ಮಾರ್ಕ
5 ಅವರು ಸಮುದ್ರದ ಆಚೇದಡದಲ್ಲಿದ್ದ ಗೆರಸೇನರ ಪ್ರಾಂತವನ್ನು ತಲಪಿದರು. 2 ಅವನು ದೋಣಿಯಿಂದ ಕೆಳಗಿಳಿದ ಕೂಡಲೆ ದೆವ್ವಹಿಡಿದಿದ್ದ ಮನುಷ್ಯನೊಬ್ಬನು ಸ್ಮರಣೆಯ ಸಮಾಧಿಗಳ ಮಧ್ಯದಿಂದ ಬಂದು ಅವನನ್ನು ಎದುರುಗೊಂಡನು. 3 ಆ ಮನುಷ್ಯನು ಸಮಾಧಿಗಳ ನಡುವೆ ವಾಸಿಸುತ್ತಿದ್ದನು; ಮತ್ತು ಅಷ್ಟರತನಕ ಯಾರಿಗೂ ಅವನನ್ನು ಸರಪಣಿಯಿಂದಲೂ ಕಟ್ಟಿಹಾಕಲು ಸಾಧ್ಯವಾಗಿರಲಿಲ್ಲ. 4 ಏಕೆಂದರೆ ಅನೇಕ ಸಲ ಅವನ ಕೈಕಾಲುಗಳನ್ನು ಸರಪಣಿಯಿಂದ ಕಟ್ಟಿಹಾಕಿದ್ದರೂ ಅವನು ಅವುಗಳನ್ನು ಕಿತ್ತು ತುಂಡುತುಂಡು ಮಾಡುತ್ತಿದ್ದನು; ಅವನನ್ನು ನಿಗ್ರಹಿಸುವ ಶಕ್ತಿ ಯಾರಿಗೂ ಇರಲಿಲ್ಲ. 5 ಅವನು ಹಗಲೂರಾತ್ರಿ ಸಮಾಧಿಗಳಲ್ಲಿ ಮತ್ತು ಬೆಟ್ಟಗಳಲ್ಲಿ ಕಿರಿಚುತ್ತಾ ಕಲ್ಲುಗಳಿಂದ ತನ್ನನ್ನು ಸೀಳಿಕೊಳ್ಳುತ್ತಾ ಇದ್ದನು. 6 ಆದರೆ ಆ ಮನುಷ್ಯನು ಯೇಸುವನ್ನು ದೂರದಿಂದ ನೋಡಿದ ಕೂಡಲೆ ಓಡಿಬಂದು ಅವನಿಗೆ ಪ್ರಣಾಮಮಾಡಿ, 7 ಗಟ್ಟಿಯಾದ ಸ್ವರದಿಂದ ಕೂಗಿದ ಮೇಲೆ, “ಯೇಸುವೇ, ಮಹೋನ್ನತನಾದ ದೇವರ ಪುತ್ರನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನನ್ನು ಕಾಡುವುದಿಲ್ಲವೆಂದು ದೇವರಾಣೆಯಿಟ್ಟು ಹೇಳು” ಎಂದನು. 8 ಏಕೆಂದರೆ “ದೆವ್ವವೇ, ಆ ಮನುಷ್ಯನನ್ನು ಬಿಟ್ಟುಹೋಗು” ಎಂದು ಯೇಸು ಅದಕ್ಕೆ ಹೇಳುತ್ತಾ ಇದ್ದನು. 9 ಆದರೆ ಅವನು ಆ ಮನುಷ್ಯನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು. ಆಗ ಅವನು, “ನನ್ನ ಹೆಸರು ದಂಡು; ಏಕೆಂದರೆ ನಾವು ಬಹಳ ಮಂದಿ ಇದ್ದೇವೆ” ಎಂದು ಉತ್ತರಿಸಿದನು. 10 ಮತ್ತು ಆ ದೆವ್ವಗಳನ್ನು ಆ ಪ್ರಾಂತದಿಂದ ಹೊರಗೆ ಕಳುಹಿಸದಂತೆ ಅವನು ಯೇಸುವನ್ನು ಮತ್ತೆ ಮತ್ತೆ ಬೇಡಿಕೊಂಡನು.
11 ಅಲ್ಲಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. 12 ಆ ದೆವ್ವಗಳು, “ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು” ಎಂದು ಅವನನ್ನು ಬೇಡಿಕೊಂಡವು. 13 ಅವನು ಅವುಗಳಿಗೆ ಅನುಮತಿಕೊಟ್ಟನು. ಆಗ ದೆವ್ವಗಳು ಹೊರಬಂದು ಹಂದಿಗಳೊಳಗೆ ಸೇರಿಕೊಂಡವು; ಆ ಹಂದಿಗಳು ಓಡಿ ಬೆಟ್ಟದ ಕಡಿದಾದ ಸ್ಥಳದಿಂದ ಸಮುದ್ರಕ್ಕೆ ಧುಮುಕಿ ಒಂದರ ಹಿಂದೊಂದು ಮುಳುಗಿ ಸತ್ತವು; ಆ ಹಿಂಡಿನಲ್ಲಿ ಸುಮಾರು ಎರಡು ಸಾವಿರ ಹಂದಿಗಳಿದ್ದವು. 14 ಅವುಗಳನ್ನು ಮೇಯಿಸುತ್ತಿದ್ದವರು ಓಡಿಹೋಗಿ ನಡೆದ ಸಂಗತಿಯನ್ನು ಪಟ್ಟಣ ಮತ್ತು ಗ್ರಾಮಪ್ರದೇಶಗಳಲ್ಲಿ ತಿಳಿಸಿದರು ಮತ್ತು ನಡೆದದ್ದನ್ನು ನೋಡಲು ಜನರು ಅಲ್ಲಿಗೆ ಬಂದರು. 15 ಅವರು ಯೇಸುವಿನ ಬಳಿಗೆ ಬಂದು, ದೆವ್ವಗಳ ದಂಡಿನಿಂದ ಪೀಡಿತನಾಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಚಿತ್ತನಾಗಿ ಕುಳಿತುಕೊಂಡಿರುವುದನ್ನು ನೋಡಿದಾಗ ಭಯಭೀತರಾದರು. 16 ಮಾತ್ರವಲ್ಲದೆ ನಡೆದ ಸಂಗತಿಯನ್ನು ನೋಡಿದ್ದವರು, ದೆವ್ವಹಿಡಿದಿದ್ದ ಮನುಷ್ಯನಿಗೆ ಮತ್ತು ಹಂದಿಗಳಿಗೆ ಏನು ಸಂಭವಿಸಿತೆಂಬುದನ್ನು ಅವರಿಗೆ ವಿವರಿಸಿದರು. 17 ಆಗ ಅವರು ತಮ್ಮ ಸೀಮೆಯನ್ನು ಬಿಟ್ಟುಹೋಗುವಂತೆ ಅವನನ್ನು ಬೇಡಿಕೊಂಡರು.
18 ಅವನು ದೋಣಿಯನ್ನು ಹತ್ತುತ್ತಿದ್ದಾಗ ದೆವ್ವಹಿಡಿದಿದ್ದ ಆ ಮನುಷ್ಯನು ತನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವಂತೆ ಬೇಡಿಕೊಂಡನು. 19 ಆದರೆ ಅವನು ಅದಕ್ಕೆ ಒಪ್ಪದೆ, “ನಿನ್ನ ಸಂಬಂಧಿಕರ ಬಳಿಗೆ ಹೋಗು ಮತ್ತು ಯೆಹೋವನು ನಿನಗೆ ಮಾಡಿದ್ದೆಲ್ಲವನ್ನು ಹಾಗೂ ಆತನು ನಿನಗೆ ತೋರಿಸಿದ ಕರುಣೆಯನ್ನು ಅವರಿಗೆ ತಿಳಿಸು” ಎಂದು ಹೇಳಿದನು. 20 ಅವನು ಹೊರಟುಹೋಗಿ ಯೇಸು ತನಗೆ ಮಾಡಿದ್ದೆಲ್ಲವನ್ನು ದೆಕಪೊಲಿಯಲ್ಲಿ ಸಾರತೊಡಗಿದನು ಮತ್ತು ಜನರೆಲ್ಲರು ಇದನ್ನು ಕೇಳಿ ಆಶ್ಚರ್ಯಪಟ್ಟರು.
21 ಯೇಸು ದೋಣಿಯಲ್ಲಿ ಆಚೇದಡಕ್ಕೆ ಪುನಃ ಹೋದಾಗ ಜನರ ದೊಡ್ಡ ಗುಂಪು ಅವನ ಬಳಿ ಕೂಡಿಬಂತು; ಅವನು ಸಮುದ್ರದ ಪಕ್ಕದಲ್ಲಿದ್ದನು. 22 ಆಗ ಸಭಾಮಂದಿರದ ಸಭಾಪತಿಗಳಲ್ಲಿ ಒಬ್ಬನಾದ ಯಾಯೀರನೆಂಬವನು ಬಂದು ಅವನನ್ನು ಕಂಡಾಗ ಅವನ ಪಾದಗಳಿಗೆ ಬಿದ್ದು, 23 “ನನ್ನ ಚಿಕ್ಕ ಮಗಳು ವಿಷಮ ಸ್ಥಿತಿಯಲ್ಲಿದ್ದಾಳೆ. ಅವಳು ವಾಸಿಯಾಗಿ ಬದುಕಸಾಧ್ಯವಾಗುವಂತೆ ನೀನು ದಯವಿಟ್ಟು ಬಂದು ಅವಳ ಮೇಲೆ ಕೈಯಿಡಬೇಕು” ಎಂದು ಬಹಳವಾಗಿ ಬೇಡಿಕೊಂಡನು. 24 ಆಗ ಅವನು ಯಾಯೀರನೊಂದಿಗೆ ಹೋದನು. ಮತ್ತು ಜನರ ದೊಡ್ಡ ಗುಂಪು ಅವನನ್ನು ನೂಕಿಕೊಂಡು ಅವನ ಹಿಂದೆಹೋಯಿತು.
25 ಆ ಗುಂಪಿನಲ್ಲಿ ಹನ್ನೆರಡು ವರ್ಷಗಳಿಂದ ರಕ್ತಸ್ರಾವರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಇದ್ದಳು. 26 ಅವಳು ಅನೇಕ ವೈದ್ಯರ ಚಿಕಿತ್ಸೆಯಿಂದ ಬಹು ಕಷ್ಟವನ್ನು ಅನುಭವಿಸಿ ತನ್ನಲ್ಲಿದ್ದದ್ದೆಲ್ಲವನ್ನು ಖರ್ಚುಮಾಡಿದರೂ ಸ್ವಲ್ಪವೂ ಪ್ರಯೋಜನವಾಗದೆ ಆ ರೋಗವು ಇನ್ನೂ ಹೆಚ್ಚಾಗಿತ್ತು. 27 ಯೇಸುವಿನ ವಿಷಯವಾಗಿ ಕೇಳಿಸಿಕೊಂಡಾಗ ಅವಳು ಜನರ ಗುಂಪಿನಲ್ಲಿ ಹಿಂದಿನಿಂದ ಬಂದು ಅವನ ಮೇಲಂಗಿಯನ್ನು ಮುಟ್ಟಿದಳು; 28 ಏಕೆಂದರೆ ಅವಳು, “ನಾನು ಅವನ ಮೇಲಂಗಿಯನ್ನು ಮುಟ್ಟಿದರೆ ಸಾಕು, ವಾಸಿಯಾಗುವೆನು” ಎಂದುಕೊಂಡಿದ್ದಳು. 29 ಕೂಡಲೆ ಅವಳ ರಕ್ತಸ್ರಾವವು ನಿಂತುಹೋಯಿತು ಮತ್ತು ತನ್ನನ್ನು ಕಾಡುತ್ತಿದ್ದ ವಿಷಮ ರೋಗವು ಗುಣವಾಯಿತು ಎಂಬುದನ್ನು ಅವಳು ಗ್ರಹಿಸಿದಳು.
30 ಅದೇ ಸಮಯಕ್ಕೆ ತನ್ನಿಂದ ಶಕ್ತಿಯು ಹೊರಟುಹೋದದ್ದನ್ನು ಯೇಸು ಗ್ರಹಿಸಿದಾಗ ಅವನು ಹಿಂತಿರುಗಿ ಗುಂಪನ್ನು ನೋಡಿ, “ನನ್ನ ಮೇಲಂಗಿಯನ್ನು ಮುಟ್ಟಿದವರು ಯಾರು?” ಎಂದು ಕೇಳಿದನು. 31 ಆಗ ಅವನ ಶಿಷ್ಯರು ಅವನಿಗೆ, “ಜನರ ಗುಂಪು ನಿನ್ನನ್ನು ನೂಕುತ್ತಿರುವುದು ನಿನಗೆ ತಿಳಿದೇ ಇದೆ. ಹೀಗಿರುವಾಗ, ‘ನನ್ನನ್ನು ಮುಟ್ಟಿದವರು ಯಾರು?’ ಎಂದು ಕೇಳುತ್ತೀಯಲ್ಲ” ಎಂದು ಹೇಳಿದರು. 32 ಆದರೂ ಹೀಗೆ ಮಾಡಿದವಳನ್ನು ಕಾಣಬೇಕೆಂದು ಅವನು ಸುತ್ತಲೂ ನೋಡುತ್ತಿದ್ದನು. 33 ಆ ಸ್ತ್ರೀ ತನಗೆ ಸಂಭವಿಸಿದ್ದನ್ನು ಅರಿತವಳಾಗಿ ಭಯದಿಂದ ನಡುಗುತ್ತಾ ಬಂದು ಅವನ ಮುಂದೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲ ಹೇಳಿದಳು. 34 ಅದಕ್ಕೆ ಅವನು ಅವಳಿಗೆ, “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು; ನಿನ್ನನ್ನು ಕಾಡುತ್ತಿದ್ದ ವಿಷಮ ರೋಗದಿಂದ ವಿಮುಕ್ತಳಾಗಿ ಆರೋಗ್ಯದಿಂದಿರು” ಎಂದು ಹೇಳಿದನು.
35 ಅವನು ಇನ್ನೂ ಮಾತಾಡುತ್ತಿದ್ದಾಗಲೇ ಸಭಾಮಂದಿರದ ಸಭಾಪತಿಯ ಮನೆಯಿಂದ ಕೆಲವರು ಬಂದು, “ನಿನ್ನ ಮಗಳು ತೀರಿಹೋದಳು! ಇನ್ನು ಬೋಧಕನಿಗೆ ತೊಂದರೆ ಕೊಡುವುದೇಕೆ?” ಎಂದು ಹೇಳಿದರು. 36 ಆದರೆ ಯೇಸು ಅವರ ಮಾತನ್ನು ಕೇಳಿಸಿಕೊಂಡು ಸಭಾಮಂದಿರದ ಸಭಾಪತಿಗೆ, “ಭಯಪಡಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು. 37 ಮತ್ತು ಅವನು ಪೇತ್ರ, ಯಾಕೋಬ ಮತ್ತು ಯಾಕೋಬನ ತಮ್ಮನಾದ ಯೋಹಾನನನ್ನು ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರಗೊಡಿಸಲಿಲ್ಲ.
38 ಅವರು ಸಭಾಮಂದಿರದ ಸಭಾಪತಿಯ ಮನೆಗೆ ಬಂದಾಗ, ಗದ್ದಲವನ್ನೂ ಅಳುತ್ತಿರುವವರನ್ನೂ ಗೋಳಾಡುತ್ತಿರುವವರನ್ನೂ ಕಂಡನು. 39 ಮನೆಯೊಳಕ್ಕೆ ಹೋಗಿ ಅವನು ಅವರಿಗೆ, “ನೀವು ಗದ್ದಲಮಾಡುವುದೂ ಅಳುವುದೂ ಏಕೆ? ಹುಡುಗಿಯು ಸತ್ತಿಲ್ಲ, ನಿದ್ರೆಮಾಡುತ್ತಿದ್ದಾಳೆ” ಅಂದನು. 40 ಇದನ್ನು ಕೇಳಿ ಅವರು ತಿರಸ್ಕಾರಭಾವದಿಂದ ನಗತೊಡಗಿದರು. ಆದರೆ ಅವನು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ, ಹುಡುಗಿಯ ತಂದೆತಾಯಿಯನ್ನು ಮತ್ತು ತನ್ನೊಂದಿಗಿದ್ದವರನ್ನು ಜೊತೆಯಲ್ಲಿ ಕರೆದುಕೊಂಡು ಹುಡುಗಿಯು ಇದ್ದಲ್ಲಿಗೆ ಹೋದನು. 41 ಅವನು ಹುಡುಗಿಯ ಕೈಹಿಡಿದು, “ತಾಲಿಥ ಕೂಮಿ” ಅಂದನು. ಇದನ್ನು ಭಾಷಾಂತರಿಸಿದಾಗ, “ಕುಮಾರಿ, ಎದ್ದೇಳು” ಎಂಬರ್ಥ ಬರುತ್ತದೆ. 42 ಕೂಡಲೆ ಆ ಹುಡುಗಿಯು ಎದ್ದು ನಡೆದಾಡತೊಡಗಿದಳು; ಅವಳು ಹನ್ನೆರಡು ವರ್ಷ ವಯಸ್ಸಿನವಳಾಗಿದ್ದಳು. ಇದನ್ನು ನೋಡಿ ಅವರು ಆನಂದಪರವಶರಾದರು. 43 ಆದರೆ ನಡೆದುದನ್ನು ಯಾರಿಗೂ ತಿಳಿಸಬಾರದೆಂದು ಅವನು ಅವರಿಗೆ ಪುನಃ ಪುನಃ ಆಜ್ಞಾಪಿಸಿದನು ಮತ್ತು ಆ ಹುಡುಗಿಗೆ ಏನನ್ನಾದರೂ ತಿನ್ನಲು ಕೊಡುವಂತೆ ಹೇಳಿದನು.