮತ್ತು ದೇವರಿಗೆ ಅರ್ಪಣೆಗಳನ್ನು ಮಾಡುವುದಕ್ಕಾಗಿ ಬಂದೆ. 18 ನಾನು ಈ ವಿಷಯಗಳನ್ನು ಪೂರೈಸುತ್ತಿದ್ದಾಗ ದೇವಾಲಯದಲ್ಲಿ ವಿಧಿಬದ್ಧವಾಗಿ ಶುದ್ಧೀಕರಿಸಲ್ಪಟ್ಟಿರುವುದನ್ನು ಇವರು ಕಂಡರು; ಆದರೆ ನನ್ನೊಂದಿಗೆ ಜನರ ಗುಂಪೂ ಇರಲಿಲ್ಲ ನಾನು ಗಲಭೆಯನ್ನೂ ಎಬ್ಬಿಸಲಿಲ್ಲ. ಏಷ್ಯಾ ಪ್ರಾಂತದಿಂದ ಬಂದಿದ್ದ ಕೆಲವು ಯೆಹೂದ್ಯರು ಅಲ್ಲಿದ್ದರು; 19 ನನ್ನ ವಿರುದ್ಧ ಅವರಿಗೆ ಏನಾದರೂ ಇದ್ದರೆ ಅವರೇ ನಿನ್ನ ಮುಂದೆ ತಪ್ಪುಹೊರಿಸುವುದಕ್ಕೆ ಇಲ್ಲಿ ಬರಬೇಕಾಗಿತ್ತು. 20 ಇಲ್ಲವೆ ನಾನು ಹಿರೀಸಭೆಯ ಮುಂದೆ ನಿಂತಾಗ ಇಲ್ಲಿರುವ ಜನರು ನನ್ನಲ್ಲಿ ಯಾವ ತಪ್ಪನ್ನು ಕಂಡರು ಎಂಬುದನ್ನು ಹೇಳಲಿ. 21 ನಾನು ಇವರ ನಡುವೆ ನಿಂತಿದ್ದಾಗ, ‘ಮೃತರ ಪುನರುತ್ಥಾನದ ವಿಷಯದಲ್ಲಿ ಇಂದು ನನಗೆ ನಿಮ್ಮ ಮುಂದೆ ನ್ಯಾಯವಿಚಾರಣೆಯಾಗುತ್ತಿದೆ’ ಎಂದು ಕೂಗಿಹೇಳಿದ್ದನ್ನೇ ಹೊರತು ಬೇರೆ ಏನನ್ನೂ ಇವರು ಹೇಳಲಾರರು.”
22 ಆದರೆ ಈ ‘ಮಾರ್ಗದ’ ಕುರಿತು ಸ್ಪಷ್ಟವಾಗಿ ತಿಳಿದಿದ್ದ ಫೇಲಿಕ್ಸನು ವಿಚಾರಣೆಯನ್ನು ಮುಂದೂಡಿ, “ಸಹಸ್ರಾಧಿಪತಿಯಾದ ಲೂಸ್ಯನು ಬಂದ ಮೇಲೆ ನಿಮಗೆ ಸಂಬಂಧಪಟ್ಟ ವಿಷಯಗಳನ್ನು ತೀರ್ಮಾನಿಸುತ್ತೇನೆ” ಎಂದು ಹೇಳಿದನು. 23 ಮತ್ತು ಪೌಲನನ್ನು ಕಾವಲಿನಲ್ಲಿಡುವಂತೆಯೂ ಅಲ್ಲಿ ಅವನಿಗೆ ಸ್ವಲ್ಪ ಸ್ವಾತಂತ್ರ್ಯವನ್ನು ಕೊಡುವಂತೆಯೂ ಅವನ ಜನರು ಅವನನ್ನು ಉಪಚರಿಸಲು ಅಡ್ಡಿಮಾಡದಂತೆಯೂ ಶತಾಧಿಪತಿಗೆ ಆಜ್ಞಾಪಿಸಿದನು.
24 ಕೆಲವು ದಿವಸಗಳ ಬಳಿಕ ಫೇಲಿಕ್ಸನು ಯೆಹೂದ್ಯಳಾಗಿದ್ದ ತನ್ನ ಪತ್ನಿಯಾದ ದ್ರೂಸಿಲ್ಲಳೊಂದಿಗೆ ಬಂದು ಪೌಲನನ್ನು ಕರೆಸಿ ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ವಿಷಯದಲ್ಲಿ ಅವನಿಗೆ ಕಿವಿಗೊಟ್ಟನು. 25 ಆದರೆ ಅವನು ನೀತಿ, ಸ್ವನಿಯಂತ್ರಣ ಮತ್ತು ಬರಲಿರುವ ನ್ಯಾಯವಿಚಾರಣೆಯ ಬಗ್ಗೆ ಮಾತಾಡಿದಾಗ ಫೇಲಿಕ್ಸನು ಭಯಗೊಂಡು, “ಸದ್ಯಕ್ಕೆ ನೀನು ಹೋಗು; ಅನುಕೂಲಕರವಾದ ಸಮಯವು ಸಿಕ್ಕಿದಾಗ ನಿನ್ನನ್ನು ಪುನಃ ಕರೆಸಿಕೊಳ್ಳುವೆ” ಎಂದು ಹೇಳಿದನು. 26 ಅದೇ ಸಮಯದಲ್ಲಿ ಅವನು ತನಗೆ ಪೌಲನಿಂದ ಹಣ ಸಿಗಬಹುದೆಂದು ನಿರೀಕ್ಷಿಸುತ್ತಿದ್ದನು. ಈ ಕಾರಣಕ್ಕಾಗಿಯೇ ಆಗಾಗ್ಗೆ ಅವನನ್ನು ಕರೆಸಿ ಅವನೊಂದಿಗೆ ಸಂಭಾಷಿಸುತ್ತಿದ್ದನು. 27 ಎರಡು ವರ್ಷಗಳು ಕಳೆದ ಬಳಿಕ ಫೇಲಿಕ್ಸನಿಗೆ ಬದಲಾಗಿ ಪೋರ್ಕಿಯ ಫೆಸ್ತನು ಆ ಸ್ಥಾನಕ್ಕೆ ಬಂದನು; ಫೇಲಿಕ್ಸನು ಯೆಹೂದ್ಯರ ಮೆಚ್ಚುಗೆಯನ್ನು ಪಡೆಯಲು ಬಯಸಿದ್ದರಿಂದ ಪೌಲನನ್ನು ಸೆರೆಯಲ್ಲೇ ಬಿಟ್ಟುಹೋದನು.