ಎಜ್ರ
1 ಪರ್ಶಿಯ ರಾಜ ಕೋರೆಷ+ ಆಳ್ತಿದ್ದ ಮೊದಲ್ನೇ ವರ್ಷದಲ್ಲಿ ಯೆಹೋವನು ರಾಜ ಕೋರೆಷನ ಮನಸ್ಸನ್ನ ಪ್ರಚೋದಿಸಿದನು. ಒಂದು ಸಂದೇಶವನ್ನ ರಾಜ ಕೋರೆಷ ಇಡೀ ರಾಜ್ಯಕ್ಕೆ ಸಾರೋ ತರ ಮಾಡಿದನು. ಯೆರೆಮೀಯನ ಮೂಲಕ ಹೇಳಿಸಿದ ತನ್ನ ಮಾತುಗಳು+ ನಿಜ ಆಗಬೇಕು ಅಂತ ಯೆಹೋವ ಹೀಗೆ ಮಾಡಿದನು. ರಾಜ ಆ ಸಂದೇಶವನ್ನ ಪತ್ರಗಳ ಮೂಲಕ ಕೂಡ ಕಳಿಸಿದ.+ ಅದ್ರಲ್ಲಿ ಹೀಗಿತ್ತು:
2 “ಪರ್ಶಿಯ ರಾಜ ಕೋರೆಷ ಅನ್ನೋ ನಾನು ಹೇಳೋದು ಏನಂದ್ರೆ ‘ಸ್ವರ್ಗದ ದೇವರಾದ ಯೆಹೋವ ಭೂಮಿ ಮೇಲಿರೋ ಎಲ್ಲ ರಾಜ್ಯಗಳನ್ನ ನನಗೆ ಕೊಟ್ಟಿದ್ದಾನೆ.+ ಯೆಹೂದ ದೇಶದ ಯೆರೂಸಲೇಮ್‌ನಲ್ಲಿ ಆತನಿಗಾಗಿ ಒಂದು ಆಲಯ ಕಟ್ಟಿಸಬೇಕಂತ ನನಗೆ ಆಜ್ಞೆ ಕೊಟ್ಟಿದ್ದಾನೆ.+ 3 ಆತನಿಗೆ ಸೇರಿದ ಜನ ನಿಮ್ಮಲ್ಲಿ ಯಾರಾದ್ರೂ ಇದ್ದಾರಾ? ಇದ್ರೆ ಅವ್ರು ಯೆಹೂದ ದೇಶದ ಯೆರೂಸಲೇಮಿಗೆ ಹೋಗಬೇಕು. ಇಸ್ರಾಯೇಲಿನ ದೇವರಾದ ಯೆಹೋವನ ಆಲಯವನ್ನ ಪುನಃ ಕಟ್ಟಬೇಕು. ಅವ್ರ ದೇವರು ಅವ್ರ ಜೊತೆ ಇರ್ತಾನೆ. ಆತನೇ ಸತ್ಯ ದೇವರು. ಯೆರೂಸಲೇಮಲ್ಲಿ ಆತನ ಆಲಯ ಇತ್ತು.* 4 ಇಡೀ ರಾಜ್ಯದಲ್ಲಿ ಎಲ್ಲೆಲ್ಲಿ ಈ ಜನ ವಿದೇಶಿಗಳಾಗಿ ಜೀವಿಸ್ತಾ ಇದ್ದಾರೋ+ ಅಲ್ಲಿ ಅಕ್ಕಪಕ್ಕದವರು* ಅವ್ರಿಗೆ ಬೆಳ್ಳಿಬಂಗಾರವನ್ನ ವಸ್ತುಗಳನ್ನ ಸಾಕುಪ್ರಾಣಿಗಳನ್ನ ಕೊಡಬೇಕು. ಅಷ್ಟೇ ಅಲ್ಲ ಯೆರೂಸಲೇಮಲ್ಲಿರೋ ಸತ್ಯ ದೇವರ ಆಲಯಕ್ಕಾಗಿ ಸ್ವಇಷ್ಟದ ಕಾಣಿಕೆಗಳನ್ನ ಕೊಟ್ಟು+ ಸಹಾಯ ಮಾಡಬೇಕು.’ ”
5 ಆಗ ಯೆಹೂದ ಮತ್ತು ಬೆನ್ಯಾಮೀನ್ ಕುಲದ ಮುಖ್ಯಸ್ಥರು, ಪುರೋಹಿತರು, ಲೇವಿಯರು ಹೀಗೆ ಯಾರ ಮನಸ್ಸನ್ನ ಸತ್ಯ ದೇವರು ಪ್ರಚೋದಿಸಿದ್ನೋ ಅವ್ರೆಲ್ಲ ಯೆರೂಸಲೇಮಿಗೆ ಹೋಗೋಕೆ, ಯೆಹೋವನ ಆಲಯವನ್ನ ಮತ್ತೆ ಕಟ್ಟೋಕೆ ತಯಾರಿ ಮಾಡ್ಕೊಂಡ್ರು. 6 ಅವ್ರ ಅಕ್ಕಪಕ್ಕದ ಜನ್ರೆಲ್ಲ ಬೆಳ್ಳಿಬಂಗಾರದ ಪಾತ್ರೆಗಳನ್ನ ವಸ್ತುಗಳನ್ನ ಸಾಕುಪ್ರಾಣಿಗಳನ್ನ ಅಮೂಲ್ಯ ವಸ್ತುಗಳನ್ನ ಕೊಟ್ಟು ಸಹಾಯ ಮಾಡಿದ್ರು.* ಅಷ್ಟೇ ಅಲ್ಲ ಸ್ವಇಷ್ಟದ ಕಾಣಿಕೆಗಳನ್ನ ಕೊಟ್ರು.
7 ನೆಬೂಕದ್ನೆಚ್ಚರ ಯೆಹೋವನ ಆಲಯದ ಪಾತ್ರೆಗಳನ್ನ ಯೆರೂಸಲೇಮಿಂದ ತಗೊಂಡು ಹೋಗಿ ತನ್ನ ಮನೇಲಿ, ತನ್ನ ದೇವ್ರ ಆಲಯದಲ್ಲಿ ಇಟ್ಟಿದ್ದ. ಅವುಗಳನ್ನ ಕೂಡ ರಾಜ ಕೋರೆಷ ಅಲ್ಲಿಂದ ತಗೊಂಡು ಬಂದ.+ 8 ಮಿತ್ರದಾತ ಅನ್ನೋ ಖಜಾಂಚಿಯ ಉಸ್ತುವಾರಿಯ ಕೆಳಗೆ ರಾಜ ಕೋರೆಷ ಹೀಗೆ ಮಾಡಿದ. ಮಿತ್ರದಾತ ಆ ಪಾತ್ರೆಗಳ ಪಟ್ಟಿಮಾಡಿ ಯೆಹೂದದ ಮುಖ್ಯಸ್ಥ ಶೆಷ್ಬಚ್ಚರನಿಗೆ*+ ಕೊಟ್ಟ.
9 ಆ ಪಟ್ಟಿ ಹೀಗಿತ್ತು: ಬುಟ್ಟಿ ಆಕಾರದ 30 ಚಿನ್ನದ ಪಾತ್ರೆ, ಬುಟ್ಟಿ ಆಕಾರದ 1,000 ಬೆಳ್ಳಿ ಪಾತ್ರೆ, ಬೇರೆ 29 ಪಾತ್ರೆಗಳು, 10 ಚಿನ್ನದ 30 ಚಿಕ್ಕ ಬಟ್ಟಲುಗಳು, ಬೆಳ್ಳಿಯ 410 ಚಿಕ್ಕ ಬಟ್ಟಲುಗಳು, ಬೇರೆ 1,000 ಪಾತ್ರೆಗಳು. 11 ಹೀಗೆ ಚಿನ್ನ ಬೆಳ್ಳಿಯ ಒಟ್ಟು ಪಾತ್ರೆಗಳು 5,400. ಬಾಬೆಲಲ್ಲಿ ಕೈದಿಗಳಾಗಿದ್ದ ಜನ+ ಯೆರೂಸಲೇಮಿಗೆ ವಾಪಸ್ ಹೋಗ್ತಿದ್ದ ಸಮಯದಲ್ಲಿ ಈ ಪಾತ್ರೆಗಳನ್ನ ಶೆಷ್ಬಚ್ಚರ ತನ್ನ ಜೊತೆ ತಗೊಂಡು ಹೋದ.
2 ಬಾಬೆಲಿಂದ ವಾಪಸ್ ಬಂದ ಜನ್ರ ವಿವರ. ಬಾಬೆಲಿನ ರಾಜ ನೆಬೂಕದ್ನೆಚ್ಚರ ಬಾಬೆಲಿಗೆ+ ಕೈದಿಗಳಾಗಿ ಕರ್ಕೊಂಡು ಹೋಗಿದ್ದ ಜನ್ರಲ್ಲಿ+ ಇವ್ರೂ ಇದ್ರು. ಇವರು ಯೆರೂಸಲೇಮಿಗೆ ಮತ್ತು ಯೆಹೂದದ ತಮ್ಮತಮ್ಮ ಪಟ್ಟಣಗಳಿಗೆ ವಾಪಸ್ ಬಂದ್ರು.+ 2 ಜೆರುಬ್ಬಾಬೆಲ್,+ ಯೇಷೂವ,+ ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ ಅನ್ನೋರ ಜೊತೆ ಇವ್ರೆಲ್ಲ ವಾಪಸ್ ಬಂದ್ರು.
ವಾಪಸ್ ಬಂದ ಇಸ್ರಾಯೇಲ್ ವಂಶದ ಗಂಡಸ್ರ ಸಂಖ್ಯೆ:+ 3 ಪರೋಷನವರು 2,172, 4 ಶೆಫಟ್ಯನವರು 372, 5 ಆರಹನವರು+ 775, 6 ಪಹತ್-ಮೋವಾಬನ ವಂಶದವರಾದ+ ಯೆಷೂವ ಮತ್ತು ಯೋವಾಬನ ಕುಟುಂಬದವರು 2,812, 7 ಏಲಾಮನವರು+ 1,254, 8 ಜತ್ತೂನದವರು+ 945, 9 ಜಕೈಯದವರು 760, 10 ಬಾನಿಯದವರು 642, 11 ಬೇಬೈಯದವರು 623, 12 ಅಜ್ಗಾದನವರು 1,222, 13 ಅದೋನೀಕಾಮನವರು 666, 14 ಬಿಗ್ವೈಯದವರು 2,056, 15 ಆದೀನನವರು 454, 16 ಹಿಜ್ಕೀಯನ ಮನೆತನಕ್ಕೆ ಸೇರಿದ ಆಟೇರನವರು 98, 17 ಬೇಚೈಯವರು 323, 18 ಯೋರನವರು 112, 19 ಹಾಷುಮನವರು+ 223, 20 ಗಿಬ್ಬಾರನವರು 95, 21 ಬೆತ್ಲೆಹೇಮನವರು 123, 22 ನೆಟೋಫಿನವರು 56, 23 ಅನಾತೋತಿನವರು+ 128, 24 ಅಜ್ಮಾವೇತನವರು 42, 25 ಕಿರ್ಯತ್-ಯಾರೀಮನ, ಕೆಫೀರಾನ, ಬೇರೋತನ ವಂಶದವರು 743, 26 ರಾಮ,+ ಗೆಬನ+ ವಂಶದವರು 621, 27 ಮಿಕ್ಮಾಸಿನವರು 122, 28 ಬೆತೆಲ್ ಮತ್ತು ಆಯಿಯವರು+ 223, 29 ನೆಬೋನವರು+ 52, 30 ಮಗ್ಬೀಷನವರು 156, 31 ಮತ್ತೊಬ್ಬ ಏಲಾಮನವರು 1,254, 32 ಹಾರಿಮನವರು 320, 33 ಲೋದ್, ಹಾದೀದ್, ಓನೋನ ವಂಶದವರು 725, 34 ಯೆರಿಕೋನವರು 345, 35 ಸೆನಾಹನವರು 3,630.
36 ವಾಪಸ್ ಬಂದ ಪುರೋಹಿತರ+ ಸಂಖ್ಯೆ: ಯೆಷೂವನ+ ಮನೆತನಕ್ಕೆ ಸೇರಿದ ಯೆದಾಯನವರು+ 973, 37 ಇಮ್ಮೇರನವರು+ 1,052, 38 ಪಷ್ಹೂರನವರು+ 1,247, 39 ಹಾರಿಮನವರು+ 1,017.
40 ವಾಪಸ್ ಬಂದ ಲೇವಿಯರ ಸಂಖ್ಯೆ:+ ಹೋದವ್ಯನ ಕುಟುಂಬಕ್ಕೆ ಸೇರಿದ ಯೆಷೂವ ಮತ್ತು ಕದ್ಮೀಯೇಲನ ವಂಶದವರು+ 74, 41 ಗಾಯಕರಲ್ಲಿ+ ಆಸಾಫನವರು+ 128, 42 ಬಾಗಿಲು ಕಾಯೋರಲ್ಲಿ+ ಶಲ್ಲೂಮ್, ಆಟೇರ್, ಟಲ್ಮೋನ್,+ ಅಕ್ಕೂಬ್,+ ಹಟೀಟ ಮತ್ತು ಶೋಬೈಯ ವಂಶದವರು ಎಲ್ರೂ ಸೇರಿ 139.
43 ಆಲಯದ ಸೇವಕರಲ್ಲಿ*+ ವಾಪಸ್ ಬಂದವರು ಯಾರಂದ್ರೆ: ಜೀಹ, ಹಸೂಫ, ಟಬ್ಬಾವೋತ್, 44 ಕೇರೋಸ್, ಸೀಯಹಾ, ಪಾದೋನ್, 45 ಲೆಬಾನ, ಹಗಾಬ, ಅಕ್ಕೂಬ್, 46 ಹಾಗಾಬ್, ಸಲ್ಮೈ, ಹಾನಾನ್, 47 ಗಿದ್ದೇಲ್, ಗಹರ್, ರೆವಾಯ, 48 ರೆಚೀನ್, ನೆಕೋದ, ಗಜ್ಜಾಮ್, 49 ಉಜ್ಜ, ಪಾಸೇಹ, ಬೇಸೈ, 50 ಅಸ್ನ, ಮೆಯನೀಮ್, ನೆಫೀಸೀಮ್, 51 ಬಕ್ಬೂಕ್, ಹಕ್ಕೂಫ, ಹರ್ಹೂರ್, 52 ಬಚ್ಲೂತ್, ಮೆಹೀದ, ಹರ್ಷ, 53 ಬರ್ಕೋಸ್, ಸಿಸೆರ, ತೆಮಹ, 54 ನೆಚೀಹ, ಹಟೀಫನ ವಂಶದವರು.
55 ಸೊಲೊಮೋನನ ಸೇವಕರಲ್ಲಿ ವಾಪಸ್ ಬಂದ ವಂಶದವರು ಯಾರಂದ್ರೆ: ಸೋಟೈ, ಸೋಫೆರೆತ್, ಪೆರೂದ,+ 56 ಯಾಲಾ, ದರ್ಕೋನ್, ಗಿದ್ದೇಲ್, 57 ಶೆಫಟ್ಯ, ಹಟ್ಟೀಲ್, ಪೋಕೆರೆತ್-ಹಚ್ಚೆಬಾಯೀಮ್, ಆಮೀಯ ವಂಶದವರು.
58 ಆಲಯದ ಎಲ್ಲ ಸೇವಕರು ಮತ್ತು ಸೊಲೊಮೋನನ ಸೇವಕರ ವಂಶದವರು ಸೇರಿ 392.
59 ತೇಲ್-ಮೆಲಹ, ತೇಲ್-ಹರ್ಷ, ಕೆರೂಬ, ಅದ್ದೊನ್ ಮತ್ತು ಇಮ್ಮೇರ ಅನ್ನೋ ಊರುಗಳಿಂದ ಬಂದವ್ರಿಗೆ ತಾವು ಯಾವ ಮನೆತನಕ್ಕೆ ಸೇರಿದವರು, ತಮ್ಮ ಮೂಲ ಯಾವುದು ಅಂತ ಗೊತ್ತಿರಲಿಲ್ಲ. ಹಾಗಾಗಿ ತಾವು ಇಸ್ರಾಯೇಲ್ಯರು ಅಂತ ಸಾಬೀತು ಮಾಡ್ಕೊಳ್ಳೋಕೆ ಅವ್ರಿಂದ ಆಗಲಿಲ್ಲ. ಅವ್ರು ಯಾರಂದ್ರೆ:+ 60 ದೆಲಾಯ, ಟೋಬೀಯ, ನೆಕೋದನ ವಂಶದವರು 652. 61 ಪುರೋಹಿತರ ವಂಶದವರಲ್ಲಿ: ಹಬಯ್ಯನ ವಂಶದವರು, ಹಕ್ಕೋಚನ+ ವಂಶದವರು, ಬರ್ಜಿಲೈಯ ವಂಶದವರು. ಈ ಬರ್ಜಿಲೈ ಗಿಲ್ಯಾದ್ಯನಾಗಿದ್ದ ಬರ್ಜಿಲೈಯ+ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನ ಮದುವೆ ಆಗಿದ್ದ, ಅವನ ಹೆಸ್ರನ್ನೇ ಇವನೂ ಇಟ್ಕೊಂಡಿದ್ದ. 62 ವಂಶಾವಳಿ ಪಟ್ಟಿಯಲ್ಲಿ ಇವ್ರ ಹೆಸ್ರುಗಳನ್ನ ಹುಡುಕಿದ್ರೂ ಸಿಗದಿದ್ದ ಕಾರಣ ಪುರೋಹಿತ ಸೇವೆಗೆ ಇವರು ಅರ್ಹರಾಗಿರಲಿಲ್ಲ.*+ 63 ಊರೀಮ್ ಮತ್ತು ತುಮ್ಮೀಮಿನ+ ಸಹಾಯದಿಂದ ಈ ವಿಷ್ಯದ ಬಗ್ಗೆ ವಿಚಾರಿಸೋ ಒಬ್ಬ ಪುರೋಹಿತ ಬರೋ ತನಕ ಇವ್ರಲ್ಲಿ ಯಾರೂ ಅತೀ ಪವಿತ್ರವಾದವುಗಳಲ್ಲಿ ಯಾವುದನ್ನೂ ತಿನ್ನಬಾರದಂತ ರಾಜ್ಯಪಾಲ* ಹೇಳಿದ.+
64 ಇಡೀ ಸಭೆಯ ಒಟ್ಟು ಸಂಖ್ಯೆ 42,360 ಆಗಿತ್ತು.+ 65 ಇದಲ್ಲದೆ ಅವ್ರ ಜೊತೆ 7,337 ದಾಸದಾಸಿಯರು ಇದ್ರು, 200 ಗಾಯಕ ಗಾಯಕಿಯರು ಇದ್ರು. 66 ಅವ್ರ ಹತ್ರ 736 ಕುದುರೆ, 245 ಹೇಸರಗತ್ತೆ, 67 435 ಒಂಟೆ, 6,720 ಕತ್ತೆ ಇತ್ತು.
68 ಈ ಮುಂಚೆ ಯೆರೂಸಲೇಮಲ್ಲಿ ಯೆಹೋವನ ಆಲಯ ಇದ್ದ ಜಾಗಕ್ಕೆ ಇವ್ರೆಲ್ಲ ಬಂದಾಗ ಕುಲದ ಮುಖ್ಯಸ್ಥರಲ್ಲಿ ಕೆಲವರು ಸತ್ಯ ದೇವರ ಆಲಯವನ್ನ ಮತ್ತೆ ಅಲ್ಲೇ ಕಟ್ಟಿಸೋಕೆ+ ಸ್ವಇಷ್ಟದ ಕಾಣಿಕೆಗಳನ್ನ ಕೊಟ್ರು.+ 69 ಅವರು ನಿರ್ಮಾಣ ಕೆಲಸಕ್ಕಾಗಿ ಸಂಬಂಧಿಸಿದ ಖಜಾನೆಗೆ ಬಂಗಾರದ 61,000 ದ್ರಾಕ್ಮಾಗಳನ್ನ,* ಬೆಳ್ಳಿಯ 5,000 ಮೈನಾಗಳನ್ನ,*+ ಪುರೋಹಿತರು ಹಾಕ್ತಿದ್ದ 100 ಬಟ್ಟೆಗಳನ್ನ ಕೊಟ್ರು. ಹೀಗೆ ಅವರು ತಮ್ಮ ಕೈಲಾದದ್ದನ್ನ ಕೊಟ್ರು. 70 ಪುರೋಹಿತರು, ಲೇವಿಯರು, ಕೆಲವು ಜನ್ರು, ಗಾಯಕರು, ಬಾಗಿಲು ಕಾಯೋರು, ದೇವಾಲಯದ ಸೇವಕರು ತಮ್ಮತಮ್ಮ ಪಟ್ಟಣಗಳಲ್ಲಿ ವಾಸ ಮಾಡಿದ್ರು. ಉಳಿದ ಇಸ್ರಾಯೇಲ್ಯರೆಲ್ಲ ತಮ್ಮತಮ್ಮ ಪಟ್ಟಣಗಳಲ್ಲಿ ವಾಸ ಮಾಡಿದ್ರು.+
3 ತಮ್ಮತಮ್ಮ ಪಟ್ಟಣಗಳಲ್ಲಿ ವಾಸಿಸಿದ್ದ ಇಸ್ರಾಯೇಲ್ಯರೆಲ್ಲ* ಏಳನೇ ತಿಂಗಳ+ ಆರಂಭದಲ್ಲಿ ಒಂದೇ ಮನಸ್ಸಿಂದ ಯೆರೂಸಲೇಮಲ್ಲಿ ಸೇರಿಬಂದ್ರು. 2 ಸತ್ಯ ದೇವರ ಸೇವಕನಾದ ಮೋಶೆಯ ನಿಯಮ ಪುಸ್ತಕದಲ್ಲಿ ಬರೆದಿದ್ದ ಹಾಗೇ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಯೆಹೋಚಾದಾಕನ ಮಗ ಯೆಷೂವ,+ ಅವನ ಜೊತೆ ಇದ್ದ ಪುರೋಹಿತರು, ಶೆಯಲ್ತಿಯೇಲನ+ ಮಗ ಜೆರುಬ್ಬಾಬೆಲ್,+ ಅವನ ಸಹೋದರರು ಇಸ್ರಾಯೇಲ್ ದೇವರ ಯಜ್ಞವೇದಿಯನ್ನ ಕಟ್ಟಿದ್ರು.+
3 ಸುತ್ತಮುತ್ತ ಇರೋ ದೇಶಗಳ ಜನ್ರ ಭಯ ಇದ್ರೂ+ ಯಜ್ಞವೇದಿಯನ್ನ ಈ ಮುಂಚೆ ಎಲ್ಲಿತ್ತೋ ಅಲ್ಲೇ ಕಟ್ಟಿದ್ರು. ಅದ್ರ ಮೇಲೆ ಯೆಹೋವನಿಗಾಗಿ ಸರ್ವಾಂಗಹೋಮ ಬಲಿಗಳನ್ನ ಬೆಳಿಗ್ಗೆ ಮತ್ತು ಸಂಜೆ+ ಅರ್ಪಿಸೋಕೆ ಶುರು ಮಾಡಿದ್ರು. 4 ನಿಯಮ ಪುಸ್ತಕದಲ್ಲಿ ಬರೆದಿರೋ ಹಾಗೇ ಚಪ್ಪರಗಳ* ಹಬ್ಬ ಆಚರಿಸಿದ್ರು.+ ನಿಯಮದ ಪ್ರಕಾರ ದಿನಕ್ಕೆ ಎಷ್ಟು ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬೇಕಾಗಿತ್ತೋ ಅಷ್ಟು ಬಲಿಗಳನ್ನ ಪ್ರತಿದಿನ ಅರ್ಪಿಸ್ತಾ ಇದ್ರು.+ 5 ಆಮೇಲೆ ಪ್ರತಿದಿನ ಅರ್ಪಿಸಬೇಕಾಗಿದ್ದ ಸರ್ವಾಂಗಹೋಮ ಬಲಿಯನ್ನ,+ ಅಮಾವಾಸ್ಯೆಯ ದಿನಗಳಲ್ಲಿ+ ಕೊಡ್ತಿದ್ದ ಅರ್ಪಣೆಗಳನ್ನ, ಯೆಹೋವನ ಎಲ್ಲ ಪವಿತ್ರ ಹಬ್ಬಗಳ ಸಮಯದಲ್ಲಿ+ ಅರ್ಪಿಸ್ತಿದ್ದ ಬಲಿಗಳನ್ನ, ಜನ ಯೆಹೋವನಿಗಾಗಿ ಸ್ವಇಷ್ಟದ ಅರ್ಪಣೆಗಳನ್ನ+ ಕೂಡ ಸಲ್ಲಿಸಿದ್ರು. 6 ಏಳನೇ ತಿಂಗಳಿನ ಮೊದಲ್ನೇ ದಿನದಿಂದ+ ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಶುರು ಮಾಡಿದ್ರು. ಆದ್ರೆ ಯೆಹೋವನ ಆಲಯದ ಅಡಿಪಾಯವನ್ನ ಇನ್ನೂ ಹಾಕಿರಲಿಲ್ಲ.
7 ಅವರು ಕಲ್ಲು ಒಡೆಯೋರಿಗೆ,+ ಕರಕುಶಲಗಾರರಿಗೆ+ ಹಣ ಕೊಟ್ರು. ಪರ್ಶಿಯ ರಾಜ ಕೋರೆಷ ಹೇಳಿದ ಹಾಗೇ+ ಸೀದೋನ್ಯರು, ತೂರ್ಯರು ಲೆಬನೋನಿಂದ ಯೊಪ್ಪಕ್ಕೆ+ ಸಮುದ್ರ ಮಾರ್ಗವಾಗಿ ದೇವದಾರು ಮರಗಳನ್ನ ತಂದ್ಕೊಟ್ರು. ಇದಕ್ಕೆ ಇಸ್ರಾಯೇಲ್ಯರು ಅವ್ರಿಗೆ ಆಹಾರ, ನೀರು, ಎಣ್ಣೆ ಕೊಟ್ರು.
8 ಅವರು ಯೆರೂಸಲೇಮಿಗೆ ಬಂದ ಎರಡನೇ ವರ್ಷದ ಎರಡನೇ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್, ಯೆಹೋಚಾದಾಕನ ಮಗ ಯೆಷೂವ, ಅವ್ರ ಉಳಿದ ಸಹೋದರರು, ಪುರೋಹಿತರು, ಲೇವಿಯರು, ಜೊತೆಗೆ ಜೈಲಿಂದ ಯೆರೂಸಲೇಮಿಗೆ ವಾಪಸ್ ಬಂದ ಬೇರೆ ಎಲ್ಲ ಜನ+ ಆಲಯದ ಕೆಲಸ ಶುರು ಮಾಡಿದ್ರು. ಯೆಹೋವನ ಆಲಯ ಕಟ್ಟೋ ಕೆಲಸದ ಮೇಲ್ವಿಚಾರಣೆ ಮಾಡೋಕೆ 20 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನ ಲೇವಿಯರನ್ನ ಮೇಲ್ವಿಚಾರಕರಾಗಿ ನೇಮಿಸಿದ್ರು. 9 ಹಾಗಾಗಿ ಯೆಷೂವ, ಅವನ ಗಂಡು ಮಕ್ಕಳು, ಅವನ ಸಹೋದರರು, ಕದ್ಮೀಯೇಲ, ಅವನ ಗಂಡು ಮಕ್ಕಳು, ಯೆಹೂದನ ಗಂಡು ಮಕ್ಕಳು, ಇವ್ರೆಲ್ಲ ಸೇರಿ ಸತ್ಯ ದೇವರ ಆಲಯ ಕಟ್ತಿದ್ದವ್ರ ಮೇಲ್ವಿಚಾರಣೆ ಮಾಡ್ತಿದ್ರು. ಇವ್ರ ಜೊತೆ ಲೇವಿಯರಾಗಿದ್ದ ಹೇನಾದಾದನ+ ವಂಶಸ್ಥರು, ಅವ್ರ ಗಂಡು ಮಕ್ಕಳು, ಅವ್ರ ಸಂಬಂಧಿಕರು ಇದ್ರು.
10 ಕಟ್ಟೋರು ಯೆಹೋವನ ಆಲಯದ ತಳಪಾಯ ಹಾಕಿದಾಗ,+ ಆಲಯದ ಬಟ್ಟೆಗಳನ್ನ ಹಾಕಿದ್ದ ಪುರೋಹಿತರು ತುತ್ತೂರಿಗಳನ್ನ ಹಿಡ್ಕೊಂಡು,+ ಲೇವಿಯರಾಗಿದ್ದ ಆಸಾಫನ ಗಂಡು ಮಕ್ಕಳು ಝಲ್ಲರಿಗಳನ್ನ ಹಿಡ್ಕೊಂಡು ಇಸ್ರಾಯೇಲಿನ ರಾಜ ದಾವೀದ ಕೊಟ್ಟಿದ್ದ ನಿರ್ದೇಶನದ ಹಾಗೇ+ ಯೆಹೋವನನ್ನ ಹೊಗಳೋಕೆ ಎದ್ದು ನಿಂತ್ರು. 11 ಅವರು ಯೆಹೋವನನ್ನ ಹೊಗಳ್ತಾ “ದೇವರು ಒಳ್ಳೆಯವನು. ಇಸ್ರಾಯೇಲ್ಯರ ಕಡೆ ಆತನಿಗಿರೋ ಪ್ರೀತಿ ಶಾಶ್ವತವಾಗಿ ಇರುತ್ತೆ”+ ಅಂತ ಹಾಡ್ತಾ+ ಆತನಿಗೆ ಧನ್ಯವಾದ ಸಲ್ಲಿಸಿದ್ರು. ಆಮೇಲೆ ಯೆಹೋವನ ಆಲಯದ ಅಡಿಪಾಯ ಹಾಕಿದ್ದನ್ನ ನೋಡಿ ಜನ್ರೆಲ್ಲ ಸಂತೋಷದಿಂದ ಗಟ್ಟಿಯಾಗಿ ಯೆಹೋವನನ್ನ ಹೊಗಳಿದ್ರು. 12 ಈ ಮುಂಚೆ ಇದ್ದ ಆಲಯವನ್ನ ಕಣ್ಣಾರೆ ನೋಡಿದ್ದ ವಯಸ್ಸಾದ ಜನ್ರು+ ಅಂದ್ರೆ, ಪುರೋಹಿತರು, ಲೇವಿಯರು, ಕುಲದ ಮುಖ್ಯಸ್ಥರು ಆಲಯಕ್ಕೆ ಮತ್ತೆ ಅಡಿಪಾಯ ಹಾಕೋದನ್ನ ನೋಡಿ ಗಟ್ಟಿಯಾಗಿ ಅತ್ರು. ಅದೇ ಸಮಯದಲ್ಲಿ ತುಂಬ ಜನ ಸಂತೋಷದಿಂದ ಜೈಕಾರ ಹಾಕಿದ್ರು.+ 13 ಅವ್ರ ಸದ್ದುಗದ್ದಲ ತುಂಬ ದೂರದ ತನಕ ಕೇಳಿಸ್ತಿತ್ತು. ಎಷ್ಟಂದ್ರೆ ಜನ್ರಿಗೆ ಅದು ಸಂಭ್ರಮದ ಶಬ್ದನಾ ಗೋಳಾಟದ ಶಬ್ದನಾ ಅಂತ ಕಂಡು ಹಿಡಿಯೋಕೆ ಆಗಲಿಲ್ಲ.
4 ಸೆರೆವಾಸದಿಂದ ವಾಪಸ್ ಬಂದವರು+ ಇಸ್ರಾಯೇಲ್ ದೇವರಾದ ಯೆಹೋವನ ಆಲಯ ಕಟ್ತಿದ್ದಾರೆ ಅಂತ ಯೆಹೂದ್ಯರ, ಬೆನ್ಯಾಮೀನ್ಯರ ಶತ್ರುಗಳಿಗೆ+ ಗೊತ್ತಾಯ್ತು. 2 ಆಗ ಅವರು ತಕ್ಷಣ ಜೆರುಬ್ಬಾಬೆಲನ ಹತ್ರ, ಕುಲದ ಮುಖ್ಯಸ್ಥರ ಹತ್ರ “ನಿಮ್ಮ ಜೊತೆ ಸೇರಿ ನಾವೂ ಆಲಯ ಕಟ್ತೀವಿ. ನಿಮ್ಮ ಹಾಗೆ ನಾವೂ ನಿಮ್ಮ ದೇವ್ರನ್ನ ಆರಾಧಿಸ್ತಾ ಇದ್ದೀವಿ.*+ ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದ+ ಅಶ್ಶೂರ್ಯರ ರಾಜ ಏಸರ್-ಹದ್ದೋನನ+ ಕಾಲದಿಂದಾನೂ ದೇವ್ರಿಗೆ ಬಲಿಗಳನ್ನ ಅರ್ಪಿಸ್ತಾ ಇದ್ದೀವಿ” ಅಂದ್ರು. 3 ಹಾಗಿದ್ರೂ ಜೆರುಬ್ಬಾಬೆಲ್, ಯೇಷೂವ, ಇಸ್ರಾಯೇಲ್ ಕುಲದ ಉಳಿದ ಮುಖ್ಯಸ್ಥರು ಅವ್ರಿಗೆ “ನಮ್ಮ ದೇವರ ಆಲಯನ ನೀವು ಕಟ್ಟಕ್ಕಾಗಲ್ಲ.+ ಇಸ್ರಾಯೇಲ್ ದೇವರಾದ ಯೆಹೋವನಿಗೆ ಆಲಯ ಕಟ್ಟಬೇಕಂತ ಪರ್ಶಿಯ ರಾಜ ಕೋರೆಷ ನಮಗೆ ಆಜ್ಞೆ ಕೊಟ್ಟಿದ್ದಾನೆ.+ ಅದನ್ನ ನಾವೇ ಕಟ್ತೀವಿ” ಅಂದ್ರು.
4 ಆಗ ಸುತ್ತಮುತ್ತ ದೇಶದ ಜನ ಯೆಹೂದ್ಯರು ಧೈರ್ಯ ಕಳ್ಕೊಳ್ಳೋ ತರ ಮಾಡಿದ್ರು. ಬೇಜಾರಾಗಿ* ಅವರು ಕಟ್ಟೋ ಕೆಲ್ಸ ನಿಲ್ಲಿಸಿಬಿಡ್ಲಿ ಅಂತ ಹೀಗೆ ಮಾಡಿದ್ರು.+ 5 ಆ ಜನ ಸಲಹೆಗಾರರಿಗೆ ಹಣ ಕೊಟ್ಟು ಯೆಹೂದ್ಯರ ವಿರುದ್ಧ ಕೆಲಸ ಮಾಡೋಕೆ ಅವ್ರನ್ನ ಕರೆಸ್ಕೊಂಡ್ರು. ಪರ್ಶಿಯ ರಾಜ ಕೋರೆಷನ ಕಾಲದಿಂದ ಪರ್ಶಿಯ ರಾಜ ದಾರ್ಯಾವೆಷನ+ ಕಾಲದ ತನಕ ಅವ್ರ ಯೋಜನೆ ಹಾಳು ಮಾಡೋಕೆ ಪ್ರಯತ್ನಿಸ್ತಾ ಇದ್ರು.+ 6 ಆ ಜನ ರಾಜ ಅಹಷ್ವೇರೋಷನ ಆಳ್ವಿಕೆಯ ಆರಂಭದಲ್ಲಿ ಯೆಹೂದದ ಜನ್ರ ವಿರುದ್ಧ, ಯೆರೂಸಲೇಮಿನ ಜನ್ರ ವಿರುದ್ಧ ಸುಳ್ಳಾರೋಪ ಹಾಕಿ ಒಂದು ಪತ್ರ ಬರೆದ್ರು. 7 ರಾಜ ಅರ್ತಷಸ್ತನ ಕಾಲದಲ್ಲಿ ಬಿಷ್ಲಾಮ್, ಮಿತ್ರದಾತ, ಟಾಬೆಯೇಲ್, ಅವನ ಜೊತೆ ಕೆಲ್ಸ ಮಾಡ್ತಿದ್ದ ಬೇರೆ ಜನ್ರು ಸೇರಿ ರಾಜ ಅರ್ತಷಸ್ತನಿಗೆ ಕೂಡ ಒಂದು ಪತ್ರ ಬರೆದ್ರು. ಆ ಪತ್ರವನ್ನ ಅವರು ಅರಾಮಿಕ್ ಭಾಷೆಗೆ+ ಭಾಷಾಂತರಿಸಿ ಅರಾಮಿಕ್ ಭಾಷೆಯ ಲಿಪಿಯಲ್ಲಿ ಬರೆದ್ರು.*
8 * ಮುಖ್ಯ ಸರ್ಕಾರಿ ಅಧಿಕಾರಿಯಾಗಿದ್ದ ರೆಹೂಮ್ ಮತ್ತು ಬರಹಗಾರನಾಗಿದ್ದ ಶಿಂಷೈ ಯೆರೂಸಲೇಮಿನ ವಿರುದ್ಧ ರಾಜ ಅರ್ತಷಸ್ತನಿಗೆ ಬರೆದ ಆ ಪತ್ರದಲ್ಲಿ ಹೀಗಿತ್ತು: 9 (ಆ ಪತ್ರವನ್ನ ಮುಖ್ಯ ಸರ್ಕಾರಿ ಅಧಿಕಾರಿ ರೆಹೂಮ್, ಬರಹಗಾರ ಶಿಂಷೈ, ಅವ್ರ ಬೇರೆ ಜೊತೆ ಕೆಲಸಗಾರರು ಅಂದ್ರೆ ನ್ಯಾಯಾಧೀಶರು, ಉಪ ರಾಜ್ಯಪಾಲರು, ಕಾರ್ಯದರ್ಶಿಗಳು, ಯೆರೆಕ್ಯರು,+ ಬಾಬೆಲಿನವರು, ಶೂಷನಿನಲ್ಲಿ+ ವಾಸವಿದ್ದ ಏಲಾಮ್ಯರು+ ಸೇರಿ ಬರೆದ್ರು. 10 ಅವ್ರ ಜೊತೆ ಘನತೆ, ಗೌರವ ಇರೋ ಆಸೆನಪ್ಪರನ ಕೈದಿಗಳಾಗಿ ಹೋಗಿ ಸಮಾರ್ಯದಲ್ಲಿ ಇದ್ದ+ ಬೇರೆ ಜನಾಂಗಗಳ ಜನ, ನದಿಯ ಈಕಡೆಯಲ್ಲಿ* ಇದ್ದ ಬೇರೆ ಜನ ಸಹ ಸೇರ್ಕೊಂಡಿದ್ರು. 11 ಅವರು ಅರ್ತಷಸ್ತನಿಗೆ ಕಳಿಸಿದ ಆ ಪತ್ರದ ಒಂದು ಪ್ರತಿ ಹೀಗಿತ್ತು.)
“ರಾಜ ಅರ್ತಷಸ್ತನೇ, ನದಿಯ ಈಕಡೆ ಇರೋ ನಿನ್ನ ಜನ್ರು ಬರಿಯೋದು ಏನಂದ್ರೆ: 12 ನಿನ್ನ ಹತ್ರದಿಂದ ನಮ್ಮ ಹತ್ರ ಬಂದಿರೋ ಯೆಹೂದ್ಯರು ಯೆರೂಸಲೇಮ್ ಪಟ್ಟಣಕ್ಕೆ ಬಂದು ತಲುಪಿದ್ದಾರೆ ಅಂತ ಹೇಳೋಕೆ ಇಷ್ಟಪಡ್ತೀವಿ. ಅವ್ರು ಆ ಪಟ್ಟಣವನ್ನ ಮತ್ತೆ ಕಟ್ತಿದ್ದಾರೆ. ಆ ಪಟ್ಟಣದ ಜನ ತಿರುಗಿ ಬೀಳೋ ಸ್ವಭಾವದವರು, ಕೆಟ್ಟವರು. ಆ ಪಟ್ಟಣದ ಗೋಡೆಗಳನ್ನ ಮತ್ತೆ ಕಟ್ತಿದ್ದಾರೆ,+ ಅಡಿಪಾಯಗಳನ್ನ ಸರಿ ಮಾಡ್ತಿದ್ದಾರೆ. 13 ಈ ಪಟ್ಟಣವನ್ನ, ಅದ್ರ ಗೋಡೆಗಳನ್ನ ಮತ್ತೆ ಕಟ್ಟಿದ್ರೆ ಅವ್ರು ತೆರಿಗೆ ಕಪ್ಪ+ ಸುಂಕ ಕೊಡಲ್ಲ. ಇದ್ರಿಂದ ರಾಜರ ಖಜಾನೆಗಳಿಗೆ ನಷ್ಟ ಆಗುತ್ತೆ. 14 ನಾವು ಅರಮನೆಯ ಉಪ್ಪು ತಿಂದಿರೋದ್ರಿಂದ* ರಾಜನಿಗೆ ನಷ್ಟ ಆಗ್ತಿರೋದನ್ನ ನೋಡಿ ನೋಡದ ಹಾಗೆ ಇರೋದು ಸರಿಯಲ್ಲ. ಹಾಗಾಗಿ ಈ ವಿಷ್ಯ ರಾಜನ ಗಮನಕ್ಕೆ ತರಬೇಕಂತ ಈ ಪತ್ರ ಬರೀತಾ ಇದ್ದೀವಿ. 15 ರಾಜ, ನಿನ್ನ ಪೂರ್ವಜರ ದಾಖಲೆಗಳಲ್ಲಿ ಏನಿದೆ ಅಂತ ತನಿಖೆ ಮಾಡಿ ನೋಡು.+ ಆ ದಾಖಲೆಗಳ ಪುಸ್ತಕದಿಂದ ಈ ಪಟ್ಟಣ ದಂಗೆಕೋರ ಪಟ್ಟಣ ಅಂತ ಗೊತ್ತಾಗುತ್ತೆ. ರಾಜರಿಗೂ ನಮ್ಮ ಪ್ರಾಂತ್ಯಗಳಿಗೂ* ಹಾನಿ ಮಾಡೋ ವಿಷ್ಯ ಅಂತ ಗೊತ್ತಾಗುತ್ತೆ. ಹಿಂದಿನ ಕಾಲದಿಂದ್ಲೂ ಈ ಪಟ್ಟಣದ ಜನ ರಾಜದ್ರೋಹಕ್ಕೆ ಕುಮ್ಮಕ್ಕು ಕೊಡೋರು, ಅದೇ ಕಾರಣಕ್ಕೆ ಈ ಪಟ್ಟಣ ನಾಶ ಆಗಿದ್ದು ಅಂತ ನಿನಗೆ ಗೊತ್ತಾಗುತ್ತೆ.+ 16 ಮತ್ತೆ ಈ ಪಟ್ಟಣವನ್ನ, ಅದ್ರ ಗೋಡೆಗಳನ್ನ ಕಟ್ಟಿ ಮುಗಿಸಿದ್ರೆ ನದಿಯ+ ಈಕಡೆ ಎಲ್ಲ ಪ್ರದೇಶಗಳು ರಾಜನ ಕೈತಪ್ಪಿ ಹೋಗುತ್ತೆ ಅಂತ ರಾಜನಿಗೆ ಗೊತ್ತಿರಲಿ.”
17 ಆಗ ರಾಜ ಅರ್ತಷಸ್ತ ಮುಖ್ಯ ಸರ್ಕಾರಿ ಅಧಿಕಾರಿಯಾಗಿದ್ದ ರೆಹೂಮನಿಗೆ, ಬರಹಗಾರ ಶಿಂಷೈಗೆ, ಸಮಾರ್ಯದಲ್ಲಿ ವಾಸಿಸ್ತಿದ್ದ ಬೇರೆ ಜೊತೆ ಕೆಲಸಗಾರರಿಗೆ, ನದಿಯ ಈಕಡೆ ಇದ್ದ ಬೇರೆ ಜನ್ರಿಗೆ ಈ ಸಂದೇಶ ಕಳಿಸಿದ:
“ನಿಮ್ಮೆಲ್ರಿಗೂ ನಮಸ್ಕಾರ! 18 ನಮಗೆ ಕಳಿಸಿದ ಪತ್ರವನ್ನ ನನ್ನ ಮುಂದೆ ಸ್ಪಷ್ಟವಾಗಿ ಓದಿಸ್ದೆ.* 19 ತನಿಖೆ ಮಾಡಿಸ್ದೆ. ಅದ್ರಿಂದ ಗೊತ್ತಾದ ವಿಷ್ಯ ಏನಂದ್ರೆ ಮುಂಚಿನಿಂದಾನೂ ಆ ಪಟ್ಟಣದ ಜನ ರಾಜರ ವಿರುದ್ಧ ತಿರುಗಿ ಬೀಳ್ತಾನೇ ಇದ್ದಾರೆ. ಆ ಪಟ್ಟಣದಲ್ಲಿ ಗಲಭೆಗಳು ನಡೆದಿವೆ.+ 20 ಯೆರೂಸಲೇಮಲ್ಲಿ ತುಂಬ ಶಕ್ತಿಶಾಲಿ ರಾಜರು ಇದ್ರು. ಅವ್ರು ನದಿಯ ಈಕಡೆ ಎಲ್ಲ ಪ್ರದೇಶಗಳನ್ನ ಆಳ್ತಿದ್ರು. ಆ ಪ್ರದೇಶಗಳಿಂದ ತೆರಿಗೆ, ಕಪ್ಪ, ಸುಂಕ ತಗೊಳ್ತಿದ್ರು. 21 ಹಾಗಾಗಿ ಈಗ ಆ ಕೆಲಸ ನಿಲ್ಲಿಸಬೇಕಂತ ಅವ್ರಿಗೆ ಆಜ್ಞೆ ಕೊಡಿ. ನಾನು ಹೇಳೋ ತನಕ ಆ ಪಟ್ಟಣವನ್ನ ಮತ್ತೆ ಕಟ್ಟಬಾರದಂತ ಹೇಳಿ. 22 ರಾಜನಿಗೆ ಮತ್ತಷ್ಟು ನಷ್ಟ ಆಗದ ಹಾಗೆ+ ಈ ವಿಷ್ಯಾನ ಬೇಗ ಮಾಡಿ, ಅಸಡ್ಡೆ ಮಾಡಬೇಡಿ.”
23 ರಾಜ ಅರ್ತಷಸ್ತನ ಪತ್ರವನ್ನ ರೆಹೂಮನ, ಬರಹಗಾರ ಶಿಂಷೈಯ, ಅವ್ರ ಜೊತೆ ಕೆಲಸಗಾರರ ಮುಂದೆ ಓದಲಾಯ್ತು. ತಕ್ಷಣ ಯೆರೂಸಲೇಮಲ್ಲಿದ್ದ ಯೆಹೂದ್ಯರ ಹತ್ರ ಹೋಗಿ ಅವ್ರ ಮೇಲೆ ಒತ್ತಡ ಹಾಕಿ ಕೆಲ್ಸ ನಿಲ್ಲಿಸಿದ್ರು. 24 ಅವತ್ತು ನಿಂತುಹೋದ ಯೆರೂಸಲೇಮಿನ ದೇವಾಲಯದ ಕೆಲಸ ಪರ್ಶಿಯ ರಾಜ ದಾರ್ಯಾವೆಷ ಆಳ್ತಿದ್ದ ಎರಡನೇ ವರ್ಷದ ತನಕ ಶುರುವಾಗ್ಲೇ ಇಲ್ಲ.+
5 ಆಮೇಲೆ ಪ್ರವಾದಿ ಹಗ್ಗಾಯ+ ಮತ್ತು ಇದ್ದೋವನ+ ಮೊಮ್ಮಗ ಪ್ರವಾದಿ ಜೆಕರ್ಯ+ ಯೆಹೂದದ ಮತ್ತು ಯೆರೂಸಲೇಮಿನ ಜನ್ರಾಗಿದ್ದ ಯೆಹೂದ್ಯರಿಗೆ ಭವಿಷ್ಯವಾಣಿ ಹೇಳ್ತಿದ್ರು. ಯೆಹೂದ್ಯರ ಜೊತೆ ಇದ್ದ ಇಸ್ರಾಯೇಲ್ ದೇವ್ರ ಹೆಸ್ರಲ್ಲಿ ಭವಿಷ್ಯವಾಣಿ ಹೇಳ್ತಿದ್ರು. 2 ಆಗ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್+ ಮತ್ತು ಯೆಹೋಚಾದಾಕನ ಮಗ ಯೇಷೂವ+ ಯೆರೂಸಲೇಮಲ್ಲಿದ್ದ ದೇವರ ಆಲಯವನ್ನ ಮತ್ತೆ ಕಟ್ಟೋಕೆ ಶುರು ಮಾಡಿದ್ರು.+ ದೇವರ ಪ್ರವಾದಿಗಳು ಅವ್ರ ಜೊತೆ ಇದ್ದು ಅವ್ರಿಗೆ ಬೆಂಬಲ ಕೊಟ್ರು.+ 3 ಅದೇ ಸಮಯಕ್ಕೆ, ನದಿಯ ಈ ಕಡೆಯ* ಪ್ರದೇಶಗಳ ರಾಜ್ಯಪಾಲನಾಗಿದ್ದ ತತ್ತೆನೈ, ಶೆತರ್-ಬೋಜೆನೈ ಮತ್ತು ಅವ್ರ ಜೊತೆ ಕೆಲ್ಸ ಮಾಡ್ತಿದ್ದ ಗಂಡಸ್ರು ಅಲ್ಲಿಗೆ ಬಂದು “ಈ ಆಲಯ ಕಟ್ಟೋಕೆ, ಈ ನಿರ್ಮಾಣ ಕೆಲಸವನ್ನ ಪೂರ್ತಿ ಮಾಡೋಕೆ* ನಿಮಗೆ ಅಪ್ಪಣೆ ಕೊಟ್ಟವ್ರು ಯಾರು?” ಅಂತ ಕೇಳಿ 4 “ಈ ಕಟ್ಟಡ ಕಟ್ಟೋದ್ರಲ್ಲಿ ಯಾರೆಲ್ಲ ಇದ್ದಾರೆ? ಅವ್ರ ಹೆಸ್ರು ಹೇಳಿ” ಅಂದ್ರು. 5 ಆದ್ರೆ ದೇವರು ಯೆಹೂದ್ಯರ ಹಿರಿಯರಿಗೆ ಸಹಾಯ ಮಾಡಿದ್ರಿಂದ+ ತತ್ತೆನೈಗೆ, ಬೇರೆ ಗಂಡಸ್ರಿಗೆ ಆ ಕೆಲಸವನ್ನ ನಿಲ್ಲಿಸೋಕೆ ಆಗಲಿಲ್ಲ. ಆಗ ಆ ವಿಷ್ಯದ ಬಗ್ಗೆ ದಾರ್ಯಾವೆಷನಿಗೆ ವರದಿ ಕಳಿಸಿ, ಅಲ್ಲಿಂದ ಉತ್ರ ಬರೋ ತನಕ ಕಾದ್ರು.
6 ನದಿಯ ಈ ಕಡೆಯ ಪ್ರದೇಶಗಳ ರಾಜ್ಯಪಾಲ ತತ್ತೆನೈ, ಶೆತರ್-ಬೋಜೆನೈ ಮತ್ತು ಅವನ ಜೊತೆ ಕೆಲ್ಸ ಮಾಡ್ತಿದ್ದ ಗಂಡಸ್ರು ಅಂದ್ರೆ ನದಿಯ ಈ ಕಡೆಯ ಪ್ರದೇಶಗಳ ಉಪ ರಾಜ್ಯಪಾಲರು ರಾಜ ದಾರ್ಯಾವೆಷನಿಗೆ ಒಂದು ಪತ್ರ ಕಳಿಸಿದ್ರು. 7 ಅವರು ಕಳಿಸಿದ ಆ ಪತ್ರದಲ್ಲಿ ಹೀಗಿತ್ತು:
“ರಾಜ ದಾರ್ಯಾವೆಷನೇ,
ನಿನಗೆ ಒಳ್ಳೇ ಆರೋಗ್ಯ ಇರ್ಲಿ! 8 ನಾವು ರಾಜನಿಗೆ ಒಂದು ವಿಷ್ಯ ಹೇಳೋಣ ಅಂತ ಬಂದ್ವಿ. ಯೆಹೂದ ಪ್ರಾಂತ್ಯದಲ್ಲಿರೋ* ಮಹಾನ್ ದೇವರ ಆಲಯಕ್ಕೆ ಹೋಗಿದ್ವಿ. ಜನ ಅದನ್ನ ದೊಡ್ಡದೊಡ್ಡ ಕಲ್ಲುಗಳಿಂದ ಕಟ್ತಿದ್ದಾರೆ, ಅದ್ರ ಗೋಡೆಗಳಿಗೆ ದೊಡ್ಡ ದೊಡ್ಡ ಮರದ ಕಂಬಗಳನ್ನ ಹಾಕ್ತಿದ್ದಾರೆ. ಉತ್ಸಾಹದಿಂದ ಅದನ್ನ ಕಟ್ತಾ ಇರೋದ್ರಿಂದ ಅದ್ರ ಕೆಲಸ ಬೇಗಬೇಗ ನಡಿತಿದೆ. 9 ನಾವು ಯೆಹೂದ್ಯರ ಹಿರಿಯರಿಗೆ ‘ಈ ಆಲಯ ಕಟ್ಟೋಕೆ, ಈ ನಿರ್ಮಾಣ ಕೆಲ್ಸ ಪೂರ್ತಿ ಮಾಡೋಕೆ* ನಿಮಗೆ ಅಪ್ಪಣೆ ಕೊಟ್ಟವ್ರು ಯಾರು?’ ಅಂತ ಕೇಳಿದ್ವಿ.+ 10 ಮುಂದೆ ನಿಂತು ಕೆಲ್ಸ ಮಾಡಿಸ್ತಾ ಇರೋರ ಹೆಸ್ರು ತಿಳ್ಕೊಂಡು ನಿನಗೆ ಹೇಳೋಣ ಅಂತ ಅವ್ರ ಹೆಸ್ರುಗಳನ್ನ ಕೇಳಿದ್ವಿ.
11 “ಅದಕ್ಕೆ ಅವ್ರು ‘ನಾವು ಭೂಮ್ಯಾಕಾಶಗಳ ದೇವರ ಸೇವಕರು. ತುಂಬ ವರ್ಷ ಹಿಂದೆನೇ ಇದನ್ನ ಕಟ್ಟಿದ್ರು. ಈ ಆಲಯನ ನಾವೀಗ ಮತ್ತೆ ಕಟ್ತಾ ಇದ್ದೀವಿ. ಈ ಆಲಯವನ್ನ ಇಸ್ರಾಯೇಲಿನ ಒಬ್ಬ ಮಹಾ ರಾಜ ಕಟ್ಟಿ ಮುಗಿಸಿದ್ದ.+ 12 ಆದ್ರೆ ನಮ್ಮ ಪೂರ್ವಜರು ಸ್ವರ್ಗದ ದೇವ್ರಿಗೆ ಕೋಪ ಬರೋ ತರ ಮಾಡಿದ್ರು.+ ಅದಕ್ಕೆ ದೇವರು ಅವ್ರನ್ನ ಬಾಬೆಲಿನ ರಾಜನೂ ಕಸ್ದೀಯನೂ ಆದ ನೆಬೂಕದ್ನೆಚ್ಚರನ ಕೈಗೆ ಕೊಟ್ಟುಬಿಟ್ಟನು.+ ನೆಬೂಕದ್ನೆಚ್ಚರ ಈ ಆಲಯನ ನಾಶಮಾಡಿದ್ದ.+ ಜನ್ರನ್ನ ಕೈದಿಗಳಾಗಿ ಬಾಬೆಲಿಗೆ ಕರ್ಕೊಂಡು ಹೋಗಿದ್ದ.+ 13 ಹಾಗಿದ್ರೂ ಕೋರೆಷ ಬಾಬೆಲಿನ ರಾಜನಾಗಿ ಆಳೋಕೆ ಶುರು ಮಾಡಿದ ಮೊದಲ್ನೇ ವರ್ಷದಲ್ಲಿ ದೇವರ ಈ ಆಲಯವನ್ನ ಮತ್ತೆ ಕಟ್ಟಬೇಕಂತ ಆಜ್ಞೆ ಕೊಟ್ಟ.+ 14 ಅಷ್ಟೇ ಅಲ್ಲ ನೆಬೂಕದ್ನೆಚ್ಚರ ಯೆರೂಸಲೇಮಿನ ದೇವಾಲಯದಿಂದ ತಗೊಂಡು ಹೋಗಿ ಬಾಬೆಲಿನ ದೇವಾಲಯದಲ್ಲಿ ಇಟ್ಟಿದ್ದ ಬೆಳ್ಳಿಬಂಗಾರದ ಪಾತ್ರೆಗಳನ್ನ+ ರಾಜ ಕೋರೆಷ ಅಲ್ಲಿಂದ ತಗೊಂಡು ಬಂದು ಅವುಗಳನ್ನ ಶೆಷ್ಬಚ್ಚರ*+ ಅನ್ನೋನಿಗೆ ಕೊಟ್ಟ. ಈ ಶೆಷ್ಬಚ್ಚರನನ್ನ ಕೋರೆಷನೇ ರಾಜ್ಯಪಾಲನಾಗಿ ನೇಮಿಸಿದ್ದ.+ 15 ಕೋರೆಷ ಅವನಿಗೆ “ಈ ಪಾತ್ರೆಗಳನ್ನ ಯೆರೂಸಲೇಮಿನ ದೇವಾಲಯದಲ್ಲಿ ಇಡೋಕೆ ತಗೊಂಡು ಹೋಗು. ದೇವರ ಆಲಯ ಮೊದ್ಲು ಎಲ್ಲಿತ್ತೋ ಮತ್ತೆ ಅದನ್ನ ಅಲ್ಲೇ ಕಟ್ಟು” ಅಂದ.+ 16 ಆಮೇಲೆ ಶೆಷ್ಬಚ್ಚರ ಯೆರೂಸಲೇಮಿಗೆ ಬಂದು ದೇವರ ಆಲಯದ ಅಡಿಪಾಯ ಹಾಕಿದ.+ ಅವತ್ತಿಂದ ಕೆಲ್ಸ ನಡೀತಿದೆ, ಇನ್ನೂ ಮುಗಿದಿಲ್ಲ’ ಅಂತ ಉತ್ರ ಕೊಟ್ರು.+
17 “ಹಾಗಾಗಿ ಈಗ ರಾಜನಿಗೆ ಸರಿ ಅನಿಸಿದ್ರೆ ರಾಜ ಕೋರೆಷ ಯೆರೂಸಲೇಮಿನ ಈ ದೇವಾಲಯ ಮತ್ತೆ ಕಟ್ಟೋಕೆ ಆಜ್ಞೆ ಕೊಟ್ಟಿದ್ನಾ ಇಲ್ವಾ+ ಅಂತ ಬಾಬೆಲಿನ ರಾಜಮನೆತನದ ಖಜಾನೆಯಲ್ಲಿರೋ ಕಾಗದಪತ್ರಗಳನ್ನ ತನಿಖೆ ಮಾಡಿಸಿ ನೋಡು. ಆಮೇಲೆ ಈ ವಿಷ್ಯದ ಬಗ್ಗೆ ರಾಜನ ನಿರ್ಧಾರ ಏನೇ ಆಗಿದ್ರೂ ಅದನ್ನ ನಮಗೆ ಹೇಳು.”
6 ಹಾಗಾಗಿ ರಾಜ ದಾರ್ಯಾವೆಷ ಅಮೂಲ್ಯ ವಸ್ತುಗಳನ್ನಿಡೋ ಬಾಬೆಲಿನ ಖಜಾನೆಯಲ್ಲಿರೋ ಕಾಗದ ಪತ್ರಗಳನ್ನ ತನಿಖೆ ಮಾಡು ಅಂತ ಆಜ್ಞೆ ಕೊಟ್ಟ. 2 ಆಗ ಮೇದ್ಯ ಪ್ರಾಂತ್ಯದಲ್ಲಿದ್ದ* ಅಹ್ಮೆತಾದ ಭದ್ರ ಕೋಟೆಯಲ್ಲಿ ಒಂದು ಸುರುಳಿ ಸಿಕ್ತು. ಅದ್ರಲ್ಲಿ ಈ ಸಂದೇಶ ಇತ್ತು:
3 “ರಾಜ ಕೋರೆಷ ಆಳ್ತಿದ್ದ ಮೊದಲ್ನೇ ವರ್ಷದಲ್ಲಿ ಅವನು ಯೆರೂಸಲೇಮಲ್ಲಿದ್ದ ದೇವಾಲಯದ ಬಗ್ಗೆ ಈ ಆಜ್ಞೆ ಕೊಟ್ಟಿದ್ದ:+ ‘ಅವ್ರು ಬಲಿಗಳನ್ನ ಅರ್ಪಿಸೋಕೆ ಆಲಯವನ್ನ ಮತ್ತೆ ಕಟ್ಟಬೇಕು. ಅದ್ರ ಅಡಿಪಾಯ ಭದ್ರವಾಗಿ ಹಾಕಬೇಕು. ಅದ್ರ ಎತ್ರ 60 ಮೊಳ,* ಅಗಲ 60 ಮೊಳ ಇರ್ಬೇಕು.+ 4 ಗೋಡೆಗಳನ್ನ ಕಟ್ಟುವಾಗ ಮೂರು ಸಾಲಿನ ದೊಡ್ಡದೊಡ್ಡ ಕಲ್ಲುಗಳನ್ನ, ಒಂದು ಸಾಲಿನ ಮರದ ದಿಮ್ಮಿಗಳನ್ನ ಇಡಬೇಕು.+ ಇದಕ್ಕೆಲ್ಲ ತಗಲೋ ಖರ್ಚುವೆಚ್ಚಗಳನ್ನ ರಾಜಮನೆತನದ ಖಜಾನೆಯಿಂದ ಕೊಡಬೇಕು.+ 5 ನೆಬೂಕದ್ನೆಚ್ಚರ ಯೆರೂಸಲೇಮಿನ ದೇವಾಲಯದಿಂದ ತಗೊಂಡು ಹೋಗಿ ಬಾಬೆಲಿನ ದೇವಾಲಯದಲ್ಲಿ ಇಟ್ಟಿರೋ ಬೆಳ್ಳಿಬಂಗಾರದ ಪಾತ್ರೆಗಳನ್ನ+ ವಾಪಸ್ ಕೊಡಬೇಕು. ಅದನ್ನ ಅದ್ರ ಸ್ಥಾನದಲ್ಲಿ ಅಂದ್ರೆ ಯೆರೂಸಲೇಮಿನ ದೇವಾಲಯದಲ್ಲಿ ಇಡಬೇಕು.’ +
6 ದಾರ್ಯಾವೆಷನಾಗಿರೋ ನಾನು ನದಿಯ ಈಕಡೆಯ* ಪ್ರಾಂತ್ಯಗಳ ರಾಜ್ಯಪಾಲ ತತ್ತೆನೈಗೆ, ಶೆತರ್-ಬೋಜೆನೈಗೆ ಹೇಳೋದು ಏನಂದ್ರೆ ನೀವು, ನಿಮ್ಮ ಜೊತೆ ಕೆಲ್ಸ ಮಾಡೋರು ಅಂದ್ರೆ ನದಿಯ ಈಕಡೆಯ ಪ್ರಾಂತ್ಯಗಳ ಉಪ ರಾಜ್ಯಪಾಲರು+ ಆ ಜಾಗದಿಂದ ದೂರ ಇರಿ. 7 ದೇವರ ಆಲಯದ ಕೆಲ್ಸದಲ್ಲಿ ತಲೆಹಾಕಬೇಡಿ. ಯೆಹೂದ್ಯರ ರಾಜ್ಯಪಾಲ, ಯೆಹೂದ್ಯರ ಹಿರಿಯರು ಆ ಆಲಯ ಮೊದ್ಲು ಎಲ್ಲಿತ್ತೋ ಅಲ್ಲೇ ಮತ್ತೆ ಅದನ್ನ ಕಟ್ತಾರೆ. 8 ದೇವರ ಆಲಯವನ್ನ ಮತ್ತೆ ಕಟ್ಟೋಕೆ ಯೆಹೂದ್ಯರ ಹಿರಿಯರಿಗೆ ನೀವು ಸಹಾಯ ಮಾಡಬೇಕು ಅಂತ ಈ ಆಜ್ಞೆ ಕೊಡ್ತಾ ಇದ್ದೀನಿ: ರಾಜಮನೆತನದ ಖಜಾನೆಯಿಂದ,+ ನದಿಯ ಆಕಡೆಯ ಪ್ರಾಂತ್ಯಗಳಲ್ಲಿ ಸಂಗ್ರಹಿಸೋ ತೆರಿಗೆಯಿಂದ ಅವ್ರಿಗೆ ಹಣ ಸಹಾಯ ಮಾಡಿ. ಅವ್ರ ಕೆಲ್ಸ ನಿಲ್ಲದ ಹಾಗೆ ಅವ್ರ ಖರ್ಚುವೆಚ್ಚಗಳನ್ನ ತಪ್ಪದೆ ನೋಡ್ಕೊಳ್ಳಿ.+ 9 ಸ್ವರ್ಗದ ದೇವ್ರಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಏನೆಲ್ಲ ಬೇಕೋ ಅದನ್ನೆಲ್ಲ ಅಂದ್ರೆ ಹೋರಿ+ ಟಗರು+ ಕುರಿಮರಿ+ ಅಷ್ಟೇ ಅಲ್ಲ, ಗೋದಿ+ ಉಪ್ಪು+ ದ್ರಾಕ್ಷಾಮದ್ಯ+ ಎಣ್ಣೆ+ ಹೀಗೆ ಯೆರೂಸಲೇಮಲ್ಲಿರೋ ಪುರೋಹಿತರು ಕೇಳೋ ಎಲ್ಲವನ್ನ ಪ್ರತಿದಿನ ಅವ್ರಿಗೆ ತಪ್ಪದೆ ಕೊಡಿ. 10 ಆಗ ಸ್ವರ್ಗದ ದೇವ್ರನ್ನ ಮೆಚ್ಚಿಸೋ ಅರ್ಪಣೆಗಳನ್ನ ತಪ್ಪದೆ ಕೊಡೋಕೆ ಆಗುತ್ತೆ. ಅವರು ರಾಜನ, ಅವನ ಗಂಡು ಮಕ್ಕಳ ಆರೋಗ್ಯಕ್ಕಾಗಿ ಪ್ರಾರ್ಥನೆನೂ ಮಾಡ್ತಾರೆ.+ 11 ಇನ್ನೊಂದು ಆಜ್ಞೆ ಏನಂದ್ರೆ ಯಾವನಾದ್ರೂ ಇದನ್ನ ಮುರಿದ್ರೆ ಅವನ ಮನೆಯ ಕಂಬವನ್ನ ಕಿತ್ತು ಅವನನ್ನ ಎತ್ತಿ ಅದ್ರ ಮೇಲೆ ತೂಗಿಹಾಕಿಸ್ತೀನಿ. ಅವನು ಮಾಡಿದ ಈ ತಪ್ಪಿಗೆ ಅವನ ಮನೆ ಸಾರ್ವಜನಿಕ ಶೌಚಾಲಯ* ಆಗುತ್ತೆ. 12 ನನ್ನ ಆಜ್ಞೆ ಮೀರಿ ಯೆರೂಸಲೇಮಿನ ದೇವರ ಆಲಯವನ್ನ ನಾಶ ಮಾಡೋನು ರಾಜನೇ ಆಗಿರಲಿ ಪ್ರಜೆನೇ ಆಗಿರಲಿ ದೇವರು ಅವನನ್ನ ನಾಶ ಮಾಡ್ತಾನೆ. ಈ ಆಲಯವನ್ನ ತನ್ನ ಹೆಸ್ರಿಗಾಗಿ, ಗೌರವಕ್ಕಾಗಿ ಆರಿಸ್ಕೊಂಡಿರೋ+ ಅದೇ ದೇವರು ಸರ್ವನಾಶ ಮಾಡ್ತಾನೆ. ದಾರ್ಯಾವೆಷನಾದ ನಾನು ಈ ಆಜ್ಞೆ ಕೊಡ್ತಾ ಇದ್ದೀನಿ. ಇದು ತಕ್ಷಣ ಜಾರಿಗೆ ಬರಲಿ.”
13 ಆಗ ನದಿಯ ಈಕಡೆಯ ಪ್ರದೇಶಗಳ ರಾಜ್ಯಪಾಲನಾದ ತತ್ತೆನೈ, ಶೆತರ್-ಬೋಜೆನೈ,+ ಅವ್ರ ಜೊತೆ ಕೆಲ್ಸ ಮಾಡೋರು ರಾಜ ದಾರ್ಯಾವೆಷ ಕೊಟ್ಟ ಆಜ್ಞೆಯನ್ನ ಚಾಚೂತಪ್ಪದೆ ಪಾಲಿಸಿದ್ರು. 14 ಯೆಹೂದ್ಯರ ಹಿರಿಯರು ಪ್ರವಾದಿ ಹಗ್ಗಾಯನ,+ ಇದ್ದೋವನ ಮೊಮ್ಮಗ ಜೆಕರ್ಯನ+ ಭವಿಷ್ಯವಾಣಿಗಳಿಂದ ಪ್ರೋತ್ಸಾಹ ಪಡೆದು ಕಟ್ಟಡದ ಕೆಲ್ಸ ಮುಂದುವರಿಸಿದ್ರು.+ ಇಸ್ರಾಯೇಲ್ ದೇವರು ಆಜ್ಞೆ ಕೊಟ್ಟ ಹಾಗೆ,+ ಕೋರೆಷ,+ ದಾರ್ಯಾವೆಷ,+ ಪರ್ಶಿಯ ರಾಜ ಅರ್ತಷಸ್ತ ಕೊಟ್ಟ ಆಜ್ಞೆ ಹಾಗೆ+ ಆ ಆಲಯವನ್ನ ಕಟ್ಟಿ ಮುಗಿಸಿದ್ರು. 15 ಅವರು ರಾಜ ದಾರ್ಯಾವೆಷ ಆಳ್ತಿದ್ದ ಆರನೇ ವರ್ಷದಲ್ಲಿ, ಅದಾರ್* ತಿಂಗಳಿನ ಮೂರನೇ ದಿನದಲ್ಲಿ ಆ ಆಲಯವನ್ನ ಪೂರ್ತಿ ಕಟ್ಟಿಮುಗಿಸಿದ್ರು.
16 ಆಗ ಪುರೋಹಿತರು, ಲೇವಿಯರು,+ ಕೈದಿಗಳಾಗಿದ್ದು ವಾಪಸ್ ಬಂದಿದ್ದ ಬೇರೆ ಇಸ್ರಾಯೇಲ್ಯರು ಅಂದ್ರೆ ಎಲ್ಲ ಇಸ್ರಾಯೇಲ್ಯರು ಸಂತೋಷ ಸಂಭ್ರಮದಿಂದ ದೇವರ ಆಲಯದ ಉದ್ಘಾಟನೆ* ಮಾಡಿದ್ರು. 17 ದೇವರ ಆಲಯದ ಉದ್ಘಾಟನೆಗಾಗಿ ಅವರು 100 ಹೋರಿ 200 ಟಗರು 400 ಕುರಿಮರಿ ಕೊಟ್ರು. ಎಲ್ಲ ಇಸ್ರಾಯೇಲ್ಯರಿಗಾಗಿ, ಇಸ್ರಾಯೇಲ್ ಕುಲಗಳ ಸಂಖ್ಯೆ ಪ್ರಕಾರ 12 ಗಂಡು ಆಡುಗಳನ್ನ ಪಾಪಪರಿಹಾರ ಬಲಿಯಾಗಿ ಕೊಟ್ರು.+ 18 ಮೋಶೆಯ ಪುಸ್ತಕದಲ್ಲಿ ಹೇಳಿದ ಹಾಗೆ+ ಅವರು ಯೆರೂಸಲೇಮಲ್ಲಿ ದೇವರ ಸೇವೆಗಾಗಿ ಪುರೋಹಿತರನ್ನ, ಲೇವಿಯರನ್ನ ಅವ್ರವ್ರ ದಳಗಳ ಪ್ರಕಾರ ನೇಮಿಸಿದ್ರು.+
19 ಕೈದಿಗಳಾಗಿದ್ದು ವಾಪಸ್ ಬಂದಿದ್ದ ಜನ ಮೊದಲ್ನೇ ತಿಂಗಳಿನ 14ನೇ ದಿನ ಪಸ್ಕ ಹಬ್ಬ ಆಚರಿಸಿದ್ರು.+ 20 ಎಲ್ಲ ಪುರೋಹಿತರು, ಲೇವಿಯರು ಪಸ್ಕ ಹಬ್ಬವನ್ನ ಆಚರಿಸೋಕೆ ತಮ್ಮನ್ನ ಶುದ್ಧ ಮಾಡ್ಕೊಂಡ್ರು.+ ಒಬ್ರೂ ಅಶುದ್ಧ ಆಗಿರಲಿಲ್ಲ. ಆ ಪುರೋಹಿತರು, ಲೇವಿಯರು ಕೈದಿಗಳಾಗಿದ್ದು ವಾಪಸ್ ಬಂದಿದ್ದ ಎಲ್ಲ ಜನ್ರಿಗಾಗಿ, ತಮಗಾಗಿ, ಬೇರೆ ಪುರೋಹಿತರಿಗಾಗಿ ಪಸ್ಕದ ಕುರಿಮರಿಯನ್ನ ಬಲಿಯಾಗಿ ಕೊಟ್ರು. 21 ಆಮೇಲೆ ವಾಪಸ್ ಬಂದಿದ್ದ ಇಸ್ರಾಯೇಲ್ಯರು ಅದನ್ನ ತಿಂದ್ರು. ಇಸ್ರಾಯೇಲ್ ದೇವರಾದ ಯೆಹೋವನನ್ನ ಆರಾಧಿಸೋಕೆ ಇಸ್ರಾಯೇಲ್ಯರ ಜೊತೆ ಸೇರ್ಕೊಂಡಿದ್ದ ಬೇರೆ ಜನ್ರೂ ಅದನ್ನ ತಿಂದ್ರು. ಆ ಜನ್ರು ಸುತ್ತಮುತ್ತ ಇರೋ ದೇಶಗಳ ಅಶುದ್ಧ ಕೆಲ್ಸಗಳನ್ನ ಬಿಟ್ಟು ತಮ್ಮನ್ನ ಶುದ್ಧ ಮಾಡ್ಕೊಂಡ್ರು.+ 22 ಅವ್ರೆಲ್ಲ ಸಂತೋಷ ಸಂಭ್ರಮದಿಂದ ಏಳು ದಿನ ತನಕ ಹುಳಿ ಇಲ್ಲದ ರೊಟ್ಟಿಗಳ ಹಬ್ಬ ಆಚರಿಸಿದ್ರು.+ ಯಾಕಂದ್ರೆ ಯೆಹೋವನೇ ಅವ್ರಿಗೆ ಈ ಸಂತೋಷ ಸಿಗೋ ತರ ಮಾಡಿದ್ದನು. ಇಸ್ರಾಯೇಲ್ ದೇವರು ಅಶ್ಶೂರ್ಯರ ರಾಜನ* ಹೃದಯವನ್ನ ಇಸ್ರಾಯೇಲ್ಯರ ಕಡೆ ತಿರುಗಿಸಿ ಸತ್ಯ ದೇವರ ಆಲಯವನ್ನ ಕಟ್ಟೋಕೆ ಅವ್ರ ಜೊತೆ ಸಹಕರಿಸೋ ತರ ಮಾಡಿದ್ದನು.+
7 ಇದಾದ್ಮೇಲೆ ಪರ್ಶಿಯ ರಾಜ ಅರ್ತಷಸ್ತ+ ಆಳ್ತಿದ್ದ ಸಮಯದಲ್ಲಿ ಎಜ್ರ*+ ಅನ್ನೋ ವ್ಯಕ್ತಿ ಇದ್ದ. ಅವನು ಸೆರಾಯನ+ ಮಗ, ಸೆರಾಯ ಅಜರ್ಯನ ಮಗ, ಅಜರ್ಯ ಹಿಲ್ಕೀಯನ+ ಮಗ, 2 ಹಿಲ್ಕೀಯ ಶಲ್ಲೂಮನ ಮಗ, ಶಲ್ಲೂಮ ಚಾದೋಕನ ಮಗ, ಚಾದೋಕ ಅಹೀಟೂಬನ ಮಗ, 3 ಅಹೀಟೂಬ ಅಮರ್ಯನ ಮಗ, ಅಮರ್ಯ ಅಜರ್ಯನ+ ಮಗ, ಅಜರ್ಯ ಮೆರಾಯೋತನ ಮಗ, 4 ಮೆರಾಯೋತ ಜೆರಹ್ಯನ ಮಗ, ಜೆರಹ್ಯ ಉಜ್ಜಿಯ ಮಗ, ಉಜ್ಜಿ ಬುಕ್ಕಿಯ ಮಗ, 5 ಬುಕ್ಕಿ ಅಬೀಷೂವನ ಮಗ, ಅಬೀಷೂವ ಫೀನೆಹಾಸನ+ ಮಗ, ಫೀನೆಹಾಸ ಎಲ್ಲಾಜಾರನ+ ಮಗ, ಎಲ್ಲಾಜಾರ ಮುಖ್ಯ ಪುರೋಹಿತನಾಗಿದ್ದ ಆರೋನನ+ ಮಗ. 6 ಎಜ್ರ ಬಾಬೆಲಿಂದ ಬಂದಿದ್ದ. ಇವ್ನೊಬ್ಬ ನಕಲುಗಾರ.* ಇಸ್ರಾಯೇಲ್ ದೇವರಾದ ಯೆಹೋವ ಮೋಶೆಗೆ ಕೊಟ್ಟಿದ್ದ ನಿಯಮ ಪುಸ್ತಕದಲ್ಲಿ ಇವನು ಪರಿಣಿತ.*+ ದೇವರಾದ ಯೆಹೋವ ಇವನ ಜೊತೆ ಇದ್ದನು.* ಹಾಗಾಗಿ ಇವನ ಎಲ್ಲ ಬೇಡಿಕೆಗಳನ್ನ ರಾಜ ಪೂರೈಸಿದ.
7 ರಾಜ ಅರ್ತಷಸ್ತ ಆಳ್ತಿದ್ದ ಏಳನೇ ವರ್ಷದಲ್ಲಿ ಕೆಲವು ಇಸ್ರಾಯೇಲ್ಯರು, ಪುರೋಹಿತರು, ಲೇವಿಯರು,+ ಗಾಯಕರು,+ ಬಾಗಿಲು ಕಾಯೋರು,+ ದೇವಾಲಯದ ಸೇವಕರು*+ ಯೆರೂಸಲೇಮಿಗೆ ಹೋದ್ರು. 8 ರಾಜ ಆಳ್ತಿದ್ದ ಏಳನೇ ವರ್ಷದ ಐದನೇ ತಿಂಗಳಲ್ಲಿ ಎಜ್ರ ಯೆರೂಸಲೇಮಿಗೆ ಬಂದ. 9 ಅವನು ಮೊದಲ್ನೇ ತಿಂಗಳಿನ ಮೊದಲ್ನೇ ದಿನ ಬಾಬೆಲಿಂದ ಹೊರಟು ಐದನೇ ತಿಂಗಳಿನ ಮೊದಲ್ನೇ ದಿನ ಯೆರೂಸಲೇಮಿಗೆ ಬಂದ. ಈ ಇಡೀ ಪ್ರಯಾಣದಲ್ಲಿ ದೇವರು ಅವನ ಜೊತೆ ಇದ್ದನು.*+ 10 ಯೆಹೋವನ ನಿಯಮ ಪುಸ್ತಕದಲ್ಲಿದ್ದ ವಿಷ್ಯಗಳನ್ನ ಅಧ್ಯಯನ ಮಾಡಬೇಕಂತ, ಅದ್ರ ತರ ನಡಿಬೇಕಂತ,+ ಅದ್ರಲ್ಲಿರೋ ನಿಯಮಗಳನ್ನ ತೀರ್ಪುಗಳನ್ನ ಇಸ್ರಾಯೇಲ್ಯರಿಗೆ ಕಲಿಸಬೇಕಂತ+ ಎಜ್ರ ತನ್ನ ಹೃದಯದಲ್ಲಿ ತೀರ್ಮಾನ ಮಾಡಿದ್ದ.*
11 ಪುರೋಹಿತನಾಗಿದ್ದ, ನಕಲುಗಾರನಾಗಿದ್ದ,* ಯೆಹೋವನ ಆಜ್ಞೆಗಳನ್ನ, ಆತನು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಗಳನ್ನ ಅಧ್ಯಯನ* ಮಾಡೋದ್ರಲ್ಲಿ ಪರಿಣಿತನಾಗಿದ್ದ ಎಜ್ರನಿಗೆ ರಾಜ ಅರ್ತಷಸ್ತ ಒಂದು ಪತ್ರ ಕೊಟ್ಟಿದ್ದ. ಅದ್ರಲ್ಲಿ ಹೀಗಿತ್ತು:
12 * “ಸ್ವರ್ಗದ ದೇವರ ನಿಯಮ ಪುಸ್ತಕದ ನಕಲುಗಾರನಾಗಿರೋ* ಪುರೋಹಿತ ಎಜ್ರನಿಗೆ ರಾಜಾಧಿರಾಜನಾದ ಅರ್ತಷಸ್ತ+ ಬರಿಯೋದು ಏನಂದ್ರೆ: ನಿನಗೆ ಶಾಂತಿಯಿರಲಿ. 13 ಈಗ ನಾನು ಒಂದು ಆಜ್ಞೆ ಕೊಡ್ತಾ ಇದ್ದೀನಿ. ಅದೇನಂದ್ರೆ ನನ್ನ ಸಾಮ್ರಾಜ್ಯದಲ್ಲಿ ಇರೋ ಇಸ್ರಾಯೇಲ್ಯರಲ್ಲಿ, ಅವ್ರ ಪುರೋಹಿತರಲ್ಲಿ, ಲೇವಿಯರಲ್ಲಿ ಯಾರೆಲ್ಲ ನಿನ್ನ ಜೊತೆ ಹೋಗೋಕೆ ಬಯಸ್ತಾರೋ ಅವ್ರೆಲ್ಲ ಯೆರೂಸಲೇಮಿಗೆ ಹೋಗಬಹುದು.+ 14 ಯಾಕಂದ್ರೆ ರಾಜನ, ಅವನ ಏಳು ಸಲಹೆಗಾರರ ಕಡೆಯಿಂದ ನಿನ್ನನ್ನ ಯೆಹೂದಕ್ಕೆ, ಯೆರೂಸಲೇಮಿಗೆ ಕಳಿಸ್ತಾ ಇದ್ದೀನಿ. ಅಲ್ಲಿಗೆ ಹೋಗಿ ನಿನ್ನ ಹತ್ರ ಇರೋ ದೇವರ ನಿಯಮ ಪುಸ್ತಕದ ಪ್ರಕಾರ ಜನ ನಡೀತಾ ಇದ್ದಾರಾ ಇಲ್ವಾ ಅಂತ ತನಿಖೆ ಮಾಡಿನೋಡು. 15 ರಾಜ, ಅವನ ಸಲಹೆಗಾರರು ಮನಸಾರೆ ಇಸ್ರಾಯೇಲ್ ದೇವ್ರಿಗೆ ಕೊಟ್ಟಿರೋ ಬೆಳ್ಳಿಬಂಗಾರವನ್ನ ಆತನ ಜಾಗವಾಗಿರೋ ಯೆರೂಸಲೇಮಿಗೆ ತಗೊಂಡು ಹೋಗು. 16 ಇದ್ರ ಜೊತೆ ಇಡೀ ಬಾಬೆಲಿನ ಪ್ರದೇಶದಿಂದ* ನಿನಗೆ ಸಿಕ್ಕಿರೋ ಎಲ್ಲ ಬೆಳ್ಳಿಬಂಗಾರವನ್ನ, ಯೆರೂಸಲೇಮಲ್ಲಿರೋ ತಮ್ಮ ದೇವರ ಆಲಯಕ್ಕಾಗಿ ಜನರು, ಪುರೋಹಿತರು ಮನಸಾರೆ ಕೊಟ್ಟಿರೋ ಉಡುಗೊರೆಯನ್ನೂ ತಗೊಂಡು ಹೋಗು.+ 17 ನೀನು ಆ ಹಣದಿಂದ ಹೋರಿ+ ಟಗರು+ ಕುರಿಮರಿಗಳನ್ನ+ ಅವುಗಳ ಜೊತೆ ಅರ್ಪಿಸೋ ಧಾನ್ಯ ಅರ್ಪಣೆಗಳನ್ನ,+ ಪಾನ ಅರ್ಪಣೆಗಳನ್ನ+ ತಪ್ಪದೇ ಕೊಂಡ್ಕೊಳ್ಳಬೇಕು. ಯೆರೂಸಲೇಮಲ್ಲಿರೋ ನಿಮ್ಮ ದೇವರ ಆಲಯದ ಯಜ್ಞವೇದಿ ಮೇಲೆ ಅವುಗಳನ್ನ ಅರ್ಪಿಸಬೇಕು.
18 ಉಳಿದ ಬೆಳ್ಳಿಬಂಗಾರವನ್ನ ನಿಮ್ಮ ದೇವರ ಇಷ್ಟದ ತರ ನಿನಗೆ, ನಿನ್ನ ಸಹೋದರರಿಗೆ ಯಾವುದು ಸರಿ ಅನಿಸುತ್ತೋ ಹಾಗೆ ಮಾಡಿ. 19 ನಿನ್ನ ದೇವರ ಆಲಯದ ಸೇವೆಗಾಗಿ ನಿನಗೆ ಕೊಟ್ಟಿರೋ ಪಾತ್ರೆಗಳನ್ನೆಲ್ಲ ನೀನು ಯೆರೂಸಲೇಮಲ್ಲಿರೋ ದೇವರ ಸನ್ನಿಧಿಯಲ್ಲಿ ಇಡಬೇಕು.+ 20 ಇದ್ರ ಜೊತೆ ನಿನ್ನ ದೇವರ ಆಲಯಕ್ಕಾಗಿ ಬೇರೆ ಏನಾದ್ರೂ ಅಗತ್ಯ ಇದ್ರೆ ರಾಜಮನೆತನದ ಖಜಾನೆಯಿಂದ ಹಣ ತಗೊಂಡು ಖರೀದಿಸು.+
21 ರಾಜ ಅರ್ತಷಸ್ತನಾದ ನಾನು, ನದಿಯ ಈಕಡೆ ಪ್ರದೇಶದಲ್ಲಿರೋ* ಖಜಾಂಚಿಗಳಿಗೆ ಕೊಡೋ ಆಜ್ಞೆ ಏನಂದ್ರೆ ಸ್ವರ್ಗದ ದೇವರ ನಿಯಮ ಪುಸ್ತಕದ ನಕಲುಗಾರನಾಗಿರೋ ಪುರೋಹಿತ ಎಜ್ರ+ ನಿಮ್ಮ ಹತ್ರ ಕೇಳೋದನ್ನೆಲ್ಲ ತಕ್ಷಣ ಅವ್ನಿಗೆ ಕೊಡಿ. 22 100 ತಲಾಂತು* ಬೆಳ್ಳಿ 100 ಕೋರ್* ಗೋದಿ 100 ಬತ್* ದ್ರಾಕ್ಷಾಮದ್ಯ+ 100 ಬತ್ ಎಣ್ಣೆ,+ ಎಷ್ಟು ಬೇಕಾದ್ರೂ ಉಪ್ಪನ್ನ+ ಕೊಡಿ. 23 ಸ್ವರ್ಗದ ದೇವರು ಆತನ ಆಲಯದ ವಿಷ್ಯದಲ್ಲಿ ಕೊಟ್ಟಿರೋ ಪ್ರತಿಯೊಂದು ಆಜ್ಞೆಯನ್ನ ಹುರುಪಿಂದ ಮಾಡಿ.+ ಆಗ ರಾಜನ ಸಾಮ್ರಾಜ್ಯದ ಮೇಲೆ, ಅವನ ಗಂಡು ಮಕ್ಕಳ ಮೇಲೆ ಸ್ವರ್ಗದ ದೇವರು ಕೋಪ ಮಾಡ್ಕೊಳ್ಳಲ್ಲ.+ 24 ನಾನು ಕೊಡೋ ಇನ್ನೊಂದು ಆಜ್ಞೆ ಏನಂದ್ರೆ ಪುರೋಹಿತರಿಂದ, ಲೇವಿಯರಿಂದ, ಸಂಗೀತಗಾರರಿಂದ,+ ಬಾಗಿಲು ಕಾಯೋರಿಂದ, ದೇವಾಲಯದ ಸೇವಕರಿಂದ,*+ ದೇವರ ಈ ಆಲಯದ ಕೆಲಸಗಾರರಿಂದ ಯಾವುದೇ ರೀತಿಯ ತೆರಿಗೆ, ಕಪ್ಪ+ ಅಥವಾ ಸುಂಕ ವಸೂಲಿ ಮಾಡ್ಬಾರದು.
25 ಎಜ್ರ, ನಾನು ನಿನಗೆ ಹೇಳೋದು ಏನಂದ್ರೆ ನಿನ್ನ ದೇವ್ರಿಂದ ಪಡ್ಕೊಂಡಿರೋ ವಿವೇಕ ಬಳಸಿ, ಅಧಿಕಾರಿಗಳನ್ನ ನ್ಯಾಯಾಧೀಶರನ್ನ ನೇಮಿಸು. ನಿನ್ನ ದೇವರ ನಿಯಮಗಳನ್ನ ತಿಳಿದಿರೋ ನದಿಯ ಆಕಡೆ ಪ್ರದೇಶದಲ್ಲಿರೋ ಎಲ್ಲ ಜನ್ರಿಗೆ ಅವರು ನ್ಯಾಯ ತೀರಿಸ್ತಾರೆ. ಯಾರಿಗಾದ್ರೂ ಆ ನಿಯಮಗಳು ಗೊತ್ತಿಲ್ಲಾಂದ್ರೆ ಕಲಿಸ್ಕೊಡು.+ 26 ಯಾರಾದ್ರೂ ನಿನ್ನ ದೇವರ ನಿಯಮ ಪುಸ್ತಕದಲ್ಲಿ ಇರೋದನ್ನ, ರಾಜನ ನಿಯಮವನ್ನ ಪಾಲಿಸದೇ ಇದ್ರೆ ತಕ್ಷಣ ಶಿಕ್ಷೆ ಕೊಡು. ಆ ಶಿಕ್ಷೆ ಮರಣದಂಡನೆ, ಗಡೀಪಾರು, ದಂಡ ಅಥವಾ ಜೈಲು ಯಾವುದಾದ್ರೂ ಆಗಿರಬಹುದು.”
27 ಯೆರೂಸಲೇಮಲ್ಲಿರೋ ಯೆಹೋವನ ಆಲಯದ ಸೌಂದರ್ಯವನ್ನ ಹೆಚ್ಚಿಸೋ ಯೋಚನೆಯನ್ನ ರಾಜನ ಹೃದಯಕ್ಕೆ ಹಾಕಿದ ನಮ್ಮ ಪೂರ್ವಜರ ದೇವರಾದ ಯೆಹೋವನಿಗೆ ಹೊಗಳಿಕೆ ಆಗ್ಲಿ!+ 28 ದೇವರು ನನಗೆ ತನ್ನ ಶಾಶ್ವತ ಪ್ರೀತಿ ತೋರಿಸಿ ರಾಜನ, ರಾಜನ ಸಲಹೆಗಾರರ,+ ರಾಜನ ದೊಡ್ಡದೊಡ್ಡ ಅಧಿಕಾರಿಗಳ ಒಪ್ಪಿಗೆ ಸಿಗೋ ತರ ಮಾಡಿದನು.+ ನನ್ನ ದೇವರಾದ ಯೆಹೋವ ನನ್ನ ಜೊತೆ ಇದ್ದಾನೆ.* ಹಾಗಾಗಿ ಧೈರ್ಯವಾಗಿ ಇದ್ದೀನಿ, ಇಸ್ರಾಯೇಲ್ಯರ ಮುಖ್ಯಸ್ಥರು ನನ್ನ ಜೊತೆ ಬರೋಕೆ ಅವ್ರನ್ನ ಸೇರಿಸಿದ್ದೀನಿ.
8 ರಾಜ ಅರ್ತಷಸ್ತ+ ಆಳ್ತಿದ್ದ ಸಮಯದಲ್ಲಿ ಬಾಬೆಲಿಂದ ನನ್ನ ಜೊತೆ ಬಂದ ಕುಲಗಳ ಮುಖ್ಯಸ್ಥರು, ಅವ್ರ ವಂಶಾವಳಿ ಪಟ್ಟಿಯಲ್ಲಿ ಇರೋರು ಯಾರಂದ್ರೆ: 2 ಫೀನೆಹಾಸನ+ ಗಂಡು ಮಕ್ಕಳಲ್ಲಿ ಗೇರ್ಷೋಮ್, ಈತಾಮಾರನ+ ಗಂಡು ಮಕ್ಕಳಲ್ಲಿ ದಾನಿಯೇಲ, ದಾವೀದನ ಗಂಡು ಮಕ್ಕಳಲ್ಲಿ ಹಟ್ಟೂಷ್, 3 ಶೆಕನ್ಯನ, ಪರೋಷನ ವಂಶದಲ್ಲಿ ಜೆಕರ್ಯ ಮತ್ತು ವಂಶಾವಳಿ ಪಟ್ಟಿಯಲ್ಲಿ ದಾಖಲಾಗಿದ್ದ 150 ಗಂಡಸ್ರು ಅವನ ಜೊತೆ ಇದ್ರು. 4 ಪಹತ್-ಮೋವಾಬನ ಗಂಡು ಮಕ್ಕಳಲ್ಲಿ+ ಜೆರಹ್ಯನ ಮಗ ಎಲೈಹೋಯೇನೈ, ಅವನ ಜೊತೆ 200 ಗಂಡಸ್ರು, 5 ಜತ್ತೂನ ಗಂಡು ಮಕ್ಕಳಲ್ಲಿ+ ಯಹಜೀಯೇಲನ ಮಗ ಶೆಕನ್ಯ, ಅವನ ಜೊತೆ 300 ಗಂಡಸ್ರು, 6 ಆದೀನನ ಗಂಡು ಮಕ್ಕಳಲ್ಲಿ+ ಯೋನಾತಾನನ ಮಗ ಎಬೆದ, ಅವನ ಜೊತೆ 50 ಗಂಡಸ್ರು, 7 ಏಲಾಮನ ಗಂಡು ಮಕ್ಕಳಲ್ಲಿ+ ಅತಲ್ಯನ ಮಗ ಯೆಶಾಯ, ಅವನ ಜೊತೆ 70 ಗಂಡಸ್ರು, 8 ಶೆಫಟ್ಯನ ಗಂಡು ಮಕ್ಕಳಲ್ಲಿ+ ಮೀಕಾಯೇಲನ ಮಗ ಜೆಬದ್ಯ, ಅವನ ಜೊತೆ 80 ಗಂಡಸ್ರು, 9 ಯೋವಾಬನ ಗಂಡು ಮಕ್ಕಳಲ್ಲಿ ಯೆಹೀಯೇಲನ ಮಗ ಓಬದ್ಯ ಮತ್ತು ಅವನ ಜೊತೆ 218 ಗಂಡಸ್ರು, 10 ಬಾನಿಯ ಗಂಡು ಮಕ್ಕಳಲ್ಲಿ ಯೋಸಿಫ್ಯನ ಮಗ ಶೆಲೋಮೀತ್ ಮತ್ತು ಅವನ ಜೊತೆ 160 ಗಂಡಸ್ರು, 11 ಬೇಬೈಯ ಗಂಡು ಮಕ್ಕಳಲ್ಲಿ+ ಬೇಬೈಯ ಮಗ ಜೆಕರ್ಯ ಮತ್ತು ಅವನ ಜೊತೆ 28 ಗಂಡಸ್ರು, 12 ಅಜ್ಗಾದನ ಗಂಡು ಮಕ್ಕಳಲ್ಲಿ+ ಹಕ್ಕಾಟಾನನ ಮಗ ಯೋಹಾನಾನ್ ಮತ್ತು ಅವನ ಜೊತೆ 110 ಗಂಡಸ್ರು, 13 ಅದೋನೀಕಾಮನ ಗಂಡು ಮಕ್ಕಳಲ್ಲಿ+ ಕೊನೆಯವರಾಗಿದ್ದ ಎಲೀಫೆಲೆಟ್, ಯೆಗೀಯೇಲ್, ಶೆಮಾಯ, ಅವ್ರ ಜೊತೆ 60 ಗಂಡಸ್ರು, 14 ಬಿಗ್ವೈಯ ಗಂಡು ಮಕ್ಕಳಲ್ಲಿ+ ಊತೈ, ಜಬ್ಬೂದ ಮತ್ತು ಅವ್ರ ಜೊತೆ 70 ಗಂಡಸ್ರು.
15 ನಾನು ಆ ಜನ್ರನ್ನ ಅಹವಾ ಅನ್ನೋ ಜಾಗದ ಕಡೆ ಹರಿದು ಬರೋ ನದಿ+ ಹತ್ರ ಒಟ್ಟುಸೇರಿಸಿದೆ. ನಾವು ಅಲ್ಲಿ ಮೂರು ದಿನ ಡೇರೆ ಹಾಕಿದ್ವಿ. ಆಮೇಲೆ ಜನ್ರನ್ನ ಪುರೋಹಿತರನ್ನ ಪರಿಶೀಲಿಸಿದಾಗ ಅವ್ರಲ್ಲಿ ಒಬ್ಬನೇ ಒಬ್ಬ ಲೇವಿನೂ ಸಿಗಲಿಲ್ಲ. 16 ಆಗ ನಾನು, ಮುಂದಾಳತ್ವ ವಹಿಸ್ತಿದ್ದ ಎಲೀಯೆಜರ, ಅರೀಯೇಲ, ಶೆಮಾಯ, ಎಲ್ನಾಥಾನ, ಯಾರೀಬ್, ಎಲ್ನಾಥಾನ, ನಾತಾನ, ಜೆಕರ್ಯ, ಮೆಷುಲ್ಲಾಮನನ್ನ ಮತ್ತು ಉಪದೇಶಕರಾಗಿದ್ದ ಯೋಯಾರೀಬ್, ಎಲ್ನಾಥಾನನನ್ನ ಕರಿಸ್ದೆ. 17 ಆಮೇಲೆ ಅವ್ರಿಗೆ ಕಾಸಿಫ್ಯ ಅನ್ನೋ ಜಾಗದಲ್ಲಿ ನಾಯಕನಾಗಿದ್ದ ಇದ್ದೋವನ ಹತ್ರ ಹೋಗೋಕೆ ಅಪ್ಪಣೆ ಕೊಟ್ಟೆ. ಅವ್ನಿಗೂ ದೇವಾಲಯದ ಸೇವಕರಾಗಿದ್ದ* ಅವನ ಸಹೋದರರಿಗೂ ನಮ್ಮ ದೇವರ ಆಲಯಕ್ಕಾಗಿ ಸೇವಕರನ್ನ ಕರ್ಕೊಂಡು ಬನ್ನಿ ಅನ್ನೋ ಸಂದೇಶ ಕೊಡಿ ಅಂತ ಅವ್ರಿಗೆ ಆಜ್ಞೆ ಕೊಟ್ಟೆ. 18 ನಮ್ಮ ದೇವರು ನಮ್ಮ ಜೊತೆ ಇದ್ದಿದ್ರಿಂದ ಶೇರೇಬ್ಯ+ ಅನ್ನೋ ಒಬ್ಬ ವಿವೇಚನೆ ಇರೋ ವ್ಯಕ್ತಿನ ನಮ್ಮ ಹತ್ರ ಕರ್ಕೊಂಡು ಬಂದ್ರು. ಅವನು ಮಹ್ಲಿಯ ಗಂಡು ಮಕ್ಕಳಲ್ಲಿ ಒಬ್ಬನಾಗಿದ್ದ. ಇಸ್ರಾಯೇಲನ ಮಗ ಲೇವಿಯ ಮೊಮ್ಮಗನೇ ಈ ಮಹ್ಲಿ.+ ಶೇರೇಬ್ಯನ ಜೊತೆ ಅವನ ಗಂಡು ಮಕ್ಕಳು, ಅವನ ಸಹೋದರರು ಹೀಗೆ 18 ಜನ ಇದ್ರು. 19 ಹಷಬ್ಯ, ಅವನ ಜೊತೆ ಮೆರಾರೀಯರಿಂದ+ ಯೆಶಾಯ, ಅವನ ಸಹೋದರರು, ಅವ್ರ ಗಂಡು ಮಕ್ಕಳು ಹೀಗೆ 20 ಗಂಡಸ್ರು ಇದ್ರು. 20 ಅವ್ರ ಜೊತೆ ದೇವಾಲಯದ ಸೇವಕರಿಂದ* ಕೂಡ 220 ಜನ್ರನ್ನ ಕರ್ಕೊಂಡು ಬಂದ್ರು. ದಾವೀದ ಮತ್ತು ಅಧಿಕಾರಿಗಳು ಇವ್ರನ್ನ ಆರಿಸ್ಕೊಂಡು ಲೇವಿಯರ ಸಹಾಯಕ್ಕಾಗಿ ನೇಮಿಸಿದ್ದರು.
21 ಆಮೇಲೆ ನಾನು ಅಹವಾ ನದಿ ಹತ್ರ ಎಲ್ರಿಗೂ ಉಪವಾಸ ಮಾಡಿ ಅಂತ ಹೇಳ್ದೆ. ನಮ್ಮ ದೇವರ ಮುಂದೆ ನಮ್ಮನ್ನೇ ತಗ್ಗಿಸ್ಕೊಳ್ಳೋಕೆ, ನಮ್ಮ ಪ್ರಯಾಣವನ್ನ ಆತನು ಮಾರ್ಗದರ್ಶಿಸೋಕೆ, ನಮ್ಮನ್ನ, ನಮ್ಮ ಮಕ್ಕಳನ್ನ, ನಮ್ಮ ವಸ್ತುಗಳನ್ನೆಲ್ಲ ಆತನು ಕಾಪಾಡೋಕೆ ಹೀಗೆ ಮಾಡ್ದೆ. 22 ಹೋಗೋ ದಾರೀಲಿ ನಮ್ಮನ್ನ ಶತ್ರುಗಳಿಂದ ಕಾಪಾಡೋಕೆ ಸೈನಿಕರನ್ನ, ಕುದುರೆ ಸವಾರರನ್ನ ಕೊಡು ಅಂತ ರಾಜನ ಹತ್ರ ಕೇಳೋಕೆ ನನಗೆ ನಾಚಿಕೆ ಆಯ್ತು. ಯಾಕಂದ್ರೆ ನಾವು ರಾಜನಿಗೆ “ನಮ್ಮ ದೇವರು ಆತನನ್ನ ಹುಡುಕೋರ ಜೊತೆ ಇರ್ತಾನೆ.+ ಆದ್ರೆ ಆತನನ್ನ ದೂರ ಮಾಡೋರ ಮೇಲೆ ತನ್ನ ಶಕ್ತಿಯನ್ನ ಕೋಪವನ್ನ ತೋರಿಸ್ತಾನೆ”+ ಅಂತ ಹೇಳಿದ್ವಿ. 23 ಹಾಗಾಗಿ ಉಪವಾಸ ಮಾಡಿ ಈ ವಿಷ್ಯದ ಬಗ್ಗೆ ನಮ್ಮ ದೇವರ ಹತ್ರ ಬೇಡ್ಕೊಂಡ್ವಿ. ದೇವರು ನಮ್ಮ ಪ್ರಾರ್ಥನೆ ಕೇಳಿದನು.+
24 ನಾನು ಪುರೋಹಿತರಲ್ಲಿ ಪ್ರಧಾನರಾಗಿದ್ದ 12 ಜನ್ರನ್ನ ಅಂದ್ರೆ ಶೇರೇಬ್ಯನನ್ನ, ಹಷಬ್ಯನನ್ನ,+ ಅವ್ರ ಜೊತೆ 10 ಸಹೋದರರನ್ನ ಆರಿಸ್ಕೊಂಡೆ. 25 ನಾನು ಅವ್ರಿಗೆ ಬೆಳ್ಳಿ ಚಿನ್ನದ ಪಾತ್ರೆಗಳನ್ನ ತೂಕಮಾಡಿ ಕೊಟ್ಟೆ. ಅವುಗಳನ್ನ ನಮ್ಮ ದೇವರ ಆಲಯಕ್ಕಾಗಿ ರಾಜ, ಅವನ ಸಲಹೆಗಾರರು, ಅಧಿಕಾರಿಗಳು, ಅಲ್ಲಿದ್ದ ಇಸ್ರಾಯೇಲ್ಯರೆಲ್ಲ ಕಾಣಿಕೆಯಾಗಿ ಕೊಟ್ಟಿದ್ರು.+ 26 ಹೀಗೆ ನಾನು, 650 ತಲಾಂತು* ಬೆಳ್ಳಿ 2 ತಲಾಂತಿನಷ್ಟು ಬೆಲೆಬಾಳೋ 100 ಬೆಳ್ಳಿ ಪಾತ್ರೆಗಳನ್ನ, 100 ತಲಾಂತು ಚಿನ್ನವನ್ನ ತೂಕಮಾಡಿ ಕೊಟ್ಟೆ. 27 ಜೊತೆಗೆ ಒಂದು ಸಾವಿರ ಡೇರಿಕ್* ಬೆಲೆಬಾಳೋ ಚಿನ್ನದ 20 ಚಿಕ್ಕ ಬಟ್ಟಲುಗಳನ್ನ, ಕೆಂಪಗೆ ಹೊಳಿತಿದ್ದ ಚಿನ್ನದಷ್ಟೆ ಅಮೂಲ್ಯವಾಗಿದ್ದ ಶುದ್ಧ ತಾಮ್ರದ 2 ಪಾತ್ರೆಗಳನ್ನ ಕೊಟ್ಟೆ.
28 ನಾನು ಅವ್ರಿಗೆ “ನೀವು ಯೆಹೋವನಿಗೆ ಪವಿತ್ರ ಜನ್ರು.+ ಈ ಪಾತ್ರೆಗಳು ಕೂಡ ಪವಿತ್ರ. ಈ ಬೆಳ್ಳಿಬಂಗಾರ ನಿಮ್ಮ ಪೂರ್ವಜರ ದೇವರಾದ ಯೆಹೋವನಿಗೆ ಕೊಟ್ಟಿರೋ ಸ್ವಇಷ್ಟದ ಕಾಣಿಕೆಗಳು. 29 ಹಾಗಾಗಿ ಯೆರೂಸಲೇಮಿಗೆ ತಲುಪೋ ತನಕ ಇವುಗಳನ್ನ ಜೋಪಾನ ಮಾಡಿ. ಅಲ್ಲಿನ ಯೆಹೋವನ ಆಲಯದ ಕೊಠಡಿಗಳಲ್ಲಿ* ಪುರೋಹಿತರ, ಲೇವಿಯರ ಪ್ರಧಾನರ ಮುಂದೆ, ಇಸ್ರಾಯೇಲ್ ಕುಲಗಳ ಅಧಿಕಾರಿಗಳ ಮುಂದೆ ತೂಕಮಾಡೋ ತನಕ ಇವುಗಳನ್ನ ಜೋಪಾನವಾಗಿ ನೋಡ್ಕೊಳ್ಳಿ”+ ಅಂದೆ. 30 ಆಗ ಪುರೋಹಿತರು, ಲೇವಿಯರು ಯೆರೂಸಲೇಮಲ್ಲಿರೋ ನಮ್ಮ ದೇವರ ಆಲಯದಲ್ಲಿ ಇಡೋಕೆ ತೂಕಮಾಡಿ ತಮಗೆ ಕೊಟ್ಟ ಆ ಬೆಳ್ಳಿಬಂಗಾರವನ್ನ, ಪಾತ್ರೆಗಳನ್ನ ತಗೊಂಡ್ರು.
31 ಕೊನೆಗೆ ನಾವು ಮೊದಲ್ನೇ ತಿಂಗಳ+ 12ನೇ ದಿನ ಅಹವಾ ನದಿ+ ಹತ್ರದಿಂದ ಯೆರೂಸಲೇಮಿಗೆ ಹೊರಟ್ವಿ. ನಮ್ಮ ದೇವರು ನಮ್ಮ ಜೊತೆ ಇದ್ದಿದ್ರಿಂದ ನಮ್ಮನ್ನ ಶತ್ರುಗಳ ಕೈಯಿಂದ ಬಿಡಿಸಿದನು. ದಾರಿಯಲ್ಲಿ ನಮಗಾಗಿ ಹೊಂಚುಹಾಕಿ ಕೂತಿದ್ದವ್ರಿಂದ ನಮ್ಮನ್ನ ಕಾಪಾಡಿದನು. 32 ಹೀಗೆ ನಾವು ಯೆರೂಸಲೇಮಿಗೆ ಬಂದು ತಲುಪಿ,+ ಮೂರು ದಿನ ಅಲ್ಲಿ ಉಳ್ಕೊಂಡ್ವಿ. 33 ನಾಲ್ಕನೇ ದಿನ ನಮ್ಮ ದೇವರ ಆಲಯದಲ್ಲಿ ಆ ಬೆಳ್ಳಿಬಂಗಾರವನ್ನ, ಪಾತ್ರೆಗಳನ್ನ ತೂಕ ಮಾಡಿದ್ವಿ.+ ಪುರೋಹಿತ ಊರೀಯಾನ ಮಗ ಮೆರೇಮೋತನಿಗೆ+ ಅದನ್ನ ಒಪ್ಪಿಸಿದ್ವಿ. ಅವನ ಜೊತೆ ಫೀನೆಹಾಸನ ಮಗ ಎಲ್ಲಾಜಾರ್, ಲೇವಿಯರಲ್ಲಿ ಯೆಷೂವನ ಮಗ ಯೋಜಾಬಾದ+ ಮತ್ತು ಬಿನ್ನೂಯನ+ ಮಗ ನೋವದ್ಯ ಇದ್ರು. 34 ಹೀಗೆ ಎಲ್ಲ ವಸ್ತುಗಳನ್ನ ಲೆಕ್ಕ ಮಾಡಿ, ಅವುಗಳನ್ನ ತೂಕಮಾಡಿ ಬರೆದಿಟ್ರು. 35 ಕೈದಿಗಳಾಗಿದ್ದು ವಾಪಸ್ ಬಂದವ್ರು ಇಸ್ರಾಯೇಲ್ ದೇವ್ರಿಗೆ ಎಲ್ಲ ಇಸ್ರಾಯೇಲ್ಯರ ಪರವಾಗಿ 12 ಹೋರಿ,+ 96 ಟಗರು,+ 77 ಗಂಡು ಕುರಿಮರಿ, 12 ಗಂಡು ಆಡುಗಳನ್ನ+ ಪಾಪಪರಿಹಾರಕ ಬಲಿಯಾಗಿ ಕೊಟ್ರು. ಇವೆಲ್ಲ ಯೆಹೋವನಿಗೆ ಕೊಟ್ಟ ಸರ್ವಾಂಗಹೋಮ ಬಲಿ ಆಗಿತ್ತು.+
36 ಆಮೇಲೆ ನಾವು ರಾಜನ ನಿಯಮಗಳನ್ನ+ ನದಿಯ+ ಈಕಡೆ* ಇರೋ ರಾಜನ ದೇಶಾಧಿಪತಿಗಳಿಗೆ,* ರಾಜ್ಯಪಾಲರಿಗೆ ಕೊಟ್ವಿ. ಅವ್ರು ಜನ್ರಿಗೆ ಸಹಾಯ ಮಾಡಿದ್ರು, ಸತ್ಯ ದೇವರ ಆಲಯಕ್ಕೆ ಬೇಕಾದ ಕಾಣಿಕೆಗಳನ್ನ ಕೊಟ್ಟು ಬೆಂಬಲಿಸಿದ್ರು.+
9 ಈ ಎಲ್ಲ ವಿಷ್ಯಗಳು ನಡೆದ ತಕ್ಷಣ ಅಧಿಕಾರಿಗಳು ನನ್ನ ಹತ್ರ ಬಂದು “ಇಸ್ರಾಯೇಲಿನ ಜನ, ಪುರೋಹಿತರು ಮತ್ತು ಲೇವಿಯರು ಅಕ್ಕಪಕ್ಕದ ದೇಶದ ಜನ್ರ ಅಂದ್ರೆ ಕಾನಾನ್ಯರ, ಹಿತ್ತಿಯರ, ಪೆರಿಜೀಯರ, ಯೆಬೂಸಿಯರ, ಅಮ್ಮೋನಿಯರ, ಮೋವಾಬ್ಯರ, ಈಜಿಪ್ಟಿನವರ+ ಮತ್ತು ಅಮೋರಿಯರ+ ಸಹವಾಸ ಬಿಟ್ಟುಬಿಡದೆ ಅವ್ರ ಅಸಹ್ಯಕರ ಪದ್ಧತಿಗಳನ್ನ ಮಾಡ್ತಿದ್ದಾರೆ.+ 2 ಅವರು ಆ ದೇಶಗಳ ಹೆಣ್ಣು ಮಕ್ಕಳನ್ನ ಮದುವೆ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಗಂಡು ಮಕ್ಕಳಿಗೂ ಅಲ್ಲಿಂದ ಹೆಣ್ಣು ತಂದಿದ್ದಾರೆ.+ ಪವಿತ್ರ ಸಂತತಿಯಾಗಿರೋ+ ಅವರು ಆ ದೇಶದ ಜನ್ರ ಜೊತೆ ಬೆರೆತು ಹೋಗಿದ್ದಾರೆ.+ ಈ ನಂಬಿಕೆ ದ್ರೋಹದ ಕೆಲಸದಲ್ಲಿ ಅಧಿಕಾರಿಗಳು, ಉಪಾಧಿಪತಿಗಳೇ ಮೊದಲ್ನೇ ಸಾಲಲ್ಲಿದ್ದಾರೆ” ಅಂದ್ರು.
3 ಈ ವಿಷ್ಯ ಕೇಳಿದ ತಕ್ಷಣ ನನ್ನ ಬಟ್ಟೆಗಳನ್ನ ಹರ್ಕೊಂಡೆ. ತಲೆ ಮತ್ತು ಗಡ್ಡದ ಕೂದಲನ್ನ ಕಿತ್ಕೊಂಡು ಬೇಜಾರಾಗಿ ಕೂತೆ. 4 ಆಗ ಇಸ್ರಾಯೇಲ್ ದೇವರ ಮಾತುಗಳನ್ನ ಗೌರವಿಸ್ತಿದ್ದ* ಜನ ನನ್ನ ಅಕ್ಕಪಕ್ಕದಲ್ಲಿ ಬಂದು ನಿಂತ್ಕೊಂಡ್ರು. ಸೆರೆಯಿಂದ ಬಂದವ್ರು ಮಾಡಿದ ಪಾಪದ ಬಗ್ಗೆ ತಿಳಿದು ಅವ್ರಿಗೂ ತುಂಬ ನೋವಾಗಿತ್ತು. ಸಂಜೆಯ ಧಾನ್ಯ ಅರ್ಪಣೆ ಕೊಡೋ ತನಕ ನಾನು ಬೇಜಾರಾಗೇ ಕೂತಿದ್ದೆ.+
5 ಸಂಜೆಯ ಧಾನ್ಯ ಅರ್ಪಣೆ ಸಲ್ಲಿಸೋ ಸಮಯ ಬಂತು.+ ದುಃಖದಿಂದ ಕೂತಿದ್ದ ನಾನು ಹರಿದ ಬಟ್ಟೆಯಲ್ಲೇ ಅಲ್ಲಿಂದ ಎದ್ದೆ. ಮಂಡಿಯೂರಿ ನನ್ನ ದೇವರಾದ ಯೆಹೋವನ ಕಡೆ ಕೈಚಾಚಿ, 6 ಹೀಗೆ ಪ್ರಾರ್ಥನೆ ಮಾಡ್ದೆ: “ನನ್ನ ದೇವರೇ, ನನಗೆ ನಾಚಿಕೆ ಆಗ್ತಿದೆ. ನಿನಗೆ ಮುಖ ತೋರಿಸೋಕೂ ಬೇಜಾರಾಗ್ತಿದೆ. ನನ್ನ ದೇವರೇ ನಮ್ಮ ಪಾಪಗಳು ತುಂಬ ಜಾಸ್ತಿ ಆಗಿವೆ. ನಮ್ಮ ಅಪರಾಧಗಳು ಹೆಚ್ತಾಹೆಚ್ತಾ ಆಕಾಶ ಮುಟ್ತಿದೆ.+ 7 ನಮ್ಮ ಪೂರ್ವಜರ ಕಾಲದಿಂದ ಇವತ್ತಿನ ತನಕ ತುಂಬ ತಪ್ಪು ಮಾಡಿದ್ದೀವಿ.+ ನಾವು ತಪ್ಪು ಮಾಡಿದಿಕ್ಕೆ ನಮ್ಮನ್ನ ನಮ್ಮ ರಾಜರನ್ನ ಪುರೋಹಿತರನ್ನ ಬೇರೆ ದೇಶಗಳ ರಾಜರ ಕೈಗೆ ಕೊಟ್ಟುಬಿಟ್ಟೆ. ಅವ್ರು ನಮ್ಮ ಜನ್ರನ್ನ ಕತ್ತಿಯಿಂದ ಕೊಂದ್ರು,+ ಕೈದಿಗಳಾಗಿ ಕರ್ಕೊಂಡು ಹೋದ್ರು,+ ದೋಚಿದ್ರು,+ ಅವಮಾನ ಮಾಡಿದ್ರು. ಇವತ್ತೂ ನಮ್ಮ ಪರಿಸ್ಥಿತಿ ಹಾಗೇ ಇದೆ.+ 8 ಆದ್ರೆ ನಮ್ಮ ದೇವರಾದ ಯೆಹೋವನೇ, ಸ್ವಲ್ಪ ಸಮಯದಿಂದ ನೀನು ನಮಗೆ ದಯೆ ತೋರಿಸ್ತಾ ಇದ್ದೀಯ. ನಾವು ಸರ್ವನಾಶ ಆಗದ ಹಾಗೆ ನೋಡ್ಕೊಂಡೆ. ಇಲ್ಲಿಗೆ ವಾಪಸ್ ಕರ್ಕೊಂಡು ಬಂದು ನಿನ್ನ ಪವಿತ್ರ ಸ್ಥಳದಲ್ಲಿ ನಮಗೊಂದು ಸುರಕ್ಷಿತ ಸ್ಥಾನ ಕೊಟ್ಟಿದ್ದೀಯ.+ ನಮ್ಮ ಕಣ್ಣುಗಳು ಹೊಳೆಯೋ ತರ ಮಾಡಿದ್ದೀಯ. ಗುಲಾಮಗಿರಿಯಿಂದ ಸ್ವಲ್ಪ ಚೇತರಿಸಿಕೊಳ್ಳೋ ತರ ಮಾಡಿದ್ದೀಯ. 9 ನಾವು ಗುಲಾಮರೇ ಆಗಿದ್ರೂ+ ನಮ್ಮ ದೇವರಾದ ನೀನು ನಮ್ಮನ್ನ ಗುಲಾಮಗಿರಿಯಲ್ಲೇ ಬಿಟ್ಟುಬಿಡಲಿಲ್ಲ. ನಿನ್ನ ಶಾಶ್ವತ ಪ್ರೀತಿ ತೋರಿಸಿ ಪರ್ಶಿಯದ ರಾಜರು ನಮಗೆ ದಯೆ ತೋರಿಸೋ ತರ ಮಾಡ್ದೆ.+ ಹಾಳುಬಿದ್ದಿದ್ದ ನಮ್ಮ ದೇವರ ಆಲಯನ ಮತ್ತೆ ಕಟ್ಟೋಕೆ ಸಹಾಯ ಮಾಡ್ದೆ.+ ಯೆಹೂದ ಮತ್ತು ಯೆರೂಸಲೇಮಲ್ಲಿ ನಮ್ಮನ್ನ ಕಾಪಾಡೋಕೆ ನಾಲ್ಕು ಕಡೆಗಳಲ್ಲೂ ರಕ್ಷಣೆಯ ಗೋಡೆಗಳನ್ನ ಎಬ್ಬಿಸಿದೆ.
10 ದೇವರೇ, ಏನು ಹೇಳೋದು? ಇಷ್ಟೆಲ್ಲ ಆದ್ಮೇಲೂ ನಾವು ನಿನ್ನ ಆಜ್ಞೆಗಳನ್ನ ಸರಿಯಾಗಿ ಪಾಲಿಸ್ತಿಲ್ಲ. 11 ನಿನ್ನ ಆಜ್ಞೆಗಳನ್ನ ನಿನ್ನ ಸೇವಕರಾದ ಪ್ರವಾದಿಗಳ ಮೂಲಕ ಕೊಟ್ಟು ಹೀಗೆ ಹೇಳಿದ್ದೆ: ‘ನೀವು ಸ್ವಾಧೀನ ಮಾಡ್ಕೊಳ್ಳೋಕೆ ಹೋಗ್ತಿರೋ ದೇಶ ಅಶುದ್ಧ. ಯಾಕಂದ್ರೆ ಅಲ್ಲಿನ ಜನ ಅಶುದ್ಧರಾಗಿದ್ದಾರೆ, ಅಸಹ್ಯ ಪದ್ಧತಿಗಳನ್ನ ಆಚರಿಸ್ತಾರೆ. ಅವ್ರು ಆ ದೇಶವನ್ನ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ತಮ್ಮ ಅಶುದ್ಧತೆಯಿಂದ ತುಂಬಿಸಿಬಿಟ್ಟಿದ್ದಾರೆ.+ 12 ಹಾಗಾಗಿ ನಿಮ್ಮ ಹೆಣ್ಣು ಮಕ್ಕಳನ್ನ ಅವ್ರ ಗಂಡು ಮಕ್ಕಳಿಗೆ ಮದುವೆ ಮಾಡಿಸಬೇಡಿ. ಅವ್ರ ಹೆಣ್ಣು ಮಕ್ಕಳನ್ನ ನಿಮ್ಮ ಗಂಡು ಮಕ್ಕಳಿಗೆ ತರಬೇಡಿ.+ ಅವ್ರ ಶಾಂತಿಗಾಗಿ, ಸುಖಕ್ಕಾಗಿ ನೀವು ಏನೂ ಮಾಡಬಾರದು.+ ಆಗ ನೀವು ಬಲಿಷ್ಠರಾಗ್ತೀರ. ದೇಶದಲ್ಲಿರೋ ಒಳ್ಳೇ ಬೆಳೆ ತಿಂದು ನಿಮ್ಮ ಗಂಡು ಮಕ್ಕಳಿಗೆ ಆ ದೇಶವನ್ನ ಶಾಶ್ವತ ಆಸ್ತಿಯಾಗಿ ಕೊಡೋಕೆ ಆಗುತ್ತೆ.’ 13 ನಾವು ಕೆಟ್ಟ ಕೆಲಸಗಳನ್ನ, ದೊಡ್ಡದೊಡ್ಡ ಪಾಪಗಳನ್ನ ಮಾಡಿದ್ರಿಂದಾನೇ ನಮಗೆ ಇಷ್ಟೆಲ್ಲ ಕೆಟ್ಟದಾಗಿದ್ದು. ಆದ್ರೂ ನೀನು ನಮ್ಮ ತಪ್ಪುಗಳಿಗೆ ಕಡಿಮೆ ಶಿಕ್ಷೆನೇ ಕೊಟ್ಟಿದ್ದೀಯ,+ ನಮ್ಮನ್ನ ಬಿಡಿಸಿದ್ದೀಯ.+ 14 ಹೀಗಿರುವಾಗ ಅಸಹ್ಯವಾದ ಆಚಾರಗಳನ್ನ ಮಾಡೋ ಈ ಜನ್ರ ಜೊತೆ ಮದುವೆ ಸಂಬಂಧ ಬೆಳೆಸಿ ನಿನ್ನ ಆಜ್ಞೆಗಳನ್ನ ಮತ್ತೆ ಮುರಿಬೇಕಾ?+ ಹಾಗೆ ಮಾಡಿದ್ರೆ ನಿನಗೆ ನಮ್ಮ ಮೇಲೆ ಕೋಪ ಬಂದು ನಮ್ಮಲ್ಲಿ ಯಾರೂ ಉಳಿಯದಿರೋ ತರ ಅಥವಾ ನಮ್ಮಲ್ಲಿ ಯಾರಿಗೂ ತಪ್ಪಿಸ್ಕೊಳ್ಳೋಕೆ ಆಗದಿರೋ ತರ ಪೂರ್ತಿ ನಾಶ ಮಾಡಲ್ವಾ? 15 ಇಸ್ರಾಯೇಲ್ ದೇವರಾದ ಯೆಹೋವನೇ, ನೀನು ನೀತಿವಂತ.+ ಅದಕ್ಕೇ ನಮ್ಮಲ್ಲಿ ಕೆಲವ್ರು ಇನ್ನೂ ಬದುಕಿದ್ದಾರೆ. ನಾವು ಎಷ್ಟು ಅಪರಾಧ ಮಾಡಿದ್ದೀವಿ ಅಂದ್ರೆ ನಿನ್ನ ಮುಂದೆ ನಿಲ್ಲೋಷ್ಟು ಯೋಗ್ಯತೆ ನಮಗಿಲ್ಲ.+ ಹಾಗಿದ್ರೂ ನಿನ್ನ ಮುಂದೆ ನಿಂತಿದ್ದೀವಿ.”
10 ಎಜ್ರ ಸತ್ಯ ದೇವರ ಆಲಯದ ಮುಂದೆ ಅಡ್ಡಬಿದ್ದು ಅಳ್ತಾ ಪ್ರಾರ್ಥನೆ ಮಾಡ್ದ,+ ಜನ್ರು ಮಾಡಿದ ಪಾಪಗಳನ್ನ ಹೇಳ್ಕೊಂಡ. ಆಗ ಇಸ್ರಾಯೇಲಿನ ಗಂಡಸ್ರು, ಹೆಂಗಸ್ರು, ಮಕ್ಕಳು ಒಂದು ದೊಡ್ಡ ಸಮೂಹವಾಗಿ ಅವನ ಸುತ್ತ ಸೇರಿದ್ರು. ಅವ್ರು ಸಹ ಬಿಕ್ಕಿಬಿಕ್ಕಿ ಅಳ್ತಿದ್ರು. 2 ಆಗ ಏಲಾಮನ ಗಂಡು ಮಕ್ಕಳಲ್ಲಿ+ ಒಬ್ಬನಾದ ಯೆಹೀಯೇಲನ+ ಮಗ ಶೆಕನ್ಯ ಎಜ್ರನಿಗೆ “ನಾವು ಅಕ್ಕಪಕ್ಕದ ದೇಶದ ಹುಡುಗಿಯರನ್ನ ಮದುವೆ ಮಾಡ್ಕೊಂಡು* ನಮ್ಮ ದೇವ್ರಿಗೆ ನಂಬಿಕೆ ದ್ರೋಹ ಮಾಡಿದ್ದೀವಿ.+ ಆದ್ರೆ ಇಸ್ರಾಯೇಲ್ಯರಿಗೆ ಇನ್ನೂ ಒಂದು ನಿರೀಕ್ಷೆ ಇದೆ. 3 ನಮ್ಮ ದೇವರ ಜೊತೆ ಒಂದು ಒಪ್ಪಂದ* ಮಾಡ್ಕೊಳ್ಳೋಣ.+ ಅದೇನಂದ್ರೆ, ನಮ್ಮನಮ್ಮ ಹೆಂಡತಿಯರನ್ನ ಅವ್ರ ದೇಶಕ್ಕೆ ಕಳಿಸಿಬಿಡೋಣ. ಅವ್ರ ಜೊತೆ ಮಕ್ಕಳನ್ನೂ ದೂರ ಕಳಿಸಿಬಿಡೋಣ. ಹೀಗೆ ನಾವು ಯೆಹೋವನ ತೀರ್ಮಾನವನ್ನ ಒಪ್ಕೊಳ್ಳೋಣ. ದೇವರ ಆಜ್ಞೆಗಳನ್ನ ತುಂಬ ಗೌರವಿಸೋರು* ಕೊಡೋ ಸಲಹೆ ತರ ನಡ್ಕೊಳ್ಳೋಣ.+ ನಿಯಮ ಪುಸ್ತಕದಲ್ಲಿ ಇರೋ ಹಾಗೇ ಮಾಡೋಣ. 4 ಎಜ್ರ ಎದ್ದೇಳು, ಈ ವಿಷ್ಯ ಪರಿಹರಿಸೋದು ನಿನ್ನ ಜವಾಬ್ದಾರಿ. ನಿನ್ನ ಜೊತೆ ನಾವಿದ್ದೀವಿ. ಧೈರ್ಯವಾಗಿ ನಿನ್ನ ಕೆಲಸ ಮಾಡು” ಅಂದ.
5 ಆಗ ಎಜ್ರ ಎದ್ದು ಅವನು ಹೇಳಿದ ಹಾಗೇ ಪುರೋಹಿತರ ಪ್ರಧಾನರಿಂದ, ಲೇವಿಯರಿಂದ, ಎಲ್ಲ ಇಸ್ರಾಯೇಲ್ಯರಿಂದ ಆಣೆ ಮಾಡಿಸಿದ,+ ಅವ್ರು ಆಣೆ ಮಾಡಿದ್ರು. 6 ಎಜ್ರ ಸತ್ಯ ದೇವರ ಆಲಯದ ಮುಂದೆ ಇದ್ದ ಎಲ್ಯಾಷೀಬನ ಮಗ ಯೆಹೋಹಾನಾನನ ಕೋಣೆಗೆ* ಹೋದ. ಆದ್ರೆ ಅವನು ಊಟ ನೀರು ಏನೂ ತಗೊಳ್ಳಲಿಲ್ಲ. ಯಾಕಂದ್ರೆ ಕೈದಿಗಳಾಗಿದ್ದು ವಾಪಸ್ ಬಂದಿದ್ದ ಜನ್ರ ನಂಬಿಕೆ ದ್ರೋಹದಿಂದಾಗಿ ಅವನಿಗೆ ದುಃಖ ಆಗಿತ್ತು.+
7 ಕೈದಿಗಳಾಗಿದ್ದು ವಾಪಸ್ ಬಂದ ಎಲ್ಲ ಜನ ಯೆರೂಸಲೇಮಲ್ಲಿ ಸೇರಿಬರಬೇಕಂತ ಇಡೀ ಯೆಹೂದದಲ್ಲಿ, ಯೆರೂಸಲೇಮಲ್ಲಿ ಘೋಷಣೆ ಮಾಡಿಸಿದ್ರು. 8 ಅಷ್ಟೇ ಅಲ್ಲ, ಅಧಿಕಾರಿಗಳ ಮತ್ತು ಹಿರಿಯರ ಈ ತೀರ್ಮಾನವನ್ನ ಯಾವನಾದ್ರೂ ತಳ್ಳಿಹಾಕಿದ್ರೆ, ಮೂರು ದಿನದೊಳಗೆ ಬರದಿದ್ರೆ ಅವ್ರ ಎಲ್ಲ ವಸ್ತುಗಳು ಜಪ್ತಿ ಆಗುತ್ತೆ, ಕೈದಿಗಳಾಗಿದ್ದು ವಾಪಸ್ ಬಂದವ್ರ ಸಭೆಯಿಂದ ಅವನನ್ನ ಹೊರಗೆ ಹಾಕಲಾಗುತ್ತೆ ಅಂತಾನೂ ಘೋಷಣೆ ಮಾಡಿಸಿದ್ರು.+ 9 ಇದನ್ನ ಕೇಳಿ ಯೆಹೂದ, ಬೆನ್ಯಾಮೀನನ ಎಲ್ಲ ಗಂಡಸ್ರು ಮೂರು ದಿನದೊಳಗೆ ಯೆರೂಸಲೇಮಲ್ಲಿ ಸೇರಿ ಬಂದ್ರು. ಅದು ಒಂಬತ್ತನೇ ತಿಂಗಳ 20ನೇ ದಿನ ಆಗಿತ್ತು. ಎಲ್ಲ ಜನ ಸತ್ಯ ದೇವರ ಆಲಯದ ಅಂಗಳದಲ್ಲಿ ಕೂತಿದ್ರು. ವಿಷ್ಯ ತುಂಬ ಗಂಭೀರ ಆಗಿದ್ರಿಂದ, ಜೊತೆಗೆ ಧಾರಾಕಾರ ಮಳೆ ಸುರಿತಿದ್ರಿಂದ ನಡುಗ್ತಿದ್ರು.
10 ಆಗ ಪುರೋಹಿತ ಎಜ್ರ ಎದ್ದು ನಿಂತು ಅವ್ರಿಗೆ “ನೀವು ಬೇರೆ ದೇಶದ ಹುಡುಗಿರನ್ನ ಮದುವೆ ಮಾಡ್ಕೊಂಡು ನಂಬಿಕೆ ದ್ರೋಹ ಮಾಡಿದ್ದೀರಿ.+ ಹಾಗೆ ಮಾಡಿ ಇಸ್ರಾಯೇಲ್ಯರ ಅಪರಾಧ ಜಾಸ್ತಿ ಮಾಡಿದ್ದೀರ. 11 ಹಾಗಾಗಿ ಈಗ ನಿಮ್ಮ ಪೂರ್ವಜರ ದೇವರಾದ ಯೆಹೋವನ ಮುಂದೆ ನಿಮ್ಮ ಪಾಪಗಳನ್ನ ಒಪ್ಕೊಳ್ಳಿ. ಆತನ ಇಷ್ಟದ ತರ ಮಾಡಿ. ಬೇರೆ ದೇಶದ ಜನ್ರಿಂದ, ನೀವು ಮದುವೆ ಮಾಡ್ಕೊಂಡಿರೋ ಬೇರೆ ದೇಶದ ಆ ಸ್ತ್ರೀಯರಿಂದ ದೂರ ಇರಿ”+ ಅಂದ. 12 ಅದಕ್ಕೆ ಜನ್ರೆಲ್ಲ ಗಟ್ಟಿಯಾಗಿ ಹೀಗೆ ಉತ್ರ ಕೊಟ್ರು “ನೀನು ಹೇಳಿದ ಹಾಗೆ ಮಾಡೋದೇ ನಮ್ಮ ಕರ್ತವ್ಯ. 13 ಆದ್ರೆ ನಾವು ತುಂಬ ಜನ್ರಿದ್ದೀವಿ. ಇದು ಮಳೆಗಾಲ. ಹಾಗಾಗಿ ಹೊರಗೆ ನಿಲ್ಲೋಕೆ ಆಗಲ್ಲ. ನಮ್ಮಲ್ಲಿ ಹೆಚ್ಚಿನ ಜನ ಆ ಅಪರಾಧ ಮಾಡಿರೋದ್ರಿಂದ ಈ ವಿಷ್ಯವನ್ನ ಒಂದೆರಡು ದಿನದಲ್ಲಿ ಬಗೆಹರಿಸೋಕೆ ಆಗಲ್ಲ. 14 ಇಡೀ ಸಭೆಯನ್ನ ನಮ್ಮ ಅಧಿಕಾರಿಗಳು ಪ್ರತಿನಿಧಿಸೋಕೆ ಬಿಟ್ಟುಕೊಡಿ.+ ಅಕ್ಕಪಕ್ಕದ ದೇಶದ ಸ್ತ್ರೀಯರನ್ನ ಮದುವೆ ಆದವ್ರು ತಮ್ಮತಮ್ಮ ಪಟ್ಟಣದ ಹಿರಿಯರ ಜೊತೆ, ನ್ಯಾಯಾಧೀಶರ ಜೊತೆ ಯಾವಾಗ ಬರಬೇಕು ಅಂತ ಹೇಳಿ. ನಮ್ಮ ದೇವರು ಈ ವಿಷ್ಯದಲ್ಲಿ ನಮ್ಮ ಮೇಲೆ ಮಾಡ್ಕೊಂಡಿರೋ ಕೋಪ ಹೀಗೆ ತಣ್ಣಗಾಗ್ಲಿ.”
15 ಹಾಗಿದ್ರೂ ಅಸಾಹೇಲನ ಮಗ ಯೋನಾತಾನ, ತಿಕ್ವನ ಮಗ ಯೆಹ್ಜೆಯ ಇದನ್ನ ವಿರೋಧಿಸಿದ್ರು. ಜೊತೆಗೆ ಲೇವಿಯರಾದ ಮೆಷುಲ್ಲಾಮ ಮತ್ತು ಶಬ್ಬೆತೈ+ ಅವ್ರಿಗೆ ಬೆಂಬಲ ಕೊಟ್ರು. 16 ಆದ್ರೆ ಕೈದಿಗಳಾಗಿದ್ದು ವಾಪಸ್ ಬಂದಿದ್ದ ಜನ ಆ ತೀರ್ಮಾನವನ್ನ ಒಪ್ಕೊಂಡ್ರು. ಪುರೋಹಿತ ಎಜ್ರ, ತಂದೆಯ ಮನೆತನಗಳ ಕುಟುಂಬದ ಮುಖ್ಯಸ್ಥರು ಅಂದ್ರೆ ಯಾರ ಹೆಸ್ರು ಬರೆದಿತ್ತೋ ಅವರು ಈ ವಿಷ್ಯದ ವಿಚಾರಣೆ ಮಾಡೋಕೆ 10ನೇ ತಿಂಗಳ ಮೊದಲ್ನೇ ದಿನ ಪ್ರತ್ಯೇಕವಾಗಿ ಸೇರಿಬಂದ್ರು.17 ಬೇರೆ ದೇಶದ ಸ್ತ್ರೀಯರನ್ನ ಮದುವೆ ಮಾಡ್ಕೊಂಡಿದ್ದ ಎಲ್ಲ ಗಂಡಸ್ರ ವಿಚಾರಣೆಯನ್ನ ಮೊದಲ್ನೇ ತಿಂಗಳ ಮೊದಲ್ನೇ ದಿನದೊಳಗೆ ಮಾಡಿ ಮುಗಿಸಿದ್ರು. 18 ಆಗ ಅವ್ರಿಗೆ ಪುರೋಹಿತರ ಕೆಲವು ಗಂಡು ಮಕ್ಕಳು ಸಹ ಬೇರೆ ದೇಶದ ಸ್ತ್ರೀಯರನ್ನ ಮದುವೆ ಆಗಿದ್ದಾರೆ ಅಂತ ಗೊತ್ತಾಯ್ತು.+ ಇದ್ರಲ್ಲಿ ಯೆಹೋಚಾದಾಕನ ಮಗ ಯೇಷೂವನ+ ಗಂಡು ಮಕ್ಕಳು, ಅವನ ಸಹೋದರರು ಸೇರಿದ್ರು. ಅವ್ರ ಹೆಸ್ರುಗಳು ಏನಂದ್ರೆ ಮಾಸೇಯ, ಎಲೀಯೆಜರ, ಯಾರೀಬ್, ಗೆದಲ್ಯ. 19 ಅವರು ತಮ್ಮ ಹೆಂಡತಿಯರನ್ನ ಅವರ ದೇಶಕ್ಕೆ ಕಳಿಸಿಬಿಡ್ತೀವಂತ, ಪಾಪದ ಪ್ರಾಯಶ್ಚಿತ್ತವಾಗಿ ತಮ್ಮತಮ್ಮ ಹಿಂಡಿಂದ ಒಂದೊಂದು ಟಗರನ್ನ ಅರ್ಪಿಸ್ತೀವಂತ+ ಆಣೆ ಮಾಡಿದ್ರು.
20 ಪಾಪ ಮಾಡಿದವ್ರಲ್ಲಿ ಇವರು ಸಹ ಇದ್ರು: ಇಮ್ಮೇರನ ಗಂಡು ಮಕ್ಕಳಲ್ಲಿ+ ಹನಾನಿ ಜೆಬದ್ಯ, 21 ಹಾರಿಮನ ಗಂಡು ಮಕ್ಕಳಲ್ಲಿ+ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ. 22 ಪಷ್ಹೂರನ ಗಂಡು ಮಕ್ಕಳಲ್ಲಿ+ ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ, ನೆತನೇಲ್, ಯೋಜಾಬಾದ, ಎಲ್ಲಾಸಾ. 23 ಲೇವಿಯರಲ್ಲಿ ಯೋಜಾಬಾದ, ಶಿಮ್ಮಿ, ಕೇಲಾಯ (ಅಂದ್ರೆ ಕೆಲೀಟ), ಪೆತಹ್ಯ, ಯೆಹೂದ, ಎಲೀಯೆಜರ್. 24 ಗಾಯಕರಲ್ಲಿ ಎಲ್ಯಾಷೀಬ್. ಬಾಗಿಲು ಕಾಯೋರಲ್ಲಿ ಶಲ್ಲೂಮ, ಟೆಲೆಮ್, ಊರಿ.
25 ಇಸ್ರಾಯೇಲ್ಯರಲ್ಲಿ ಯಾರಂದ್ರೆ ಪರೋಷನ ಗಂಡು ಮಕ್ಕಳಲ್ಲಿ+ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮೀನ್, ಎಲ್ಲಾಜಾರ್, ಮಲ್ಕೀಯ, ಬೆನಾಯ. 26 ಏಲಾಮನ ಗಂಡು ಮಕ್ಕಳಲ್ಲಿ+ ಮತ್ತನ್ಯ, ಜೆಕರ್ಯ, ಯೆಹೀಯೇಲ್,+ ಅಬ್ದಿ, ಯೆರೇಮೋತ್, ಎಲೀಯ. 27 ಜತ್ತೂನ ಗಂಡು ಮಕ್ಕಳಲ್ಲಿ+ ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬಾದ, ಅಜೀಜಾ. 28 ಬೇಬೈಯ ಗಂಡು ಮಕ್ಕಳಲ್ಲಿ+ ಯೆಹೋಹಾನಾನ್, ಹನನ್ಯ, ಜಬೈ, ಅತ್ಲೈ. 29 ಬಾನಿಯ ಗಂಡು ಮಕ್ಕಳಲ್ಲಿ ಮೆಷುಲ್ಲಾಮ, ಮಲ್ಲೂಕ್, ಅದಾಯ, ಯಾಶೂಬ್, ಶೆಯಾಲ್, ರಾಮೋತ್. 30 ಪಹತ್-ಮೋವಾಬನ ಗಂಡು ಮಕ್ಕಳಲ್ಲಿ+ ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ, ಬಿನ್ನೂಯ್, ಮನಸ್ಸೆ. 31 ಹಾರಿಮನ ಗಂಡು ಮಕ್ಕಳಲ್ಲಿ+ ಎಲೀಯೆಜರ, ಇಷ್ಷೀಯ, ಮಲ್ಕೀಯ,+ ಶೆಮಾಯ, ಸಿಮೆಯೋನ್, 32 ಬೆನ್ಯಾಮೀನ್, ಮಲ್ಲೂಕ್, ಶೆಮರ್ಯ. 33 ಹಾಷುಮನ ಗಂಡು ಮಕ್ಕಳಲ್ಲಿ+ ಮತ್ತೆನೈ, ಮತ್ತತ್ತ, ಜಾಬಾದ, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿಮ್ಮಿ. 34 ಬಾನಿಯ ಗಂಡು ಮಕ್ಕಳಲ್ಲಿ ಮಾದೈ, ಅಮ್ರಾಮ್, ಊವೇಲ್, 35 ಬೆನಾಯ, ಬೇದೆಯ, ಕೆಲೂಹು, 36 ವನ್ಯಾಹ, ಮೆರೇಮೋತ್, ಎಲ್ಯಾಷೀಬ್, 37 ಮತ್ತನ್ಯ, ಮತ್ತೆನೈ, ಯಾಸೈ. 38 ಬಿನ್ನೂಯನ ಗಂಡು ಮಕ್ಕಳಲ್ಲಿ ಶಿಮ್ಮಿ, 39 ಶೆಲೆಮ್ಯ, ನಾತಾನ, ಅದಾಯ, 40 ಮಕ್ನದೆಬೈ, ಶಾಷೈ, ಶಾರೈ, 41 ಅಜರೇಲ್, ಶೆಲೆಮ್ಯ, ಶೆಮರ್ಯ, 42 ಶಲ್ಲೂಮ, ಅಮರ್ಯ, ಯೋಸೇಫ. 43 ನೆಬೋನ ಗಂಡು ಮಕ್ಕಳಲ್ಲಿ ಯೆಗೀಯೇಲ್, ಮತ್ತಿತ್ಯ, ಜಾಬಾದ, ಜೆಬೀನ, ಯದೈ, ಯೋವೇಲ, ಬೆನಾಯ. 44 ಇವ್ರೆಲ್ಲ ಅನ್ಯದೇಶದ ಸ್ತ್ರೀಯರನ್ನ ಮದುವೆ ಮಾಡ್ಕೊಂಡಿದ್ರು+ ಮತ್ತು ತಮ್ಮತಮ್ಮ ಹೆಂಡತಿಯರನ್ನ ಅವ್ರ ಮಕ್ಕಳ ಜೊತೆ ಅವ್ರವ್ರ ದೇಶಕ್ಕೆ ಕಳಿಸಿಬಿಟ್ರು.+
ಬಹುಶಃ, “ಆತನು ಯೆರೂಸಲೇಮಿನಲ್ಲಿದ್ದಾನೆ.”
ಅಕ್ಷ. “ಅವ್ರ ಊರಲ್ಲಿರೋ ಗಂಡಸ್ರು.”
ಅಕ್ಷ. “ಅವ್ರ ಕೈಗಳನ್ನ ಬಲಪಡಿಸಿದ್ರು.”
ಅಥವಾ “ನೆತಿನಿಮ್.” ಅಕ್ಷ. “ಕೊಡಲಾಗಿರೋ ಜನ.”
ಅಥವಾ “ಅವರು ಅಶುದ್ಧರಾಗಿದ್ರು ಮತ್ತು ಅವ್ರನ್ನ ಪುರೋಹಿತ ಸೇವೆಯಿಂದ ತೆಗೆದುಬಿಟ್ಟಿದ್ರು.”
ಅಥವಾ “ತಿರ್ಷಾತಾ,” ಇದು ಪ್ರಾಂತ್ಯದ ರಾಜ್ಯಪಾಲನಿಗಿದ್ದ ಪರ್ಶಿಯದ ಬಿರುದು.
ಈ ನಾಣ್ಯ ಸಾಮಾನ್ಯವಾಗಿ 8.4 ಗ್ರಾಂ ತೂಕದ ಪರ್ಶಿಯ ಚಿನ್ನದ ನಾಣ್ಯವಾಗಿದ್ದ ಡೇರಿಕಿಗೆ ಸಮಾನವಾಗಿದೆ ಅಂದ್ಕೊತಾರೆ. ಆದ್ರೆ ಇದು ಪವಿತ್ರಗ್ರಂಥದ ಗ್ರೀಕ್ ಭಾಗದಲ್ಲಿ ಹೇಳಿರೋ ದ್ರಾಕ್ಮಾ ಅಲ್ಲ. ಪರಿಶಿಷ್ಟ ಬಿ14 ನೋಡಿ.
ಪವಿತ್ರಗ್ರಂಥದ ಹೀಬ್ರು ಭಾಗದಲ್ಲಿ ಒಂದು ಮೈನಾ=570 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಇಸ್ರಾಯೇಲನ ಗಂಡು ಮಕ್ಕಳು.”
ಅಥವಾ “ತಾತ್ಕಾಲಿಕ ವಸತಿಗಳ.”
ಅಕ್ಷ. “ಹುಡುಕ್ತಿದ್ದೀವಿ.”
ಅಕ್ಷ. “ಕೈಗಳನ್ನ ಬಲಹೀನ ಮಾಡ್ತಾ.”
ಬಹುಶಃ, “ಮೊದ್ಲು ಅರಾಮಿಕ್ ಭಾಷೆಯಲ್ಲಿ ಬರೆದು ಆಮೇಲೆ ಭಾಷಾಂತರ ಮಾಡಿರಬಹುದು.”
ಮೂಲಪ್ರತಿಯಲ್ಲಿ ಎಜ್ರ 4:8ರಿಂದ 6:18ರ ತನಕ ಅರಾಮಿಕ್ ಭಾಷೆಯಲ್ಲಿ ಬರೆದಿತ್ತು.
ಅಥವಾ “ಯೂಫ್ರೆಟಿಸ್ ನದಿಯ ಪಶ್ಚಿಮಕ್ಕೆ.”
ಅಥವಾ “ಸಂಬಳ ಪಡೆದಿರೋದ್ರಿಂದ.”
ಅಥವಾ “ಅವ್ರ ಕೈಕೆಳಗಿದ್ದ ಜಿಲ್ಲೆಗಳಿಗೂ.”
ಬಹುಶಃ, “ಭಾಷಾಂತರ ಮಾಡಿ ಆಮೇಲೆ ಓದಲಾಯ್ತು.”
ಅಥವಾ “ಯೂಫ್ರೆಟಿಸ್ ನದಿಯ ಪಶ್ಚಿಮಕ್ಕಿರೋ.”
ಅಥವಾ “ಕಂಬಗಳನ್ನ ಹಾಕೋಕೆ.”
ಅಥವಾ “ಯೆಹೂದದ ಕೈಕೆಳಗಿದ್ದ ಜಿಲ್ಲೆಯಲ್ಲಿರೋ.”
ಅಥವಾ “ಕಂಬಗಳನ್ನ ಹಾಕೋಕೆ.”
ಅಥವಾ “ಮೇದ್ಯದ ಕೈಕೆಳಗಿದ್ದ ಜಿಲ್ಲೆಯಲ್ಲಿರೋ.”
ಸುಮಾರು 26.7 ಮೀ. (87.6 ಅಡಿ) ಪರಿಶಿಷ್ಟ ಬಿ14 ನೋಡಿ.
ಅಥವಾ “ಯೂಫ್ರೆಟೆಸ್ ನದಿಯ ಪಶ್ಚಿಮಕ್ಕಿರೋ.”
ಬಹುಶಃ, “ಕಸದ ತಿಪ್ಪೆ; ಸಗಣಿಯ ಕುಪ್ಪೆ.”
ಪರಿಶಿಷ್ಟ ಬಿ15 ನೋಡಿ.
ಅಥವಾ “ಸಮರ್ಪಣೆ.”
ಇದು ಪರ್ಶಿಯ ರಾಜನಾದ ಒಂದನೇ ದಾರ್ಯವೆಷನಿಗೆ ಸಿಕ್ಕಿದ ಬಿರುದು. ಯಾಕಂದ್ರೆ ಈ ಮುಂಚೆ ಅಶ್ಶೂರ್ಯರ ಪ್ರಾಂತ್ಯವಾಗಿದ್ದ ಸ್ಥಳವನ್ನ ಆ ಸಮಯದಲ್ಲಿ ಅವನು ಆಳ್ತಿದ್ದ.
ಅರ್ಥ “ಸಹಾಯ.”
ಅಥವಾ “ಬರಹಗಾರ.”
ಅಥವಾ “ಅದನ್ನ ನಕಲು ಮಾಡೋದ್ರಲ್ಲಿ ನಿಪುಣ.”
ಅಕ್ಷ. “ಇವನ ದೇವರಾದ ಯೆಹೋವನ ಕೈ ಇವನ ಮೇಲಿತ್ತು.”
ಅಥವಾ “ನೆತಿನಿಮ್.” ಅಕ್ಷ. “ಕೊಡಲಾಗಿರೋ ಜನ.”
ಅಕ್ಷ. “ದೇವ್ರ ಒಳ್ಳೇ ಹಸ್ತ ಅವನ ಮೇಲಿತ್ತು.”
ಅಕ್ಷ. “ಹೃದಯವನ್ನ ಸಿದ್ಧ ಮಾಡ್ಕೊಂಡಿದ್ದ.”
ಅಥವಾ “ಬರಹಗಾರನಾಗಿದ್ದ.”
ಅಥವಾ “ನಕಲು.”
ಮೂಲಪ್ರತಿಯಲ್ಲಿ ಎಜ್ರ 7:12ರಿಂದ 7:26ರ ತನಕ ಅರಾಮಿಕ್ ಭಾಷೆಯಲ್ಲಿ ಬರೆದಿತ್ತು.
ಅಥವಾ “ಬರಹಗಾರನಾಗಿರೋ.”
ಅಥವಾ “ಕೈಕೆಳಗಿದ್ದ ಜಿಲ್ಲೆಯಿಂದ.”
ಅಥವಾ “ಯೂಫ್ರೆಟಿಸ್ ನದಿಯ ಪಶ್ಚಿಮಕ್ಕಿರೋ.”
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಕೋರ್ ಗೋದಿ=ಸುಮಾರು 170 ಕೆಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಬತ್=22 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ನೆತಿನಿಮ್.” ಅಕ್ಷ. “ಕೊಡಲಾಗಿರೋ ಜನ.”
ಅಕ್ಷ. “ಯೆಹೋವನ ಹಸ್ತ ನನ್ನ ಮೇಲಿದೆ.”
ಅಥವಾ “ನೆತಿನಿಮ್.” ಅಕ್ಷ. “ಕೊಡಲಾಗಿರೋ ಜನ.”
ಅಥವಾ “ನೆತಿನಿಮ್.” ಅಕ್ಷ. “ಕೊಡಲಾಗಿರೋ ಜನ.”
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಡೇರಿಕ್ ಪರ್ಶಿಯದ ಒಂದು ಚಿನ್ನದ ನಾಣ್ಯವಾಗಿತ್ತು. ಪರಿಶಿಷ್ಟ ಬಿ14 ನೋಡಿ.
ಅಥವಾ “ಊಟದ ಕೋಣೆಗಳಲ್ಲಿ.”
ಅಥವಾ “ಯೂಫ್ರೆಟಿಸ್ ನದಿಯ ಪಶ್ಚಿಮಕ್ಕೆ.”
“ಸಾಮ್ರಾಜ್ಯದ ಸಂರಕ್ಷರು” ಅನ್ನೋ ಅರ್ಥವಿರೋ ಬಿರುದು. ಪರ್ಶಿಯ ಸಾಮ್ರಾಜ್ಯದ ಪ್ರಾಂತ್ಯಗಳ ರಾಜ್ಯಪಾಲರ ಬಗ್ಗೆ ಇಲ್ಲಿ ಹೇಳ್ತಿದೆ.
ಅಕ್ಷ. “ಭಯಪಡ್ತಿದ್ದ.”
ಅಥವಾ “ನಮ್ಮ ಮನೆಯೊಳಗೆ ಕರ್ಕೊಂಡು.”
ಪದವಿವರಣೆ ನೋಡಿ.
ಅಕ್ಷ. “ಭಯ ಪಡ್ತಿದ್ದವರು.”
ಅಥವಾ “ಊಟದ ಕೋಣೆಗೆ.”