ಆದಿಕಾಂಡ
1 ಆರಂಭದಲ್ಲಿ ದೇವರು ಆಕಾಶ,* ಭೂಮಿ ಸೃಷ್ಟಿ ಮಾಡಿದನು.+
2 ಭೂಮಿ ಖಾಲಿಯಾಗಿತ್ತು, ವಾಸಕ್ಕೆ ಯೋಗ್ಯವಾಗಿ ಇರಲಿಲ್ಲ. ಎಲ್ಲ ಕಡೆ ಆಳವಾದ ನೀರಿತ್ತು.*+ ಆ ನೀರಿನ ಮೇಲೆ ಕತ್ತಲೆ ಇತ್ತು. ದೇವರ ಪವಿತ್ರಶಕ್ತಿ*+ ನೀರಿನ ಮೇಲೆ ಆ ಕಡೆ ಈ ಕಡೆ ಓಡಾಡ್ತಿತ್ತು.+
3 ದೇವರು “ಬೆಳಕು ಬರಲಿ” ಅಂದಾಗ ಬೆಳಕು ಬಂತು.+ 4 ದೇವರು ಆ ಬೆಳಕನ್ನ ನೋಡಿದಾಗ ಅದು ಚೆನ್ನಾಗಿತ್ತು. ಆತನು ಬೆಳಕು ಮತ್ತು ಕತ್ತಲೆಯನ್ನ ಬೇರೆ ಬೇರೆ ಮಾಡೋಕೆ ಶುರುಮಾಡಿದನು. 5 ದೇವರು ಬೆಳಕಿಗೆ ಹಗಲು ಅಂತ, ಕತ್ತಲೆಗೆ ರಾತ್ರಿ ಅಂತ ಹೆಸರಿಟ್ಟನು.+ ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಮೊದಲನೇ ದಿನ.
6 ಆಮೇಲೆ ದೇವರು “ನೀರು ಎರಡು ಭಾಗ ಆಗ್ಲಿ. ಮೇಲೊಂದು ಭಾಗ, ಕೆಳಗೊಂದು ಭಾಗ ಆಗ್ಲಿ. ಮಧ್ಯದಲ್ಲಿ ವಿಸ್ತಾರ ಸ್ಥಳವಾಗಲಿ”*+ ಅಂದನು. 7 ಆಮೇಲೆ ದೇವರು ಕೆಳಗಿನ ನೀರನ್ನ, ಮೇಲಿನ ನೀರನ್ನ ಬೇರೆ ಬೇರೆ ಮಾಡಿ ಮಧ್ಯದಲ್ಲಿ ವಿಸ್ತಾರ ಸ್ಥಳ ಮಾಡೋಕೆ ಶುರುಮಾಡಿದನು.+ ಹಾಗೇ ಆಯ್ತು. 8 ದೇವರು ಆ ವಿಸ್ತಾರ ಸ್ಥಳಕ್ಕೆ ಆಕಾಶ ಅಂತ ಹೆಸರಿಟ್ಟನು. ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಎರಡನೇ ದಿನ.
9 ಆಮೇಲೆ ದೇವರು “ಆಕಾಶದ ಕೆಳಗಿರೋ ನೀರೆಲ್ಲಾ ಒಂದೇ ಸ್ಥಳದಲ್ಲಿ ಸೇರಲಿ, ಒಣ ನೆಲ ಕಾಣಲಿ” ಅಂದನು.+ ಹಾಗೇ ಆಯ್ತು. 10 ದೇವರು ಒಣನೆಲಕ್ಕೆ ಭೂಮಿ ಅಂತ ಹೆಸರಿಟ್ಟನು.+ ಒಂದೇ ಜಾಗದಲ್ಲಿ ಸೇರಿದ ನೀರಿಗೆ ಸಮುದ್ರ* ಅಂತ ಹೆಸರಿಟ್ಟನು.+ ದೇವರು ಅದನ್ನ ನೋಡಿದಾಗ ಅದು ಚೆನ್ನಾಗಿತ್ತು.+ 11 ಆಮೇಲೆ ದೇವರು “ಭೂಮೀಲಿ ಹುಲ್ಲು, ಗಿಡ, ಮರಗಳು ಎಲ್ಲ ಜಾತಿ ಪ್ರಕಾರ ಬೆಳೀಲಿ. ಗಿಡಗಳು ಬೀಜ ಬಿಡಲಿ, ಮರಗಳು ಬೀಜ ಇರೋ ಹಣ್ಣುಗಳನ್ನ ಕೊಡಲಿ” ಅಂದನು. ಹಾಗೇ ಆಯ್ತು. 12 ಭೂಮಿಯಲ್ಲಿ ಹುಲ್ಲು, ಬೀಜಬಿಡೋ ಗಿಡ,+ ಬೀಜ ಇರೋ ಹಣ್ಣುಗಳ ಮರ ಅವುಗಳ ಎಲ್ಲ ಜಾತಿಗಳು ಬೆಳೆದ್ವು. ದೇವರು ಅವನ್ನ ನೋಡಿದಾಗ ಅವು ಚೆನ್ನಾಗಿದ್ವು. 13 ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಮೂರನೇ ದಿನ.
14 ಆಮೇಲೆ ದೇವರು “ಹಗಲು ರಾತ್ರಿ ಮಧ್ಯ ವ್ಯತ್ಯಾಸ ತೋರಿಸೋಕೆ+ ವಿಶಾಲ ಆಕಾಶದಲ್ಲಿ ಬೆಳಕುಗಳು*+ ಕಾಣಿಸಲಿ. ಅವು ಕಾಲ ದಿನ ವರ್ಷಗಳನ್ನ ಗುರುತಿಸೋಕೆ ಸಹಾಯ ಮಾಡುತ್ತೆ.+ 15 ಆ ಬೆಳಕುಗಳು ವಿಶಾಲ ಆಕಾಶದಲ್ಲಿ ಹೊಳೀತಾ ಭೂಮಿ ಮೇಲೆ ಪ್ರಕಾಶ ಬೀರುತ್ತೆ” ಅಂದನು. ಹಾಗೇ ಆಯ್ತು. 16 ದೇವರು ಎರಡು ದೊಡ್ಡ ಬೆಳಕುಗಳನ್ನ ಮಾಡಿದನು. ಅವುಗಳಲ್ಲಿ ಒಂದು ಹಗಲಲ್ಲಿ ಹೆಚ್ಚು ಬೆಳಕು ಕೊಡೋ ಹಾಗೆ,*+ ಇನ್ನೊಂದು ರಾತ್ರಿಯಲ್ಲಿ ಕಡಿಮೆ ಬೆಳಕು ಕೊಡೋ ಹಾಗೆ* ಮಾಡಿದನು. ನಕ್ಷತ್ರಗಳನ್ನ ಸಹ ಮಾಡಿದನು.+ 17 ಭೂಮಿ ಮೇಲೆ ಬೆಳಕಿಗಾಗಿ ದೇವರು ಅವುಗಳನ್ನ ವಿಶಾಲ ಆಕಾಶದಲ್ಲಿ ಇಟ್ಟನು. 18 ಹಗಲಲ್ಲೂ ರಾತ್ರಿಯಲ್ಲೂ ಬೆಳಕು ಕೊಡೋಕೆ, ಬೆಳಕು ಕತ್ತಲೆ ಮಧ್ಯೆ ವ್ಯತ್ಯಾಸ ತೋರಿಸೋಕೆ ದೇವರು ಅವುಗಳನ್ನ ಆಕಾಶದಲ್ಲಿ ಇಟ್ಟನು.+ ದೇವರು ಅದನ್ನ ನೋಡಿದಾಗ ಅದು ಚೆನ್ನಾಗಿತ್ತು. 19 ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ನಾಲ್ಕನೇ ದಿನ.
20 ಆಮೇಲೆ ದೇವರು “ನೀರಲ್ಲಿ ಜೀವಿಗಳು ತುಂಬ್ಲಿ, ಹಾರೋ ಜೀವಿಗಳು* ವಿಶಾಲ ಆಕಾಶದಲ್ಲಿ ಹಾರಾಡ್ಲಿ”+ ಅಂದನು. 21 ಆಮೇಲೆ ದೇವರು ಸಮುದ್ರದಲ್ಲಿ ಜೀವಿಸೋ ತುಂಬ ದೊಡ್ಡ ಜೀವಿಗಳಲ್ಲಿ, ದೊಡ್ಡ ದೊಡ್ಡ ಗುಂಪಾಗಿ ಇರೋ ಚಿಕ್ಕ ಚಿಕ್ಕ ಜೀವಿಗಳಲ್ಲಿ ಎಲ್ಲ ಜಾತಿಗಳನ್ನ ಸೃಷ್ಟಿ ಮಾಡಿದನು. ರೆಕ್ಕೆಗಳಿಂದ ಹಾರಾಡೋ ಜೀವಿಯಲ್ಲಿ ಎಲ್ಲ ಜಾತಿಗಳನ್ನ ಸೃಷ್ಟಿ ಮಾಡಿದನು. ದೇವರು ನೋಡಿದಾಗ ಅದು ಚೆನ್ನಾಗಿತ್ತು. 22 ದೇವರು ಅವುಗಳಿಗೆ “ಸಂತಾನೋತ್ಪತ್ತಿ ಮಾಡಿ ಹೆಚ್ಚಿ, ಸಮುದ್ರದಲ್ಲಿ ತುಂಬ್ಕೊಳಿ.+ ಹಾರಾಡೋ ಜೀವಿಗಳು ಭೂಮೀಲಿ ಹೆಚ್ಚಲಿ” ಅಂತ ಆಶೀರ್ವದಿಸಿದನು. 23 ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಐದನೇ ದಿನ.
24 ಆಮೇಲೆ ದೇವರು “ಭೂಮಿ ಮೇಲೆ ಎಲ್ಲ ಜಾತಿಯ ಜೀವಿಗಳು ಆಗ್ಲಿ. ಸಾಕುಪ್ರಾಣಿ, ಹರಿದಾಡೋ ಪ್ರಾಣಿ,* ಕಾಡುಪ್ರಾಣಿಗಳಲ್ಲಿ ಎಲ್ಲ ಜಾತಿಗಳು ಆಗ್ಲಿ”+ ಅಂದನು. ಹಾಗೇ ಆಯ್ತು. 25 ದೇವರು ಎಲ್ಲ ಜಾತಿಯ ಕಾಡುಪ್ರಾಣಿಗಳನ್ನ, ಎಲ್ಲ ಜಾತಿಯ ಸಾಕುಪ್ರಾಣಿಗಳನ್ನ, ನೆಲದ ಮೇಲೆ ಹರಿದಾಡೋ ಪ್ರಾಣಿಗಳಲ್ಲಿ ಎಲ್ಲ ಜಾತಿಗಳನ್ನ ಮಾಡಿದನು. ದೇವರು ನೋಡಿದಾಗ ಅದು ಚೆನ್ನಾಗಿತ್ತು.
26 ಆಮೇಲೆ ದೇವರು “ನಮ್ಮನ್ನ ಹೋಲುವಂಥ,+ ನಮ್ಮ ಹಾಗೆ ಇರೋ ಮನುಷ್ಯನನ್ನ+ ಮಾಡೋಣ.+ ಸಮುದ್ರದಲ್ಲಿರೋ ಮೀನುಗಳು, ಆಕಾಶದಲ್ಲಿ ಹಾರೋ ಜೀವಿಗಳು, ಸಾಕುಪ್ರಾಣಿಗಳು, ಭೂಮಿಯಲ್ಲಿ ಹರಿದಾಡೋ ಎಲ್ಲ ಪ್ರಾಣಿಗಳು ಹೀಗೆ ಇಡೀ ಭೂಮಿ ಅವರ ಅಧಿಕಾರದ ಕೆಳಗಿರಲಿ”+ ಅಂದನು. 27 ದೇವರು ತನ್ನನ್ನ ಹೋಲೋ ಮನುಷ್ಯನನ್ನ ಸೃಷ್ಟಿ ಮಾಡಿದನು. ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದನು.+ 28 ದೇವರು ಅವರನ್ನ ಆಶೀರ್ವದಿಸ್ತಾ “ನೀವು ತುಂಬ ಮಕ್ಕಳನ್ನ ಪಡೆದು ಜಾಸ್ತಿ ಜನ ಆಗಿ ಇಡೀ ಭೂಮಿ ತುಂಬ್ಕೊಳಿ.+ ಅದು ನಿಮ್ಮ ಅಧಿಕಾರದ ಕೆಳಗಿರಲಿ.+ ಸಮುದ್ರದ ಮೀನುಗಳು, ಆಕಾಶದಲ್ಲಿ ಹಾರೋ ಜೀವಿಗಳು, ಭೂಮಿ ಮೇಲೆ ಚಲಿಸೋ ಎಲ್ಲ ಜೀವಿಗಳು ನಿಮ್ಮ ಕೈಕೆಳಗಿರಲಿ”+ ಅಂದನು.
29 ಆಮೇಲೆ ದೇವರು “ಬೀಜಬಿಡೋ ಗಿಡಗಳನ್ನ, ಬೀಜ ಇರೋ ಹಣ್ಣುಗಳನ್ನ ಕೊಡೋ ಮರಗಳನ್ನ ನಿಮಗೆ ಇಡೀ ಭೂಮೀಲಿ ಆಹಾರಕ್ಕಾಗಿ ಕೊಟ್ಟಿದ್ದೀನಿ.+ 30 ಭೂಮಿಯಲ್ಲಿರೋ ಎಲ್ಲ ಕಾಡುಪ್ರಾಣಿಗಳಿಗೆ, ಜೀವ ಇರೋ ಬೇರೆಲ್ಲ ಪ್ರಾಣಿಗಳಿಗೆ, ಆಕಾಶದಲ್ಲಿ ಹಾರಾಡೋ ಎಲ್ಲ ಜೀವಿಗಳಿಗೆ ಊಟಕ್ಕಾಗಿ ಸೊಪ್ಪುಸೆದೆ ಕೊಟ್ಟಿದ್ದೀನಿ”+ ಅಂದನು. ಹಾಗೇ ಆಯ್ತು.
31 ಆಮೇಲೆ ದೇವರು ತಾನು ಮಾಡಿದ್ದೆಲ್ಲವನ್ನ ನೋಡಿದಾಗ, ಆಹಾ! ಅದು ತುಂಬ ಚೆನ್ನಾಗಿತ್ತು.+ ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಆರನೇ ದಿನ.
2 ಈ ರೀತಿ ಆಕಾಶ,* ಭೂಮಿ, ಅವುಗಳಲ್ಲಿ ಇರೋ ಎಲ್ಲವನ್ನ ಸೃಷ್ಟಿಸೋ ಕೆಲಸ ಮುಗಿತು.+ 2 ಏಳನೇ ದಿನ ಆರಂಭವಾಗೋ ಮೊದ್ಲು ದೇವರು ತಾನು ಮಾಡ್ತಿದ್ದ ಕೆಲಸ ಮುಗಿಸಿದನು. ಎಲ್ಲ ಕೆಲಸ ಮುಗಿಸಿ ಏಳನೇ ದಿನ ವಿಶ್ರಾಂತಿ ಪಡಿಯೋಕೆ ಶುರು ಮಾಡಿದನು.+ 3 ದೇವರು ಏಳನೇ ದಿನವನ್ನ ಆಶೀರ್ವದಿಸ್ತಾ ಅದು ಪವಿತ್ರ ಅಂದನು. ಯಾಕಂದ್ರೆ ದೇವರು ತಾನು ಮಾಡಬೇಕಂತ ಇದ್ದ ಎಲ್ಲವನ್ನ ಸೃಷ್ಟಿ ಮಾಡಿ ಅವತ್ತಿಂದ ವಿಶ್ರಾಂತಿ ಮಾಡ್ತಾ ಇದ್ದಾನೆ.
4 ಹೀಗೆ ಭೂಮಿ ಆಕಾಶ ಸೃಷ್ಟಿ ಆಯ್ತು. ಆ ದಿನ* ಯೆಹೋವ* ದೇವರು ಭೂಮಿ ಆಕಾಶವನ್ನ ಸೃಷ್ಟಿ ಮಾಡಿದನು.+
5 ಅಲ್ಲಿ ತನಕ ಭೂಮಿ ಮೇಲೆ ಪೊದೆ ಗಿಡಗಳು ಇರಲಿಲ್ಲ. ಯಾಕಂದ್ರೆ ಯೆಹೋವ ದೇವರು ಭೂಮಿ ಮೇಲೆ ಮಳೆ ಬೀಳೋ ಹಾಗೆ ಮಾಡಿರಲಿಲ್ಲ. ಭೂಮಿಯಲ್ಲಿ ವ್ಯವಸಾಯ ಮಾಡೋಕೆ ಮನುಷ್ಯನೂ ಇರಲಿಲ್ಲ. 6 ಆದ್ರೆ ಭೂಮಿಯಿಂದ ನೀರು ಆವಿಯಾಗಿ ಹೋಗಿ ಆಮೇಲೆ ಇಡೀ ನೆಲನ ಒದ್ದೆ ಮಾಡ್ತಿತ್ತು.
7 ಆಮೇಲೆ ಯೆಹೋವ ದೇವರು ನೆಲದ ಮಣ್ಣಿಂದ*+ ಮನುಷ್ಯನನ್ನ ರಚಿಸಿ ಅವನ ಮೂಗೊಳಗೆ ಜೀವಶ್ವಾಸ ಊದಿದನು.+ ಆಗ ಆ ಮನುಷ್ಯನಿಗೆ ಜೀವ ಬಂತು.*+ 8 ಯೆಹೋವ ದೇವರು ಪೂರ್ವ ದಿಕ್ಕಲ್ಲಿರೋ ಏದೆನಿನಲ್ಲಿ+ ಒಂದು ತೋಟ ಮಾಡಿ ಆ ಮನುಷ್ಯನನ್ನ ಅಲ್ಲಿ ಇರೋಕೆ ಬಿಟ್ಟನು.+ 9 ಆ ತೋಟದಲ್ಲಿ ನೋಡೋಕೆ ಸುಂದರವಾದ, ತಿನ್ನೋಕೆ ಒಳ್ಳೊಳ್ಳೆ ಹಣ್ಣು ಕೊಡೋ ಎಲ್ಲ ಮರಗಳನ್ನ ಬೆಳೆಯೋ ಹಾಗೆ ಯೆಹೋವ ದೇವರು ಮಾಡಿದನು. ಅಷ್ಟೇ ಅಲ್ಲ ತೋಟದ ಮಧ್ಯದಲ್ಲಿ ಜೀವದ ಮರ*+ ಮತ್ತು ಒಳ್ಳೇದರ ಕೆಟ್ಟದ್ದರ ತಿಳುವಳಿಕೆ ಕೊಡೋ ಮರ*+ ಬೆಳೆಯೋ ಹಾಗೆ ಮಾಡಿದನು.
10 ಏದೆನಿಂದ ಒಂದು ನದಿ ಹರಿತಿತ್ತು. ಅದ್ರಿಂದ ಆ ತೋಟಕ್ಕೆ ನೀರು ಸಿಗ್ತಿತ್ತು. ಆ ನದಿ ಕವಲೊಡೆದು ನಾಲ್ಕು ನದಿಗಳಾಗಿ ಹರಿತು. 11 ಮೊದಲನೇ ನದಿ ಹೆಸರು ಪೀಶೋನ್. ಇದು ಚಿನ್ನ ಸಿಗೋ ಹವೀಲಾ ದೇಶದ ಸುತ್ತ ಹರಿಯುತ್ತೆ. 12 ಆ ದೇಶದಲ್ಲಿ ಸಿಗೋ ಚಿನ್ನ ಶುದ್ಧ. ಅಲ್ಲಿ ಸುಗಂಧ ಅಂಟು, ಗೋಮೇದಕ ರತ್ನನೂ ಸಿಗುತ್ತೆ. 13 ಎರಡನೇ ನದಿ ಹೆಸರು ಗೀಹೋನ್. ಇದು ಕೂಷ್ ದೇಶದ ಸುತ್ತ ಹರಿಯುತ್ತೆ. 14 ಮೂರನೇ ನದಿ ಹೆಸರು ಹಿದ್ದೆಕೆಲ್.*+ ಇದು ಅಶ್ಶೂರ್+ ದೇಶದ ಪೂರ್ವಕ್ಕೆ ಹರಿಯುತ್ತೆ. ನಾಲ್ಕನೇ ನದಿ ಹೆಸರು ಯೂಫ್ರೆಟಿಸ್.+
15 ಯೆಹೋವ ದೇವರು ಮನುಷ್ಯನನ್ನ ಏದೆನ್ ತೋಟಕ್ಕೆ ಕರ್ಕೊಂಡು ಹೋದನು. ವ್ಯವಸಾಯ ಮಾಡೋಕೆ, ಅದನ್ನ ನೋಡ್ಕೊಳ್ಳೋಕೆ ಅವನನ್ನ ಅಲ್ಲಿ ಬಿಟ್ಟನು.+ 16 ಅಷ್ಟೇ ಅಲ್ಲ ಯೆಹೋವ ದೇವರು ಅವನಿಗೆ ಈ ಆಜ್ಞೆ ಕೊಟ್ಟನು: “ನೀನು ಈ ತೋಟದಲ್ಲಿರೋ ಎಲ್ಲ ಮರದ ಹಣ್ಣನ್ನ ಹೊಟ್ಟೆ ತುಂಬ ತಿನ್ನಬಹುದು.+ 17 ಆದ್ರೆ ಒಳ್ಳೇದರ ಕೆಟ್ಟದ್ದರ ತಿಳುವಳಿಕೆ ಕೊಡೋ ಮರದ ಹಣ್ಣನ್ನ ಮಾತ್ರ ತಿನ್ನಬಾರದು. ತಿಂದ್ರೆ ಅದೇ ದಿನ ಸತ್ತು ಹೋಗ್ತಿಯ.”+
18 ಆಮೇಲೆ ಯೆಹೋವ ದೇವರು “ಮನುಷ್ಯ ಒಬ್ಬನೇ ಇರೋದು ಒಳ್ಳೇದಲ್ಲ. ಅವನಿಗೆ ಸರಿಯಾದ ಜೋಡಿ ಕೊಡ್ತೀನಿ. ಅವನಿಗಾಗಿ ಒಬ್ಬ ಸಹಾಯಕಿಯನ್ನ ಮಾಡ್ತೀನಿ”+ ಅಂದನು. 19 ಯೆಹೋವ ದೇವರು ಮಣ್ಣಿಂದ ಎಲ್ಲ ಕಾಡುಪ್ರಾಣಿ, ಆಕಾಶದಲ್ಲಿ ಹಾರಾಡೋ ಎಲ್ಲ ಜೀವಿಗಳನ್ನ* ರೂಪಿಸ್ತಿದ್ದ. ಆಮೇಲೆ ಅವುಗಳನ್ನ ಅವನ ಹತ್ರ ತಂದು ಅವನು ಪ್ರತಿಯೊಂದಕ್ಕೆ ಏನೇನು ಹೆಸರಿಡ್ತಾನೆ ಅಂತ ನೋಡಿದನು. ಅವನು ಒಂದೊಂದು ಪ್ರಾಣಿಗೆ ಏನು ಹೆಸರಿಟ್ನೋ ಅದೇ ಅದ್ರ ಹೆಸರಾಯ್ತು.+ 20 ಹೀಗೆ ಅವನು ಎಲ್ಲ ಸಾಕುಪ್ರಾಣಿಗೆ, ಆಕಾಶದಲ್ಲಿ ಹಾರಾಡೋ ಎಲ್ಲ ಜೀವಿಗೆ, ಪ್ರತಿಯೊಂದು ಕಾಡುಪ್ರಾಣಿಗೆ ಹೆಸರಿಟ್ಟ. ಆದ್ರೆ ಅವನಿಗೆ ಸಹಾಯ ಮಾಡೋಕೆ ಸರಿಯಾದ ಜೋಡಿ* ಇರಲಿಲ್ಲ. 21 ಹಾಗಾಗಿ ಯೆಹೋವ ದೇವರು ಅವನಿಗೆ ಗಾಢ ನಿದ್ದೆ ಬರಿಸಿದ. ಅವನು ನಿದ್ದೆ ಮಾಡ್ತಿದ್ದಾಗ ಅವನ ಪಕ್ಕೆ ಎಲುಬುಗಳಲ್ಲಿ ಒಂದನ್ನ ತೆಗೆದು ಆ ಜಾಗವನ್ನ ಮಾಂಸದಿಂದ ಮುಚ್ಚಿದನು. 22 ಆಮೇಲೆ ಯೆಹೋವ ದೇವರು ಆ ಮನುಷ್ಯನಿಂದ ತೆಗೆದ ಪಕ್ಕೆಲುಬನ್ನ ಸ್ತ್ರೀಯಾಗಿ ರೂಪಿಸಿದನು. ಅವಳನ್ನ ಅವನ ಹತ್ರ ಕರ್ಕೊಂಡು ಬಂದನು.+
23 ಆಗ ಅವನು ಹೀಗೆ ಹೇಳಿದ:
“ಇವಳೀಗ ನನ್ನ ಎಲುಬುಗಳಿಂದ ಬಂದ ಎಲುಬು,
ನನ್ನ ಮಾಂಸದಿಂದ ಬಂದ ಮಾಂಸ ಆಗಿದ್ದಾಳೆ.
ಇವಳು ನರನಿಂದ ಬಂದಿರೋದ್ರಿಂದ
ಇವಳನ್ನ ನಾರೀ ಅಂತ ಕರಿತಾರೆ.”+
24 ಹಾಗಾಗಿ ಪುರುಷ ತನ್ನ ಅಪ್ಪಅಮ್ಮನನ್ನ ಬಿಟ್ಟು ಹೆಂಡತಿ ಜೊತೆ ಇರ್ತಾನೆ.* ಅವರಿಬ್ರು ಒಂದೇ ದೇಹ ಆಗ್ತಾರೆ.+ 25 ಆ ಪುರುಷ ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ರೂ+ ನಾಚಿಕೆಪಡಲಿಲ್ಲ.
3 ಯೆಹೋವ ದೇವರು ಮಾಡಿದ ಎಲ್ಲ ಕಾಡುಪ್ರಾಣಿಗಳಲ್ಲಿ ಹಾವು+ ತುಂಬ ಬುದ್ಧಿವಂತ* ಜೀವಿ ಆಗಿತ್ತು. ಅದು ಸ್ತ್ರೀಗೆ “ತೋಟದಲ್ಲಿರೋ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದು ಅಂತ ದೇವರು ಹೇಳಿರೋದು ನಿಜನಾ?” ಅಂತ ಕೇಳ್ತು.+ 2 ಆಗ ಸ್ತ್ರೀ ಹಾವಿಗೆ “ತೋಟದಲ್ಲಿರೋ ಮರಗಳ ಹಣ್ಣುಗಳನ್ನ ನಾವು ತಿನ್ನಬಹುದು.+ 3 ಆದ್ರೆ ತೋಟದ ಮಧ್ಯದಲ್ಲಿರೋ ಮರದ ಹಣ್ಣಿನ+ ಬಗ್ಗೆ ‘ನೀವು ಅದನ್ನ ತಿನ್ನಬಾರದು, ಮುಟ್ಟಬಾರದು, ತಿಂದ್ರೆ ಸಾಯ್ತೀರ’ ಅಂತ ದೇವರು ಹೇಳಿದ್ದಾನೆ” ಅಂದಳು. 4 ಆಗ ಹಾವು “ನೀವು ಖಂಡಿತ ಸಾಯಲ್ಲ.+ 5 ನೀವು ಆ ಹಣ್ಣನ್ನ ತಿಂದ ದಿನಾನೇ ನಿಮ್ಮ ಕಣ್ಣು ತೆರಿಯುತ್ತೆ. ನೀವು ದೇವರ ತರ ಆಗಿ ಯಾವುದು ಒಳ್ಳೇದು ಯಾವುದು ಕೆಟ್ಟದು ಅಂತ ತಿಳ್ಕೊಳ್ತೀರ.+ ಈ ವಿಷ್ಯ ದೇವರಿಗೆ ಚೆನ್ನಾಗಿ ಗೊತ್ತು” ಅಂತ ಹೇಳ್ತು.
6 ಆಗ ಸ್ತ್ರೀ ಆ ಮರದ ಹಣ್ಣು ನೋಡಿದಳು. ಆಗ ಅವಳಿಗೆ ಆ ಹಣ್ಣು ತಿನ್ನೋಕೆ ಚೆನ್ನಾಗಿದೆ ಅಂತನಿಸ್ತು. ಅದು ಅವಳ ಕಣ್ಣಿಗೆ ಆಕರ್ಷಕವಾಗಿ, ಸುಂದರವಾಗಿ ಕಾಣಿಸ್ತು. ಹಾಗಾಗಿ ಅವಳು ಆ ಮರದ ಹಣ್ಣು ಕಿತ್ತು ತಿಂದಳು.+ ಗಂಡ ಬಂದ ಮೇಲೆ ಅವನಿಗೂ ಕೊಟ್ಟಳು. ಅವನೂ ತಿಂದ.+ 7 ಆಗ ಅವರಿಬ್ರ ಕಣ್ಣು ತೆರಿತು, ತಾವು ಬೆತ್ತಲೆಯಾಗಿ ಇದ್ದೀವಿ ಅಂತ ಅವರಿಗೆ ಗೊತ್ತಾಯ್ತು. ಅದಕ್ಕೇ ಅವರು ಅಂಜೂರದ ಎಲೆಗಳನ್ನ ಹೊಲಿದು ಸೊಂಟಕ್ಕೆ ಕಟ್ಕೊಂಡ್ರು.+
8 ಆ ದಿನ ಸಂಜೆ ತಂಗಾಳಿ ಬೀಸೋ ಸಮಯದಲ್ಲಿ ಯೆಹೋವ ದೇವರು ತೋಟದಲ್ಲಿ ನಡಿತಿದ್ದಾಗ ಆತನ ಸ್ವರವನ್ನ ಆ ಪುರುಷ ಮತ್ತು ಅವನ ಹೆಂಡತಿ ಕೇಳಿಸ್ಕೊಂಡ್ರು. ಆಗ ಅವರು ತಾವು ಯೆಹೋವ ದೇವರ ಕಣ್ಣಿಗೆ ಬೀಳಬಾರದು ಅಂತ ತೋಟದ ಮರಗಳ ಮಧ್ಯ ಬಚ್ಚಿಟ್ಕೊಂಡ್ರು. 9 ಯೆಹೋವ ದೇವರು ಆ ಪುರುಷನಿಗೆ “ಎಲ್ಲಿದ್ದೀಯಾ ನೀನು?” ಅಂತ ಕರಿತಾ ಇದ್ದನು. 10 ಕೊನೆಗೆ ಅವನು “ತೋಟದಲ್ಲಿ ನಿನ್ನ ಸ್ವರ ನನಗೆ ಕೇಳಿಸ್ತು. ಆದ್ರೆ ನಾನು ಬೆತ್ತಲೆಯಾಗಿ ಇರೋದ್ರಿಂದ ಹೆದರಿ ಬಚ್ಚಿಟ್ಕೊಂಡೆ” ಅಂದ. 11 ಅದಕ್ಕೆ ದೇವರು “ನೀನು ಬೆತ್ತಲೆಯಾಗಿ+ ಇದ್ದೀಯ ಅಂತ ಯಾರು ಹೇಳಿದ್ರು? ತಿನ್ನಬಾರದು ಅಂತ ಹೇಳಿದ ಆ ಮರದ ಹಣ್ಣು ತಿಂದ್ಯಾ?”+ ಅಂತ ಕೇಳಿದನು. 12 ಆಗ ಅವನು “ನನ್ನ ಜೊತೆ ಇರೋಕೆ ನೀನು ಕೊಟ್ಟ ಸ್ತ್ರೀ ಆ ಮರದ ಹಣ್ಣನ್ನ ನನಗೆ ಕೊಟ್ಟಳು. ನಾನು ತಿಂದೆ” ಅಂದ. 13 ಆಮೇಲೆ ಯೆಹೋವ ದೇವರು ಆ ಸ್ತ್ರೀಗೆ “ನೀನ್ಯಾಕೆ ಹಾಗೆ ಮಾಡ್ದೆ?” ಅಂದಾಗ ಅವಳು “ಹಾವು ನನಗೆ ಮೋಸ ಮಾಡ್ತು. ಹಾಗಾಗಿ ನಾನು ತಿಂದೆ” ಅಂದಳು.+
14 ಆಮೇಲೆ ಯೆಹೋವ ದೇವರು ಹಾವಿಗೆ+ “ನೀನು ಹೀಗೆ ಮಾಡಿದ್ರಿಂದ ಎಲ್ಲ ಸಾಕುಪ್ರಾಣಿ, ಕಾಡುಪ್ರಾಣಿಗಳಲ್ಲಿ ನಿನಗೆ ಮಾತ್ರ ಶಾಪ ಬಂದಿದೆ. ಹೊಟ್ಟೆಯಿಂದ ಹರಿದಾಡ್ತಾ ಜೀವನಪೂರ್ತಿ ನೀನು ಧೂಳನ್ನೇ ತಿಂತೀಯ. 15 ನಿನ್ನ+ ಮತ್ತು ಸ್ತ್ರೀಯ+ ಮಧ್ಯ, ನಿನ್ನ ಸಂತಾನ+ ಮತ್ತು ಸ್ತ್ರೀಯ ಸಂತಾನದ+ ಮಧ್ಯ ದ್ವೇಷ*+ ಇರೋ ಹಾಗೆ ಮಾಡ್ತೀನಿ. ಅವನು ನಿನ್ನ ತಲೆ ಜಜ್ಜುತ್ತಾನೆ,+ ನೀನು ಅವನ ಹಿಮ್ಮಡಿಗೆ ಗಾಯ ಮಾಡ್ತಿಯ”+ ಅಂದನು.
16 ದೇವರು ಸ್ತ್ರೀಗೆ “ನೀನು ಗರ್ಭಿಣಿ ಆದಾಗ ತುಂಬ ನೋವಿರೋ ಹಾಗೆ ಮಾಡ್ತೀನಿ. ನೋವಲ್ಲೇ ನಿನಗೆ ಮಕ್ಕಳು ಆಗುತ್ತೆ. ನೀನು ನಿನ್ನ ಗಂಡನಿಗಾಗಿ ಹಂಬಲಿಸ್ತಿಯ. ಅವನು ನಿನ್ನ ಮೇಲೆ ಅಧಿಕಾರ ಚಲಾಯಿಸ್ತಾನೆ” ಅಂದನು.
17 ಆಮೇಲೆ ದೇವರು ಆದಾಮನಿಗೆ* “ನೀನು ಹೆಂಡತಿ ಮಾತು ಕೇಳಿ ‘ತಿನ್ನಬಾರದು’ ಅಂತ ನಾನು ಹೇಳಿದ ಮರದ ಹಣ್ಣನ್ನ ತಿಂದೆ.+ ಹಾಗಾಗಿ ನಿನ್ನಿಂದಾಗಿ ಭೂಮಿಗೆ ಶಾಪ ಬಂದಿದೆ.+ ನೀನು ಜೀವನಪೂರ್ತಿ ಆಹಾರಕ್ಕಾಗಿ ತುಂಬ ಕಷ್ಟಪಟ್ಟು ದುಡಿದು ಬೆಳೆ ಬೆಳೆಸಬೇಕು.+ 18 ನೆಲದಲ್ಲಿ ಮುಳ್ಳುಗಿಡ ಕಳೆ ಬೆಳೆಯುತ್ತೆ. ಹೊಲದಲ್ಲಿ ಬೆಳೆಯೋದನ್ನ ನೀನು ತಿನ್ನಬೇಕು. 19 ಹೊಟ್ಟೆಪಾಡಿಗಾಗಿ ಇಡೀ ಜೀವನ ಬೆವರು ಸುರಿಸಿ ದುಡಿಬೇಕು. ಕೊನೆಗೆ ನೀನು ಮಣ್ಣಿಗೆ ಹೋಗ್ತಿಯ.+ ಯಾಕಂದ್ರೆ ನಿನ್ನನ್ನ ಮಾಡಿದ್ದು ಮಣ್ಣಿಂದಾನೇ. ನೀನು ಮಣ್ಣೇ, ಮತ್ತೆ ಮಣ್ಣಿಗೇ ಹೋಗ್ತಿಯ” ಅಂದನು.+
20 ಆಮೇಲೆ ಆದಾಮ ತನ್ನ ಹೆಂಡತಿಗೆ ಹವ್ವ* ಅಂತ ಹೆಸರಿಟ್ಟ. ಯಾಕಂದ್ರೆ ಆಕೆ ಜೀವಿಸೋ ಎಲ್ರಿಗೆ ತಾಯಿ ಆಗ್ತಾಳೆ.+ 21 ಯೆಹೋವ ದೇವರು ಆದಾಮನಿಗೆ, ಅವನ ಹೆಂಡತಿಗೆ ಚರ್ಮದಿಂದ ಉದ್ದ ಬಟ್ಟೆಗಳನ್ನ ಮಾಡ್ಕೊಟ್ಟನು.+ 22 ಆಮೇಲೆ ಯೆಹೋವ ದೇವರು “ಈ ಮನುಷ್ಯ ಯಾವುದು ಒಳ್ಳೇದು, ಯಾವುದು ಕೆಟ್ಟದು ಅಂತ ತಿಳ್ಕೊಂಡು+ ನಮ್ಮಲ್ಲಿ ಒಬ್ಬನ ತರ ಆಗಿದ್ದಾನೆ. ಅವನು ಕೈಚಾಚಿ ಜೀವದ ಮರದ+ ಹಣ್ಣನ್ನ ಸಹ ಕಿತ್ತು ತಿಂದು ಶಾಶ್ವತವಾಗಿ ಜೀವಿಸೋ ತರ ಆಗಬಾರದು” ಅಂದನು. 23 ಹಾಗಾಗಿ ಯೆಹೋವ ದೇವರು ಆ ಮನುಷ್ಯನನ್ನ ಏದೆನ್ ತೋಟದಿಂದ+ ಹೊರಗೆ ಹಾಕಿದನು. ಮಣ್ಣಿಂದ ಮಾಡಿದ್ದ ಅವನನ್ನ ಮಣ್ಣಲ್ಲಿ ವ್ಯವಸಾಯ ಮಾಡೋಕೆ ಹೊರಗೆ ಕಳಿಸಿದನು.+ 24 ದೇವರು ಅವನನ್ನ ತೋಟದಿಂದ ಕಳಿಸಿದ ಮೇಲೆ ಜೀವದ ಮರಕ್ಕೆ ಹೋಗೋ ದಾರಿ ಕಾಯೋಕೆ ಏದೆನ್ ತೋಟದ ಪೂರ್ವಕ್ಕೆ ಕೆರೂಬಿಯರನ್ನ*+ ಮತ್ತು ಧಗಧಗನೆ ಉರೀತಾ, ಯಾವಾಗ್ಲೂ ಸುತ್ತೋ ಕತ್ತಿ ಇಟ್ಟನು.
4 ಆದಾಮ ತನ್ನ ಹೆಂಡತಿ ಹವ್ವಳ ಜೊತೆ ಸಂಬಂಧ ಇಟ್ಟಿದ್ರಿಂದ ಅವಳು ಗರ್ಭಿಣಿಯಾದಳು.+ ಅವಳಿಗೆ ಕಾಯಿನ+ ಹುಟ್ಟಿದ. ಆಗ “ಯೆಹೋವನ ಆಶೀರ್ವಾದದಿಂದ ನನಗೆ ಗಂಡುಮಗು ಆಗಿದೆ” ಅಂದಳು. 2 ಆಮೇಲೆ ಅವಳಿಗೆ ಇನ್ನೊಂದು ಮಗು ಆಯ್ತು. ಅವನೇ ಕಾಯಿನನ ತಮ್ಮ ಹೇಬೆಲ.+
ಹೇಬೆಲ ದೊಡ್ಡವನಾದ ಮೇಲೆ ಕುರುಬನಾದ. ಕಾಯಿನ ವ್ಯವಸಾಯ ಮಾಡಿದ. 3 ಸ್ವಲ್ಪ ಸಮಯ ಆದ್ಮೇಲೆ ಕಾಯಿನ ಹೊಲದ ಬೆಳೆಯಲ್ಲಿ ಸ್ವಲ್ಪ ತಂದು ಯೆಹೋವನಿಗೆ ಅರ್ಪಿಸಿದ. 4 ಆದ್ರೆ ಹೇಬೆಲ ತನ್ನ ಕುರಿಗಳಿಗೆ ಹುಟ್ಟಿದ ಮೊದಲ ಮರಿಗಳಲ್ಲಿ+ ಕೆಲವನ್ನ ತಂದು ಕೊಬ್ಬಿನ ಸಮೇತ ಅರ್ಪಿಸಿದ. ಯೆಹೋವ ಹೇಬೆಲನನ್ನ ಅವನ ಅರ್ಪಣೆಯನ್ನ ಇಷ್ಟಪಟ್ಟನು.+ 5 ಆದ್ರೆ ಕಾಯಿನನನ್ನ ಅವನ ಅರ್ಪಣೆಯನ್ನ ಸ್ವಲ್ಪನೂ ಇಷ್ಟಪಡಲಿಲ್ಲ. ಹಾಗಾಗಿ ಕಾಯಿನನ ಕೋಪ ನೆತ್ತಿಗೇರಿತು, ಅವನ ಮುಖ ಬಾಡಿಹೋಯ್ತು. 6 ಆಗ ಯೆಹೋವ ಕಾಯಿನನಿಗೆ “ಯಾಕಿಷ್ಟು ಕೋಪ? ಯಾಕೆ ನಿನ್ನ ಮುಖ ಬಾಡಿಹೋಗಿದೆ? 7 ಕೆಟ್ಟ ಯೋಚ್ನೆ ಬಿಟ್ಟು ಒಳ್ಳೇದು ಮಾಡಿದ್ರೆ ನಾನು ನಿನ್ನನ್ನ ಇಷ್ಟಪಡ್ತೀನಿ. ಇಲ್ಲದಿದ್ರೆ ಪಾಪ ನಿನ್ನನ್ನ ಹಿಡಿಯೋಕೆ* ಬಾಗಿಲಲ್ಲಿ ಹೊಂಚು ಹಾಕ್ತಾ ಇದೆ. ಅದು ನಿನ್ನನ್ನ ಸೋಲಿಸದ ಹಾಗೆ ನೀನು ಪಾಪದ ಮೇಲೆ ಜಯ ಸಾಧಿಸಬೇಕು” ಅಂದನು.
8 ಇದಾದ ಮೇಲೆ ಕಾಯಿನ ಹೇಬೆಲನಿಗೆ “ಕಾಡಿಗೆ ಹೋಗೋಣ ಬಾ” ಅಂತ ಕರೆದ. ಇಬ್ರೂ ಬಯಲಲ್ಲಿ ಇದ್ದಾಗ ಕಾಯಿನ ಹೇಬೆಲನ ಮೇಲೆ ಬಿದ್ದು ಅವನನ್ನ ಹೊಡೆದು ಕೊಂದ.+ 9 ಆಮೇಲೆ ಯೆಹೋವ ಕಾಯಿನನಿಗೆ “ನಿನ್ನ ತಮ್ಮ ಹೇಬೆಲ ಎಲ್ಲಿ?” ಅಂತ ಕೇಳಿದನು. ಅದಕ್ಕವನು “ನಂಗೇನು ಗೊತ್ತು? ನಾನೇನು ನನ್ನ ತಮ್ಮನನ್ನ ಕಾಯೋನಾ?” ಅಂದ. 10 ಆಗ ಆತನು “ಎಂಥ ಕೆಲಸ ಮಾಡ್ದೆ? ಕೇಳಿಸ್ಕೊ, ನಿನ್ನ ತಮ್ಮನ ರಕ್ತ ನೆಲದಿಂದ ನ್ಯಾಯಕ್ಕಾಗಿ ನನ್ನನ್ನ ಕೂಗ್ತಿದೆ.+ 11 ಈ ನೆಲದಲ್ಲಿ ನೀನು ನಿನ್ನ ತಮ್ಮನ ರಕ್ತನ ಸುರಿಸಿದ್ರಿಂದ ನೀನು ಇಲ್ಲಿ ಇರಬಾರದು, ಇಲ್ಲಿಂದ ಹೋಗಿಬಿಡು. ಇದು ನಾನು ನಿನಗೆ ಕೊಡೋ ಶಾಪ.+ 12 ನೀನು ವ್ಯವಸಾಯ ಮಾಡೋವಾಗ ನೆಲ ನಿನಗೆ ಬೆಳೆ ಕೊಡಲ್ಲ. ನೀನು ಭೂಮೀಲಿ ಅಲೆಮಾರಿಯಾಗಿ ಇರ್ತಿಯ, ತಲೆತಪ್ಪಿಸ್ಕೊಂಡು ಅಲ್ಲಲ್ಲಿ ತಿರುಗಾಡ್ತಿಯ” ಅಂದನು. 13 ಅದಕ್ಕೆ ಕಾಯಿನ ಯೆಹೋವನಿಗೆ “ನನ್ನ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ ಕೊಟ್ಟಿದ್ದಿಯಲ್ಲಾ. ನನಗೆ ಇದನ್ನ ಸಹಿಸೋಕೆ ಆಗಲ್ಲ. 14 ಇವತ್ತು ನೀನು ನನ್ನನ್ನ ಈ ಜಾಗದಿಂದ ಹೊರಗೆ ಹಾಕ್ತಾ ಇದ್ದೀಯ, ನಿನ್ನ ಕಣ್ಣೆದುರಿಂದ ನನ್ನನ್ನ ಓಡಿಸ್ತಾ ಇದ್ದೀಯ. ನಾನು ತಲೆತಪ್ಪಿಸ್ಕೊಂಡು ಭೂಮೀಲಿ ಅಲೆಮಾರಿಯಾಗಿ ಅಲ್ಲಲ್ಲಿ ತಿರುಗಾಡಬೇಕಾಗುತ್ತೆ. ಯಾರಾದ್ರೂ ನನ್ನನ್ನ ನೋಡಿದ್ರೆ ಖಂಡಿತ ಕೊಲ್ತಾರೆ” ಅಂದ. 15 ಅದಕ್ಕೆ ಯೆಹೋವ “ಹಾಗೆ ಆಗಲ್ಲ. ಕಾಯಿನನನ್ನ ಕೊಲ್ಲುವವನಿಗೆ ಏಳು ಪಟ್ಟು ಶಿಕ್ಷೆಯಾಗುತ್ತೆ” ಅಂದನು.
ಹಾಗಾಗಿ ಯಾರೂ ಕಾಯಿನನನ್ನ ಕೊಲ್ಲದ ಹಾಗೆ ಯೆಹೋವ ಅವನಿಗಾಗಿ ಒಂದು ಗುರುತು ಕೊಟ್ಟನು.* 16 ಆಮೇಲೆ ಕಾಯಿನ ಯೆಹೋವನನ್ನ ಬಿಟ್ಟು ಏದೆನಿನ ಪೂರ್ವಕ್ಕಿದ್ದ+ ನೋದ್* ಅನ್ನೋ ಸ್ಥಳಕ್ಕೆ ಹೋಗಿ ಅಲ್ಲಿ ವಾಸಿಸಿದ.
17 ಆಮೇಲೆ ಕಾಯಿನ ತನ್ನ ಹೆಂಡತಿ ಜೊತೆ ಸಂಬಂಧ ಇಟ್ಟಾಗ+ ಅವಳು ಗರ್ಭಿಣಿ ಆದಳು. ಅವಳಿಗೆ ಹನೋಕ ಹುಟ್ಟಿದ. ಆಮೇಲೆ ಕಾಯಿನ ಒಂದು ಊರು ಕಟ್ಟೋಕೆ ಶುರುಮಾಡಿದ. ಆ ಊರಿಗೆ ಹನೋಕ ಅಂತ ತನ್ನ ಮಗನ ಹೆಸರನ್ನೇ ಇಟ್ಟ. 18 ಆಮೇಲೆ ಹನೋಕನಿಗೆ ಈರಾದ ಹುಟ್ಟಿದ. ಈರಾದನಿಗೆ ಮೆಹೂಯಾಯೇಲ ಹುಟ್ಟಿದ. ಮೆಹೂಯಾಯೇಲನಿಗೆ ಮೆತೂಷಾಯೇಲ ಹುಟ್ಟಿದ. ಮೆತೂಷಾಯೇಲನಿಗೆ ಲೆಮೆಕ ಹುಟ್ಟಿದ.
19 ಲೆಮೆಕ ಇಬ್ರನ್ನ ಮದುವೆಯಾದ. ಮೊದಲನೇ ಹೆಂಡ್ತಿ ಹೆಸರು ಆದಾ, ಎರಡನೇ ಹೆಂಡ್ತಿ ಹೆಸರು ಚಿಲ್ಲಾ. 20 ಆದಾಗೆ ಯಾಬಾಲ ಹುಟ್ಟಿದ. ಡೇರೆಗಳಲ್ಲಿ ವಾಸಮಾಡಿದ ಮತ್ತು ಪ್ರಾಣಿಗಳನ್ನ ಸಾಕೋ ಕೆಲಸ ಮಾಡಿದ ಮೊದಲ ವ್ಯಕ್ತಿ ಯಾಬಾಲ. 21 ಅವನ ಸಹೋದರನ ಹೆಸರು ಯೂಬಾಲ. ಅವನು ತಂತಿವಾದ್ಯ, ಕೊಳಲು ನುಡಿಸುವವರ ಮೂಲಪುರುಷ. 22 ಚಿಲ್ಲಾಗೆ ತೂಬಲ್-ಕಾಯಿನ ಹುಟ್ಟಿದ. ಅವನು ಕಬ್ಬಿಣ, ತಾಮ್ರದ ಎಲ್ಲ ರೀತಿಯ ಉಪಕರಣಗಳನ್ನ ತಯಾರಿಸಿದ. ತೂಬಲ್-ಕಾಯಿನನ ಸಹೋದರಿ ಹೆಸರು ನಯಮಾ. 23 ಲೆಮೆಕ ತನ್ನ ಹೆಂಡತಿಯರಾದ ಆದಾ ಮತ್ತು ಚಿಲ್ಲಾಳಿಗಾಗಿ ಈ ಕವಿತೆ ರಚಿಸಿದ:
“ನನ್ನ ಹೆಂಡತಿಯರೇ, ನಾನು ಹೇಳೋದನ್ನ ಕೇಳಿ,
ನನ್ನ ಮಾತಿಗೆ ಗಮನಕೊಡಿ,
ನನಗೆ ಗಾಯಮಾಡಿದ ಒಬ್ಬನನ್ನ,
ಹೌದು, ನನ್ನನ್ನ ಹೊಡೆದ ಆ ಯುವಕನನ್ನ ಕೊಂದೆ.
25 ಆದಾಮ ಮತ್ತೆ ತನ್ನ ಹೆಂಡತಿ ಜೊತೆ ಸಂಬಂಧ ಇಟ್ಟಾಗ ಅವಳಿಗೆ ಮಗ ಹುಟ್ಟಿದ. ಆಗ ಹವ್ವ “ಕಾಯಿನ ಹೇಬೆಲನನ್ನ ಕೊಂದ ಕಾರಣ+ ಅವನ ಬದಲು ದೇವರು ನನಗೆ ಇನ್ನೊಂದು ಸಂತಾನ ಕೊಟ್ಟಿದ್ದಾನೆ” ಅಂತೇಳಿ ಆ ಮಗುಗೆ ಸೇತ*+ ಅಂತ ಹೆಸರಿಟ್ಟಳು. 26 ಸೇತನಿಗೆ ಸಹ ಒಬ್ಬ ಮಗ ಹುಟ್ಟಿದ. ಅವನು ಆ ಮಗುಗೆ ಎನೋಷ್+ ಅಂತ ಹೆಸರಿಟ್ಟ. ಆ ಕಾಲದಲ್ಲಿ ಜನ್ರು ಯೆಹೋವನ ಹೆಸರನ್ನ ಹೇಳೋಕೆ ಶುರುಮಾಡಿದ್ರು.
5 ಇದು ಆದಾಮನ ವಂಶದ ಚರಿತ್ರೆ. ದೇವರು ಆದಾಮನನ್ನ ಸೃಷ್ಟಿ ಮಾಡಿದಾಗ ತನ್ನನ್ನ ಹೋಲೋ ತರ ಸೃಷ್ಟಿ ಮಾಡಿದ್ದನು.+ 2 ಆತನು ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದ್ದನು.+ ದೇವರು ಅವರಿಬ್ರನ್ನ ಸೃಷ್ಟಿ ಮಾಡಿ+ ಆಶೀರ್ವದಿಸಿ ಮನುಷ್ಯ* ಅಂತ ಹೆಸರಿಟ್ಟನು.
3 ಆದಾಮನಿಗೆ 130 ವರ್ಷ ಆಗಿದ್ದಾಗ ಅವನ ತರನೇ ಕಾಣೋ ಮಗ ಹುಟ್ಟಿದ. ಆ ಮಗು ಅವನ ತರನೇ ಇತ್ತು, ಆ ಮಗುಗೆ ಸೇತ+ ಅಂತ ಹೆಸರಿಟ್ಟ. 4 ಸೇತ ಹುಟ್ಟಿದ ಮೇಲೆ ಆದಾಮ 800 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 5 ಆದಾಮ ಒಟ್ಟು 930 ವರ್ಷ ಬದುಕಿ ಸತ್ತ.+
6 ಸೇತನಿಗೆ 105 ವರ್ಷ ಆದಾಗ ಅವನಿಗೆ ಎನೋಷ್+ ಹುಟ್ಟಿದ. 7 ಎನೋಷ್ ಹುಟ್ಟಿದ ಮೇಲೆ ಸೇತ 807 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 8 ಸೇತ ಒಟ್ಟು 912 ವರ್ಷ ಬದುಕಿ ಸತ್ತ.
9 ಎನೋಷ್‌ಗೆ 90 ವರ್ಷ ಆದಾಗ ಅವನಿಗೆ ಕೇನಾನ ಹುಟ್ಟಿದ. 10 ಕೇನಾನ ಹುಟ್ಟಿದ ಮೇಲೆ ಎನೋಷ್ 815 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 11 ಎನೋಷ್ ಒಟ್ಟು 905 ವರ್ಷ ಬದುಕಿ ಸತ್ತ.
12 ಕೇನಾನನಿಗೆ 70 ವರ್ಷ ಆದಾಗ ಅವನಿಗೆ ಮಹಲಲೇಲ+ ಹುಟ್ಟಿದ. 13 ಮಹಲಲೇಲ ಹುಟ್ಟಿದ ಮೇಲೆ ಕೇನಾನ 840 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 14 ಕೇನಾನ ಒಟ್ಟು 910 ವರ್ಷ ಬದುಕಿ ಸತ್ತ.
15 ಮಹಲಲೇಲನಿಗೆ 65 ವರ್ಷ ಆದಾಗ ಅವನಿಗೆ ಯೆರೆದ+ ಹುಟ್ಟಿದ. 16 ಯೆರೆದ ಹುಟ್ಟಿದ ಮೇಲೆ ಮಹಲಲೇಲ 830 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 17 ಮಹಲಲೇಲ ಒಟ್ಟು 895 ವರ್ಷ ಬದುಕಿ ಸತ್ತ.
18 ಯೆರೆದನಿಗೆ 162 ವರ್ಷ ಆದಾಗ ಅವನಿಗೆ ಹನೋಕ+ ಹುಟ್ಟಿದ. 19 ಹನೋಕ ಹುಟ್ಟಿದ ಮೇಲೆ ಯೆರೆದ 800 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 20 ಯೆರೆದ ಒಟ್ಟು 962 ವರ್ಷ ಬದುಕಿ ಸತ್ತ.
21 ಹನೋಕನಿಗೆ 65 ವರ್ಷ ಆದಾಗ ಅವನಿಗೆ ಮೆತೂಷೆಲಹ+ ಹುಟ್ಟಿದ. 22 ಮೆತೂಷೆಲಹ ಹುಟ್ಟಿದ ಮೇಲೆ ಹನೋಕ 300 ವರ್ಷ ಬದುಕಿದ. ಸತ್ಯ ದೇವರಿಗೆ* ಇಷ್ಟ ಆಗೋ ತರ ನಡೀತಾ ಇದ್ದ.* ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 23 ಹನೋಕ ಒಟ್ಟು 365 ವರ್ಷ ಬದುಕಿದ. 24 ಹನೋಕ ಯಾವಾಗ್ಲೂ ಸತ್ಯ ದೇವರಿಗೆ ಇಷ್ಟ ಆಗೋ ತರ ನಡೀತಾ ಇದ್ದ.+ ಆಮೇಲೆ ದೇವರು ಅವನನ್ನ ತಗೊಂಡಿದ್ರಿಂದ+ ಮುಂದೆ ಯಾರೂ ಅವನನ್ನ ನೋಡಲಿಲ್ಲ.
25 ಮೆತೂಷೆಲಹನಿಗೆ 187 ವರ್ಷ ಆದಾಗ ಅವನಿಗೆ ಲೆಮೆಕ+ ಹುಟ್ಟಿದ. 26 ಲೆಮೆಕ ಹುಟ್ಟಿದ ಮೇಲೆ ಮೆತೂಷೆಲಹ 782 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 27 ಮೆತೂಷೆಲಹ ಒಟ್ಟು 969 ವರ್ಷ ಬದುಕಿ ಸತ್ತ.
28 ಲೆಮೆಕನಿಗೆ 182 ವರ್ಷ ಆದಾಗ ಅವನಿಗೆ ಒಬ್ಬ ಮಗ ಹುಟ್ಟಿದ. 29 ಆಗ ಲೆಮೆಕ “ಯೆಹೋವ ಭೂಮಿಗೆ ಶಾಪಕೊಟ್ಟಿದ್ರಿಂದ+ ತುಂಬ ಕಷ್ಟಪಟ್ಟು ಮೈಮುರಿದು ಕೆಲಸ ಮಾಡಬೇಕಾಗಿದೆ. ಆದ್ರೆ ಇವನು ನಮಗೆ ಸಮಾಧಾನ* ತರ್ತಾನೆ” ಅಂತೇಳಿ ಅವನಿಗೆ ನೋಹ*+ ಅಂತ ಹೆಸರಿಟ್ಟ. 30 ನೋಹ ಹುಟ್ಟಿದ ಮೇಲೆ ಲೆಮೆಕ 595 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು. 31 ಲೆಮೆಕ ಒಟ್ಟು 777 ವರ್ಷ ಬದುಕಿ ಸತ್ತ.
32 ನೋಹನಿಗೆ 500 ವರ್ಷ ಆದಾಗ ಅವನಿಗೆ ಶೇಮ್,+ ಹಾಮ್,+ ಯೆಫೆತ್+ ಹುಟ್ಟಿದ್ರು.
6 ಭೂಮಿಯಲ್ಲಿ ಮನುಷ್ಯರು ಹೆಚ್ಚಾಗ್ತಾ ಹೋದ್ರು. ಅವರಿಗೆ ಹೆಣ್ಣುಮಕ್ಕಳೂ ಹುಟ್ಟಿದ್ರು. 2 ಆ ಹೆಣ್ಣುಮಕ್ಕಳು ತುಂಬ ಸುಂದರವಾಗಿದ್ದಾರೆ ಅಂತ ದೇವದೂತರು*+ ಗಮನಿಸೋಕೆ ಶುರು ಮಾಡಿದ್ರು. ಆಮೇಲೆ ಅವರು ತಮಗೆ ಬೇಕಾದವರನ್ನೆಲ್ಲ ಹೆಂಡತಿಯರನ್ನಾಗಿ ಮಾಡ್ಕೊಂಡ್ರು. 3 ಆಗ ಯೆಹೋವ ದೇವರು “ನಾನು ಮನುಷ್ಯನನ್ನ ಯಾವಾಗ್ಲೂ ಹೀಗೇ ಸಹಿಸಿಕೊಳ್ತಾ ಇರಲ್ಲ.+ ಯಾಕಂದ್ರೆ ಅವನು ಪಾಪಿ.* ಅವನು ಇನ್ನು 120 ವರ್ಷ ಮಾತ್ರ ಬದುಕ್ತಾನೆ” ಅಂದನು.+
4 ದೇವರು ಆ ಮಾತು ಹೇಳಿದಾಗ ಭೂಮೀಲಿ ನೆಫೀಲಿಯರು ಇದ್ರು. ಆ ದಿನಗಳಲ್ಲಿ ದೇವದೂತರು ಭೂಮಿಯಲ್ಲಿರೋ ಹೆಣ್ಣುಮಕ್ಕಳ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡಿದ್ರು. ಅವರಿಗೆ ಹುಟ್ಟಿದ ಗಂಡುಮಕ್ಕಳೇ ಈ ನೆಫೀಲಿಯರು.* ಇವರಿಗೆ ತುಂಬ ಶಕ್ತಿ ಇತ್ತು, ತುಂಬ ಹೆಸರುವಾಸಿ ಆಗಿದ್ರು.
5 ಮನುಷ್ಯರ ಕೆಟ್ಟತನ ಭೂಮಿಯಲ್ಲಿ ತುಂಬ ಹೆಚ್ಚಾಗಿರೋದನ್ನ, ಅವರ ಹೃದಯದ ಯೋಚನೆ ಆಸೆ ಯಾವಾಗ್ಲೂ ಬರೀ ಕೆಟ್ಟದ್ದಾಗಿರೋದನ್ನ ಯೆಹೋವ ನೋಡಿದನು.+ 6 ಯೆಹೋವ ತಾನು ಭೂಮಿಯಲ್ಲಿ ಸೃಷ್ಟಿ ಮಾಡಿದ ಮನುಷ್ಯರಿಂದಾಗಿ ತುಂಬ ದುಃಖಪಟ್ಟು* ಹೃದಯದಲ್ಲಿ ನೊಂದ್ಕೊಂಡನು.+ 7 ಹಾಗಾಗಿ ಯೆಹೋವ “ನಾನು ಸೃಷ್ಟಿಮಾಡಿದ ಮನುಷ್ಯರನ್ನ ಭೂಮಿ ಮೇಲಿಂದ ಅಳಿಸಿಹಾಕ್ತೀನಿ. ಮನುಷ್ಯರ ಜೊತೆ ಸಾಕುಪ್ರಾಣಿ, ಹರಿದಾಡೋ ಪ್ರಾಣಿ, ಆಕಾಶದಲ್ಲಿ ಹಾರೋ ಜೀವಿಗಳನ್ನೂ ನಾಶಮಾಡ್ತೀನಿ. ಯಾಕಂದ್ರೆ ನಾನು ಮಾಡಿರೋ ಇವುಗಳಿಂದ ನನಗೆ ತುಂಬ ದುಃಖ ಆಗ್ತಿದೆ” ಅಂದನು. 8 ಆದ್ರೆ ಯೆಹೋವ ನೋಹನನ್ನ ಇಷ್ಟಪಟ್ಟನು.
9 ಇದು ನೋಹನ ಚರಿತ್ರೆ.
ನೋಹ ನೀತಿವಂತ ಆಗಿದ್ದ.+ ತನ್ನ ಕಾಲದಲ್ಲಿದ್ದ ಜನ್ರ ತರ ಇರಲಿಲ್ಲ, ತಪ್ಪೇ ಮಾಡದೆ ಜೀವಿಸ್ತಿದ್ದ.* ನೋಹ ಸತ್ಯ ದೇವರಿಗೆ ಇಷ್ಟ ಆಗೋ ತರ ನಡೆದ.+ 10 ಆಮೇಲೆ ನೋಹನಿಗೆ ಶೇಮ್, ಹಾಮ್, ಯೆಫೆತ್ ಅನ್ನೋ ಮೂರು ಮಕ್ಕಳು ಹುಟ್ಟಿದ್ರು.+ 11 ಆದ್ರೆ ಸತ್ಯ ದೇವರ ದೃಷ್ಟಿಯಲ್ಲಿ ಭೂಮಿ ತುಂಬ ಹಾಳಾಗಿತ್ತು. ಎಲ್ಲ ಕಡೆ ಹಿಂಸೆ ತುಂಬಿತ್ತು. 12 ದೇವರು ಭೂಮಿಯನ್ನ ನೋಡಿದಾಗ ಅದು ಹಾಳಾಗಿತ್ತು.+ ಭೂಮಿಯಲ್ಲಿದ್ದ ಮನುಷ್ಯರೆಲ್ಲ ತುಂಬ ಕೆಟ್ಟದಾಗಿ ನಡ್ಕೊಳ್ತಿದ್ರು.+
13 ಆಮೇಲೆ ದೇವರು ನೋಹನಿಗೆ ಹೀಗಂದನು: “ನಾನು ಎಲ್ಲ ಮನುಷ್ಯರನ್ನ ನಾಶಮಾಡ್ಬೇಕು ಅಂತ ತೀರ್ಮಾನ ಮಾಡಿದ್ದೀನಿ. ಅವ್ರಿಂದ ಭೂಮಿಯಲ್ಲೆಲ್ಲಾ ಹಿಂಸೆ ತುಂಬಿದೆ. ನಾನು ಮನುಷ್ಯರನ್ನ ಅವರ ಜೊತೆ ಭೂಮಿಯನ್ನ ನಾಶಮಾಡ್ತೀನಿ.+ 14 ನೀನು ಗೊಫೇರ್ ಮರದಿಂದ* ಒಂದು ದೊಡ್ಡ ಹಡಗು* ಕಟ್ಟು.+ ಅದರ ಒಳಗೆ, ಹೊರಗೆ ಟಾರು*+ ಬಳಿಬೇಕು. ಆ ಹಡಗಲ್ಲಿ ಕೋಣೆಗಳನ್ನ ಮಾಡಬೇಕು. 15 ನೀನು ಮಾಡೋ ಹಡಗು 300 ಮೊಳ* ಉದ್ದ, 50 ಮೊಳ ಅಗಲ, 30 ಮೊಳ ಎತ್ತರ ಇರಬೇಕು. 16 ಅದ್ರ ಒಳಗೆ ಬೆಳಕು ಬರೋಕೆ ಅದ್ರ ಚಾವಣಿ ಕೆಳಗೆ ಒಂದು ಮೊಳ ಎತ್ತರದ ಕಿಟಕಿ* ಮಾಡಬೇಕು. ಹಡಗಿನ ಒಂದು ಪಕ್ಕದಲ್ಲಿ ಬಾಗಿಲು ಇಡಬೇಕು.+ ಆ ಹಡಗಲ್ಲಿ ಕೆಳಗೆ, ಮಧ್ಯ ಮತ್ತು ಮೇಲೆ ಹೀಗೆ ಮೂರು ಅಂತಸ್ತು ಮಾಡಬೇಕು.
17 ನಾನು ಭೂಮಿ ಮೇಲೆ ಜಲಪ್ರಳಯ+ ತಂದು ಆಕಾಶದ ಕೆಳಗಿರೋ ಉಸಿರಾಡೋ ಪ್ರತಿಯೊಂದು ಜೀವಿಯನ್ನ ನಾಶಮಾಡ್ತೀನಿ. ಭೂಮಿ ಮೇಲಿರೋ ಎಲ್ಲನೂ ನಾಶ ಆಗುತ್ತೆ.+ 18 ಆದ್ರೆ ನಿನ್ನನ್ನ ಜೀವಂತ ಉಳಿಸ್ತೀನಿ ಅಂತ ನಾನು ನಿನ್ನ ಜೊತೆ ಒಪ್ಪಂದ* ಮಾಡ್ಕೊಳ್ತೀನಿ. ನೀನು ಹಡಗೊಳಗೆ ಹೋಗಬೇಕು. ನಿನ್ನ ಜೊತೆ ನಿನ್ನ ಹೆಂಡತಿ, ಗಂಡುಮಕ್ಕಳು ಸೊಸೆಯಂದಿರು ಹೋಗಬೇಕು.+ 19 ನಿನ್ನ ಜೊತೆ ಪ್ರತಿಯೊಂದು ವಿಧದ ಜೀವಿ ಸಹ ಬದುಕಿ ಉಳಿಯೋ ತರ ಅವುಗಳಲ್ಲಿ ಎರಡೆರಡನ್ನ+ ಅಂದ್ರೆ ಒಂದು ಗಂಡು, ಒಂದು ಹೆಣ್ಣನ್ನ+ ಹಡಗೊಳಗೆ ಕರ್ಕೊಂಡು ಹೋಗು. 20 ಹಾರಾಡೋ ಜೀವಿಗಳ ಎಲ್ಲ ಜಾತಿಗಳಲ್ಲಿ ಎರಡೆರಡು, ಸಾಕುಪ್ರಾಣಿಗಳ ಜಾತಿಗಳಲ್ಲಿ ಎರಡೆರಡು, ನೆಲದಲ್ಲಿ ಹರಿದಾಡೋ ಪ್ರಾಣಿಗಳ ಎಲ್ಲ ಜಾತಿಗಳಲ್ಲಿ ಎರಡೆರಡು ಬದುಕಿ ಉಳಿಯೋಕೆ ನಿನ್ನ ಹತ್ರ ಹಡಗಲ್ಲಿ ಬರುತ್ತೆ.+ 21 ನಿನಗೆ ಮತ್ತು ಪ್ರಾಣಿಗಳಿಗೆ ತಿನ್ನೋಕೆ ಬೇಕಾದ ಎಲ್ಲ ರೀತಿಯ ಆಹಾರವನ್ನ+ ನೀನು ಕೂಡಿಸಿ ಹಡಗಲ್ಲಿ ತಗೊಂಡು ಹೋಗಬೇಕು.”
22 ದೇವರ ಮಾತಿನ ಪ್ರಕಾರ ನೋಹ ಎಲ್ಲ ಮಾಡಿದ. ದೇವರು ಹೇಳಿದ ಹಾಗೇ ಅವನು ಮಾಡಿದ.+
7 ಆಮೇಲೆ ಯೆಹೋವ ನೋಹಗೆ “ನೀನು ಈ ಪೀಳಿಗೆ ಜನ್ರ ತರ ಇರದೆ ನನ್ನ ದೃಷ್ಟಿಯಲ್ಲಿ ನೀತಿವಂತನಾಗಿ ನಡಿಯೋದನ್ನ ನೋಡಿದ್ದೀನಿ.+ ಹಾಗಾಗಿ ನೀನು, ನಿನ್ನ ಕುಟುಂಬ ಹಡಗೊಳಗೆ ಹೋಗಿ. 2 ಶುದ್ಧ* ಪ್ರಾಣಿಗಳಲ್ಲಿ ಪ್ರತಿಯೊಂದು ಜಾತಿಯ ಏಳು* ಪ್ರಾಣಿಗಳನ್ನ+ ನಿನ್ನ ಜೊತೆ ಕರ್ಕೊಂಡು ಹೋಗಬೇಕು. ಅವುಗಳಲ್ಲಿ ಗಂಡುಹೆಣ್ಣು ಇರಬೇಕು. ಶುದ್ಧವಲ್ಲದ ಎಲ್ಲ ಪ್ರಾಣಿಗಳಲ್ಲಿ ಬರೀ ಎರಡನ್ನ ಅಂದ್ರೆ ಒಂದು ಗಂಡು, ಒಂದು ಹೆಣ್ಣನ್ನ ಕರ್ಕೊಂಡು ಹೋಗಬೇಕು. 3 ಆಕಾಶದಲ್ಲಿ ಹಾರೋ ಜೀವಿಗಳಲ್ಲಿ ಏಳೇಳನ್ನ* ಕರ್ಕೊಂಡು ಹೋಗಬೇಕು. ಅವುಗಳಲ್ಲಿ ಗಂಡುಹೆಣ್ಣು ಇರಬೇಕು. ಅವು ಬದುಕಿ ಉಳಿಯೋದ್ರಿಂದ ಅವುಗಳ ಜಾತಿ ಭೂಮಿ ಮೇಲಿಂದ ಅಳಿದು ಹೋಗಲ್ಲ.+ 4 ನಾನು ಇನ್ನು ಏಳೇ ದಿನದಲ್ಲಿ ಭೂಮಿ ಮೇಲೆ ಮಳೆ+ ಬರೋ ತರ ಮಾಡ್ತೀನಿ. 40 ದಿನ ಹಗಲೂ ರಾತ್ರಿ+ ಮಳೆ ಸುರಿಯುತ್ತೆ. ನಾನು ಮಾಡಿದ ಪ್ರತಿಯೊಂದು ಜೀವಿಯನ್ನ ಭೂಮಿ ಮೇಲಿಂದ ಅಳಿಸಿಹಾಕ್ತೀನಿ” ಅಂದನು.+ 5 ಯೆಹೋವ ಏನೇನು ಮಾಡಬೇಕಂತ ಆಜ್ಞೆ ಕೊಟ್ನೋ ಅದೆಲ್ಲ ನೋಹ ಮಾಡಿದ.
6 ಭೂಮಿ ಮೇಲೆ ಜಲಪ್ರಳಯ ಬಂದಾಗ ನೋಹಗೆ 600 ವರ್ಷ.+ 7 ಜಲಪ್ರಳಯ+ ಬರೋ ಮುಂಚೆ ನೋಹ ತನ್ನ ಹೆಂಡತಿ, ಮಕ್ಕಳು, ಸೊಸೆಯರ ಜೊತೆ ಹಡಗಿನ ಒಳಗೆ ಹೋದ. 8 ಶುದ್ಧ, ಶುದ್ಧವಲ್ಲದ ಎಲ್ಲ ಪ್ರಾಣಿಗಳಲ್ಲಿ ಮತ್ತು ಹಾರೋ, ನೆಲದ ಮೇಲೆ ಚಲಿಸೋ ಎಲ್ಲ ಜೀವಿಗಳಲ್ಲಿ+ 9 ಗಂಡುಹೆಣ್ಣು ಜೋಡಿಜೋಡಿಯಾಗಿ ಹಡಗಲ್ಲಿ ನೋಹನ ಹತ್ರ ಬಂದ್ವು. ಹೀಗೆ ದೇವರು ನೋಹಗೆ ಆಜ್ಞೆ ಕೊಟ್ಟ ತರಾನೇ ಅವು ಹಡಗೊಳಗೆ ಹೋದ್ವು. 10 ಏಳು ದಿನ ಆದ್ಮೇಲೆ ಮಳೆ ಶುರು ಆಗಿ ಭೂಮಿ ಮುಚ್ಕೊಳ್ಳೋ ತರ ಪ್ರವಾಹ ಆಯ್ತು.
11 ನೋಹನ ಜೀವನದ 600ನೇ ವರ್ಷದ ಎರಡನೇ ತಿಂಗಳಿನ 17ನೇ ದಿನದಲ್ಲಿ ಆಕಾಶದಲ್ಲಿದ್ದ ನೀರಿನ ಬುಗ್ಗೆಗಳೆಲ್ಲ* ಒಡಿತು, ಆಕಾಶದ ನೀರಿನ ಬಾಗಿಲುಗಳು ತೆರೀತು.+ 12 ಭೂಮಿ ಮೇಲೆ 40 ದಿನ ಹಗಲೂ ರಾತ್ರಿ ಮಳೆ ಧಾರಾಕಾರವಾಗಿ ಸುರಿತು. 13 ಅದೇ ದಿನ ನೋಹ ತನ್ನ ಹೆಂಡತಿ, ಮಕ್ಕಳಾದ ಶೇಮ್, ಹಾಮ್, ಯೆಫೆತ್+ ಮತ್ತು ಮೂರು ಸೊಸೆಯರ ಜೊತೆ ಹಡಗೊಳಗೆ ಹೋದ.+ 14 ಅವರ ಜೊತೆ ಎಲ್ಲ ಜಾತಿಯ ಕಾಡುಪ್ರಾಣಿಗಳು, ಎಲ್ಲ ಜಾತಿಯ ಸಾಕುಪ್ರಾಣಿಗಳು, ಎಲ್ಲ ಜಾತಿಯ ಹರಿದಾಡೋ ಪ್ರಾಣಿಗಳು, ಎಲ್ಲ ಜಾತಿಯ ಹಾರೋ ಜೀವಿಗಳು ಅಂದ್ರೆ ಪಕ್ಷಿಗಳು, ರೆಕ್ಕೆಯಿರೋ ಬೇರೆ ಜೀವಿಗಳು ಹಡಗೊಳಗೆ ಹೋಯ್ತು. 15 ಎಲ್ಲ ರೀತಿಯ ಉಸಿರಾಡೋ ಪ್ರಾಣಿಗಳು ಜೋಡಿಜೋಡಿಯಾಗಿ ಹಡಗಿನ ಒಳಗೆ ನೋಹನ ಹತ್ರ ಹೋಗ್ತಾ ಇತ್ತು. 16 ಹೀಗೆ ದೇವರು ಅವನಿಗೆ ಆಜ್ಞೆ ಕೊಟ್ಟ ತರಾನೇ ಎಲ್ಲ ಜಾತಿಯ ಪ್ರಾಣಿಗಳಲ್ಲಿ ಗಂಡುಹೆಣ್ಣು ಹಡಗಿನ ಒಳಗೆ ಹೋಯ್ತು. ಆಮೇಲೆ ಯೆಹೋವ ಹಡಗಿನ ಬಾಗಿಲು ಮುಚ್ಚಿದನು.
17 ಭೂಮಿ ಮೇಲೆ 40 ದಿನ ಮಳೆ ಸುರೀತು. ಪ್ರವಾಹದ ನೀರು ಜಾಸ್ತಿ ಆಗ್ತಾ ಹೋದ ಹಾಗೆ ಹಡಗನ್ನ ತುಂಬ ಮೇಲೆ ಎತ್ತಿತ್ತು. ಭೂಮಿ ಮೇಲೆ ತುಂಬಿದ್ದ ನೀರಲ್ಲಿ ಹಡಗು ತೇಲ್ತಾ ಇತ್ತು. 18 ನೀರು ಹೆಚ್ಚಾಗ್ತಾ ಭೂಮಿ ಮೇಲೆಲ್ಲಾ ತುಂಬ್ಕೊಳ್ತು. ಹಡಗು ಮಾತ್ರ ನೀರಿನ ಮೇಲೆ ತೇಲ್ತಿತ್ತು. 19 ಭೂಮಿ ಮೇಲೆ ನೀರು ಎಷ್ಟು ತುಂಬಿತಂದ್ರೆ ಭೂಮಿ ಮೇಲಿದ್ದ ಎಲ್ಲ ದೊಡ್ಡ ದೊಡ್ಡ ಬೆಟ್ಟಗಳು ಮುಳುಗಿಹೋಯ್ತು.+ 20 ದೊಡ್ಡ ಬೆಟ್ಟಗಳಿಗಿಂತ ಇನ್ನೂ 15 ಮೊಳ* ಎತ್ರ ತನಕ ನೀರು ತುಂಬ್ತು.
21 ಇದ್ರಿಂದ, ಭೂಮಿ ಮೇಲಿರೋ ಎಲ್ಲ ಜೀವಿಗಳು ಅಂದ್ರೆ ಹಾರೋ ಜೀವಿಗಳು, ಸಾಕುಪ್ರಾಣಿಗಳು, ಕಾಡುಪ್ರಾಣಿಗಳು, ಚಿಕ್ಕ ಚಿಕ್ಕ ಜೀವಿಗಳು,* ಎಲ್ಲ ಮನುಷ್ಯರು+ ನಾಶವಾದ್ರು.+ 22 ನೆಲದ ಮೇಲೆ ಉಸಿರಾಡ್ತಾ+ ಬದುಕ್ತಿದ್ದ ಎಲ್ಲಾ ಜೀವಿಗಳು ಸತ್ತುಹೋದ್ವು. 23 ಹೀಗೆ ಮನುಷ್ಯರು, ಪ್ರಾಣಿಗಳು, ಹರಿದಾಡೋ ಪ್ರಾಣಿಗಳು, ಆಕಾಶದಲ್ಲಿ ಹಾರೋ ಜೀವಿಗಳನ್ನ ಸೇರಿಸಿ ಭೂಮಿ ಮೇಲಿದ್ದ ಎಲ್ಲ ಜೀವಿಗಳನ್ನ ದೇವರು ನಾಶ ಮಾಡಿದನು. ಅವೆಲ್ಲ ಭೂಮಿಯಿಂದ ಕಣ್ಮರೆ ಆಯ್ತು.+ ನೋಹ ಮತ್ತು ಅವನ ಜೊತೆ ಹಡಗಲ್ಲಿ ಇದ್ದವರು ಮಾತ್ರ ಬದುಕಿ ಉಳಿದ್ರು.+ 24 ಪ್ರಳಯದ ನೀರು 150 ದಿನ ತನಕ+ ಇಡೀ ಭೂಮಿಯಲ್ಲಿ ತುಂಬಿತ್ತು.
8 ಆದ್ರೆ ದೇವರು ನೋಹ ಮತ್ತು ಅವನ ಜೊತೆ ಹಡಗಲ್ಲಿದ್ದ ಎಲ್ಲ ಕಾಡುಪ್ರಾಣಿ, ಸಾಕುಪ್ರಾಣಿಗಳನ್ನ ನೆನಪಿಸ್ಕೊಂಡ.*+ ಆತನು ಭೂಮಿ ಮೇಲೆ ಗಾಳಿ ಬೀಸೋ ತರ ಮಾಡಿದ್ರಿಂದ ನೀರಿನ ಮಟ್ಟ ಕಮ್ಮಿ ಆಗ್ತಾ ಬಂತು. 2 ಆಕಾಶದಲ್ಲಿದ್ದ ನೀರಿನ ಬುಗ್ಗೆಗಳನ್ನ,* ಆಕಾಶದ ಪ್ರವಾಹ ಬಾಗಿಲುಗಳನ್ನ ಮುಚ್ಚಲಾಗಿತ್ತು. ಹಾಗಾಗಿ ಆಕಾಶದಿಂದ ಸುರಿತಿದ್ದ ಮಳೆ ನಿಂತಿತ್ತು.*+ 3 ಹೀಗೆ ಭೂಮಿ ಮೇಲಿದ್ದ ನೀರು ನಿಧಾನವಾಗಿ ಕಮ್ಮಿ ಆಗ್ತಾ ಇತ್ತು. 150 ದಿನ ಆದ್ಮೇಲೆ ನೀರು ತುಂಬ ಕಮ್ಮಿ ಆಯ್ತು. 4 ಏಳನೇ ತಿಂಗಳಿನ 17ನೇ ದಿನ ಹಡಗು ಅರರಾಟ್ ಬೆಟ್ಟದ ಮೇಲೆ ಹೋಗಿ ನಿಂತಿತು. 5 ಹತ್ತನೇ ತಿಂಗಳ ತನಕ ನೀರು ಕಮ್ಮಿ ಆಗ್ತಾ ಬಂತು. ಹತ್ತನೇ ತಿಂಗಳ ಮೊದಲನೇ ದಿನ ಬೆಟ್ಟದ ತುದಿ ಕಾಣಿಸ್ತು.+
6 ಅದಾಗಿ 40 ದಿನ ಆದ್ಮೇಲೆ ನೋಹ ಹಡಗಿನ ಕಿಟಕಿ ತೆಗೆದು+ 7 ಒಂದು ಕಾಗೆನ ಹೊರಗೆ ಬಿಟ್ಟ. ಅದು ಭೂಮಿ ಮೇಲಿದ್ದ ನೀರು ಒಣಗೋ ತನಕ ಹೊರಗೆ ಹಾರಾಡ್ತಾ ಹಡಗಿಗೆ ವಾಪಾಸ್ ಬರ್ತಾ ಇತ್ತು.
8 ಆಮೇಲೆ ನೋಹ ಭೂಮಿ ಮೇಲೆ ನೀರು ಕಮ್ಮಿ ಆಗಿದ್ಯಾ ಅಂತ ತಿಳ್ಕೊಳ್ಳೋಕೆ ಒಂದು ಪಾರಿವಾಳನ ಹೊರಗೆ ಬಿಟ್ಟ. 9 ಇಡೀ ಭೂಮೀಲಿ ಎಲ್ಲ ಕಡೆ ನೀರು ತುಂಬಿದ್ರಿಂದ ಅದಕ್ಕೆ ಕಾಲಿಡೋಕೆ ಎಲ್ಲೂ ಜಾಗ ಸಿಗಲಿಲ್ಲ.+ ಹಾಗಾಗಿ ಪಾರಿವಾಳ ನೋಹನ ಹತ್ರ ವಾಪಾಸ್ ಬಂತು. ಅವನು ತನ್ನ ಕೈಯನ್ನ ಹೊರಗೆ ಚಾಚಿ ಅದನ್ನ ಹಡಗಿನ ಒಳಗೆ ತಗೊಂಡ. 10 ಅವನು ಇನ್ನೂ ಏಳು ದಿನ ಕಾದು ಮತ್ತೆ ಪಾರಿವಾಳನ ಹಡಗಿನ ಹೊರಗೆ ಬಿಟ್ಟ. 11 ಸಂಜೆ ಆಗ್ತಿದ್ದಾಗ ಆ ಪಾರಿವಾಳ ಅವನ ಹತ್ರ ವಾಪಾಸ್ ಬಂತು. ಈ ಸಾರಿ ಅದ್ರ ಕೊಕ್ಕಲ್ಲಿ ಆಲಿವ್ ಮರದ ಚಿಗುರೆಲೆ ಇತ್ತು! ಇದನ್ನ ನೋಡಿ ನೋಹಗೆ ಭೂಮಿ ಮೇಲೆ ನೀರು ಕಮ್ಮಿ ಆಗಿದೆ ಅಂತ ಗೊತ್ತಾಯ್ತು.+ 12 ಅವನು ಇನ್ನೂ ಏಳು ದಿನ ಕಾದು ಮತ್ತೆ ಪಾರಿವಾಳನ ಹೊರಗೆ ಬಿಟ್ಟ. ಅದು ವಾಪಾಸ್ ಬರಲೇ ಇಲ್ಲ.
13 ನೋಹನ ಜೀವನದ 601ನೇ ವರ್ಷದ+ ಮೊದಲನೇ ತಿಂಗಳ ಮೊದಲನೇ ದಿನ ಭೂಮಿ ಮೇಲಿದ್ದ ನೀರು ಇಳಿದುಹೋಗಿತ್ತು. ನೋಹ ಹಡಗಿನ ಚಾವಣಿಯನ್ನ ಸ್ವಲ್ಪ ತೆಗೆದು ನೋಡಿದಾಗ ನೆಲ ಒಣಗ್ತಾ ಇದೆ ಅಂತ ಗೊತ್ತಾಯ್ತು. 14 ಎರಡನೇ ತಿಂಗಳ 27ನೇ ದಿನ ನೆಲ ಪೂರ್ತಿ ಒಣಗಿತ್ತು.
15 ಆಗ ದೇವರು ನೋಹಗೆ 16 “ನೀನು ನಿನ್ನ ಹೆಂಡತಿ, ಮಕ್ಕಳು ಮತ್ತು ಸೊಸೆಯಂದಿರನ್ನ ಕರ್ಕೊಂಡು ಹಡಗಿಂದ ಹೊರಗೆ ಬಾ.+ 17 ಹಾರಾಡೋ ಜೀವಿಗಳು, ಪ್ರಾಣಿಗಳು, ನೆಲದ ಮೇಲೆ ಹರಿದಾಡೋ ಎಲ್ಲ ಪ್ರಾಣಿಗಳು ಹೀಗೆ ಎಲ್ಲ ರೀತಿಯ ಜೀವಿಗಳನ್ನ+ ನಿನ್ನ ಜೊತೆ ಹಡಗಿಂದ ಹೊರಗೆ ಕರ್ಕೊಂಡು ಬಾ. ಅವು ಮಕ್ಕಳುಮರಿ ಮಾಡ್ಕೊಂಡು ಭೂಮಿಯಲ್ಲಿ ಹೆಚ್ಚಾಗ್ಲಿ. ಅವುಗಳ ಸಂಖ್ಯೆ ತುಂಬ ಜಾಸ್ತಿ ಆಗ್ಲಿ”+ ಅಂದನು.
18 ಆಗ ನೋಹ ತನ್ನ ಹೆಂಡತಿ, ಮಕ್ಕಳು+ ಸೊಸೆಯರ ಜೊತೆ ಹೊರಗೆ ಬಂದ. 19 ಹರಿದಾಡೋ, ಹಾರಾಡೋ, ನೆಲದ ಮೇಲೆ ಓಡಾಡೋ ಎಲ್ಲ ಪ್ರಾಣಿಗಳು ತಮ್ಮ ತಮ್ಮ ಗುಂಪಿನ ಜೊತೆ ಹಡಗಿಂದ ಹೊರಗೆ ಬಂದ್ವು.+ 20 ಆಮೇಲೆ ನೋಹ ಯೆಹೋವನಿಗಾಗಿ ಯಜ್ಞವೇದಿ+ ಕಟ್ಟಿದ. ಶುದ್ಧ ಪ್ರಾಣಿಗಳಿಂದ, ಶುದ್ಧ ಪಕ್ಷಿಗಳಿಂದ+ ಕೆಲವನ್ನ ಅದ್ರ ಮೇಲೆ ಸರ್ವಾಂಗಹೋಮ ಬಲಿಯಾಗಿ ಕೊಟ್ಟ.+ 21 ಆ ಬಲಿಯ ಪರಿಮಳದಿಂದ ಯೆಹೋವನಿಗೆ ಖುಷಿ ಆಯ್ತು.* ಹಾಗಾಗಿ ಯೆಹೋವ ತನ್ನ ಹೃದಯದಲ್ಲಿ ಹೀಗೆ ಅಂದ್ಕೊಂಡನು: “ಇನ್ಮುಂದೆ ಯಾವತ್ತೂ ನಾನು ಮನುಷ್ಯನ ಸಲುವಾಗಿ ಭೂಮಿಗೆ+ ಶಾಪ ಕೊಡಲ್ಲ. ಯಾಕಂದ್ರೆ ಚಿಕ್ಕಂದಿನಿಂದಾನೇ+ ಮನುಷ್ಯನ ಹೃದಯದ ಆಸೆಗಳು ಕೆಟ್ಟದ್ರ ಕಡೆಗೆ ವಾಲುತ್ತೆ. ಅಷ್ಟೇ ಅಲ್ಲ, ನಾನು ಯಾವತ್ತೂ ಮತ್ತೆ ಈ ರೀತಿ ಎಲ್ಲ ಜೀವಿಗಳನ್ನ ನಾಶಮಾಡಲ್ಲ.+ 22 ಈಗಿಂದ ಭೂಮಿ ಮೇಲೆ ಬಿತ್ತನೆ-ಕೊಯ್ಲು, ಚಳಿ-ಸೆಕೆ, ಬೇಸಿಗೆ-ಚಳಿಗಾಲ, ಹಗಲು-ರಾತ್ರಿ ಯಾವತ್ತೂ ನಿಂತು ಹೋಗಲ್ಲ.”+
9 ದೇವರು ನೋಹ, ಅವನ ಮಕ್ಕಳನ್ನ ಆಶೀರ್ವದಿಸ್ತಾ ಹೀಗಂದನು: “ನೀವು ತುಂಬ ಮಕ್ಕಳನ್ನ ಪಡೆದು ಭೂಮೀಲಿ ತುಂಬ ಜನ ತುಂಬ್ಕೊಳಿ.+ 2 ಭೂಮಿಯಲ್ಲಿರೋ ಎಲ್ಲ ಜೀವಿಗಳು ಮುಂದಕ್ಕೂ ನಿಮಗೆ ಹೆದರುತ್ತೆ. ಆಕಾಶದಲ್ಲಿ ಹಾರೋ, ನೆಲದ ಮೇಲೆ ಚಲಿಸೋ ಎಲ್ಲ ಜೀವಿಗಳು, ಸಮುದ್ರದಲ್ಲಿರೋ ಎಲ್ಲ ಮೀನುಗಳು ನಿಮಗೆ ಭಯಪಡುತ್ತೆ. ಇವನ್ನೆಲ್ಲ ನಾನು ನಿಮ್ಮ ಕೈಗೆ ಒಪ್ಪಿಸಿದ್ದೀನಿ.*+ 3 ಭೂಮಿಯಲ್ಲಿ ಜೀವಂತವಾಗಿರೋ ಎಲ್ಲ ಪ್ರಾಣಿಗಳನ್ನ ನೀವು ತಿನ್ನಬಹುದು.+ ನಾನು ನಿಮಗೆ ಊಟಕ್ಕಾಗಿ ಹಸಿರು ಸಸ್ಯಗಳನ್ನ ಕೊಟ್ಟ ಹಾಗೆ ಇವನ್ನೆಲ್ಲ ಕೊಡ್ತೀನಿ.+ 4 ಆದ್ರೆ ರಕ್ತ ಇರೋ ಮಾಂಸನ ನೀವು ತಿನ್ನಲೇಬಾರದು.+ ಯಾಕಂದ್ರೆ ರಕ್ತ+ ಜೀವವಾಗಿದೆ. 5 ಯಾರಾದ್ರೂ ಜೀವ ಆಗಿರೋ ನಿಮ್ಮ ರಕ್ತನ ಸುರಿಸಿದ್ರೆ* ನಾನು ಅವ್ರಿಂದ ಲೆಕ್ಕ ಕೇಳ್ತೀನಿ. ನಿಮ್ಮ ರಕ್ತ ಸುರಿಸಿದ್ದು ಪ್ರಾಣಿಯಾಗಿದ್ರೆ ಅದನ್ನ ಸಾಯಿಸಬೇಕು.+ ರಕ್ತ ಸುರಿಸಿದ್ದು ಮನುಷ್ಯನಾಗಿದ್ರೆ ಸತ್ತವನ ಜೀವಕ್ಕೆ ಬದಲು ಅವನು ತನ್ನ ಜೀವ ಕೊಡಲೇಬೇಕು. ಯಾಕಂದ್ರೆ ಅವನು ಕೊಂದಿದ್ದು ತನ್ನ ಸಹೋದರನನ್ನ ಅಲ್ವಾ? 6 ದೇವರು ಮನುಷ್ಯನನ್ನ ತನ್ನ ಹಾಗೆ ಸೃಷ್ಟಿ ಮಾಡಿದ್ರಿಂದ+ ಯಾರಾದ್ರೂ ಮನುಷ್ಯನ ರಕ್ತ ಸುರಿಸಿದ್ರೆ+ ಅವನ ರಕ್ತನೂ ಮನುಷ್ಯನೇ ಸುರಿಸ್ತಾನೆ. 7 ನೀವು ತುಂಬ ಮಕ್ಕಳನ್ನ ಪಡೆದು ತುಂಬ ಜನ ಆಗಿ ಇಡೀ ಭೂಮಿ ತುಂಬ್ಕೊಳಿ.”+
8 ಆಮೇಲೆ ದೇವರು ನೋಹ, ಅವನ ಜೊತೆ ಇದ್ದ ಮಕ್ಕಳಿಗೆ ಹೀಗಂದನು: 9 “ಈಗ ನಾನು ನಿಮ್ಮ ಜೊತೆ, ನಿಮಗಾಗೋ ಸಂತಾನದ ಜೊತೆ ಒಪ್ಪಂದ ಮಾಡ್ಕೊಳ್ತೀನಿ.+ 10 ನಿಮ್ಮ ಜೊತೆ ಹಡಗಿಂದ ಹೊರಗೆ ಬಂದ ಪ್ರತಿಯೊಂದು ಜೀವಿಯ ಜೊತೆ ಅಂದ್ರೆ ಪಕ್ಷಿಗಳು, ಸಾಕುಪ್ರಾಣಿಗಳು, ಕಾಡುಪ್ರಾಣಿಗಳ ಜೊತೆ ಒಪ್ಪಂದ ಮಾಡ್ಕೊಳ್ತೀನಿ. ಈ ಒಪ್ಪಂದವನ್ನ ಭೂಮಿಯ ಎಲ್ಲ ಜೀವಿಗಳ ಜೊತೆ ಮಾಡ್ಕೊಳ್ತೀನಿ.+ 11 ಅದೇನಂದ್ರೆ ನಾನು ಇನ್ನು ಯಾವತ್ತೂ ಜಲಪ್ರಳಯದಿಂದ ಎಲ್ಲ ಪ್ರಾಣಿಗಳನ್ನ, ಮನುಷ್ಯರನ್ನ ನಾಶಮಾಡಲ್ಲ. ಇನ್ನು ಯಾವತ್ತೂ ಇಡೀ ಭೂಮಿನ ನೀರಿಂದ ನಾಶಮಾಡಲ್ಲ ಅಂತ ನಿಮಗೆ ಮಾತು ಕೊಡ್ತೀನಿ.”+
12 ದೇವರು ಇದನ್ನೂ ಹೇಳಿದನು: “ನಿಮ್ಮ ಜೊತೆ, ಎಲ್ಲ ಜೀವಿಗಳ ಜೊತೆ ನಾನು ಮಾಡಿರೋ ಈ ಒಪ್ಪಂದ ಮುಂದಿನ ಎಲ್ಲ ತಲೆಮಾರುಗಳ ತನಕ ಇರುತ್ತೆ. ಈ ಒಪ್ಪಂದಕ್ಕೆ ಒಂದು ಗುರುತಾಗಿ 13 ನಾನು ಮೋಡಗಳಲ್ಲಿ ಮಳೆಬಿಲ್ಲು ಇಡ್ತೀನಿ. ಭೂಮಿಯಲ್ಲಿ ಜೀವಿಸೋ ಎಲ್ಲ ಮನುಷ್ಯರ ಜೊತೆ, ಜೀವಿಗಳ ಜೊತೆ ನಾನು ಮಾಡ್ಕೊಂಡಿರೋ ಒಪ್ಪಂದಕ್ಕೆ ಇದು ಗುರುತಾಗಿರುತ್ತೆ. 14 ನಾನು ಆಕಾಶದಲ್ಲಿ ಮೋಡ ತಂದಾಗೆಲ್ಲ ಆ ಮೋಡದಲ್ಲಿ ಮಳೆಬಿಲ್ಲು ಕಾಣಿಸುತ್ತೆ. 15 ಆಗ ನಾನು ನಿಮ್ಮ ಜೊತೆ, ಎಲ್ಲ ಜಾತಿಯ ಜೀವಿಗಳ ಜೊತೆ ಮಾಡ್ಕೊಂಡಿರೋ ಶಾಶ್ವತ ಒಪ್ಪಂದನ ನೆನಪಿಸ್ಕೊಳ್ತೀನಿ. ಹಾಗಾಗಿ ನಾನು ಮುಂದೆ ಯಾವತ್ತೂ ಪ್ರಾಣಿಗಳನ್ನ ಮನುಷ್ಯರನ್ನ ನೀರಿಂದ ನಾಶಮಾಡಲ್ಲ.+ 16 ಮೋಡದಲ್ಲಿ ಮಳೆಬಿಲ್ಲು ಕಾಣಿಸ್ವಾಗ ಅದನ್ನ ನೋಡಿ ಭೂಮಿಯಲ್ಲಿರೋ ಎಲ್ಲ ಜಾತಿಯ ಜೀವಿಗಳ ಜೊತೆ ನಾನು ಮಾಡ್ಕೊಂಡ ಆ ಒಪ್ಪಂದವನ್ನ ನೆನಪಿಸ್ಕೊಳ್ತೀನಿ.”
17 ದೇವರು ಮತ್ತೆ ನೋಹಗೆ “ನಾನು ಭೂಮಿಯಲ್ಲಿರೋ ಪ್ರಾಣಿಗಳ ಜೊತೆ, ಮನುಷ್ಯರ ಜೊತೆ ಮಾಡಿರೋ ಒಪ್ಪಂದಕ್ಕೆ ಗುರುತೇ ಈ ಮಳೆಬಿಲ್ಲು”+ ಅಂದನು.
18 ಹಡಗಿಂದ ಹೊರಗೆ ಬಂದ ನೋಹನ ಮಕ್ಕಳು ಯಾರಂದ್ರೆ ಶೇಮ್, ಹಾಮ್, ಯೆಫೆತ್.+ ಆಮೇಲೆ ಹಾಮನಿಗೆ ಕಾನಾನ ಹುಟ್ಟಿದ.+ 19 ಈ ಮೂವರು ನೋಹನ ಮಕ್ಕಳು. ಇವರಿಂದಾನೇ ಭೂಮಿಯಲ್ಲಿರೋ ಎಲ್ಲ ಜನ್ರು ಹುಟ್ಟಿದ್ರು, ಎಲ್ಲ ಕಡೆ ಹರಡ್ಕೊಂಡ್ರು.+
20 ನೋಹ ವ್ಯವಸಾಯ ಮಾಡೋಕೆ ಶುರುಮಾಡಿದ. ಅವನು ಒಂದು ದ್ರಾಕ್ಷಿತೋಟ ಮಾಡಿದ. 21 ಒಂದು ದಿನ ದ್ರಾಕ್ಷಾಮದ್ಯ ಕುಡಿದು ಅಮಲೇರಿ ತನ್ನ ಡೇರೆಯೊಳಗೆ ಬೆತ್ತಲೆಯಾಗಿ ಬಿದ್ದಿದ್ದ. 22 ಕಾನಾನನ ತಂದೆ ಹಾಮ ತನ್ನ ತಂದೆ ಬೆತ್ತಲೆಯಾಗಿ ಇರೋದನ್ನ ನೋಡಿ* ಹೊರಗಿದ್ದ ಅಣ್ಣಂದಿರಿಗೆ ಹೇಳಿದ. 23 ಆಗ ಶೇಮ್ ಮತ್ತು ಯೆಫೆತ್ ಉದ್ದವಾದ ಬಟ್ಟೆನ ತಮ್ಮ ಹೆಗಲ ಮೇಲೆ ಹಾಕೊಂಡು ನೋಹನ ಕಡೆಗೆ ಬೆನ್ನುಮಾಡಿ ಹಿಂದೆಹಿಂದೆ ನಡ್ಕೊಂಡು ಹೋಗಿ ಆ ಬಟ್ಟೆನ ಅಪ್ಪಗೆ ಹೊದಿಸಿದ್ರು. ಅವರು ಹಿಂದೆ ತಿರುಗಿದ್ರಿಂದ ನೋಹ ಬೆತ್ತಲೆಯಾಗಿ ಇರೋದನ್ನ ನೋಡಲಿಲ್ಲ.
24 ಅಮಲು ಇಳಿದ ಮೇಲೆ ನೋಹ ಎದ್ದಾಗ ಅವನ ಚಿಕ್ಕ ಮಗ ಮಾಡಿದ್ದು ಗೊತ್ತಾಗಿ 25 ಹೀಗಂದ:
26 ನೋಹ ಇದನ್ನೂ ಹೇಳಿದ:
“ಶೇಮನ ದೇವರಾದ ಯೆಹೋವನನ್ನ ಹೊಗಳಲಿ,
ಕಾನಾನ ಶೇಮನಿಗೆ ದಾಸ ಆಗಲಿ.+
27 ಯೆಫೆತನಿಗೆ ದೇವರು ವಿಸ್ತಾರ ಸ್ಥಳ ಕೊಡ್ಲಿ,
ಯೆಫೆತ ಶೇಮನ ಡೇರೆಯಲ್ಲಿ ವಾಸ ಮಾಡ್ಲಿ.
ಕಾನಾನ ಯೆಫೆತನಿಗೂ ದಾಸ ಆಗ್ಲಿ.”
28 ಜಲಪ್ರಳಯ ಆದ್ಮೇಲೆ ನೋಹ 350 ವರ್ಷ ಬದುಕಿದ.+ 29 ನೋಹ ಒಟ್ಟು 950 ವರ್ಷ ಬದುಕಿ ಸತ್ತ.
10 ಇದು ನೋಹನ ಮಕ್ಕಳಾದ ಶೇಮ್,+ ಹಾಮ್, ಯೆಫೆತನ ಚರಿತ್ರೆ.
ಜಲಪ್ರಳಯ ಆದ್ಮೇಲೆ ಅವರಿಗೆ ಮಕ್ಕಳು ಹುಟ್ಟಿದ್ರು.+ 2 ಯೆಫೆತನ ಮಕ್ಕಳು ಗೋಮೆರ್,+ ಮಾಗೋಗ್,+ ಮಾದಯ್, ಯಾವಾನ್, ತೂಬಲ್,+ ಮೇಷೆಕ್,+ ತೀರಾಸ್.+
3 ಗೋಮೆರನ ಮಕ್ಕಳು ಅಷ್ಕೆನಸ್,+ ರೀಫತ್, ತೋಗರ್ಮ.+
4 ಯಾವಾನನ ಮಕ್ಕಳು ಎಲೀಷಾ,+ ತಾರ್ಷೀಷ್,+ ಕಿತ್ತೀಮ್,+ ದೋದಾನೀಮ್.
5 ಇವರ ವಂಶದವರು ತಮ್ಮತಮ್ಮ ಭಾಷೆ, ಕುಟುಂಬ, ಜನಾಂಗದ ಪ್ರಕಾರ ಚದರಿ ದ್ವೀಪಗಳಲ್ಲಿ ವಾಸ ಮಾಡಿದ್ರು.
6 ಹಾಮನ ಮಕ್ಕಳು ಕೂಷ್, ಮಿಚ್ರಯಿಮ್,+ ಪೂಟ್,+ ಕಾನಾನ್.+
7 ಕೂಷನ ಮಕ್ಕಳು ಸೆಬಾ,+ ಹವೀಲಾ, ಸಬ್ತಾ, ರಮ್ಮ,+ ಸಬ್ತಕಾ.
ರಮ್ಮನ ಮಕ್ಕಳು ಶೆಬ, ದೆದಾನ್.
8 ಕೂಷನಿಗೆ ನಿಮ್ರೋದ ಹುಟ್ಟಿದ. ನಿಮ್ರೋದ ಭೂಮಿಯಲ್ಲಿ ಮೊದಲ ಶಕ್ತಿಶಾಲಿ ವ್ಯಕ್ತಿ. 9 ಬಲಿಷ್ಠ ಬೇಟೆಗಾರನಾಗಿದ್ದ ಅವನು ಯೆಹೋವನನ್ನ ವಿರೋಧಿಸಿದ. ಈ ಕಾರಣಕ್ಕೆನೇ ಕೆಲವೊಮ್ಮೆ ಜನ್ರು ಬೇರೆಯವರನ್ನ ನಿಮ್ರೋದನಿಗೆ ಹೋಲಿಸಿ “ಇವನು ಯೆಹೋವನನ್ನ ವಿರೋಧಿಸಿದ ಬಲಿಷ್ಠ ಬೇಟೆಗಾರ ನಿಮ್ರೋದನ ಹಾಗೆನೇ ಇದ್ದಾನೆ” ಅಂತಾರೆ. 10 ಅವನು ಮೊದಮೊದಲು ಆಳಿದ ಪಟ್ಟಣಗಳು: ಬಾಬೆಲ್,+ ಯೆರೆಕ್,+ ಅಕ್ಕದ್, ಕಲ್ನೇ. ಇವು ಶಿನಾರ್+ ಪ್ರದೇಶದಲ್ಲಿ ಇದೆ. 11 ಅವನು ಆ ಪ್ರದೇಶದಿಂದ ಹೊರಟು ಅಶ್ಶೂರ್+ ದೇಶಕ್ಕೆ ಬಂದು ಅಲ್ಲಿ ಕಟ್ಟಿದ ಪಟ್ಟಣಗಳು ಯಾವುದಂದ್ರೆ ನಿನೆವೆ,+ ರೆಹೋಬೋತೀರ್, ಕೆಲಹ, 12 ನಿನೆವೆಗೂ ಕೆಲಹಕ್ಕೂ ಮಧ್ಯ ಇರೋ ರೆಸೆನ್. ಇದು* ದೊಡ್ಡ ಪಟ್ಟಣ.
13 ಮಿಚ್ರಯಿಮನ ಮಕ್ಕಳು ಲೂದ್ಯ,+ ಅನಾಮ್, ಲೆಹಾಬ್, ನಫ್ತುಹ್ಯ,+ 14 ಪತ್ರುಸ್ಯ,+ ಕಸ್ಲುಹ್ಯ, ಕಫ್ತೋರ್ಯ.+ ಕಸ್ಲುಹ್ಯನ ವಂಶದವರೇ ಫಿಲಿಷ್ಟಿಯರು.+
15 ಕಾನಾನನ ಮೊದಲನೇ ಮಗ ಸೀದೋನ್.+ ಆಮೇಲೆ ಹೇತ್+ ಹುಟ್ಟಿದ. 16 ಅಷ್ಟೇ ಅಲ್ಲ ಯೆಬೂಸಿಯರು,+ ಅಮೋರಿಯರು,+ ಗಿರ್ಗಾಷಿಯರು, 17 ಹಿವ್ವಿಯರು,+ ಅರ್ಕಿಯರು, ಸೀನಿಯರು, 18 ಅರ್ವಾದಿಯರು,+ ಚೆಮಾರಿಯರು, ಹಾಮಾತ್ಯರು+ ಕಾನಾನನಿಂದ ಹುಟ್ಟಿದ್ರು. ಆಮೇಲೆ ಕಾನಾನನ ಕುಟುಂಬಗಳು ಬೇರೆಬೇರೆ ಜಾಗಕ್ಕೆ ಚೆಲ್ಲಾಪಿಲ್ಲಿ ಆಯ್ತು. 19 ಕಾನಾನ್ಯರ ಪ್ರದೇಶದ ಗಡಿ ಸೀದೋನಿಂದ ದೂರದ ಗಾಜಾಕ್ಕೆ+ ಹತ್ರ ಇರೋ ಗೆರಾರಿನ+ ತನಕ, ಲೆಷಾಕ್ಕೆ ಹತ್ರ ಇರೋ ಸೊದೋಮ್, ಗೊಮೋರ,+ ಅದ್ಮಾ, ಚೆಬೋಯೀಮ್+ ತನಕ ಇತ್ತು. 20 ಇವರೇ ಹಾಮನ ವಂಶದವರು. ಇವರನ್ನ ಅವರವರ ಕುಟುಂಬ, ಭಾಷೆ, ಪ್ರದೇಶ ಮತ್ತು ಜನಾಂಗದ ಪ್ರಕಾರ ಪಟ್ಟಿಮಾಡಲಾಗಿದೆ.
21 ಯೆಫೆತನ ತಮ್ಮನಾದ* ಶೇಮನಿಗೆ ಕೂಡ ಮಕ್ಕಳಾದ್ರು. ಶೇಮ ಎಬೆರನ+ ಎಲ್ಲ ಮಕ್ಕಳ ಪೂರ್ವಜ. 22 ಶೇಮನ ಮಕ್ಕಳು ಏಲಾಮ್,+ ಅಶ್ಶೂರ್,+ ಅರ್ಪಕ್ಷದ,+ ಲೂದ್, ಅರಾಮ್.+
23 ಅರಾಮನ ಮಕ್ಕಳು ಊಚ್, ಹೂಲ್, ಗೆತೆರ್, ಮಷ್.
24 ಅರ್ಪಕ್ಷದನಿಗೆ ಶೆಲಹ+ ಹುಟ್ಟಿದ. ಶೆಲಹನಿಗೆ ಎಬೆರ ಹುಟ್ಟಿದ.
25 ಎಬೆರನಿಗೆ ಇಬ್ರು ಮಕ್ಕಳು ಹುಟ್ಟಿದ್ರು. ಒಬ್ಬನ ಹೆಸ್ರು ಪೆಲೆಗ.*+ ಯಾಕಂದ್ರೆ ಅವನ ಕಾಲದಲ್ಲಿ ಭೂಮಿಯಲ್ಲಿದ್ದ ಜನ ಚದರಿಹೋದ್ರು. ಇನ್ನೊಬ್ಬ ಮಗನ ಹೆಸ್ರು ಯೊಕ್ತಾನ್.+
26 ಯೊಕ್ತಾನನಿಗೆ ಹುಟ್ಟಿದ ಮಕ್ಕಳು ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ,+ 27 ಹದೋರಾಮ್, ಊಜಾಲ್, ದಿಕ್ಲಾ, 28 ಓಬಾಲ್, ಅಬೀಮಯೇಲ್, ಶೆಬ,29 ಓಫೀರ್,+ ಹವೀಲಾ, ಯೋಬಾಬ್. ಇವರೆಲ್ಲ ಯೊಕ್ತಾನನ ಮಕ್ಕಳು.
30 ಅವರು ವಾಸಿಸ್ತಿದ್ದ ಪ್ರದೇಶ ಮೇಶಾದಿಂದ ಹಿಡಿದು ಪೂರ್ವದ ಬೆಟ್ಟ ಪ್ರದೇಶವಾದ ಸೆಫಾರ್ ತನಕ ಇತ್ತು.
31 ಇವರೇ ಶೇಮನ ವಂಶದವರು. ಇವರನ್ನ ಅವರವರ ಕುಟುಂಬ, ಭಾಷೆ, ಪ್ರದೇಶ ಮತ್ತು ಜನಾಂಗದ ಪ್ರಕಾರ ಪಟ್ಟಿಮಾಡಲಾಗಿದೆ.+
32 ಇವು ನೋಹನ ಮಕ್ಕಳ ಕುಟುಂಬಗಳು. ಇವರನ್ನ ಅವರವರ ವಂಶ ಮತ್ತು ಜನಾಂಗಗಳ ಪ್ರಕಾರ ಪಟ್ಟಿಮಾಡಲಾಗಿದೆ. ಜಲಪ್ರಳಯ ಆದ್ಮೇಲೆ ಭೂಮಿ ತುಂಬ ಹರಡಿದ್ದ ಜನ್ರು ಬಂದದ್ದು ಈ ಕುಟುಂಬಗಳಿಂದಾನೇ.+
11 ಆಗ ಇಡೀ ಭೂಮೀಲಿ ಎಲ್ರೂ ಒಂದೇ ಭಾಷೆ ಮಾತಾಡ್ತಿದ್ರು. ಜನ್ರು ಬಳಸ್ತಿದ್ದ ಪದಗಳು* ಒಂದೇ ರೀತಿ ಇತ್ತು. 2 ಜನ ಪೂರ್ವದ ಕಡೆಗೆ ಪ್ರಯಾಣ ಮಾಡ್ತಾ ಶಿನಾರ್+ ಪ್ರದೇಶಕ್ಕೆ ಬಂದಾಗ ಒಂದು ಕಣಿವೆ ಬಯಲನ್ನ ನೋಡಿ ಅಲ್ಲಿ ವಾಸ ಮಾಡೋಕೆ ಶುರು ಮಾಡಿದ್ರು. 3 ಅವರು ಒಬ್ರಿಗೊಬ್ರು ಮಾತಾಡ್ಕೊಳ್ತಾ “ಬನ್ನಿ, ಇಟ್ಟಿಗೆ ಮಾಡಿ ಬೆಂಕೀಲಿ ಸುಡೋಣ” ಅಂದ್ರು. ಅವರು ಕಲ್ಲು ಬದಲು ಇಟ್ಟಿಗೆ ಬಳಸಿದ್ರು, ಗಾರೆಗಾಗಿ ಟಾರಿನಂಥ ಅಂಟು ಬಳಸಿದ್ರು. 4 ಅವರು “ನಾವು ಭೂಮಿಯ ಎಲ್ಲಾ ಕಡೆ ಚದರಿ ಹೋಗೋದು ಬೇಡ. ನಮಗೋಸ್ಕರ ಇಲ್ಲೇ ಒಂದು ಪಟ್ಟಣ, ಆಕಾಶ ಮುಟ್ಟೊ ತರ ಎತ್ತರದ ಗೋಪುರ ಕಟ್ಟೋಣ. ಹೀಗೆ ನಾವು ದೊಡ್ಡ ಹೆಸ್ರು ಮಾಡೋಣ”+ ಅಂದ್ಕೊಂಡ್ರು.
5 ಮನುಷ್ಯರು ಕಟ್ತಿದ್ದ ಪಟ್ಟಣವನ್ನ, ಗೋಪುರವನ್ನ ನೋಡೋಕೆ ಯೆಹೋವ ಇಳಿದುಬಂದನು.* 6 ಆಗ ಯೆಹೋವ “ನೋಡು, ಈ ಜನ್ರು ಒಂದೇ ಭಾಷೆ+ ಮಾತಾಡ್ತಾ ಇರೋದ್ರಿಂದ ಒಟ್ಟಾಗಿದ್ದಾರೆ. ಏನೇ ಮಾಡ್ಬೇಕು ಅಂತ ಅಂದ್ಕೊಂಡ್ರೂ ಅದನ್ನ ಸಾಧಿಸಿಬಿಡ್ತಾರೆ. 7 ಬಾ, ನಾವು+ ಕೆಳಗೆ ಹೋಗಿ ಒಬ್ರ ಮಾತು ಇನ್ನೊಬ್ರಿಗೆ ಅರ್ಥವಾಗದ ಹಾಗೆ ಅವರ ಭಾಷೆ ಗಲಿಬಿಲಿ ಮಾಡೋಣ” ಅಂದನು. 8 ಅದೇ ತರ ಮಾಡಿ ಯೆಹೋವ ಅವರನ್ನ ಅಲ್ಲಿಂದ ಭೂಮಿಯ ಎಲ್ಲ ಕಡೆಗೆ ಚದರಿಸಿಬಿಟ್ಟನು.+ ನಿಧಾನವಾಗಿ ಅವರು ಪಟ್ಟಣ ಕಟ್ಟೋ ಕೆಲಸ ಬಿಟ್ಟುಬಿಟ್ರು. 9 ಯೆಹೋವ ಆ ಸ್ಥಳದಲ್ಲಿ ಭೂಮಿಯಲ್ಲಿದ್ದ ಭಾಷೆ ಗಲಿಬಿಲಿ ಮಾಡಿದ್ರಿಂದ, ಜನ್ರನ್ನ ಯೆಹೋವ ಅಲ್ಲಿಂದ ಇಡೀ ಭೂಮೀಲಿ ಚದರಿಸಿದ್ರಿಂದ ಆ ಜಾಗಕ್ಕೆ ಬಾಬೆಲ್*+ ಅಂತ ಹೆಸ್ರು ಬಂತು.
10 ಇದು ಶೇಮನ+ ಚರಿತ್ರೆ.
ಜಲಪ್ರಳಯವಾಗಿ ಎರಡು ವರ್ಷ ಆದ್ಮೇಲೆ ಶೇಮನಿಗೆ ಅರ್ಪಕ್ಷದ+ ಹುಟ್ಟಿದ. ಆಗ ಶೇಮನಿಗೆ 100 ವರ್ಷ. 11 ಅರ್ಪಕ್ಷದ ಹುಟ್ಟಿದ ಮೇಲೆ ಶೇಮ ಇನ್ನೂ 500 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು.+
12 ಅರ್ಪಕ್ಷದನಿಗೆ 35 ವರ್ಷ ಆದಾಗ ಅವನಿಗೆ ಶೆಲಹ ಹುಟ್ಟಿದ.+ 13 ಶೆಲಹ ಹುಟ್ಟಿದ ಮೇಲೆ ಅರ್ಪಕ್ಷದ ಇನ್ನೂ 403 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು.
14 ಶೆಲಹನಿಗೆ 30 ವರ್ಷ ಆದಾಗ ಅವನಿಗೆ ಎಬೆರ+ ಹುಟ್ಟಿದ. 15 ಎಬೆರ ಹುಟ್ಟಿದ ಮೇಲೆ ಶೆಲಹ ಇನ್ನೂ 403 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು.
16 ಎಬೆರನಿಗೆ 34 ವರ್ಷ ಆದಾಗ ಅವನಿಗೆ ಪೆಲೆಗ+ ಹುಟ್ಟಿದ. 17 ಪೆಲೆಗ ಹುಟ್ಟಿದ ಮೇಲೆ ಎಬೆರ ಇನ್ನೂ 430 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು.
18 ಪೆಲೆಗನಿಗೆ 30 ವರ್ಷ ಆದಾಗ ರೆಗೂ+ ಹುಟ್ಟಿದ. 19 ರೆಗೂ ಹುಟ್ಟಿದ ಮೇಲೆ ಪೆಲೆಗ ಇನ್ನೂ 209 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು.
20 ರೆಗೂಗೆ 32 ವರ್ಷ ಆದಾಗ ಅವನಿಗೆ ಸೆರೂಗ ಹುಟ್ಟಿದ. 21 ಸೆರೂಗ ಹುಟ್ಟಿದ ಮೇಲೆ ರೆಗೂ ಇನ್ನೂ 207 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು.
22 ಸೆರೂಗನಿಗೆ 30 ವರ್ಷ ಆದಾಗ ಅವನಿಗೆ ನಾಹೋರ ಹುಟ್ಟಿದ. 23 ನಾಹೋರ ಹುಟ್ಟಿದ ಮೇಲೆ ಸೆರೂಗ ಇನ್ನೂ 200 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು.
24 ನಾಹೋರನಿಗೆ 29 ವರ್ಷ ಆದಾಗ ಅವನಿಗೆ ತೆರಹ+ ಹುಟ್ಟಿದ. 25 ತೆರಹ ಹುಟ್ಟಿದ ಮೇಲೆ ನಾಹೋರ ಇನ್ನೂ 119 ವರ್ಷ ಬದುಕಿದ. ಅವನಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರು.
26 ತೆರಹನಿಗೆ 70 ವರ್ಷ ಆದಾಗ ಅವನಿಗೆ ಅಬ್ರಾಮ,+ ನಾಹೋರ+ ಮತ್ತು ಹಾರಾನ್ ಹುಟ್ಟಿದ್ರು.
27 ಇದು ತೆರಹನ ಚರಿತ್ರೆ.
ತೆರಹನಿಗೆ ಅಬ್ರಾಮ, ನಾಹೋರ, ಹಾರಾನ್ ಹುಟ್ಟಿದ್ರು. ಹಾರಾನನಿಗೆ ಲೋಟ+ ಹುಟ್ಟಿದ. 28 ತೆರಹ ಬದುಕಿದ್ದಾಗಲೇ ಹಾರಾನ ತನ್ನ ಹುಟ್ಟೂರಲ್ಲಿ ಅಂದ್ರೆ ಕಸ್ದೀಯರ+ ಊರ್+ ಅನ್ನೋ ಪಟ್ಟಣದಲ್ಲಿ ಸತ್ತ. 29 ಅಬ್ರಾಮ ಮದುವೆ ಆದ. ನಾಹೋರ ಸಹ ಮದುವೆ ಆದ. ಅಬ್ರಾಮನ ಹೆಂಡ್ತಿ ಹೆಸ್ರು ಸಾರಯ,+ ನಾಹೋರನ ಹೆಂಡ್ತಿ ಹೆಸ್ರು ಮಿಲ್ಕ.+ ಮಿಲ್ಕ ಮತ್ತು ಇಸ್ಕಳ ತಂದೆ ಹಾರಾನ. 30 ಸಾರಯ ಬಂಜೆ+ ಆಗಿದ್ರಿಂದ ಅವಳಿಗೆ ಮಕ್ಕಳಿರಲಿಲ್ಲ.
31 ಆಮೇಲೆ ತೆರಹ ತನ್ನ ಮಗ ಅಬ್ರಾಮನನ್ನ, ತನ್ನ ಮೊಮ್ಮಗ ಅಂದ್ರೆ ಹಾರಾನನ ಮಗ ಲೋಟನನ್ನ,+ ತನ್ನ ಸೊಸೆ ಅಂದ್ರೆ ಅಬ್ರಾಮನ ಹೆಂಡ್ತಿ ಸಾರಯಳನ್ನ ಕರ್ಕೊಂಡು ಕಸ್ದೀಯರ ಊರ್ ಪಟ್ಟಣ ಬಿಟ್ಟು ಹೊರಟ. ಅವರು ತೆರಹನ ಜೊತೆ ಕಾನಾನ್+ ದೇಶದ ಕಡೆಗೆ ಹೊರಟ್ರು. ಸ್ವಲ್ಪ ದಿನ ಆದ್ಮೇಲೆ ಅವರು ಖಾರಾನ್+ ಪಟ್ಟಣಕ್ಕೆ ಬಂದು ಅಲ್ಲಿ ವಾಸ ಮಾಡೋಕೆ ಶುರು ಮಾಡಿದ್ರು. 32 ತೆರಹ 205 ವರ್ಷ ಜೀವಿಸಿ ಖಾರಾನಲ್ಲಿ ಸತ್ತ.
12 ಯೆಹೋವ ಅಬ್ರಾಮಗೆ ಹೀಗಂದನು: “ನೀನು ನಿನ್ನ ದೇಶ, ಸಂಬಂಧಿಕರು, ನಿನ್ನ ತಂದೆ ಮನೆ ಬಿಟ್ಟು ನಾನು ತೋರಿಸೋ ದೇಶಕ್ಕೆ ಹೋಗು.+ 2 ನಾನು ನಿನ್ನಿಂದ ಒಂದು ದೊಡ್ಡ ಜನಾಂಗ ಆಗೋ ತರ ಮಾಡ್ತೀನಿ. ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಹೆಸ್ರನ್ನ ಪ್ರಸಿದ್ಧ ಮಾಡ್ತೀನಿ. ನಿನ್ನ ಮೂಲಕ ಎಲ್ರೂ ಆಶೀರ್ವಾದ ಪಡ್ಕೊಳ್ತಾರೆ.+ 3 ನಿನಗೆ ಒಳ್ಳೇದು ಮಾಡೋರಿಗೆ ನಾನು ಆಶೀರ್ವಾದ ಮಾಡ್ತೀನಿ. ನಿನಗೆ ಶಾಪ ಹಾಕೋರಿಗೆ ನಾನೂ ಶಾಪ ಹಾಕ್ತೀನಿ.+ ನಿನ್ನಿಂದ ಭೂಮಿಯ ಎಲ್ಲ ಜನ್ರು ಖಂಡಿತ ಆಶೀರ್ವಾದ ಪಡ್ಕೊಳ್ತಾರೆ.”+
4 ಯೆಹೋವ ಹೇಳಿದ ತರಾನೇ ಅಬ್ರಾಮ ಖಾರಾನಿಂದ ಹೊರಟ.+ ಆಗ ಅವನಿಗೆ 75 ವರ್ಷ. ಅವನ ಜೊತೆ ಲೋಟ ಕೂಡ ಹೋದ. 5 ಅಬ್ರಾಮ ತನ್ನ ಹೆಂಡ್ತಿ ಸಾರಯ,+ ತನ್ನ ಸಹೋದರನ ಮಗ ಲೋಟ+ ಹಾಗೂ ಖಾರಾನಲ್ಲಿ ಅವರು ಸಂಪಾದಿಸಿದ್ದ ಸೊತ್ತು+ ಮತ್ತು ಸೇವಕರ ಸಮೇತ ಕಾನಾನಿಗೆ+ ಹೊರಟ. ಅವರು ಕಾನಾನ್ ದೇಶಕ್ಕೆ ಬಂದು ತಲಪಿದ್ರು. 6 ಅಬ್ರಾಮ ಆ ದೇಶದಲ್ಲಿ ಶೇಕೆಮ್ ಅನ್ನೋ ಪಟ್ಟಣದ ತನಕ+ ಪ್ರಯಾಣ ಮಾಡ್ತಾ ಮೋರೆ+ ಅನ್ನೋ ಸ್ಥಳಕ್ಕೆ ಬಂದ. ಅಲ್ಲಿ ದೊಡ್ಡದೊಡ್ಡ ಮರ ಇತ್ತು. ಆ ಕಾಲದಲ್ಲಿ ಕಾನಾನ್ಯರು ಆ ದೇಶದಲ್ಲಿದ್ರು. 7 ಆಮೇಲೆ ಯೆಹೋವ ಅಬ್ರಾಮನಿಗೆ ಕಾಣಿಸ್ಕೊಂಡು “ನಾನು ಈ ದೇಶವನ್ನ ನಿನ್ನ ಸಂತಾನಕ್ಕೆ+ ಕೊಡ್ತೀನಿ”+ ಅಂದನು. ಹಾಗಾಗಿ ಅಬ್ರಾಮ ತನಗೆ ಕಾಣಿಸ್ಕೊಂಡ ಯೆಹೋವನಿಗೆ ಆ ಸ್ಥಳದಲ್ಲಿ ಯಜ್ಞವೇದಿ ಕಟ್ಟಿದ. 8 ಆಮೇಲೆ ಅಲ್ಲಿಂದ ಅವನು ಬೆತೆಲಿನ+ ಪೂರ್ವ ದಿಕ್ಕಲ್ಲಿದ್ದ ಬೆಟ್ಟ ಪ್ರದೇಶಕ್ಕೆ ಹೋಗಿ ಅಲ್ಲಿ ಡೇರೆ ಹಾಕಿದ. ಅಲ್ಲಿಂದ ಪಶ್ಚಿಮಕ್ಕೆ ಬೆತೆಲ್ ಪಟ್ಟಣ ಇತ್ತು, ಪೂರ್ವಕ್ಕೆ ಆಯಿ+ ಪಟ್ಟಣ ಇತ್ತು. ಅಲ್ಲಿ ಅವನು ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟಿ+ ಯೆಹೋವನ ಹೆಸ್ರನ್ನ ಸ್ತುತಿಸೋಕೆ ಆರಂಭಿಸಿದ.+ 9 ಆಮೇಲೆ ಅಬ್ರಾಮ ಡೇರೆ ಕಿತ್ತು ಬೇರೆ ಬೇರೆ ಸ್ಥಳಗಳಲ್ಲಿ ಡೇರೆ ಹಾಕ್ತಾ ನೆಗೆಬ್*+ ಕಡೆಗೆ ಪ್ರಯಾಣಿಸಿದ.
10 ಆಗ ಕಾನಾನ್ ದೇಶದಲ್ಲಿ ಬರ ಬಂತು.+ ದೇಶದಲ್ಲಿ ಬರ ಜಾಸ್ತಿ ಆಗಿದ್ರಿಂದ ಅಬ್ರಾಮ ಈಜಿಪ್ಟಲ್ಲಿ* ಸ್ವಲ್ಪ ಸಮಯ ವಾಸ ಮಾಡೋಕೆ*+ ಆ ದೇಶದ ಕಡೆ ಹೋದ. 11 ಈಜಿಪ್ಟ್ ದೇಶದ ಹತ್ರ ಬಂದಾಗ ಅಬ್ರಾಮ ತನ್ನ ಹೆಂಡ್ತಿ ಸಾರಯಳಿಗೆ “ದಯವಿಟ್ಟು ನಂಗೊಂದು ಸಹಾಯ ಮಾಡು. ನಾವು ಈ ದೇಶಕ್ಕೆ ಹೋದಾಗ ಅಲ್ಲಿನ ಜನ್ರು ನಿನ್ನ ಸೌಂದರ್ಯ ನೋಡಿ ಖಂಡಿತ ಸುಮ್ಮನಿರಲ್ಲ.+ 12 ನೀನು ನನ್ನ ಜೊತೆ ಇರೋದನ್ನ ನೋಡಿ ‘ಇವಳು ಅವನ ಹೆಂಡ್ತಿ ಇರಬೇಕು’ ಅಂತೇಳಿ ನನ್ನನ್ನ ಕೊಂದುಹಾಕ್ತಾರೆ. ನಿನ್ನನ್ನ ಕರ್ಕೊಂಡು ಹೋಗಿ ಇಟ್ಕೊಳ್ತಾರೆ. 13 ಹಾಗಾಗಿ ದಯವಿಟ್ಟು ನೀನು ನನ್ನ ತಂಗಿ ಅಂತ ಹೇಳು. ಆಗ ನನಗೇನೂ ತೊಂದ್ರೆ ಆಗಲ್ಲ. ನಿನ್ನಿಂದ ನನ್ನ ಜೀವ ಉಳಿಯುತ್ತೆ”+ ಅಂದ.
14 ಅಬ್ರಾಮ ಈಜಿಪ್ಟ್ ದೇಶಕ್ಕೆ ಹೋದ ತಕ್ಷಣ ಅಲ್ಲಿನ ಜನ್ರ ದೃಷ್ಟಿ ಸಾರಯಳ ಕಡೆ ಹೋಯ್ತು. ಅವಳ ಸೌಂದರ್ಯ ನೋಡಿದ್ರು. 15 ಫರೋಹನ* ಅಧಿಕಾರಿಗಳು ಕೂಡ ಸಾರಯಳನ್ನ ನೋಡಿದ್ರು. ಅಷ್ಟೇ ಅಲ್ಲ, ಅವರು ಫರೋಹನ ಹತ್ರ ಹೋಗಿ ಅವಳ ಅಂದಚಂದವನ್ನ ಹಾಡಿಹೊಗಳಿದ್ರು. ಹಾಗಾಗಿ ಫರೋಹ ಅವಳನ್ನ ಅರಮನೆಗೆ ಬರೋಕೆ ಹೇಳಿದ. 16 ಅವಳಿಗೋಸ್ಕರ ಫರೋಹ ಅಬ್ರಾಮನನ್ನ ಚೆನ್ನಾಗಿ ನೋಡ್ಕೊಂಡ. ಅವನಿಗೆ ಕುರಿ, ದನ, ಕತ್ತೆ, ಒಂಟೆ, ಆಳುಗಳನ್ನ ಕೊಟ್ಟ.+ 17 ಅಬ್ರಾಮನ ಹೆಂಡತಿ ಸಾರಯಳನ್ನ+ ಕರ್ಕೊಂಡು ಹೋದದ್ರಿಂದ ಯೆಹೋವ ಫರೋಹನಿಗೆ, ಅವನ ಕುಟುಂಬದವರಿಗೆ ದೊಡ್ಡ ಕಾಯಿಲೆಗಳನ್ನ* ಕೊಟ್ಟು ಶಿಕ್ಷಿಸಿದನು. 18 ಆಗ ಫರೋಹ ಅಬ್ರಾಮನನ್ನ ಕರೆದು “ನೀನು ಯಾಕೆ ಮೋಸ ಮಾಡ್ದೆ? ಅವಳು ನಿನ್ನ ಹೆಂಡ್ತಿ ಅಂತ ನನಗ್ಯಾಕೆ ಹೇಳಲಿಲ್ಲ? 19 ಅವಳು ನಿನ್ನ ತಂಗಿ ಅಂತ+ ಯಾಕೆ ಹೇಳ್ದೆ? ನೀನು ಹಾಗೆ ಹೇಳಿದ್ರಿಂದ ನಾನು ಅವಳನ್ನ ಮದುವೆ ಆಗಬೇಕು ಅಂತಿದ್ದೆ. ನೋಡು, ನಿನ್ನ ಹೆಂಡ್ತಿ ಅಲ್ಲಿದ್ದಾಳೆ. ಕರ್ಕೊಂಡು ಹೋಗು!” ಅಂದ. 20 ಅಬ್ರಾಮನನ್ನ ವಾಪಸ್ ಕಳಿಸೋಕೆ ಫರೋಹ ತನ್ನ ಸೇವಕರಿಗೆ ಅಪ್ಪಣೆಕೊಟ್ಟ. ಆಗ ಅವರು ಅಬ್ರಾಮನ ಜೊತೆ ಸಾರಯಳನ್ನ, ಅವನ ಹತ್ರ ಇದ್ದ ಎಲ್ಲವನ್ನ ಕಳಿಸಿಬಿಟ್ರು.+
13 ಅಬ್ರಾಮ ಈಜಿಪ್ಟ್ ಬಿಟ್ಟು ಹೊರಟ. ತನ್ನ ಹತ್ರ ಇದ್ದ ಎಲ್ಲವನ್ನ ತಗೊಂಡು ತನ್ನ ಹೆಂಡತಿನ, ಲೋಟನನ್ನ ಜೊತೇಲಿ ಕರ್ಕೊಂಡು ನೆಗೆಬ್‌ಗೆ+ ಹೋದ. 2 ಅಬ್ರಾಮ ತುಂಬ ಶ್ರೀಮಂತನಾಗಿದ್ದ. ಅವನ ಹತ್ರ ತುಂಬ ಪ್ರಾಣಿಗಳು, ಚಿನ್ನಬೆಳ್ಳಿ ಇತ್ತು.+ 3 ಅವನು ನೆಗೆಬಿಂದ ಬೆತೆಲಿಗೆ ಪ್ರಯಾಣಿಸಿದ. ಬೇರೆ ಬೇರೆ ಜಾಗದಲ್ಲಿ ಡೇರೆ ಹಾಕ್ತಾ ಬೆತೆಲ್ ಮತ್ತು ಆಯಿ+ ಅನ್ನೋ ಪಟ್ಟಣಗಳ ಮಧ್ಯದಲ್ಲಿದ್ದ ಒಂದು ಜಾಗಕ್ಕೆ ಬಂದ. ಆ ಜಾಗದಲ್ಲೇ ಅವನು ಈ ಹಿಂದೆ ಡೇರೆ ಹಾಕಿ 4 ಯಜ್ಞವೇದಿ ಕಟ್ಟಿದ್ದ. ಅಲ್ಲಿ ಅಬ್ರಾಮ ಯೆಹೋವನ ಹೆಸರನ್ನ ಸ್ತುತಿಸಿದ.
5 ಅಬ್ರಾಮನ ಜೊತೆ ಪ್ರಯಾಣಿಸ್ತಿದ್ದ ಲೋಟನ ಹತ್ರಾನೂ ಕುರಿ, ದನ-ಹೋರಿ, ಡೇರೆಗಳು ಇತ್ತು. 6 ಅವರಿಬ್ರ ಹತ್ರನೂ ತುಂಬ ಆಸ್ತಿ ಇದ್ದ ಕಾರಣ ಎಲ್ರೂ ಒಟ್ಟಿಗೆ ಒಂದೇ ಜಾಗದಲ್ಲಿ ಇರೋಕೆ ಕಷ್ಟ ಆಯ್ತು. 7 ಅಬ್ರಾಮನ ದನ ಕಾಯೋರಿಗೂ ಲೋಟನ ದನ ಕಾಯೋರಿಗೂ ಜಗಳ ಆಯ್ತು. (ಆಗ ಕಾನಾನ್ಯರು, ಪೆರಿಜೀಯರು ಆ ಪ್ರದೇಶದಲ್ಲಿ ವಾಸ ಮಾಡ್ತಿದ್ರು.)+ 8 ಹಾಗಾಗಿ ಅಬ್ರಾಮ ಲೋಟನಿಗೆ+ “ದಯವಿಟ್ಟು ನನ್ನ ಮಾತು ಕೇಳು, ನಾವಿಬ್ರು ಸಂಬಂಧಿಕರು. ನಿನಗೂ ನನಗೂ, ನಮ್ಮ ದನ ಕಾಯೋರಿಗೂ ಜಗಳ ಆಗಬಾರದು. 9 ಅದಕ್ಕೇ ನಾವಿಬ್ರೂ ಬೇರೆ ಬೇರೆ ಕಡೆ ಹೋಗೋಣ. ನೋಡು, ಇಡೀ ದೇಶ ನಿನ್ನ ಮುಂದೆ ಇದೆ. ನೀನು ಎಡಗಡೆ ಹೋದ್ರೆ ನಾನು ಬಲಗಡೆ ಹೋಗ್ತೀನಿ. ನೀನು ಬಲಗಡೆ ಹೋದ್ರೆ ನಾನು ಎಡಗಡೆ ಹೋಗ್ತೀನಿ” ಅಂದ. 10 ಆಗ ಲೋಟ ದೂರದ ಚೋಗರ್+ ಪಟ್ಟಣದ ತನಕ ಇದ್ದ ಯೋರ್ದನ್ ಪ್ರದೇಶದ+ ಕಡೆಗೆ ನೋಡಿದ. ಅದು ತುಂಬ ನೀರು ಇರೋ ಜಾಗ ಆಗಿತ್ತು. (ಯೆಹೋವ ಸೊದೋಮ್-ಗೊಮೋರ ಪಟ್ಟಣಗಳನ್ನ ನಾಶ ಮಾಡೋ ಮುಂಚೆ) ಅದು ಯೆಹೋವನ ತೋಟದ*+ ತರ, ಈಜಿಪ್ಟ್ ದೇಶದ ತರ ಇತ್ತು. 11 ಹಾಗಾಗಿ ಲೋಟ ಇಡೀ ಯೋರ್ದನ್ ಪ್ರದೇಶ ಆರಿಸ್ಕೊಂಡು ಪೂರ್ವದ ಕಡೆ ಹೋದ. ಹೀಗೆ ಅವರಿಬ್ರು ಬೇರೆ ಬೇರೆ ಆದ್ರು. 12 ಅಬ್ರಾಮ ಕಾನಾನಲ್ಲೇ ವಾಸ ಮಾಡಿದ. ಆದ್ರೆ ಲೋಟ ಯೋರ್ದನ್ ಪ್ರದೇಶದ ಪಟ್ಟಣಗಳ ಹತ್ರ ವಾಸ ಮಾಡಿದ.+ ಕೊನೆಗೆ ಅವನು ಸೊದೋಮ್ ಪಟ್ಟಣದ ಹತ್ರ ಡೇರೆ ಹಾಕಿದ. 13 ಸೊದೋಮಿನ ಜನ್ರು ತುಂಬ ಕೆಟ್ಟವರಾಗಿದ್ರು, ಯೆಹೋವನ ವಿರುದ್ಧ ದೊಡ್ಡ ಪಾಪಗಳನ್ನ ಮಾಡ್ತಿದ್ರು.+
14 ಲೋಟ ಅಬ್ರಾಮನನ್ನ ಬಿಟ್ಟು ದೂರ ಹೋದ ಮೇಲೆ ಯೆಹೋವ ಅಬ್ರಾಮನಿಗೆ “ದಯವಿಟ್ಟು ಈ ಜಾಗದಿಂದ ಉತ್ತರ ದಕ್ಷಿಣ ಪೂರ್ವ ಪಶ್ಚಿಮದ ಕಡೆಗೆ ನೋಡು. 15 ಯಾಕಂದ್ರೆ ನೀನು ನೋಡ್ತಿರೋ ಈ ಇಡೀ ದೇಶನ ನಿನಗೆ, ನಿನ್ನ ಸಂತಾನಕ್ಕೆ ನಾನು ಶಾಶ್ವತ ಆಸ್ತಿಯಾಗಿ ಕೊಡ್ತೀನಿ.+ 16 ನಿನ್ನ ಸಂತಾನವನ್ನ ಭೂಮಿಯ ಧೂಳಿನ ಕಣಗಳಷ್ಟು ಹೆಚ್ಚಿಸ್ತೀನಿ. ಹೇಗೆ ಧೂಳಿನ ಕಣಗಳನ್ನ ಲೆಕ್ಕ ಮಾಡೋಕೆ ಆಗಲ್ವೋ ಅದೇ ತರ ನಿನ್ನ ಸಂತಾನನ ಲೆಕ್ಕಮಾಡೋಕೆ ಯಾರಿಂದಾನೂ ಆಗಲ್ಲ.+ 17 ನೀನು ಹೋಗಿ ಈ ದೇಶವನ್ನೆಲ್ಲ ಸುತ್ತಿ ನೋಡು. ಯಾಕಂದ್ರೆ ಈ ದೇಶನ ನಾನು ನಿನಗೆ ಕೊಡ್ತೀನಿ” ಅಂದನು. 18 ಹಾಗಾಗಿ ಅಬ್ರಾಮ ಬೇರೆ ಬೇರೆ ಜಾಗಕ್ಕೆ ಹೋಗಿ ಡೇರೆ ಹಾಕಿ ವಾಸ ಮಾಡಿದ. ನಂತ್ರ ಅವನು ಹೆಬ್ರೋನಲ್ಲಿ+ ಮಮ್ರೆ+ ಅನ್ನೋ ಜಾಗಕ್ಕೆ ಬಂದು ದೊಡ್ಡ ದೊಡ್ಡ ಮರಗಳ ಹತ್ರ ವಾಸ ಮಾಡಿದ. ಅಲ್ಲಿ ಅವನು ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟಿದ.+
14 ಆಗ ಶಿನಾರಲ್ಲಿ+ ಅಮ್ರಾಫೆಲ ರಾಜನಾಗಿದ್ದ. ಎಲ್ಲಸಾರಿನಲ್ಲಿ ಅರ್ಯೋಕ ರಾಜನಾಗಿದ್ದ. ಏಲಾಮಿನಲ್ಲಿ+ ಕೆದೊರ್ಲಗೋಮರ+ ರಾಜನಾಗಿದ್ದ. ಗೋಯಿಮಿನಲ್ಲಿ ತಿದ್ಗಾಲ ರಾಜನಾಗಿದ್ದ. 2 ಈ ರಾಜರು ಐದು ರಾಜರ ಜೊತೆ ಅಂದ್ರೆ ಸೊದೋಮಿನ+ ರಾಜ ಬೆರಗ, ಗೊಮೋರದ+ ರಾಜ ಬಿರ್ಶಗ, ಅದ್ಮಾದ ರಾಜ ಶಿನಾಬ, ಚೆಬೋಯೀಮಿನ+ ರಾಜ ಶೆಮೇಬರ ಮತ್ತು ಬೆಳದ (ಅಂದ್ರೆ ಚೋಗರಿನ) ರಾಜನ ಜೊತೆ ಯುದ್ಧ ಮಾಡಿದ್ರು. 3 ಇವರೆಲ್ರೂ ತಮ್ಮ ತಮ್ಮ ಸೈನ್ಯದ ಜೊತೆ ಸಿದ್ದೀಮ್ ಕಣಿವೆಗೆ+ ಬಂದ್ರು. ಈ ಕಣಿವೆ ಈಗ ಲವಣ ಸಮುದ್ರವಾಗಿದೆ.*+
4 ಆ ಐದು ರಾಜರು 12 ವರ್ಷ ಕೆದೊರ್ಲಗೋಮರ ರಾಜನ ಮಾತು ಕೇಳಿದ್ರು. ಆದ್ರೆ 13ನೇ ವರ್ಷದಲ್ಲಿ ಆ ರಾಜನಿಗೆ ತಿರುಗಿಬಿದ್ರು. 5 ಹಾಗಾಗಿ 14ನೇ ವರ್ಷದಲ್ಲಿ ಕೆದೊರ್ಲಗೋಮರ, ಅವನ ಜೊತೆ ಇದ್ದ ರಾಜರು ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನ, ಹಾಮಿನಲ್ಲಿ ಜೂಜ್ಯರನ್ನ, ಶಾವೆಕಿರ್ಯಾತಯಿಮಿನಲ್ಲಿ ಏಮಿಯರನ್ನ+ ಸೋಲಿಸಿದ್ರು. 6 ಸೇಯೀರ್ ಬೆಟ್ಟದಲ್ಲಿದ್ದ+ ಹೋರಿಯರನ್ನ+ ಅಲ್ಲಿಂದ ಕಾಡಲ್ಲಿರೋ* ಏಲ್ಪಾರಾನ್ ತನಕ ಬೆನ್ನಟ್ಟಿ ಸೋಲಿಸಿದ್ರು. 7 ಆಮೇಲೆ ಅವರು ಹಿಂದೆ ಬಂದು ಕಾದೇಶ್+ ಅನ್ನೋ ಹೆಸರಿನ ಎನ್ಮಿಷ್ಪಾಟಿಗೆ ಹೋದ್ರು, ಅಮಾಲೇಕ್ಯರ+ ಪ್ರದೇಶವನ್ನೆಲ್ಲ ವಶಮಾಡ್ಕೊಂಡ್ರು. ಹಚಚೋನ್-ತಾಮರಿನಲ್ಲಿ+ ವಾಸ ಮಾಡ್ತಿದ್ದ ಅಮೋರಿಯರನ್ನೂ+ ಸೋಲಿಸಿದ್ರು.
8 ಆಗ ಸೊದೋಮ್, ಗೊಮೋರ, ಅದ್ಮಾ, ಚೆಬೋಯೀಮ್, ಬೆಳ (ಅಂದರೆ ಚೋಗರ್) ಈ ಪಟ್ಟಣಗಳ ರಾಜರು ಹೋಗಿ ಸಿದ್ದೀಮ್ ಕಣಿವೆಯಲ್ಲಿ ಅವರ ವಿರುದ್ಧ ಯುದ್ಧ ಮಾಡಿದ್ರು. 9 ಅಂದ್ರೆ ಏಲಾಮಿನ ರಾಜ ಕೆದೊರ್ಲಗೋಮರ, ಗೋಯಿಮಿನ ರಾಜ ತಿದ್ಗಾಲ, ಶಿನಾರಿನ ರಾಜ ಅಮ್ರಾಫೆಲ, ಎಲ್ಲಸಾರಿನ ರಾಜ ಅರ್ಯೋಕನ+ ವಿರುದ್ಧ ಯುದ್ಧ ಮಾಡಿದ್ರು. ಹೀಗೆ ನಾಲ್ಕು ರಾಜರು ಐದು ರಾಜರ ವಿರುದ್ಧ ಯುದ್ಧ ಮಾಡಿದ್ರು. 10 ಇದರಿಂದ ಸೊದೋಮ್ ಮತ್ತು ಗೊಮೋರದ ರಾಜರು ಜೀವ ಉಳಿಸ್ಕೊಳ್ಳೋಕೆ ಅಲ್ಲಿಂದ ಓಡಿಹೋದ್ರು. ಆದ್ರೆ ಓಡಿ ಹೋಗುವಾಗ ಸಿದ್ದೀಮ್ ಕಣಿವೆಯಲ್ಲಿ ಟಾರಿನ ತರ ಇದ್ದ ಅಂಟಿನ ಹೊಂಡದಲ್ಲಿ ಬಿದ್ರು. ಉಳಿದವರು ಬೆಟ್ಟ ಪ್ರದೇಶಕ್ಕೆ ಓಡಿಹೋದ್ರು. 11 ಆಮೇಲೆ ಗೆದ್ದ ಆ ನಾಲ್ಕು ರಾಜರು ಸೊದೋಮ್ ಮತ್ತು ಗೊಮೋರದಲ್ಲಿದ್ದ ಎಲ್ಲ ಸೊತ್ತನ್ನ, ಅಲ್ಲಿದ್ದ ಎಲ್ಲ ಆಹಾರ ತಗೊಂಡು ಹೋದ್ರು.+ 12 ಅವರು ಅಬ್ರಾಮನ ಸಹೋದರನ ಮಗ ಅಂದ್ರೆ ಸೊದೋಮಲ್ಲಿ ವಾಸವಾಗಿದ್ದ ಲೋಟನನ್ನ ಹಿಡ್ಕೊಂಡು ಹೋದ್ರು.+ ಅವನ ಸೊತ್ತನ್ನೂ ತಗೊಂಡು ಹೋದ್ರು.
13 ಅಲ್ಲಿಂದ ಒಬ್ಬ ತಪ್ಪಿಸ್ಕೊಂಡು ಇಬ್ರಿಯನಾದ ಅಬ್ರಾಮನ ಹತ್ರ ಬಂದು ನಡೆದ ವಿಷ್ಯ ಹೇಳಿದ. ಆಗ ಅಬ್ರಾಮ ಅಮೋರಿಯನಾದ ಮಮ್ರೆಗೆ ಸೇರಿದ್ದ ದೊಡ್ಡ ಮರಗಳ ಹತ್ರ ಡೇರೆ ಹಾಕೊಂಡಿದ್ದ.+ ಮಮ್ರೆ ಎಷ್ಕೋಲ್ ಮತ್ತು ಆನೇರನ ಅಣ್ಣ.+ ಒಬ್ಬರಿಗೊಬ್ರು ಸಹಾಯ ಮಾಡ್ತೀವಿ ಅಂತ ಅಬ್ರಾಮ ಮತ್ತು ಆ ಮೂರು ಜನ ಒಪ್ಪಂದ ಮಾಡ್ಕೊಂಡಿದ್ರು. 14 ತನ್ನ ಸಂಬಂಧಿಕನನ್ನ+ ಹಿಡ್ಕೊಂಡು ಹೋಗಿದ್ದಾರೆ ಅಂತ ಅಬ್ರಾಮಗೆ ಗೊತ್ತಾದ ತಕ್ಷಣ ತನ್ನ ಮನೆಯಲ್ಲೇ ಹುಟ್ಟಿ ಬೆಳೆದು ಯುದ್ಧ ತರಬೇತಿ ಪಡೆದಿದ್ದ 318 ಸೇವಕರನ್ನ ಕೂಡಿಸಿದ. ಅವರನ್ನ ಕರ್ಕೊಂಡು ಆ ರಾಜರನ್ನ ದಾನಿನ+ ತನಕ ಬೆನ್ನಟ್ಟಿದ. 15 ರಾತ್ರಿ ಅವನು ತನ್ನ ಸೇವಕರನ್ನ ಬೇರೆ ಬೇರೆ ಗುಂಪು ಮಾಡಿದ. ಆಮೇಲೆ ಅವನೂ ಅವನ ಸೇವಕರೂ ಆ ರಾಜರ ಮೇಲೆ ದಾಳಿ ಮಾಡಿ ಅವರನ್ನ ಸೋಲಿಸಿದ್ರು. ಆಮೇಲೆ ಅಬ್ರಾಮ ಅವರನ್ನ ದಮಸ್ಕದ ಉತ್ತರಕ್ಕಿರೋ ಹೋಬಾದ ತನಕ ಅಟ್ಟಿಸ್ಕೊಂಡು ಹೋದ. 16 ಅವನು ಅವ್ರಿಂದ ಎಲ್ಲ ಸೊತ್ತನ್ನ ಬಿಡಿಸ್ಕೊಂಡು ಬಂದ. ತನ್ನ ಸಂಬಂಧಿಕ ಲೋಟನನ್ನ, ಲೋಟನಿಗೆ ಸೇರಿದ ಸೊತ್ತನ್ನ, ಸ್ತ್ರೀಯರನ್ನ, ಬೇರೆ ಜನ್ರನ್ನ ಬಿಡಿಸ್ಕೊಂಡು ಬಂದ.
17 ಕೆದೊರ್ಲಗೋಮರ ಮತ್ತು ಅವನ ಜೊತೆ ಇದ್ದ ಬೇರೆ ರಾಜರನ್ನ ಅಬ್ರಾಮ ಸೋಲಿಸಿ ವಾಪಸ್ಸಾದ ಮೇಲೆ ಸೊದೋಮಿನ ರಾಜ ಅಬ್ರಾಮನನ್ನ ಭೇಟಿ ಮಾಡೋಕೆ ಶಾವೆ ಕಣಿವೆಗೆ ಬಂದ. ಇದಕ್ಕೆ ರಾಜನ ಕಣಿವೆ+ ಅನ್ನೋ ಹೆಸರಿದೆ. 18 ಸಾಲೇಮಿನ ರಾಜ+ ಮೆಲ್ಕಿಜೆದೇಕ+ ಬಂದು ಅಬ್ರಾಮನನ್ನ ಭೇಟಿಯಾಗಿ ಅವನಿಗೆ ರೊಟ್ಟಿ ದ್ರಾಕ್ಷಾಮದ್ಯ ಕೊಟ್ಟ. ಮೆಲ್ಕಿಜೆದೇಕ ಸರ್ವೋನ್ನತ ದೇವರ ಪುರೋಹಿತನಾಗಿದ್ದ.+
19 ಅವನು ಅಬ್ರಾಮನನ್ನ ಆಶೀರ್ವದಿಸ್ತಾ,
“ಭೂಮಿ ಆಕಾಶವನ್ನ ನಿರ್ಮಿಸಿದ ಸರ್ವೋನ್ನತ ದೇವರು
ನಿನ್ನನ್ನ ಆಶೀರ್ವದಿಸಲಿ.
20 ನಿನ್ನ ಶತ್ರುಗಳನ್ನ ನಿನ್ನ ಕೈಗೆ ಒಪ್ಪಿಸಿದ
ಸರ್ವೋನ್ನತ ದೇವರನ್ನ ಹೊಗಳಲಿ” ಅಂದ.
ಅಬ್ರಾಮ ಬಿಡಿಸಿ ತಂದ ಎಲ್ಲ ಸೊತ್ತಿಂದ ಹತ್ತನೇ ಒಂದು ಭಾಗ ಅವನಿಗೆ ಕೊಟ್ಟ.+
21 ಆಮೇಲೆ ಸೊದೋಮಿನ ರಾಜ ಅಬ್ರಾಮನಿಗೆ “ಈ ಜನ್ರನ್ನ ನನಗೆ ಕೊಡು, ಸೊತ್ತನ್ನೆಲ್ಲ ನೀನೇ ಇಟ್ಕೊ” ಅಂದ. 22 ಅದಕ್ಕೆ ಅಬ್ರಾಮ “ಭೂಮಿ ಆಕಾಶವನ್ನ ಸೃಷ್ಟಿ ಮಾಡಿದ ಸರ್ವೋನ್ನತ ದೇವರಾದ ಯೆಹೋವನ ಕಡೆಗೆ ನಾನು ಕೈಯೆತ್ತಿ ಮಾತು ಕೊಡ್ತೀನಿ. 23 ನಿನ್ನ ಆಸ್ತಿಯಲ್ಲಿ ನನಗೇನೂ ಬೇಡ. ಒಂದು ನೂಲಾಗಲಿ ಚಪ್ಪಲಿ ದಾರ ಆಗ್ಲಿ ನಿನ್ನಿಂದ ತಗೊಳಲ್ಲ. ಯಾಕಂದ್ರೆ ‘ನನ್ನಿಂದಾನೇ ಅಬ್ರಾಮ ಶ್ರೀಮಂತ ಆದ’ ಅಂತ ನೀನು ಹೇಳಬಾರದು. 24 ನನ್ನ ಜೊತೆ ಇರೋ ಹುಡುಗರು ಈಗಾಗ್ಲೇ ತಗೊಂಡ ಊಟ ಬಿಟ್ಟು ಬೇರೇನೂ ನನಗೆ ಬೇಡ. ನನ್ನ ಜೊತೆ ಯುದ್ಧಕ್ಕೆ ಬಂದಿದ್ದ ಆನೇರ, ಎಷ್ಕೋಲ್, ಮಮ್ರೆ+ ಅವರವರ ಭಾಗ ತಗೊಳ್ಳಲಿ” ಅಂದ.
15 ಇದಾದ ಮೇಲೆ ಯೆಹೋವ ಅಬ್ರಾಮನಿಗೆ ದರ್ಶನದಲ್ಲಿ* “ಅಬ್ರಾಮ ಭಯಪಡಬೇಡ.+ ನಾನು ನಿನಗೆ ಗುರಾಣಿ ಆಗಿದ್ದೀನಿ.+ ನಿನಗೆ ತುಂಬ ದೊಡ್ಡ ಬಹುಮಾನ ಕೊಡ್ತೀನಿ”+ ಅಂದನು. 2 ಅದಕ್ಕೆ ಅಬ್ರಾಮ “ವಿಶ್ವದ ರಾಜ ಯೆಹೋವ, ನೀನು ನನಗೆ ಏನೇ ಬಹುಮಾನ ಕೊಟ್ರೂ ಏನು ಪ್ರಯೋಜನ? ನನಗೆ ಮಕ್ಕಳೇ ಇಲ್ಲ. ನನ್ನ ಎಲ್ಲ ಆಸ್ತಿ ನನ್ನ ಸೇವಕ ದಮಸ್ಕದ ಎಲೀಯೆಜರನಿಗೆ ಹೋಗುತ್ತೆ”+ ಅಂದ. 3 “ನೀನು ನನಗೆ ಸಂತಾನ+ ಕೊಡದೆ ಇರೋದ್ರಿಂದ ನನ್ನ ಮನೆ ಸೇವಕನೇ ನನಗೆ ವಾರಸುದಾರ ಆಗ್ತಾನೆ” ಅಂದ. 4 ಆಗ ಯೆಹೋವ ಅಬ್ರಾಮನಿಗೆ “ಅವನು ನಿನಗೆ ವಾರಸುದಾರ ಆಗಲ್ಲ. ನಿನ್ನ ಸ್ವಂತ ಮಗನೇ ನಿನಗೆ ವಾರಸುದಾರ ಆಗ್ತಾನೆ”+ ಅಂದನು.
5 ಆಮೇಲೆ ಆತನು ಅಬ್ರಾಮನನ್ನ ಹೊರಗೆ ಕರ್ಕೊಂಡು ಬಂದು “ದಯವಿಟ್ಟು ತಲೆಯೆತ್ತಿ ಆಕಾಶ ನೋಡು, ನಿನ್ನಿಂದ ಆಗೋದಾದ್ರೆ ನಕ್ಷತ್ರಗಳನ್ನ ಲೆಕ್ಕಮಾಡು. ನಿನ್ನ ಸಂತತಿನೂ ಅಷ್ಟು ಹೆಚ್ಚಾಗುತ್ತೆ”+ ಅಂದನು. 6 ಅಬ್ರಾಮ ಯೆಹೋವನ ಮೇಲೆ ನಂಬಿಕೆಯಿಟ್ಟ.+ ಹಾಗಾಗಿ ಅಬ್ರಾಮ ದೇವರ ದೃಷ್ಟಿಯಲ್ಲಿ ನೀತಿವಂತನಾಗಿದ್ದ.+ 7 ಆತನು ಅಬ್ರಾಮನಿಗೆ “ನಾನು ಯೆಹೋವ, ಈ ದೇಶವನ್ನ ನಿನಗೆ ಕೊಡೋಕೆ, ಇದನ್ನ ನಿನ್ನ ಆಸ್ತಿಯಾಗಿ ಮಾಡೋಕೆ ನಿನ್ನನ್ನ ಕಸ್ದೀಯರ ಊರ್ ಪಟ್ಟಣದಿಂದ ಕರ್ಕೊಂಡು ಬಂದವನು ನಾನೇ”+ ಅಂದನು. 8 ಅದಕ್ಕೆ ಅಬ್ರಾಮ “ವಿಶ್ವದ ರಾಜ ಯೆಹೋವನೇ, ಈ ದೇಶ ನನಗೆ ಆಸ್ತಿಯಾಗಿ ಸಿಗುತ್ತೆ ಅಂತ ನಾನು ಹೇಗೆ ನಂಬ್ಲಿ?” ಅಂದ. 9 ಆಗ ದೇವರು ಅಬ್ರಾಮನಿಗೆ “ನೀನು ನನಗಾಗಿ ಮೂರು ವರ್ಷದ ಒಂದು ಎಳೇ ಹಸು,* ಮೂರು ವರ್ಷದ ಒಂದು ಹೆಣ್ಣು ಆಡು, ಮೂರು ವರ್ಷದ ಒಂದು ಟಗರು, ಒಂದು ಕಾಡು ಪಾರಿವಾಳ ಮತ್ತು ಪಾರಿವಾಳದ ಒಂದು ಮರಿಯನ್ನ ತಗೊ” ಅಂದನು. 10 ಅಬ್ರಾಮ ಅವನ್ನೆಲ್ಲ ತಂದು ಎರಡು ಭಾಗಗಳಾಗಿ ಕಡಿದು ಆಯಾ ಪ್ರಾಣಿ ತುಂಡುಗಳನ್ನ ಎದುರುಬದುರಾಗಿ ಇಟ್ಟ. ಆದ್ರೆ ಪಕ್ಷಿಗಳನ್ನ ಮಾತ್ರ ಕಡಿಲಿಲ್ಲ. 11 ಆಗ ಮಾಂಸ ತಿನ್ನೋ ಪಕ್ಷಿಗಳು ಆ ತುಂಡುಗಳ ಹತ್ರ ಹಾರಿಬರೋಕೆ ಶುರುಮಾಡಿದ್ವು. ಅಬ್ರಾಮ ಅವನ್ನ ಓಡಿಸ್ತಾ ಇದ್ದ.
12 ಸೂರ್ಯ ಮುಳುಗ್ತಿದ್ದಾಗ ಅಬ್ರಾಮನಿಗೆ ತುಂಬ ನಿದ್ದೆ ಬಂತು. ಕನಸಲ್ಲಿ ಅವನು ತನ್ನ ಸುತ್ತ ತುಂಬ ಕತ್ತಲಾಗಿರೋದನ್ನ ನೋಡಿ ತುಂಬ ಭಯಪಟ್ಟ. 13 ಆಗ ಅಬ್ರಾಮನಿಗೆ ದೇವರು ಹೀಗೆ ಹೇಳಿದನು: “ನಿನಗೆ ಒಂದು ವಿಷ್ಯ ಗೊತ್ತಿರಲಿ, ಇದು ಖಂಡಿತ ನಡಿಯುತ್ತೆ. ಅದೇನಂದ್ರೆ ನಿನ್ನ ಸಂತಾನದವರು ಬೇರೆ ದೇಶದಲ್ಲಿ ವಿದೇಶಿಗಳಾಗಿ ಇರ್ತಾರೆ. ಅಲ್ಲಿನ ಜನ ಅವರನ್ನ 400 ವರ್ಷ ಗುಲಾಮರಾಗಿ ಮಾಡ್ಕೊಂಡು ಅವರಿಗೆ ತುಂಬ ಕಷ್ಟಕೊಡ್ತಾರೆ.+ 14 ಆದ್ರೆ ಅವರು ದಾಸರಾಗಿರೋ ಆ ದೇಶಕ್ಕೆ ನಾನು ಶಿಕ್ಷೆ ಕೊಡ್ತೀನಿ.+ ಆಗ ಅವರು ಅಲ್ಲಿಂದ ಸಿಕ್ಕಾಪಟ್ಟೆ ಸೊತ್ತು ತಗೊಂಡು ಆ ದೇಶ ಬಿಟ್ಟು ಬರ್ತಾರೆ.+ 15 ಆದ್ರೆ ನೀನು ತುಂಬ ವರ್ಷ ಖುಷಿಯಾಗಿ ಜೀವನ ಮಾಡ್ತೀಯ. ನೆಮ್ಮದಿಯಿಂದ ಪ್ರಾಣ ಬಿಡ್ತೀಯ. ನಿನ್ನ ಪೂರ್ವಜರ ತರ ನಿನಗೂ ಸಮಾಧಿ ಆಗುತ್ತೆ.+ 16 ನಿನ್ನ ಸಂತಾನದವರ ನಾಲ್ಕನೇ ತಲೆಮಾರಿನವರು ಇಲ್ಲಿಗೆ ವಾಪಸ್ ಬರ್ತಾರೆ.+ ಯಾಕಂದ್ರೆ ಅಮೋರಿಯರ* ಪಾಪ ಶಿಕ್ಷಿಸೋ ಮಟ್ಟಕ್ಕೆ ಇನ್ನೂ ಹೋಗಿಲ್ಲ.”+
17 ಸೂರ್ಯ ಮುಳುಗಿ ಕತ್ತಲು ಕವಿದಾಗ ಹೊಗೆಯಾಡೋ ಒಂದು ಒಲೆ ಕಾಣಿಸ್ತು. ಕಡಿದು ಇಟ್ಟಿದ್ದ ಪ್ರಾಣಿ ತುಂಡುಗಳ ಮಧ್ಯ ಉರಿಯೋ ಒಂದು ಪಂಜು ಹಾದುಹೋಯ್ತು. 18 ಆ ದಿನ ಯೆಹೋವ ಅಬ್ರಾಮನ ಜೊತೆ ಒಂದು ಒಪ್ಪಂದ+ ಮಾಡಿ ಹೀಗೆ ಹೇಳಿದನು: “ಈಜಿಪ್ಟಿನ ನದಿಯಿಂದ ಹಿಡಿದು ಯೂಫ್ರೆಟಿಸ್ ಮಹಾ ನದಿ ತನಕ+ ಇರೋ ಈ ದೇಶವನ್ನ+ ನಾನು ನಿನ್ನ ಸಂತಾನಕ್ಕೆ ಕೊಡ್ತೀನಿ. 19 ಅಂದ್ರೆ ಕೇನ್ಯರು,+ ಕೆನಿಜೀಯರು, ಕದ್ಮೋನಿಯರು, 20 ಹಿತ್ತಿಯರು,+ ಪೆರಿಜೀಯರು,+ ರೆಫಾಯರು,+ 21 ಅಮೋರಿಯರು, ಕಾನಾನ್ಯರು, ಗಿರ್ಗಾಷಿಯರು, ಯೆಬೂಸಿಯರು+ ಇರೋ ದೇಶವನ್ನ ನಾನು ನಿನ್ನ ಸಂತಾನಕ್ಕೆ ಕೊಡ್ತೀನಿ.”
16 ಅಬ್ರಾಮನ ಹೆಂಡತಿ ಸಾರಯಳಿಗೆ ಮಕ್ಕಳಿರಲಿಲ್ಲ.+ ಅವಳಿಗೆ ಈಜಿಪ್ಟ್ ದೇಶದ ಹಾಗರ್+ ಅನ್ನೋ ಸೇವಕಿ ಇದ್ದಳು. 2 ಸಾರಯ ಅಬ್ರಾಮನಿಗೆ “ದಯವಿಟ್ಟು ನಾನು ಹೇಳೋದನ್ನ ಕೇಳು. ನನಗೆ ಮಕ್ಕಳಾಗದ ಹಾಗೆ ಯೆಹೋವ ತಡಿದಿದ್ದಾನೆ. ಹಾಗಾಗಿ ದಯವಿಟ್ಟು ನನ್ನ ಸೇವಕಿ ಜೊತೆ ಮಲಗು. ಅವಳಿಂದಾದ್ರೂ ನಂಗೆ ಮಕ್ಕಳಾಗ್ಲಿ” ಅಂದಳು.+ ಅಬ್ರಾಮ ಸಾರಯ ಹೇಳಿದ ಹಾಗೆ ಮಾಡಿದ. 3 ಅಬ್ರಾಮ ಕಾನಾನ್ ದೇಶಕ್ಕೆ ಬಂದು ಆಗ ಹತ್ತು ವರ್ಷ ಆಗಿತ್ತು. ಸಾರಯ ಈಜಿಪ್ಟಿನ ತನ್ನ ಸೇವಕಿ ಹಾಗರಳನ್ನ ತನ್ನ ಗಂಡ ಅಬ್ರಾಮನಿಗೆ ಹೆಂಡತಿಯಾಗಿ ಕೊಟ್ಟಳು. 4 ಅಬ್ರಾಮ ಹಾಗರಳ ಜೊತೆ ಮಲಗಿದ, ಅವಳು ಗರ್ಭಿಣಿ ಆದಳು. ಗರ್ಭಿಣಿ ಆಗಿದ್ದೀನಿ ಅಂತ ಹಾಗರಳಿಗೆ ಗೊತ್ತಾದಾಗ ಅವಳು ಯಜಮಾನಿಯನ್ನ ಕೀಳಾಗಿ ನೋಡೋಕೆ ಶುರುಮಾಡಿದಳು.
5 ಆಗ ಸಾರಯ ಅಬ್ರಾಮನಿಗೆ “ನನಗೆ ಆಗ್ತಿರೋ ಈ ಅನ್ಯಾಯಕ್ಕೆ ನೀನೇ ಕಾರಣ. ನನ್ನ ಸೇವಕಿನ ನಾನೇ ನಿನಗೆ ಕೊಟ್ಟೆ. ಆದ್ರೆ ಗರ್ಭಿಣಿ ಅಂತ ಗೊತ್ತಾದಾಗಿಂದ ಅವಳು ನನ್ನನ್ನ ಕೀಳಾಗಿ ನೋಡ್ತಿದ್ದಾಳೆ. ತಪ್ಪು ನಂದಾ ನಿಂದಾ ಅಂತ ಯೆಹೋವನೇ ನ್ಯಾಯತೀರಿಸಲಿ” ಅಂದಳು. 6 ಅದಕ್ಕೆ ಅಬ್ರಾಮ ಸಾರಯಗೆ “ನೀನು ಅವಳ ಯಜಮಾನಿ ಅಲ್ವಾ? ನಿನಗೆ ಸರಿ ಅನಿಸಿದನ್ನ ಅವಳಿಗೆ ಮಾಡು” ಅಂದ. ಆಮೇಲೆ ಸಾರಯ ಹಾಗರಳಿಗೆ ಅವಮಾನ ಮಾಡಿದಳು. ಆಗ ಅವಳು ಅಲ್ಲಿಂದ ಓಡಿಹೋದಳು.
7 ಹಾಗರ ಶೂರಿಗೆ+ ಹೋಗೋ ದಾರಿಯಲ್ಲಿದ್ದ ಕಾಡಿಗೆ ಬಂದಳು. ಅವಳು ಒಂದು ಬಾವಿ ಹತ್ರ ಇದ್ದಾಗ ಯೆಹೋವನ ದೂತ ಅವಳ ಮುಂದೆ ಬಂದ. 8 ಅವನು ಅವಳಿಗೆ “ಸಾರಯಳ ಸೇವಕಿ ಹಾಗರ, ಎಲ್ಲಿಂದ ಬಂದೆ? ಎಲ್ಲಿ ಹೋಗ್ತಿದ್ಯಾ?” ಅಂತ ಕೇಳಿದ. ಅದಕ್ಕೆ ಅವಳು “ನಾನು ನನ್ನ ಯಜಮಾನಿ ಸಾರಯಳಿಂದ ಓಡಿಹೋಗ್ತಾ ಇದ್ದಿನಿ” ಅಂದಳು. 9 ಯೆಹೋವನ ದೂತ ಅವಳಿಗೆ “ನೀನು ನಿನ್ನ ಯಜಮಾನಿ ಹತ್ರ ವಾಪಸ್ ಹೋಗು. ಅವಳು ಏನೇ ಹೇಳಿದ್ರೂ ಅವಳಿಗೆ ಗೌರವ ಕೊಟ್ಟು ಹೇಳಿದ ಹಾಗೆ ಮಾಡು” ಅಂದನು. 10 ಆಮೇಲೆ ಯೆಹೋವನ ದೂತ “ನಿನ್ನ ವಂಶ ತುಂಬ ವೃದ್ಧಿಯಾಗೋ ತರ ದೇವರು ಮಾಡ್ತಾನೆ. ಅವರ ಸಂಖ್ಯೆ ಲೆಕ್ಕಮಾಡೋಕೆ ಆಗದಷ್ಟು ಹೆಚ್ಚಾಗುತ್ತೆ” ಅಂದನು.+ 11 ಅಷ್ಟೇ ಅಲ್ಲ ಯೆಹೋವನ ದೂತ ಅವಳಿಗೆ: “ಗರ್ಭಿಣಿಯಾಗಿರೋ ನಿಂಗೆ ಒಬ್ಬ ಮಗ ಹುಟ್ತಾನೆ. ನೀನು ಕಷ್ಟದಲ್ಲಿ ಇರೋವಾಗ ಯೆಹೋವ ನಿನ್ನ ಕೂಗನ್ನ ಕೇಳಿದ್ರಿಂದ ಆ ಮಗಗೆ ಇಷ್ಮಾಯೇಲ್* ಅಂತ ಹೆಸರಿಡಬೇಕು. 12 ಅವನು ಕಾಡು ಕತ್ತೆ* ತರ ಇರ್ತಾನೆ. ಅವನು ಎಲ್ರನ್ನ ವಿರೋಧಿಸ್ತಾನೆ, ಎಲ್ರೂ ಅವನನ್ನ ವಿರೋಧಿಸ್ತಾರೆ. ಆದ್ರೂ ಅವನು ತನ್ನೆಲ್ಲ ತಮ್ಮಂದಿರ ಮುಂದೆನೇ ವಾಸಿಸ್ತಾನೆ”* ಅಂದನು.
13 ಆಮೇಲೆ ಹಾಗರ ತನ್ನ ಜೊತೆ ಮಾತಾಡ್ತಿದ್ದ ಯೆಹೋವನ ಹೆಸರನ್ನ ಹೊಗಳಿ “ನೀನು ಎಲ್ಲವನ್ನೂ ನೋಡೋ ದೇವರು”+ ಅಂದಳು. ಅಲ್ಲದೆ “ನನ್ನನ್ನ ನೋಡೋ ವ್ಯಕ್ತಿನ ನಾನು ಇಲ್ಲಿ ನಿಜವಾಗ್ಲೂ ನೋಡ್ದೆ” ಅಂದಳು. 14 ಹಾಗಾಗಿ ಆ ಬುಗ್ಗೆಗೆ ಲಹೈರೋಯಿ ಬಾವಿ* ಅನ್ನೋ ಹೆಸ್ರು ಬಂತು. (ಇದು ಕಾದೇಶ್ ಮತ್ತು ಬೆರೆದಿನ ಮಧ್ಯದಲ್ಲಿದೆ.) 15 ಹಾಗರಳಿಂದ ಅಬ್ರಾಮನಿಗೆ ಒಬ್ಬ ಮಗ ಹುಟ್ಟಿದ. ಅಬ್ರಾಮ ತನ್ನ ಮಗನಿಗೆ ಇಷ್ಮಾಯೇಲ್ ಅಂತ ಹೆಸರಿಟ್ಟ.+ 16 ಇಷ್ಮಾಯೇಲ್ ಹುಟ್ಟಿದಾಗ ಅಬ್ರಾಮನಿಗೆ 86 ವರ್ಷ.
17 ಅಬ್ರಾಮನಿಗೆ 99 ವರ್ಷ ಆದಾಗ ಯೆಹೋವ ಅವನಿಗೆ ಕಾಣಿಸಿ ಹೀಗಂದನು: “ನಾನು ಸರ್ವಶಕ್ತ ದೇವರು. ನಾನು ತೋರಿಸೋ ದಾರಿಯಲ್ಲಿ ನಡೆದು ತಪ್ಪಿಲ್ಲದವನಾಗಿರು.* 2 ನಿನ್ನ ಜೊತೆ ನಾನು ಮಾಡ್ಕೊಂಡ ಒಪ್ಪಂದವನ್ನ ಪಕ್ಕಾ ಮಾಡ್ತೀನಿ,+ ನಿನ್ನ ವಂಶವನ್ನ ತುಂಬ ಹೆಚ್ಚಿಸ್ತೀನಿ.”+
3 ಆಗ ಅಬ್ರಾಮ ದೇವರಿಗೆ ಅಡ್ಡಬಿದ್ದ. ದೇವರು ಅವನ ಜೊತೆ ಮಾತು ಮುಂದುವರಿಸ್ತಾ ಹೀಗಂದನು: 4 “ನೋಡು, ನಾನು ನಿನ್ನ ಜೊತೆ ಒಪ್ಪಂದ ಮಾಡ್ಕೊಂಡಿದ್ದೀನಿ.+ ಹಾಗಾಗಿ ನೀನು ಖಂಡಿತ ಅನೇಕ ಜನಾಂಗಗಳಿಗೆ ತಂದೆ ಆಗ್ತಿಯ.+ 5 ಇನ್ನು ಮುಂದೆ ನಿನ್ನ ಹೆಸ್ರು ಅಬ್ರಾಮ* ಅಲ್ಲ ಅಬ್ರಹಾಮ.* ಯಾಕಂದ್ರೆ ನಾನು ನಿನ್ನನ್ನ ತುಂಬ ಜನಾಂಗಗಳಿಗೆ ತಂದೆಯಾಗಿ ಮಾಡ್ತೀನಿ. 6 ನಿನ್ನ ವಂಶದವರನ್ನ ಎಷ್ಟು ಹೆಚ್ಚಿಸ್ತೀನಿ ಅಂದ್ರೆ ಅವರಿಂದ ತುಂಬ ಜನಾಂಗಗಳು ಬರುತ್ತೆ. ನಿನ್ನ ವಂಶದಲ್ಲಿ ರಾಜರು ಕೂಡ ಹುಟ್ತಾರೆ.+
7 ನಾನು ನಿನ್ನ ಜೊತೆ, ನಿನ್ನ ಸಂತಾನದ ಜೊತೆ ಮತ್ತು ಅವರಾದ ಮೇಲೆ ಬರೋ ಪೀಳಿಗೆಗಳ ಜೊತೆ ಮಾಡ್ಕೊಂಡ ಒಪ್ಪಂದ ಉಳಿಸ್ಕೊಳ್ತಿನಿ.+ ಈ ಒಪ್ಪಂದ ಶಾಶ್ವತವಾಗಿ ಇರುತ್ತೆ. ಈ ಒಪ್ಪಂದದ ಪ್ರಕಾರ ನಾನು ನಿನಗೆ, ನಿನ್ನ ಸಂತತಿಯವರಿಗೆ ದೇವರಾಗಿ ಇರ್ತಿನಿ. 8 ನೀನು ವಿದೇಶಿಯಾಗಿ+ ಜೀವಿಸ್ತಿರೋ ಇಡೀ ಕಾನಾನ್ ದೇಶವನ್ನ ನಿನಗೆ, ನಿನ್ನ ಸಂತತಿಗೆ ಶಾಶ್ವತ ಆಸ್ತಿಯಾಗಿ ಕೊಡ್ತೀನಿ. ನಾನು ಅವರಿಗೆ ದೇವರಾಗಿ ಇರ್ತಿನಿ.”+
9 ದೇವರು ಅಬ್ರಹಾಮನಿಗೆ ಇನ್ನೂ ಹೇಳಿದ್ದೇನಂದ್ರೆ “ನೀನು ಮತ್ತು ನಿನ್ನ ಸಂತತಿಯವರು ಎಲ್ಲ ಪೀಳಿಗೆಯವರು ನಾನು ಮಾಡಿದ ಒಪ್ಪಂದದ ಪ್ರಕಾರ ನಡಿಬೇಕು. 10 ನಾನು ನಿನ್ನ ಜೊತೆ ಮಾಡ್ಕೊಳ್ಳೋ ಒಪ್ಪಂದ ಏನಂದ್ರೆ, ನೀನು ಮತ್ತು ನಿನ್ನ ಸಂತತಿಯಲ್ಲಿ ಪ್ರತಿಯೊಬ್ಬ ಗಂಡಸು* ಸುನ್ನತಿ*+ ಮಾಡ್ಕೊಳ್ಳಬೇಕು. 11 ನೀವು ನಿಮ್ಮ ಮುಂದೊಗಲನ್ನ* ಸುನ್ನತಿ ಮಾಡ್ಕೊಳ್ಳಬೇಕು. ಇದು ನಾನು ನಿನ್ನ ಜೊತೆ ಮಾಡಿರೋ ಒಪ್ಪಂದಕ್ಕೆ ಗುರುತಾಗಿರುತ್ತೆ.+ 12 ನಿನ್ನ ಮನೆಯಲ್ಲಿ ಹುಟ್ಟೋ ಪ್ರತಿಯೊಂದು ಗಂಡುಮಗುಗೆ ಎಂಟು ದಿನ ಆದಾಗ ಸುನ್ನತಿ ಮಾಡಿಸಬೇಕು.+ ನಿನ್ನ ಸಂತತಿಯಲ್ಲಿ ಹುಟ್ಟದೆ ವಿದೇಶಿಯರಿಂದ ನೀನು ಹಣಕ್ಕೆ ಕೊಂಡುಕೊಳ್ಳೋ ಪ್ರತಿಯೊಬ್ಬ ಗಂಡಸಿಗೆ ಸುನ್ನತಿ ಆಗಬೇಕು. ಇದನ್ನ ಎಲ್ಲ ಪೀಳಿಗೆಯವರು ಪಾಲಿಸಬೇಕು. 13 ನಿನ್ನ ಮನೇಲಿ ಹುಟ್ಟಿದ, ನೀನು ಹಣಕ್ಕೆ ತಗೊಂಡ ಪ್ರತಿಯೊಬ್ಬ ಪುರುಷನಿಗೆ ಸುನ್ನತಿ ಆಗಬೇಕು.+ ನಿಮ್ಮ ದೇಹದಲ್ಲಿರೋ ಈ ಗುರುತು ನಾನು ನಿನ್ನ ಜೊತೆ ಮಾಡಿರೋ ಶಾಶ್ವತ ಒಪ್ಪಂದಕ್ಕೆ ಪುರಾವೆ. 14 ಯಾವ ಗಂಡಸಾದ್ರೂ ಸುನ್ನತಿ ಮಾಡ್ಕೊಳ್ಳದಿದ್ರೆ ಅವನನ್ನ ಸಾಯಿಸಬೇಕು. ಯಾಕಂದ್ರೆ ಅವನು ನನ್ನ ಒಪ್ಪಂದ ಮುರಿದಿದ್ದಾನೆ.”
15 ಆಮೇಲೆ ದೇವರು ಅಬ್ರಹಾಮನಿಗೆ “ಇನ್ನು ಮುಂದೆ ನೀನು ನಿನ್ನ ಹೆಂಡತಿನ ಸಾರಯ*+ ಅಂತ ಕರಿಬಾರದು. ಯಾಕಂದ್ರೆ ಇವತ್ತಿಂದ ಅವಳ ಹೆಸ್ರು ಸಾರ.* 16 ನಾನು ಅವಳನ್ನ ಆಶೀರ್ವದಿಸ್ತೀನಿ. ಅವಳಿಂದ ನಿನಗೆ ಒಬ್ಬ ಮಗ ಹುಟ್ಟೋ ತರ ಮಾಡ್ತೀನಿ.+ ನಾನು ಅವಳಿಗೆ ಆಶೀರ್ವಾದ ಮಾಡೋದ್ರಿಂದ ಅವಳಿಂದ ಜನಾಂಗಗಳು, ರಾಜರು ಬರ್ತಾರೆ” ಅಂದನು. 17 ಆಗ ಅಬ್ರಹಾಮ ಅಡ್ಡಬಿದ್ದು ನಗ್ತಾ ಒಳಗೊಳಗೆ ಮನಸ್ಸಲ್ಲೇ+ “100 ವರ್ಷದವನಿಗೆ ಮಗು ಆಗುತ್ತಾ? 90 ವರ್ಷ ಆಗಿರೋ ಸಾರ ಮಗು ಹೆರುತ್ತಾಳಾ?” ಅಂದ್ಕೊಂಡ.+
18 ಅಬ್ರಹಾಮ ಸತ್ಯ ದೇವರಿಗೆ “ಇಷ್ಮಾಯೇಲ ಇದ್ದಾನಲ್ಲಾ, ಅವನನ್ನೇ ಆಶೀರ್ವದಿಸು” ಅಂದ.+ 19 ಅದಕ್ಕೆ ದೇವರು “ನಿನ್ನ ಹೆಂಡತಿ ಸಾರಳಿಂದಾನೇ ನಿನಗೆ ಒಬ್ಬ ಮಗ ಹುಟ್ತಾನೆ. ಅವನಿಗೆ ನೀನು ಇಸಾಕ*+ ಅಂತ ಹೆಸರಿಡಬೇಕು. ನಾನು ಅವನ ಜೊತೆ ನನ್ನ ಒಪ್ಪಂದವನ್ನ ಪಕ್ಕಾ ಮಾಡ್ತೀನಿ. ಇದು ಅವನ ಜೊತೆ, ಅವನ ಸಂತತಿ ಜೊತೆ ಮಾಡ್ಕೊಳ್ಳೋ ಶಾಶ್ವತ ಒಪ್ಪಂದ ಆಗಿರುತ್ತೆ.+ 20 ಇಷ್ಮಾಯೇಲನ ವಿಷ್ಯದಲ್ಲಿ ನೀನು ಮಾಡಿದ ವಿನಂತಿಯನ್ನ ಕೇಳಿದ್ದೀನಿ. ಹಾಗಾಗಿ ನಾನು ಅವನನ್ನೂ ಆಶೀರ್ವದಿಸ್ತೀನಿ, ಅವನ ಸಂತತಿಯನ್ನ ತುಂಬ ತುಂಬ ಹೆಚ್ಚಿಸ್ತೀನಿ. ಅವನಿಂದ 12 ಪ್ರಧಾನರು ಬರ್ತಾರೆ. ಅವನ ವಂಶದವರು ದೊಡ್ಡ ಜನಾಂಗ ಆಗ್ತಾರೆ.+ 21 ಆದ್ರೆ ನನ್ನ ಒಪ್ಪಂದವನ್ನ ಇಸಾಕನ ಜೊತೆನೇ ಮಾಡ್ಕೊಳ್ತೀನಿ.+ ಮುಂದಿನ ವರ್ಷ ಇದೇ ಸಮಯಕ್ಕೆ ಸಾರಗೆ ಇಸಾಕ ಹುಟ್ತಾನೆ” ಅಂದನು.+
22 ಅಬ್ರಹಾಮನ ಜೊತೆ ಮಾತಾಡಿದ ಮೇಲೆ ದೇವರು ಅಲ್ಲಿಂದ ಹೋದನು. 23 ಅದೇ ದಿನ ಅಬ್ರಹಾಮ ದೇವರು ಹೇಳಿದ ತರಾನೇ ತನ್ನ ಮನೆಯ ಎಲ್ಲ ಪುರುಷರಿಗೆ ಸುನ್ನತಿ ಮಾಡಿಸಿದ. ಅಂದ್ರೆ ತನ್ನ ಮಗ ಇಷ್ಮಾಯೇಲನಿಗೆ, ತನ್ನ ಮನೇಲಿ ಹುಟ್ಟಿದ, ಹಣಕ್ಕೆ ತಗೊಂಡ ಎಲ್ಲ ಪುರುಷರಿಗೆ ಸುನ್ನತಿ ಮಾಡಿಸಿದ.+ 24 ಅಬ್ರಹಾಮ ಸುನ್ನತಿ ಮಾಡಿಸ್ಕೊಂಡಾಗ ಅವನಿಗೆ 99 ವರ್ಷ.+ 25 ಅವನ ಮಗ ಇಷ್ಮಾಯೇಲ್ ಸುನ್ನತಿ ಮಾಡಿಸ್ಕೊಂಡಾಗ 13 ವರ್ಷ.+ 26 ಹೀಗೆ ಅಬ್ರಹಾಮನಿಗೂ ಅವನ ಮಗ ಇಷ್ಮಾಯೇಲನಿಗೂ ಅದೇ ದಿನ ಸುನ್ನತಿ ಆಯ್ತು. 27 ಅವನ ಮನೆಯಲ್ಲಿದ್ದ ಬೇರೆಲ್ಲ ಪುರುಷರಿಗೆ ಅಂದ್ರೆ ಅವನ ಮನೇಲಿ ಹುಟ್ಟಿದ ಮತ್ತು ವಿದೇಶಿಯರಿಂದ ಹಣಕ್ಕೆ ತಗೊಂಡ ಎಲ್ಲ ಪುರುಷರಿಗೂ ಅವನ ಜೊತೆ ಸುನ್ನತಿ ಆಯ್ತು.
18 ಆಮೇಲೆ ಯೆಹೋವ*+ ಅಬ್ರಹಾಮನಿಗೆ ಕಾಣಿಸಿಕೊಂಡನು. ಆಗ ಅಬ್ರಹಾಮ ಮಮ್ರೆಯ ದೊಡ್ಡ ಮರಗಳ ಹತ್ರ+ ತನ್ನ ಡೇರೆಯ ಬಾಗಿಲಲ್ಲಿ ಕೂತಿದ್ದ. ಅದು ಮಧ್ಯಾಹ್ನದ ಸಮಯ, ಬಿಸಿಲು ಸುಡ್ತಿತ್ತು. 2 ಅವನು ತಲೆಯೆತ್ತಿ ನೋಡಿದಾಗ ಸ್ವಲ್ಪ ದೂರದಲ್ಲಿ ಮೂರು ಗಂಡಸರು ನಿಂತಿದ್ರು.+ ಕೂಡಲೇ ಅವನು ಡೇರೆ ಬಾಗಿಲಿಂದ ಓಡಿಹೋಗಿ ನೆಲದ ತನಕ ಬಗ್ಗಿ ಅವರಿಗೆ ನಮಸ್ಕಾರ ಮಾಡಿದ. 3 ಆಮೇಲೆ ಅಬ್ರಹಾಮ “ಯೆಹೋವನೇ,* ನಿನ್ನ ದಯೆ ನನ್ನ ಮೇಲಿರಲಿ. ದಯವಿಟ್ಟು ನಿನ್ನ ಸೇವಕನ ಡೇರೆಗೆ ಬರಬೇಕು. 4 ಕಾಲು ತೊಳೆಯೋಕೆ+ ನೀರು ತರ್ತಿನಿ. ಮರದ ಕೆಳಗೆ ವಿಶ್ರಾಂತಿ ಪಡ್ಕೊಳ್ಳಿ. 5 ನೀವು ನಿಮ್ಮ ಸೇವಕನ ಹತ್ರ ಬಂದಿರೋದ್ರಿಂದ ಸ್ವಲ್ಪ ರೊಟ್ಟಿ ತರ್ತಿನಿ. ಊಟ ಮಾಡಿ ಸ್ವಲ್ಪ ಆರಾಮ ಮಾಡಿ ಮುಂದೆ ಪ್ರಯಾಣ ಮಾಡಬಹುದು” ಅಂದ. ಅದಕ್ಕವರು “ಸರಿ, ನೀನು ಹೇಳಿದ ಹಾಗೆ ಮಾಡು” ಅಂದ್ರು.
6 ಆಗ ಅಬ್ರಹಾಮ ಡೇರೆಯಲ್ಲಿದ್ದ ಸಾರಳ ಹತ್ರ ಓಡಿಹೋಗಿ “ನೀನು ಮೂರು ಸೆಯಾ* ನುಣ್ಣಗಿನ ಹಿಟ್ಟು ನಾದಿ ಬೇಗಬೇಗ ರೊಟ್ಟಿ ಮಾಡು” ಅಂದ. 7 ಆಮೇಲೆ ಹಿಂಡಿನ ಹತ್ರ ಓಡಿಹೋಗಿ ಎಳೇ ಕರುಗಳಲ್ಲಿ ಒಂದು ಒಳ್ಳೇ ಗಂಡು ಕರು ಆರಿಸ್ಕೊಂಡು ಸೇವಕನ ಕೈಗೆ ಕೊಟ್ಟ. ಅವನು ಬೇಗ ಅಡಿಗೆ ಮಾಡೋಕೆ ಶುರುಮಾಡಿದ. 8 ಆಮೇಲೆ ಅಬ್ರಹಾಮ ಬೆಣ್ಣೆ, ಹಾಲು ಮತ್ತು ಮಾಂಸದ ಅಡಿಗೆ ತಂದು ಅವರ ಮುಂದಿಟ್ಟ. ಅವರು ಮರದ ಕೆಳಗೆ ಊಟ ಮಾಡ್ತಿದ್ದಾಗ ಅವರ ಹತ್ರ ನಿಂತ್ಕೊಂಡ.+
9 ಅವರು ಅವನಿಗೆ “ನಿನ್ನ ಹೆಂಡತಿ ಸಾರ ಎಲ್ಲಿ?”+ ಅಂದಾಗ “ಇಲ್ಲೇ ಡೇರೆಯಲ್ಲಿದ್ದಾಳೆ” ಅಂದ. 10 ಆಗ ಅವರಲ್ಲಿ ಒಬ್ಬ “ಮುಂದಿನ ವರ್ಷ ಇದೇ ಸಮಯಕ್ಕೆ ನಾನು ನಿನ್ನ ಹತ್ರ ಖಂಡಿತ ಬರ್ತಿನಿ. ಆಗ ನಿನ್ನ ಹೆಂಡತಿ ಸಾರಗೆ ಒಬ್ಬ ಮಗ ಇರ್ತಾನೆ”+ ಅಂದ. ಆ ಪುರುಷನ ಹಿಂದೆ ಡೇರೆ ಬಾಗಿಲಲ್ಲಿ ನಿಂತಿದ್ದ ಸಾರ ಅವರ ಮಾತು ಕೇಳಿಸ್ಕೊಳ್ತಾ ಇದ್ದಳು. 11 ಅಬ್ರಹಾಮ ಸಾರಗೆ ತುಂಬ ವಯಸ್ಸಾಗಿತ್ತು.+ ಸಾರಳಿಗೆ ಮಕ್ಕಳಾಗೋ ವಯಸ್ಸು ದಾಟಿಹೋಗಿತ್ತು.*+ 12 ಹಾಗಾಗಿ ಸಾರ ಒಳಗೊಳಗೆ ನಗ್ತಾ “ನಾನು ಮುದುಕಿ, ನನ್ನ ಯಜಮಾನಗೂ ವಯಸ್ಸಾಗಿದೆ. ಈ ವಯಸ್ಸಲ್ಲಿ ನನಗೆ ಇಂಥ ಸಂತೋಷ ಸಿಗುತ್ತಾ?”+ ಅಂದ್ಕೊಂಡಳು. 13 ಆಗ ಯೆಹೋವ ಅಬ್ರಹಾಮನಿಗೆ “ಸಾರ ಯಾಕೆ ನಕ್ಕಳು? ‘ಮುದುಕಿಯಾಗಿರೋ ನನಗೆ ನಿಜವಾಗ್ಲೂ ಮಗು ಹುಟ್ಟುತ್ತಾ’ ಅಂತ ಯಾಕೆ ಹೇಳಿದಳು? 14 ಯೆಹೋವನಿಂದ ಆಗದೇ ಇರೋದು ಏನಾದ್ರೂ ಇದ್ಯಾ?+ ಮುಂದಿನ ವರ್ಷ ಇದೇ ಸಮಯಕ್ಕೆ ನಿನ್ನ ಹತ್ರ ಬರ್ತಿನಿ. ಆಗ ಸಾರಗೆ ಒಬ್ಬ ಮಗ ಇರ್ತಾನೆ” ಅಂದ. 15 ಆಗ ಸಾರ ಹೆದರಿ “ಇಲ್ಲ ಸ್ವಾಮಿ, ನಾ ನಗಲಿಲ್ಲ” ಅಂದಳು. ಅದಕ್ಕೆ ಆತನು “ಇಲ್ಲ, ನೀ ನಗಾಡಿದೆ” ಅಂದ.
16 ಆಮೇಲೆ ಅವರು ಅಲ್ಲಿಂದ ಹೊಗ್ತಾ ಇದ್ದಾಗ ಅಬ್ರಹಾಮ ಅವರ ಜೊತೆ ಅರ್ಧ ದಾರಿ ತನಕ ಹೋದ. ಅವರು ಅಲ್ಲಿಂದ ಸೊದೋಮ್ ಪಟ್ಟಣ ನೋಡಿದ್ರು.+ 17 ಆಗ ಯೆಹೋವ ಹೀಗೆ ಅಂದ್ಕೊಂಡನು: “ನಾನು ಮಾಡೋ ವಿಷ್ಯನ ಅಬ್ರಹಾಮಗೆ ಹೇಳಬೇಕು,+ ಅವನಿಂದ ಮುಚ್ಚಿಡಬಾರದು. 18 ಅಬ್ರಹಾಮನಿಂದ ಬಲಿಷ್ಠವಾದ ದೊಡ್ಡ ಜನಾಂಗ ಬರುತ್ತೆ, ಅವನಿಂದಾಗಿ ಭೂಮಿಯ ಎಲ್ಲ ಜನ್ರಿಗೆ ಆಶೀರ್ವಾದ ಸಿಗುತ್ತೆ ಅಂತ ನಾನು ಹೇಳಿದ್ದೀನಿ.+ 19 ಅಬ್ರಹಾಮನ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನ್ಯಾಯನೀತಿ ನಡೆಸೋ ಮೂಲಕ ಯೆಹೋವನ ದಾರಿ ಅನುಸರಿಸಬೇಕು ಅಂತ ಅವನು ತನ್ನ ಮಕ್ಕಳಿಗೆ,+ ತನ್ನೆಲ್ಲ ವಂಶದವರಿಗೆ ಆಜ್ಞೆ ಕೊಡ್ತಾನೆ ಅಂತ ನನಗೆ ಭರವಸೆ ಇದೆ. ಅವನು ಹಾಗೆ ಮಾಡೋದ್ರಿಂದ ಯೆಹೋವನಾದ ನಾನು ಅವನಿಗೆ ಕೊಟ್ಟ ಮಾತನ್ನ ನಿಜ ಮಾಡ್ತೀನಿ.”
20 ಆಮೇಲೆ ಯೆಹೋವ “ಸೊದೋಮ್ ಮತ್ತು ಗೊಮೋರದಲ್ಲಿರೋ ಜನ್ರ ಪಾಪ ತುಂಬ ದೊಡ್ಡದಾಗಿದೆ,+ ನಾನು ಅವರ ಬಗ್ಗೆ ತುಂಬ ಕೇಳಿಸ್ಕೊಂಡಿದ್ದೀನಿ.+ 21 ಕೇಳಿಸ್ಕೊಂಡಿದ್ದು ನಿಜನಾ, ಅವರು ಅಷ್ಟು ಕೆಟ್ಟವ್ರಾ ಅಂತ ನಾನೇ ಹೋಗಿ ನೋಡಿ ತಿಳ್ಕೊಳ್ತೀನಿ”+ ಅಂದನು.
22 ಆಮೇಲೆ ಆ ಪುರುಷರು ಅಲ್ಲಿಂದ ಸೊದೋಮ್ ಕಡೆಗೆ ಹೋದ್ರು. ಆದ್ರೆ ಯೆಹೋವ+ ಅಬ್ರಹಾಮನ ಜೊತೆನೇ ಇದ್ದನು. 23 ಅಬ್ರಹಾಮ ಆತನ ಹತ್ರ ಬಂದು “ನೀನು ಕೆಟ್ಟವರ ಜೊತೆ ನೀತಿವಂತರನ್ನೂ ನಾಶಮಾಡ್ತೀಯಾ?+ 24 ಆ ಪಟ್ಟಣದಲ್ಲಿ 50 ಜನ ನೀತಿವಂತರು ಇದ್ರೆ ನೀನು ಆ ಪಟ್ಟಣ ನಾಶಮಾಡ್ತೀಯಾ? ಆ 50 ನೀತಿವಂತರಿಗೋಸ್ಕರ ಆ ಪಟ್ಟಣದವರನ್ನ ಕ್ಷಮಿಸೋದಿಲ್ವಾ? 25 ಕೆಟ್ಟವರ ಜೊತೆ ನೀತಿವಂತರನ್ನ ನಾಶಮಾಡಿದ್ರೆ ನೀತಿವಂತರಿಗೂ ಕೆಟ್ಟವರಿಗೂ ಒಂದೇ ಗತಿ ಆಗುತ್ತಲ್ವಾ?+ ಹಾಗೆ ನೀನು ಯಾವತ್ತೂ ಮಾಡೋದಿಲ್ಲ. ಅದು ನಿನ್ನಿಂದ ಯೋಚಿಸಕ್ಕೂ ಆಗದೇ ಇರೋ ವಿಷ್ಯ.+ ಇಡೀ ಭೂಮಿಯ ನ್ಯಾಯಾಧೀಶನಾದ ನೀನು ಸರಿಯಾಗಿರೋದನ್ನೇ ಮಾಡ್ತೀಯಲ್ಲಾ?”+ ಅಂದ. 26 ಅದಕ್ಕೆ ಯೆಹೋವ “ಸೊದೋಮಲ್ಲಿ ನನಗೆ 50 ನೀತಿವಂತರು ಸಿಕ್ಕಿದ್ರೆ ಅವರಿಗೋಸ್ಕರ ಆ ಪಟ್ಟಣದವರನ್ನೆಲ್ಲ ಕ್ಷಮಿಸ್ತೀನಿ” ಅಂದನು. 27 ಮತ್ತೆ ಅಬ್ರಹಾಮ “ಧೂಳು ಬೂದಿ ಆಗಿರೋ ನಾನು ಯೆಹೋವನ ಜೊತೆ ಮಾತಾಡೋಕೆ ಧೈರ್ಯ ಮಾಡಿದ್ದೀನಿ. ನಾನು ಹೇಳೋದನ್ನ ದಯವಿಟ್ಟು ಕೇಳು. 28 ಒಂದುವೇಳೆ ಅಲ್ಲಿ 50 ಜನ್ರಿಲ್ಲ, 45 ಜನ ಇದ್ರೆ ಇಡೀ ಪಟ್ಟಣ ನಾಶಮಾಡ್ತೀಯಾ?” ಅಂದ. ಅದಕ್ಕೆ ದೇವರು “45 ನೀತಿವಂತರು ಸಿಕ್ಕಿದ್ರೆ ನಾನು ಆ ಪಟ್ಟಣನ ನಾಶಮಾಡಲ್ಲ”+ ಅಂದನು.
29 ಮತ್ತೆ ಅಬ್ರಹಾಮ “ಒಂದುವೇಳೆ ಅಲ್ಲಿ 40 ಜನ ನೀತಿವಂತರಿದ್ರೆ?” ಅಂತ ಕೇಳಿದ. ಅದಕ್ಕೆ ದೇವರು “40 ಜನ ಇದ್ರೆ ಅವರಿಗೋಸ್ಕರ ನಾನು ಆ ಪಟ್ಟಣನ ಉಳಿಸ್ತೀನಿ” ಅಂದನು. 30 ಮತ್ತೆ ಅಬ್ರಹಾಮ “ಯೆಹೋವ, ನನಗೆ ಇನ್ನೂ ಮಾತಾಡೋಕಿದೆ. ದಯವಿಟ್ಟು ಕೋಪ ಮಾಡ್ಕೊಬೇಡ.+ ಒಂದುವೇಳೆ 30 ಜನ ಮಾತ್ರ ಸಿಕ್ಕಿದ್ರೆ?” ಅಂದ. “ಅಲ್ಲಿ 30 ಜನ ಸಿಕ್ಕಿದ್ರೆ ಅದನ್ನ ನಾಶಮಾಡಲ್ಲ” ಅಂತ ದೇವರು ಅಂದನು. 31 ಮತ್ತೆ ಅಬ್ರಹಾಮ “ಯೆಹೋವ, ನಾನು ನಿನ್ನ ಹತ್ರ ಮಾತಾಡೋಕೆ ಧೈರ್ಯ ಮಾಡಿದ್ದೀನಿ. ದಯವಿಟ್ಟು ನಾನು ಹೇಳೋದು ಕೇಳು. ಒಂದುವೇಳೆ ಅಲ್ಲಿ ಬರೀ 20 ಜನ ಸಿಕ್ಕಿದ್ರೆ?” ಅಂದ. ಅದಕ್ಕೆ ದೇವರು “20 ಜನ ಸಿಕ್ಕಿದ್ರೆ ಅವರಿಗೋಸ್ಕರ ನಾನು ಅದನ್ನ ಉಳಿಸ್ತೀನಿ” ಅಂದನು. 32 ಕೊನೆಗೆ ಅಬ್ರಹಾಮ “ಯೆಹೋವ, ನಾನು ಇನ್ನು ಒಂದೇ ಒಂದು ಸಾರಿ ಮಾತಾಡ್ತೀನಿ. ದಯವಿಟ್ಟು ಕೋಪ ಮಾಡ್ಕೋಬೇಡ. ಒಂದುವೇಳೆ ಅಲ್ಲಿ ಹತ್ತು ಜನ ಮಾತ್ರ ಸಿಕ್ಕಿದ್ರೆ?” ಅಂದ. ಅದಕ್ಕೆ ಆತನು “ಹತ್ತು ಜನ ಸಿಕ್ಕಿದ್ರೂ ನಾನು ಆ ಪಟ್ಟಣನ ಉಳಿಸ್ತೀನಿ” ಅಂದನು. 33 ಯೆಹೋವ ಅಬ್ರಹಾಮನ ಜೊತೆ ಮಾತಾಡಿದ ಮೇಲೆ ಹೋಗಿಬಿಟ್ಟನು.+ ಅಬ್ರಹಾಮ ತನ್ನ ಡೇರೆಗೆ ವಾಪಸ್ ಹೋದ.
19 ಆ ಇಬ್ಬರು ದೇವದೂತರು ಸಂಜೆ ಸೊದೋಮಿಗೆ ಬಂದ್ರು. ಲೋಟ ಸೊದೋಮ್ ಪಟ್ಟಣದ ಬಾಗಿಲ ಹತ್ರ ಕೂತಿದ್ದ. ಲೋಟ ಅವರನ್ನ ನೋಡಿದಾಗ ಎದ್ದು ಹತ್ರ ಹೋಗಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ.+ 2 ಅವನು “ಸ್ವಾಮಿ, ದಯವಿಟ್ಟು ನಿಮ್ಮ ಸೇವಕನ ಮನೆಗೆ ಬನ್ನಿ. ನಿಮ್ಮ ಕಾಲು ತೊಳೆಯೋ ಅವಕಾಶ ಕೊಡಿ. ರಾತ್ರಿ ನಮ್ಮ ಮನೆಲೇ ಉಳ್ಕೊಂಡು ಬೆಳಿಗ್ಗೆ ಬೇಗ ಎದ್ದು ಪ್ರಯಾಣ ಮಾಡಬಹುದು” ಅಂದ. ಅವರು “ಇಲ್ಲ, ನಾವು ಪಟ್ಟಣದ ಮುಖ್ಯಸ್ಥಳದಲ್ಲೇ* ರಾತ್ರಿ ಕಳಿತೀವಿ” ಅಂದ್ರು. 3 ಆದ್ರೆ ಲೋಟ ತುಂಬ ಒತ್ತಾಯ ಮಾಡಿದ್ದಕ್ಕೆ ಅವನ ಜೊತೆ ಮನೆಗೆ ಹೋದ್ರು. ಅವನು ಅವರಿಗಾಗಿ ಅಡುಗೆ ಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನ ಸುಟ್ಟು ಕೊಟ್ಟ. ಅವರು ತಿಂದ್ರು.
4 ಅವರು ಮಲಗೋದಕ್ಕಿಂತ ಮುಂಚೆ ಸೊದೋಮ್ ಪಟ್ಟಣದ ಎಲ್ಲ ಗಂಡಸರು ಅಂದ್ರೆ ಹುಡುಗರಿಂದ ಮುದುಕರ ತನಕ ಎಲ್ಲರೂ ಗುಂಪು ಕಟ್ಟಿಕೊಂಡು ಮನೆಯನ್ನ ಸುತ್ತುವರಿದ್ರು. 5 ಅವರು ಲೋಟನನ್ನ ಕರೀತಾ “ಇವತ್ತು ರಾತ್ರಿ ನಿನ್ನ ಮನೆಗೆ ಬಂದ ಗಂಡಸರು ಎಲ್ಲಿ? ಅವರನ್ನ ಹೊರಗೆ ಕರ್ಕೊಂಡು ಬಾ. ನಾವು ಅವರ ಜೊತೆ ಸಂಭೋಗ ಮಾಡಬೇಕು”+ ಅಂದ್ರು.
6 ಆಗ ಲೋಟ ಮನೆ ಹೊರಗೆ ಬಂದು ಬಾಗಿಲು ಮುಚ್ಚಿದ. 7 ಅವನು “ಅಣ್ಣತಮ್ಮಂದಿರೇ, ದಯವಿಟ್ಟು ಇಂಥ ಕೆಟ್ಟ ಕೆಲಸ ಮಾಡಬೇಡಿ. 8 ದಯವಿಟ್ಟು ನಾ ಹೇಳೋದನ್ನ ಕೇಳಿ. ನನಗೆ ಕನ್ಯೆಯರಾದ ಇಬ್ರು ಹೆಣ್ಣುಮಕ್ಕಳು ಇದ್ದಾರೆ. ಅವರನ್ನ ಬೇಕಾದ್ರೆ ನಿಮಗೆ ಕೊಡ್ತೀನಿ. ನಿಮ್ಮ ಮನಸ್ಸಿಗೆ ಬಂದ ಹಾಗೆ ಮಾಡಿ. ಆದ್ರೆ ಇವರನ್ನ ಮಾತ್ರ ದಯವಿಟ್ಟು ಬಿಟ್ಟುಬಿಡಿ. ಯಾಕಂದ್ರೆ ಇವರು ನನ್ನ ಸಂರಕ್ಷಣೆಯಲ್ಲಿರೋ ಅತಿಥಿಗಳು”+ ಅಂದ. 9 ಆಗ “ದಾರಿಬಿಡು” ಅಂತ ಹೇಳಿ “ಗತಿಯಿಲ್ಲದ ಈ ವಿದೇಶಿ ಬದುಕಕ್ಕೆ ನಮ್ಮೂರಿಗೆ ಬಂದು ನಮಗೇ ನ್ಯಾಯ ಹೇಳ್ತಾನೆ. ಎಷ್ಟು ಧೈರ್ಯ ಇವನಿಗೆ! ಅವರಿಗಿಂತ ಮೊದಲು ನಿನಗೇ ಒಂದು ಗತಿ ಕಾಣಿಸ್ತೀವಿ” ಅಂದ್ರು. ಆಮೇಲೆ ಅವರು ಲೋಟನನ್ನ ಅದುಮಿ ತಳ್ಳಿ ಬಾಗಿಲನ್ನ ಮುರಿಯೋಕೆ ಮುಂದೆ ಬಂದ್ರು. 10 ಆಗ ಮನೆಯೊಳಗಿದ್ದ ಪುರುಷರು ಕೈಚಾಚಿ ಲೋಟನನ್ನ ಒಳಗೆ ಎಳೆದು ಬಾಗಿಲು ಮುಚ್ಚಿದ್ರು. 11 ಆಮೇಲೆ ಮನೆ ಬಾಗಿಲ ಮುಂದಿದ್ದ ಗಂಡಸರೆಲ್ಲರ ಅಂದ್ರೆ ಚಿಕ್ಕವರಿಂದ ದೊಡ್ಡವರ ತನಕ ಎಲ್ಲರ ಕಣ್ಣು ಕುರುಡು ಮಾಡಿದ್ರು. ಆಗ ಆ ಜನ್ರಿಗೆ ಬಾಗಿಲು ಎಲ್ಲಿದೆ ಅಂತ ಗೊತ್ತಾಗದೆ ಹುಡುಕಿ ಸುಸ್ತಾದ್ರು.
12 ಆ ಪುರುಷರು ಲೋಟನಿಗೆ “ಇಲ್ಲಿ ನಿನ್ನವರು ಬೇರೆ ಯಾರಾದ್ರೂ ಇದ್ದಾರಾ? ನಿನ್ನ ಅಳಿಯಂದಿರು, ಗಂಡುಹೆಣ್ಣು ಮಕ್ಕಳು, ಬೇರೆ ಯಾರೆಲ್ಲ ಇದ್ದಾರೋ ಅವರನ್ನೆಲ್ಲ ಈ ಪಟ್ಟಣದ ಹೊರಗೆ ಕರ್ಕೊಂಡು ಹೋಗು. 13 ನಾವು ಈ ಪಟ್ಟಣ ನಾಶ ಮಾಡ್ತೀವಿ. ಯಾಕಂದ್ರೆ ಇಲ್ಲಿಯವರ ಬಗ್ಗೆ ದೂರು ಹೇಳೋ ಜನ್ರ ಗೋಳಾಟವನ್ನ ಯೆಹೋವ ಕೇಳಿಸ್ಕೊಂಡಿದ್ದಾನೆ.+ ಹಾಗಾಗಿ ಈ ಪಟ್ಟಣ ನಾಶಮಾಡೋಕೆ ಯೆಹೋವ ನಮ್ಮನ್ನ ಕಳಿಸಿದ್ದಾನೆ” ಅಂದ್ರು. 14 ಆಗ ಲೋಟ ಹೋಗಿ ತನ್ನ ಹೆಣ್ಣುಮಕ್ಕಳನ್ನ ಮದುವೆ ಆಗಲಿದ್ದ ಅಳಿಯಂದಿರಿಗೆ ಈ ವಿಷ್ಯ ತಿಳಿಸಿ “ಬೇಗ ಈ ಸ್ಥಳ ಬಿಟ್ಟು ಹೋಗಿ! ಯೆಹೋವ ಈ ಪಟ್ಟಣವನ್ನ ನಾಶಮಾಡ್ತಾನೆ!” ಅಂದನು. ಲೋಟ ತಮಾಷೆ ಮಾಡ್ತಿದ್ದಾನೆ ಅಂತ ಆ ಅಳಿಯಂದಿರು ಅಂದ್ಕೊಂಡ್ರು.+
15 ಸೂರ್ಯ ಹುಟ್ಟೋ ಮುಂಚೆನೇ ದೇವದೂತರು ಲೋಟನಿಗೆ “ಬೇಗ ಇಲ್ಲಿಂದ ಹೋಗು. ಈ ಪಟ್ಟಣದವರ ಪಾಪಕ್ಕೆ ತಕ್ಕ ಶಿಕ್ಷೆ ಆಗುತ್ತೆ. ನೀವು ನಾಶ ಆಗಬಾರದು ಅಂದ್ರೆ ನೀನು ನಿನ್ನ ಹೆಂಡತಿನ, ಇಬ್ರು ಹೆಣ್ಣುಮಕ್ಕಳನ್ನ ಕರ್ಕೊಂಡು ಬೇಗ ಇಲ್ಲಿಂದ ಹೋಗು”+ ಅಂತ ಅವಸರ ಮಾಡಿದ್ರು. 16 ಆದ್ರೆ ಲೋಟ ತಡಮಾಡ್ತಾ ಇದ್ದ. ಹಾಗಿದ್ರೂ ಯೆಹೋವ ಅವನಿಗೆ ದಯೆ ತೋರಿಸಿದ್ರಿಂದ+ ಆ ಪುರುಷರು ತಟ್ಟನೆ ಅವನ ಕೈಯನ್ನ, ಅವನ ಹೆಂಡತಿ, ಹೆಣ್ಣುಮಕ್ಕಳ ಕೈ ಹಿಡಿದು ಕರ್ಕೊಂಡು ಹೋಗಿ ಪಟ್ಟಣದ ಹೊರಗೆ ಬಿಟ್ರು.+ 17 ಅವರನ್ನ ಪಟ್ಟಣದ ಹೊರಗೆ ಕರ್ಕೊಂಡು ಬಂದ ತಕ್ಷಣ ಆ ಪುರುಷರಲ್ಲಿ ಒಬ್ಬ “ಇಲ್ಲಿಂದ ಓಡಿಹೋಗಿ! ನಿಮ್ಮ ಜೀವ ಉಳಿಸ್ಕೊಳ್ಳಿ. ಹಿಂದೆ ತಿರುಗಿ ನೋಡಬೇಡಿ!+ ಈ ಪ್ರದೇಶದಲ್ಲಿ ಎಲ್ಲೂ ನಿಲ್ಲಬೇಡಿ!+ ಆ ಬೆಟ್ಟದ ಪ್ರದೇಶಕ್ಕೆ ಓಡಿಹೋಗಿ, ಇಲ್ಲದಿದ್ರೆ ನೀವು ಸಹ ನಾಶ ಆಗ್ತೀರ” ಅಂದ.
18 ಆಗ ಲೋಟ ಅವರಿಗೆ “ಯೆಹೋವನೇ,* ದಯವಿಟ್ಟು ಅಲ್ಲಿಗೆ ಹೋಗೋಕೆ ಹೇಳಬೇಡ! 19 ನೀನು ನಿನ್ನ ಸೇವಕನಿಗೆ ದಯೆ ತೋರಿಸಿದೆ, ನನ್ನ ಪ್ರಾಣ ಉಳಿಸಿ ತುಂಬ ಪ್ರೀತಿ* ತೋರಿಸಿದೆ.+ ಆದ್ರೆ ಬೆಟ್ಟದ ಪ್ರದೇಶಕ್ಕೆ ಓಡಿಹೋಗೋಕೆ ನನ್ನಿಂದ ಆಗಲ್ಲ. ಏನಾದ್ರೂ ಆಪತ್ತಲ್ಲಿ ಸಿಕ್ಕಿ ಹಾಕೊಂಡು ಸತ್ತು ಹೋಗ್ತಿನೋ ಅಂತ ಭಯ ಆಗ್ತಿದೆ.+ 20 ನೋಡು, ಇಲ್ಲೇ ಪಕ್ಕದಲ್ಲಿ ಒಂದು ಊರು ಇದೆ. ನಾನು ಅಲ್ಲಿಗೆ ಓಡಿಹೋಗ್ತಿನಿ. ಅದು ಚಿಕ್ಕ ಸ್ಥಳ. ದಯವಿಟ್ಟು ಅಲ್ಲಿಗೆ ಹೋಗೋಕೆ ಅನುಮತಿ ಕೊಡು. ಆಗ ನನ್ನ ಜೀವ ಉಳಿಯುತ್ತೆ. ಅದು ಚಿಕ್ಕ ಸ್ಥಳ ಅಲ್ಲವಾ?” ಅಂದ. 21 ಅದಕ್ಕೆ ಆ ದೇವದೂತ “ಸರಿ, ನಾನು ನಿನಗೆ ಈ ವಿಷ್ಯದಲ್ಲೂ ದಯೆ ತೋರಿಸ್ತೀನಿ.+ ನೀನು ಹೇಳಿದ ಆ ಊರನ್ನ ನಾಶ ಮಾಡೋದಿಲ್ಲ.+ 22 ಬೇಗ ಅಲ್ಲಿಗೆ ಹೋಗು! ಯಾಕಂದ್ರೆ ನೀನು ಅಲ್ಲಿ ಮುಟ್ಟೋ ತನಕ ನನಗೆ ಏನೂ ಮಾಡಕ್ಕಾಗಲ್ಲ”+ ಅಂದನು. ಹಾಗಾಗಿ ಆ ಊರಿಗೆ ಚೋಗರ್*+ ಅನ್ನೋ ಹೆಸರು ಬಂತು.
23 ಲೋಟ ಚೋಗರಿಗೆ ಬಂದು ತಲುಪಿದಾಗ ಸೂರ್ಯ ಹುಟ್ತಿದ್ದ. 24 ಆಗ ಯೆಹೋವ ಸೊದೋಮ್ ಮತ್ತು ಗೊಮೋರದ ಮೇಲೆ ಬೆಂಕಿ ಗಂಧಕ ಸುರಿಸಿದನು. ಹೌದು, ಆಕಾಶದಿಂದ ಯೆಹೋವ ದೇವರೇ ಅದನ್ನ ಸುರಿಸಿದನು.+ 25 ಹೀಗೆ ಆತನು ಆ ಪಟ್ಟಣಗಳನ್ನ, ಆ ಇಡೀ ಪ್ರದೇಶವನ್ನ ನಾಶಮಾಡಿದನು. ಅಲ್ಲಿದ್ದ ಎಲ್ಲ ಜನರನ್ನ ಎಲ್ಲ ಬೆಳೆ ನಾಶ ಮಾಡಿದನು.+ 26 ಲೋಟನ ಹಿಂದೆ ಬರ್ತಿದ್ದ ಅವನ ಹೆಂಡತಿ ಹಿಂದೆ ತಿರುಗಿ ನೋಡಿದ್ರಿಂದ ಉಪ್ಪಿನ ಕಂಬ ಆದಳು.+
27 ಅಬ್ರಹಾಮ ಬೆಳಿಗ್ಗೆ ಬೇಗ ಎದ್ದು ಈ ಮುಂಚೆ ತಾನು ಯೆಹೋವನ ಮುಂದೆ ನಿಂತು ಮಾತಾಡಿದ್ದ ಸ್ಥಳಕ್ಕೆ ಹೋದ.+ 28 ಅವನು ಸೊದೋಮ್, ಗೊಮೋರ ಮತ್ತು ಇಡೀ ಪ್ರದೇಶ ನೋಡಿದಾಗ ಅಲ್ಲಿಂದ ದೊಡ್ಡ ಕುಲುಮೆಯಿಂದ* ಬರೋ ಹೊಗೆ ತರ ದಟ್ಟ ಹೊಗೆ ಮೇಲೆ ಹೋಗೋದನ್ನ ನೋಡಿದ.+ 29 ಆ ಪ್ರದೇಶದಲ್ಲಿದ್ದ ಪಟ್ಟಣಗಳನ್ನ ನಾಶಮಾಡುವಾಗ ದೇವರು ಅಬ್ರಹಾಮನನ್ನ ಮನಸ್ಸಲ್ಲಿಟ್ಟು ಲೋಟನನ್ನ ಅವನು ವಾಸಿಸ್ತಿದ್ದ ಜಾಗದಿಂದ ಹೊರಗೆ ಕಳಿಸಿದನು.+
30 ಲೋಟ ಚೋಗರಿನಲ್ಲಿ ವಾಸ ಮಾಡೋಕೆ ಭಯಪಟ್ಟ.+ ಹಾಗಾಗಿ ತನ್ನ ಇಬ್ರು ಹೆಣ್ಣುಮಕ್ಕಳನ್ನ ಚೋಗರಿನಿಂದ ಕರ್ಕೊಂಡು ಬೆಟ್ಟಕ್ಕೆ ಹೋದ.+ ಅಲ್ಲಿ ತನ್ನ ಇಬ್ರು ಹೆಣ್ಣುಮಕ್ಕಳ ಜೊತೆ ಒಂದು ಗವಿಯಲ್ಲಿ ವಾಸಿಸಿದ. 31 ಲೋಟನ ದೊಡ್ಡ ಮಗಳು ಚಿಕ್ಕವಳಿಗೆ “ಅಪ್ಪಗೆ ವಯಸ್ಸಾಗಿದೆ. ಎಲ್ಲರ ಹಾಗೆ ನಮಗೆ ಮದುವೆ ಆಗಕ್ಕೆ ಈ ಪ್ರದೇಶದಲ್ಲಿ ಒಂದು ಗಂಡೂ ಇಲ್ಲ. 32 ಹಾಗಾಗಿ ಅಪ್ಪಗೆ ದ್ರಾಕ್ಷಾಮದ್ಯ ಕುಡಿಯೋಕೆ ಕೊಡೋಣ. ಆಮೇಲೆ ಆತನ ಜೊತೆ ಮಲ್ಕೊಂಡು ನಮ್ಮ ಅಪ್ಪನ ವಂಶ ಉಳಿಸೋಣ” ಅಂದಳು.
33 ಆ ರಾತ್ರಿ ಅವರು ತಮ್ಮ ತಂದೆಗೆ ತುಂಬ ದ್ರಾಕ್ಷಾಮದ್ಯ ಕುಡಿಯೋಕೆ ಕೊಟ್ರು. ಆಮೇಲೆ ಮೊದಲನೇ ಮಗಳು ಹೋಗಿ ತಂದೆ ಜೊತೆ ಮಲ್ಕೊಂಡಳು. ಅವಳು ಯಾವಾಗ ಮಲಗಿ ಎದ್ದು ಹೋದಳೋ ಅವನಿಗೆ ಗೊತ್ತಾಗ್ಲೇ ಇಲ್ಲ. 34 ಮಾರನೇ ದಿನ ದೊಡ್ಡ ಮಗಳು ಚಿಕ್ಕವಳಿಗೆ “ನಿನ್ನೆ ರಾತ್ರಿ ನಾನು ಅಪ್ಪ ಜೊತೆ ಮಲ್ಕೊಂಡೆ. ಈ ರಾತ್ರಿನೂ ಆತನಿಗೆ ದ್ರಾಕ್ಷಾಮದ್ಯ ಕುಡಿಯೋಕೆ ಕೊಡೋಣ. ಆಮೇಲೆ ನೀನು ಹೋಗಿ ಆತನ ಜೊತೆ ಮಲ್ಕೊ. ಹೀಗೆ ನಾವು ಅಪ್ಪನಿಂದ ಮಕ್ಕಳನ್ನ ಪಡೆದು ಆತನ ವಂಶ ಬೆಳೆಸೋಣ” ಅಂದಳು. 35 ಆ ರಾತ್ರಿನೂ ಅವರು ತಮ್ಮ ತಂದೆಗೆ ಮತ್ತೇರುವಷ್ಟು ದ್ರಾಕ್ಷಾಮದ್ಯ ಕುಡಿಸಿದ್ರು. ಈ ಸಾರಿ ಚಿಕ್ಕ ಮಗಳು ಅವನ ಜೊತೆ ಮಲ್ಕೊಂಡಳು. ಅವಳು ಯಾವಾಗ ಮಲಗಿ ಎದ್ದು ಹೋದಳೋ ಅವನಿಗೆ ಗೊತ್ತಾಗ್ಲೇ ಇಲ್ಲ. 36 ಹೀಗೆ ಲೋಟನ ಇಬ್ಬರೂ ಹೆಣ್ಣುಮಕ್ಕಳು ತಂದೆಯಿಂದ ಗರ್ಭಿಣಿ ಆದ್ರು. 37 ಮೊದಲನೇ ಮಗಳು ಗಂಡುಮಗು ಹೆತ್ತು ಮೋವಾಬ್ ಅಂತ ಹೆಸರಿಟ್ಟಳು.+ ಇವತ್ತಿರೋ ಮೋವಾಬ್ಯರಿಗೆ ಇವನೇ ಮೂಲತಂದೆ.+ 38 ಚಿಕ್ಕ ಮಗಳು ಸಹ ಗಂಡುಮಗು ಹೆತ್ತು ಬೆನಮ್ಮಿ ಅಂತ ಹೆಸರಿಟ್ಟಳು. ಇವತ್ತಿರೋ ಅಮ್ಮೋನಿಯರಿಗೆ+ ಇವನೇ ಮೂಲತಂದೆ.
20 ಅಬ್ರಹಾಮ ನೆಗೆಬ್ ಪ್ರದೇಶಕ್ಕೆ ಹೋಗಿ ಕಾದೇಶ್+ ಮತ್ತು ಶೂರಿನ+ ಮಧ್ಯದಲ್ಲಿ ವಾಸ ಮಾಡೋಕೆ ಶುರುಮಾಡಿದ.+ ಅವನು ಗೆರಾರಿನಲ್ಲಿ+ ವಾಸಿಸ್ತಿದ್ದಾಗ* 2 ಅಲ್ಲಿನೂ ತನ್ನ ಹೆಂಡತಿ ಸಾರಳನ್ನ ತಂಗಿ ಅಂತ ಹೇಳಿದ.+ ಹಾಗಾಗಿ ಗೆರಾರಿನ ರಾಜ ಅಬೀಮೆಲೆಕ ಸಾರಳನ್ನ ತನ್ನ ಹತ್ರ ಕರೆಸಿಕೊಂಡ.+ 3 ಆಮೇಲೆ ದೇವರು ಅಬೀಮೆಲೆಕನಿಗೆ ರಾತ್ರಿ ಕನಸಲ್ಲಿ “ನೀನು ಆ ಸ್ತ್ರೀಯನ್ನ ಕರ್ಕೊಂಡು ಬಂದಿರೋದ್ರಿಂದ ಖಂಡಿತ ಸಾಯ್ತಿಯ.+ ಅವಳಿಗೆ ಮದುವೆಯಾಗಿದೆ, ಅವಳು ಇನ್ನೊಬ್ಬನಿಗೆ ಸೇರಿದವಳು”+ ಅಂದನು. 4 ಅಬೀಮೆಲೆಕ ಅವಳನ್ನ ಮುಟ್ಟಿರಲಿಲ್ಲ.* ಹಾಗಾಗಿ ಅವನು “ಯೆಹೋವನೇ, ತಪ್ಪು ಮಾಡದ ಜನ್ರನ್ನ ನಾಶ ಮಾಡ್ತಿಯಾ? 5 ಅವನು ಅವಳನ್ನ ತಂಗಿ ಅಂತ ಹೇಳಿದ್ನಲ್ಲಾ? ಅವಳು ಕೂಡ ಅವನನ್ನ ಅಣ್ಣ ಅಂತ ಹೇಳಿದಳಲ್ಲಾ? ನಾನಿದನ್ನ ಕೆಟ್ಟ ಉದ್ದೇಶದಿಂದ ಮಾಡಲಿಲ್ಲ. ನಾನು ಮಾಡ್ತಿರೋದು ತಪ್ಪು ಅಂತ ನಂಗೆ ಗೊತ್ತಿರಲಿಲ್ಲ” ಅಂದ. 6 ಅದಕ್ಕೆ ಸತ್ಯ ದೇವರು ಕನಸಲ್ಲಿ “ನೀನು ಕೆಟ್ಟ ಉದ್ದೇಶದಿಂದ ಇದನ್ನ ಮಾಡಲಿಲ್ಲ ಅಂತ ನಂಗೊತ್ತು. ಹಾಗಾಗಿ ನನ್ನ ವಿರುದ್ಧ ಪಾಪ ಮಾಡದ ಹಾಗೆ ನಾನು ನಿನ್ನನ್ನ ತಡಿದೆ. ಅವಳನ್ನ ಮುಟ್ಟಲು ಬಿಡಲಿಲ್ಲ. 7 ಈಗ ಆ ಮನುಷ್ಯನ ಹೆಂಡತಿಯನ್ನ ಅವನಿಗೆ ಒಪ್ಪಿಸು. ಅವನು ಒಬ್ಬ ಪ್ರವಾದಿ.+ ಅವನು ನಿನಗಾಗಿ ನನ್ನ ಹತ್ರ ಬೇಡ್ಕೊಳ್ತಾನೆ.+ ಆಗ ನಿನ್ನ ಜೀವ ಉಳಿಯುತ್ತೆ. ಅವಳನ್ನ ಅವನಿಗೆ ಒಪ್ಪಿಸದಿದ್ರೆ ನೀನೂ ನಿನ್ನವರೆಲ್ಲರೂ ಖಂಡಿತ ಸಾಯ್ತಿರ” ಅಂದನು.
8 ಅಬೀಮೆಲೆಕ ಬೆಳಿಗ್ಗೆ ಬೇಗ ಎದ್ದು ತನ್ನ ಸೇವಕರನ್ನೆಲ್ಲ ಕರೆಸಿ ಈ ಎಲ್ಲ ವಿಷ್ಯ ತಿಳಿಸಿದ. ಅದನ್ನ ಕೇಳಿ ಅವರೆಲ್ಲ ತುಂಬ ಭಯಪಟ್ರು. 9 ಆಮೇಲೆ ಅಬೀಮೆಲೆಕ ಅಬ್ರಹಾಮನನ್ನ ಕರೆಸಿ “ನಾನೇನ್ ಪಾಪ ಮಾಡ್ದೆ ಅಂತ ನೀನು ಹೀಗೆ ಮಾಡ್ದೆ? ನಿನ್ನಿಂದಾಗಿ ನಾನೂ ನನ್ನ ಜನ್ರೂ ಮಹಾಪಾಪಕ್ಕೆ ಗುರಿ ಆಗ್ತಿದ್ವಿ. ನೀನು ಮಾಡಿದ್ದು ಸರಿಯಲ್ಲ” ಅಂದ. 10 ಅಲ್ಲದೆ ಅಬೀಮೆಲೆಕ “ಯಾವ ಉದ್ದೇಶದಿಂದ ನೀನು ಹೀಗೆ ಮಾಡ್ದೆ?”+ ಅಂತ ಕೇಳಿದ. 11 ಅದಕ್ಕೆ ಅಬ್ರಹಾಮ ಹೀಗಂದ: “ಈ ಸ್ಥಳದ ಜನ್ರಿಗೆ ದೇವರ ಭಯ ಇಲ್ಲ ಅಂತ ನೆನಸಿದೆ. ನನ್ನ ಹೆಂಡತಿಗೋಸ್ಕರ ನನ್ನನ್ನ ಕೊಲ್ತಾರೆ ಅಂತ ಭಯ ಆಯ್ತು.+ 12 ಅಲ್ಲದೇ ಅವಳು ನಿಜವಾಗ್ಲೂ ನನ್ನ ತಂಗಿ. ನಮ್ಮಿಬ್ಬರ ತಂದೆ ಒಬ್ಬರೇ, ಆದ್ರೆ ತಾಯಿ ಬೇರೆ ಬೇರೆ. ಅದಕ್ಕೇ ಅವಳನ್ನ ಮದುವೆ ಆದೆ.+ 13 ದೇವರು ನನಗೆ ತಂದೆ ಮನೆ ಬಿಟ್ಟು ಹೋಗಬೇಕಂತ ಹೇಳಿದಾಗ+ ನಾನು ಅವಳಿಗೆ ‘ನಾವು ಹೋಗೋ ಜಾಗದ ಜನ್ರಿಗೆಲ್ಲ ನನ್ನನ್ನ ನಿನ್ನ ಅಣ್ಣ ಅಂತೇಳು. ಹೀಗೆ ನನಗೆ ನಿಷ್ಠೆ ತೋರಿಸು’ ಅಂತ ಹೇಳಿದೆ.”+
14 ಆಗ ಅಬೀಮೆಲೆಕ ಅಬ್ರಹಾಮನಿಗೆ ದನಕುರಿಗಳನ್ನ, ಹೆಣ್ಣಾಳು ಗಂಡಾಳುಗಳನ್ನ ಕೊಟ್ಟು ಅವನ ಹೆಂಡತಿ ಸಾರಳನ್ನ ಅವನಿಗೆ ಒಪ್ಪಿಸಿದ. 15 ಅಲ್ಲದೆ ಅಬೀಮೆಲೆಕ “ನೋಡು ನನ್ನ ಇಡೀ ದೇಶ ನಿನ್ನ ಮುಂದಿದೆ. ನಿನಗಿಷ್ಟ ಇದ್ದ ಕಡೆ ಹೋಗಿ ಇರು” ಅಂದ. 16 ಅವನು ಸಾರಳಿಗೆ “ನಾನು 1,000 ಬೆಳ್ಳಿ ಶೆಕೆಲ್‌ಗಳನ್ನ* ನಿನ್ನ ಅಣ್ಣನಿಗೆ ಕೊಡ್ತೀನಿ.+ ಇದು, ನೀನು ಯಾವ ತಪ್ಪನ್ನೂ ಮಾಡಿಲ್ಲ, ನಿನ್ನ ಮೇಲೆ ಯಾವುದೇ ಕಳಂಕವಿಲ್ಲ ಅನ್ನೋದಕ್ಕೆ ನಿನ್ನ ಜೊತೆ ಇರೋರಿಗೂ ಉಳಿದ ಎಲ್ಲರಿಗೂ ಗುರುತು” ಅಂದ. 17 ಆಮೇಲೆ ಅಬ್ರಹಾಮ ಸತ್ಯ ದೇವರಿಗೆ ಅಂಗಲಾಚಿ ಬೇಡ್ಕೊಂಡ. ಆಗ ದೇವರು ಅಬೀಮೆಲೆಕನನ್ನ, ಅವನ ಹೆಂಡತಿ, ದಾಸಿಯರನ್ನ ವಾಸಿಮಾಡಿದ. ಆಮೇಲೆ ಅವರಿಗೆ ಮಕ್ಕಳು ಹುಟ್ಟಿದ್ರು. 18 ಅಬೀಮೆಲೆಕ ಅಬ್ರಹಾಮನ ಹೆಂಡತಿ ಸಾರಳನ್ನ ಕರ್ಕೊಂಡು ಹೋಗಿದ್ದ ಕಾರಣ ಯೆಹೋವ ಅಬೀಮೆಲೆಕನ ಮನೆಯಲ್ಲಿದ್ದ ಎಲ್ಲ ಸ್ತ್ರೀಯರನ್ನ ಬಂಜೆಯರನ್ನಾಗಿ ಮಾಡಿದ್ದನು.+
21 ಯೆಹೋವ ತಾನು ಹೇಳಿದ ತರಾನೇ ಸಾರಳ ಕಡೆ ಗಮನಕೊಟ್ಟನು. ಕೊಟ್ಟ ಮಾತಿನ ಪ್ರಕಾರ ಯೆಹೋವ ಮಾಡಿದನು.+ 2 ಸಾರ ಗರ್ಭಿಣಿಯಾಗಿ+ ವಯಸ್ಸಾಗಿದ್ದ ಅಬ್ರಹಾಮನಿಗೆ ಗಂಡುಮಗು ಹೆತ್ತಳು. ದೇವರು ಅಬ್ರಹಾಮನಿಗೆ ಮಾತುಕೊಟ್ಟಾಗ ಹೇಳಿದ್ದ ಸಮಯಕ್ಕೇ ಅವಳಿಗೆ ಮಗು ಹುಟ್ತು.+ 3 ಅಬ್ರಹಾಮ ಆ ಮಗುಗೆ ಇಸಾಕ+ ಅಂತ ಹೆಸರಿಟ್ಟ. 4 ದೇವರು ಆಜ್ಞೆ ಕೊಟ್ಟ ಹಾಗೆ ಅಬ್ರಹಾಮ ತನ್ನ ಮಗ ಇಸಾಕಗೆ ಎಂಟು ದಿನ ಆದಾಗ ಸುನ್ನತಿ ಮಾಡಿಸಿದ.+ 5 ಇಸಾಕ ಹುಟ್ಟಿದಾಗ ಅಬ್ರಹಾಮನಿಗೆ 100 ವರ್ಷ. 6 ಸಾರ “ದೇವರು ನನ್ನನ್ನ ಖುಷಿಯಿಂದ ನಗೋ ಹಾಗೆ ಮಾಡಿದ್ದಾನೆ. ಇದರ ಬಗ್ಗೆ ಕೇಳಿದವರೆಲ್ಲ ನನ್ನ ಜೊತೆ ನಗ್ತಾರೆ”* ಅಂದಳು. 7 ಅಷ್ಟೇ ಅಲ್ಲ “ನಾನು* ಅಬ್ರಹಾಮನ ಮಗುಗೆ ತಾಯಿ ಆಗ್ತೀನಿ ಅಂತ ಯಾರಾದ್ರೂ ಯೋಚ್ನೆ ಮಾಡಿದ್ರಾ? ಆದ್ರೆ ನಾನು ವಯಸ್ಸಾದ ಮೇಲೆ ಅಬ್ರಹಾಮನಿಗೆ ಒಬ್ಬ ಮಗನನ್ನ ಹೆತ್ತಿದ್ದೀನಿ” ಅಂದಳು.
8 ಆ ಮಗು ಬೆಳೆದು ತಾಯಿ ಹಾಲು ಬಿಡ್ತು. ಇಸಾಕ ತಾಯಿ ಹಾಲು ಬಿಟ್ಟ ದಿನ ಅಬ್ರಹಾಮ ಎಲ್ರನ್ನೂ ಕರೆದು ಊಟ ಹಾಕಿಸಿದ. 9 ಆದ್ರೆ ಈಜಿಪ್ಟ್ ದೇಶದ ಹಾಗರಳಿಂದ ಅಬ್ರಹಾಮನಿಗೆ ಹುಟ್ಟಿದ ಮಗ+ ಇಸಾಕನಿಗೆ ತಮಾಷೆಮಾಡಿ ಕಾಡಿಸ್ತಾ ಇದ್ದ.+ ಅದನ್ನ ಸಾರ ನೋಡ್ತಾ ಇದ್ದಳು. 10 ಅವಳು ಅಬ್ರಹಾಮನಿಗೆ “ಈ ದಾಸಿಯನ್ನ ಅವಳ ಮಗನನ್ನ ಇಲ್ಲಿಂದ ಓಡಿಸು. ನನ್ನ ಮಗ ಇಸಾಕನ ಜೊತೆ ಆ ದಾಸಿಯ ಮಗ ನಿನಗೆ ವಾರಸುದಾರ ಆಗಬಾರದು”+ ಅಂದಳು. 11 ಸಾರ ಹೇಳಿದ ಮಾತು ಕೇಳಿ ಅಬ್ರಹಾಮನಿಗೆ ತುಂಬ ಬೇಜಾರಾಯ್ತು.+ 12 ಆಗ ದೇವರು ಅಬ್ರಹಾಮನಿಗೆ “ನಿನ್ನ ಮಗನ ಬಗ್ಗೆ, ದಾಸಿ ಬಗ್ಗೆ ಸಾರ ಹೇಳಿದ ಮಾತಿಂದ ಬೇಜಾರು ಮಾಡ್ಕೊಬೇಡ. ಸಾರ ಹೇಳಿದ ಹಾಗೆ ಮಾಡು. ಯಾಕಂದ್ರೆ ನಾನು ನಿನಗೆ ಮಾತು ಕೊಟ್ಟ ಸಂತಾನ ಇಸಾಕನ ವಂಶದಲ್ಲೇ ಬರುತ್ತೆ.+ 13 ಅಷ್ಟೇ ಅಲ್ಲ ನಿನ್ನಿಂದ ಹುಟ್ಟಿದ ಈ ದಾಸಿಯ ಮಗನ+ ವಂಶದವರು ಸಹ ಒಂದು ಜನಾಂಗ ಆಗೋ ತರ ನಾನು ಮಾಡ್ತೀನಿ”+ ಅಂದನು.
14 ಅಬ್ರಹಾಮ ಬೆಳಿಗ್ಗೆ ಬೇಗ ಎದ್ದು ರೊಟ್ಟಿಯನ್ನ, ನೀರಿದ್ದ ಚರ್ಮದ ಚೀಲವನ್ನ ಹಾಗರಳಿಗೆ ಕೊಟ್ಟ. ಅದನ್ನ ಅವಳ ಹೆಗಲ ಮೇಲೆ ಹೊರಿಸಿ ಅವಳ ಜೊತೆ ಹುಡುಗನನ್ನೂ ಕಳಿಸಿಬಿಟ್ಟ.+ ಅವಳು ಅಲ್ಲಿಂದ ಹೋಗಿ ಬೇರ್ಷೆಬದ ಕಾಡಿಗೆ+ ಬಂದು ಅಲ್ಲಿ ಅಲೆದಾಡ್ತಾ ಇದ್ದಳು. 15 ಕೊನೆಗೆ ಚರ್ಮದ ಚೀಲದಲ್ಲಿದ್ದ ನೀರು ಖಾಲಿ ಆಯ್ತು. ಆಗ ಅವಳು ತನ್ನ ಮಗನನ್ನ ಒಂದು ಪೊದೆ ಕೆಳಗೆ ಬಿಟ್ಟು 16 “ನನ್ನ ಮಗ ಸಾಯೋದನ್ನ ನನ್ನಿಂದ ನೋಡೋಕಾಗಲ್ಲ” ಅಂತೇಳಿ ಬಾಣ ಎಸೆತದಷ್ಟು ದೂರ ಹೋಗಿ ಕೂತು ಜೋರಾಗಿ ಅಳೋಕೆ ಶುರುಮಾಡಿದಳು.
17 ದೇವರು ಮಗುವಿನ ಕೂಗನ್ನ ಕೇಳಿಸ್ಕೊಂಡ.+ ದೇವದೂತ ಆಕಾಶದಿಂದ ಹಾಗರಳನ್ನ ಕರೆದು+ “ಹಾಗರಾ, ಯಾಕೆ ಅಳ್ತಿದ್ದೀಯಾ? ಹೆದರಬೇಡ, ನಿನ್ನ ಮಗು ಅಳುನ ದೇವರು ಕೇಳಿದ್ದಾನೆ. 18 ನೀನು ಹೋಗಿ ಮಗನನ್ನ ಎತ್ಕೊಂಡು ಅವನನ್ನ ನೊಡ್ಕೊ. ಅವನ ವಂಶ ಒಂದು ದೊಡ್ಡ ಜನಾಂಗ ಆಗೋ ತರ ನಾನು ಮಾಡ್ತೀನಿ”+ ಅಂದನು. 19 ಆಗ ದೇವರು ಅವಳ ಕಣ್ಣನ್ನ ತೆರೆದನು, ಅವಳಿಗೆ ಒಂದು ಬಾವಿ ಕಾಣಿಸ್ತು. ಅವಳು ಹೋಗಿ ಚರ್ಮದ ಚೀಲದಲ್ಲಿ ನೀರು ತುಂಬಿಸಿ ಮಗನಿಗೆ ಕುಡಿಸಿದಳು. 20 ಹುಡುಗ ಬೆಳಿತಾ ಹೋದಂತೆ ದೇವರು ಅವನ ಜೊತೆ ಇದ್ದನು.+ ಅವನು ಕಾಡಲ್ಲಿ ವಾಸಿಸಿದ ಮತ್ತು ಬಿಲ್ಲುಗಾರನಾದ. 21 ಅವನು ಪಾರಾನಿನ+ ಕಾಡಲ್ಲಿ ವಾಸ ಮಾಡೋಕೆ ಶುರುಮಾಡಿದ ಮತ್ತು ಅವನ ತಾಯಿ ಈಜಿಪ್ಟ್ ದೇಶದಿಂದ ಹೆಣ್ಣು ತಂದು ಅವನಿಗೆ ಮದುವೆ ಮಾಡಿದಳು.
22 ಆ ಕಾಲದಲ್ಲಿ ಅಬೀಮೆಲೆಕ ತನ್ನ ಸೇನಾಪತಿಯಾದ ಫೀಕೋಲನ ಜೊತೆ ಬಂದು ಅಬ್ರಹಾಮನಿಗೆ “ದೇವರು ನಿನ್ನ ಜೊತೆ ಇದ್ದಾನೆ, ನೀನು ಮಾಡೋ ಎಲ್ಲ ಕೆಲಸನ ಆಶೀರ್ವದಿಸ್ತಿದ್ದಾನೆ ಅಂತ ನಮಗೆ ಗೊತ್ತಾಗಿದೆ.+ 23 ಹಾಗಾಗಿ ನೀನು ನನಗೆ ಮತ್ತು ನನ್ನ ಮಕ್ಕಳು ಮೊಮ್ಮಕ್ಕಳಿಗೆ ಅನ್ಯಾಯ ಮಾಡಲ್ಲ ಅಂತ ದೇವರ ಮುಂದೆ ಮಾತು ಕೊಡು. ನಾನು ನಿನಗೆ ಶಾಶ್ವತ ಪ್ರೀತಿ ತೋರಿಸಿದ ಹಾಗೇ ನೀನು ನನಗೆ ಮತ್ತು ನನ್ನ ದೇಶದಲ್ಲಿರೋ ಜನರಿಗೆ ಶಾಶ್ವತ ಪ್ರೀತಿ ತೋರಿಸ್ತೀಯ ಅಂತ ಮಾತು ಕೊಡು”+ ಅಂದ. 24 ಅದಕ್ಕೆ ಅಬ್ರಹಾಮ ಒಪ್ಪಿ ಮಾತು ಕೊಟ್ಟ.
25 ಆ ಸಮಯದಲ್ಲಿ ಅಬ್ರಹಾಮ ತನ್ನ ಬಾವಿಯನ್ನ ಅಬೀಮೆಲೆಕನ ಸೇವಕರು ಆಕ್ರಮಿಸಿ ತಗೊಂಡಿದ್ದರ ಬಗ್ಗೆ ಅವನಿಗೆ ದೂರು ಕೊಟ್ಟ.+ 26 ಅದಕ್ಕೆ ಅಬೀಮೆಲೆಕ “ಯಾರು ಹೀಗೆ ಮಾಡಿದ್ರೋ ನನಗೆ ಗೊತ್ತಿಲ್ಲ. ಇವತ್ತಿನ ತನಕ ನಾನು ಆ ವಿಷ್ಯ ಕೇಳಿಸ್ಕೊಂಡೇ ಇಲ್ಲ, ನೀನೂ ಅದರ ಬಗ್ಗೆ ಹೇಳಲಿಲ್ಲ” ಅಂದ. 27 ಆಗ ಅಬ್ರಹಾಮ ದನಕುರಿಗಳನ್ನ ಅಬೀಮೆಲೆಕನಿಗೆ ಕೊಟ್ಟ ಮತ್ತು ಅವರಿಬ್ರೂ ಒಪ್ಪಂದ ಮಾಡಿಕೊಂಡ್ರು. 28 ಅಬ್ರಹಾಮ ತನ್ನ ಹಿಂಡಿಂದ ಏಳು ಹೆಣ್ಣು ಕುರಿಮರಿನ ಪಕ್ಕಕ್ಕೆ ಇಟ್ಟ. 29 ಅದನ್ನ ನೋಡಿ ಅಬೀಮೆಲೆಕ ಅಬ್ರಹಾಮಗೆ “ನೀನು ಈ ಹೆಣ್ಣು ಕುರಿಮರಿಗಳನ್ನ ಯಾಕೆ ಪಕ್ಕಕ್ಕೆ ಇಟ್ಟಿದ್ದೀಯಾ?” ಅಂತ ಕೇಳಿದ. 30 ಅದಕ್ಕೆ ಅಬ್ರಹಾಮ “ಈ ಬಾವಿ ತೋಡಿದ್ದು ನಾನೇ ಅನ್ನೋದಕ್ಕೆ ಸಾಕ್ಷಿಯಾಗಿ ನಾನು ಕೊಡೋ ಈ ಏಳು ಹೆಣ್ಣು ಕುರಿಮರಿಗಳನ್ನ ನೀನು ತಗೊಳ್ಳಬೇಕು” ಅಂದ. 31 ಅವರಿಬ್ಬರು ಅಲ್ಲಿ ಮಾತು ಕೊಟ್ಟಿದ್ದರಿಂದ ಅವನು ಆ ಸ್ಥಳಕ್ಕೆ ಬೇರ್ಷೆಬ*+ ಅಂತ ಹೆಸರಿಟ್ಟ. 32 ಹೀಗೆ ಅವರು ಬೇರ್ಷೆಬದಲ್ಲಿ ಒಪ್ಪಂದ+ ಮಾಡ್ಕೊಂಡ್ರು. ಆಮೇಲೆ ಅಬೀಮೆಲೆಕ ತನ್ನ ಸೇನಾಪತಿ ಫೀಕೋಲನ ಜೊತೆ ಫಿಲಿಷ್ಟಿಯರ ದೇಶಕ್ಕೆ ವಾಪಸ್ ಹೋದ.+ 33 ಆಮೇಲೆ ಅಬ್ರಹಾಮ ಬೇರ್ಷೆಬದಲ್ಲಿ ಪಿಚುಲ ಮರ* ನೆಟ್ಟ. ಸದಾಕಾಲ ಇರೋ ದೇವರಾದ+ ಯೆಹೋವನ ಹೆಸರನ್ನ ಹೊಗಳಿದ.+ 34 ಅಬ್ರಹಾಮ ಫಿಲಿಷ್ಟಿಯರ ದೇಶದಲ್ಲಿ ತುಂಬ ವರ್ಷ ಇದ್ದ.*+
22 ಆಮೇಲೆ ಸತ್ಯ ದೇವರು ಅಬ್ರಹಾಮನನ್ನ ಪರೀಕ್ಷೆ ಮಾಡಿದನು.+ ದೇವರು “ಅಬ್ರಹಾಮ!” ಅಂತ ಕರೆದಾಗ ಅಬ್ರಹಾಮ “ಹೇಳು ಸ್ವಾಮಿ!” ಅಂದ. 2 ಆತನು “ನೀನು ತುಂಬ ಪ್ರೀತಿಸೋ+ ನಿನ್ನ ಒಬ್ಬನೇ ಮಗ ಇಸಾಕನನ್ನ+ ಕರ್ಕೊಂಡು ದಯವಿಟ್ಟು ಮೊರೀಯ+ ದೇಶಕ್ಕೆ ಹೋಗು. ಅಲ್ಲಿ ನಾನು ಹೇಳೋ ಬೆಟ್ಟದ ಮೇಲೆ ಅವನನ್ನ ಸರ್ವಾಂಗಹೋಮ ಬಲಿಯಾಗಿ ಕೊಡು” ಅಂದನು.
3 ಅಬ್ರಹಾಮ ಬೆಳಿಗ್ಗೆ ಬೇಗ ಎದ್ದು ಕತ್ತೆ ಸಿದ್ಧಮಾಡಿ* ಬಲಿಗೆ ಬೇಕಾದ ಕಟ್ಟಿಗೆ ಒಡೆದ. ಆಮೇಲೆ ತನ್ನ ಮಗ ಇಸಾಕ ಮತ್ತು ಇಬ್ಬರು ಸೇವಕರನ್ನ ಕರ್ಕೊಂಡು ಸತ್ಯ ದೇವರು ಹೇಳಿದ ಸ್ಥಳಕ್ಕೆ ಹೊರಟ. 4 ಮೂರನೇ ದಿನ ಅಬ್ರಹಾಮಗೆ ದೂರದಲ್ಲಿ ಆ ಸ್ಥಳ ಕಾಣಿಸ್ತು. 5 ಆಗ ಅಬ್ರಹಾಮ ತನ್ನ ಸೇವಕರಿಗೆ “ನೀವು ಇಲ್ಲೇ ಕತ್ತೆ ಹತ್ರ ಇರಿ. ನಾನು ನನ್ನ ಮಗ ಅಲ್ಲಿಗೆ ಹೋಗಿ ದೇವರನ್ನ ಆರಾಧಿಸಿ ವಾಪಸ್ ಬರ್ತಿವಿ” ಅಂದ.
6 ಆಮೇಲೆ ಅಬ್ರಹಾಮ ಬಲಿಗೆ ಬೇಕಾದ ಕಟ್ಟಿಗೆ ತಗೊಂಡು ಇಸಾಕನ ಹೆಗಲ ಮೇಲೆ ಹೊರಿಸಿ, ಕೈಯಲ್ಲಿ ಬೆಂಕಿ, ಕತ್ತಿ ತಗೊಂಡ. ಅವರಿಬ್ಬರೂ ಒಟ್ಟಿಗೆ ನಡ್ಕೊಂಡು ಹೋದ್ರು. 7 ದಾರಿಯಲ್ಲಿ ಇಸಾಕ ಅಬ್ರಹಾಮಗೆ “ಅಪ್ಪಾ” ಅಂತ ಕರೆದಾಗ ಅಬ್ರಹಾಮ “ಏನು ಮಗನೇ” ಅಂದ. ಇಸಾಕ “ನಮ್ಮತ್ರ ಬೆಂಕಿ ಇದೆ, ಕಟ್ಟಿಗೆ ಇದೆ. ಆದ್ರೆ ಬಲಿಗೆ ಬೇಕಾದ ಕುರಿ ಎಲ್ಲಿ?” ಅಂತ ಕೇಳಿದ. 8 ಅದಕ್ಕೆ ಅಬ್ರಹಾಮ “ಮಗನೇ, ಬಲಿಗೆ ಬೇಕಾದ ಕುರಿನ+ ದೇವರೇ ಕೊಡ್ತಾನೆ” ಅಂದ. ಹೀಗೆ ಅವರಿಬ್ರೂ ನಡಿತಾ ಹೋದ್ರು.
9 ಕೊನೆಗೆ ಅವರು ಸತ್ಯ ದೇವರು ಹೇಳಿದ್ದ ಸ್ಥಳಕ್ಕೆ ಬಂದು ಮುಟ್ಟಿದ್ರು. ಅಲ್ಲಿ ಅಬ್ರಹಾಮ ಒಂದು ಯಜ್ಞವೇದಿ ಕಟ್ಟಿ ಅದರ ಮೇಲೆ ಕಟ್ಟಿಗೆ ಜೋಡಿಸಿದ. ಆಮೇಲೆ ತನ್ನ ಮಗ ಇಸಾಕನ ಕೈಕಾಲು ಕಟ್ಟಿ ಯಜ್ಞವೇದಿ ಮೇಲೆ ಮಲಗಿಸಿದ.+ 10 ಅಬ್ರಹಾಮ ಕತ್ತಿ ತಗೊಂಡು ಮಗನನ್ನ ಬಲಿ ಕೊಡೋಕೆ ಮುಂದಾದ.+ 11 ಥಟ್ಟನೆ ಯೆಹೋವನ ದೂತ ಆಕಾಶದಿಂದ “ಅಬ್ರಹಾಮ, ಅಬ್ರಹಾಮ!” ಅಂತ ಕರೆದ. ಅವನು “ಹೇಳು ಸ್ವಾಮಿ” ಅಂದ. 12 ಆ ದೂತ “ನಿನ್ನ ಮಗನನ್ನ ಕೊಲ್ಲಬೇಡ. ಅವನಿಗೆ ಏನೂ ಹಾನಿ ಮಾಡಬೇಡ. ನಿನ್ನ ಒಬ್ಬನೇ ಮಗನನ್ನ ನನಗೆ ಅರ್ಪಿಸೋಕೆ ನೀನು ಹಿಂಜರಿಲಿಲ್ಲ. ಇದ್ರಿಂದ ನೀನು ನಿಜವಾಗ್ಲೂ ದೇವರಿಗೆ ಭಯಪಟ್ಟು ನಡಿಯೋ ವ್ಯಕ್ತಿ ಅಂತ ನನಗೀಗ ಗೊತ್ತಾಯ್ತು”+ ಅಂದ. 13 ಆಗ ಅಬ್ರಹಾಮನಿಗೆ ಸ್ವಲ್ಪ ದೂರದಲ್ಲಿ ಒಂದು ಟಗರು ಕಾಣಿಸ್ತು. ಅದ್ರ ಕೊಂಬು ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮ ಆ ಟಗರನ್ನ ಹಿಡಿದುತಂದು ಮಗನ ಬದಲು ಅದನ್ನ ಸರ್ವಾಂಗಹೋಮ ಬಲಿಯಾಗಿ ಕೊಟ್ಟ. 14 ಅಬ್ರಹಾಮ ಆ ಸ್ಥಳಕ್ಕೆ ಯೆಹೋವ-ಯೀರೆ* ಅಂತ ಹೆಸರಿಟ್ಟ. ಅದಕ್ಕೇ “ಯೆಹೋವ ತನ್ನ ಬೆಟ್ಟದಲ್ಲಿ ಕೊಡ್ತಾನೆ”+ ಅಂತ ಜನ ಇವತ್ತಿಗೂ ಹೇಳ್ತಾರೆ.
15 ಯೆಹೋವನ ದೂತ ಆಕಾಶದಿಂದ ಎರಡನೇ ಸಲ ಅಬ್ರಹಾಮನನ್ನ ಕರೆದು 16 ಹೀಗೆ ಹೇಳಿದ: “ಯೆಹೋವ ಹೇಳೋದು ಏನಂದ್ರೆ+ ‘ನನ್ನ ಮೇಲೆ ಆಣೆಯಿಟ್ಟು ಹೇಳ್ತೀನಿ, ನಿನ್ನ ಒಬ್ಬನೇ ಮಗನನ್ನ+ ನನಗೆ ಅರ್ಪಿಸೋಕೆ ಹಿಂಜರಿಯದ ಕಾರಣ 17 ನಾನು ಖಂಡಿತ ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಸಂತತಿನ ಖಂಡಿತ ಆಕಾಶದ ನಕ್ಷತ್ರಗಳ ತರ, ಸಮುದ್ರದ ತೀರದಲ್ಲಿರೋ ಮರಳಿನ ಕಣಗಳ ತರ ಲೆಕ್ಕ ಇಲ್ಲದಷ್ಟು ಮಾಡ್ತೀನಿ.+ ನಿನ್ನ ಸಂತಾನ ಶತ್ರುಗಳ ಪಟ್ಟಣಗಳನ್ನ ವಶ ಮಾಡ್ಕೊಳ್ಳುತ್ತೆ.+ 18 ನೀನು ನನ್ನ ಮಾತು ಕೇಳಿದ್ರಿಂದ ನಿನ್ನ ಸಂತಾನದ+ ಮೂಲಕ ಭೂಮಿಯ ಎಲ್ಲ ದೇಶದ ಜನರಿಗೆ ಆಶೀರ್ವಾದ ಸಿಗುತ್ತೆ.’”+
19 ಆಮೇಲೆ ಅಬ್ರಹಾಮ ತನ್ನ ಸೇವಕರ ಹತ್ರ ವಾಪಸ್ ಹೋದ. ಅವರೆಲ್ರೂ ತಿರುಗಿ ಬೇರ್ಷೆಬಕ್ಕೆ+ ಬಂದ್ರು. ಅಬ್ರಹಾಮ ಬೇರ್ಷೆಬದಲ್ಲೇ ವಾಸಿಸಿದ.
20 ಇದಾದ ಮೇಲೆ ಅಬ್ರಹಾಮನಿಗೆ “ನಿನ್ನ ಅಣ್ಣ ನಾಹೋರನಿಗೆ ಅವನ ಹೆಂಡತಿ ಮಿಲ್ಕಳಿಂದ ಗಂಡುಮಕ್ಕಳು ಹುಟ್ಟಿದ್ದಾರೆ.+ 21 ಮೊದಲನೇ ಮಗ ಊಚ್, ಎರಡನೇ ಮಗ ಬೂಜ್, ಮೂರನೇ ಮಗ ಕೆಮೂವೇಲ್, ಇವನು ಅರಾಮನ ತಂದೆ. 22 ಆಮೇಲೆ ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್, ಬೆತೂವೇಲ್+ ಹುಟ್ಟಿದ್ದಾರೆ” ಅನ್ನೋ ಸುದ್ದಿ ಸಿಕ್ತು. 23 ಬೆತೂವೇಲ್ ರೆಬೆಕ್ಕಳ ತಂದೆ.+ ಅಬ್ರಹಾಮನ ಅಣ್ಣ ನಾಹೋರ ಮತ್ತು ಮಿಲ್ಕಗೆ ಈ ಎಂಟು ಮಕ್ಕಳು ಹುಟ್ಟಿದ್ರು. 24 ನಾಹೋರ ಮತ್ತು ಅವನ ಉಪಪತ್ನಿ ರೂಮಗೆ ಹುಟ್ಟಿದ ಗಂಡುಮಕ್ಕಳು ಟೆಬಹ, ಗಹಮ್, ತಹಷ್, ಮಾಕಾ.
23 ಸಾರ ಒಟ್ಟು 127 ವರ್ಷ ಬದುಕಿದಳು.+ 2 ಕಾನಾನ್+ ದೇಶದಲ್ಲಿರೋ ಕಿರ್ಯತ್-ಅರ್ಬ+ ಅಂದ್ರೆ ಹೆಬ್ರೋನಲ್ಲಿ+ ಸಾರ ತೀರಿಹೋದಳು. ಆಗ ಅಬ್ರಹಾಮ ಅತ್ತು ತುಂಬ ಗೋಳಾಡಿದ. 3 ಆಮೇಲೆ ಅಬ್ರಹಾಮ ತನ್ನ ಹೆಂಡತಿ ಶವದ ಹತ್ರದಿಂದ ಎದ್ದು ಹೋಗಿ ಹಿತ್ತಿಯರಿಗೆ+ 4 “ನಾನು ಬೇರೆ ದೇಶದವನು, ಇಲ್ಲಿಗೆ ವಲಸೆ ಬಂದಿದ್ದೀನಿ.+ ಹಾಗಾಗಿ ನನ್ನ ಹೆಂಡತಿ ಸಮಾಧಿಗೋಸ್ಕರ ನನಗೆ ಇಲ್ಲಿ ಒಂದು ಜಾಗ ಕೊಡಿ” ಅಂದ. 5 ಅದಕ್ಕೆ ಹಿತ್ತಿಯರು 6 “ಸ್ವಾಮಿ ನಮ್ಮ ಮಾತು ಕೇಳು. ದೇವರು ಆರಿಸಿರೋ ಪ್ರಭು* ನೀನು.+ ತೀರಿಹೋಗಿರೋ ನಿನ್ನ ಪತ್ನಿಯ ದೇಹನ ನಮ್ಮಲ್ಲಿರುವ ಸಮಾಧಿಗಳಲ್ಲೇ ತುಂಬಾ ಒಳ್ಳೇ ಸಮಾಧಿಯಲ್ಲೇ ಇಡಬಹುದು. ನಿನಗೆ ಸಮಾಧಿಗೆ ಸ್ಥಳ ಕೊಡೋಕೆ ನಮ್ಮಲ್ಲಿ ಯಾರೂ ಇಲ್ಲ ಅನ್ನಲ್ಲ” ಅಂದ್ರು.
7 ಆಗ ಅಬ್ರಹಾಮ ಆ ಪ್ರದೇಶದ ಜನರಿಗೆ, ಹಿತ್ತಿಯರಿಗೆ+ ಬಗ್ಗಿ ನಮಸ್ಕಾರ ಮಾಡಿ 8 “ನಾನು ನನ್ನ ಹೆಂಡತಿಯನ್ನ ಈ ಪ್ರದೇಶದಲ್ಲೇ ಸಮಾಧಿ ಮಾಡೋಕೆ ನೀವು ಒಪ್ಪೋದಾದ್ರೆ ನನ್ನದೊಂದು ಕೋರಿಕೆ ಇದೆ. ಅದೇನಂದ್ರೆ ಚೋಹರನ ಮಗ ಎಫ್ರೋನನ ಹತ್ರ ಮಾತಾಡಿ 9 ಅವನ ಜಮೀನಿನ ಅಂಚಿನಲ್ಲಿರೋ ಮಕ್ಪೇಲದ ಗವಿನ ದಯವಿಟ್ಟು ನನಗೆ ಕೊಡಿಸಿ. ಅವನು ಅದನ್ನ ನಿಮ್ಮೆಲ್ಲರ ಮುಂದೆ ನನಗೆ ಮಾರಲಿ. ಅದಕ್ಕೆ ಎಷ್ಟು ಬೆಳ್ಳಿಯಾಗುತ್ತೋ+ ಅಷ್ಟು ನಾನು ಕೊಡ್ತೀನಿ. ಆಗ ನನ್ನ ಹೆಂಡ್ತಿ ಸಮಾಧಿ ಮಾಡೋಕೆ ನನ್ನ ಹತ್ರ ಒಂದು ಸ್ವಂತ ಸ್ಥಳ ಇರುತ್ತೆ”+ ಅಂದ.
10 ಎಫ್ರೋನ ಹಿತ್ತಿಯರ ಮಧ್ಯದಲ್ಲೇ ಕುಳಿತಿದ್ದ. ಹಾಗಾಗಿ ಅವನು ಎಲ್ಲ ಹಿತ್ತಿಯರ ಮುಂದೆ, ಪಟ್ಟಣದ ಬಾಗಿಲಲ್ಲಿ+ ಸೇರಿಬಂದಿದ್ದ ಎಲ್ಲರ ಮುಂದೆ ಅಬ್ರಹಾಮನಿಗೆ 11 “ಬೇಡ ಸ್ವಾಮಿ, ನಾನು ಹೇಳೋದನ್ನ ಕೇಳು. ಆ ಗವಿ ಅಷ್ಟೇ ಅಲ್ಲ, ಇಡೀ ಜಮೀನು ತಗೋ. ನನ್ನ ಜನರ ಮುಂದೆನೇ ನಾನು ಅದನ್ನ ನಿನಗೆ ಕೊಡ್ತೀನಿ. ತೀರಿಹೋಗಿರೋ ನಿನ್ನ ಹೆಂಡತಿನ ಅಲ್ಲಿ ಸಮಾಧಿ ಮಾಡಬಹುದು” ಅಂದ. 12 ಆಗ ಅಬ್ರಹಾಮ ಆ ಜನರ ಮುಂದೆ ಬಗ್ಗಿ ನಮಸ್ಕಾರ ಮಾಡಿ 13 ಎಲ್ಲರ ಮುಂದೆ ಎಫ್ರೋನನಿಗೆ “ಸರಿ, ನಾನು ಇಡೀ ಜಮೀನು ತಗೊಳ್ತೀನಿ. ಅದಕ್ಕೆಷ್ಟು ಬೆಳ್ಳಿ ಆಗುತ್ತೋ ಅದನ್ನ ಪೂರ್ತಿ ಕೊಡ್ತೀನಿ. ನೀನು ಅದನ್ನ ತಗೊಂಡ್ರೆ ಮಾತ್ರ ನನ್ನ ಹೆಂಡತಿನ ಅಲ್ಲಿ ಸಮಾಧಿ ಮಾಡ್ತೀನಿ” ಅಂದ.
14 ಅದಕ್ಕೆ ಎಫ್ರೋನ ಅಬ್ರಹಾಮನಿಗೆ 15 “ಸ್ವಾಮಿ, ಆ ಜಮೀನಿನ ಬೆಲೆ 400 ಬೆಳ್ಳಿ ಶೆಕೆಲ್.* ಆದ್ರೆ ಹಣದ ಬಗ್ಗೆ ತಲೆಕೆಡಿಸ್ಕೋಬೇಡ. ನೀನು ಅಲ್ಲಿ ನಿನ್ನ ಹೆಂಡತಿನ ಸಮಾಧಿಮಾಡು” ಅಂದ. 16 ಅಬ್ರಹಾಮ ಎಫ್ರೋನನ ಮಾತಿಗೆ ಒಪ್ಪಿ ಹಿತ್ತಿಯರ ಮುಂದೆ ಹೇಳಿದಷ್ಟು ಬೆಳ್ಳಿಯನ್ನ ಅಂದ್ರೆ 400 ಬೆಳ್ಳಿ ಶೆಕೆಲ್‌ಗಳನ್ನ* ವ್ಯಾಪಾರಿಗಳ ತೂಕದ ಪ್ರಕಾರ ತೂಗಿ ಕೊಟ್ಟ.+ 17 ಹೀಗೆ ಮಮ್ರೆಗೆ ಪಕ್ಕದಲ್ಲಿರೋ ಮಕ್ಪೇಲದಲ್ಲಿದ್ದ ಎಫ್ರೋನನ ಜಮೀನು, ಅಲ್ಲಿದ್ದ ಗವಿ, ಎಲ್ಲ ಮರಗಳನ್ನ 18 ಅಬ್ರಹಾಮ ಖರೀದಿಸಿದ ಆಸ್ತಿ ಅಂತ ಹಿತ್ತಿಯರ, ಪಟ್ಟಣದ ಬಾಗಿಲಲ್ಲಿ ಸೇರಿಬಂದಿದ್ದ ಎಲ್ಲ ಜನ್ರ ಮುಂದೆ ಪಕ್ಕಾ ಆಯ್ತು. 19 ಆಮೇಲೆ ಅಬ್ರಹಾಮ ತನ್ನ ಹೆಂಡತಿ ಸಾರಳನ್ನ ಮಕ್ಪೇಲದ ಜಮೀನನ ಗವಿಯಲ್ಲಿ ಸಮಾಧಿ ಮಾಡಿದ. ಆ ಗವಿ ಕಾನಾನ್ ದೇಶದ ಮಮ್ರೆಗೆ ಅಂದ್ರೆ ಹೆಬ್ರೋನಿಗೆ ಹತ್ರ ಇತ್ತು. 20 ಹೀಗೆ ಹಿತ್ತಿಯರು ಆ ಜಮೀನನ್ನ ಅದ್ರಲ್ಲಿದ್ದ ಗವಿನ ಅಬ್ರಹಾಮನ ಹೆಸರಿಗೆ ಮಾಡಿದ್ರು. ಅವನು ಆ ಸ್ಥಳನ ಸಮಾಧಿ ಮಾಡೋಕೆ ಉಪಯೋಗಿಸಿದ.+
24 ಅಬ್ರಹಾಮನಿಗೆ ತುಂಬ ವಯಸ್ಸಾಗಿತ್ತು. ಯೆಹೋವ ಅವನನ್ನ ಎಲ್ಲದ್ರಲ್ಲೂ ಆಶೀರ್ವದಿಸಿದ್ದನು.+ 2 ಒಂದಿನ ಅಬ್ರಹಾಮ ತನ್ನ ಮನೆ ಕೆಲಸನೆಲ್ಲ ನೋಡ್ಕೊಳ್ತಿದ್ದ ಹಿರೀ ಸೇವಕನಿಗೆ+ ಹೀಗಂದ: “ದಯಮಾಡಿ ನನ್ನ ತೊಡೆ ಕೆಳಗೆ ಕೈಯಿಟ್ಟು 3 ಭೂಮಿಗೆ, ಸ್ವರ್ಗಕ್ಕೆ ದೇವರಾಗಿರೋ ಯೆಹೋವನ ಮುಂದೆ ನನಗೊಂದು ಮಾತು ಕೊಡು. ನಾನು ವಾಸವಾಗಿರೋ ಈ ಕಾನಾನ್ ದೇಶದ ಜನರಿಂದ ನೀನು ನನ್ನ ಮಗನಿಗೋಸ್ಕರ ಹೆಣ್ಣು ತರದೆ+ 4 ನನ್ನ ಸ್ವದೇಶದಲ್ಲಿರೋ ನನ್ನ ಸಂಬಂಧಿಕರ+ ಹತ್ರ ಹೋಗಿ ಅವರಿಂದ ಇಸಾಕನಿಗೆ ಹೆಣ್ಣು ತರಬೇಕು.”
5 ಅದಕ್ಕೆ ಆ ಸೇವಕ “ಒಂದುವೇಳೆ ನನ್ನ ಜೊತೆ ಈ ದೇಶಕ್ಕೆ ಬರೋಕೆ ಆ ಹುಡುಗಿಗೆ ಇಷ್ಟ ಇಲ್ಲದಿದ್ರೆ ನಾನೇನು ಮಾಡ್ಲಿ? ನೀನು ಬಿಟ್ಟುಬಂದ ಆ ದೇಶಕ್ಕೆ ನಾನು ನಿನ್ನ ಮಗನನ್ನ ಕರ್ಕೊಂಡು ಹೋಗಬೇಕಾ?”+ ಅಂತ ಕೇಳಿದ. 6 ಅದಕ್ಕೆ ಅಬ್ರಹಾಮ “ಬೇಡ, ನನ್ನ ಮಗನನ್ನ ಅಲ್ಲಿಗೆ ಕರ್ಕೊಂಡು ಹೋಗಬಾರದು.+ 7 ನನ್ನ ತಂದೆಯ ಮನೆಯಿಂದ, ನನ್ನ ಬಂಧುಗಳ ದೇಶದಿಂದ ನನ್ನನ್ನ ಕರ್ಕೊಂಡು ಬಂದ+ ಸ್ವರ್ಗದ ದೇವರಾದ ಯೆಹೋವ ಈ ದೇಶನ ನನ್ನ ಸಂತತಿಗೆ+ ಕೊಡ್ತೀನಿ+ ಅಂತ ಮಾತು ಕೊಟ್ಟಿದ್ದಾನೆ.+ ಆತನೇ ನಿನ್ನ ಮುಂದೆ ತನ್ನ ದೂತನನ್ನ ಕಳಿಸ್ತಾನೆ.+ ಹಾಗಾಗಿ ನೀನು ಖಂಡಿತ ಅಲ್ಲಿಂದ ನನ್ನ ಮಗನಿಗಾಗಿ ಹೆಣ್ಣು ತರ್ತಿಯ.+ 8 ಒಂದುವೇಳೆ ಆ ಹುಡುಗಿಗೆ ನಿನ್ನ ಜೊತೆ ಬರೋಕೆ ಇಷ್ಟ ಇಲ್ಲದಿದ್ರೆ ನೀನು ನನಗೆ ಕೊಟ್ಟ ಮಾತಿನ ಪ್ರಕಾರ ಮಾಡದಿದ್ರೂ ಪರವಾಗಿಲ್ಲ. ಆದ್ರೆ ನನ್ನ ಮಗನನ್ನ ನೀನು ಅಲ್ಲಿಗೆ ಕರ್ಕೊಂಡು ಹೋಗಬಾರದು” ಅಂದ. 9 ಆಗ ಆ ಸೇವಕ ತನ್ನ ಧಣಿ ಅಬ್ರಹಾಮನ ತೊಡೆ ಕೆಳಗೆ ಕೈಯಿಟ್ಟು ಅವನು ಹೇಳಿದ ಹಾಗೆ ಮಾಡ್ತೀನಿ ಅಂತ ಮಾತು ಕೊಟ್ಟ.+
10 ಆಮೇಲೆ ಆ ಸೇವಕ ತನ್ನ ಧಣಿಯ ಒಂಟೆಗಳಲ್ಲಿ ಹತ್ತು ಒಂಟೆಗಳನ್ನ, ತನ್ನ ಧಣಿಯಿಂದ ಒಳ್ಳೇ ಉಡುಗೊರೆಗಳನ್ನ ತಗೊಂಡು ಮೆಸಪಟೇಮ್ಯದ ನಾಹೋರ್ ಅನ್ನೋ ಪಟ್ಟಣಕ್ಕೆ ಪ್ರಯಾಣ ಮಾಡಿದ. 11 ಅವನು ಪ್ರಯಾಣ ಮಾಡ್ತಾ ನಾಹೋರ್ ಪಟ್ಟಣದ ಹತ್ರ ಬಂದಾಗ ಬಾವಿ ನೋಡಿ ಒಂಟೆಗಳನ್ನ ಅಲ್ಲೇ ಕೂರಿಸಿದ. ಇನ್ನೇನು ಸಂಜೆಯಾಗ್ತಾ ಇತ್ತು. ಸ್ತ್ರೀಯರು ನೀರು ಸೇದೋಕೆ ಬರೋ ಸಮಯ ಅದಾಗಿತ್ತು. 12 ಆಗ ಆ ಸೇವಕ ಹೀಗೆ ಪ್ರಾರ್ಥಿಸಿದ: “ನನ್ನ ಧಣಿ ಅಬ್ರಹಾಮನ ದೇವರಾದ ಯೆಹೋವನೇ, ನಾನು ಇವತ್ತು ಇಲ್ಲಿಗೆ ಬಂದಿರೋ ಕೆಲಸ ಯಶಸ್ವಿ ಆಗೋ ತರ ದಯವಿಟ್ಟು ಮಾಡು. ನನ್ನ ಧಣಿಗೆ ಶಾಶ್ವತ ಪ್ರೀತಿ ತೋರಿಸು. 13 ನಾನು ಬಾವಿ ಹತ್ರ ನಿಂತಿದ್ದೀನಿ. ಈ ಪಟ್ಟಣದ ಹೆಣ್ಣುಮಕ್ಕಳು ಇಲ್ಲಿ ನೀರಿಗೆ ಬರ್ತಿದ್ದಾರೆ. 14 ‘ದಯವಿಟ್ಟು ನಿನ್ನ ಕೊಡ ಇಳಿಸಿ ನನಗೆ ಕುಡಿಯೋಕೆ ನೀರು ಕೊಡಮ್ಮ’ ಅಂತ ನಾನು ಕೇಳಿದಾಗ ಯಾವ ಹುಡುಗಿ ‘ಕೊಡ್ತೀನಿ, ನಿನ್ನ ಒಂಟೆಗಳಿಗೂ ನೀರು ತಂದು ಕೊಡ್ತೀನಿ’ ಅಂತ ಹೇಳ್ತಾಳೋ ಅವಳೇ ನಿನ್ನ ಸೇವಕ ಇಸಾಕನಿಗೆ ನೀನು ಆರಿಸಿರೋ ಹುಡುಗಿ ಅಂತ ನಾನು ತಿಳ್ಕೊಳ್ತೀನಿ. ನನ್ನ ಧಣಿಗೆ ನೀನು ಶಾಶ್ವತ ಪ್ರೀತಿ ತೋರಿಸಿದ್ದೀಯ ಅಂತ ಇದ್ರಿಂದ ತೋರಿಸ್ಕೊಡು.”
15 ಹೀಗೆ ಅವನು ಹೇಳಿ ಮುಗಿಸೋ ಮುಂಚೆನೇ ರೆಬೆಕ್ಕ ಹೆಗಲ ಮೇಲೆ ಕೊಡ ಇಟ್ಕೊಂಡು ಪಟ್ಟಣದ ಹೊರಗೆ ಬಂದಳು. ಅವಳು ಬೆತೂವೇಲನ+ ಮಗಳು. ಬೆತೂವೇಲ ಅಬ್ರಹಾಮನ ಅಣ್ಣ ನಾಹೋರನ+ ಹೆಂಡತಿ ಮಿಲ್ಕಳಿಗೆ+ ಹುಟ್ಟಿದವನು. 16 ರೆಬೆಕ್ಕ ತುಂಬ ಸುಂದರಿಯಾಗಿದ್ದಳು. ಅವಳಿಗೆ ಇನ್ನೂ ಮದುವೆ ಆಗಿರಲಿಲ್ಲ, ಕನ್ಯೆಯಾಗಿದ್ದಳು. ಅವಳು ಬಾವಿಯಲ್ಲಿ ಇಳಿದು ಕೊಡದಲ್ಲಿ ನೀರು ತುಂಬಿಕೊಂಡು ಮೇಲೆ ಬಂದಳು. 17 ಕೂಡಲೇ ಆ ಸೇವಕ ಓಡಿಹೋಗಿ ಅವಳ ಮುಂದೆ ನಿಂತು “ದಯವಿಟ್ಟು ಕುಡಿಯೋಕೆ ಸ್ವಲ್ಪ ನೀರು ಕೊಡಮ್ಮ” ಅಂತ ಕೇಳಿದ. 18 ಅದಕ್ಕೆ ಅವಳು “ಕೊಡ್ತೀನಿ ಸ್ವಾಮಿ” ಅಂತ ಹೇಳಿ ತಕ್ಷಣ ಕೊಡನ ಹೆಗಲ ಮೇಲಿಂದ ಇಳಿಸಿ ನೀರು ಕುಡಿಯೋಕೆ ಕೊಟ್ಟಳು. 19 ಅವನು ಕುಡಿದ ಮೇಲೆ ಅವಳು “ಒಂಟೆಗಳಿಗೂ ಸಾಕಾಗುವಷ್ಟು ನೀರು ತಂದು ಕೊಡ್ತೀನಿ” ಅಂದಳು. 20 ತಕ್ಷಣ ಕೊಡದಲ್ಲಿ ಉಳಿದಿದ್ದ ನೀರನ್ನ ತೊಟ್ಟಿಗೆ ಹೊಯ್ದು ಒಂಟೆಗಳಿಗೆ ನೀರು ತರೋಕೆ ಬಾವಿ ಹತ್ರ ಓಡಿದಳು. ಎಲ್ಲ ಒಂಟೆಗಳು ನೀರು ಕುಡಿದು ಮುಗಿಸೋ ತನಕ ಅವಳು ಓಡೋಡಿ ಹೋಗಿ ನೀರು ಸೇದಿ ತಂದು ತೊಟ್ಟಿಗೆ ಹಾಕ್ತಾ ಇದ್ದಳು. 21 ಅಲ್ಲಿ ತನಕ ಆ ಸೇವಕ ಏನೂ ಮಾತಾಡದೆ ಅವಳನ್ನ ಆಶ್ಚರ್ಯದಿಂದ ನೋಡ್ತಾ, ತಾನು ಅಲ್ಲಿಗೆ ಬಂದಿರೋ ಕೆಲಸನ ಯೆಹೋವ ಯಶಸ್ವಿ ಮಾಡಿದ್ದಾನಾ ಇಲ್ವಾ ಅಂತ ಮನಸ್ಸಲ್ಲೇ ಯೋಚಿಸ್ತಾ ಇದ್ದ.
22 ಒಂಟೆಗಳು ನೀರು ಕುಡಿದ ಮೇಲೆ ಅವನು ಅವಳಿಗೆ ಅರ್ಧ ಶೆಕೆಲ್* ತೂಕದ ಚಿನ್ನದ ಮೂಗುತಿ ಮತ್ತು ಹತ್ತು ಶೆಕೆಲ್* ತೂಕದ ಎರಡು ಚಿನ್ನದ ಬಳೆಗಳನ್ನ ತೆಗೆದು ಕೊಟ್ಟ. 23 ಅವನು “ನೀನು ಯಾರ ಮಗಳು ಅಂತ ತಿಳ್ಕೊಬಹುದಾ? ಇವತ್ತು ರಾತ್ರಿ ನಮಗೆ ಇರೋಕೆ ನಿನ್ನ ತಂದೆ ಮನೇಲಿ ಜಾಗ ಇದ್ಯಾ?” ಅಂತ ಕೇಳಿದ. 24 ಅವಳು “ನಾನು ಬೆತೂವೇಲನ+ ಮಗಳು. ನನ್ನ ಅಜ್ಜಅಜ್ಜಿ ಹೆಸರು ನಾಹೋರ ಮತ್ತು ಮಿಲ್ಕ”+ ಅಂದಳು. 25 ಆಮೇಲೆ ಅವಳು “ನೀವು ರಾತ್ರಿ ಉಳ್ಕೊಳ್ಳೋಕ್ಕೆ ಜಾಗ ಇದೆ. ನಿಮ್ಮ ಒಂಟೆಗೆ ಬೇಕಾಗುವಷ್ಟು ಹುಲ್ಲು, ಮೇವು ಕೂಡ ಇದೆ” ಅಂದಳು. 26 ಆಗ ಆ ಸೇವಕ ಮಂಡಿಯೂರಿ ನೆಲಕ್ಕೆ ಬಗ್ಗಿ ಯೆಹೋವನಿಗೆ ನಮಸ್ಕಾರ ಮಾಡಿ 27 “ನನ್ನ ಧಣಿಯ ದೇವರಾಗಿರೋ ಯೆಹೋವನನ್ನ ಹೊಗಳಿ. ಯಾಕಂದ್ರೆ ಆತನು ನನ್ನ ಧಣಿಗೆ ಇನ್ನೂ ಶಾಶ್ವತ ಪ್ರೀತಿ ತೋರಿಸ್ತಾ ಇದ್ದಾನೆ. ಅಷ್ಟೇ ಅಲ್ಲ ಮಾತು ಕೊಟ್ಟ ಹಾಗೆ ನಡ್ಕೊಂಡಿದ್ದಾನೆ. ಯೆಹೋವ ನನಗೆ ದಾರಿ ತೋರಿಸ್ತಾ ನನ್ನ ಧಣಿಯ ಅಣ್ಣತಮ್ಮಂದಿರ ಮನೆಗೇ ಕರ್ಕೊಂಡು ಬಂದಿದ್ದಾನೆ” ಅಂದನು.
28 ಆಗ ರೆಬೆಕ್ಕ ಮನೆಗೆ ಓಡಿ ಹೋಗಿ ಈ ವಿಷ್ಯವನ್ನ ತಾಯಿಗೆ, ಬೇರೆಯವರಿಗೆ ಹೇಳಿದಳು. 29 ರೆಬೆಕ್ಕಗೆ ಒಬ್ಬ ಅಣ್ಣ ಇದ್ದ. ಅವನ ಹೆಸರು ಲಾಬಾನ.+ ಅವನು ಪಟ್ಟಣದ ಹೊರಗೆ ಬಾವಿ ಹತ್ರ ಆ ಮನುಷ್ಯನನ್ನ ನೋಡೋಕೆ ಓಡಿದ. 30 ಆ ಮನುಷ್ಯ ಇನ್ನೂ ಬಾವಿ ಹತ್ರಾನೇ ಒಂಟೆಗಳ ಜೊತೆ ನಿಂತಿದ್ದ. ಲಾಬಾನ ತನ್ನ ತಂಗಿ ಹಾಕೊಂಡಿದ್ದ ಮೂಗುತಿ, ಅವಳ ಕೈಲ್ಲಿದ್ದ ಬಳೆ ನೋಡಿ ಮತ್ತು ತನ್ನ ಜೊತೆ ಆ ಮನುಷ್ಯ ಹೇಗೆ ಮಾತಾಡಿದ ಅಂತ ಅವಳು ಹೇಳಿದ್ದನ್ನ ಕೇಳಿಸ್ಕೊಂಡು ಅವನನ್ನ ಭೇಟಿಯಾಗೋಕೆ ಹೋಗಿದ್ದ. 31 ಆ ಮನುಷ್ಯನನ್ನ ನೋಡಿದ ಕೂಡಲೇ ಲಾಬಾನ “ಯೆಹೋವನ ಆಶೀರ್ವಾದ ಸಿಕ್ಕವನೇ ಬಾ. ಇಲ್ಲೇ ಯಾಕೆ ನಿಂತಿದ್ದಿಯಾ? ನಾನು ನಿನಗಾಗಿ ಮನೆಯನ್ನ, ಒಂಟೆಗಳಿಗೆ ಸ್ಥಳವನ್ನ ಸಿದ್ಧಮಾಡಿದ್ದೀನಿ” ಅಂದ. 32 ಆ ಮನುಷ್ಯ ಮನೆಯೊಳಗೆ ಬಂದಾಗ ಅವನು* ಒಂಟೆ ಮೇಲಿದ್ದ ಹೊರೆ ಇಳಿಸಿ ಅವುಗಳಿಗೆ ಹುಲ್ಲು ಮೇವು ಕೊಟ್ಟ. ಅಲ್ಲದೆ ಆ ಮನುಷ್ಯನಿಗೆ ಮತ್ತು ಅವನ ಜೊತೆ ಇದ್ದವರಿಗೆ ಕಾಲು ತೊಳಿಯೋಕೆ ನೀರು ಕೊಟ್ಟ. 33 ಆಮೇಲೆ ಊಟ ಬಡಿಸಿದಾಗ ಆ ಮನುಷ್ಯ “ಮೊದ್ಲು ನಾನು ಯಾಕೆ ಬಂದೆ ಅಂತ ಹೇಳ್ತೀನಿ. ಆಮೇಲೆ ಊಟ ಮಾಡ್ತೀನಿ” ಅಂದ. ಅದಕ್ಕೆ ಲಾಬಾನ “ಸರಿ, ಹೇಳು” ಅಂದ.
34 ಆಗ ಅವನು ಹೀಗಂದ: “ನಾನು ಅಬ್ರಹಾಮನ ಸೇವಕ.+ 35 ಯೆಹೋವ ನನ್ನ ಧಣಿನ ತುಂಬ ಆಶೀರ್ವದಿಸಿದ್ದಾನೆ. ಕುರಿದನ, ಚಿನ್ನಬೆಳ್ಳಿ, ಆಳುಗಳು, ಒಂಟೆಗಳು, ಕತ್ತೆಗಳನ್ನ ಕೊಟ್ಟು ತುಂಬ ಶ್ರೀಮಂತನನ್ನಾಗಿ ಮಾಡಿದ್ದಾನೆ.+ 36 ಅಷ್ಟೇ ಅಲ್ಲ, ನನ್ನ ಧಣಿಯ ಹೆಂಡತಿ ಸಾರಾಗೆ ವಯಸ್ಸಾದಾಗ ಒಬ್ಬ ಮಗ ಹುಟ್ಟಿದ.+ ಆ ಮಗನಿಗೆ ನನ್ನ ಧಣಿ ತನ್ನ ಹತ್ರ ಇರೋದನ್ನೆಲ್ಲ ಕೊಡ್ತಾನೆ.+ 37 ಹಾಗಾಗಿ ನನ್ನ ಧಣಿ ನನ್ನತ್ರ ಮಾತು ತಗೊಂಡು ‘ನಾನು ವಾಸವಾಗಿರೋ ಕಾನಾನ್ ದೇಶದ ಜನರಿಂದ ನೀನು ನನ್ನ ಮಗನಿಗೆ ಹೆಣ್ಣು ತರಬಾರದು.+ 38 ನೀನು ನನ್ನ ತಂದೆ ಮನೆಗೆ, ನನ್ನ ಸಂಬಂಧಿಕರ+ ಹತ್ರ ಹೋಗಿ ಅವರಿಂದಾನೇ ನನ್ನ ಮಗನಿಗೆ ಹೆಣ್ಣು ತರಬೇಕು’ + ಅಂದ. 39 ಆದ್ರೆ ನಾನು ನನ್ನ ಧಣಿಗೆ ‘ಒಂದುವೇಳೆ ನನ್ನ ಜೊತೆ ಬರೋಕೆ ಆ ಹುಡುಗಿಗೆ ಇಷ್ಟ ಇಲ್ಲದಿದ್ರೆ ನಾನೇನು ಮಾಡ್ಲಿ?’+ ಅಂತ ಕೇಳಿದೆ. 40 ಅದಕ್ಕೆ ಅವನು ‘ನಾನು ಯೆಹೋವ ಹೇಳಿದ ಹಾಗೆ ಸರಿಯಾದ ದಾರಿಯಲ್ಲಿ ನಡಿದಿರೋ ಕಾರಣ+ ಆತನು ತನ್ನ ದೂತನನ್ನ ನಿನ್ನ ಜೊತೆ ಕಳಿಸ್ತಾನೆ.+ ನೀನು ಹೋಗೋ ಕೆಲಸನ ಖಂಡಿತ ಯಶಸ್ವಿ ಮಾಡ್ತಾನೆ. ನೀನು ನನ್ನ ಕುಟುಂಬದವರಿಂದ, ನನ್ನ ತಂದೆಯ ಮನೆಯಿಂದ ನನ್ನ ಮಗನಿಗೆ ಹೆಣ್ಣು ತರಬೇಕು.+ 41 ನೀನು ನನ್ನ ಕುಟುಂಬದವರ ಹತ್ರ ಹೋದಾಗ ಅವರು ಹೆಣ್ಣು ಕೊಡೋಕೆ ಒಪ್ಪದಿದ್ರೆ ನೀನು ನನಗೆ ಕೊಟ್ಟ ಮಾತಿನ ಪ್ರಕಾರ ಮಾಡದಿದ್ರೂ ಪರವಾಗಿಲ್ಲ’+ ಅಂದನು.
42 ನಾನು ಇವತ್ತು ಬಾವಿ ಹತ್ರ ಪ್ರಾರ್ಥಿಸ್ತಾ ‘ನನ್ನ ಧಣಿ ಅಬ್ರಹಾಮನ ದೇವರಾಗಿರೋ ಯೆಹೋವನೇ, ನಾನು ಬಂದ ಕೆಲಸನ ನೀನು ಯಶಸ್ವಿ ಮಾಡ್ತಿಯ ಅಂದ್ರೆ ನಾನು ಕೇಳೋದು ಆಗಲಿ. 43 ಈ ಬಾವಿ ಹತ್ರ ನಿಂತಿರೋ ನಾನು ಇಲ್ಲಿ ನೀರು ತುಂಬಿಸೋಕೆ ಬರೋ ಹುಡುಗಿಗೆ+ “ದಯವಿಟ್ಟು ಕುಡಿಯೋಕೆ ಸ್ವಲ್ಪ ನೀರು ಕೊಡಮ್ಮ” ಅಂತ ಕೇಳ್ತೀನಿ. 44 ಆಗ ಅವಳು “ಕೊಡ್ತೀನಿ, ನಿನ್ನ ಒಂಟೆಗಳಿಗೂ ನೀರು ತಂದು ಕೊಡ್ತೀನಿ” ಅಂತ ಹೇಳಿದ್ರೆ ಅವಳೇ ನನ್ನ ಧಣಿಯ ಮಗನಿಗೆ ಯೆಹೋವ ಆರಿಸಿರೋ ಹುಡುಗಿ ಅಂತ ತಿಳ್ಕೊಳ್ತೀನಿ’ + ಅಂದೆ.
45 ಮನಸ್ಸಲ್ಲಿ ಹಾಗೆ ಹೇಳಿ ಮುಗಿಸೋಕೆ ಮುಂಚೆನೇ, ರೆಬೆಕ್ಕ ಹೆಗಲ ಮೇಲೆ ಕೊಡ ಇಟ್ಕೊಂಡು ಪಟ್ಟಣದ ಹೊರಗೆ ಬಂದಳು. ಅವಳು ಬಾವಿಯಲ್ಲಿ ಇಳಿದು ಕೊಡದಲ್ಲಿ ನೀರು ತುಂಬಿಸಿದಳು. ಆಗ ನಾನು ಅವಳಿಗೆ ‘ನನಗೆ ಕುಡಿಯೋಕೆ ನೀರು ಕೊಡಮ್ಮ’+ ಅಂದೆ. 46 ತಕ್ಷಣ ಅವಳು ಹೆಗಲ ಮೇಲಿಂದ ಕೊಡ ಇಳಿಸಿ ‘ಕೊಡ್ತೀನಿ.+ ನಿನ್ನ ಒಂಟೆಗೂ ನೀರು ಕೊಡ್ತೀನಿ’ ಅಂದಳು. ನಾನು ನೀರು ಕುಡಿದ ಮೇಲೆ ಅವಳು ಒಂಟೆಗೂ ನೀರು ತಂದ್ಕೊಟ್ಟಳು. 47 ಆಮೇಲೆ ಅವಳಿಗೆ ‘ನೀನು ಯಾರ ಮಗಳು?’ ಅಂತ ಕೇಳಿದೆ. ಅದಕ್ಕೆ ಅವಳು ‘ನಾನು ಬೆತೂವೇಲನ ಮಗಳು. ನನ್ನ ತಂದೆಯ ಅಪ್ಪಅಮ್ಮನ ಹೆಸರು ನಾಹೋರ ಮತ್ತು ಮಿಲ್ಕ’ ಅಂದಳು. ಆಗ ನಾನು ಅವಳಿಗೆ ಮೂಗುತಿ ಮತ್ತು ಬಳೆ ತೊಡಿಸಿದೆ.+ 48 ಆಮೇಲೆ ನಾನು ಮಂಡಿಯೂರಿ ನೆಲಕ್ಕೆ ಬಗ್ಗಿ ನನ್ನ ಧಣಿಯ ದೇವರಾದ ಯೆಹೋವನಿಗೆ ನಮಸ್ಕಾರ ಮಾಡ್ದೆ.+ ನನ್ನ ಧಣಿಯ ಮಗನಿಗೆ ಧಣಿಯ ಅಣ್ಣನ ಮೊಮ್ಮಗಳನ್ನೇ ಹೆಂಡತಿಯಾಗಿ ಆರಿಸ್ಕೊಳ್ಳೋ ತರ ನನ್ನನ್ನ ಸರಿ ದಾರಿಯಲ್ಲಿ ಕರ್ಕೊಂಡು ಬಂದಿದ್ದಕ್ಕೆ ಯೆಹೋವನಿಗೆ ಕೃತಜ್ಞತೆ ಹೇಳ್ದೆ. 49 ನನ್ನ ಧಣಿಗೆ ಶಾಶ್ವತ ಪ್ರೀತಿ ತೋರಿಸೋಕೆ, ನಂಬಿಗಸ್ತರಾಗಿ ಇರೋಕೆ ನಿಮಗೆ ಇಷ್ಟ ಇದ್ಯಾ ಅಂತ ಹೇಳಿ. ಇಷ್ಟ ಇಲ್ಲದಿದ್ರೂ ಹೇಳಿ. ಆಗ ನಾನು ಮುಂದೆ ಏನು ಮಾಡಬಹುದು ಅಂತ ಯೋಚಿಸ್ತೀನಿ.”+
50 ಅದಕ್ಕೆ ಲಾಬಾನ ಮತ್ತು ಬೆತೂವೇಲ ಅವನಿಗೆ “ಎಲ್ಲವನ್ನೂ ಯೆಹೋವನೇ ಮಾರ್ಗದರ್ಶಿಸಿದ್ದಾನೆ. ಹಾಗಿರುವಾಗ ಹೌದು, ಇಲ್ಲ ಅನ್ನೋಕೆ ನಾವ್ಯಾರು? 51 ರೆಬೆಕ್ಕನ ನಿನ್ನ ಕೈಗೆ ಒಪ್ಪಿಸ್ತೀವಿ. ಅವಳನ್ನ ನೀನು ಕರ್ಕೊಂಡು ಹೋಗಬಹುದು. ಯೆಹೋವನು ಹೇಳಿದ ತರಾನೇ ಅವಳು ನಿನ್ನ ಧಣಿಯ ಮಗನಿಗೆ ಹೆಂಡತಿಯಾಗಲಿ” ಅಂದ್ರು. 52 ಈ ಮಾತು ಕೇಳಿದ ತಕ್ಷಣ ಅಬ್ರಹಾಮನ ಸೇವಕ ನೆಲಕ್ಕೆ ಬಗ್ಗಿ ಯೆಹೋವನಿಗೆ ನಮಸ್ಕಾರ ಮಾಡಿದ. 53 ಆಮೇಲೆ ಆ ಸೇವಕ ಚಿನ್ನಬೆಳ್ಳಿಯ ಒಡವೆ, ಬಟ್ಟೆಗಳನ್ನ ತೆಗೆದು ರೆಬೆಕ್ಕಗೆ ಕೊಟ್ಟ. ಅವಳ ಅಣ್ಣ ಮತ್ತು ತಾಯಿಗೂ ಬೆಲೆಬಾಳೋ ಉಡುಗೊರೆಗಳನ್ನ ಕೊಟ್ಟ. 54 ಆಮೇಲೆ ಅವನು ಮತ್ತು ಅವನ ಜೊತೆ ಬಂದ ಗಂಡಸರು ಊಟಮಾಡಿ ಆ ರಾತ್ರಿ ಅಲ್ಲೇ ಉಳ್ಕೊಂಡ್ರು.
ಬೆಳಿಗ್ಗೆ ಎದ್ದಾಗ ಆ ಸೇವಕ ಅವರಿಗೆ “ನನ್ನ ಧಣಿ ಹತ್ರ ಕಳಿಸ್ಕೊಡಿ” ಅಂದ. 55 ಆಗ ರೆಬೆಕ್ಕಳ ಅಣ್ಣ ಮತ್ತು ತಾಯಿ “ಅವಳು ನಮ್ಮ ಜೊತೆ ಇನ್ನು ಹತ್ತು ದಿನ ಆದ್ರೂ ಇರಲಿ. ಆಮೇಲೆ ಅವಳನ್ನ ಕಳಿಸ್ತೀವಿ” ಅಂದ್ರು. 56 ಆದ್ರೆ ಅವನು “ಯೆಹೋವ ನನ್ನ ಕೆಲಸ ಯಶಸ್ವಿ ಆಗೋ ತರ ಮಾಡಿದ್ರಿಂದ ದಯವಿಟ್ಟು ನನ್ನನ್ನ ತಡಿಬೇಡಿ. ನನ್ನ ಧಣಿ ಹತ್ರ ಹೋಗಕ್ಕೆ ಬಿಡಿ” ಅಂದ. 57 ಅದಕ್ಕೆ ಅವರು “ರೆಬೆಕ್ಕನ ಕರೆದು ಅವಳ ಅಭಿಪ್ರಾಯ ಕೇಳೋಣ” ಅಂತ ಹೇಳಿ 58 ರೆಬೆಕ್ಕನ ಕರೆದು “ಇವರ ಜೊತೆ ಹೋಗೋಕೆ ನಿಂಗೆ ಇಷ್ಟ ಇದ್ಯಾ?” ಅಂತ ಕೇಳಿದ್ರು. ಅವಳು “ಇಷ್ಟ ಇದೆ, ಹೋಗ್ತೀನಿ” ಅಂದಳು.
59 ಹಾಗಾಗಿ ಅವರು ರೆಬೆಕ್ಕ,+ ಅವಳ ದಾದಿ,*+ ಅಬ್ರಹಾಮನ ಸೇವಕ, ಅವನ ಜೊತೆ ಇದ್ದ ಗಂಡಸರನ್ನ ಕಳಿಸ್ಕೊಟ್ರು. 60 ಅವರು ಅವಳನ್ನ ಆಶೀರ್ವದಿಸಿ “ತಂಗಿ, ನಿನ್ನ ವಂಶದವರು ಲಕ್ಷ ಲಕ್ಷ ಆಗಲಿ. ನಿನ್ನ ಸಂತತಿಯವರು ಶತ್ರುಗಳ ಪಟ್ಟಣಗಳನ್ನ ವಶ ಮಾಡ್ಕೊಳ್ಳಲಿ”+ ಅಂದ್ರು. 61 ಆಮೇಲೆ ರೆಬೆಕ್ಕ, ಅವಳ ಸೇವಕಿಯರು ಒಂಟೆ ಹತ್ತಿ ಆ ಮನುಷ್ಯನ ಜೊತೆ ಹೋದ್ರು. ಹೀಗೆ ಆ ಸೇವಕ ರೆಬೆಕ್ಕನ ಕರ್ಕೊಂಡು ಹೋದ.
62 ಇಸಾಕ ನೆಗೆಬ್+ ದೇಶದಲ್ಲಿ ವಾಸವಾಗಿದ್ದ. ಅವನೀಗ ಲಹೈರೋಯಿ ಬಾವಿ+ ಕಡೆಯಿಂದ ಬರ್ತಾ ಇದ್ದ. 63 ಸಂಜೆ ಇಸಾಕ ಧ್ಯಾನ ಮಾಡ್ತಾ+ ಬಯಲಲ್ಲಿ ನಡಿತಾ ಇದ್ದಾಗ ತಲೆಯೆತ್ತಿ ನೋಡಿದ. ಒಂಟೆಗಳು ಬರೋದು ಅವನಿಗೆ ಕಾಣಿಸ್ತು. 64 ರೆಬೆಕ್ಕ ತಲೆಯೆತ್ತಿ ಇಸಾಕನನ್ನ ನೋಡಿದಳು. ಕೂಡಲೇ ಅವಳು ಒಂಟೆಯಿಂದ ಇಳಿದು 65 ಆ ಸೇವಕನಿಗೆ “ನಮ್ಮ ಹತ್ರ ಬರ್ತಿರೋ ಆ ವ್ಯಕ್ತಿ ಯಾರು?” ಅಂತ ಕೇಳಿದಳು. ಅದಕ್ಕೆ ಅವನು “ನನ್ನ ಧಣಿ ಇಸಾಕ” ಅಂದ. ಆಗ ಅವಳು ಮುಸುಕು ಹಾಕೊಂಡಳು. 66 ಆ ಸೇವಕ ಆಗಿದ್ದೆಲ್ಲ ಇಸಾಕಗೆ ಹೇಳಿದ. 67 ಇಸಾಕ ತನ್ನ ತಾಯಿ ಸಾರಳ ಡೇರೆಗೆ ರೆಬೆಕ್ಕನ ಕರ್ಕೊಂಡು ಹೋದ.+ ಹೀಗೆ ಅವನು ರೆಬೆಕ್ಕನ ಹೆಂಡತಿಯಾಗಿ ಮಾಡ್ಕೊಂಡ. ಅವನು ಅವಳನ್ನ ತುಂಬ ಪ್ರೀತಿಸಿದ.+ ತಾಯಿ ಕಳ್ಕೊಂಡು ದುಃಖದಲ್ಲಿದ್ದ ಇಸಾಕಗೆ ಹೀಗೆ ಸಮಾಧಾನ ಸಿಕ್ತು.+
25 ಆಮೇಲೆ ಅಬ್ರಹಾಮ ಇನ್ನೊಂದು ಮದುವೆ ಮಾಡ್ಕೊಂಡ. ಅವಳ ಹೆಸ್ರು ಕೆಟೂರ. 2 ಅವಳಿಂದ ಅಬ್ರಹಾಮನಿಗೆ ಹುಟ್ಟಿದ ಮಕ್ಕಳು ಯಾರಂದ್ರೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್,+ ಇಷ್ಬಾಕ್, ಶೂಹ.+
3 ಯೊಕ್ಷಾನನಿಗೆ ಶೆಬ, ದೆದಾನ್ ಹುಟ್ಟಿದ್ರು.
ದೆದಾನನ ಮಕ್ಕಳು ಅಶ್ಶೂರ್, ಲೆಟೂಶ್, ಲೆಯುಮ್.*
4 ಮಿದ್ಯಾನನ ಮಕ್ಕಳು ಏಫ, ಏಫೆರ್, ಹನೋಕ್, ಅಬೀದ, ಎಲ್ದಾಯ.
ಇವರೆಲ್ಲ ಕೆಟೂರಳ ಮೊಮ್ಮಕ್ಕಳು.
5 ಆಮೇಲೆ ಅಬ್ರಹಾಮ ತನ್ನ ಎಲ್ಲ ಆಸ್ತಿಪಾಸ್ತಿಯನ್ನ ಇಸಾಕನಿಗೆ ಕೊಟ್ಟ.+ 6 ಉಪಪತ್ನಿಯರಿಂದ ತನಗೆ ಹುಟ್ಟಿದ ಗಂಡುಮಕ್ಕಳಿಗೆ ಉಡುಗೊರೆ ಕೊಟ್ಟ. ಅಲ್ಲದೆ ಅವನು ಬದುಕಿರುವಾಗ್ಲೇ ಅವರನ್ನ ತನ್ನ ಮಗ ಇಸಾಕನಿಂದ+ ದೂರ ಅಂದ್ರೆ ಪೂರ್ವ ದೇಶಕ್ಕೆ ಕಳಿಸಿಬಿಟ್ಟ. 7 ಅಬ್ರಹಾಮ ಒಟ್ಟು 175 ವರ್ಷ ಬದುಕಿದ. 8 ಅವನು ತುಂಬ ವರ್ಷ ಸಂತೋಷ, ನೆಮ್ಮದಿಯಿಂದ ಬದುಕಿ ತೀರಿಹೋದ. ಅವನ ಪೂರ್ವಜರ ತರ ಅವನಿಗೂ ಸಮಾಧಿ ಮಾಡಿದ್ರು. 9 ಅಬ್ರಹಾಮನ ಮಕ್ಕಳಾದ ಇಸಾಕ, ಇಷ್ಮಾಯೇಲ ಅವನನ್ನ ಮಕ್ಪೇಲದ ಗವಿಯಲ್ಲಿ ಸಮಾಧಿ ಮಾಡಿದ್ರು. ಹಿತ್ತಿಯನಾದ ಚೋಹರನ ಮಗ ಎಫ್ರೋನನ ಜಮೀನಲ್ಲಿರೋ ಆ ಗವಿ ಮಮ್ರೆಗೆ ಹತ್ರದಲ್ಲಿದೆ.+ 10 ಅಬ್ರಹಾಮ ಆ ಜಮೀನನ್ನ ಹಿತ್ತಿಯರಿಂದ ಖರೀದಿ ಮಾಡಿದ್ದ. ಸಾರಳನ್ನ ಸಮಾಧಿ ಮಾಡಿದಲ್ಲೇ ಅಬ್ರಹಾಮನಿಗೂ ಸಮಾಧಿ ಮಾಡಿದ್ರು.+ 11 ಅಬ್ರಹಾಮ ಸತ್ತ ಮೇಲೆ ಅವನ ಮಗ ಇಸಾಕನನ್ನ ದೇವರು ಆಶೀರ್ವದಿಸ್ತಾ ಇದ್ದ.+ ಇಸಾಕ ಲಹೈರೋಯಿ ಬಾವಿ+ ಹತ್ರ ವಾಸಿಸ್ತಿದ್ದ.
12 ಸಾರಳ ಸೇವಕಿಯಾದ ಈಜಿಪ್ಟ್ ದೇಶದ ಹಾಗರಳಿಂದ+ ಅಬ್ರಹಾಮನಿಗೆ ಹುಟ್ಟಿದ ಇಷ್ಮಾಯೇಲನ+ ಚರಿತ್ರೆ ಹೀಗಿದೆ:
13 ಇಷ್ಮಾಯೇಲನ ಗಂಡುಮಕ್ಕಳ ಹೆಸರೇ ಅವರ ವಂಶಗಳಿಗೂ ಕೊಡಲಾಯ್ತು. ಆ ಗಂಡುಮಕ್ಕಳ ಹೆಸರು: ಇಷ್ಮಾಯೇಲನ ಚೊಚ್ಚಲ ಮಗ ನೆಬಾಯೋತ್.+ ಅವನಾದ ಮೇಲೆ ಕೇದಾರ್,+ ಅದ್ಬೆಯೇಲ್, ಮಿಬ್ಸಾಮ್,+ 14 ಮಿಷ್ಮ, ದೂಮ, ಮಸ್ಸಾ, 15 ಹದದ, ತೇಮಾ, ಯಟೂರ್, ನಾಫೀಷ್, ಕೇದೆಮ. 16 ಇಷ್ಮಾಯೇಲನ ಈ 12 ಮಕ್ಕಳು ಅವರವರ ಕುಲಕ್ಕೆ ಪ್ರಧಾನರಾಗಿದ್ರು. ಅವರ ಊರುಗಳನ್ನ, ಪಾಳೆಯಗಳನ್ನ* ಅವರ ಹೆಸರಿಂದಾನೇ ಗುರುತಿಸ್ತಿದ್ರು.+ 17 ಇಷ್ಮಾಯೇಲ 137 ವರ್ಷ ಬದುಕಿ ತೀರಿಹೋದ. ಅವನ ಪೂರ್ವಜರ ತರ ಅವನಿಗೂ ಸಮಾಧಿ ಮಾಡಿದ್ರು. 18 ಇಷ್ಮಾಯೇಲನ ವಂಶದವರು ಹವೀಲಾದಿಂದ+ ದೂರದ ಅಶ್ಶೂರ್ ದೇಶದ ತನಕ ವಾಸಿಸ್ತಾ ಇದ್ರು. ಹವೀಲಾ ಶೂರಿಗೆ+ ಹತ್ರದಲ್ಲಿತ್ತು. ಶೂರ್ ಈಜಿಪ್ಟಿಗೆ ಹತ್ರಾನೇ ಇತ್ತು. ಹೀಗೆ ಆ ಅಣ್ಣತಮ್ಮಂದಿರೆಲ್ಲ ಅಕ್ಕಪಕ್ಕದಲ್ಲೇ ವಾಸಿಸ್ತಾ ಇದ್ರು.*+
19 ಅಬ್ರಹಾಮನ ಮಗ ಇಸಾಕನ ಚರಿತ್ರೆ+ ಹೀಗಿದೆ:
ಅಬ್ರಹಾಮ ಇಸಾಕನ ತಂದೆ. 20 ಇಸಾಕನಿಗೆ 40 ವರ್ಷ ಆದಾಗ ರೆಬೆಕ್ಕನ ಮದುವೆಯಾದ. ರೆಬೆಕ್ಕ ಪದ್ದನ್-ಅರಾಮಿನಲ್ಲಿ ವಾಸಿಸ್ತಿದ್ದ ಅರಾಮ್ಯನಾದ ಬೆತೂವೇಲನ ಮಗಳು+ ಮತ್ತು ಲಾಬಾನನ ತಂಗಿ. 21 ರೆಬೆಕ್ಕ ಬಂಜೆಯಾಗಿದ್ದಳು. ಹಾಗಾಗಿ ಇಸಾಕ ತನ್ನ ಹೆಂಡತಿಗಾಗಿ ಯೆಹೋವನ ಹತ್ರ ಬೇಡ್ಕೊಳ್ತಾ ಇದ್ದ. ಯೆಹೋವ ಅವನ ಬೇಡಿಕೆಗೆ ಉತ್ರ ಕೊಟ್ಟ. ರೆಬೆಕ್ಕ ಗರ್ಭಿಣಿಯಾದಳು. 22 ಅವಳ ಹೊಟ್ಟೆಯಲ್ಲಿದ್ದ ಮಕ್ಕಳು ಒಂದಕ್ಕೊಂದು ತಳ್ತಾ ಇದ್ದವು.+ ಆಗ ಅವಳು “ಈ ರೀತಿ ನೋವು ಅನುಭವಿಸೋದಕ್ಕಿಂತ ಸಾಯೋದೇ ಒಳ್ಳೇದು” ಅಂದಳು. ಅವಳು ಯೆಹೋವನಿಗೆ ಪ್ರಾರ್ಥಿಸಿ, ಹೀಗೆ ಯಾಕೆ ಆಗ್ತಿದೆ ಅಂತ ಕೇಳಿದಳು. 23 ಯೆಹೋವ ಅವಳಿಗೆ “ನಿನ್ನ ಹೊಟ್ಟೇಲಿ ಎರಡು ಗಂಡುಮಕ್ಕಳಿವೆ.*+ ಅವುಗಳಿಂದ ಎರಡು ಜನಾಂಗಗಳು ಬರುತ್ತೆ.+ ಅವುಗಳ ದಾರಿ ಬೇರೆ ಬೇರೆ ಆಗಿರುತ್ತೆ, ಒಂದು ಜನಾಂಗ ಇನ್ನೊಂದು ಜನಾಂಗಕ್ಕಿಂತ ಬಲಿಷ್ಠವಾಗಿ ಇರುತ್ತೆ.+ ದೊಡ್ಡವನು ಚಿಕ್ಕವನ ಸೇವೆಮಾಡ್ತಾನೆ”+ ಅಂದನು.
24 ರೆಬೆಕ್ಕಗೆ ಹೆರಿಗೆ ಸಮಯ ಬಂತು. ಅವಳಿಗೆ ಅವಳಿ-ಜವಳಿ ಮಕ್ಕಳು ಹುಟ್ಟಿದ್ರು. 25 ಮೊದಲು ಹುಟ್ಟಿದ ಮಗು ಕೆಂಪಾಗಿತ್ತು. ಆ ಮಗುಗೆ ಕೂದಲಿನ ಬಟ್ಟೆ ಹಾಕಿದ್ಯೋ ಅನ್ನೋ ತರ ಮೈತುಂಬ ಕೂದಲಿತ್ತು.+ ಹಾಗಾಗಿ ಆ ಮಗುಗೆ ಏಸಾವ*+ ಅಂತ ಹೆಸರಿಟ್ರು. 26 ಎರಡನೇ ಮಗು ಏಸಾವನ ಹಿಮ್ಮಡಿ ಹಿಡ್ಕೊಂಡು ಹೊರಗೆ ಬಂತು.+ ಹಾಗಾಗಿ ಅದಕ್ಕೆ ಯಾಕೋಬ* ಅಂತ ಹೆಸರಿಟ್ರು.+ ರೆಬೆಕ್ಕ ಇವರನ್ನ ಹೆತ್ತಾಗ ಇಸಾಕಗೆ 60 ವರ್ಷ.
27 ಈ ಇಬ್ರು ಹುಡುಗರು ಬೆಳೆದು ದೊಡ್ಡವರಾದ್ರು. ಏಸಾವ ಬೇಟೆ ಆಡೋದ್ರಲ್ಲಿ ನಿಪುಣನಾದ.+ ಅವನು ಬೇಟೆಯಾಡ್ತಾ ಹೆಚ್ಚಾಗಿ ಕಾಡಲ್ಲೇ ಇರ್ತಿದ್ದ. ಆದ್ರೆ ಯಾಕೋಬ ಸಾಧು* ವ್ಯಕ್ತಿಯಾಗಿದ್ದ. ಇವನು ಡೇರೆಯಲ್ಲಿ ವಾಸಿಸ್ತಿದ್ದ.+ 28 ಇಸಾಕನಿಗೆ ಬೇಟೆ ಮಾಂಸ ಇಷ್ಟ ಆಗಿದ್ರಿಂದ ಅವನು ಏಸಾವನನ್ನ ಪ್ರೀತಿಸಿದ. ರೆಬೆಕ್ಕ ಯಾಕೋಬನನ್ನ ಪ್ರೀತಿಸಿದಳು.+ 29 ಒಂದಿನ ಯಾಕೋಬ ಅಡುಗೆ ಮಾಡ್ತಿದ್ದಾಗ ಏಸಾವ ಕಾಡಿಂದ ಬಂದ. ಅವನಿಗೆ ತುಂಬ ಸುಸ್ತಾಗಿತ್ತು. 30 ಏಸಾವ ಯಾಕೋಬಗೆ “ದಯವಿಟ್ಟು ನೀನು ಮಾಡ್ತಾ ಇರೋ ಆ ಕೆಂಪು ಸಾರು ಸ್ವಲ್ಪ ಕೊಡು. ಬೇಗ ಕೊಡು, ತುಂಬ ಹಸಿವಾಗ್ತಿದೆ”* ಅಂದ. ಅದಕ್ಕೇ ಅವನಿಗೆ ಎದೋಮ್*+ ಅನ್ನೋ ಹೆಸರು ಬಂತು. 31 ಆಗ ಯಾಕೋಬ “ಜ್ಯೇಷ್ಠ ಪುತ್ರನಾಗಿ ನಿನಗಿರೋ ಹಕ್ಕನ್ನ+ ಮೊದಲು ನನಗೆ ಮಾರಿಬಿಡು” ಅಂದ. 32 ಏಸಾವ “ಇಲ್ಲಿ ಹಸಿವೆಯಿಂದ ಸಾಯ್ತಾ ಇದ್ದೀನಿ. ಜ್ಯೇಷ್ಠ ಪುತ್ರನಾಗಿ ನನಗಿರೋ ಹಕ್ಕನ್ನ ಇಟ್ಕೊಂಡು ನಾನೇನು ಮಾಡ್ಲಿ?” ಅಂದ. 33 ಅದಕ್ಕೆ ಯಾಕೋಬ “ಮೊದ್ಲು ಮಾತು ಕೊಡು” ಅಂದಾಗ ಏಸಾವ ಮಾತುಕೊಟ್ಟು ಜ್ಯೇಷ್ಠ ಪುತ್ರನಾಗಿ ತನಗಿದ್ದ ಹಕ್ಕನ್ನ ಅವನಿಗೆ ಮಾರಿಬಿಟ್ಟ.+ 34 ಆಗ ಯಾಕೋಬ ರೊಟ್ಟಿ ಮತ್ತು ಕಾಳು ಸಾರು ಏಸಾವನಿಗೆ ಕೊಟ್ಟ. ಅವನು ತಿಂದು ಕುಡಿದು ಹೋದ. ಹೀಗೆ ಏಸಾವ ಜ್ಯೇಷ್ಠ ಪುತ್ರನಾಗಿ ತನಗಿದ್ದ ಹಕ್ಕನ್ನ ತಾತ್ಸಾರ ಮಾಡಿದ.
26 ಅಬ್ರಹಾಮನ ಕಾಲದಲ್ಲಿ ಬರ ಬಂದ ಹಾಗೆ ಮತ್ತೆ ದೇಶದಲ್ಲಿ ಬರ ಬಂತು.+ ಆಗ ಇಸಾಕ ಗೆರಾರಿನಲ್ಲಿರೋ ಫಿಲಿಷ್ಟಿಯರ ಅರಸ ಅಬೀಮೆಲೆಕನ ಹತ್ರ ಹೋದ. 2 ಅಲ್ಲಿ ಯೆಹೋವ ಇಸಾಕನಿಗೆ ಕಾಣಿಸ್ಕೊಂಡು “ನೀನು ಈಜಿಪ್ಟಿಗೆ ಹೋಗಬೇಡ. ನಾನು ಹೇಳೋ ದೇಶದಲ್ಲೇ ವಾಸಮಾಡು. 3 ನೀನು ಈ ದೇಶದಲ್ಲಿ ವಿದೇಶಿಯಾಗಿ ಇರು.+ ನಾನು ಯಾವಾಗ್ಲೂ ನಿನ್ನ ಜೊತೆ ಇದ್ದು ಆಶೀರ್ವಾದ ಮಾಡ್ತೀನಿ. ಯಾಕಂದ್ರೆ ನಾನು ಈ ಎಲ್ಲ ಪ್ರದೇಶ ನಿನಗೆ, ನಿನ್ನ ಸಂತತಿಗೆ ಕೊಡ್ತೀನಿ.+ ನಿನ್ನ ತಂದೆ ಅಬ್ರಹಾಮನಿಗೆ ನಾನು ಕೊಟ್ಟ ಮಾತು ಉಳಿಸ್ಕೊಳ್ತೀನಿ.+ 4 ನಾನು ಅಬ್ರಹಾಮನಿಗೆ ‘ನಿನ್ನ ಸಂತತಿನ ಆಕಾಶದ ನಕ್ಷತ್ರಗಳ ತರ ಲೆಕ್ಕ ಇಲ್ಲದಷ್ಟು ಮಾಡ್ತೀನಿ.+ ಈ ಎಲ್ಲ ಪ್ರದೇಶ ನಿನ್ನ ಸಂತತಿಗೆ ಕೊಡ್ತೀನಿ.+ ನಿನ್ನ ಸಂತಾನದ ಮೂಲಕ ಭೂಮಿಯಲ್ಲಿರೋ ಎಲ್ಲ ಜನ್ರಿಗೆ ಆಶೀರ್ವಾದ ಸಿಗುತ್ತೆ’+ ಅಂತ ಮಾತು ಕೊಟ್ಟಿದ್ದೆ. ಅದನ್ನ ನಿಜ ಮಾಡ್ತೀನಿ. 5 ಯಾಕಂದ್ರೆ ಅಬ್ರಹಾಮ ನನ್ನ ಮಾತು ಕೇಳಿದ. ಯಾವಾಗ್ಲೂ ನನಗೆ ಇಷ್ಟ ಆಗೋ ತರ ನಡ್ಕೊಂಡ. ನನ್ನ ಆಜ್ಞೆ, ಶಾಸನ, ನಿಯಮಗಳನ್ನ ಪಾಲಿಸ್ತಾ ಇದ್ದ”+ ಅಂದನು. 6 ಹಾಗಾಗಿ ಇಸಾಕ ಗೆರಾರಿನಲ್ಲೇ ವಾಸಿಸಿದ.+
7 ಅಲ್ಲಿನ ಗಂಡಸರು ರೆಬೆಕ್ಕ ಬಗ್ಗೆ ಇಸಾಕನ ಹತ್ರ ವಿಚಾರಿಸ್ತಾ ಇದ್ರು. ಅವಳು ತನ್ನ ತಂಗಿ ಅಂತ ಇಸಾಕ ಹೇಳ್ತಿದ್ದ.+ ರೆಬೆಕ್ಕ ತುಂಬ ಸುಂದರಿ ಆಗಿದ್ರಿಂದ ಅಲ್ಲಿನ ಗಂಡಸರು ಅವಳನ್ನ ಪಡಿಯೋಕೆ ತನ್ನನ್ನ ಕೊಲ್ಲಬಹುದು ಅಂತ ನೆನಸಿ ಇಸಾಕ ರೆಬೆಕ್ಕಳನ್ನ ತನ್ನ ಹೆಂಡತಿ ಅಂತ ಹೇಳೋಕೆ ಭಯಪಟ್ಟ.+ 8 ಸ್ವಲ್ಪ ಸಮಯ ಆದ್ಮೇಲೆ ಒಂದಿನ ಫಿಲಿಷ್ಟಿಯರ ರಾಜ ಅಬೀಮೆಲೆಕ ಕಿಟಕಿಯಿಂದ ಹೊರಗೆ ನೋಡ್ತಿದ್ದಾಗ ಇಸಾಕ ತನ್ನ ಹೆಂಡತಿ ರೆಬೆಕ್ಕಳನ್ನ ಮುದ್ದಾಡ್ತಿರೋದು* ಕಾಣಿಸ್ತು.+ 9 ಕೂಡಲೇ ಅಬೀಮೆಲೆಕ ಇಸಾಕನನ್ನ ಕರೆಸಿ “ಅವಳು ನಿನ್ನ ಹೆಂಡತಿ ತಾನೇ! ತಂಗಿ ಅಂತ ಯಾಕೆ ಹೇಳ್ದೆ?” ಅಂತ ಕೇಳಿದ. ಇಸಾಕ “ಜನ್ರು ಅವಳನ್ನ ಪಡಿಯೋಕೆ ನನ್ನನ್ನ ಕೊಲ್ಲಬಹುದು ಅಂತ ಹೆದರಿ ಹಾಗೆ ಹೇಳ್ದೆ”+ ಅಂದ. 10 ಆಗ ಅಬೀಮೆಲೆಕ “ನೀನು ಯಾಕೆ ಹಾಗೆ ಮಾಡ್ದೆ?+ ನಮ್ಮ ಜನ್ರಲ್ಲಿ ಯಾರಾದ್ರೂ ನಿನ್ನ ಹೆಂಡತಿ ಜೊತೆ ತಪ್ಪಾಗಿ ನಡ್ಕೊಳ್ತಿದ್ರು. ನಿನ್ನಿಂದಾಗಿ ನಾವು ಅಪರಾಧಿಗಳಾಗ್ತಿದ್ವಿ!”+ ಅಂದ. 11 ಆಮೇಲೆ ಅಬೀಮೆಲೆಕ ಎಲ್ಲ ಜನರಿಗೆ “ಇವನನ್ನಾಗಲಿ ಇವನ ಹೆಂಡತಿಯನ್ನಾಗಲಿ ಯಾರಾದ್ರೂ ಮುಟ್ಟಿದ್ರೆ ಖಂಡಿತ ಮರಣಶಿಕ್ಷೆ ಆಗುತ್ತೆ” ಅಂತ ಆಜ್ಞೆಕೊಟ್ಟ.
12 ಆಮೇಲೆ ಇಸಾಕ ಆ ದೇಶದಲ್ಲಿ ವ್ಯವಸಾಯ ಮಾಡೋಕೆ ಶುರು ಮಾಡ್ದ. ಆ ವರ್ಷ ಅವನು ಬಿತ್ತಿದ್ದಕ್ಕಿಂತ 100 ಪಟ್ಟು ಹೆಚ್ಚು ಬೆಳೆ ಕೊಯ್ದ. ಯಾಕಂದ್ರೆ ಯೆಹೋವ ಅವನನ್ನ ಆಶೀರ್ವದಿಸ್ತಿದ್ದನು.+ 13 ಅವನ ಆಸ್ತಿಪಾಸ್ತಿ ದಿನೇದಿನೇ ಎಷ್ಟು ಹೆಚ್ಚಾಯ್ತು ಅಂದ್ರೆ ಅವನು ದೊಡ್ಡ ಶ್ರೀಮಂತನಾದ. 14 ಅವನಿಗೆ ದನಕುರಿಗಳ ಹಿಂಡು ತುಂಬ ಹೆಚ್ಚಾದವು. ಸೇವಕರೂ ಹೆಚ್ಚಾದ್ರು.+ ಅವನನ್ನ ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ರು.
15 ಅದಕ್ಕೇ ಫಿಲಿಷ್ಟಿಯರು ಇಸಾಕನ ತಂದೆ ಅಬ್ರಹಾಮ ತೋಡಿಸಿದ್ದ ಎಲ್ಲ ಬಾವಿಗಳನ್ನ ಮಣ್ಣುಹಾಕಿ ಮುಚ್ಚಿಬಿಟ್ರು.+ 16 ಆಮೇಲೆ ಅಬೀಮೆಲೆಕ ಇಸಾಕಗೆ “ನೀನು ನಮ್ಮನ್ನ ಮೀರಿಸ್ತಾ ಇದ್ದೀಯ. ಹಾಗಾಗಿ ನಮ್ಮ ದೇಶ ಬಿಟ್ಟು ಹೋಗು” ಅಂದ. 17 ಆಗ ಇಸಾಕ ಅಲ್ಲಿಂದ ಹೊರಟು ಗೆರಾರಿನ ಕಣಿವೆಯಲ್ಲಿ+ ಡೇರೆ ಹಾಕಿ ಅಲ್ಲಿ ವಾಸಿಸೋಕೆ ಶುರು ಮಾಡ್ದ. 18 ಅಲ್ಲಿ ಅಬ್ರಹಾಮ ತೋಡಿಸಿದ್ದ ಬಾವಿಗಳನ್ನ ಅವನು ಸತ್ತ ಮೇಲೆ ಫಿಲಿಷ್ಟಿಯರು ಮುಚ್ಚಿಬಿಟ್ಟಿದ್ರು.+ ಇಸಾಕ ಆ ಬಾವಿಗಳನ್ನ ಮತ್ತೆ ತೋಡಿಸಿ ತನ್ನ ತಂದೆ ಇಟ್ಟಿದ್ದ ಹೆಸರುಗಳನ್ನೇ ಇಟ್ಟ.+
19 ಇಸಾಕನ ಸೇವಕರು ಕಣಿವೆಯಲ್ಲಿ ಬಾವಿ ತೋಡ್ತಾ ಇದ್ದಾಗ ಅವರಿಗೆ ಸಿಹಿ ನೀರಿನ ಸೆಲೆ ಸಿಕ್ತು. 20 ಗೆರಾರಿನ ಕುರುಬರು ಇಸಾಕನ ಕುರುಬರ ಜೊತೆ “ಆ ನೀರು ನಮ್ಮದು” ಅಂತೇಳಿ ಜಗಳ ಮಾಡೋಕೆ ಶುರು ಮಾಡಿದ್ರು. ಅವರು ಇಸಾಕನ ಜೊತೆ ಜಗಳ ಆಡಿದ್ರಿಂದ ಅವನು ಆ ಬಾವಿಗೆ ಏಸೆಕ್* ಅಂತ ಹೆಸರಿಟ್ಟ. 21 ಆಮೇಲೆ ಇಸಾಕನ ಸೇವಕರು ಇನ್ನೊಂದು ಬಾವಿ ತೋಡೋಕೆ ಶುರು ಮಾಡ್ದಾಗ ಗೆರಾರಿನ ಕುರುಬರು ಮತ್ತೆ ಜಗಳ ಆಡಿದ್ರು. ಹಾಗಾಗಿ ಅವನು ಆ ಬಾವಿಗೆ ಸಿಟ್ನಾ* ಅಂತ ಹೆಸರಿಟ್ಟ. 22 ಆಮೇಲೆ ಅವನು ಅಲ್ಲಿಂದ ಬೇರೆ ಕಡೆ ಹೋಗಿ ಅಲ್ಲಿ ಇನ್ನೊಂದು ಬಾವಿ ತೋಡಿದ. ಆದ್ರೆ ಅದಕ್ಕಾಗಿ ಅವರು ಜಗಳ ಆಡಲಿಲ್ಲ. ಆಗ ಇಸಾಕ “ನಮ್ಮ ವಂಶ ವೃದ್ಧಿಯಾಗೋಕೆ ಯೆಹೋವನು ನಮಗೆ ಈಗ ಈ ವಿಶಾಲ ಸ್ಥಳ ಕೊಟ್ಟಿದ್ದಾನೆ”+ ಅಂತ ಹೇಳಿ ಆ ಬಾವಿಗೆ ರೆಹೋಬೋತ್* ಅಂತ ಹೆಸರಿಟ್ಟ.
23 ಆಮೇಲೆ ಅವನು ಅಲ್ಲಿಂದ ಬೇರ್ಷೆಬಕ್ಕೆ ಹೋದ.+ 24 ಆ ರಾತ್ರಿ ಯೆಹೋವ ಅವನಿಗೆ ಕಾಣಿಸಿ “ನಾನು ನಿನ್ನ ತಂದೆ ಅಬ್ರಹಾಮನ ದೇವರು.+ ಭಯಪಡಬೇಡ,+ ನಾನು ನಿನ್ನ ಜೊತೆ ಇದ್ದೀನಿ. ನನ್ನ ಸೇವಕ ಅಬ್ರಹಾಮನಿಂದಾಗಿ ನಿನ್ನನ್ನ ನಾನು ಆಶೀರ್ವದಿಸ್ತೀನಿ, ನಿನ್ನ ಸಂತತಿಯನ್ನ ತುಂಬ ಹೆಚ್ಚು ಮಾಡ್ತೀನಿ”+ ಅಂದನು. 25 ಆಗ ಇಸಾಕ ಅಲ್ಲಿ ಒಂದು ಯಜ್ಞವೇದಿ ಕಟ್ಟಿ ಯೆಹೋವನ ಹೆಸರನ್ನ ಹೊಗಳಿದ.+ ಅವನು ಅಲ್ಲಿ ಡೇರೆ ಹಾಕೊಂಡ.+ ಅವನ ಸೇವಕರು ಅಲ್ಲಿ ಬಾವಿ ತೋಡಿದ್ರು.
26 ಆಮೇಲೆ ಅಬೀಮೆಲೆಕ ತನ್ನ ಸಲಹೆಗಾರ ಅಹುಜ್ಜತನನ್ನ, ಸೇನಾಪತಿ ಫೀಕೋಲನನ್ನ ಕರ್ಕೊಂಡು ಗೆರಾರಿಂದ ಇಸಾಕನ ಹತ್ರ ಬಂದ.+ 27 ಆಗ ಇಸಾಕ ಅವರಿಗೆ “ನೀವು ನನ್ನ ಮೇಲೆ ಬೇಜಾರು ಮಾಡ್ಕೊಂಡು ನಿಮ್ಮ ದೇಶದಿಂದ ಕಳಿಸಿಬಿಟ್ರಲ್ಲಾ. ಈಗ ನನ್ನ ಹತ್ರ ಯಾಕೆ ಬಂದ್ರಿ?” ಅಂತ ಕೇಳಿದ. 28 ಅದಕ್ಕೆ ಅವರು “ಯೆಹೋವ ನಿನ್ನ ಜೊತೆ ಇದ್ದಾನೆ+ ಅಂತ ನಾವು ಕಣ್ಣಾರೆ ನೋಡಿದ್ರಿಂದ ನಿನಗೆ ಒಂದು ವಿಷ್ಯ ಹೇಳಬೇಕಂತ ತೀರ್ಮಾನ ಮಾಡ್ಕೊಂಡು ಬಂದ್ವಿ. ‘ದಯವಿಟ್ಟು ನಾವು ಒಬ್ರಿಗೊಬ್ರು ಮಾತುಕೊಟ್ಟು ಶಾಂತಿಯ ಒಪ್ಪಂದ ಮಾಡ್ಕೊಳ್ಳೋಣ.+ 29 ನಾವು ನಿನಗೆ ಏನೂ ಕೆಟ್ಟದು ಮಾಡದೆ ಒಳ್ಳೇದೇ ಮಾಡಿ ಶಾಂತಿಯಿಂದ ಕಳಿಸಿಕೊಟ್ವಿ ತಾನೇ? ಅದೇ ತರ ನೀನೂ ನಮಗೆ ಏನೂ ಕೆಟ್ಟದು ಮಾಡಲ್ಲ ಅಂತ ಮಾತು ಕೊಡು. ಯಾಕಂದ್ರೆ ನಿನ್ನ ಮೇಲೆ ನಿಜವಾಗ್ಲೂ ಯೆಹೋವನ ಆಶೀರ್ವಾದ ಇದೆ’” ಅಂದ್ರು. 30 ಆಗ ಇಸಾಕ ಅವರಿಗೋಸ್ಕರ ಔತಣ ಮಾಡಿಸಿದ. ಅವರೆಲ್ರೂ ತಿಂದು ಕುಡಿದ್ರು. 31 ಅವರು ಬೆಳಿಗ್ಗೆ ಬೇಗ ಎದ್ದು ಒಬ್ರಿಗೊಬ್ರು ಮಾತು ಕೊಟ್ರು.+ ಆಮೇಲೆ ಇಸಾಕ ಅವರನ್ನ ಕಳಿಸ್ಕೊಟ್ಟ. ಅವರು ಶಾಂತಿಯಿಂದ ಹೋದ್ರು.
32 ಅದೇ ದಿನ ಇಸಾಕನ ಸೇವಕರು ಬಂದು ಅವನಿಗೆ ‘ನಾವು ತೋಡಿದ ಬಾವಿಯಲ್ಲಿ+ ನೀರು ಸಿಕ್ತು’ ಅಂತ ಹೇಳಿದ್ರು. 33 ಆಗ ಅವನು ಆ ಬಾವಿಗೆ ಷಿಬಾ ಅಂತ ಹೆಸರಿಟ್ಟ. ಹಾಗಾಗಿ ಆ ಪಟ್ಟಣಕ್ಕೆ ಇವತ್ತಿನ ತನಕ ಬೇರ್ಷೆಬ+ ಅನ್ನೋ ಹೆಸರಿದೆ.
34 ಏಸಾವ 40 ವರ್ಷದವನು ಆದಾಗ ಯೆಹೂದೀತ ಮತ್ತು ಬಾಸೆಮತನ್ನ ಮದುವೆ ಮಾಡ್ಕೊಂಡ. ಯೆಹೂದೀತ ಬೆಯೇರಿ ಮಗಳು ಮತ್ತು ಬಾಸೆಮತ್ ಏಲೋನನ ಮಗಳು. ಇವರು ಹಿತ್ತಿಯರು.+ 35 ಈ ಸೊಸೆಯರಿಂದ ಇಸಾಕ ಮತ್ತು ರೆಬೆಕ್ಕ+ ತುಂಬ ದುಃಖ-ನೋವು ಅನುಭವಿಸಿದ್ರು.
27 ಇಸಾಕನಿಗೆ ವಯಸ್ಸಾಯ್ತು. ಅವನ ಕಣ್ಣುಗಳು ತುಂಬ ಮೊಬ್ಬಾಗಿ ಹೋಗಿದ್ರಿಂದ ಅವನಿಗೆ ಏನೂ ಕಾಣಿಸ್ತಿರಲಿಲ್ಲ. ಅವನು ದೊಡ್ಡ ಮಗ ಏಸಾವನನ್ನ+ “ಮಗನೇ” ಅಂತ ಕರೆದಾಗ ಏಸಾವ “ಏನಪ್ಪಾ!” ಅಂದ. 2 ಆಗ ಇಸಾಕ “ನನಗೀಗ ವಯಸ್ಸಾಯ್ತು, ಇನ್ನೆಷ್ಟು ದಿನ ಬದುಕಿ ಇರ್ತಿನೋ ಗೊತ್ತಿಲ್ಲ. 3 ಹಾಗಾಗಿ ದಯವಿಟ್ಟು ನೀನು ಬಿಲ್ಲುಬಾಣ ತಗೊಂಡು ಹೋಗಿ ನನಗೋಸ್ಕರ ಪ್ರಾಣಿನ ಬೇಟೆಯಾಡಿ ಬಾ.+ 4 ಅದನ್ನ ರುಚಿಯಾಗಿ ಅಡುಗೆ ಮಾಡಿ ತಗೊಂಡು ಬಾ. ಅದಂದ್ರೆ ನಂಗೆ ತುಂಬ ಇಷ್ಟ. ನಾನು ಅದನ್ನ ತಿಂದು ಸಾಯೋ ಮುಂಚೆ ನಿಂಗೆ ಆಶೀರ್ವಾದ ಮಾಡ್ತೀನಿ” ಅಂದ.
5 ಇಸಾಕ ಏಸಾವ ಜೊತೆ ಮಾತಾಡೋದನ್ನ ರೆಬೆಕ್ಕ ಕೇಳಿಸ್ಕೊಂಡಳು. ಏಸಾವ ಬೇಟೆಯಾಡೋಕೆ ಕಾಡಿಗೆ ಹೋದ.+ 6 ಆಗ ರೆಬೆಕ್ಕ ಯಾಕೋಬನಿಗೆ+ “ಈಗಷ್ಟೇ ನಿನ್ನ ತಂದೆ ನಿನ್ನ ಅಣ್ಣ ಏಸಾವನ ಜೊತೆ ಮಾತಾಡೋದನ್ನ ಕೇಳಿಸ್ಕೊಂಡೆ. ನಿನ್ನ ತಂದೆ ನಿನ್ನ ಅಣ್ಣಗೆ 7 ‘ನೀನು ನನಗೋಸ್ಕರ ಬೇಟೆಯಾಡಿ ರುಚಿಯಾದ ಅಡುಗೆ ಮಾಡ್ಕೊಂಡು ಬಾ. ನಾನು ಅದನ್ನ ತಿಂದು ಸಾಯೋದಕ್ಕೆ ಮುಂಚೆ ನಿನ್ನನ್ನ ಯೆಹೋವನ ಮುಂದೆ ಆಶೀರ್ವದಿಸ್ತೀನಿ’ + ಅಂದ. 8 ಹಾಗಾಗಿ ಮಗನೇ, ಈಗ ನಾನು ಹೇಳೋದನ್ನ ಗಮನಕೊಟ್ಟು ಕೇಳಿಸ್ಕೊಂಡು ಹಾಗೇ ಮಾಡು.+ 9 ದಯವಿಟ್ಟು ನೀನು ಹಿಂಡಿಗೆ ಹೋಗಿ ಅಲ್ಲಿರೋದ್ರಲ್ಲೇ ಚೆನ್ನಾಗಿರೋ ಎರಡು ಆಡಿನ ಮರಿಗಳನ್ನ ತಗೊಂಡು ಬಾ. ಅವುಗಳಿಂದ ನಾನು ನಿನ್ನ ತಂದೆಗೆ ಇಷ್ಟ ಆಗೋ ತರ ರುಚಿಯಾಗಿ ಅಡುಗೆ ಮಾಡ್ತೀನಿ. 10 ನೀನು ಅದನ್ನ ತಗೊಂಡು ಹೋಗಿ ನಿನ್ನ ತಂದೆಗೆ ಕೊಡು. ಅವನು ಊಟ ಮಾಡ್ಲಿ. ಆಗ ಅವನು ಸಾಯೋಕ್ಕಿಂತ ಮುಂಚೆ ನಿನ್ನನ್ನ ಆಶೀರ್ವದಿಸ್ತಾನೆ” ಅಂದಳು.
11 ಅದಕ್ಕೆ ಯಾಕೋಬ ತಾಯಿ ರೆಬೆಕ್ಕಳಿಗೆ “ನನ್ನ ಅಣ್ಣ ಏಸಾವನ ಮೈಮೇಲೆಲ್ಲಾ ಕೂದಲಿದೆ.+ ಆದ್ರೆ ನನಗಿಲ್ಲ. 12 ಒಂದುವೇಳೆ ಅಪ್ಪ ನನ್ನನ್ನ ಮುಟ್ಟಿ ನೋಡಿ ಗುರುತು ಹಿಡಿದ್ರೆ?+ ನಾನು ತಮಾಷೆ ಮಾಡ್ತಾ ಇದ್ದೀನಿ ಅಂತ ನೆನಸಿ ನನಗೆ ಆಶೀರ್ವಾದ ಅಲ್ಲ, ಶಾಪ ಕೊಟ್ಟುಬಿಡ್ತಾನೆ” ಅಂದ. 13 ಅದಕ್ಕೆ ಅವನ ತಾಯಿ “ನನ್ನ ಮಗನೇ, ನಿನ್ನ ತಂದೆ ನಿನಗೆ ಶಾಪಕೊಟ್ರೆ ಆ ಶಾಪ ನನ್ನ ಮೇಲೆ ಬರಲಿ. ಈಗ ನಾನು ಹೇಳಿದ ತರ ಮಾಡು. ಹೋಗಿ ಆಡಿನ ಮರಿಗಳನ್ನ ತಗೊಂಡು ಬಾ”+ ಅಂದಳು. 14 ಯಾಕೋಬ ಹೋಗಿ ಅವುಗಳನ್ನ ತಂದು ತಾಯಿಗೆ ಕೊಟ್ಟ. ಅವಳು ಇಸಾಕಗೆ ಇಷ್ಟ ಆಗೋ ತರ ರುಚಿಯಾಗಿ ಅಡುಗೆ ಮಾಡಿದಳು. 15 ಮನೆಯಲ್ಲಿದ್ದ ಏಸಾವನ ಒಳ್ಳೇ ಬಟ್ಟೆಗಳನ್ನ ರೆಬೆಕ್ಕ ಯಾಕೋಬನಿಗೆ ಹಾಕಿದಳು.+ 16 ಅವನ ಕೈಗೆ ಮತ್ತು ಕುತ್ತಿಗೆಗೆ ಕೂದಲು ಇಲ್ಲದೆ ಇರೋ ಕಡೆ ಆಡಿನ ಮರಿಗಳ ಚರ್ಮ ಹೊದಿಸಿದಳು.+ 17 ಆಮೇಲೆ ಅವಳು ಮಾಡಿದ ಆ ರುಚಿಯಾದ ಅಡುಗೆ ಮತ್ತು ರೊಟ್ಟಿಯನ್ನ ಯಾಕೋಬನ ಕೈಗೆ ಕೊಟ್ಟಳು.+
18 ಅವನು ತಂದೆ ಹತ್ರ ಹೋಗಿ “ಅಪ್ಪಾ” ಅಂತ ಕರೆದಾಗ ತಂದೆ “ಏನು ಮಗನೇ? ನೀನು ಯಾರು, ಏಸಾವನಾ ಯಾಕೋಬನಾ?” ಅಂತ ಕೇಳಿದ. 19 ಅದಕ್ಕೆ ಯಾಕೋಬ ತನ್ನ ತಂದೆಗೆ “ನಾನು ನಿನ್ನ ಮೊದಲನೇ ಮಗ ಏಸಾವ.+ ನೀನು ಹೇಳಿದ ತರಾನೇ ಬೇಟೆ ಮಾಂಸನ ಅಡುಗೆ ಮಾಡಿ ತಂದಿದ್ದೀನಿ, ದಯವಿಟ್ಟು ಎದ್ದು ಕೂತು ಊಟಮಾಡು. ಆಮೇಲೆ ನನಗೆ ಆಶೀರ್ವಾದ ಮಾಡು”+ ಅಂದ. 20 ಆಗ ಇಸಾಕ “ಮಗನೇ, ಇಷ್ಟು ಬೇಗ ನಿನಗೆ ಬೇಟೆ ಹೇಗೆ ಸಿಕ್ತು?” ಅಂತ ಕೇಳಿದ. ಅದಕ್ಕೆ “ನಿನ್ನ ದೇವರಾದ ಯೆಹೋವನೇ ಅದನ್ನ ನನ್ನ ಹತ್ರ ಬರೋ ತರ ಮಾಡಿದನು” ಅಂದ. 21 ಇಸಾಕ ಯಾಕೋಬನಿಗೆ “ದಯವಿಟ್ಟು ನನ್ನ ಹತ್ರ ಬಾ. ನಾನು ನಿನ್ನನ್ನ ಮುಟ್ಟಿ ನೀನು ನಿಜವಾಗ್ಲೂ ಏಸಾವನಾ ಅಂತ ತಿಳ್ಕೊಳ್ತೀನಿ”+ ಅಂದ. 22 ಯಾಕೋಬ ತನ್ನ ತಂದೆ ಇಸಾಕನ ಹತ್ರ ಹೋದ. ಇಸಾಕ ಯಾಕೋಬನನ್ನ ಮುಟ್ಟಿ ನೋಡಿ “ಸ್ವರ ಯಾಕೋಬನ ತರ ಇದೆ, ಆದ್ರೆ ಕೈ ಏಸಾವನ ತರ ಇದೆ”+ ಅಂದ. 23 ಏಸಾವನಿಗೆ ಇದ್ದ ಹಾಗೇ ಯಾಕೋಬನ ಕೈಗಳಲ್ಲೂ ಕೂದಲು ಇದ್ದ ಕಾರಣ ಇಸಾಕ ಯಾಕೋಬನನ್ನ ಗುರುತಿಸಲಿಲ್ಲ. ಹಾಗಾಗಿ ಅವನನ್ನ ಆಶೀರ್ವದಿಸಿದ.+
24 ಇಸಾಕ ಮತ್ತೆ ಅವನಿಗೆ “ನೀನು ನಿಜವಾಗ್ಲೂ ನನ್ನ ಮಗ ಏಸಾವನಾ?” ಅಂತ ಕೇಳಿದ. ಯಾಕೋಬ “ಹೌದು, ನಾನು ಏಸಾವನೇ” ಅಂದ. 25 ಆಮೇಲೆ ಇಸಾಕ “ಮಗನೇ, ಬೇಟೆ ಮಾಂಸದ ಅಡುಗೆನ ನನಗೆ ಕೊಡು. ನಾನು ತಿಂದ ಮೇಲೆ ನಿನ್ನನ್ನ ಆಶೀರ್ವದಿಸ್ತೀನಿ” ಅಂದ. ಯಾಕೋಬ ತಂದು ಕೊಟ್ಟಾಗ ತಿಂದ. ದ್ರಾಕ್ಷಾಮದ್ಯ ತಂದುಕೊಟ್ಟಾಗ ಕುಡಿದ. 26 ಆಮೇಲೆ ಇಸಾಕ ಯಾಕೋಬನಿಗೆ “ನನ್ನ ಮಗನೇ ದಯವಿಟ್ಟು ಹತ್ರ ಬಂದು ನನಗೆ ಮುತ್ತು ಕೊಡು”+ ಅಂದ. 27 ಅವನು ಹತ್ರ ಬಂದು ತಂದೆಗೆ ಮುತ್ತಿಟ್ಟ. ಆಗ ಇಸಾಕನಿಗೆ ಅವನ ಬಟ್ಟೆಗಳ ಸುವಾಸನೆ ಬಂತು.+ ಆಗ ಇಸಾಕ ಅವನನ್ನ ಆಶೀರ್ವದಿಸಿ ಹೀಗಂದ:
“ನೋಡು, ನನ್ನ ಮಗನ ಸುವಾಸನೆ ಯೆಹೋವ ಆಶೀರ್ವದಿಸಿದ ಪ್ರದೇಶದ ಸುವಾಸನೆ ತರ ಇದೆ. 28 ಸತ್ಯ ದೇವರು ನಿನಗೆ ಆಕಾಶದ ಮಂಜು,+ ಭೂಮಿಯ ಫಲವತ್ತಾದ ಮಣ್ಣು,+ ಹೇರಳವಾಗಿ ದವಸಧಾನ್ಯ ಮತ್ತು ಹೊಸ ದ್ರಾಕ್ಷಾಮದ್ಯವನ್ನ ಕೊಡ್ಲಿ.+ 29 ಜನರು ನಿನ್ನ ಸೇವೆಮಾಡ್ಲಿ. ಜನಾಂಗಗಳು ನಿನಗೆ ತಲೆಬಾಗಲಿ. ನಿನ್ನ ಸಹೋದರರಿಗೆ ನೀನು ಒಡೆಯನಾಗಿರು. ನಿನ್ನ ಸಹೋದರರು ನಿನಗೆ ತಲೆಬಾಗಲಿ.+ ನಿನ್ನ ಮೇಲೆ ಶಾಪ ಹಾಕೋ ಪ್ರತಿಯೊಬ್ಬನಿಗೆ ಶಾಪ ತಟ್ಟಲಿ. ನಿನ್ನನ್ನ ಆಶೀರ್ವದಿಸೋ ಪ್ರತಿಯೊಬ್ಬನಿಗೆ ಆಶೀರ್ವಾದ ಸಿಗಲಿ.”+
30 ಇಸಾಕ ಆಶೀರ್ವಾದ ಮಾಡಿದ, ಆಮೇಲೆ ಯಾಕೋಬ ಅಲ್ಲಿಂದ ಹೋದ. ಅವನು ಹೋದ ತಕ್ಷಣ ಏಸಾವ ಬೇಟೆಯಾಡಿ ಬಂದ.+ 31 ಅವನು ಸಹ ರುಚಿಯಾದ ಅಡುಗೆ ಮಾಡಿ ತನ್ನ ತಂದೆ ಹತ್ರ ತಂದು “ಅಪ್ಪಾ, ಎದ್ದು ನಿನ್ನ ಮಗ ಬೇಟೆಯಾಡಿ ತಂದಿದ್ದನ್ನ ತಿಂದು ನನಗೆ ಆಶೀರ್ವಾದ ಮಾಡು” ಅಂದ. 32 ಆಗ ಇಸಾಕ “ನೀನು ಯಾರು?” ಅಂತ ಕೇಳಿದ. ಅವನು “ನಾನು ಏಸಾವ, ನಿನ್ನ ಮೊದಲನೇ ಮಗ”+ ಅಂದ. 33 ಆಗ ಇಸಾಕ ಗಾಬರಿಯಿಂದ ಗಡಗಡನೆ ನಡುಗ್ತಾ “ಹಾಗಾದ್ರೆ ನಿನಗಿಂತ ಮುಂಚೆ ಬಂದವನು ಯಾರು? ಅವನು ನನಗೋಸ್ಕರ ಬೇಟೆ ಮಾಂಸದ ಅಡುಗೆ ಮಾಡಿ ತಂದುಕೊಟ್ಟ! ನಾನು ಅದನ್ನ ತಿಂದು ಅವನನ್ನ ಆಶೀರ್ವದಿಸಿದೆ. ಅವನಿಗೆ ಖಂಡಿತ ಆ ಆಶೀರ್ವಾದ ಸಿಗುತ್ತೆ!” ಅಂದ.
34 ತಂದೆ ಮಾತನ್ನ ಕೇಳಿದ ತಕ್ಷಣ ಏಸಾವನಿಗೆ ತುಂಬ ಬೇಜಾರಾಗಿ ಜೋರಾಗಿ ಅಳ್ತಾ “ಅಪ್ಪಾ ನಂಗೂ ಆಶೀರ್ವಾದ ಮಾಡು”+ ಅಂದ. 35 ಇಸಾಕ “ನಿನ್ನ ತಮ್ಮ ಬಂದು ಮೋಸ ಮಾಡಿ ನಿನಗೆ ಸಿಗಬೇಕಾಗಿದ್ದ ಆಶೀರ್ವಾದ ತಗೊಂಡ” ಅಂದ. 36 ಆಗ ಏಸಾವ “ಎಂಥಾ ಮೋಸಗಾರ ಅವನು! ಜ್ಯೇಷ್ಠ ಪುತ್ರನಾಗಿ ನನಗಿದ್ದ ಹಕ್ಕನ್ನ ಮೊದ್ಲು ನನ್ನಿಂದ ಕಿತ್ಕೊಂಡ,+ ಈಗ ನನಗೆ ಸಿಗಬೇಕಾಗಿದ್ದ ಆಶೀರ್ವಾದನೂ ಕಸ್ಕೊಂಡ!+ ಹೀಗೆ ಎರಡು ಸಲ ನನ್ನ ಸ್ಥಾನನ ಕಿತ್ತುಕೊಂಡ. ಅವನ ಹೆಸರು ಯಾಕೋಬ* ಅಲ್ವಾ? ಅವನ ಹೆಸರಿನ ತರಾನೇ ನಡ್ಕೊಂಡಿದ್ದಾನೆ”+ ಅಂದ. ಆಮೇಲೆ ಏಸಾವ “ನನಗಾಗಿ ನಿನ್ನ ಹತ್ರ ಯಾವ ಆಶೀರ್ವಾದಾನೂ ಇಲ್ವಾ?” ಅಂತ ಕೇಳಿದ. 37 ಅದಕ್ಕೆ ಇಸಾಕ “ಅವನನ್ನ ನಿನ್ನ ಒಡೆಯನಾಗಿ ನೇಮಿಸಿದ್ದೀನಿ.+ ಅವನ ಎಲ್ಲ ಅಣ್ಣತಮ್ಮಂದಿರು ಅವನಿಗೆ ಸೇವಕರಾಗಿ ಇರಬೇಕು ಅಂದಿದ್ದೀನಿ. ಊಟಕ್ಕೆ ದವಸಧಾನ್ಯ ಮತ್ತು ಹೊಸ ದ್ರಾಕ್ಷಾಮದ್ಯ ಯಾವಾಗಲೂ ಇರಲಿ ಅಂತ ಹೇಳಿದ್ದೀನಿ.+ ಮಗನೇ, ಈಗ ನಿನಗೆ ಆಶೀರ್ವದಿಸೋಕೆ ನನ್ನ ಹತ್ರ ಏನೂ ಉಳಿದಿಲ್ಲ” ಅಂದ.
38 ಅದಕ್ಕೆ ಏಸಾವ “ಅಪ್ಪಾ, ನಿನ್ನ ಹತ್ರ ಒಂದೇ ಒಂದು ಆಶೀರ್ವಾದನೂ ಇಲ್ವಾ? ನಂಗೂ ಆಶೀರ್ವಾದ ಕೊಡು!” ಅಂತ ಹೇಳಿ ಕಣ್ಣೀರು ಸುರಿಸ್ತಾ ಜೋರಾಗಿ ಅತ್ತ.+ 39 ಆಗ ಅವನ ತಂದೆ ಇಸಾಕ ಅವನಿಗೆ:
“ನೋಡು, ಚೆನ್ನಾಗಿ ಬೆಳೆ ಕೊಡೋ ಪ್ರದೇಶದಲ್ಲಿ ನೀನು ವಾಸಿಸಲ್ಲ, ಆಕಾಶದ ಮಂಜು ನಿಂಗೆ ಸಿಗಲ್ಲ.+ 40 ನಿನ್ನ ಕತ್ತಿಯಿಂದಾನೇ ನೀನು ಜೀವನ ಮಾಡ್ತೀಯ.+ ನೀನು ನಿನ್ನ ತಮ್ಮನ ಸೇವಕನಾಗ್ತೀಯ.+ ನಿನ್ನಿಂದ ಸಹಿಸೋಕೆ ಆಗದೇ ಹೋದಾಗ ನಿನ್ನ ಕುತ್ತಿಗೆ ಮೇಲೆ ಅವನು ಹಾಕಿರೋ ನೊಗನ ಮುರಿದು ಬಿಡ್ತೀಯ”+ ಅಂದ.
41 ಯಾಕೋಬನಿಗೆ ತಂದೆಯಿಂದ ಆಶೀರ್ವಾದ ಸಿಕ್ಕಿದ್ರಿಂದ ಏಸಾವ ಯಾಕೋಬನ ಮೇಲೆ ಒಳಗೊಳಗೇ ದ್ವೇಷ ಬೆಳೆಸಿಕೊಂಡ.+ “ಇನ್ನೇನು ಸ್ವಲ್ಪ ದಿನದಲ್ಲಿ ಅಪ್ಪ ತೀರಿಹೋಗ್ತಾನೆ.+ ಆಮೇಲೆ ಯಾಕೋಬನನ್ನ ಕೊಲ್ತೀನಿ” ಅಂತ ಏಸಾವ ಮನಸ್ಸಲ್ಲಿ ಅಂದುಕೊಳ್ತಿದ್ದ. 42 ಏಸಾವ ಅಂದ್ಕೊಂಡಿದ್ದು ರೆಬೆಕ್ಕಗೆ ಗೊತ್ತಾದಾಗ ತಕ್ಷಣ ಯಾಕೋಬನನ್ನ ಕರೆದು “ನೋಡು, ನಿನ್ನ ಅಣ್ಣ ಏಸಾವ ನಿನ್ನನ್ನ ಸಾಯಿಸಿ ಸೇಡು ತೀರಿಸ್ಕೊಬೇಕು ಅಂತಿದ್ದಾನೆ.* 43 ಹಾಗಾಗಿ ಮಗನೇ, ನಾನು ಹೇಳೋ ಹಾಗೆ ಮಾಡು. ಖಾರಾನ್ ಪಟ್ಟಣದಲ್ಲಿರೋ ನನ್ನ ಅಣ್ಣ ಲಾಬಾನನ ಹತ್ರ ಓಡಿಹೋಗು.+ 44 ನಿನ್ನ ಅಣ್ಣನ ಕೋಪ ಇಳಿಯೋ ತನಕ ಅಲ್ಲೇ ಇರು. 45 ನಿನ್ನ ಅಣ್ಣಗೆ ನಿನ್ನ ಮೇಲಿರೋ ಕೋಪ ತಣ್ಣಗಾಗಿ ಅದನ್ನ ಮರೆತುಬಿಟ್ಟ ಮೇಲೆ ನಾನೇ ನಿನ್ನನ್ನ ಕರಿತೀನಿ. ನಿಮ್ಮಿಬ್ರನ್ನೂ ಒಂದೇ ದಿನ ಕಳ್ಕೊಳ್ಳೋಕೆ ನನಗಿಷ್ಟ ಇಲ್ಲ” ಅಂದಳು.
46 ಆಮೇಲೆ ರೆಬೆಕ್ಕ ಇಸಾಕನಿಗೆ “ಈ ಹಿತ್ತಿಯ ಸೊಸೆಯರಿಂದ ನಂಗೆ ಜೀವನ ಬೇಸತ್ತು ಹೋಗಿದೆ.+ ಯಾಕೋಬನೂ ಇಲ್ಲೇ ಸುತ್ತಮುತ್ತ ಇರೋ ಹಿತ್ತಿಯರಲ್ಲಿ ಒಬ್ಬಳನ್ನ ಮದ್ವೆ ಆದ್ರೆ ನನ್ನ ಗತಿ ಅಧೋಗತಿ? ಅದಕ್ಕಿಂತ ಸಾಯೋದೇ ಒಳ್ಳೇದು”+ ಅಂತ ಹೇಳ್ತಿದ್ದಳು.
28 ಹಾಗಾಗಿ ಇಸಾಕ ಯಾಕೋಬನನ್ನ ಕರೆದು ಆಶೀರ್ವದಿಸಿ ಹೀಗೆ ಆಜ್ಞೆ ಕೊಟ್ಟ: “ಕಾನಾನ್ಯರ ಹೆಣ್ಣನ್ನ ನೀನು ಮದುವೆ ಆಗಲೇಬಾರದು.+ 2 ಪದ್ದನ್-ಅರಾಮಿನಲ್ಲಿ ಇರೋ ನಿನ್ನ ಅಜ್ಜ* ಬೆತೂವೇಲನ ಮನೆಗೆ ಹೋಗಿ ನಿನ್ನ ಸೋದರಮಾವ ಲಾಬಾನನ+ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನ ಮದುವೆ ಮಾಡ್ಕೊ. 3 ಸರ್ವಶಕ್ತ ದೇವರು ನಿನ್ನನ್ನ ಆಶೀರ್ವದಿಸ್ತಾನೆ. ನಿನಗೆ ಮಕ್ಕಳಾಗಿ ನಿನ್ನ ವಂಶ ತುಂಬ ದೊಡ್ಡದಾಗೋ ತರ ಮಾಡ್ತಾನೆ. ನಿನ್ನ ವಂಶದಿಂದ ಖಂಡಿತ ಅನೇಕ ಕುಲಗಳು ಹುಟ್ಟುತ್ತೆ. ಅವೆಲ್ಲ ಸೇರಿ ಒಂದು ದೊಡ್ಡ ಸಮೂಹ ಆಗುತ್ತೆ.+ 4 ದೇವರು ಅಬ್ರಹಾಮನಿಗೆ ಮಾಡಿದ ಆಶೀರ್ವಾದಗಳನ್ನ+ ನಿನಗೂ ನಿನ್ನ ಸಂತತಿಯವರಿಗೂ ಕೊಡ್ತಾನೆ. ಇದ್ರಿಂದ ದೇವರು ಅಬ್ರಹಾಮನಿಗೆ ಕೊಟ್ಟ, ನೀನು ಈಗ ವಿದೇಶಿಯಾಗಿ ವಾಸಿಸ್ತಿರೋ ಈ ದೇಶವನ್ನ ನಿನ್ನ ಸ್ವಂತ ಮಾಡ್ಕೊಳ್ತೀಯ.”+
5 ಆಮೇಲೆ ಇಸಾಕ ಯಾಕೋಬನನ್ನ ಕಳಿಸಿದ. ಯಾಕೋಬ ಅಲ್ಲಿಂದ ಪದ್ದನ್-ಅರಾಮಿನಲ್ಲಿರೋ ಲಾಬಾನನ ಹತ್ರ ಹೋದ. ಲಾಬಾನ ಅರಾಮ್ಯನಾದ+ ಬೆತೂವೇಲನ ಮಗ ಮತ್ತು ಯಾಕೋಬ ಏಸಾವರ ತಾಯಿಯಾದ ರೆಬೆಕ್ಕಳ ಅಣ್ಣ.+
6 ಇಸಾಕ ಯಾಕೋಬನನ್ನ ಆಶೀರ್ವದಿಸಿದ್ದನ್ನ ಮತ್ತು ಅವನನ್ನ ಪದ್ದನ್-ಅರಾಮಿಗೆ ಕಳಿಸಿ ಅಲ್ಲಿಂದ ಹೆಣ್ಣು ತಗೊಳ್ಳಬೇಕು ಅಂತ ಹೇಳಿದ್ದನ್ನ ಏಸಾವ ಕೇಳಿಸ್ಕೊಂಡ. ಅಲ್ಲದೆ ಅವನನ್ನ ಆಶೀರ್ವದಿಸುವಾಗ “ಕಾನಾನ್ಯರ ಹೆಣ್ಣನ್ನ ಮದುವೆ ಆಗಬೇಡ”+ ಅಂತ ಆಜ್ಞೆ ಕೊಟ್ಟದ್ದು, 7 ಯಾಕೋಬ ತಂದೆತಾಯಿ ಹೇಳಿದ ಮಾತು ಕೇಳಿ ಪದ್ದನ್-ಅರಾಮಿಗೆ ಹೋಗಿದ್ದು ಕೂಡ ಏಸಾವನಿಗೆ ಗೊತ್ತಾಯ್ತು.+ 8 ಇಸಾಕನಿಗೆ ಕಾನಾನ್ಯರ ಹೆಣ್ಣುಮಕ್ಕಳು ಇಷ್ಟ ಇಲ್ಲ ಅಂತ ಅವನಿಗೆ ಇದ್ರಿಂದ ಗೊತ್ತಾಯ್ತು.+ 9 ಹಾಗಾಗಿ ಏಸಾವ ಅಬ್ರಹಾಮನ ಮಗನಾದ ಇಷ್ಮಾಯೇಲನ ಕುಟುಂಬದವರ ಹತ್ರ ಹೋದ. ಏಸಾವನಿಗೆ ಈಗಾಗ್ಲೇ ಬೇರೆ ಹೆಂಡತಿಯರಿದ್ರೂ+ ಅವನು ಇಷ್ಮಾಯೇಲನ ಮಗಳಾದ ಮಹಲತಳನ್ನ ಮದುವೆಯಾದ. ಇವಳು ನೆಬಾಯೋತನ ತಂಗಿ.
10 ಯಾಕೋಬ ಬೇರ್ಷೆಬದಿಂದ ಹೊರಟು ಖಾರಾನಿನ ಕಡೆಗೆ ಹೋಗ್ತಾ ಇದ್ದ.+ 11 ಅವನು ಒಂದು ಜಾಗಕ್ಕೆ ಹೋದಾಗ ಸೂರ್ಯ ಮುಳುಗಿದ್ರಿಂದ ರಾತ್ರಿ ಅಲ್ಲೇ ಕಳಿಬೇಕು ಅಂತ ನೆನಸಿದ. ಹಾಗಾಗಿ ಅಲ್ಲಿದ್ದ ಕಲ್ಲುಗಳಲ್ಲಿ ಒಂದನ್ನ ತಲೆದಿಂಬಾಗಿ ಇಟ್ಕೊಂಡು ಮಲಗಿದ.+ 12 ಆಗ ಅವನಿಗೆ ಒಂದು ಕನಸು ಬಿತ್ತು. ಆ ಕನಸಲ್ಲಿ ಭೂಮಿಯಿಂದ ಸ್ವರ್ಗ ಮುಟ್ಟೋ ತನಕ ಮೆಟ್ಟಿಲುಗಳು* ಇರೋದನ್ನ, ದೇವದೂತರು ಆ ಮೆಟ್ಟಿಲು ಹತ್ತುತ್ತಾ ಇಳಿತಾ ಇರೋದನ್ನ ಅವನು ನೋಡಿದ.+ 13 ಅಲ್ಲದೆ ಆ ಮೆಟ್ಟಿಲುಗಳಿಗಿಂತ ಮೇಲಕ್ಕೆ ಯೆಹೋವ ಇದ್ದನು. ಆತನು ಯಾಕೋಬನಿಗೆ ಹೀಗಂದನು:
“ನಾನು ಯೆಹೋವ, ನಿನ್ನ ಅಜ್ಜ ಅಬ್ರಹಾಮನ ಮತ್ತು ನಿನ್ನ ತಂದೆ ಇಸಾಕನ ದೇವರು.+ ನೀನು ಮಲಗಿರೋ ಈ ದೇಶವನ್ನ ನಾನು ನಿನಗೂ ನಿನ್ನ ಸಂತತಿಯವರಿಗೂ ಕೊಡ್ತೀನಿ.+ 14 ನಿನ್ನ ಸಂತತಿಯವರು ಖಂಡಿತ ಭೂಮಿಯ ಧೂಳಿನ ಕಣಗಳಷ್ಟು+ ಹೆಚ್ಚುತ್ತಾರೆ. ನಿನ್ನ ವಂಶದವರು ಪಶ್ಚಿಮಕ್ಕೂ ಪೂರ್ವಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಹರಡಿಕೊಳ್ತಾರೆ. ನಿನ್ನ ಮೂಲಕ ಮತ್ತು ನಿನ್ನ ಸಂತಾನದ ಮೂಲಕ ಭೂಮಿಯ ಎಲ್ಲ ಜನಾಂಗಗಳು ಖಂಡಿತ ಆಶೀರ್ವಾದ ಪಡ್ಕೊಳ್ಳುತ್ತೆ.+ 15 ನಾನು ನಿನ್ನ ಜೊತೆ ಇರ್ತಿನಿ, ನೀನು ಹೋಗೋ ಎಲ್ಲ ಜಾಗದಲ್ಲಿ ನಿನ್ನನ್ನ ಕಾಪಾಡ್ತೀನಿ, ನಿನ್ನನ್ನ ಮತ್ತೆ ಈ ದೇಶಕ್ಕೆ ಕರ್ಕೊಂಡು ಬರ್ತಿನಿ.+ ನಾನು ನಿನ್ನನ್ನ ಯಾವತ್ತೂ ಕೈಬಿಡಲ್ಲ. ನಿನಗೆ ಕೊಟ್ಟ ಮಾತನ್ನೆಲ್ಲ ತಪ್ಪದೆ ನಿಜ ಮಾಡ್ತೀನಿ.”+
16 ಆಗ ಯಾಕೋಬ ನಿದ್ದೆಯಿಂದ ಎಚ್ಚರವಾಗಿ “ನಿಜವಾಗಿ ಈ ಜಾಗದಲ್ಲಿ ಯೆಹೋವ ಇದ್ದಾನೆ. ನನಗದು ಗೊತ್ತೇ ಇರಲಿಲ್ಲ” ಅಂದ. 17 ಅಲ್ಲದೆ ಅವನು ಭಯದಿಂದ ಆಶ್ಚರ್ಯದಿಂದ “ಇದು ಮಾಮೂಲಿ ಜಾಗ ಅಂತೂ ಅಲ್ಲ. ಇದು ಪವಿತ್ರ ಸ್ಥಳ!+ ಖಂಡಿತ ಇದು ದೇವರ ಮನೆ ಮತ್ತು ಸ್ವರ್ಗದ ಬಾಗಿಲು”+ ಅಂದ. 18 ಯಾಕೋಬ ಬೆಳಿಗ್ಗೆ ಬೇಗ ಎದ್ದು ತಾನು ತಲೆದಿಂಬಾಗಿ ಇಟ್ಕೊಂಡಿದ್ದ ಕಲ್ಲನ್ನ ಕಂಬವಾಗಿ ನಿಲ್ಲಿಸಿ ಅದ್ರ ತುದಿ ಮೇಲೆ ಎಣ್ಣೆ ಹೊಯ್ದ.+ 19 ಅವನು ಆ ಜಾಗಕ್ಕೆ ಬೆತೆಲ್* ಅಂತ ಹೆಸರಿಟ್ಟ. ಮುಂಚೆ ಆ ಪಟ್ಟಣಕ್ಕೆ ಲೂಜ್+ ಅನ್ನೋ ಹೆಸರಿತ್ತು.
20 ಆಮೇಲೆ ಯಾಕೋಬ ಒಂದು ಪ್ರತಿಜ್ಞೆ ಮಾಡಿ ಹೀಗಂದ: “ನೀನು ಯಾವಾಗ್ಲೂ ನನ್ನ ಜೊತೆ ಇದ್ದು ನನ್ನ ಪ್ರಯಾಣದಲ್ಲೆಲ್ಲಾ ನನ್ನನ್ನ ಕಾಪಾಡಿ ತಿನ್ನೋದಕ್ಕೆ ರೊಟ್ಟಿ, ಹಾಕೋಕೆ ಬಟ್ಟೆ ಕೊಟ್ರೆ, 21 ನಾನು ನನ್ನ ತಂದೆ ಮನೆಗೆ ಸುರಕ್ಷಿತವಾಗಿ ಮತ್ತೆ ಹೋಗೋ ತರ ಮಾಡಿದ್ರೆ ಯೆಹೋವನೇ ನನ್ನ ದೇವರು ಅಂತ ನನಗೆ ಪಕ್ಕಾ ಗೊತ್ತಾಗುತ್ತೆ. 22 ನಾನು ಕಂಬವಾಗಿ ನಿಲ್ಲಿಸಿರೋ ಈ ಕಲ್ಲು ದೇವರ ಮನೆ ಆಗುತ್ತೆ.+ ಅಲ್ಲದೆ ನೀನು ನನಗೆ ಏನೆಲ್ಲಾ ಕೊಡ್ತಿಯೋ ಅದ್ರಲ್ಲಿ ಹತ್ತರಲ್ಲೊಂದು ಪಾಲು ನಿನಗೆ ಖಂಡಿತ ಕೊಡ್ತೀನಿ.”
29 ಆಮೇಲೆ ಯಾಕೋಬ ಪ್ರಯಾಣ ಮುಂದುವರಿಸಿ ಪೂರ್ವ ದಿಕ್ಕಲ್ಲಿ ಇದ್ದ ದೇಶಕ್ಕೆ ಹೋದ. 2 ಅಲ್ಲಿ ಹೋದಾಗ ಹೊಲದಲ್ಲಿ ಒಂದು ಬಾವಿ ನೋಡಿದ. ಅದ್ರ ಅಕ್ಕಪಕ್ಕದಲ್ಲಿ ಮೂರು ಕುರಿಹಿಂಡು ಮಲಗಿತ್ತು. ಬಾವಿ ಮೇಲೆ ದೊಡ್ಡ ಕಲ್ಲು ಮುಚ್ಚಿತ್ತು. ಕುರುಬರು ಯಾವಾಗ್ಲೂ ಆ ಬಾವಿ ನೀರನ್ನೇ ಕುರಿಗಳಿಗೆ ಕುಡಿಯೋಕೆ ಕೊಡ್ತಿದ್ರು. 3 ಕುರಿಗಳೆಲ್ಲಾ ಅಲ್ಲಿ ಬಂದ ಮೇಲೆ ಕುರುಬರು ಬಾವಿ ಮೇಲಿದ್ದ ಕಲ್ಲು ಸರಿಸಿ ನೀರು ಕುಡಿಸ್ತಿದ್ರು. ಆಮೇಲೆ ಮತ್ತೆ ಕಲ್ಲನ್ನ ಬಾವಿ ಮೇಲೆ ಮುಚ್ಚುತ್ತಿದ್ರು.
4 ಯಾಕೋಬ ಕುರುಬರಿಗೆ “ಅಣ್ಣಂದಿರೇ, ನಿಮ್ಮ ಊರು ಯಾವುದು?” ಅಂತ ಕೇಳಿದ. ಆಗ ಅವರು “ನಮ್ಮ ಊರು ಖಾರಾನ್”+ ಅಂದ್ರು. 5 ಅದಕ್ಕೆ ಅವನು “ನಿಮಗೆ ನಾಹೋರನ+ ಮೊಮ್ಮಗನಾದ ಲಾಬಾನ+ ಗೊತ್ತಾ?” ಅಂತ ಕೇಳಿದ. ಅವರು “ಹೌದು ಗೊತ್ತು” ಅಂದ್ರು. 6 ಅವನು “ಲಾಬಾನ ಹೇಗಿದ್ದಾನೆ?” ಅಂದಾಗ “ಚೆನ್ನಾಗಿದ್ದಾನೆ. ನೋಡು, ಅಲ್ಲಿ ಕುರಿಗಳ ಜೊತೆ ಬರ್ತಾ ಇದ್ದಾಳಲ್ಲಾ ಅವಳೇ ಲಾಬಾನನ ಮಗಳು. ಅವಳ ಹೆಸರು ರಾಹೇಲ್”+ ಅಂದ್ರು. 7 ಆಗ ಯಾಕೋಬ “ಈಗ ಮಧ್ಯಾಹ್ನ ಅಷ್ಟೆ. ಇಷ್ಟು ಬೇಗ ಕುರಿಗಳನ್ನ ಯಾಕೆ ಒಟ್ಟುಗೂಡಿಸ್ತಾ ಇದ್ದೀರಾ? ಕುರಿಗಳಿಗೆ ನೀರು ಕುಡಿಸಿ ಇನ್ನೂ ಸ್ವಲ್ಪ ಹೊತ್ತು ಮೇಯೋಕೆ ಬಿಡಬಹುದಲ್ಲಾ?” ಅಂದ. 8 ಅವರು “ಎಲ್ಲ ಕುರಿಗಳು ಇಲ್ಲಿ ಬರೋ ತನಕ ನಾವು ಕುರಿಗಳಿಗೆ ನೀರು ಕುಡಿಸೋ ಹಾಗಿಲ್ಲ. ಬಂದ ಮೇಲೇ ಬಾವಿ ಮೇಲಿರೋ ಕಲ್ಲು ಸರಿಸಲಾಗುತ್ತೆ. ಆಮೇಲೆ ನಾವು ಕುರಿಗಳಿಗೆ ನೀರು ಕುಡಿಸ್ತೀವಿ” ಅಂದ್ರು.
9 ಅವನು ಅವರ ಜೊತೆ ಮಾತಾಡ್ತಾ ಇರುವಾಗ್ಲೇ ರಾಹೇಲ ತನ್ನ ತಂದೆಯ ಕುರಿಗಳ ಜೊತೆ ಅಲ್ಲಿಗೆ ಬಂದಳು. ಅವಳು ಕುರಿ ಕಾಯುವವಳು. 10 ಯಾಕೋಬ ತನ್ನ ಸೋದರಮಾವ ಲಾಬಾನನ ಮಗಳಾದ ರಾಹೇಲ ಮತ್ತು ಅವಳ ಜೊತೆ ಇದ್ದ ಕುರಿಗಳನ್ನ ನೋಡಿದ ತಕ್ಷಣ ಬಾವಿ ಹತ್ರ ಹೋಗಿ ಅದರ ಮೇಲಿದ್ದ ಕಲ್ಲು ಸರಿಸಿ ತನ್ನ ಸೋದರಮಾವನ ಕುರಿಗಳಿಗೆ ನೀರು ಕೊಟ್ಟ. 11 ಆಮೇಲೆ ಯಾಕೋಬ ರಾಹೇಲಳಿಗೆ ಮುತ್ತಿಟ್ಟು ವಂದಿಸಿ ಕಣ್ಣೀರು ಸುರಿಸಿ ಜೋರಾಗಿ ಅತ್ತ. 12 ಆಮೇಲೆ ತಾನು ಅವಳ ತಂದೆಯ ಸಂಬಂಧಿಕ ಮತ್ತು ರೆಬೆಕ್ಕಳ ಮಗ ಅಂದ. ಆಗ ರಾಹೇಲ ಓಡಿಹೋಗಿ ತಂದೆಗೆ ಆ ವಿಷ್ಯ ಮುಟ್ಟಿಸಿದಳು.
13 ಲಾಬಾನ+ ತನ್ನ ತಂಗಿ ಮಗ ಯಾಕೋಬನ ಬಗ್ಗೆ ತಿಳಿದ ತಕ್ಷಣ ಅವನನ್ನ ನೋಡೋಕೆ ಓಡಿದ. ಅವನು ಯಾಕೋಬನನ್ನ ಅಪ್ಪಿ ಮುತ್ತಿಟ್ಟು ತನ್ನ ಮನೆಗೆ ಕರ್ಕೊಂಡು ಬಂದ. ಆಗ ಯಾಕೋಬ ಲಾಬಾನನಿಗೆ ತನ್ನ ಬಗ್ಗೆ ಎಲ್ಲ ವಿಷ್ಯ ಹೇಳಿದ. 14 ಲಾಬಾನ ಅವನಿಗೆ “ನೀನು ನನ್ನ ರಕ್ತ ಸಂಬಂಧಿ” ಅಂದ. ಯಾಕೋಬ ಒಂದು ತಿಂಗಳು ಪೂರ್ತಿ ಲಾಬಾನನ ಹತ್ರ ಇದ್ದ.
15 ಆಮೇಲೆ ಲಾಬಾನ ಯಾಕೋಬನಿಗೆ “ನೀನೇನೋ ನನ್ನ ಸಂಬಂಧಿಕ ನಿಜ,+ ಹಾಗಂತ ಸಂಬಳ ಇಲ್ಲದೆ ಯಾಕೆ ದುಡಿಬೇಕು? ಹೇಳು, ನಾನು ನಿನಗೆಷ್ಟು ಸಂಬಳ ಕೊಡಲಿ?”+ ಅಂದ. 16 ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ರು. ದೊಡ್ಡವಳು ಲೇಯ, ಚಿಕ್ಕವಳು ರಾಹೇಲ್.+ 17 ಲೇಯಳ ಕಣ್ಣುಗಳಲ್ಲಿ ಕಾಂತಿ ಇರಲಿಲ್ಲ. ಆದರೆ ರಾಹೇಲ್ ನೋಡೋಕೆ ಲಕ್ಷಣವಾಗಿ ಸುಂದರವಾಗಿ ಇದ್ದಳು. 18 ಯಾಕೋಬ ರಾಹೇಲನ್ನ ಪ್ರೀತಿಸ್ತಿದ್ದ. ಹಾಗಾಗಿ ಅವನು ಲಾಬಾನನಿಗೆ “ನಾನು ನಿನ್ನ ಚಿಕ್ಕ ಮಗಳು ರಾಹೇಲನ್ನ ಮದುವೆ ಆಗಬೇಕಂತ ಇದ್ದೀನಿ, ಅವಳಿಗಾಗಿ ನಾನು ನಿನ್ನ ಹತ್ರ ಏಳು ವರ್ಷ ಕೆಲಸ ಮಾಡ್ತೀನಿ”+ ಅಂದ. 19 ಅದಕ್ಕೆ ಲಾಬಾನ “ಅವಳನ್ನ ಬೇರೆಯವರಿಗೆ ಕೊಡೋದಕ್ಕಿಂತ ನಿನಗೆ ಕೊಡೋದೇ ಒಳ್ಳೇದು. ನನ್ನ ಜೊತೆ ಇರು” ಅಂದ. 20 ಹಾಗಾಗಿ ಯಾಕೋಬ ರಾಹೇಲಳಿಗಾಗಿ ಏಳು ವರ್ಷ ಕೆಲಸ ಮಾಡಿದ.+ ಅವನು ಅವಳನ್ನ ತುಂಬ ಪ್ರೀತಿಸ್ತಾ ಇದ್ದದರಿಂದ ಅವನಿಗೆ ಆ ಏಳು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ ಕೆಲವೇ ದಿನ ಕಳೆದ ಹಾಗೆ ಇತ್ತು.
21 ಆಮೇಲೆ ಯಾಕೋಬ ಲಾಬಾನನಿಗೆ “ನಾನು ನಿನಗೆ ಹೇಳಿದ ಹಾಗೆ ಏಳು ವರ್ಷ ಕೆಲಸ ಮಾಡಿದೆ. ಈಗ ನನ್ನ ಹೆಂಡತಿಯನ್ನ* ನನಗೆ ಕೊಡು. ನಾನು ಅವಳ ಜೊತೆ ಸಂಸಾರ ಮಾಡಬೇಕು” ಅಂದ. 22 ಆಗ ಲಾಬಾನ ಔತಣ ಮಾಡಿಸಿ ಆ ಸ್ಥಳದ ಜನ್ರನ್ನೆಲ್ಲ ಕರೆಸಿದ. 23 ಆದ್ರೆ ಸಂಜೆ ಅವನು ತನ್ನ ದೊಡ್ಡ ಮಗಳಾದ ಲೇಯಳನ್ನ ಯಾಕೋಬನ ಹತ್ರ ಕರ್ಕೊಂಡು ಬಂದ. ಯಾಕೋಬ ಅವಳನ್ನ ಕೂಡಿದ. 24 ಲಾಬಾನ ತನ್ನ ಸೇವಕಿ ಜಿಲ್ಪಳನ್ನ ಕೂಡ ತನ್ನ ಮಗಳಾದ ಲೇಯಗೆ ಸೇವಕಿಯಾಗಿ ಕೊಟ್ಟ.+ 25 ಯಾಕೋಬ ಬೆಳಿಗ್ಗೆ ಎದ್ದಾಗ ತನ್ನ ಜೊತೆ ಇರೋದು ಲೇಯ ಅಂತ ಗೊತ್ತಾಯ್ತು! ಹಾಗಾಗಿ ಅವನು ಲಾಬಾನನಿಗೆ “ನೀನು ಯಾಕೆ ಹೀಗೆ ಮಾಡಿದೆ? ನಾನು ಕೆಲಸ ಮಾಡಿದ್ದು ರಾಹೇಲಗೋಸ್ಕರ ತಾನೇ? ನನಗೆ ಯಾಕೆ ಮೋಸ ಮಾಡ್ದೆ?”+ ಅಂತ ಕೇಳಿದ. 26 ಅದಕ್ಕೆ ಲಾಬಾನ “ದೊಡ್ಡ ಮಗಳು ಇರೋವಾಗ ಚಿಕ್ಕವಳಿಗೆ ಮದುವೆ ಮಾಡೋದು ನಮ್ಮ ಪದ್ಧತಿಯಲ್ಲ. 27 ಈ ವಾರಪೂರ್ತಿ ನೀನು ಇವಳ ಜೊತೆ ಆನಂದಿಸು. ಆಮೇಲೆ ನಾನು ನನ್ನ ಚಿಕ್ಕ ಮಗಳನ್ನೂ ನಿನಗೆ ಕೊಡ್ತೀನಿ. ಆದರೆ ನೀನು ಅವಳಿಗಾಗಿ ಇನ್ನೂ ಏಳು ವರ್ಷ ನನ್ನ ಹತ್ರ ಕೆಲಸ ಮಾಡಬೇಕು”+ ಅಂದ. 28 ಅದಕ್ಕೆ ಯಾಕೋಬ ಒಪ್ಪಿ ಲೇಯ ಜೊತೆ ಆ ವಾರ ಕಳೆದ. ಆಮೇಲೆ ಲಾಬಾನ ತನ್ನ ಮಗಳಾದ ರಾಹೇಲನ್ನ ಅವನಿಗೆ ಹೆಂಡತಿಯಾಗಿ ಕೊಟ್ಟ. 29 ಅಲ್ಲದೆ ಲಾಬಾನ ತನ್ನ ಸೇವಕಿ ಬಿಲ್ಹಾಳನ್ನ+ ತನ್ನ ಮಗಳಾದ ರಾಹೇಲಗೆ ಸೇವಕಿಯಾಗಿ ಕೊಟ್ಟ.+
30 ಯಾಕೋಬ ರಾಹೇಲನ್ನ ಸಹ ಕೂಡಿದ. ಅವನು ಲೇಯಳಿಗಿಂತ ಹೆಚ್ಚಾಗಿ ರಾಹೇಲನ್ನ ಪ್ರೀತಿಸಿದ. ಅವಳಿಗಾಗಿ ಲಾಬಾನನ ಹತ್ರ ಇನ್ನೂ ಏಳು ವರ್ಷ ಕೆಲಸ ಮಾಡಿದ.+ 31 ಲೇಯಗೆ ಗಂಡನಿಂದ ಕಡಿಮೆ ಪ್ರೀತಿ ಸಿಗೋದನ್ನ* ಯೆಹೋವ ನೋಡಿದನು. ಹಾಗಾಗಿ ಅವಳಿಗೆ ಮಕ್ಕಳಾಗೋ ತರ ಮಾಡಿದ.+ ಆದ್ರೆ ರಾಹೇಲ ಬಂಜೆಯಾಗಿದ್ದಳು.+ 32 ಲೇಯ ಗರ್ಭಿಣಿಯಾಗಿ ಗಂಡು ಮಗು ಹೆತ್ತಳು. “ಯೆಹೋವ ನನ್ನ ವೇದನೆ ನೋಡಿದ್ದಾನೆ.+ ಇನ್ನು ಮುಂದೆ ನನ್ನ ಗಂಡ ನನ್ನನ್ನ ಪ್ರೀತಿಸ್ತಾನೆ” ಅಂತ ಹೇಳಿ ಆ ಮಗುಗೆ ಅವಳು ರೂಬೇನ್*+ ಅಂತ ಹೆಸರಿಟ್ಟಳು. 33 ಅವಳಿಗೆ ಮತ್ತೆ ಗಂಡು ಮಗು ಹುಟ್ಟಿತು. “ಗಂಡನ ಪ್ರೀತಿ ಸಿಗಲಿಲ್ಲ ಅಂತ ನಾನು ಪ್ರಾರ್ಥಿಸಿದನ್ನ ಯೆಹೋವ ಕೇಳಿ ನನಗೆ ಈ ಮಗುವನ್ನೂ ಕೊಟ್ಟಿದ್ದಾನೆ” ಅಂತೇಳಿ ಆ ಮಗುಗೆ ಸಿಮೆಯೋನ್*+ ಅಂತ ಹೆಸರಿಟ್ಟಳು. 34 ಅವಳಿಗೆ ಇನ್ನೊಂದು ಗಂಡು ಮಗು ಆಯ್ತು. ಆಗ ಅವಳು “ಈಗ್ಲಾದ್ರೂ ನನ್ನ ಗಂಡ ನನಗೆ ಹತ್ರ ಆಗ್ತಾನೆ. ಯಾಕಂದ್ರೆ ನಾನು ಅವನಿಗೆ ಮೂರು ಗಂಡು ಮಕ್ಕಳನ್ನ ಕೊಟ್ನಲ್ಲಾ” ಅಂದಳು. ಹಾಗಾಗಿ ಆ ಮಗುಗೆ ಲೇವಿ*+ ಅಂತ ಹೆಸರಿಟ್ರು. 35 ಅವಳಿಗೆ ಮತ್ತೆ ಇನ್ನೊಂದು ಗಂಡು ಮಗು ಆಯ್ತು. ಆಗ ಅವಳು “ನಾನೀಗ ಯೆಹೋವನನ್ನ ಹೊಗಳ್ತೀನಿ” ಅಂತ ಹೇಳಿ ಆ ಮಗುಗೆ ಯೆಹೂದ*+ ಅನ್ನೋ ಹೆಸರಿಟ್ಟಳು. ಆಮೇಲೆ ಅವಳಿಗೆ ಸ್ವಲ್ಪ ಕಾಲ ಮಕ್ಕಳಾಗಲಿಲ್ಲ.
30 ರಾಹೇಲ ತನಗೆ ಮಕ್ಕಳಾಗದಿದ್ದ ಕಾರಣ ತನ್ನ ಅಕ್ಕನನ್ನ ನೋಡಿ ಹೊಟ್ಟೆಕಿಚ್ಚುಪಟ್ಟಳು. ಅವಳು ಯಾಕೋಬನಿಗೆ “ನನಗೆ ಮಕ್ಕಳು ಕೊಡು, ಇಲ್ಲದಿದ್ರೆ ನಾನು ಸಾಯ್ತೀನಿ” ಅಂತ ಹೇಳ್ತಾ ಇದ್ದಳು. 2 ಇದ್ರಿಂದ ಯಾಕೋಬ ರಾಹೇಲಳ ಮೇಲೆ ಕೋಪದಿಂದ “ನಿನಗೆ ಮಕ್ಕಳಾಗದ ಹಾಗೆ ದೇವರೇ ತಡೆದ ಮೇಲೆ ನಾನೇನು ಮಾಡೋಕಾಗುತ್ತೆ? ನನ್ನನ್ನ ದೂರಬೇಡ. ನಾನೇನು ದೇವರಾ?” ಅಂದ. 3 ಅದಕ್ಕೆ ಅವಳು “ನನ್ನ ದಾಸಿ ಬಿಲ್ಹಾ+ ಇದ್ದಾಳಲ್ಲಾ, ಅವಳ ಜೊತೆ ಮಲ್ಕೊ. ಅವಳಿಗೆ ಮಗು ಆದ್ರೆ ಅದು ನಂದಾಗುತ್ತೆ. ಈ ರೀತಿಯಾದ್ರೂ ನನಗೆ ಮಕ್ಕಳಾಗ್ಲಿ” ಅಂದಳು. 4 ಹಾಗಾಗಿ ರಾಹೇಲ ತನ್ನ ಸೇವಕಿ ಬಿಲ್ಹಾಳನ್ನ ಯಾಕೋಬನಿಗೆ ಹೆಂಡತಿಯಾಗಿ ಕೊಟ್ಟಳು. ಅವನು ಅವಳನ್ನ ಕೂಡಿದ.+ 5 ಬಿಲ್ಹಾಗೆ ಯಾಕೋಬನಿಂದ ಗಂಡು ಮಗು ಹುಟ್ಟಿತು. 6 ಆಮೇಲೆ ರಾಹೇಲ “ದೇವರು ನನ್ನ ನ್ಯಾಯಾಧೀಶ, ನನ್ನ ಕೂಗು ಕೇಳಿದ್ದಾನೆ. ಹಾಗಾಗಿ ಆತನು ನನಗೆ ಒಬ್ಬ ಮಗನನ್ನ ಕೊಟ್ಟನು” ಅಂತೇಳಿ ಆ ಮಗುಗೆ ದಾನ್*+ ಅಂತ ಹೆಸರಿಟ್ಟಳು. 7 ರಾಹೇಲಳ ಸೇವಕಿ ಬಿಲ್ಹಾ ಮತ್ತೆ ಗರ್ಭಿಣಿ ಆಗಿ ಯಾಕೋಬನಿಗೆ ಇನ್ನೊಂದು ಗಂಡು ಮಗು ಹೆತ್ತಳು. 8 ಆಗ ರಾಹೇಲ “ನನ್ನ ಅಕ್ಕನ ಜೊತೆ ಸತತವಾಗಿ ಹೋರಾಡಿ ಗೆದ್ದಿದ್ದೀನಿ!” ಅಂತ ಹೇಳಿ ಆ ಮಗುಗೆ ನಫ್ತಾಲಿ*+ ಅಂತ ಹೆಸರಿಟ್ಟಳು.
9 ಲೇಯ ತನಗೆ ಮಕ್ಕಳಾಗ್ತಾ ಇಲ್ಲ ಅಂತ ತಿಳಿದು ತನ್ನ ಸೇವಕಿ ಜಿಲ್ಪಳನ್ನ ಯಾಕೋಬನಿಗೆ ಹೆಂಡತಿಯಾಗಿ ಕೊಟ್ಟಳು.+ 10 ಜಿಲ್ಪಗೆ ಯಾಕೋಬನಿಂದ ಗಂಡು ಮಗು ಹುಟ್ಟಿತು. 11 ಆಗ ಲೇಯ “ನನಗೆ ಎಂಥ ಸೌಭಾಗ್ಯ ಸಿಕ್ಕಿದೆ!” ಅಂತೇಳಿ ಆ ಮಗುಗೆ ಗಾದ್*+ ಅಂತ ಹೆಸರಿಟ್ಟಳು. 12 ಆಮೇಲೆ ಲೇಯಳ ಸೇವಕಿ ಜಿಲ್ಪಗೆ ಯಾಕೋಬನಿಂದ ಇನ್ನೊಂದು ಗಂಡು ಮಗು ಹುಟ್ಟಿತು. 13 ಆಗ ಲೇಯ “ನನಗೆ ತುಂಬ ಖುಷಿ ಆಗಿದೆ! ನಾನು ಸಂತೋಷವಾಗಿ ಇದ್ದೀನಿ ಅಂತ ಸ್ತ್ರೀಯರೆಲ್ಲ ಹೊಗಳ್ತಾರೆ”+ ಅಂತೇಳಿ ಆ ಮಗುಗೆ ಅಶೇರ್*+ ಅಂತ ಹೆಸರಿಟ್ಟಳು.
14 ಗೋದಿ ಕೊಯ್ಲಿನ ಕಾಲದಲ್ಲಿ ರೂಬೇನ+ ಬಯಲಲ್ಲಿ ನಡಿತಿದ್ದಾಗ ಕೆಲವು ಮ್ಯಾಂಡ್ರೇಕ್ ಹಣ್ಣುಗಳನ್ನ* ನೋಡಿ ಅವುಗಳನ್ನ ಕಿತ್ತು ತಂದು ತನ್ನ ಅಮ್ಮ ಲೇಯಗೆ ಕೊಟ್ಟ. ಆಗ ರಾಹೇಲ ಲೇಯಗೆ “ನಿನ್ನ ಮಗ ತಂದ ಹಣ್ಣುಗಳಲ್ಲಿ ಕೆಲವನ್ನ ದಯವಿಟ್ಟು ನನಗೆ ಕೊಡು” ಅಂದಳು. 15 ಅದಕ್ಕೆ ಲೇಯ “ನೀನು ನನ್ನ ಗಂಡನನ್ನ ನನ್ನಿಂದ ಕಿತ್ಕೊಂಡಿದ್ದು ಸಾಕಾಗಲಿಲ್ವಾ?+ ಈಗ ನನ್ನ ಮಗ ತಂದಿರೋ ಹಣ್ಣುಗಳನ್ನೂ ತಗೋಬೇಕಂತ ಇದ್ದೀಯಾ?” ಅಂದಳು. ಆಗ ರಾಹೇಲ “ಸರಿ, ಆ ಹಣ್ಣುಗಳನ್ನ ನನಗೆ ಕೊಟ್ರೆ ಗಂಡ ಇವತ್ತು ರಾತ್ರಿ ನಿನ್ನ ಜೊತೆ ಮಲಗ್ತಾನೆ” ಅಂದಳು.
16 ಯಾಕೋಬ ಆ ಸಂಜೆ ಹೊಲದಿಂದ ಬರ್ತಿದ್ದಾಗ ಲೇಯ ಅವನ ಹತ್ರ ಹೋಗಿ “ಇವತ್ತು ರಾತ್ರಿ ನೀನು ನನ್ನ ಜೊತೆ ಮಲಗಬೇಕು. ಯಾಕಂದ್ರೆ ನನ್ನ ಮಗ ತಂದ ಮ್ಯಾಂಡ್ರೇಕ್ ಹಣ್ಣುಗಳನ್ನ ರಾಹೇಲಗೆ ಕೊಟ್ಟು ನಾನು ನಿನ್ನನ್ನ ಸಂಪಾದಿಸಿದ್ದೀನಿ” ಅಂದಳು. ಆಗ ಅವನು ಆ ರಾತ್ರಿ ಅವಳ ಜೊತೆ ಮಲಗಿದ. 17 ದೇವರು ಲೇಯಳ ಪ್ರಾರ್ಥನೆ ಕೇಳಿ ಉತ್ತರ ಕೊಟ್ಟಿದ್ರಿಂದ ಯಾಕೋಬನಿಂದ ಗರ್ಭಿಣಿಯಾಗಿ ಅವಳಿಗೆ ಐದನೇ ಗಂಡು ಮಗು ಆಯ್ತು. 18 ಆಗ ಲೇಯ “ನಾನು ನನ್ನ ಗಂಡನಿಗೆ ನನ್ನ ಸೇವಕಿ ಕೊಟ್ಟಿದ್ರಿಂದ ದೇವರು ನನಗೆ ಪ್ರತಿಫಲ ಕೊಟ್ಟಿದ್ದಾನೆ” ಅಂತೇಳಿ ಆ ಮಗುಗೆ ಇಸ್ಸಾಕಾರ್*+ ಅಂತ ಹೆಸರಿಟ್ಟಳು. 19 ಲೇಯ ಮತ್ತೆ ಯಾಕೋಬನಿಂದ ಗರ್ಭಿಣಿಯಾಗಿ ಆರನೇ ಗಂಡು ಮಗು ಹುಟ್ಟಿತು.+ 20 ಆಗ ಲೇಯ “ದೇವರು ನನಗೆ ಒಳ್ಳೇ ಉಡುಗೊರೆ ಕೊಟ್ಟಿದ್ದಾನೆ. ನಾನು ನನ್ನ ಗಂಡನಿಗೆ ಆರು ಗಂಡು ಮಕ್ಕಳನ್ನ ಕೊಟ್ಟಿದ್ದೀನಿ.+ ಈಗಂತೂ ಅವನು ನನ್ನನ್ನ ಸಹಿಸ್ಕೊಳ್ತಾನೆ”+ ಅಂತೇಳಿ ಆ ಮಗುಗೆ ಜೆಬುಲೂನ್*+ ಅಂತ ಹೆಸರಿಟ್ಟಳು. 21 ಆಮೇಲೆ ಅವಳಿಗೆ ಒಂದು ಹೆಣ್ಣುಮಗು ಹುಟ್ಟಿತು. ಅವಳು ಆ ಮಗುಗೆ ದೀನ ಅಂತ ಹೆಸರಿಟ್ಟಳು.+
22 ಕೊನೆಗೆ ದೇವರು ರಾಹೇಲನ್ನ ನೆನಪಿಸ್ಕೊಂಡನು.* ಅವಳಿಗೆ ಮಕ್ಕಳಾಗೋ ತರ ಮಾಡೋ ಮೂಲಕ ಅವಳ ಪ್ರಾರ್ಥನೆಗೆ ಉತ್ತರ ಕೊಟ್ಟನು.+ 23 ಅವಳಿಗೆ ಗಂಡು ಮಗು ಆಯ್ತು. ಅವಳು “ದೇವರು ನನ್ನ ಮೇಲಿದ್ದ ಅವಮಾನ ತೆಗೆದುಹಾಕಿದ್ದಾನೆ”+ ಅಂದಳು. 24 “ಯೆಹೋವ ನನಗೆ ಇನ್ನೊಬ್ಬ ಮಗನನ್ನ ಕೊಟ್ಟಿದ್ದಾನೆ” ಅಂತೇಳಿ ಆ ಮಗುಗೆ ಯೋಸೇಫ*+ ಅಂತ ಹೆಸರಿಟ್ಟಳು.
25 ರಾಹೇಲಗೆ ಯೋಸೇಫ ಹುಟ್ಟಿದ ಮೇಲೆ ಯಾಕೋಬ ಲಾಬಾನನಿಗೆ “ನನ್ನ ದೇಶದಲ್ಲಿರೋ ನನ್ನ ಮನೆಗೆ ವಾಪಸ್ ಹೋಗೋಕೆ ನನಗೆ ಅನುಮತಿ ಕೊಡು.+ 26 ನಾನು ನಿನ್ನ ಹತ್ರ ಕೆಲಸಮಾಡಿ ಪಡೆದ ನನ್ನ ಹೆಂಡತಿಯರನ್ನ, ಮಕ್ಕಳನ್ನ ನನಗೆ ಕೊಡು, ನಾನು ಹೋಗ್ತೀನಿ. ನಿನ್ನ ಹತ್ರ ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀನಿ ಅಂತ ನಿನಗೆ ಚೆನ್ನಾಗಿ ಗೊತ್ತು”+ ಅಂದ. 27 ಆಗ ಲಾಬಾನ “ದಯವಿಟ್ಟು ನೀನು ನನ್ನ ಜೊತೆನೇ ಇರು. ನಿನ್ನಿಂದ ಯೆಹೋವ ನನ್ನನ್ನ ಆಶೀರ್ವದಿಸ್ತಿದ್ದಾನೆ ಅಂತ ನಾನು ಶಕುನ ನೋಡಿ ತಿಳ್ಕೊಂಡೆ” ಅಂದ. 28 ಅಲ್ಲದೆ “ನಿನಗೆಷ್ಟು ಸಂಬಳ ಕೊಡಬೇಕು ಹೇಳು, ಕೊಡ್ತೀನಿ”+ ಅಂದ. 29 ಯಾಕೋಬ “ನಾನು ನಿನ್ನ ಹತ್ರ ಎಷ್ಟು ಪ್ರಾಮಾಣಿಕನಾಗಿ ಕೆಲಸ ಮಾಡಿದ್ದೀನಿ, ನಿನ್ನ ಪ್ರಾಣಿಗಳನ್ನ ನಾನು ನೋಡ್ಕೊಂಡಾಗ ಅವು ಎಷ್ಟು ಜಾಸ್ತಿ ಆಯ್ತು ಅನ್ನೋದೆಲ್ಲ ನಿನಗೇ ಗೊತ್ತು.+ 30 ನಾನು ಬರೋದಕ್ಕೆ ಮುಂಚೆ ನಿನ್ನ ಹತ್ರ ಕೆಲವೇ ಪ್ರಾಣಿ ಇತ್ತು. ಆದ್ರೆ ನಾನು ಬಂದ ದಿನದಿಂದ ಯೆಹೋವ ನಿನ್ನನ್ನ ಆಶೀರ್ವದಿಸಿದ್ದಾನೆ. ಹಾಗಾಗಿ ನಿನ್ನ ಪ್ರಾಣಿಗಳು ಜಾಸ್ತಿ ಆಯ್ತು. ಈಗ ನಾನು ನನ್ನ ಕುಟುಂಬಕ್ಕಾಗಿ ಏನಾದ್ರು ಮಾಡಬೇಕಲ್ವಾ?”+ ಅಂದ.
31 ಅದಕ್ಕೆ ಲಾಬಾನ “ನಾನು ನಿನಗೇನು ಕೊಡಬೇಕು?” ಅಂದಾಗ ಯಾಕೋಬ “ಏನೂ ಕೊಡೋದು ಬೇಡ! ನನಗಾಗಿ ಒಂದು ವಿಷ್ಯ ಮಾಡಿದ್ರೆ ನಾನು ನಿನ್ನ ಆಡು-ಕುರಿಗಳನ್ನ ಮೇಯಿಸಿ ಕಾಯೋದನ್ನ ಮುಂದುವರಿಸ್ತೀನಿ.+ 32 ನಾವಿಬ್ರೂ ಇವತ್ತು ನಿನ್ನ ಪ್ರಾಣಿಗಳನ್ನ ಹೋಗಿ ನೋಡೋಣ. ನೀನು ಹಿಂಡಿನಿಂದ ಮಚ್ಚೆ ಮತ್ತು ಚುಕ್ಕೆ ಇರೋ ಕುರಿಗಳನ್ನ, ಕಡುಕಂದು ಬಣ್ಣದ ಗಂಡು ಕುರಿಮರಿಗಳನ್ನ, ಮಚ್ಚೆ ಮತ್ತು ಚುಕ್ಕೆ ಇರೋ ಹೆಣ್ಣು ಆಡುಗಳನ್ನ ಬೇರೆ ಮಾಡಿಡು. ಇನ್ನು ಮುಂದೆ ಇಂಥ ಕುರಿ, ಟಗರು, ಆಡು ಹುಟ್ಟಿದ್ರೆ ಅವೇ ನನ್ನ ಸಂಬಳವಾಗಿರಲಿ.+ 33 ಹೀಗೆ ನನಗೆ ಸಂಬಳವಾಗಿ ಸಿಕ್ಕಿದ್ದನ್ನ ನೀನು ಮುಂದೆ ಯಾವತ್ತಾದ್ರೂ ಪರೀಕ್ಷಿಸೋಕೆ ಬಂದಾಗ ನಾನು ಪ್ರಾಮಾಣಿಕ ಅನ್ನೋದು ನಿನಗೇ ಗೊತ್ತಾಗುತ್ತೆ. ಒಂದುವೇಳೆ ಮಚ್ಚೆ ಮತ್ತು ಚುಕ್ಕೆ ಇಲ್ಲದ ಹೆಣ್ಣು ಆಡು, ಕಡುಕಂದು ಬಣ್ಣದ್ದಲ್ಲದ ಗಂಡು ಕುರಿಮರಿ ನನ್ನ ಹತ್ರ ಇದ್ರೆ ಅವುಗಳನ್ನ ನಾನು ಕದ್ದಿದ್ದೀನಿ ಅಂತ ನೀನು ನೆನಸಬಹುದು” ಅಂದ.
34 ಆಗ ಲಾಬಾನ “ಸರಿ, ನೀನು ಹೇಳಿದ ಹಾಗೇ ಆಗ್ಲಿ”+ ಅಂದ. 35 ಅದೇ ದಿನ ಲಾಬಾನ ಪಟ್ಟೆ ಮತ್ತು ಚುಕ್ಕೆ ಇರೋ ಗಂಡು ಆಡುಗಳನ್ನ, ಮಚ್ಚೆ ಮತ್ತು ಚುಕ್ಕೆ ಇರೋ ಎಲ್ಲ ಹೆಣ್ಣು ಆಡುಗಳನ್ನ, ಗಂಡು ಕುರಿಮರಿಗಳ ಮೇಲೆ ಸ್ವಲ್ಪ ಬಿಳಿ ಬಣ್ಣ ಇದ್ರೂ ಆ ಎಲ್ಲ ಮರಿಗಳನ್ನ ಮತ್ತು ಕಡುಕಂದು ಬಣ್ಣದ ಎಲ್ಲ ಟಗರು ಮರಿಗಳನ್ನ ಪ್ರತ್ಯೇಕಿಸಿ ಅವುಗಳನ್ನ ಮೇಯಿಸೋಕೆ ತನ್ನ ಗಂಡುಮಕ್ಕಳಿಗೆ ಒಪ್ಪಿಸಿದ. 36 ಆಮೇಲೆ ಅವನು ಅವುಗಳನ್ನ ಹೊಡೆದುಕೊಂಡು ಯಾಕೋಬನಿದ್ದ ಸ್ಥಳದಿಂದ ಮೂರು ದಿನ ಪ್ರಯಾಣ ಮಾಡುವಷ್ಟು ದೂರ ಹೋದ. ಹಿಂಡಿನಲ್ಲಿ ಉಳಿದ ಪ್ರಾಣಿಗಳನ್ನ ಯಾಕೋಬ ಮೇಯಿಸ್ತಿದ್ದ.
37 ಆಮೇಲೆ ಯಾಕೋಬ ಗುಗ್ಗುಳದ ಮರ, ಬಾದಾಮಿ ಮರ, ಪ್ಲೇನ್ ಮರಗಳಿಂದ ಹಸಿ ಕೋಲುಗಳನ್ನ ಕತ್ತರಿಸಿದ. ಆ ಕೋಲುಗಳ ಮೇಲೆ ಅಲ್ಲಲ್ಲಿ ಸಿಪ್ಪೆ ಸುಲಿದು ಒಳಗಿರೋ ಬಿಳಿ ಬಣ್ಣ ಕಾಣೋ ತರ ಮಾಡಿದ. ಇದ್ರಿಂದ ಕೋಲುಗಳ ಮೇಲೆ ಮಚ್ಚೆ ಇರೋ ತರ ಕಾಣ್ತಿತ್ತು. 38 ಆಮೇಲೆ ಆ ಕೋಲುಗಳನ್ನ ನೀರು ಕುಡಿಯೋಕೆ ಹಿಂಡು ಬರುವಾಗ ಅವುಗಳಿಗೆ ಕಾಣೋ ತರ ನೀರು ಹರಿಯೋ ಕಾಲುವೆಗಳಲ್ಲಿ ಮತ್ತು ನೀರಿನ ತೊಟ್ಟಿಗಳಲ್ಲಿ ಇಟ್ಟ. ಅಲ್ಲಿಗೆ ಬರೋ ಆಡು-ಕುರಿಗಳು ಕೋಲುಗಳನ್ನ ನೋಡ್ತಾ ಸಂಗಮ ಮಾಡಬೇಕಂತ ಹಾಗೆ ಮಾಡಿದ.
39 ಆಡು-ಕುರಿಗಳು ಆ ಕೋಲುಗಳನ್ನ ನೋಡ್ತಾ ಸಂಗಮ ಮಾಡ್ತು. ಹಾಗಾಗಿ ಅವುಗಳಿಗೆ ಹುಟ್ಟಿದ ಮರಿಗಳ ಮೇಲೆ ಪಟ್ಟೆ, ಮಚ್ಚೆ, ಚುಕ್ಕೆ ಇತ್ತು. 40 ಯಾಕೋಬ ಆ ಮರಿಗಳನ್ನ ಪ್ರತ್ಯೇಕವಾಗಿಟ್ಟ. ಅಲ್ಲದೆ ಲಾಬಾನನ ಆಡು-ಕುರಿಗಳು ಹಿಂಡಿನಲ್ಲಿದ್ದ ಪಟ್ಟೆ ಇರೋ, ಕಡುಕಂದು ಬಣ್ಣದ ಆಡುಕುರಿಗಳನ್ನ ನೋಡ್ತಾ ಇರೋ ಹಾಗೆ ಮಾಡಿದ. ಆಮೇಲೆ ತನ್ನ ಹಿಂಡನ್ನ ಲಾಬಾನನ ಹಿಂಡಿನ ಜೊತೆ ಸೇರಿಸದೆ ಬೇರೆ ಇಟ್ಟ. 41 ಅಷ್ಟೇ ಅಲ್ಲ ದಷ್ಟಪುಷ್ಟವಾದ ಆಡು-ಕುರಿಗಳು ಕೋಲುಗಳನ್ನ ನೋಡ್ತಾ ಸಂಗಮ ಮಾಡಬೇಕಂತ ಯಾಕೋಬ ನೀರು ಹರಿಯೋ ಕಾಲುವೆಗಳಲ್ಲಿ ಆ ಕೋಲುಗಳನ್ನ ಇಡ್ತಿದ್ದ. 42 ಆದ್ರೆ ಬಲಹೀನವಾದ ಆಡು-ಕುರಿಗಳ ಮುಂದೆ ಅವನು ಆ ಕೋಲುಗಳನ್ನ ಇಡ್ತಾ ಇರಲಿಲ್ಲ. ಹೀಗಾಗಿ ಬಲಹೀನವಾದ ಆಡು-ಕುರಿಗಳು ಯಾವಾಗ್ಲೂ ಲಾಬಾನನ ಪಾಲಿಗೆ ಹೋಯ್ತು. ದಷ್ಟಪುಷ್ಟವಾದ ಆಡುಕುರಿಗಳೆಲ್ಲ ಯಾಕೋಬನ ಪಾಲಿಗೆ ಬಂತು.+
43 ಹೀಗೆ ಯಾಕೋಬ ತುಂಬ ಶ್ರೀಮಂತನಾದ. ಅವನ ಹತ್ರ ದೊಡ್ಡ ದೊಡ್ಡ ಹಿಂಡು, ತುಂಬ ಸೇವಕ ಸೇವಕಿಯರು, ತುಂಬಾ ಕತ್ತೆ ಒಂಟೆ ಇತ್ತು.+
31 ಕಾಲ ಕಳೆದ ಹಾಗೆ ಲಾಬಾನನ ಗಂಡುಮಕ್ಕಳು “ಅಪ್ಪನ ಆಸ್ತಿಯನ್ನೆಲ್ಲ ಯಾಕೋಬ ತಗೊಂಡಿದ್ದಾನೆ. ನಮ್ಮ ತಂದೆ ಆಸ್ತಿಯಿಂದಾನೇ ಅವನು ಇಷ್ಟೊಂದು ಸಂಪತ್ತು ಕೂಡಿಸಿದ್ದಾನೆ”+ ಅಂತ ಹೇಳೋದನ್ನ ಯಾಕೋಬ ಕೇಳಿಸ್ಕೊಂಡ. 2 ಅಲ್ಲದೆ ಯಾಕೋಬ ಲಾಬಾನನ ಮುಖ ನೋಡಿದಾಗ ಅವನು ಮೊದಲಿನ ತರ ಇಲ್ಲ, ತನ್ನ ಜೊತೆ ನಡ್ಕೊಳ್ಳೋ ರೀತಿ ಬದಲಾಗಿದೆ ಅಂತ ಗೊತ್ತಾಯ್ತು.+ 3 ಕೊನೆಗೆ ಯೆಹೋವ ಯಾಕೋಬನಿಗೆ “ನೀನು ನಿನ್ನ ತಂದೆತಾತಂದಿರ, ಸಂಬಂಧಿಕರ ದೇಶಕ್ಕೆ ವಾಪಸ್ ಹೋಗು.+ ನಾನು ಯಾವಾಗ್ಲೂ ನಿನ್ನ ಜೊತೆ ಇರ್ತಿನಿ” ಅಂದನು. 4 ಆಮೇಲೆ ಯಾಕೋಬ ರಾಹೇಲ ಮತ್ತು ಲೇಯಳಿಗೆ ತಾನು ಹಿಂಡನ್ನ ಮೇಯಿಸ್ತಿದ್ದ ಬಯಲಿಗೆ ಬರೋಕೆ ಹೇಳಿ ಕಳಿಸಿದ. 5 ಅವರು ಬಂದಾಗ ಹೀಗಂದ:
“ನಿಮ್ಮ ಅಪ್ಪ ನನ್ನ ಜೊತೆ ಮೊದಲಿನ ತರ ಇಲ್ಲ. ಅವನು ನಡ್ಕೊಳ್ಳೋ ರೀತಿ ಬದಲಾಗಿದೆ.+ ನನ್ನ ತಂದೆಯ ದೇವರು ನನ್ನ ಜೊತೆ ಯಾವಾಗ್ಲೂ ಇದ್ದಾನೆ.+ 6 ನಾನು ನಿಮ್ಮ ಅಪ್ಪನ ಹತ್ರ ಎಷ್ಟು ಕಷ್ಟಪಟ್ಟು ಕೆಲಸಮಾಡ್ದೆ ಅಂತ ನಿಮಗೇ ಗೊತ್ತು.+ 7 ನಿಮ್ಮ ಅಪ್ಪ ನನಗೆ ಮೋಸ ಮಾಡೋಕೆ ಪ್ರಯತ್ನಿಸ್ತಾ ನನ್ನ ಸಂಬಳವನ್ನ ಹತ್ತು ಸಲ ಬದಲಾಯಿಸಿದ. ಆದ್ರೆ ಅವನಿಂದ ನನಗೆ ಕೆಟ್ಟದಾಗೋಕೆ ದೇವರು ಬಿಡಲಿಲ್ಲ. 8 ಒಂದು ಸಲ ಅವನು ‘ಚುಕ್ಕೆ ಇರೋ ಆಡು-ಕುರಿಗಳೇ ನಿನ್ನ ಸಂಬಳ’ ಅಂದ. ಆಗ ಹಿಂಡಲ್ಲಿದ್ದ ಎಲ್ಲ ಆಡು-ಕುರಿಗಳಿಗೆ ಚುಕ್ಕೆ ಇರೋ ಮರಿಗಳೇ ಹುಟ್ಟಿತು. ಇನ್ನೊಂದು ಸಲ ‘ಪಟ್ಟೆ ಇರೋ ಆಡು-ಕುರಿಗಳೇ ನಿನ್ನ ಸಂಬಳ’ ಅಂದ. ಆಗ ಹಿಂಡಲ್ಲಿದ್ದ ಎಲ್ಲ ಆಡು-ಕುರಿಗಳಿಗೆ ಪಟ್ಟೆ ಇರೋ ಮರಿಗಳೇ ಹುಟ್ಟಿತು.+ 9 ಹೀಗೆ ದೇವರು ನಿಮ್ಮ ಅಪ್ಪನ ಆಡು-ಕುರಿಗಳನ್ನ ಅವನಿಂದ ತೆಗೆದು ನನಗೆ ಕೊಡ್ತಿದ್ದನು. 10 ಒಮ್ಮೆ ಹಿಂಡು ಸಂಗಮಿಸೋ ಕಾಲದಲ್ಲಿ ನನಗೆ ಒಂದು ಕನಸು ಬಿತ್ತು. ಹಿಂಡಿನ ಜೊತೆ ಸಂಗಮಿಸೋ ಗಂಡು ಆಡುಗಳ ಮೇಲೆ ಪಟ್ಟೆ, ಮಚ್ಚೆ, ಚುಕ್ಕೆ ಇರೋದನ್ನ ಆ ಕನಸಲ್ಲಿ ನೋಡ್ದೆ.+ 11 ಆಗ ಸತ್ಯ ದೇವರ ದೂತ ಆ ಕನಸಲ್ಲಿ ನನಗೆ ‘ಯಾಕೋಬ’ ಅಂತ ಕರೆದಾಗ ‘ಹೇಳು ಸ್ವಾಮಿ’ ಅಂದೆ. 12 ಅದಕ್ಕೆ ಅವನು ‘ದಯವಿಟ್ಟು ನೀನು ಕಣ್ಣೆತ್ತಿ ನೋಡು. ಹಿಂಡಿನ ಜೊತೆ ಸಂಗಮಿಸೋ ಎಲ್ಲ ಗಂಡು ಆಡುಗಳಿಗೆ ಪಟ್ಟೆ, ಮಚ್ಚೆ, ಚುಕ್ಕೆ ಇದೆ. ಲಾಬಾನ ನಿನಗೆ ಮಾಡ್ತಿರೋದನ್ನೆಲ್ಲ ನಾನು ನೋಡಿದ್ದೀನಿ. ಹಾಗಾಗಿ ಈ ರೀತಿ ಮಾಡ್ದೆ.+ 13 ನೀನು ಈ ಹಿಂದೆ ಬೆತೆಲಲ್ಲಿ+ ಕಂಬವನ್ನ ಅಭಿಷೇಕಿಸಿ ನನಗೆ ಪ್ರತಿಜ್ಞೆಮಾಡಿದ್ಯಲ್ಲಾ,+ ಅಲ್ಲಿ ನಿನಗೆ ಕಾಣಿಸ್ಕೊಂಡ ಸತ್ಯ ದೇವರು ನಾನೇ. ಈಗ ಈ ದೇಶ ಬಿಟ್ಟು ನೀನು ಹುಟ್ಟಿದ ದೇಶಕ್ಕೆ ವಾಪಸ್ ಹೋಗು’ + ಅಂದ.”
14 ಆಗ ರಾಹೇಲ ಮತ್ತು ಲೇಯ “ನಮಗೆ ಅಪ್ಪ ಪಾಲು ಕೊಡಲ್ಲ ಅಂತ ಅನ್ಸುತ್ತೆ. 15 ಅವನು ನಮ್ಮನ್ನ ಮಾರಿ ಸಿಕ್ಕಿದ ಹಣವನ್ನೆಲ್ಲ ನುಂಗಿಬಿಟ್ಟ.+ ಅಂದ್ಮೇಲೆ ನಮ್ಮನ್ನ ವಿದೇಶಿಯರ ತರ ನೋಡ್ತಿದ್ದಾನೆ ಅಂತಾಯ್ತು. 16 ದೇವರು ನಮ್ಮ ಅಪ್ಪನ ಆಸ್ತಿಯಿಂದ ತೆಗೆದು ನಿನಗೆ ಕೊಟ್ಟಿದ್ದೆಲ್ಲ ನಮಗೂ ನಮ್ಮ ಮಕ್ಕಳಿಗೂ ಸೇರಿದೆ.+ ಹಾಗಾಗಿ ದೇವರು ನಿನಗೆ ಹೇಳಿದ್ದನ್ನೆಲ್ಲ ಮಾಡು”+ ಅಂದ್ರು.
17 ಆಮೇಲೆ ಯಾಕೋಬ ತನ್ನ ಮಕ್ಕಳನ್ನ ಹೆಂಡತಿಯರನ್ನ ಒಂಟೆಗಳ ಮೇಲೆ ಹತ್ತಿಸಿ,+ 18 ಪದ್ದನ್-ಅರಾಮಿನಲ್ಲಿ ಸಂಪಾದಿಸಿದ್ದ+ ಎಲ್ಲ ಪ್ರಾಣಿಗಳನ್ನ ಎಲ್ಲ ವಸ್ತುಗಳನ್ನ ತಗೊಂಡು ಕಾನಾನ್ ದೇಶದಲ್ಲಿದ್ದ ತನ್ನ ತಂದೆ ಇಸಾಕನ ಹತ್ರ ಹೊರಟ.+
19 ಲಾಬಾನ ತನ್ನ ಕುರಿಗಳ ಉಣ್ಣೆ ಕತ್ತರಿಸೋಕೆ ಹೋಗಿದ್ದ. ಆಗ ರಾಹೇಲ ತನ್ನ ಅಪ್ಪನ+ ಮನೆದೇವರುಗಳ ಮೂರ್ತಿಗಳನ್ನ+ ಕದ್ದಳು. 20 ಯಾಕೋಬ ಜಾಣ್ಮೆಯಿಂದ ನಡ್ಕೊಂಡು, ಅರಾಮ್ಯನಾದ ಲಾಬಾನನಿಗೆ ಹೇಳ್ದೆ ಅಲ್ಲಿಂದ ಓಡಿಹೋದ. 21 ಅವನು ತನ್ನ ಹತ್ರ ಇದ್ದ ಎಲ್ಲವನ್ನ ತಗೊಂಡು ತನ್ನ ಕುಟುಂಬದ ಜೊತೆ ಹೊರಟು ಮಹಾನದಿ* ದಾಟಿದ.+ ಆಮೇಲೆ ಬೆಟ್ಟ ಪ್ರದೇಶವಾದ ಗಿಲ್ಯಾದಿನ ಕಡೆ ಹೋದ.+ 22 ಯಾಕೋಬ ಓಡಿಹೋಗಿದ್ದಾನೆ ಅಂತ ಮೂರನೇ ದಿನ ಲಾಬಾನನಿಗೆ ಯಾರೋ ಹೇಳಿದ್ರು. 23 ಆಗ ಅವನು ತನ್ನ ಸಂಬಂಧಿಕರನ್ನ ಕರ್ಕೊಂಡು ಯಾಕೋಬನನ್ನ ಹುಡುಕಿಕೊಂಡು ಹೋದ. ಏಳು ದಿನ ಪ್ರಯಾಣ ಮಾಡಿ ಯಾಕೋಬನಿದ್ದ ಬೆಟ್ಟ ಪ್ರದೇಶವಾದ ಗಿಲ್ಯಾದಿಗೆ ಬಂದ. 24 ರಾತ್ರಿಯಲ್ಲಿ ದೇವರು ಅರಾಮ್ಯನಾದ+ ಲಾಬಾನನ ಕನಸಲ್ಲಿ+ ಬಂದು ಅವನಿಗೆ “ಹುಷಾರ್! ನೀನು ಯಾಕೋಬನ ಹತ್ರ ನೋಡಿ ಮಾತಾಡು”*+ ಅಂತ ಎಚ್ಚರಿಸಿದನು.
25 ಯಾಕೋಬ ಬೆಟ್ಟ ಪ್ರದೇಶವಾದ ಗಿಲ್ಯಾದಿನಲ್ಲಿ ಡೇರೆ ಹಾಕೊಂಡಿದ್ದ. ಲಾಬಾನ ಕೂಡ ತನ್ನ ಸಂಬಂಧಿಕರ ಜೊತೆ ಅದೇ ಪ್ರದೇಶಕ್ಕೆ ಬಂದು ಡೇರೆ ಹಾಕೊಂಡ. ಅವನು ಯಾಕೋಬನ ಹತ್ರ ಹೋಗಿ 26 “ನೀನ್ಯಾಕೆ ಹೀಗೆ ಮಾಡ್ದೆ? ನನಗ್ಯಾಕೆ ಮೋಸ ಮಾಡ್ದೆ? ನನ್ನ ಹೆಣ್ಣುಮಕ್ಕಳನ್ನ ಯುದ್ಧದಲ್ಲಿ ಕೈದಿಯಾಗಿ ಹಿಡ್ಕೊಂಡು ಬಂದವರ ತರ ಯಾಕೆ ಕರ್ಕೊಂಡು ಬಂದೆ? 27 ನೀನು ನನಗೆ ಮೋಸಮಾಡಿ ಹೇಳದೆ ಕೇಳದೆ ಕದ್ದುಮುಚ್ಚಿ ಯಾಕೆ ಓಡಿಬಂದೆ? ನನಗೊಂದು ಮಾತು ಹೇಳಿದ್ರೆ ದಮ್ಮಡಿ ತಂತಿವಾದ್ಯ ನುಡಿಸಿ, ಹಾಡುಹಾಡಿಸಿ ಸಂತೋಷವಾಗಿ ನಿನ್ನನ್ನ ಕಳಿಸ್ಕೊಡ್ತಿದ್ದೆ. 28 ನನ್ನ ಮೊಮ್ಮಕ್ಕಳಿಗೆ, ಹೆಣ್ಣುಮಕ್ಕಳಿಗೆ ಮುತ್ತು ಕೊಡೋಕ್ಕೂ ನೀನು ನನಗೆ ಅವಕಾಶ ಕೊಡಲಿಲ್ಲ. ನೀನು ಮೂರ್ಖನ ಹಾಗೆ ನಡ್ಕೊಂಡೆ. 29 ನಾನು ಮನಸ್ಸು ಮಾಡಿದ್ರೆ ನಿನಗೆ ಏನು ಬೇಕಾದ್ರೂ ಮಾಡಬಹುದು. ಆದ್ರೆ ನಿನ್ನೆ ರಾತ್ರಿ ನಿನ್ನ ತಂದೆಯ ದೇವರು ನನ್ನ ಕನಸಲ್ಲಿ ಬಂದು ‘ಹುಷಾರ್! ನೀನು ಯಾಕೋಬನ ಹತ್ರ ನೋಡಿ ಮಾತಾಡು’*+ ಅಂದನು. 30 ನೀನೇನೋ ನಿನ್ನ ತಂದೆ ಮನೆಗೆ ಹೋಗೋಕೆ ತುಂಬ ಆಸೆಪಡ್ತಾ ಇದ್ದಿದ್ರಿಂದ ಹೋದೆ, ಸರಿ. ಆದ್ರೆ ನನ್ನ ದೇವರುಗಳನ್ನ ಯಾಕೆ ಕದ್ದುಕೊಂಡು ಹೋದೆ?”+ ಅಂದ.
31 ಅದಕ್ಕೆ ಯಾಕೋಬ ಲಾಬಾನನಿಗೆ “ನೀನು ನಿನ್ನ ಹೆಣ್ಣುಮಕ್ಕಳನ್ನ ಬಲವಂತವಾಗಿ ನನ್ನಿಂದ ಕಿತ್ಕೊಳ್ತೀಯ ಅಂತ ಹೆದರಿ ನಿನಗೆ ಹೇಳದೆ ಹಾಗೇ ಬಂದೆ. 32 ನಿನ್ನ ದೇವರುಗಳು ಯಾರ ಹತ್ರ ಸಿಗುತ್ತೋ ಅವರನ್ನ ಕೊಲ್ಲು. ನಮ್ಮ ಸಂಬಂಧಿಕರ ಮುಂದೆನೇ ನನ್ನ ಹತ್ರ ಇರೋದನ್ನೆಲ್ಲ ಪರೀಕ್ಷೆ ಮಾಡು, ನನ್ನ ಹತ್ರ ಏನಾದ್ರೂ ಸಿಕ್ಕಿದ್ರೆ ತಗೋ” ಅಂದ. ಆ ಮೂರ್ತಿಗಳನ್ನ ಕದ್ದಿದ್ದು ರಾಹೇಲ ಅಂತ ಯಾಕೋಬನಿಗೆ ಗೊತ್ತಿರಲಿಲ್ಲ. 33 ಆಗ ಲಾಬಾನ ಯಾಕೋಬನ ಡೇರೆಗೆ, ಲೇಯಳ ಡೇರೆಗೆ, ಇಬ್ರು ದಾಸಿಯರ+ ಡೇರೆಗೆ ಹೋಗಿ ಹುಡುಕಿದ. ಆದ್ರೆ ಅವನಿಗೆ ಆ ಮೂರ್ತಿಗಳು ಸಿಗಲಿಲ್ಲ. ಆಮೇಲೆ ಅವನು ಲೇಯಳ ಡೇರೆಯಿಂದ ಹೊರಗೆ ಬಂದು ರಾಹೇಲಳ ಡೇರೆಗೆ ಹೋದ. 34 ಅಷ್ಟರೊಳಗೆ ರಾಹೇಲ ಆ ಮನೆದೇವರುಗಳ ಮೂರ್ತಿಗಳನ್ನ ತಗೊಂಡು ಒಂಟೆ ಮೇಲಿದ್ದ ಸ್ತ್ರೀಯರ ಬುಟ್ಟಿ ಒಳಗಿಟ್ಟು ಅದ್ರ ಮೇಲೆ ಕೂತಿದ್ದಳು. ಲಾಬಾನ ಡೇರೆಯಲ್ಲೆಲ್ಲ ಎಷ್ಟು ಹುಡುಕಿದ್ರೂ ಅವನಿಗೆ ಅವು ಸಿಗ್ಲೇ ಇಲ್ಲ. 35 ಆಗ ಅವಳು “ಅಪ್ಪ, ನನ್ನ ಮೇಲೆ ಕೋಪ ಮಾಡ್ಕೊಬೇಡ. ನನಗೆ ಮುಟ್ಟು ಆಗಿದ್ರಿಂದ ನಿನ್ನ ಮುಂದೆ ಎದ್ದು ನಿಲ್ಲೋಕೆ ಆಗ್ತಿಲ್ಲ”+ ಅಂದಳು. ಅವನು ಎಷ್ಟು ಹುಡುಕಿದ್ರೂ ಮನೆದೇವರುಗಳ ಆ ಮೂರ್ತಿಗಳು ಸಿಗಲಿಲ್ಲ.+
36 ಆಗ ಯಾಕೋಬ ಲಾಬಾನನ ಮೇಲೆ ಕೋಪ ಮಾಡ್ಕೊಂಡು ಅವನನ್ನ ಬೈತಾ ಹೀಗಂದ: “ನಾನು ನಿನಗೇನು ದ್ರೋಹ ಮಾಡಿದೆ? ನಾನೇನೋ ದೊಡ್ಡ ಪಾಪ ಮಾಡಿದ ಹಾಗೆ ಅವಸರದಿಂದ ನನ್ನನ್ನ ಹುಡ್ಕೊಂಡು ಬಂದೆ. 37 ನೀನು ನನ್ನ ಎಲ್ಲ ವಸ್ತುಗಳಲ್ಲಿ ಹುಡುಕಿದಾಗ ನಿನ್ನದೇನಾದ್ರೂ ಸಿಕ್ತಾ? ಸಿಕ್ಕಿದ್ರೆ ಅದನ್ನ ನನ್ನವರ ಮುಂದೆ ನಿನ್ನವರ ಮುಂದೆ ತಂದಿಡು ನೋಡೋಣ. ಇವರೇ ನಮಗೆ ನ್ಯಾಯ ಹೇಳಲಿ. 38 ನಾನು ನಿನ್ನ ಹತ್ರ 20 ವರ್ಷ ದುಡಿದೆ. ಆ ಸಮಯದಲ್ಲಿ ಯಾವತ್ತೂ ನಿನ್ನ ಆಡು-ಕುರಿಗಳ ಗರ್ಭ ಹೋಗಲಿಲ್ಲ.+ ಒಂದು ಸಲನೂ ನಾನು ನಿನ್ನ ಟಗರುಗಳನ್ನ ಕೊಯ್ದು ತಿನ್ನಲಿಲ್ಲ. 39 ಕಾಡುಪ್ರಾಣಿಗಳು ನಿನ್ನ ಪ್ರಾಣಿಯನ್ನ ಕೊಂದಾಗ+ ನಾನು ಅದನ್ನ ನಿನ್ನ ಮುಂದೆ ತಂದು ತೋರಿಸಿ ‘ನನ್ನದೇನೂ ತಪ್ಪಿಲ್ಲ’ ಅಂತ ಹೇಳದೆ ನಾನೇ ಅದರ ನಷ್ಟ ತುಂಬ್ತಿದ್ದೆ. ಒಂದು ಪ್ರಾಣಿಯನ್ನ ಯಾರಾದ್ರೂ ಹಗಲಲ್ಲಾಗಲಿ ರಾತ್ರಿಯಲ್ಲಾಗಲಿ ಕದ್ದುಕೊಂಡು ಹೋದ್ರೆ ನಾನೇ ಆ ನಷ್ಟ ಕೊಡಬೇಕು ಅಂತ ನೀನು ಹೇಳ್ತಿದ್ದೆ. 40 ಹಗಲು ರಾತ್ರಿ ಅನ್ನದೆ ಬಿಸಿಲು ಚಳಿ ಅನ್ನದೆ ನಿನ್ನ ಹಿಂಡುಗಳನ್ನ ನೋಡ್ಕೊಂಡೆ. ಎಷ್ಟೋ ಸಾರಿ ನನಗೆ ನಿದ್ದೆ ಮಾಡಕ್ಕೂ ಆಗಲಿಲ್ಲ.+ 41 ಹೀಗೆ ನಿನ್ನ ಹತ್ರ ದುಡಿಯೋದ್ರಲ್ಲೇ 20 ವರ್ಷ ಕಳೆದುಹೋಯ್ತು. ನಿನ್ನ ಇಬ್ರು ಹೆಣ್ಣುಮಕ್ಕಳಿಗಾಗಿ 14 ವರ್ಷ, ನಿನ್ನ ಆಡು-ಕುರಿಗಳಿಗಾಗಿ 6 ವರ್ಷ ದುಡ್ದೆ. ನೀನು ಹತ್ತು ಸಲ ನನ್ನ ಸಂಬಳ ಬದಲಾಯಿಸಿದೆ.+ 42 ನನ್ನ ಅಜ್ಜ+ ಅಬ್ರಹಾಮನ ದೇವರು, ನನ್ನ ಅಪ್ಪ ಇಸಾಕ ಭಯಭಕ್ತಿಯಿಂದ+ ಆರಾಧಿಸೋ ದೇವರು ನನ್ನ ಜೊತೆ ಇಲ್ಲದೆ ಹೋಗಿದ್ರೆ ನೀನು ನನ್ನನ್ನ ಬರಿಗೈಯಲ್ಲಿ ಕಳಿಸಿಬಿಡ್ತಿದ್ದೆ. ನಾನು ಎಷ್ಟು ಕಷ್ಟಪಟ್ಟೆ, ಎಷ್ಟು ಶ್ರಮಪಟ್ಟು ದುಡಿದೆ ಅನ್ನೋದನ್ನ ದೇವರು ನೋಡಿದ್ದಾನೆ. ಅದಕ್ಕೇ ಆತನು ನಿನ್ನೆ ರಾತ್ರಿ ನಿನ್ನನ್ನ ಎಚ್ಚರಿಸಿದನು.”+
43 ಅದಕ್ಕೆ ಲಾಬಾನ ಯಾಕೋಬನಿಗೆ “ಈ ಹುಡುಗಿಯರು ನನ್ನ ಹೆಣ್ಣುಮಕ್ಕಳು. ಈ ಮಕ್ಕಳು ನನ್ನ ಮೊಮ್ಮಕ್ಕಳು. ಈ ಹಿಂಡೆಲ್ಲಾ ನನ್ನದೇ. ನಿನ್ನ ಕಣ್ಮುಂದೆ ಇರೋದೆಲ್ಲ ನಂದು, ನನ್ನ ಹೆಣ್ಣುಮಕ್ಕಳದ್ದು. ಹೀಗಿರುವಾಗ ಇವರಿಗಾಗಲಿ ಇವರ ಮಕ್ಕಳಿಗಾಗಲಿ ನಾನು ಕೆಟ್ಟದ್ದು ಮಾಡ್ತೀನಾ? 44 ಸರಿ ಬಾ, ನಾವಿಬ್ರು ಒಂದು ಒಪ್ಪಂದ ಮಾಡ್ಕೊಳ್ಳೋಣ. ಇದು ನಮ್ಮಿಬ್ರ ಮಧ್ಯ ಸಾಕ್ಷಿ ಆಗಿರಲಿ” ಅಂದ. 45 ಹಾಗಾಗಿ ಯಾಕೋಬ ಒಂದು ಕಲ್ಲು ತಗೊಂಡು ಕಂಬವಾಗಿ ನಿಲ್ಲಿಸಿದ.+ 46 ಆಮೇಲೆ ಅವನು ತನ್ನವರಿಗೆ “ಕಲ್ಲುಗಳನ್ನ ಕೂಡಿಸಿ” ಅಂದ. ಆಗ ಅವರು ಕಲ್ಲುಗಳನ್ನ ಕೂಡಿಸಿ ರಾಶಿ ಹಾಕಿದ್ರು. ಆಮೇಲೆ ಅವರು ಆ ಕಲ್ಲಿನ ರಾಶಿ ಹತ್ರ ಊಟ ಮಾಡಿದ್ರು. 47 ಆ ಕಲ್ಲಿನ ರಾಶಿಗೆ ಲಾಬಾನ ಯಗರಸಾಹದೂತ* ಅಂತ ಹೆಸರಿಟ್ಟ. ಯಾಕೋಬ ಅದಕ್ಕೆ ಗಲೇದ್* ಅಂತ ಹೆಸರಿಟ್ಟ.
48 ಆಗ ಲಾಬಾನ “ಇವತ್ತು ನನ್ನ ನಿನ್ನ ಮಧ್ಯೆ ಈ ಕಲ್ಲಿನ ರಾಶಿನೇ ಸಾಕ್ಷಿ ಆಗಿರಲಿ” ಅಂದ. ಹಾಗಾಗಿ ಅದಕ್ಕೆ ಗಲೇದ್+ 49 ಮತ್ತು ಕಾವಲುಗೋಪುರ* ಅಂತ ಹೆಸರು ಇಟ್ರು. ಯಾಕಂದ್ರೆ ಲಾಬಾನ ಯಾಕೋಬನಿಗೆ “ನಾವಿಬ್ರು ಬೇರೆ ಬೇರೆಯಾಗಿ ದೂರ ಹೋದ ಮೇಲೆ ನಾವು ಹೇಗೆ ನಡ್ಕೊಳ್ತೀವಿ ಅನ್ನೋದನ್ನ ಯೆಹೋವನೇ ನೋಡ್ಲಿ. 50 ನೀನು ನನ್ನ ಹೆಣ್ಣುಮಕ್ಕಳಿಗೆ ಕಷ್ಟ ಕೊಟ್ರೆ ಅಥವಾ ಬೇರೆ ಸ್ತ್ರೀಯರನ್ನ ಮದುವೆ ಆದ್ರೆ ನೆನಪಿಡು, ಯಾವ ಮನುಷ್ಯ ನೋಡದಿದ್ರೂ ನಮ್ಮಿಬ್ರ ಮಧ್ಯ ಸಾಕ್ಷಿಯಾಗಿರೋ ದೇವರು ಖಂಡಿತ ನೋಡ್ತಾನೆ” ಅಂದ. 51 ಅಲ್ಲದೆ ಅವನು ಯಾಕೋಬನಿಗೆ “ಈ ಕಲ್ಲಿನ ರಾಶಿಯನ್ನ, ನಿನ್ನ ನನ್ನ ಮಧ್ಯ ನಾನು ನಿಲ್ಲಿಸಿರೋ ಕಂಬವನ್ನ ನೋಡು. 52 ನಾನು ಈ ಕಲ್ಲಿನ ರಾಶಿಯನ್ನ, ಕಂಬವನ್ನ ದಾಟಿ ನಿನಗೆ ಹಾನಿಮಾಡೋಕೆ ಬರೋದಿಲ್ಲ. ನೀನು ಕೂಡ ಇವುಗಳನ್ನ ದಾಟಿ ನನಗೆ ಹಾನಿಮಾಡೋಕೆ ಬರಬಾರದು. ಇದಕ್ಕೆ ಈ ಕಲ್ಲಿನ ರಾಶಿ ಮತ್ತು ಕಂಬ ಸಾಕ್ಷಿ ಆಗಿರಲಿ.+ 53 ಅಬ್ರಹಾಮ+ ಮತ್ತು ನಾಹೋರರ ದೇವರು, ಅವರ ತಂದೆಯ ದೇವರು ನಮ್ಮಿಬ್ರ ಮಧ್ಯ ನ್ಯಾಯತೀರಿಸಲಿ” ಅಂದ. ಆಮೇಲೆ ಯಾಕೋಬ ತನ್ನ ತಂದೆ ಇಸಾಕ ಭಯಭಕ್ತಿಯಿಂದ+ ಆರಾಧಿಸೋ ದೇವರ ಮುಂದೆ ಆಣೆ ಮಾಡಿದ.
54 ಇದಾದ ಮೇಲೆ ಯಾಕೋಬ ಬೆಟ್ಟದ ಮೇಲೆ ಬಲಿ ಅರ್ಪಿಸಿದ, ತನ್ನ ಸಂಬಂಧಿಕರನ್ನ ಊಟಕ್ಕೆ ಕರೆದ. ಅವರು ಊಟ ಮಾಡಿ ಆ ರಾತ್ರಿ ಬೆಟ್ಟದಲ್ಲೇ ಉಳ್ಕೊಂಡ್ರು. 55 ಲಾಬಾನ ಬೆಳಿಗ್ಗೆ ಬೇಗ ಎದ್ದು ತನ್ನ ಮೊಮ್ಮಕ್ಕಳಿಗೂ+ ಹೆಣ್ಣುಮಕ್ಕಳಿಗೂ ಮುತ್ತು ಕೊಟ್ಟು ಅವರನ್ನ ಆಶೀರ್ವದಿಸಿ+ ಮನೆಗೆ ಹೋದ.+
32 ಆಮೇಲೆ ಯಾಕೋಬ ಪ್ರಯಾಣ ಮುಂದುವರಿಸಿದ. ದಾರಿಯಲ್ಲಿ ದೇವದೂತರು ಅವನನ್ನ ಭೇಟಿ ಆದ್ರು. 2 ಅವರನ್ನ ನೋಡಿದ ತಕ್ಷಣ ಯಾಕೋಬ “ಇದು ದೇವರ ಪಾಳೆಯ!” ಅಂದ. ಹಾಗಾಗಿ ಆ ಸ್ಥಳಕ್ಕೆ ಮಹನಯಿಮ್* ಅಂತ ಹೆಸರಿಟ್ಟ.
3 ಆಮೇಲೆ ಯಾಕೋಬ ಸೇಯೀರ್‌ನಲ್ಲಿ+ ಅಂದ್ರೆ ಎದೋಮ್+ ಪ್ರದೇಶದಲ್ಲಿ ವಾಸಿಸ್ತಿದ್ದ ತನ್ನ ಅಣ್ಣ ಏಸಾವನಿಗೆ ಸುದ್ದಿ ಮುಟ್ಟಿಸೋಕೆ ತನ್ನ ಮುಂದೆ ಕೆಲವರನ್ನ ಕಳಿಸಿದ. 4 ಅವರಿಗೆ ಹೀಗೆ ಆಜ್ಞೆ ಕೊಟ್ಟ: “ನೀವು ನನ್ನ ಸ್ವಾಮಿ ಏಸಾವನ ಹತ್ರ ಹೋಗಿ ನಾನು ಹೇಳೋದನ್ನ ತಿಳಿಸಿ. ಅದೇನಂದ್ರೆ ‘ನಿನ್ನ ಸೇವಕ ಯಾಕೋಬ ಹೀಗೆ ಹೇಳಿದ್ದಾನೆ, ನಾನು ಇಷ್ಟು ವರ್ಷ ಲಾಬಾನನ ಹತ್ರ ಇದ್ದೆ.*+ 5 ಹೋರಿ ಕತ್ತೆ ಕುರಿಗಳನ್ನ, ಸೇವಕ ಸೇವಕಿಯರನ್ನ ಸಂಪಾದಿಸಿದ್ದೀನಿ.+ ಸ್ವಾಮಿ, ನನಗೆ ದಯೆ ತೋರಿಸಿ ಅಂತ ನಿನ್ನ ಹತ್ರ ಬೇಡ್ಕೊಳ್ತೀನಿ. ಹಾಗಾಗಿ ನಾನು ಬರ್ತಾ ಇರೋ ಸುದ್ದಿಯನ್ನ ಹೇಳಿ ಕಳಿಸ್ತಾ ಇದ್ದೀನಿ.’”
6 ಸುದ್ದಿ ಮುಟ್ಟಿಸೋಕೆ ಹೋದವರು ಹಿಂದೆ ಬಂದು ಯಾಕೋಬನಿಗೆ “ನಾವು ನಿನ್ನ ಅಣ್ಣ ಏಸಾವನನ್ನ ಭೇಟಿಯಾದ್ವಿ. ಅವನು ನಿನ್ನನ್ನ ನೋಡೋಕೆ ಬರ್ತಿದ್ದಾನೆ. ಅವನ ಜೊತೆ 400 ಗಂಡಸರು ಕೂಡ ಬರ್ತಿದ್ದಾರೆ”+ ಅಂದ್ರು. 7 ಇದನ್ನ ಕೇಳಿದಾಗ ಯಾಕೋಬನಿಗೆ ತುಂಬ ಹೆದರಿಕೆ ಆಯ್ತು. ಏನಾಗುತ್ತೋ ಅಂತ ಚಿಂತೆಯಲ್ಲಿ ಮುಳುಗಿದ.+ ಹಾಗಾಗಿ ಅವನು ತನ್ನ ಜೊತೆಗಿದ್ದ ಜನರನ್ನ, ಆಡು-ಕುರಿ ದನ-ಹೋರಿ ಒಂಟೆಗಳನ್ನ ಎರಡು ಗುಂಪುಗಳಾಗಿ ಮಾಡಿದ. 8 ಒಂದುವೇಳೆ ಏಸಾವ ಒಂದು ಗುಂಪಿನ ಮೇಲೆ ದಾಳಿ ಮಾಡಿದ್ರೆ ಇನ್ನೊಂದು ಗುಂಪು ತಪ್ಪಿಸ್ಕೊಂಡು ಹೋಗೋಕೆ ಆಗುತ್ತೆ ಅಂತ ನೆನಸಿದ.
9 ಆಮೇಲೆ ಯಾಕೋಬ ದೇವರಿಗೆ ಹೀಗೆ ಪ್ರಾರ್ಥಿಸಿದ: “ನನ್ನ ಅಜ್ಜ ಅಬ್ರಹಾಮನ, ನನ್ನ ತಂದೆ ಇಸಾಕನ ದೇವರಾದ ಯೆಹೋವನೇ, ನಾನು ನನ್ನ ದೇಶಕ್ಕೆ ನನ್ನ ಸಂಬಂಧಿಕರ ಹತ್ರ ವಾಪಸ್ ಹೋಗಬೇಕಂತ ನೀನೇ ಹೇಳಿದ್ಯಲ್ಲಾ. ನನಗೆ ಒಳ್ಳೇದನ್ನ ಮಾಡ್ತೀನಂತ ಮಾತು ಕೊಟ್ಟಿಯಲ್ಲಾ.+ 10 ನೀನು ನಿನ್ನ ಸೇವಕನಾದ ನನಗೆ ತೋರಿಸಿದ ಶಾಶ್ವತ ಪ್ರೀತಿ, ನಂಬಿಗಸ್ತಿಕೆಗೆ+ ನಾನು ಯೋಗ್ಯನಲ್ಲ. ನಾನು ಈ ಯೋರ್ದನ್ ನದಿ ದಾಟಿದಾಗ ನನ್ನ ಹತ್ರ ಒಂದು ಕೋಲು ಮಾತ್ರ ಇತ್ತು. ಆದ್ರೆ ಈಗ ನನ್ನ ಹತ್ರ ಎಷ್ಟೊಂದು ಸಂಪತ್ತು ಇದೆ ಅಂದ್ರೆ ಎರಡು ದೊಡ್ಡ ಗುಂಪಿಗೆ ಒಡೆಯನಾಗಿದ್ದೀನಿ.+ 11 ಈಗ ದಯವಿಟ್ಟು ನನ್ನನ್ನ ಕಾಪಾಡು.+ ನನ್ನ ಅಣ್ಣ ಏಸಾವ ನನ್ನ ಮೇಲೆ, ನನ್ನ ಹೆಂಡತಿಯರ ಮೇಲೆ, ಮಕ್ಕಳ ಮೇಲೆ ದಾಳಿ ಮಾಡ್ತಾನೇನೋ ಅಂತ ಭಯ ಆಗ್ತಿದೆ.+ 12 ನೀನು ನನಗೆ ಖಂಡಿತ ಒಳ್ಳೇದು ಮಾಡ್ತೀಯ ಅಂತ, ನನ್ನ ಸಂತತಿಯನ್ನ ಸಮುದ್ರ ತೀರದಲ್ಲಿರೋ ಮರಳಿನ ಕಣಗಳ ತರ ಲೆಕ್ಕವಿಲ್ಲದಷ್ಟು ಮಾಡ್ತೀಯ ಅಂತ ಹೇಳಿದ್ಯಲ್ಲಾ.”+
13 ಯಾಕೋಬ ಆ ರಾತ್ರಿ ಅಲ್ಲೇ ಇದ್ದ. ಆಮೇಲೆ ಅವನು ಏಸಾವನಿಗೆ ಉಡುಗೊರೆ ಕೊಡೋಕೆ+ ತನ್ನ ಸೊತ್ತಿಂದ 14 200 ಹೆಣ್ಣು ಆಡು, 20 ಹೋತ, 200 ಹೆಣ್ಣು ಕುರಿ, 20 ಟಗರು, 15 30 ಹೆಣ್ಣು ಒಂಟೆ ಮತ್ತು ಅವುಗಳ ಮರಿಗಳು, 40 ದನ, 10 ಹೋರಿ, 20 ಹೆಣ್ಣು ಕತ್ತೆ, ಬೆಳೆದ 10 ಗಂಡು ಕತ್ತೆಗಳನ್ನ ಬೇರೆ ಮಾಡಿದ.+
16 ಅವನು ಒಂದಾದ ಮೇಲೆ ಒಂದು ಹಿಂಡನ್ನ ತನ್ನ ಸೇವಕರ ಕೈಗೆ ಒಪ್ಪಿಸಿ “ನೀವು ನನಗಿಂತ ಮುಂಚೆ ಹೋಗಿ ನದಿ ದಾಟಿ. ಪ್ರತಿ ಹಿಂಡಿನ ಮಧ್ಯ ಅಂತರ ಇರಲಿ” ಅಂದ. 17 ಅಲ್ಲದೆ ಮೊದಲನೇ ಸೇವಕನಿಗೆ “ಒಂದುವೇಳೆ ನನ್ನ ಅಣ್ಣ ಏಸಾವ ನಿನ್ನನ್ನ ಭೇಟಿಯಾಗಿ ‘ನಿನ್ನ ಯಜಮಾನ ಯಾರು? ನೀನು ಎಲ್ಲಿಗೆ ಹೋಗ್ತಿದ್ದೀಯ? ನಿನ್ನ ಮುಂದೆ ಇರೋ ಈ ಹಿಂಡು ಯಾರದ್ದು?’ ಅಂತ ಕೇಳಿದ್ರೆ 18 ‘ಇದೆಲ್ಲ ನಿನ್ನ ಸೇವಕ ಯಾಕೋಬನದ್ದು. ನನ್ನ ಸ್ವಾಮಿ ಏಸಾವ, ನನ್ನ ಯಜಮಾನ ಇವುಗಳನ್ನ ನಿನಗೆ ಉಡುಗೊರೆಯಾಗಿ ಕಳಿಸಿದ್ದಾನೆ.+ ಅವನು ಸಹ ನಮ್ಮ ಹಿಂದೆ ಬರ್ತಿದ್ದಾನೆ’ ಅಂತ ಹೇಳಬೇಕು” ಅಂದ. 19 ಅವನು ಎರಡನೆಯವನಿಗೆ, ಮೂರನೆಯವನಿಗೆ ಮತ್ತು ಹಿಂಡುಗಳ ಹಿಂದೆ ಹೋಗ್ತಿದ್ದ ಎಲ್ಲ ಸೇವಕರಿಗೆ ಹಾಗೇ ಆಜ್ಞೆ ಕೊಡ್ತಾ “ನೀವು ಏಸಾವನನ್ನ ಭೇಟಿಯಾದಾಗ ಇದೇ ತರ ಮಾತಾಡಬೇಕು. 20 ಅಲ್ಲದೆ ನೀವು ಅವನಿಗೆ ‘ನಿನ್ನ ಸೇವಕ ಯಾಕೋಬ ನಮ್ಮ ಹಿಂದೆ ಬರ್ತಿದ್ದಾನೆ’ ಅಂತ ಹೇಳಬೇಕು” ಅಂದ. ಯಾಕಂದ್ರೆ ‘ಈ ಉಡುಗೊರೆ ಮೊದ್ಲು ಕಳಿಸಿ ಅವನನ್ನ ಸಮಾಧಾನ ಮಾಡಿದ್ರೆ+ ಭೇಟಿಮಾಡಿದಾಗ ಅವನು ನನ್ನನ್ನ ಪ್ರೀತಿಯಿಂದ ಹತ್ರ ತಗೊಳ್ಳಬಹುದು’ ಅಂತ ಯಾಕೋಬ ಮನಸ್ಸಲ್ಲಿ ಅಂದ್ಕೊಂಡ. 21 ಹಾಗಾಗಿ ಸೇವಕರು ಉಡುಗೊರೆ ತಗೊಂಡು ಅವನಿಗಿಂತ ಮುಂಚೆ ಹೋಗಿ ನದಿ ದಾಟಿದ್ರು. ಆದ್ರೆ ಯಾಕೋಬ ಆ ರಾತ್ರಿ ಬಿಡಾರದಲ್ಲೇ ಇದ್ದ.
22 ಆ ರಾತ್ರಿ ಸ್ವಲ್ಪ ಸಮಯ ಆದ್ಮೇಲೆ ಅವನು ಎದ್ದು ತನ್ನ ಇಬ್ರು ಹೆಂಡತಿಯರನ್ನ,+ ಇಬ್ರು ಸೇವಕಿಯರನ್ನ,+ 11 ಗಂಡುಮಕ್ಕಳನ್ನ ಕರ್ಕೊಂಡು ಯಬ್ಬೋಕ್+ ನದಿಯನ್ನ* ಕಡಿಮೆ ನೀರಿದ್ದ ಕಡೆಯಿಂದ ದಾಟಿದ. 23 ಅವನು ಅವರನ್ನ ದಾಟಿಸಿದ ಮೇಲೆ ತನ್ನ ಉಳಿದ ಸ್ವತ್ತನ್ನೆಲ್ಲ ನದಿಯ ಆಕಡೆಗೆ ತಗೊಂಡು ಬಂದ.
24 ಕೊನೆಗೆ ಯಾಕೋಬ ಒಬ್ಬನೇ ಇದ್ದ. ಆಗ ಒಬ್ಬ ಪುರುಷ* ಅವನ ಜೊತೆ ಬೆಳಗಾಗೋ ತನಕ ಕುಸ್ತಿಮಾಡಿದ.+ 25 ಆ ಪುರುಷನಿಗೆ ತನ್ನಿಂದ ಅವನನ್ನ ಸೋಲಿಸೋಕೆ ಆಗ್ತಿಲ್ಲ ಅಂತ ಗೊತ್ತಾದಾಗ ಅವನ ತೊಡೆಯ ಸಂದನ್ನ* ಮುಟ್ಟಿದ. ಹಾಗಾಗಿ ಕುಸ್ತಿ ಮಾಡ್ತಾ ಇದ್ದಾಗ್ಲೇ ಯಾಕೋಬನ ತೊಡೆಯ ಸಂದು ತಪ್ಪಿತು.+ 26 ಆಮೇಲೆ ಆ ಪುರುಷ “ಬೆಳಗಾಗ್ತಾ ಇದೆ, ನನ್ನನ್ನ ಬಿಡು” ಅಂದ. ಅದಕ್ಕೆ ಯಾಕೋಬ “ಇಲ್ಲ, ನೀನು ನನ್ನನ್ನ ಆಶೀರ್ವದಿಸೋ ತನಕ ಬಿಡೋದಿಲ್ಲ”+ ಅಂದ. 27 ಆಗ ಆ ಪುರುಷ “ನಿನ್ನ ಹೆಸರೇನು?” ಅಂತ ಕೇಳಿದ. ಅದಕ್ಕವನು “ಯಾಕೋಬ” ಅಂದ. 28 ಆ ಪುರುಷ “ಇನ್ನು ಮೇಲೆ ನಿನ್ನ ಹೆಸ್ರು ಯಾಕೋಬ ಅಲ್ಲ. ಇಸ್ರಾಯೇಲ್.*+ ಯಾಕಂದ್ರೆ ನೀನು ದೇವರ ಜೊತೆ,+ ಮನುಷ್ಯರ ಜೊತೆ ಹೋರಾಡಿ ಕೊನೆಗೂ ಗೆದ್ದೆ” ಅಂದ. 29 ಯಾಕೋಬ ಆ ಪುರುಷನಿಗೆ “ದಯವಿಟ್ಟು ನಿನ್ನ ಹೆಸ್ರು ಹೇಳು” ಅಂದಾಗ ಅವನು “ಯಾಕೆ ನನ್ನ ಹೆಸರು ಕೇಳ್ತೀಯ?”+ ಅಂತ ಹೇಳಿದ. ಆಮೇಲೆ ಅವನು ಯಾಕೋಬನನ್ನ ಆಶೀರ್ವದಿಸಿದ. 30 ಆಗ ಯಾಕೋಬ “ನಾನು ದೇವರನ್ನ* ಕಣ್ಣಾರೆ ನೋಡಿದ್ದೀನಿ. ಆದ್ರೂ ನನ್ನ ಜೀವ ಉಳಿದಿದೆ”+ ಅಂತೇಳಿ ಆ ಜಾಗಕ್ಕೆ ಪೆನೀಯೇಲ್*+ ಅಂತ ಹೆಸರಿಟ್ಟ.
31 ಅವನು ಪೆನೀಯೇಲನ್ನ* ದಾಟಿದ ಕೂಡಲೇ ಸೂರ್ಯೋದಯ ಆಯ್ತು. ಸೊಂಟದ ಸಂದು ತಪ್ಪಿದ್ದರಿಂದ ಅವನು ಕುಂಟುತ್ತಾ ನಡಿತಿದ್ದ.+ 32 ಆ ಪುರುಷ ಯಾಕೋಬನ ಸೊಂಟದ ಸಂದಿನ ಮೇಲಿದ್ದ ಸ್ನಾಯುರಜ್ಜನ್ನ ಮುಟ್ಟಿದ್ರಿಂದ ಇಸ್ರಾಯೇಲ್ಯರು ಇವತ್ತಿಗೂ ಸೊಂಟದ ಸಂದಿನ ಮೇಲಿರೋ ಸ್ನಾಯುರಜ್ಜನ್ನ ತಿನ್ನಲ್ಲ.
33 ಯಾಕೋಬ ಕಣ್ಣೆತ್ತಿ ನೋಡಿದಾಗ ಏಸಾವ 400 ಗಂಡಸರ ಜೊತೆ ಬರ್ತಿರೋದು ಕಾಣಿಸ್ತು.+ ಹಾಗಾಗಿ ಅವನು ಲೇಯ, ರಾಹೇಲ, ಇಬ್ರು ಸೇವಕಿಯರಿಗೆ ಅವರವರ ಮಕ್ಕಳನ್ನ ಒಪ್ಪಿಸಿ ಅವರನ್ನ ಬೇರೆ ಬೇರೆ ಗುಂಪಾಗಿ ಮಾಡಿದ.+ 2 ಇಬ್ರು ಸೇವಕಿಯರು ತಮ್ಮ ಮಕ್ಕಳನ್ನ ಕರ್ಕೊಂಡು ಮುಂದೆ ಹೋಗಬೇಕು,+ ಅವರ ಹಿಂದೆ ಲೇಯ ಮತ್ತು ಅವಳ ಮಕ್ಕಳು ಹೋಗಬೇಕು,+ ಕೊನೇಲಿ ರಾಹೇಲ+ ಮತ್ತು ಯೋಸೇಫ ಹೋಗಬೇಕು ಅಂತ ಹೇಳಿದ. 3 ಆಮೇಲೆ ಅವರೆಲ್ಲರ ಮುಂದೆ ಯಾಕೋಬ ಹೋದ. ಅವನು ಅಣ್ಣನ ಹತ್ರ ಹೋದಾಗ ಏಳು ಸಲ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ.
4 ಏಸಾವ ಅವನ ಹತ್ರ ಓಡಿ ಬಂದು ಅವನನ್ನ ತಬ್ಬಿಕೊಂಡು ಮುತ್ತಿಟ್ಟ. ಇಬ್ಬರೂ ಜೋರಾಗಿ ಅತ್ರು. 5 ಏಸಾವ ಯಾಕೋಬನ ಹಿಂದೆ ಇದ್ದ ಸ್ತ್ರೀಯರನ್ನ ಮತ್ತು ಮಕ್ಕಳನ್ನ ನೋಡಿ “ಇವರೆಲ್ಲ ಯಾರು?” ಅಂತ ಕೇಳಿದ. ಅದಕ್ಕೆ ಅವನು “ನಿನ್ನ ಸೇವಕನಾದ ನನಗೆ ದೇವರು ದಯೆ ತೋರಿಸಿ ಕೊಟ್ಟ ಮಕ್ಕಳು”+ ಅಂದ. 6 ಆಗ ಸೇವಕಿಯರು ತಮ್ಮ ಮಕ್ಕಳ ಜೊತೆ ಮುಂದೆ ಬಂದು ಬಗ್ಗಿ ನಮಸ್ಕಾರ ಮಾಡಿದ್ರು. 7 ಲೇಯ ಸಹ ತನ್ನ ಮಕ್ಕಳ ಜೊತೆ ಮುಂದೆ ಬಂದಳು, ಅವರು ಬಗ್ಗಿ ನಮಸ್ಕಾರ ಮಾಡಿದ್ರು. ಆಮೇಲೆ ಯೋಸೇಫ ರಾಹೇಲ ಜೊತೆ ಮುಂದೆ ಬಂದ, ಅವರೂ ಬಗ್ಗಿ ನಮಸ್ಕಾರ ಮಾಡಿದ್ರು.+
8 ಆಗ ಏಸಾವ “ನೀನು ಸೇವಕರ ಜೊತೆ ಹಿಂಡುಗಳನ್ನ ಯಾಕೆ ಕಳಿಸಿಕೊಟ್ಟೆ?”+ ಅಂದಾಗ ಅವನು “ನೀನು ನನಗೆ ದಯೆ ತೋರಿಸಬೇಕು ಅಂತ ಸ್ವಾಮಿ”+ ಅಂದ. 9 ಅದಕ್ಕೆ ಏಸಾವ “ತಮ್ಮ, ನನಗೆ ಬೇಕಾದಷ್ಟು ಆಸ್ತಿ ಇದೆ.+ ನನಗೋಸ್ಕರ ಕಳಿಸಿದ್ದನ್ನೆಲ್ಲ ನೀನೇ ಇಟ್ಕೊ” ಅಂದ. 10 ಆದ್ರೆ ಯಾಕೋಬ “ದಯವಿಟ್ಟು ಹಾಗೆ ಹೇಳಬೇಡ. ನಿನಗೆ ನನ್ನ ಮೇಲೆ ದಯೆ ಇದ್ರೆ ನಾನು ಕೊಡೋ ಈ ಉಡುಗೊರೆ ಸ್ವೀಕರಿಸಬೇಕು. ನಿನ್ನನ್ನ ನೋಡಬೇಕು ಅನ್ನೋ ಆಸೆಯಿಂದ ಇದನ್ನೆಲ್ಲ ತಂದಿದ್ದೀನಿ. ಈಗ ನೀನು ನನ್ನನ್ನ ಸಂತೋಷದಿಂದ ಬರಮಾಡ್ಕೊಂಡಿದ್ದೀಯ.+ ನಿನ್ನನ್ನ ನೋಡಿದ್ದು ದೇವರನ್ನ ನೋಡಿದ ಹಾಗೆ ಆಯ್ತು. 11 ದೇವರ ದಯೆಯಿಂದ ನನಗೆ ಯಾವುದಕ್ಕೂ ಕಡಿಮೆ ಇಲ್ಲ.+ ನಿನಗೆ ಒಳ್ಳೆಯದಾಗಲಿ ಅಂತ ಹಾರೈಸ್ತಾ ಈ ಉಡುಗೊರೆ ಕೊಟ್ಟಿದ್ದೀನಿ.+ ಹಾಗಾಗಿ ದಯವಿಟ್ಟು ತಗೊ” ಅಂದ. ಅವನು ತುಂಬ ಒತ್ತಾಯ ಮಾಡಿದ್ರಿಂದ ಏಸಾವ ಅದನ್ನ ತಗೊಂಡ.
12 ಆಮೇಲೆ ಏಸಾವ “ಬಾ, ನಾವು ಪ್ರಯಾಣ ಮುಂದುವರಿಸೋಣ. ನಾನು ನಿನ್ನ ಮುಂದೆ ಮುಂದೆ ಹೋಗ್ತಾ ಇರ್ತಿನಿ” ಅಂದ. 13 ಆದ್ರೆ ಯಾಕೋಬ “ಸ್ವಾಮಿ, ನನ್ನ ಮಕ್ಕಳು ತುಂಬ ಚಿಕ್ಕವರು.+ ಅಲ್ಲದೆ ನನ್ನ ಹತ್ರ ಇರೋ ಕುರಿಗಳಿಗೆ ಮರಿಗಳಿವೆ, ದನಗಳಿಗೆ ಕರುಗಳಿವೆ. ಒಂದೇ ಒಂದು ದಿನ ಅವುಗಳನ್ನ ಬೇಗ ಬೇಗ ಓಡಿಸ್ಕೊಂಡು ಬಂದ್ರೂ ಇಡೀ ಹಿಂಡು ಸತ್ತು ಹೋಗುತ್ತೆ. 14 ಹಾಗಾಗಿ ಸ್ವಾಮಿ ದಯವಿಟ್ಟು ಈ ಸೇವಕನಿಗಿಂತ ಮುಂಚೆ ಪ್ರಯಾಣ ಬೆಳೆಸಬಹುದು. ನಾನು ನನ್ನ ಜೊತೆ ಇರೋ ಪ್ರಾಣಿಗಳ ನಡಿಗೆಗೆ ಮತ್ತು ನನ್ನ ಮಕ್ಕಳ ನಡಿಗೆಗೆ ಸರಿಯಾಗಿ ನಿಧಾನವಾಗಿ ನಡಿತಾ ನನ್ನ ಸ್ವಾಮಿ ವಾಸವಾಗಿರೋ ಸೇಯೀರಿಗೆ ಬರ್ತಿನಿ”+ ಅಂದ. 15 ಆಗ ಏಸಾವ “ಸರಿ, ಹಾಗಾದ್ರೆ ನನ್ನ ಜನರಲ್ಲಿ ಕೆಲವರನ್ನ ನಿನ್ನ ಹತ್ರ ಬಿಟ್ಟು ಹೋಗ್ತೀನಿ” ಅಂದ. ಅದಕ್ಕೆ ಯಾಕೋಬ “ಅದೆಲ್ಲ ಯಾಕೆ? ನಿನ್ನ ದಯೆ ನನ್ನ ಮೇಲಿದ್ರೆ ಅಷ್ಟೇ ಸಾಕು” ಅಂದ. 16 ಹಾಗಾಗಿ ಏಸಾವ ಆ ದಿನ ಸೇಯೀರಿಗೆ ಹೊರಟ.
17 ಯಾಕೋಬ ಪ್ರಯಾಣ ಮಾಡಿ ಸುಕ್ಕೋತಿಗೆ ಬಂದ.+ ಅಲ್ಲಿ ಅವನು ತನಗೋಸ್ಕರ ಒಂದು ಮನೆ ಕಟ್ಟಿದ. ಪ್ರಾಣಿಗಳಿಗಾಗಿ ಚಪ್ಪರಗಳನ್ನ ಹಾಕಿದ. ಹಾಗಾಗಿ ಅವನು ಆ ಜಾಗಕ್ಕೆ ಸುಕ್ಕೋತ್* ಅನ್ನೋ ಹೆಸರಿಟ್ಟ.
18 ಯಾಕೋಬ ಪದ್ದನ್-ಅರಾಮಿನಿಂದ+ ಹೋದ ಮೇಲೆ ಕಾನಾನ್ ದೇಶದ ಶೆಕೆಮ್+ ಪಟ್ಟಣಕ್ಕೆ ಸುರಕ್ಷಿತವಾಗಿ ಬಂದು ಮುಟ್ಟಿದ.+ ಆ ಪಟ್ಟಣದ ಹತ್ರ ಅವನು ಡೇರೆ ಹಾಕಿದ. 19 ಆಮೇಲೆ ಅವನು ತಾನು ಡೇರೆ ಹಾಕಿದ್ದ ಜಮೀನಿನ ಒಂದು ಭಾಗ ಖರೀದಿಸಿದ. ಅದನ್ನ ಅವನು 100 ಬೆಳ್ಳಿ ತುಂಡುಗಳನ್ನ ಕೊಟ್ಟು ಹಮೋರನ ಮಕ್ಕಳಿಂದ ತಗೊಂಡ.+ ಹಮೋರನ ಒಬ್ಬ ಮಗನ ಹೆಸ್ರು ಶೆಕೆಮ್. 20 ಯಾಕೋಬ ಅಲ್ಲಿ ಒಂದು ಯಜ್ಞವೇದಿ ಕಟ್ಟಿ ಅದಕ್ಕೆ ‘ದೇವರು, ಇಸ್ರಾಯೇಲನ ದೇವರು’* ಅಂತ ಹೆಸರಿಟ್ಟ.+
34 ಯಾಕೋಬನಿಗೆ ಲೇಯಳಿಂದ ಹುಟ್ಟಿದ ದೀನ+ ಆ ದೇಶದ ಯುವತಿರ ಜೊತೆ ಸಮಯ ಕಳೆಯೋಕೆ* ಹೋಗ್ತಿದ್ದಳು.+ 2 ಆ ದೇಶದ ಪ್ರಧಾನರಲ್ಲಿ ಹಿವ್ವಿಯನಾದ+ ಹಮೋರನೂ ಒಬ್ಬ. ಅವನ ಮಗ ಶೆಕೆಮನ ಕಣ್ಣು ಅವಳ ಮೇಲೆ ಬಿತ್ತು. ಒಂದಿನ ಅವನು ಅವಳನ್ನ ತಗೊಂಡು ಹೋಗಿ ಅತ್ಯಾಚಾರ ಮಾಡಿದ. 3 ಆಮೇಲೆ ದೀನಳನ್ನ ತುಂಬ ಪ್ರೀತಿಸೋಕೆ ಶುರು ಮಾಡಿದ. ಅವನ ಮನಸ್ಸೆಲ್ಲಾ ಅವಳೇ ಇದ್ದಳು. ಯಾಕೋಬನ ಮಗಳಾದ ದೀನಳ ಮನಸ್ಸು ಗೆಲ್ಲೋಕೆ ಅವನು ಪ್ರೀತಿಯ ಮಾತುಗಳನ್ನಾಡಿದ. 4 ಕೊನೆಗೆ ಶೆಕೆಮ ತನ್ನ ಅಪ್ಪ ಹಮೋರನಿಗೆ+ “ನೀನು ಹೇಗಾದ್ರೂ ಈ ಹುಡುಗಿಯನ್ನ ನನಗೆ ಮದುವೆ ಮಾಡಿಸು” ಅಂದ.
5 ಶೆಕೆಮ ದೀನಳನ್ನ ಕೆಡಿಸಿದ್ದಾನೆ ಅಂತ ಅವಳ ಅಪ್ಪ ಯಾಕೋಬನಿಗೆ ಗೊತ್ತಾಯ್ತು. ಆಗ ಅವನ ಗಂಡುಮಕ್ಕಳು ಬಯಲಲ್ಲಿ ಕುರಿ ಮೇಯಿಸ್ತಿದ್ರು. ಹಾಗಾಗಿ ಅವರು ಬರೋ ತನಕ ಯಾಕೋಬ ಸುಮ್ಮನಿದ್ದ. 6 ಆಮೇಲೆ ಶೆಕೆಮನ ಅಪ್ಪ ಹಮೋರ ಯಾಕೋಬನ ಹತ್ರ ಮಾತಾಡೋಕೆ ಬಂದ. 7 ಯಾಕೋಬನ ಗಂಡುಮಕ್ಕಳಿಗೆ ತಮ್ಮ ತಂಗಿಗೆ ಏನಾಯ್ತು ಅಂತ ಗೊತ್ತಾದ ತಕ್ಷಣ ಅವರು ಬಯಲಿಂದ ಹೊರಟು ಬಂದ್ರು. ಶೆಕೆಮ ಯಾಕೋಬನ ಮಗಳನ್ನ ಕೆಡಿಸಿ+ ಕೆಟ್ಟ ಕೆಲಸ ಮಾಡಿದ್ದ,+ ಹೀಗೆ ಇಸ್ರಾಯೇಲ್ಯರನ್ನ ಅವಮಾನ ಮಾಡಿದ್ದ. ಹಾಗಾಗಿ ಯಾಕೋಬನ ಗಂಡುಮಕ್ಕಳು ನೊಂದುಕೊಂಡ್ರು, ಅವರಿಗೆ ತುಂಬ ಕೋಪ ಬಂತು.
8 ಹಮೋರ ಅವರಿಗೆ “ನನ್ನ ಮಗ ಶೆಕೆಮನಿಗೆ ನಿಮ್ಮ ಹುಡುಗಿ ಅಂದ್ರೆ ಪ್ರಾಣ. ದಯವಿಟ್ಟು ಅವಳನ್ನ ಅವನಿಗೆ ಮದುವೆ ಮಾಡ್ಕೊಡಿ. 9 ನಿಮ್ಮ ಹೆಣ್ಣುಮಕ್ಕಳನ್ನ ನಮಗೆ ಕೊಡ್ತಾ, ನಮ್ಮ ಹೆಣ್ಣುಮಕ್ಕಳನ್ನ ನೀವು ತಗೊಳ್ತಾ ಬೀಗರಾಗಿರೋಣ.+ 10 ಈ ದೇಶವೆಲ್ಲ ನಿಮ್ಮ ಮುಂದಿದೆ. ನೀವು ನಮ್ಮ ಜೊತೆಯಲ್ಲೇ ವಾಸಿಸಬಹುದು. ಇಲ್ಲಿ ವ್ಯಾಪಾರ ಮಾಡಿ ಇಲ್ಲೇ ಇರಬಹುದು” ಅಂದ. 11 ಆಮೇಲೆ ಶೆಕೆಮ ದೀನಳ ಅಪ್ಪ ಮತ್ತು ಅಣ್ಣಂದಿರಿಗೆ “ನಿಮ್ಮ ಹುಡುಗಿಯನ್ನ ನನಗೆ ಮದುವೆ ಮಾಡಿ ಕೊಡೋಕೆ ದಯವಿಟ್ಟು ಒಪ್ಕೊಳ್ಳಿ. ನೀವೇನ್ ಕೇಳಿದ್ರೂ ನಾನು ಕೊಡ್ತೀನಿ. 12 ಎಷ್ಟು ಬೇಕಾದ್ರೂ ವಧುದಕ್ಷಿಣೆ ಕೇಳಿ, ಏನು ಬೇಕಾದ್ರೂ ಉಡುಗೊರೆ ಕೇಳಿ,+ ಕೊಡ್ತೀನಿ. ನಿಮ್ಮ ಹುಡುಗಿಯನ್ನ ನನಗೆ ಮದುವೆ ಮಾಡಿ ಕೊಟ್ರೆ ಅಷ್ಟೇ ಸಾಕು” ಅಂದ.
13 ಶೆಕೆಮ ದೀನಳನ್ನ ಕೆಡಿಸಿದ್ರಿಂದ ಅವಳ ಅಣ್ಣಂದಿರು ಶೆಕೆಮ, ಅವನ ತಂದೆ ಹಮೋರನ ವಿರುದ್ಧ ಕುತಂತ್ರ ಮಾಡಿದ್ರು. 14 ಹಾಗಾಗಿ ಅವರು “ಸುನ್ನತಿ ಆಗಿಲ್ಲದವನಿಗೆ ನಮ್ಮ ತಂಗಿಯನ್ನ ಕೊಡೋಕೆ ಆಗೋದಿಲ್ಲ.+ ಕೊಟ್ರೆ ಅದು ನಮಗೆ ಅವಮಾನ. 15 ನಿಮ್ಮಲ್ಲಿರೋ ಗಂಡಸರೆಲ್ಲ ನಮ್ಮ ಹಾಗೆ ಸುನ್ನತಿ ಮಾಡಿಸ್ಕೊಳ್ಳಬೇಕು.+ ಇದಕ್ಕೆ ಒಪ್ಪಿದ್ರೆ ಮಾತ್ರ ನಮ್ಮ ತಂಗಿಯನ್ನ ಕೊಡ್ತೀವಿ. 16 ನಮ್ಮ ಹೆಣ್ಣುಮಕ್ಕಳನ್ನ ನಿಮಗೆ ಕೊಡ್ತೀವಿ, ನಿಮ್ಮ ಹೆಣ್ಣುಮಕ್ಕಳನ್ನ ನಾವು ತಗೊಳ್ತೀವಿ. ಅಲ್ಲದೆ ನಿಮ್ಮ ಜೊತೆ ವಾಸಿಸ್ತಾ ಒಂದೇ ಕುಲವಾಗಿ ಇರ್ತಿವಿ. 17 ಆದ್ರೆ ನೀವು ನಮ್ಮ ಮಾತಿಗೆ ಒಪ್ಪದೆ ಸುನ್ನತಿ ಮಾಡ್ಕೊಳ್ಳದಿದ್ರೆ ನಾವು ನಮ್ಮ ಹುಡುಗಿಯನ್ನ ಕರ್ಕೊಂಡು ಹೊರಟು ಹೋಗ್ತೀವಿ” ಅಂದ್ರು.
18 ಅವರು ಹೇಳಿದ್ದು ಹಮೋರನಿಗೂ+ ಅವನ ಮಗ ಶೆಕೆಮನಿಗೂ+ ಸರಿ ಅಂತ ಅನಿಸ್ತು. 19 ಅವರು ಹೇಳಿದ ತರ ಮಾಡೋಕೆ ಆ ಯುವಕ ತಡಮಾಡಲಿಲ್ಲ.+ ಯಾಕಂದ್ರೆ ಅವನು ಯಾಕೋಬನ ಮಗಳನ್ನ ತುಂಬ ಇಷ್ಟಪಟ್ಟಿದ್ದ. ಅಷ್ಟೇ ಅಲ್ಲ ಅವನ ತಂದೆ ಮನೆಯಲ್ಲಿ ಅವನಿಗೆ ಎಲ್ಲರಿಗಿಂತ ಹೆಚ್ಚಾಗಿ ಗೌರವ ಇತ್ತು.
20 ಹಮೋರ ಮತ್ತು ಅವನ ಮಗ ಶೆಕೆಮ ಪಟ್ಟಣದ ಬಾಗಿಲಿಗೆ ಹೋಗಿ ಪಟ್ಟಣದವರಿಗೆ+ 21 “ಈ ಜನ್ರಿಗೆ ನಮ್ಮ ಜೊತೆ ಶಾಂತಿಯಿಂದ ಇರೋಕೆ ಇಷ್ಟ ಇದೆ. ಅವರು ನಮ್ಮ ದೇಶದಲ್ಲೇ ವಾಸಿಸ್ತಾ ವ್ಯಾಪಾರ ಮಾಡಲಿ. ಹೇಗೂ ಈ ದೇಶ ತುಂಬ ದೊಡ್ಡದಾಗಿದೆಯಲ್ಲಾ. ಅವರು ಇಲ್ಲೇ ಇದ್ರೆ ನಾವು ಅವರ ಹೆಣ್ಣುಮಕ್ಕಳನ್ನ ಮದುವೆ ಮಾಡ್ಕೊಳ್ಳಬಹುದು. ನಮ್ಮ ಹೆಣ್ಣುಮಕ್ಕಳನ್ನ ಅವರಿಗೆ ಕೊಡಬಹುದು.+ 22 ಆದ್ರೆ ನಮ್ಮಲ್ಲಿರೋ ಎಲ್ಲ ಗಂಡಸರು ಅವರ ಹಾಗೆ ಸುನ್ನತಿ ಮಾಡ್ಕೊಳ್ಳಬೇಕಂತ ಅವರು ಹೇಳ್ತಿದ್ದಾರೆ.+ ಆಗ ಮಾತ್ರ ಅವರು ನಮ್ಮ ಜೊತೆ ವಾಸಿಸ್ತಾ ಒಂದೇ ಕುಲ ಆಗಿರೋಕೆ ಒಪ್ತಾರೆ. 23 ಆಗ ಅವರ ಎಲ್ಲ ಆಸ್ತಿಪಾಸ್ತಿ ಸಂಪತ್ತು ಪ್ರಾಣಿಗಳು ನಮ್ಮದಾಗುತ್ತೆ. ಹಾಗಾಗಿ ಅವರ ಮಾತಿಗೆ ಒಪ್ಕೊಳ್ಳೋಣ. ಅವರು ನಮ್ಮ ಜೊತೆ ವಾಸ ಮಾಡಲಿ” ಅಂದ್ರು. 24 ಆ ಪಟ್ಟಣದವರೆಲ್ಲ ಅವರ ಮಾತಿಗೆ ಒಪ್ಪಿದ್ರು. ಅಲ್ಲಿನ ಗಂಡಸರೆಲ್ಲ ಸುನ್ನತಿ ಮಾಡ್ಕೊಂಡ್ರು.
25 ಆದ್ರೆ ಮೂರನೇ ದಿನ ಗಂಡಸರೆಲ್ಲ ಇನ್ನೂ ತುಂಬ ನೋವಲ್ಲಿದ್ದಾಗ ಯಾಕೋಬನ ಗಂಡುಮಕ್ಕಳಲ್ಲಿ ಇಬ್ರು ಅಂದ್ರೆ ದೀನಳ ಅಣ್ಣಂದಿರಾದ+ ಸಿಮೆಯೋನ ಮತ್ತು ಲೇವಿ ಕತ್ತಿ ಹಿಡ್ಕೊಂಡು ಪಟ್ಟಣದೊಳಗೆ ಹೋದ್ರು. ಅವರ ಮೇಲೆ ಯಾರಿಗೂ ಅನುಮಾನ ಬರಲಿಲ್ಲ. ಅವರು ಅಲ್ಲಿದ್ದ ಎಲ್ಲ ಗಂಡಸರನ್ನ ಕೊಂದು ಹಾಕಿದ್ರು.+ 26 ಅವರು ಹಮೋರನನ್ನ, ಅವನ ಮಗ ಶೆಕೆಮನನ್ನ ಕತ್ತಿಯಿಂದ ಕೊಂದು ದೀನಳನ್ನ ಶೆಕೆಮನ ಮನೆಯಿಂದ ಕರ್ಕೊಂಡು ಹೋದ್ರು. 27 ಆ ಗಂಡಸರೆಲ್ಲ ಸತ್ತ ಮೇಲೆ ಯಾಕೋಬನ ಬೇರೆ ಗಂಡುಮಕ್ಕಳು ಅಲ್ಲಿಗೆ ಬಂದು ಶೆಕೆಮ ತಮ್ಮ ತಂಗಿಯನ್ನ ಕೆಡಿಸಿದ್ದಕ್ಕಾಗಿ+ ಆ ಪಟ್ಟಣ ಲೂಟಿ ಮಾಡಿದ್ರು. 28 ಅಲ್ಲಿದ್ದ ಆಡು-ಕುರಿಗಳನ್ನ ಪ್ರಾಣಿಗಳನ್ನ ಕತ್ತೆಗಳನ್ನ ತಗೊಂಡು ಹೋದ್ರು. ಪಟ್ಟಣದಲ್ಲೂ ಬಯಲಲ್ಲೂ ಇದ್ದ ಎಲ್ಲವನ್ನ ಸೂರೆ ಮಾಡಿದ್ರು. 29 ಅಲ್ಲದೆ ಅವರ ಎಲ್ಲ ಸೊತ್ತನ್ನ ತಗೊಂಡ್ರು. ಅವರ ಹೆಂಡತಿಯರನ್ನ, ಎಲ್ಲ ಚಿಕ್ಕ ಮಕ್ಕಳನ್ನ ಹಿಡ್ಕೊಂಡು ಹೋದ್ರು. ಅವರ ಮನೆಯಲ್ಲಿದ್ದ ಎಲ್ಲವನ್ನ ದೋಚ್ಕೊಂಡ್ರು.
30 ಆಗ ಯಾಕೋಬ ಸಿಮೆಯೋನ ಮತ್ತು ಲೇವಿಗೆ+ “ನೀವು ನನ್ನನ್ನ ಎಷ್ಟು ದೊಡ್ಡ ಆಪತ್ತಿಗೆ ಸಿಕ್ಕಿಸಿದ್ದೀರ. ನೀವು ಮಾಡಿದ ಕೆಲಸದಿಂದ ಈ ದೇಶದ ನಿವಾಸಿಗಳಾದ ಕಾನಾನ್ಯರು, ಪೆರಿಜೀಯರು ನನ್ನನ್ನ ದ್ವೇಷಿಸ್ತಾರೆ. ಖಂಡಿತ ಅವರೆಲ್ಲ ಒಟ್ಟಾಗಿ ಬಂದು ನನ್ನ ಮೇಲೆ ದಾಳಿ ಮಾಡ್ತಾರೆ. ನಾವಿರೋದೇ ಸ್ವಲ್ಪ ಜನ. ನಮ್ಮಿಂದೇನೂ ಮಾಡೋಕೆ ಆಗಲ್ಲ. ನಾನೂ ನನ್ನ ಮನೆಯವರೆಲ್ಲರೂ ನಾಶ ಆಗ್ತೀವಿ” ಅಂದ. 31 ಆದ್ರೆ ಅವರು “ನಮ್ಮ ತಂಗಿಯನ್ನ ಅವರು ವೇಶ್ಯೆ ತರ ನಡೆಸ್ಕೊಂಡ್ರೆ ನಾವು ಕೈಕಟ್ಕೊಂಡು ಸುಮ್ಮನಿರಬೇಕಾ?” ಅಂದ್ರು.
35 ಆಮೇಲೆ ದೇವರು ಯಾಕೋಬನಿಗೆ “ನೀನು ಈ ಜಾಗ ಬಿಟ್ಟು ಬೆತೆಲ್‌ಗೆ+ ಹೋಗಿ ಅಲ್ಲಿ ವಾಸ ಮಾಡು. ನೀನು ನಿನ್ನ ಅಣ್ಣ ಏಸಾವನಿಂದ ಓಡಿಹೋಗ್ತಿದ್ದಾಗ ನಿನಗೆ ಕಾಣಿಸ್ಕೊಂಡ ಸತ್ಯದೇವರಾದ ನನಗೆ ಅಲ್ಲೊಂದು ಯಜ್ಞವೇದಿ ಕಟ್ಟು”+ ಅಂದ.
2 ಆಮೇಲೆ ಯಾಕೋಬ ತನ್ನ ಮನೆಯವರಿಗೂ ತನ್ನ ಜೊತೆ ಇದ್ದ ಎಲ್ಲರಿಗೂ “ನಿಮ್ಮ ಹತ್ರ ಇರೋ ಸುಳ್ಳು ದೇವರುಗಳ ಮೂರ್ತಿಗಳನ್ನೆಲ್ಲ ತೆಗೆದುಹಾಕಿ.+ ನಿಮ್ಮನ್ನ ಶುದ್ಧಮಾಡ್ಕೊಂಡು ಬಟ್ಟೆ ಬದಲಾಯಿಸ್ಕೊಳ್ಳಿ. 3 ನಾವು ಬೆತೆಲ್‌ಗೆ ಹೋಗೋಣ. ಅಲ್ಲಿ ನಾನು ಸತ್ಯದೇವರಿಗೆ ಒಂದು ಯಜ್ಞವೇದಿ ಕಟ್ತೀನಿ. ನಾನು ಕಷ್ಟದಲ್ಲಿದ್ದಾಗ ಮಾಡಿದ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟಿದ್ದು ಆತನೇ. ನಾನು ಹೋದಲ್ಲೆಲ್ಲ ಆತನು ನನ್ನ ಜೊತೆ ಇದ್ದು ಸಹಾಯ ಮಾಡಿದನು”+ ಅಂದ. 4 ಆಗ ಅವರು ತಮ್ಮ ಹತ್ರ ಇದ್ದ ಎಲ್ಲ ಸುಳ್ಳು ದೇವರುಗಳ ಮೂರ್ತಿಗಳನ್ನ, ತಮ್ಮ ಕಿವಿಗಳಲ್ಲಿದ್ದ ಓಲೆಗಳನ್ನ ಯಾಕೋಬನಿಗೆ ಕೊಟ್ರು. ಅವನು ಅವುಗಳನ್ನ ಶೆಕೆಮ್ ಪಟ್ಟಣದ ಹತ್ರ ಇದ್ದ ದೊಡ್ಡ ಮರದ ಕೆಳಗೆ ಹೂತಿಟ್ಟ.
5 ಅವರು ಅಲ್ಲಿಂದ ಹೊರಟಾಗ ದೇವರು ಸುತ್ತಮುತ್ತ ಪಟ್ಟಣಗಳ ಜನ್ರಲ್ಲಿ ಭಯ ಹುಟ್ಟಿಸಿದನು. ಹಾಗಾಗಿ ಅವರು ಯಾಕೋಬನ ಗಂಡುಮಕ್ಕಳನ್ನ ಬೆನ್ನಟ್ಟಿ ಬರಲಿಲ್ಲ. 6 ಯಾಕೋಬ ತನ್ನ ಎಲ್ಲ ಜನ್ರ ಜೊತೆ ಪ್ರಯಾಣ ಮಾಡಿ ಕೊನೆಗೆ ಕಾನಾನ್ ದೇಶದ ಲೂಜ್‌ಗೆ+ ಅಂದ್ರೆ ಬೆತೆಲ್‌ಗೆ ಬಂದು ಮುಟ್ಟಿದ. 7 ಅಲ್ಲಿ ಅವನು ಒಂದು ಯಜ್ಞವೇದಿ ಕಟ್ಟಿ ಆ ಸ್ಥಳಕ್ಕೆ ಏಲ್-ಬೆತೆಲ್* ಅಂತ ಹೆಸರಿಟ್ಟ. ಯಾಕಂದ್ರೆ ಅವನು ತನ್ನ ಅಣ್ಣನಿಂದ ಓಡಿಹೋದಾಗ ಸತ್ಯ ದೇವರು ಅವನಿಗೆ ಅಲ್ಲಿ ಕಾಣಿಸ್ಕೊಂಡಿದ್ದನು.+ 8 ಆಮೇಲೆ ರೆಬೆಕ್ಕಳ ದಾದಿ ದೆಬೋರ+ ತೀರಿಕೊಂಡಳು. ಅವಳನ್ನ ಬೆತೆಲ್ ಹತ್ರ ಇದ್ದ ಒಂದು ಓಕ್ ಮರದ ಕೆಳಗೆ ಸಮಾಧಿ ಮಾಡಿದ್ರು. ಯಾಕೋಬ ಆ ಮರಕ್ಕೆ ಅಲ್ಲೋನ್ ಬಾಕೂತ್* ಅಂತ ಹೆಸರಿಟ್ಟ.
9 ಯಾಕೋಬ ಪದ್ದನ್-ಅರಾಮಿನಿಂದ ಬರ್ತಿದ್ದಾಗ ದೇವರು ಅವನಿಗೆ ಇನ್ನೊಮ್ಮೆ ಕಾಣಿಸ್ಕೊಂಡು ಅವನನ್ನ ಆಶೀರ್ವದಿಸಿದನು. 10 ದೇವರು ಅವನಿಗೆ “ನಿನ್ನ ಹೆಸ್ರು ಯಾಕೋಬ+ ಅಲ್ವಾ? ಇನ್ಮೇಲೆ ನಿನ್ನ ಹೆಸ್ರು ಯಾಕೋಬ ಅಲ್ಲ, ಇಸ್ರಾಯೇಲ್ ಅಂತ ಆಗಿರುತ್ತೆ” ಅಂದನು. ಅವತ್ತಿಂದ ದೇವರು ಅವನನ್ನ ಇಸ್ರಾಯೇಲ್+ ಅಂತ ಕರೆಯೋಕೆ ಶುರು ಮಾಡಿದನು. 11 ಅಷ್ಟೇ ಅಲ್ಲ ದೇವರು ಅವನಿಗೆ “ನಾನು ಸರ್ವಶಕ್ತ ದೇವರು.+ ನಿನ್ನ ವಂಶದವರು ಹೆಚ್ಚಾಗೋ ತರ ಮಾಡ್ತೀನಿ. ನಿನ್ನಿಂದ ಜನಾಂಗಗಳು, ಅನೇಕ ಜನಾಂಗಗಳು ಬರುತ್ತೆ.+ ನಿನ್ನ ವಂಶದಲ್ಲಿ ರಾಜರು ಹುಟ್ತಾರೆ.+ 12 ಅಬ್ರಹಾಮ, ಇಸಾಕನಿಗೆ ನಾನು ಕೊಟ್ಟಿರೋ ದೇಶವನ್ನ ನಿನಗೂ ನಿನ್ನ ಸಂತತಿಯವರಿಗೂ ಕೊಡ್ತೀನಿ”+ ಅಂದ. 13 ದೇವರು ಅವನ ಜೊತೆ ಮಾತಾಡಿದ ಮೇಲೆ ಅಲ್ಲಿಂದ ಸ್ವರ್ಗಕ್ಕೆ ಹೋದನು.
14 ಯಾಕೋಬ ತನ್ನ ಜೊತೆ ದೇವರು ಮಾತಾಡಿದ್ದ ಸ್ಥಳದಲ್ಲಿ ಒಂದು ಕಲ್ಲು ಕಂಬ ನಿಲ್ಲಿಸಿ ಅದ್ರ ಮೇಲೆ ದ್ರಾಕ್ಷಾಮದ್ಯವನ್ನ ಪಾನ ಅರ್ಪಣೆಯಾಗಿ ಸುರಿದ, ಎಣ್ಣೆ ಹೊಯ್ದ.+ 15 ಯಾಕೋಬ ತನ್ನ ಜೊತೆ ದೇವರು ಮಾತಾಡಿದ್ದ ಆ ಜಾಗವನ್ನ ಮುಂದಕ್ಕೂ ಬೆತೆಲ್+ ಅಂತಾನೇ ಕರೆದ.
16 ಅವರು ಬೆತೆಲಿಂದ ಮತ್ತೆ ಪ್ರಯಾಣ ಶುರು ಮಾಡಿದ್ರು. ಅವರು ಎಫ್ರಾತಕ್ಕೆ ಇನ್ನೂ ತುಂಬ ದೂರದಲ್ಲಿ ಇದ್ದಾಗ್ಲೇ ರಾಹೇಲಗೆ ಹೆರಿಗೆ ನೋವು ಶುರು ಆಯ್ತು. ಅವಳಿಗೆ ಹೆರಿಗೆ ತುಂಬ ಕಷ್ಟ ಆಯ್ತು. 17 ಅವಳು ಮಗು ಹೆರೋಕೆ ತುಂಬ ಕಷ್ಟಪಡ್ತಿದ್ದಾಗ ಸೂಲಗಿತ್ತಿ* ಅವಳಿಗೆ “ಹೆದರಬೇಡ, ನಿನಗೆ ಇನ್ನೊಂದು ಗಂಡು ಮಗು ಹುಟ್ಟುತ್ತೆ”+ ಅಂದಳು. 18 (ಅವಳ ಜೀವಹೋಗ್ತಿದ್ದ ಕಾರಣ) ಅವಳು ಸಾಯೋ ಮುಂಚೆ ಮಗುಗೆ ಬೆನೋನಿ* ಅಂತ ಹೆಸರಿಟ್ಟಳು. ಆದ್ರೆ ಮಗುವಿನ ತಂದೆ ಬೆನ್ಯಾಮೀನ್*+ ಅಂತ ಹೆಸರಿಟ್ಟ. 19 ರಾಹೇಲ ತೀರಿಹೋದಳು. ಅವಳನ್ನ ಎಫ್ರಾತಕ್ಕೆ ಅಂದ್ರೆ ಬೆತ್ಲೆಹೇಮಿಗೆ ಹೋಗೋ ದಾರಿಯಲ್ಲಿ ಸಮಾಧಿ ಮಾಡಿದ್ರು.+ 20 ಯಾಕೋಬ ರಾಹೇಲಳ ಸಮಾಧಿ ಮೇಲೆ ಒಂದು ದೊಡ್ಡ ಕಲ್ಲು ನಿಲ್ಲಿಸಿದ. ಅದು ಇವತ್ತಿಗೂ ರಾಹೇಲಳ ಸಮಾಧಿ ಮೇಲೆ ಇದೆ.
21 ಆಮೇಲೆ ಇಸ್ರಾಯೇಲ ಅಲ್ಲಿಂದ ಪ್ರಯಾಣ ಮುಂದುವರಿಸಿ ಏದೆರ್ ಗೋಪುರಕ್ಕಿಂತ ಮುಂದೆ ಹೋಗಿ ಡೇರೆ ಹಾಕೊಂಡ. 22 ಇಸ್ರಾಯೇಲ ಆ ದೇಶದಲ್ಲಿ ವಾಸಿಸ್ತಿದ್ದಾಗ ಒಮ್ಮೆ ರೂಬೇನ ತನ್ನ ತಂದೆಯ ಉಪಪತ್ನಿ ಬಿಲ್ಹಾ ಜೊತೆ ಸಂಬಂಧ ಇಟ್ಟ. ಈ ವಿಷ್ಯ ಇಸ್ರಾಯೇಲನಿಗೆ ಗೊತ್ತಾಯ್ತು.+
ಯಾಕೋಬನಿಗೆ 12 ಗಂಡುಮಕ್ಕಳು. 23 ಯಾಕೋಬನಿಗೆ ಲೇಯಳಿಂದ ಹುಟ್ಟಿದ ಗಂಡುಮಕ್ಕಳು ಯಾರಂದ್ರೆ ಮೊದಲನೇ ಮಗ ರೂಬೇನ್,+ ಆಮೇಲೆ ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್. 24 ರಾಹೇಲಗೆ ಹುಟ್ಟಿದ ಗಂಡುಮಕ್ಕಳು ಯೋಸೇಫ ಮತ್ತು ಬೆನ್ಯಾಮೀನ್. 25 ರಾಹೇಲಳ ಸೇವಕಿ ಬಿಲ್ಹಾಳಿಂದ ಹುಟ್ಟಿದ ಗಂಡುಮಕ್ಕಳು ದಾನ್ ಮತ್ತು ನಫ್ತಾಲಿ. 26 ಲೇಯಳ ಸೇವಕಿ ಜಿಲ್ಪಗೆ ಹುಟ್ಟಿದ ಗಂಡುಮಕ್ಕಳು ಗಾದ್ ಮತ್ತು ಅಶೇರ್. ಇವರೆಲ್ಲ ಪದ್ದನ್-ಅರಾಮಿನಲ್ಲಿ ಯಾಕೋಬನಿಗೆ ಹುಟ್ಟಿದ ಗಂಡುಮಕ್ಕಳು.
27 ಕೊನೆಗೆ ಯಾಕೋಬ ತನ್ನ ತಂದೆ ಇಸಾಕನಿದ್ದ ಮಮ್ರೆಗೆ+ ಬಂದ. ಮಮ್ರೆಯು ಕಿರ್ಯತ್-ಅರ್ಬದಲ್ಲಿ ಅಂದ್ರೆ ಹೆಬ್ರೋನಲ್ಲಿ ಇತ್ತು. ಇಲ್ಲೇ ಅಬ್ರಹಾಮ ಮತ್ತು ಇಸಾಕ ವಿದೇಶಿಯರಾಗಿ ವಾಸ ಮಾಡಿದ್ರು.+ 28 ಇಸಾಕ ಒಟ್ಟು 180 ವರ್ಷ ಬದುಕಿದ.+ 29 ಇಸಾಕ ತುಂಬ ಕಾಲ ಸಂತೋಷ ನೆಮ್ಮದಿಯಿಂದ ಬದುಕಿ ಕೊನೆ ಉಸಿರೆಳೆದ. ಅವನ ಪೂರ್ವಜರ ತರ ಅವನಿಗೂ ಸಮಾಧಿ ಮಾಡಿದ್ರು. ಅವನ ಗಂಡುಮಕ್ಕಳಾದ ಏಸಾವ ಮತ್ತು ಯಾಕೋಬ ಅವನನ್ನ ಸಮಾಧಿ ಮಾಡಿದ್ರು.+
36 ಇದು ಏಸಾವನ ಅಂದ್ರೆ ಎದೋಮನ ಚರಿತ್ರೆ.+
2 ಏಸಾವ ಕಾನಾನ್ಯ ಸ್ತ್ರೀಯರನ್ನ ಮದುವೆ ಮಾಡ್ಕೊಂಡ. ಅವರು ಯಾರಂದ್ರೆ ಹಿತ್ತಿಯನಾದ ಏಲೋನನ+ ಮಗಳು ಆದಾ,+ ಅನಾಹನ ಮಗಳೂ ಹಿವ್ವಿಯನಾದ ಸಿಬೆಯೋನನ ಮೊಮ್ಮಗಳೂ ಆಗಿದ್ದ ಒಹೊಲೀಬಾಮ+ 3 ಮತ್ತು ಇಷ್ಮಾಯೇಲನ ಮಗಳೂ ನೆಬಾಯೋತನ+ ತಂಗಿಯೂ ಆಗಿದ್ದ ಬಾಸೆಮತ್.+
4 ಏಸಾವ ಮತ್ತು ಆದಾಳಿಗೆ ಎಲೀಫಜ ಹುಟ್ಟಿದ, ಬಾಸೆಮತ್‌ಗೆ ರೆಗೂವೇಲ ಹುಟ್ಟಿದ.
5 ಒಹೊಲೀಬಾಮಗೆ ಯೆಗೂಷ್, ಯಳಾಮ್, ಕೋರಹ ಹುಟ್ಟಿದ್ರು.+
ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಮಕ್ಕಳು. 6 ಆಮೇಲೆ ಏಸಾವ ತನ್ನ ಹೆಂಡತಿಯರನ್ನ, ಗಂಡುಹೆಣ್ಣು ಮಕ್ಕಳನ್ನ, ಮನೆಯಲ್ಲಿದ್ದ ಎಲ್ಲರನ್ನ, ತನಗಿದ್ದ ಎಲ್ಲ ಸಾಕುಪ್ರಾಣಿಗಳನ್ನ ಮತ್ತು ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಎಲ್ಲ ಆಸ್ತಿ+ ತಗೊಂಡು ಬೇರೆ ದೇಶಕ್ಕೆ ಹೋದ. ಹೀಗೆ ಯಾಕೋಬನಿದ್ದ ಸ್ಥಳದಿಂದ ದೂರ ಹೋದ.+ 7 ಅವರಿಬ್ಬರಿಗೆ ತುಂಬ ಸಂಪತ್ತು, ಪ್ರಾಣಿಗಳು ಇತ್ತು. ಅವರಿಬ್ಬರಿಗೂ ಒಂದೇ ಸ್ಥಳದಲ್ಲಿ ವಾಸಿಸೋಕೆ* ಕಷ್ಟ ಆಯ್ತು. 8 ಆಗ ಏಸಾವ ಸೇಯೀರ್ ಬೆಟ್ಟ+ ಪ್ರದೇಶಕ್ಕೆ ಹೋಗಿ ಅಲ್ಲಿ ವಾಸ ಮಾಡಿದ. ಏಸಾವನಿಗೆ ಎದೋಮ್ ಅನ್ನೋ ಹೆಸರು ಕೂಡ ಇತ್ತು.+
9 ಇದು ಸೇಯೀರ್ ಬೆಟ್ಟ ಪ್ರದೇಶದಲ್ಲಿದ್ದ ಎದೋಮ್ಯರ ಪೂರ್ವಜನಾದ ಏಸಾವನ ಚರಿತ್ರೆ.+
10 ಏಸಾವನ ಮಕ್ಕಳು ಎಲೀಫಜ ಮತ್ತು ರೆಗೂವೇಲ. ಎಲೀಫಜ ಏಸಾವನಿಗೆ ಆದಾಳಿಂದ ಹುಟ್ಟಿದ ಮಗ. ರೆಗೂವೇಲ ಏಸಾವನಿಗೆ ಬಾಸೆಮತಳಿಂದ ಹುಟ್ಟಿದ ಮಗ.+
11 ಎಲೀಫಜನ ಮಕ್ಕಳು ತೇಮಾನ್,+ ಓಮಾರ್, ಚೆಫೋ, ಗತಾಮ್ ಮತ್ತು ಕೆನಜ್.+ 12 ಏಸಾವನ ಮಗನಾದ ಎಲೀಫಜನ ಉಪಪತ್ನಿ ಹೆಸ್ರು ತಿಮ್ನ. ಎಲೀಫಜನಿಗೆ ಇವಳಿಂದ ಹುಟ್ಟಿದ ಮಗ ಅಮಾಲೇಕ.+ ಇವರೆಲ್ಲ ಏಸಾವನ ಹೆಂಡತಿ ಆದಾಳ ಮೊಮ್ಮಕ್ಕಳು.
13 ರೆಗೂವೇಲನ ಮಕ್ಕಳು ನಹತ್, ಜೆರಹ, ಶಮ್ಮಾ, ಮಿಜ್ಜಾ. ಇವರು ಏಸಾವನ ಹೆಂಡತಿ ಬಾಸೆಮತಳ+ ಮೊಮ್ಮಕ್ಕಳು.
14 ಅನಾಹನ ಮಗಳೂ ಸಿಬೆಯೋನನ ಮೊಮ್ಮಗಳೂ ಆದ ಒಹೊಲೀಬಾಮ ಏಸಾವನ ಹೆಂಡತಿ. ಏಸಾವನಿಗೆ ಅವಳಿಂದ ಯೆಗೂಷ್, ಯಳಾಮ್, ಕೋರಹ ಅನ್ನೋ ಮಕ್ಕಳು ಹುಟ್ಟಿದ್ರು.
15 ಏಸಾವನ ವಂಶದಿಂದ ಬಂದ ಶೇಕ್‌ಗಳ*+ ಹೆಸ್ರು: ಏಸಾವನ ಮೊದಲ ಮಗನಾದ ಎಲೀಫಜನ ಮಕ್ಕಳು: ತೇಮಾನ್, ಓಮಾರ್, ಚೆಫೋ, ಕೆನಜ್,+ 16 ಕೋರಹ, ಗತಾಮ್, ಅಮಾಲೇಕ್. ಎಲೀಫಜನ ಗಂಡುಮಕ್ಕಳಾದ+ ಇವರು ಎದೋಮ್ಯರ ದೇಶದಲ್ಲಿ ಶೇಕ್ ಆಗಿದ್ರು. ಇವರು ಆದಾಳ ಮೊಮ್ಮಕ್ಕಳು.
17 ಏಸಾವನ ಮಗನಾದ ರೆಗೂವೇಲನ ಮಕ್ಕಳು: ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ. ರೆಗೂವೇಲನ ಗಂಡುಮಕ್ಕಳಾದ ಇವರು ಎದೋಮ್ಯರ ದೇಶದಲ್ಲಿ+ ಶೇಕ್ ಆಗಿದ್ರು. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
18 ಏಸಾವನಿಗೆ ಒಹೊಲೀಬಾಮಳಿಂದ ಹುಟ್ಟಿದ ಮಕ್ಕಳು: ಯೆಗೂಷ್, ಯಳಾಮ್, ಕೋರಹ. ಅನಾಹನ ಮಗಳೂ ಏಸಾವನ ಹೆಂಡತಿಯೂ ಆದ ಒಹೊಲೀಬಾಮಳ ಗಂಡುಮಕ್ಕಳಾದ ಇವರು ಶೇಕ್ ಆಗಿದ್ರು.
19 ಇವರು ಏಸಾವನ ಮಕ್ಕಳು ಮತ್ತು ಅವರಿಂದ ಬಂದ ಶೇಕ್‌ಗಳು. ಏಸಾವನಿಗಿದ್ದ ಇನ್ನೊಂದು ಹೆಸರು ಎದೋಮ್.+
20 ಎದೋಮ್ಯರ ದೇಶದ ಮೂಲನಿವಾಸಿಗಳು ಹೋರಿಯರು.+ ಹೋರಿಯನಾದ ಸೇಯೀರನ ವಂಶದವರು ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,+ 21 ದೀಶೋನ್, ಏಚೆರ್ ಮತ್ತು ದೀಶಾನ್.+ ಸೇಯೀರನ ವಂಶದವರಾದ ಇವರು ಎದೋಮ್ಯರ ದೇಶದಲ್ಲಿ ಶೇಕ್ ಆಗಿದ್ರು. ಈ ಶೇಕ್‌ಗಳು ಹೋರಿಯರು ಆಗಿದ್ರು.
22 ಲೋಟಾನನ ಮಕ್ಕಳು ಹೋರಿ ಮತ್ತು ಹೇಮಾಮ್. ಲೋಟಾನನ ಸಹೋದರಿ ತಿಮ್ನ.+
23 ಶೋಬಾಲನ ಮಕ್ಕಳು ಅಲ್ವಾನ್, ಮಾನಹತ್, ಏಬಾಲ್, ಶೆಫೋ, ಓನಾಮ್.
24 ಸಿಬೆಯೋನನ ಮಕ್ಕಳು+ ಅಯ್ಯಾಹ ಮತ್ತು ಅನಾಹ. ಈ ಅನಾಹನೇ ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನ ಕಾಡಲ್ಲಿ ಮೇಯಿಸ್ತಿದ್ದಾಗ ಬಿಸಿನೀರಿನ ಬುಗ್ಗೆಗಳನ್ನ ನೋಡಿದ್ದ.
25 ಅನಾಹನ ಮಗನ ಹೆಸ್ರು ದೀಶೋನ್ ಮತ್ತು ಮಗಳ ಹೆಸ್ರು ಒಹೊಲೀಬಾಮ.
26 ದೀಶೋನನ ಮಕ್ಕಳು ಹೆಮ್ದಾನ್, ಎಷ್ಬಾನ್, ಇತ್ರಾನ್, ಕೆರಾನ್.+
27 ಏಚೆರನ ಮಕ್ಕಳು ಬಿಲ್ಹಾನ್, ಜಾವಾನ್, ಅಕಾನ್.
28 ದೀಶಾನನ ಮಕ್ಕಳು ಊಚ್, ಅರಾನ್.+
29 ಹೋರಿಯರ ಶೇಕ್‌ಗಳು: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, 30 ದೀಶೋನ್, ಏಚೆರ್ ಮತ್ತು ದೀಶಾನ್.+ ಇವರು ಸೇಯೀರ್ ಪ್ರದೇಶದಲ್ಲಿದ್ದ ಹೋರಿಯರ ಶೇಕ್‌ಗಳು.
31 ಇಸ್ರಾಯೇಲ್ಯರಲ್ಲಿ ರಾಜರ ಆಳ್ವಿಕೆ ಶುರು ಆಗೋ ಮುಂಚೆ ಎದೋಮ್ಯರ ದೇಶ+ ಆಳಿದ ರಾಜರ ವಿವರ:+ 32 ಬೆಯೋರನ ಮಗ ಬೆಳ ಎದೋಮನ್ನ ಆಳಿದ. ಅವನಿದ್ದ ಪಟ್ಟಣದ ಹೆಸ್ರು ದಿನ್ಹಾಬಾ. 33 ಬೆಳ ತೀರಿಹೋದ ಮೇಲೆ ಬೊಚ್ರದವನೂ ಜೆರಹನ ಮಗನೂ ಆದ ಯೋಬಾಬ ರಾಜನಾಗಿ ಆಳಿದ. 34 ಯೋಬಾಬ ತೀರಿಹೋದ ಮೇಲೆ ತೇಮಾನೀಯರ ದೇಶದವನಾದ ಹುಷಾಮ ರಾಜನಾಗಿ ಆಳಿದ. 35 ಹುಷಾಮ ತೀರಿಹೋದ ಮೇಲೆ ಬೆದದನ ಮಗನಾದ ಹದದ ರಾಜನಾಗಿ ಆಳಿದ. ಅವನಿದ್ದ ಪಟ್ಟಣದ ಹೆಸ್ರು ಅವೀತ್. ಹದದ ಮೋವಾಬ್ ಪ್ರದೇಶದಲ್ಲಿ ಮಿದ್ಯಾನ್ಯರನ್ನ+ ಸೋಲಿಸಿದ್ದ. 36 ಹದದ ತೀರಿಹೋದ ಮೇಲೆ ಮಸ್ರೇಕದವನಾದ ಸಮ್ಲಾಹ ರಾಜನಾಗಿ ಆಳಿದ. 37 ಸಮ್ಲಾಹ ತೀರಿಹೋದ ಮೇಲೆ ನದಿ ಹತ್ರ ಇದ್ದ ರೆಹೋಬೋತ್ ಪಟ್ಟಣದವನಾದ ಶೌಲ ರಾಜನಾಗಿ ಆಳಿದ. 38 ಶೌಲ ತೀರಿಹೋದ ಮೇಲೆ ಅಕ್ಬೋರನ ಮಗನಾದ ಬಾಳ್-ಹಾನಾನ ರಾಜನಾಗಿ ಆಳಿದ. 39 ಅವನು ತೀರಿಹೋದ ಮೇಲೆ ಹದರ ರಾಜನಾಗಿ ಆಳಿದ. ಅವನಿದ್ದ ಪಟ್ಟಣದ ಹೆಸ್ರು ಪಾಗು. ಹದರನ ಹೆಂಡತಿ ಹೆಸ್ರು ಮಹೇಟಬೇಲ್. ಅವಳು ಮಟ್ರೇದಳ ಮಗಳು ಮತ್ತು ಮೆಜಾಹಾಬನ* ಮೊಮ್ಮಗಳು.
40 ಏಸಾವನ ವಂಶದಿಂದ ಬಂದ ಶೇಕ್‌ಗಳಲ್ಲಿ ಪ್ರತಿಯೊಬ್ಬ ಶೇಕ್‌ನ ಕುಟುಂಬಕ್ಕೆ ಮತ್ತು ಜಾಗಕ್ಕೆ ಆ ಶೇಕ್‌ನ ಹೆಸರನ್ನೇ ಕೊಡಲಾಗಿತ್ತು. ಅವರು ಯಾರಂದ್ರೆ ತಿಮ್ನ, ಅಲ್ವಾ, ಯೆತೇತ್,+ 41 ಒಹೊಲೀಬಾಮ, ಏಲಾ, ಪೀನೋನ್, 42 ಕೆನಜ್, ತೇಮಾನ್, ಮಿಬ್ಜಾರ್, 43 ಮಗ್ದೀಯೇಲ್, ಗೀರಾಮ್. ಇವರು ಎದೋಮ್ಯರ ಶೇಕ್‌ಗಳು ಮತ್ತು ಇವುಗಳೇ ಅವರ ದೇಶದಲ್ಲಿ ಅವರಿದ್ದ ಪ್ರದೇಶಗಳ ಹೆಸರುಗಳು.+ ಏಸಾವ ಎದೋಮ್ಯರ ಪೂರ್ವಜ.+
37 ಯಾಕೋಬ ತನ್ನ ತಂದೆಯಾದ ಇಸಾಕ ವಿದೇಶಿಯಾಗಿ ವಾಸವಾಗಿದ್ದ ಕಾನಾನ್ ದೇಶದಲ್ಲೇ ವಾಸ ಮಾಡಿದ.+
2 ಇದು ಯಾಕೋಬನ ಚರಿತ್ರೆ.
ಯಾಕೋಬನ ಮಗನಾದ ಯೋಸೇಫ+ 17 ವರ್ಷದ ಯುವಕನಾಗಿದ್ದಾಗ ಅಣ್ಣನ ಜೊತೆ ಅಂದ್ರೆ ತನ್ನ ತಂದೆಯ ಹೆಂಡತಿಯರಾದ ಬಿಲ್ಹಾ+ ಮತ್ತು ಜಿಲ್ಪಳ+ ಗಂಡುಮಕ್ಕಳ ಜೊತೆ ಆಡು-ಕುರಿ ಮೇಯಿಸ್ತಿದ್ದ.+ ಅವರು ಮಾಡ್ತಿದ್ದ ಕೆಟ್ಟ ಕೆಲಸಗಳ ಬಗ್ಗೆ ಯೋಸೇಫ ಹೋಗಿ ತನ್ನ ತಂದೆಗೆ ಹೇಳಿದ. 3 ಇಸ್ರಾಯೇಲನಿಗೆ ವಯಸ್ಸಾದಾಗ ಅವನಿಗೆ ಯೋಸೇಫ ಹುಟ್ಟಿದ್ದ. ಹಾಗಾಗಿ ಇಸ್ರಾಯೇಲ ತನ್ನ ಎಲ್ಲ ಗಂಡುಮಕ್ಕಳಿಗಿಂತ+ ಯೋಸೇಫನನ್ನ ಜಾಸ್ತಿ ಪ್ರೀತಿಸ್ತಿದ್ದ. ಅವನಿಗಾಗಿ ಅಂದವಾದ* ಒಂದು ಉದ್ದ ಅಂಗಿಯನ್ನೂ ಮಾಡಿಸಿ ಕೊಟ್ಟಿದ್ದ. 4 ತಂದೆ ಯೋಸೇಫನನ್ನೇ ಹೆಚ್ಚು ಪ್ರೀತಿಸೋದನ್ನ ಅವನ ಅಣ್ಣಂದಿರು ನೋಡಿ ಅವನನ್ನ ದ್ವೇಷಿಸೋಕೆ ಶುರು ಮಾಡಿದ್ರು. ಅವರು ಅವನ ಜೊತೆ ಸರಿಯಾಗಿ ಮಾತಾಡ್ತಿರಲಿಲ್ಲ.
5 ಒಂದಿನ ಯೋಸೇಫನಿಗೆ ಒಂದು ಕನಸು ಬಿತ್ತು. ಆ ಕನಸನ್ನ ಅಣ್ಣಂದಿರಿಗೆ ಹೇಳಿದ.+ ಆಗ ಅವರು ಅವನನ್ನ ಇನ್ನೂ ಹೆಚ್ಚು ದ್ವೇಷಿಸಿದ್ರು. 6 ಅವನು ಅಣ್ಣಂದಿರ ಹತ್ರ ಹೋಗಿ “ನನಗೊಂದು ಕನಸು ಬಿತ್ತು. ಅದನ್ನ ಹೇಳ್ತೀನಿ, ದಯವಿಟ್ಟು ಕೇಳಿ. 7 ನಾವು ಹೊಲದ ಮಧ್ಯ ಸಿವುಡುಗಳನ್ನ ಕಟ್ತಾ ಇದ್ವಿ. ಆಗ ನನ್ನ ಕಟ್ಟು ಎದ್ದು ನೆಟ್ಟಗೆ ನಿಲ್ತು, ನಿಮ್ಮ ಕಟ್ಟುಗಳು ಸುತ್ತಲೂ ಬಂದು ನಿಂತು ನನ್ನ ಕಟ್ಟಿಗೆ ಬಗ್ಗಿ ನಮಸ್ಕಾರ ಮಾಡಿದವು” ಅಂದ.+ 8 ಅದಕ್ಕೆ ಅಣ್ಣಂದಿರು “ಅಂದ್ರೆ ನೀನೇನು ರಾಜನಾಗಿ ನಮ್ಮ ಮೇಲೆ ಅಧಿಕಾರ ನಡಿಸ್ತೀಯಾ?”+ ಅಂದ್ರು. ಯೋಸೇಫನ ಕನಸಿಂದಾಗಿ, ಅವನು ಹೇಳಿದ ಮಾತುಗಳಿಂದಾಗಿ ಅಣ್ಣಂದಿರಿಗೆ ಅವನ ಮೇಲಿದ್ದ ದ್ವೇಷ ಇನ್ನೂ ಜಾಸ್ತಿ ಆಯ್ತು.
9 ಆಮೇಲೆ ಅವನು ಇನ್ನೊಂದು ಕನಸು ಕಂಡ. ಅವನು ಅದನ್ನ ಅಣ್ಣಂದಿರಿಗೆ ಹೇಳ್ತಾ “ನನಗೆ ಇನ್ನೊಂದು ಕನಸು ಬಿತ್ತು. ಈ ಸಲ ಕನಸಲ್ಲಿ ಸೂರ್ಯ, ಚಂದ್ರ ಮತ್ತು 11 ನಕ್ಷತ್ರಗಳು ನನಗೆ ಬಗ್ಗಿ ನಮಸ್ಕಾರ ಮಾಡ್ತಾ ಇದ್ದವು”+ ಅಂದ. 10 ಆಮೇಲೆ ಅವನು ಆ ಕನಸನ್ನ ತನ್ನ ಅಣ್ಣಂದಿರ ಮುಂದೆ ತಂದೆಗೆ ಹೇಳಿದ. ಆಗ ತಂದೆ ಗದರಿಸ್ತಾ “ಏನ್ ನಿನ್ನ ಮಾತಿನ ಅರ್ಥ? ನಾನು, ನಿನ್ನ ತಾಯಿ ಮತ್ತು ನಿನ್ನ ಸಹೋದರರೆಲ್ಲ ನಿನ್ನ ಹತ್ರ ಬಂದು ನೆಲದ ತನಕ ಬಗ್ಗಿ ನಿನಗೆ ನಮಸ್ಕಾರ ಮಾಡ್ತೀವಾ?” ಅಂತ ಕೇಳಿದ. 11 ಯೋಸೇಫನ ಮಾತು ಕೇಳಿ ಅವನ ಅಣ್ಣಂದಿರು ಅವನ ಮೇಲೆ ತುಂಬ ಹೊಟ್ಟೆಕಿಚ್ಚುಪಟ್ರು.+ ಆದ್ರೆ ಅವನ ತಂದೆ ಆ ಮಾತನ್ನ ಮನಸ್ಸಲ್ಲಿ ಇಟ್ಕೊಂಡ.
12 ಒಮ್ಮೆ ಯೋಸೇಫನ ಅಣ್ಣಂದಿರು ಶೆಕೆಮ್ ಪಟ್ಟಣದ+ ಹತ್ರ ತಂದೆಯ ಆಡು-ಕುರಿಗಳನ್ನ ಮೇಯಿಸೋಕೆ ಹೋದ್ರು. 13 ಆಮೇಲೆ ಇಸ್ರಾಯೇಲ ಯೋಸೇಫನಿಗೆ “ನಿನ್ನ ಅಣ್ಣಂದಿರು ಶೆಕೆಮಿನ ಹತ್ರ ಆಡು-ಕುರಿಗಳನ್ನ ಮೇಯಿಸ್ತಾ ಇದ್ದಾರೆ. ನೀನು ಹೋಗಿ ಅವರನ್ನ ನೋಡ್ಕೊಂಡು ಬರ್ತಿಯಾ?” ಅಂದ. ಅದಕ್ಕೆ ಅವನು “ಸರಿ ಅಪ್ಪ, ಹೋಗ್ತೀನಿ” ಅಂದ. 14 ಆಗ ಇಸ್ರಾಯೇಲ “ನೀನು ಹೋಗಿ ಅಣ್ಣಂದಿರ ಕ್ಷೇಮ ವಿಚಾರಿಸಿ, ಆಡು-ಕುರಿಗಳು ಹೇಗಿವೆ ಅಂತ ನೋಡ್ಕೊಂಡು ಬಂದು ದಯವಿಟ್ಟು ನನಗೆ ಹೇಳು” ಅಂದ. ಆಗ ಯೋಸೇಫ ತನ್ನ ಕುಟುಂಬ ವಾಸವಾಗಿದ್ದ ಹೆಬ್ರೋನ್ ಕಣಿವೆಯಿಂದ+ ಶೆಕೆಮಿನ ಕಡೆಗೆ ಹೋದ. 15 ಆಮೇಲೆ ಅವನು ಒಂದು ಬಯಲಲ್ಲಿ ಅಲೆದಾಡ್ತಾ ಇದ್ದಾಗ ಒಬ್ಬ ಅವನನ್ನ ನೋಡಿ “ಏನು ಹುಡುಕ್ತಾ ಇದ್ದೀಯಾ?” ಅಂತ ಕೇಳಿದ. 16 ಅವನು “ನನ್ನ ಅಣ್ಣಂದಿರನ್ನ ಹುಡುಕ್ತಾ ಇದ್ದೀನಿ. ಅವರು ಆಡು-ಕುರಿಗಳನ್ನ ಮೇಯಿಸೋಕೆ ಬಂದಿದ್ರು. ಅವರು ಎಲ್ಲಿದ್ದಾರೆ ಅಂತ ಗೊತ್ತಿದ್ರೆ ದಯವಿಟ್ಟು ಹೇಳು” ಅಂದ. 17 ಆ ವ್ಯಕ್ತಿ “ಅವರು ಇಲ್ಲಿಂದ ಹೋಗುವಾಗ ‘ದೋತಾನಿಗೆ ಹೋಗೋಣ’ ಅಂತ ಮಾತಾಡ್ಕೊಳ್ತಿದ್ರು” ಅಂದ. ಹಾಗಾಗಿ ಯೋಸೇಫ ಅಣ್ಣಂದಿರನ್ನ ಹುಡುಕ್ತಾ ದೋತಾನಿಗೆ ಹೋದ. ಅವರು ಅಲ್ಲಿದ್ರು.
18 ಯೋಸೇಫ ದೂರದಲ್ಲಿ ಬರ್ತಾ ಇರೋದನ್ನ ಅವನ ಅಣ್ಣಂದಿರು ನೋಡಿ ಅವನನ್ನ ಹೇಗಾದ್ರೂ ಸಾಯಿಸಬೇಕು ಅಂತ ಸಂಚು ಮಾಡಿದ್ರು. 19 ಒಬ್ಬರಿಗೊಬ್ರು “ಅಲ್ಲಿ ನೋಡು, ಕನಸುಗಾರ ಬರ್ತಿದ್ದಾನೆ.+ 20 ಬನ್ನಿ, ಅವನನ್ನ ಸಾಯಿಸಿ ಒಂದು ಗುಂಡಿಯಲ್ಲಿ ಹಾಕೋಣ. ಯಾವುದೋ ಕ್ರೂರ ಕಾಡುಪ್ರಾಣಿ ಅವನನ್ನ ತಿಂದು ಹಾಕ್ತು ಅಂತ ಹೇಳಿದರಾಯ್ತು. ಆಗ ಅವನ ಕನಸುಗಳೆಲ್ಲ ಏನಾಗುತ್ತೆ ನೋಡೋಣ” ಅಂದ್ರು. 21 ರೂಬೇನ+ ಈ ಮಾತು ಕೇಳಿ ಅವನನ್ನ ಕಾಪಾಡೋಕೆ ಪ್ರಯತ್ನಿಸ್ತಾ “ಅವನ ಜೀವ ತೆಗಿಯೋದು ಬೇಡ”+ ಅಂದ. 22 “ಅವನ ರಕ್ತ ಸುರಿಸಬೇಡಿ.+ ಅವನ ಜೀವಕ್ಕೆ ಏನೂ ಹಾನಿ ಮಾಡಬೇಡಿ. ಬೇಕಾದ್ರೆ ಅವನನ್ನ ಕಾಡಲ್ಲಿರೋ ಈ ಗುಂಡಿಗೆ ಹಾಕಿ”+ ಅಂದ. ಯೋಸೇಫನನ್ನ ಹೇಗಾದ್ರೂ ಕಾಪಾಡಿ ತಂದೆಗೆ ಒಪ್ಪಿಸಬೇಕು ಅನ್ನೋದು ಅವನ ಉದ್ದೇಶವಾಗಿತ್ತು.
23 ಯೋಸೇಫ ಹತ್ರ ಬಂದ ತಕ್ಷಣ ಅವನ ಅಣ್ಣಂದಿರು ಅವನ ಮೈಮೇಲಿದ್ದ ಅಂದವಾದ ಉದ್ದ ಅಂಗಿ+ ತೆಗೆದು 24 ಅವನನ್ನ ಎತ್ತಿ ನೀರಿನ ಗುಂಡಿಗೆ ಹಾಕಿದ್ರು. ಆಗ ಆ ಗುಂಡಿ ಒಳಗೆ ಸ್ವಲ್ಪನೂ ನೀರು ಇರಲಿಲ್ಲ.
25 ಆಮೇಲೆ ಅವರು ಊಟ ಮಾಡೋಕೆ ಕೂತ್ರು. ಅವರು ತಲೆಯೆತ್ತಿ ನೋಡಿದಾಗ ಗಿಲ್ಯಾದಿನಿಂದ ಇಷ್ಮಾಯೇಲ್ಯರ ಗುಂಪು+ ಬರ್ತಿರೋದು ಕಾಣಿಸ್ತು. ಅವರು ಸುಗಂಧಭರಿತ ಅಂಟು, ಸುಗಂಧ ತೈಲ ಮತ್ತು ಚಕ್ಕೆಯನ್ನ+ ಒಂಟೆಗಳ ಮೇಲೆ ಹೇರಿಕೊಂಡು ಈಜಿಪ್ಟಿಗೆ ಹೋಗ್ತಿದ್ರು. 26 ಆಗ ಯೆಹೂದ “ನಾವು ತಮ್ಮನನ್ನ ಕೊಂದು ಆ ವಿಷ್ಯ ಮುಚ್ಚಿಟ್ರೆ ನಮಗೇನು ಲಾಭ?+ 27 ಬನ್ನಿ, ಅವನನ್ನ ಇಷ್ಮಾಯೇಲ್ಯರಿಗೆ ಮಾರೋಣ.+ ಅವನಿಗೆ ಏನೂ ಹಾನಿ ಮಾಡೋದು ಬೇಡ. ಎಷ್ಟೆಂದ್ರೂ ಅವನು ನಮ್ಮ ತಮ್ಮ ಅಲ್ವಾ? ನಾವೆಲ್ಲ ಒಂದೇ ರಕ್ತ ಅಲ್ವಾ?” ಅಂದ. ಇದನ್ನ ಉಳಿದವರೂ ಒಪ್ಪಿದ್ರು. 28 ಇಷ್ಮಾಯೇಲ್ಯ* ವ್ಯಾಪಾರಿಗಳು+ ಆ ದಾರಿಯಲ್ಲಿ ಹೋಗುವಾಗ ಯೋಸೇಫನ ಅಣ್ಣಂದಿರು ಅವನನ್ನ ನೀರಿನ ಗುಂಡಿಯಿಂದ ಎತ್ತಿ ಇಷ್ಮಾಯೇಲ್ಯರಿಗೆ 20 ಬೆಳ್ಳಿ ಶೆಕೆಲ್‌ಗಳಿಗೆ* ಮಾರಿದ್ರು.+ ಆ ವ್ಯಾಪಾರಿಗಳು ಅವನನ್ನ ಈಜಿಪ್ಟಿಗೆ ಕರ್ಕೊಂಡು ಹೋದ್ರು.
29 ಆಮೇಲೆ ರೂಬೇನ ಬಂದು ನೋಡಿದಾಗ ಯೋಸೇಫ ಗುಂಡಿಯಲ್ಲಿ ಇರಲಿಲ್ಲ. ಆಗ ಅವನು ದುಃಖದಿಂದ ತನ್ನ ಬಟ್ಟೆಗಳನ್ನ ಹರ್ಕೊಂಡ. 30 ಅವನು ತಮ್ಮಂದಿರ ಹತ್ರ ಹೋಗಿ “ಗುಂಡಿಯಲ್ಲಿ ತಮ್ಮ ಇಲ್ಲ! ಅಯ್ಯೋ, ನಾನೀಗ ಏನು ಮಾಡ್ಲಿ?” ಅಂತ ಗೋಳಾಡಿದ.
31 ಅವರು ಒಂದು ಗಂಡು ಆಡನ್ನ ಕೊಯ್ದು ಅದರ ರಕ್ತದಲ್ಲಿ ಯೋಸೇಫನ ಅಂದವಾದ ಉದ್ದ ಅಂಗಿಯನ್ನ ಅದ್ದಿದ್ರು. 32 ಆಮೇಲೆ ಅದನ್ನ ತಮ್ಮ ತಂದೆಗೆ ಕಳಿಸ್ಕೊಟ್ರು. “ಇದು ನಮಗೆ ಸಿಕ್ತು. ಇದು ನಿನ್ನ ಮಗನ ಅಂಗಿನಾ ಅಲ್ವಾ ದಯವಿಟ್ಟು ನೋಡು”+ ಅಂತ ಹೇಳಿ ಕಳಿಸಿದ್ರು. 33 ಆಗ ಯಾಕೋಬ ಆ ಅಂಗಿಯ ಗುರುತು ಹಿಡಿದು “ಇದು ನನ್ನ ಮಗನದ್ದೇ! ಯಾವುದೋ ಕ್ರೂರ ಕಾಡುಪ್ರಾಣಿ ಅವನನ್ನ ಕೊಂದು ತಿಂದಿರಬೇಕು. ಯೋಸೇಫನನ್ನ ತುಂಡು ತುಂಡು ಮಾಡಿರಬೇಕು” ಅಂತ ಗೋಳಾಡಿದ. 34 ಅವನು ಬಟ್ಟೆಗಳನ್ನ ಹರಿದುಕೊಂಡು ಸೊಂಟಕ್ಕೆ ಗೋಣಿ ಸುತ್ಕೊಂಡು ತುಂಬಾ ದಿನ ತನಕ ತನ್ನ ಮಗನಿಗಾಗಿ ಗೋಳಾಡಿದ. 35 ಅವನ ಎಲ್ಲ ಗಂಡುಮಕ್ಕಳೂ ಎಲ್ಲ ಹೆಣ್ಣುಮಕ್ಕಳೂ ಅವನಿಗೆ ಸಮಾಧಾನ ಮಾಡೋಕೆ ತುಂಬ ಪ್ರಯತ್ನಿಸ್ತಾ ಇದ್ರು. ಅವರೆಷ್ಟೇ ಸಮಾಧಾನ ಮಾಡಿದ್ರೂ ಒಪ್ಪದೆ “ನಾನು ನನ್ನ ಮಗನಿಗಾಗಿ ಹೀಗೇ ಕೊರಗಿ ಕೊರಗಿ ಸಮಾಧಿ*+ ಸೇರ್ತಿನಿ” ಅಂದ. ಯಾಕೋಬ ತನ್ನ ಮಗನನ್ನ ನೆನಸಿ ನೆನಸಿ ಅಳ್ತಾ ಇದ್ದ.
36 ಇಷ್ಮಾಯೇಲ್ಯರು* ಯೋಸೇಫನನ್ನ ಕರ್ಕೊಂಡು ಈಜಿಪ್ಟಿಗೆ ಹೋದ ಮೇಲೆ ಅವನನ್ನ ಪೋಟೀಫರನಿಗೆ ಮಾರಿದ್ರು. ಪೋಟೀಫರ ಫರೋಹನ+ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ, ಕಾವಲುಗಾರರ ಮುಖ್ಯಸ್ಥನಾಗಿದ್ದ.+
38 ಆ ಸಮಯದಲ್ಲೇ ಯೆಹೂದ ತನ್ನ ಅಣ್ಣತಮ್ಮಂದಿರನ್ನ ಬಿಟ್ಟು ಬೇರೆ ಕಡೆ ಹೋದ. ಅವನು ಅದುಲ್ಲಾಮ್ಯನಾದ ಹೀರಾ ಅನ್ನುವವನು ವಾಸಿಸ್ತಿದ್ದ ಸ್ಥಳದ ಹತ್ರ ಡೇರೆ ಹಾಕೊಂಡ. 2 ಅಲ್ಲಿ ಕಾನಾನ್ಯನಾದ+ ಶೂಗನ ಮಗಳನ್ನ ಯೆಹೂದ ನೋಡಿದ. ಅವಳನ್ನ ಮದುವೆ ಆದ. 3 ಅವಳಿಗೆ ಗಂಡು ಮಗು ಆಯ್ತು. ಯೆಹೂದ ಆ ಮಗುಗೆ ಏರ್+ ಅಂತ ಹೆಸರಿಟ್ಟ. 4 ಅವಳಿಗೆ ಇನ್ನೊಂದು ಗಂಡುಮಗು ಹುಟ್ಟಿತು. ಆ ಮಗುಗೆ ಓನಾನ್ ಅಂತ ಹೆಸರಿಟ್ರು. 5 ಆಮೇಲೆ ಅವಳಿಗೆ ಇನ್ನೊಂದು ಗಂಡುಮಗು ಹುಟ್ಟಿತು. ಅದಕ್ಕೆ ಶೇಲಹ ಅಂತ ಹೆಸರಿಟ್ರು. ಇವನು ಯೆಹೂದ ಅಕ್ಜೀಬಿನಲ್ಲಿದ್ದಾಗ+ ಹುಟ್ಟಿದ.
6 ಸ್ವಲ್ಪ ಸಮಯ ಆದ್ಮೇಲೆ ಯೆಹೂದ ತನ್ನ ಮೊದಲನೇ ಮಗ ಏರನಿಗೆ ತಾಮಾರ್+ ಅನ್ನೋ ಹೆಣ್ಣನ್ನ ಮದುವೆ ಮಾಡಿಸಿದ. 7 ಆದ್ರೆ ಏರ್ ಯೆಹೋವನ ದೃಷ್ಟಿಯಲ್ಲಿ ಕೆಟ್ಟದು ಮಾಡ್ತಿದ್ದ. ಹಾಗಾಗಿ ಯೆಹೋವ ಅವನನ್ನ ಸಾಯಿಸಿದನು. 8 ಹಾಗಾಗಿ ಯೆಹೂದ ಓನಾನನಿಗೆ “ನೀನು ನಿನ್ನ ಅತ್ತಿಗೆಯನ್ನ ಮದುವೆ ಆಗು. ಮೈದುನನಾಗಿ ನಿನ್ನ ಕರ್ತವ್ಯ ಮಾಡಿ ಅಣ್ಣನ ವಂಶ ಬೆಳೆಸು” ಅಂದ.+ 9 ಆದ್ರೆ ಓನಾನ ತನ್ನ ಮೂಲಕ ಅತ್ತಿಗೆಗೆ ಹುಟ್ಟೋ ಮಕ್ಕಳು ತನ್ನದಾಗಲ್ಲ+ ಅಂತ ತಿಳಿದು ಅವಳನ್ನ ಕೂಡುವಾಗೆಲ್ಲ ವೀರ್ಯ ನೆಲಕ್ಕೆ ಬೀಳಿಸ್ತಿದ್ದ. ಯಾಕಂದ್ರೆ ಅವನು ತನ್ನ ಅಣ್ಣನಿಗಾಗಿ ವಂಶ ಹುಟ್ಟಿಸೋಕೆ ಬಯಸಲಿಲ್ಲ.+ 10 ಅವನು ಮಾಡಿದ್ದು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು. ಹಾಗಾಗಿ ಅವನನ್ನ ಸಹ ಸಾಯಿಸಿದನು.+ 11 ‘ಒಂದುವೇಳೆ ಶೇಲಹನನ್ನ ತಾಮಾರಳಿಗೆ ಮದುವೆ ಮಾಡಿಸಿದ್ರೆ ಅವನು ಸಹ ಅವನ ಅಣ್ಣಂದಿರ ತರ ಸಾಯಬಹುದು’+ ಅಂತ ನೆನಸಿ ಯೆಹೂದ ತಾಮಾರಳಿಗೆ “ನೀನು ನಿನ್ನ ತಂದೆ ಮನೆಗೆ ಹೋಗು. ನನ್ನ ಮಗ ಶೇಲಹ ದೊಡ್ಡವನಾಗೋ ತನಕ ಅಲ್ಲೇ ಇರು, ಮದುವೆ ಆಗಬೇಡ” ಅಂದ. ಹಾಗಾಗಿ ತಾಮಾರ ತಂದೆ ಮನೆಗೆ ಹೋಗಿ ಅಲ್ಲೇ ಇದ್ದಳು.
12 ಸ್ವಲ್ಪ ಸಮಯ ಆದ್ಮೇಲೆ ಶೂಗನ ಮಗಳು+ ಅಂದ್ರೆ ಯೆಹೂದನ ಹೆಂಡತಿ ತೀರಿಹೋದಳು. ಯೆಹೂದ ಅವಳಿಗಾಗಿ ಶೋಕಿಸಿದ. ಶೋಕದ ದಿನಗಳು ಮುಗಿದ ಮೇಲೆ ಅವನು ತನ್ನ ಸ್ನೇಹಿತ ಅದುಲ್ಲಾಮ್ಯನಾದ ಹೀರಾನ ಜೊತೆ+ ತಿಮ್ನಾದಲ್ಲಿ+ ತನ್ನ ಕುರಿಗಳ ಉಣ್ಣೇ ಕತ್ತರಿಸ್ತಾ ಇದ್ದವರ ಹತ್ರ ಹೋದ. 13 ತಾಮಾರಳಿಗೆ ತನ್ನ ಮಾವ ಕುರಿಗಳ ಉಣ್ಣೇ ಕತ್ತರಿಸೋಕೆ ಎತ್ತರ ಪ್ರದೇಶವಾದ ತಿಮ್ನಾಕ್ಕೆ ಹೋಗ್ತಿದ್ದಾನೆ ಅನ್ನೋ ಸುದ್ದಿ ಸಿಕ್ತು. 14 ಶೇಲಹ ದೊಡ್ಡವನಾದ್ರೂ ಮಾವ ಅವಳಿಗೆ ಅವನನ್ನ ಮದುವೆ ಮಾಡಿಸಿ ಕೊಡಲಿಲ್ಲ. ಹಾಗಾಗಿ ಅವಳು ವಿಧವೆಯ ಬಟ್ಟೆ ತೆಗೆದಿಟ್ಟು ಬೇರೆ ಬಟ್ಟೆ ಹಾಕೊಂಡು ಶಾಲ್ ಸುತ್ಕೊಂಡು ಮುಸುಕು ಹಾಕೊಂಡಳು. ಆಮೇಲೆ ತಿಮ್ನಾಕ್ಕೆ ಹೋಗೋ ದಾರಿಯಲ್ಲಿರೋ ಏನಯಿಮಿನ ಬಾಗಿಲ ಹತ್ರ ಕೂತಳು.+
15 ಯೆಹೂದ ಅವಳನ್ನ ನೋಡಿದ, ಅವಳು ಮುಖ ಮುಚ್ಚಿದ್ರಿಂದ ಅವಳನ್ನ ವೇಶ್ಯೆ ಅಂದ್ಕೊಂಡ. 16 ಅವಳು ತನ್ನ ಸೊಸೆ+ ಅಂತ ಗೊತ್ತಾಗದೆ ದಾರಿ ಬದಿ ಅವಳ ಹತ್ರ ಹೋಗಿ “ನಾನು ನಿನ್ನನ್ನ ಸಂಗಮಿಸೋಕೆ ಒಪ್ತಿಯಾ?” ಅಂದ. ಅದಕ್ಕೆ ಅವಳು “ಬದಲಿಗೆ ನೀನೇನು ಕೊಡ್ತೀಯಾ?” ಅಂದಳು. 17 ಆಗ “ನನ್ನ ಹಿಂಡಿನಿಂದ ಒಂದು ಆಡುಮರಿ ಕಳಿಸಿಕೊಡ್ತೀನಿ” ಅಂದ. ಆದ್ರೆ ಅವಳು “ಅಲ್ಲಿ ತನಕ ನನ್ನ ಹತ್ರ ಏನಾದ್ರೂ ಒತ್ತೆ ಇಡು” ಅಂದಳು. 18 ಅದಕ್ಕೆ “ನಾನೇನು ಒತ್ತೆ ಇಡಲಿ?” ಅಂದಾಗ ಅವಳು “ನಿನ್ನ ಮುದ್ರೆ ಉಂಗುರ,+ ಅದ್ರ ದಾರ, ನಿನ್ನ ಕೈಯಲ್ಲಿರೋ ಕೋಲು ಕೊಡು” ಅಂದಳು. ಆಗ ಅವನು ಅವುಗಳನ್ನ ಕೊಟ್ಟು ಅವಳನ್ನ ಕೂಡಿದ. ಹೀಗೆ ಅವಳು ಅವನಿಂದ ಗರ್ಭಿಣಿ ಆದಳು. 19 ಆಮೇಲೆ ಅವಳು ಅಲ್ಲಿಂದ ಹೋದಳು. ಅವಳು ಸುತ್ಕೊಂಡಿದ್ದ ಶಾಲ್ ತೆಗೆದು ವಿಧವೆ ಬಟ್ಟೆ ಹಾಕೊಂಡಳು.
20 ಆಮೇಲೆ ಯೆಹೂದ ಒತ್ತೆ ಇಟ್ಟದ್ದನ್ನ ಬಿಡಿಸಿಕೊಳ್ಳೋಕೆ ತನ್ನ ಸ್ನೇಹಿತ ಅದುಲ್ಲಾಮ್ಯನ+ ಕೈಯಲ್ಲಿ ಆಡುಮರಿ ಕೊಟ್ಟು ಕಳಿಸಿದ. ಆದ್ರೆ ಅವನಿಗೆ ಅವಳು ಸಿಗಲೇ ಇಲ್ಲ. 21 ಅವನು ಆ ಊರಿನ ಗಂಡಸರಿಗೆ “ಏನಯಿಮಿನ ದಾರಿ ಪಕ್ಕದಲ್ಲಿ ಇರ್ತಿದ್ದ ವೇಶ್ಯೆ* ಎಲ್ಲಿದ್ದಾಳೆ?” ಅಂತ ಕೇಳಿದ. ಆದ್ರೆ ಅವರು “ಈ ಜಾಗದಲ್ಲಿ ಇಷ್ಟರ ತನಕ ಯಾವ ವೇಶ್ಯೆನೂ ಇರಲಿಲ್ಲ” ಅಂತ ಹೇಳಿದ್ರು. 22 ಕೊನೆಗೆ ಅವನು ಯೆಹೂದನ ಹತ್ರ ಹೋಗಿ “ನನಗೆ ಅವಳು ಸಿಗಲಿಲ್ಲ. ಅಷ್ಟೇ ಅಲ್ಲ ಆ ಸ್ಥಳದಲ್ಲಿ ಇಷ್ಟರ ತನಕ ಯಾವ ವೇಶ್ಯೆನೂ ಇರಲಿಲ್ಲ ಅಂತ ಅಲ್ಲಿದ್ದವರು ಹೇಳಿದ್ರು” ಅಂದ. 23 ಅದಕ್ಕೆ ಯೆಹೂದ “ಹೋಗ್ಲಿ ಬಿಡು, ಅದನ್ನೆಲ್ಲ ಅವಳೇ ಇಟ್ಕೊಳ್ಳಲಿ. ನಾನಂತೂ ಹೇಳಿದ ಹಾಗೆ ಆಡುಮರಿ ಕಳಿಸಿಕೊಟ್ಟೆ. ಅವಳು ಸಿಗದಿದ್ರೆ ನಾನೇನು ಮಾಡೋಕಾಗುತ್ತೆ? ಮತ್ತೆ ಅವಳನ್ನ ಹುಡುಕೋಕೆ ಹೋದ್ರೆ ನಮಗೇ ಅವಮಾನ” ಅಂದ.
24 ಸುಮಾರು ಮೂರು ತಿಂಗಳು ಆದ್ಮೇಲೆ ಯೆಹೂದನಿಗೆ ಅವನ ಸೊಸೆ ತಾಮಾರ ವ್ಯಭಿಚಾರ ಮಾಡಿದ್ದಾಳೆ, ಇದ್ರಿಂದ ಗರ್ಭಿಣಿ ಆಗಿದ್ದಾಳೆ ಅಂತ ಸುದ್ದಿ ಸಿಕ್ತು. ಅದಕ್ಕೆ ಯೆಹೂದ “ಅವಳನ್ನ ಹೊರಗೆ ಕರ್ಕೊಂಡು ಬನ್ನಿ, ಕೊಂದು ಸುಟ್ಟುಹಾಕಿ”+ ಅಂದ. 25 ಅವಳನ್ನ ಹೊರಗೆ ಕರ್ಕೊಂಡು ಬರ್ತಿದ್ದಾಗ ತನ್ನ ಹತ್ರ ಒತ್ತೆಯಾಗಿ ಇಟ್ಟ ವಸ್ತುಗಳನ್ನ ಅವಳು ಮಾವನಿಗೆ ಕಳಿಸ್ಕೊಟ್ಟು “ಈ ವಸ್ತುಗಳು ಯಾರದ್ದೋ ಅವನಿಂದಾನೇ ನಾನು ಗರ್ಭಿಣಿ ಆದೆ” ಅಂತ ಹೇಳಿದಳು. ಅಲ್ಲದೆ “ದಯವಿಟ್ಟು ಈ ಮುದ್ರೆ ಉಂಗುರ, ಅದ್ರ ದಾರ, ಕೋಲು ಯಾರದ್ದು, ನೋಡು”+ ಅಂದಳು. 26 ಯೆಹೂದ ಅವುಗಳನ್ನ ನೋಡಿ “ನಾನು ಅವಳನ್ನ ನನ್ನ ಮಗ ಶೇಲಹನಿಗೆ ಮದುವೆ ಮಾಡಿಸಲಿಲ್ಲ. ಹಾಗಾಗಿ ಅವಳು ನನಗಿಂತ ಹೆಚ್ಚು ನೀತಿವಂತಳಾಗಿ ನಡ್ಕೊಂಡಳು”+ ಅಂದ. ಇದಾದ ಮೇಲೆ ಅವನು ಮತ್ತೆ ಅವಳ ಜೊತೆ ಮಲಗಲಿಲ್ಲ.
27 ಅವಳಿಗೆ ಹೆರಿಗೆ ಸಮಯ ಬಂತು. ಅವಳ ಗರ್ಭದಲ್ಲಿ ಅವಳಿ ಮಕ್ಕಳಿದ್ರು. 28 ಹೆರಿಗೆ ಆಗುವಾಗ ಒಂದು ಮಗು ತನ್ನ ಕೈ ಹೊರಗೆ ಚಾಚಿತು. ತಕ್ಷಣ ಸೂಲಗಿತ್ತಿ* “ಇದು ಮೊದಲನೇ ಮಗು” ಅಂತೇಳಿ ಗುರುತಿಗಾಗಿ ಅವನ ಕೈಗೆ ಕೆಂಪು ಬಣ್ಣದ ದಾರ ಕಟ್ಟಿದಳು. 29 ಆದ್ರೆ ಅವನು ಕೈ ಹಿಂದಕ್ಕೆ ತೆಗೆದಾಗ ಅವನ ಸಹೋದರ ಹೊರಗೆ ಬಂದ. ಆಗ ಅವಳು ಆಶ್ಚರ್ಯದಿಂದ “ನೀನೇ ಸೀಳಿ ದಾರಿ ಮಾಡ್ಕೊಂಡು ಬಂದ್ಯಾ!” ಅಂದಳು. ಹಾಗಾಗಿ ಅವನಿಗೆ ಪೆರೆಚ್*+ ಅಂತ ಹೆಸರಿಟ್ರು. 30 ಆಮೇಲೆ ಕೈಗೆ ಕೆಂಪು ಬಣ್ಣದ ದಾರ ಕಟ್ಟಿದ್ದ ಅವನ ಸಹೋದರ ಬಂದ. ಅವನಿಗೆ ಜೆರಹ+ ಅಂತ ಹೆಸರಿಟ್ರು.
39 ಇಷ್ಮಾಯೇಲ್ಯರು+ ಯೋಸೇಫನನ್ನ ಈಜಿಪ್ಟಿಗೆ+ ಕರ್ಕೊಂಡು ಹೋದ ಮೇಲೆ ಅವನನ್ನ ಈಜಿಪ್ಟಿನ ಪೋಟೀಫರ+ ಖರೀದಿಸಿದ. ಪೋಟೀಫರ ಫರೋಹನ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ, ಕಾವಲುಗಾರರ ಮುಖ್ಯಸ್ಥನಾಗಿದ್ದ. 2 ಯೆಹೋವ ಯೋಸೇಫನ+ ಜೊತೆಯಲ್ಲಿ ಇದ್ದದ್ರಿಂದ ಅವನು ಮಾಡಿದ ಎಲ್ಲ ಕೆಲಸಗಳಲ್ಲಿ ಅವನಿಗೆ ಯಶಸ್ಸು ಸಿಕ್ತು. ಅಷ್ಟೇ ಅಲ್ಲ, ಈಜಿಪ್ಟಿನ ಅವನ ಧಣಿ ಅವನಿಗೆ ತನ್ನ ಮನೆಯಲ್ಲಿ ಕೆಲವು ಜವಾಬ್ದಾರಿ ಕೊಟ್ಟ. 3 ಯೆಹೋವ ಅವನ ಜೊತೆ ಇರೋದನ್ನ, ಅವನ ಪ್ರತಿಯೊಂದು ಕೆಲಸವನ್ನ ಯೆಹೋವ ಆಶೀರ್ವದಿಸ್ತಾ ಇರೋದನ್ನ ಅವನ ಧಣಿ ಗಮನಿಸಿದ.
4 ಪೋಟೀಫರ ಯೋಸೇಫನನ್ನ ತುಂಬ ಮೆಚ್ಚಿದ. ಹಾಗಾಗಿ ಅವನನ್ನ ತನ್ನ ಮುಖ್ಯ ಸೇವಕನನ್ನಾಗಿ ನೇಮಿಸಿದ. ಮನೆಯ ಎಲ್ಲ ಕೆಲಸಕಾರ್ಯಗಳನ್ನ, ತನಗಿದ್ದ ಎಲ್ಲವನ್ನ ನೋಡ್ಕೊಳ್ಳೋಕೆ ಯೋಸೇಫನನ್ನ ನೇಮಿಸಿದ. 5 ಅವತ್ತಿಂದ ಯೆಹೋವ ಯೋಸೇಫನಿಂದಾಗಿ ಆ ಈಜಿಪ್ಟಿನವನ ಮನೆಯವರನ್ನ ಆಶೀರ್ವದಿಸ್ತಾ ಇದ್ದನು. ಪೋಟೀಫರನ ಮನೆ ಮತ್ತು ಜಮೀನಲ್ಲಿದ್ದ ಎಲ್ಲವನ್ನ ಯೆಹೋವ ಆಶೀರ್ವದಿಸಿದನು.+ 6 ಸಮಯ ಕಳೆದ ಹಾಗೆ ಧಣಿ ತನ್ನೆಲ್ಲ ಆಸ್ತಿ ನೋಡ್ಕೊಳ್ಳೋ ಜವಾಬ್ದಾರಿ ಸಹ ಯೋಸೇಫನಿಗೆ ಕೊಟ್ಟ. ಹಾಗಾಗಿ ಆ ಧಣಿಗೆ ಯಾವುದರ ಬಗ್ಗೆನೂ ಚಿಂತೆ ಇರಲಿಲ್ಲ. ಊಟಕ್ಕೆ ಏನೇನು ಇರಬೇಕು ಅನ್ನೋದನ್ನ ಮಾತ್ರ ಹೇಳ್ತಿದ್ದ. ಯೋಸೇಫ ದೊಡ್ಡವನಾದಾಗ ನೋಡೋಕೆ ತುಂಬ ಸುಂದರನಾಗಿದ್ದ. ಅವನಿಗೆ ಗಟ್ಟಿಮುಟ್ಟಾದ ಮೈಕಟ್ಟಿತ್ತು.
7 ಸ್ವಲ್ಪ ಸಮಯ ಆದ್ಮೇಲೆ ಧಣಿಯ ಹೆಂಡತಿ ಯೋಸೇಫನ ಮೇಲೆ ಕಣ್ಣುಹಾಕೋಕೆ ಶುರುಮಾಡಿದಳು. ಅಲ್ಲದೆ ಅವನಿಗೆ “ಬಾ, ನನ್ನ ಜೊತೆ ಮಲಗು” ಅಂತ ಕರಿತಿದ್ದಳು. 8 ಆದ್ರೆ ಅವನು ಅದಕ್ಕೆ ಒಪ್ಪದೆ ಅವಳಿಗೆ “ನೋಡು, ನನ್ನ ಧಣಿ ತನಗಿರೋ ಎಲ್ಲವನ್ನ ನನ್ನ ಕೈಗೆ ಒಪ್ಪಿಸಿದ್ದಾನೆ. ಅವನು ಯಾವತ್ತೂ ಯಾವುದರ ಬಗ್ಗೆನೂ ನನ್ನಿಂದ ಲೆಕ್ಕ ಕೇಳಲ್ಲ. ನನ್ನ ಮೇಲೆ ಅವನಿಗೆ ಅಷ್ಟು ನಂಬಿಕೆ ಇದೆ. 9 ಈ ಮನೇಲಿ ನನಗೆ ಇರುವಷ್ಟು ಅಧಿಕಾರ ಬೇರೆ ಯಾರಿಗೂ ಇಲ್ಲ. ಧಣಿ ಎಲ್ಲವನ್ನ ನನ್ನ ಕೈಗೆ ಕೊಟ್ಟಿದ್ದಾನೆ. ಆದ್ರೆ ನೀನು ಅವನ ಹೆಂಡತಿ ಆಗಿರೋದ್ರಿಂದ ನಿನ್ನನ್ನ ಮಾತ್ರ ನನ್ನ ಕೈಗೆ ಒಪ್ಪಿಸಲಿಲ್ಲ. ಹೀಗಿದ್ದ ಮೇಲೆ ಈ ಮಹಾ ಕೆಟ್ಟ ಕೆಲಸ ಮಾಡಿ ದೇವರ ವಿರುದ್ಧ ಪಾಪ ಮಾಡೋಕೆ ನನ್ನಿಂದ ಸಾಧ್ಯನೇ ಇಲ್ಲ”+ ಅಂದ.
10 ಅವಳು ಪ್ರತಿದಿನ ಯೋಸೇಫನ ಹತ್ರ ಮಾತಾಡಿ ಒಪ್ಪಿಸೋಕೆ ಪ್ರಯತ್ನಿಸ್ತಾ ಇದ್ದಳು. ಆದ್ರೆ ಅವನು ಅವಳ ಜೊತೆ ಮಲಗೋದಕ್ಕಾಗಲಿ ಅವಳ ಜೊತೆ ಇರೋದಕ್ಕಾಗಲಿ ಒಪ್ಪಿಕೊಳ್ಳಲೇ ಇಲ್ಲ. 11 ಒಂದಿನ ಅವನು ಕೆಲಸ ಮಾಡೋಕೆ ಮನೆಯೊಳಗೆ ಹೋದಾಗ ಮನೆಯಲ್ಲಿ ಕೆಲಸದವರು ಯಾರೂ ಇರಲಿಲ್ಲ. 12 ಆಗ ಅವಳು ಅವನ ಬಟ್ಟೆ ಹಿಡಿದು ಎಳೆದು “ಬಾ, ನನ್ನ ಜೊತೆ ಮಲಗು” ಅಂದಳು. ಅವನು ತನ್ನ ಬಟ್ಟೆ ಅವಳ ಕೈಯಲ್ಲೇ ಬಿಟ್ಟು ಹೊರಗೆ ಓಡಿ ಹೋದ. 13 ಅವನು ಹೊರಗೆ ಓಡಿ ಹೋದದ್ದನ್ನ ಮತ್ತು ಅವನ ಬಟ್ಟೆ ತನ್ನ ಕೈಯಲ್ಲೇ ಇರೋದನ್ನ ಅವಳು ನೋಡಿದ ತಕ್ಷಣ 14 ಗಟ್ಟಿಯಾಗಿ ಕೂಗಿ ಮನೆಯ ಗಂಡಸರನ್ನ ಕರೆದು “ನೋಡಿ, ನನ್ನ ಗಂಡ ಈ ಇಬ್ರಿಯನನ್ನ ಕರ್ಕೊಂಡು ಬಂದು ನಮ್ಮನ್ನ ಅವಮಾನ ಮಾಡಿದ್ದಾನೆ.* ಆ ಇಬ್ರಿಯ ನನ್ನನ್ನ ಕೆಡಿಸೋಕೆ ಬಂದ. ಆಗ ನಾನು ಜೋರಾಗಿ ಕಿರಿಚಿದೆ. 15 ಕಿರಿಚಿದ ತಕ್ಷಣ ಅವನು ತನ್ನ ಬಟ್ಟೆನ ನನ್ನ ಹತ್ರ ಬಿಟ್ಟು ಓಡಿಹೋದ” ಅಂದಳು. 16 ಆಮೇಲೆ ಅವಳು ಯೋಸೇಫನ ಧಣಿ ಮನೆಗೆ ಬರೋ ತನಕ ಆ ಬಟ್ಟೆಯನ್ನ ತನ್ನ ಹತ್ರಾನೇ ಇಟ್ಟುಕೊಂಡಳು.
17 ಗಂಡ ಮನೆಗೆ ಬಂದಾಗ ಅವಳು ಅದನ್ನೇ ಹೇಳ್ತಾ “ನೀನು ನಮ್ಮ ಮನೆಗೆ ಕರ್ಕೊಂಡು ಬಂದ ಆ ಇಬ್ರಿಯ ಸೇವಕ ನನಗೆ ಅವಮಾನ ಮಾಡೋಕೆ ಪ್ರಯತ್ನಿಸಿದ. 18 ಆದ್ರೆ ನಾನು ಜೋರಾಗಿ ಕಿರಿಚಿದಾಗ ತಕ್ಷಣ ಅವನು ತನ್ನ ಬಟ್ಟೆಯನ್ನ ನನ್ನ ಹತ್ರ ಬಿಟ್ಟು ಓಡಿಹೋದ” ಅಂದಳು. 19 “ನಿನ್ನ ಸೇವಕ ನನಗೆ ಹೀಗೀಗೆ ಮಾಡಿದ” ಅಂತ ಹೆಂಡತಿ ಹೇಳಿದ್ದನ್ನ ಕೇಳಿ ಪೋಟೀಫರನ ಕೋಪ ನೆತ್ತಿಗೇರಿತು. 20 ಹಾಗಾಗಿ ಅವನು ಯೋಸೇಫನನ್ನ ಹಿಡಿದು ರಾಜನ ಕೈದಿಗಳನ್ನ ಇಡ್ತಿದ್ದ ಜೈಲಿಗೆ ಹಾಕಿಸಿದ. ಹೀಗೆ ಯೋಸೇಫ ಜೈಲಲ್ಲೇ ಇದ್ದ.+
21 ಆದ್ರೆ ಯೆಹೋವ ಯಾವಾಗ್ಲೂ ಯೋಸೇಫನ ಜೊತೆ ಇದ್ದನು, ಅವನಿಗೆ ಶಾಶ್ವತ ಪ್ರೀತಿ ತೋರಿಸ್ತಾ ಇದ್ದನು. ಅಲ್ಲದೆ ಆತನು ಯೋಸೇಫನನ್ನ ಆಶೀರ್ವದಿಸಿ ಜೈಲಿನ ಮುಖ್ಯಾಧಿಕಾರಿ ಅವನಿಗೆ ದಯೆ ತೋರಿಸೋ ತರ ಮಾಡಿದನು.+ 22 ಹಾಗಾಗಿ ಜೈಲಿನ ಮುಖ್ಯಾಧಿಕಾರಿ ಎಲ್ಲ ಕೈದಿಗಳ ಮೇಲ್ವಿಚಾರಣೆ ಮಾಡೋಕೆ ಯೋಸೇಫನನ್ನ ನೇಮಿಸಿದ. ಏನೇನು ಕೆಲಸ ಮಾಡಬೇಕು ಅಂತ ಯೋಸೇಫನೇ ಕೈದಿಗಳಿಗೆ ಅಪ್ಪಣೆ ಕೊಡ್ತಿದ್ದ.+ 23 ಯೆಹೋವ ಯೋಸೇಫನ ಜೊತೆ ಇದ್ದನು. ಅವನು ಮಾಡ್ತಿದ್ದ ಎಲ್ಲ ಕೆಲಸವನ್ನ ಯೆಹೋವ ಯಶಸ್ವಿ ಮಾಡ್ತಿದ್ದನು. ಹಾಗಾಗಿ ಯೋಸೇಫನ ಕೈಕೆಳಗಿದ್ದ ಯಾವುದೇ ವಿಷ್ಯದ ಬಗ್ಗೆ ಜೈಲಿನ ಮುಖ್ಯಾಧಿಕಾರಿಗೆ ಸ್ವಲ್ಪನೂ ಚಿಂತೆ ಇರಲಿಲ್ಲ.+
40 ಸ್ವಲ್ಪ ಸಮಯ ಆದ್ಮೇಲೆ ಈಜಿಪ್ಟಿನ ರಾಜನ ಮುಖ್ಯ ಪಾನದಾಯಕ+ ಮತ್ತು ಮುಖ್ಯ ಅಡುಗೆಗಾರ* ತಮ್ಮ ಒಡೆಯನಾದ ರಾಜನ ವಿರುದ್ಧ ಅಪರಾಧ ಮಾಡಿದ್ರು. 2 ಅದಕ್ಕೆ ಫರೋಹ ತನ್ನ ಕೈಕೆಳಗಿದ್ದ ಆ ಇಬ್ರು ಅಧಿಕಾರಿಗಳ+ ಮೇಲೆ ತುಂಬ ಸಿಟ್ಟು ಬಂದು 3 ಅವರನ್ನ ಜೈಲಿಗೆ ಹಾಕಿಸಿದ. ಕಾವಲುಗಾರರ ಮುಖ್ಯಸ್ಥನ+ ಉಸ್ತುವಾರಿಯಲ್ಲಿ ಆ ಜೈಲು ಇತ್ತು. ಅಲ್ಲೇ ಯೋಸೇಫ ಕೂಡ ಕೈದಿಯಾಗಿದ್ದ.+ 4 ಆ ಮುಖ್ಯ ಪಾನದಾಯಕನ ಮತ್ತು ಮುಖ್ಯ ಅಡುಗೆಗಾರನ ಜೊತೆಯಲ್ಲಿದ್ದು ಸೇವೆಮಾಡೋಕೆ ಕಾವಲುಗಾರರ ಮುಖ್ಯಸ್ಥ ಯೋಸೇಫನನ್ನ ನೇಮಿಸಿದ.+ ಆ ಅಧಿಕಾರಿಗಳು ತುಂಬ ದಿನ ಜೈಲಲ್ಲೇ ಇದ್ರು.
5 ಈಜಿಪ್ಟಿನ ರಾಜ ಜೈಲಿಗೆ ಹಾಕಿಸಿದ್ದ ಆ ಇಬ್ರು ಅಧಿಕಾರಿಗಳಿಗೆ ಒಂದೇ ರಾತ್ರಿ ಕನಸು ಬಿತ್ತು. ಅವರಿಬ್ಬರ ಕನಸುಗಳಿಗೆ ಬೇರೆಬೇರೆ ಅರ್ಥ ಇತ್ತು. 6 ಬೆಳಿಗ್ಗೆ ಯೋಸೇಫ ಅವರ ಹತ್ರ ಬಂದಾಗ ಅವರು ತುಂಬ ಚಿಂತೆಯಲ್ಲಿ ಇರೋದನ್ನ ನೋಡಿ 7 “ಇವತ್ತು ನಿಮ್ಮ ಮುಖ ಬಾಡಿದೆ ಯಾಕೆ?” ಅಂತ ಕೇಳಿದ. 8 ಅದಕ್ಕೆ ಅವರು “ನಮ್ಮಿಬ್ಬರಿಗೂ ಒಂದೊಂದು ಕನಸು ಬಿತ್ತು. ಆದ್ರೆ ಅದ್ರ ಅರ್ಥ ಹೇಳೋರು ಇಲ್ಲಿ ಯಾರೂ ಇಲ್ಲ” ಅಂದ್ರು. ಆಗ ಅವನು “ಕನಸುಗಳ ಅರ್ಥ ಹೇಳೋಕೆ ದೇವರಿಗೆ ಆಗುತ್ತೆ ಅಲ್ವಾ?+ ದಯವಿಟ್ಟು ನಿಮ್ಮ ಕನಸನ್ನ ನನಗೆ ಹೇಳಿ” ಅಂದ.
9 ಆಗ ಮುಖ್ಯ ಪಾನದಾಯಕ ಯೋಸೇಫನಿಗೆ “ಕನಸಲ್ಲಿ ನನ್ನ ಮುಂದೆ ಒಂದು ದ್ರಾಕ್ಷಿ ಬಳ್ಳಿ ಇತ್ತು. 10 ಆ ದ್ರಾಕ್ಷಿ ಬಳ್ಳಿಗೆ ಮೂರು ಕೊಂಬೆಗಳು ಇತ್ತು. ಅವು ಚಿಗುರಿ ಹೂವು ಬಿಡ್ತು. ಆ ಹೂವುಗಳು ದ್ರಾಕ್ಷಿ ಗೊಂಚಲುಗಳಾಗಿ ಹಣ್ಣಾದವು. 11 ನನ್ನ ಕೈಯಲ್ಲಿ ಫರೋಹನ ಲೋಟ ಇತ್ತು. ನಾನು ದ್ರಾಕ್ಷಿಹಣ್ಣುಗಳನ್ನ ಕಿತ್ತು ಫರೋಹನ ಲೋಟದಲ್ಲಿ ಅವುಗಳನ್ನ ಹಿಂಡಿದೆ. ಆಮೇಲೆ ಫರೋಹನ ಕೈಗೆ ಆ ಲೋಟ ಕೊಟ್ಟೆ” ಅಂದ. 12 ಆಗ ಯೋಸೇಫ “ನಿನ್ನ ಕನಸಿನ ಅರ್ಥ ಏನಂದ್ರೆ ಆ ಮೂರು ಕೊಂಬೆ ಅಂದ್ರೆ ಮೂರು ದಿನ. 13 ಇನ್ನು ಮೂರು ದಿನದಲ್ಲಿ ಫರೋಹ ನಿನ್ನನ್ನ ಬಿಡುಗಡೆ ಮಾಡಿ ಮತ್ತೆ ಕೆಲಸಕ್ಕೆ ಸೇರಿಸ್ಕೊಳ್ತಾನೆ.+ ನೀನು ಮುಂಚೆ ಫರೋಹನ ಪಾನದಾಯಕನಾಗಿ ಇದ್ದಾಗ ಅವನ ಕೈಗೆ ಲೋಟ ಕೊಡ್ತಿದ್ದ ಹಾಗೆ ಮುಂದೆನೂ ಕೊಡ್ತೀಯ.+ 14 ನಿನಗೆ ಒಳ್ಳೇದಾಗುವಾಗ ನನ್ನನ್ನ ನೆನಪು ಮಾಡ್ಕೊ. ದಯವಿಟ್ಟು ನನಗೆ ಶಾಶ್ವತ ಪ್ರೀತಿ ತೋರಿಸು. ನನ್ನ ಬಗ್ಗೆ ಫರೋಹನಿಗೆ ತಿಳಿಸಿ ನನ್ನನ್ನ ಈ ಜೈಲಿಂದ ಬಿಡಿಸು. 15 ನನ್ನನ್ನ ಇಬ್ರಿಯರ ದೇಶದಿಂದ ಅಪಹರಿಸಿ ಇಲ್ಲಿಗೆ ತಂದ್ರು.+ ಇಲ್ಲಿ ನಾನೇನೂ ತಪ್ಪು ಮಾಡದಿದ್ರೂ ನನ್ನನ್ನ ಜೈಲಿಗೆ* ಹಾಕಿದ್ರು” ಅಂದ.+
16 ಯೋಸೇಫ ಹೇಳಿದ ಕನಸಿನ ಅರ್ಥ ಒಳ್ಳೇದಾಗಿರೋದನ್ನ ಮುಖ್ಯ ಅಡುಗೆಗಾರ ನೋಡಿ ಅವನಿಗೆ “ನನಗೂ ಒಂದು ಕನಸು ಬಿತ್ತು. ಆ ಕನಸಲ್ಲಿ ನನ್ನ ತಲೆ ಮೇಲೆ ಮೂರು ಬುಟ್ಟಿ ಇತ್ತು. ಅವುಗಳಲ್ಲಿ ಒಳ್ಳೊಳ್ಳೇ ರೊಟ್ಟಿಗಳು ಇದ್ದವು. 17 ಮೇಲಿನ ಬುಟ್ಟಿಯಲ್ಲಿ ಫರೋಹನಿಗಾಗಿ ವಿಧವಿಧವಾದ ರೊಟ್ಟಿಗಳು ಇದ್ದವು. ಹಕ್ಕಿಗಳು ಬಂದು ನನ್ನ ತಲೆ ಮೇಲಿದ್ದ ಬುಟ್ಟಿಯಿಂದ ರೊಟ್ಟಿ ತಿಂತಾ ಇದ್ದವು” ಅಂದ. 18 ಆಗ ಯೋಸೇಫ “ನಿನ್ನ ಕನಸಿನ ಅರ್ಥ ಏನಂದ್ರೆ ಆ ಮೂರು ಬುಟ್ಟಿ ಅಂದ್ರೆ ಮೂರು ದಿನ. 19 ಇನ್ನು ಮೂರು ದಿನದಲ್ಲಿ ಫರೋಹ ನಿನ್ನ ತಲೆ ಕಡಿದು ನಿನ್ನನ್ನ ಮರದ ಕಂಬಕ್ಕೆ ತೂಗುಹಾಕ್ತಾನೆ. ಹಕ್ಕಿಗಳು ಬಂದು ನಿನ್ನ ಮಾಂಸ ತಿನ್ನುತ್ತೆ” ಅಂದ.+
20 ಮೂರನೇ ದಿನ ಫರೋಹನ ಹುಟ್ಟಿದ ದಿನವಾಗಿತ್ತು.+ ಹಾಗಾಗಿ ಅವನು ತನ್ನ ಎಲ್ಲ ಸೇವಕರಿಗಾಗಿ ಔತಣ ಮಾಡಿಸಿದ. ಆಗ ಅವನು ತನ್ನ ಸೇವಕರ ಮುಂದೆ ಮುಖ್ಯ ಪಾನದಾಯಕನನ್ನ ಮತ್ತು ಮುಖ್ಯ ಅಡುಗೆಗಾರನನ್ನ ಕರೆಸಿ ನಿಲ್ಲಿಸಿದ. 21 ಮುಖ್ಯ ಪಾನದಾಯಕನನ್ನ ಅವನ ಕೆಲಸಕ್ಕೆ ನೇಮಿಸಿದ. ಅವನು ಮತ್ತೆ ಫರೋಹನಿಗೆ ಪಾನ ಕೊಡೋ ಕೆಲಸ ಶುರುಮಾಡಿದ. 22 ಆದ್ರೆ ಫರೋಹ ಮುಖ್ಯ ಅಡುಗೆಗಾರನನ್ನ ಮರದ ಕಂಬಕ್ಕೆ ತೂಗುಹಾಕಿದ. ಹೀಗೆ ಯೋಸೇಫ ಹೇಳಿದ ತರಾನೇ ಆಯ್ತು.+ 23 ಆದ್ರೂ ಮುಖ್ಯ ಪಾನದಾಯಕನಿಗೆ ಯೋಸೇಫನ ನೆನಪು ಬರಲೇ ಇಲ್ಲ ಅವನನ್ನ ಮರೆತುಬಿಟ್ಟ.+
41 ಎರಡು ವರ್ಷ ಆದ್ಮೇಲೆ ಫರೋಹನಿಗೆ ಒಂದು ಕನಸು ಬಿತ್ತು.+ ಆ ಕನಸಲ್ಲಿ ಅವನು ನೈಲ್ ನದಿತೀರದಲ್ಲಿ ನಿಂತಿದ್ದ. 2 ಆಗ ನೋಡೋಕೆ ಚೆನ್ನಾಗಿದ್ದ ಮತ್ತು ಕೊಬ್ಬಿದ ಏಳು ಹಸು ನೈಲ್ ನದಿಯಿಂದ ಮೇಲೆ ಬಂದು ನದಿತೀರದಲ್ಲಿ ಹುಲ್ಲು ಮೇಯ್ತಾ ಇತ್ತು.+ 3 ಆಮೇಲೆ ನೋಡೋಕೆ ಅಸಹ್ಯವಾದ ಮತ್ತು ಬಡಕಲಾದ ಬೇರೆ ಏಳು ಹಸು ನೈಲ್ ನದಿಯಿಂದ ಮೇಲೆ ಬಂತು. ನದಿತೀರದಲ್ಲಿದ್ದ ಕೊಬ್ಬಿದ ಹಸುಗಳ ಪಕ್ಕದಲ್ಲಿ ನಿಂತುಕೊಳ್ತು. 4 ಆ ಅಸಹ್ಯವಾದ, ಬಡಕಲಾದ ಹಸುಗಳು ನೋಡೋಕೆ ಚೆನ್ನಾಗಿದ್ದ ಮತ್ತು ಕೊಬ್ಬಿದ ಏಳು ಹಸುಗಳನ್ನ ತಿನ್ನೋಕೆ ಶುರುಮಾಡ್ತು. ಅಷ್ಟರಲ್ಲಿ ಫರೋಹನಿಗೆ ಎಚ್ಚರ ಆಯ್ತು.
5 ಫರೋಹ ಮತ್ತೆ ನಿದ್ದೆ ಮಾಡಿದಾಗ ಇನ್ನೊಂದು ಕನಸು ಬಿತ್ತು. ಒಂದೇ ದಂಟಿನಲ್ಲಿ ಏಳು ತುಂಬಿದ ತೆನೆ ಬೆಳೆಯೋದನ್ನ ನೋಡಿದ.+ 6 ಆಮೇಲೆ ಟೊಳ್ಳಾದ ಏಳು ತೆನೆ ಬೆಳೀತು, ಅವು ಪೂರ್ವ ದಿಕ್ಕಿನ ಬಿಸಿ ಗಾಳಿಯಿಂದ ಒಣಗಿಹೋಯ್ತು. 7 ಆ ಟೊಳ್ಳಾದ ತೆನೆ ತುಂಬಿದ ಏಳು ತೆನೆಗಳನ್ನ ನುಂಗೋಕೆ ಶುರುಮಾಡ್ತು. ಅಷ್ಟರಲ್ಲಿ ಫರೋಹನಿಗೆ ಎಚ್ಚರ ಆಗಿ ಅದು ಕನಸು ಅಂತ ಗೊತ್ತಾಯ್ತು.
8 ಬೆಳಿಗ್ಗೆ ಫರೋಹ ಚಿಂತೆಯಿಂದ ಒದ್ದಾಡ್ತಿದ್ದ. ಅವನು ಈಜಿಪ್ಟ್ ದೇಶದಲ್ಲಿದ್ದ ಎಲ್ಲ ಮಂತ್ರವಾದಿಗಳನ್ನ, ಜ್ಞಾನಿಗಳನ್ನ ಕರೆಸಿದ. ಫರೋಹ ತನ್ನ ಕನಸುಗಳನ್ನ ಅವರಿಗೆ ಹೇಳಿದ. ಆದ್ರೆ ಯಾರಿಗೂ ಆ ಕನಸುಗಳ ಅರ್ಥ ಹೇಳೋಕೆ ಆಗಲಿಲ್ಲ.
9 ಆಗ ಮುಖ್ಯ ಪಾನದಾಯಕ ಫರೋಹನಿಗೆ “ನಾನು ಮಾಡಿದ ಪಾಪಗಳನ್ನ ಇವತ್ತು ನಿನ್ನ ಮುಂದೆ ಒಪ್ಕೊಳ್ತೀನಿ. 10 ಫರೋಹನಾದ ನೀನು ನಿನ್ನ ಸೇವಕನಾದ ನನ್ನ ಮೇಲೆ, ಮುಖ್ಯ ಅಡುಗೆಗಾರನ ಮೇಲೆ ಕೋಪ ಬಂದು ನಮ್ಮಿಬ್ಬರನ್ನೂ ಕಾವಲುಗಾರರ ಮುಖ್ಯಸ್ಥನ ಉಸ್ತುವಾರಿಯಲ್ಲಿದ್ದ ಜೈಲಿಗೆ ಹಾಕಿಸಿದ್ದಿ.+ 11 ಅಲ್ಲಿದ್ದಾಗ ಒಂದು ರಾತ್ರಿ ನನಗೂ ಮುಖ್ಯ ಅಡುಗೆಗಾರನಿಗೂ ಒಂದೊಂದು ಕನಸು ಬಿತ್ತು. ನಮ್ಮಿಬ್ರ ಕನಸಿನ ಅರ್ಥ ಬೇರೆಬೇರೆ ಆಗಿತ್ತು.+ 12 ಜೈಲಲ್ಲಿ ನಮ್ಮ ಜೊತೆ ಒಬ್ಬ ಇಬ್ರಿಯ ಯುವಕ ಇದ್ದ. ಅವನು ಕಾವಲುಗಾರರ ಮುಖ್ಯಸ್ಥನ ಸೇವಕ.+ ನಮ್ಮ ಕನಸನ್ನ ಅವನಿಗೆ ಹೇಳಿದಾಗ+ ಅವನು ಆ ಕನಸುಗಳ ಅರ್ಥ ಹೇಳಿದ. 13 ಅವನು ಹೇಳಿದ ಹಾಗೇ ನಡಿತು. ನನ್ನ ಕೆಲಸ ನನಗೆ ವಾಪಸ್ ಸಿಕ್ತು. ಆದ್ರೆ ಮುಖ್ಯ ಅಡುಗೆಗಾರನನ್ನ ಮರದ ಕಂಬಕ್ಕೆ ತೂಗುಹಾಕಿದ್ರು”+ ಅಂದ.
14 ಇದನ್ನ ಕೇಳಿ ಫರೋಹ ಯೋಸೇಫನನ್ನ ಕರ್ಕೊಂಡು ಬನ್ನಿ ಅಂತ ಸೇವಕರಿಗೆ ಅಪ್ಪಣೆಕೊಟ್ಟ.+ ಅವರು ಬೇಗ ಹೋಗಿ ಅವನನ್ನ ಜೈಲಿಂದ* ಕರ್ಕೊಂಡು ಬಂದ್ರು.+ ಯೋಸೇಫ ಕ್ಷೌರ ಮಾಡ್ಕೊಂಡು* ಬಟ್ಟೆ ಬದಲಾಯಿಸಿ ಫರೋಹನ ಹತ್ರ ಹೋದ. 15 ಆಗ ಫರೋಹ ಯೋಸೇಫನಿಗೆ “ನನಗೆ ಒಂದು ಕನಸು ಬಿತ್ತು. ಅದ್ರ ಅರ್ಥ ಹೇಳೋರು ಯಾರೂ ಇಲ್ಲ. ನಿನಗೆ ಕನಸಿನ ಅರ್ಥ ಹೇಳೋ ಸಾಮರ್ಥ್ಯ ಇದೆ ಅಂತ ಕೇಳಿದ್ದೀನಿ” ಅಂದ.+ 16 ಅದಕ್ಕೆ ಯೋಸೇಫ “ನನಗೆ ಅಂಥ ಸಾಮರ್ಥ್ಯ ಇಲ್ಲ! ದೇವರೇ ಫರೋಹನಿಗೆ ಒಳ್ಳೇ ಸುದ್ದಿ ತಿಳಿಸ್ತಾನೆ” ಅಂದ.+
17 ಆಗ ಫರೋಹ ಯೋಸೇಫನಿಗೆ “ಕನಸಲ್ಲಿ ನಾನು ನೈಲ್ ನದಿತೀರದಲ್ಲಿ ನಿಂತಿದ್ದೆ. 18 ಆಗ ಕೊಬ್ಬಿದ ಮತ್ತು ನೋಡೋಕೆ ಚೆನ್ನಾಗಿದ್ದ ಏಳು ಹಸು ನೈಲ್ ನದಿಯಿಂದ ಮೇಲೆ ಬಂದು ನದಿತೀರದಲ್ಲಿ ಹುಲ್ಲು ಮೇಯ್ತಾ ಇತ್ತು.+ 19 ಆಮೇಲೆ ಬಡಕಲಾದ, ನೋಡೋಕೆ ತುಂಬ ಅಸಹ್ಯವಾದ ಬೇರೆ ಏಳು ಹಸು ನೈಲ್ ನದಿಯಿಂದ ಮೇಲೆ ಬಂತು. ಅಷ್ಟು ಅಸಹ್ಯವಾದ ಹಸುಗಳನ್ನ ನಾನು ಇಡೀ ಈಜಿಪ್ಟ್ ದೇಶದಲ್ಲಿ ಯಾವತ್ತೂ ನೋಡಿಲ್ಲ. 20 ಆ ಬಡಕಲಾದ ಮತ್ತು ಅಸಹ್ಯವಾದ ಹಸುಗಳು ಮೊದಲು ಬಂದ ಕೊಬ್ಬಿದ ಏಳು ಹಸುಗಳನ್ನ ತಿನ್ನೋಕೆ ಶುರುಮಾಡ್ತು. 21 ಆದ್ರೆ ಅವುಗಳನ್ನ ತಿಂದ ಮೇಲೂ ಆ ಹಸುಗಳು ಏನೂ ತಿನ್ನದ ಹಾಗೆ ಕಾಣ್ತಾ ಇತ್ತು. ಅವು ಮುಂಚಿನ ತರ ಬಡಕಲಾಗಿತ್ತು. ಅಷ್ಟರಲ್ಲಿ ನನಗೆ ಎಚ್ಚರ ಆಯ್ತು.
22 ಆಮೇಲೆ ನನಗೆ ಇನ್ನೊಂದು ಕನಸು ಬಿತ್ತು. ಒಂದೇ ದಂಟಿನಲ್ಲಿ ತುಂಬಿದ ಏಳು ತೆನೆ ಬೆಳೆಯೋದನ್ನ ನಾನು ನೋಡಿದೆ.+ 23 ಆಮೇಲೆ ಟೊಳ್ಳಾದ ಏಳು ತೆನೆ ಬೆಳಿತು, ಅವು ಪೂರ್ವ ದಿಕ್ಕಿನ ಬಿಸಿ ಗಾಳಿಯಿಂದ ಬಾಡಿ ಒಣಗಿಹೋಯ್ತು. 24 ಆ ಟೊಳ್ಳಾದ ತೆನೆಗಳು ತುಂಬಿದ ಏಳು ತೆನೆಗಳನ್ನ ನುಂಗೋಕೆ ಶುರುಮಾಡ್ತು. ನಾನು ಈ ಕನಸುಗಳನ್ನ ಮಂತ್ರವಾದಿಗಳಿಗೆ ಹೇಳ್ದೆ.+ ಆದ್ರೆ ಅವುಗಳ ಅರ್ಥ ವಿವರಿಸೋಕೆ ಯಾರಿಂದಲೂ ಆಗಲಿಲ್ಲ”+ ಅಂದ.
25 ಆಗ ಯೋಸೇಫ ಫರೋಹನಿಗೆ “ಫರೋಹ ಕಂಡ ಎರಡೂ ಕನಸುಗಳ ಅರ್ಥ ಒಂದೇ. ಸತ್ಯ ದೇವರು ತಾನು ಮುಂದೆ ಮಾಡೋ ವಿಷ್ಯಗಳನ್ನ ಫರೋಹನಿಗೆ ತಿಳಿಸಿದ್ದಾನೆ.+ 26 ಚೆನ್ನಾಗಿದ್ದ ಆ ಏಳು ಹಸುಗಳು ಏಳು ವರ್ಷಗಳು. ಆ ಏಳು ಒಳ್ಳೇ ತೆನೆಗಳು ಸಹ ಏಳು ವರ್ಷಗಳು. ಎರಡೂ ಕನಸುಗಳ ಅರ್ಥ ಒಂದೇ. 27 ಕೊಬ್ಬಿದ ಹಸುಗಳ ನಂತ್ರ ಬಂದ ಬಡಕಲಾದ ಅಸಹ್ಯವಾದ ಏಳು ಹಸುಗಳು ಏಳು ವರ್ಷಗಳ ಬರಗಾಲವನ್ನ ಸೂಚಿಸುತ್ತೆ. ಟೊಳ್ಳಾದ ಮತ್ತು ಪೂರ್ವ ದಿಕ್ಕಿನ ಬಿಸಿ ಗಾಳಿಯಿಂದ ಒಣಗಿಹೋದ ಏಳು ತೆನೆಗಳು ಸಹ ಏಳು ವರ್ಷಗಳ ಬರಗಾಲವನ್ನ ಸೂಚಿಸುತ್ತೆ. 28 ನಾನು ಈಗಾಗ್ಲೇ ಹೇಳಿದ ಹಾಗೆ ಸತ್ಯ ದೇವರು ಮುಂದೆ ತಾನು ಮಾಡೋ ವಿಷ್ಯಗಳನ್ನ ಫರೋಹನಿಗೆ ತೋರಿಸಿದ್ದಾನೆ.
29 ಏಳು ವರ್ಷ ಈಜಿಪ್ಟ್ ದೇಶದಲ್ಲೆಲ್ಲಾ ಬೆಳೆ ಚೆನ್ನಾಗಿ ಬೆಳೆಯುತ್ತೆ. 30 ಆದ್ರೆ ಅದಾದ ಮೇಲೆ ಏಳು ವರ್ಷ ಖಂಡಿತ ಬರಗಾಲ ಬರುತ್ತೆ. ಮೊದಲಿದ್ದ ಸಮೃದ್ಧಿ ಈಜಿಪ್ಟಿನ ಜನ್ರ ನೆನಪಿಗೂ ಬರಲ್ಲ. ಆ ಬರಗಾಲ ದೇಶವನ್ನ ಪೂರ್ತಿ ಹಾಳುಮಾಡಿ ಬಿಡುತ್ತೆ.+ 31 ಬರಗಾಲ ಎಷ್ಟು ಘೋರವಾಗಿರುತ್ತೆ ಅಂದ್ರೆ ಒಂದು ಕಾಲದಲ್ಲಿ ಅವರಿಗೆ ಬೇಕಾದಷ್ಟು ಆಹಾರ ಇತ್ತು ಅನ್ನೋದೇ ಜನ್ರಿಗೆ ಮರೆತುಹೋಗಿರುತ್ತೆ. 32 ಸತ್ಯ ದೇವರು ಫರೋಹನಿಗೆ ಎರಡು ಸಲ ಕನಸು ಬೀಳೋ ಹಾಗೆ ಮಾಡೋ ಮೂಲಕ ಈ ವಿಷ್ಯ ಖಂಡಿತ ಆಗುತ್ತೆ ಅಂತ ತೋರಿಸಿದ್ದಾನೆ. ಅಷ್ಟೇ ಅಲ್ಲ ಸತ್ಯ ದೇವರು ಇದನ್ನ ಬೇಗ ಮಾಡ್ತಾನೆ.
33 ಹಾಗಾಗಿ ಫರೋಹ ವಿವೇಚನೆ ಇರೋ, ಬುದ್ಧಿವಂತನಾದ ಒಬ್ಬನನ್ನು ಆರಿಸಿ ಇಡೀ ಈಜಿಪ್ಟ್ ದೇಶಕ್ಕೆ ಅಧಿಕಾರಿಯಾಗಿ ನೇಮಿಸಬೇಕು. 34 ದೇಶದ ಎಲ್ಲ ಭಾಗಕ್ಕೂ ಅಧಿಕಾರಿಗಳನ್ನ ನೇಮಿಸಬೇಕು. ಏಳು ವರ್ಷ ಈಜಿಪ್ಟಲ್ಲಿ ಬೆಳೆ ಹೇರಳವಾಗಿರುವಾಗ+ ಆ ಅಧಿಕಾರಿಗಳ ಮೂಲಕ ಫಸಲಿನ ಐದನೇ ಒಂದು ಭಾಗವನ್ನ ಕೂಡಿಸಿಡಬೇಕು. 35 ಅವರು ಕೂಡಿಟ್ಟ ಎಲ್ಲ ದವಸಧಾನ್ಯಗಳನ್ನ ಪ್ರತಿಯೊಂದು ಪಟ್ಟಣದಲ್ಲಿರೋ ಫರೋಹನ ಉಗ್ರಾಣಗಳಲ್ಲಿ ಶೇಖರಿಸಿ ಸುರಕ್ಷಿತವಾಗಿ ಇಡಬೇಕು.+ 36 ಹೀಗೆ ಶೇಖರಿಸಿ ಇಡೋದ್ರಿಂದ ಮುಂದೆ ಈಜಿಪ್ಟ್ ದೇಶದಲ್ಲಿ ಏಳು ವರ್ಷ ಬರಗಾಲ ಬಂದಾಗ ದೇಶದಲ್ಲಿರೋ ಎಲ್ರಿಗೆ ಆಹಾರ ಕೊಡೋಕೆ ಆಗುತ್ತೆ. ಹೀಗೆ ಮಾಡಿದ್ರೆ ಬರಗಾಲದಿಂದ ದೇಶ ನಾಶ ಆಗಲ್ಲ”+ ಅಂದ.
37 ಯೋಸೇಫ ಕೊಟ್ಟ ಈ ಸಲಹೆ ಫರೋಹನಿಗೆ ಅವನ ಎಲ್ಲ ಸೇವಕರಿಗೆ ಸರಿ ಅನಿಸ್ತು. 38 ಹಾಗಾಗಿ ಫರೋಹ ತನ್ನ ಸೇವಕರಿಗೆ “ಇವನಲ್ಲಿ ದೇವರ ಶಕ್ತಿ ಕೆಲಸಮಾಡ್ತಿದೆ. ಇವನಿಗಿಂತ ಒಳ್ಳೇ ವ್ಯಕ್ತಿ ಬೇರೆ ಯಾರಿದ್ದಾರೆ?” ಅಂದ. 39 ಆಮೇಲೆ ಫರೋಹ ಯೋಸೇಫನಿಗೆ “ದೇವರು ಇದನ್ನೆಲ್ಲ ನಿನಗೆ ತಿಳಿಸಿದ್ದಾನೆ. ಹಾಗಾಗಿ ನಿನ್ನಷ್ಟು ವಿವೇಚನೆ ಇರೋ ಬುದ್ಧಿವಂತ ವ್ಯಕ್ತಿ ಬೇರೆ ಯಾರೂ ಇಲ್ಲ. 40 ನಿನ್ನನ್ನ ಅರಮನೆಯಲ್ಲಿರೋ ಎಲ್ರ ಮೇಲೆ ಅಧಿಕಾರಿಯಾಗಿ ಮಾಡ್ತೀನಿ. ನೀನು ಹೇಳೋದನ್ನೆಲ್ಲ ನನ್ನ ಎಲ್ಲ ಪ್ರಜೆಗಳು ಮಾಡ್ತಾರೆ.+ ರಾಜನಾಗಿರೋ ನಾನು ಅಧಿಕಾರದ ವಿಷ್ಯದಲ್ಲಷ್ಟೆ ನಿನಗಿಂತ ದೊಡ್ಡವನಾಗಿ ಇರ್ತಿನಿ” ಅಂದ. 41 ಅಷ್ಟೇ ಅಲ್ಲ ಫರೋಹ “ನಾನು ನಿನ್ನನ್ನ ಇಡೀ ಈಜಿಪ್ಟ್ ದೇಶಕ್ಕೆ ಅಧಿಕಾರಿಯಾಗಿ ಮಾಡಿದ್ದೀನಿ”+ ಅಂದ. 42 ಆಮೇಲೆ ಫರೋಹ ತನ್ನ ಕೈಯಿಂದ ಮುದ್ರೆ ಉಂಗುರ ತೆಗೆದು ಯೋಸೇಫನ ಕೈಗೆ ಹಾಕಿ ಚೆನ್ನಾಗಿರೋ ನಾರಿನ ಬಟ್ಟೆ ಹೊದಿಸಿದ. ಅವನ ಕೊರಳಿಗೆ ಚಿನ್ನದ ಸರ ಕೂಡ ಹಾಕಿದ. 43 ಅಷ್ಟೇ ಅಲ್ಲ ಫರೋಹ ತನ್ನ ಎರಡನೇ ರಥದಲ್ಲಿ ಯೋಸೇಫನನ್ನ ಕೂರಿಸಿ ಸವಾರಿ ಮಾಡಿಸೋ ಮೂಲಕ ಸನ್ಮಾನಿಸಿದ. ಆಗ ಜನ್ರೆಲ್ಲ ಅವನ ಮುಂದೆ ಮುಂದೆ ಹೋಗ್ತಾ “ಅವ್ರೆಕ್! ಅವ್ರೆಕ್!”* ಅಂತ ಕೂಗಿದ್ರು. ಹೀಗೆ ಫರೋಹ ಯೋಸೇಫನನ್ನ ಇಡೀ ಈಜಿಪ್ಟ್ ದೇಶಕ್ಕೆ ಅಧಿಕಾರಿಯಾಗಿ ಮಾಡಿದ.
44 ಫರೋಹ ಯೋಸೇಫನಿಗೆ “ನಾನು ಫರೋಹನಾಗಿದ್ರೂ ನಿನ್ನ ಅಪ್ಪಣೆ ಇಲ್ಲದೆ ಇಡೀ ಈಜಿಪ್ಟ್ ದೇಶದಲ್ಲಿ ಯಾವನೂ ಒಂದೇ ಒಂದು ವಿಷ್ಯ ಕೂಡ ಮಾಡಬಾರದು”+ ಅಂತಾನೂ ಹೇಳಿದ. 45 ಆಮೇಲೆ ಫರೋಹ ಅವನಿಗೆ ಸಾಫ್ನತ್-ಪನ್ನೇಹ ಅಂತ ಹೆಸರಿಟ್ಟ. ಅಲ್ಲದೆ ಅವನಿಗೆ ಆಸನತ್+ ಅನ್ನುವವಳ ಜೊತೆ ಮದುವೆ ಮಾಡಿಸಿದ. ಇವಳು ಓನ್* ಪಟ್ಟಣದ ಪುರೋಹಿತನಾಗಿದ್ದ ಪೋಟೀಫರನ ಮಗಳು. ಯೋಸೇಫ ಈಜಿಪ್ಟ್ ದೇಶವನ್ನೆಲ್ಲ ಸಂಚರಿಸಿ ನೋಡೋಕೆ* ಶುರುಮಾಡಿದ.+ 46 ಈಜಿಪ್ಟಿನ ರಾಜ ಫರೋಹನ ಸನ್ನಿಧಿಯಲ್ಲಿ ಯೋಸೇಫ ನಿಂತಾಗ* ಅವನಿಗೆ 30 ವರ್ಷ.+
ಫರೋಹನ ಸನ್ನಿಧಿಯಿಂದ ಹೊರಗೆ ಬಂದ ಮೇಲೆ ಯೋಸೇಫ ಇಡೀ ಈಜಿಪ್ಟ್ ದೇಶದಲ್ಲಿ ಪ್ರಯಾಣಿಸಿದ. 47 ಸಮೃದ್ಧಿಯ ಏಳು ವರ್ಷಗಳಲ್ಲಿ ದೇಶದಲ್ಲಿ ದವಸಧಾನ್ಯ ಹೇರಳವಾಗಿ ಬೆಳಿತು. 48 ಆ ಏಳು ವರ್ಷದಲ್ಲಿ ಯೋಸೇಫ ಈಜಿಪ್ಟ್ ದೇಶದ ಎಲ್ಲ ಬೆಳೆ ಸಂಗ್ರಹಿಸ್ತಾ ಪಟ್ಟಣಗಳಲ್ಲಿ ಶೇಖರಿಸಿಡ್ತಾ ಇದ್ದ. ಪ್ರತಿಯೊಂದು ಪಟ್ಟಣದ ಸುತ್ತ ಇದ್ದ ಹೊಲಗದ್ದೆಗಳ ಬೆಳೆಯನ್ನ ಆ ಪಟ್ಟಣದಲ್ಲೇ ಶೇಖರಿಸಿಟ್ಟ. 49 ಅವನು ದವಸಧಾನ್ಯಗಳನ್ನು ಸಮುದ್ರದ ಮರಳಿನಷ್ಟು ಹೆಚ್ಚಾಗಿ ಕೂಡಿಸಿದ. ಅವು ಎಷ್ಟು ರಾಶಿ ರಾಶಿಯಾಗಿತ್ತಂದ್ರೆ ಲೆಕ್ಕ ಮಾಡೋಕೇ ಆಗಲಿಲ್ಲ. ಕೊನೆಗೆ ಅವರು ಲೆಕ್ಕ ಮಾಡೋದನ್ನೇ ಬಿಟ್ಟುಬಿಟ್ರು.
50 ಬರಗಾಲದ ವರ್ಷಗಳು ಶುರು ಆಗೋ ಮುಂಚೆ ಯೋಸೇಫನಿಗೆ ಅವನ ಹೆಂಡತಿಯಾದ ಆಸನತಳಿಂದ ಅಂದ್ರೆ ಓನ್* ಪಟ್ಟಣದ ಪುರೋಹಿತನಾದ ಪೋಟೀಫರನ ಮಗಳಿಂದ ಇಬ್ರು ಗಂಡುಮಕ್ಕಳು ಹುಟ್ಟಿದ್ರು.+ 51 ಮೊದಲನೇ ಮಗು ಹುಟ್ಟಿದಾಗ ಯೋಸೇಫ “ನಾನು ನನ್ನೆಲ್ಲ ಕಷ್ಟಗಳನ್ನ ಮರಿಯೋ ತರ, ನನ್ನ ತಂದೆ ಮನೆಯವರ ನೆನಪು ಬರದೇ ಇರೋ ತರ ದೇವರು ಮಾಡಿದ್ದಾನೆ” ಅಂತೇಳಿ ಆ ಮಗುಗೆ ಮನಸ್ಸೆ*+ ಅಂತ ಹೆಸರಿಟ್ಟ. 52 ಎರಡನೇ ಮಗು ಹುಟ್ಟಿದಾಗ ಯೋಸೇಫ “ನಾನು ತುಂಬ ಕಷ್ಟ ವೇದನೆಯನ್ನ ಅನುಭವಿಸಿದ ದೇಶದಲ್ಲಿ ದೇವರು ನನಗೆ ಮಕ್ಕಳನ್ನ* ಕೊಟ್ಟಿದ್ದಾನೆ”+ ಅಂತೇಳಿ ಆ ಮಗುಗೆ ಎಫ್ರಾಯೀಮ್*+ ಅಂತ ಹೆಸರಿಟ್ಟ.
53 ಈಜಿಪ್ಟ್ ದೇಶದಲ್ಲಿ ಸಮೃದ್ಧಿಯ ಏಳು ವರ್ಷ ಮುಗಿತು.+ 54 ಯೋಸೇಫ ಹೇಳಿದ ಹಾಗೆ ಏಳು ವರ್ಷಗಳ ಬರಗಾಲ ಶುರು ಆಯ್ತು.+ ಬರಗಾಲ ಎಲ್ಲ ದೇಶಗಳಿಗೂ ಹಬ್ಬಿತು, ಆದ್ರೆ ಈಜಿಪ್ಟ್ ದೇಶದಲ್ಲಿ ಮಾತ್ರ ಊಟ ಇತ್ತು.+ 55 ಕಾಲ ಕಳೆದ ಹಾಗೆ ಈಜಿಪ್ಟ್ ದೇಶಕ್ಕೂ ಬರದ ಬಿಸಿ ತಟ್ಟಿತು. ಜನ್ರು ಫರೋಹನ ಹತ್ರ ಬಂದು ಊಟಕ್ಕಾಗಿ ಬೇಡಿದ್ರು.+ ಆಗ ಫರೋಹ ಈಜಿಪ್ಟಿನ ಎಲ್ಲ ಜನ್ರಿಗೆ “ಯೋಸೇಫನ ಹತ್ರ ಹೋಗಿ. ಅವನು ಏನು ಹೇಳ್ತಾನೋ ಹಾಗೆ ಮಾಡಿ”+ ಅಂದ. 56 ಬರಗಾಲ ಇಡೀ ಭೂಮಿ ಮೇಲೆ ಬಂತು.+ ಈಜಿಪ್ಟ್ ದೇಶದಲ್ಲಿ ಬರಗಾಲ ಘೋರವಾಗಿದ್ದರಿಂದ ಯೋಸೇಫ ಆ ದೇಶದಲ್ಲಿದ್ದ ಎಲ್ಲ ಉಗ್ರಾಣ ತೆರೆದು ಅಲ್ಲಿನ ಜನ್ರಿಗೆ ದವಸಧಾನ್ಯ ಮಾರೋಕೆ ಶುರುಮಾಡಿದ.+ 57 ಅಷ್ಟೇ ಅಲ್ಲ ಇಡೀ ಭೂಮಿ ಮೇಲೆ ಬರಗಾಲ ಘೋರವಾಗಿದ್ದರಿಂದ ಭೂಮಿಯ ಎಲ್ಲ ಕಡೆಗಳಿಂದ ಜನ ಈಜಿಪ್ಟಿಗೆ ಬಂದು ಯೋಸೇಫನಿಂದ ದವಸಧಾನ್ಯ ಖರೀದಿಸ್ತಾ ಇದ್ರು.+
42 ಈಜಿಪ್ಟಲ್ಲಿ ದವಸಧಾನ್ಯ ಸಿಗುತ್ತೆ+ ಅಂತ ಯಾಕೋಬನಿಗೆ ಗೊತ್ತಾಯ್ತು. ಆಗ ಅವನು ಗಂಡುಮಕ್ಕಳಿಗೆ “ನೀವು ಮುಖಮುಖ ನೋಡ್ಕೊಂಡು ಸುಮ್ನೆ ಯಾಕೆ ಕೂತಿದ್ದೀರಾ? ಏನಾದ್ರೂ ಮಾಡಿ” ಅಂದ. 2 “ಈಜಿಪ್ಟಲ್ಲಿ ದವಸಧಾನ್ಯ ಸಿಗ್ತಿದೆ ಅಂತ ಕೇಳಿಸ್ಕೊಂಡೆ. ಅಲ್ಲಿಗೆ ಹೋಗಿ ನಮಗೆ ಬೇಕಾದ ದವಸಧಾನ್ಯ ತಗೊಂಡು ಬನ್ನಿ. ಇಲ್ಲದಿದ್ರೆ ನಾವು ಹಸಿವೆಯಿಂದ ಸಾಯಬೇಕಾಗುತ್ತೆ”+ ಅಂದ. 3 ಹಾಗಾಗಿ ಯೋಸೇಫನ ಹತ್ತು ಅಣ್ಣಂದಿರು+ ಧಾನ್ಯ ಖರೀದಿಸೋಕೆ ಈಜಿಪ್ಟಿಗೆ ಹೋದ್ರು. 4 ಆದ್ರೆ ಯಾಕೋಬ ಯೋಸೇಫನ ತಮ್ಮನಾದ ಬೆನ್ಯಾಮೀನನನ್ನ+ ಅವರ ಜೊತೆ ಕಳಿಸಲಿಲ್ಲ. ಯಾಕಂದ್ರೆ ಅವನ ಜೀವಕ್ಕೆ ಏನಾದ್ರೂ ಅಪಾಯ ಆಗಬಹುದು ಅಂತ ಯಾಕೋಬ ಭಯಪಟ್ಟ.+
5 ಕಾನಾನ್ ದೇಶದಲ್ಲೂ ಬರಗಾಲ ಬಂದಿದ್ರಿಂದ ಅಲ್ಲಿನ ಜನ್ರ ಜೊತೆ ಇಸ್ರಾಯೇಲನ ಗಂಡುಮಕ್ಕಳು ಕೂಡ ದವಸಧಾನ್ಯ ಖರೀದಿಸೋಕೆ ಈಜಿಪ್ಟ್ ದೇಶಕ್ಕೆ ಹೋದ್ರು.+ 6 ಯೋಸೇಫನೇ ಈಜಿಪ್ಟಲ್ಲಿ ಅಧಿಕಾರ ನಡೆಸ್ತಿದ್ದ.+ ಭೂಮಿಯ ಎಲ್ಲ ಜನರಿಗೆ+ ಅವನೇ ದವಸಧಾನ್ಯ ಮಾರ್ತಿದ್ದ. ಹಾಗಾಗಿ ಯೋಸೇಫನ ಅಣ್ಣಂದಿರು ಅವನ ಹತ್ರ ಬಂದು ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ್ರು.+ 7 ಯೋಸೇಫ ತನ್ನ ಅಣ್ಣಂದಿರನ್ನ ನೋಡಿದ ತಕ್ಷಣ ಗುರುತು ಹಿಡಿದ. ಆದ್ರೆ ತಾನು ಯಾರಂತ ಅವರಿಗೆ ಗೊತ್ತಾಗಬಾರದು+ ಅಂತ ಅವರ ಜೊತೆ ಒರಟಾಗಿ ಮಾತಾಡ್ತಾ “ಎಲ್ಲಿಂದ ಬಂದಿದ್ದೀರಾ?” ಅಂತ ಕೇಳಿದ. ಅವರು “ನಾವು ಕಾನಾನ್ ದೇಶದಿಂದ ಧಾನ್ಯ ಖರೀದಿಸೋಕೆ ಬಂದಿದ್ದೀವಿ”+ ಅಂದ್ರು.
8 ಯೋಸೇಫ ಅಣ್ಣಂದಿರ ಗುರುತು ಹಿಡಿದ್ರೂ ಅವರು ಅವನ ಗುರುತು ಹಿಡಿಲಿಲ್ಲ. 9 ಕೂಡಲೇ ಯೋಸೇಫನಿಗೆ ತಾನು ಅವರ ಬಗ್ಗೆ ಕಂಡಿದ್ದ ಕನಸುಗಳು ನೆನಪಾದವು.+ ಅವನು ಅವರಿಗೆ “ನೀವು ಗೂಢಚಾರರು! ಈ ದೇಶವನ್ನ ಯಾವ ಸ್ಥಳಗಳಿಂದ ಸುಲಭವಾಗಿ ದಾಳಿ ಮಾಡಬಹುದು ಅಂತ ನೋಡೋಕೆ ಬಂದಿದ್ದೀರಿ” ಅಂದ. 10 ಅವರು “ಇಲ್ಲ ಸ್ವಾಮಿ, ನಿನ್ನ ಸೇವಕರಾದ ನಾವು ಧಾನ್ಯ ಖರೀದಿಸೋಕೆ ಬಂದಿದ್ದೀವಿ. 11 ನಾವೆಲ್ಲ ಒಂದೇ ತಂದೆ ಮಕ್ಕಳು. ನಾವು ಪ್ರಾಮಾಣಿಕರು. ನಿನ್ನ ಸೇವಕರಾದ ನಾವು ಗೂಢಚಾರಿಕೆ ಮಾಡೋಕೆ ಬಂದಿಲ್ಲ” ಅಂದ್ರು. 12 ಆದ್ರೆ ಅವನು “ನಾ ಇದನ್ನ ನಂಬಲ್ಲ! ನಂಗೊತ್ತು, ನೀವು ಈ ದೇಶವನ್ನ ಯಾವ ಸ್ಥಳಗಳಿಂದ ಸುಲಭವಾಗಿ ದಾಳಿ ಮಾಡಬಹುದು ಅಂತ ನೋಡೋದಕ್ಕೇ ಬಂದಿದ್ದೀರಿ” ಅಂದ. 13 ಅವರು “ನಿನ್ನ ಸೇವಕರಾದ ನಾವು ಒಂದೇ ತಂದೆ ಮಕ್ಕಳು.+ ನಮ್ಮ ತಂದೆ ಕಾನಾನ್ ದೇಶದಲ್ಲಿದ್ದಾನೆ. ನಾವು ಒಟ್ಟು 12 ಜನ ಅಣ್ಣತಮ್ಮಂದಿರು.+ ಕೊನೇ ತಮ್ಮ ತಂದೆ ಹತ್ರ ಇದ್ದಾನೆ.+ ಆದ್ರೆ ಇನ್ನೊಬ್ಬ ತಮ್ಮ ಇಲ್ಲ”+ ಅಂದ್ರು.
14 ಆದ್ರೆ ಯೋಸೇಫ “ಇಲ್ಲ, ನಾನು ಹೇಳಿದ್ದೇ ನಿಜ. ನೀವು ಗೂಢಚಾರರು! 15 ನೀವು ಹೇಳಿದ್ದು ಸತ್ಯ ಅಂತ ನಾನು ನಂಬಬೇಕಾದ್ರೆ ನಿಮ್ಮ ಕೊನೇ ತಮ್ಮ ಇಲ್ಲಿಗೆ ಬರಬೇಕು. ಫರೋಹನ ಜೀವದಾಣೆ, ಅವನು ಇಲ್ಲಿಗೆ ಬರೋ ತನಕ ನೀವು ಇಲ್ಲಿಂದ ಹೋಗೋ ಹಾಗಿಲ್ಲ.+ 16 ನೀವೆಲ್ಲ ಇಲ್ಲೇ ಜೈಲಲ್ಲಿ ಇರಬೇಕು. ನಿಮ್ಮಲ್ಲಿ ಒಬ್ಬ ಮಾತ್ರ ಹೋಗಿ ನಿಮ್ಮ ತಮ್ಮನನ್ನ ಕರ್ಕೊಂಡು ಬರಲಿ. ಆಗ ನೀವು ಎಷ್ಟು ಸತ್ಯ ಹೇಳ್ತಿದ್ದೀರ ಅಂತ ಗೊತ್ತಾಗುತ್ತೆ. ನಿಮ್ಮ ತಮ್ಮನನ್ನ ಕರ್ಕೊಂಡು ಬರದಿದ್ರೆ ಫರೋಹನ ಜೀವದಾಣೆ ನೀವು ಗೂಢಚಾರರೇ” ಅಂದ. 17 ಆಮೇಲೆ ಅವನು ಮೂರು ದಿನ ಅವರನ್ನೆಲ್ಲ ಒಟ್ಟಿಗೆ ಜೈಲಲ್ಲಿಟ್ಟ.
18 ಮೂರನೇ ದಿನ ಯೋಸೇಫ ಅವರಿಗೆ “ನಾನು ದೇವರಿಗೆ ಭಯಪಡ್ತೀನಿ. ಹಾಗಾಗಿ ನೀವು ಬದುಕೋಕೆ ಒಂದು ದಾರಿ ಹೇಳ್ತೀನಿ. ನಾನು ಹೇಳೋ ಹಾಗೆ ಮಾಡಿ. 19 ನೀವು ನಿಜವಾಗ್ಲೂ ಪ್ರಾಮಾಣಿಕರಾಗಿದ್ರೆ ನಿಮ್ಮಲ್ಲಿ ಒಬ್ಬ ಮಾತ್ರ ಜೈಲಲ್ಲಿ ಇರಲಿ, ಉಳಿದವರೆಲ್ಲ ಹೋಗಬಹುದು. ನಿಮ್ಮ ಮನೆಯಲ್ಲಿ ಇರೋರು ಹಸಿವೆಯಿಂದ ಸಾಯದೇ ಇರೋಕೆ ಧಾನ್ಯ ತಗೊಂಡು ಹೋಗಿ.+ 20 ಆಮೇಲೆ ನಿಮ್ಮ ಕೊನೇ ತಮ್ಮನನ್ನ ಕರ್ಕೊಂಡು ಬನ್ನಿ. ಆಗ ನೀವು ಹೇಳಿದ್ದು ಸತ್ಯ ಅಂತ ಗೊತ್ತಾಗುತ್ತೆ, ನೀವು ಸಾಯಲ್ಲ” ಅಂದ. ಅವರು ಅವನ ಮಾತಿಗೆ ಒಪ್ಪಿದ್ರು.
21 ಅವರು ಒಬ್ರಿಗೊಬ್ರು “ನಾವು ನಮ್ಮ ತಮ್ಮನಿಗೆ ಅನ್ಯಾಯ ಮಾಡಿದ್ರಿಂದ ಈಗ ಶಿಕ್ಷೆ ಅನುಭವಿಸ್ತಾ ಇದ್ದೀವಿ.+ ಅವನು ‘ಕರುಣೆ ತೋರಿಸಿ’ ಅಂತ ನಮ್ಮ ಹತ್ರ ಎಷ್ಟೋ ಸಾರಿ ಬೇಡ್ಕೊಂಡ. ಆದ್ರೆ ನಾವು ಅವನ ದುಃಖ ನೋಡಿದ್ರೂ ಕರುಣೆ ತೋರಿಸಲಿಲ್ಲ. ಅದಕ್ಕೇ ನಾವೀಗ ಇಂಥ ಕಷ್ಟ ಅನುಭವಿಸ್ತಾ ಇದ್ದೀವಿ” ಅಂತ ಮಾತಾಡ್ಕೊಂಡ್ರು. 22 ಆಗ ರೂಬೇನ “‘ಆ ಹುಡುಗನಿಗೆ ಏನೂ ಹಾನಿ* ಮಾಡಬೇಡಿ’ ಅಂತ ನಾನು ನಿಮಗೆ ಹೇಳ್ದೆ. ಆದ್ರೆ ನೀವು ನನ್ನ ಮಾತು ಕೇಳಲಿಲ್ಲ.+ ಅವನ ರಕ್ತ ಸುರಿಸಿದ್ದಕ್ಕೆ ಈಗ ನಾವು ದೇವರಿಗೆ ಉತ್ತರ ಕೊಡಬೇಕು”+ ಅಂದ. 23 ತಾವು ಮಾತಾಡಿದ್ದು ಯೋಸೇಫನಿಗೆ ಅರ್ಥವಾಗ್ತಿದೆ ಅಂತ ಅವರಿಗೆ ಗೊತ್ತಾಗಲಿಲ್ಲ. ಯಾಕಂದ್ರೆ ಯೋಸೇಫ ಅವರ ಜೊತೆ ಒಬ್ಬ ಅನುವಾದಕನ ಮೂಲಕ ಮಾತಾಡ್ತಿದ್ದ. 24 ಅವರ ಮಾತು ಕೇಳಿದಾಗ ಯೋಸೇಫ ಅವರಿಂದ ಸ್ವಲ್ಪ ದೂರ ಹೋಗಿ ಕಣ್ಣೀರು ಸುರಿಸಿದ.+ ಆಮೇಲೆ ವಾಪಸ್ ಬಂದು ಅವರ ಜೊತೆ ಮತ್ತೆ ಮಾತಾಡಿ ಸಿಮೆಯೋನನನ್ನ+ ಹಿಡಿದು ಅವರ ಕಣ್ಣೆದುರಲ್ಲೇ ಬಂಧಿಸಿದ.+ 25 ಆಮೇಲೆ ಪ್ರತಿಯೊಬ್ಬನ ಚೀಲದಲ್ಲಿ ಧಾನ್ಯ ತುಂಬಿಸೋಕೆ, ಅವರವರ ಹಣ ಅವರವರ ಚೀಲದಲ್ಲಿ ಇಡೋಕೆ, ಪ್ರಯಾಣಕ್ಕೆ ಅವರಿಗೆ ಬೇಕಾದ ಆಹಾರ ಕೊಡೋಕೆ ತನ್ನ ಸೇವಕರಿಗೆ ಅಪ್ಪಣೆಕೊಟ್ಟ. ಅವರು ಹಾಗೇ ಮಾಡಿದ್ರು.
26 ಯೋಸೇಫನ ಅಣ್ಣಂದಿರು ತಮ್ಮ ಧಾನ್ಯದ ಚೀಲಗಳನ್ನ ಕತ್ತೆಗಳ ಮೇಲೆ ಹೊರಿಸಿ ಅಲ್ಲಿಂದ ಹೊರಟ್ರು. 27 ದಾರಿಯಲ್ಲಿ ಅವರು ಒಂದು ವಸತಿಗೃಹದಲ್ಲಿ ಉಳ್ಕೊಂಡ್ರು. ಅವರಲ್ಲಿ ಒಬ್ಬ ಕತ್ತೆಗೆ ಮೇವು ಕೊಡೋಕೆ ತನ್ನ ಚೀಲ ತೆರೆದಾಗ ಅವನ ಹಣದ ಚೀಲ ಮೇಲೆನೇ ಇತ್ತು. ಅದನ್ನ ನೋಡಿ 28 ಅವನು ತನ್ನ ಅಣ್ಣತಮ್ಮಂದಿರಿಗೆ “ನನ್ನ ಚೀಲದಲ್ಲಿ ಹಣ ಇದೆ! ನಾನು ಕೊಟ್ಟ ಹಣ ಹಿಂದಕ್ಕೆ ಕೊಟ್ಟಿದ್ದಾರೆ!” ಅಂದ. ಆಗ ಅವರ ಎದೆಬಡಿತ ಜಾಸ್ತಿ ಆಯ್ತು. ಅವರು ನಡುಗ್ತಾ ಒಬ್ಬರನ್ನೊಬ್ರು ನೋಡ್ತಾ “ದೇವರು ನಮಗೆ ಯಾಕೆ ಈ ರೀತಿ ಶಿಕ್ಷೆ ಕೊಡ್ತಿದ್ದಾನೆ?”ಅಂದ್ರು.
29 ಅವರು ಕಾನಾನ್ ದೇಶದಲ್ಲಿರೋ ತಮ್ಮ ತಂದೆ ಯಾಕೋಬನ ಹತ್ರ ಬಂದ ಮೇಲೆ ನಡೆದ ವಿಷ್ಯಗಳನ್ನ ಅವನಿಗೆ ತಿಳಿಸ್ತಾ 30 “ಆ ದೇಶದ ಅಧಿಕಾರಿ ನಮ್ಮ ಜೊತೆ ಒರಟಾಗಿ ಮಾತಾಡಿದ.+ ನಾವು ಆ ದೇಶ ನೋಡೋಕೆ ಬಂದಿರೋ ಗೂಢಚಾರರು ಅಂತ ಆರೋಪ ಹೊರಿಸಿದ. 31 ಅದಕ್ಕೆ ನಾವು ಅವನಿಗೆ ‘ನಾವು ಗೂಢಚಾರರಲ್ಲ.+ ಪ್ರಾಮಾಣಿಕ ಜನ್ರು. 32 ನಾವು ಒಂದೇ ತಂದೆ ಮಕ್ಕಳು. ನಾವು ಒಟ್ಟು 12 ಅಣ್ಣತಮ್ಮಂದಿರು.+ ಒಬ್ಬ ತಮ್ಮ ಇಲ್ಲ,+ ಕೊನೇ ತಮ್ಮ ಕಾನಾನ್ ದೇಶದಲ್ಲಿ ತಂದೆ ಜೊತೆ ಇದ್ದಾನೆ’ + ಅಂದ್ವಿ. 33 ಆದ್ರೆ ಆ ದೇಶದ ಅಧಿಕಾರಿ ‘ನೀವು ಪ್ರಾಮಾಣಿಕರು ಅಂತ ನಾನು ನಂಬಬೇಕಾದ್ರೆ ನಿಮ್ಮಲ್ಲಿ ಒಬ್ಬ ಇಲ್ಲೇ ಇರಬೇಕು.+ ಉಳಿದವರೆಲ್ಲ ಹೋಗಬಹುದು. ನಿಮ್ಮ ಮನೇಲಿ ಇರೋರು ಹಸಿವೆಯಿಂದ ಸಾಯದಿರೋಕೆ ಧಾನ್ಯ ತಗೊಂಡು ಹೋಗಿ.+ 34 ನಿಮ್ಮ ಕೊನೇ ತಮ್ಮನನ್ನ ಕರ್ಕೊಂಡು ಬನ್ನಿ. ಆಗ ನೀವು ಗೂಢಚಾರರಲ್ಲ, ಪ್ರಾಮಾಣಿಕ ಜನ್ರು ಅಂತ ನಂಬ್ತೀನಿ. ಈ ನಿಮ್ಮ ಸಹೋದರನನ್ನ ಸಹ ಬಿಟ್ಟುಬಿಡ್ತೀನಿ. ನೀವು ನಿಮಗೆ ಬೇಕಾದ ಧಾನ್ಯ ಕೂಡ ಈ ದೇಶದಲ್ಲಿ ಖರೀದಿಸಬಹುದು’ ಅಂತ ಹೇಳಿದ” ಅಂದ್ರು.
35 ಆಮೇಲೆ ಅವರು ಧಾನ್ಯದ ಚೀಲಗಳನ್ನ ಬಿಚ್ಚಿ ಖಾಲಿ ಮಾಡ್ತಿದ್ದಾಗ ಪ್ರತಿಯೊಬ್ಬನ ಚೀಲದಲ್ಲೂ ಅವನವನ ಹಣದ ಚೀಲ ಇತ್ತು. ಅವರು ಮತ್ತು ಅವರ ತಂದೆ ಅದನ್ನ ನೋಡಿದಾಗ ತುಂಬ ಭಯಪಟ್ರು. 36 ಅವರ ತಂದೆ ಯಾಕೋಬ “ನೀವು ನನ್ನಿಂದ ನನ್ನ ಮಕ್ಕಳನ್ನ ಯಾಕೆ ಕಿತ್ಕೊಳ್ತೀರಾ?+ ಮೊದ್ಲೇ ಯೋಸೇಫ ಇಲ್ಲ,+ ಈಗ ಸಿಮೆಯೋನನನ್ನ ಸಹ ಕಳ್ಕೊಂಡಿದ್ದೀನಿ.+ ಸಾಲದ್ದಕ್ಕೆ ಬೆನ್ಯಾಮೀನನನ್ನ ಕೂಡ ನನ್ನಿಂದ ದೂರ ಮಾಡಬೇಕು ಅಂತಿದ್ದೀರಾ? ಎಲ್ಲ ಕಷ್ಟಗಳು ನನಗೇ ಬರ್ತಿವೆ!” ಅಂತೇಳಿ ದುಃಖಿಸಿದ. 37 ಅದಕ್ಕೆ ರೂಬೇನ “ಅಪ್ಪಾ, ಈ ಹುಡುಗನನ್ನ ನನ್ನ ಕೈಗೆ ಒಪ್ಪಿಸು. ಅವನನ್ನ ಜೋಪಾನವಾಗಿ ಕರ್ಕೊಂಡು ಹೋಗಿ ಕರ್ಕೊಂಡು ಬರ್ತಿನಿ. ಅವನನ್ನ ತಿರುಗಿ ನಿನಗೆ ಒಪ್ಪಿಸೋ ಜವಾಬ್ದಾರಿ ನಂದು.+ ಒಂದುವೇಳೆ ಕರ್ಕೊಂಡು ಬರಲಿಲ್ಲ ಅಂದ್ರೆ ನೀನು ನನ್ನ ಇಬ್ರು ಗಂಡುಮಕ್ಕಳನ್ನ ಕೊಲ್ಲಬಹುದು”+ ಅಂದ. 38 ಆದ್ರೆ ಯಾಕೋಬ “ನಾನಂತೂ ನನ್ನ ಮಗನನ್ನ ನಿಮ್ಮ ಜೊತೆ ಕಳಿಸಲ್ಲ. ಅವನ ಒಡಹುಟ್ಟಿದವ ತೀರಿಹೋದ. ಈಗ ಇರುವವನು ಇವನೊಬ್ಬನೇ.+ ಹೋಗೋ ದಾರಿಯಲ್ಲಿ ಇವನ ಜೀವಕ್ಕೇನಾದ್ರೂ ಅಪಾಯ ಬಂದ್ರೆ ನಾನು ನಿಮ್ಮಿಂದಾಗಿ ಈ ಮುದಿಪ್ರಾಯದಲ್ಲೇ ದುಃಖದಿಂದ+ ಸಮಾಧಿ*+ ಸೇರ್ತೀನಿ” ಅಂದ.
43 ಕಾನಾನ್ ದೇಶದಲ್ಲಿ ಬರಗಾಲ ಭೀಕರವಾಗಿತ್ತು.+ 2 ಅವರು ಈಜಿಪ್ಟಿಂದ ತಂದಿದ್ದ ದವಸಧಾನ್ಯ ಮುಗಿದುಹೋದ ಮೇಲೆ+ ಅವರ ತಂದೆ ಅವರಿಗೆ “ನೀವು ಹೋಗಿ ಇನ್ನೂ ಸ್ವಲ್ಪ ಆಹಾರ ತಗೊಂಡು ಬನ್ನಿ” ಅಂದ. 3 ಆಗ ಯೆಹೂದ “ಆ ಮನುಷ್ಯ ಕಟ್ಟುನಿಟ್ಟಾಗಿ ಆಜ್ಞೆಕೊಡ್ತಾ ‘ನಿಮ್ಮ ತಮ್ಮನನ್ನ ಕರ್ಕೊಂಡು ಬರದಿದ್ರೆ ನಿಮ್ಮ ಮುಖ ನನಗೆ ತೋರಿಸಲೇಬಾರದು’+ ಅಂದಿದ್ದಾನೆ. 4 ಹಾಗಾಗಿ ನೀನು ನಮ್ಮ ತಮ್ಮನನ್ನ ನಮ್ಮ ಜೊತೆ ಕಳಿಸಿದ್ರೆ ಮಾತ್ರ ಹೋಗಿ ಆಹಾರ ತಗೊಂಡು ಬರ್ತಿವಿ. 5 ಇಲ್ಲದಿದ್ರೆ ಹೋಗಲ್ಲ. ಯಾಕಂದ್ರೆ ಆ ಮನುಷ್ಯ ನಮಗೆ ‘ನಿಮ್ಮ ತಮ್ಮನನ್ನ ಕರ್ಕೊಂಡು ಬರದಿದ್ರೆ ನಿಮ್ಮ ಮುಖ ನನಗೆ ತೋರಿಸ್ಲೇಬಾರದು ಅಂದಿದ್ದಾನೆ’+ ಅಂದ. 6 ಅದಕ್ಕೆ ಇಸ್ರಾಯೇಲ+ “ನಿಮಗೆ ಇನ್ನೊಬ್ಬ ತಮ್ಮ ಇದ್ದಾನೆ ಅಂತ ನೀವ್ಯಾಕೆ ಹೇಳಬೇಕಿತ್ತು? ನೀವು ಹಾಗೆ ಹೇಳಿ ನನ್ನನ್ನ ಸಂಕಷ್ಟಕ್ಕೆ ಸಿಕ್ಕಿಸಿದ್ದೀರ” ಅಂದ. 7 ಆಗ ಅವರು “ಆ ಮನುಷ್ಯ ನೇರವಾಗಿ ನಮ್ಮ ಬಗ್ಗೆ ವಿಚಾರಿಸಿದ. ನಮ್ಮ ಕುಟುಂಬದಲ್ಲಿ ಬೇರೆ ಯಾರೆಲ್ಲ ಇದ್ದಾರಂತ ಕೇಳಿದ. ‘ನಿಮ್ಮ ತಂದೆ ಇನ್ನೂ ಇದ್ದಾನಾ? ನಿಮಗೆ ಇನ್ನೊಬ್ಬ ತಮ್ಮ ಇದ್ದಾನಾ?’ ಅಂತ ಕೇಳಿದ. ಆಗ ನಾವು ಇದ್ದ ವಿಷ್ಯ ಹೇಳಿಬಿಟ್ವಿ.+ ‘ತಮ್ಮನನ್ನ ಕರ್ಕೊಂಡು ಬನ್ನಿ’ ಅಂತ ಅವನು ಹೇಳ್ತಾನಂತ ನಮಗೆ ಹೇಗೆ ಗೊತ್ತು?”+ ಅಂದ್ರು.
8 ಆಮೇಲೆ ಯೆಹೂದ ತನ್ನ ತಂದೆಯಾದ ಇಸ್ರಾಯೇಲನನ್ನ ಒಪ್ಪಿಸೋಕೆ ಪ್ರಯತ್ನಿಸ್ತಾ “ಅಪ್ಪಾ, ಅವನನ್ನ ನನ್ನ ಜೊತೆ ಕಳಿಸು.+ ನಾವು ಹೋಗಿ ಆಹಾರ ತರ್ತಿವಿ. ಇಲ್ಲದಿದ್ರೆ ನೀನು, ನಾವು, ನಮ್ಮ ಮಕ್ಕಳು+ ಹಸಿವೆಯಿಂದ ಸಾಯಬೇಕಾಗುತ್ತೆ.+ 9 ಅವನ ಜೀವಕ್ಕೆ ನಾನು ಹೊಣೆ.+ ಅವನನ್ನ ಭದ್ರವಾಗಿ ಕರ್ಕೊಂಡು ಬರೋದು ನನ್ನ ಜವಾಬ್ದಾರಿ. ಒಂದುವೇಳೆ ಅವನನ್ನ ನಾನು ಕರ್ಕೊಂಡು ಬಂದು ನಿನ್ನ ಕೈಗೆ ಒಪ್ಪಿಸದಿದ್ರೆ ಆ ಪಾಪ ಜೀವನಪೂರ್ತಿ ನನ್ನ ಮೇಲೆನೇ ಇರಲಿ. 10 ಮುಂಚೆನೇ ನೀನು ನಮ್ಮನ್ನ ಕಳಿಸಿದ್ರೆ ಇಷ್ಟರಲ್ಲಿ ನಾವು ಎರಡು ಸಲ ಹೋಗಿ ಬರ್ತಿದ್ವಿ” ಅಂದ.
11 ಆಗ ಅವರ ತಂದೆ ಇಸ್ರಾಯೇಲ ಅವರಿಗೆ ಹೀಗಂದ: “ಸರಿ, ಬೇರೆ ದಾರಿ ಇಲ್ಲದಿದ್ರೆ ಒಂದು ಕೆಲಸ ಮಾಡಿ. ಈ ದೇಶದ ಶ್ರೇಷ್ಠ ವಸ್ತುಗಳನ್ನ ಅಂದ್ರೆ ಸ್ವಲ್ಪ ಸುಗಂಧ ತೈಲ,+ ಸ್ವಲ್ಪ ಜೇನುತುಪ್ಪ, ಸುಗಂಧಭರಿತ ಅಂಟು, ಚಕ್ಕೆ,+ ಪಿಸ್ತಾ, ಬಾದಾಮಿ ತಗೊಂಡು ಹೋಗಿ ಆ ಮನುಷ್ಯನಿಗೆ ಉಡುಗೊರೆಯಾಗಿ+ ಕೊಡಿ. 12 ಅಲ್ಲದೆ ಈ ಸಲ ಎರಡರಷ್ಟು ಹಣ ತಗೊಂಡು ಹೋಗಿ. ಕಳೆದ ಸಲ ನಿಮ್ಮ ಚೀಲಗಳಲ್ಲಿ ಇಟ್ಟು ಕಳಿಸಿದ್ದ ಹಣ ಕೂಡ ತಗೊಳ್ಳಿ.+ ಅವರಿಗೆ ಗೊತ್ತಿಲ್ಲದೆ ನಿಮ್ಮ ಚೀಲದಲ್ಲಿ ಇಟ್ಟಿರಬಹುದು. 13 ನಿಮ್ಮ ತಮ್ಮನನ್ನ ಕರ್ಕೊಂಡು ಆ ಮನುಷ್ಯನ ಹತ್ರ ಹೋಗಿ. 14 ಅವನು ನಿಮಗೆ ಕನಿಕರ ತೋರಿಸಿ ಸಿಮೆಯೋನ ಮತ್ತು ಬೆನ್ಯಾಮೀನನನ್ನ ನಿಮ್ಮ ಜೊತೆ ಕಳಿಸೋ ತರ ಸರ್ವಶಕ್ತ ದೇವರು ಮಾಡ್ಲಿ. ಒಂದುವೇಳೆ ನಾನು ಮಕ್ಕಳನ್ನ ಕಳ್ಕೊಳ್ಳಲೇಬೇಕಾದ್ರೆ ನನ್ನಿಂದ ಏನು ಮಾಡಕ್ಕಾಗುತ್ತೆ?”+
15 ಅವರು ಆ ಉಡುಗೊರೆ ಮತ್ತು ಎರಡರಷ್ಟು ಹಣ ತಗೊಂಡು ತಮ್ಮ ಜೊತೆ ಬೆನ್ಯಾಮೀನನನ್ನ ಕರ್ಕೊಂಡು ಹೊರಟ್ರು. ಈಜಿಪ್ಟ್ ದೇಶಕ್ಕೆ ಬಂದು ಮತ್ತೆ ಯೋಸೇಫನ ಮುಂದೆ ನಿಂತ್ರು.+ 16 ಅವರ ಜೊತೆ ಬೆನ್ಯಾಮೀನ ಇರೋದನ್ನ ಯೋಸೇಫ ನೋಡಿದ ತಕ್ಷಣ ತನ್ನ ಮನೆಯನ್ನ ನೋಡ್ಕೊಳ್ತಿದ್ದ ಸೇವಕನಿಗೆ “ಇವರನ್ನ ಮನೆಗೆ ಕರ್ಕೊಂಡು ಹೋಗು. ಇವರು ಇವತ್ತು ಮಧ್ಯಾಹ್ನ ನನ್ನ ಜೊತೆ ಊಟ ಮಾಡ್ತಾರೆ. ಹಾಗಾಗಿ ಪ್ರಾಣಿಗಳನ್ನ ಕೊಯ್ದು ಊಟಕ್ಕೆ ಸಿದ್ಧಮಾಡು” ಅಂದ. 17 ತಕ್ಷಣ ಆ ಸೇವಕ ಯೋಸೇಫ ಹೇಳಿದ ಹಾಗೆ ಮಾಡಿದ.+ ಅವನು ಅವರನ್ನ ಯೋಸೇಫನ ಮನೆಗೆ ಕರ್ಕೊಂಡು ಹೋದ. 18 ಆದ್ರೆ ಅಲ್ಲಿ ಹೋದಾಗ ಅವರಿಗೆ ಭಯ ಆಯ್ತು. ಅವರು “ಕಳೆದ ಸಲ ನಾವು ಕೊಟ್ಟ ಹಣ ನಮ್ಮ ಚೀಲದಲ್ಲೇ ಇತ್ತು. ಅದಕ್ಕೇ ಅವ್ರು ನಮ್ಮನ್ನ ಇಲ್ಲಿ ಕರ್ಕೊಂಡು ಬಂದಿದ್ದಾರೆ. ಈಗ ಅವರು ನಮ್ಮ ಮೇಲೆ ದಾಳಿ ಮಾಡಿ ನಮ್ಮನ್ನ ಗುಲಾಮರಾಗಿ ಮಾಡ್ಕೊಳ್ತಾರೆ. ನಮ್ಮ ಕತ್ತೆಗಳನ್ನೂ ಕಸ್ಕೊಳ್ತಾರೆ”+ ಅಂತ ಮಾತಾಡ್ಕೊಂಡ್ರು.
19 ಅವರು ಮನೆ ಬಾಗಿಲ ಹತ್ರ ಬಂದು ಯೋಸೇಫನ ಸೇವಕನಿಗೆ 20 “ಸ್ವಾಮಿ, ನಮ್ಮನ್ನ ಕ್ಷಮಿಸು. ಇದಕ್ಕಿಂತ ಮುಂಚೆ ಒಂದು ಸಲ ನಾವು ಧಾನ್ಯ ತಗೊಂಡು ಹೋಗೋಕೆ ಇಲ್ಲಿಗೆ ಬಂದಿದ್ವಿ.+ 21 ನಾವು ಇಲ್ಲಿಂದ ಹೋಗ್ತಾ ಒಂದು ಛತ್ರದಲ್ಲಿ ಇದ್ದಾಗ ನಮ್ಮ ಚೀಲ ಬಿಚ್ಚಿ ನೋಡಿದ್ವಿ. ನೋಡಿದ್ರೆ ಧಾನ್ಯಕ್ಕಂತ ಕೊಟ್ಟಿದ್ದ ಪೂರ್ತಿ ಹಣ ನಮ್ಮ ಚೀಲದಲ್ಲೇ ಇತ್ತು.+ ಅದನ್ನ ನಮ್ಮ ಕೈಯಾರೆ ನಿಮಗೆ ವಾಪಸ್ ಕೊಡೋಕೆ ತಂದಿದ್ದೀವಿ. 22 ಈಗ ಧಾನ್ಯ ತಗೊಳೋಕೆ ಇನ್ನೂ ಜಾಸ್ತಿ ಹಣ ತಂದಿದ್ದೀವಿ. ನಾವು ಕೊಟ್ಟಿದ್ದ ಹಣ ನಮ್ಮ ಚೀಲದಲ್ಲಿ ಯಾರು ಇಟ್ರು ಅಂತ ನಮಗೆ ಗೊತ್ತಿಲ್ಲ”+ ಅಂದ್ರು. 23 ಆಗ ಆ ಸೇವಕ “ಪರವಾಗಿಲ್ಲ. ಹೆದರಬೇಡಿ. ನೀವು ಮತ್ತು ನಿಮ್ಮ ತಂದೆ ಆರಾಧಿಸೋ ದೇವರೇ ನಿಮ್ಮ ಚೀಲದಲ್ಲಿ ಆ ಹಣ ಇಟ್ಟನು. ನೀವು ಕೊಟ್ಟ ಹಣ ನನಗೆ ಈಗಾಗ್ಲೇ ಸಿಕ್ಕಿದೆ” ಅಂದ. ಆಮೇಲೆ ಅವನು ಸಿಮೆಯೋನನನ್ನ ಅವರ ಹತ್ರ ಕರ್ಕೊಂಡು ಬಂದ.+
24 ಆಗ ಆ ಸೇವಕ ಅವರನ್ನ ಯೋಸೇಫನ ಮನೆಯೊಳಗೆ ಕರ್ಕೊಂಡು ಬಂದು ಅವರಿಗೆ ಕಾಲು ತೊಳೆಯೋಕೆ ನೀರು ಕೊಟ್ಟ. ಅವರ ಕತ್ತೆಗಳಿಗೆ ಮೇವು ಇಟ್ಟ. 25 ಮಧ್ಯಾಹ್ನ ಯೋಸೇಫ ಮನೆಗೆ ಬಂದು ತಮ್ಮ ಜೊತೆ ಊಟ ಮಾಡೋ ವಿಷ್ಯ ಅವರಿಗೆ ಗೊತ್ತಾಯ್ತು.+ ಆಗ ಅವರು ತಾವು ತಂದಿದ್ದ ಉಡುಗೊರೆ+ ಕೊಡೋಕೆ ಸಿದ್ಧಮಾಡ್ಕೊಂಡ್ರು. 26 ಯೋಸೇಫ ಮನೆಗೆ ಬಂದಾಗ ಉಡುಗೊರೆ ಕೊಟ್ಟು ಅವನ ಮುಂದೆ ಅಡ್ಡಬಿದ್ದು ನಮಸ್ಕಾರ ಮಾಡಿದ್ರು.+ 27 ಆಮೇಲೆ ಅವನು ಅವರ ಕ್ಷೇಮ ವಿಚಾರಿಸಿ ಅವರಿಗೆ “ನಿಮಗೆ ವಯಸ್ಸಾದ ತಂದೆ ಇದ್ದಾನೆ ಅಂತ ಹೇಳಿದ್ರಲ್ಲಾ. ಅವನು ಹೇಗಿದ್ದಾನೆ? ಅವನು ಇನ್ನೂ ಇದ್ದಾನಾ?”+ ಅಂತ ಕೇಳಿದ. 28 ಅದಕ್ಕೆ “ನಿನ್ನ ಸೇವಕನಾದ ನಮ್ಮ ತಂದೆ ಇನ್ನೂ ಇದ್ದಾನೆ, ಚೆನ್ನಾಗಿದ್ದಾನೆ” ಅಂತೇಳಿ ಅವನಿಗೆ ಅಡ್ಡಬಿದ್ದು ನಮಸ್ಕಾರ ಮಾಡಿದ್ರು.+
29 ಅವನು ತನ್ನ ಒಡಹುಟ್ಟಿದ+ ತಮ್ಮನಾದ ಬೆನ್ಯಾಮೀನನನ್ನ ನೋಡಿ “ನೀವು ಹೇಳಿದ ಕೊನೇ ತಮ್ಮ ಇವನೇನಾ?”+ ಅಂತ ಕೇಳಿದ. ಅವನು ಬೆನ್ಯಾಮೀನನಿಗೆ “ನನ್ನ ಮಗನೇ, ದೇವರು ನಿನ್ನನ್ನ ಆಶೀರ್ವದಿಸಲಿ” ಅಂದ. 30 ತಮ್ಮನನ್ನ ನೋಡಿ ಯೋಸೇಫನಿಗೆ ದುಃಖ ಉಕ್ಕಿ ಬಂತು. ಹಾಗಾಗಿ ಬೇಗ ಅಲ್ಲಿಂದ ಹೋಗಿ ಅಳೋದಕ್ಕೆ ಏಕಾಂತ ಜಾಗ ಹುಡುಕಿ ಒಂದು ಕೋಣೆಯಲ್ಲಿ ಅತ್ತ.+ 31 ಆಮೇಲೆ ಮುಖ ತೊಳೆದು ಅಳು ತಡ್ಕೊಂಡು ಅವರ ಹತ್ರ ಬಂದ. ತನ್ನ ಸೇವಕರಿಗೆ “ಊಟ ಬಡಿಸಿ” ಅಂದ. 32 ಸೇವಕರು ಒಂದು ಮೇಜಿನ ಮೇಲೆ ಯೋಸೇಫನಿಗೆ, ಇನ್ನೊಂದು ಮೇಜಿನ ಮೇಲೆ ಅವನ ಅಣ್ಮತಮ್ಮಂದಿರಿಗೆ ಊಟ ಬಡಿಸಿದ್ರು. ಅಲ್ಲಿದ್ದ ಈಜಿಪ್ಟಿನವರು ಪ್ರತ್ಯೇಕವಾಗಿ ಊಟ ಮಾಡ್ತಿದ್ರು. ಯಾಕಂದ್ರೆ ಈಜಿಪ್ಟಿನವರು ಇಬ್ರಿಯರ ಜೊತೆ ಊಟ ಮಾಡ್ತಿರಲಿಲ್ಲ. ಅದು ಅವರಿಗೆ ಅಸಹ್ಯವಾಗಿತ್ತು.+
33 ಯೋಸೇಫ ತನ್ನ ಅಣ್ಣಂದಿರನ್ನ, ತಮ್ಮನನ್ನ ತನ್ನ ಮುಂದೆ ಕೂರಿಸಿದ. ಜ್ಯೇಷ್ಠಪುತ್ರನ ಹಕ್ಕಿರೋ+ ದೊಡ್ಡವನಿಂದ ಹಿಡಿದು ಕೊನೆಯವನ ತನಕ ಎಲ್ಲರನ್ನ ಅವನವನ ವಯಸ್ಸಿನ ಪ್ರಕಾರ ಕೂರಿಸಿದ. ಆಗ ಅವರು ಆಶ್ಚರ್ಯದಿಂದ ಒಬ್ರನ್ನೊಬ್ರು ನೋಡ್ತಿದ್ರು. 34 ಅವನು ತನ್ನ ಮೇಜಿಂದ ಅವರ ಮೇಜಿಗೆ ಆಹಾರ ಕಳಿಸ್ತಿದ್ದ. ಆದ್ರೆ ಎಲ್ಲ ಅಣ್ಣಂದಿರಿಗಿಂತ ಬೆನ್ಯಾಮೀನನಿಗೆ ಐದು ಪಟ್ಟು ಹೆಚ್ಚು ಆಹಾರ ಕಳಿಸಿದ.+ ಅವರು ಅವನ ಜೊತೆ ಹೊಟ್ಟೆ ತುಂಬ ತಿಂದು ಕುಡಿದ್ರು.
44 ಆಮೇಲೆ ಯೋಸೇಫ ತನ್ನ ಮನೆಯನ್ನ ನೋಡ್ಕೊಳ್ತಿದ್ದ ಸೇವಕನಿಗೆ “ಆ ಮನುಷ್ಯರು ಎಷ್ಟು ಧಾನ್ಯ ತಗೊಂಡು ಹೋಗೋಕೆ ಆಗುತ್ತೋ ಅಷ್ಟೂ ಧಾನ್ಯ ಅವರ ಚೀಲಗಳಲ್ಲಿ ತುಂಬು. ಪ್ರತಿಯೊಬ್ಬರ ಹಣವನ್ನ ಅವರ ಚೀಲದಲ್ಲೇ ಇಟ್ಟುಬಿಡು.+ 2 ಆದ್ರೆ ಅವರ ಕೊನೇ ತಮ್ಮನ ಚೀಲದಲ್ಲಿ ಅವನ ಹಣದ ಜೊತೆ ನನ್ನ ಬೆಳ್ಳಿ ಲೋಟ ಕೂಡ ಇಡು” ಅಂದ. ಅವನು ಯೋಸೇಫ ಹೇಳಿದ ಹಾಗೇ ಮಾಡಿದ.
3 ಬೆಳಿಗ್ಗೆ ಸೂರ್ಯ ಹುಟ್ಟಿದಾಗ ಅವರನ್ನ ಕಳಿಸಿಕೊಟ್ರು. ಅವರು ತಮ್ಮ ಕತ್ತೆಗಳ ಜೊತೆ ಹೊರಟು 4 ಪಟ್ಟಣದಿಂದ ಸ್ವಲ್ಪ ದೂರ ಬಂದ್ರು. ಅಷ್ಟರಲ್ಲಿ ಯೋಸೇಫ ತನ್ನ ಸೇವಕನಿಗೆ “ನೀನು ಬೇಗ ಆ ಮನುಷ್ಯರ ಹಿಂದೆನೇ ಹೋಗಿ ಹಿಡಿ! ಆಮೇಲೆ ಅವರಿಗೆ ‘ಉಪಕಾರ ಮಾಡಿದವರಿಗೆ ಅಪಕಾರ ಮಾಡೋದಾ? 5 ನೀವು ನನ್ನ ಧಣಿಯ ಲೋಟ ಯಾಕೆ ಕದ್ರಿ? ನನ್ನ ಧಣಿ ಅದ್ರಲ್ಲೇ ಕುಡಿತಾನೆ. ಅದನ್ನೇ ನೋಡಿ ಭವಿಷ್ಯ ಹೇಳ್ತಾನೆ. ನೀವು ಅದನ್ನೇ ಕದ್ದಿದ್ದೀರಲ್ಲಾ! ದೊಡ್ಡ ತಪ್ಪು ಮಾಡಿದ್ದೀರ’ ಅಂತೇಳು” ಅಂದ.
6 ಹಾಗಾಗಿ ಆ ಸೇವಕ ಅವರನ್ನ ಅಟ್ಟಿಸ್ಕೊಂಡು ಹೋಗಿ ಅವರನ್ನ ನಿಲ್ಲಿಸಿ ಆ ಮಾತನ್ನ ಹೇಳಿದ. 7 ಅದಕ್ಕೆ ಅವರು “ಸ್ವಾಮಿ, ದಯವಿಟ್ಟು ಹಾಗೆ ಹೇಳಬೇಡಿ. ನಿನ್ನ ಸೇವಕರಾದ ನಾವು ಅಂಥ ಕೆಲಸ ಯಾವತ್ತೂ ಮಾಡಲ್ಲ. 8 ನಮ್ಮ ಚೀಲದಲ್ಲಿ ಹಣ ಸಿಕ್ಕಿದಾಗ ನಾವು ಆ ಹಣನ ನಿನಗೆ ಕೊಡಕ್ಕಂತಾನೇ ಕಾನಾನ್ ದೇಶದಿಂದ ಬಂದ್ವಿ ತಾನೇ?+ ಅಂದ್ಮೇಲೆ ನಿನ್ನ ಧಣಿ ಮನೆಯಿಂದ ನಾವು ಚಿನ್ನ ಬೆಳ್ಳಿ ಕದಿತೀವಾ? 9 ಆ ಲೋಟ ನಮ್ಮಲ್ಲಿ ಯಾರ ಹತ್ರ ಸಿಗುತ್ತೋ ಅವನಿಗೆ ಮರಣಶಿಕ್ಷೆ ಆಗ್ಲಿ. ಅಷ್ಟೇ ಅಲ್ಲ ನಾವೆಲ್ಲ ನಮ್ಮ ಧಣಿಗೆ ಗುಲಾಮರಾಗ್ತೀವಿ” ಅಂದ್ರು. 10 ಆಗ ಆ ಸೇವಕ “ಸರಿ, ನೀವು ಹೇಳಿದ ಹಾಗೇ ಆಗ್ಲಿ. ಆದ್ರೆ ಆ ಲೋಟ ಯಾರ ಹತ್ರ ಸಿಗುತ್ತೋ ಅವನು ಮಾತ್ರ ನನ್ನ ಗುಲಾಮ ಆಗಬೇಕು. ಉಳಿದವರು ಹೋಗಬಹುದು” ಅಂದ. 11 ಕೂಡಲೇ ಅವರೆಲ್ಲ ತಮ್ಮತಮ್ಮ ಚೀಲ ಕೆಳಗಿಳಿಸಿ ಬಿಚ್ಚಿದ್ರು. 12 ಆ ಸೇವಕ ಅವರಲ್ಲಿ ದೊಡ್ಡವನಿಂದ ಹಿಡಿದು ಎಲ್ಲರ ಚೀಲನಾ ಚೆನ್ನಾಗಿ ಹುಡುಕ್ತಾ ಬಂದ. ಕೊನೆಗೆ ಚಿಕ್ಕವನಾಗಿದ್ದ ಬೆನ್ಯಾಮೀನನ ಚೀಲದಲ್ಲಿ ಆ ಲೋಟ ಸಿಕ್ತು.+
13 ಆಗ ಅವರು ದುಃಖದಿಂದ ತಮ್ಮ ಬಟ್ಟೆ ಹರ್ಕೊಂಡು ತಮ್ಮ ತಮ್ಮ ಚೀಲಗಳನ್ನ ಕತ್ತೆಗಳ ಮೇಲೆ ಇಟ್ಟು ಪಟ್ಟಣಕ್ಕೆ ವಾಪಸ್ ಹೋದ್ರು. 14 ಯೆಹೂದ+ ಮತ್ತು ಅವನ ಅಣ್ಣತಮ್ಮಂದಿರು ಯೋಸೇಫನ ಮನೆಯೊಳಗೆ ಬಂದಾಗ ಅವನು ಇನ್ನೂ ಅಲ್ಲೇ ಇದ್ದ. ಅವರು ಅವನ ಮುಂದೆ ಅಡ್ಡಬಿದ್ರು.+ 15 ಯೋಸೇಫ ಅವರಿಗೆ “ನೀವು ಎಂಥ ಕೆಲಸ ಮಾಡಿದ್ರಿ? ನಾನು ಭವಿಷ್ಯ ನೋಡಿ ಎಲ್ಲ ಕಂಡುಹಿಡಿತೀನಿ ಅಂತ ನಿಮಗೆ ಗೊತ್ತಿಲ್ವಾ?”+ ಅಂತ ಕೇಳಿದ. 16 ಅದಕ್ಕೆ ಯೆಹೂದ “ಸ್ವಾಮಿ, ನಮಗೆ ಏನು ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲ. ನಾವು ತಪ್ಪು ಮಾಡಿಲ್ಲ ಅಂತ ಸಾಬೀತು ಮಾಡೋದು ಹೇಗೆ? ನಾವು ಹಿಂದೆ ಮಾಡಿದ ತಪ್ಪಿಗೆ ಈಗ ಸತ್ಯದೇವರು ನಮ್ಮಿಂದ ಲೆಕ್ಕ ಕೇಳ್ತಿದ್ದಾನೆ.+ ಆ ಲೋಟ ಯಾರ ಹತ್ರ ಸಿಗುತ್ತೋ ಅವನು ಮಾತ್ರ ಅಲ್ಲ ನಾವೆಲ್ರೂ ನಿನಗೆ ಈಗ ಗುಲಾಮರು!” ಅಂದ. 17 ಅದಕ್ಕೆ ಯೋಸೇಫ “ಇಲ್ಲ! ನಿಮ್ಮೆಲ್ಲರನ್ನೂ ನಾನು ಗುಲಾಮರನ್ನಾಗಿ ಮಾಡ್ಕೊಳ್ಳಲ್ಲ. ಯಾರ ಹತ್ರ ಲೋಟ ಸಿಕ್ತೋ ಅವನು ಮಾತ್ರ ನನಗೆ ಗುಲಾಮ ಆಗಬೇಕು.+ ಉಳಿದವರೆಲ್ಲ ಅರಾಮಾಗಿ ನಿಮ್ಮ ತಂದೆ ಹತ್ರ ಹೋಗಬಹುದು” ಅಂದ.
18 ಆಗ ಯೆಹೂದ ಯೋಸೇಫನ ಹತ್ರ ಹೋಗಿ ಹೀಗಂದ: “ಸ್ವಾಮಿ, ನಿನ್ನ ದಾಸನಾದ ನಾನು ಹೇಳೋದನ್ನ ದಯವಿಟ್ಟು ಕೇಳು, ನನ್ನ ಮೇಲೆ ಕೋಪ ಮಾಡ್ಕೊಬೇಡ. ನೀನು ಫರೋಹನಿಗೆ ಸಮಾನನಾಗಿದ್ದೀಯ ಅಂತ ನಂಗೊತ್ತು.+ 19 ಒಡೆಯನಾದ ನೀನು ನಿನ್ನ ದಾಸರಾದ ನಮಗೆ ತಂದೆ, ತಮ್ಮ ಇದ್ದಾನಾ ಅಂತ ಕೇಳಿದೆ. 20 ಅದಕ್ಕೆ ನಾವು ‘ತಂದೆ ಇದ್ದಾನೆ, ಅವನಿಗೆ ವಯಸ್ಸಾಗಿದೆ. ನಮಗೊಬ್ಬ ಕೊನೇ ತಮ್ಮ ಇದ್ದಾನೆ.+ ಅವನು ತಂದೆಗೆ ವಯಸ್ಸಾದಾಗ ಹುಟ್ಟಿದವನು. ಅವನ ಒಡಹುಟ್ಟಿದವನು ತೀರಿಹೋದ.+ ಅವನ ತಾಯಿಗೆ ಹುಟ್ಟಿದವರಲ್ಲಿ ಈಗ ಉಳಿದವನು ಅವನೊಬ್ಬನೇ.+ ಹಾಗಾಗಿ ತಂದೆಗೆ ಅವನಂದ್ರೆ ತುಂಬ ಪ್ರೀತಿ’ ಅಂತ ಹೇಳಿದ್ವಿ. 21 ಅದಕ್ಕೆ ನೀನು ನಿನ್ನ ದಾಸರಾದ ನಮಗೆ ‘ಅವನನ್ನ ನೋಡ್ಬೇಕು, ಇಲ್ಲಿಗೆ ಕರ್ಕೊಂಡು ಬನ್ನಿ’+ ಅಂತ ಅಪ್ಪಣೆಕೊಟ್ಟೆ. 22 ಆಗ ನಾವು ನಮ್ಮ ಒಡೆಯನಾದ ನಿನಗೆ ‘ತಂದೆಯನ್ನ ಬಿಟ್ಟು ಬರೋಕೆ ಆ ಹುಡುಗನಿಗೆ ಆಗಲ್ಲ. ಒಂದುವೇಳೆ ಬಂದ್ರೂ ಖಂಡಿತ ತಂದೆ ಜೀವಂತ ಉಳಿಯಲ್ಲ’+ ಅಂದ್ವಿ. 23 ಅದಕ್ಕೆ ನೀನು ನಿನ್ನ ದಾಸರಿಗೆ ‘ನಿಮ್ಮ ತಮ್ಮನನ್ನ ಇಲ್ಲಿಗೆ ಕರ್ಕೊಂಡು ಬರದಿದ್ರೆ ಇನ್ನು ಯಾವತ್ತೂ ನನಗೆ ನಿಮ್ಮ ಮುಖ ತೋರಿಸಬಾರದು’ + ಅಂದೆ.
24 ಅದಕ್ಕೇ ನಾವು ಹೋಗಿ ಸ್ವಾಮಿಯಾದ ನೀನು ಹೇಳಿದ ಮಾತನ್ನ ನಿನ್ನ ದಾಸನಾದ ನಮ್ಮ ತಂದೆಗೆ ಹೇಳಿದ್ವಿ. 25 ಸ್ವಲ್ಪ ದಿನ ಆದ್ಮೇಲೆ ತಂದೆ ನಮಗೆ ‘ನೀವು ಹೋಗಿ ಇನ್ನೂ ಸ್ವಲ್ಪ ಧಾನ್ಯ ತಗೊಂಡು ಬನ್ನಿ’+ ಅಂದ. 26 ಆದ್ರೆ ನಾವು ‘ಅಲ್ಲಿಗೆ ಹೋಗೋಕೆ ಸಾಧ್ಯ ಇಲ್ಲ. ನಮ್ಮ ಕೊನೇ ತಮ್ಮ ಬಂದ್ರೆ ಮಾತ್ರ ಹೋಗ್ತೀವಿ. ಇಲ್ಲಾಂದ್ರೆ ನಾವು ಆ ವ್ಯಕ್ತಿಗೆ ಮುಖ ತೋರಿಸೋಕೆ ಆಗಲ್ಲ’ ಅಂದ್ವಿ.+ 27 ಆಗ ತಂದೆ ‘ನನ್ನ ಹೆಂಡತಿಯಲ್ಲಿ ನನಗೆ ಇಬ್ರೇ ಗಂಡುಮಕ್ಕಳು ಹುಟ್ಟಿದ್ರು ಅಂತ ನಿಮಗೆ ಚೆನ್ನಾಗಿ ಗೊತ್ತು.+ 28 ಅವರಲ್ಲಿ ಒಬ್ಬ ನನ್ನಿಂದ ದೂರ ಆದ. “ಕಾಡುಪ್ರಾಣಿ ಅವನನ್ನ ತುಂಡು ತುಂಡು ಮಾಡಿರಬೇಕು”+ ಅಂದ್ಕೊಂಡೆ. ಅವತ್ತಿಂದ ನಾನು ಅವನನ್ನ ನೋಡಲೇ ಇಲ್ಲ. 29 ಈಗ ನೀವು ಇವನನ್ನ ಸಹ ಕರ್ಕೊಂಡು ಹೋಗಬೇಕಂತ ಇದ್ದೀರ. ಇವನ ಜೀವಕ್ಕೇನಾದ್ರೂ ಅಪಾಯ ಬಂದ್ರೆ ನಾನು ನಿಮ್ಮಿಂದಾಗಿ ಈ ಮುದಿಪ್ರಾಯದಲ್ಲೇ ದುಃಖದಿಂದ ಸಮಾಧಿ*+ ಸೇರಬೇಕಾಗುತ್ತೆ’ ಅಂದ.+
30 ನನ್ನ ತಂದೆ ತನ್ನ ಜೀವಕ್ಕಿಂತ ಹೆಚ್ಚಾಗಿ ಈ ಹುಡುಗನನ್ನ ಪ್ರೀತಿಸ್ತಾನೆ. ನಾನೇನಾದ್ರೂ ಈ ಹುಡುಗ ಇಲ್ಲದೆ ತಂದೆ ಹತ್ರ ಹೋದ್ರೆ 31 ಅವನು ಬಂದಿಲ್ಲ ಅಂತ ನೋಡಿದ ತಕ್ಷಣ ತಂದೆ ಖಂಡಿತ ಸಾಯ್ತಾನೆ. ನಮ್ಮ ತಂದೆ ನಮ್ಮಿಂದಾಗಿ ಈ ಮುದಿಪ್ರಾಯದಲ್ಲಿ ದುಃಖದಿಂದ ಸಮಾಧಿ* ಸೇರ್ತಾನೆ. 32 ನಾನು ತಂದೆಗೆ ‘ಒಂದುವೇಳೆ ಅವನನ್ನ ಕರ್ಕೊಂಡು ಬರದಿದ್ರೆ ಆ ಪಾಪ ಜೀವನಪೂರ್ತಿ ನನ್ನ ಮೇಲೆನೇ ಇರಲಿ’ ಅಂತ ಹೇಳಿ ಈ ಹುಡುಗನ ಜವಾಬ್ದಾರಿ ತಗೊಂಡೆ.+ 33 ಹಾಗಾಗಿ ಸ್ವಾಮಿ, ದಯವಿಟ್ಟು ಈ ಹುಡುಗನಿಗೆ ಬದಲಾಗಿ ನನ್ನನ್ನ ನಿನ್ನ ಗುಲಾಮನಾಗಿ ಇಟ್ಕೊ. ಅವನು ಅವನ ಅಣ್ಣಂದಿರ ಜೊತೆ ಹೋಗ್ಲಿ. 34 ಈ ಹುಡುಗನಿಲ್ಲದೆ ನಾನು ತಂದೆ ಹತ್ರ ಹೇಗೆ ಹೋಗ್ಲಿ? ತಂದೆಗೆ ಆಗೋ ಅನಾಹುತ ನನ್ನಿಂದ ನೋಡೋಕೆ ಆಗಲ್ಲ!”
45 ಆ ಮಾತು ಕೇಳಿದಾಗ ಯೋಸೇಫನಿಗೆ ಅಳು ತಡ್ಕೊಳ್ಳೋಕೆ ಆಗಲಿಲ್ಲ.+ ಆಗ ಅವನು ತನ್ನ ಸೇವಕರಿಗೆ “ಎಲ್ರೂ ಇಲ್ಲಿಂದ ಹೋಗಿ” ಅಂತ ಜೋರಾಗಿ ಹೇಳಿದ. ತಾನು ಯಾರಂತ ಅವನು ತನ್ನ ಅಣ್ಣತಮ್ಮಂದಿರಿಗೆ ಹೇಳುವಾಗ ಬೇರೆ ಯಾರೂ ಅಲ್ಲಿರಲಿಲ್ಲ.+
2 ಆಮೇಲೆ ಅವನು ಜೋರಾಗಿ ಅತ್ತ. ಎಷ್ಟು ಜೋರಾಗಿ ಅತ್ತ ಅಂದ್ರೆ ಅವನು ಅಳೋ ಶಬ್ದ ಸುತ್ತಮುತ್ತ ಇದ್ದ ಈಜಿಪ್ಟಿನವರಿಗೂ ಕೇಳಿಸ್ತು. ಈ ವಿಷ್ಯ ಫರೋಹನ ಮನೆಯವರಿಗೂ ಗೊತ್ತಾಯ್ತು. 3 ಕೊನೆಗೂ ಯೋಸೇಫ ತನ್ನ ಅಣ್ಣತಮ್ಮಂದಿರಿಗೆ “ನಾನು ಯೋಸೇಫ. ನನ್ನ ತಂದೆ ಇನ್ನೂ ಇದ್ದಾನಾ?” ಅಂದ. ಇದನ್ನ ಕೇಳಿ ಅವನ ಅಣ್ಣತಮ್ಮಂದಿರಿಗೆ ದಂಗು ಬಡಿದಂತಾಯ್ತು. ಅವರಿಗೆ ಮಾತೇ ಬರಲಿಲ್ಲ. 4 ಯೋಸೇಫ ತನ್ನ ಅಣ್ಣತಮ್ಮಂದಿರಿಗೆ “ಬನ್ನಿ, ದಯವಿಟ್ಟು ನನ್ನ ಹತ್ರ ಬನ್ನಿ” ಅಂದ. ಅವರು ಅವನ ಹತ್ರ ಬಂದ್ರು.
ಆಗ ಅವನು ಅವರಿಗೆ ಹೀಗಂದ: “ನಾನು ನಿಮ್ಮ ಸಹೋದರ. ಈಜಿಪ್ಟಿನವರಿಗೆ ನೀವು ಮಾರಿದ ಯೋಸೇಫ ನಾನೇ.+ 5 ಆದ್ರೆ ನನ್ನನ್ನ ಮಾರಿದ್ದಕ್ಕೆ ನೀವು ಈಗ ಬೇಜಾರು ಮಾಡ್ಕೊಬೇಡಿ. ಒಬ್ರನ್ನೊಬ್ರು ದೂರಬೇಡಿ. ಯಾಕಂದ್ರೆ ನಮ್ಮ ಜೀವ ಉಳಿಸೋಕೆ ದೇವರೇ ನನ್ನನ್ನ ನಿಮಗಿಂತ ಮುಂಚೆ ಇಲ್ಲಿಗೆ ಕಳಿಸಿದ್ದಾನೆ.+ 6 ಬರಗಾಲ ಶುರುವಾಗಿ ಈಗ ಎರಡು ವರ್ಷ ಆಗ್ತಿದೆ ಅಷ್ಟೆ.+ ಇನ್ನೂ ಐದು ವರ್ಷದ ತನಕ ಜನ್ರು ಉಳೋಕೆ, ಬೆಳೆ ಕೊಯ್ಯೋಕೆ ಆಗಲ್ಲ. 7 ನಿಮ್ಮನ್ನ ಅದ್ಭುತವಾಗಿ ರಕ್ಷಿಸೋಕೆ, ನಿಮ್ಮ ಕುಟುಂಬಗಳು ಈ ಭೂಮಿ ಮೇಲಿಂದ* ಅಳಿದು ಹೋಗದಿರೋಕೆ+ ದೇವರೇ ನನ್ನನ್ನ ನಿಮಗಿಂತ ಮುಂಚೆ ಇಲ್ಲಿಗೆ ಕಳಿಸಿದ್ದಾನೆ. 8 ಹಾಗಾಗಿ ನನ್ನನ್ನ ಇಲ್ಲಿಗೆ ಕಳಿಸಿದ್ದು ನೀವಲ್ಲ, ಸತ್ಯ ದೇವರೇ. ಫರೋಹನಿಗೆ ಮುಖ್ಯ ಸಲಹೆಗಾರನಾಗಿ,* ಅವನ ಅರಮನೆಯಲ್ಲಿರೋ ಎಲ್ರ ಮೇಲೂ ಇಡೀ ಈಜಿಪ್ಟ್ ದೇಶದ ಮೇಲೂ ಅಧಿಕಾರಿ ಆಗೋಕೆ ಆತನೇ ನನ್ನನ್ನ ಇಲ್ಲಿಗೆ ಕಳಿಸಿದ.+
9 ನೀವು ಬೇಗ ನನ್ನ ತಂದೆ ಹತ್ರ ಹೋಗಿ ‘ನಿನ್ನ ಮಗ ಯೋಸೇಫ ಹೀಗಂದ: “ದೇವರು ನನ್ನನ್ನ ಇಡೀ ಈಜಿಪ್ಟಿಗೆ ಅಧಿಕಾರಿಯಾಗಿ ಮಾಡಿದ್ದಾನೆ.+ ನೀನು ತಡಮಾಡದೆ ನನ್ನ ಹತ್ರ ಬಾ.+ 10 ನಿನ್ನ ಮಕ್ಕಳನ್ನ, ಮೊಮ್ಮಕ್ಕಳನ್ನ, ಆಡು-ಕುರಿಗಳ ಹಿಂಡನ್ನ, ನಿನ್ನತ್ರ ಇರೋ ಎಲ್ಲವನ್ನ ತಗೊಂಡು ಇಲ್ಲಿಗೆ ಬಾ. ನೀವೆಲ್ಲ ಇಲ್ಲಿರೋ ಗೋಷೆನ್ ಪ್ರದೇಶದಲ್ಲಿ ಇರಬಹುದು.+ ಆಗ ನೀನು ನನ್ನ ಹತ್ರಾನೇ ಇರ್ತಿಯ. 11 ನಾನು ನಿನಗೆ ಬೇಕಾದ ಆಹಾರ ಕಳಿಸ್ತೀನಿ. ಬರಗಾಲ ಇನ್ನೂ ಐದು ವರ್ಷ ಇರುತ್ತೆ.+ ಹಾಗಾಗಿ ನೀನು ಇಲ್ಲಿಗೆ ಬಾ. ಇಲ್ಲಿಗೆ ಬಂದ್ರೆ ನೀನೂ ನಿನ್ನ ಕುಟುಂಬದವರೂ ಹೊಟ್ಟೆಗಿಲ್ಲದೆ ಕಷ್ಟಪಡಬೇಕಾಗಿಲ್ಲ. ನಿನಗಿರೋ ಯಾವುದನ್ನೂ ನೀನು ಕಳ್ಕೊಳ್ಳೋದಿಲ್ಲ” ’ ಅಂತ ಹೇಳಬೇಕು. 12 ನಿಮ್ಮ ಹತ್ರ ಮಾತಾಡ್ತಿರೋದು ಯೋಸೇಫನೇ ಅಂತ ನನ್ನ ತಮ್ಮ ಬೆನ್ಯಾಮೀನ ಮತ್ತು ನೀವೆಲ್ಲ ಕಣ್ಣಾರೆ ನೋಡಿದ್ದೀರ.+ 13 ಹಾಗಾಗಿ ನೀವು ಹೋಗಿ ಈಜಿಪ್ಟಲ್ಲಿ ನನಗಿರೋ ಎಲ್ಲ ವೈಭವವನ್ನ, ನೀವು ನೋಡಿದ್ದೆಲ್ಲವನ್ನ ನನ್ನ ತಂದೆಗೆ ಹೇಳಿ. ಬೇಗ ಹೋಗಿ ನನ್ನ ತಂದೆಯನ್ನ ಇಲ್ಲಿಗೆ ಕರ್ಕೊಂಡು ಬನ್ನಿ.”
14 ಆಮೇಲೆ ಅವನು ಬೆನ್ಯಾಮೀನನನ್ನ ಅಪ್ಕೊಂಡು ಜೋರಾಗಿ ಅತ್ತ. ಬೆನ್ಯಾಮೀನ ಕೂಡ ಅಣ್ಣನನ್ನ ತಬ್ಬಿಕೊಂಡು ಅತ್ತ.+ 15 ಅಲ್ಲದೆ ಯೋಸೇಫ ತನ್ನ ಅಣ್ಣಂದಿರಿಗೆಲ್ಲ ಮುತ್ತಿಟ್ಟು ಅವರನ್ನ ಅಪ್ಕೊಂಡು ಅತ್ತ. ಆಮೇಲೆ ಅವರು ಅವನ ಜೊತೆ ಮಾತಾಡಿದ್ರು.
16 ಯೋಸೇಫನ ಅಣ್ಣತಮ್ಮಂದಿರು ಬಂದಿದ್ದಾರೆ ಅನ್ನೋ ಸುದ್ದಿ ಫರೋಹನ ಅರಮನೆಗೆ ಮುಟ್ತು. ಇದನ್ನ ಕೇಳಿ ಫರೋಹನಿಗೆ, ಅವನ ಸೇವಕರಿಗೆ ಖುಷಿಯಾಯ್ತು. 17 ಹಾಗಾಗಿ ಫರೋಹ ಯೋಸೇಫನಿಗೆ “ನಿನ್ನ ಅಣ್ಣತಮ್ಮಂದಿರಿಗೆ ‘ನಿಮ್ಮ ಹೊರೆಗಳನ್ನ ಪ್ರಾಣಿಗಳ ಮೇಲೆ ಹೊರಿಸಿ ಕಾನಾನ್ ದೇಶಕ್ಕೆ ಹೋಗಿ 18 ನಿಮ್ಮ ತಂದೆಯನ್ನ, ಮನೆಯವರನ್ನೆಲ್ಲ ಕರ್ಕೊಂಡು ನನ್ನ ಹತ್ರ ಬನ್ನಿ. ಈಜಿಪ್ಟ್ ದೇಶದ ಒಳ್ಳೇ ವಸ್ತುಗಳನ್ನ ನಿಮಗೆ ಕೊಡ್ತೀನಿ. ನಿಮಗೆ ಈ ದೇಶದಲ್ಲೇ ಸಿಗೋ ಒಳ್ಳೇ ಬೆಳೆಯನ್ನ ಕೊಡ್ತೀನಿ’ ಅಂತ ಹೇಳು.+ 19 ನಾನು ನಿನಗೆ ಕೊಡೋ ಆಜ್ಞೆ ಏನಂದ್ರೆ+ ನೀನು ಅವರಿಗೆ ‘ಈಜಿಪ್ಟ್ ದೇಶದಿಂದ ಬಂಡಿಗಳನ್ನ ತಗೊಂಡು+ ಹೋಗಿ ನಿಮ್ಮ ಹೆಂಡತಿ ಮಕ್ಕಳನ್ನ ಕರ್ಕೊಂಡು ಬನ್ನಿ. ಒಂದು ಬಂಡಿಯಲ್ಲಿ ನಿಮ್ಮ ತಂದೆಯನ್ನ ಕರ್ಕೊಂಡು ಬನ್ನಿ.+ 20 ನಿಮ್ಮ ಸೊತ್ತುಗಳ ಬಗ್ಗೆ ಚಿಂತೆ ಮಾಡಬೇಡಿ.+ ಯಾಕಂದ್ರೆ ಇಡೀ ಈಜಿಪ್ಟ್ ದೇಶದಲ್ಲಿರೋ ಒಳ್ಳೇ ವಸ್ತುಗಳೆಲ್ಲ ನಿಮ್ಮದೇ’ ಅಂತ ಹೇಳಬೇಕು” ಅಂದ.
21 ಇಸ್ರಾಯೇಲನ ಮಕ್ಕಳು ಹಾಗೇ ಮಾಡಿದ್ರು. ಫರೋಹನ ಅಪ್ಪಣೆ ಪ್ರಕಾರ ಯೋಸೇಫ ಅವರಿಗೆ ಬಂಡಿಗಳನ್ನ ಕೊಟ್ಟ. ಪ್ರಯಾಣಕ್ಕೆ ಬೇಕಾದ ಆಹಾರವನ್ನೂ ಕೊಟ್ಟ. 22 ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಒಂದೊಂದು ಜೊತೆ ಹೊಸ ಬಟ್ಟೆ ಕೊಟ್ಟ. ಆದ್ರೆ ಬೆನ್ಯಾಮೀನನಿಗೆ 300 ಬೆಳ್ಳಿಯ ಶೆಕೆಲ್‌ಗಳನ್ನ* ಮತ್ತು ಐದು ಜೊತೆ ಹೊಸ ಬಟ್ಟೆ ಕೊಟ್ಟ.+ 23 ಅವನು ತನ್ನ ತಂದೆಗಂತ ಹತ್ತು ಕತ್ತೆಗಳ ಮೇಲೆ ಈಜಿಪ್ಟ್ ದೇಶದ ಒಳ್ಳೇ ವಸ್ತುಗಳನ್ನ, ಹತ್ತು ಹೆಣ್ಣು ಕತ್ತೆಗಳ ಮೇಲೆ ಪ್ರಯಾಣಕ್ಕೆ ಬೇಕಾದ ಧಾನ್ಯ, ರೊಟ್ಟಿಗಳು, ಬೇರೆ ಆಹಾರ ಹೊರಿಸಿ ಕಳಿಸಿದ. 24 ಆಮೇಲೆ ಅವನು ತನ್ನ ಅಣ್ಣತಮ್ಮಂದಿರಿಗೆ “ನೀವು ದಾರಿಯಲ್ಲಿ ಜಗಳ ಮಾಡಬೇಡಿ” ಅಂತೇಳಿ ಕಳಿಸ್ಕೊಟ್ಟ.+
25 ಆಗ ಅವರು ಈಜಿಪ್ಟ್ ದೇಶದಿಂದ ಹೊರಟು ಎತ್ತರ ಪ್ರದೇಶವಾದ ಕಾನಾನಿನಲ್ಲಿರೋ ತಮ್ಮ ತಂದೆ ಯಾಕೋಬನ ಹತ್ರ ಬಂದ್ರು. 26 ಆಮೇಲೆ ಅವರು ತಮ್ಮ ತಂದೆಗೆ “ಯೋಸೇಫ ಇನ್ನೂ ಜೀವದಿಂದ ಇದ್ದಾನೆ. ಅವನೇ ಇಡೀ ಈಜಿಪ್ಟ್ ದೇಶದ ಅಧಿಕಾರಿ!” ಅಂದ್ರು.+ ಇದನ್ನ ಕೇಳಿ ಅವನು ಮೂಕವಿಸ್ಮಿತನಾದ. ಯಾಕಂದ್ರೆ ಅವನು ಅವರ ಮಾತನ್ನ ನಂಬಲಿಲ್ಲ.+ 27 ಆದ್ರೆ ಅವರು ಯೋಸೇಫ ಹೇಳಿದ ಎಲ್ಲ ಮಾತುಗಳನ್ನ ಅವನಿಗೆ ತಿಳಿಸಿದಾಗ ಮತ್ತು ಅವನನ್ನ ಕರ್ಕೊಂಡು ಬರೋಕೆ ಯೋಸೇಫ ಕಳಿಸಿಕೊಟ್ಟ ಬಂಡಿಗಳನ್ನ ತೋರಿಸಿದಾಗ ಅವರ ತಂದೆ ಯಾಕೋಬನಿಗೆ ಮತ್ತೆ ಜೀವ ಬಂದಂತಾಯ್ತು. 28 ಆಗ ಇಸ್ರಾಯೇಲ “ಸಾಕು, ನಾನೀಗ ನಂಬ್ತೀನಿ. ನನ್ನ ಮಗ ಯೋಸೇಫ ನಿಜವಾಗ್ಲೂ ಬದುಕಿದ್ದಾನೆ! ನಾನು ಸಾಯೋ ಮುಂಚೆ ಹೋಗಿ ಅವನನ್ನ ನೋಡಬೇಕು!” ಅಂದ.+
46 ಇಸ್ರಾಯೇಲ ತನ್ನ ಎಲ್ಲ ಸೊತ್ತು ತಗೊಂಡು ತನ್ನ ಕುಟುಂಬದ ಜೊತೆ ಹೊರಟ. ಅವನು ಪ್ರಯಾಣಮಾಡಿ ಬೇರ್ಷೆಬಕ್ಕೆ+ ಬಂದಾಗ ಅಲ್ಲಿ ತನ್ನ ತಂದೆಯಾದ ಇಸಾಕನ ದೇವರಿಗೆ+ ಬಲಿಗಳನ್ನ ಅರ್ಪಿಸಿದ. 2 ರಾತ್ರಿಯಲ್ಲಿ ದೇವರು ಇಸ್ರಾಯೇಲನ ಜೊತೆ ಒಂದು ದರ್ಶನದಲ್ಲಿ ಮಾತಾಡಿದನು. ಆತನು “ಯಾಕೋಬ, ಯಾಕೋಬ!” ಅಂತ ಕರೆದನು. ಅದಕ್ಕೆ ಅವನು “ಹೇಳು ಸ್ವಾಮಿ!” ಅಂದ. 3 ದೇವರು ಯಾಕೋಬನಿಗೆ “ನಾನು ಸತ್ಯ ದೇವರು, ನಿನ್ನ ತಂದೆಯ ದೇವರು.+ ನೀನು ಈಜಿಪ್ಟಿಗೆ ಹೋಗೋಕೆ ಭಯಪಡಬೇಡ. ಯಾಕಂದ್ರೆ ಅಲ್ಲಿ ನಿನ್ನಿಂದ ಒಂದು ದೊಡ್ಡ ಜನಾಂಗ ಆಗೋ ತರ ನಾನು ಮಾಡ್ತೀನಿ.+ 4 ನಾನೇ ನಿನ್ನ ಜೊತೆಯಲ್ಲಿ ಈಜಿಪ್ಟಿಗೆ ಬರ್ತಿನಿ. ಅಲ್ಲಿಂದ ನಿನ್ನನ್ನ ಈ ದೇಶಕ್ಕೆ ಮತ್ತೆ ನಾನೇ ಕರ್ಕೊಂಡು ಬರ್ತಿನಿ.+ ಅಷ್ಟೇ ಅಲ್ಲ ನೀನು ತೀರಿಕೊಂಡಾಗ ಯೋಸೇಫ ತನ್ನ ಕೈಯಿಂದ ನಿನ್ನ ಕಣ್ಣು ಮುಚ್ತಾನೆ” ಅಂದನು.+
5 ಆಮೇಲೆ ಯಾಕೋಬ ಬೇರ್ಷೆಬದಿಂದ ಹೊರಟ. ಅವನ ಗಂಡುಮಕ್ಕಳು ಅವನನ್ನ,* ತಮ್ಮ ಹೆಂಡತಿ ಮಕ್ಕಳನ್ನ ಫರೋಹ ಕಳಿಸಿದ ಬಂಡಿಯಲ್ಲಿ ಕೂರಿಸಿದ್ರು. 6 ಅವರು ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಎಲ್ಲ ಪ್ರಾಣಿಗಳನ್ನ, ವಸ್ತುಗಳನ್ನ ತಗೊಂಡ್ರು. ಯಾಕೋಬ ಮತ್ತು ಅವನ ಕುಟುಂಬದವರೆಲ್ಲ ಪ್ರಯಾಣ ಮಾಡ್ತಾ ಈಜಿಪ್ಟಿಗೆ ಬಂದ್ರು. 7 ಹೀಗೆ ಯಾಕೋಬ ತನ್ನ ಇಡೀ ಕುಟುಂಬವನ್ನ ಅಂದ್ರೆ ತನ್ನ ಎಲ್ಲ ಗಂಡುಹೆಣ್ಣುಮಕ್ಕಳನ್ನ, ಎಲ್ಲ ಮೊಮ್ಮಕ್ಕಳನ್ನ ಕರ್ಕೊಂಡು ಈಜಿಪ್ಟಿಗೆ ಬಂದ.
8 ಈಜಿಪ್ಟಿಗೆ ಬಂದ ಇಸ್ರಾಯೇಲನ ಅಂದ್ರೆ ಯಾಕೋಬನ ಗಂಡುಮಕ್ಕಳ ವಿವರ:+ ಯಾಕೋಬನ ದೊಡ್ಡಮಗ ರೂಬೇನ್.+
9 ರೂಬೇನನ ಮಕ್ಕಳು ಹನೋಕ್, ಪಲ್ಲೂ, ಹೆಚ್ರೋನ್, ಕರ್ಮೀ.+
10 ಸಿಮೆಯೋನನ+ ಮಕ್ಕಳು ಯೆಮೂವೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಸ್ತ್ರೀಯಿಂದ ಹುಟ್ಟಿದ ಶೌಲ.+
11 ಲೇವಿಯ+ ಮಕ್ಕಳು ಗೇರ್ಷೋನ್, ಕೆಹಾತ್, ಮೆರಾರೀ.+
12 ಯೆಹೂದನ+ ಮಕ್ಕಳು ಏರ್, ಓನಾನ್, ಶೇಲಹ,+ ಪೆರೆಚ್+ ಮತ್ತು ಜೆರಹ.+ ಆದ್ರೆ ಏರ್ ಮತ್ತು ಓನಾನ ಕಾನಾನ್ ದೇಶದಲ್ಲೇ ಸತ್ರು.+
ಪೆರೆಚನ ಮಕ್ಕಳು ಹೆಚ್ರೋನ್ ಮತ್ತು ಹಾಮೂಲ್.+
13 ಇಸ್ಸಾಕಾರನ ಮಕ್ಕಳು ತೋಲಾ, ಪುವ್ವಾ, ಯೋಬ್, ಶಿಮ್ರೋನ್.+
14 ಜೆಬುಲೂನನ+ ಮಕ್ಕಳು ಸೆರೆದ್, ಏಲೋನ್, ಯಹ್ಲೇಲ್.+
15 ಇವರೆಲ್ಲ ಯಾಕೋಬನಿಗೆ ಲೇಯಳಿಂದ ಹುಟ್ಟಿದ ವಂಶದವರು. ಯಾಕೋಬನ ಈ ಮಕ್ಕಳು ಮತ್ತು ಮಗಳಾದ ದೀನ+ ಪದ್ದನ್-ಅರಾಮಿನಲ್ಲಿ ಹುಟ್ಟಿದ್ರು. ಲೇಯಳಿಂದ ಬಂದ ಯಾಕೋಬನ ವಂಶದವರು ಒಟ್ಟು 33 ಜನ.
16 ಗಾದನ+ ಮಕ್ಕಳು ಚಿಪ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ, ಅರೇಲೀ.+
17 ಅಶೇರನ+ ಮಕ್ಕಳು ಇಮ್ನಾ, ಇಷ್ವ, ಇಷ್ವಿ, ಬೆರೀಯ. ಇವರ ಸಹೋದರಿ ಹೆಸರು ಸೆರಹ.
ಬೆರೀಯನ ಮಕ್ಕಳು ಹೆಬೆರ್, ಮಲ್ಕೀಯೇಲ್.+
18 ಇವರೆಲ್ಲ ಲಾಬಾನ ತನ್ನ ಮಗಳಾದ ಲೇಯಗೆ ಸೇವಕಿಯಾಗಿ ಕೊಟ್ಟ ಜಿಲ್ಪಳ+ ವಂಶದವರು. ಜಿಲ್ಪಳಿಂದ ಬಂದ ಯಾಕೋಬನ ವಂಶದವರು ಒಟ್ಟು 16 ಜನ.
19 ಯಾಕೋಬನ ಹೆಂಡತಿಯಾದ ರಾಹೇಲಳ ಮಕ್ಕಳು ಯೋಸೇಫ+ ಮತ್ತು ಬೆನ್ಯಾಮೀನ್.+
20 ಯೋಸೇಫನಿಗೆ ಓನ್* ಪಟ್ಟಣದ ಪುರೋಹಿತನಾದ ಪೋಟೀಫರನ ಮಗಳಾದ ಆಸನತಳಿಂದ+ ಮನಸ್ಸೆ+ ಮತ್ತು ಎಫ್ರಾಯೀಮ್+ ಹುಟ್ಟಿದ್ರು.
21 ಬೆನ್ಯಾಮೀನನ+ ಮಕ್ಕಳು ಬೆಳ, ಬೆಕೆರ್, ಅಷ್ಬೇಲ್, ಗೇರ,+ ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್+ ಮತ್ತು ಅರ್ದ್.+
22 ಇವರೆಲ್ಲ ಯಾಕೋಬನಿಗೆ ರಾಹೇಲಳಿಂದ ಹುಟ್ಟಿದ ವಂಶದವರು, ಒಟ್ಟು 14 ಜನ.
24 ನಫ್ತಾಲಿಯ+ ಮಕ್ಕಳು ಯಹಚೇಲ್, ಗೂನೀ, ಯೇಜೆರ್, ಶಿಲ್ಲೇಮ್.+
25 ಇವರೆಲ್ಲ ಲಾಬಾನ ತನ್ನ ಮಗಳಾದ ರಾಹೇಲಗೆ ಸೇವಕಿಯಾಗಿ ಕೊಟ್ಟ ಬಿಲ್ಹಾಳ ವಂಶದವರು. ಬಿಲ್ಹಾಳಿಂದ ಬಂದ ಯಾಕೋಬನ ವಂಶದವರು ಒಟ್ಟು ಏಳು ಜನ.
26 ಯಾಕೋಬನ ಜೊತೆ ಈಜಿಪ್ಟಿಗೆ ಬಂದ ಅವನ ವಂಶದವರು ಒಟ್ಟು 66 ಜನ.+ ಇದ್ರಲ್ಲಿ ಯಾಕೋಬನ ಸೊಸೆಯರ ಸಂಖ್ಯೆ ಸೇರಿಲ್ಲ. 27 ಈಜಿಪ್ಟಲ್ಲಿ ಯೋಸೇಫನಿಗೆ ಇಬ್ಬರು ಮಕ್ಕಳು ಹುಟ್ಟಿದ್ರು. ಹೀಗೆ ಈಜಿಪ್ಟಲ್ಲಿ ಯಾಕೋಬನ ಕುಟುಂಬದವರು ಒಟ್ಟು 70 ಜನ ಇದ್ರು.+
28 ತಾನು ಗೋಷೆನಿಗೆ ಬರ್ತಿರೋ ಸುದ್ದಿಯನ್ನ ಯೋಸೇಫನಿಗೆ ಹೇಳೋಕೆ ಯಾಕೋಬ ಯೆಹೂದನನ್ನ+ ಮುಂಚೆನೇ ಕಳಿಸಿದ. ಅವರು ಗೋಷೆನ್+ ಪ್ರದೇಶಕ್ಕೆ ಬಂದಾಗ 29 ಯೋಸೇಫ ತನ್ನ ರಥ ಸಿದ್ಧಮಾಡಿ ತಂದೆ ಇಸ್ರಾಯೇಲನನ್ನ ನೋಡೋಕೆ ಅಲ್ಲಿಗೆ ಬಂದ. ಯೋಸೇಫ ತಂದೆಯನ್ನ ನೋಡಿದ ತಕ್ಷಣ ಅವನನ್ನ ಅಪ್ಪಿಕೊಂಡು ತುಂಬ ಹೊತ್ತು ಅತ್ತ.* 30 ಆಗ ಇಸ್ರಾಯೇಲ ಯೋಸೇಫನಿಗೆ “ಕೊನೆಗೂ ನಾನು ನಿನ್ನ ಮುಖ ನೋಡ್ದೆ. ನೀನು ಬದುಕಿದ್ದೀಯ, ನನಗೆ ಅಷ್ಟೇ ಸಾಕು. ಈಗ ನಾನು ನೆಮ್ಮದಿಯಿಂದ ಸಾಯಬಹುದು” ಅಂದ.
31 ಆಮೇಲೆ ಯೋಸೇಫ ತನ್ನ ಅಣ್ಣತಮ್ಮಂದಿರಿಗೆ, ತನ್ನ ತಂದೆಯ ಕುಟುಂಬದವರಿಗೆ “ನಾನು ಫರೋಹನ ಹತ್ರ ಹೋಗಿ ನೀವು ಬಂದಿರೋ ಸುದ್ದಿ ತಿಳಿಸ್ತೀನಿ.+ ‘ಕಾನಾನ್ ದೇಶದಲ್ಲಿದ್ದ ನನ್ನ ಅಣ್ಣತಮ್ಮಂದಿರು ಮತ್ತು ನನ್ನ ತಂದೆಯ ಕುಟುಂಬದವರು ಇಲ್ಲಿಗೆ ಬಂದಿದ್ದಾರೆ.+ 32 ಅವರು ಕುರುಬರು,+ ಪ್ರಾಣಿಗಳನ್ನ ಸಾಕ್ತಾರೆ.+ ತಮ್ಮೆಲ್ಲ ಪ್ರಾಣಿ ಹಿಂಡುಗಳನ್ನ ಮತ್ತು ತಮ್ಮೆಲ್ಲ ಸೊತ್ತುಗಳನ್ನ ತಗೊಂಡು ಇಲ್ಲಿಗೆ ಬಂದಿದ್ದಾರೆ’ ಅಂತ ಹೇಳ್ತೀನಿ.+ 33 ಫರೋಹ ನಿಮ್ಮನ್ನ ಕರೆದು ‘ನೀವೇನು ಕೆಲಸ ಮಾಡ್ತೀರ?’ ಅಂತ ಕೇಳಿದ್ರೆ 34 ‘ನಿನ್ನ ಸೇವಕರಾದ ನಾವು ನಮ್ಮ ಪೂರ್ವಜರ ತರ+ ಚಿಕ್ಕಂದಿನಿಂದಾನೂ ಪ್ರಾಣಿಗಳನ್ನ ಸಾಕ್ತಾ ಬಂದಿದ್ದೀವಿ’ ಅಂತ ಹೇಳಬೇಕು. ಆಗ ಫರೋಹ ನಿಮಗೆ ಗೋಷೆನ್+ ಪ್ರದೇಶದಲ್ಲಿ ಇರೋಕೆ ಅನುಮತಿ ಕೊಡ್ತಾನೆ. ಯಾಕಂದ್ರೆ ಈಜಿಪ್ಟಿನವರಿಗೆ ಕುರುಬರಂದ್ರೆ ಅಸಹ್ಯ” ಅಂದ.+
47 ಆಮೇಲೆ ಯೋಸೇಫ ಫರೋಹನ ಹತ್ರ ಹೋಗಿ+ “ನನ್ನ ಅಪ್ಪ ಮತ್ತು ಅಣ್ಣತಮ್ಮಂದಿರು ತಮ್ಮೆಲ್ಲ ಕುರಿಗಳನ್ನ, ಸೊತ್ತನ್ನ ತಗೊಂಡು ಕಾನಾನ್ ದೇಶದಿಂದ ಈ ದೇಶಕ್ಕೆ ಬಂದಿದ್ದಾರೆ. ಈಗ ಅವರು ಗೋಷೆನ್+ ಪ್ರದೇಶದಲ್ಲಿ ಇದ್ದಾರೆ” ಅಂದ. 2 ಆಮೇಲೆ ಅವನು ಐದು ಅಣ್ಣಂದಿರನ್ನ ಫರೋಹನ ಆಸ್ಥಾನಕ್ಕೆ ಕರ್ಕೊಂಡು ಹೋದ.+
3 ಫರೋಹ ಅವರಿಗೆ “ನೀವೇನು ಕೆಲಸ ಮಾಡ್ತೀರ?” ಅಂತ ಕೇಳಿದ. ಅವರು “ನಿನ್ನ ಸೇವಕರಾದ ನಾವು ನಮ್ಮ ಪೂರ್ವಜರ ತರ ಕುರಿ ಕಾಯೋ ಕೆಲಸ ಮಾಡ್ತೀವಿ” ಅಂದ್ರು.+ 4 ಆಮೇಲೆ ಅವರು ಫರೋಹನಿಗೆ “ನಿನ್ನ ಸೇವಕರಾದ ನಾವು ಈ ದೇಶದಲ್ಲಿ ಸ್ವಲ್ಪ ಸಮಯ* ಇರೋಕೆ ಬಂದಿದ್ದೀವಿ.+ ಯಾಕಂದ್ರೆ ಕಾನಾನ್ ದೇಶದಲ್ಲಿ ಬರಗಾಲ ಜಾಸ್ತಿ ಆಗಿದೆ,+ ನಮ್ಮ ದನಕುರಿಗಳಿಗೆ ಮೇವು ಸಿಗ್ತಿಲ್ಲ. ಹಾಗಾಗಿ ನಮಗೆ ಗೋಷೆನ್+ ಪ್ರದೇಶದಲ್ಲಿ ಇರೋಕೆ ದಯವಿಟ್ಟು ಅನುಮತಿ ಕೊಡು” ಅಂದ್ರು. 5 ಆಗ ಫರೋಹ ಯೋಸೇಫನಿಗೆ “ನಿನ್ನ ಹತ್ರ ಬಂದಿರೋ ನಿನ್ನ ತಂದೆಗೆ, ಅಣ್ಣತಮ್ಮಂದಿರಿಗೆ 6 ವಾಸಿಸೋಕೆ ಈ ದೇಶದಲ್ಲೇ ಒಳ್ಳೇ ಜಾಗ ಕೊಡು. ಇಡೀ ಈಜಿಪ್ಟ್ ದೇಶ ನಿನ್ನ ಕೈಯಲ್ಲಿದೆ. ಅವರು ಗೋಷೆನ್ ಪ್ರದೇಶದಲ್ಲಿ ಇರಲಿ.+ ಅವರಲ್ಲಿ ಯಾರಾದ್ರೂ ಸಮರ್ಥ ಪುರುಷರು ಅಂತ ನಿನಗೆ ಅನಿಸಿದ್ರೆ ನನ್ನ ಪ್ರಾಣಿಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ಅವರಿಗೆ ಕೊಡು” ಅಂದ.
7 ಆಮೇಲೆ ಯೋಸೇಫ ತನ್ನ ತಂದೆ ಯಾಕೋಬನನ್ನ ಫರೋಹನ ಮುಂದೆ ಕರ್ಕೊಂಡು ಬಂದ. ಯಾಕೋಬ ಫರೋಹನನ್ನ ಆಶೀರ್ವದಿಸಿದ. 8 ಫರೋಹ “ನಿನಗೆ ಈಗ ಎಷ್ಟು ವಯಸ್ಸು?” ಅಂತ ಯಾಕೋಬನಿಗೆ ಕೇಳಿದಾಗ 9 ಅವನು “ನನಗೀಗ 130 ವರ್ಷ. ಇಷ್ಟುಕಾಲ ನಾನು ನನ್ನ ಪೂರ್ವಜರ ತರ ಬೇರೆಬೇರೆ ಜಾಗದಲ್ಲಿ ವಿದೇಶಿಯಾಗಿ ಜೀವಿಸಿದೆ. ನನ್ನ ಪೂರ್ವಜರು ಜೀವಿಸಿದಷ್ಟು ಕಾಲ ನಾನು ಜೀವಿಸಲ್ಲ.+ ನನ್ನ ಜೀವಮಾನದ ಈ ಸ್ವಲ್ಪ ವರ್ಷದಲ್ಲಿ ತುಂಬ ಕಷ್ಟ, ವೇದನೆ ಅನುಭವಿಸಿದೆ”+ ಅಂದ. 10 ಆಮೇಲೆ ಯಾಕೋಬ ಫರೋಹನನ್ನ ಆಶೀರ್ವದಿಸಿ ಅಲ್ಲಿಂದ ಹೊರಟುಹೋದ.
11 ಯೋಸೇಫ ಫರೋಹನ ಅಪ್ಪಣೆ ಪ್ರಕಾರ ತನ್ನ ತಂದೆಗೆ, ಅಣ್ಣತಮ್ಮಂದಿರಿಗೆ ಈಜಿಪ್ಟಲ್ಲಿ ಒಳ್ಳೇ ಜಾಗ ಆಗಿದ್ದ ರಮ್ಸೇಸ್ಸಾದಲ್ಲಿ*+ ಒಂದು ಭಾಗವನ್ನ ಆಸ್ತಿಯಾಗಿ ಕೊಟ್ಟು ಅಲ್ಲಿ ಇರೋದಕ್ಕೆ ವ್ಯವಸ್ಥೆ ಮಾಡಿದ. 12 ಅಲ್ಲದೆ ಯೋಸೇಫ ತಂದೆಗೆ, ಅಣ್ಣತಮ್ಮಂದಿರಿಗೆ, ತಂದೆಯ ಇಡೀ ಕುಟುಂಬಕ್ಕೆ ಆಹಾರ ಕೊಡ್ತಾ ಇದ್ದ. ಅವನು ಪ್ರತಿಯೊಂದು ಕುಟುಂಬದಲ್ಲಿರೋ ಮಕ್ಕಳ ಸಂಖ್ಯೆಗೆ ತಕ್ಕಂತೆ ಆಹಾರ ಕೊಟ್ಟ.
13 ಬರಗಾಲ ತುಂಬ ಜಾಸ್ತಿ ಆಗಿದ್ದರಿಂದ ಈಜಿಪ್ಟಲ್ಲಿ, ಕಾನಾನ್ ದೇಶದಲ್ಲಿ ಎಲ್ಲೂ ಆಹಾರ ಸಿಗ್ತಿರಲಿಲ್ಲ. ಬರಗಾಲದಿಂದ ಆ ದೇಶಗಳ ಜನ್ರು ಬಲಹೀನರಾದ್ರು.+ 14 ಈಜಿಪ್ಟ್ ಮತ್ತು ಕಾನಾನ್ ದೇಶದಲ್ಲಿದ್ದ ಜನ್ರು ಹಣ ಕೊಟ್ಟು ಧಾನ್ಯ ತಗೊಳ್ತಿದ್ರು.+ ಹೀಗೆ ಯೋಸೇಫ ಆ ದೇಶಗಳಲ್ಲಿದ್ದ ಹಣವನ್ನೆಲ್ಲ ಸಂಗ್ರಹಿಸಿ ಫರೋಹನ ಭಂಡಾರಕ್ಕೆ ಸೇರಿಸ್ತಾ ಇದ್ದ. 15 ಸ್ವಲ್ಪ ದಿನ ಆದ್ಮೇಲೆ ಈಜಿಪ್ಟ್ ಮತ್ತು ಕಾನಾನ್ ದೇಶದ ಜನ್ರ ಹತ್ರ ಇದ್ದ ಹಣ ಎಲ್ಲ ಖಾಲಿ ಆಯ್ತು. ಆಗ ಈಜಿಪ್ಟಿನ ಜನರೆಲ್ಲ ಯೋಸೇಫನ ಹತ್ರ ಬಂದು “ನಮ್ಮ ಹತ್ರ ಸ್ವಲ್ಪನೂ ಹಣವಿಲ್ಲ. ನಮಗೆ ಆಹಾರ ಕೊಡು. ನಿನ್ನ ಕಣ್ಮುಂದೆನೇ ನಾವು ಹಸಿವೆಯಿಂದ ಸಾಯೋ ಪರಿಸ್ಥಿತಿ ಬರೋ ಹಾಗೆ ಬಿಡಬೇಡ” ಅಂತ ಹೇಳ್ತಿದ್ರು. 16 ಅದಕ್ಕೆ ಯೋಸೇಫ “ನಿಮ್ಮ ಹತ್ರ ಇರೋ ಹಣ ಖಾಲಿಯಾಗಿದ್ರೆ ನಿಮ್ಮ ಸಾಕುಪ್ರಾಣಿಗಳನ್ನ ತಂದು ಕೊಡಿ. ಅವನ್ನ ತಗೊಂಡು ನಾನು ನಿಮಗೆ ಆಹಾರ ಕೊಡ್ತೀನಿ” ಅಂದ. 17 ಹಾಗಾಗಿ ಜನ್ರು ತಮ್ಮ ಜಾನುವಾರು ತಂದು ಯೋಸೇಫನಿಗೆ ಕೊಡೋಕೆ ಆರಂಭಿಸಿದ್ರು. ಅವನು ಅವರ ಕುದುರೆಗಳನ್ನ, ಪ್ರಾಣಿ ಹಿಂಡುಗಳನ್ನ, ಕತ್ತೆಗಳನ್ನ ತಗೊಂಡು ಬದಲಿಯಾಗಿ ಅವರಿಗೆ ಆಹಾರ ಕೊಡ್ತಾ ಇದ್ದ. ಇಡೀ ವರ್ಷ ಹೀಗೇ ಮಾಡ್ತಿದ್ದ.
18 ಆ ವರ್ಷ ಮುಗಿದ ಮೇಲೆ ಮುಂದಿನ ವರ್ಷ ಜನ್ರು ಯೋಸೇಫನ ಹತ್ರ ಬಂದು “ಸ್ವಾಮಿ, ನಮ್ಮ ಹತ್ರ ಇದ್ದ ಹಣ, ಸಾಕುಪ್ರಾಣಿ ಎಲ್ಲ ನಿಂಗೆ ಕೊಟ್ಟಿದ್ದೀವಿ. ಅದು ನಿಂಗೂ ಗೊತ್ತು. ಈಗ ಇರೋದು ನಾವು,* ನಮ್ಮ ಜಮೀನು ಅಷ್ಟೇ. 19 ನಿನ್ನ ಕಣ್ಮುಂದೆನೇ ನಾವು ಹಸಿವೆಯಿಂದ ಸಾಯೋ ಪರಿಸ್ಥಿತಿ ಬರೋದು ಬೇಡ. ನಮ್ಮ ಜಮೀನೂ ಹಾಳಾಗೋದು ಬೇಡ. ಹಾಗಾಗಿ ನಮ್ಮನ್ನ ಮತ್ತು ನಮ್ಮ ಜಮೀನನ್ನ ತಗೊಂಡು ನಮಗೆ ಆಹಾರ ಕೊಡು. ನಾವು ಫರೋಹನಿಗೆ ದಾಸರಾಗಿ ಇರ್ತಿವಿ. ನಮ್ಮ ಜಮೀನು ಫರೋಹಗೆ ಸೇರಲಿ. ನಾವು ಬದುಕಿ ಉಳಿಯೋಕೆ, ನಮ್ಮ ಜಮೀನು ಹಾಳು ಬೀಳದೆ ಇರೋಕೆ ನಮಗೆ ಬಿತ್ತನೆ ಮಾಡೋಕೆ ಬೀಜ ಕೊಡು” ಅಂತ ಹೇಳೋಕೆ ಶುರುಮಾಡಿದ್ರು. 20 ತುಂಬ ದೊಡ್ಡ ಬರಗಾಲ ಬಂದಿದ್ರಿಂದ ಈಜಿಪ್ಟಿನ ಎಲ್ಲ ಜನ್ರು ತಮ್ಮ ಜಮೀನನ್ನ ಮಾರಿಬಿಟ್ರು. ಯೋಸೇಫ ಅವುಗಳನ್ನ ಫರೋಹನ ಸಲುವಾಗಿ ಖರೀದಿಸಿದ. ಹೀಗೆ ಈಜಿಪ್ಟಿನ ಜಮೀನೆಲ್ಲ ಫರೋಹನಿಗೆ ಸೇರಿತು.
21 ಆಮೇಲೆ ಯೋಸೇಫ ಈಜಿಪ್ಟಿನ ಜನರಿಗೆಲ್ಲ ಹತ್ರದ ಪಟ್ಟಣಗಳಿಗೆ ಹೋಗಿ ವಾಸ ಮಾಡಿ ಅಂತ ಆಜ್ಞಾಪಿಸಿದ. ಜನ್ರು ಹಾಗೇ ಮಾಡಿದ್ರು.+ 22 ಪುರೋಹಿತರಿಗೆ ಫರೋಹನಿಂದ ಆಹಾರ ಸಿಗ್ತಿದ್ದ ಕಾರಣ ಅವರು ಮಾತ್ರ ತಮ್ಮ ಜಮೀನು ಮಾರಲಿಲ್ಲ. ಹಾಗಾಗಿ ಅವರ ಜಮೀನನ್ನ ಯೋಸೇಫ ಖರೀದಿಸಲಿಲ್ಲ.+ 23 ಅವನು ಜನರಿಗೆ “ನಾನು ಇವತ್ತು ನಿಮ್ಮನ್ನ, ನಿಮ್ಮ ಜಮೀನನ್ನೆಲ್ಲ ಫರೋಹನಿಗೋಸ್ಕರ ಖರೀದಿಸಿದ್ದೀನಿ. ನಾನು ನಿಮಗೆ ಬೀಜ ಕೊಡ್ತೀನಿ. ಅದನ್ನ ನೀವು ತಗೊಂಡು ಹೋಗಿ ಹೊಲಗದ್ದೆಗಳಲ್ಲಿ ಬಿತ್ತನೆ ಮಾಡಿ. 24 ನೀವು ಬೆಳಿಯೋ ಬೆಳೆಯಲ್ಲಿ ಐದನೇ ಒಂದು ಭಾಗ ಫರೋಹನಿಗೆ ಕೊಡಿ.+ ಉಳಿದ ನಾಲ್ಕು ಭಾಗ ನಿಮಗೆ. ನೀವು ಅದನ್ನ ನಿಮಗೆ, ನಿಮ್ಮ ಮಕ್ಕಳಿಗೆ, ಮನೆಯಲ್ಲಿರೋ ಎಲ್ಲರಿಗೆ ಆಹಾರವಾಗಿ ತಗೊಳ್ಳಿ ಮತ್ತು ಬಿತ್ತನೆ ಮಾಡೋಕೆ ಬಳಸಿ” ಅಂದ. 25 ಅದಕ್ಕೆ ಅವರು “ನೀನು ನಮ್ಮ ಜೀವ ಉಳಿಸಿದೆ.+ ಸ್ವಾಮಿ, ನಮ್ಮ ಮೇಲೆ ನಿನ್ನ ದಯೆ ಇರಲಿ, ನಾವು ಫರೋಹನ ದಾಸರಾಗ್ತೀವಿ” ಅಂದ್ರು.+ 26 ಆಮೇಲೆ ಯೋಸೇಫ, ಬೆಳೆಯಲ್ಲಿ ಐದನೇ ಒಂದು ಭಾಗ ಫರೋಹನಿಗೆ ಕೊಡಬೇಕು ಅನ್ನೋ ಆಜ್ಞೆ ಹೊರಡಿಸಿದ. ಈ ಆಜ್ಞೆ ಇವತ್ತಿನ ತನಕ ಈಜಿಪ್ಟ್ ದೇಶದಲ್ಲಿ ಜಾರಿಯಲ್ಲಿದೆ. ಪುರೋಹಿತರ ಜಮೀನು ಮಾತ್ರ ಫರೋಹನಿಗೆ ಸೇರಲಿಲ್ಲ.+
27 ಇಸ್ರಾಯೇಲನ ಕುಟುಂಬದವರು ಈಜಿಪ್ಟಿನ ಗೋಷೆನ್+ ಪ್ರದೇಶದಲ್ಲೇ ಇದ್ರು. ಅವರಿಗೆ ತುಂಬ ಮಕ್ಕಳು ಹುಟ್ಟಿದ್ರು. ಅವರ ಸಂಖ್ಯೆ ಜಾಸ್ತಿ ಆಯ್ತು.+ 28 ಯಾಕೋಬ ಈಜಿಪ್ಟ್ ದೇಶದಲ್ಲಿ 17 ವರ್ಷ ಇದ್ದ. ಅವನು ಒಟ್ಟು 147 ವರ್ಷ ಬದುಕಿದ.+
29 ಯಾಕೋಬನಿಗೆ ತಾನು ಇನ್ನು ತುಂಬ ದಿನ ಬದುಕಲ್ಲ+ ಅಂತ ಗೊತ್ತಾದಾಗ ಅವನು ತನ್ನ ಮಗ ಯೋಸೇಫನನ್ನ ಕರೆದು “ಮಗ, ನನಗೊಂದು ಸಹಾಯ ಮಾಡು. ನಾನು ಸತ್ತ ಮೇಲೆ ದಯವಿಟ್ಟು ನನ್ನನ್ನ ಈಜಿಪ್ಟಲ್ಲಿ ಸಮಾಧಿ ಮಾಡಬೇಡ. ನನ್ನ ಆಸೆ ನೆರವೇರಿಸ್ತೀಯ ಅಂತ ನನ್ನ ತೊಡೆ ಕೆಳಗೆ ನಿನ್ನ ಕೈಯಿಟ್ಟು ಆಣೆ ಮಾಡು. ನನಗೆ ಶಾಶ್ವತ ಪ್ರೀತಿ ತೋರಿಸ್ತೀಯ, ವಿಶ್ವಾಸ ಉಳಿಸ್ಕೊಳ್ತೀಯ ಅಂತ ಆಣೆ ಮಾಡು.+ 30 ನಾನು ಸತ್ತ ಮೇಲೆ ನನ್ನ ದೇಹನಾ ಈಜಿಪ್ಟಿಂದ ತಗೊಂಡು ಹೋಗಿ ನನ್ನ ಪೂರ್ವಜರ ಸಮಾಧಿಯಲ್ಲೇ ಸಮಾಧಿ ಮಾಡಬೇಕು” ಅಂದ.+ ಅದಕ್ಕೆ ಯೋಸೇಫ “ನೀನು ಹೇಳಿದ ಹಾಗೇ ಮಾಡ್ತೀನಿ” ಅಂದ. 31 ಅದಕ್ಕೆ ಇಸ್ರಾಯೇಲ “ಮಾತು ಕೊಡು” ಅಂದಾಗ ಯೋಸೇಫ ಮಾತುಕೊಟ್ಟ.+ ಆಗ ಇಸ್ರಾಯೇಲ ಹಾಸಿಗೆ ಮೇಲೆ ತಲೆ ಇಡೋ ಜಾಗದಲ್ಲಿ ದೇವರಿಗೆ ಬಗ್ಗಿ ಪ್ರಾರ್ಥನೆ ಮಾಡಿದ.+
48 ಸ್ವಲ್ಪ ಸಮಯ ಆದ್ಮೇಲೆ ಯೋಸೇಫನಿಗೆ ತನ್ನ ತಂದೆ ಆರೋಗ್ಯ ತುಂಬ ಕೆಡ್ತಿದೆ ಅನ್ನೋ ಸುದ್ದಿ ಸಿಕ್ತು. ಆಗ ಅವನು ತನ್ನ ಇಬ್ಬರು ಮಕ್ಕಳು ಅಂದ್ರೆ ಮನಸ್ಸೆ ಮತ್ತು ಎಫ್ರಾಯೀಮನ್ನ ಕರ್ಕೊಂಡು ತಂದೆ ಹತ್ರ ಹೋದ.+ 2 “ನಿನ್ನ ಮಗ ಯೋಸೇಫ ನಿನ್ನನ್ನ ನೋಡೋಕೆ ಬಂದಿದ್ದಾನೆ” ಅಂತ ಯಾಕೋಬನಿಗೆ ಹೇಳಿದಾಗ ಅವನು ಹಾಸಿಗೆಯಿಂದ ಹೇಗೋ ಕಷ್ಟಪಟ್ಟು ಎದ್ದು ಕೂತ. 3 ಆಮೇಲೆ ಯಾಕೋಬ ಯೋಸೇಫನಿಗೆ ಹೀಗಂದ:
“ಸರ್ವಶಕ್ತ ದೇವರು ಕಾನಾನ್ ದೇಶದ ಲೂಜ್ ಪಟ್ಟಣದಲ್ಲಿ ನನಗೆ ಕಾಣಿಸ್ಕೊಂಡು ನನ್ನನ್ನ ಆಶೀರ್ವದಿಸಿದ.+ 4 ಅಲ್ಲದೆ ಆತನು ‘ನಿನ್ನ ವಂಶದವರು ಜಾಸ್ತಿ ಆಗೋ ತರ ಮಾಡ್ತೀನಿ. ನಿನ್ನ ವಂಶದವರಿಂದ ಅನೇಕ ಕುಲ ಹುಟ್ಟೋ ತರ ಮಾಡ್ತೀನಿ. ಅವೆಲ್ಲ ಸೇರಿ ಒಂದು ದೊಡ್ಡ ಸಮೂಹ ಆಗ್ತಾರೆ.+ ಅಲ್ಲದೆ ನಾನು ಈ ದೇಶವನ್ನ ನಿನ್ನ ನಂತ್ರ ಬರೋ ನಿನ್ನ ಸಂತತಿಗೆ ಶಾಶ್ವತವಾದ ಆಸ್ತಿಯಾಗಿ ಕೊಡ್ತೀನಿ’ ಅಂದ.+ 5 ನಾನು ಈಜಿಪ್ಟ್ ದೇಶಕ್ಕೆ ಬರೋ ಮುಂಚೆ ನಿನಗೆ ಇಲ್ಲಿ ಹುಟ್ಟಿದ ಇಬ್ರು ಮಕ್ಕಳು ನನ್ನವರು.+ ರೂಬೇನ್ ಮತ್ತು ಸಿಮೆಯೋನ ನನ್ನ ಮಕ್ಕಳಾಗಿರೋ ತರ ಎಫ್ರಾಯೀಮ್ ಮತ್ತು ಮನಸ್ಸೆ ಕೂಡ ನನ್ನ ಮಕ್ಕಳಾಗ್ತಾರೆ.+ 6 ಆದರೆ ಇವರಿಬ್ರ ನಂತ್ರ ನಿನಗೆ ಹುಟ್ಟೋ ಮಕ್ಕಳು ನಿನ್ನವರಾಗ್ತಾರೆ. ಆ ಮಕ್ಕಳು ಎಫ್ರಾಯೀಮ್ ಮತ್ತು ಮನಸ್ಸೆ ಹೆಸರನ್ನ ಪಡ್ಕೊಳ್ತಾರೆ. ಇವರಿಬ್ರ ಪಾಲಿಗೆ ಸಿಗೋ ಆಸ್ತಿಯಲ್ಲೇ ಆ ಮಕ್ಕಳಿಗೂ ಆಸ್ತಿ ಸಿಗುತ್ತೆ.+ 7 ನಾನು ಪದ್ದನ್‌ನಿಂದ ಕಾನಾನ್ ದೇಶಕ್ಕೆ ಬಂದ ಮೇಲೆ ಎಫ್ರಾತವನ್ನ+ ತಲುಪೋಕೆ ಇನ್ನೂ ತುಂಬ ದೂರ ಇದ್ದಾಗ್ಲೇ ನಿನ್ನಮ್ಮ ರಾಹೇಲ ನನ್ನ ಕಣ್ಮುಂದೆನೇ ತೀರಿಹೋದಳು.+ ಹಾಗಾಗಿ ನಾನು ಅವಳನ್ನ ಎಫ್ರಾತಕ್ಕೆ ಅಂದ್ರೆ ಬೆತ್ಲೆಹೇಮಿಗೆ+ ಹೋಗೋ ದಾರಿಯಲ್ಲಿ ಸಮಾಧಿ ಮಾಡ್ದೆ.”
8 ಆಮೇಲೆ ಇಸ್ರಾಯೇಲ ಯೋಸೇಫನ ಮಕ್ಕಳನ್ನ ನೋಡಿ “ಇವರು ಯಾರು?” ಅಂತ ಕೇಳಿದ. 9 ಅದಕ್ಕೆ ಯೋಸೇಫ “ಇವರು ಈ ದೇಶದಲ್ಲಿ ದೇವರು ನನಗೆ ಕೊಟ್ಟಿರೋ ಮಕ್ಕಳು” ಅಂದ.+ ಆಗ ಯಾಕೋಬ “ಅವರನ್ನ ದಯವಿಟ್ಟು ನನ್ನ ಹತ್ರ ಕರ್ಕೊಂಡು ಬಾ. ಅವರನ್ನ ಆಶೀರ್ವದಿಸ್ತೀನಿ” ಅಂದ.+ 10 ಇಸ್ರಾಯೇಲನಿಗೆ ವಯಸ್ಸಾಗಿದ್ರಿಂದ ಅವನ ಕಣ್ಣುಗಳು ಮಬ್ಬಾಗಿತ್ತು. ಅವನಿಗೆ ಕಣ್ಣು ಕಾಣಿಸ್ತಿರಲಿಲ್ಲ. ಹಾಗಾಗಿ ಯೋಸೇಫ ತನ್ನ ಮಕ್ಕಳನ್ನ ತಂದೆ ಹತ್ರ ತಂದ. ಆಗ ಇಸ್ರಾಯೇಲ ಅವರಿಗೆ ಮುತ್ತಿಟ್ಟು ಅಪ್ಪಿಕೊಂಡ. 11 ಆಮೇಲೆ ಯೋಸೇಫನಿಗೆ “ನಾನು ಮತ್ತೆ ನಿನ್ನ ಮುಖ ನೋಡ್ತೀನಿ ಅಂತ ನೆನಸಿರಲೇ ಇಲ್ಲ.+ ಆದ್ರೆ ನಿನ್ನನ್ನ ಮಾತ್ರ ಅಲ್ಲ ನಿನ್ನ ಮಕ್ಕಳನ್ನ* ನೋಡೋ ಅವಕಾಶ ದೇವರು ನನಗೆ ಕೊಟ್ಟಿದ್ದಾನೆ” ಅಂದ. 12 ಆಗ ಯೋಸೇಫ ತಂದೆಯ ಮಂಡಿ ಹತ್ರ ಇದ್ದ ತನ್ನ ಮಕ್ಕಳನ್ನ ಪಕ್ಕಕ್ಕೆ ತಂದು ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ.
13 ಆಮೇಲೆ ಯೋಸೇಫ ತನ್ನ ಇಬ್ರು ಮಕ್ಕಳನ್ನ ಇಸ್ರಾಯೇಲನ ಹತ್ರ ತಂದ. ತನ್ನ ಬಲಗೈಯಿಂದ ಎಫ್ರಾಯೀಮನನ್ನ+ ಹಿಡಿದು ಇಸ್ರಾಯೇಲನ ಎಡಗಡೆ ನಿಲ್ಲಿಸಿದ. ತನ್ನ ಎಡಗೈಯಿಂದ ಮನಸ್ಸೆಯನ್ನ+ ಹಿಡಿದು ಇಸ್ರಾಯೇಲನ ಬಲಗಡೆ ನಿಲ್ಲಿಸಿದ. 14 ಆದ್ರೆ ಇಸ್ರಾಯೇಲ ತನ್ನ ಬಲಗೈಯನ್ನ ಎಫ್ರಾಯೀಮನ ತಲೆ ಮೇಲೆ, ಎಡಗೈಯನ್ನ ಮನಸ್ಸೆಯ ತಲೆ ಮೇಲೆ ಇಟ್ಟ. ಮನಸ್ಸೆ ದೊಡ್ಡ ಮಗ,+ ಎಫ್ರಾಯೀಮ್ ಚಿಕ್ಕ ಮಗ ಅಂತ ಇಸ್ರಾಯೇಲನಿಗೆ ಗೊತ್ತಿದ್ರೂ ಅವನು ಬೇಕಂತಾನೇ ತನ್ನ ಕೈಗಳನ್ನ ಆ ರೀತಿ ಇಟ್ಟ. 15 ಆಮೇಲೆ ಅವನು ಯೋಸೇಫನನ್ನ ಆಶೀರ್ವದಿಸ್ತಾ ಹೀಗಂದ:+
“ನನ್ನ ಅಜ್ಜ ಅಬ್ರಹಾಮ ಮತ್ತು ತಂದೆ ಇಸಾಕ ಯಾರ ಜೊತೆ ನಡೆದ್ರೋ ಆ ಸತ್ಯ ದೇವರು,+
ನನ್ನ ಜೀವನಪೂರ್ತಿ ನನ್ನ ಕುರುಬನಾಗಿದ್ದು ಇವತ್ತಿನ ತನಕ ನನ್ನನ್ನ ಕಾದು ಕಾಪಾಡಿದ ಸತ್ಯ ದೇವರು,+
16 ತನ್ನ ದೂತನ ಮೂಲಕ ನನ್ನನ್ನ ಎಲ್ಲ ಸಂಕಷ್ಟಗಳಿಂದ+ ಯಾವಾಗ್ಲೂ ಬಿಡಿಸಿದ ದೇವರು ಈ ಹುಡುಗರನ್ನ ಆಶೀರ್ವದಿಸಲಿ.+
ಇವರನ್ನ ಜನ್ರು ನನ್ನ ಹೆಸರಿಂದ ನನ್ನ ಅಜ್ಜ ಅಬ್ರಹಾಮ ಮತ್ತು ತಂದೆ ಇಸಾಕನ ಹೆಸರಿಂದ ಕರಿಲಿ.
ಭೂಮಿ ಮೇಲೆ ಇವರ ಸಂಖ್ಯೆ ತುಂಬ ಹೆಚ್ಚಾಗ್ಲಿ.”+
17 ತಂದೆ ಎಫ್ರಾಯೀಮನ ತಲೆ ಮೇಲೆ ತನ್ನ ಬಲಗೈ ಇಟ್ಟಿರೋದನ್ನ ನೋಡಿ ಯೋಸೇಫನಿಗೆ ಬೇಸರ ಆಯ್ತು. ಹಾಗಾಗಿ ಅವನು ತಂದೆ ಕೈಹಿಡಿದು ಎಫ್ರಾಯೀಮನ ತಲೆ ಮೇಲಿಂದ ಮನಸ್ಸೆಯ ತಲೆ ಮೇಲಿಡೋಕೆ ಪ್ರಯತ್ನಿಸಿದ. 18 ಯೋಸೇಫ ತಂದೆಗೆ “ಅಪ್ಪ, ದೊಡ್ಡ ಮಗ+ ಅವನಲ್ಲ ಇವನು. ನಿನ್ನ ಬಲಗೈಯನ್ನ ಇವನ ತಲೆ ಮೇಲಿಡು” ಅಂದ. 19 ಆದ್ರೆ ಅವನ ತಂದೆ ನಿರಾಕರಿಸ್ತಾ “ನನಗೆ ಗೊತ್ತು ಮಗ, ನನಗೆ ಗೊತ್ತು. ಅವನ ವಂಶಜರು ಕೂಡ ದೊಡ್ಡ ಜನಸಮೂಹ ಆಗ್ತಾರೆ. ಅವನು ಕೂಡ ಪ್ರಧಾನ ವ್ಯಕ್ತಿಯಾಗ್ತಾನೆ. ಆದ್ರೆ ಅವನ ತಮ್ಮ ಅವನಿಗಿಂತ ಹೆಚ್ಚು ಪ್ರಧಾನನಾಗ್ತಾನೆ.+ ಇವನ ವಂಶ ಎಷ್ಟು ದೊಡ್ಡದಾಗುತ್ತೆ ಅಂದ್ರೆ ಅವರು ಅನೇಕ ಜನಾಂಗಗಳಿಗೆ ಸಮಾನರಾಗಿ ಇರ್ತಾರೆ” ಅಂದ.+ 20 ಆ ದಿನ ಅವನು ಅವರನ್ನ ಇನ್ನೂ ಆಶೀರ್ವದಿಸ್ತಾ+
“ಇಸ್ರಾಯೇಲ್ಯರು ಬೇರೆಯವರನ್ನ ಆಶೀರ್ವದಿಸುವಾಗ,
‘ದೇವರು ಎಫ್ರಾಯೀಮ್ ಮತ್ತು ಮನಸ್ಸೆಗೆ ಆಶೀರ್ವಾದ ಮಾಡಿದ ಹಾಗೆ ನಿನ್ನನ್ನೂ ಆಶೀರ್ವದಿಸಲಿ’ ಅಂತ ಹೇಳಲಿ” ಅಂದ.
ಹೀಗೆ ಅವರಿಗೆ ಆಶೀರ್ವಾದ ಮಾಡುವಾಗ ಮನಸ್ಸೆಗೆ ಬದಲಾಗಿ ಎಫ್ರಾಯೀಮನಿಗೆ ಮೊದಲ ಸ್ಥಾನ ಕೊಟ್ಟ.
21 ಆಮೇಲೆ ಇಸ್ರಾಯೇಲ ಯೋಸೇಫನಿಗೆ “ನಾನು ಇನ್ನು ತುಂಬ ದಿನ ಬದುಕಲ್ಲ.+ ಆದ್ರೆ ದೇವರು ನಿಮ್ಮ ಜೊತೆ ಯಾವಾಗ್ಲೂ ಇರ್ತಾನೆ. ನಿಮ್ಮ ಪೂರ್ವಜರಿದ್ದ ದೇಶಕ್ಕೆ ನಿಮ್ಮನ್ನ ಮತ್ತೆ ಕರ್ಕೊಂಡು ಹೋಗ್ತಾನೆ.+ 22 ನಾನು ಕತ್ತಿ ಮತ್ತು ಬಿಲ್ಲಿಂದ ನನ್ನದಾಗಿ ಮಾಡ್ಕೊಂಡ ಅಮೋರಿಯರ ದೇಶದಲ್ಲಿ ನಿನಗೆ ನಿನ್ನ ಅಣ್ಣತಮ್ಮಂದಿರಿಗಿಂತ ಒಂದು ಭಾಗ* ಹೆಚ್ಚು ಕೊಡ್ತೀನಿ” ಅಂದ.
49 ಆಮೇಲೆ ಯಾಕೋಬ ಮಕ್ಕಳನ್ನ ಕರೆದು ಹೀಗಂದ: “ನೀವೆಲ್ಲ ಒಟ್ಟಾಗಿ ಬನ್ನಿ. ಮುಂದೆ ನಿಮಗೆ ಏನಾಗುತ್ತೆ ಅಂತ ಹೇಳ್ತೀನಿ. 2 ಯಾಕೋಬನ ಮಕ್ಕಳೇ, ನೀವೆಲ್ಲ ಜೊತೆಯಾಗಿ ಬಂದು ಕೇಳಿ. ನಿಮ್ಮ ತಂದೆ ಇಸ್ರಾಯೇಲ ಹೇಳೋ ಮಾತು ಕೇಳಿ.
3 ರೂಬೇನ,+ ನೀನು ನನ್ನ ಮೊದಲನೇ ಮಗ,+ ನನ್ನ ಚೈತನ್ಯ, ನನ್ನ ಸಂತಾನಶಕ್ತಿಗೆ ಪ್ರಥಮಫಲ. ನೀನು ಗೌರವದಲ್ಲಿ ಬಲದಲ್ಲಿ ಶ್ರೇಷ್ಠ. 4 ಆದ್ರೆ ನೀನು ಇನ್ನು ಮುಂದೆ ನಿನ್ನ ತಮ್ಮಂದಿರಿಗಿಂತ ಶ್ರೇಷ್ಠನಾಗಿರಲ್ಲ. ಯಾಕಂದ್ರೆ ನೀನು ಪ್ರವಾಹದ ನೀರಿನ ಹಾಗೆ ನಿನ್ನನ್ನ ನಿಯಂತ್ರಣದಲ್ಲಿ ಇಡಲಿಲ್ಲ. ನಿನ್ನ ತಂದೆಯ ಹಾಸಿಗೆ ಹತ್ತಿ ಅದನ್ನ ಅಶುದ್ಧಮಾಡ್ದೆ.+ ಇವನು ನನ್ನ ಹಾಸಿಗೆ ಹತ್ತಿದ್ದು ನಿಜ!
5 ಸಿಮೆಯೋನ ಮತ್ತು ಲೇವಿ ಅಣ್ಣತಮ್ಮಂದಿರು.+ ಅವರ ಕತ್ತಿಗಳು ಹಿಂಸೆಯ ಆಯುಧಗಳು.+ 6 ನನ್ನ ಪ್ರಾಣವೇ,* ಅವರ ಸಹವಾಸ ಮಾಡಬೇಡ. ನನ್ನ ಹೃದಯವೇ,* ಅವರ ಗುಂಪಿಗೆ ಸೇರಬೇಡ. ಯಾಕಂದ್ರೆ ಅವರು ಕೋಪದಿಂದ ಜನ್ರನ್ನ ಕೊಂದ್ರು.+ ಮಜಾ ಸಿಗೋಕೆ ಹೋರಿಗಳನ್ನ ಕುಂಟುಮಾಡಿದ್ರು. 7 ಅವರ ಕೋಪ ಮತ್ತು ರೋಷಕ್ಕೆ ಶಾಪ ತಟ್ಟಲಿ. ಯಾಕಂದ್ರೆ ಅವರ ಕೋಪ ಕ್ರೂರ, ಅವರ ರೋಷ ಉಗ್ರ.+ ಹಾಗಾಗಿ ಯಾಕೋಬನ ದೇಶದಲ್ಲಿ ಅವರನ್ನ ಚದರಿಸ್ತೀನಿ. ಇಸ್ರಾಯೇಲನ ದೇಶದಲ್ಲಿ ಅವರನ್ನ ಚೆಲ್ಲಾಪಿಲ್ಲಿ ಮಾಡ್ತೀನಿ.+
8 ಯೆಹೂದ,+ ನಿನ್ನ ಅಣ್ಣತಮ್ಮಂದಿರು ನಿನ್ನನ್ನ ಹೊಗಳ್ತಾರೆ.+ ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆ ಮೇಲಿರುತ್ತೆ.+ ನಿನ್ನ ತಂದೆಯ ಮಕ್ಕಳು ನಿನ್ನ ಮುಂದೆ ತಲೆ ಬಾಗ್ತಾರೆ.+ 9 ಯೆಹೂದ ಸಿಂಹದ ಮರಿ.+ ನನ್ನ ಮಗನೇ ನೀನು ಬೇಟೆ ಹಿಡ್ಕೊಂಡೇ ಬರ್ತಿಯ. ಅವನು ಸಿಂಹದ ತರ ಕಾಲು ಚಾಚಿ ಮಲಗಿದ್ದಾನೆ. ಸಿಂಹದ ತರ ಇರೋ ಅವನನ್ನ ಕೆಣಕೋ ಧೈರ್ಯ ಯಾರಿಗಿದೆ? 10 ಶೀಲೋ* ಬರೋ ತನಕ ರಾಜದಂಡ ಯೆಹೂದನ ಕೈಯಿಂದ ತಪ್ಪಿ ಹೋಗಲ್ಲ.+ ರಾಜನ* ಕೋಲೂ ಅವನ ಪಾದಗಳ ಮಧ್ಯದಿಂದ ಕದಲಲ್ಲ.+ ಜನ್ರೆಲ್ಲ ಶೀಲೋಗೆ ವಿಧೇಯರಾಗ್ತಾರೆ.+ 11 ಯೆಹೂದ ತನ್ನ ಕತ್ತೆಯನ್ನ ದ್ರಾಕ್ಷಿ ಬಳ್ಳಿಗೆ, ತನ್ನ ಕತ್ತೆಮರಿಯನ್ನ ಅತ್ಯುತ್ತಮ ದ್ರಾಕ್ಷಿ ಬಳ್ಳಿಗೆ ಕಟ್ತಾನೆ. ತನ್ನ ಬಟ್ಟೆಯನ್ನ ದ್ರಾಕ್ಷಾಮದ್ಯದಲ್ಲೂ ತನ್ನ ಅಂಗಿಯನ್ನ ದ್ರಾಕ್ಷಾರಸದಲ್ಲೂ ಒಗಿತಾನೆ. 12 ದ್ರಾಕ್ಷಾಮದ್ಯದಿಂದಾಗಿ ಅವನ ಕಣ್ಣುಗಳು ಕಡು ಕೆಂಪಾಗಿದೆ, ಹಾಲಿನಿಂದಾಗಿ ಅವನ ಹಲ್ಲುಗಳು ಬೆಳ್ಳಗಿದೆ.
13 ಜೆಬುಲೂನ+ ಸಮುದ್ರತೀರದ ಹತ್ರ, ಹಡಗುಗಳನ್ನ ಲಂಗರು ಹಾಕಿ ನಿಲ್ಲಿಸೋ ತೀರದ ಹತ್ರ ವಾಸಿಸ್ತಾನೆ.+ ಅವನ ಪ್ರದೇಶದ ಗಡಿ ಸೀದೋನಿನ ದಿಕ್ಕಿನ ತನಕ ಇರುತ್ತೆ.+
14 ಇಸ್ಸಾಕಾರ+ ಎರಡು ತಡಿಚೀಲಗಳಲ್ಲಿ ಹೊರೆಗಳನ್ನ ಹೊತ್ಕೊಂಡು ಮಲಗಿರೋ ಬಲಿಷ್ಠ ಕತ್ತೆ ತರ ಇದ್ದಾನೆ. 15 ಅವನು ಆರಾಮವಾಗಿರೋ ಜಾಗ ತುಂಬ ಚೆನ್ನಾಗಿದೆ, ಸುಂದರವಾಗಿದೆ ಅಂತ ಅನಿಸುತ್ತೆ. ಹೊರೆ ಹೊರೋಕೆ ಹೆಗಲು ಬಗ್ಗಿಸ್ತಾನೆ. ಅವನು ಕಷ್ಟದ ಕೆಲಸ* ಮಾಡೋಕೆ ಹಿಂಜರಿಯಲ್ಲ.
16 ದಾನ್+ ಇಸ್ರಾಯೇಲಿನ ಕುಲಗಳಲ್ಲಿ ಒಂದಾಗಿದ್ದು ಎಲ್ಲ ಜನ್ರಿಗೆ ನ್ಯಾಯತೀರಿಸ್ತಾನೆ.+ 17 ದಾನ್ ರಸ್ತೆಪಕ್ಕದಲ್ಲಿರೋ ಹಾವಿನ ತರ ಇರ್ತಾನೆ. ದಾರಿ ಪಕ್ಕದಲ್ಲಿದ್ದು ಕುದುರೆಯ ಹಿಮ್ಮಡಿ ಕಚ್ಚಿ ಸವಾರನನ್ನ ಕೆಳಗೆ ಉರುಳಿಸೋ ಕೊಂಬಿರೋ ವಿಷಹಾವಿನ ತರ ಇರ್ತಾನೆ.+ 18 ಯೆಹೋವ, ನೀನು ರಕ್ಷಿಸೋ ಸಮಯಕ್ಕಾಗಿ ನಾನು ಕಾಯ್ತೀನಿ.
19 ಗಾದನ+ ಮೇಲೆ ಕೊಳ್ಳೆ ಹೊಡೆಯುವವರ ಗುಂಪು ದಾಳಿ ಮಾಡುತ್ತೆ. ಆದ್ರೆ ಅವನು ಅವರನ್ನ ಅಟ್ಟಿಸಿಕೊಂಡು ಹೋಗಿ ಹೊಡಿತಾನೆ.+
20 ಅಶೇರನ+ ಹತ್ರ ಸಾಕಷ್ಟು ಆಹಾರ ಇರುತ್ತೆ. ಅವನು ರಾಜಭೋಜನಕ್ಕೆ ಯೋಗ್ಯ ಆಹಾರ ಒದಗಿಸ್ತಾನೆ.+
21 ನಫ್ತಾಲಿ+ ಹೆಣ್ಣುಜಿಂಕೆ ತರ ಚುರುಕಾಗಿ ಇರ್ತಾನೆ. ಅವನು ಆಡೋ ಮಾತು ತುಂಬ ಇಂಪು.+
22 ಯೋಸೇಫ,+ ತುಂಬ ಹಣ್ಣುಗಳನ್ನ ಬಿಡೋ ಮರದ ಕೊಂಬೆ. ಬುಗ್ಗೆ ಹತ್ರಾನೇ ಬೆಳೆಯೋ ಮರದ ಕೊಂಬೆ. ಉದ್ದುದ್ದ ಕೊಂಬೆಗಳು ಬೆಳೆದು ಗೋಡೆ ದಾಟುತ್ತೆ. 23 ಆದ್ರೆ ಬಿಲ್ಲುಗಾರರು ಪದೇ ಪದೇ ಅವನ ಮೇಲೆ ಬಾಣ ಎಸೆದು ದಾಳಿ ಮಾಡಿದ್ರು. ಅವನ ವಿರುದ್ಧ ಯಾವಾಗ್ಲೂ ಮನಸ್ಸಲ್ಲಿ ಕಡುದ್ವೇಷ ಇಟ್ಕೊಂಡ್ರು.+ 24 ಆದ್ರೂ ಅವನ ಬಿಲ್ಲು ನಡುಗಲಿಲ್ಲ.+ ಅವನ ಕೈಗಳು ಬಲಿಷ್ಠವಾಗಿ, ಚುರುಕಾಗಿಯೇ ಇತ್ತು.+ ಇದು ಯಾಕೋಬನಿಗೆ ಸಹಾಯ ಮಾಡೋ ಪರಾಕ್ರಮಿಯ ಕೈಯಿಂದ, ಇಸ್ರಾಯೇಲನ ಬಂಡೆ, ಕುರುಬ ಆಗಿರುವವನ ಕೈಯಿಂದ ಆಯ್ತು. 25 ಯೋಸೇಫ ಅವನ ತಂದೆಯ ದೇವರು ಕೊಟ್ಟ ಉಡುಗೊರೆ. ದೇವರು ಅವನಿಗೆ ಸಹಾಯ ಮಾಡ್ತಾನೆ. ಅವನು ಸರ್ವಶಕ್ತನ ಜೊತೆ ಇದ್ದಾನೆ. ಆತನು ಅವನಿಗೆ ಮೇಲಿನ ಆಕಾಶದ ಆಶೀರ್ವಾದಗಳನ್ನೂ ಕೆಳಗಿನ ಆಳವಾದ ನೀರಿನ ಆಶೀರ್ವಾದಗಳನ್ನೂ ಕೊಡ್ತಾನೆ.+ ಅವನಿಗೆ ತುಂಬ ಮಕ್ಕಳನ್ನ, ಪ್ರಾಣಿಗಳನ್ನ ಕೊಟ್ಟು ಆಶೀರ್ವದಿಸ್ತಾನೆ. 26 ಶಾಶ್ವತವಾಗಿ ಇರೋ ಬೆಟ್ಟಗಳಲ್ಲಿ ಸಿಗೋ ಉತ್ತಮ ವಸ್ತುಗಳಿಗಿಂತ, ಯಾವಾಗ್ಲೂ ಇರೋ ಬೆಟ್ಟಗಳ ಸೌಂದರ್ಯಕ್ಕಿಂತ ನಿನ್ನ ತಂದೆಯ ಆಶೀರ್ವಾದ ಹೆಚ್ಚು ಶ್ರೇಷ್ಠ.+ ಆ ಆಶೀರ್ವಾದಗಳು ಯೋಸೇಫನ ತಲೆ ಮೇಲೆ ಅಂದ್ರೆ ತನ್ನ ಅಣ್ಣತಮ್ಮಂದಿರಲ್ಲಿ ಆಯ್ಕೆ ಆಗಿರುವವನ ತಲೆ ಮೇಲೆ ಯಾವಾಗ್ಲೂ ಇರುತ್ತೆ.+
27 ಬೆನ್ಯಾಮೀನ+ ತೋಳದ ಹಾಗೆ ಬೇಟೆಯನ್ನ ಸೀಳಿ ಹಾಕ್ತಾ ಇರ್ತಾನೆ.+ ಅವನು ಬೇಟೆಯನ್ನ ಬೆಳಿಗ್ಗೆ ತಿಂತಾನೆ, ಕೊಳ್ಳೆ ಹೊಡೆದದ್ದನ್ನ ಸಂಜೆ ಹಂಚಿಕೊಳ್ತಾನೆ.”+
28 ಇವರೆಲ್ಲರಿಂದ ಇಸ್ರಾಯೇಲಿನ 12 ಕುಲ ಬಂತು. ಇವು ಅವರ ತಂದೆ ಅವರನ್ನ ಆಶೀರ್ವದಿಸುವಾಗ ಹೇಳಿದ ಮಾತುಗಳು. ಅವನು ಪ್ರತಿಯೊಬ್ಬನಿಗೆ ತಕ್ಕ ಆಶೀರ್ವಾದ ಕೊಟ್ಟ.+
29 ಆಮೇಲೆ ಅವನು ತನ್ನ ಮಕ್ಕಳಿಗೆ ಈ ಆಜ್ಞೆ ಕೊಟ್ಟ: “ನನ್ನ ಸಾವು ತುಂಬ ಹತ್ರ ಇದೆ.+ ನನ್ನ ಪೂರ್ವಜರನ್ನ ಸಮಾಧಿ ಮಾಡಿದ ಜಾಗದಲ್ಲಿ ಅಂದ್ರೆ ಹಿತ್ತಿಯನಾದ ಎಫ್ರೋನನ ಜಮೀನಲ್ಲಿರೋ ಗವಿಯಲ್ಲಿ ನನ್ನನ್ನ ಸಮಾಧಿ ಮಾಡಿ.+ 30 ಆ ಗವಿ ಕಾನಾನ್ ದೇಶದಲ್ಲಿ ಮಮ್ರೆಗೆ ಪಕ್ಕದಲ್ಲಿರೋ ಮಕ್ಪೇಲದ ಜಮೀನಲ್ಲಿದೆ. ಸಮಾಧಿಗೆ ಅಂತಾನೇ ಅಬ್ರಹಾಮ ಆ ಜಮೀನನ್ನ ಹಿತ್ತಿಯನಾದ ಎಫ್ರೋನನಿಂದ ತಗೊಂಡಿದ್ದ. 31 ಅಲ್ಲೇ ಅಬ್ರಹಾಮ, ಅವನ ಹೆಂಡತಿ ಸಾರಳನ್ನ ಸಮಾಧಿ ಮಾಡಿದ್ದು.+ ಇಸಾಕನಿಗೂ+ ಅವನ ಹೆಂಡತಿ ರೆಬೆಕ್ಕಗೂ ಸಮಾಧಿ ಮಾಡಿದ್ದು ಅಲ್ಲೇ. ನಾನು ಲೇಯಳನ್ನೂ ಅಲ್ಲೇ ಸಮಾಧಿ ಮಾಡ್ದೆ. 32 ಆ ಜಮೀನನ್ನ, ಅದ್ರಲ್ಲಿರೋ ಗವಿಯನ್ನ ಹಿತ್ತಿಯರಿಂದ ತಗೊಂಡಿದ್ದು.”+
33 ಯಾಕೋಬ ಗಂಡುಮಕ್ಕಳಿಗೆ ಈ ಎಲ್ಲ ನಿರ್ದೇಶನ ಕೊಟ್ಟು ಮುಗಿಸಿದ ಮೇಲೆ ಹಾಸಿಗೆ ಮೇಲೆ ಮಲಗಿ ಕೊನೆ ಉಸಿರೆಳೆದ.+
50 ಆಗ ಯೋಸೇಫ ತನ್ನ ತಂದೆ ಮುಖದ ಕಡೆ ಬಗ್ಗಿ+ ಅವನನ್ನ ಅಪ್ಕೊಂಡು ತುಂಬ ಕಣ್ಣೀರು ಸುರಿಸ್ತಾ ಮುತ್ತಿಟ್ಟ. 2 ಆಮೇಲೆ ಯೋಸೇಫ ತಂದೆ ಶವಕ್ಕೆ ಸುಗಂಧದ್ರವ್ಯಗಳನ್ನ ಹಾಕಿ ಅಂತ*+ ತನ್ನ ಸೇವಕರಾದ ವೈದ್ಯರಿಗೆ ಆಜ್ಞೆ ಕೊಟ್ಟ. ಅವನು ಹೇಳಿದ ಹಾಗೆ ವೈದ್ಯರು ಇಸ್ರಾಯೇಲನ ದೇಹಕ್ಕೆ ಸುಗಂಧದ್ರವ್ಯಗಳನ್ನ ಹಾಕಿದ್ರು. 3 ಇದಕ್ಕೆ 40 ದಿನ ತಗೊಂಡ್ರು. ಯಾಕಂದ್ರೆ ಶವಕ್ಕೆ ಸುಗಂಧದ್ರವ್ಯಗಳನ್ನ ಹಾಕೋಕೆ ಅಷ್ಟು ದಿನ ಹಿಡಿತಿತ್ತು. ಈಜಿಪ್ಟಿನವರು ಅವನಿಗಾಗಿ 70 ದಿನ ಕಣ್ಣೀರು ಸುರಿಸಿದ್ರು.
4 ಶೋಕದ ದಿನಗಳು ಮುಗಿದ ಮೇಲೆ ಯೋಸೇಫ ಫರೋಹನ ಅಧಿಕಾರಿಗಳಿಗೆ* “ದಯವಿಟ್ಟು ನನಗೆ ಒಂದು ಸಹಾಯ ಮಾಡಿ. ನನ್ನ ಈ ಮಾತನ್ನ ಫರೋಹನಿಗೆ ಹೇಳಿ: 5 ‘ನನ್ನ ತಂದೆ ನನಗೆ “ಇನ್ನು ತುಂಬ ದಿನ ನಾನು ಬದುಕಲ್ಲ.+ ನಾನು ಕಾನಾನ್ ದೇಶದಲ್ಲಿ ನನಗಾಗಿ ಸಿದ್ಧಮಾಡಿ ಇಟ್ಟಿರೋ ಸಮಾಧಿಯಲ್ಲೇ+ ನೀನು ನನ್ನನ್ನ ಸಮಾಧಿ ಮಾಡಬೇಕು”+ ಅಂತ ಹೇಳಿ ನನ್ನಿಂದ ಮಾತು ತಗೊಂಡಿದ್ದ.+ ಹಾಗಾಗಿ ಕಾನಾನಿಗೆ ಹೋಗೋಕೆ ನನಗೆ ದಯವಿಟ್ಟು ಅನುಮತಿಕೊಡು. ನನ್ನ ತಂದೆ ಸಮಾಧಿ ಮಾಡಿ ಬರ್ತಿನಿ’ ” ಅಂದ. 6 ಅದಕ್ಕೆ ಫರೋಹ “ನಿನ್ನ ತಂದೆಗೆ ನೀನು ಮಾತು ಕೊಟ್ಟ ಹಾಗೆ ನೀನು ಹೋಗಿ ಅವನನ್ನ ಸಮಾಧಿ ಮಾಡು”+ ಅಂದ.
7 ಹಾಗಾಗಿ ಯೋಸೇಫ ತಂದೆಯನ್ನ ಸಮಾಧಿ ಮಾಡೋಕೆ ಹೊರಟ. ಅವನ ಜೊತೆ ಫರೋಹನ ಎಲ್ಲ ಸೇವಕರು, ಆಸ್ಥಾನದ ದೊಡ್ಡ ದೊಡ್ಡ ಅಧಿಕಾರಿಗಳು,*+ ಈಜಿಪ್ಟ್ ದೇಶದ ಎಲ್ಲ ಮುಖ್ಯಸ್ಥರು, 8 ಯೋಸೇಫನ ಕುಟುಂಬದವರೆಲ್ಲರು, ಅವನ ಅಣ್ಣತಮ್ಮಂದಿರು, ಅವನ ತಂದೆ ಕುಟುಂಬದವರು ಹೋದ್ರು.+ ಅವರ ಚಿಕ್ಕಮಕ್ಕಳನ್ನ, ಪ್ರಾಣಿಗಳ ಹಿಂಡುಗಳನ್ನ ಮಾತ್ರ ಗೋಷೆನ್ ಪ್ರದೇಶದಲ್ಲಿ ಬಿಟ್ಟು ಹೋದ್ರು. 9 ಸಾರಥಿಗಳು,+ ಕುದುರೆ ಸವಾರರು ಕೂಡ ಯೋಸೇಫನ ಜೊತೆ ಹೋದ್ರು. ಹೀಗೆ ಜನ್ರ ದೊಡ್ಡ ಗುಂಪೇ ಕಾನಾನಿಗೆ ಹೋಯ್ತು. 10 ಅವರು ಯೋರ್ದನಿನ ಪ್ರದೇಶದಲ್ಲಿರೋ ಆಟಾದ್ ಕಣಕ್ಕೆ ಬಂದು ಅಲ್ಲಿ ಇಸ್ರಾಯೇಲನಿಗಾಗಿ ತುಂಬ ಜೋರಾಗಿ ಅತ್ತು ಗೋಳಾಡಿದ್ರು. ಯೋಸೇಫ ತನ್ನ ತಂದೆಗಾಗಿ ಏಳು ದಿನ ತನಕ ಶೋಕಿಸ್ತಾ ಇದ್ದ. 11 ಆಟಾದ್ ಕಣದಲ್ಲಿ ಜನ್ರು ತುಂಬ ಗೋಳಾಡೋದನ್ನ ಆ ದೇಶದಲ್ಲಿದ್ದ ಕಾನಾನ್ಯರು ನೋಡಿ ಆಶ್ಚರ್ಯದಿಂದ “ಈಜಿಪ್ಟಿನವರು ತುಂಬ ಗೋಳಾಡ್ತಾ ಇದ್ದಾರೆ!” ಅಂದ್ರು. ಹಾಗಾಗಿ ಯೋರ್ದನಿನ ಪ್ರದೇಶದಲ್ಲಿ ಇರೋ ಆ ಜಾಗಕ್ಕೆ ಆಬೇಲ್-ಮಿಚ್ರಯೀಮ್* ಅನ್ನೋ ಹೆಸ್ರು ಬಂತು.
12 ಯಾಕೋಬ ಹೇಳಿದ ಹಾಗೇ ಅವನ ಗಂಡುಮಕ್ಕಳು ಮಾಡಿದ್ರು.+ 13 ಅವರು ಯಾಕೋಬನ ಶವವನ್ನ ಕಾನಾನ್ ದೇಶಕ್ಕೆ ತಗೊಂಡು ಹೋಗಿ ಮಮ್ರೆಗೆ ಹತ್ರ ಇದ್ದ ಮಕ್ಪೇಲದ ಜಮೀನಿನ ಗವಿಯಲ್ಲಿ ಸಮಾಧಿ ಮಾಡಿದ್ರು. ಸಮಾಧಿ ಮಾಡೋಕೆ ಆ ಜಮೀನನ್ನ ಅಬ್ರಹಾಮ ಹಿತ್ತಿಯನಾದ ಎಫ್ರೋನನಿಂದ ಖರೀದಿಸಿದ್ದ.+ 14 ಯೋಸೇಫ ತಂದೆಯನ್ನ ಸಮಾಧಿ ಮಾಡಿದ ಮೇಲೆ ಅವನ ಅಣ್ಣತಮ್ಮಂದಿರ ಜೊತೆ, ಬೇರೆಯವರ ಜೊತೆ ಈಜಿಪ್ಟಿಗೆ ವಾಪಾಸ್ ಹೋದ.
15 ಯೋಸೇಫನ ಸಹೋದರರು ತಮ್ಮ ತಂದೆ ತೀರಿಹೋದ ಮೇಲೆ “ಯೋಸೇಫ ನಮ್ಮ ಮೇಲೆ ದ್ವೇಷ ಇಟ್ಕೊಂಡಿರಬಹುದು. ನಾವು ಅವನಿಗೆ ಮಾಡಿದ ಎಲ್ಲ ಕೇಡಿಗೆ ಈಗ ಅವನು ನಮ್ಮ ಮೇಲೆ ಸೇಡು ತೀರಿಸಬಹುದು”+ ಅಂತ ಮಾತಾಡ್ಕೊಂಡ್ರು. 16 ಹಾಗಾಗಿ ಅವರು ಯೋಸೇಫನಿಗೆ “ನಿನ್ನ ತಂದೆ ಸಾಯೋದಕ್ಕೆ ಮುಂಚೆ ನಮಗೆ ಒಂದು ಆಜ್ಞೆ ಕೊಟ್ಟ. ಏನಂದ್ರೆ 17 ‘ನೀವು ಯೋಸೇಫನ ಹತ್ರ ಹೋಗಿ ನಾನು ಹೀಗಂದೆ ಅಂತೇಳಿ: “ನಿನ್ನ ಸಹೋದರರು ನಿನಗೆ ಬಹಳಷ್ಟು ಹಾನಿಮಾಡಿ ನಿನ್ನ ವಿರುದ್ಧ ಮಾಡಿದ ಅಪರಾಧ, ಪಾಪವನ್ನ ದಯವಿಟ್ಟು ಕ್ಷಮಿಸು ಅಂತ ಬೇಡ್ಕೊಳ್ತೀನಿ.”’ ಈಗ ನಿನ್ನ ತಂದೆಯ ದೇವರ ಸೇವಕರಾದ ನಾವು ಸಹ ನಮ್ಮ ಅಪರಾಧವನ್ನ ಕ್ಷಮಿಸು ಅಂತ ಬೇಡ್ಕೊಳ್ತೀವಿ” ಅಂತ ಹೇಳಿ ಕಳಿಸಿದ್ರು. ಅವರ ಈ ಮಾತು ಕೇಳಿ ಯೋಸೇಫ ಅತ್ತುಬಿಟ್ಟ. 18 ಅವನ ಸಹೋದರರೇ ಅವನ ಹತ್ರ ಬಂದು ಅಡ್ಡಬಿದ್ದು “ನೀನು ನಮಗೆ ಏನು ಬೇಕಾದ್ರೂ ಮಾಡು, ನಾವು ನಿನ್ನ ದಾಸರು!”+ ಅಂದ್ರು. 19 ಯೋಸೇಫ ಅವರಿಗೆ “ಹೆದರಬೇಡಿ. ನಿಮಗೆ ಶಿಕ್ಷೆ ವಿಧಿಸೋಕೆ ನಾನೇನು ದೇವರಾ? 20 ನೀವು ನನಗೆ ಹಾನಿ ಮಾಡೋಕೆ ಯೋಚಿಸಿದ್ರೂ+ ಅದ್ರಿಂದ ಒಳ್ಳೇದೇ ಆಗೋ ತರ ದೇವರು ಮಾಡಿದನು. ಇದ್ರಿಂದ ಅನೇಕರ ಜೀವ ಉಳಿಸಿದನು. ನೀವೇ ಕಣ್ಣಾರೆ ನೋಡ್ತಾ ಇದ್ದೀರಲ್ಲಾ?+ 21 ಹಾಗಾಗಿ ಭಯಪಡಬೇಡಿ. ನಿಮಗೆ, ನಿಮ್ಮ ಚಿಕ್ಕ ಮಕ್ಕಳಿಗೆ ಬೇಕಾದ ಆಹಾರ ನಾನು ಕೊಡ್ತೀನಿ”+ ಅಂದ. ಹೀಗೆ ಸಮಾಧಾನ ಮಾಡಿ ಅವರಲ್ಲಿ ಭರವಸೆ ತುಂಬಿದ.
22 ಯೋಸೇಫ ಮತ್ತು ಅವನ ತಂದೆ ಕುಟುಂಬದವರು ಈಜಿಪ್ಟಲ್ಲೇ ವಾಸಿಸಿದ್ರು. ಯೋಸೇಫ 110 ವರ್ಷ ಬದುಕಿದ. 23 ಅವನು ಎಫ್ರಾಯೀಮನ ಮೊಮ್ಮಕ್ಕಳನ್ನ+ ನೋಡಿದ. ಅಲ್ಲದೆ ಮನಸ್ಸೆಯ ಮಗ ಮಾಕೀರನ ಗಂಡುಮಕ್ಕಳನ್ನ+ ಸಹ ನೋಡಿದ. ಅವರು ಯೋಸೇಫನಿಗೆ ಸ್ವಂತ ಮಕ್ಕಳ ತರ ಇದ್ರು. 24 ತುಂಬ ಸಮಯ ಆದ್ಮೇಲೆ ಯೋಸೇಫ ತನ್ನ ಸಹೋದರರಿಗೆ “ನಾನು ಇನ್ನು ತುಂಬ ದಿನ ಬದುಕಲ್ಲ. ಆದ್ರೆ ದೇವರು ನಿಮಗೆ ಖಂಡಿತ ಸಹಾಯ ಮಾಡ್ತಾನೆ.*+ ನಿಮ್ಮನ್ನ ಈ ದೇಶದಿಂದ ಹೊರಗೆ ಕರ್ಕೊಂಡು ಹೋಗಿ ಅಬ್ರಹಾಮ, ಇಸಾಕ, ಯಾಕೋಬನಿಗೆ ಕೊಡ್ತೀನಿ ಅಂತ ಹೇಳಿದ ದೇಶಕ್ಕೆ ಖಂಡಿತ ಸೇರಿಸ್ತಾನೆ”+ ಅಂದ. 25 ಯೋಸೇಫ ಇಸ್ರಾಯೇಲನ ಮಕ್ಕಳಿಗೆ “ದೇವರು ನಿಮಗೆ ಖಂಡಿತ ಸಹಾಯ ಮಾಡ್ತಾನೆ.* ನಾನು ಸತ್ತ ಮೇಲೆ ನನ್ನ ಮೂಳೆಗಳನ್ನ ಇಲ್ಲಿಂದ ತಗೊಂಡು ಹೋಗ್ತಿರ ಅಂತ ನನಗೆ ಮಾತುಕೊಡಿ”+ ಅಂತ ಆಣೆ ಮಾಡಿಸಿದ. 26 ಯೋಸೇಫ 110ನೇ ವರ್ಷದಲ್ಲಿ ತೀರಿಹೋದ. ಅವನ ದೇಹಕ್ಕೆ ಸುಗಂಧದ್ರವ್ಯ ಹಾಕಿ+ ಅದನ್ನ ಈಜಿಪ್ಟಲ್ಲೇ ಪೆಟ್ಟಿಗೆಯಲ್ಲಿ ಇಟ್ರು.
ಅದು ನಕ್ಷತ್ರ ಗ್ರಹ ಗ್ಯಾಲಕ್ಸಿ ಎಲ್ಲ ಇರೋ ವಿಶ್ವ.
ಅಥವಾ “ನೀರು ಆಕಡೆ ಈಕಡೆ ಹೊಯ್ದಾಡ್ತಿತ್ತು.”
ಅಥವಾ “ಸಕ್ರಿಯ ಶಕ್ತಿ.”
ಅದು, ವಾಯುಮಂಡಲ.
ಇದು ಸಾಗರ, ನದಿ, ಉಪ್ಪುನೀರು, ಸಿಹಿನೀರಿನ ಸರೋವರಗಳನ್ನೂ ಸೂಚಿಸುತ್ತೆ.
ಅಂದ್ರೆ, ಸೂರ್ಯ ಚಂದ್ರ ನಕ್ಷತ್ರಗಳು.
ಅಥವಾ “ಹಗಲನ್ನ ಆಳೋಕೆ.”
ಅಥವಾ “ರಾತ್ರಿಯನ್ನ ಆಳೋಕೆ.”
ಇಲ್ಲಿರೋ ಹೀಬ್ರು ಪದ ಪಕ್ಷಿಗೆ ಮಾತ್ರ ಅಲ್ಲ, ಕೀಟದ ತರ ರೆಕ್ಕೆ ಇರೋ ಬೇರೆ ಜೀವಿಗಳಿಗೂ ಸೂಚಿಸುತ್ತೆ.
ಅಥವಾ “ಚಲಿಸೋ ಪ್ರಾಣಿಗಳು.” ಇವು ಸರೀಸೃಪ ಆಗಿರಬಹುದು ಮತ್ತು ಕಾಡುಪ್ರಾಣಿ ಸಾಕುಪ್ರಾಣಿ ಪಕ್ಷಿ ಮೀನು ಬಿಟ್ಟು ಬೇರೆ ಪ್ರಾಣಿಗಳೂ ಆಗಿರಬಹುದು.
ಅದು ನಕ್ಷತ್ರ ಗ್ರಹ ಗ್ಯಾಲಕ್ಸಿಗಳು ಇರೋ ವಿಶ್ವ.
ಅದು, ಸೃಷ್ಟಿಯ ಆರು ದಿನಗಳನ್ನ ಸೂಚಿಸುತ್ತೆ.
ಇಲ್ಲಿ ದೇವರ ವೈಯಕ್ತಿಕ ಹೆಸರು יהוה (YHWH) ಮೊತ್ತಮೊದಲ ಸಾರಿ ಬಂದಿದೆ. ಇದು ಬೇರೆಲ್ಲಾ ದೇವರುಗಳಿಂದ ಯೆಹೋವ ಬೇರೆ ಅಂತ ತೋರಿಸುತ್ತೆ. ಪರಿಶಿಷ್ಟ ಎ4 ನೋಡಿ.
ಅಥವಾ “ಧೂಳಿಂದ.”
ಅಕ್ಷ. “ಉಸಿರಾಡೋ ಜೀವಿಯಾದ.” ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಪದವಿವರಣೆ ನೋಡಿ.
ಪದವಿವರಣೆ ನೋಡಿ.
ಅಥವಾ “ಟೈಗ್ರಿಸ್.”
ಇಲ್ಲಿರೋ ಹೀಬ್ರು ಪದ ಪಕ್ಷಿಗೆ ಮಾತ್ರ ಅಲ್ಲ, ಕೀಟದ ತರ ರೆಕ್ಕೆ ಇರೋ ಬೇರೆ ಜೀವಿಗಳಿಗೂ ಸೂಚಿಸುತ್ತೆ.
ಅಥವಾ “ಸಹಾಯಕಿ.”
ಇದರ ಹೀಬ್ರು ಪದದ ಅರ್ಥ “ಅಂಟಿನ ತರ ಗಟ್ಟಿಯಾಗಿ ಅಂಟಿಕೊಳ್ಳೋದು.”
ಅಥವಾ “ತುಂಬ ಚಾಣಾಕ್ಷ, ಕುತಂತ್ರ ಬುದ್ಧಿಯ.”
ಅಥವಾ “ಹಗೆತನ.”
ಅರ್ಥ “ಭೂಮಿಯಲ್ಲಿರೋ ಮನುಷ್ಯ, ಮನುಷ್ಯಜಾತಿ.”
ಅರ್ಥ “ಜೀವ ಇರೋಳು.”
ಪದವಿವರಣೆ ನೋಡಿ.
ಅಕ್ಷ. “ನಿನ್ನ ಮೇಲೆ ಅಧಿಕಾರ ನಡಿಸೋಕೆ.”
ಅದು ಬೇರೆಯವರನ್ನ ಎಚ್ಚರಿಸೋಕೆ ಕೊಟ್ಟ ಒಂದು ಆಜ್ಞೆ ಇರಬಹುದು.
ಅರ್ಥ “ಅಲೆದಾಟ.”
ಅರ್ಥ “ನೇಮಿತ, ಇಟ್ಟ, ಸ್ಥಾಪಿಸಿದ.”
ಅಥವಾ “ಆದಾಮ, ಮನುಷ್ಯಜಾತಿ.”
ಪದವಿವರಣೆ ನೋಡಿ.
ಅಕ್ಷ. “ಸತ್ಯ ದೇವರ ಜೊತೆ ನಡೀತಾ ಇದ್ದ.”
ಅಥವಾ “ಸಾಂತ್ವನ.”
ಬಹುಶಃ ಇದರರ್ಥ “ವಿಶ್ರಾಂತಿ, ಸಮಾಧಾನ ಮಾಡು.”
ಅಕ್ಷ. “ಸತ್ಯ ದೇವರ ಪುತ್ರರು.”
ಬಹುಶಃ “ಮನುಷ್ಯನ ಸ್ವಭಾವದ ಪ್ರಕಾರ ನಡಿತಾನೆ.”
ಬಹುಶಃ ಇದರರ್ಥ “ಉರುಳಿಸೋರು,” ಪದವಿವರಣೆ ನೋಡಿ.
ಅಕ್ಷ. “ವಿಷಾದಿಸಿ.”
ಅಥವಾ “ನಿರ್ದೋಷಿಯಾಗಿದ್ದ.”
ಅಂಟನ್ನ ಸುರಿಸೋ ಒಂದು ಮರ, ಬಹುಶಃ ಸೈಪ್ರೆಸ್ ಮರ.
ಅಕ್ಷ. “ಒಂದು ಪೆಟ್ಟಿಗೆ,” ಒಂದು ನಾವೆ.
ಅಥವಾ “ಡಾಂಬರು ಮೇಣ, ಕಪ್ಪು ರಾಳ.”
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಹಡಗಿನ ಅಳತೆ: ಸುಮಾರು 438 ಅಡಿ ಉದ್ದ, 73 ಅಡಿ ಅಗಲ, 44 ಅಡಿ ಎತ್ತರ. ಪರಿಶಿಷ್ಟ ಬಿ14 ನೋಡಿ.
ಹೀಬ್ರು ಭಾಷೆಯಲ್ಲಿ ಸೋಹರ್. ಇದು ಒಂದು ಮೊಳ ಇಳಿಜಾರಿರೋ ಚಾವಣಿ. ಬೆಳಕು ಬರೋಕೆ ಮಾಡಿದ ತೂತು ಅಥವಾ ಕಿಟಕಿ ಅಲ್ಲ ಅನ್ನೋದು ಕೆಲವರ ಅಭಿಪ್ರಾಯ.
ಅಥವಾ “ಒಡಂಬಡಿಕೆ.”
ಪ್ರಾಯಶಃ ಬಲಿಗೆ ಯೋಗ್ಯವಾದ ಪ್ರಾಣಿಗಳನ್ನ ಸೂಚಿಸುತ್ತೆ.
ಬಹುಶಃ “ಪ್ರತಿಯೊಂದು ಶುದ್ಧಪ್ರಾಣಿಯಲ್ಲಿ ಏಳು ಜೊತೆಗಳು.”
ಬಹುಶಃ “ಆಕಾಶದಲ್ಲಿ ಹಾರೋ ಜೀವಿಗಳ ಏಳು ಜೊತೆಗಳು.”
ಅಕ್ಷ. “ಅತಿ ವಿಶಾಲವಾದ, ಆಳವಾದ ನೀರಿನ ಬುಗ್ಗೆಗಳೆಲ್ಲ.”
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಅಥವಾ “ಗುಂಪು ಗುಂಪಾಗಿರೋ ಜೀವಿಗಳು.” ಈ ಪದ ಕೀಟ, ಸರೀಸೃಪ, ಬೇರೆ ಚಿಕ್ಕ ಜೀವಿಗಳನ್ನೂ ಸೂಚಿಸುತ್ತೆ.
ಅಥವಾ “ಗಮನ ಕೊಟ್ಟ.”
ಅಕ್ಷ. “ಆಳವಾದ ನೀರಿನ ಬುಗ್ಗೆಗಳೆಲ್ಲ.”
ಅಥವಾ “ಮಳೆಯನ್ನ ತಡೆಯಲಾಗಿತ್ತು.”
ಅಥವಾ “ಸಮಾಧಾನ ಆಯ್ತು.” ಅಕ್ಷ. “ನೆಮ್ಮದಿ ಕೊಟ್ಟಿತು.”
ಅಥವಾ “ಇವುಗಳ ಮೇಲೆ ನಾನು ನಿನಗೆ ಅಧಿಕಾರ ಕೊಟ್ಟಿದ್ದೀನಿ.”
ಅಂದ್ರೆ, “ನಿಮ್ಮನ್ನ ಕೊಲ್ಲೋ.”
ಈ ಪದ, ಪ್ರಜ್ಞೆ ಇಲ್ಲದ ನೋಹನ ಮೇಲೆ ಕಾನಾನ ಮಾಡಿದ ಅಥವಾ ಮಾಡೋಕೆ ಪ್ರಯತ್ನಿಸಿದ ಯಾವುದೋ ಕೆಟ್ಟ ವಿಷ್ಯವನ್ನ ಸೂಚಿಸಬಹುದು.
ಬಹುಶಃ ನಿನೆವೆ, ರೆಹೋಬೋತೀರ್, ಕೆಲಹ ಮತ್ತು ರೆಸೆನ್ ಇದೆಲ್ಲ ಸೇರಿ ಒಂದು ದೊಡ್ಡ ಪಟ್ಟಣ ಆಗಿತ್ತು.
ಬಹುಶಃ “ಯೆಫೆತನ ಅಣ್ಣನಾದ.”
ಅರ್ಥ “ಚೆದರು.”
ಅಥವಾ “ಪದಭಂಡಾರ.”
ಅಥವಾ “ಗಮನಕೊಟ್ಟನು.”
ಅರ್ಥ “ಗಲಿಬಿಲಿ.”
ಅಥವಾ “ದಕ್ಷಿಣದ.” ಅಂದ್ರೆ ಕಾನಾನ್ ದೇಶದ ದಕ್ಷಿಣಕ್ಕೆ.
ಅಥವಾ “ಐಗುಪ್ತ.”
ಅಥವಾ “ವಿದೇಶಿಯಾಗಿ ವಾಸಿಸೋಕೆ.”
ಇದು ಈಜಿಪ್ಟಿನ ರಾಜರಿಗಿದ್ದ ಬಿರುದು.
ಅಥವಾ “ಘೋರ ವಿಪತ್ತುಗಳನ್ನ.”
ಅದು, ಏದೆನ್ ತೋಟ.
ಅಂದ್ರೆ, ಮೃತ ಸಮುದ್ರ.
ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.
ಪದವಿವರಣೆ ನೋಡಿ.
ಅಕ್ಷ. “ಕಡಸು.”
ಇಲ್ಲಿ “ಅಮೋರಿಯರು” ಅನ್ನೋದು ಕಾನಾನಿನ ಎಲ್ಲ ಜನರನ್ನ ಸೂಚಿಸುತ್ತೆ.
ಅರ್ಥ “ದೇವರು ಕೇಳ್ತಾನೆ.”
ಇದು, ಇಷ್ಟ ಬಂದ ಹಾಗೆ ನಡಿಯೋ ಮನೋಭಾವನ ಸೂಚಿಸುತ್ತೆ.
ಬಹುಶಃ “ವಿರೋಧ ಕಟ್ಕೊಂಡೇ ಜೀವಿಸ್ತಾನೆ.”
ಅರ್ಥ “ನನ್ನನ್ನ ನೋಡೋ ಜೀವವುಳ್ಳ [ದೇವರ] ಬಾವಿ.”
ಅಕ್ಷ. “ನಿರ್ದೋಷಿಯಾಗಿರು.”
ಅರ್ಥ “ತಂದೆಯನ್ನ ಉನ್ನತಕ್ಕೆ ಏರಿಸಲಾಗಿದೆ.”
ಅರ್ಥ “ಸಮೂಹದ (ಜನಸ್ತೋಮದ) ತಂದೆ; ತುಂಬ ಜನ್ರ ತಂದೆ.”
ಇದ್ರಲ್ಲಿ ಗಂಡು ಮಕ್ಕಳೂ ಸೇರಿದ್ದಾರೆ.
ಪದವಿವರಣೆ ನೋಡಿ.
ಅಂದ್ರೆ, “ಪುರುಷನ ಜನನಾಂಗದ ತುದಿಯ ಚರ್ಮವನ್ನ.”
ಬಹುಶಃ ಇದರರ್ಥ “ಜಗಳಗಂಟಿ.”
ಅರ್ಥ “ರಾಣಿ.”
ಅರ್ಥ “ನಗು.”
ಅಂದ್ರೆ, ಯೆಹೋವನನ್ನ ಪ್ರತಿನಿಧಿಸ್ತಿದ್ದ ಒಬ್ಬ ದೇವದೂತ.
ಇಲ್ಲಿ ಅಬ್ರಹಾಮ ನೇರವಾಗಿ ಯೆಹೋವನ ಜೊತೆನೇ ಮಾತಾಡ್ತಿದ್ದಾನೆ ಅನ್ನೋ ತರ ದೇವದೂತನ ಜೊತೆ ಮಾತಾಡಿದ.
ಸುಮಾರು 10 ಕೆ.ಜಿ. ಹಿಟ್ಟು. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಸಾರಳಿಗೆ ಮುಟ್ಟು ನಿಂತುಹೋಗಿತ್ತು.”
ಪದವಿವರಣೆ ನೋಡಿ.
ಇಲ್ಲಿ ಲೋಟ ನೇರವಾಗಿ ಯೆಹೋವನ ಜೊತೆ ಮಾತಾಡ್ತಿರೋ ಹಾಗೆ ದೇವದೂತರ ಜೊತೆ ಮಾತಾಡಿದ.
ಅಥವಾ “ಶಾಶ್ವತ ಪ್ರೀತಿ.” ಪದವಿವರಣೆ ನೋಡಿ.
ಅರ್ಥ “ಚಿಕ್ಕದು.”
ಇದು ಇಟ್ಟಿಗೆಗಳನ್ನ, ಮಣ್ಣಿನ ಪಾತ್ರೆಗಳನ್ನ ಸುಡೋ ಗೂಡು.
ಅಥವಾ “ವಿದೇಶಿಯಾಗಿ ವಾಸಿಸ್ತಿದ್ದಾಗ.”
ಅಂದ್ರೆ, ಅವಳ ಜೊತೆ ಸಂಬಂಧ ಇಟ್ಟಿರಲಿಲ್ಲ.
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಬಹುಶಃ “ನನ್ನನ್ನ ನೋಡಿ ನಗ್ತಾರೆ.”
ಅಕ್ಷ. “ಸಾರ.”
ಅರ್ಥ “ಪ್ರಮಾಣದ ಬಾವಿ; ಏಳರ [ಕುರಿಮರಿಗಳ] ಬಾವಿ.”
ಈ ಮರ ನೀರಿಲ್ಲದ ಪ್ರದೇಶದಲ್ಲೂ ಬೆಳೆಯುತ್ತೆ. ಇದರ ಎಲೆಗಳು ಸದಾ ಹಸಿರಾಗಿರುತ್ತೆ.
ಅಥವಾ “ವಿದೇಶಿಯಾಗಿ ವಾಸಿಸಿದ.”
ಅಥವಾ “ಕತ್ತೆಗೆ ತಡಿಹಾಕಿ.”
ಅರ್ಥ “ಯೆಹೋವ ಒದಗಿಸ್ತಾನೆ; ಯೆಹೋವ ನೋಡ್ಕೊಳ್ತಾನೆ.”
ಬಹುಶಃ “ಮಹಾಪ್ರಭು.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಂದ್ರೆ, ಹತ್ತಿರತ್ತಿರ 6 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಂದ್ರೆ, 114 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಬಹುಶಃ ಇದು ಲಾಬಾನ ಇರಬೇಕು.
ಅವಳು ಈ ಮುಂಚೆ ರೆಬೆಕ್ಕಳ ದಾದಿ. ಈಗ ರೆಬೆಕ್ಕಳ ಸೇವಕಿ.
ಈ ಹೆಸರಿನ ಹೀಬ್ರು ಪದಗಳು ಅವರ ವಂಶದವರಿಗೂ ಸೂಚಿಸುತ್ತೆ.
ಅಥವಾ “ಗೋಡೆಯಿಂದ ಸುತ್ತುವರಿದ ಪಾಳೆಯಗಳನ್ನ.”
ಬಹುಶಃ “ಅಣ್ಣತಮ್ಮಂದಿರು ಒಬ್ರನ್ನೊಬ್ರು ದ್ವೇಷಿಸಿದ್ರು.”
ಅಕ್ಷ. “ಎರಡು ಜನಾಂಗ ಇದೆ.”
ಅರ್ಥ “ತುಂಬ ಕೂದಲಿರೋನು.”
ಅರ್ಥ “ಹಿಮ್ಮಡಿ ಹಿಡಿದವನು. ಇನ್ನೊಬ್ಬನ ಸ್ಥಾನ ಕಿತ್ತುಕೊಳ್ಳೋನು.”
ಅಥವಾ “ನಿರ್ದೋಷಿ.”
ಅಥವಾ “ಸುಸ್ತಾಗಿದೆ.”
ಅರ್ಥ “ಕೆಂಪು.”
ಅಥವಾ “ಅಪ್ಪಿಕೊಂಡಿರೋದು.”
ಅರ್ಥ “ಕಿತ್ತಾಟ.”
ಅರ್ಥ “ಆರೋಪ.”
ಅರ್ಥ “ವಿಶಾಲ ಸ್ಥಳ.”
ಅರ್ಥ “ಹಿಮ್ಮಡಿ ಹಿಡಿದವನು. ಇನ್ನೊಬ್ಬನ ಸ್ಥಾನ ಕಿತ್ಕೊಳ್ಳೋನು.”
ಅಥವಾ “ನಿನ್ನನ್ನ ಕೊಲ್ಲಬೇಕು ಅನ್ನೋ ಯೋಚನೆ ಮಾಡ್ತಾ ಸಮಾಧಾನ ಮಾಡ್ಕೊಳ್ತಿದ್ದಾನೆ.”
ಅಕ್ಷ. “ನಿನ್ನ ತಾಯಿಯ ತಂದೆ.”
ಅಥವಾ “ಏಣಿ.”
ಅರ್ಥ “ದೇವರ ಮನೆ.”
ಇಬ್ರಿಯರ ಪದ್ಧತಿ ಪ್ರಕಾರ ನಿಶ್ಚಿತಾರ್ಥ ಆದವರನ್ನ ಮದುವೆ ಆದವರ ತರ ನೋಡ್ತಿದ್ರು.
ಅಕ್ಷ. “ದ್ವೇಷಿಸೋದನ್ನ.”
ಅರ್ಥ “ನೋಡು, ಒಬ್ಬ ಮಗ!”
ಅರ್ಥ “ಕೇಳಿಸ್ಕೊಳ್ಳೋದು.”
ಅರ್ಥ “ಅಂಟ್ಕೊಳ್ಳೋದು, ಒಂದಾಗಿರೋದು.”
ಅರ್ಥ “ಹೊಗಳಿಕೆ ಸಿಕ್ತು, ಹೊಗಳಿಕೆ ಸಿಗೋ ವ್ಯಕ್ತಿ.”
ಅರ್ಥ “ನ್ಯಾಯಾಧೀಶ.”
ಅರ್ಥ “ನನ್ನ ಹೋರಾಟ.”
ಅರ್ಥ “ಸೌಭಾಗ್ಯ.”
ಅರ್ಥ “ಸಂತೋಷ, ಖುಷಿ.”
ಈ ಹಣ್ಣು ತಿಂದ್ರೆ ಗರ್ಭಧಾರಣೆಗೆ ಸಹಾಯ ಆಗುತ್ತೆ ಅಂತ ಸ್ತ್ರೀಯರು ನೆನಸ್ತಿದ್ರು.
ಅರ್ಥ “ಇವನೇ ಪ್ರತಿಫಲ.”
ಅರ್ಥ “ಸಹಿಸು.”
ಅಕ್ಷ. “ಗಮನಕೊಟ್ಟನು.”
ಇದು ಯೋಸಿಫಿಯದ ಸಂಕ್ಷಿಪ್ತರೂಪ. ಅರ್ಥ “ಯಾಹು ಹೆಚ್ಚು ಮಾಡ್ಲಿ.”
ಅದು, ಯೂಫ್ರೆಟಿಸ್.
ಅಕ್ಷ. “ಒಳ್ಳೇದನ್ನಾಗಲಿ ಕೆಟ್ಟದನ್ನಾಗಲಿ ಮಾತಾಡಬೇಡ.”
ಅಕ್ಷ. “ಒಳ್ಳೇದನ್ನಾಗಲಿ ಕೆಟ್ಟದನ್ನಾಗಲಿ ಮಾತಾಡಬೇಡ.”
ಇದು ಅರಾಮಿಕ್ ಭಾಷೆಯ ಪದ. ಇದ್ರ ಅರ್ಥ “ಸಾಕ್ಷಿಯ ರಾಶಿ.”
ಇದು ಹೀಬ್ರು ಭಾಷೆ ಪದ. ಇದ್ರ ಅರ್ಥ “ಸಾಕ್ಷಿಯ ರಾಶಿ.”
ಇದು ದೂರದಲ್ಲಿ ಇರೋದನ್ನ ನೋಡೋಕೆ ಆಗೋ ಸ್ಥಳ. ಹೀಬ್ರು ಭಾಷೆಯಲ್ಲಿ ಇದ್ರ ಹೆಸ್ರು “ಮಿಚ್ಪಾ.”
ಅರ್ಥ “ಎರಡು ಪಾಳೆಯಗಳು.”
ಅಥವಾ “ವಿದೇಶಿಯಾಗಿ ವಾಸ ಮಾಡ್ತಿದ್ದೆ.”
ಅಥವಾ “ಕಾಲುವೆಯನ್ನ.”
ಈ ಪುರುಷ ಮನುಷ್ಯರೂಪ ಧರಿಸಿದ್ದ ದೇವದೂತ.
ಅಥವಾ “ಸೊಂಟದ ಸಂದನ್ನ.”
ಅರ್ಥ “ದೇವರ ಜೊತೆ ಹೋರಾಡೋನು (ಬಿಡದೆ ಪ್ರಯತ್ನಿಸೋನು)” ಅಥವಾ “ದೇವರು ಹೋರಾಡ್ತಾನೆ.”
ಅಂದ್ರೆ, ದೇವರ ಸಂದೇಶ ಹೇಳೋಕೆ ಬಂದಿದ್ದ ದೇವದೂತನನ್ನ.
ಅರ್ಥ “ದೇವರ ಮುಖ.”
ಅಥವಾ “ಪೆನೂವೇಲ್.” ಆ ಹೆಸ್ರನ್ನ ಈ ರೀತಿನೂ ಬರಿತಿದ್ರು.
ಅರ್ಥ “ಚಪ್ಪರಗಳು, ಆಶ್ರಯಗಳು.”
ಅಥವಾ “ಏಲೆಲೋಹೇ ಇಸ್ರಾಯೇಲ್.”
ಅಥವಾ “ಯುವತಿಯರನ್ನ ನೋಡೋಕೆ.”
ಅರ್ಥ “ಬೆತೆಲಿನ ದೇವರು.”
ಅರ್ಥ “ಅಳುವಿನ ಓಕ್ ಮರ.”
ಅಥವಾ “ಹೆರಿಗೆ ದಾದಿ.”
ಅರ್ಥ “ನನ್ನ ದುಃಖದ ಮಗ.”
ಅರ್ಥ “ನನ್ನ ಬಲಗೈಯ ಮಗ” ಅಂದ್ರೆ ನನ್ನ ನೆಚ್ಚಿನ ಮಗ.
ಅಥವಾ “ವಿದೇಶಿಯರಾಗಿ ವಾಸಿಸೋಕೆ.”
ಕುಲಾಧಿಪತಿಗಳು
ಅಥವಾ “ಮೆಜಾಹಾಬಳ.”
ಅಕ್ಷ. “ವಿಶೇಷವಾದ.”
ಅಥವಾ “ಮಿದ್ಯಾನ್ಯ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅದು, ಎಲ್ಲ ಮಾನವರಿಗಾಗಿ ಇರೋ ಸಾಮಾನ್ಯ ಸಮಾಧಿ. ಪದವಿವರಣೆ ನೋಡಿ.
ಅಥವಾ “ಮಿದ್ಯಾನ್ಯರು.”
ಅಥವಾ “ದೇವದಾಸಿ.” ಇದು, ಕಾನಾನ್ಯ ದೇವದೇವತೆಗಳ ಆರಾಧನೆಯ ಭಾಗವಾಗಿ ವೇಶ್ಯಾವೃತ್ತಿಯಲ್ಲಿ ಒಳಗೂಡೋ ಸ್ತ್ರೀಯನ್ನ ಸೂಚಿಸಬಹುದು.
ಅಥವಾ “ಹೆರಿಗೆ ದಾದಿ.”
ಅರ್ಥ “ಸೀಳು.” ಬಹುಶಃ ಮೂಲಾಧಾರದ (ಪೆರಿನಿಯಂ) ಸೀಳುವಿಕೆಗೆ ಸೂಚಿಸುತ್ತೆ.
ಅಕ್ಷ. “ನಮ್ಮನ್ನ ನಗೆಗೀಡು ಮಾಡಿದ್ದಾನೆ.”
ಈ ಅಡುಗೆಗಾರ ಬ್ರೆಡ್, ಕೇಕ್ ಮುಂತಾದವುಗಳನ್ನ ಮಾಡೋನು.
ಅಕ್ಷ. “ಗುಂಡಿ.”
ಅಕ್ಷ. “ಗುಂಡಿ.”
ಇದಕ್ಕಿರೋ ಹೀಬ್ರು ಪದ ಅವನು ತನ್ನ ಗಡ್ಡವನ್ನ, ತಲೆಯನ್ನ ಬೋಳಿಸಿದ ಅಂತ ಸೂಚಿಸಬಹುದು.
ಇದು, ಗೌರವಿಸಿ ಮತ್ತು ಸನ್ಮಾನಿಸಿ ಅನ್ನೋ ಅರ್ಥ ಕೊಡೋ ಪದ ಆಗಿರಬಹುದು.
ಅದು, ಹಿಲಿಯೋಪೊಲಿಸ್.
ಅಥವಾ “ಮೇಲ್ವಿಚಾರಣೆ ಮಾಡೋಕೆ.”
ಅಥವಾ “ಸೇವೆ ಮಾಡೋಕೆ ಶುರುಮಾಡಿದಾಗ.”
ಅದು, ಹಿಲಿಯೋಪೊಲಿಸ್.
ಅರ್ಥ “ಮರೆಯೋ ಹಾಗೆ ಮಾಡೋನು.”
ಅಥವಾ “ಯಶಸ್ಸನ್ನ.”
ಬಹುಶಃ ಈ ಹೆಸರಿನ ಅರ್ಥ “ಎರಡುಪಟ್ಟು ಮಕ್ಕಳು.”
ಅಕ್ಷ. “ಹುಡುಗನ ವಿರುದ್ಧ ಪಾಪ.”
ಪದವಿವರಣೆ ನೋಡಿ.
ಪದವಿವರಣೆ ನೋಡಿ.
ಪದವಿವರಣೆ ನೋಡಿ.
ಅಥವಾ “ದೇಶದಿಂದ.”
ಅಕ್ಷ. “ತಂದೆಯಾಗಿ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಇಸ್ರಾಯೇಲನನ್ನ.”
ಅದು, ಹಿಲಿಯೋಪೊಲಿಸ್.
ಅಕ್ಷ. “ಗಂಡುಮಕ್ಕಳು.” ಬಹುಶಃ ಬೇರೆ ಮಕ್ಕಳು ಇದ್ದಿರಬಹುದು. ಆದ್ರೆ ಅವ್ರ ಹೆಸ್ರುಗಳನ್ನ ಕೊಟ್ಟಿಲ್ಲ.
ಅಥವಾ “ಮತ್ತೆ ಮತ್ತೆ ಅಪ್ಕೊಂಡು ಅತ್ತ.”
ಅಥವಾ “ವಿದೇಶಿಗಳಾಗಿ.”
ರಮ್ಸೇಸ್ ಅನ್ನೋದು ಗೋಷೆನಲ್ಲಿ ಇರೋ ಒಂದು ಪ್ರದೇಶ ಆಗಿರಬಹುದು ಅಥವಾ ಗೋಷೆನಿನ ಇನ್ನೊಂದು ಹೆಸರು ಇರಬಹುದು.
ಅಕ್ಷ. “ನಮ್ಮ ದೇಹ.”
ಅಥವಾ “ಸಂತಾನವನ್ನ.”
ಅಥವಾ “ಒಂದು ಇಳಿಜಾರು ಪ್ರದೇಶ.”
ಪದವಿವರಣೆ ನೋಡಿ.
ಅಥವಾ “ಘನತೆಯೇ.”
ಅರ್ಥ “ಇದು ಯಾರದ್ದೋ ಅವನು; ಇದು ಯಾರಿಗೆ ಸೇರಿದ್ದೋ ಅವನು.”
ಅಕ್ಷ. “ಆಜ್ಞೆ ಕೊಡುವವನ.”
ಅಕ್ಷ. “ಕಡ್ಡಾಯ ದುಡಿಮೆ.”
ಇದು, ಸುಗಂಧತೈಲದಂಥ ವಸ್ತುಗಳನ್ನ ಬಳಸಿ ಶವ ಕೊಳೆಯದೆ ಇರೋ ಹಾಗೆ ನೋಡ್ಕೊಳ್ಳೋ ವಿಧಾನ.
ಅಥವಾ “ಮನೆಯವರಿಗೆ.”
ಅಥವಾ “ಆಸ್ಥಾನದ ಹಿರಿಯರು.”
ಅರ್ಥ “ಈಜಿಪ್ಟಿನವರ ಶೋಕ.”
ಅಕ್ಷ. “ಗಮನ ಕೊಡ್ತಾನೆ.”
ಅಕ್ಷ. “ಗಮನ ಕೊಡ್ತಾನೆ.”