ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಜ್ಞಾನೋಕ್ತಿ 1: 1-31: 31
  • ಜ್ಞಾನೋಕ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜ್ಞಾನೋಕ್ತಿ
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ

ಜ್ಞಾನೋಕ್ತಿ

1 ದಾವೀದನ ಮಗ+ ಇಸ್ರಾಯೇಲಿನ ರಾಜ+ ಆದ ಸೊಲೊಮೋನನ ನಾಣ್ಣುಡಿಗಳು.+

 2 ಇದ್ರಿಂದ ವ್ಯಕ್ತಿಯೊಬ್ಬ ವಿವೇಕ ಪಡಿತಾನೆ,+ ಶಿಸ್ತನ್ನ ಸ್ವೀಕರಿಸ್ತಾನೆ,

ಬುದ್ಧಿ ಮಾತನ್ನ ಅರ್ಥ ಮಾಡ್ಕೊಳ್ತಾನೆ.

 3 ತಿಳುವಳಿಕೆ ಕೊಡೋ ಶಿಸ್ತನ್ನ ಪಡ್ಕೊಳ್ತಾನೆ,+

ಆ ಶಿಸ್ತು ಅವನಿಗೆ ನ್ಯಾಯನೀತಿಯಿಂದ ನಡಿಯೋಕೆ,+ ಪ್ರಾಮಾಣಿಕವಾಗಿ ಇರೋಕೆ ಸಹಾಯ ಮಾಡುತ್ತೆ.

 4 ಈ ಗಾದೆಗಳು ಅನುಭವ ಇಲ್ಲದವ್ರನ್ನ ಜಾಣರಾಗಿ ಮಾಡುತ್ತೆ,+

ಯುವ ಜನ್ರಿಗೆ ಜ್ಞಾನ, ಬುದ್ಧಿ ಕೊಡುತ್ತೆ.+

 5 ಹೇಳೋ ಮಾತನ್ನ ಬುದ್ಧಿವಂತ ಕೇಳಿ ಕಲಿತಾನೆ,+

ಅರ್ಥ ಮಾಡ್ಕೊಳ್ಳೋ ವ್ಯಕ್ತಿ ಸರಿಯಾದ* ಮಾರ್ಗದರ್ಶನ ಪಡಿತಾನೆ.+

 6 ಅಂಥ ವ್ಯಕ್ತಿ ನಾಣ್ಣುಡಿ, ಗಾದೆ ಮಾತು,*

ಬುದ್ಧಿವಂತರು ಹೇಳೋ ಮಾತುಗಳನ್ನ ಅರ್ಥ ಮಾಡ್ಕೊಳ್ತಾನೆ, ಅವ್ರ ಒಗಟುಗಳನ್ನ ಬಿಡಿಸ್ತಾನೆ.+

 7 ಯೆಹೋವನ ಭಯನೇ* ಜ್ಞಾನದ ಆರಂಭ.+

ಮೂರ್ಖರು ವಿವೇಕ, ಶಿಸ್ತನ್ನ ಕೀಳಾಗಿ ನೋಡ್ತಾರೆ.+

 8 ನನ್ನ ಮಗನೇ, ಅಪ್ಪ ಕೊಡೋ ತರಬೇತಿಯನ್ನ ತಗೋ,+

ಅಮ್ಮ ಕಲಿಸುವಾಗ* ಕೇಳಿಸ್ಕೊ.+

 9 ಅವ್ರ ಮಾತು ನಿನ್ನ ತಲೆಗೆ ಸುಂದರವಾದ ಹೂವಿನ ಕಿರೀಟ.+

ನಿನ್ನ ಕೊರಳಿಗೆ ಅಂದವಾದ ಆಭರಣ.+

10 ನನ್ನ ಮಗನೇ, ಪಾಪಿಗಳ ಮೋಡಿಗೆ ಮರುಳಾಗಬೇಡ.+

11 ಅವರು ನಿನಗೆ “ನಮ್ಮ ಜೊತೆ ಬಾ.

ಕೊಲೆ ಮಾಡೋಕೆ ಹೊಂಚು ಹಾಕೋಣ,

ಅಡಗಿಕೊಂಡು, ಮೋಜಿಗಾಗಿ ಮುಗ್ಧ ಜನ್ರ ಮೇಲೆ ದಾಳಿ ಮಾಡೋಣ.

12 ಸಮಾಧಿ* ತರ ನಾವು ಅವ್ರನ್ನ ಜೀವಂತವಾಗಿ ನುಂಗಿ ಹಾಕೋಣ,

ಗುಂಡಿಗೆ ಹೋಗುವವ್ರ ತರ ಅವ್ರನ್ನ ಪೂರ್ತಿಯಾಗಿ ನುಂಗಿ ಬಿಡೋಣ.

13 ಅವ್ರ ಹಣ-ಆಸ್ತಿಯನ್ನೆಲ್ಲ ದೋಚೋಣ,

ಲೂಟಿ ಮಾಡಿ ನಮ್ಮ ಮನೆಗಳನ್ನ ತುಂಬಿಸೋಣ.

14 ನಮ್ಮ ಜೊತೆ ಸೇರಿಕೊ,

ಕದ್ದ ವಸ್ತುಗಳನ್ನ ಸಮವಾಗಿ ಹಂಚ್ಕೊಳ್ಳೋಣ” ಅಂತ ಹೇಳಿದ್ರೆ,

15 ನನ್ನ ಮಗನೇ, ಅವ್ರ ಹಿಂದೆ ಹೋಗಬೇಡ.

ಅವ್ರ ದಾರಿಯಿಂದ ನೀನು ದೂರ ಇರು.+

16 ಯಾಕಂದ್ರೆ ಅವ್ರ ಕಾಲುಗಳು ಕೆಟ್ಟ ವಿಷ್ಯಗಳನ್ನ ಮಾಡೋಕೆ ಓಡುತ್ತೆ.

ಅವರು ಕೊಲೆ ಮಾಡೋಕೆ ಕಾಯ್ತಾ ಇದ್ದಾರೆ.+

17 ಪಕ್ಷಿಯ ಕಣ್ಮುಂದೆನೇ ಬಲೆ ಬೀಸಿದ್ರೆ ಏನೂ ಪ್ರಯೋಜನ ಇಲ್ಲ.

18 ಪಾಪಿಗಳು ರಕ್ತ ಸುರಿಸೋಕೆ ಸಂಚು ಮಾಡ್ತಾರೆ,

ಬೇರೆಯವ್ರ ಪ್ರಾಣ ತೆಗಿಯೋಕೆ ಬಚ್ಚಿಟ್ಕೊಳ್ತಾರೆ.

19 ಅನ್ಯಾಯದಿಂದ ಲಾಭ ಮಾಡೋಕೆ ಈ ಎಲ್ಲ ದಾರಿ ಹಿಡಿತಾರೆ,

ಇದೇ ಅವ್ರ ಪ್ರಾಣಕ್ಕೆ ಅಪಾಯ ಆಗುತ್ತೆ.+

20 ನಿಜವಾದ ವಿವೇಕ+ ಬೀದಿಗಳಲ್ಲಿ ಕೂಗಿ ಹೇಳುತ್ತೆ+

ಅದು ಪಟ್ಟಣದ ಮುಖ್ಯಸ್ಥಳದಲ್ಲಿ* ಜಾಸ್ತಿ ಕೂಗುತ್ತೆ.+

21 ಜನಜಂಗುಳಿ ಇರೋ ಬೀದಿಗಳ ಮೂಲೆಗಳಲ್ಲಿ ಕೂಗಿ ಹೇಳುತ್ತೆ.

ಪಟ್ಟಣದ ಬಾಗಿಲುಗಳಲ್ಲಿ ಹೀಗೆ ಹೇಳುತ್ತೆ:+

22 “ಅನುಭವ ಇಲ್ಲದವ್ರೇ, ಇನ್ನೂ ಎಷ್ಟರ ತನಕ ಮೂರ್ಖತನವನ್ನ ಪ್ರೀತಿಸ್ತೀರ?

ಗೇಲಿ ಮಾಡುವವರೇ, ಇನ್ನೂ ಎಲ್ಲಿ ತನಕ ಬೇರೆಯವ್ರನ್ನ ಗೇಲಿ ಮಾಡ್ತಾ ಖುಷಿಪಡ್ತೀರ?

ಮೂರ್ಖರೇ, ಎಲ್ಲಿ ತನಕ ಜ್ಞಾನವನ್ನ ದ್ವೇಷಿಸ್ತೀರ?+

23 ನಾನು ತಿದ್ದುವಾಗ ಗಮನಕೊಡಿ, ಬದಲಾಗಿ.+

ಆಗ ನಾನು ನಿಮಗೆ ವಿವೇಕ* ಕೊಡ್ತೀನಿ,

ನನ್ನ ಮಾತುಗಳನ್ನ ಹೇಳ್ತೀನಿ.+

24 ನಾನು ನಿಮ್ಮನ್ನ ಕರೆದೆ, ಆದ್ರೆ ನೀವು ಕಿವಿಗೇ ಹಾಕೊಳ್ತಿಲ್ಲ,

ನನ್ನ ಕೈ ಚಾಚಿದೆ, ಆದ್ರೆ ಯಾರೂ ಗಮನಿಸೇ ಇಲ್ಲ.+

25 ನನ್ನ ಸಲಹೆಗಳನ್ನೆಲ್ಲ ಕೇಳಿನೂ ಕೇಳದ ಹಾಗೇ ಇದ್ದೀರ,

ನಾನು ತಿದ್ದಿದಾಗೆಲ್ಲ ತಿರಸ್ಕಾರ ಮಾಡ್ತಾನೇ ಇದ್ದೀರ.

26 ನಿಮ್ಮ ಮೇಲೆ ಕಷ್ಟ ಬಂದಾಗ ನಾನು ಸಹ ನಗ್ತೀನಿ,

ನೀವು ಭಯಪಡೋ ವಿಷ್ಯಗಳು ನಡೆದಾಗ ಗೇಲಿ ಮಾಡ್ತೀನಿ,+

27 ನೀವು ಹೆದರೋ ವಿಷ್ಯ ನಿಮ್ಮ ಕಡೆಗೆ ಚಂಡಮಾರುತದ ತರ ಬರುವಾಗ,

ಕಷ್ಟಗಳು ಸುಂಟರಗಾಳಿ ತರ ಸುತ್ಕೊಂಡಾಗ,

ನಿಮಗೆ ನೋವು, ತೊಂದ್ರೆ ಆದಾಗ ನಾನು ನಗ್ತೀನಿ.

28 ಆಗ ಅವರು ನನ್ನನ್ನ ಕರಿತಾನೇ ಇರ್ತಾರೆ, ಆದ್ರೆ ನಾನು ಕೇಳಿಸ್ಕೊಳ್ಳಲ್ಲ.

ಅವರು ನನ್ನನ್ನ ಎಲ್ಲ ಕಡೆ ಹುಡುಕ್ತಾರೆ, ನಾನು ಅವ್ರಿಗೆ ಸಿಗಲ್ಲ.+

29 ಯಾಕಂದ್ರೆ ಅವರು ಜ್ಞಾನವನ್ನ ದ್ವೇಷಿಸಿದ್ರು,+

ಯೆಹೋವನಿಗೆ ಭಯಪಡಲಿಲ್ಲ.+

30 ಅವರು ನನ್ನ ಸಲಹೆಯನ್ನ ತಳ್ಳಿಬಿಟ್ರು,

ನಾನು ಎಷ್ಟೇ ತಿದ್ದುಪಾಟು ಕೊಟ್ರೂ ಗೌರವ ಕೊಡಲಿಲ್ಲ.

31 ಹಾಗಾಗಿ ಅವ್ರಿಗೆ ತಮ್ಮ ಕೆಲಸಗಳಿಗೆ ತಕ್ಕ ಪ್ರತಿಫಲ ಸಿಗುತ್ತೆ,+

ಅವರು ಸಂಚು ಮಾಡಿದಕ್ಕೆ ಅವ್ರೇ ಅನುಭವಿಸ್ತಾರೆ.

32 ಅನುಭವ ಇಲ್ಲದವರು ಹಟ ಮಾಡಿದ್ರೆ ಅವ್ರ ಜೀವ ಹೋಗುತ್ತೆ,

ಮೂರ್ಖರ ಉಡಾಫೆ ಅವ್ರಿಗೆ ಉರ್ಲು.

33 ಆದ್ರೆ ನನ್ನ ಮಾತು ಕೇಳಿದವನು ಸುರಕ್ಷಿತವಾಗಿ ಇರ್ತಾನೆ,+

ಯಾವುದೇ ಆತಂಕ ಇಲ್ಲದೆ ಆರಾಮಾಗಿ ಇರ್ತಾನೆ.”+

2 ನನ್ನ ಮಗನೇ, ನನ್ನ ಮಾತನ್ನ ಕೇಳು,

ನನ್ನ ಆಜ್ಞೆಗಳನ್ನ ಆಸ್ತಿ ತರ ಅಮೂಲ್ಯವಾಗಿ ನೋಡು,*+

 2 ವಿವೇಕದ ಮಾತುಗಳನ್ನ ಕೇಳಿಸ್ಕೊ,+

ಸರಿ ಯಾವುದು ತಪ್ಪು ಯಾವುದು ಅಂತ ಗೊತ್ತಾಗಬೇಕಂದ್ರೆ* ನಿನ್ನ ಮನಸ್ಸು ಕೊಡು,+

 3 ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯಕ್ಕಾಗಿ ಬೇಡ್ಕೊ,+

ವಿವೇಚನಾ ಶಕ್ತಿಗಾಗಿ ಕೇಳ್ಕೋ,+

 4 ಅವುಗಳನ್ನ ಬೆಳ್ಳಿ ತರ ಹುಡುಕು,+

ನೆಲದಲ್ಲಿ ಬಚ್ಚಿಟ್ಟಿರೋ ನಿಧಿ ತರ ಹುಡುಕು,+

 5 ಆಗ ನಿನಗೆ ಯೆಹೋವನ ಭಯ ಅಂದ್ರೇನು ಅಂತ ಅರ್ಥ ಆಗುತ್ತೆ,+

ದೇವರ ಬಗ್ಗೆ ಹೆಚ್ಚು ಕಲಿತೀಯ.+

 6 ಯಾಕಂದ್ರೆ ಯೆಹೋವನೇ ವಿವೇಕ ಕೊಡ್ತಾನೆ,+

ಜ್ಞಾನ, ತಿಳುವಳಿಕೆಯ ಮಾತುಗಳು ಆತನ ಬಾಯಿಂದಾನೇ ಬರುತ್ತೆ.

 7 ಆತನು ತನ್ನ ಭಂಡಾರದಿಂದ ಪ್ರಾಮಾಣಿಕರಿಗೆ ವಿವೇಕ* ಕೊಡ್ತಾನೆ,

ತಪ್ಪು ಮಾಡದವ್ರಿಗೆ ಗುರಾಣಿಯಾಗಿ ಇರ್ತಾನೆ.+

 8 ನ್ಯಾಯದ ದಾರಿಯಲ್ಲಿ ನಡಿಯುವವ್ರಿಗೆ ಕಾವಲಾಗಿ ಇರ್ತಾನೆ,

ತನ್ನ ನಿಷ್ಠಾವಂತರ ದಾರಿಯನ್ನ ಕಾದುಕಾಪಾಡ್ತಾನೆ.+

 9 ಆಗ ನಿನಗೆ ನ್ಯಾಯ-ನೀತಿಯಿಂದ, ಭೇದಭಾವ ಮಾಡದೆ ಇರೋದು ಅಂದ್ರೇನು ಅಂತ ಅರ್ಥ ಆಗುತ್ತೆ,

ಯಾವುದು ಒಳ್ಳೇ ದಾರಿ ಅಂತ ಗೊತ್ತಾಗುತ್ತೆ.+

10 ವಿವೇಕ ನಿನ್ನ ಹೃದಯದ ಒಳಗೆ ಹೋದಾಗ,+

ಜ್ಞಾನದಿಂದ ನಿನ್ನ ಪ್ರಾಣಕ್ಕೆ ಖುಷಿಯಾದಾಗ,+

11 ಬುದ್ಧಿ ನಿನಗೆ ಕಾವಲಾಗಿರುತ್ತೆ,+

ವಿವೇಚನಾ ಶಕ್ತಿ ನಿನ್ನನ್ನ ಕಾದುಕಾಪಾಡುತ್ತೆ.

12 ನೀನು ಕೆಟ್ಟ ದಾರಿಗೆ ಹೋಗದ ಹಾಗೆ ಅವು ಕಾಪಾಡುತ್ತೆ,

ಬಾಯಿಗೆ ಬಂದದ್ದನ್ನ ಮಾತಾಡದ ಹಾಗೆ ನಿನ್ನನ್ನ ಕಾಪಾಡುತ್ತೆ.+

13 ಸರಿ ದಾರಿ ಬಿಟ್ಟು ಕೆಟ್ಟ ದಾರಿಯಲ್ಲಿರೋ ಜನ್ರಿಂದ,+

ನಿನ್ನನ್ನ ರಕ್ಷಿಸುತ್ತೆ.

14 ಕೆಟ್ಟ ಕೆಲಸ ಮಾಡಿ ಖುಷಿ ಪಡೋ,

ಅಸಭ್ಯವಾಗಿ ಮಾತಾಡೋ ಜನ್ರಿಂದ ನಿನ್ನನ್ನ ಕಾಪಾಡುತ್ತೆ.

15 ಕೆಟ್ಟವರು ಅಡ್ಡ ದಾರಿಯಲ್ಲಿ ನಡಿತಾರೆ,

ಬೇರೆಯವ್ರಿಗೆ ಮೋಸ ಮಾಡ್ತಾನೇ ಇರ್ತಾರೆ.

16 ವಿವೇಕ ನಿನ್ನನ್ನ ನಡತೆಗೆಟ್ಟ* ಹೆಂಗಸಿಂದ ಕಾಪಾಡುತ್ತೆ,

ನಾಚಿಕೆಗೆಟ್ಟ* ಹೆಂಗಸಿನ ಮೋಡಿಯ ಮಾತಿಗೆ ಮರಳಾಗದ ಹಾಗೆ ತಪ್ಪಿಸುತ್ತೆ.+

17 ಅವಳು ತನ್ನ ಯೌವನದ ಆಪ್ತ ಗೆಳೆಯನನ್ನ* ಬಿಟ್ಟುಬಿಟ್ಟಿದ್ದಾಳೆ.+

ತನ್ನ ದೇವರ ಜೊತೆ ಮಾಡ್ಕೊಂಡ ಒಪ್ಪಂದವನ್ನ ಮರೆತುಬಿಟ್ಟಿದ್ದಾಳೆ.

18 ನೀನು ಅವಳ ಮನೆಗೆ ಹೋದ್ರೆ ಮರಣದ ಬಾಯಿಗೆ ಹೋಗ್ತಿಯ.

ಅವಳ ಮನೆಯ ದಾರಿಗಳು ಸಮಾಧಿಗೆ ನಡಿಸುತ್ತೆ.+

19 ಅವಳ ಜೊತೆ ಸಂಬಂಧ ಇಟ್ಕೊಳ್ಳೋ* ಗಂಡಸ್ರು ವಾಪಸ್‌ ಬರಲ್ಲ,

ಜೀವದ ದಾರಿಯಲ್ಲಿ ಅವ್ರಿಗೆ ಮತ್ತೆ ನಡಿಯೋಕೆ ಆಗಲ್ಲ.+

20 ಹಾಗಾಗಿ ಒಳ್ಳೇ ಜನ್ರು ನಡಿಯೋ ದಾರಿಯಲ್ಲಿ ನಡಿ.

ನೀತಿವಂತರು ಹೋಗೋ ದಾರಿಯನ್ನ ಬಿಟ್ಟುಬರಬೇಡ.+

21 ಯಾಕಂದ್ರೆ ಒಳ್ಳೆಯವರು* ಮಾತ್ರ ಭೂಮಿಯಲ್ಲಿ ಇರ್ತಾರೆ,

ತಪ್ಪು ಮಾಡದವರು* ಉಳಿತಾರೆ.+

22 ಆದ್ರೆ ಕೆಟ್ಟವರು ಭೂಮಿ ಮೇಲಿಂದ ನಾಶ ಆಗ್ತಾರೆ,+

ಮೋಸಗಾರರನ್ನ ದೇವರು ಕಿತ್ತು ಎಸಿತಾನೆ.+

3 ನನ್ನ ಮಗನೇ, ನಾನು ಕಲಿಸೋದನ್ನ* ಮರಿಬೇಡ,

ನನ್ನ ಆಜ್ಞೆಗಳನ್ನ ಮನಸಾರೆ ಪಾಲಿಸು.

 2 ಆಗ ನೀನು ಜಾಸ್ತಿ ವರ್ಷ ಬದುಕ್ತೀಯ,

ನೆಮ್ಮದಿಯಾಗಿ ಇರ್ತಿಯ.+

 3 ಶಾಶ್ವತ ಪ್ರೀತಿ, ಸತ್ಯವನ್ನ ಬಿಟ್ಟುಬಿಡಬೇಡ.+

ಅವುಗಳನ್ನ ನಿನ್ನ ಕೊರಳಿಗೆ ಸುಂದರ ಸರದ ಹಾಗೆ ಕಟ್ಕೊ,

ನಿನ್ನ ಹೃದಯದ ಹಲಗೆ ಮೇಲೆ ಬರ್ಕೊ.+

 4 ಆಗ ದೇವರಿಗೆ, ಮನುಷ್ಯರಿಗೆ ಖುಷಿ ಆಗುತ್ತೆ,

ನಿನಗೆ ನಿಜವಾಗ್ಲೂ ತುಂಬ ತಿಳುವಳಿಕೆ* ಇದೆ ಅಂತ ಅವರು ಒಪ್ಕೊಳ್ತಾರೆ.+

 5 ಪೂರ್ಣ ಹೃದಯದಿಂದ ಯೆಹೋವನ ಮೇಲೆ ನಂಬಿಕೆ ಇಡು,+

ನಿನ್ನ ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ.+

 6 ಅದನ್ನ ಮನಸ್ಸಲ್ಲಿ ಇಟ್ಕೊಂಡು ಎಲ್ಲ ಕೆಲಸ ಮಾಡು,+

ಆಗ ದೇವರು ನಿನಗೆ ಸರಿ ದಾರಿ ತೋರಿಸ್ತಾನೆ.+

 7 ನೀನೇ ತುಂಬ ಬುದ್ಧಿವಂತ ಅಂದ್ಕೊಳ್ಳಬೇಡ.+

ಯೆಹೋವನಿಗೆ ಭಯಪಡು, ಕೆಟ್ಟದು ಮಾಡಬೇಡ.

 8 ಆಗ ಆರೋಗ್ಯವಾಗಿ ಇರ್ತಿಯ,

ನಿನ್ನ ಮೂಳೆಗಳಿಗೆ ಹೊಸ ಬಲ ಸಿಗುತ್ತೆ.

 9 ನಿನ್ನ ಬೆಲೆ ಬಾಳೋ ವಸ್ತುಗಳಿಂದ ಯೆಹೋವನನ್ನ ಸನ್ಮಾನಿಸು,+

ನಿನ್ನ ಬೆಳೆಯ* ಮೊದಲ* ಫಲದಿಂದ ಆತನನ್ನ ಗೌರವಿಸು.+

10 ಆಗ ನಿನ್ನ ಗೋಡೌನ್‌ಗಳು ತುಂಬಿ ತುಳುಕುತ್ತೆ,+

ನಿನ್ನ ದ್ರಾಕ್ಷಿತೊಟ್ಟಿಗಳಲ್ಲಿ ಹೊಸ ದ್ರಾಕ್ಷಾಮದ್ಯ ತುಂಬಿ ಹರಿಯುತ್ತೆ.

11 ನನ್ನ ಮಗನೇ, ಯೆಹೋವ ಶಿಸ್ತು ಕೊಡುವಾಗ ಬೇಡ ಅನ್ನಬೇಡ,+

ಆತನು ತಿದ್ದುವಾಗ ಬೇಜಾರು ಮಾಡ್ಕೊಳ್ಳಬೇಡ.+

12 ಅಪ್ಪ ತಾನು ಪ್ರೀತಿಸೋ ಮಗನನ್ನ ತಿದ್ದೋ ತರ,+

ಯೆಹೋವ ಯಾರನ್ನ ಪ್ರೀತಿಸ್ತಾನೋ ಅವ್ರನ್ನೇ ತಿದ್ದುತ್ತಾನೆ.+

13 ವಿವೇಕ ಪಡ್ಕೊಳ್ಳುವವನು,+

ವಿವೇಚನಾ ಶಕ್ತಿಯನ್ನ ಸಂಪಾದಿಸುವವನು ಖುಷಿಯಾಗಿ ಇರ್ತಾನೆ.

14 ಬೆಳ್ಳಿ ಪಡಿಯೋದಕ್ಕಿಂತ ವಿವೇಕ ಪಡಿಯೋದು ಒಳ್ಳೆದು,

ಚಿನ್ನ ಪಡಿಯೋದಕ್ಕಿಂತ ವಿವೇಕ ಸಂಪಾದಿಸೋದು* ಒಳ್ಳೆದು.+

15 ವಿವೇಕಕ್ಕೆ ಹವಳಕ್ಕಿಂತ* ಬೆಲೆ ಜಾಸ್ತಿ,

ನೀನು ಆಸೆಪಡೋ ಯಾವುದೂ ಅದಕ್ಕೆ ಸಮವಲ್ಲ.

16 ಅದ್ರ ಬಲಗೈಯಲ್ಲಿ ತುಂಬ ಆಯಸ್ಸಿದೆ,

ಅದ್ರ ಎಡಗೈಯಲ್ಲಿ ಆಸ್ತಿ, ಅಂತಸ್ತು ಇದೆ.

17 ವಿವೇಕದ ದಾರಿಯಲ್ಲಿ ಹೋದ್ರೆ ಸಂತೋಷ ಸಿಗುತ್ತೆ,

ಶಾಂತಿ ಸಮಾಧಾನ ಇರುತ್ತೆ.+

18 ವಿವೇಕ ಹಿಡ್ಕೊಳ್ಳುವವನಿಗೆ ಅದು ಜೀವದ ಮರ ಆಗಿರುತ್ತೆ,

ಅದನ್ನ ಗಟ್ಟಿಯಾಗಿ ಹಿಡ್ಕೊಳ್ಳುವವನು ಸಂತೋಷವಾಗಿ ಇದ್ದಾನೆ ಅಂತ ಬೇರೆಯವ್ರಿಗೆ ಗೊತ್ತಾಗುತ್ತೆ.+

19 ಯೆಹೋವ ವಿವೇಕದಿಂದ ಭೂಮಿಗೆ ಅಡಿಪಾಯ ಹಾಕಿದ್ದಾನೆ,+

ವಿವೇಚನಾ ಶಕ್ತಿಯಿಂದ ಆಕಾಶವನ್ನ ಗಟ್ಟಿಯಾಗಿ ನಿಲ್ಲಿಸಿದ್ದಾನೆ.+

20 ಆತನ ಜ್ಞಾನದಿಂದ ಆಳವಾದ ನೀರು ಎರಡು ಭಾಗ ಆಯ್ತು,

ಮೋಡ ಕವಿದ ಆಕಾಶದಿಂದ ಇಬ್ಬನಿ ಬಿತ್ತು.+

21 ನನ್ನ ಮಗನೇ, ಇದನ್ನೆಲ್ಲ* ನಿನ್ನ ಮನಸ್ಸಲ್ಲಿ ಇಟ್ಕೊ,

ವಿವೇಕವನ್ನ,* ಯೋಚ್ನೆ ಮಾಡೋ ಶಕ್ತಿಯನ್ನ ಕಾಪಾಡ್ಕೊ.

22 ಅವು ನಿನಗೆ ಜೀವ ಕೊಡುತ್ತೆ,

ನಿನ್ನ ಕತ್ತಿಗೆ ಅಲಂಕಾರ ಆಗಿರುತ್ತೆ.

23 ಆಗ ನೀನು ನಿನ್ನ ದಾರಿಯಲ್ಲಿ ಸುರಕ್ಷಿತವಾಗಿ ನಡಿತೀಯ,

ನಿನ್ನ ಕಾಲುಗಳು ಯಾವತ್ತೂ ಎಡವಲ್ಲ.+

24 ಭಯ ಇಲ್ಲದೆ ಮಲಗಿರ್ತಿಯ,+

ಸುಖವಾಗಿ ನಿದ್ದೆ ಮಾಡ್ತೀಯ.+

25 ಅಚಾನಕ್ಕಾಗಿ ಕಷ್ಟ ಬಂದ್ರೂ ನೀನು ಹೆದರಲ್ಲ,+

ಕೆಟ್ಟವನ ಮೇಲೆ ಬರೋ ಬಿರುಗಾಳಿಗೂ ನೀನು ಅಂಜಲ್ಲ.+

26 ಯಾಕಂದ್ರೆ ನಿನಗೆ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇದೆ,+

ನಿನ್ನ ಕಾಲುಗಳು ಉರುಲಿಗೆ ಸಿಕ್ಕಿಹಾಕೊಳ್ಳದ ಹಾಗೆ ಆತನು ನೋಡ್ಕೊಳ್ತಾನೆ.+

27 ನಿನ್ನ ಕೈಯಿಂದ ಒಳ್ಳೇದು ಮಾಡೋಕೆ ಆದ್ರೆ ಖಂಡಿತ ಮಾಡು,

ಅಗತ್ಯ ಇರುವವ್ರಿಗೆ ಒಳ್ಳೇದು ಮಾಡದೇ ಇರಬೇಡ.+

28 ಅಕ್ಕಪಕ್ಕದ ಮನೆಯವ್ರಿಗೆ ನಿನ್ನಿಂದ ಏನಾದ್ರೂ ಕೊಡೋಕಾದ್ರೆ,

“ಆಮೇಲೆ ಬಾ! ನಾಳೆ ಕೊಡ್ತೀನಿ” ಅಂತ ಹೇಳಬೇಡ.

29 ಪಕ್ಕದ ಮನೆಯವನು ನಿನ್ನ ಮೇಲೆ ನಂಬಿಕೆ ಇಟ್ಟು ವಾಸ ಮಾಡ್ತಾ ಇರುವಾಗ,+

ಅವನಿಗೆ ಹಾನಿ ಮಾಡೋಕೆ ಪಿತೂರಿ ಮಾಡಬೇಡ.

30 ಒಬ್ಬ ವ್ಯಕ್ತಿ ನಿನ್ನ ವಿರುದ್ಧ ಏನೂ ಮಾಡಿರದಿದ್ರೆ,

ಕಾಲು ಕೆರ್ಕೊಂಡು ಜಗಳಕ್ಕೆ ಹೋಗಬೇಡ.+

31 ಕ್ರೂರಿಯನ್ನ ನೋಡಿ ಹೊಟ್ಟೆಕಿಚ್ಚುಪಡಬೇಡ,+

ಅವನ ತರ ನಡ್ಕೊಳ್ಳಬೇಡ.

32 ಯಾಕಂದ್ರೆ ಯೆಹೋವ ಮೋಸಗಾರನನ್ನ* ಇಷ್ಟಪಡಲ್ಲ,+

ಆದ್ರೆ ಆತನು ಪ್ರಾಮಾಣಿಕನ ಆಪ್ತ ಸ್ನೇಹಿತ.+

33 ಕೆಟ್ಟವನ ಮನೆ ಮೇಲೆ ಯೆಹೋವನ ಶಾಪ ಇರುತ್ತೆ,+

ಆದ್ರೆ ನೀತಿವಂತನ ಮನೆಯನ್ನ ಆತನು ಆಶೀರ್ವದಿಸ್ತಾನೆ.+

34 ಯಾಕಂದ್ರೆ ಆತನು ಗೇಲಿ ಮಾಡುವವ್ರನ್ನ ನೋಡಿ ನಗ್ತಾನೆ,+

ಆದ್ರೆ ಸೌಮ್ಯ ಸ್ವಭಾವದವ್ರಿಗೆ ದಯೆ ತೋರಿಸ್ತಾನೆ.+

35 ವಿವೇಕಿಗಳಿಗೆ ದೇವರಿಂದ ಸಿಗೋ ಆಸ್ತಿ ಗೌರವ,

ಆದ್ರೆ ಮೂರ್ಖರಿಗೆ ಸಿಗೋ ಆಸ್ತಿ ಅವಮಾನ.+

4 ನನ್ನ ಮಕ್ಕಳೇ, ಅಪ್ಪ ಕೊಡೋ ಶಿಸ್ತನ್ನ ಕೇಳಿ,+

ಶ್ರದ್ಧೆಯಿಂದ ಗಮನಕೊಟ್ಟು ವಿವೇಚನೆ ಪಡ್ಕೊಳ್ಳಿ.

 2 ಯಾಕಂದ್ರೆ ನಾನು ನಿಮಗೆ ಒಳ್ಳೆ ಸಲಹೆಗಳನ್ನ ಕೊಡ್ತೀನಿ.

ನನ್ನ ಮಾತನ್ನ* ತಳ್ಳಿಬಿಡಬೇಡಿ.+

 3 ನನ್ನ ಅಪ್ಪನಿಗೆ ನಾನು ಒಳ್ಳೇ ಮಗನಾಗಿದ್ದೆ,+

ನನ್ನ ಅಮ್ಮನಿಗೆ ಮುದ್ದಿನ ಮಗನಾಗಿದ್ದೆ.+

 4 ನನ್ನ ಅಪ್ಪ ನನಗೆ ಕಲಿಸುವಾಗ ಹೀಗೆ ಹೇಳಿದ: “ನಿನ್ನ ಮನಸ್ಸಲ್ಲಿ ನನ್ನ ಮಾತುಗಳನ್ನ ಗಟ್ಟಿಯಾಗಿ ಹಿಡ್ಕೊ.+

ನನ್ನ ಆಜ್ಞೆಗಳನ್ನ ಪಾಲಿಸಿ ಜಾಸ್ತಿ ವರ್ಷ ಬದುಕು.+

 5 ವಿವೇಕವನ್ನ ಸಂಪಾದಿಸು, ವಿವೇಚನೆಯನ್ನ ಗಳಿಸು.+

ನನ್ನ ಮಾತುಗಳನ್ನ ಮರಿಬೇಡ, ಅದ್ರಿಂದ ದೂರ ಹೋಗಬೇಡ.

 6 ವಿವೇಕವನ್ನ ಬಿಟ್ಟುಬಿಡಬೇಡ, ಅದನ್ನ ಪ್ರೀತಿಸು,

ಅದು ನಿನ್ನನ್ನ ಕಾಪಾಡುತ್ತೆ.

 7 ವಿವೇಕ ತುಂಬಾ ಮುಖ್ಯ,+ ಹಾಗಾಗಿ ಅದನ್ನ ಪಡ್ಕೊ.

ನೀನು ಏನೇ ಸಂಪಾದಿಸಿದ್ರೂ ವಿವೇಚನೆಯನ್ನ ಸಂಪಾದಿಸೋಕೆ ಮರಿಲೇಬೇಡ.+

 8 ಅದನ್ನ ಬಂಗಾರದ ಹಾಗೆ ನೋಡ್ಕೊ, ಅದು ನಿನ್ನನ್ನ ಮೇಲೆ ಏರಿಸುತ್ತೆ.+

ಅದನ್ನ ಅಪ್ಕೊ, ಅದು ನಿನಗೆ ಕೀರ್ತಿ ತರುತ್ತೆ.+

 9 ಅದು ನಿನ್ನ ತಲೆಗೆ ಹೂವಿನ ಸುಂದರ ಕಿರೀಟ ಇಡುತ್ತೆ,

ನಿನಗೆ ಅಂದದ ಕಿರೀಟ ಇಟ್ಟು ನಿನ್ನ ಚಂದ ಹೆಚ್ಚಿಸುತ್ತೆ.

10 ನನ್ನ ಮಗನೇ, ಕೇಳು, ನನ್ನ ಮಾತುಗಳನ್ನ ಪಾಲಿಸು.

ಆಗ ನೀನು ಜಾಸ್ತಿ ವರ್ಷ ಸಂತೋಷವಾಗಿ ಬದುಕ್ತಿಯ.+

11 ವಿವೇಕದ ದಾರಿಯಲ್ಲಿ ನಡಿಯೋಕೆ ನಿನಗೆ ಕಲಿಸ್ತೀನಿ,+

ಒಳ್ಳೇ* ದಾರಿ ತೋರಿಸ್ತೀನಿ.+

12 ನೀನು ನಡಿಯುವಾಗ ನಿನ್ನ ಹೆಜ್ಜೆಗೆ ಅಡಚಣೆ ಆಗಲ್ಲ,

ನೀನು ಓಡುವಾಗ ಬೀಳಲ್ಲ.

13 ಶಿಸ್ತನ್ನ ಗಟ್ಟಿಯಾಗಿ ಹಿಡ್ಕೊ, ಅದನ್ನ ಬಿಡಬೇಡ.+

ಅದನ್ನ ಕಾಪಾಡ್ಕೊ, ಯಾಕಂದ್ರೆ ಅದು ನಿನಗೆ ಜೀವ.+

14 ಕೆಟ್ಟವರ ದಾರಿಯಲ್ಲಿ ಕಾಲು ಇಡಬೇಡ,

ಅವ್ರ ದಾರಿಯಲ್ಲಿ ನಡಿಬೇಡ.+

15 ಅದ್ರಿಂದ ದೂರ ಇರು, ಅದ್ರಲ್ಲಿ ಹೋಗಬೇಡ,+

ಪಕ್ಕಕ್ಕೆ ಸರಿದು, ಮುಂದೆ ಹೋಗು.+

16 ಕೆಟ್ಟದ್ದನ್ನ ಮಾಡದಿದ್ರೆ ಅವ್ರಿಗೆ ನಿದ್ದೆ ಬರಲ್ಲ.

ಬೇರೆಯವ್ರನ್ನ ಬೀಳಿಸದಿದ್ರೆ ಅವ್ರಿಗೆ ನಿದ್ದೆ ಹತ್ತಲ್ಲ.

17 ಕೆಟ್ಟ ಕೆಲಸನೇ ಅವ್ರಿಗೆ ಊಟ,

ಹಿಂಸೆನೇ ದ್ರಾಕ್ಷಾಮದ್ಯ.

18 ಆದ್ರೆ ನೀತಿವಂತನ ದಾರಿ ಬೆಳಿಗ್ಗೆ ಕಾಣೋ ಕಿರಣಗಳ ತರ ಹೊಳೆಯುತ್ತೆ,

ಮಟಮಟ ಮಧ್ಯಾಹ್ನ ಆಗ್ತಾ ಆ ಬೆಳಕು ಹೆಚ್ಚಾಗ್ತಾನೇ ಹೋಗುತ್ತೆ.+

19 ಕೆಟ್ಟವ್ರ ದಾರಿ ಕತ್ತಲೆ ತರ,

ಯಾವುದು ಎಡವಿಸುತ್ತೆ ಅಂತ ಅವ್ರಿಗೆ ಗೊತ್ತಾಗಲ್ಲ.

20 ನನ್ನ ಮಗನೇ, ನನ್ನ ಮಾತುಗಳಿಗೆ ಗಮನಕೊಡು.

ನನ್ನ ಮಾತುಗಳನ್ನ ಚೆನ್ನಾಗಿ ಕೇಳು.

21 ಅವುಗಳನ್ನ ನಿನ್ನ ಮನಸ್ಸಲ್ಲಿ ಇಟ್ಕೊ,

ನಿನ್ನ ಹೃದಯದಲ್ಲಿ ಕಾಪಾಡ್ಕೊ.+

22 ಯಾಕಂದ್ರೆ ಅವುಗಳನ್ನ ಹುಡುಕುವವ್ರಿಗೆ ಜೀವ ಸಿಗುತ್ತೆ,+

ಅವ್ರ ಇಡೀ ದೇಹ ಆರೋಗ್ಯವಾಗಿರುತ್ತೆ.

23 ಎಲ್ಲಕ್ಕಿಂತ ಮುಖ್ಯವಾಗಿ ನಿನ್ನ ಹೃದಯ ಕಾಪಾಡ್ಕೊ.+

ಯಾಕಂದ್ರೆ ನಿನಗೆ ಜೀವ ಸಿಗುತ್ತಾ ಇಲ್ವಾ ಅನ್ನೋದು ಅದ್ರ ಮೇಲೆ ಹೊಂದ್ಕೊಂಡಿದೆ.

24 ಕೊಂಕು ಮಾತಿಂದ ದೂರ ಇರು,+

ಮೋಸದ ಮಾತುಗಳನ್ನ ಆಡಬೇಡ.

25 ನಿನ್ನ ಕಣ್ಣುಗಳು ಅತ್ತಿತ್ತ ತಿರುಗದಿರಲಿ,

ನೇರವಾಗಿ ಮುಂದೆ ನೋಡಲಿ.+

26 ನಿನ್ನ ದಾರಿಯಲ್ಲಿರೋ ಅಡೆತಡೆಗಳನ್ನ ತೆಗೆದುಹಾಕು,*+

ಧೈರ್ಯವಾಗಿ ಹೆಜ್ಜೆ ಇಡ್ತಾ ಮುಂದೆ ಹೋಗು.

27 ಎಡಕ್ಕೆ, ಬಲಕ್ಕೆ ತಿರುಗಬೇಡ.+

ಕೆಟ್ಟ ದಾರಿಯಲ್ಲಿ ಕಾಲು ಇಡಬೇಡ.

5 ನನ್ನ ಮಗನೇ, ನಾನು ಹೇಳೋ ವಿವೇಕದ ಮಾತುಗಳನ್ನ ಕೇಳು.

ವಿವೇಚನಾ ಶಕ್ತಿ ಬಗ್ಗೆ ನಾನು ಕಲಿಸೋದನ್ನ ಶ್ರದ್ಧೆಯಿಂದ ಕೇಳಿಸ್ಕೊ.+

 2 ಆಗ ನೀನು ನಿನ್ನ ಬುದ್ಧಿಯನ್ನ ಕಾಪಾಡ್ಕೊಳ್ತೀಯ.

ನಿನ್ನ ತುಟಿಗಳು ಸತ್ಯಾನೇ ಹೇಳುತ್ತೆ.+

 3 ನಡತೆಗೆಟ್ಟ* ಹೆಂಗಸಿನ ಮಾತು ಜೇನಿನ ಹಾಗೆ ಸಿಹಿ,+

ಅವಳ ಮಾತು ಎಣ್ಣೆಗಿಂತ ನಯ.+

 4 ಆದ್ರೆ ಕೊನೇಲಿ, ಅವಳು ಕಹಿ ಗಿಡದ* ಹಾಗೆ,+

ಇಬ್ಬಾಯಿಕತ್ತಿ ತರ ಹರಿತ.+

 5 ಅವಳ ಕಾಲು ಸಾವಿನ ಹತ್ರ ಓಡುತ್ತೆ.

ಅವಳ ಹೆಜ್ಜೆ ನೇರವಾಗಿ ಸ್ಮಶಾನಕ್ಕೆ* ಕರ್ಕೊಂಡು ಹೋಗುತ್ತೆ.

 6 ಜೀವ ಕೊಡೋ ದಾರಿ ಬಗ್ಗೆ ಅವಳು ಸ್ವಲ್ಪನೂ ಯೋಚಿಸಲ್ಲ.

ಅವಳ ಕಾಲು ಎಲ್ಲೆಲ್ಲೊ ಅಲೆಯುತ್ತೆ, ಅವು ಎಲ್ಲಿಗೆ ಕರ್ಕೊಂಡು ಹೋಗುತ್ತೆ ಅಂತ ಅವಳಿಗೆ ಗೊತ್ತಿಲ್ಲ.

 7 ಹಾಗಾಗಿ ನನ್ನ ಮಗನೇ,* ನನ್ನ ಮಾತು ಕೇಳು.

ನಾನು ಹೇಳೋ ವಿಷ್ಯಗಳನ್ನ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟುಬಿಡಬೇಡ.

 8 ಅವಳಿಂದ ದೂರ ಇರು,

ಅವಳ ಮನೆ ಬಾಗಿಲ ಹತ್ರನೂ ಹೋಗಬೇಡ.+

 9 ಹಾಗೆ ಹೋದ್ರೆ ನಿನಗಿರೋ ಒಳ್ಳೇ ಹೆಸ್ರು ಹಾಳಾಗುತ್ತೆ,+

ಇಡೀ ಜೀವನ ನೀನು ಕಷ್ಟಪಡಬೇಕಾಗುತ್ತೆ.+

10 ನಿನ್ನ ಆಸ್ತಿಪಾಸ್ತಿ ಅಪರಿಚಿತರ ಪಾಲಾಗುತ್ತೆ,+

ಬೆವರು ಸುರಿಸಿ ದುಡಿದದ್ದೆಲ್ಲ ಬೇರೆಯವ್ರ ಪಾಲಾಗುತ್ತೆ.

11 ಹಾಗೇನಾದ್ರೂ ಆದ್ರೆ ನಿನ್ನ ಜೀವನದ ಕೊನೇಲಿ

ನಿನ್ನ ಬಲ ಕಮ್ಮಿ ಆದಾಗ, ಶರೀರ ಶಕ್ತಿ ಕಳ್ಕೊಂಡಾಗ ಕೊರಗ್ತೀಯ.+

12 ಆಗ ಹೀಗೆ ಅಂದ್ಕೊಳ್ತೀಯ “ಅಯ್ಯೋ! ನಾನು ಯಾಕೆ ಶಿಸ್ತನ್ನ ದ್ವೇಷಿಸಿದೆ?

ನನ್ನನ್ನ ತಿದ್ದಿದಾಗ ಹೃದಯ ಯಾಕೆ ಬೇಡ ಅಂದಿತು?

13 ನಾನು ನನ್ನ ಬೋಧಕರ ಮಾತುಗಳನ್ನ ಕೇಳಿಲ್ಲ,

ನನ್ನ ಶಿಕ್ಷಕರಿಗೆ ಗಮನಕೊಡಲಿಲ್ಲ.

14 ಇಡೀ ಸಭೆಯ ಕಣ್ಣಲ್ಲಿ,

ನಾನು ಸಾವಿನ ದವಡೆಯಲ್ಲಿ ನಿಂತಿದ್ದೀನಿ.”+

15 ನೀನು ನಿನ್ನ ಸ್ವಂತ ಬಾವಿ ನೀರನ್ನ ಕುಡಿ,

ನಿನ್ನ ಸ್ವಂತ ತೊಟ್ಟಿಯಲ್ಲಿರೋ* ನೀರು ಕುಡಿ.+

16 ನಿನ್ನ ಬುಗ್ಗೆಗಳು ನಿನ್ನ ಮನೆಯಿಂದ ಹೊರಗೆ ಹರಿಬೇಕಾ?

ನಿನ್ನ ನದಿ ನೀರು ಪಟ್ಟಣದ ಮುಖ್ಯಸ್ಥಳಗಳಲ್ಲಿ* ಹರಿದುಹೋಗಬೇಕಾ?+

17 ಅವು ಇರೋದು ನಿನಗೆ,

ಬೇರೆಯವ್ರಿಗೆ ಅಲ್ಲ.+

18 ನಿನ್ನ ನೀರಿನ ಚಿಲುಮೆಗೆ ಆಶೀರ್ವಾದ ಸಿಗಲಿ,

ನಿನ್ನ ಯೌವನದ ಹೆಂಡತಿ ಜೊತೆ ಖುಷಿಯಾಗಿರು.+

19 ಅವಳು ನಿನ್ನ ಪ್ರೀತಿಯ ಹೆಣ್ಣುಜಿಂಕೆ, ಆಕರ್ಷಕವಾದ ಬೆಟ್ಟದ ಮೇಕೆ.+

ಅವಳ ಮೊಲೆಗಳು ನಿನ್ನನ್ನ ಯಾವಾಗ್ಲೂ ತೃಪ್ತಿಪಡಿಸಲಿ.*

ಅವಳ ಪ್ರೀತಿಯ ಬಂಧನದಲ್ಲಿ ನೀನು ಸದಾಕಾಲ ಸೆರೆಯಾಗಿರು.+

20 ಹೀಗಿರುವಾಗ ನನ್ನ ಮಗನೇ, ನಡತೆಗೆಟ್ಟ* ಸ್ತ್ರೀಗೆ ಯಾಕೆ ಮರುಳಾಗ್ತೀಯ?

ನಾಚಿಕೆಗೆಟ್ಟ* ಹೆಂಗಸನ್ನ ಯಾಕೆ ಅಪ್ಕೊಳ್ತೀಯ?+

21 ಮನುಷ್ಯ ನಡಿಯೋ ದಾರಿ ಯೆಹೋವನ ಕಣ್ಮುಂದೆನೇ ಇದೆ,

ಅವನು ಇಡೋ ಪ್ರತಿ ಹೆಜ್ಜೆಯನ್ನ ಪರೀಕ್ಷಿಸ್ತಾನೆ.+

22 ಕೆಟ್ಟವನಿಗೆ ಅವನ ತಪ್ಪುಗಳೇ ಉರ್ಲು,

ಅವನ ಪಾಪಗಳೇ ಅವನನ್ನ ಹಗ್ಗದ ತರ ಕಟ್ಟಿಹಾಕುತ್ತೆ.+

23 ಅವನು ಅತಿಯಾದ ಮೂರ್ಖತನದಿಂದ ಅಡ್ಡದಾರಿ ಹಿಡಿತಾನೆ.

ಶಿಸ್ತು ಸ್ವೀಕರಿಸದೆ ಇದ್ದದ್ರಿಂದ ಸಾಯ್ತಾನೆ.

6 ನನ್ನ ಮಗನೇ, ಬೇರೆಯವ್ರ ಸಾಲಕ್ಕೆ ನೀನು ಜಾಮೀನು ಕೊಟ್ಟಿರೋದಾದ್ರೆ,+

ಅಪರಿಚಿತನ ಜೊತೆ ಒಂದು ಒಪ್ಪಂದ* ಮಾಡಿರೋದಾದ್ರೆ,+

 2 ಮಾತು ಕೊಟ್ಟು ಸಿಕ್ಕಿಕೊಂಡಿರೋದಾದ್ರೆ,

ನೀನೇ ಹೇಳಿ ಸಿಕ್ಕಿಹಾಕೊಂಡಿದ್ರೆ,+

 3 ನನ್ನ ಮಗನೇ, ಹೀಗೆ ಮಾಡಿ ನಿನ್ನನ್ನೇ ನೀನು ಕಾಪಾಡ್ಕೊ:

ದೀನತೆಯಿಂದ ಅವನ ಹತ್ರ ಹೋಗಿ ಬೇಡ್ಕೊ.

ಯಾಕಂದ್ರೆ ನೀನು ಅವನ ಕೈಯಲ್ಲಿ ಸಿಕ್ಕಿಹಾಕೊಂಡಿದ್ದೀಯ.+

 4 ನಿನ್ನ ಕಣ್ಣುಗಳು ನಿದ್ದೆಗೆ ಜಾರದ ಹಾಗೆ ನೋಡ್ಕೊ,

ನಿನ್ನ ಕಣ್‌ರೆಪ್ಪೆಗೆ ನಿದ್ದೆ ಹತ್ತೋಕೆ ಬಿಡಬೇಡ.

 5 ಬೇಟೆಗಾರನ ಕೈಯಿಂದ ಓಡೋ ಜಿಂಕೆ ತರ,

ಬೇಡನ ಕೈಯಿಂದ ಹಾರೋ ಪಕ್ಷಿ ತರ ತಪ್ಪಿಸ್ಕೊ.

 6 ಏ ಸೋಮಾರಿ, ಇರುವೆ ನೋಡಿ ಕಲಿ!+

ಅದು ಹೇಗೆ ಕೆಲಸ ಮಾಡುತ್ತೆ ಅಂತ ನೋಡು, ವಿವೇಕಿಯಾಗು.

 7 ಅದಕ್ಕೆ ಸೇನಾಪತಿಯಾಗಲಿ ಅಧಿಕಾರಿಯಾಗಲಿ ಒಡೆಯನಾಗಲಿ ಇಲ್ಲ,

 8 ಆದ್ರೂ ಬೇಸಿಗೆಯಲ್ಲಿ ಆಹಾರಕ್ಕೆ ಬೇಕಾದ ತಯಾರಿ ಮಾಡ್ಕೊಳ್ಳುತ್ತೆ,+

ಕೊಯ್ಲಿನ ಕಾಲದಲ್ಲಿ ತನ್ನ ಆಹಾರ ಕೂಡಿಸಿಡುತ್ತೆ.

 9 ಸೋಮಾರಿಯೇ, ಇನ್ನೆಷ್ಟು ಹೊತ್ತು ಬಿದ್ಕೊಂಡಿರ್ತಿಯಾ?

ಯಾವಾಗ ನಿದ್ದೆಯಿಂದ ಎದ್ದೇಳ್ತೀಯಾ?

10 ಇನ್ನು ಸ್ವಲ್ಪ ಹೊತ್ತು ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ,

ಕೈಮುದುರಿಕೊಂಡು ಇನ್ನು ಸ್ವಲ್ಪ ಹೊತ್ತು ಮಲಗ್ತೀನಿ ಅಂದ್ಕೊಳ್ತೀಯ,+

11 ಬಡತನ ದಾರಿಗಳ್ಳನ ತರ ನಿನ್ನ ಮೇಲೆ ಬೀಳುತ್ತೆ,

ಕೊರತೆ ಆಯುಧ ಹಿಡ್ಕೊಂಡು ನಿನ್ನ ಮೇಲೆ ದಾಳಿ ಮಾಡುತ್ತೆ.+

12 ಕೆಲಸಕ್ಕೆ ಬಾರದವನು, ಕೆಟ್ಟವನು ಕೊಂಕು ಮಾತಾಡ್ತಾ ಅಡ್ಡಾಡ್ತಾನೆ.+

13 ಅವನು ಕಣ್ಣು ಹೊಡಿತಾನೆ,+ ಕೈ ಆಡಿಸಿ ಕಾಲುಗಳಿಂದ ಸನ್ನೆ ಮಾಡ್ತಾನೆ.

14 ಅವನ ಹೃದಯದಲ್ಲಿ ಬರೀ ಮೋಸ, ವಂಚನೆ ತುಂಬ್ಕೊಂಡಿದೆ,

ಯಾವಾಗ್ಲೂ ಕೆಟ್ಟದೇ ಯೋಚ್ನೆ ಮಾಡ್ತಾನೆ,+ ಹೋದಲ್ಲೆಲ್ಲ ಜಗಳ ಮಾಡಿಸ್ತಾನೆ.+

15 ಅದಕ್ಕೇ ಕಷ್ಟ ಅವನ ಮೇಲೆ ದಿಢೀರಂತ ಬರುತ್ತೆ,

ಸುಧಾರಿಸ್ಕೊಳ್ಳೋಕೆ ಸಮಯನೇ ಸಿಗದೆ ನಾಶ ಆಗಿ ಬಿಡ್ತಾನೆ.+

16 ಯೆಹೋವನಿಗೆ ಇಷ್ಟ ಇಲ್ಲದ ವಿಷ್ಯಗಳು ಆರು,

ಹೌದು, ಏಳು ವಿಷ್ಯ ಆತನಿಗೆ ಇಷ್ಟ ಇಲ್ಲ. ಅದು ಯಾವುದಂದ್ರೆ:

17 ಅಹಂಕಾರ ತುಂಬಿರೋ ಕಣ್ಣು,+ ಸುಳ್ಳು ಹೇಳೋ ನಾಲಿಗೆ,+ ಅಮಾಯಕರ ರಕ್ತ ಸುರಿಸೋ ಕೈ,+

18 ಸಂಚು ಮಾಡೋ ಹೃದಯ,+ ಕೆಟ್ಟ ವಿಷ್ಯಗಳನ್ನ ಮಾಡೋಕೆ ಓಡೋ ಕಾಲು,

19 ಬಾಯಿ ಬಿಟ್ರೆ ಬರೀ ಸುಳ್ಳೇ ಹೇಳೋ ಸುಳ್ಳು ಸಾಕ್ಷಿ,+

ಸಹೋದರರ ಮಧ್ಯ ಜಗಳ ಬಿತ್ತೋ ವ್ಯಕ್ತಿ.+

20 ನನ್ನ ಮಗನೇ, ನಿನ್ನ ಅಪ್ಪನ ಆಜ್ಞೆಯನ್ನ ಪಾಲಿಸು,

ನಿನ್ನ ಅಮ್ಮ ಕಲಿಸುವಾಗ* ಕೇಳಿಸ್ಕೊ.+

21 ಯಾವಾಗ್ಲೂ ಅವುಗಳನ್ನ ನಿನ್ನ ಮನಸ್ಸಲ್ಲಿ ಇಟ್ಕೊ,

ನಿನ್ನ ಕುತ್ತಿಗೆಗೆ ಕಟ್ಕೊ.

22 ನೀನು ನಡಿಯುವಾಗ ಅವು ನಿನಗೆ ದಾರಿ ತೋರಿಸುತ್ತೆ,

ಮಲಗುವಾಗ ನಿನಗೆ ಕಾವಲಾಗಿರುತ್ತೆ,

ಎದ್ದಾಗ ನಿನ್ನ ಹತ್ರ ಮಾತಾಡುತ್ತೆ.*

23 ಯಾಕಂದ್ರೆ ಆಜ್ಞೆ ದೀಪ,+

ದೇವರ ನಿಯಮ ಬೆಳಕು,+

ನೀನು ತಿದ್ಕೊಳ್ಳಬೇಕು ಅಂತ ಕೊಡೋ ಶಿಸ್ತು ಜೀವನಕ್ಕೆ ದಾರಿ ತೋರಿಸುತ್ತೆ.+

24 ಅವು ನಿನ್ನನ್ನ ಕೆಟ್ಟ ಹೆಂಗಸಿಂದ ಕಾಪಾಡುತ್ತೆ,+

ನಾಚಿಕೆಗೆಟ್ಟ* ಹೆಂಗಸಿನ ಮೋಹಕ ಮಾತುಗಳಿಂದ ಕಾದುಕಾಪಾಡುತ್ತೆ.+

25 ಅವಳ ಅಂದ ನೋಡಿ ಹೃದಯದಲ್ಲಿ ಆಸೆಪಡಬೇಡ.+

ಅವಳ ಮಾದಕ ಕಣ್ಣುಗಳನ್ನ ನೋಡಿ ಅವಳ ಬುಟ್ಟಿಗೆ ಬೀಳಬೇಡ.

26 ವೇಶ್ಯೆಯಿಂದಾಗಿ ಒಬ್ಬ ವ್ಯಕ್ತಿಗೆ ಕೊನೇಲಿ ಉಳಿಯೋದು ಒಂದು ರೊಟ್ಟಿ ತುಂಡು ಮಾತ್ರ,+

ಇನ್ನೊಬ್ಬನ ಹೆಂಡತಿ ಹಿಂದೆ ಹೋದ್ರೆ ಅವಳು ನಿನ್ನ ಅಮೂಲ್ಯವಾದ ಪ್ರಾಣ ಬೇಟೆ ಆಡ್ತಾಳೆ.

27 ಎದೆ ಮೇಲೆ ಬೆಂಕಿ ಇಟ್ಕೊಂಡ್ರೆ ಅದು ಬಟ್ಟೆ ಸುಟ್ಟು ಹಾಕಲ್ವಾ?+

28 ಸುಡ್ತಿರೋ ಕೆಂಡದ ಮೇಲೆ ನಡೆದ್ರೆ ಕಾಲು ಸುಟ್ಟು ಹೋಗಲ್ವಾ?

29 ಪಕ್ಕದ ಮನೆಯವನ ಹೆಂಡತಿ ಜೊತೆ ಸಂಬಂಧ ಇಟ್ಕೊಳ್ಳುವವನಿಗೂ ಹೀಗೇ ಆಗುತ್ತೆ,

ಅವಳನ್ನ ಮುಟ್ಟುವವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.+

30 ಹಸಿವು ನೀಗಿಸೋಕೆ ಆಹಾರ ಕದ್ರೆ,

ಯಾರು ಕೂಡ ಆ ಕಳ್ಳನನ್ನ ಕೀಳಾಗಿ ನೋಡಲ್ಲ.

31 ಆದ್ರೆ ಅವನು ಸಿಕ್ಕಿಬಿದ್ರೆ ಏಳು ಪಟ್ಟು ಅವನು ವಾಪಸ್‌ ಕೊಡಬೇಕಾಗುತ್ತೆ,

ತನ್ನ ಮನೆಯಲ್ಲಿ ಇರೋದನ್ನೆಲ್ಲ ಕೊಡಬೇಕಾಗುತ್ತೆ.+

32 ವ್ಯಭಿಚಾರ ಮಾಡುವವನಿಗೆ ಬುದ್ಧಿ ಇಲ್ಲ,*

ಅವನು ತನ್ನ ಮೇಲೆನೇ ನಾಶ ತಂದ್ಕೊಳ್ತಾನೆ.+

33 ನೋವು, ಅವಮಾನ ಬಿಟ್ರೆ ಬೇರೇನೂ ಅವನಿಗೆ ಸಿಗಲ್ಲ,+

ಅವನಿಗೆ ಹತ್ಕೊಳ್ಳೋ ಕಳಂಕ ತೆಗಿಯೋಕೆ ಆಗಲ್ಲ.+

34 ಹೆಂಡತಿ ನಂಬಿಕೆದ್ರೋಹ ಮಾಡಿದ್ರೆ ಗಂಡನಿಗೆ ತುಂಬ ಕೋಪ ಬರುತ್ತೆ,

ಸೇಡು ತೀರಿಸ್ಕೊಳ್ಳುವಾಗ ಅವನು ಯಾವುದೇ ಕಾರಣಕ್ಕೂ ದಯೆ ತೋರಿಸಲ್ಲ.+

35 ಅವನಿಗೆ ಏನೇ ಪರಿಹಾರ ಕೊಟ್ರೂ ಒಪ್ಕೊಳ್ಳಲ್ಲ,

ಎಷ್ಟೇ ದೊಡ್ಡ ಉಡುಗೊರೆ ಕೊಟ್ರೂ ಅವನ ಕೋಪ ತಣ್ಣಗಾಗಲ್ಲ.

7 ನನ್ನ ಮಗನೇ, ನಾನು ಹೇಳೋದನ್ನ ಕೇಳು,

ನನ್ನ ಆಜ್ಞೆಗಳನ್ನ ಬೆಳ್ಳಿ ಬಂಗಾರ ತರ ನೋಡು.+

 2 ನನ್ನ ಆಜ್ಞೆಗಳನ್ನ ಪಾಲಿಸ್ತಾ ಹೆಚ್ಚು ವರ್ಷ ಬದುಕು,+

ನಾನು ಕಲಿಸಿದ್ದನ್ನ* ನಿನ್ನ ಕಣ್ಣುಗುಡ್ಡೆ ತರ ಕಾಪಾಡ್ಕೊ.

 3 ಅವುಗಳನ್ನ ನಿನ್ನ ಬೆರಳುಗಳಿಗೆ ಸುತ್ಕೊ,

ನಿನ್ನ ಹೃದಯದ ಹಲಗೆ ಮೇಲೆ ಬರ್ಕೊ.+

 4 ವಿವೇಕವನ್ನ “ಅಕ್ಕಾ” ಅಂತ ಕರಿ,

ಬುದ್ಧಿಗೆ “ನೀನು ನನ್ನ ಸಂಬಂಧಿ” ಅಂತ ಹೇಳು.

 5 ಆಗ ಅವು ನಡತೆಗೆಟ್ಟ* ಹೆಂಗಸಿಂದ ನಿನ್ನನ್ನ ಕಾಪಾಡುತ್ತೆ,+

ನಾಚಿಕೆಗೆಟ್ಟ* ಹೆಂಗಸಿನ ಜೇನಿನಂತ* ಮಾತಿಗೆ ಮರುಳಾಗದ ಹಾಗೆ ನೋಡ್ಕೊಳ್ಳುತ್ತೆ.+

 6 ಒಂದುಸಾರಿ ನನ್ನ ಮನೆ ಕಿಟಕಿ ಹತ್ರ ನಿಂತು,

ಜಾಲರಿಯಿಂದ ಕೆಳಗೆ ನೋಡಿದೆ.

 7 ಆಗ ಅನುಭವ ಇಲ್ಲದ ಯುವಕರ ಕಡೆ ನನ್ನ ಗಮನ ಹರಿತು,

ಅವ್ರ ಮಧ್ಯ ಬುದ್ಧಿ ಇಲ್ಲದ* ಒಬ್ಬ ಯುವಕನನ್ನ ನೋಡಿದೆ.+

 8 ಅವನು ಆ ಹೆಂಗಸು ಇರೋ ಬೀದಿಗೆ ಹೋದ,

ಅವಳ ಮನೆ ಕಡೆ ಹೆಜ್ಜೆ ಹಾಕಿದ.

 9 ಆಗ ಸಂಜೆ ಆಗಿತ್ತು, ಸೂರ್ಯ ಮುಳುಗಿತ್ತು,+

ಕತ್ತಲಾಗ್ತಾ ಇತ್ತು, ರಾತ್ರಿ ಆಗ್ತಾ ಇತ್ತು.

10 ನಾನು ನೋಡ್ತಾ ಇದ್ದೆ, ಒಬ್ಬಳು ಆ ಯುವಕನ ಹತ್ರ ಬಂದಳು,

ಅವಳು ವೇಶ್ಯೆ ತರ ಬಟ್ಟೆ ಹಾಕೊಂಡಿದ್ದಳು,+ ಅವಳ ಹೃದಯದಲ್ಲಿ ಮೋಸ ತುಂಬಿತ್ತು.

11 ಅವಳು ಬಾಯಿಬಡಕಿ, ಮನಸ್ಸಿಗೆ ಬಂದ ಹಾಗೆ ನಡಿಯೋ ಹಟಮಾರಿ.+

ಅವಳ ಕಾಲು ಮನೆಯಲ್ಲಿ ನಿಲ್ಲಲ್ಲ.

12 ಒಂದು ಕ್ಷಣ ಮನೆ ಹೊರಗಿದ್ರೆ, ಇನ್ನೊಂದು ಕ್ಷಣ ಪಟ್ಟಣದ ಮುಖ್ಯಸ್ಥಳದಲ್ಲಿ* ಇರ್ತಾಳೆ,

ಮೂಲೆಮೂಲೆಯಲ್ಲಿ ಅಡಗಿಕೊಂಡು ಹೊಂಚು ಹಾಕೋದೇ ಅವಳ ಕೆಲಸ.+

13 ಅವಳು ಅವನನ್ನ ಎಳೆದು ಮುತ್ತು ಕೊಟ್ಟಳು,

ಒಂಚೂರೂ ನಾಚಿಕೆ ಇಲ್ಲದೆ ಹೀಗಂದಳು:

14 “ನಾನು ಸಮಾಧಾನ ಬಲಿಗಳನ್ನ ಅರ್ಪಿಸಬೇಕಿತ್ತು.+

ಈ ದಿನಾನೇ ನನ್ನ ಹರಕೆಗಳನ್ನ ತೀರಿಸ್ತೀನಿ.

15 ಅದಕ್ಕೆ ನಿನ್ನನ್ನ ನೋಡೋಕೆ ಬಂದೆ,

ನಿನ್ನನ್ನ ಹುಡುಕಿದೆ, ನೀನು ನಂಗೆ ಸಿಕ್ಕಿಬಿಟ್ಟೆ!

16 ನನ್ನ ಹಾಸಿಗೆ ಮೇಲೆ ಒಳ್ಳೇ ಬಟ್ಟೆ ಹಾಸಿದ್ದೀನಿ,

ಈಜಿಪ್ಟಿನ ಬಣ್ಣಬಣ್ಣದ ನೂಲಿನ ಹೊದಿಕೆಗಳನ್ನ ಹಾಸಿದ್ದೀನಿ.+

17 ಹಾಸಿಗೆಗೆ ಗಂಧರಸ, ಅಗರು,* ದಾಲ್ಚಿನ್ನಿ ಚಿಮಿಕಿಸಿದ್ದೀನಿ.+

18 ಬಾ, ಬೆಳಗಾಗೋ ತನಕ ನಾವಿಬ್ರೂ ಪ್ರೀತಿಯಲ್ಲಿ ತೇಲಾಡೋಣ,

ಕಾಮದ ಸುಖ ಅನುಭವಿಸೋಣ.

19 ನನ್ನ ಗಂಡ ಮನೆಲಿಲ್ಲ,

ತುಂಬ ದೂರ ಹೋಗಿದ್ದಾನೆ.

20 ಅವನು ಹಣದ ಗಂಟು ತಗೊಂಡು ಹೋಗಿದ್ದಾನೆ,

ಹುಣ್ಣಿಮೆ ತನಕ ಬರಲ್ಲ.”

21 ಹೀಗೆ ಮನ ಒಲಿಸೋ ಮಾತಿಂದ ಅವನನ್ನ ತಪ್ಪುದಾರಿಗೆ ಎಳೆದಳು.+

ನಯವಾದ ಮಾತುಗಳಿಂದ ಬುಟ್ಟಿಗೆ ಹಾಕೊಂಡಳು.

22 ಬಲಿ ಕೊಡೋಕೆ ತಗೊಂಡು ಹೋಗೋ ಹೋರಿ ತರ, ಬೇಡಿ* ಹಾಕೋಕೆ ಕರ್ಕೊಂಡು ಹೋಗ್ತಿರೋ ಮೂರ್ಖನ ತರ,

ತಕ್ಷಣ ಅವನು ಅವಳ ಹಿಂದೆ ಹೋದ.+

23 ಕೊನೆಗೆ ಒಂದು ಬಾಣ ಅವನ ಪಿತ್ತಜನಕಾಂಗ ತೂರಿಹೋಗುತ್ತೆ,

ಬಲೆ ಕಡೆಗೆ ಜೋರಾಗಿ ಹಾರಿಹೋಗೋ ಹಕ್ಕಿ ತರ,

ಅದ್ರಿಂದ ತನ್ನ ಪ್ರಾಣ ಕಳ್ಕೊಳ್ತಾನೆ ಅಂತ ಗೊತ್ತಾಗದೆ ಹೋಗ್ತಾನೆ.+

24 ಹಾಗಾಗಿ ನನ್ನ ಮಗನೇ, ನಾನು ಹೇಳೋದನ್ನ ಕೇಳು,

ನನ್ನ ಮಾತುಗಳಿಗೆ ಗಮನಕೊಡು.

25 ನಿನ್ನ ಹೃದಯ ಅವಳ ದಾರಿ ಹಿಡಿಯೋಕೆ ಬಿಡಬೇಡ.

ಅಪ್ಪಿತಪ್ಪಿನೂ ಅವಳ ಬೀದಿಗೆ ಹೋಗಬೇಡ.+

26 ಅವಳಿಂದ ತುಂಬ ಜನ ಪ್ರಾಣ ಕಳ್ಕೊಂಡಿದ್ದಾರೆ,+

ಅವಳು ಲೆಕ್ಕ ಇಲ್ಲದಷ್ಟು ಜನ್ರನ್ನ ಕೊಂದುಹಾಕಿದ್ದಾಳೆ.+

27 ಅವಳ ಮನೆ ನಿನ್ನನ್ನ ಸ್ಮಶಾನಕ್ಕೆ* ಕರ್ಕೊಂಡು ಹೋಗುತ್ತೆ.

ಸಾವಿನ ಕತ್ತಲೆ ಕೋಣೆಗೆ ಕಳಿಸುತ್ತೆ.

8 ನೋಡು, ವಿವೇಕ ಗಟ್ಟಿಯಾಗಿ ಕೂಗ್ತಿದೆ!

ಬುದ್ಧಿ* ಜೋರುಜೋರಾಗಿ ಕರಿತಿದೆ!+

 2 ದಾರಿ ಪಕ್ಕದಲ್ಲಿರೋ ಎತ್ತರವಾದ ಜಾಗಗಳಲ್ಲಿ,+

ದಾರಿಗಳು ಸೇರುವಲ್ಲಿ ವಿವೇಕ ನಿಂತಿದೆ.

 3 ಪಟ್ಟಣದ ಬಾಗಿಲು ಹತ್ರ,

ಪ್ರವೇಶಸ್ಥಳಗಳ ಪಕ್ಕ, ಬಾಗಿಲುಗಳ ಹತ್ರ,

ಅದು ಗಟ್ಟಿಯಾಗಿ ಹೀಗೆ ಕೂಗ್ತಿದೆ:+

 4 “ಜನ್ರೇ, ನಾನು ನಿಮ್ಮ ಹತ್ರಾನೇ ಮಾತಾಡ್ತಾ ಇದ್ದೀನಿ,

ನಿಮ್ಮಲ್ಲಿ ಪ್ರತಿಯೊಬ್ರಿಗೂ ಹೇಳ್ತೀನಿ.

 5 ಅನುಭವ ಇಲ್ಲದವ್ರೇ, ಜಾಣ್ಮೆಯಿಂದ ಕೆಲಸ ಮಾಡೋಕೆ ಕಲೀರಿ,+

ಮೂರ್ಖರೇ, ಅರ್ಥ ಮಾಡ್ಕೊಳ್ಳೋ ಹೃದಯ ಗಳಿಸಿ.

 6 ನಾನು ಹೇಳೋ ವಿಷ್ಯಗಳನ್ನ ಕೇಳಿಸ್ಕೊಳ್ಳಿ, ಯಾಕಂದ್ರೆ ಅವು ತುಂಬ ಮುಖ್ಯ,

ನನ್ನ ತುಟಿಗಳು ಸರಿಯಾದ ವಿಷ್ಯವನ್ನೇ ಹೇಳುತ್ತೆ.

 7 ನನ್ನ ಬಾಯಿ ಸತ್ಯವನ್ನೇ ಹೇಳುತ್ತೆ,

ನನ್ನ ತುಟಿಗಳಿಗೆ ಕೆಟ್ಟ ವಿಷ್ಯಗಳಂದ್ರೆ ಇಷ್ಟ ಇಲ್ಲ.

 8 ನನ್ನ ಬಾಯಿಯಿಂದ ಒಳ್ಳೇ ವಿಷ್ಯಗಳೇ ಬರುತ್ತೆ,

ಮೋಸದ ಮಾತಾಗಲಿ, ಕೊಂಕು ಮಾತಾಗಲಿ ಬರಲ್ಲ.

 9 ನನ್ನ ಮಾತುಗಳೆಲ್ಲ ವಿವೇಚನೆ ಇರುವವರಿಗೆ ನೇರಮಾತಾಗಿ,

ಜ್ಞಾನವನ್ನ ಪಡ್ಕೊಂಡವ್ರಿಗೆ ಸರಿಯಾಗಿ ಕಾಣುತ್ತೆ.

10 ಬೆಳ್ಳಿ ಬದ್ಲು ನಾನು ಕೊಡೋ ಶಿಸ್ತು ತಗೊ,

ಅಪ್ಪಟ ಚಿನ್ನದ ಬದ್ಲು ಜ್ಞಾನ ಆರಿಸ್ಕೊ.+

11 ಯಾಕಂದ್ರೆ ವಿವೇಕ ಹವಳಕ್ಕಿಂತ* ಶ್ರೇಷ್ಠ.

ಬೆಲೆಬಾಳೋ ವಸ್ತುಗಳಿಗೆ ಅದನ್ನ ಹೋಲಿಸೋಕೆ ಆಗಲ್ಲ.

12 ವಿವೇಕ ಅನ್ನೋ ನಾನು ಜಾಣ್ಮೆ ಜೊತೆ ಇರ್ತಿನಿ,

ಜ್ಞಾನ, ಬುದ್ಧಿ ನನ್ನ ಹತ್ರ ಇದೆ.+

13 ಯೆಹೋವನಿಗೆ ಭಯಪಡೋದು ಅಂದ್ರೆ ಕೆಟ್ಟದ್ದನ್ನ ದ್ವೇಷಿಸೋದು.+

ಗರ್ವ, ಅಹಂಕಾರ,+ ಕೆಟ್ಟ ದಾರಿ, ಸುಳ್ಳು ಮಾತುಗಳನ್ನ ವಿವೇಕ ಅನ್ನೋ ನಾನು ಇಷ್ಟಪಡಲ್ಲ.+

14 ಒಳ್ಳೇ ಸಲಹೆ, ವಿವೇಕ*+ ನನ್ನ ಹತ್ರ ಇದೆ,

ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ,+ ಬಲ+ ನನ್ನ ಸೊತ್ತು.

15 ನನ್ನ ಸಹಾಯದಿಂದ ರಾಜರು ಆಳ್ತಾರೆ,

ದೊಡ್ಡದೊಡ್ಡ ಅಧಿಕಾರಿಗಳು ನೀತಿಯಿಂದ ನಿಯಮಗಳನ್ನ ಮಾಡ್ತಾರೆ.+

16 ನನ್ನ ಸಹಾಯದಿಂದ ನಾಯಕರು ಆಳ್ತಾರೆ,

ದೊಡ್ಡದೊಡ್ಡ ಅಧಿಕಾರಿಗಳು ನೀತಿಯಿಂದ ನ್ಯಾಯತೀರಿಸ್ತಾರೆ.

17 ನನ್ನನ್ನ ಪ್ರೀತಿಸುವವ್ರನ್ನ ನಾನು ಪ್ರೀತಿಸ್ತೀನಿ,

ನನ್ನನ್ನ ಹುಡುಕುವವ್ರಿಗೆ ನಾನು ಸಿಗ್ತೀನಿ.+

18 ನನ್ನ ಹತ್ರ ಆಸ್ತಿ, ಅಂತಸ್ತು ಇದೆ,

ಶಾಶ್ವತ ಸಂಪತ್ತು,* ನೀತಿ ಇದೆ.

19 ನನ್ನಿಂದ ನಿಮಗೆ ಸಿಗೋ ಉಡುಗೊರೆಗಳು ಚಿನ್ನಕ್ಕಿಂತ, ಶುದ್ಧ ಚಿನ್ನಕ್ಕಿಂತ ಉತ್ತಮ,

ನಾನು ನಿಮಗೆ ಏನನ್ನ ಕೊಡ್ತೀನೋ ಅದು ಶ್ರೇಷ್ಠ ಬೆಳ್ಳಿಗಿಂತ ಉತ್ತಮ.+

20 ನಾನು ನೀತಿಯ ದಾರಿಯಲ್ಲಿ ನಡಿತೀನಿ,

ನ್ಯಾಯದ ದಾರಿ ಮಧ್ಯದಲ್ಲೇ ಹೋಗ್ತೀನಿ.

21 ನನ್ನನ್ನ ಪ್ರೀತಿಸುವವ್ರಿಗೆ ನಾನು ಬೆಲೆಬಾಳೋ ಆಸ್ತಿ ಕೊಡ್ತೀನಿ,

ಅವ್ರ ಗೋಡೌನ್‌ ತುಂಬಿಸ್ತೀನಿ.

22 ಯೆಹೋವ ಸೃಷ್ಟಿ ಮಾಡುವಾಗ ಮೊದ್ಲು ನನ್ನನ್ನ ಸೃಷ್ಟಿ ಮಾಡಿದನು,+

ಆತನ ಕೈಯಿಂದ ಸೃಷ್ಟಿಯಾದ ಮೊದಲ ಸೃಷ್ಟಿ ನಾನೇ,

ತುಂಬತುಂಬ ವರ್ಷಗಳ ಹಿಂದೆನೇ ದೇವರು ನನ್ನನ್ನ ಸೃಷ್ಟಿ ಮಾಡಿದನು.+

23 ಬಹಳ ಮುಂಚೆನೇ,* ಅಂದ್ರೆ ಭೂಮಿಯನ್ನ ಸೃಷ್ಟಿ ಮಾಡೋ ಮುಂಚೆನೇ+

ಆತನು ನನಗೆ ಒಂದು ದೊಡ್ಡ ಸ್ಥಾನ ಕೊಟ್ಟನು.+

24 ನಾನು ಹುಟ್ಟಿದ ಸಮಯದಲ್ಲಿ* ಆಳವಾದ ಸಾಗರ ಆಗಲಿ+

ಉಕ್ಕಿ ಹರಿಯೋ ಬುಗ್ಗೆಗಳಾಗಲಿ ಇರ್ಲಿಲ್ಲ.

25 ಪರ್ವತಗಳನ್ನ ಸೃಷ್ಟಿ ಮಾಡೋ ಮುಂಚೆನೇ,

ಬೆಟ್ಟಗಳಿಗಿಂತ ಮುಂಚೆನೇ ನನ್ನನ್ನ ಸೃಷ್ಟಿ ಮಾಡಿದನು.

26 ಆಗಿನ್ನೂ ಆತನು ಭೂಮಿ ಆಗಲಿ, ಅದ್ರ ಬಯಲುಗಳಾಗಲಿ

ಮಣ್ಣಿನ ಮೊದಲ ಕಣವನ್ನಾಗಲಿ ಮಾಡಿರಲಿಲ್ಲ.

27 ಆಕಾಶವನ್ನ ಮಾಡಿದಾಗ,+

ಆತನು ನೀರಿಗೆ ಗಡಿರೇಖೆ* ಹಾಕಿದಾಗ+ ನಾನು ಅಲ್ಲಿದ್ದೆ.

28 ಆತನು ಮೋಡಗಳನ್ನ ಮಾಡಿದಾಗ,

ಆಳವಾದ ಸಮುದ್ರಗಳನ್ನ ತುಂಬಿಸಿದಾಗ ನಾನಲ್ಲಿದ್ದೆ.

29 ಆತನು ಸಮುದ್ರಕ್ಕೆ ಗಡಿ ಹಾಕಿದಾಗ,

ಆ ಗಡಿ ದಾಟಿ ಬರಬಾರದು ಅಂತ ನೀರಿಗೆ ಅಪ್ಪಣೆ ಕೊಟ್ಟಾಗ,+

ಭೂಮಿಗೆ ಅಲುಗಾಡದ ಅಡಿಪಾಯ ಹಾಕಿದಾಗ,

30 ಅತ್ಯಂತ ನಿಪುಣ ಕೆಲಸಗಾರನ ತರ ನಾನು ಆತನ ಪಕ್ಕದಲ್ಲೇ ಇದ್ದೆ.+

ಆತನು ಪ್ರತಿದಿನ ನನ್ನನ್ನ ನೋಡಿ ಖುಷಿಪಡ್ತಿದ್ದ,+

ನಾನು ಆತನ ಮುಂದೆ ಯಾವಾಗ್ಲೂ ನಗುನಗ್ತಾ ಇದ್ದೆ.+

31 ಆತನು ಮನುಷ್ಯರಿಗೆ ಅಂತಾನೇ ಮಾಡಿದ ಭೂಮಿಯನ್ನ ನೋಡಿ ನಾನು ಖುಷಿಪಟ್ಟೆ,

ಮನುಷ್ಯರಂದ್ರೆ ನನಗೆ ಪಂಚಪ್ರಾಣ.

32 ನನ್ನ ಮಕ್ಕಳೇ, ಈಗ ನಾನು ಹೇಳೋದನ್ನ ಕೇಳಿ,

ಯಾಕಂದ್ರೆ ನನ್ನ ದಾರಿಯಲ್ಲಿ ನಡಿಯುವವರು ಸಂತೋಷವಾಗಿ ಇರ್ತಾರೆ.

33 ನಾನು ಕೊಡೋ ಶಿಸ್ತನ್ನ ಸ್ವೀಕರಿಸಿ+ ವಿವೇಕಿ ಆಗ್ತಾರೆ,

ಯಾವತ್ತಿಗೂ ಅದನ್ನ ಅಸಡ್ಡೆ ಮಾಡಬೇಡಿ.

34 ಪ್ರತಿದಿನ ಬೆಳಬೆಳಿಗ್ಗೆನೇ ನನ್ನ ಬಾಗಿಲ ಹತ್ರ ಬರ್ತಾನೆ,

ನನ್ನ ಬಾಗಿಲ* ಮುಂದೆ ಕಾಯ್ತಾನೆ,

ನನ್ನ ಮಾತನ್ನ ಕೇಳುವವನು ಖುಷಿಯಾಗಿ ಇರ್ತಾನೆ.

35 ಯಾಕಂದ್ರೆ ನನ್ನನ್ನ ಹುಡುಕುವವನಿಗೆ ಜೀವ ಸಿಗುತ್ತೆ,+

ಯೆಹೋವನ ಮೆಚ್ಚುಗೆ ಸಿಗುತ್ತೆ.

36 ಆದ್ರೆ ನನ್ನನ್ನ ಅಸಡ್ಡೆ ಮಾಡಿದ್ರೆ ಅವನಿಗೇ ಹಾನಿ,

ನನ್ನನ್ನ ದ್ವೇಷಿಸುವವನಿಗೆ ಸಾವಂದ್ರೆ ಪ್ರೀತಿ.”+

9 ನಿಜ ವಿವೇಕ ತನ್ನ ಮನೆ ಕಟ್ಕೊಂಡಿದೆ,

ಕೆತ್ತಿದ ಏಳು ಕಂಬಗಳ ಮೇಲೆ ಅದನ್ನ ನಿಲ್ಲಿಸಿದೆ.

 2 ಅದು ಪ್ರಾಣಿಯನ್ನ ಕೊಂದು ಮಾಂಸ ಮಾಡಿ,

ಅಮಲೇರಿಸೋ ದ್ರಾಕ್ಷಾಮದ್ಯದ ರುಚಿ ಹೆಚ್ಚಿಸಿ,

ತನ್ನ ಮೇಜನ್ನ ಸಿದ್ಧಮಾಡಿದೆ.

 3 ತನ್ನ ದಾಸಿಯರನ್ನ ಪಟ್ಟಣದಲ್ಲಿ ಎತ್ತರವಾದ ಜಾಗಕ್ಕೆ ಕಳಿಸಿ

ಎಲ್ಲರಿಗೂ ಹೀಗೆ ಹೇಳಿ ಅಂತ ಹೇಳಿದೆ:+

 4 “ಅನುಭವ ಇಲ್ಲದವರು ಇಲ್ಲಿಗೆ ಬರಲಿ.”

ಬುದ್ಧಿ ಇಲ್ಲದವರಿಗೆ* ವಿವೇಕ* ಹೀಗೆ ಹೇಳಿತು:

 5 “ಬನ್ನಿ, ನನ್ನ ರೊಟ್ಟಿ ತಿನ್ನಿ,

ನಾನು ಮಾಡಿರೋ ದ್ರಾಕ್ಷಾಮದ್ಯ ಕುಡಿರಿ.

 6 ಜೀವಂತವಾಗಿ ಇರಬೇಕಂದ್ರೆ ಮೂರ್ಖರ ತರ ನಡ್ಕೊಳ್ಳೋದನ್ನ ಬಿಡಿ,+

ವಿವೇಚನೆಯ ದಾರಿಯಲ್ಲಿ ಮುಂದಕ್ಕೆ ಹೋಗಿ.”+

 7 ಗೇಲಿ ಮಾಡುವವನನ್ನ ಸರಿಪಡಿಸೋಕೆ ಹೋದ್ರೆ ಅವಮಾನವನ್ನ ಕೈಬೀಸಿ ಕರೆದ ಹಾಗೆ,+

ಕೆಟ್ಟವನನ್ನ ತಿದ್ದಿದ್ರೆ ಹಾನಿಯನ್ನ ಮೈ ಮೇಲೆ ಎಳ್ಕೊಂಡ ಹಾಗೆ.

 8 ಅಣಕಿಸುವವನನ್ನ ತಿದ್ದೋಕೆ ಹೋಗಬೇಡ, ಹೋದ್ರೆ ನಿನ್ನನ್ನೇ ದ್ವೇಷಿಸ್ತಾನೆ,+

ವಿವೇಕಿಯನ್ನ ತಿದ್ದು, ಅವನು ನಿನ್ನನ್ನ ಪ್ರೀತಿಸ್ತಾನೆ.+

 9 ವಿವೇಕಿಗೆ ಕಲಿಸು, ಅವನು ಇನ್ನಷ್ಟು ವಿವೇಕಿಯಾಗ್ತಾನೆ.+

ನೀತಿವಂತನಿಗೆ ಕಲಿಸು, ಅವನು ಕಲಿತಾ ತನ್ನ ಜ್ಞಾನ ಹೆಚ್ಚಿಸ್ತಾನೆ.

10 ಯೆಹೋವನ ಭಯನೇ ಜ್ಞಾನದ ಆರಂಭ.+

ಅತಿ ಪವಿತ್ರನಾದ ದೇವರ ಜ್ಞಾನನೇ ವಿವೇಚನೆ.+

11 ವಿವೇಕದಿಂದ ನಿನ್ನ ಆಯಸ್ಸು ಹೆಚ್ಚಾಗುತ್ತೆ,+

ನೀನು ಜಾಸ್ತಿ ವರ್ಷ ಬದುಕ್ತೀಯ.

12 ನೀನು ವಿವೇಕಿಯಾದ್ರೆ ನಿನಗೇ ಒಳ್ಳೇದು,

ಆದ್ರೆ ನೀನು ಬೇರೆಯವ್ರನ್ನ ಗೇಲಿ ಮಾಡಿದ್ರೆ ಅದ್ರ ಪರಿಣಾಮ ನೀನೇ ಅನುಭವಿಸ್ತೀಯ.

13 ಬುದ್ಧಿ ಇಲ್ಲದ ಸ್ತ್ರೀ ವಟವಟ ಅಂತನೇ ಇರ್ತಾಳೆ.+

ಅವಳಿಗೆ ತಿಳುವಳಿಕೆ ಇಲ್ಲ, ಅವಳಿಗೆ ಏನೂ ಗೊತ್ತಿಲ್ಲ.

14 ಅವಳು ಪಟ್ಟಣದ ಎತ್ತರವಾದ ಜಾಗಗಳಲ್ಲಿ,

ತನ್ನ ಮನೆ ಮುಂದೆ ಕೂತ್ಕೊಳ್ತಾಳೆ,+

15 ಹೋಗೋರನ್ನ ಬರೋರನ್ನ,

ತಮ್ಮ ಪಾಡಿಗೆ ಹೋಗ್ತಿರೋರನ್ನ ಕೂಗಿ ಕರೆದು,

16 “ಅನುಭವ ಇಲ್ಲದವರು ಇಲ್ಲಿ ಬನ್ನಿ” ಅಂತಾಳೆ.

ಬುದ್ಧಿ ಇಲ್ಲದವ್ರಿಗೆ* ಹೀಗೆ ಹೇಳ್ತಾಳೆ:+

17 “ಕದ್ದು ಕುಡಿಯೋ ನೀರು ಸಿಹಿ ಆಗಿರುತ್ತೆ,

ಗುಟ್ಟಾಗಿ ತಿನ್ನೋದ್ರಲ್ಲಿ ಇರೋ ಖುಷಿನೇ ಬೇರೆ.”+

18 ಆದ್ರೆ ಅವಳ ಮನೆ ಸತ್ತವರ ಮನೆ ಅಂತ ಅವ್ರಿಗೆ ಗೊತ್ತಿಲ್ಲ,

ಅವಳ ಅತಿಥಿಗಳು ಸ್ಮಶಾನ* ಸೇರಿದ್ದಾರೆ ಅಂತ ಅವ್ರಿಗೆ ಗೊತ್ತಿಲ್ಲ.+

10 ಸೊಲೊಮೋನನ ನಾಣ್ಣುಡಿಗಳು.+

ವಿವೇಕಿ ತನ್ನ ಅಪ್ಪನ ಮನಸ್ಸನ್ನ ಸಂತೋಷ ಪಡಿಸ್ತಾನೆ,+

ಆದ್ರೆ ಮೂರ್ಖ ತನ್ನ ಅಮ್ಮ ಕೊರಗೋ ತರ ಮಾಡ್ತಾನೆ.

 2 ಕೆಟ್ಟ ಕೆಲಸದಿಂದ ಹಣ ಮಾಡಿದ್ರೆ ಏನು ಉಪಯೋಗ ಇಲ್ಲ,

ಆದ್ರೆ ಪ್ರಾಮಾಣಿಕತೆ ಒಬ್ಬನನ್ನ ಸಾವಿಂದ ಕಾಪಾಡುತ್ತೆ.+

 3 ಒಳ್ಳೆಯವರು* ಊಟ ಇಲ್ಲದೆ ಸಾಯೋ ಹಾಗೆ ಯೆಹೋವ ಬಿಡಲ್ಲ,+

ಆದ್ರೆ ಕೆಟ್ಟವರ ಆಸೆಗಳ ಮೇಲೆ ಆತನು ನೀರು ಸುರಿತಾನೆ.

 4 ದುಡಿಯದ ಕೈಗಳಿಗೆ ಬಡತನ,+

ಶ್ರಮಪಡೋ ಕೈಗಳಿಗೆ ಸಿರಿತನ.+

 5 ಬುದ್ಧಿವಂತ ಮಗ ಸುಗ್ಗಿ ಕಾಲದಲ್ಲಿ ಫಸಲು ಕೂಡಿಸ್ತಾನೆ,

ಕೊಯ್ಲಿನ ಕಾಲದಲ್ಲಿ ಗಾಢ ನಿದ್ದೆ ಮಾಡೋ ಮಗ ಅವಮಾನ ಕೊಯ್ತಾನೆ.+

 6 ನೀತಿವಂತನ ತಲೆ ಮೇಲೆ ಆಶೀರ್ವಾದ ಇರುತ್ತೆ,+

ಕೆಟ್ಟವನ ಮಾತುಗಳಲ್ಲಿ ಹಿಂಸೆ ಅಡಗಿರುತ್ತೆ.

 7 ನೀತಿವಂತನನ್ನ ನೆನಪಿಸ್ಕೊಂಡು* ಅವನಿಗೆ ಆಶೀರ್ವಾದ ಕೊಡ್ತಾರೆ,+

ಕೆಟ್ಟವನ ಹೆಸ್ರು ಕೊಳೆತು ನಾರುತ್ತೆ.+

 8 ವಿವೇಕಿ ಬುದ್ಧಿ ಮಾತನ್ನ* ಕೇಳ್ತಾನೆ,+

ಬುದ್ಧಿಯಿಲ್ಲದೆ ಮಾತಾಡುವವನು ನಾಶ ಆಗ್ತಾನೆ.+

 9 ಸರಿ ದಾರಿಯಲ್ಲಿ ನಡಿಯುವವನು ಸುರಕ್ಷಿತನಾಗಿ ಇರ್ತಾನೆ,+

ಅಡ್ಡ ದಾರಿಯಲ್ಲಿ ನಡಿಯುವವನು ಸಿಕ್ಕಿಹಾಕೊಳ್ತಾನೆ.+

10 ಮೋಸದಿಂದ ಕಣ್ಣು ಹೊಡಿಯುವವನಿಗೆ ಕಷ್ಟ ಖಂಡಿತ,+

ಮೂರ್ಖತನದಿಂದ ಮಾತಾಡುವವನಿಗೆ ನಾಶ ಖಂಡಿತ.+

11 ನೀತಿವಂತನ ಬಾಯಲ್ಲಿ ಜೀವದ ಬುಗ್ಗೆ ಇದೆ,+

ಕೆಟ್ಟವನ ಬಾಯಲ್ಲಿ ಹಿಂಸೆ ಅಡಗಿದೆ.+

12 ದ್ವೇಷ ಜಗಳ ಎಬ್ಬಿಸುತ್ತೆ,

ಪ್ರೀತಿ ಎಲ್ಲ ತಪ್ಪುಗಳನ್ನ ಮುಚ್ಚುತ್ತೆ.+

13 ವಿವೇಚನೆ ಇರೋ ವ್ಯಕ್ತಿಯ ತುಟಿಗಳಲ್ಲಿ ವಿವೇಕ ಇರುತ್ತೆ,+

ಬುದ್ಧಿ ಇಲ್ಲದವನ* ಬೆನ್ನಿಗೆ ಬೆತ್ತದ ಏಟು ಬೀಳುತ್ತೆ.+

14 ವಿವೇಕಿಗಳು ಜ್ಞಾನವನ್ನ ನಿಧಿ ತರ ಕೂಡಿಸಿ ಇಟ್ಕೊಳ್ತಾರೆ,+

ಮೂರ್ಖನ ಬಾಯಿ ನಾಶವನ್ನ ಕೈಬೀಸಿ ಕರೆಯುತ್ತೆ.+

15 ಶ್ರೀಮಂತನಿಗೆ ಅವನ ಆಸ್ತಿನೇ* ಭದ್ರ ಕೋಟೆ.

ಬಡವನಿಗೆ ಅವನ ಬಡತನದಿಂದಾನೇ ನಾಶನ.+

16 ನೀತಿವಂತನ ಕೆಲಸಗಳು ಜೀವಕ್ಕೆ ನಡಿಸುತ್ತೆ,

ಕೆಟ್ಟವನ ಕೆಲಸಗಳು ಪಾಪಕ್ಕೆ ನಡಿಸುತ್ತೆ.+

17 ಶಿಸ್ತನ್ನ ಸ್ವೀಕರಿಸುವವನು ಬೇರೆಯವ್ರಿಗೂ ಜೀವದ ದಾರಿ ತೋರಿಸ್ತಾನೆ,

ತಿದ್ದಿದಾಗ ಕೇಳದೆ ಇರುವವನು ಜನ್ರನ್ನ ತಪ್ಪುದಾರಿಗೆ ಎಳಿತಾನೆ.

18 ದ್ವೇಷವನ್ನ ತನ್ನಲ್ಲೇ ಬಚ್ಚಿಟ್ಕೊಳ್ಳೋನು ಸುಳ್ಳು ಹೇಳ್ತಾನೆ,+

ಇನ್ನೊಬ್ರ ಹೆಸ್ರನ್ನ ಹಾಳು ಮಾಡೋಕೆ ಗಾಳಿಸುದ್ದಿ ಹಬ್ಬಿಸುವವನು ಮೂರ್ಖ.

19 ಲಂಗು ಲಗಾಮಿಲ್ಲದೆ ಮಾತಾಡುವವ್ರಿಗೆ ಪಾಪ ತಪ್ಪಿದ್ದಲ್ಲ,+

ಮಾತಿನ ಮೇಲೆ ಹತೋಟಿ ಇಟ್ಕೊಳ್ಳುವವರು ವಿವೇಚನೆಯಿಂದ ನಡ್ಕೊಳ್ತಾರೆ.+

20 ನೀತಿವಂತನ ಮಾತುಗಳು ಶ್ರೇಷ್ಠ ಬೆಳ್ಳಿ,+

ಕೆಟ್ಟವನ ಯೋಚ್ನೆ* ಹುಲ್ಲುಕಡ್ಡಿಗೆ ಸಮ.

21 ನೀತಿವಂತನ ಮಾತು ಅನೇಕರನ್ನ ನೋಡ್ಕೊಳ್ಳುತ್ತೆ,*+

ಬುದ್ಧಿ ಕಮ್ಮಿ ಇರೋದ್ರಿಂದ ಮೂರ್ಖ ಸಾಯ್ತಾನೆ.+

22 ಯೆಹೋವನ ಆಶೀರ್ವಾದ ಒಬ್ಬನನ್ನ ಶ್ರೀಮಂತ ಮಾಡುತ್ತೆ,+

ಅದ್ರ ಜೊತೆ ಯಾವುದೇ ರೀತಿಯ ನೋವನ್ನ* ದೇವರು ಸೇರಿಸಲ್ಲ.

23 ನಾಚಿಕೆಗೆಟ್ಟ ಕೆಲಸ ಮಾಡೋದಂದ್ರೆ ಮೂರ್ಖನಿಗೆ ಒಂಥರಾ ಖುಷಿ,

ಆದ್ರೆ ವಿವೇಚನೆ ಇರುವವನು ವಿವೇಕಕ್ಕಾಗಿ ಹುಡುಕ್ತಾನೆ.+

24 ಕೆಟ್ಟವನು ಯಾವುದಕ್ಕೆ ಭಯಪಡ್ತಾನೋ ಅದೇ ಅವನ ಮೇಲೆ ಬರುತ್ತೆ,

ಆದ್ರೆ ನೀತಿವಂತನ ಆಸೆ ಈಡೇರುತ್ತೆ.+

25 ಸುಂಟರಗಾಳಿ ಬೀಸಿದಾಗ ಕೆಟ್ಟವನು ಹಾರಿಹೋಗ್ತಾನೆ,+

ಆದ್ರೆ ನೀತಿವಂತ ಅಡಿಪಾಯದ ತರ ಗಟ್ಟಿಯಾಗಿ ಇರ್ತಾನೆ.+

26 ಹಲ್ಲಿಗೆ ಹುಳಿ, ಕಣ್ಣಿಗೆ ಹೊಗೆ ಹೇಗೋ

ಯಜಮಾನನಿಗೆ ಸೋಮಾರಿ ಹಾಗೇ.

27 ಯೆಹೋವನ ಮೇಲೆ ಭಯ ಇದ್ರೆ ಹೆಚ್ಚು ವರ್ಷ ಇರ್ತಾರೆ,+

ಕೆಟ್ಟವನ ಆಯಸ್ಸು ಕಮ್ಮಿ ಆಗುತ್ತೆ.+

28 ನೀತಿವಂತನ ಆಸೆ ಖುಷಿ ತರುತ್ತೆ,+

ಕೆಟ್ಟವನ ಆಸೆ ಮಣ್ಣುಪಾಲಾಗುತ್ತೆ.+

29 ಯೆಹೋವನ ಮಾರ್ಗ ತಪ್ಪು ಮಾಡದವ್ರಿಗೆ ಭದ್ರಕೋಟೆ,+

ಆದ್ರೆ ತಪ್ಪು ಮಾಡುವವ್ರಿಗೆ ನಾಶನ.+

30 ನೀತಿವಂತ ಯಾವತ್ತೂ ಬಿದ್ದು ಹೋಗಲ್ಲ,+

ಕೆಟ್ಟವನು ಮುಂದೆ ಯಾವತ್ತೂ ಭೂಮಿ ಮೇಲೆ ಇರಲ್ಲ.+

31 ನೀತಿವಂತನ ಬಾಯಿಂದ ವಿವೇಕದ ಮಾತುಗಳು ಬರುತ್ತೆ,

ಹಠಮಾರಿಯ ಬಾಯಿ ಶಾಶ್ವತವಾಗಿ ಮುಚ್ಚುತ್ತೆ.

32 ನೀತಿವಂತನ ತುಟಿಗಳಿಗೆ ಒಳ್ಳೇ ಮಾತು ಹೇಳೋಕೆ ಗೊತ್ತು,

ಕೆಟ್ಟವನ ಬಾಯಿಂದ ಬರೋದೆಲ್ಲ ಕೆಟ್ಟ ಮಾತು.

11 ಮೋಸದ ತಕ್ಕಡಿ ಕಂಡ್ರೆ ಯೆಹೋವನಿಗೆ ಅಸಹ್ಯ,

ಸರಿಯಾದ ತೂಕದ ಕಲ್ಲು ನೋಡಿದ್ರೆ ಸಂತೋಷ.+

 2 ಅಹಂಕಾರ ಬಂದ್ರೆ ಅದ್ರ ಹಿಂದೆ ಅವಮಾನನೂ ಬರುತ್ತೆ.+

ಆದ್ರೆ ವಿನಮ್ರರ ಹತ್ರ ವಿವೇಕ ಇರುತ್ತೆ.+

 3 ತಪ್ಪು ಮಾಡದವರಿಗೆ ಪ್ರಾಮಾಣಿಕತೆ ಮಾರ್ಗದರ್ಶನ ಕೊಡುತ್ತೆ,+

ಮೋಸಗಾರರ ಕಪಟ ಅವ್ರನ್ನ ನಾಶ ಮಾಡಿಬಿಡುತ್ತೆ.+

 4 ದೇವರ ಕೋಪದ ದಿನದಲ್ಲಿ ಆಸ್ತಿ-ಐಶ್ವರ್ಯಕ್ಕೆ ಮೂರು ಕಾಸಿನ ಬೆಲೆ ಇರಲ್ಲ,+

ಆದ್ರೆ ನೀತಿ ಒಬ್ಬ ಮನುಷ್ಯನನ್ನ ಸಾವಿಂದ ಕಾಪಾಡುತ್ತೆ.+

 5 ತಪ್ಪು ಮಾಡದವನು ನೀತಿಯಿಂದ ನಡ್ಕೊಂಡ್ರೆ ಅವನ ದಾರಿ ನೆಟ್ಟಗೆ ಇರುತ್ತೆ,

ಆದ್ರೆ ಕೆಟ್ಟವನು ಮಾಡೋ ಕೆಟ್ಟ ಕೆಲಸಗಳು ಅವನನ್ನೇ ಬೀಳಿಸುತ್ತೆ.+

 6 ನೀತಿವಂತರನ್ನ ಅವ್ರ ನೀತಿ ಕಾಪಾಡುತ್ತೆ,+

ಮೋಸಗಾರರು ಅವ್ರ ಆಸೆಗಳ ಬಲೆಗೆ ಅವ್ರೇ ಬೀಳ್ತಾರೆ.+

 7 ಕೆಟ್ಟವನು ತೀರಿ ಹೋಗುವಾಗ ಅವನ ಆಸೆಗಳೆಲ್ಲ ನುಚ್ಚುನೂರಾಗುತ್ತೆ,

ಸ್ವಂತ ಶಕ್ತಿ ಮೇಲೆ ಅವನಿಟ್ಟ ನಂಬಿಕೆ ಮಣ್ಣುಪಾಲಾಗುತ್ತೆ.+

 8 ನೀತಿವಂತ ಕಷ್ಟದಿಂದ ತಪ್ಪಿಸ್ಕೊಳ್ತಾನೆ,

ಅವನ ಬದ್ಲು ಕೆಟ್ಟವನು ಸಿಕ್ಕಿಹಾಕೊಳ್ತಾನೆ.+

 9 ಧರ್ಮಭ್ರಷ್ಟ ತನ್ನ ಮಾತಿಂದ ಇನ್ನೊಬ್ಬನನ್ನ* ಹಾಳು ಮಾಡ್ತಾನೆ,

ನೀತಿವಂತ ತನ್ನ ಜ್ಞಾನದಿಂದ ತಪ್ಪಿಸ್ಕೊಳ್ತಾನೆ.+

10 ನೀತಿವಂತರಲ್ಲಿರೋ ಒಳ್ಳೆತನದಿಂದ ಇಡೀ ಪಟ್ಟಣಕ್ಕೆ ಖುಷಿ ಆಗುತ್ತೆ,

ಕೆಟ್ಟವರು ನಾಶ ಆದಾಗ ಜನ ಕುಣಿದು ಕುಪ್ಪಳಿಸ್ತಾರೆ.+

11 ನೀತಿವಂತನಿಗೆ ಆಶೀರ್ವಾದ ಸಿಕ್ಕಿದಾಗ ಪಟ್ಟಣಕ್ಕೆ ಒಳ್ಳೇ ಹೆಸ್ರು ಬರುತ್ತೆ,+

ಕೆಟ್ಟವನ ಮಾತುಗಳು ಪಟ್ಟಣವನ್ನ ನಾಶ ಮಾಡುತ್ತೆ.+

12 ಬುದ್ಧಿ ಇಲ್ಲದವನು ಪಕ್ಕದ ಮನೆಯವನನ್ನ ಕೀಳಾಗಿ ನೋಡ್ತಾನೆ,

ಬುದ್ಧಿ ಇರುವವನು ಮೌನವಾಗಿ ಇರ್ತಾನೆ.+

13 ಚಾಡಿ ಹೇಳಿ ಹೆಸ್ರು ಹಾಳು ಮಾಡುವವನು ಗುಟ್ಟನ್ನ ರಟ್ಟು ಮಾಡ್ತಾನೆ,+

ನಂಬಿಗಸ್ತ ವ್ಯಕ್ತಿ ಗುಟ್ಟನ್ನ ಗುಟ್ಟಾಗೇ ಇಡ್ತಾನೆ.

14 ನಿಪುಣನಿಂದ* ಮಾರ್ಗದರ್ಶನ ಸಿಗದಿದ್ರೆ ಜನ ಸೋಲು ಅನುಭವಿಸ್ತಾರೆ,

ಆದ್ರೆ ತುಂಬ ಸಲಹೆಗಾರರು* ಇದ್ರೆ ಯಶಸ್ಸು* ಖಂಡಿತ.+

15 ಅಪರಿಚಿತನ ಸಾಲಕ್ಕೆ ಜಾಮೀನು ಕೊಟ್ರೆ ಕಷ್ಟ ಪಡ್ತಾ ಇರಬೇಕಾಗುತ್ತೆ,+

ಕೈಕುಲುಕಿ ಮಾತು ಕೊಡೋಕೆ ಆತುರಪಡದವನು ಕಷ್ಟದಿಂದ ತಪ್ಪಿಸ್ಕೊಳ್ತಾನೆ.

16 ದಯೆ ಇರೋ ಸ್ತ್ರೀಗೆ ಗೌರವ ಸಿಗುತ್ತೆ,+

ಕನಿಕರ ಇಲ್ಲದ ಗಂಡಸು ಸಂಪತ್ತನ್ನ ಲೂಟಿ ಮಾಡ್ತಾನೆ.

17 ದಯೆ* ತೋರಿಸುವವನು ತನಗೇ ಒಳ್ಳೇದು ಮಾಡ್ಕೊಳ್ತಾನೆ,+

ಕ್ರೂರಿ ತನ್ನ ಮೇಲೆನೇ ತೊಂದ್ರೆ* ತಂದ್ಕೊಳ್ತಾನೆ.+

18 ಕೆಟ್ಟವನು ಮೋಸದಿಂದ ಸಂಪಾದನೆ ಮಾಡ್ತಾನೆ,+

ನೀತಿಯನ್ನ ಬಿತ್ತುವವನು ಒಳ್ಳೇ ಫಲ ಕೊಯ್ತಾನೆ.+

19 ನೀತಿಯ ಪಕ್ಷದಲ್ಲೇ ನಿಲ್ಲುವವನಿಗೆ ಜೀವ,+

ಕೆಟ್ಟ ವಿಷ್ಯಗಳ ಹಿಂದೆ ಹೋಗುವವನಿಗೆ ಸಾವು.

20 ಹೃದಯದಲ್ಲಿ ಕಪಟ ಇರುವವ್ರನ್ನ ನೋಡಿದ್ರೆ ಯೆಹೋವನಿಗೆ ಅಸಹ್ಯ,+

ತಪ್ಪು ಮಾಡದೆ ನಡಿಯುವವರನ್ನ ನೋಡಿದ್ರೆ ಆತನಿಗೆ ಸಂತೋಷ.+

21 ಈ ಮಾತಿನ ಮೇಲೆ ನಂಬಿಕೆ ಇಡಿ: ಕೆಟ್ಟವರಿಗೆ ಶಿಕ್ಷೆ ಆಗೇ ಆಗುತ್ತೆ,+

ಆದ್ರೆ ನೀತಿವಂತರ ಮಕ್ಕಳಿಗೆ ಶಿಕ್ಷೆ ಆಗಲ್ಲ.

22 ವಿವೇಕವನ್ನ ತಳ್ಳಿಹಾಕೋ ಸುಂದರಿ

ಹಂದಿ ಮೂಗಿಗೆ ಹಾಕಿರೋ ಮೂಗುತಿ.

23 ನೀತಿವಂತರ ಆಸೆ ಒಳ್ಳೇದಕ್ಕೆ ನಡಿಸುತ್ತೆ,+

ಆದ್ರೆ ಕೆಟ್ಟವ್ರ ಆಸೆ ಕೋಪಕ್ಕೆ ದಾರಿ ಮಾಡುತ್ತೆ.

24 ಧಾರಾಳವಾಗಿ ಕೊಡುವವನಿಗೆ* ಧಾರಾಳವಾಗಿ ಸಿಗುತ್ತೆ,+

ಕೊಡಬೇಕಾಗಿರೋದನ್ನ ಕೊಡದ ಜಿಪುಣ ಬಡವನಾಗ್ತಾನೆ.+

25 ಉದಾರವಾಗಿ ಕೊಡುವವನು ಏಳಿಗೆ ಆಗ್ತಾನೆ,+

ಚೈತನ್ಯ ಕೊಡುವವನಿಗೆ ಚೈತನ್ಯ ಸಿಗುತ್ತೆ.+

26 ಜನ್ರಿಗೆ ಧಾನ್ಯ ಮಾರೋಕೆ ಒಪ್ಪದವನಿಗೆ ಶಾಪ ಸಿಗುತ್ತೆ.

ಆದ್ರೆ ಅದನ್ನ ಮಾರುವವನಿಗೆ ಆಶೀರ್ವಾದ ಸಿಗುತ್ತೆ.

27 ಒಳ್ಳೇದನ್ನ ಮಾಡೋಕೆ ಶ್ರದ್ಧೆಯಿಂದ ಪ್ರಯತ್ನಿಸುವವನಿಗೆ ದಯೆ ಸಿಗುತ್ತೆ.+

ಕೆಟ್ಟದು ಮಾಡೋಕೆ ತುದಿಗಾಲಲ್ಲಿ ನಿಲ್ಲುವವನಿಗೆ ಕೆಟ್ಟದೇ ಆಗುತ್ತೆ.+

28 ತನ್ನ ಹಣ-ಆಸ್ತಿ ಮೇಲೆ ನಂಬಿಕೆ ಇಟ್ಕೊಂಡವನು ಬಿದ್ದುಹೋಗ್ತಾನೆ,+

ನೀತಿವಂತ ಎಲೆಗಳ ತರ ಹಸಿರಾಗಿ ಇರ್ತಾನೆ.+

29 ತನ್ನ ಕುಟುಂಬದ ಮೇಲೆ ತೊಂದ್ರೆ ತಂದು ಹಾಕುವವನು ಏನೂ ಸಂಪಾದಿಸಲ್ಲ,*+

ಮೂರ್ಖ ವಿವೇಕಿಗೆ ಗುಲಾಮ ಆಗ್ತಾನೆ.

30 ನೀತಿವಂತನ ಕೆಲಸಗಳು ಜೀವ ಕೊಡೋ ಮರ,+

ಬೇರೆಯವ್ರ ಮನಸ್ಸು ಗೆಲ್ಲುವವನು* ವಿವೇಕಿ.+

31 ಭೂಮಿ ಮೇಲೆ ನೀತಿವಂತನಿಗೇ ಆಶೀರ್ವಾದ ಸಿಗುತ್ತೆ ಅಂದ್ಮೇಲೆ,

ಕೆಟ್ಟವನಿಗೆ ಪಾಪಿಗೆ ಅವನವನ ಕೆಲಸಕ್ಕೆ ತಕ್ಕ ಫಲ ಸಿಗಲ್ವಾ?+

12 ಶಿಸ್ತನ್ನ ಪ್ರೀತಿಸುವವನು ಜ್ಞಾನವನ್ನ ಪ್ರೀತಿಸ್ತಾನೆ,+

ತಿದ್ದುವವನನ್ನ ದ್ವೇಷಿಸುವವನು ಮೂರ್ಖ.+

 2 ಒಳ್ಳೇ ವ್ಯಕ್ತಿ ಯೆಹೋವನ ಮೆಚ್ಚುಗೆ ಪಡಿತಾನೆ,

ಸಂಚು ಮಾಡುವವನನ್ನ ದೂರ ಮಾಡ್ತಾನೆ.+

 3 ಕೆಟ್ಟ ಕೆಲಸ ಮಾಡೋ ಯಾವನೂ ಉಳಿಯಲ್ಲ,+

ಆದ್ರೆ ನೀತಿವಂತರು ಬೇರು ಸಮೇತ ಕಿತ್ತುಹಾಕೋಕೆ ಆಗದ ಮರದ ಹಾಗೆ ಇರ್ತಾರೆ.

 4 ಸಮರ್ಥ ಹೆಂಡತಿ ತನ್ನ ಗಂಡನಿಗೆ ಕಿರೀಟ ಇದ್ದ ಹಾಗೆ,+

ಮಾನಕಳೆಯೋ ಹೆಂಡತಿ ಗಂಡನ ಮೂಳೆ ಮುರಿದ ಹಾಗೆ.+

 5 ನೀತಿವಂತರ ಆಲೋಚನೆಗಳಲ್ಲಿ ನ್ಯಾಯ ಇರುತ್ತೆ,

ಕೆಟ್ಟವರು ಕೊಡೋ ಮಾರ್ಗದರ್ಶನದಲ್ಲಿ ಮೋಸ ಇರುತ್ತೆ.

 6 ಕೆಟ್ಟವ್ರ ಮಾತು ಜೀವ ತೆಗಿಯೋ* ಬಲೆ,+

ನೀತಿವಂತರ ಬಾಯಿ ರಕ್ಷಣೆ.+

 7 ಕೆಟ್ಟವರು ನಾಶ ಆದ್ಮೇಲೆ ಯಾವತ್ತೂ ಕಾಣಿಸಲ್ಲ,

ಆದ್ರೆ ನೀತಿವಂತರ ಮನೆ ಯಾವಾಗ್ಲೂ ಇರುತ್ತೆ.+

 8 ಒಬ್ಬನ ಮಾತುಗಳಲ್ಲಿ ವಿವೇಚನೆ ಇದ್ರೆ ಜನ ಹೊಗಳ್ತಾರೆ,+

ಕೆಟ್ಟ ಹೃದಯ ಇರುವವನನ್ನ ಬೈತಾರೆ.+

 9 ಹೊಟ್ಟೆಗೆ ಇಲ್ಲದಿದ್ರೂ* ಜಂಬ ಕೊಚ್ಕೊಳ್ಳೋ ವ್ಯಕ್ತಿಗಿಂತ,

ಸೇವಕನಿರೋ ಸಾಧಾರಣ ವ್ಯಕ್ತಿ ಎಷ್ಟೋ ಮೇಲು.+

10 ನೀತಿವಂತ ಸಾಕುಪ್ರಾಣಿಗಳನ್ನ ಚೆನ್ನಾಗಿ ನೋಡ್ಕೊಳ್ತಾನೆ,+

ಕೆಟ್ಟವನು ಕರುಣೆ ತೋರಿಸಿದ್ರೂ ಕ್ರೂರವಾಗಿ ಇರುತ್ತೆ.

11 ನೆಲ ಉಳುಮೆ ಮಾಡುವವನಿಗೆ ಹೊಟ್ಟೆ ತುಂಬ ಊಟ ಇರುತ್ತೆ,+

ಕೆಲಸಕ್ಕೆ ಬಾರದ ವಿಷ್ಯಗಳ ಹಿಂದೆ ಹೋಗುವವನಿಗೆ ಬುದ್ಧಿಯಿಲ್ಲ.*

12 ಕೆಟ್ಟವನು ಲೂಟಿ ಮಾಡಿದ್ದನ್ನ ನೋಡಿ ಕೆಟ್ಟವನಿಗೆ ಹೊಟ್ಟೆ ಉರಿಯುತ್ತೆ,

ನೀತಿವಂತ ಚೆನ್ನಾಗಿ ಬೇರು ಬಿಟ್ಟಿರೋ ಮರದ ಹಾಗೆ, ಹಣ್ಣು ಕೊಡ್ತಾನೆ.

13 ಕೆಟ್ಟವನು ತನ್ನ ಪಾಪದ ಮಾತುಗಳಿಂದಾಗಿ ಸಿಕ್ಕಿಹಾಕೊಳ್ತಾನೆ,+

ನೀತಿವಂತ ಕಷ್ಟಗಳಿಂದ ತಪ್ಪಿಸ್ಕೊಳ್ತಾನೆ.

14 ಒಬ್ಬ ವ್ಯಕ್ತಿಗೆ ತನ್ನ ಮಾತುಗಳಿಂದಾಗಿ* ಒಳ್ಳೆದಾಗುತ್ತೆ,+

ತನ್ನ ಕೆಲಸಗಳಿಂದ ಆಶೀರ್ವಾದ ಸಿಗುತ್ತೆ.

15 ಮೂರ್ಖನಿಗೆ ತನ್ನ ದಾರಿ ಸರಿಯಾಗೇ ಇದೆ ಅಂತ ಅನಿಸುತ್ತೆ,+

ವಿವೇಕಿ ಸಲಹೆಯನ್ನ* ಸ್ವೀಕರಿಸ್ತಾನೆ.+

16 ಮೂರ್ಖ ಕಿರಿಕಿರಿ ಆದ್ರೆ ತಕ್ಷಣ* ತೋರಿಸಿಬಿಡ್ತಾನೆ,+

ಜಾಣ ಅವಮಾನ ಆದ್ರೆ ತಲೆ ಕೆಡಿಸ್ಕೊಳ್ಳಲ್ಲ.

17 ನಂಬಿಗಸ್ತಸಾಕ್ಷಿ ಸತ್ಯಾನೇ ಹೇಳ್ತಾನೆ,

ಸುಳ್ಳುಸಾಕ್ಷಿ ಸುಳ್ಳೇ ಹೇಳ್ತಾನೆ.

18 ಯೋಚ್ನೆ ಮಾಡ್ದೆ ಹೇಳೋ ಮಾತುಗಳು ಕತ್ತಿ ತಿವಿದ ಹಾಗಿರುತ್ತೆ,

ಬುದ್ದಿವಂತನ ಮಾತು ಮದ್ದಿನಂತೆ ಇರುತ್ತೆ.+

19 ಸತ್ಯವನ್ನ ಹೇಳೋ ತುಟಿಗಳು ಶಾಶ್ವತ,+

ಸುಳ್ಳಿನ ನಾಲಿಗೆ ಕ್ಷಣಿಕ.+

20 ಕೆಟ್ಟದಾಗಬೇಕಂತ ನೆನಸೋ ಮನಸ್ಸಲ್ಲಿ ಮೋಸ ತುಂಬಿರುತ್ತೆ,

ಶಾಂತಿ ಸಮಾಧಾನವನ್ನ ಹೆಚ್ಚಿಸುವವರು ಖುಷಿಖುಷಿಯಾಗಿ ಇರ್ತಾರೆ.+

21 ನೀತಿವಂತನಿಗೆ ಹಾನಿನೇ ಆಗಲ್ಲ,+

ಕೆಟ್ಟವನ ಮೇಲೆ ಕೆಟ್ಟದು ಸುರಿಮಳೆ ತರ ಸುರಿಯುತ್ತೆ.+

22 ಸುಳ್ಳು ಹೇಳೋ ನಾಲಿಗೆ ಯೆಹೋವನಿಗೆ ಅಸಹ್ಯ,+

ನಂಬಿಗಸ್ತರನ್ನ ನೋಡಿದ್ರೆ ಆತನಿಗೆ ಖುಷಿ.

23 ಜಾಣ ತನಗೆ ಗೊತ್ತಿರೋದನ್ನೆಲ್ಲ ಹೇಳಿಬಿಡಲ್ಲ,

ಮೂರ್ಖನ ಹೃದಯ ತನ್ನ ಮೂರ್ಖತನವನ್ನ ಕಕ್ಕುತ್ತೆ.+

24 ಕಷ್ಟಪಟ್ಟು ಕೆಲಸ ಮಾಡುವವರು ಆಳ್ತಾರೆ,+

ಸೋಮಾರಿಗಳು ಗುಲಾಮರಾಗ್ತಾರೆ.+

25 ಚಿಂತೆ ಇದ್ರೆ ಹೃದಯ ಬಾಡುತ್ತೆ,*+

ಒಳ್ಳೇ ಮಾತಿಗೆ ಮನಸ್ಸು ಅರಳುತ್ತೆ.+

26 ನೀತಿವಂತ ತನ್ನ ಪ್ರಾಣಿಗಳಿಗಾಗಿ ಹುಲ್ಲುಗಾವಲುಗಳನ್ನ ಜಾಗ್ರತೆಯಿಂದ ಹುಡುಕ್ತಾನೆ,

ಕೆಟ್ಟವನ ನಡತೆ ಅವನನ್ನ ದಾರಿತಪ್ಪಿಸುತ್ತೆ.

27 ಮೈಗಳ್ಳ ತನ್ನ ಬೇಟೆ ಹಿಂದೆ ಓಡಲ್ಲ,+

ಮೈಬಗ್ಗಿಸಿ ದುಡಿಯುವವನಿಗೆ ಅದೇ ಅಮೂಲ್ಯ ಆಸ್ತಿ.

28 ನೀತಿಯ ದಾರಿ ಜೀವಕ್ಕೆ ನಡಿಸುತ್ತೆ,+

ಆ ದಾರಿಯಲ್ಲಿ ಸಾವಿರಲ್ಲ.

13 ವಿವೇಕಿಯಾದ ಮಗ ಅಪ್ಪ ಕೊಡೋ ಶಿಸ್ತನ್ನ ಸ್ವೀಕರಿಸ್ತಾನೆ,+

ಆದ್ರೆ ತಿದ್ದುವಾಗ ಅಹಂಕಾರಿ* ಕಿವಿಗೇ ಹಾಕೊಳ್ಳಲ್ಲ.+

 2 ಒಬ್ಬ ವ್ಯಕ್ತಿ ತನ್ನ ಬಾಯಿಂದ ಬರೋ ಮಾತುಗಳಿಂದ ಒಳ್ಳೇದನ್ನ ಅನುಭವಿಸ್ತಾನೆ,+

ಆದ್ರೆ ಮೋಸಗಾರರು ಯಾರಿಗೆ ಹಿಂಸೆ ಕೊಡೋದು ಅಂತ ಕಾಯ್ತಾ ಇರ್ತಾರೆ.

 3 ನಾಲಿಗೆಗೆ ಕಡಿವಾಣ ಹಾಕುವವನು ಜೀವ ಉಳಿಸ್ಕೊಳ್ತಾನೆ,+

ಲಂಗುಲಗಾಮಿಲ್ಲದೆ ಮಾತಾಡೋನು ನಾಶ ಆಗ್ತಾನೆ.+

 4 ಸೋಮಾರಿಗೆ ನೂರಾರು ಆಸೆ ಇರುತ್ತೆ, ಆದ್ರೆ ಅವನ ಹತ್ರ ಏನೂ ಇರಲ್ಲ.+

ಕಷ್ಟಪಟ್ಟು ಕೆಲಸ ಮಾಡೋನು ತೃಪ್ತಿಯಿಂದ ಇರ್ತಾನೆ.+

 5 ನೀತಿವಂತನಿಗೆ ಸುಳ್ಳು ಇಷ್ಟ ಆಗಲ್ಲ,+

ಆದ್ರೆ ಕೆಟ್ಟವನ ಕೆಲಸಗಳು ಅವನಿಗೆ ನಾಚಿಕೆ, ಅವಮಾನ ತರುತ್ತೆ.

 6 ತಪ್ಪು ಮಾಡದವನನ್ನ ನೀತಿ ಕಾಪಾಡುತ್ತೆ,+

ಆದ್ರೆ ಕೆಟ್ಟತನ ಪಾಪಿಯನ್ನ ನಾಶ ಮಾಡುತ್ತೆ.

 7 ಕೆಲವರು ಏನೂ ಇಲ್ಲದಿದ್ರೂ ಶ್ರೀಮಂತರ ತರ ನಟಿಸ್ತಾರೆ,+

ಇನ್ನು ಕೆಲವರು ಎಲ್ಲ ಇದ್ರೂ ಬಡವರು ಅಂತ ಹೇಳ್ಕೊಳ್ತಾರೆ.

 8 ಶ್ರೀಮಂತ ತನ್ನ ಪ್ರಾಣ ಕಾಪಾಡ್ಕೊಳ್ಳೋಕೆ ತನ್ನ ಆಸ್ತಿಯನ್ನೇ ಕೊಡ್ತಾನೆ,+

ಆದ್ರೆ ಬಡವನಿಗೆ ಅಂಥ ಪರಿಸ್ಥಿತಿ ಬರಲ್ಲ.+

 9 ನೀತಿವಂತರ ಬೆಳಕು ಚೆನ್ನಾಗಿ ಬೆಳಗುತ್ತೆ,*+

ಆದ್ರೆ ಕೆಟ್ಟವನ ದೀಪ ಆರಿಹೋಗುತ್ತೆ.+

10 ಅಹಂಕಾರದಿಂದ ಜಗಳ ಆಗುತ್ತೆ,+

ಆದ್ರೆ ಸಲಹೆ ಕೇಳುವವನಿಗೆ* ವಿವೇಕ ಸಿಗುತ್ತೆ.+

11 ದಿನ ಬೆಳಗಾಗುವಷ್ಟರಲ್ಲಿ ಮಾಡಿದ* ಹಣ-ಆಸ್ತಿ ಕರಗಿಹೋಗುತ್ತೆ,+

ಕಷ್ಟಪಟ್ಟು ಕೆಲಸಮಾಡಿ ಕೂಡಿಸಿದ* ಸೊತ್ತು ಜಾಸ್ತಿ ಆಗುತ್ತೆ.

12 ಅಂದ್ಕೊಂಡಿದ್ದು ಆಗೋಕೆ* ತಡ ಆದಾಗ ಬೇಜಾರಾಗುತ್ತೆ,+

ಕನಸು ನನಸಾದಾಗ ಅದು ಜೀವ ಕೊಡೋ ಮರದ ತರ ಇರುತ್ತೆ.+

13 ಕಲಿಸುವಾಗ ಕಿವಿಗೆ ಹಾಕೊಳ್ಳದೇ ಇದ್ರೆ ಕೆಟ್ಟ ಪರಿಣಾಮ ಅನುಭವಿಸಬೇಕಾಗುತ್ತೆ,+

ಆಜ್ಞೆಯನ್ನ ಗೌರವಿಸುವವನಿಗೆ ಬಹುಮಾನ ಸಿಗುತ್ತೆ.+

14 ವಿವೇಕಿಯ ಬುದ್ಧಿವಾದ* ಜೀವದ ಬುಗ್ಗೆ,+

ಅದು ಮರಣದ ಉರ್ಲುಗಳಿಂದ ಒಬ್ಬನನ್ನ ಕಾಪಾಡುತ್ತೆ.

15 ತುಂಬ ತಿಳುವಳಿಕೆ* ಇದ್ರೆ ದಯೆ ಸಿಗುತ್ತೆ,

ಆದ್ರೆ ಮೋಸಗಾರರ ದಾರಿಯಲ್ಲಿ ಬರೀ ಕಷ್ಟಗಳೇ ಇರುತ್ತೆ.

16 ಬುದ್ಧಿವಂತ ತನಗೆ ಜ್ಞಾನ ಇರೋದನ್ನ ಕೆಲಸದಲ್ಲಿ ತೋರಿಸ್ತಾನೆ,+

ಮೂರ್ಖ ತನ್ನ ಮೂರ್ಖತನವನ್ನ ಬಯಲು ಮಾಡ್ತಾನೆ.+

17 ಕೆಟ್ಟ ಸಂದೇಶವಾಹಕ ಸಮಸ್ಯೆಯಲ್ಲಿ ಸಿಕ್ಕಿಹಾಕೊಳ್ತಾನೆ,+

ನಂಬಿಗಸ್ತ ಪ್ರತಿನಿಧಿ ಪ್ರಯೋಜನ ಪಡಿತಾನೆ.+

18 ಶಿಸ್ತನ್ನ ಅಸಡ್ಡೆ ಮಾಡುವವನು ಬಡತನ, ಅವಮಾನ ಅನುಭವಿಸ್ತಾನೆ.

ತಿದ್ದುವಾಗ ಕೇಳುವವನು ಗೌರವ ಪಡಿತಾನೆ.+

19 ಆಸೆ ಈಡೇರಿದಾಗ ಖುಷಿ ಆಗುತ್ತೆ,+

ಕೆಟ್ಟದನ್ನ ಬಿಡಬೇಕಂದ್ರೆ ಮೂರ್ಖನಿಗೆ ದುಃಖ ಆಗುತ್ತೆ.+

20 ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ,+

ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ.+

21 ಕಷ್ಟ ಪಾಪಿಗಳ ಹಿಂದೆನೇ ಸುತ್ತುತ್ತೆ,+

ಆದ್ರೆ ಸುಖ-ಸಮೃದ್ಧಿ ನೀತಿವಂತನಿಗೆ ಸಿಗೋ ಬಹುಮಾನ.+

22 ಒಳ್ಳೇ ವ್ಯಕ್ತಿ ತನ್ನ ಆಸ್ತಿಯನ್ನ ಮೊಮ್ಮಕ್ಕಳಿಗೆ ಬಿಟ್ಟು ಹೋಗ್ತಾನೆ,

ಆದ್ರೆ ಪಾಪಿಯ ಸಂಪತ್ತು ನೀತಿವಂತನ ಕೈ ಸೇರುತ್ತೆ.+

23 ಬಡವ ಉಳುಮೆ ಮಾಡಿದ ಭೂಮಿ ಸಮೃದ್ಧ ಫಲ ಕೊಡುತ್ತೆ,

ಆದ್ರೆ ಅದನ್ನ* ಅನ್ಯಾಯದಿಂದ ಕಿತ್ಕೊಳ್ತಾರೆ.

24 ಏಟು ಕೊಡದ* ಅಪ್ಪ ಮಗನ ಶತ್ರು,+

ಶಿಸ್ತು ಕೊಡೋ ಅಪ್ಪ ಮಗನಿಗೆ ಮಿತ್ರ.+

25 ನೀತಿವಂತ ಹೊಟ್ಟೆ ತುಂಬ ತಿಂತಾನೆ,+

ಕೆಟ್ಟವನ ಹೊಟ್ಟೆ ಖಾಲಿನೇ ಇರುತ್ತೆ.+

14 ಬುದ್ಧಿ ಇರೋ ಸ್ತ್ರೀ ತನ್ನ ಮನೆ ಕಟ್ತಾಳೆ,+

ಬುದ್ಧಿ ಇಲ್ಲದವಳು ಕೈಯಾರೆ ಮನೆ ಮುರಿತಾಳೆ.

 2 ಸರಿಯಾದ ದಾರಿಯಲ್ಲಿ ನಡಿಯುವವನಿಗೆ ಯೆಹೋವನ ಭಯ ಇರುತ್ತೆ,

ಅಡ್ಡದಾರಿ ಹಿಡಿಯುವವನು ಆತನನ್ನ ತಿರಸ್ಕರಿಸ್ತಾನೆ.

 3 ಮೂರ್ಖನ ಅಹಂಕಾರದ ಮಾತುಗಳು ಕೋಲಿಂದ ಹೊಡೆದ ಹಾಗಿರುತ್ತೆ,

ವಿವೇಕಿಯ ಮಾತುಗಳು ಕಾಪಾಡುತ್ತೆ.

 4 ದನಕರುಗಳು ಇಲ್ಲದಿದ್ರೆ ಗೋದಲಿ ಗಲೀಜಾಗಿ ಇರಲ್ಲ,

ಆದ್ರೆ ಹೋರಿಯ ಶಕ್ತಿಯಿಂದ ಬೆಳೆ ಚೆನ್ನಾಗಿ ಬೆಳೆಯುತ್ತೆ.

 5 ನಂಬಿಗಸ್ತಸಾಕ್ಷಿ ಸುಳ್ಳು ಹೇಳಲ್ಲ,

ಆದ್ರೆ ಸುಳ್ಳುಸಾಕ್ಷಿಯ ಬಾಯಲ್ಲಿ ಬರೋದು ಬರೀ ಸುಳ್ಳೇ.+

 6 ಗೇಲಿ ಮಾಡುವವನಿಗೆ ವಿವೇಕ ಹುಡುಕಿದ್ರೂ ಸಿಗಲ್ಲ,

ಅರ್ಥಮಾಡ್ಕೊಳ್ಳೋ ಶಕ್ತಿ ಇರೋ ವ್ಯಕ್ತಿಗೆ ಜ್ಞಾನ ಸುಲಭವಾಗಿ ಸಿಗುತ್ತೆ.+

 7 ಮೂರ್ಖನಿಂದ ದೂರ ಇರು,

ಅವನ ಮಾತಲ್ಲಿ ಜ್ಞಾನ ಇರಲ್ಲ.+

 8 ಜಾಣ ತನ್ನ ವಿವೇಕದಿಂದ ಯಾವ ದಾರೀಲಿ ಹೋಗಬೇಕಂತ ತಿಳ್ಕೋತಾನೆ,

ಬುದ್ಧಿ ಇಲ್ಲದವನು ಮೂರ್ಖತನದಿಂದ ಮೋಸ ಹೋಗ್ತಾನೆ.*+

 9 ಮೂರ್ಖ ತನ್ನ ತಪ್ಪುಗಳನ್ನ ತಮಾಷೆಯಾಗಿ ತಗೊಳ್ತಾನೆ,+

ಆದ್ರೆ ನೀತಿವಂತ ರಾಜಿ ಮಾಡ್ಕೊಳ್ಳೋಕೆ ತಯಾರಾಗಿ ಇರ್ತಾನೆ.*

10 ನಮ್ಮ ಹೃದಯದಲ್ಲಿರೋ ನೋವು ನಮ್ಮ ಹೃದಯಕ್ಕೇ ಗೊತ್ತು,

ಬೇರೆ ಯಾರೂ ಅದ್ರ ಸಂತೋಷ ಹಂಚ್ಕೊಳ್ಳಕ್ಕಾಗಲ್ಲ.

11 ಕೆಟ್ಟವನ ಮನೆ ನಾಶವಾಗಿ ಹೋಗುತ್ತೆ,+

ನೀತಿವಂತನ ಡೇರೆ ಏಳಿಗೆ ಆಗ್ತಾ ಹೋಗುತ್ತೆ.

12 ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ,+

ಆದ್ರೆ ಅದು ಸಾವಲ್ಲಿ ಕೊನೆ ಆಗುತ್ತೆ.+

13 ನಗುವವನ ಹೃದಯದಲ್ಲೂ ನೋವು ಅಡಗಿರಬಹುದು,

ಸಂತೋಷ ಕೊನೆಗೆ ಸಂಕಟವಾಗಿ ಬದಲಾಗಬಹುದು.

14 ಯಾರ ಹೃದಯ ದೇವರಿಂದ ದೂರ ಇರುತ್ತೋ ಅವನ ಕೆಲಸಗಳಿಗೆ ತಕ್ಕ ಶಿಕ್ಷೆ ಸಿಗುತ್ತೆ,+

ಒಳ್ಳೇ ವ್ಯಕ್ತಿಗೆ ಅವನ ಕೆಲಸಗಳಿಗೆ ಒಳ್ಳೇ ಫಲ ಸಿಗುತ್ತೆ.+

15 ಅನುಭವ ಇಲ್ಲದವನು* ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ,

ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.+

16 ವಿವೇಕಿ ಹುಷಾರಾಗಿದ್ದು ಕೆಟ್ಟದ್ರಿಂದ ದೂರಾನೇ ಇರ್ತಾನೆ,

ಮೂರ್ಖ ದುಡುಕ್ತಾನೆ,* ಅತಿಯಾದ ಆತ್ಮವಿಶ್ವಾಸ ತೋರಿಸ್ತಾನೆ.

17 ಮುಂಗೋಪಿ ಮೂರ್ಖನಾಗಿ ನಡ್ಕೊಳ್ತಾನೆ,+

ಆದ್ರೆ ವಿಷ್ಯಗಳನ್ನ ಜಾಗರೂಕತೆಯಿಂದ ತೂಗಿನೋಡುವವನು ದ್ವೇಷಕ್ಕೆ ಗುರಿ ಆಗ್ತಾನೆ.

18 ಅನುಭವ ಇಲ್ಲದವನು ಮೂರ್ಖತನವನ್ನ ಆಸ್ತಿಯಾಗಿ ಪಡಿತಾನೆ,

ಆದ್ರೆ ಜಾಣ ಜ್ಞಾನದ ಕಿರೀಟ ಪಡಿತಾನೆ.+

19 ಕೆಟ್ಟ ಜನ್ರು ಒಳ್ಳೇತನದ ಮುಂದೆ ಬಾಗಬೇಕಾಗುತ್ತೆ,

ಕೆಟ್ಟವರು ನೀತಿವಂತರ ಬಾಗಿಲ ಹತ್ರ ಅಡ್ಡಬೀಳಬೇಕಾಗುತ್ತೆ.

20 ಬಡವನನ್ನ ಅಕ್ಕಪಕ್ಕದವರು ಕೂಡ ದ್ವೇಷಿಸ್ತಾರೆ,+

ಆದ್ರೆ ಶ್ರೀಮಂತನಿಗೆ ತುಂಬಾ ಸ್ನೇಹಿತರು ಇರ್ತಾರೆ.+

21 ಬೇರೆಯವರನ್ನ ಕೀಳಾಗಿ ನೋಡುವವನು ಪಾಪಿ,

ಬಡವನಿಗೆ ಕನಿಕರ ತೋರಿಸುವವನು ಸಂತೋಷವಾಗಿ ಇರ್ತಾನೆ.+

22 ಕೇಡು ಬಗೆಯುವವರು ದಾರಿ ತಪ್ಪದೇ ಇರ್ತಾರಾ?

ಒಳ್ಳೇದನ್ನ ಮಾಡೋಕೆ ಇಷ್ಟಪಡುವವರನ್ನ ಜನ ಪ್ರೀತಿಸ್ತಾರೆ, ನಂಬ್ತಾರೆ.+

23 ಕಷ್ಟಪಟ್ಟು ಮಾಡೋ ಪ್ರತಿಯೊಂದು ಕೆಲಸದಲ್ಲಿ ಪ್ರಯೋಜನ ಇರುತ್ತೆ,

ಆದ್ರೆ ಹರಟೆ ಹೊಡೀತಾ ಕಾಲ ಕಳೆದ್ರೆ ಬಡತನಕ್ಕೆ ಬಲಿ ಆಗಬೇಕಾಗುತ್ತೆ.+

24 ವಿವೇಕಿಗಳ ಆಸ್ತಿನೇ ಅವ್ರ ಕಿರೀಟ,

ದಡ್ಡರ ಕೆಲಸಗಳಲ್ಲಿ ದಡ್ಡತನನೇ ಇರುತ್ತೆ.+

25 ಸತ್ಯಸಾಕ್ಷಿ ಜೀವ ಕಾಪಾಡ್ತಾನೆ,

ಕಪಟಿ ಬಾಯಿ ಬಿಟ್ರೆ ಬರೀ ಸುಳ್ಳೇ ಹೇಳ್ತಾನೆ.

26 ಯೆಹೋವನ ಮೇಲೆ ಭಯ ಇರುವವನಿಗೆ ಆತನ ಮೇಲೆ ಭರವಸೆನೂ ಇರುತ್ತೆ,+

ಆ ಭಯನೇ ಅವನ ಮಕ್ಕಳಿಗೆ ಒಂದು ಆಶ್ರಯವಾಗಿ ಇರುತ್ತೆ.+

27 ಯೆಹೋವನ ಭಯ ಜೀವದ ಚಿಲುಮೆ.

ಅದು ಮರಣದ ಉರ್ಲುಗಳಿಂದ ತಪ್ಪಿಸಿ ಕಾಪಾಡುತ್ತೆ.

28 ಪ್ರಜೆಗಳು ಜಾಸ್ತಿ ಇದ್ರೆ ರಾಜನಿಗೆ ಗೌರವ ಜಾಸ್ತಿ,+

ಪ್ರಜೆಗಳಿಲ್ಲದ ರಾಜ ಬಿದ್ದುಹೋಗ್ತಾನೆ.

29 ಬೇಗ ಕೋಪ ಮಾಡ್ಕೊಳ್ಳದವನು ಬುದ್ಧಿವಂತ,+

ಮುಂಗೋಪಿ ತನ್ನ ಮೂರ್ಖತನವನ್ನ ತೋರಿಸಿ ಬಿಡ್ತಾನೆ.+

30 ಪ್ರಶಾಂತ ಹೃದಯ ದೇಹಕ್ಕೆ ಆರೋಗ್ಯ,*

ಹೊಟ್ಟೆಕಿಚ್ಚಿಂದ ಮೂಳೆಗಳ ಸವೆತ.*+

31 ದೀನರಿಗೆ ಮೋಸ ಮಾಡಿದ್ರೆ ದೇವರಿಗೆ* ಅವಮಾನ ಮಾಡಿದ ಹಾಗೆ,+

ಬಡವರಿಗೆ ಕನಿಕರ ತೋರಿಸಿದ್ರೆ ದೇವರಿಗೆ ಗೌರವ ಕೊಟ್ಟ ಹಾಗೆ.+

32 ಕೆಟ್ಟ ಕೆಲಸಾನೇ ಕೆಟ್ಟವನನ್ನ ಮುಳುಗಿಸಿಬಿಡುತ್ತೆ,

ನೀತಿವಂತ ತಪ್ಪು ಮಾಡದೆ ನಡ್ಕೊಂಡ್ರೆ ಅದು ಅವನನ್ನ ಕಾಪಾಡುತ್ತೆ.+

33 ಅರ್ಥ ಮಾಡ್ಕೊಳ್ಳೋ ಶಕ್ತಿ ಇರೋ ವ್ಯಕ್ತಿ ತನ್ನ ವಿವೇಕವನ್ನ ತೋರಿಸ್ಕೊಳ್ಳಲ್ಲ,+

ಮೂರ್ಖ ತನಗೆ ಗೊತ್ತಿರೋ ವಿಷ್ಯಗಳ ಬಗ್ಗೆ ಊರಿಗೇ ಡಂಗೂರ ಸಾರುತ್ತಾನೆ.

34 ನೀತಿ ಒಂದು ದೇಶಕ್ಕೆ ಒಳ್ಳೇ ಹೆಸ್ರು ತರುತ್ತೆ,+

ಜನ್ರಿಗೆ ಪಾಪ ಕೆಟ್ಟ ಹೆಸ್ರು ತರುತ್ತೆ.

35 ತಿಳುವಳಿಕೆಯಿಂದ* ನಡ್ಕೊಳ್ಳೋ ಸೇವಕನನ್ನ ನೋಡಿ ರಾಜ ಸಂತೋಷ ಪಡ್ತಾನೆ,+

ಮಾನಮರ್ಯಾದೆ ಇಲ್ಲದೆ ನಡ್ಕೊಳ್ಳುವವನ ಮೇಲೆ ರೇಗ್ತಾನೆ.+

15 ಮೃದುವಾದ* ಉತ್ತರ ಕೋಪ ಕಡಿಮೆ ಮಾಡುತ್ತೆ,+

ಒರಟಾದ* ಮಾತು ಕೋಪ ಬರಿಸುತ್ತೆ.+

 2 ವಿವೇಕಿಯ ನಾಲಿಗೆ ಜ್ಞಾನವನ್ನ ಒಳ್ಳೇ ರೀತಿಯಲ್ಲಿ ಉಪಯೋಗಿಸುತ್ತೆ,+

ದಡ್ಡನ ಬಾಯಿ ಮೂರ್ಖತನವನ್ನ ತಟ್ಟಂತ ಒದರಿಬಿಡುತ್ತೆ.

 3 ಯೆಹೋವನ ದೃಷ್ಟಿ ಎಲ್ಲಾ ಕಡೆ ಇರುತ್ತೆ,

ಆತನು ಒಳ್ಳೆಯವ್ರನ್ನ, ಕೆಟ್ಟವ್ರನ್ನ ನೋಡ್ತಾ ಇರ್ತಾನೆ.+

 4 ಶಾಂತವಾಗಿರೋ ನಾಲಿಗೆ* ಸಾಂತ್ವನ ಕೊಡುತ್ತೆ,*+

ತಿರುಚಿದ ಮಾತು ಮನಸ್ಸನ್ನ ಜಜ್ಜಿಹಾಕುತ್ತೆ.

 5 ಮೂರ್ಖ ತನ್ನ ಅಪ್ಪ ಕೊಡೋ ಶಿಸ್ತನ್ನ ಕೀಳಾಗಿ ನೋಡ್ತಾನೆ,+

ಆದ್ರೆ ಬೇರೆಯವರು ತಿದ್ದುವಾಗ ಜಾಣ ಸ್ವೀಕರಿಸ್ತಾನೆ.+

 6 ನೀತಿವಂತನ ಮನೇಲಿ ತುಂಬ ಆಸ್ತಿಪಾಸ್ತಿ ಇರುತ್ತೆ,

ಕೆಟ್ಟವನ ಆದಾಯ* ಅವನಿಗೆ ತೊಂದ್ರೆ ತಂದಿಡುತ್ತೆ.+

 7 ವಿವೇಕಿಯ ತುಟಿಗಳು ಜ್ಞಾನವನ್ನ ಹಬ್ಬಿಸುತ್ತೆ,+

ಆದ್ರೆ ದಡ್ಡನ ಹೃದಯ ಹಾಗೆ ಮಾಡಲ್ಲ.+

 8 ಕೆಟ್ಟವನ ಬಲಿಯನ್ನ ಯೆಹೋವ ಸ್ವೀಕರಿಸಲ್ಲ,+

ನೀತಿವಂತನ ಪ್ರಾರ್ಥನೆಯನ್ನ ಖುಷಿಯಿಂದ ಕೇಳ್ತಾನೆ.+

 9 ಕೆಟ್ಟವನ ದಾರಿ ಯೆಹೋವನಿಗೆ ಅಸಹ್ಯ,+

ನೀತಿಯಿಂದ ನಡ್ಕೊಳ್ಳೋ ವ್ಯಕ್ತಿ ಕಂಡ್ರೆ ಆತನಿಗೆ ಪ್ರೀತಿ.+

10 ಒಳ್ಳೇ ದಾರಿಯನ್ನ ಬಿಟ್ಟುಬಿಡುವವನಿಗೆ ಶಿಸ್ತು ಇಷ್ಟ ಆಗಲ್ಲ,+

ತಿದ್ದುವಾಗ ದ್ವೇಷಿಸುವವನು ತನ್ನ ಜೀವ ಕಳ್ಕೊಳ್ತಾನೆ.+

11 ಯೆಹೋವನಿಗೆ ಸಮಾಧಿಯಲ್ಲಿ* ಇರುವವ್ರನ್ನ, ನಾಶದ ಜಾಗದಲ್ಲಿ* ಇರುವವ್ರನ್ನ ನೋಡಕ್ಕಾಗುತ್ತೆ ಅಂದ್ರೆ,+

ಮನುಷ್ಯರ ಹೃದಯದಲ್ಲೇನಿದೆ ಅಂತ ನೋಡಕ್ಕಾಗಲ್ವಾ!+

12 ಗೇಲಿ ಮಾಡುವವನು ತನ್ನನ್ನ ತಿದ್ದುವವನನ್ನ ಇಷ್ಟಪಡಲ್ಲ.+

ಅವನು ವಿವೇಕಿಯ ಸಲಹೆಯನ್ನ ಕೇಳಲ್ಲ.+

13 ಹರ್ಷಹೃದಯದಿಂದ ಹಸನ್ಮುಖ,

ಮನೋವ್ಯಥೆಯಿಂದ ನಿರುತ್ಸಾಹ.+

14 ಅರ್ಥ ಮಾಡ್ಕೊಳ್ಳೋ ಹೃದಯ ಜ್ಞಾನವನ್ನ ಹುಡುಕುತ್ತೆ,+

ಮೂರ್ಖ ತನ್ನ ಬಾಯಲ್ಲಿ ಮೂರ್ಖತನವನ್ನ ತುಂಬಿಸ್ತಾನೆ.+

15 ದುಃಖದಲ್ಲಿ ಇರುವವನಿಗೆ ಜೀವನ ಯಾವಾಗ್ಲೂ ಜಿಗುಪ್ಸೆ,+

ಸಂತೋಷದ* ಹೃದಯ ಇರುವವನಿಗೆ ದಿನಾಲೂ ಔತಣ.+

16 ತುಂಬ ಆಸ್ತಿ ಇದ್ದು ಚಿಂತೆಯಲ್ಲಿ ಮುಳುಗೋದಕ್ಕಿಂತ,+

ಸ್ವಲ್ಪನೇ ಇದ್ದು ಯೆಹೋವನಿಗೆ ಭಯಪಡೋದು ಒಳ್ಳೇದು.+

17 ದ್ವೇಷ ಇರೋ ಮನೇಲಿ ಮಾಂಸದೂಟ* ಮಾಡೋದಕ್ಕಿಂತ,+

ಪ್ರೀತಿ ಇರೋ ಮನೇಲಿ ತರಕಾರಿ* ಊಟ ಮಾಡೋದೇ ಒಳ್ಳೇದು.+

18 ಕೋಪಿಷ್ಠ ಜಗಳ ಜಾಸ್ತಿ ಮಾಡ್ತಾನೆ,+

ತಟ್ಟಂಥ ಕೋಪ ಮಾಡ್ಕೊಳ್ಳದವನು ಜಗಳನ ಶಾಂತ ಮಾಡ್ತಾನೆ.+

19 ಮೈಗಳ್ಳನ ದಾರಿ ಮುಳ್ಳಿನ ಬೇಲಿ,+

ನೀತಿವಂತನ ದಾರಿ ಸಮತಟ್ಟಾದ ಹೆದ್ದಾರಿ.+

20 ವಿವೇಕಿಯಾದ ಮಗ ತನ್ನ ಅಪ್ಪನನ್ನ ಸಂತೋಷ ಪಡಿಸ್ತಾನೆ,+

ಮೂರ್ಖ ತನ್ನ ಅಮ್ಮನನ್ನ ಕೀಳಾಗಿ ನೋಡ್ತಾನೆ.+

21 ಬುದ್ಧಿ ಇಲ್ಲದವನಿಗೆ* ಮೂರ್ಖತನದಿಂದ ಸಂತೋಷ ಸಿಗುತ್ತೆ,+

ವಿವೇಚನೆ ಇರುವವನು ಸರಿ ದಾರಿಯಲ್ಲಿ ಹೋಗ್ತಾನೆ.+

22 ಸಲಹೆ ಕೇಳದಿದ್ರೆ ಮಾಡಿದ ಯೋಜನೆಗಳೆಲ್ಲ ನೆಲಕಚ್ಚುತ್ತೆ,

ತುಂಬ ಸಲಹೆಗಾರರು ಇದ್ರೆ ಸಾಧನೆ ಮಾಡಕ್ಕಾಗುತ್ತೆ.+

23 ಸರಿ ಉತ್ತರ ಕೊಡುವವನು ಸಂತೋಷವಾಗಿ ಇರ್ತಾನೆ,+

ಸರಿಯಾದ ಸಮಯದಲ್ಲಿ ಹೇಳಿದ ಮಾತು ಎಷ್ಟೋ ಉತ್ತಮ.+

24 ಜೀವದ ದಾರಿ ತಿಳುವಳಿಕೆ* ಇರುವವನನ್ನ ಮೇಲೆ ಏರಿಸುತ್ತೆ,+

ಕೆಳಗಿರೋ ಸಮಾಧಿ ಕಡೆ ಹೋಗದ ಹಾಗೆ ತಡಿಯುತ್ತೆ.+

25 ಯೆಹೋವ ಅಹಂಕಾರಿಯ ಮನೆಯನ್ನ ಮುರಿದುಬಿಡ್ತಾನೆ,+

ವಿಧವೆಯ ಜಮೀನಿನ ಗಡಿಗಳನ್ನ ಕಾದು ಕಾಪಾಡ್ತಾನೆ.+

26 ಕೆಟ್ಟವನ ಸಂಚು ಯೆಹೋವನಿಗೆ ಇಷ್ಟ ಇಲ್ಲ,+

ಹಿತವಾದ ನುಡಿಗಳು ಆತನಿಗೆ ಇಷ್ಟ.+

27 ಮೋಸದಿಂದ ಹಣ ಮಾಡುವವನು ತನ್ನ ಮನೆಯವ್ರ ಮೇಲೆ ಕಷ್ಟ ತಂದಿಡ್ತಾನೆ,+

ಆದ್ರೆ ಲಂಚವನ್ನ ದ್ವೇಷಿಸುವವನು ಬಾಳಿ ಬದುಕ್ತಾನೆ.+

28 ನೀತಿವಂತನ ಹೃದಯ ಉತ್ತರ ಕೊಡೋ ಮುಂಚೆ ಯೋಚ್ನೆ ಮಾಡುತ್ತೆ,*+

ಆದ್ರೆ ಕೆಟ್ಟವನ ಬಾಯಿ ಕೆಟ್ಟ ವಿಷ್ಯಗಳನ್ನ ಕಕ್ಕುತ್ತೆ.

29 ಯೆಹೋವ ಕೆಟ್ಟವ್ರಿಂದ ತುಂಬ ದೂರ ಇರ್ತಾನೆ,

ಆದ್ರೆ ನೀತಿವಂತರ ಪ್ರಾರ್ಥನೆಯನ್ನ ಕೇಳ್ತಾನೆ.+

30 ಹೊಳೆಯೋ ಕಣ್ಣನ್ನ ನೋಡಿದ್ರೆ* ಹೃದಯಕ್ಕೆ ಖುಷಿ,

ಒಳ್ಳೇ ಸುದ್ದಿಯಿಂದ ಮೂಳೆಗೆ ಚೈತನ್ಯ.+

31 ಜೀವ ಕೊಡೋ ಬುದ್ಧಿಮಾತನ್ನ* ಕೇಳುವವನು

ವಿವೇಕಿಗಳ ಜೊತೆ ಇರ್ತಾನೆ.+

32 ಶಿಸ್ತನ್ನ ತಿರಸ್ಕರಿಸುವವನು ತನ್ನ ಜೀವವನ್ನ ಕೀಳಾಗಿ ನೋಡ್ತಾನೆ,+

ತಿದ್ದುವಾಗ ಸ್ವೀಕರಿಸುವವನು ಅರ್ಥ ಮಾಡ್ಕೊಳ್ಳೋ ಶಕ್ತಿ* ಪಡಿತಾನೆ.+

33 ಯೆಹೋವನ ಭಯವೇ ವಿವೇಕವನ್ನ ಕಲಿಸೋ ತರಬೇತಿ,+

ದೀನತೆಯಿಂದ ಇದ್ರೆ ಗೌರವ ಸಿಗುತ್ತೆ.+

16 ಮನುಷ್ಯ ಮಾತಾಡೋ ಮುಂಚೆ ತನ್ನ ಹೃದಯದ ಯೋಚ್ನೆಗಳನ್ನ ಸಿದ್ಧಮಾಡ್ತಾನೆ,

ಆದ್ರೆ ಅವನು ಕೊಡೋ ಉತ್ತರ* ಯೆಹೋವನಿಂದ ಬರುತ್ತೆ.+

 2 ಮನುಷ್ಯನಿಗೆ ತನ್ನೆಲ್ಲ ದಾರಿಗಳು ಸರಿಯಾಗೇ* ಇದೆ ಅಂತ ಅನಿಸುತ್ತೆ,+

ಆದ್ರೆ ಯೆಹೋವ ಉದ್ದೇಶಗಳನ್ನ* ಪರೀಕ್ಷಿಸ್ತಾನೆ.+

 3 ನಿನ್ನ ಕೆಲಸಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು,*+

ಆಗ ನಿನ್ನ ಯೋಜನೆಗಳಿಗೆ ಯಶಸ್ಸು ಸಿಗುತ್ತೆ.

 4 ಯೆಹೋವ ತನ್ನ ಮಾತನ್ನ ಪೂರೈಸೋಕೆ ಪ್ರತಿಯೊಂದನ್ನ ಮಾಡಿದ್ದಾನೆ,

ಕೆಟ್ಟವನನ್ನ ಕೂಡ ಕಷ್ಟದ ದಿನದಲ್ಲಿ ಶಿಕ್ಷೆ ಅನುಭವಿಸೋಕೆ ಇಟ್ಟಿದ್ದಾನೆ.+

 5 ಹೃದಯದಲ್ಲಿ ಅಹಂಕಾರ ಇರುವವ್ರನ್ನ ಕಂಡ್ರೆ ಯೆಹೋವನಿಗೆ ಇಷ್ಟ ಆಗಲ್ಲ.+

ಅವ್ರಿಗೆ ಖಂಡಿತ ಶಿಕ್ಷೆ ಕೊಡ್ತಾನೆ ಅಂತ ನಂಬಿಕೆ ಇರಲಿ.

 6 ಶಾಶ್ವತ ಪ್ರೀತಿಯಿಂದಾಗಿ, ನಂಬಿಗಸ್ತಿಕೆಯಿಂದಾಗಿ ತಪ್ಪಿಗೆ ಕ್ಷಮೆ ಸಿಗುತ್ತೆ,+

ಯೆಹೋವನಿಗೆ ಭಯಪಡುವವನು ಕೆಟ್ಟದು ಮಾಡಲ್ಲ.+

 7 ಯೆಹೋವ ಒಬ್ಬನ ನಡತೆಯನ್ನ ಮೆಚ್ಚಿದ್ರೆ,

ಅವನ ಶತ್ರುಗಳನ್ನ ಸಹ ಮಿತ್ರರಾಗಿ ಮಾಡ್ತಾನೆ.*+

 8 ಅನ್ಯಾಯ ಮಾಡಿ ಶ್ರೀಮಂತರಾಗೋದಕ್ಕಿಂತ,+

ನೀತಿಯಿಂದ ನಡೆದು ಬಡವ್ರಾಗಿ ಇರೋದೇ ಒಳ್ಳೇದು.+

 9 ಮನುಷ್ಯ ತನ್ನ ಹೃದಯದಲ್ಲೇ ಯೋಜನೆ ಮಾಡಬಹುದು,

ಆದ್ರೆ ಯೆಹೋವ ಅವನ ಕಾಲಿಗೆ ದಾರಿ ತೋರಿಸ್ತಾನೆ.+

10 ರಾಜನ ತುಟಿಗಳ ಮೇಲೆ ದೇವರ ತೀರ್ಮಾನ ಇರ್ಬೇಕು,+

ಅವನು ಯಾವುದೇ ಕಾರಣಕ್ಕೂ ನ್ಯಾಯ ಮೀರಿ ನಡಿಬಾರದು.+

11 ಪ್ರಾಮಾಣಿಕವಾದ ತಕ್ಕಡಿ ಯೆಹೋವನದ್ದೇ,

ಚೀಲದೊಳಗೆ ಇಟ್ಟಿರೋ ತೂಕದ ಕಲ್ಲುಗಳನ್ನೆಲ್ಲ ಆತನೇ ಮಾಡಿದ್ದು.+

12 ಕೆಟ್ಟ ಕೆಲಸಗಳಂದ್ರೆ ರಾಜರಿಗೆ ಇಷ್ಟ ಇಲ್ಲ,+

ಯಾಕಂದ್ರೆ ನೀತಿ ಇದ್ರೇನೇ ಸಿಂಹಾಸನಕ್ಕೆ ಬಲ.+

13 ರಾಜರಿಗೆ ನೀತಿ ಮಾತುಗಳೆಂದ್ರೆ ಇಷ್ಟ,

ಸತ್ಯ ಹೇಳೋರನ್ನ ಕಂಡ್ರೆ ಅವ್ರಿಗೆ ಇಷ್ಟ.+

14 ರಾಜನ ಕೋಪ ಸಾವಿನ ದೂತನ ತರ ಇರುತ್ತೆ,+

ಆದ್ರೆ ರಾಜನ ಕೋಪವನ್ನ ವಿವೇಕಿ ಶಾಂತ ಮಾಡ್ತಾನೆ.+

15 ರಾಜ ದಯೆ ತೋರಿಸಿದ್ರೆ ಜೀವನ ಸಂತೋಷವಾಗಿ ಇರುತ್ತೆ,

ಅವನ ಅನುಗ್ರಹ ವಸಂತಕಾಲದ ಮಳೆಯ ಮೋಡದ ಹಾಗೆ ಇರುತ್ತೆ.+

16 ಚಿನ್ನಕ್ಕಿಂತ ವಿವೇಕ ಪಡಿಯೋದು ಉತ್ತಮ,+

ಬೆಳ್ಳಿಗಿಂತ ವಿವೇಚನೆ ಸಂಪಾದಿಸೋದು ಒಳ್ಳೇದು.+

17 ನೀತಿವಂತನ ದಾರಿ ಕೆಟ್ಟ ವಿಷ್ಯಗಳಿಂದ ದೂರ ಇರುತ್ತೆ.

ಸರಿಯಾದ ದಾರಿಯಲ್ಲಿ ನಡಿಯುವವನು ತನ್ನ ಪ್ರಾಣ ಕಾಪಾಡ್ಕೊಳ್ತಾನೆ.+

18 ಸೊಕ್ಕಿಂದ ಸರ್ವನಾಶ,

ದರ್ಪದಿಂದ ದುರ್ಗತಿ.+

19 ಸೊಕ್ಕು ಇರುವವ್ರ ಜೊತೆ ಸೂರೆಯನ್ನ ಹಂಚ್ಕೊಳ್ಳೋದಕ್ಕಿಂತ,

ದೀನರ ಜೊತೆ ಸೌಮ್ಯಸ್ವಭಾವದಿಂದ ಇರೋದೇ ಒಳ್ಳೇದು.+

20 ಒಂದು ವಿಷ್ಯದ ಬಗ್ಗೆ ಸೂಕ್ಷ್ಮ ವಿವೇಚನೆ* ಇರುವವನು ಯಶಸ್ಸು ಪಡಿತಾನೆ,

ಯೆಹೋವನ ಮೇಲೆ ನಂಬಿಕೆ ಇಡುವವನು ಸಂತೋಷವಾಗಿ ಇರ್ತಾನೆ.

21 ವಿವೇಕ ಇರೋ ವ್ಯಕ್ತಿಗೆ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇದೆ+ ಅಂತ ಜನ ಹೇಳ್ತಾರೆ,

ಪ್ರೀತಿಯಿಂದ ಮಾತಾಡೋ ವ್ಯಕ್ತಿ ಮನಸ್ಸು ಗೆಲ್ತಾನೆ.+

22 ತಿಳುವಳಿಕೆ* ಇರುವವ್ರಿಗೆ ತಿಳುವಳಿಕೆನೇ ಜೀವದ ಬುಗ್ಗೆ,

ಮೂರ್ಖರು ತಮ್ಮ ಮೂರ್ಖತನದಿಂದಾನೇ ಶಿಕ್ಷೆ ಅನುಭವಿಸ್ತಾರೆ.

23 ವಿವೇಕಿಯ ಹೃದಯ ಅವನ ಬಾಯಿಗೆ ತಿಳುವಳಿಕೆಯನ್ನ,*+

ಅವನ ಮಾತಿಗೆ ಮನವೊಲಿಸೋ ಶಕ್ತಿಯನ್ನ ಕೊಡುತ್ತೆ.

24 ಸವಿ ಮಾತುಗಳು ಜೇನಿನ ಹಾಗೆ ಚೆನ್ನಾಗಿರುತ್ತೆ,

ಅವು ಮನಸ್ಸಿಗೆ ಮಧುರ, ಮೂಳೆಗೆ ಔಷಧಿ.+

25 ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ,

ಅದು ಸಾವಲ್ಲಿ ಕೊನೆ ಆಗುತ್ತೆ.+

26 ದುಡಿಯುವವನಿಗೆ ಹೊಟ್ಟೆನೇ ದುಡಿಯೋಕೆ ಹೇಳುತ್ತೆ,

ಅವನ ಹಸಿವು ಅವನನ್ನ ಒತ್ತಾಯಿಸುತ್ತೆ.+

27 ಕೆಲಸಕ್ಕೆ ಬಾರದ ವ್ಯಕ್ತಿ ಕೆಟ್ಟದ್ದನ್ನ ಅಗೆದು ತೆಗಿತಾನೆ,+

ಅವನ ಮಾತು ಸುಡೋ ಬೆಂಕಿ.+

28 ಜಗಳ ತಂದಿಡುವವನು* ಒಡಕು ತರ್ತಾನೆ,+

ಚಾಡಿ ಹೇಳುವವನು ಪ್ರಾಣ ಸ್ನೇಹಿತರನ್ನ ದೂರ ಮಾಡ್ತಾನೆ.+

29 ಕ್ರೂರಿ ಪಕ್ಕದ ಮನೆಯವನನ್ನ ಮರುಳು ಮಾಡಿ,

ತಪ್ಪು ದಾರಿಗೆ ನಡಿಸ್ತಾನೆ.

30 ಕೆಟ್ಟ ಯೋಜನೆ ಮಾಡ್ತಾ ಕಣ್ಣು ಹೊಡಿತಾನೆ,

ನಗೋ ತರ ನಟಿಸ್ತಾ ಕೆಟ್ಟದು ಮಾಡ್ತಾನೆ.

31 ಸರಿಯಾದ ದಾರಿಯಲ್ಲಿ ನಡಿಯುವವರಿಗೆ,+

ತಲೆಯ ನರೆಗೂದಲೇ ಸುಂದರ* ಕಿರೀಟ.+

32 ತಟ್ಟನೇ ಕೋಪ ಮಾಡ್ಕೊಳ್ಳದೆ ಇರುವವನು+ ಶೂರ ಸೈನಿಕನಿಗಿಂತ ಶಕ್ತಿಶಾಲಿ,

ಕೋಪಕ್ಕೆ ಕಡಿವಾಣ ಹಾಕುವವನು ಪಟ್ಟಣವನ್ನ ವಶ ಮಾಡ್ಕೊಳ್ಳೋ ವ್ಯಕ್ತಿಗಿಂತ ಬಲಶಾಲಿ.+

33 ಜನ್ರು ಯೆಹೋವನಿಗೆ ಪ್ರಶ್ನೆ ಕೇಳ್ತಾರೆ,*+ ಆತನು ಅವ್ರಿಗೆ ಉತ್ತರ ಕೊಡ್ತಾನೆ.+

17 ಜಗಳ ಇರೋ ಮನೇಲಿ ಭಾರಿ ಭೋಜನ* ಮಾಡೋದಕ್ಕಿಂತ,+

ನೆಮ್ಮದಿ ಇರೋ ಮನೇಲಿ ಒಣ ರೊಟ್ಟಿ ತಿನ್ನೋದೇ ಒಳ್ಳೇದು.+

 2 ಯಜಮಾನನ ಮಗ ಮೂರ್ಖನ ತರ ನಡ್ಕೊಂಡ್ರೆ, ತಿಳುವಳಿಕೆ* ಇರೋ ಸೇವಕ ಅವನ ಮೇಲೆ ಆಳ್ವಿಕೆ ಮಾಡ್ತಾನೆ.

ಯಜಮಾನನ ಮಕ್ಕಳಿಗೆ ಆಸ್ತಿ ಸಿಗೋ ಹಾಗೆ ಆ ಸೇವಕನಿಗೂ ಆಸ್ತಿ ಸಿಗುತ್ತೆ.

 3 ಬೆಳ್ಳಿಬಂಗಾರವನ್ನ ಬೆಂಕಿಯಲ್ಲಿ ಹಾಕಿ ಶುದ್ಧ ಮಾಡೋ ತರ,+

ಪ್ರತಿಯೊಬ್ಬನ ಹೃದಯದಲ್ಲಿ ಏನಿದೆ ಅಂತ ಯೆಹೋವ ಪರೀಕ್ಷಿಸ್ತಾನೆ.+

 4 ಕೆಟ್ಟವನು ಹಾನಿಕರ ಮಾತಿಗೆ ಗಮನಕೊಡ್ತಾನೆ,

ವಂಚಕ ದ್ವೇಷದ ಮಾತಿಗೆ ಕಿವಿಗೊಡ್ತಾನೆ.+

 5 ಬಡವನನ್ನ ನೋಡಿ ಗೇಲಿ ಮಾಡುವವನು ಅವನ ಸೃಷ್ಟಿಕರ್ತನನ್ನೇ* ಅವಮಾನ ಮಾಡ್ತಾನೆ,+

ಇನ್ನೊಬ್ಬನ ಕಷ್ಟ ನೋಡಿ ಖುಷಿ ಪಡುವವನಿಗೆ ಶಿಕ್ಷೆ ತಪ್ಪಿದ್ದಲ್ಲ.+

 6 ವೃದ್ಧರಿಗೆ ಮೊಮ್ಮಕ್ಕಳು ಕಿರೀಟ,

ಮಕ್ಕಳಿಗೆ ಅಪ್ಪನಿಂದಾಗಿ* ಕೀರ್ತಿ.

 7 ಮೂರ್ಖನ ಬಾಯಲ್ಲಿ ನೀತಿಯ ಮಾತುಗಳು ಬರೋದು ಸರಿಯಲ್ಲ ಅಂದ್ಮೇಲೆ,+

ಅಧಿಕಾರಿ ಬಾಯಲ್ಲಿ ಸುಳ್ಳು ಬರೋದು ಸರಿನಾ?+

 8 ಉಡುಗೊರೆ ಪಡ್ಕೊಂಡಿರೋ ಯಜಮಾನನಿಗೆ ಅಮೂಲ್ಯ ರತ್ನ* ಸಿಕ್ಕಿದ ಹಾಗೆ,+

ಅವನು ಏನೇ ಮಾಡಿದ್ರೂ ಅವನಿಗೆ ಯಶಸ್ಸು ಸಿಗುತ್ತೆ.+

 9 ತಪ್ಪನ್ನ ಕ್ಷಮಿಸುವವನು* ಪ್ರೀತಿ ಬೇಕಂತ ಆಸೆಪಡ್ತಾನೆ,+

ಆದ್ರೆ ಆ ತಪ್ಪು ಬಗ್ಗೆ ಎತ್ತಿ ಆಡುವವನು ಪ್ರಾಣ ಸ್ನೇಹಿತರನ್ನ ದೂರ ಮಾಡ್ತಾನೆ.+

10 ಮೂರ್ಖನಿಗೆ ನೂರು ಸಲ ಹೊಡಿಯೋದಕ್ಕಿಂತ,+

ಅರ್ಥ ಮಾಡ್ಕೊಳ್ಳೋನನ್ನ ಒಂದು ಸಲ ಗದರಿಸಿದ್ರೆ ಸಾಕು.+

11 ಕೆಟ್ಟವನಿಗೆ ದಂಗೆ ಏಳೋದ್ರ ಬಗ್ಗೆನೇ ಯೋಚ್ನೆ,

ಆದ್ರೆ ಕ್ರೂರ ಸಂದೇಶವಾಹಕ ಬಂದು ಅವನಿಗೆ ಶಿಕ್ಷೆ ಕೊಡ್ತಾನೆ.+

12 ಮೂರ್ಖತನದಲ್ಲಿ ಮುಳುಗಿರೋ ಮೂರ್ಖನನ್ನ ವಿರೋಧಿಸೋದಕ್ಕಿಂತ,

ಮರಿಗಳನ್ನ ಕಳ್ಕೊಂಡಿರೋ ಕರಡಿ ಮುಂದೆ ಹೋಗೋದು ಒಳ್ಳೇದು.+

13 ಯಾರಾದ್ರೂ ಉಪಕಾರಕ್ಕೆ ಅಪಕಾರ ಮಾಡಿದ್ರೆ,

ಕಷ್ಟ ಅವ್ರ ಮನೆ ಬಿಟ್ಟು ಹೋಗಲ್ಲ.+

14 ಜಗಳಕ್ಕೆ ಬಾಯಿ ತೆರಿಯೋದು ಅಣೆಕಟ್ಟು ಒಡೆದು ನುಗ್ಗೋ ನೀರಿನ ತರ.

ಜಗಳ ಜಾಸ್ತಿ ಆಗೋ ಮುಂಚೆನೇ ಅಲ್ಲಿಂದ ಹೋಗಿಬಿಡು.+

15 ಕೆಟ್ಟವನನ್ನ ನಿರಪರಾಧಿ ಅಂತ ತೀರ್ಪು ಮಾಡುವವನು, ನೀತಿವಂತನನ್ನ ಬೈಯುವವನು+

ಇಬ್ರೂ ಯೆಹೋವನಿಗೆ ಇಷ್ಟ ಆಗಲ್ಲ.

16 ಮೂರ್ಖನಿಗೆ ವಿವೇಕ ಪಡಿಯೋಕೆ ಕೈತುಂಬಾ ಹಣ ಇದ್ರೂ,

ಅದನ್ನ ಪಡಿಯೋ ಮನಸ್ಸು* ಇಲ್ಲದಿದ್ರೆ ಏನು ಲಾಭ?+

17 ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ.+

ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.+

18 ಬುದ್ಧಿಯಿಲ್ಲದ ವ್ಯಕ್ತಿ ಪಕ್ಕದ ಮನೆಯವನ ಮುಂದೆ

ಇನ್ನೊಬ್ಬನಿಗೆ ಜಾಮೀನು ಕೊಡ್ತೀನಿ ಅಂತ ಕೈಕುಲುಕ್ತಾನೆ.+

19 ಜಗಳವನ್ನ ಪ್ರೀತಿಸುವವನು ಅಪರಾಧವನ್ನ ಪ್ರೀತಿಸ್ತಾನೆ.+

ಯಾವಾಗ್ಲೂ ಕೊಚ್ಕೊಳ್ಳುವವನು ಕಷ್ಟವನ್ನ ಆಮಂತ್ರಿಸ್ತಾನೆ.*+

20 ಕೆಟ್ಟ ಹೃದಯ ಇರುವವನಿಗೆ ಯಶಸ್ಸು ಸಿಗೋದೇ ಇಲ್ಲ,*+

ಒಳಗೊಂದು ಇಟ್ಕೊಂಡು ಹೊರಗೆ ಇನ್ನೊಂದು ಮಾತಾಡುವವನು ನಾಶವಾಗಿ ಹೋಗ್ತಾನೆ.

21 ಮೂರ್ಖನನ್ನ ಹೆತ್ತವನಿಗೆ ದುಃಖ ತಪ್ಪಿದ್ದಲ್ಲ,

ದಡ್ಡನ ತಂದೆಗೆ ಸಂತೋಷ ಸಿಗೋದೇ ಇಲ್ಲ.+

22 ಹರ್ಷಹೃದಯ ಒಳ್ಳೇ ಮದ್ದು,+

ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.*+

23 ನ್ಯಾಯದ ದಾರಿಯನ್ನ ತಿರುಚೋಕೆ,

ಕೆಟ್ಟವನು ಗುಟ್ಟಾಗಿ ಲಂಚ ತಿಂತಾನೆ.+

24 ವಿವೇಚನೆ ಇರೋ ವ್ಯಕ್ತಿ ಮುಂದೆನೇ ವಿವೇಕ ಇರುತ್ತೆ,

ಆದ್ರೆ ಮೂರ್ಖನ ಮನಸ್ಸು* ಭೂಮಿಯ ಮೂಲೆಮೂಲೆಗೂ ಅಲೆಯುತ್ತೆ.+

25 ದಡ್ಡ ತನ್ನ ಅಪ್ಪನಿಗೆ ದುಃಖ ಕೊಡ್ತಾನೆ,

ಮೂರ್ಖ ತನ್ನ ಅಮ್ಮನಿಗೆ ನೋವು ತರ್ತಾನೆ.+

26 ನೀತಿವಂತರಿಗೆ ಶಿಕ್ಷೆ ಕೊಡೋದು* ಒಳ್ಳೇದಲ್ಲ,

ದೊಡ್ಡದೊಡ್ಡ ವ್ಯಕ್ತಿಗಳನ್ನ ಹೊಡಿಯೋದು ಸರಿಯಲ್ಲ.

27 ಜ್ಞಾನ ಇರೋ ವ್ಯಕ್ತಿ ತನ್ನ ನಾಲಿಗೆಗೆ ಕಡಿವಾಣ ಹಾಕ್ತಾನೆ,+

ವಿವೇಚನೆ ಇರೋ ವ್ಯಕ್ತಿ ಶಾಂತವಾಗಿ ಇರ್ತಾನೆ.+

28 ಮೌನವಾಗಿದ್ರೆ ಮೂರ್ಖನನ್ನ ಸಹ ವಿವೇಕಿ ಅಂದ್ಕೊಳ್ತಾರೆ,

ಬಾಯಿಗೆ ಬೀಗ ಹಾಕೊಂಡಿದ್ರೆ ತಿಳುವಳಿಕೆ ಇಲ್ಲದವನನ್ನ ಸಹ ವಿವೇಚನೆ ಇರುವವನು ಅಂತ ನೆನಸ್ತಾರೆ.

18 ಜನ್ರ ಜೊತೆ ಸೇರದೆ ಒಂಟಿಯಾಗಿ ಇರೋಕೆ ಇಷ್ಟಪಡುವವನು ಸ್ವಾರ್ಥ ಆಸೆಗಳ ಹಿಂದೆ ಹೋಗ್ತಾನೆ,

ಅವನು ವಿವೇಕವನ್ನ* ಬೇಡ ಅಂತಾನೆ.

 2 ಬುದ್ಧಿ ಮಾತಂದ್ರೆ ಮೂರ್ಖನಿಗೆ ಸ್ವಲ್ಪಾನೂ ಇಷ್ಟ ಆಗಲ್ಲ.

ಅವನ ಮನಸ್ಸಲ್ಲಿ ಇರೋದನ್ನ ಕಕ್ಕೋದೆ ಅವನಿಗಿಷ್ಟ.+

 3 ಕೆಟ್ಟವನು ಎಲ್ಲಿ ಇರ್ತಾನೋ ಅಲ್ಲಿ ತಿರಸ್ಕಾರನೂ ಇರುತ್ತೆ,

ಅವಮಾನದ ಜೊತೆ ಕೆಟ್ಟ ಹೆಸ್ರೂ ಬರುತ್ತೆ.+

 4 ಮನುಷ್ಯನ ಮಾತು ಆಳವಾದ ನೀರಿನ ತರ,+

ಅವನಿಂದ ಬರೋ ವಿವೇಕ ಹರಿಯೋ ಕಾಲುವೆ ತರ.

 5 ತೀರ್ಪನ್ನ ಕೊಡೋವಾಗ ಕೆಟ್ಟವನ ಪರ ವಹಿಸೋದು ಸರಿಯಲ್ಲ,+

ನೀತಿವಂತನಿಗೆ ನ್ಯಾಯ ಸಿಗದ ಹಾಗೆ ಮಾಡೋದು ಒಳ್ಳೇದಲ್ಲ.+

 6 ಮೂರ್ಖನ ಮಾತು ಜಗಳಕ್ಕೆ ನಡಿಸುತ್ತೆ,+

ಅವನ ಬಾಯಿ ಹೊಡೆತಗಳನ್ನ ಕೈಬೀಸಿ ಕರಿಯುತ್ತೆ.+

 7 ದಡ್ಡನ ಬಾಯಿ ಅವನಿಗೆ ನಾಶ ತರುತ್ತೆ,+

ಅವನ ತುಟಿಗಳು ಅವನ ಪ್ರಾಣಕ್ಕೆ ಉರ್ಲು.

 8 ಚಾಡಿಕೋರನ ಮಾತು ರುಚಿಯಾದ ತುತ್ತುಗಳ ತರ,*+

ನುಂಗಿದಾಗ ನೇರವಾಗಿ ಹೊಟ್ಟೆಗೆ ಹೋಗುತ್ತೆ.+

 9 ಸೋಮಾರಿಯಾಗಿ ಇರೋನು,

ನಾಶ ತರುವವನ ತಮ್ಮ.+

10 ಯೆಹೋವನ ಹೆಸ್ರು ಬಲವಾದ ಕೋಟೆ.+

ನೀತಿವಂತ ಅದ್ರೊಳಗೆ ಓಡಿಹೋಗಿ ರಕ್ಷಣೆ ಪಡೀತಾನೆ.*+

11 ಶ್ರೀಮಂತನ ಆಸ್ತಿನೇ ಅವನಿಗೆ ಭದ್ರಕೋಟೆ,

ಅದು ಅವನಿಗೆ ರಕ್ಷಣೆ ಕೊಡೋ ಗೋಡೆ ಅಂದ್ಕೊಳ್ತಾನೆ.+

12 ಮನುಷ್ಯನ ಸೊಕ್ಕು ನಾಶಕ್ಕೆ ನಡಿಸುತ್ತೆ,+

ದೀನತೆಯಿಂದ ಗೌರವ ಸಿಗುತ್ತೆ.+

13 ನಿಜ ಏನಂತ ಅರ್ಥ ಮಾಡ್ಕೊಳ್ಳದೆ ಉತ್ತರ ಕೊಡುವವನು ಮೂರ್ಖ,

ಅದ್ರಿಂದ ಅವನಿಗೆ ಅವಮಾನ ಆಗುತ್ತೆ.+

14 ಧೈರ್ಯವಾಗಿದ್ರೆ ಕಾಯಿಲೆಯನ್ನೂ ಗೆಲ್ಲಬಹುದು,+

ಆದ್ರೆ ಕುಗ್ಗಿದ ಮನಸ್ಸನ್ನ* ಯಾರು ತಾನೇ ಸಹಿಸ್ಕೊಳ್ತಾರೆ?+

15 ಅರ್ಥ ಮಾಡ್ಕೊಳ್ಳೋ ಮನಸ್ಸು ಜ್ಞಾನ ಗಳಿಸುತ್ತೆ,+

ಬುದ್ಧಿವಂತನ ಕಿವಿ ಜ್ಞಾನ ಹುಡುಕುತ್ತೆ.

16 ಒಬ್ಬನು ಕೊಡೋ ಉಡುಗೊರೆ ಅವನಿಗೆ ದಾರಿ ತೆರಿಯುತ್ತೆ,+

ಅದು ಅವನನ್ನ ದೊಡ್ಡದೊಡ್ಡವ್ರ ಮುಂದೆ ಕರ್ಕೊಂಡು ಹೋಗುತ್ತೆ.

17 ಮೊದ್ಲು ಮಾತಾಡುವವನೇ ಸರಿ ಅಂತ ಅನಿಸುತ್ತೆ,+

ಆದ್ರೆ ಪ್ರತಿವಾದಿ ಎದ್ದು ಪ್ರಶ್ನೆ ಮಾಡಿದಾಗ ನಿಜ ಗೊತ್ತಾಗುತ್ತೆ.+

18 ಚೀಟಿ ಹಾಕಿದ್ರೆ ಜಗಳ ನಿಂತುಹೋಗುತ್ತೆ,+

ವಿರೋಧಿಗಳು ಎಂಥವ್ರೇ ಆಗಿದ್ರೂ ಸಮಸ್ಯೆ ಬಗೆಹರಿಯುತ್ತೆ.

19 ಬೇಜಾರಾಗಿರೋ ಸಹೋದರನನ್ನ ಗೆಲ್ಲೋದಕ್ಕಿಂತ ಭದ್ರಕೋಟೆ ಇರೋ ಪಟ್ಟಣ ಗೆಲ್ಲೋದು ಸುಲಭ,+

ಭದ್ರಕೋಟೆಯ ಕಂಬಿಗಳ ತರ ಜಗಳಗಳು ಜನ್ರನ್ನ ಬೇರೆಬೇರೆ ಮಾಡಿಬಿಡುತ್ತೆ.+

20 ಮನುಷ್ಯ ತನ್ನ ಮಾತಿಂದ* ಹೊಟ್ಟೆ ತುಂಬಿಸ್ಕೊಳ್ತಾನೆ,+

ತನ್ನ ತುಟಿಗಳ ಬೆಳೆಯಿಂದ ತೃಪ್ತನಾಗ್ತಾನೆ.

21 ಜೀವ, ಮರಣ ಎರಡೂ ನಾಲಿಗೆ ಕೈಯಲ್ಲಿದೆ,+

ಮಾತಿಗೆ ತಕ್ಕ ಹಾಗೆ ಫಲ ಸಿಗುತ್ತೆ.+

22 ಒಬ್ಬನಿಗೆ ಒಳ್ಳೇ ಹೆಂಡತಿ ಸಿಕ್ಕಿದ್ರೆ ಬೆಲೆಕಟ್ಟೋಕೆ ಆಗದ ನಿಧಿ ಸಿಕ್ಕಿದ ಹಾಗೆ.+

ಅವನು ಯೆಹೋವನ ಆಶೀರ್ವಾದ ಪಡೀತಾನೆ.+

23 ಶ್ರೀಮಂತನ ಹತ್ರ ಬಡವ ಸಹಾಯಕ್ಕಾಗಿ ಅಂಗಲಾಚಿ ಕೇಳ್ತಾನೆ,

ಆದ್ರೆ ಶ್ರೀಮಂತ ಕನಿಕರ ತೋರಿಸದೆ ಉತ್ತರ ಕೊಡ್ತಾನೆ.

24 ಒಬ್ರನ್ನೊಬ್ರು ಜಜ್ಜಿಬಿಡಬೇಕು ಅಂತ ಕಾಯೋ ಜೊತೆಗಾರರೂ ಇದ್ದಾರೆ,+

ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತನೂ ಇರ್ತಾನೆ.+

19 ಮೂರ್ಖನ ತರ ಸುಳ್ಳು ಹೇಳೋದಕ್ಕಿಂತ,+

ಬಡವನ ತರ ನಿಯತ್ತಾಗಿ ನಡಿಯೋದು ಒಳ್ಳೇದು.+

 2 ಬುದ್ಧಿ ಇಲ್ಲದಿರೋದು ಒಬ್ಬ ಮನುಷ್ಯನಿಗೆ ಒಳ್ಳೇದಲ್ಲ,+

ಮುಂದಾಲೋಚನೆ ಮಾಡದೆ ನಡಿಯುವವನು* ಪಾಪ ಮಾಡ್ತಾನೆ.

 3 ಮನುಷ್ಯ ತನ್ನ ದಡ್ಡತನದಿಂದಾನೇ ದಾರಿ ತಪ್ತಾನೆ,

ಆಮೇಲೆ ಅವನ ಮನಸ್ಸು ಯೆಹೋವನ ಮೇಲೆ ರೇಗುತ್ತೆ.

 4 ಶ್ರೀಮಂತನಿಗೆ ನೂರಾರು ಸ್ನೇಹಿತರು ಇರ್ತಾರೆ,

ಆದ್ರೆ ಬಡವನಿಗೆ ಒಬ್ಬನೇ ಒಬ್ಬ ಸ್ನೇಹಿತ ಇದ್ರೂ ಅವನೂ ಕೈಬಿಟ್ಟುಬಿಡ್ತಾನೆ.+

 5 ಸುಳ್ಳು ಸಾಕ್ಷಿ ಹೇಳುವವನಿಗೆ ಶಿಕ್ಷೆ ತಪ್ಪಿದ್ದಲ್ಲ,+

ಬಾಯಿ ಬಿಟ್ರೆ ಸುಳ್ಳು ಹೇಳುವವನು ತಪ್ಪಿಸ್ಕೊಳ್ಳೋಕೆ ಆಗಲ್ಲ.+

 6 ದೊಡ್ಡ ವ್ಯಕ್ತಿಗಳ* ಮೆಚ್ಚುಗೆ ಪಡಿಯೋಕೆ ತುಂಬ ಜನ ಇಷ್ಟಪಡ್ತಾರೆ,

ಉಡುಗೊರೆಗಳನ್ನ ಕೊಡುವವನಿಗೆ ಎಲ್ರೂ ಸ್ನೇಹಿತರಾಗ್ತಾರೆ.

 7 ಬಡವನ ಅಣ್ಣತಮ್ಮಂದಿರೇ ಅವನನ್ನ ದ್ವೇಷಿಸ್ತಾರೆ,+

ಅವನ ಸ್ನೇಹಿತರೂ ಅವನನ್ನ ದೂರ ಇಡ್ತಾರೆ!+

ಅವನು ಬೇಡ್ತಾ ಅವ್ರ ಹಿಂದೆ ಹೋಗ್ತಾನೆ, ಆದ್ರೆ ಯಾರೂ ಕ್ಯಾರೆ ಅನ್ನಲ್ಲ.

 8 ಬುದ್ಧಿ* ಗಳಿಸುವವನು ತನ್ನನ್ನೇ ಪ್ರೀತಿಸ್ಕೊಳ್ತಾನೆ,+

ವಿವೇಚನೆಯನ್ನ ನಿಧಿ ತರ ಕಾಪಾಡ್ಕೊಳ್ಳೋನು ಯಶಸ್ವಿ ಆಗ್ತಾನೆ.*+

 9 ಸುಳ್ಳುಸಾಕ್ಷಿ ಹೇಳುವವನಿಗೆ ಶಿಕ್ಷೆ ತಪ್ಪಿದ್ದಲ್ಲ,

ಬಾಯಿ ಬಿಟ್ರೆ ಸುಳ್ಳು ಹೇಳುವವನು ಮಣ್ಣುಪಾಲಾಗಿ ಹೋಗ್ತಾನೆ.+

10 ಐಷಾರಾಮಿ ಜೀವನ ಮೂರ್ಖನಿಗೆ ಸರಿಯಲ್ಲ ಅಂದ್ಮೇಲೆ,

ದೊಡ್ಡ ಅಧಿಕಾರಿಗಳ ಮೇಲೆ ಸೇವಕ ಆಳೋದು ಇನ್ನೆಷ್ಟು ಸರಿ.+

11 ವ್ಯಕ್ತಿಯಲ್ಲಿರೋ ತಿಳುವಳಿಕೆ* ಅವನ ಕೋಪ ಆರಿಸುತ್ತೆ,+

ಮತ್ತೊಬ್ರ ತಪ್ಪನ್ನ ಗಮನಿಸದೆ ಇರೋದು ಅವನಿಗೆ ಗೌರವ ತರುತ್ತೆ.+

12 ರಾಜನ ಕೋಪ ಸಿಂಹದ ಗರ್ಜನೆ ತರ,+

ಅವನ ಕೃಪೆ ಹುಲ್ಲು ಮೇಲೆ ಇರೋ ಇಬ್ಬನಿ ತರ.

13 ದಡ್ಡ ತನ್ನ ತಂದೆಗೆ ಕಷ್ಟಗಳನ್ನ ತರ್ತಾನೆ,+

ಜಗಳಗಂಟಿ* ಹೆಂಡತಿ ಯಾವಾಗ್ಲೂ ಸೋರೋ ಚಾವಣಿ ತರ.+

14 ಒಬ್ಬನಿಗೆ ಮನೆ, ಆಸ್ತಿ ಅಪ್ಪನಿಂದ ಬರೋ ಸೊತ್ತು,

ಆದ್ರೆ ಬುದ್ಧಿ ಇರೋ ಹೆಂಡತಿ ಯೆಹೋವನಿಂದ ಸಿಗೋ ವರ.+

15 ಮೈಗಳ್ಳ ತುಂಬ ನಿದ್ದೆ ಮಾಡ್ತಾನೆ,

ಸೋಮಾರಿ ಹಸಿವಿಂದ ನರಳ್ತಾನೆ.+

16 ಆಜ್ಞೆ ಪಾಲಿಸುವವನು ಜೀವ ಕಾಪಾಡ್ಕೊಳ್ತಾನೆ,+

ಮನಸ್ಸಿಗೆ ಬಂದ ಹಾಗೆ ನಡಿಯುವವನು ಪ್ರಾಣ ಕಳ್ಕೊಳ್ತಾನೆ.+

17 ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡ್ತಾನೆ,+

ದೇವರೇ ಅವನಿಗೆ ಪ್ರತಿಫಲ ಕೊಡ್ತಾನೆ.*+

18 ಕೈಮೀರಿ ಹೋಗೋ ಮುಂಚೆ ನಿನ್ನ ಮಗನಿಗೆ ಶಿಸ್ತು ಕೊಡು,+

ನೀನೇ ಅವನ ಸಾವಿಗೆ ಕಾರಣ ಆಗಬೇಡ.*+

19 ಕೋಪಿಷ್ಠ ದಂಡ ತೆರಬೇಕಾಗುತ್ತೆ,

ಅವನನ್ನ ಕಾಪಾಡೋಕೆ ಪ್ರಯತ್ನಿಸಿದ್ರೆ ಮತ್ತೆಮತ್ತೆ ಅದನ್ನೇ ಮಾಡಬೇಕಾಗುತ್ತೆ.+

20 ಸಲಹೆಗೆ ಕಿವಿಗೊಡು, ಶಿಸ್ತನ್ನ ಪಡ್ಕೊ,+

ಮುಂದೊಂದು ದಿನ ನೀನೇ ವಿವೇಕಿ ಆಗ್ತೀಯ.+

21 ಮನುಷ್ಯನ ಹೃದಯದಲ್ಲಿ ಹತ್ತಾರು ಯೋಜನೆಗಳು ಇರುತ್ತೆ,

ಆದ್ರೆ ಕೊನೆಗೆ ಆಗೋದು ಯೆಹೋವನ ಇಷ್ಟಾನೇ.*+

22 ಮನುಷ್ಯನ ಶಾಶ್ವತ ಪ್ರೀತಿನೇ ಅವನ ಅಂದ,+

ಸುಳ್ಳುಗಾರನಾಗಿ ಇರೋದಕ್ಕಿಂತ ಬಡವನಾಗಿ ಇರೋದು ಒಳ್ಳೇದು.

23 ಯೆಹೋವನ ಭಯ ಜೀವಕ್ಕೆ ನಡಿಸುತ್ತೆ,+

ಆ ಭಯ ಇರುವವರು ನೆಮ್ಮದಿಯಿಂದ ಇರ್ತಾರೆ, ಅವ್ರಿಗೆ ಯಾವ ತೊಂದ್ರೆನೂ ಆಗಲ್ಲ.+

24 ಸೋಮಾರಿ ತನ್ನ ಕೈಯನ್ನ ಮೃಷ್ಟಾನ್ನ ಊಟದ ಬಟ್ಟಲಲ್ಲಿ ಮುಳುಗಿಸ್ತಾನೆ,

ಆದ್ರೆ ಅದನ್ನ ಬಾಯಿ ತನಕ ತರೋಕ್ಕೂ ಮನಸ್ಸು ಮಾಡಲ್ಲ.+

25 ಅಣಕಿಸಿ ಮಾತಾಡುವವನನ್ನ ಹೊಡಿ,+ ಇದನ್ನ ನೋಡಿ ಅನುಭವ ಇಲ್ಲದವನು ಜಾಣ ಆಗ್ತಾನೆ.+

ಅರ್ಥ ಮಾಡ್ಕೊಳ್ಳೋನನ್ನ ಗದರಿಸು, ಆಗ ಅವನ ಜ್ಞಾನ ಜಾಸ್ತಿ ಆಗುತ್ತೆ.+

26 ಅಪ್ಪನ ಜೊತೆ ಕೆಟ್ಟದಾಗಿ ನಡ್ಕೊಳ್ಳುವವನು, ಅಮ್ಮನನ್ನ ಓಡಿಸಿಬಿಡ್ತಾನೆ,

ಅವನು ಅವಮಾನ, ಕೆಟ್ಟ ಹೆಸ್ರು ತರ್ತಾನೆ.+

27 ನನ್ನ ಮಗನೇ, ನೀನು ಶಿಸ್ತು ಪಡ್ಕೊಳ್ಳದಿದ್ರೆ,

ಜ್ಞಾನದ ದಾರಿ ಬಿಟ್ಟು ದಾರಿತಪ್ಪಿ ಹೋಗ್ತೀಯ.

28 ಪ್ರಯೋಜನಕ್ಕೆ ಬರದ ಸಾಕ್ಷಿ ನ್ಯಾಯವನ್ನ ತಮಾಷೆ ಮಾಡ್ತಾನೆ,+

ಕೆಟ್ಟವನ ಬಾಯಿ ಕೆಟ್ಟತನವನ್ನ ನುಂಗಿಹಾಕುತ್ತೆ.+

29 ಗೇಲಿ ಮಾಡುವವರಿಗೆ ಶಿಕ್ಷೆ ಕಾದು ಕೂತಿರುತ್ತೆ,+

ಮೂರ್ಖರ ಬೆನ್ನಿಗೆ ಏಟು ಯಾವಾಗ್ಲೂ ಸಿದ್ಧ ಇರುತ್ತೆ.+

20 ದ್ರಾಕ್ಷಾಮದ್ಯ ಅವಮಾನಕ್ಕೆ ನಡಿಸುತ್ತೆ,+ ಮದ್ಯ ನಿಯಂತ್ರಣ ತಪ್ಪಿಸುತ್ತೆ.+

ಬುದ್ಧಿ ಇಲ್ಲದವನು ಅದ್ರಿಂದ ಅಡ್ಡದಾರಿ ಹಿಡಿತಾನೆ.+

 2 ರಾಜ ಜನ್ರಲ್ಲಿ ಸಿಂಹ ಗರ್ಜನೆ ತರ ಭಯ ಹುಟ್ಟಿಸ್ತಾನೆ.+

ಅವನ ಕೋಪ ಕೆರಳಿಸೋರು ತಮ್ಮ ಜೀವಾನೇ ಪಣಕ್ಕಿಡ್ತಾರೆ.+

 3 ಜಗಳದಿಂದ ದೂರ ಇರೋದು ಒಬ್ಬನಿಗೆ ಗೌರವ ತರುತ್ತೆ,+

ಆದ್ರೆ ಮೂರ್ಖ ಅದ್ರಲ್ಲೇ ತಲೆಹಾಕ್ತಾನೆ.+

 4 ಚಳಿಗಾಲದಲ್ಲಿ ನೇಗಿಲು ಹಿಡಿಯದ ಸೋಮಾರಿ,

ಕೊಯ್ಲು ಬಂದಾಗ ಭಿಕ್ಷೆ ಬೇಡ್ತಾನೆ.*+

 5 ಮನುಷ್ಯನ ಮನಸ್ಸಲ್ಲಿರೋ ಯೋಚ್ನೆಗಳು* ಬಾವಿ ನೀರಿನ ತರ,

ಬುದ್ಧಿವಂತ ಅದನ್ನ ಸೇದ್ತಾನೆ.

 6 ತುಂಬ ಜನ ಅವ್ರಲ್ಲಿ ಪ್ರೀತಿ ಇದೆ ಅಂತ ಹೇಳ್ತಾರೆ,

ಆದ್ರೆ ನಂಬಿಗಸ್ತ ಜನ್ರು ಸಿಗೋದು ತುಂಬ ಅಪರೂಪ.

 7 ನೀತಿವಂತ ನಿಯತ್ತಾಗಿ ನಡೀತಾನೆ.+

ಅವನ ಮುಂದಿನ ಪೀಳಿಗೆ* ಖುಷಿಯಾಗಿ ಇರುತ್ತೆ.+

 8 ರಾಜ ನ್ಯಾಯ ತೀರಿಸೋಕೆ ಸಿಂಹಾಸನದ ಮೇಲೆ ಕೂತಾಗ,+

ಒಂದೇ ನೋಟದಲ್ಲಿ ಎಲ್ಲ ಕೆಟ್ಟತನವನ್ನ ಜರಡಿ ಹಿಡಿದು ತೆಗೆದುಹಾಕ್ತಾನೆ.+

 9 ಯಾರು ತಾನೇ “ನನ್ನ ಮನಸ್ಸು ಶುದ್ಧವಾಗಿದೆ,+

ನನ್ನಲ್ಲಿ ಈಗ ಯಾವ ತಪ್ಪೂ ಇಲ್ಲ” ಅಂತ ಹೇಳಕ್ಕಾಗುತ್ತೆ?+

10 ಮೋಸದ ತಕ್ಕಡಿ, ತಪ್ಪಾದ ಅಳತೆ*

ಎರಡೂ ಯೆಹೋವನಿಗೆ ಅಸಹ್ಯ.+

11 ಒಬ್ಬ ಚಿಕ್ಕ ಹುಡುಗನ ವರ್ತನೆ ಶುದ್ಧವಾಗಿ, ಸರಿಯಾಗಿ ಇದ್ಯಾ ಇಲ್ವಾ ಅಂತ

ಅವನು ಮಾಡೋ ಕೆಲಸಗಳಿಂದ ಗೊತ್ತಾಗಿಬಿಡುತ್ತೆ.+

12 ಕೇಳಿಸ್ಕೊಳ್ಳೋ ಕಿವಿ, ನೋಡೋ ಕಣ್ಣು

ಎರಡನ್ನೂ ಮಾಡಿದ್ದು ಯೆಹೋವನೇ.+

13 ನಿದ್ದೆಯನ್ನ ಪ್ರೀತಿಸಬೇಡ, ಬಡತನ ಅಟ್ಟಿಸ್ಕೊಂಡು ಬರುತ್ತೆ.+

ನಿನ್ನ ಕಣ್ಣು ತೆರಿ, ಆಗ ತಿಂದು ತೃಪ್ತನಾಗ್ತೀಯ.+

14 ಕೊಂಡ್ಕೊಳ್ಳೋನು “ಇದು ಚೆನ್ನಾಗಿಲ್ಲ, ಅದು ಚೆನ್ನಾಗಿಲ್ಲ!” ಅಂತಾನೆ.

ಆಮೇಲೆ ಅವನು ಮಾಡಿದ ವ್ಯಾಪಾರದ ಬಗ್ಗೆ ಕೊಚ್ಕೊಳ್ತಾನೆ.+

15 ಬಂಗಾರ, ಹವಳ* ತುಂಬ ಅಮೂಲ್ಯ,

ಜ್ಞಾನ ತುಂಬಿರೋ ತುಟಿಗಳು ಅದಕ್ಕಿಂತ ಅಮೂಲ್ಯ.+

16 ಅಪರಿಚಿತನಿಗೆ ಜಾಮೀನು ಕೊಡುವವನ ಬಟ್ಟೆ ಕಿತ್ಕೊ.+

ಅವನು ನಡತೆಗೆಟ್ಟ* ಹೆಂಗಸಿಗಾಗಿ ವಸ್ತುಗಳನ್ನ ಒತ್ತೆ ಇಟ್ರೆ ವಾಪಸ್‌ ಕೊಡಬೇಡ.+

17 ಮೋಸದಿಂದ ಗಳಿಸಿದ ರೊಟ್ಟಿ ಮನುಷ್ಯನಿಗೆ ರುಚಿ ಅನಿಸುತ್ತೆ,

ಆದ್ರೆ ಆಮೇಲೆ ಅವನ ಬಾಯಿ ತುಂಬ ಮರಳು ತುಂಬ್ಕೊಳ್ಳುತ್ತೆ.+

18 ಸಲಹೆ ಪಡೆದ್ರೆ ಯೋಜನೆಗಳು ಯಶಸ್ವಿ ಆಗುತ್ತೆ,+

ನಿಪುಣರ ನಿರ್ದೇಶನದ* ಪ್ರಕಾರ ಯುದ್ಧ ಮಾಡು.+

19 ಚಾಡಿ ಹೇಳಿ ಹೆಸ್ರು ಹಾಳು ಮಾಡೋನು ಗುಟ್ಟು ರಟ್ಟು ಮಾಡ್ತಾನೆ,+

ಹರಟೆಯನ್ನ ಪ್ರೀತಿಸುವವನ* ಜೊತೆ ಸೇರಬೇಡ.

20 ಮಗ ಅಪ್ಪಅಮ್ಮನ ಮೇಲೆ ಶಾಪ ಹಾಕಿದ್ರೆ

ಕತ್ತಲೆ ಆಗುವಾಗ ದೀಪ ಆರಿಹೋಗುತ್ತೆ.+

21 ದುರಾಸೆಯಿಂದ ಗಳಿಸಿದ ಆಸ್ತಿ

ಕೊನೆಗೆ ಆಶೀರ್ವಾದ ತರಲ್ಲ.+

22 “ಸೇಡಿಗೆ ಸೇಡು ತೀರಿಸ್ತೀನಿ!” ಅಂತ ಹೇಳಬೇಡ.+

ಯೆಹೋವನ ಮೇಲೆ ನಿರೀಕ್ಷೆ ಇಡು,+ ಆತನೇ ನಿನ್ನನ್ನ ಕಾಪಾಡ್ತಾನೆ.+

23 ತಪ್ಪಾದ ತೂಕದ ಕಲ್ಲು* ಯೆಹೋವನಿಗೆ ಅಸಹ್ಯ,

ಮೋಸದ ಅಳತೆ ಸರಿಯಲ್ಲ.

24 ಮನುಷ್ಯ ಎಲ್ಲಿ ಹೆಜ್ಜೆ ಇಡಬೇಕಂತ ಯೆಹೋವ ದಾರಿ ತೋರಿಸ್ತಾನೆ.+

ಇಲ್ಲದಿದ್ರೆ ಎಲ್ಲಿಗೆ ಹೋಗೋದು ಅಂತ ಅವನಿಗೆ ಹೇಗೆ ಗೊತ್ತಾಗುತ್ತೆ?

25 ಆತುರಪಟ್ಟು ಹರಕೆ ಮಾಡಿ+

ಆಮೇಲೆ ಅದ್ರ ಬಗ್ಗೆ ಯೋಚಿಸಿದ್ರೆ ಉರ್ಲಾಗಿರುತ್ತೆ.+

26 ಹೊಟ್ಟನ್ನ ಧಾನ್ಯದಿಂದ ಬೇರೆ ಮಾಡೋ ಹಾಗೆ+

ವಿವೇಕಿಯಾಗಿರೋ ರಾಜ ಕೆಟ್ಟವರನ್ನ ಜರಡಿ ಹಿಡಿದು ಬೇರೆ ಮಾಡ್ತಾನೆ.+

27 ಮನುಷ್ಯನ ಉಸಿರು ಯೆಹೋವನ ದೀಪ,

ಅದು ಅಂತರಾಳವನ್ನ ಶೋಧಿಸುತ್ತೆ.

28 ಶಾಶ್ವತ ಪ್ರೀತಿ, ನಂಬಿಗಸ್ತಿಕೆ ರಾಜನನ್ನ ಕಾದು ಕಾಪಾಡುತ್ತೆ,+

ಶಾಶ್ವತ ಪ್ರೀತಿಯಿಂದ ತನ್ನ ಸಿಂಹಾಸನವನ್ನ ಉಳಿಸ್ಕೊಳ್ತಾನೆ.+

29 ಯುವಕರ ಬಲಾನೇ ಅವ್ರ ಗೌರವ,+

ವೃದ್ಧರ ಬಿಳಿ ಕೂದಲೇ ಅವ್ರಿಗೆ ಅಲಂಕಾರ.+

30 ಏಟು, ಗಾಯ ಕೆಟ್ಟದನ್ನ ತೆಗಿಯುತ್ತೆ,*+

ಹೊಡೆತ ಒಬ್ಬನ ಅಂತರಾಳವನ್ನ ಶುದ್ಧಮಾಡುತ್ತೆ.

21 ರಾಜನ ಹೃದಯ ಯೆಹೋವನ ಕೈಯಲ್ಲಿರೋ ನದಿ,+

ಅದನ್ನ ಇಷ್ಟಬಂದ ಕಡೆಗೆ ತಿರುಗಿಸ್ತಾನೆ.+

 2 ಮನುಷ್ಯನಿಗೆ ತನ್ನೆಲ್ಲ ದಾರಿ ಸರಿಯಾಗೇ ಇದೆ ಅಂತ ಅನಿಸುತ್ತೆ,+

ಆದ್ರೆ ಯೆಹೋವ ಹೃದಯಗಳನ್ನ* ಪರೀಕ್ಷಿಸ್ತಾನೆ.+

 3 ಯೆಹೋವನಿಗೆ ಬಲಿಗಳಿಗಿಂತ

ಸರಿಯಾದ, ನ್ಯಾಯವಾದ ಕೆಲಸಗಳೇ ಇಷ್ಟ.+

 4 ಸೊಕ್ಕಿನ ಕಣ್ಣು, ಅಹಂಕಾರದ ಹೃದಯ,

ಕೆಟ್ಟವ್ರ ದಾರಿ ಬೆಳಗಿಸೋ ದೀಪ, ಇವು ಪಾಪ.+

 5 ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ,*+

ಆದ್ರೆ ಆತುರಪಡುವವರು ಬಡತನಕ್ಕೆ ಬೀಳ್ತಾರೆ.+

 6 ಸುಳ್ಳಿಂದ ಸಿಕ್ಕಿದ ಸಿರಿಸಂಪತ್ತು,

ಕಣ್ಮರೆ ಆಗೋ ಮಂಜಿನ ಹಾಗೆ, ಪ್ರಾಣ ತೆಗಿಯೋ ಉರ್ಲಿನ ಹಾಗೆ.*+

 7 ಕೆಟ್ಟವನು ಕೊಡೋ ಹಿಂಸೆ ಅವನನ್ನ ಗುಡಿಸಿ ಗುಂಡಾಂತರ ಮಾಡುತ್ತೆ,+

ಯಾಕಂದ್ರೆ ಅವನು ನ್ಯಾಯದಿಂದ ನಡ್ಕೊಳ್ಳೋಕೆ ಒಪ್ಪಲ್ಲ.

 8 ಅಪರಾಧಿ ದಾರಿ ಕೆಟ್ಟದು,

ಆದ್ರೆ ತಪ್ಪು ಮಾಡದವನು ಸರಿಯಾದ ದಾರಿಯಲ್ಲಿ ನಡಿತಾನೆ.+

 9 ಜಗಳಗಂಟಿ* ಹೆಂಡತಿ ಜೊತೆ ಇರೋದಕ್ಕಿಂತ,

ಮಾಳಿಗೆಯ ಒಂದು ಮೂಲೆಯಲ್ಲಿ ಇರೋದೇ ಒಳ್ಳೇದು.+

10 ಕೆಟ್ಟವನು ಕೆಟ್ಟದು ಮಾಡೋಕೆ ತುದಿಗಾಲಲ್ಲಿ ಇರ್ತಾನೆ,+

ಪಕ್ಕದ ಮನೆಯವನಿಗೆ ಒಂಚೂರೂ ದಯೆ ತೋರಿಸಲ್ಲ.+

11 ಗೇಲಿ ಮಾಡುವವನಿಗೆ ಶಿಕ್ಷೆ ಆದಾಗ ಅನುಭವ ಇಲ್ಲದವನು ವಿವೇಕಿ ಆಗ್ತಾನೆ,

ವಿವೇಕಿಗೆ ತಿಳುವಳಿಕೆ* ಸಿಕ್ಕಿದಾಗ ಅವನು ಜ್ಞಾನ ಪಡ್ಕೊಳ್ತಾನೆ.*+

12 ನೀತಿವಂತನಾದ ದೇವರು ಕೆಟ್ಟವನ ಮನೆಯನ್ನ ನೋಡ್ತಾನೆ,

ಕೆಟ್ಟವನನ್ನ ನಾಶ ಮಾಡ್ತಾನೆ.+

13 ದೀನರ ಕೂಗಿಗೆ ಕಿವಿ ಮುಚ್ಕೊಳ್ಳೋನಿಗೆ,

ಅವನು ಕೂಗುವಾಗ ಯಾರಿಂದಾನೂ ಉತ್ತರ ಸಿಗಲ್ಲ.+

14 ಗುಟ್ಟಾಗಿ ಕೊಟ್ಟ ಉಡುಗೊರೆ ಕೋಪ ಆರಿಸುತ್ತೆ,+

ಗುಟ್ಟಾಗಿ ಕೊಟ್ಟ ಲಂಚ ಕಡುಕೋಪವನ್ನ ಶಾಂತ ಮಾಡುತ್ತೆ.

15 ನ್ಯಾಯವಾಗಿ ನಡ್ಕೊಳ್ಳೋದಂದ್ರೆ ನೀತಿವಂತನಿಗೆ ಖುಷಿ,+

ಆದ್ರೆ ಕೆಟ್ಟಕೆಲಸ ಮಾಡುವವನಿಗೆ ಅದು ಅಸಹ್ಯ.

16 ತಿಳುವಳಿಕೆಯ* ದಾರಿಯಿಂದ ತಪ್ಪಿಹೋಗಿರುವವನು

ಸತ್ತವರ ಜೊತೆ ಸಮಾಧಿ ಸೇರ್ತಾನೆ.+

17 ಮೋಜುಮಸ್ತಿ ಪ್ರೀತಿಸುವವನು ಬಡತನಕ್ಕೆ ಹೋಗ್ತಾನೆ,+

ದ್ರಾಕ್ಷಾಮದ್ಯ, ಎಣ್ಣೆಯನ್ನ ಪ್ರೀತಿಸುವವನು ಶ್ರೀಮಂತನಾಗಿ ಏಳಿಗೆ ಆಗಲ್ಲ.

18 ನೀತಿವಂತನನ್ನ ಬಿಡಿಸೋಕೆ ಕೆಟ್ಟವನೇ ಬಿಡುಗಡೆ ಬೆಲೆ,

ಪ್ರಾಮಾಣಿಕನಿಗೆ ಮೋಸಗಾರನೇ ಬಿಡುಗಡೆ ಬೆಲೆ.+

19 ಕಿರಿಕಿರಿ ಮಾಡೋ ಜಗಳಗಂಟಿ ಹೆಂಡತಿ ಜೊತೆ ಬದುಕೋದಕ್ಕಿಂತ,

ಕಾಡಿಗೆ ಹೋಗಿ ಇರೋದೇ ಒಳ್ಳೇದು.+

20 ವಿವೇಕಿಯ ಮನೇಲಿ ಬೆಲೆಬಾಳೋ ನಿಧಿ, ಎಣ್ಣೆ ಇರುತ್ತೆ,+

ಆದ್ರೆ ಮೂರ್ಖ ತನ್ನ ಹತ್ರ ಇರೋದನ್ನೆಲ್ಲ ನುಂಗಿ ನೀರು ಕುಡಿತಾನೆ.+

21 ನೀತಿ, ಶಾಶ್ವತ ಪ್ರೀತಿ ತೋರಿಸುವವರು ನೀತಿವಂತರಾಗ್ತಾರೆ.

ಅವ್ರಿಗೆ ಜೀವ, ಗೌರವ ಸಿಗುತ್ತೆ.+

22 ವಿವೇಕಿ ಭದ್ರವಾದ ಪಟ್ಟಣವನ್ನ ವಶ ಮಾಡ್ಕೊಳ್ತಾನೆ,

ಆ ಪಟ್ಟಣದವರು ಯಾವುದನ್ನ ನಂಬಿದ್ರೋ ಅದನ್ನ ನೆಲಕ್ಕೆ ಉರುಳಿಸ್ತಾನೆ.+

23 ಬಾಯಿ, ನಾಲಿಗೆಯನ್ನ ಹತೋಟಿಯಲ್ಲಿ ಇಟ್ಕೊಳ್ಳೋನು,

ಕಷ್ಟದಿಂದ ತಪ್ಪಿಸ್ಕೊಳ್ತಾನೆ.+

24 ಸೊಕ್ಕು ಇರುವವನನ್ನ, ಜಂಬ ಕೊಚ್ಕೊಳ್ಳೋನನ್ನ

ಮೊಂಡ ಅಹಂಕಾರಿ ಅಂತ ಕರಿತಾರೆ.+

25 ಸೋಮಾರಿಯ ಕೈಗಳು ಕೆಲಸ ಮಾಡೋಕೆ ಇಷ್ಟಪಡಲ್ಲ,

ಅವನ ಸೋಮಾರಿತನದಿಂದ ಸತ್ತುಹೋಗ್ತಾನೆ.+

26 ಅವನು ಇಡೀ ದಿನ ಒಂದಲ್ಲ ಒಂದು ವಿಷ್ಯಕ್ಕೆ ಅತಿಯಾಸೆಪಡ್ತಾನೆ,

ಆದ್ರೆ ನೀತಿವಂತ ತನ್ನ ಹತ್ರ ಏನೂ ಇಟ್ಕೊಳ್ಳದೆ ಎಲ್ಲ ಕೊಟ್ಟುಬಿಡ್ತಾನೆ.+

27 ಕೆಟ್ಟವನು ಅರ್ಪಿಸೋ ಬಲಿನೇ ಅಸಹ್ಯವಾಗಿ ಇರುವಾಗ,+

ಅದನ್ನ ಕೆಟ್ಟ ಉದ್ದೇಶದಿಂದ* ಕೊಟ್ರೆ ಇನ್ನೂ ಅಸಹ್ಯವಾಗಿ ಇರಲ್ವಾ?

28 ಸುಳ್ಳು ಸಾಕ್ಷಿ ನಾಶವಾಗಿ ಹೋಗುತ್ತೆ,+

ಆದ್ರೆ ಜಾಗ್ರತೆಯಿಂದ ಕೇಳಿಸ್ಕೊಳ್ಳೋ ವ್ಯಕ್ತಿ ಹೇಳೋ ಸಾಕ್ಷಿ ಬಿದ್ದುಹೋಗಲ್ಲ.

29 ಕೆಟ್ಟವನ ಮುಖದಲ್ಲಿ ನಾಚಿಕೆ ಸುಳಿವೇ ಇರಲ್ಲ,+

ನೀತಿವಂತನ ದಾರಿಯಲ್ಲಿ ಅಪಾಯ ಇರಲ್ಲ.+

30 ಯಾವ ವಿವೇಕನೂ, ವಿವೇಚನಾ ಶಕ್ತಿನೂ, ಸಲಹೆನೂ ಯೆಹೋವನ ಮುಂದೆ ನಿಲ್ಲಲ್ಲ.+

31 ಯುದ್ಧದ ದಿನಕ್ಕಾಗಿ ಕುದುರೆಯನ್ನ ಸಿದ್ಧಮಾಡಿದ್ರೂ+

ರಕ್ಷಣೆ ಯೆಹೋವನಿಂದಾನೇ!+

22 ಹೆಚ್ಚು ಆಸ್ತಿಪಾಸ್ತಿಗಿಂತ ಒಳ್ಳೇ ಹೆಸ್ರು ಸಂಪಾದಿಸೋದು ಒಳ್ಳೇದು,+

ಬೆಳ್ಳಿಬಂಗಾರಕ್ಕಿಂತ ಗೌರವ* ಗಳಿಸೋದು ಮೇಲು.

 2 ಶ್ರೀಮಂತನಾಗಿರಲಿ ಬಡವನಾಗಿರಲಿ,

ಇಬ್ರನ್ನೂ ಸೃಷ್ಟಿ ಮಾಡಿದ್ದು ಯೆಹೋವನೇ.+

 3 ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ,

ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ* ಅನುಭವಿಸ್ತಾನೆ.

 4 ದೀನತೆ, ಯೆಹೋವನ ಭಯ ಇದ್ರೆ,

ಸಿರಿಸಂಪತ್ತು, ಗೌರವ, ಜೀವ ಪಡಿತೀವಿ.+

 5 ಕೆಟ್ಟವನ ದಾರಿಯಲ್ಲಿ ಮುಳ್ಳುಗಳು, ಉರ್ಲುಗಳು ಇರುತ್ತೆ,

ಆದ್ರೆ ತನ್ನ ಜೀವ ಅಮೂಲ್ಯ ಅನ್ನೋ ಯೋಚ್ನೆ ಇರುವವನು ಕೆಟ್ಟ ದಾರಿಯಿಂದ ದೂರ ಇರ್ತಾನೆ.+

 6 ಸರಿ ದಾರಿಯಲ್ಲಿ ನಡಿಯೋಕೆ ಹುಡುಗನಿಗೆ* ತರಬೇತಿ ಕೊಡು,+

ವಯಸ್ಸಾದ ಮೇಲೂ ಅವನು ಆ ದಾರಿ ಬಿಟ್ಟು ಹೋಗಲ್ಲ.+

 7 ಬಡವನ ಮೇಲೆ ಶ್ರೀಮಂತ ಆಳ್ತಾನೆ,

ಸಾಲ ಮಾಡಿರುವವನು ಸಾಲಕೊಟ್ಟವನ ಸೇವಕ ಆಗ್ತಾನೆ.+

 8 ಕೆಟ್ಟದನ್ನ ಬಿತ್ತುವವನು ನಾಶವನ್ನ ಕೊಯ್ತಾನೆ,+

ಅವನ ಕ್ರೂರವಾದ ಅಧಿಕಾರ ಅಂತ್ಯ ಕಾಣುತ್ತೆ.*+

 9 ಉದಾರವಾಗಿ ಕೊಡುವವನಿಗೆ* ಆಶೀರ್ವಾದ ಸಿಗುತ್ತೆ,

ಯಾಕಂದ್ರೆ ಅವನು ಬಡವರ ಜೊತೆ ತನ್ನ ಊಟ ಹಂಚ್ಕೊಳ್ತಾನೆ.+

10 ಗೇಲಿ ಮಾಡುವವ್ರನ್ನ ಓಡಿಸಿಬಿಡು,

ಆಗ ಕಿತ್ತಾಟ, ವಾದವಿವಾದ, ಅವಮಾನ ನಿಂತುಹೋಗುತ್ತೆ.

11 ಶುದ್ಧ ಹೃದಯವನ್ನ ಪ್ರೀತಿಸುವವನಿಗೆ, ಹಿತವಾಗಿ ಮಾತಾಡುವವನಿಗೆ,

ರಾಜ ಸ್ನೇಹಿತನಾಗ್ತಾನೆ.+

12 ಯೆಹೋವನ ಕಣ್ಣುಗಳು ಜ್ಞಾನ ಇರೋ ವ್ಯಕ್ತಿಯನ್ನ ಕಾದು ಕಾಪಾಡುತ್ತೆ,

ಆದ್ರೆ ಆತನು ಮೋಸಗಾರರ ಮಾತುಗಳನ್ನ ತಲೆಕೆಳಗೆ ಮಾಡ್ತಾನೆ.+

13 ಸೋಮಾರಿ “ಹೊರಗೆ ಸಿಂಹ ಇದೆ!

ಪಟ್ಟಣದ ಮುಖ್ಯಸ್ಥಳದಲ್ಲಿ* ಅದು ನನ್ನನ್ನ ಕೊಂದುಹಾಕುತ್ತೆ!”+ ಅಂತಾನೆ.

14 ನಡತೆಗೆಟ್ಟ* ಹೆಂಗಸಿನ ಬಾಯಿ ದೊಡ್ಡ ಗುಂಡಿ,+

ಯೆಹೋವನಿಂದ ಶಿಕ್ಷೆ ಸಿಗೋ ವ್ಯಕ್ತಿ ಅದ್ರ ಒಳಗೆ ಬೀಳ್ತಾನೆ.

15 ಹುಡುಗನ ಹೃದಯದಲ್ಲಿ ಮೂರ್ಖತನ ಇರೋದು ಸಹಜ,+

ಶಿಸ್ತು ಅನ್ನೋ ಕೋಲು ಅದನ್ನ ತೆಗೆದುಹಾಕುತ್ತೆ.+

16 ಬಡವನಿಗೆ ಮೋಸ ಮಾಡಿ ಆಸ್ತಿ ಕೂಡಿಸ್ಕೊಳ್ಳುವವನು+

ಶ್ರೀಮಂತನಿಗೆ ಉಡುಗೊರೆ ಕೊಡುವವನು

ಇಬ್ರೂ ಬಡತನ ಅನುಭವಿಸ್ತಾರೆ.

17 ವಿವೇಕಿಯ ಮಾತುಗಳನ್ನ ಕಿವಿಗೆ ಹಾಕೊ,+

ಆಗ ನಾನು ಕಲಿಸೋ ವಿಷ್ಯಗಳನ್ನ ಅರ್ಥ ಮಾಡ್ಕೊಳ್ತೀಯ.+

18 ಅವು ಸದಾ ನಿನ್ನ ಬಾಯಲ್ಲಿರುತ್ತೆ,+

ಅವುಗಳನ್ನ ನಿನ್ನ ಹೃದಯದಲ್ಲಿ ಇಟ್ಕೊ, ಆಗ ನೀನು ಸಂತೋಷವಾಗಿ ಇರ್ತಿಯ.+

19 ಯೆಹೋವನ ಮೇಲೆ ನೀನು ತುಂಬ ನಂಬಿಕೆ ಇಡೋಕೆ,

ಇವತ್ತು ನಾನು ನಿನಗೆ ಅದನ್ನೆಲ್ಲ ವಿವರಿಸ್ತಾ ಇದ್ದೀನಿ.

20 ತುಂಬ ಸಲಹೆಗಳನ್ನ, ಮಾರ್ಗದರ್ಶನಗಳನ್ನ,

ಈ ಮುಂಚೆನೇ ನಿನಗೋಸ್ಕರ ಬರೆದಿಟ್ಟಿದ್ದೆ.

21 ಸತ್ಯವಾದ, ನೀನು ನಂಬಬಹುದಾದ ಮಾತುಗಳನ್ನ ಕಲಿಸೋಕೆ,

ನಿನ್ನನ್ನ ಕಳಿಸಿದವ್ರ ಹತ್ರ ಹೋಗಿ ಸರಿಯಾದ ವರದಿ ಕೊಡೋಕೆ ಆಗೋ ಹಾಗೆ ಕಲಿಸಿದ್ದೀನಿ.

22 ಬಡವ್ರಿಗೆ ದಿಕ್ಕಿಲ್ಲ ಅಂದ್ಕೊಂಡು ಅವ್ರನ್ನ ಕೊಳ್ಳೆಹೊಡಿಬೇಡ,+

ದೀನನನ್ನ ಪಟ್ಟಣದ ಬಾಗಿಲಲ್ಲಿ ತುಳಿದುಹಾಕಬೇಡ.+

23 ಯಾಕಂದ್ರೆ ಯೆಹೋವನೇ ಅವ್ರ ಪರವಾಗಿ ವಾದಿಸ್ತಾನೆ,+

ಅವ್ರಿಗೆ ಮೋಸ ಮಾಡುವವರ ಜೀವ ತೆಗಿತಾನೆ.

24 ಕೋಪಿಷ್ಠನ ಸಹವಾಸ ಮಾಡಬೇಡ,

ಮಾತುಮಾತಿಗೂ ಸಿಟ್ಟುಮಾಡ್ಕೊಳ್ಳೋ ವ್ಯಕ್ತಿ ಜೊತೆ ಸ್ನೇಹ ಬೆಳೆಸಬೇಡ.

25 ಯಾಕಂದ್ರೆ ನೀನು ಕೂಡ ಅವನ ತರ ನಡ್ಕೊಳ್ಳೋಕೆ ಶುರುಮಾಡ್ತೀಯ,

ನೀನಾಗೇ ಹೋಗಿ ಉರ್ಲಿಗೆ ಬೀಳ್ತೀಯ.+

26 ಕೈಕುಲುಕಿ ಒಪ್ಪಂದ ಮಾಡ್ಕೊಳ್ಳುವವ್ರ ಮಧ್ಯದಲ್ಲಾಗಲಿ

ಬೇರೆಯವ್ರಿಗೆ ಜಾಮೀನು ಕೊಡುವವ್ರ ಜೊತೆ ಆಗಲಿ ಇರಬೇಡ.+

27 ವಾಪಸ್‌ ಕೊಡೋಕೆ ನಿನ್ನ ಹತ್ರ ಹಣ ಇಲ್ಲಾಂದ್ರೆ,

ನೀನು ಮಲಗೋ ಹಾಸಿಗೆಯನ್ನೇ ಕಿತ್ಕೊಂಡು ಹೋಗ್ತಾರೆ.

28 ನಿನ್ನ ಪೂರ್ವಜರು ಹಾಕಿದ

ಗಡಿಯನ್ನ ಸರಿಸಬೇಡ.+

29 ತನ್ನ ಕೆಲಸದಲ್ಲಿ ನಿಪುಣನಾಗಿರೋ ವ್ಯಕ್ತಿಯನ್ನ ನೋಡಿದ್ದೀಯಾ?

ಅವನು ಸಾಮಾನ್ಯ ಜನ್ರ ಮುಂದೆ ಅಲ್ಲ,

ರಾಜರ ಮುಂದೆ ನಿಲ್ತಾನೆ.+

23 ರಾಜನ ಜೊತೆ ಊಟಕ್ಕೆ ಕೂತಾಗ,

ನೀನು ಎಲ್ಲಿದ್ದೀಯ ಅನ್ನೋದನ್ನ ಮರಿಬೇಡ.

 2 ನಿನಗೆ ತುಂಬ ಹಸಿವಾಗಿದ್ರೆ,

ನಿನ್ನನ್ನೇ ನಿಯಂತ್ರಿಸ್ಕೊ.*

 3 ರಾಜನ ಊಟಕ್ಕೆ ಆಸೆಪಡಬೇಡ,

ಯಾಕಂದ್ರೆ ಅದೇ ನಿನಗೆ ಉರ್ಲಾಗಬಹುದು.

 4 ಆಸ್ತಿಪಾಸ್ತಿ ಮಾಡ್ತಾ ಸುಸ್ತಾಗಿ ಹೋಗಬೇಡ.+

ಸ್ವಲ್ಪ ನಿಂತು, ವಿವೇಕವನ್ನ ತೋರಿಸು.*

 5 ನೀನು ಅದನ್ನ ನೋಡಿ ಕಣ್ತುಂಬಿಕೊಳ್ಳುವಷ್ಟರಲ್ಲಿ ಅದು ಮಾಯ ಆಗಿಬಿಡಬಹುದು,+

ಯಾಕಂದ್ರೆ ಅದು ರೆಕ್ಕೆ ಕಟ್ಕೊಂಡ ಹದ್ದಿನ ತರ ಆಕಾಶಕ್ಕೆ ಹಾರಿಹೋಗುತ್ತೆ.+

 6 ಜಿಪುಣನ ಮನೆಯಲ್ಲಿ ಊಟ ಮಾಡಬೇಡ,

ಅವನ ರುಚಿಯಾದ ಆಹಾರಕ್ಕೆ ಆಸೆಪಡಬೇಡ.

 7 ಯಾಕಂದ್ರೆ ನೀನೆಷ್ಟು ತಿಂತೀಯ ಅಂತ ಅವನು ಲೆಕ್ಕ ಇಡ್ತಾನೆ,

ಅವನು ನಿನಗೆ “ತಿನ್ನು ಕುಡಿ” ಅಂತ ಹೇಳಿದ್ರೂ ಮನಸಾರೆ ಹೇಳಿರಲ್ಲ.

 8 ನೀನು ತಿಂದಿರೋ ತುತ್ತನ್ನ ಕಕ್ಕಿಬಿಡ್ತೀಯ,

ನಿನ್ನನ್ನ ಹೊಗಳಿದ್ದೆಲ್ಲ ವ್ಯರ್ಥ ಆಗುತ್ತೆ.

 9 ಮೂರ್ಖನ ಜೊತೆ ಮಾತಾಡಬೇಡ,+

ಯಾಕಂದ್ರೆ ಅವನು ನಿನ್ನ ಮಾತಲ್ಲಿರೋ ವಿವೇಕವನ್ನ ಕೀಳಾಗಿ ನೋಡ್ತಾನೆ.+

10 ಪೂರ್ವಜರು ಹಾಕಿದ ಗಡಿಯನ್ನ ಸರಿಸಬೇಡ,+

ಅನಾಥರ* ಹೊಲವನ್ನ ಕಿತ್ಕೋಬೇಡ.

11 ಅವ್ರ ರಕ್ಷಕ* ತುಂಬ ಬಲಶಾಲಿ,

ಆತನು ಅವ್ರ ಪರವಾಗಿ ನಿಂತು ನಿನ್ನ ಜೊತೆ ವಾದಿಸ್ತಾನೆ.+

12 ಶಿಸ್ತಿಗೆ ನಿನ್ನ ಹೃದಯ ಮಣಿಯಲಿ,

ವಿವೇಕದ ಮಾತುಗಳನ್ನ ನಿನ್ನ ಕಿವಿ ಕೇಳಲಿ.

13 ಹುಡುಗನಿಗೆ ಕೊಡಬೇಕಾದ ಶಿಸ್ತನ್ನ ಹಿಂಜರಿಯದೆ ಕೊಡು,+

ಬೆತ್ತದಿಂದ ಹೊಡೆದ್ರೆ ಅವನು ಸಾಯಲ್ಲ.

14 ಸಮಾಧಿಯಿಂದ* ಅವನನ್ನ ಕಾಪಾಡೋಕೆ,

ನೀನು ಅವನಿಗೆ ಕೋಲಿಂದ ಹೊಡಿಲೇಬೇಕು.

15 ನನ್ನ ಮಗನೇ, ನಿನ್ನ ಹೃದಯದಲ್ಲಿ ವಿವೇಕ ಇದ್ರೆ,

ನನ್ನ ಹೃದಯಕ್ಕೆ ಸಂತೋಷ ಆಗುತ್ತೆ.+

16 ನಿನ್ನ ತುಟಿಗಳು ಸರಿಯಾದ ಮಾತುಗಳನ್ನ ಆಡಿದ್ರೆ,

ನನ್ನ ಅಂತರಾಳಕ್ಕೆ* ಖುಷಿ ಆಗುತ್ತೆ.

17 ಪಾಪಿಗಳನ್ನ ನೋಡಿ ನಿನ್ನ ಹೃದಯ ಹೊಟ್ಟೆಕಿಚ್ಚುಪಡಬಾರದು,+

ಅದ್ರ ಬದ್ಲು ಇಡೀ ದಿನ ಯೆಹೋವನಿಗೆ ಭಯಪಡು.+

18 ಯಾಕಂದ್ರೆ ಆಗ ನಿನಗೆ ಒಳ್ಳೇ ಭವಿಷ್ಯ ಇರುತ್ತೆ,+

ನಿನ್ನ ನಿರೀಕ್ಷೆ ಯಾವತ್ತೂ ನೀರು ಪಾಲಾಗಲ್ಲ.

19 ನನ್ನ ಮಗನೇ ಕೇಳು, ವಿವೇಕಿ ಆಗು.

ನಿನ್ನ ಹೃದಯವನ್ನ ಸರಿಯಾದ ದಾರಿಗೆ ನಡೆಸು.

20 ಕಂಠಪೂರ್ತಿ ದ್ರಾಕ್ಷಾಮದ್ಯ ಕುಡಿಯುವವ್ರ ಜೊತೆ ಸೇರಬೇಡ,+

ಹೊಟ್ಟೆಬಿರಿಯೋ ತರ ಮಾಂಸ ತಿನ್ನುವವರ ಜೊತೆ ಇರಬೇಡ.+

21 ಯಾಕಂದ್ರೆ ಕುಡುಕ, ಹೊಟ್ಟೆಬಾಕ ಇಬ್ರೂ ಬಡತನಕ್ಕೆ ಬಲಿ ಆಗ್ತಾರೆ,+

ತೂಕಡಿಸುವವರು ಚಿಂದಿ ಬಟ್ಟೆ ಹಾಕಬೇಕಾಗುತ್ತೆ.

22 ಹೆತ್ತ ತಂದೆಯ ಮಾತು ಕೇಳು,

ವಯಸ್ಸಾಗಿದೆ ಅಂತ ತಾಯಿಯನ್ನ ತಿರಸ್ಕಾರದಿಂದ ನೋಡಬೇಡ.+

23 ಸತ್ಯವನ್ನ ಕೊಂಡ್ಕೊ, ಅದನ್ನ ಯಾವತ್ತೂ ಮಾರಿಬಿಡಬೇಡ.+

ಜೊತೆಗೆ ವಿವೇಕವನ್ನ, ಶಿಸ್ತನ್ನ, ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯವನ್ನ ಖರೀದಿಸು.+

24 ನೀತಿವಂತನ ತಂದೆಗೆ ಸಂತೋಷ ಆಗುತ್ತೆ,

ವಿವೇಕಿಯಿಂದಾಗಿ ಅವನ ಹೆತ್ತ ತಂದೆ ಖುಷಿ ಪಡ್ತಾನೆ.

25 ನಿನ್ನ ಅಪ್ಪಅಮ್ಮ ಸಂತೋಷ ಪಡ್ತಾರೆ,

ನಿನ್ನನ್ನ ಹೆತ್ತ ಅಮ್ಮ ಆನಂದಿಸ್ತಾಳೆ.

26 ನನ್ನ ಮಗನೇ, ನಿನ್ನ ಹೃದಯವನ್ನ ನನಗೆ ಕೊಡು,

ನನ್ನ ದಾರಿಯಲ್ಲಿ ನಡಿಯೋದ್ರಿಂದ ನಿನಗೆ ಖುಷಿ ಸಿಗಲಿ.+

27 ವೇಶ್ಯೆ ಆಳವಾದ ಗುಂಡಿ ತರ,

ನಾಚಿಕೆಗೆಟ್ಟ* ಹೆಂಗಸು ಇಕ್ಕಟ್ಟಾದ ಬಾವಿ ತರ.+

28 ಅವಳು ಕಳ್ಳನ ತರ ಹೊಂಚುಹಾಕಿ ಕಾದು ಕೂತಿರ್ತಾಳೆ,+

ಅವಳಿಂದಾಗಿ ನಂಬಿಕೆದ್ರೋಹ ಮಾಡೋ ಗಂಡಸರು ಜಾಸ್ತಿ ಆಗ್ತಾರೆ.

29 ಯಾರಿಗೆ ಕಷ್ಟ? ಯಾರಿಗೆ ದುಃಖ?

ಯಾರಿಗೆ ಜಗಳ ಇದೆ? ಯಾರಿಗೆ ದೂರಿದೆ?

ಯಾರಿಗೆ ಕಾರಣ ಇಲ್ಲದೆ ಗಾಯ ಆಗಿದೆ? ಯಾರ ಕಣ್ಣು ಮಬ್ಬಾಗಿದೆ?

30 ಯಾರಿಗಂದ್ರೆ ದ್ರಾಕ್ಷಾಮದ್ಯ ಕುಡಿದು ಕಾಲಹರಣ ಮಾಡುವವರಿಗೆ,+

ಅಮಲೇರಿಸೋ ದ್ರಾಕ್ಷಾಮದ್ಯ ಹುಡುಕುವವರಿಗೆ.

31 ಲೋಟದಲ್ಲಿ ಮಿನುಗೋ, ಸಲೀಸಾಗಿ ಇಳಿದುಹೋಗೋ,

ದ್ರಾಕ್ಷಾಮದ್ಯದ ಕೆಂಪು ಬಣ್ಣ ನೋಡಬೇಡ.

32 ಯಾಕಂದ್ರೆ ಕೊನೇಲಿ ಅದು ಹಾವಿನ ತರ ಕಚ್ಚುತ್ತೆ,

ವಿಷ ತುಂಬಿರೋ ಹಾವಿನ ತರ ವಿಷ ಕಾರುತ್ತೆ.

33 ನಿನ್ನ ಕಣ್ಣುಗಳು ವಿಚಿತ್ರ ವಿಷ್ಯಗಳನ್ನ ನೋಡುತ್ತೆ,

ನಿನ್ನ ಹೃದಯ ತಪ್ಪನ್ನ ಸಾಧಿಸೋ ಮಾತುಗಳನ್ನ ಆಡುತ್ತೆ.+

34 ಸಮುದ್ರದ ಅಲ್ಲೋಲಕಲ್ಲೋಲ ಅಲೆಗಳ ಮಧ್ಯ ಮಲಗೋ ವ್ಯಕ್ತಿ ತರ,

ಹಡಗಿನ ಪಟ ಕಟ್ಟೋ ಕಂಬದ ಮೇಲೆ ಬಿದ್ಕೊಂಡಿರೋ ವ್ಯಕ್ತಿ ತರ ನೀನಿರ್ತಿಯ.

35 ನೀನು ಹೀಗೆ ಹೇಳ್ತೀಯ: “ಅವರು ನನಗೆ ಹೊಡೆದ್ರು. ನನಗೆ ನೋವಾಗ್ಲೇ ಇಲ್ಲ.*

ಅವರು ನನಗೆ ಬಾರಿಸಿದ್ರು, ನನಗೆ ಗೊತ್ತಾಗ್ಲೇ ಇಲ್ಲ.

ನಾನು ಯಾವಾಗ ಎದ್ದು+ ಇನ್ನು ಸ್ವಲ್ಪ ಕುಡಿಯೋದು?”*

24 ಕೆಟ್ಟವ್ರನ್ನ ನೋಡಿ ಹೊಟ್ಟೆಕಿಚ್ಚು ಪಡಬೇಡ,

ಅಂಥವ್ರ ಸಹವಾಸ ಮಾಡಬೇಡ.+

 2 ಯಾಕಂದ್ರೆ ಅವ್ರ ಹೃದಯ ಯಾರಿಗೆ ಹಿಂಸೆ ಕೊಡೋದು ಅಂತಾನೇ ಯೋಚ್ನೆ ಮಾಡುತ್ತೆ,

ಅವ್ರ ತುಟಿಗಳು ಇನ್ನೊಬ್ರಿಗೆ ತೊಂದ್ರೆ ಕೊಡೋದ್ರ ಬಗ್ಗೆನೇ ಮಾತಾಡುತ್ತೆ.

 3 ವಿವೇಕದಿಂದ ಮನೆ* ಕಟ್ಟಬಹುದು,+

ವಿವೇಚನಾ ಶಕ್ತಿಯಿಂದ ಅದನ್ನ ಗಟ್ಟಿಯಾಗಿ ಕಟ್ಟಬಹುದು.

 4 ಅದ್ರ ಕೋಣೆಗಳಲ್ಲಿ ಜ್ಞಾನವನ್ನ,

ಬೆಲೆಬಾಳೋ ಎಲ್ಲ ವಸ್ತುಗಳನ್ನ, ಇಷ್ಟವಾದ ಸಂಪತ್ತನ್ನ ತುಂಬಿಸಬಹುದು.+

 5 ವಿವೇಕ ಇರೋ ವ್ಯಕ್ತಿ ಬಲಶಾಲಿ ಆಗ್ತಾನೆ,+

ಜ್ಞಾನದಿಂದ ಅವನು ತನ್ನ ಬಲ ಹೆಚ್ಚಿಸ್ಕೊಳ್ತಾನೆ.

 6 ನಿಪುಣರ ನಿರ್ದೇಶನದಿಂದ* ಯುದ್ಧ ಮಾಡು,+

ತುಂಬ ಸಲಹೆಗಾರರು ಇದ್ರೆ ನಿನಗೆ ಜಯ* ಸಿಗುತ್ತೆ.+

 7 ಮೂರ್ಖನಿಗೆ ನಿಜವಾದ ವಿವೇಕ ಸಿಗಲ್ಲ,+

ಪಟ್ಟಣದ ಬಾಗಿಲಲ್ಲಿ ಹೇಳೋಕೆ ಅವನ ಹತ್ರ ಏನೂ ಇರಲ್ಲ.

 8 ಕೆಟ್ಟದ್ದನ್ನ ಮಾಡೋಕೆ ಸಂಚು ಮಾಡುವನನ್ನ

ದೊಡ್ಡ ಕುತಂತ್ರಿ ಅಂತಾರೆ.+

 9 ಮೂರ್ಖನ ಯೋಜನೆಗಳಲ್ಲಿ ಬರೀ ಪಾಪನೇ ಇರುತ್ತೆ,

ಗೇಲಿ ಮಾಡುವವನನ್ನ ಜನ ಇಷ್ಟ ಪಡಲ್ಲ.+

10 ಕಷ್ಟ ಬಂದಾಗ ಧೈರ್ಯ ಕಳ್ಕೊಂಡ್ರೆ

ಇರೋ ಬಲನೂ ಹೋಗುತ್ತೆ.

11 ಕೊಲ್ಲೋಕೆ ಕರ್ಕೊಂಡು ಹೋಗೋರನ್ನ ಕಾಪಾಡು,

ನಾಶದ ಅಂಚಲ್ಲಿರೋ ಜನ್ರನ್ನ ಬೀಳದ ಹಾಗೆ ನೋಡ್ಕೊ.+

12 “ನಮಗೆ ಇದ್ರ ಬಗ್ಗೆ ಗೊತ್ತಿರಲಿಲ್ಲ” ಅಂತ ನೀನು ಹೇಳಿದ್ರೆ

ಹೃದಯ* ಪರಿಶೋಧಿಸೋ ದೇವರಿಗೆ ಅದು ಗೊತ್ತಾಗಲ್ವಾ?+

ಹೌದು, ನಿನ್ನನ್ನ ಗಮನಿಸೋ ದೇವರಿಗೆ ಎಲ್ಲ ಗೊತ್ತಾಗುತ್ತೆ.

ಪ್ರತಿಯೊಬ್ರೂ ಏನೇನು ಮಾಡ್ತಾರೋ ಅದಕ್ಕೆ ತಕ್ಕ ಫಲ ಕೊಡ್ತಾನೆ.+

13 ನನ್ನ ಮಗನೇ, ಜೇನು ತಿನ್ನು. ಅದು ಒಳ್ಳೇದು.

ಜೇನುಗೂಡಲ್ಲಿ ಸಿಗೋ ಜೇನು ತುಂಬ ಸಿಹಿಯಾಗಿರುತ್ತೆ.

14 ಅದೇ ತರ ವಿವೇಕನೂ ನಿನಗೆ ಒಳ್ಳೇದು.+

ಅದನ್ನ ಹುಡುಕಿದ್ರೆ ಒಳ್ಳೇ ಭವಿಷ್ಯ ಇರುತ್ತೆ,

ನಿನ್ನ ನಿರೀಕ್ಷೆ ಯಾವತ್ತೂ ನೀರು ಪಾಲಾಗಲ್ಲ.+

15 ನೀತಿವಂತನ ಮನೆ ಹತ್ರ ಕೆಟ್ಟ ಉದ್ದೇಶದಿಂದ ಹೊಂಚುಹಾಕಿ ಕೂರಬೇಡ.

ಅವನ ಮನೆಯನ್ನ ಹಾಳು ಮಾಡಬೇಡ.

16 ಯಾಕಂದ್ರೆ ನೀತಿವಂತ ಏಳು ಸಲ ಬಿದ್ರೂ ಮತ್ತೆ ಏಳ್ತಾನೆ.+

ಆದ್ರೆ ಕೆಟ್ಟವನು ಕೆಟ್ಟದ್ರಿಂದಾನೇ ಎಡವಿ ಬೀಳ್ತಾನೆ, ಅವನು ಮೇಲೆ ಏಳೋದೇ ಇಲ್ಲ.+

17 ನಿನ್ನ ಶತ್ರು ಬೀಳುವಾಗ ಸಂತೋಷ ಪಡಬೇಡ,

ಅವನು ಎಡವಿದಾಗ ಹೃದಯದಲ್ಲಿ ಖುಷಿ ಪಡಬೇಡ.+

18 ಹಾಗೆ ಮಾಡಿದ್ರೆ ಯೆಹೋವ ಅದನ್ನ ನೋಡ್ತಾನೆ, ಆತನಿಗೆ ಅದು ಇಷ್ಟ ಆಗಲ್ಲ.

ತನ್ನ ಕೋಪವನ್ನ ಕೂಡ ನಿನ್ನ ಶತ್ರುವಿನ ಕಡೆಯಿಂದ ತಿರುಗಿಸಿಬಿಡ್ತಾನೆ.+

19 ಕೆಡುಕರ ಮೇಲೆ ಕೋಪ ಮಾಡ್ಕೋಬೇಡ,

ಕೆಟ್ಟವ್ರನ್ನ ನೋಡಿ ಹೊಟ್ಟೆಕಿಚ್ಚು ಪಡಬೇಡ.

20 ಯಾಕಂದ್ರೆ ಕೆಟ್ಟವನಿಗೆ ಒಳ್ಳೇ ಭವಿಷ್ಯ ಇರಲ್ಲ.+

ಅವನ ದೀಪ ಆರಿಹೋಗುತ್ತೆ.+

21 ನನ್ನ ಮಗನೇ, ಯೆಹೋವನಿಗೆ ಮತ್ತು ರಾಜನಿಗೆ ಭಯಪಡು.+

ದಂಗೆಕೋರರ ಜೊತೆ ಸೇರಬೇಡ.+

22 ಯಾಕಂದ್ರೆ ಅವ್ರ ಮೇಲೆ ಕಷ್ಟ ದಿಢೀರಂತ ಬರುತ್ತೆ.+

ಅವ್ರಿಬ್ರೂ* ಆ ದಂಗೆಕೋರರ ಮೇಲೆ ಯಾವ ತರ ನಾಶನ ತರ್ತಾರೆ ಅಂತ ಯಾರಿಗೆ ಗೊತ್ತು?+

23 ಬುದ್ಧಿವಂತರು ಹೇಳಿರೋ ಮಾತುಗಳು ಏನಂದ್ರೆ:

ತೀರ್ಪು ಕೊಡುವಾಗ ಭೇದಭಾವ ಮಾಡೋದು ಸರಿಯಲ್ಲ.+

24 ಕೆಟ್ಟವನಿಗೆ “ನೀನು ನೀತಿವಂತ” ಅನ್ನೋ ವ್ಯಕ್ತಿಗಳನ್ನ+

ಬೇರೆ ದೇಶದ ಜನ್ರು ಶಪಿಸ್ತಾರೆ, ಅವನನ್ನ ಎಲ್ರ ಮುಂದೆನೇ ಬೈತಾರೆ.

25 ಆದ್ರೆ ಕೆಟ್ಟವನನ್ನ ಬೈಯುವವ್ರಿಗೆ ಒಳ್ಳೇದಾಗುತ್ತೆ.+

ಅವ್ರಿಗೆ ತುಂಬ ಆಶೀರ್ವಾದ ಸಿಗುತ್ತೆ.+

26 ಮುಚ್ಚುಮರೆ ಇಲ್ಲದೆ ಉತ್ತರ ಕೊಡುವವ್ರಿಗೆ ಜನ ಮುತ್ತು ಕೊಡ್ತಾರೆ.*+

27 ಮೊದ್ಲು ಹೊರಗಿನ ಕೆಲಸಗಳನ್ನ ಮಾಡಿ ಮುಗಿಸು, ಹೊಲದಲ್ಲಿರೋ ಕೆಲಸಗಳನ್ನ ತಯಾರಿ ಮಾಡ್ಕೊ,

ಆಮೇಲೆ ಮನೆ* ಕಟ್ಟು.

28 ಆಧಾರ ಇಲ್ಲದೆ ಪಕ್ಕದ ಮನೆಯವನ ವಿರುದ್ಧ ಸಾಕ್ಷಿ ಹೇಳಬೇಡ.+

ಬೇರೆಯವ್ರಿಗೆ ಮೋಸ ಮಾಡೋಕೆ ಸುಳ್ಳು ಹೇಳಬೇಡ.+

29 “ಅವನು ನನಗೆ ಮಾಡಿದ ಹಾಗೇ ನಾನು ಅವನಿಗೆ ಮಾಡ್ತೀನಿ,

ಅವನು ಮಾಡಿದ್ದಕ್ಕೆ ಸೇಡು ತೀರಿಸ್ತೀನಿ” ಅಂತ ಹೇಳಬೇಡ.+

30 ನಾನು ಸೋಮಾರಿಯ+ ಹೊಲವನ್ನ,

ಬುದ್ಧಿ ಇಲ್ಲದವನ* ದ್ರಾಕ್ಷಿತೋಟವನ್ನ ದಾಟ್ಕೊಂಡು ಹೋದೆ.

31 ಹೊಲದಲ್ಲಿ ಸಿಕ್ಕಾಪಟ್ಟೆ ಕಳೆ ಬೆಳೆದಿರೋದನ್ನ,

ಮುಳ್ಳು ಗಿಡದಿಂದ ಮುಚ್ಚಿ ಹೋಗಿರೋದನ್ನ,

ಕಲ್ಲಿನ ಗೋಡೆ ಬಿದ್ದುಹೋಗಿರೋದನ್ನ ನೋಡ್ದೆ.+

32 ಇದನ್ನ ನೋಡಿ ತುಂಬ ಯೋಚ್ನೆ ಮಾಡ್ದೆ.

ಅದ್ರಿಂದ ಈ ಪಾಠ ಕಲ್ತೆ:*

33 ಇನ್ನು ಸ್ವಲ್ಪ ಹೊತ್ತು ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ,

ಕೈಮುದುರಿಕೊಂಡು ಇನ್ನು ಸ್ವಲ್ಪ ಹೊತ್ತು ಮಲಗ್ತೀನಿ ಅಂದ್ಕೊಳ್ತೀಯ,

34 ಬಡತನ ದಾರಿಗಳ್ಳನ ತರ ನಿನ್ನ ಮೇಲೆ ಬೀಳುತ್ತೆ,

ಕೊರತೆ ಆಯುಧ ಹಿಡ್ಕೊಂಡು ನಿನ್ನ ಮೇಲೆ ದಾಳಿ ಮಾಡುತ್ತೆ.+

25 ಇವು ಸಹ ಸೊಲೊಮೋನನ ನಾಣ್ಣುಡಿಗಳು.+ ಇದನ್ನೆಲ್ಲ ಯೆಹೂದದ ರಾಜ ಹಿಜ್ಕೀಯನ+ ಆಸ್ಥಾನದಲ್ಲಿದ್ದ ಗಂಡಸರು ನಕಲು ಮಾಡಿದ್ರು.*

 2 ವಿಷ್ಯವನ್ನ ಗುಟ್ಟಾಗಿ ಇಡೋದ್ರಿಂದ ದೇವರಿಗೆ ಗೌರವ,+

ವಿಷ್ಯವನ್ನ ಪರಿಶೋಧಿಸೋದು ರಾಜರಿಗೆ ಗೌರವ.

 3 ಆಕಾಶದ ಎತ್ತರವನ್ನ, ಭೂಮಿಯ ಆಳವನ್ನ,

ರಾಜರ ಹೃದಯವನ್ನ ತಿಳ್ಕೊಳ್ಳಕ್ಕಾಗಲ್ಲ.

 4 ಬೆಳ್ಳಿಯಿಂದ ಕೊಳೆ* ತೆಗೀರಿ,

ಆಗ ಅದು ಪೂರ್ತಿ ಶುದ್ಧ ಆಗುತ್ತೆ.+

 5 ರಾಜನ ಸನ್ನಿಧಿಯಿಂದ ಕೆಟ್ಟವ್ರನ್ನ ತೆಗೆದುಹಾಕಿದ್ರೆ,

ಅವನ ಸಿಂಹಾಸನ ನೀತಿವಂತರಿಂದ ಇನ್ನೂ ಗಟ್ಟಿ ಆಗುತ್ತೆ.+

 6 ರಾಜನ ಮುಂದೆ ನಿನ್ನನ್ನ ನೀನೇ ಹೆಚ್ಚಿಸ್ಕೊಳ್ಳಬೇಡ,+

ದೊಡ್ಡ ದೊಡ್ಡ ಜನ್ರ ಮಧ್ಯ ನಿಲ್ಲಬೇಡ.+

 7 ಪ್ರಧಾನ ವ್ಯಕ್ತಿಗಳ ಮುಂದೆ ರಾಜ ನಿನಗೆ ಅವಮಾನ ಮಾಡೋದಕ್ಕಿಂತ,

“ಹೋಗಿ ಅಲ್ಲಿ ಕೂತ್ಕೊ” ಅಂತ ಹೇಳೋದೇ ಒಳ್ಳೇದು.+

 8 ಪಕ್ಕದ ಮನೆಯವನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕೋಕೆ ಆತುರಪಡಬೇಡ,

ಯಾಕಂದ್ರೆ ನೀನೇ ಅಪರಾಧಿ ಅಂತ ಅವನು ಸಾಬೀತು ಮಾಡಿದ್ರೆ ನೀನೇನು ಮಾಡ್ತೀಯ?+

 9 ಅವನ ಜೊತೆ ಮಾತಾಡಿ ವಿಷ್ಯ ಸರಿಮಾಡ್ಕೊ,+

ಆದ್ರೆ ಅವನ* ಗುಟ್ಟುಗಳನ್ನ ಬೇರೆಯವ್ರಿಗೆ ಹೇಳಬೇಡ.+

10 ಯಾಕಂದ್ರೆ ಆ ವಿಷ್ಯವನ್ನ ಕೇಳಿಸ್ಕೊಳ್ಳುವವನು ನಿನಗೆ ಅವಮಾನ ಮಾಡ್ತಾನೆ,

ನೀನು ಹಬ್ಬಿಸಿದ ಕೆಟ್ಟ ವಿಷ್ಯವನ್ನ* ವಾಪಸ್‌ ತಗೋಳ್ಳೋಕೆ ಆಗಲ್ಲ.

11 ಸರಿಯಾದ ಸಮಯದಲ್ಲಿ ಹೇಳಿದ ಮಾತು

ಬೆಳ್ಳಿ ಪಾತ್ರೆಯಲ್ಲಿ ಇರೋ ಬಂಗಾರದ ಸೇಬುಗಳ ತರ ಚಂದ.+

12 ವಿವೇಕದಿಂದ ತಿದ್ದುವವನ ಮಾತನ್ನ ಕೇಳೋ ಕಿವಿಗೆ

ಅದು ಬಂಗಾರದ ಕಿವಿಯೋಲೆ ತರ, ಅಪ್ಪಟ ಚಿನ್ನದ ಒಡವೆ ತರ.+

13 ನಂಬಿಗಸ್ತ ಸಂದೇಶವಾಹಕ ತನ್ನನ್ನ ಕಳಿಸಿದ ವ್ಯಕ್ತಿಗೆ

ಕೊಯ್ಲಿನ ದಿನ ಬೀಳೋ ತಂಪಾದ ಹಿಮದ ತರ

ತನ್ನ ಯಜಮಾನನಿಗೆ ಚೈತನ್ಯ ಕೊಡ್ತಾನೆ.+

14 ಯಾವತ್ತೂ ಸಿಗದ ಬಹುಮಾನದ ಬಗ್ಗೆ ಕೊಚ್ಕೊಳ್ಳುವವನು,

ಮಳೆ ಕೊಡದ ಮೋಡದ ಹಾಗೆ, ಗಾಳಿ ಹಾಗೆ ಇರ್ತಾನೆ.+

15 ತಾಳ್ಮೆಯಿಂದ ಅಧಿಕಾರಿಯನ್ನ ಗೆಲ್ಲಬಹುದು,

ಮೃದುವಾದ ಮಾತಿಂದ ಮೂಳೆನೂ ಮುರಿಬಹುದು.+

16 ಜೇನು ಸಿಕ್ಕಿದಾಗ ಅಗತ್ಯ ಇದ್ದಷ್ಟೆ ತಿನ್ನು,

ಜಾಸ್ತಿ ತಿಂದ್ರೆ ಆಮೇಲೆ ಅದನ್ನ ಕಕ್ಕಬೇಕಾಗುತ್ತೆ.+

17 ಪಕ್ಕದ ಮನೆಗೆ ಪದೇಪದೇ ಹೋಗಬೇಡ,

ಹೋದ್ರೆ ಅವನು ಬೇಸತ್ತು ನಿನ್ನನ್ನ ದ್ವೇಷಿಸ್ತಾನೆ.

18 ಬೇರೆಯವ್ರ ಬಗ್ಗೆ ಸುಳ್ಳುಸಾಕ್ಷಿ ಹೇಳುವವನು,

ಯುದ್ಧದಲ್ಲಿ ಬಳಸೋ ದೊಣ್ಣೆ, ಕತ್ತಿ, ಚೂಪಾದ ಬಾಣಗಳ ತರ.+

19 ನಂಬೋಕೆ ಆಗದ* ವ್ಯಕ್ತಿ ಮೇಲೆ ಕಷ್ಟಕಾಲದಲ್ಲಿ ನಂಬಿಕೆ ಇಡೋದು,

ಅಲ್ಲಾಡೋ ಹಲ್ಲಿಂದ ಅಗಿಯೋ ತರ, ನಡುಗೋ ಕಾಲಿಂದ ನಡಿಯೋ ತರ.

20 ನಿರಾಶೆಗೊಂಡಿರೋ ಹೃದಯದ ಮುಂದೆ ಹಾಡು ಹಾಡೋನು+

ಚಳಿಗಾಲದ ದಿನದಲ್ಲಿ ಬಟ್ಟೆ ಬಿಚ್ಚೋ ತರ,

ಸೋಡದ* ಮೇಲೆ ಹುಳಿ ಸುರಿಯೋ ತರ.

21 ನಿನ್ನ ಶತ್ರು ಹಸಿವೆಯಿಂದ ಇರುವಾಗ ಅವನಿಗೆ ಊಟ ಕೊಡು,

ಬಾಯಾರಿಕೆ ಆದಾಗ ಕುಡಿಯೋಕೆ ನೀರು ಕೊಡು.+

22 ಹಾಗೆ ಮಾಡಿದ್ರೆ ಉರಿತಿರೋ ಕೆಂಡಗಳನ್ನ ಅವನ ತಲೆ ಮೇಲೆ ರಾಶಿರಾಶಿಯಾಗಿ ಇಟ್ಟಹಾಗೆ ಇರುತ್ತೆ,*+

ಯೆಹೋವನೇ ನಿನಗೆ ಪ್ರತಿಫಲ ಕೊಡ್ತಾನೆ.

23 ಉತ್ತರದ ಗಾಳಿ ಸುರಿಮಳೆಯನ್ನ ತರುತ್ತೆ,

ಗಾಳಿಸುದ್ದಿ ಹಬ್ಬಿಸೋ ನಾಲಿಗೆ ಕೋಪ ಬರಿಸುತ್ತೆ.+

24 ಜಗಳಗಂಟಿ* ಹೆಂಡತಿ ಜೊತೆ ಇರೋದಕ್ಕಿಂತ,

ಮಾಳಿಗೆಯ ಒಂದು ಮೂಲೆಯಲ್ಲಿ ಇರೋದೇ ಒಳ್ಳೇದು.+

25 ದೂರದೇಶದಿಂದ ಬಂದ ಒಳ್ಳೇ ವರದಿ,

ದಣಿದಿರೋ ಪ್ರಾಣಕ್ಕೆ* ತಂಪಾದ ನೀರಿನ ತರ.+

26 ಕೆಟ್ಟವನ ಜೊತೆ ರಾಜಿಮಾಡ್ಕೊಳ್ಳೋ ನೀತಿವಂತ,

ಕೆಸರಿನ ಬುಗ್ಗೆ ತರ, ಹಾಳು ಬಾವಿ ತರ.

27 ಅತಿಯಾಗಿ ಜೇನು ತಿನ್ನೋದು ಒಳ್ಳೇದಲ್ಲ,+

ಅದೇ ತರ ತನಗೆ ಗೌರವ ಬರಬೇಕಂತ ಬಯಸೋದೂ ಒಳ್ಳೇದಲ್ಲ.+

28 ಕೋಪಕ್ಕೆ ಕಡಿವಾಣ ಹಾಕದವನು

ಗೋಡೆ ಬಿದ್ದ ಪಟ್ಟಣ ತರ.+

26 ಬೇಸಿಗೆಯಲ್ಲಿ ಹಿಮ ಬೀಳಬಾರದು, ಸುಗ್ಗಿಕಾಲದಲ್ಲಿ ಮಳೆ ಸುರಿಬಾರದು.

ಅದೇ ರೀತಿ ಮೂರ್ಖನಿಗೆ ಗೌರವ ಕೊಡ್ಲೇಬಾರದು.+

 2 ಹಕ್ಕಿಗೆ ತಪ್ಪಿಸ್ಕೊಂಡು ಹೋಗೋಕೆ, ಕವಲುತೋಕೆ ಪಕ್ಷಿಗೆ ಹಾರಿಹೋಗೋಕೆ ಕಾರಣ ಇರೋ ತರ,

ಒಂದೊಂದು ಶಾಪಕ್ಕೂ ಒಂದೊಂದು ಕಾರಣ ಇರುತ್ತೆ.*

 3 ಕುದುರೆಗೆ ಚಾಟಿ, ಕತ್ತೆಗೆ ಲಗಾಮು,+

ಮೂರ್ಖನ ಬೆನ್ನಿಗೆ ಬೆತ್ತ.+

 4 ಮೂರ್ಖನಿಗೆ ಅವನ ಮೂರ್ಖತನಕ್ಕೆ ತಕ್ಕ ಹಾಗೆ ಉತ್ತರ ಕೊಡಬೇಡ,

ಹಾಗೆ ಕೊಟ್ರೆ ಅವನಿಗೂ ನಿನಗೂ ವ್ಯತ್ಯಾಸ ಇರಲ್ಲ.*

 5 ಮೂರ್ಖನಿಗೆ ಅವನ ಮೂರ್ಖತನಕ್ಕೆ ತಕ್ಕ ಹಾಗೆ ಉತ್ತರ ಕೊಡು,

ಇಲ್ಲದಿದ್ರೆ ತಾನೇ ಬುದ್ಧಿವಂತ ಅಂದ್ಕೊಳ್ತಾನೆ.+

 6 ಮೂರ್ಖನಿಗೆ ಜವಾಬ್ದಾರಿ ವಹಿಸ್ಕೊಡುವವನು,

ಕಾಲು ಮುರಿದ್ಕೊಂಡು ತನಗೆ ತಾನೇ ಹಾನಿ ಮಾಡ್ಕೊಳ್ಳುವವನಿಗೆ ಸಮ.

 7 ಮೂರ್ಖನ ಬಾಯಲ್ಲಿರೋ ಗಾದೆ,

ಕುಂಟನ ಸೊರಗಿ ಹೋಗಿರೋ ಕಾಲಿಗೆ* ಸಮ.+

 8 ಮೂರ್ಖನಿಗೆ ಗೌರವ ಕೊಡೋದು,

ಕವಣೆಗೆ ಕಲ್ಲನ್ನ ಕಟ್ಟಿದ ಹಾಗೆ.+

 9 ಮೂರ್ಖನ ಬಾಯಲ್ಲಿರೋ ಗಾದೆ,

ಕುಡುಕನ ಕೈಯಲ್ಲಿರೋ ಮುಳ್ಳುಗಿಡದ ಹಾಗೆ.

10 ದಾರೀಲಿ ಹೋಗುವವರನ್ನ, ದಡ್ಡರನ್ನ ಕೆಲಸಕ್ಕೆ ಇಟ್ಕೊಳ್ಳೋನು,

ಗೊತ್ತುಗುರಿ ಇಲ್ಲದೆ ಬಾಣ ಬಿಡೋ* ಬಿಲ್ಲುಗಾರನಿಗೆ ಸಮ.

11 ನಾಯಿ ತಾನು ಕಕ್ಕಿದ್ದನ್ನ ನೆಕ್ಕೋಕೆ ವಾಪಸ್‌ ಹೋದ ಹಾಗೆ,

ಮೂರ್ಖ ತನ್ನ ಮೂರ್ಖತನವನ್ನ ಮತ್ತೆ ಮತ್ತೆ ತೋರಿಸ್ತಾನೆ.+

12 ತಾನೇ ದೊಡ್ಡ ಬುದ್ಧಿವಂತ ಅಂದ್ಕೊಂಡಿರೋ ವ್ಯಕ್ತಿಯನ್ನ ನೋಡಿದ್ದೀಯಾ?+

ಅವನಿಗೆ ಸಹಾಯ ಮಾಡೋದಕ್ಕಿಂತ ಮೂರ್ಖನಿಗೆ ಸಹಾಯ ಮಾಡೋದು ಸುಲಭ.

13 ಸೋಮಾರಿ “ದಾರೀಲಿ ಸಿಂಹ ಇದೆ!

ಅದು ಪಟ್ಟಣದ ಮುಖ್ಯಸ್ಥಳದಲ್ಲಿ* ತಿರುಗಾಡ್ತಿದೆ!” ಅಂತಾನೆ.+

14 ಬಾಗಿಲು ತಿರುಗಣಿಯಲ್ಲಿ ತಿರುಗೋ ತರ,

ಸೋಮಾರಿ ತನ್ನ ಹಾಸಿಗೆ ಮೇಲೆ ಹೊರಳಾಡ್ತಾನೆ.+

15 ಸೋಮಾರಿ ತನ್ನ ಕೈಯನ್ನ ಮೃಷ್ಟಾನ್ನ ಊಟದ ಬಟ್ಟಲಲ್ಲಿ ಮುಳುಗಿಸ್ತಾನೆ,

ಆದ್ರೆ ಆ ತುತ್ತನ್ನ ಬಾಯಿಗೆ ಇಡೋಕ್ಕೂ ಆಲಸ್ಯ.+

16 ಸೋಮಾರಿ ತಿಳುವಳಿಕೆಯಿಂದ ಉತ್ತರ ಕೊಡೋ ಏಳು ಜನ್ರಿಗಿಂತ,

ತಾನೇ ಬುದ್ಧಿವಂತ ಅಂದ್ಕೊಳ್ತಾನೆ.

17 ದಾರೀಲಿ ಹೋಗುವಾಗ ತನಗೆ ಸಂಬಂಧ ಇಲ್ಲದ ವಿಷ್ಯಕ್ಕೆ ಕೋಪ ಮಾಡ್ಕೊಳ್ಳೋ ವ್ಯಕ್ತಿ,*

ನಾಯಿಯ ಕಿವಿ ಹಿಡಿಯೋನಿಗೆ ಸಮ.+

18 ಕೊಳ್ಳಿಗಳನ್ನ, ಅಂಬುಗಳನ್ನ, ಜೀವ ತೆಗಿಯೋ ಬಾಣಗಳನ್ನ ಎಸಿಯೋ ಹುಚ್ಚನೂ ಒಂದೇ,

19 ಪಕ್ಕದ ಮನೆಯವನಿಗೆ ಕುತಂತ್ರ ಮಾಡಿ “ಸುಮ್ನೆ ತಮಾಷೆ ಮಾಡ್ದೆ” ಅಂತ ಹೇಳುವವನೂ ಒಂದೇ.+

20 ಕಟ್ಟಿಗೆ ಇಲ್ಲದಿದ್ರೆ ಬೆಂಕಿ ಆರಿಹೋಗುತ್ತೆ,

ಸುಳ್ಳುಸುದ್ದಿ ಹಬ್ಬಿಸುವವನು ಇಲ್ಲದಿದ್ರೆ ಜಗಳ ನಿಂತುಹೋಗುತ್ತೆ.+

21 ಕೆಂಡಕ್ಕೆ ಇದ್ದಲು ಹೇಗೋ, ಬೆಂಕಿಗೆ ಕಟ್ಟಿಗೆ ಹೇಗೋ,

ಜಗಳ ಹೆಚ್ಚಿಸೋಕೆ ಜಗಳಗಂಟನೂ ಹಾಗೇ.+

22 ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳ ಹಾಗೆ,*

ನುಂಗಿದಾಗ ನೇರವಾಗಿ ಹೊಟ್ಟೆಗೆ ಹೋಗುತ್ತೆ.+

23 ಕೆಟ್ಟವನ ಹೃದಯದಿಂದ ಹೊರಗೆ ಬರೋ ಪ್ರೀತಿಯ ಮಾತುಗಳು,

ಜೇಡಿಮಣ್ಣಿನ ಪಾತ್ರೆ ತುಂಡಿನ ಮೇಲೆ ಹಚ್ಚಿರೋ ಬೆಳ್ಳಿ ತರ.+

24 ಬೇರೆಯವ್ರನ್ನ ದ್ವೇಷ ಮಾಡುವವನು ಚೆನ್ನಾಗೇನೋ ಮಾತಾಡ್ತಾನೆ,

ಆದ್ರೆ ಹೃದಯದಲ್ಲಿ ಮೋಸ ಕಪಟವನ್ನ ಬಚ್ಚಿಟ್ಟಿರ್ತಾನೆ.

25 ಅವನ ಜೇನಿನಂಥ ಮಾತುಗಳನ್ನ ನಂಬಬೇಡ,

ಯಾಕಂದ್ರೆ ಹೇಸಿಗೆ ಹುಟ್ಟಿಸೋ ಏಳು ವಿಷ್ಯ ಅವನ ಹೃದಯದಲ್ಲಿದೆ.*

26 ಅವನು ತನ್ನ ದ್ವೇಷವನ್ನ ಮೋಸದಿಂದ ಬಚ್ಚಿಟ್ರೂ,

ಸಭೆಯಲ್ಲಿ ಅವನ ಕೆಟ್ಟತನ ಬಯಲಾಗುತ್ತೆ.

27 ಗುಂಡಿ ತೋಡುವವನು ತಾನೇ ಅದ್ರಲ್ಲಿ ಬೀಳ್ತಾನೆ,

ಕಲ್ಲನ್ನ ಉರುಳಿಸುವವನ ಮೇಲೆ ಅದೇ ಕಲ್ಲು ಉರುಳಿ ಬರುತ್ತೆ.+

28 ಸುಳ್ಳು ನಾಲಿಗೆ ತನ್ನ ಸುಳ್ಳಿಗೆ ಬಲಿಯಾದವ್ರನ್ನ ದ್ವೇಷಿಸುತ್ತೆ,

ಬೆಣ್ಣೆ ಹಚ್ಚಿ ಮಾತಾಡೋ ಬಾಯಿ ನಾಶ ಆಗುತ್ತೆ.+

27 ನಾಳೆ ಬಗ್ಗೆ ಕೊಚ್ಕೊಳ್ಳಬೇಡ,

ಯಾಕಂದ್ರೆ ನಾಳೆ ಏನಾಗುತ್ತೆ ಅಂತ ನಿಂಗೊತ್ತಿಲ್ಲ.+

 2 ನೀನೇ ನಿನ್ನನ್ನ ಹೊಗಳ್ಕೋಬೇಡ, ಬೇರೆಯವರು* ನಿನ್ನನ್ನ ಹೊಗಳಲಿ,

ನಿನ್ನ ತುಟಿಗಳೇ ನಿನ್ನ ಗುಣಗಾನ ಮಾಡದೆ ವಿದೇಶಿಯರು ನಿನ್ನ ಗುಣಗಾನ ಮಾಡ್ಲಿ.+

 3 ಕಲ್ಲೂ ಭಾರ, ಮರಳೂ ಭಾರ,

ಆದ್ರೆ ಮೂರ್ಖ ಮಾಡೋ ಕಿರಿಕಿರಿ ಅವೆರಡಕ್ಕಿಂತ ಭಾರ.+

 4 ಕೋಪ ಕ್ರೂರ, ಕ್ರೋಧ ಪ್ರವಾಹ,

ಆದ್ರೆ ಹೊಟ್ಟೆಕಿಚ್ಚು ಇದಕ್ಕಿಂತ ಕೆಟ್ಟದು.+

 5 ಒಳಗೇ ಇಟ್ಟಿರೋ ಪ್ರೀತಿಗಿಂತ

ಬೇರೆಯವ್ರ ಮುಂದೆ ತಿದ್ದೋದು ಎಷ್ಟೋ ಒಳ್ಳೇದು.+

 6 ನಂಬಿಗಸ್ತ ಸ್ನೇಹಿತ ಗಾಯಗಳನ್ನ ಮಾಡ್ತಾನೆ,+

ಆದ್ರೆ ಶತ್ರು ತುಂಬ ಮುತ್ತು ಕೊಡ್ತಾನೆ.*

 7 ಹೊಟ್ಟೆ ತುಂಬಿರೋನಿಗೆ ಜೇನು ಗೂಡಿಂದ ತೊಟ್ಟಿಕ್ಕೋ ಜೇನು ಕೊಟ್ರೂ ಬೇಡ,*

ಆದ್ರೆ ಹಸಿದಿರೋನಿಗೆ ಕಹಿನೂ ಸಿಹಿ ಆಗಿರುತ್ತೆ.

 8 ಮನೆ ಬಿಟ್ಟು ತಿರುಗಾಡೋನು,

ಗೂಡು ಬಿಟ್ಟು ಹಾರಿದ ಪಕ್ಷಿ ತರ.

 9 ಎಣ್ಣೆ, ಧೂಪದಿಂದ ಹೃದಯಕ್ಕೆ ಉಲ್ಲಾಸ,

ಪ್ರಾಮಾಣಿಕ ಸಲಹೆಯಿಂದ ಸಿಗೋ ಸಿಹಿಯಾದ ಸ್ನೇಹದಿಂದ ಮನಸ್ಸಿಗೆ ಖುಷಿ.+

10 ನಿನ್ನ ಸ್ನೇಹಿತನಾಗಲಿ ತಂದೆಯ ಸ್ನೇಹಿತನಾಗಲಿ ಬಿಟ್ಟುಬಿಡಬೇಡ,

ನಿನ್ನ ಕಷ್ಟಕಾಲದಲ್ಲಿ ಒಡಹುಟ್ಟಿದವನ ಮನೆಗೆ ಕಾಲಿಡಬೇಡ,

ದೂರದಲ್ಲಿರೋ ಸಹೋದರನಿಗಿಂತ ಹತ್ರದಲ್ಲಿರೋ ನೆರೆಯವನೇ ಲೇಸು.+

11 ನನ್ನ ಮಗನೇ, ವಿವೇಕಿಯಾಗಿ ನನ್ನ ಮನಸ್ಸನ್ನ ಖುಷಿಪಡಿಸು,+

ಆಗ ನನ್ನನ್ನ ಹಂಗಿಸುವವನಿಗೆ ನಾನು ಉತ್ತರ ಕೊಡಕ್ಕಾಗುತ್ತೆ.+

12 ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ,+

ಆದ್ರೆ ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ* ಅನುಭವಿಸ್ತಾನೆ.

13 ಅಪರಿಚಿತನಿಗೆ ಜಾಮೀನು ಕೊಡುವವನ ಬಟ್ಟೆ ಕಿತ್ಕೊ.

ಅವನು ನಡತೆಗೆಟ್ಟ* ಹೆಂಗಸಿಗಾಗಿ ವಸ್ತುಗಳನ್ನ ಒತ್ತೆ ಇಟ್ರೆ ವಾಪಸ್‌ ಕೊಡಬೇಡ.+

14 ಮುಂಜಾನೆ ಒಬ್ಬ ತನ್ನ ಜೊತೆಗಾರನನ್ನ ದೊಡ್ಡ ಸ್ವರದಲ್ಲಿ ಆಶೀರ್ವದಿಸಿದ್ರೆ,

ಅದನ್ನ ಶಾಪ ಅಂತ ಅಂದ್ಕೊಳ್ತಾರೆ.

15 ಜಗಳಗಂಟಿ* ಹೆಂಡತಿ ಮಳೆಗೆ ಯಾವಾಗ್ಲೂ ಸೋರೋ ಸೂರಿನ ತರ.+

16 ಅಂಥ ಹೆಂಡತಿಯನ್ನ ತಡಿಯೋನಿಗೆ ಗಾಳಿಯನ್ನೂ ತಡಿಯಕ್ಕಾಗುತ್ತೆ,

ಬಲಗೈಯಲ್ಲಿ ಎಣ್ಣೆಯನ್ನೂ ಹಿಡ್ಕೊಳ್ಳಕ್ಕಾಗುತ್ತೆ.

17 ಕಬ್ಬಿಣ ಕಬ್ಬಿಣವನ್ನ ಹರಿತ ಮಾಡೋ ತರ,

ಸ್ನೇಹಿತ ತನ್ನ ಸ್ನೇಹಿತನನ್ನ ಪ್ರಗತಿ ಮಾಡ್ತಾನೆ.+

18 ಅಂಜೂರ ಮರವನ್ನ ಚೆನ್ನಾಗಿ ನೋಡ್ಕೊಳ್ಳೋನು ಅದ್ರ ಹಣ್ಣು ತಿಂತಾನೆ,+

ತನ್ನ ಯಜಮಾನನ ಕಾಳಜಿ ವಹಿಸುವವನಿಗೆ ಗೌರವ ಸಿಗುತ್ತೆ.+

19 ನೀರು ಒಬ್ಬನ ಮುಖವನ್ನ ಪ್ರತಿಬಿಂಬಿಸೋ ತರ,

ಒಬ್ಬನ ಹೃದಯ ಇನ್ನೊಬ್ಬನ ಹೃದಯವನ್ನ ಪ್ರತಿಬಿಂಬಿಸುತ್ತೆ.

20 ಸಮಾಧಿಗಾಗಲಿ ನಾಶದ ಸ್ಥಳಕ್ಕಾಗಲಿ* ತೃಪ್ತಿ ಅನ್ನೋದೇ ಇಲ್ಲ,+

ಹಾಗೇ ಮನುಷ್ಯನ ಕಣ್ಣುಗಳಿಗೂ ತೃಪ್ತಿ ಆಗಲ್ಲ.

21 ಬೆಳ್ಳಿಬಂಗಾರವನ್ನ ಬೆಂಕಿಯಲ್ಲಿ ಹಾಕಿ ಶುದ್ಧ ಮಾಡೋ ತರ,+

ಒಬ್ಬ ವ್ಯಕ್ತಿಯನ್ನ ಹೊಗಳೋ ಮೂಲಕ ಅವನನ್ನ ಪರೀಕ್ಷಿಸಬಹುದು.

22 ಒರಳಲ್ಲಿ ಧಾನ್ಯ ಕುಟ್ಟೋ ತರ,

ಒಬ್ಬ ಮೂರ್ಖನನ್ನ ಒನಕೆಯಿಂದ ಕುಟ್ಟಿದ್ರೂ

ಮೂರ್ಖತನ ಅವನನ್ನ ಬಿಟ್ಟು ಹೋಗಲ್ಲ.

23 ನಿನ್ನ ಕುರಿಗಳು ಹೇಗಿದೆ ಅಂತ ನಿನಗೆ ಚೆನ್ನಾಗಿ ಗೊತ್ತಿರಬೇಕು,

ನಿನ್ನ ಪ್ರತಿಯೊಂದು ಕುರಿಯನ್ನ ಚೆನ್ನಾಗಿ ನೋಡ್ಕೊ.*+

24 ಯಾಕಂದ್ರೆ ಹಣ-ಆಸ್ತಿ ಶಾಶ್ವತ ಅಲ್ಲ,+

ಕಿರೀಟ ಪೀಳಿಗೆಯಿಂದ ಪೀಳಿಗೆಗೆ ಹೋಗ್ತಾನೇ ಇರಲ್ಲ.

25 ಹಸಿರು ಹುಲ್ಲು ಒಣಗಿ ಹೊಸ ಹುಲ್ಲು ಬರುತ್ತೆ,

ಬೆಟ್ಟಗಳ ಮೇಲಿರೋ ಗಿಡಗಳನ್ನ ಒಟ್ಟುಗೂಡಿಸ್ತಾರೆ.

26 ಟಗರುಗಳಿಂದ ನಿನಗೆ ಬಟ್ಟೆ ಸಿಗುತ್ತೆ,

ಹೋತಗಳಿಂದ ಹೊಲ ತಗೊಳ್ಳೋಕೆ ಆಗುತ್ತೆ.

27 ನಿನಗೆ, ನಿನ್ನ ಕುಟುಂಬದವ್ರಿಗೆ, ನಿನ್ನ ಸೇವಕಿಯರಿಗೆ,

ಸಿಕ್ಕಾಪಟ್ಟೆ ಮೇಕೆ ಹಾಲು ಸಿಗುತ್ತೆ.

28 ಯಾರೂ ಓಡಿಸ್ಕೊಂಡು ಹೋಗದಿದ್ರೂ ಕೆಟ್ಟವನು ಓಡಿ ಹೋಗ್ತಾನೆ,

ಆದ್ರೆ ನೀತಿವಂತ ಸಿಂಹದ ಹಾಗೆ ಧೈರ್ಯವಾಗಿ ಇರ್ತಾನೆ.+

 2 ಪ್ರಜೆಗಳು ನಿಯಮ ಮೀರಿದ್ರೆ* ಅಧಿಕಾರಿಗಳು ಬದಲಾಗ್ತಾ ಇರ್ತಾರೆ,+

ಆದ್ರೆ ವಿವೇಚನಾ ಶಕ್ತಿ, ಜ್ಞಾನ ಇರೋ ವ್ಯಕ್ತಿ ಸಹಾಯ ಮಾಡಿದ್ರೆ ಅಧಿಕಾರಿ ಜಾಸ್ತಿ ಸಮಯ ಆಳ್ತಾನೆ.+

 3 ದೀನನಿಗೆ ಮೋಸ ಮಾಡೋ ಬಡವ+

ಬೆಳೆಯನ್ನೆಲ್ಲ ಕೊಚ್ಕೊಂಡು ಹೋಗೋ ಮಳೆ ತರ.

 4 ನಿಯಮ* ಮೀರುವವನು ಕೆಟ್ಟವ್ರನ್ನ ಹೊಗಳಿ ಅಟ್ಟಕ್ಕೇರಿಸ್ತಾನೆ,

ಆದ್ರೆ ನಿಯಮ ಪಾಲಿಸುವವನಿಗೆ ಅವ್ರನ್ನ ಕಂಡ್ರೆ ಕೋಪ ಬರುತ್ತೆ.+

 5 ಕೆಟ್ಟವನಿಗೆ ನ್ಯಾಯ ಅರ್ಥ ಆಗಲ್ಲ,

ಯೆಹೋವನನ್ನ ಹುಡುಕುವವ್ರಿಗೆ ಎಲ್ಲ ಅರ್ಥ ಆಗುತ್ತೆ.+

 6 ಕೆಟ್ಟ ದಾರಿಯಲ್ಲಿ ನಡಿಯೋ ಶ್ರೀಮಂತನಿಗಿಂತ

ಸರಿ ದಾರಿಯಲ್ಲಿ ನಡಿಯೋ ಬಡವನೇ ಮೇಲು.+

 7 ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇರೋ ಮಗ ನಿಯಮ* ಪಾಲಿಸ್ತಾನೆ,

ಆದ್ರೆ ಹೊಟ್ಟೆಬಾಕರ ಸಹವಾಸ ಮಾಡುವವನು ಅಪ್ಪನಿಗೆ ಅವಮಾನ ಮಾಡ್ತಾನೆ.+

 8 ಬಡ್ಡಿಯಿಂದ,+ ಅನ್ಯಾಯದಿಂದ ತನ್ನ ಸಂಪತ್ತು ಹೆಚ್ಚಿಸ್ಕೊಳ್ತಾನೆ

ಆದ್ರೆ ಅದನ್ನ ಬಡವ್ರಿಗೆ ದಯೆ ತೋರಿಸುವವನಿಗಾಗಿ ಕೂಡಿಡ್ತಾನೆ.+

 9 ನಿಯಮ* ಪಾಲಿಸೋಕೆ ಒಪ್ಪದವನ

ಪ್ರಾರ್ಥನೆಯನ್ನ ಕೇಳಲ್ಲ.+

10 ಪ್ರಾಮಾಣಿಕನನ್ನ ಕೆಟ್ಟ ದಾರಿಗೆ ಎಳಿಯುವವನು ತಾನು ತೋಡಿದ ಗುಂಡಿಗೆ ತಾನೇ ಬೀಳ್ತಾನೆ,+

ಆದ್ರೆ ತಪ್ಪು ಮಾಡದವನು ಒಳ್ಳೇ ಪ್ರತಿಫಲ ಪಡ್ಕೊಳ್ತಾನೆ.+

11 ಶ್ರೀಮಂತ ತಾನೇ ದೊಡ್ಡ ವಿವೇಕಿ ಅಂದ್ಕೊಳ್ತಾನೆ,+

ಆದ್ರೆ ವಿವೇಚನಾ ಶಕ್ತಿ ಇರೋ ಬಡವ ಶ್ರೀಮಂತನ ಬಂಡವಾಳ ಏನಂತ ಕಂಡುಹಿಡಿತಾನೆ.+

12 ನೀತಿವಂತರಿಗೆ ಜಯ ಸಿಕ್ಕಿದಾಗ ಜನ ಕುಣಿದು ಕುಪ್ಪಳಿಸ್ತಾರೆ.

ಆದ್ರೆ ಕೆಟ್ಟವರು ಅಧಿಕಾರಕ್ಕೆ ಬಂದಾಗ ಅಡಗಿಕೊಳ್ತಾರೆ.+

13 ತನ್ನ ಅಪರಾಧಗಳನ್ನ ಮುಚ್ಚಿಡುವವನಿಗೆ ಒಳ್ಳೇದಾಗಲ್ಲ,+

ಅದನ್ನ ಒಪ್ಕೊಂಡು ಮತ್ತೆ ಮಾಡದೆ ಇರುವವನಿಗೆ ಕರುಣೆ ಸಿಗುತ್ತೆ.+

14 ತನ್ನ ಕೆಲಸಗಳ ಬಗ್ಗೆ ಎಚ್ಚರವಾಗಿ ಇರುವವನು* ಯಾವಾಗ್ಲೂ ಸಂತೋಷವಾಗಿ ಇರ್ತಾನೆ,

ಆದ್ರೆ ತನ್ನ ಹೃದಯ ಕಲ್ಲು ಮಾಡ್ಕೊಳ್ಳುವವನು ಕಷ್ಟಕ್ಕೆ ಸಿಕ್ಕಿಹಾಕೊಳ್ತಾನೆ.+

15 ಅಮಾಯಕರ ಮೇಲೆ ಆಳೋ ಕೆಟ್ಟವನು,

ಗರ್ಜಿಸೋ ಸಿಂಹದ ಹಾಗೆ, ಮೈಮೇಲೆ ಎರಗೋ ಕರಡಿ ಹಾಗೆ.+

16 ವಿವೇಚನಾ ಶಕ್ತಿ ಇಲ್ಲದ ನಾಯಕ ತನ್ನ ಅಧಿಕಾರವನ್ನ ದುರುಪಯೋಗ ಮಾಡ್ತಾನೆ,+

ಆದ್ರೆ ಅಪ್ರಾಮಾಣಿಕ ಲಾಭವನ್ನ ದ್ವೇಷಿಸುವವನು ಆಯಸ್ಸು ಹೆಚ್ಚಿಸ್ಕೊಳ್ತಾನೆ.+

17 ಬೇರೆಯವ್ರ ಜೀವ ತೆಗೆದು ಅದರ ರಕ್ತಾಪರಾಧ ಹೊತ್ಕೊಂಡಿರೋನು ಸ್ಮಶಾನ* ಸೇರೋ ತನಕ ಓಡ್ತಾ ಇರ್ತಾನೆ.+

ಅವನನ್ನ ಯಾರೂ ತಡಿಬೇಡಿ.

18 ತಪ್ಪಿಲ್ಲದೆ ನಡಿಯುವವನು ರಕ್ಷಣೆ ಪಡಿತಾನೆ,+

ಆದ್ರೆ ಅಂಕುಡೊಂಕು ದಾರೀಲಿ ನಡಿಯುವವನು ಅಚಾನಕ್ಕಾಗಿ ಬೀಳ್ತಾನೆ.+

19 ತನ್ನ ಹೊಲದಲ್ಲಿ ಉಳುಮೆ ಮಾಡುವವನಿಗೆ ಸಾಕಷ್ಟು ಊಟ ಸಿಗುತ್ತೆ,

ಆದ್ರೆ ಕೆಲಸಕ್ಕೆ ಬಾರದ ವಿಷ್ಯಗಳ ಹಿಂದೆ ಹೋಗುವವನು ಕಡುಬಡತನಕ್ಕೆ ಬಲಿ ಆಗ್ತಾನೆ.+

20 ನಂಬಿಗಸ್ತ ವ್ಯಕ್ತಿಗೆ ತುಂಬ ಆಶೀರ್ವಾದ ಸಿಗುತ್ತೆ,+

ಆದ್ರೆ ಶ್ರೀಮಂತ ಆಗೋಕೆ ಆತುರ ಪಡುವವನು ತಪ್ಪು ಮಾಡದೇ ಇರೋಕೆ ಆಗಲ್ಲ.+

21 ಭೇದಭಾವ ಮಾಡೋದು ಒಳ್ಳೇದಲ್ಲ,+

ಆದ್ರೆ ಮನುಷ್ಯ ಒಂದು ತುಂಡು ರೊಟ್ಟಿಗಾಗಿ ತಪ್ಪು ಮಾಡಿಬಿಡಬಹುದು.

22 ಹೊಟ್ಟೆಕಿಚ್ಚುಪಡೋ ಮನುಷ್ಯ ಹಣ ಆಸ್ತಿಗಾಗಿ ಆಸೆಪಡ್ತಾನೆ.

ಆದ್ರೆ ತನಗೆ ಬಡತನ ಬರುತ್ತೆ ಅಂತ ಅವನಿಗೆ ಗೊತ್ತಿರಲ್ಲ.

23 ಒಬ್ಬ ವ್ಯಕ್ತಿಯನ್ನ ಅತಿಯಾಗಿ ಹೊಗಳುವವನಿಗಿಂತ,

ತಿದ್ದುವವನಿಗೆ+ ಮುಂದೆ ಹೆಚ್ಚು ಮೆಚ್ಚುಗೆ ಸಿಗುತ್ತೆ.+

24 ತನ್ನ ಅಪ್ಪಅಮ್ಮನನ್ನ ದೋಚಿ “ಇದ್ರಲ್ಲೇನೂ ತಪ್ಪಿಲ್ಲ” ಅನ್ನೋನು+

ನಾಶ ತರೋ ವ್ಯಕ್ತಿಯ ಜೊತೆಗಾರ.+

25 ದುರಾಸೆ ಇರುವವನು ಒಡಕು ತರ್ತಾನೆ,

ಆದ್ರೆ ಯೆಹೋವನನ್ನ ಆತ್ಕೊಳ್ಳುವವನು ಏಳಿಗೆ ಆಗ್ತಾನೆ.+

26 ತನ್ನ ಸ್ವಂತ ಹೃದಯವನ್ನ ನಂಬುವವನು ಮೂರ್ಖ,+

ವಿವೇಕದಿಂದ ನಡಿಯುವವನು ಕಷ್ಟದಿಂದ ತಪ್ಪಿಸ್ಕೊಳ್ತಾನೆ.+

27 ಬಡವರಿಗೆ ದಾನ ಮಾಡುವವನಿಗೆ ಏನೂ ಕೊರತೆ ಆಗಲ್ಲ,+

ಆದ್ರೆ ಅವ್ರ ಅಗತ್ಯ ನೋಡಿನೂ ನೋಡದ ಹಾಗೆ ಇರುವವನಿಗೆ ತುಂಬ ಶಾಪ ಬರುತ್ತೆ.

28 ಕೆಟ್ಟವರು ಅಧಿಕಾರಕ್ಕೆ ಬಂದಾಗ ಮನುಷ್ಯರು ಅಡಗಿಕೊಳ್ತಾರೆ,

ಆದ್ರೆ ಕೆಟ್ಟವ್ರ ಅಂತ್ಯ ಆದಾಗ ನೀತಿವಂತರು ಜಾಸ್ತಿ ಆಗ್ತಾರೆ.+

29 ಎಷ್ಟೇ ತಿದ್ದಿದ್ರೂ ಹಠಮಾರಿತನ ಬಿಡದವನು+

ಹಠಾತ್ತನೆ ಮುರಿದು ಬೀಳ್ತಾನೆ, ಚೇತರಿಸ್ಕೊಳ್ಳೋಕೆ ಆಗದಷ್ಟರ ಮಟ್ಟಿಗೆ ಬಿದ್ದುಹೋಗ್ತಾನೆ.+

 2 ತುಂಬ ನೀತಿವಂತರಿದ್ರೆ ಜನ ಖುಷಿ ಪಡ್ತಾರೆ,

ಕೆಟ್ಟವನು ಆಳುವಾಗ ಜನ ನರಳ್ತಾರೆ.+

 3 ವಿವೇಕವನ್ನ ಪ್ರೀತಿಸೋ ವ್ಯಕ್ತಿ ತನ್ನ ಅಪ್ಪನ ಮನಸ್ಸನ್ನ ಸಂತೋಷ ಪಡಿಸ್ತಾನೆ,+

ವೇಶ್ಯೆಯರ ಸಹವಾಸ ಮಾಡೋನು ಆಸ್ತಿ ಹಾಳು ಮಾಡ್ಕೊಳ್ತಾನೆ.+

 4 ರಾಜ ನ್ಯಾಯದಿಂದ ಆಳಿದ್ರೆ ಇಡೀ ದೇಶದಲ್ಲಿ ಶಾಂತಿ ಇರುತ್ತೆ,+

ಆದ್ರೆ ಲಂಚ ತಗೊಳ್ಳೋನು ನಾಶ ತರ್ತಾನೆ.

 5 ಪಕ್ಕದ ಮನೆಯವನನ್ನ ಹೊಗಳಿ ಅಟ್ಟಕ್ಕೇರಿಸೋ ವ್ಯಕ್ತಿ

ಅವನ ಕಾಲ ಕೆಳಗೆ ಬಲೆ ಬೀಸ್ತಾನೆ.+

 6 ಕೆಟ್ಟವನು ತನ್ನ ತಪ್ಪಿಂದಾನೇ ಬಲೆಗೆ ಬೀಳ್ತಾನೆ,+

ನೀತಿವಂತ ಸಂತೋಷದಿಂದ ಕುಣಿದು ಕುಪ್ಪಳಿಸ್ತಾನೆ.+

 7 ನೀತಿವಂತ ಬಡವರ ಹಕ್ಕುಗಳ ಬಗ್ಗೆ ಆಸಕ್ತಿ ವಹಿಸ್ತಾನೆ,+

ಆದ್ರೆ ಕೆಟ್ಟವನು ಅದ್ರ ಬಗ್ಗೆ ತಲೆಕೆಡಿಸ್ಕೊಳ್ಳಲ್ಲ.+

 8 ಬಡಾಯಿ ಕೊಚ್ಕೊಳ್ಳೋನು ಪಟ್ಟಣದಲ್ಲಿ ಕಿಚ್ಚೆಬ್ಬಿಸ್ತಾನೆ,+

ಆದ್ರೆ ವಿವೇಕಿ ಕೋಪವನ್ನ ಆರಿಸ್ತಾನೆ.+

 9 ವಿವೇಕಿ ಮೂರ್ಖನ ಜೊತೆ ಜಗಳಕ್ಕೆ ಇಳಿದ್ರೆ

ಮೂರ್ಖ ಕಿರ್ಚಾಡ್ತಾನೆ, ಗೇಲಿ ಮಾಡ್ತಾನೆ, ಆಗ ವಿವೇಕಿಯ ನೆಮ್ಮದಿ ಹಾಳಾಗುತ್ತೆ.+

10 ಕೊಲೆಗಾರರು ತಪ್ಪು ಮಾಡದವ್ರನ್ನ ದ್ವೇಷಿಸ್ತಾರೆ,+

ಪ್ರಾಮಾಣಿಕರ ಪ್ರಾಣ ತೆಗಿಯೋಕೆ ಕಾದು ಕೂತಿರ್ತಾರೆ.*

11 ಮೂರ್ಖ ತನ್ನ ಕೋಪವನ್ನೆಲ್ಲ* ತೋರಿಸ್ತಾನೆ,+

ಆದ್ರೆ ವಿವೇಕಿ ಸಮಸ್ಯೆ ಕೊನೆ ಆಗೋ ತನಕ ಶಾಂತವಾಗಿ ಇರ್ತಾನೆ.+

12 ಅಧಿಕಾರಿ ಸುಳ್ಳುಗಳನ್ನ ನಂಬಿದ್ರೆ,

ಸೇವಕರೆಲ್ಲ ಕೆಟ್ಟವ್ರಾಗ್ತಾರೆ.+

13 ಬಡವನಲ್ಲೂ ದಬ್ಬಾಳಿಕೆ ಮಾಡುವವನಲ್ಲೂ ಒಂದು ವಿಷ್ಯ ಸಾಮಾನ್ಯ,

ಅವರಿಬ್ರ ಕಣ್ಣುಗಳಿಗೂ ಕಾಂತಿ ನೀಡಿದವನು ಯೆಹೋವನೇ.*

14 ರಾಜ ಬಡವ್ರಿಗೆ ನ್ಯಾಯವಾಗಿ ತೀರ್ಪು ಕೊಟ್ರೆ,+

ಅವನ ಸಿಂಹಾಸನಕ್ಕೆ ಯಾವತ್ತೂ ಏನೂ ಆಗಲ್ಲ.+

15 ಏಟು,* ತಿದ್ದುಪಾಟು ವಿವೇಕವನ್ನ ಕೊಡುತ್ತೆ,+

ಆದ್ರೆ ಹದ್ದುಬಸ್ತಲ್ಲಿ ಇಡದಿದ್ದ ಹುಡುಗ ತನ್ನ ಅಮ್ಮನನ್ನ ಅವಮಾನಕ್ಕೆ ಗುರಿಮಾಡ್ತಾನೆ.

16 ಕೆಟ್ಟವರು ಜಾಸ್ತಿ ಆದಾಗ ಅಪರಾಧಗಳೂ ಜಾಸ್ತಿ ಆಗುತ್ತೆ,

ಆದ್ರೆ ಅವರ ನಾಶವನ್ನ ನೀತಿವಂತರು ಕಣ್ಣಾರೆ ನೋಡ್ತಾರೆ.+

17 ನಿನ್ನ ಮಗನಿಗೆ ಶಿಸ್ತು ಕೊಡು, ಅವನು ನಿನಗೆ ಚೈತನ್ಯ ಕೊಡ್ತಾನೆ,

ನಿನಗೆ ತುಂಬ ಸಂತೋಷ ತರ್ತಾನೆ.+

18 ದೇವರ ಮಾರ್ಗದರ್ಶನ* ಇಲ್ಲದಿದ್ರೆ ಜನ ಮನಸ್ಸು ಬಂದ ಹಾಗೆ ನಡಿತಾರೆ,+

ಆದ್ರೆ ನಿಯಮ* ಪಾಲಿಸೋರು ಸಂತೋಷವಾಗಿ ಇರ್ತಾರೆ.+

19 ಮಾತುಗಳಿಂದ ಒಬ್ಬ ಸೇವಕನನ್ನ ತಿದ್ದೋಕೆ ಆಗಲ್ಲ,

ಯಾಕಂದ್ರೆ ವಿಷ್ಯಗಳು ಅರ್ಥವಾದ್ರೂ ಅವನು ಪಾಲಿಸಲ್ಲ.+

20 ದುಡುಕಿ ಮಾತಾಡೋನನ್ನ ನೋಡಿದ್ದೀಯಾ?+

ಅವನಿಗಿಂತ ಮೂರ್ಖನ ಮೇಲೆ ನಂಬಿಕೆ ಇಡೋದು ಒಳ್ಳೇದು.+

21 ಸೇವಕನನ್ನ ಚಿಕ್ಕಂದಿಂದ ತಲೆಮೇಲೆ ಕೂರಿಸಿಕೊಂಡ್ರೆ,

ಕೊನೆಗೆ ಅವನು ಕೃತಜ್ಞತೆ ತೋರಿಸಲ್ಲ.

22 ಕೋಪ ತೋರಿಸುವವನು ಜಗಳ ಹುಟ್ಟಿಸ್ತಾನೆ,+

ಮಾತುಮಾತಿಗೂ ಸಿಟ್ಟು ಮಾಡ್ಕೊಳ್ಳೋನು ತುಂಬ ತಪ್ಪುಗಳನ್ನ ಮಾಡ್ತಾನೆ.+

23 ಒಬ್ಬನ ಅಹಂಕಾರ ಅವನನ್ನ ತಗ್ಗಿಸುತ್ತೆ,+

ದೀನತೆ ಇರುವವನು ಗೌರವ ಪಡಿತಾನೆ.+

24 ಕಳ್ಳನ ಜೊತೆಗಾರ ತನ್ನನ್ನ ತಾನೇ ದ್ವೇಷಿಸ್ಕೊಳ್ತಾನೆ.

ಸಾಕ್ಷಿ ಹೇಳೋಕೆ ಅವನನ್ನ ಕರೆದ್ರೆ* ಅವನು ಬಾಯಿ ಬಿಡೋದೇ ಇಲ್ಲ.+

25 ಮನುಷ್ಯನ ಭಯ ಉರ್ಲು,+

ಆದ್ರೆ ಯೆಹೋವನ ಮೇಲೆ ನಂಬಿಕೆ ಇಟ್ರೆ ಸಂರಕ್ಷಣೆ.+

26 ಅಧಿಕಾರಿಗಳ ಸಹಾಯಕ್ಕಾಗಿ* ಅನೇಕರು ಓಡೋಡಿ ಹೋಗ್ತಾರೆ,

ಆದ್ರೆ ಒಬ್ಬನಿಗೆ ನ್ಯಾಯ ಸಿಗೋ ಹಾಗೆ ಮಾಡುವವನು ಯೆಹೋವನೇ.+

27 ಅನ್ಯಾಯ ಮಾಡುವವನು ನೀತಿವಂತನಿಗೆ ಅಸಹ್ಯ,+

ಪ್ರಾಮಾಣಿಕವಾಗಿ ನಡಿಯುವವನು ಕೆಟ್ಟವನಿಗೆ ಅಸಹ್ಯ.+

30 ಇದು ಯಾಕೆಯ ಮಗ ಆಗೂರನ ಮುಖ್ಯ ಸಂದೇಶ. ಇದನ್ನ ಈತೀಯೇಲನಿಗೂ ಉಕ್ಕಾಲನಿಗೂ ಹೇಳಿದ.

 2 ನನ್ನಷ್ಟು ದಡ್ಡ ಯಾರೂ ಇಲ್ಲ,+

ಮನುಷ್ಯರಲ್ಲಿ ಇರಬೇಕಾದ ಸಾಮಾನ್ಯ ಬುದ್ಧಿ ಕೂಡ ನಂಗಿಲ್ಲ.

 3 ನಾನು ವಿವೇಕ ಪಡಿಲಿಲ್ಲ,

ಅತಿ ಪವಿತ್ರ ದೇವರ ಜ್ಞಾನ ನಂಗಿಲ್ಲ.

 4 ಸ್ವರ್ಗಕ್ಕೆ ಏರಿ ಹೋಗಿ ಕೆಳಗೆ ಇಳಿದವರು ಯಾರು?+

ಕೈಯಲ್ಲಿ ಗಾಳಿ ಹಿಡಿದವರು ಯಾರು?

ತನ್ನ ಬಟ್ಟೆಯಲ್ಲಿ ನೀರು ಸುತ್ತಿ ಇಟ್ಟವರು ಯಾರು?+

ಭೂಮಿಯ ಗಡಿಗಳನ್ನ ಮಾಡಿದವರು* ಯಾರು?+

ಆತನ ಹೆಸ್ರೇನು? ಆತನ ಮಗನ ಹೆಸ್ರೇನು? ನಿನಗೆ ಗೊತ್ತಿದ್ರೆ ಹೇಳು.

 5 ದೇವರ ಎಲ್ಲಾ ಮಾತುಗಳು ಶುದ್ಧ,+

ಆತನಲ್ಲಿ ಆಶ್ರಯ ಪಡ್ಕೊಂಡಿರುವವ್ರಿಗೆ ಆತನು ಗುರಾಣಿ.+

 6 ಆತನ ಮಾತುಗಳಿಗೆ ಏನೂ ಸೇರಿಸಬೇಡ,+

ಸೇರಿಸಿದ್ರೆ ಆತನು ನಿನಗೆ ಚೆನ್ನಾಗಿ ಬೈತಾನೆ,

ಆಗ ನೀನು ಸುಳ್ಳುಗಾರ ಅಂತ ಸಾಬೀತು ಆಗುತ್ತೆ.

 7 ದೇವರೇ ನಾನು ನಿನ್ನ ಹತ್ರ ಎರಡು ವಿಷ್ಯ ಕೇಳ್ತೀನಿ.

ನಾನು ಬದುಕಿರೋ ತನಕ ಆ ಎರಡು ವಿಷ್ಯ ಬಿಟ್ಟು ಬೇರೇನೂ ಬೇಡ.

 8 ಕಪಟ, ಸುಳ್ಳನ್ನ ನನ್ನಿಂದ ದೂರಮಾಡು,+

ಬಡತನವನ್ನಾಗಲಿ, ಹಣ ಆಸ್ತಿಯನ್ನಾಗಲಿ ನನಗೆ ಕೊಡಬೇಡ,

ನನಗೆ ಅಗತ್ಯ ಇರೋ ಊಟ ಕೊಟ್ರೆ ಸಾಕು.+

 9 ಇಲ್ಲದಿದ್ರೆ ನಾನು ತೃಪ್ತನಾಗಿ ನಿನ್ನನ್ನ ನಿರಾಕರಿಸ್ತಾ “ಯೆಹೋವ ಯಾರು?” ಅಂತ ಕೇಳಿಬಿಡಬಹುದು,+

ನನ್ನನ್ನ ಬಡವನಾಗಿ ಮಾಡಬೇಡ. ಯಾಕಂದ್ರೆ ನಾನು ಕಳ್ಳತನ ಮಾಡಿ ದೇವರ ಹೆಸ್ರು ಕೆಡಿಸಬಹುದು.

10 ಸೇವಕನ ಬಗ್ಗೆ ಯಜಮಾನನ ಹತ್ರ ಹೋಗಿ ಚಾಡಿ ಹೇಳಬೇಡ,

ಹಾಗೆ ಮಾಡಿದ್ರೆ ಆ ಸೇವಕ ನಿನ್ನನ್ನ ಶಪಿಸಬಹುದು. ಆಗ ನೀನೇ ತಪ್ಪು ಮಾಡಿದವನು ಅಂತಾಗುತ್ತೆ.+

11 ಅಪ್ಪನನ್ನ ಶಪಿಸೋ,

ಅಮ್ಮನನ್ನ ಅಗೌರವಿಸೋ ಪೀಳಿಗೆ ಇದೆ.+

12 ತಮ್ಮ ಕೊಳಕನ್ನ ಶುದ್ಧ ಮಾಡ್ಕೊಳ್ಳದೆ,

ತಾವೇ ಶುದ್ಧರು ಅಂದ್ಕೊಳ್ಳೋ ಪೀಳಿಗೆ ಇದೆ.+

13 ಸೊಕ್ಕಿನ ಕಣ್ಣುಗಳಿರೋ,

ಕಣ್ಣುಗಳಲ್ಲಿ ಅಹಂಕಾರ ತುಂಬಿರೋ ಪೀಳಿಗೆ ಇದೆ.+

14 ಕತ್ತಿಯಂಥ ಹಲ್ಲುಗಳು,

ಪ್ರಾಣ ತೆಗಿಯೋ ದವಡೆಗಳು ಇರೋ ಪೀಳಿಗೆ ಇದೆ.

ಅದು ಭೂಮಿ ಮೇಲಿರೋ ದೀನರ,

ಬಡವರ ರಕ್ತ ಹೀರುತ್ತೆ.+

15 ಜಿಗಣೆಗೆ “ಕೊಡು! ಕೊಡು!” ಅಂತ ಕಿರಿಚೋ ಇಬ್ರು ಹೆಣ್ಣುಮಕ್ಕಳು ಇದ್ದಾರೆ,

ತೃಪ್ತಿಯಾಗದ ಮೂರು ವಿಷ್ಯ ಇದೆ,

“ಸಾಕು!” ಅಂತ ಹೇಳದ ನಾಲ್ಕು ವಿಷ್ಯ ಇದೆ.

16 ಸಮಾಧಿ,+ ಹೆರದ ಗರ್ಭ,

ನೀರಿಲ್ಲದ ಭೂಮಿ,

ಯಾವತ್ತೂ “ಸಾಕು!” ಅನ್ನದ ಬೆಂಕಿ.

17 ಅಪ್ಪನನ್ನ ಗೇಲಿ ಮಾಡೋ, ಅಮ್ಮನ ಮಾತು ಕೇಳದ ಕಣ್ಣುಗಳನ್ನ,+

ಕಣಿವೆಯ ಕಾಗೆಗಳು ಕುಕ್ಕುತ್ತೆ,

ಹದ್ದಿನ ಮರಿಗಳು ತಿಂದು ಹಾಕುತ್ತೆ.+

18 ನನಗೆ ಅರ್ಥ ಆಗದ ಮೂರು ವಿಷ್ಯ ಇದೆ,

ನಾಲ್ಕು ವಿಷ್ಯ ನನಗಿನ್ನೂ ಅರ್ಥ ಆಗಿಲ್ಲ. ಅದೇನಂದ್ರೆ:

19 ಆಕಾಶದಲ್ಲಿ ಹಾರೋ ಹದ್ದಿನ ದಾರಿ,

ಬಂಡೆ ಮೇಲೆ ಹರಿದಾಡೋ ಹಾವಿನ ದಾರಿ,

ವಿಶಾಲ ಸಮುದ್ರದಲ್ಲಿ ಹೋಗೋ ಹಡಗಿನ ದಾರಿ,

ಯುವತಿ ಜೊತೆ ಗಂಡಸು ನಡ್ಕೊಳ್ಳೋ ರೀತಿ.

20 ಒಬ್ಬ ವ್ಯಭಿಚಾರಿಯ ದಾರಿ ಹೀಗಿರುತ್ತೆ:

ಅವಳು ತಿಂದು, ಬಾಯಿ ಒರೆಸ್ಕೊಂಡು,

“ನಾನೇನೂ ತಪ್ಪು ಮಾಡಿಲ್ಲ” ಅಂತಾಳೆ.+

21 ಭೂಮಿಯನ್ನ ನಡುಗಿಸೋ ಮೂರು ವಿಷ್ಯ ಇದೆ,

ಅದು ಸಹಿಸದ ನಾಲ್ಕು ವಿಷ್ಯ ಇದೆ. ಅದೇನಂದ್ರೆ:

22 ಸೇವಕ ರಾಜನ ತರ ಆಳೋದು,+

ಮೂರ್ಖ ಹೊಟ್ಟೆ ಬಿರಿಯೋಷ್ಟು ತಿನ್ನೋದು,

23 ಎಲ್ರೂ ದ್ವೇಷಿಸೋ* ಹೆಂಗಸನ್ನ ಹೆಂಡತಿಯಾಗಿ ಮಾಡ್ಕೊಳ್ಳೋದು,

ಸೇವಕಿ ತನ್ನ ಯಜಮಾನಿಯ ಸ್ಥಾನಕ್ಕೆ ಬರೋದು.*+

24 ಭೂಮಿಯಲ್ಲಿ ನಾಲ್ಕು ಜೀವಿ ಇದೆ. ಅವು ತುಂಬ ಚಿಕ್ಕದು,

ಆದ್ರೂ ಹುಟ್ಟಿಂದಾನೇ ಅವುಗಳಿಗೆ ತುಂಬ ವಿವೇಕ ಇರುತ್ತೆ. ಅವು ಯಾವುದಂದ್ರೆ:+

25 ಇರುವೆಗಳು ಬಲಶಾಲಿ ಜೀವಿಗಳಲ್ಲದಿದ್ರೂ

ಸುಗ್ಗಿ ಕಾಲದಲ್ಲಿ ತಮ್ಮ ಆಹಾರವನ್ನ ತಾವೇ ಸಿದ್ಧ ಮಾಡ್ಕೊಳ್ಳುತ್ತೆ.+

26 ಬೆಟ್ಟದ ಮೊಲಗಳು+ ಶಕ್ತಿಶಾಲಿ ಪ್ರಾಣಿಗಳಲ್ಲದಿದ್ರೂ,

ಅವು ಕಡಿದಾದ ಬಂಡೆಗಳ ಸಂದಲ್ಲಿ ಮನೆ ಮಾಡ್ಕೊಳ್ಳುತ್ತೆ.+

27 ಮಿಡತೆಗಳಿಗೆ+ ರಾಜ ಇಲ್ಲದಿದ್ರೂ

ಗುಂಪುಗುಂಪಾಗಿ ಮುನ್ನುಗ್ಗುತ್ತೆ.+

28 ಹಲ್ಲಿ+ ಬೀಳದ ಹಾಗೆ ಗೋಡೆ ಮೇಲೆ ನಡೆದಾಡುತ್ತೆ,

ಅದು ಅರಮನೆಯಲ್ಲೂ ಇರುತ್ತೆ.

29 ಗಂಭೀರವಾಗಿ ನಡಿಯೋ ಮೂರು ಪ್ರಾಣಿಗಳಿವೆ,

ದೊಡ್ಡ ದೊಡ್ಡ ಹೆಜ್ಜೆ ಇಡೋ ನಾಲ್ಕು ಪ್ರಾಣಿಗಳಿವೆ. ಅವು ಯಾವುದಂದ್ರೆ:

30 ಯಾರಿಗೂ ಭಯಪಟ್ಟು ಹಿಂಜರಿಯದ,

ಪ್ರಾಣಿಗಳಲ್ಲೇ ತುಂಬಾ ಶಕ್ತಿಶಾಲಿ ಪ್ರಾಣಿ ಸಿಂಹ,+

31 ಬೇಟೆ ನಾಯಿ, ಹೋತ, ತನ್ನ ಸೈನ್ಯದ ಮುಂದೆ ಹೋಗೋ ರಾಜ.

32 ಬುದ್ಧಿ ಇಲ್ಲದವನ ಹಾಗೆ ನಿನ್ನನ್ನೇ ನೀನು ಹೆಚ್ಚಿಸ್ಕೊಂಡ್ರೆ,+

ಅಥವಾ ಅದಕ್ಕಾಗಿ ಸಂಚು ಮಾಡಿದ್ರೆ,

ನಿನ್ನ ಬಾಯಿ ಮೇಲೆ ಕೈ ಇಟ್ಕೊಂಡು ಸುಮ್ಮನೇ ಇರು.+

33 ಯಾಕಂದ್ರೆ ಹಾಲು ಕಡೆದ್ರೆ ಬೆಣ್ಣೆ ಬರೋ ತರ,

ಮೂಗು ಹಿಂಡಿದ್ರೆ ರಕ್ತ ಬರೋ ತರ,

ಕೋಪ ಕೆರಳಿದ್ರೆ ಜಗಳ ಆಗೇ ಆಗುತ್ತೆ.+

31 ಇವು ರಾಜ ಲೆಮೂವೇಲನ ಮಾತುಗಳು. ಅವನ ಅಮ್ಮ ಅವನಿಗೆ ಕಲಿಸಿದ ಮುಖ್ಯ ಸಂದೇಶ:+

 2 ನನ್ನ ಮಗನೇ, ನನ್ನ ಗರ್ಭಫಲವೇ,

ನಾನು ನಿನಗೆ ಏನಂತ ಹೇಳಲಿ?

ಹರಕೆ ಮಾಡಿ ನನಗೆ ಹುಟ್ಟಿದ ಮಗನೇ, ನಿನಗೆ ಏನಂತ ಹೇಳಲಿ?+

 3 ನಿನ್ನ ಶಕ್ತಿಯನ್ನ ಹೆಂಗಸ್ರಿಗೆ ಕೊಡಬೇಡ,+

ರಾಜರನ್ನ ನಾಶಕ್ಕೆ ನಡೆಸೋ ದಾರಿಯಲ್ಲಿ ನಡಿಬೇಡ.+

 4 ಲೆಮೂವೇಲನೇ, ದ್ರಾಕ್ಷಾಮದ್ಯ ರಾಜರಿಗೆ ಯೋಗ್ಯವಲ್ಲ.

ಮದ್ಯಪಾನ ರಾಜರಿಗೆ ಗೌರವ ತರಲ್ಲ.

“ನನ್ನ ದ್ರಾಕ್ಷಾಮದ್ಯ ಎಲ್ಲಿ?” ಅಂತ ಕೇಳೋದು ಆಳುವವ್ರಿಗೆ ಸರಿ ಅಲ್ಲ.+

 5 ಯಾಕಂದ್ರೆ ಮದ್ಯ ನೀತಿನಿಯಮಗಳನ್ನ ಮರೆಯೋ ತರ ಮಾಡುತ್ತೆ,

ದೀನರ ಹಕ್ಕುಗಳನ್ನ ಕಿತ್ಕೊಳ್ಳೋ ತರ ಮಾಡುತ್ತೆ.

 6 ನಾಶವಾಗಿ ಹೋಗುವವ್ರಿಗೆ ಮದ್ಯ ಕೊಡಿ,+

ದುಃಖದಲ್ಲಿ ಮುಳುಗಿ ಹೋಗಿರುವವರಿಗೆ ದ್ರಾಕ್ಷಾಮದ್ಯ ಕೊಡಿ.+

 7 ಅವರು ಅದನ್ನ ಕುಡಿದು ತಮ್ಮ ಬಡತನವನ್ನ ಮರಿಯಲಿ,

ಅವ್ರ ಕಷ್ಟಗಳು ಅವ್ರ ನೆನಪಿಗೆ ಬರೋದು ಬೇಡ.

 8 ತಮ್ಮನ್ನ ಕಾಪಾಡ್ಕೊಳ್ಳೋಕೆ ಆಗದವ್ರ ಪರವಾಗಿ ಮಾತಾಡು,

ನಾಶವಾಗಿ ಹೋಗ್ತಾ ಇರುವವ್ರ ಪರವಾಗಿ ನಿಂತು ಅವ್ರ ಹಕ್ಕುಗಳಿಗಾಗಿ ವಾದಿಸು.+

 9 ಸುಮ್ನೆ ಇರಬೇಡ, ನ್ಯಾಯವಾದ ತೀರ್ಪು ಕೊಡು.

ದೀನರ, ಬಡವರ ಹಕ್ಕುಗಳಿಗಾಗಿ ಹೋರಾಡು.+

א [ಆಲೆಫ್‌]

10 ಒಳ್ಳೇ* ಹೆಂಡತಿ ಸಿಗೋದು ಅಪರೂಪ.+

ಅವಳು ಹವಳಕ್ಕಿಂತ* ಅಮೂಲ್ಯ.

ב [ಬೆತ್‌]

11 ಅವಳ ಗಂಡ ಅವಳನ್ನ ಪೂರ್ತಿಯಾಗಿ ನಂಬ್ತಾನೆ,

ಅವನಿಗೆ ಯಾವ ಕೊರತೆನೂ ಇರಲ್ಲ.

ג [ಗಿಮೆಲ್‌]

12 ಅವಳು ಸಾಯೋ ತನಕ

ಗಂಡನಿಗೆ ಒಳ್ಳೇದು ಮಾಡ್ತಾಳೆ, ಕೆಟ್ಟದು ಮಾಡಲ್ಲ.

ד [ಡಾಲತ್‌]

13 ಅವಳು ಉಣ್ಣೆ ಬಟ್ಟೆ, ನಾರನ್ನ ಹುಡುಕಿ ತರ್ತಾಳೆ.

ಏನೇ ಕೆಲಸ ಇದ್ರೂ ಖುಷಿಖುಷಿಯಾಗಿ ಮಾಡ್ತಾಳೆ.+

ה [ಹೆ]

14 ವ್ಯಾಪಾರಿಯ ಹಡಗುಗಳ ತರ,+

ದೂರದಿಂದ ಆಹಾರ ತರ್ತಾಳೆ.

ו [ವಾವ್‌]

15 ಅವಳು ಇನ್ನೂ ಕತ್ತಲೆ ಇರುವಾಗ್ಲೇ ಎದ್ದು,

ಕುಟುಂಬಕ್ಕಾಗಿ ಅಡಿಗೆ ಮಾಡ್ತಾಳೆ.

ತನ್ನ ಸೇವಕಿಯರಿಗೆ ಅವ್ರ ಪಾಲು ಕೊಡ್ತಾಳೆ.+

ז [ಜಯಿನ್‌]

16 ಅವಳು ಒಂದು ಹೊಲವನ್ನ ಚೆನ್ನಾಗಿ ನೋಡಿ, ತಗೋಳ್ತಾಳೆ.

ಅವಳು ತನ್ನ ದುಡಿಮೆಯಿಂದ ಒಂದು ದ್ರಾಕ್ಷಿತೋಟ ಮಾಡ್ತಾಳೆ.

ח [ಹೆತ್‌]

17 ಅವಳು ಕಷ್ಟಪಟ್ಟು ಕೆಲಸ ಮಾಡೋಕೆ ತಯಾರಾಗಿ ಇರ್ತಾಳೆ,*+

ತನ್ನ ಕೈಗಳನ್ನ ಬಲಪಡಿಸ್ಕೊಳ್ತಾಳೆ.

ט [ಟೆತ್‌]

18 ಅವಳು ತನ್ನ ವ್ಯಾಪಾರದಲ್ಲಿ ಲಾಭ ಸಿಗೋ ತರ ನೋಡ್ಕೊಳ್ತಾಳೆ.

ರಾತ್ರಿ ಅವಳ ದೀಪ ಆರಿಹೋಗಲ್ಲ.

י [ಯೋದ್‌]

19 ಅವಳು ಒಂದು ಕೈಯಲ್ಲಿ ಸೀಳುಗೋಲು ಹಿಡ್ಕೊಂಡು,

ಇನ್ನೊಂದು ಕೈಯಲ್ಲಿ ಚರಕದ ಕಡ್ಡಿ ಹಿಡಿತಾಳೆ.*+

כ [ಕಾಫ್‌]

20 ಅವಳು ತನ್ನ ಕೈ ಚಾಚಿ,

ದೀನರಿಗೆ ಸಹಾಯ ಮಾಡ್ತಾಳೆ, ಬಡವ್ರಿಗೆ ಉದಾರವಾಗಿ ಕೊಡ್ತಾಳೆ.+

ל [ಲಾಮೆದ್‌]

21 ಹಿಮ ಬೀಳುವಾಗ ಅವಳು ತನ್ನ ಕುಟುಂಬದ ಬಗ್ಗೆ ಚಿಂತೆ ಮಾಡಲ್ಲ,

ಯಾಕಂದ್ರೆ ಅವರೆಲ್ಲ ಬೆಚ್ಚಗಿನ* ಬಟ್ಟೆ ಹಾಕೊಂಡು ಇರ್ತಾರೆ.

מ [ಮೆಮ್‌]

22 ತನ್ನ ಹಾಸಿಗೆ ಮೇಲೆ ಹಾಸೋ ಬಟ್ಟೆಗಳನ್ನ ತಾನೇ ಮಾಡ್ಕೊಳ್ತಾಳೆ.

ಅವಳು ನಾರಿನ, ನೇರಳೆ ಬಣ್ಣದ ಉಣ್ಣೆಯಿಂದ ಮಾಡಿರೋ ಬಟ್ಟೆ ಹಾಕೊಳ್ತಾಳೆ.

נ [ನೂನ್‌]

23 ಪಟ್ಟಣದ ಬಾಗಿಲಲ್ಲಿ ಅವಳ ಗಂಡನಿಗೆ ಒಳ್ಳೇ ಹೆಸ್ರು ಇರುತ್ತೆ,+

ದೇಶದ ಹಿರಿಯರ ಜೊತೆ ಅವನು ಕೂತ್ಕೊಳ್ತಾನೆ.

ס [ಸಾಮೆಕ್‌]

24 ಅವಳು ನಾರಿನ ಬಟ್ಟೆ ಮಾಡಿ ಮಾರ್ತಾಳೆ.

ಸೊಂಟಪಟ್ಟಿಗಳನ್ನ ವ್ಯಾಪಾರಿಗಳಿಗೆ ಸರಬರಾಜು ಮಾಡ್ತಾಳೆ.

ע [ಅಯಿನ್‌]

25 ಅವಳು ಮನೋಬಲವನ್ನ, ತೇಜಸ್ಸನ್ನ ತೊಟ್ಕೊಂಡಿದ್ದಾಳೆ,

ಭವಿಷ್ಯದ ಬಗ್ಗೆ ಧೈರ್ಯವಾಗಿ ಇರ್ತಾಳೆ.*

פ [ಪೇ]

26 ಅವಳು ಬಾಯಿ ತೆರೆದಾಗೆಲ್ಲ ವಿವೇಕದಿಂದ ಮಾತಾಡ್ತಾಳೆ,+

ಮಾರ್ಗದರ್ಶನವನ್ನ ಪ್ರೀತಿಯಿಂದ* ಕೊಡ್ತಾಳೆ.

צ [ಸಾದೆ]

27 ಅವಳು ತನ್ನ ಕುಟುಂಬದವ್ರ ಕೆಲಸಗಳ ಮೇಲೆ ಗಮನ ಇಟ್ಟಿರ್ತಾಳೆ,

ಸೋಮಾರಿತನದ ರೊಟ್ಟಿ ತಿನ್ನಲ್ಲ.+

ק [ಕೊಫ್‌]

28 ಅವಳ ಮಕ್ಕಳು ಎದ್ದು ನಿಂತು ಅವಳನ್ನ ಹೊಗಳ್ತಾರೆ,

ಅವಳ ಗಂಡ ಎದ್ದು ನಿಂತು ಅವಳ ಗುಣಗಾನ ಮಾಡ್ತಾನೆ.

ר [ರೆಶ್‌]

29 ತುಂಬ ಜನ ಒಳ್ಳೇ* ಸ್ತ್ರೀಯರಿದ್ದಾರೆ,

ಆದ್ರೆ ನೀನು ಅವರನ್ನೆಲ್ಲಾ ಮೀರಿಸಿದ್ದೀಯ.

ש [ಶಿನ್‌]

30 ಸೌಂದರ್ಯ ಸುಳ್ಳಾಗಬಹುದು, ಅಂದಚಂದ ಇವತ್ತು ಇದ್ದು ನಾಳೆ ಇಲ್ಲದೆ ಹೋಗಬಹುದು+

ಆದ್ರೆ ಯೆಹೋವನಿಗೆ ಭಯಪಡೋ ಸ್ತ್ರೀಯನ್ನ ಯಾವಾಗ್ಲೂ ಹೊಗಳ್ತಾ ಇರ್ತಾರೆ.+

ת [ಟಾವ್‌]

31 ಅವಳ ಪರಿಶ್ರಮಕ್ಕೆ ಪ್ರತಿಫಲ ಕೊಡಿ,+

ಪಟ್ಟಣದ ಬಾಗಿಲಲ್ಲಿ ಅವಳ ಕೆಲಸಗಳೇ ಅವಳನ್ನ ಹೊಗಳಲಿ.+

ಅಥವಾ “ವಿವೇಕಿಗಳ.”

ಅಥವಾ “ಕತೆ.”

ಅಥವಾ “ಭಯಭಕ್ತಿನೇ.”

ಅಥವಾ “ಅಮ್ಮ ಕೊಡೋ ನಿಯಮವನ್ನ.”

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಅಕ್ಷ. “ನನ್ನ ಪವಿತ್ರಶಕ್ತಿ.” ಇಲ್ಲಿ ಬಹುಶಃ ದೇವರ ಪವಿತ್ರಶಕ್ತಿ ಕೊಡೋ ವಿವೇಕದ ಬಗ್ಗೆ ಹೇಳ್ತಿರಬಹುದು.

ಅಥವಾ “ನಿಧಿ ಹಾಗೆ ಕಾಪಾಡ್ಕೋ.”

ಅಥವಾ “ವಿವೇಚನಾ ಶಕ್ತಿ ಸಿಗಬೇಕಂದ್ರೆ.”

ಅಥವಾ “ಪ್ರಯೋಜನ ತರೋ ವಿವೇಕ.”

ಅಕ್ಷ. “ಅಪರಿಚಿತ.” ಇಲ್ಲಿ ನೈತಿಕವಾಗಿ ದೇವರಿಂದ ದೂರ ಹೋಗಿರೋ ಹೆಂಗಸನ್ನ ಸೂಚಿಸುತ್ತಿರಬೇಕು.

ಅಕ್ಷ. “ವಿದೇಶಿ.” ಇಲ್ಲಿ ನೈತಿಕವಾಗಿ ದೇವರಿಂದ ದೂರ ಹೋಗಿರೋ ಹೆಂಗಸನ್ನ ಸೂಚಿಸುತ್ತಿರಬೇಕು.

ಅಥವಾ “ಗಂಡನನ್ನ.”

ಅಕ್ಷ. “ಅವಳ ಹತ್ರ ಹೋಗೋ.”

ಅಥವಾ “ಪ್ರಾಮಾಣಿಕರು.”

ಅಥವಾ “ನಿರ್ದೋಷಿಗಳು.”

ಅಥವಾ “ನನ್ನ ನಿಯಮವನ್ನ.”

ಅಕ್ಷ. “ಒಳನೋಟ.”

ಅಥವಾ “ಆದಾಯದ.”

ಅಥವಾ “ಅತ್ಯುತ್ತಮ.”

ಅಥವಾ “ವಿವೇಕದಿಂದ ಪಡಿಯೋ ಲಾಭ.”

ಪದವಿವರಣೆ ನೋಡಿ.

ಇಲ್ಲಿ ಹಿಂದಿನ ವಚನಗಳಲ್ಲಿ ಹೇಳಿರೋ ದೇವರ ಗುಣಗಳನ್ನ ಸೂಚಿಸುತ್ತಿರಬೇಕು.

ಅಥವಾ “ನಿನಗೆ ಪ್ರಯೋಜನ ತರೋ ವಿವೇಕವನ್ನ.”

ಅಥವಾ “ಕಪಟಿಯನ್ನ.”

ಅಥವಾ “ನಿಯಮವನ್ನ.”

ಅಥವಾ “ಪ್ರಾಮಾಣಿಕವಾದ.”

ಬಹುಶಃ, “ನಿನ್ನ ಜೀವನದಲ್ಲಿ ಏನೇನು ಮಾಡ್ತೀಯ ಅನ್ನೋದಕ್ಕೆ ಚೆನ್ನಾಗಿ ಗಮನ ಕೊಡು.”

ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.

ಅಥವಾ “ಮಾಚಿಪತ್ರೆ.” ಪದವಿವರಣೆ ನೋಡಿ.

ಪದವಿವರಣೆಯಲ್ಲಿ “ಸಮಾಧಿ” ನೋಡಿ.

ಅಕ್ಷ. “ಮಕ್ಕಳೇ.”

ಅಥವಾ “ಬುಗ್ಗೆಯ ತಾಜಾ.”

ಪದವಿವರಣೆ ನೋಡಿ.

ಅಥವಾ “ಮೈಮರೆಸಲಿ.”

ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.

ಅಕ್ಷ. “ವಿದೇಶಿ.” ಜ್ಞಾನೋಕ್ತಿ 2:16 ನೋಡಿ.

ಅದು, ಪ್ರತಿಜ್ಞೆ.

ಅಥವಾ “ಅಮ್ಮ ಕೊಡೋ ನಿಯಮವನ್ನ.”

ಅಥವಾ “ನಿನಗೆ ಕಲಿಸುತ್ತೆ.”

ಅಕ್ಷ. “ವಿದೇಶಿ.” ಜ್ಞಾನೋಕ್ತಿ 2:16 ನೋಡಿ.

ಅಕ್ಷ. “ಹೃದಯ ಇಲ್ಲ.”

ಅಥವಾ “ನಿಯಮವನ್ನ.”

ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.

ಅಕ್ಷ. “ವಿದೇಶಿ.” ಜ್ಞಾನೋಕ್ತಿ 2:16 ನೋಡಿ.

ಅಥವಾ “ಪ್ರಲೋಭಿಸುವ.”

ಅಕ್ಷ. “ಹೃದಯ ಇಲ್ಲದ.”

ಪದವಿವರಣೆ ನೋಡಿ.

ಈ ಮರಗಳು ರಾಳ, ಎಣ್ಣೆ ಉತ್ಪಾದಿಸುತ್ತೆ. ಈ ರಾಳ, ಎಣ್ಣೆಯನ್ನ ಸುಗಂಧ ದ್ರವ್ಯ ತಯಾರಿಸುವಾಗ ಬಳಸ್ತಿದ್ರು.

ಅಕ್ಷ. “ಕೋಳ.”

ಪದವಿವರಣೆಯಲ್ಲಿ “ಸಮಾಧಿ” ನೋಡಿ.

ಅಥವಾ “ವಿವೇಚನಾ ಶಕ್ತಿ.”

ಪದವಿವರಣೆ ನೋಡಿ.

ಅಥವಾ “ಪ್ರಯೋಜನ ಆಗೋ ವಿವೇಕ.”

ಅಥವಾ “ಪರಂಪರೆಯಿಂದ ಬಂದ ಮೌಲ್ಯಗಳು.”

ಅಥವಾ “ಅನಾದಿ ಕಾಲದಿಂದಾನೇ.”

ಅಥವಾ “ಪ್ರಸವವೇದನೆಯಿಂದ ನನ್ನನ್ನ ಹುಟ್ಟಿಸಿದಾಗ.”

ಅಕ್ಷ. “ವೃತ್ತವನ್ನ.”

ಅಥವಾ “ನಿಲುವು ಪಟ್ಟಿ.”

ಅಕ್ಷ. “ಹೃದಯ ಇಲ್ಲದವ್ರಿಗೆ.”

ಹೀಬ್ರುನಲ್ಲಿ, ವಿವೇಕಕ್ಕೆ ಸ್ತ್ರೀಲಿಂಗವನ್ನ ಬಳಸಲಾಗಿದೆ. ಅದನ್ನ ಒಬ್ಬ ಸ್ತ್ರೀ ತರ ಚಿತ್ರೀಕರಿಸಲಾಗಿದೆ.

ಅಕ್ಷ. “ಹೃದಯ ಇಲ್ಲದವ್ರಿಗೆ.”

ಪದವಿವರಣೆಯಲ್ಲಿ “ಸಮಾಧಿ” ನೋಡಿ.

ಅಥವಾ “ನೀತಿವಂತರು.”

ಅಥವಾ “ನೀತಿವಂತನಿಗೆ ಇರೋ ಒಳ್ಳೇ ಹೆಸ್ರಿಂದಾಗಿ.”

ಅಕ್ಷ. “ಆಜ್ಞೆಗಳನ್ನ.”

ಅಕ್ಷ. “ಹೃದಯ ಇಲ್ಲದವನ.”

ಅಥವಾ “ಅಮೂಲ್ಯ ವಸ್ತುನೇ.”

ಅಕ್ಷ. “ಹೃದಯ.”

ಅಥವಾ “ಮಾರ್ಗದರ್ಶಿಸುತ್ತೆ.”

ಅಥವಾ “ದುಃಖವನ್ನ, ಕಷ್ಟವನ್ನ.”

ಅಕ್ಷ. “ನೆರೆಯವನನ್ನ.”

ಅಥವಾ “ವಿವೇಕದಿಂದ ಕೂಡಿರೋ.”

ಅಥವಾ “ಮಾರ್ಗದರ್ಶಕರು.”

ಅಥವಾ “ರಕ್ಷಣೆ.”

ಅಥವಾ “ಶಾಶ್ವತ ಪ್ರೀತಿ.”

ಅಥವಾ “ಅವಮಾನ.”

ಅಕ್ಷ. “ಚದುರಿಸುವವನು.”

ಅಕ್ಷ. “ಗಾಳಿಯನ್ನ ಸಂಪಾದಿಸ್ತಾನೆ.”

ಇಲ್ಲಿ ಜೀವದ ದಾರಿಯಲ್ಲಿ ನಡಿಯೋಕೆ ಬೇರೆಯವ್ರಿಗೆ ಸಹಾಯ ಮಾಡುವವನನ್ನ ಸೂಚಿಸುತ್ತಿರಬಹುದು.

ಅಕ್ಷ. “ರಕ್ತ ಸುರಿಸೋಕೆ ಕಾಯೋ.”

ಅಕ್ಷ. “ರೊಟ್ಟಿ ಇಲ್ಲದಿದ್ರೂ.”

ಅಕ್ಷ. “ಹೃದಯ ಇಲ್ಲ.”

ಅಕ್ಷ. “ಬಾಯಿಂದಾಗಿ.”

ಅಥವಾ “ಬುದ್ಧಿವಾದವನ್ನ.”

ಅಥವಾ “ಅವತ್ತೇ.”

ಅಥವಾ “ಖಿನ್ನತೆಗೆ ನಡಿಸುತ್ತೆ.”

ಅಕ್ಷ. “ಗೇಲಿ ಮಾಡುವವನು.”

ಅಕ್ಷ. “ಹರ್ಷಿಸುತ್ತೆ.”

ಅಥವಾ “ಒಬ್ರನ್ನೊಬ್ರು ವಿಚಾರಿಸುವವ್ರಿಗೆ.”

ಅಥವಾ “ಸುಮ್ಮನೆ ಸಿಕ್ಕಿದ.”

ಅಥವಾ “ಸ್ವಲ್ಪಸ್ವಲ್ಪವಾಗಿ ಸೇರಿಸಿಟ್ಟ.”

ಅಥವಾ “ನಿರೀಕ್ಷೆ ನಿಜವಾಗೋಕೆ.”

ಅಥವಾ “ನಿಯಮ.”

ಅಕ್ಷ. “ಒಳನೋಟ.”

ಅಥವಾ “ಅವನನ್ನ.”

ಅಥವಾ “ಬೆತ್ತ ಹಿಡಿಯದ.”

ಬಹುಶಃ, “ಇನ್ನೊಬ್ರಿಗೆ ಮೋಸ ಮಾಡ್ತಾನೆ.”

ಅಥವಾ “ಜನ್ರಿಂದ ಒಳ್ಳೇ ಹೆಸ್ರು ಪಡ್ಕೊಳ್ತಾನೆ.”

ಅಕ್ಷ. “ಮುಗ್ಧ.”

ಅಥವಾ “ವಿಪರೀತ ಕೋಪ ಮಾಡ್ಕೊಳ್ತಾನೆ.”

ಅಕ್ಷ. “ಜೀವ.”

ಅಕ್ಷ. “ಕೊಳೆಯುತ್ತೆ.”

ಅಥವಾ “ತನ್ನ ಸೃಷ್ಟಿಕರ್ತನಿಗೆ.”

ಅಕ್ಷ. “ಒಳನೋಟ.”

ಅಥವಾ “ಹಿತವಾದ.”

ಅಥವಾ “ನೋವು ಮಾಡೋ.”

ಅಥವಾ “ವಾಸಿಮಾಡೋ ನಾಲಿಗೆ.”

ಅಕ್ಷ. “ಜೀವದ ಮರ.”

ಅಕ್ಷ. “ಫಲ.”

ಪದವಿವರಣೆ ನೋಡಿ.

ಅಥವಾ “ಅಬದ್ದೋನಲ್ಲಿ.” ಪದವಿವರಣೆ ನೋಡಿ.

ಅಥವಾ “ಒಳ್ಳೇ.”

ಅಕ್ಷ. “ದಷ್ಟಪುಷ್ಟವಾದ ಹೋರಿ.”

ಅಕ್ಷ. “ಸರಳ.”

ಅಕ್ಷ. “ಹೃದಯ ಇಲ್ಲದವನಿಗೆ.”

ಅಕ್ಷ. “ಒಳನೋಟ.”

ಅಥವಾ “ಹೇಗೆ ಉತ್ತರ ಕೊಡಬೇಕಂತ ಜಾಗ್ರತೆಯಿಂದ ಪರಿಗಣಿಸುತ್ತೆ, ಮಾತಾಡೋ ಮುಂಚೆ ಯೋಚಿಸುತ್ತೆ.”

ಅಥವಾ “ಸಂತೋಷದ ನೋಟದಿಂದ.”

ಅಥವಾ “ತಿದ್ದುಪಾಟನ್ನ.”

ಅಕ್ಷ. “ಹೃದಯ.”

ಅಥವಾ “ಸರಿಯಾದ ಉತ್ತರ.” ಅಕ್ಷ. “ನಾಲಿಗೆಯ ಉತ್ತರ.”

ಅಕ್ಷ. “ಶುದ್ಧವಾಗೇ.”

ಅಕ್ಷ. “ಅಂತರಂಗ.”

ಅಕ್ಷ. “ನಿನ್ನ ಕೆಲಸಗಳನ್ನ ಯೆಹೋವನಿಗೆ ಉರುಳಿಸು.”

ಅಕ್ಷ. “ಶತ್ರುಗಳು ಸಹ ಅವನ ಜೊತೆ ಶಾಂತಿಯಿಂದ ಇರೋ ಹಾಗೆ ಮಾಡ್ತಾನೆ.”

ಅಕ್ಷ. “ಒಳನೋಟ.”

ಅಕ್ಷ. “ಒಳನೋಟ.”

ಅಕ್ಷ. “ಒಳನೋಟ.”

ಅಥವಾ “ಪಿತೂರಿ ಹೂಡುವವನು.”

ಅಥವಾ “ಗೌರವದ.”

ಅಕ್ಷ. “ಜನ್ರು ಮಡಿಲಲ್ಲಿ ಚೀಟು ಹಾಕ್ತಾರೆ.” ಪದವಿವರಣೆಯಲ್ಲಿ “ಚೀಟು” ನೋಡಿ.

ಅಕ್ಷ. “ಬಲಿಗಳು.”

ಅಕ್ಷ. “ಒಳನೋಟ.”

ಅಥವಾ “ರಚಕನನ್ನೇ.”

ಅಥವಾ “ಹೆತ್ತವರಿಂದಾಗಿ.”

ಅಥವಾ “ಅನುಗ್ರಹ.”

ಅಕ್ಷ. “ಮುಚ್ಚುವವನು.”

ಅಕ್ಷ. “ಹೃದಯ.”

ಅಥವಾ “ಹೆಬ್ಬಾಗಿಲನ್ನ ಕಟ್ಟುವವನು ಕಷ್ಟವನ್ನ ಆಮಂತ್ರಿಸ್ತಾನೆ.”

ಅಕ್ಷ. “ಭ್ರಷ್ಟನಾಗಿರುವವನಿಗೆ ಒಳ್ಳೇದಾಗಲ್ಲ.”

ಅಥವಾ “ಮೂಳೆಗಳನ್ನ ಬತ್ತಿಸಿಬಿಡುತ್ತೆ.”

ಅಕ್ಷ. “ಕಣ್ಣುಗಳು.”

ಅಥವಾ “ನೀತಿವಂತರಿಗೆ ದಂಡ ಹಾಕೋದು.”

ಅಥವಾ “ಪ್ರಯೋಜನ ಆಗೋ ವಿವೇಕವನ್ನ.”

ಅಥವಾ “ಅತಿಯಾಸೆಯಿಂದ ನುಂಗೋ ಆಹಾರದ ತರ.”

ಅಕ್ಷ. “ಮೇಲೆ ಎತ್ತಲಾಗುತ್ತೆ.” ಅಂದ್ರೆ, ಯಾರಿಗೂ ಸಿಗದೆ ಸುರಕ್ಷಿತವಾಗಿ ಇರ್ತಾನೆ.

ಅಥವಾ “ಪೂರ್ತಿ ನಿರಾಶೆಯಾದ್ರೆ.”

ಅಕ್ಷ. “ಬಾಯಿ.”

ಅಕ್ಷ. “ದುಡುಕಿ ಕಾಲಿಡುವವನು.”

ಅಥವಾ “ದೊಡ್ಡ ಮನಸ್ಸಿನ.”

ಅಕ್ಷ. “ಹೃದಯ.”

ಅಕ್ಷ. “ಒಳ್ಳೇದಾಗುತ್ತೆ.”

ಅಕ್ಷ. “ಒಳನೋಟ.”

ಅಥವಾ “ಕಿರಿಕಿರಿ ಮಾಡೋ.”

ಅಥವಾ “ಆ ಸಾಲವನ್ನ ವಾಪಸ್‌ ಕೊಡ್ತಾನೆ.”

ಅಥವಾ “ಸಾವನ್ನ ಬಯಸಬೇಡ.”

ಅಕ್ಷ. “ಸಲಹೆನೇ.”

ಬಹುಶಃ, “ಕೊಯ್ಲಿನ ಸಮಯದಲ್ಲಿ ಹುಡುಕ್ತಾನೆ, ಆದ್ರೆ ಏನೂ ಸಿಗಲ್ಲ.”

ಅಥವಾ “ಉದ್ದೇಶಗಳು.” ಅಕ್ಷ. “ಸಲಹೆ.”

ಅಕ್ಷ. “ಗಂಡು ಮಕ್ಕಳು.”

ಅಥವಾ “ಎರಡು ರೀತಿಯ ತೂಕದ ಕಲ್ಲು, ಎರಡು ರೀತಿಯ ಅಳತೆ ಪಾತ್ರೆಗಳು.”

ಪದವಿವರಣೆ ನೋಡಿ.

ಅಥವಾ “ವಿದೇಶಿ.”

ಅಥವಾ “ವಿವೇಕದಿಂದ ಕೂಡಿರೋ ಮಾರ್ಗದರ್ಶನದ.”

ಅಥವಾ “ತುಟಿಗಳಿಂದ ಮೋಡಿ ಮಾಡುವವನ.”

ಅಥವಾ “ಎರಡು ರೀತಿಯ ತೂಕದ ಕಲ್ಲು.”

ಅಥವಾ “ತಿಕ್ಕಿ ಬೆಳಗಿಸುತ್ತೆ.”

ಅಥವಾ “ಉದ್ದೇಶಗಳನ್ನ.”

ಅಥವಾ “ಅವನಿಗೆ ಪ್ರಯೋಜನ ತರುತ್ತೆ.”

ಬಹುಶಃ, “ಮರಣವನ್ನ ಹುಡುಕುವವ್ರಿಗೆ, ಕಣ್ಮರೆಯಾಗೋ ಮಂಜಿನ ಹಾಗೆ.”

ಅಥವಾ “ಕಿರಿಕಿರಿ ಮಾಡೋ.”

ಅಕ್ಷ. “ಒಳನೋಟ.”

ಅಥವಾ “ತಾನೇನು ಮಾಡಬೇಕಂತ ಗೊತ್ತಾಗುತ್ತೆ.”

ಅಕ್ಷ. “ಒಳನೋಟ.”

ಅಥವಾ “ನಾಚಿಕೆಗೆಟ್ಟ ನಡತೆ ಇಟ್ಕೊಂಡು.”

ಅಕ್ಷ. “ಮೆಚ್ಚುಗೆ.”

ಅಥವಾ “ಅದ್ರ ಪರಿಣಾಮ.”

ಅಥವಾ “ಮಗುಗೆ, ಯುವಕನಿಗೆ.”

ಅಕ್ಷ. “ಕೋಪದ ದಂಡವನ್ನ ಮುರಿಯಲಾಗುತ್ತೆ.”

ಅಕ್ಷ. “ದಯಾದೃಷ್ಟಿ ಇರೋನು.”

ಪದವಿವರಣೆ ನೋಡಿ.

ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.

ಅಕ್ಷ. “ಕಂಠಕ್ಕೆ ಕತ್ತಿ ಹಾಕ್ಕೊ.”

ಬಹುಶಃ, “ನಿನ್ನ ಸ್ವಂತ ಬುದ್ಧಿಯನ್ನೇ ಆಶ್ರಯಿಸಿಕೊಳ್ಳಬೇಡ.”

ಅಕ್ಷ. “ತಂದೆ ಇಲ್ಲದವರ.”

ಅಕ್ಷ. “ವಿಮೋಚಕ.”

ಪದವಿವರಣೆ ನೋಡಿ.

ಅಕ್ಷ. “ಮೂತ್ರ ಪಿಂಡಗಳು.”

ಅಕ್ಷ. “ವಿದೇಶಿ.” ಜ್ಞಾನೋಕ್ತಿ 2:16 ನೋಡಿ.

ಅಥವಾ “ನನಗೇನೂ ಅನಿಸ್ಲೇ ಇಲ್ಲ.”

ಅಥವಾ “ನಾನು ಅದನ್ನ ಪುನಃ ಹುಡುಕ್ತೀನಿ.”

ಅಥವಾ “ಕುಟುಂಬ.”

ಅಥವಾ “ವಿವೇಕದಿಂದ ಕೂಡಿರೋ ಮಾರ್ಗದರ್ಶನದಿಂದ.”

ಅಥವಾ “ಯಶಸ್ಸು, ರಕ್ಷಣೆ.”

ಅಥವಾ “ಉದ್ದೇಶಗಳನ್ನ.”

ಅದು, ಯೆಹೋವ ಮತ್ತು ರಾಜ.

ಬಹುಶಃ, “ಪ್ರಾಮಾಣಿಕವಾಗಿ ಉತ್ತರ ಕೊಡೋದು ಮುತ್ತು ಕೊಟ್ಟ ಹಾಗೆ.”

ಅಥವಾ “ಕುಟುಂಬ.”

ಅಕ್ಷ. “ಹೃದಯ ಇಲ್ಲದವನ.”

ಅಕ್ಷ. “ಈ ಶಿಸ್ತನ್ನ ಸ್ವೀಕರಿಸಿದೆ.”

ಅಥವಾ “ಸಂಗ್ರಹಿಸಿ ಅದ್ರ ಪ್ರತಿಯನ್ನ ತಯಾರಿಸಿದ್ರು.”

ಅಥವಾ “ಕಿಟ್ಟ.”

ಅಥವಾ “ಬೇರೆಯವ್ರ”

ಅಥವಾ “ಕೆಟ್ಟ ಉದ್ದೇಶದಿಂದ ಕೂಡಿದ ಗಾಳಿಸುದ್ದಿಯನ್ನ.”

ಬಹುಶಃ, “ವಂಚಕ.”

ಅಥವಾ “ಕ್ಷಾರದ.”

ಅದು, ಅವನನ್ನ ಮೃದುಮಾಡಿ ಅವನ ಕೋಪ ಕರಗಿಸುತ್ತೆ.

ಅಥವಾ “ಕಿರಿಕಿರಿ ಮಾಡೋ.”

ಪದವಿವರಣೆ ನೋಡಿ.

ಬಹುಶಃ, “ಕಾರಣ ಇಲ್ಲದೆ ಶಾಪ ತಗಲಲ್ಲ.”

ಅಥವಾ “ಹಾಗೆ ಮಾಡಿದ್ರೆ ನೀನು ಅವನ ತರಾನೇ ಆಗ್ತೀಯ.”

ಅಥವಾ “ಜೋಲಾಡೋ ಕಾಲಿಗೆ.”

ಅಥವಾ “ಎಲ್ರಿಗೂ ಗಾಯ ಮಾಡೋ.”

ಪದವಿವರಣೆ ನೋಡಿ.

ಬಹುಶಃ, “ವಿವಾದದಲ್ಲಿ ಬಾಯಿ ಹಾಕುವವನು.”

ಅಥವಾ “ಅತಿಯಾಸೆಯಿಂದ ನುಂಗೋ ಆಹಾರದ ತರ.”

ಅಥವಾ “ಅವನ ಹೃದಯ ಪೂರ್ತಿ ಅಸಹ್ಯವಾಗಿದೆ.”

ಅಕ್ಷ. “ಅಪರಿಚಿತರು.”

ಬಹುಶಃ, “ಶತ್ರುವಿನ ಮುತ್ತುಗಳು ನಿಜ ಅಲ್ಲ, ಒತ್ತಾಯದಿಂದ ಕೊಡ್ತಾನೆ.”

ಅಕ್ಷ. “ತುಳಿದು ಹಾಕ್ತಾನೆ.”

ಅಥವಾ “ಅದ್ರ ಪರಿಣಾಮ.”

ಅಥವಾ “ವಿದೇಶಿ.”

ಅಥವಾ “ಕಿರಿಕಿರಿ ಮಾಡೋ.”

ಅಥವಾ “ಅಬದ್ದೋನ್‌ಗಾಗಲಿ.” ಪದವಿವರಣೆ ನೋಡಿ.

ಅಥವಾ “ಕುರಿ ಮೇಲೆ ಮನಸ್ಸಿಡು, ಕುರಿ ಕಡೆ ಗಮನ ಕೊಡು.”

ಅಥವಾ “ತಿರುಗಿಬಿದ್ರೆ.”

ಅಥವಾ “ದೇವರ ನಿಯಮ.”

ಅಥವಾ “ದೇವರ ನಿಯಮ.”

ಅಥವಾ “ದೇವರ ನಿಯಮ.”

ಅಥವಾ “ದೇವರಿಗೆ ಭಯಪಡುವವನು.”

ಅಥವಾ “ಗುಂಡಿ.”

ಬಹುಶಃ, “ತಪ್ಪು ಮಾಡದವನ ಜೀವ ಕಾಪಾಡೋಕೆ ಪ್ರಾಮಾಣಿಕ ದಾರಿ ಹುಡುಕ್ತಾ ಇರ್ತಾನೆ.”

ಅಥವಾ “ತನ್ನ ಭಾವನೆಗಳನ್ನೆಲ್ಲ.”

ಅದು, ಅವರಿಬ್ರಿಗೂ ಜೀವ ಕೊಟ್ಟವನು ಆತನೇ.

ಅಥವಾ “ಶಿಸ್ತು, ಶಿಕ್ಷೆ.”

ಅಥವಾ “ಪ್ರವಾದನಾತ್ಮಕ ದರ್ಶನ, ಪ್ರಕಟನೆ.”

ಅಥವಾ “ದೇವರ ನಿಯಮ.”

ಅಥವಾ “ಶಾಪ ತರೋ ಆಣೆ ಮಾಡಿಸಿದ್ರೂ.”

ಬಹುಶಃ, “ಅನುಗ್ರಹ ಪಡಿಯೋಕೆ.”

ಅಕ್ಷ. “ಎತ್ತಿದವರು.”

ಅಥವಾ “ಯಾರೂ ಪ್ರೀತಿಸದ.”

ಅಥವಾ “ಸ್ಥಾನವನ್ನ ಕಬಳಿಸೋದು.”

ಅಕ್ಷ. “ಸಮರ್ಥ.”

ಪದವಿವರಣೆ ನೋಡಿ.

ಅಕ್ಷ. “ಅವಳು ತನ್ನ ಸೊಂಟಕ್ಕೆ ಬಲ ಕಟ್ಟಿಕೊಳ್ತಾಳೆ.”

ನೂಲು ತಯಾರಿಸೋಕೆ, ಸುತ್ತೋಕೆ, ಹೆಣೆಯೋಕೆ ಬಳಸೋ ಕೋಲುಗಳೇ ಈ ಸೀಳುಗೋಲು ಮತ್ತು ಚರಕದ ಕಡ್ಡಿ.

ಅಕ್ಷ. “ದುಪ್ಪಟ್ಟು.”

ಅಥವಾ “ಭವಿಷ್ಯವನ್ನ ನಗನಗ್ತಾ ಭಯ ಇಲ್ಲದೆ ಸ್ವಾಗತಿಸ್ತಾಳೆ.”

ಅಕ್ಷ. “ಅವಳ ನಾಲಿಗೆಯಲ್ಲಿ ಶಾಶ್ವತ ಪ್ರೀತಿ ಕೂಡಿದ ನಿಯಮ ಇದೆ.”

ಅಕ್ಷ. “ಸಮರ್ಥ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ