ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಧರ್ಮೋಪದೇಶಕಾಂಡ 1: 1-34: 12
  • ಧರ್ಮೋಪದೇಶಕಾಂಡ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಧರ್ಮೋಪದೇಶಕಾಂಡ
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ

ಧರ್ಮೋಪದೇಶಕಾಂಡ

1 ಇಸ್ರಾಯೇಲ್ಯರಿಗೆ ಮೋಶೆ ಹೇಳಿದ ಮಾತುಗಳು. ಆಗ ಅವ್ರೆಲ್ಲ ಯೋರ್ದನಿನ ಹತ್ರ ಇದ್ದ ಕಾಡಲ್ಲಿ* ಇದ್ರು. ಇದು ಸೂಫಿನ ಮುಂದೆ ಪಾರಾನ್‌, ತೋಫೆಲ್‌, ಲಾಬಾನ್‌, ಹಚೇರೋತ್‌, ದೀಜಾಹಾಬಿನ ಮಧ್ಯ ಇದ್ದ ಬಯಲು ಪ್ರದೇಶ. 2 ಹೋರೇಬಿಂದ ಸೇಯೀರ್‌ ಬೆಟ್ಟಕ್ಕೆ ಹೋಗೋ ದಾರಿಯಲ್ಲಿ ಕಾದೇಶ್‌-ಬರ್ನೇಯಕ್ಕೆ+ ಹೋಗೋಕೆ 11 ದಿನ ಹಿಡಿಯುತ್ತೆ. 3 ಯೆಹೋವ ಇಸ್ರಾಯೇಲ್ಯರಿಗೆ ಹೇಳೋಕೆ ಹೇಳಿದ್ದನ್ನೆಲ್ಲ ಮೋಶೆ ಅವ್ರಿಗೆ ಹೇಳಿದ. ಇಸ್ರಾಯೇಲ್ಯರು ಈಜಿಪ್ಟಿಂದ ಬಂದು 40ನೇ ವರ್ಷದ+ 11ನೇ ತಿಂಗಳಿನ ಮೊದಲನೇ ದಿನ ಅದನ್ನೆಲ್ಲ ಹೇಳಿದ. 4 ಹೆಷ್ಬೋನಲ್ಲಿ ಇದ್ದ ಅಮೋರಿಯರ ರಾಜ ಸೀಹೋನನನ್ನ+ ಅಷ್ಟರೋತಿನಲ್ಲಿ ಇದ್ದ ಬಾಷಾನಿನ ರಾಜ ಓಗನನ್ನ+ ಎದ್ರೈ+ ಅನ್ನೋ ಸ್ಥಳದಲ್ಲಿ ಅವನು* ಸೋಲಿಸಿದ ಮೇಲೆ ಇದೆಲ್ಲ ನಡೀತು. 5 ಮೋವಾಬ್‌ ದೇಶದ ಯೋರ್ದನ್‌ ಪ್ರದೇಶದಲ್ಲಿ ಮೋಶೆ ಇಸ್ರಾಯೇಲ್ಯರಿಗೆ ನಿಯಮ ಪುಸ್ತಕನ+ ವಿವರಿಸ್ತಾ ಹೀಗಂದ:

6 “ನಮ್ಮ ದೇವರಾದ ಯೆಹೋವ ಹೋರೇಬಲ್ಲಿ ನಮಗೆ ‘ಈ ಬೆಟ್ಟ ಪ್ರದೇಶಕ್ಕೆ ನೀವು ಬಂದು ತುಂಬ ಸಮಯ ಆಗಿದೆ.+ 7 ಈಗ ಅಮೋರಿಯರ+ ಬೆಟ್ಟ ಪ್ರದೇಶಕ್ಕೆ ಹೋಗಿ. ಆಮೇಲೆ ಅದ್ರ ಹತ್ರ ಇರೋ ಎಲ್ಲ ಪ್ರದೇಶಗಳಿಗೆ ಅಂದ್ರೆ ಅರಾಬಾ,+ ಬೆಟ್ಟ ಪ್ರದೇಶ, ಷೆಫೆಲಾ, ನೆಗೆಬ್‌* ಮತ್ತೆ ಸಮುದ್ರ ತೀರಪ್ರದೇಶಕ್ಕೆ+ ಹೋಗಿ. ಅಷ್ಟೇ ಅಲ್ಲ ಕಾನಾನ್ಯರ ದೇಶಕ್ಕೆ ಲೆಬನೋನಿಗೆ*+ ಮಹಾನದಿ ಯೂಫ್ರೆಟಿಸ್‌+ ತನಕ ಹೋಗಿ. 8 ಯೆಹೋವನಾದ ನಾನು ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ,+ ಯಾಕೋಬರಿಗೆ+ ಆಣೆ ಮಾಡಿ ಅವ್ರಿಗೆ ಅವ್ರ ವಂಶದವರಿಗೆ ಕೊಡ್ತೀನಿ+ ಅಂತ ಹೇಳಿದ ದೇಶ ಈಗ ನಿಮ್ಮ ಮುಂದೆ ಇದೆ. ನೀವು ಹೋಗಿ ಆ ದೇಶವನ್ನ ವಶ ಮಾಡ್ಕೊಳ್ಳಿ’ ಅಂದ.

9 ಆ ಸಮಯದಲ್ಲಿ ನಾನು ‘ನಿಮ್ಮೆಲ್ರನ್ನ ಮುನ್ನಡೆಸೋ ಜವಾಬ್ದಾರಿಯನ್ನ ನಾನೊಬ್ಬನೇ ಹೊರೋಕೆ ಆಗಲ್ಲ.+ 10 ನಿಮ್ಮ ದೇವರಾದ ಯೆಹೋವ ನಿಮ್ಮ ಸಂಖ್ಯೆಯನ್ನ ಜಾಸ್ತಿ ಮಾಡಿದ್ದಾನೆ. ಹಾಗಾಗಿ ನೀವು ಇವತ್ತು ಆಕಾಶದ ನಕ್ಷತ್ರಗಳ ತರ ಲೆಕ್ಕ ಮಾಡೋಕೆ ಆಗದಷ್ಟು ಜಾಸ್ತಿ ಆಗಿದ್ದೀರ.+ 11 ನೀವು ಈಗ ಇರೋದಕ್ಕಿಂತ ಸಾವಿರ ಪಟ್ಟು ಜಾಸ್ತಿ ಆಗೋ ತರ+ ನಿಮ್ಮ ಪೂರ್ವಜರ ದೇವರಾದ ಯೆಹೋವ ಮಾಡ್ಲಿ. ಆತನು ಈಗಾಗ್ಲೇ ಮಾತುಕೊಟ್ಟ ಹಾಗೇ ನಿಮ್ಮನ್ನ ಆಶೀರ್ವದಿಸ್ಲಿ.+ 12 ಆದ್ರೆ ಇಷ್ಟು ದೊಡ್ಡ ಸಮೂಹನ ನೋಡ್ಕೊಳ್ಳೋ ಭಾರನ ಹೊತ್ಕೊಳ್ಳೋಕೆ ನನ್ನೊಬ್ಬನಿಂದ ಹೇಗೆ ಆಗುತ್ತೆ? ನಿಮ್ಮ ಸಮಸ್ಯೆಗಳನ್ನ, ಜಗಳಗಳನ್ನ ನಾನೊಬ್ಬನೇ ಹೇಗೆ ತಾನೆ ಸರಿ ಮಾಡ್ಲಿ?+ 13 ಅದಕ್ಕೇ ವಿವೇಕ, ವಿವೇಚನೆ, ಅನುಭವ ಇರೋ ಗಂಡಸ್ರನ್ನ ನಿಮ್ಮ ಕುಲಗಳಿಂದ ಆರಿಸಿ. ಅವ್ರನ್ನ ನಿಮ್ಮ ಮುಖ್ಯಸ್ಥರನ್ನಾಗಿ ನೇಮಿಸ್ತೀನಿ’ + ಅಂತ ನಿಮಗೆ ಹೇಳ್ದೆ. 14 ಅದಕ್ಕೆ ನೀವು ‘ಸರಿ, ನೀನು ಹೇಳೋ ಹಾಗೆ ಮಾಡಿದ್ರೆ ಚೆನ್ನಾಗಿರುತ್ತೆ’ ಅಂದ್ರಿ. 15 ಆಗ ನಾನು ವಿವೇಕ ಅನುಭವ ಇದ್ದ ನಿಮ್ಮ ಕುಲಗಳ ಮುಖ್ಯಸ್ಥರನ್ನ ಸಾವಿರ ಜನ್ರ ಮೇಲೆ, ನೂರು ಜನ್ರ ಮೇಲೆ, ಐವತ್ತು ಜನ್ರ ಮೇಲೆ, ಹತ್ತು ಜನ್ರ ಮೇಲೆ ನೇಮಿಸಿದೆ. ಅವ್ರನ್ನ ನಿಮ್ಮ ಕುಲಗಳಿಗೆ ಅಧಿಕಾರಿಗಳಾಗಿ ನೇಮಿಸಿದೆ.+

16 ಆ ಸಮಯದಲ್ಲಿ ನಿಮ್ಮ ನ್ಯಾಯಾಧೀಶರಿಗೆ ‘ಜನ್ರು ಸಮಸ್ಯೆ ಬಗೆಹರಿಸ್ಕೊಳ್ಳೋಕೆ ನಿಮ್ಮ ಹತ್ರ ಬಂದಾಗ ನ್ಯಾಯವಾಗಿ ತೀರ್ಪು ಮಾಡಬೇಕು.+ ಸಮಸ್ಯೆ ಇಬ್ರು ಇಸ್ರಾಯೇಲ್ಯರ ಮಧ್ಯ ಇರಲಿ ಅಥವಾ ಇಸ್ರಾಯೇಲ್ಯ ಮತ್ತು ವಿದೇಶಿ ಮಧ್ಯ ಇರಲಿ ನೀವು ನ್ಯಾಯವಾಗೇ ತೀರ್ಪು ಮಾಡಬೇಕು.+ 17 ವಿಚಾರಣೆ ಮಾಡುವಾಗ ಒಬ್ಬ ಪ್ರಸಿದ್ಧ ವ್ಯಕ್ತಿ ಮಾತಾಡಿದ್ರೆ ಹೇಗೆ ಕೇಳ್ತಿರೋ ಹಾಗೇ ಸಾಧಾರಣ ವ್ಯಕ್ತಿ ಮಾತಾಡಿದಾಗ್ಲೂ ಕೇಳಬೇಕು.+ ತೀರ್ಪು ಮಾಡುವಾಗ ಭೇದಭಾವ ಮಾಡಬಾರದು.+ ಮನುಷ್ಯರಿಗೆ ಹೆದರಿ ತೀರ್ಪು ಕೊಡಬಾರದು.+ ಯಾಕಂದ್ರೆ ನೀವು ದೇವರ ಪರವಾಗಿ ತೀರ್ಪು ಮಾಡ್ತಿದ್ದೀರ!+ ಯಾವುದಾದ್ರೂ ಸಮಸ್ಯೆ ಬಗೆಹರಿಸೋಕೆ ನಿಮ್ಮಿಂದ ಆಗದಿದ್ರೆ ನನ್ನ ಹತ್ರ ಬನ್ನಿ, ನಾನದನ್ನ ವಿಚಾರಿಸ್ತೀನಿ’ + ಅಂತ ಹೇಳ್ದೆ. 18 ಅಷ್ಟೇ ಅಲ್ಲ ಏನೇನು ಮಾಡಬೇಕಂತನೂ ನಾನಾಗ ಹೇಳ್ಕೊಟ್ಟೆ.

19 ಆಮೇಲೆ ನಾವೆಲ್ಲ ನಮ್ಮ ದೇವರಾದ ಯೆಹೋವನ ಆಜ್ಞೆ ಪ್ರಕಾರ ಹೋರೇಬಿಂದ ಹೊರಟ್ವಿ. ಅಮೋರಿಯರ ಬೆಟ್ಟ ಪ್ರದೇಶಕ್ಕೆ+ ಹೋಗೋ ದಾರಿಯಲ್ಲಿ ತುಂಬ ದೊಡ್ಡ, ಭಯಾನಕ ಬರಡು ಪ್ರದೇಶ+ ಇತ್ತು. ಅದನ್ನ ನೀವೇ ಕಣ್ಣಾರೆ ನೋಡಿದ್ರಿ. ನಾವು ಅದನ್ನ ನಡ್ಕೊಂಡು ಹೋಗಿ ದಾಟಿದ್ವಿ. ಹೀಗೆ ಪ್ರಯಾಣ ಮಾಡ್ತಾ ಮಾಡ್ತಾ ಕಾದೇಶ್‌-ಬರ್ನೇಯಕ್ಕೆ ಬಂದ್ವಿ.+ 20 ನಾನಾಗ ನಿಮಗೆ ‘ನಮ್ಮ ದೇವರಾದ ಯೆಹೋವ ನಮಗೆ ಕೊಡೋ ಅಮೋರಿಯರ ಬೆಟ್ಟ ಪ್ರದೇಶಕ್ಕೆ ನಾವೀಗ ಬಂದಿದ್ದೀವಿ. 21 ನಿಮ್ಮ ದೇವರಾದ ಯೆಹೋವ ಈ ದೇಶವನ್ನ ನಿಮಗೆ ಕೊಟ್ಟಿದ್ದಾನೆ. ನಿಮ್ಮ ಪೂರ್ವಜರ ದೇವರಾದ ಯೆಹೋವ ಹೇಳಿದ ಹಾಗೇ ಈ ಬೆಟ್ಟ ಪ್ರದೇಶಕ್ಕೆ ಹೋಗಿ ವಶ ಮಾಡ್ಕೊಳ್ಳಿ.+ ಧೈರ್ಯವಾಗಿರಿ! ಯಾರಿಗೂ ಹೆದರಬೇಡಿ!’ ಅಂದೆ.

22 ಆಗ ನೀವೆಲ್ಲ ನನ್ನ ಹತ್ರ ಬಂದು ‘ನಾವು ಆ ದೇಶಕ್ಕೆ ಹೋಗೋಕೆ ಮುಂಚೆ ಕೆಲವು ಗಂಡಸ್ರನ್ನ ಅಲ್ಲಿಗೆ ಕಳಿಸೋಣ. ಅವರು ಆ ದೇಶ ನೋಡ್ಕೊಂಡು ಬರಲಿ. ನಾವು ಯಾವ ದಾರೀಲಿ ಅಲ್ಲಿಗೆ ಹೋದ್ರೆ ಒಳ್ಳೇದು, ಆ ದಾರೀಲಿ ಎಂಥ ಪಟ್ಟಣಗಳಿವೆ ಅಂತ ಅವರು ನಮಗೆ ಹೇಳಲಿ’ + ಅಂದ್ರಿ. 23 ನೀವು ಹೇಳಿದ್ದು ಸರಿ ಅಂತ ನನಗೂ ಅನಿಸ್ತು. ಅದಕ್ಕೆ ನಾನು ಒಂದೊಂದು ಕುಲದಿಂದ ಒಬ್ಬೊಬ್ಬ ಗಂಡಸನ್ನ ಅಂದ್ರೆ ಒಟ್ಟು 12 ಜನ್ರನ್ನ ಆರಿಸ್ಕೊಂಡೆ.+ 24 ಅವರು ಬೆಟ್ಟ ಪ್ರದೇಶ ಹತ್ತಿ ಹೋಗಿ+ ಎಷ್ಕೋಲ್‌ ಕಣಿವೆ ತಲುಪಿ ಆ ದೇಶ ಸಂಚರಿಸಿ ನೋಡಿದ್ರು. 25 ಅಲ್ಲಿಂದ ಸ್ವಲ್ಪ ಹಣ್ಣುಗಳನ್ನ ತಂದು ನಮಗೆ ತೋರಿಸಿದ್ರು. ಅಷ್ಟೇ ಅಲ್ಲ ‘ನಮ್ಮ ದೇವರಾದ ಯೆಹೋವ ನಮಗೆ ಕೊಡೋ ದೇಶ ಒಳ್ಳೇ ದೇಶ’ + ಅಂದ್ರು. 26 ಆದ್ರೆ ನೀವು ಆ ದೇಶಕ್ಕೆ ಹೋಗೋಕೆ ಒಪ್ಪಲಿಲ್ಲ. ನಿಮ್ಮ ದೇವರಾದ ಯೆಹೋವನ ಅಪ್ಪಣೆ ವಿರುದ್ಧ ದಂಗೆ ಎದ್ರಿ.+ 27 ನಿಮ್ಮ ನಿಮ್ಮ ಡೇರೆಗಳಲ್ಲಿ ಗೊಣಗುತ್ತಾ ‘ಯೆಹೋವನಿಗೆ ನಮ್ಮ ಮೇಲೆ ಏನೋ ದ್ವೇಷ ಇರಬೇಕು. ಅದಕ್ಕೆ ಈಜಿಪ್ಟಿಂದ* ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದಿದ್ದಾನೆ. ನಮ್ಮನ್ನ ಅಮೋರಿಯರ ಕೈಗೆ ಒಪ್ಪಿಸಿ ನಾಶ ಮಾಡಬೇಕು ಅಂತಿದ್ದಾನೆ. 28 ನಾವು ಹೋಗೋ ಜಾಗ ಹೇಗಿರುತ್ತೋ ಏನೋ? ನಮ್ಮ ಸಹೋದರರು ಆ ದೇಶವನ್ನ ನೋಡ್ಕೊಂಡು ಬಂದು “ಅಲ್ಲಿರೋ ಜನ ನಮಗಿಂತ ಎತ್ರ, ಬಲಶಾಲಿಗಳು. ಅಲ್ಲಿ ದೊಡ್ಡದೊಡ್ಡ ಪಟ್ಟಣಗಳಿವೆ. ಆ ಪಟ್ಟಣಗಳ ಕೋಟೆಗಳು ಆಕಾಶ ಮುಟ್ಟೋಷ್ಟು ಎತ್ರ.+ ಅಷ್ಟೇ ಅಲ್ಲ ನಾವಲ್ಲಿ ಅನಾಕ್ಯರನ್ನ+ ನೋಡಿದ್ವಿ” ಅಂತ ಹೇಳಿ ಧೈರ್ಯ ಕಳ್ಕೊಳ್ಳೋ ತರ ಮಾಡಿದ್ದಾರೆ’ + ಅಂದ್ರಿ.

29 ಅದಕ್ಕೆ ನಾನು ‘ಆ ದೇಶದ ಜನ್ರಿಗೆ ಹೆದರಬೇಡಿ, ಧೈರ್ಯ ಕಳ್ಕೊಳ್ಳಬೇಡಿ.+ 30 ಈಜಿಪ್ಟಲ್ಲಿ ನಿಮ್ಮ ದೇವರಾದ ಯೆಹೋವ ನಿಮಗೋಸ್ಕರ ಹೋರಾಡಿದ್ದನ್ನ ಕಣ್ಣಾರೆ ನೋಡಿದ್ರಲ್ಲಾ.+ ಅದೇ ತರ ಈಗ್ಲೂ ನಿಮಗೋಸ್ಕರ ಯುದ್ಧ ಮಾಡ್ತಾನೆ.+ 31 ಕಾಡಲ್ಲಿ ಇದ್ದಾಗ ದೇವರಾದ ಯೆಹೋವ ನಿಮ್ಮನ್ನ ಹೇಗೆಲ್ಲಾ ನೋಡ್ಕೊಂಡ ಅಂತ ನಿಮಗೆ ಚೆನ್ನಾಗಿ ಗೊತ್ತು. ಪ್ರಯಾಣ ಮಾಡ್ತಾ ಎಲ್ಲೆಲ್ಲಾ ಹೋದ್ರೊ ಅಲ್ಲೆಲ್ಲಾ ಒಬ್ಬ ತಂದೆ ಮಗನನ್ನ ತೋಳಲ್ಲಿ ಎತ್ಕೊಂಡು ಹೋಗೋ ತರ ದೇವರು ನಿಮ್ಮನ್ನ ಎತ್ಕೊಂಡು ಹೋದ. ಇಲ್ಲಿ ತನಕ ಕರ್ಕೊಂಡು ಬಂದ’ ಅಂದೆ. 32 ನಿಮ್ಮ ದೇವರಾದ ಯೆಹೋವ ಇಷ್ಟೆಲ್ಲಾ ಮಾಡಿದ್ರೂ ಆತನ ಮೇಲೆ ನೀವು ನಂಬಿಕೆ ಇಡಲಿಲ್ಲ.+ 33 ಪ್ರಯಾಣದ ಉದ್ದಕ್ಕೂ ಆತನು ನಿಮ್ಮ ಮುಂದೆಮುಂದೆ ಹೋಗಿ ನೀವೆಲ್ಲಿ ಡೇರೆ ಹಾಕಬೇಕಂತ ಸ್ಥಳ ಹುಡುಕ್ತಿದ್ದನು. ನಿಮಗೆ ದಾರಿ ತೋರಿಸೋಕೆ ರಾತ್ರಿ ಹೊತ್ತಲ್ಲಿ ಬೆಂಕಿಯಲ್ಲಿ ಹಗಲು ಹೊತ್ತಲ್ಲಿ ಮೋಡದಲ್ಲಿ ಕಾಣಿಸ್ಕೊಂಡನು.+

34 ನೀವು ಗೊಣಗುತ್ತಾ ಹೇಳಿದ ಮಾತುಗಳನ್ನೆಲ್ಲ ಯೆಹೋವ ಕೇಳಿಸ್ಕೊಂಡನು. ಆತನಿಗೆ ನಿಮ್ಮ ಮೇಲೆ ತುಂಬ ಕೋಪ ಬಂತು. ಹಾಗಾಗಿ ಆತನು ಆಣೆಯಿಟ್ಟು+ 35 ‘ನಿಮ್ಮ ಪೂರ್ವಜರಿಗೆ ಕೊಡ್ತೀನಿ ಅಂತ ನಾನು ಮಾತು ಕೊಟ್ಟ ಆ ಒಳ್ಳೇ ದೇಶಕ್ಕೆ ಈ ಕೆಟ್ಟ ಪೀಳಿಗೆಯಲ್ಲಿ ಒಬ್ರೂ ಹೋಗಲ್ಲ.+ 36 ಆದ್ರೆ ಯೆಫುನ್ನೆಯ ಮಗ ಕಾಲೇಬ ಆ ದೇಶಕ್ಕೆ ಹೋಗ್ತಾನೆ. ಅವನು ಹೋಗಿ ನೋಡಿದ ಆ ದೇಶನ ಅವನಿಗೂ ಅವನ ವಂಶದವರಿಗೂ ಕೊಡ್ತೀನಿ. ಯಾಕಂದ್ರೆ ಯೆಹೋವನಾದ ನನ್ನ ಮಾತನ್ನ ಅವನು ಮನಸಾರೆ* ಪಾಲಿಸಿದ್ದಾನೆ.+ 37 (ನಿಮ್ಮಿಂದ ಯೆಹೋವ ನನ್ನ ಮೇಲೂ ಕೋಪ ಮಾಡ್ಕೊಂಡನು. “ಆ ದೇಶಕ್ಕೆ ನೀನೂ ಹೋಗಲ್ಲ.+ 38 ನೂನನ ಮಗನೂ ನಿನ್ನ ಸೇವಕನೂ ಆದ ಯೆಹೋಶುವ+ ಅಲ್ಲಿಗೆ ಹೋಗ್ತಾನೆ.+ ಆ ದೇಶವನ್ನ ಆಸ್ತಿಯಾಗಿ ಪಡ್ಕೊಳ್ಳೋಕೆ ಇಸ್ರಾಯೇಲ್ಯರಿಗೆ ಸಹಾಯ ಮಾಡ್ತಾನೆ. ಹಾಗಾಗಿ ಅವನಿಗೆ ಧೈರ್ಯ ತುಂಬು”*+ ಅಂದನು.) 39 ಅಷ್ಟೇ ಅಲ್ಲ ಒಳ್ಳೇದು ಕೆಟ್ಟದು ಗೊತ್ತಾಗದ ನಿಮ್ಮ ಮಕ್ಕಳು ಆ ದೇಶಕ್ಕೆ ಹೋಗ್ತಾರೆ. ಅವರು ಕೈದಿಗಳಾಗಿ ಹೋಗ್ತಾರೆ+ ಅಂತ ಹೇಳಿದ್ರಿ. ಆದ್ರೆ ನಾನು ಅವ್ರಿಗೆ ಆ ದೇಶವನ್ನ ಆಸ್ತಿಯಾಗಿ ಕೊಡ್ತೀನಿ.+ 40 ನೀವೀಗ ವಾಪಸ್‌ ಹೋಗಿ ಕೆಂಪು ಸಮುದ್ರಕ್ಕೆ ಹೋಗೋ ದಾರಿಯಿಂದ ಕಾಡಿಗೆ ಹೋಗಿ’ ಅಂದನು.+

41 ಆಗ ನೀವು ನನಗೆ ‘ಯೆಹೋವನ ವಿರುದ್ಧ ಪಾಪ ಮಾಡಿದ್ದೀವಿ. ನಮ್ಮ ದೇವರಾದ ಯೆಹೋವ ಕೊಟ್ಟ ಆಜ್ಞೆ ಪ್ರಕಾರನೇ ನಾವೀಗ ಈ ಬೆಟ್ಟ ಹತ್ತಿ ಯುದ್ಧ ಮಾಡ್ತೀವಿ’ ಅಂದ್ರಿ. ಆಯುಧ ತಗೊಂಡು ಬೆಟ್ಟ ಹತ್ತಿ ಆ ಇಡೀ ಪ್ರದೇಶವನ್ನ ಜಯಿಸೋದು ತುಂಬ ಸುಲಭ ಅಂತ ನೆನಸಿದ್ರಿ.+ 42 ಆದ್ರೆ ಯೆಹೋವ ‘ಬೆಟ್ಟ ಹತ್ತಿ ಯುದ್ಧಕ್ಕೆ ಹೋಗಬಾರದು ಅಂತ ಅವ್ರಿಗೆ ಹೇಳು. ನಾನು ಅವ್ರ ಜೊತೆ ಇರಲ್ಲ.+ ಅವರು ಯುದ್ಧಕ್ಕೆ ಹೋದ್ರೆ ಶತ್ರುಗಳು ಅವ್ರನ್ನ ಸೋಲಿಸಿಬಿಡ್ತಾರೆ’ ” ಅಂತ ನನಗೆ ಹೇಳಿದನು. 43 ಅದನ್ನ ನಿಮಗೆ ಹೇಳಿದ್ರೂ ನೀವು ಕಿವಿಗೇ ಹಾಕೊಳ್ಳಲಿಲ್ಲ. ಯೆಹೋವನ ಮಾತಿನ ವಿರುದ್ಧ ದಂಗೆಯೆದ್ದು ದುರಹಂಕಾರದಿಂದ ಬೆಟ್ಟ ಹತ್ತಿ ಹೋದ್ರಿ. 44 ಆಗ ಅಲ್ಲಿ ವಾಸ ಮಾಡ್ತಿದ್ದ ಅಮೋರಿಯರು ನಿಮ್ಮ ವಿರುದ್ಧ ಯುದ್ಧ ಮಾಡಿದ್ರು. ಸೇಯೀರಿನಲ್ಲಿ ಹೊರ್ಮಾದ ತನಕ ನಿಮ್ಮನ್ನ ಜೇನುನೊಣಗಳ ತರ ಅಟ್ಟಿಸ್ಕೊಂಡು ಹೋಗಿ, ಓಡಿಸಿಬಿಟ್ರು. 45 ನೀವಾಗ ವಾಪಸ್‌ ಬಂದು ಯೆಹೋವನ ಮುಂದೆ ಅತ್ತು ಗೋಳಾಡಿದ್ರಿ. ಆದ್ರೆ ಯೆಹೋವ ನಿಮ್ಮ ಅಳು ಕೇಳಲೂ ಇಲ್ಲ, ನಿಮ್ಮ ಕಡೆ ಗಮನ ಕೊಡ್ಲೂ ಇಲ್ಲ. 46 ಅದಕ್ಕೇ ನೀವು ಕಾದೇಶಲ್ಲೇ ತುಂಬ ಸಮಯ ಇರಬೇಕಾಯ್ತು.

2 ಆಮೇಲೆ ಯೆಹೋವ ನನಗೆ ಹೇಳಿದ ಹಾಗೇ ನಾವೆಲ್ಲ ವಾಪಸ್‌ ಹೋಗಿ ಕೆಂಪು ಸಮುದ್ರದ ಕಡೆ ಹೋಗೋ ದಾರಿಯಲ್ಲಿ ಕಾಡಿಗೆ ಹೋದ್ವಿ.+ ತುಂಬ ದಿನಗಳ ತನಕ ನಾವು ಸೇಯೀರ್‌ ಬೆಟ್ಟದ ಸುತ್ತಮುತ್ತಾನೇ ಪ್ರಯಾಣ ಮಾಡ್ತಿದ್ವಿ. 2 ಆಮೇಲೆ ಯೆಹೋವ ನನಗೆ 3 ‘ನೀವು ಈ ಬೆಟ್ಟದ ಸುತ್ತಮುತ್ತ ತುಂಬ ದಿನಗಳಿಂದ ಪ್ರಯಾಣ ಮಾಡ್ತಾ ಇದ್ದೀರ. ಈಗ ಉತ್ತರದ ಕಡೆ ಹೋಗಿ. 4 ಜನ್ರಿಗೆ ಹೀಗೆ ಹೇಳು “ನಿಮ್ಮ ಸಹೋದರರಾದ ಏಸಾವನ+ ವಂಶದವರು ಇರೋ ಸೇಯೀರ್‌+ ದೇಶದ ಮೇರೆ ಪಕ್ಕದಿಂದ ಹೋಗ್ತಿರ. ಅವರು ನಿಮಗೆ ಭಯಪಡ್ತಾರೆ.+ ತುಂಬ ಹುಷಾರಾಗಿ ಇರಿ, 5 ಅವ್ರ ಮೇಲೆ ಯುದ್ಧಕ್ಕೆ ಹೋಗಬೇಡಿ.* ನಾನು ಸೇಯೀರ್‌ ಬೆಟ್ಟ ಪ್ರದೇಶನ ಏಸಾವನಿಗೆ ಆಸ್ತಿಯಾಗಿ ಕೊಟ್ಟಿದ್ದೀನಿ.+ ಹಾಗಾಗಿ ಅಲ್ಲಿ ನಾನು ನಿಮಗೆ ಕಾಲಿಡುವಷ್ಟೂ ಜಾಗ ಕೊಡಲ್ಲ. 6 ಅಲ್ಲಿ ನೀವು ದುಡ್ಡು ಕೊಟ್ಟು ಆಹಾರ ನೀರು ತಗೋಬೇಕು.+ 7 ನೀವು ಇಲ್ಲಿ ತನಕ ಮಾಡಿದ ಎಲ್ಲ ಕೆಲಸಗಳನ್ನ ನಿಮ್ಮ ದೇವರಾದ ಯೆಹೋವ ಆಶೀರ್ವದಿಸಿದ್ದಾನೆ. ಇಷ್ಟು ದೊಡ್ಡ ಕಾಡಲ್ಲಿ ನಡೀತಾ ಒಂದೊಂದು ಸಲನೂ ಮಾಡಿದ ಪ್ರಯಾಣದ ಬಗ್ಗೆ ಆತನಿಗೆ ಚೆನ್ನಾಗಿ ಗೊತ್ತು. ಈ 40 ವರ್ಷನೂ ನಿಮ್ಮ ದೇವರಾದ ಯೆಹೋವ ನಿಮ್ಮ ಜೊತೆನೇ ಇದ್ದನು. ಆಗ ನಿಮಗೆ ಯಾವುದಕ್ಕೂ ಕೊರತೆ ಇರಲಿಲ್ಲ”’+ ಅಂದನು. 8 ಹಾಗಾಗಿ ನಾವು ನಮ್ಮ ಸಹೋದರ ಏಸಾವನ ವಂಶದವರು ಇರೋ+ ಸೇಯೀರ್‌ ದೇಶದ ಪಕ್ಕದಿಂದ ಹೋದ್ವಿ. ಆದ್ರೆ ಅರಾಬಾದ ಮಾರ್ಗ, ಏಲತ್‌ ಮತ್ತೆ ಎಚ್ಯೋನ್‌-ಗೆಬೆರ್‌+ ಕಡೆ ಹೋಗಲಿಲ್ಲ.

ಆಮೇಲೆ ನಾವು ಅಲ್ಲಿಂದ ಮೋವಾಬ್‌ ಕಾಡಿಗೆ ಹೋಗೋ ದಾರೀಲಿ ಪ್ರಯಾಣ ಮಾಡಿದ್ವಿ.+ 9 ಯೆಹೋವ ನನಗೆ ‘ಮೋವಾಬ್ಯರನ್ನ ಎದುರು ಹಾಕೊಬೇಡಿ, ಅವ್ರ ಮೇಲೆ ಯುದ್ಧ ಮಾಡಬೇಡಿ. ಲೋಟನ ವಂಶದವರಾದ ಅವ್ರಿಗೆ ನಾನು ಆರ್‌* ಪಟ್ಟಣವನ್ನ ಆಸ್ತಿಯಾಗಿ ಕೊಟ್ಟಿರೋದ್ರಿಂದ+ ನಿಮಗೆ ಅಲ್ಲಿ ಸ್ವಲ್ಪ ಜಾಗನೂ ಕೊಡಲ್ಲ. 10 (ಮೊದ್ಲು ಅಲ್ಲಿ ಏಮಿಯರು+ ಇದ್ರು. ಅವರು ಅನಾಕ್ಯರ ತರ ಬಲಿಷ್ಠರಾಗಿ, ಎತ್ತರವಾಗಿ ಇದ್ರು. ಅವರು ತುಂಬ ಜನ ಇದ್ರು. 11 ರೆಫಾಯರು+ ಕೂಡ ಅನಾಕ್ಯರ+ ತರ ಇದ್ರು. ಮೋವಾಬ್ಯರು ರೆಫಾಯರನ್ನ ಏಮಿಯರು ಅಂತ ಕರಿತಿದ್ರು. 12 ಸೇಯೀರಲ್ಲಿ ಮೊದ್ಲು ಹೋರಿಯರು+ ಇದ್ರು. ಏಸಾವನ ವಂಶದವರು ಹೋರಿಯರನ್ನ ಸೋಲಿಸಿ ನಾಶಮಾಡಿ ಅವ್ರ ಪ್ರದೇಶದಲ್ಲಿ ಇದ್ರು.+ ಅದೇ ರೀತಿ ಇಸ್ರಾಯೇಲ್ಯರು ಕೂಡ ತಮ್ಮ ಸೊತ್ತಾಗಿರೋ ದೇಶವನ್ನ ವಶ ಮಾಡ್ಕೊಳ್ತಾರೆ. ಯಾಕಂದ್ರೆ ಅವ್ರಿಗೆ ಯೆಹೋವ ಆ ದೇಶ ಕೊಡ್ತಾನೆ.) 13 ನೀವೀಗ ಹೋಗಿ ಜೆರೆದ್‌ ಕಣಿವೆ+ ದಾಟಿ’ ಅಂದನು. ನಾವು ದಾಟಿದ್ವಿ. 14 ಕಾದೇಶ್‌-ಬರ್ನೇಯದಿಂದ ನಡ್ಕೊಂಡು ಪ್ರಯಾಣ ಮಾಡ್ತಾ ಜೆರೆದ್‌ ಕಣಿವೆ ದಾಟೋಕೆ 38 ವರ್ಷ ಹಿಡಿತು. ಅಷ್ಟರಲ್ಲಿ ಯೆಹೋವ ಮಾತು ಕೊಟ್ಟ ಹಾಗೇ ಆ ಪೀಳಿಗೆ ಜನ್ರಲ್ಲಿ ಯುದ್ಧಕ್ಕೆ ಯೋಗ್ಯರಾದ ಎಲ್ಲ ಗಂಡಸರು ಸತ್ತು ಹೋಗಿದ್ರು.+ 15 ಅವ್ರನ್ನೆಲ್ಲ ಪಾಳೆಯದಿಂದ ಪೂರ್ತಿ ನಾಶಮಾಡೋ ತನಕ ಯೆಹೋವನ ಕೈ ಅವ್ರ ವಿರುದ್ಧ ಇತ್ತು.+

16 ಜನ್ರಲ್ಲಿ ಯುದ್ಧಕ್ಕೆ ಯೋಗ್ಯರಾದ ಎಲ್ಲ ಗಂಡಸರು ಸತ್ತುಹೋದ+ ತಕ್ಷಣ 17 ಯೆಹೋವ ಮತ್ತೆ ನನ್ನ ಜೊತೆ ಮಾತಾಡಿ 18 ‘ಇವತ್ತು ನೀವು ಮೋವಾಬ್‌ ಪ್ರದೇಶವಾದ ಆರ್‌ ಪಟ್ಟಣದ ಹತ್ರದಿಂದ ಹೋಗಬೇಕು. 19 ಅಮ್ಮೋನಿಯರ ದೇಶದ ಹತ್ರ ಹೋದಾಗ ಅವ್ರನ್ನ ಪೀಡಿಸಬೇಡಿ, ಅವ್ರಿಗೆ ಕೋಪ ಬರಿಸಬೇಡಿ. ನಾನು ಲೋಟನ ವಂಶದವರಾದ ಅಮ್ಮೋನಿಯರಿಗೆ ಆ ದೇಶವನ್ನ ಆಸ್ತಿಯಾಗಿ ಕೊಟ್ಟಿದ್ದೀನಿ. ಹಾಗಾಗಿ ನಿಮಗೆ ಅಲ್ಲಿ ಸ್ವಲ್ಪ ಜಾಗನೂ ಕೊಡಲ್ಲ.+ 20 ಇದು ಕೂಡ ಮೊದ್ಲು ರೆಫಾಯರ+ ದೇಶವಾಗಿತ್ತು. (ಮೊದ್ಲು ಅಲ್ಲಿ ರೆಫಾಯರು ಇದ್ರು. ಅವ್ರನ್ನ ಅಮ್ಮೋನಿಯರು ಜಂಜುಮ್ಯರು ಅಂತ ಕರಿತಿದ್ರು. 21 ಜಂಜುಮ್ಯರಿಗೆ ಅನಾಕ್ಯರ+ ತರ ತುಂಬ ಶಕ್ತಿ ಇತ್ತು, ತುಂಬ ಎತ್ರವಾಗಿದ್ರು. ಅವರು ತುಂಬ ಜನ ಇದ್ರು. ಆದ್ರೆ ಅವ್ರನ್ನ ನಾಶ ಮಾಡೋಕೆ ಯೆಹೋವ ಅಮ್ಮೋನಿಯರಿಗೆ ಸಹಾಯ ಮಾಡಿದನು. ಆಮೇಲೆ ಅಮ್ಮೋನಿಯರು ಅವ್ರ ದೇಶದಲ್ಲಿ ಇದ್ರು. 22 ಇದೇ ತರ ಸೇಯೀರಲ್ಲಿ+ ಮುಂಚೆ ಇದ್ದ ಹೋರಿಯರನ್ನ ನಾಶ ಮಾಡೋಕೆ ದೇವರು ಏಸಾವನ ವಂಶದವ್ರಿಗೆ ಸಹಾಯ ಮಾಡಿದನು. ಅವರು ಹೋರಿಯರನ್ನ ಪೂರ್ತಿ ನಾಶಮಾಡಿ+ ಇವತ್ತಿನ ತನಕ ಸೇಯೀರಲ್ಲೇ ವಾಸ ಇದ್ದಾರೆ. 23 ಗಾಜಾ+ ಪಟ್ಟಣದ ತನಕ ಇದ್ದ ಹಳ್ಳಿಗಳಲ್ಲಿ ಮೊದ್ಲು ಅವ್ವೀಮರು ಇದ್ರು. ಆಮೇಲೆ ಅವ್ರನ್ನ ಕಫ್ತೋರಿನಿಂದ* ಬಂದ ಕಫ್ತೋರ್ಯರು+ ನಾಶಮಾಡಿ ಅವ್ರ ಹಳ್ಳಿಗಳಲ್ಲಿ ವಾಸ ಮಾಡಿದ್ರು.)

24 ನೀವೀಗ ಅರ್ನೋನ್‌ ಕಣಿವೆ+ ದಾಟಿ. ಅಮೋರಿಯನೂ ಹೆಷ್ಬೋನಿನ ರಾಜನೂ ಆದ ಸೀಹೋನನನ್ನ ನಿಮ್ಮ ಕೈಗೆ ಕೊಟ್ಟಿದ್ದೀನಿ.+ ಹಾಗಾಗಿ ಅವನ ವಿರುದ್ಧ ಯುದ್ಧಮಾಡಿ ಅವನ ದೇಶ ವಶ ಮಾಡ್ಕೊಳ್ಳಿ. 25 ಇವತ್ತಿಂದ ಭೂಮಿಯಲ್ಲಿರೋ ಎಲ್ಲ ಜನ ನಿಮ್ಮ ಸುದ್ದಿ ಕೇಳಿ ಹೆದರೋ ತರ ಮಾಡ್ತೀನಿ. ಅವರು ನಿಮಗೆ ಅಂಜಿ ಗಡಗಡ ನಡುಗ್ತಾರೆ.* ಅವ್ರ ನೆಮ್ಮದಿ ಹಾಳಾಗುತ್ತೆ’+ ಅಂದನು.

26 ನಾನು ಕೆದೇಮೋತ್‌+ ಕಾಡಿಂದ ಸಂದೇಶವಾಹಕರ ಮೂಲಕ ಹೆಷ್ಬೋನಿನ ರಾಜ ಸೀಹೋನನಿಗೆ ಶಾಂತಿಯ ಸಂದೇಶ ಕಳಿಸಿ+ 27 ‘ದಯವಿಟ್ಟು ನಿನ್ನ ದೇಶವನ್ನ ದಾಟಿ ಹೋಗೋಕೆ ನಮಗೆ ಅನುಮತಿ ಕೊಡು. ಬಲಕ್ಕಾಗ್ಲಿ ಎಡಕ್ಕಾಗ್ಲಿ ತಿರುಗದೆ ಹೆದ್ದಾರಿಯಲ್ಲೇ+ 28 ನಡ್ಕೊಂಡು ಹೋಗ್ತೀವಿ. ಹಣ ಕೊಟ್ಟು ಆಹಾರ, ನೀರು ತಗೋತೀವಿ. ನಮಗೆ ನಿನ್ನ ದೇಶ ದಾಟೋಕೆ ಬಿಟ್ರೆ ಸಾಕು. 29 ಸೇಯೀರಿನಲ್ಲಿರೋ ಏಸಾವನ ವಂಶದವರು, ಆರ್‌ನಲ್ಲಿರೋ ಮೋವಾಬ್ಯರು ನಮ್ಮನ್ನ ಬಿಟ್ಟ ಹಾಗೆ ನೀನೂ ಯೋರ್ದನ್‌ ತನಕ ಇರೋ ದೇಶನ ದಾಟಿ ಹೋಗೋಕೆ ನಮ್ಮನ್ನ ಬಿಡು. ನಾವು ಯೋರ್ದನ್‌ ನದಿ ದಾಟಿ ನಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋಗ್ತೀವಿ’ ಅಂತ ಕೇಳ್ಕೊಂಡೆ. 30 ಆದ್ರೆ ಹೆಷ್ಬೋನಿನ ರಾಜ ಸೀಹೋನ ನಮಗೆ ಅನುಮತಿ ಕೊಡಲಿಲ್ಲ. ಮೊಂಡನಾಗಿದ್ದ ಸೀಹೋನ ತನ್ನ ಹೃದಯ ಕಠಿಣ ಮಾಡ್ಕೊಂಡ.+ ನಮ್ಮ ದೇವರಾದ ಯೆಹೋವ ಅವನನ್ನ ಹಾಗೇ ಇರೋಕೆ ಬಿಟ್ಟನು. ಯಾಕಂದ್ರೆ ದೇವರು ಅವನನ್ನ ನಮ್ಮ ಕೈಗೆ ಒಪ್ಪಿಸಬೇಕಂತ ಇದ್ದನು. ಈಗ ಹಾಗೇ ಆಯ್ತಲ್ವಾ?+

31 ಯೆಹೋವ ನನಗೆ ‘ಸೀಹೋನನನ್ನ ಅವನ ದೇಶವನ್ನ ನಿನ್ನ ಕೈಗೆ ಕೊಟ್ಟಿದ್ದೀನಿ. ಈಗ ಅವನ ದೇಶವನ್ನ ವಶ ಮಾಡ್ಕೊಳ್ಳೋಕೆ ಶುರುಮಾಡು’ + ಅಂದ. 32 ಸೀಹೋನ ಇಡೀ ಸೈನ್ಯದ ಜೊತೆ ಯಹಜಿಗೆ+ ಬಂದು ನಮ್ಮ ಮೇಲೆ ಯುದ್ಧ ಮಾಡಿದಾಗ 33 ನಮ್ಮ ದೇವರಾದ ಯೆಹೋವ ಅವನನ್ನ ನಮ್ಮ ಕೈಗೆ ಕೊಟ್ಟನು. ಹಾಗಾಗಿ ಅವನನ್ನ ಅವನ ಮಕ್ಕಳನ್ನ ಎಲ್ಲ ಸೈನಿಕರನ್ನ ಸೋಲಿಸಿದ್ವಿ. 34 ಅವನ ಎಲ್ಲ ಪಟ್ಟಣಗಳನ್ನ ವಶ ಮಾಡ್ಕೊಂಡು ಪೂರ್ತಿ ನಾಶ ಮಾಡಿದ್ವಿ. ಗಂಡಸರು, ಹೆಂಗಸರು, ಮಕ್ಕಳು ಎಲ್ರನ್ನ ನಾಶ ಮಾಡಿದ್ವಿ. ಒಬ್ರನ್ನೂ ಉಳಿಸಲಿಲ್ಲ.+ 35 ನಮಗಾಗಿ ಪ್ರಾಣಿಗಳನ್ನ ಮಾತ್ರ ಉಳಿಸಿ ಆ ಪಟ್ಟಣಗಳಿಂದ ಕೊಳ್ಳೆ ತಂದ್ವಿ. 36 ಅರ್ನೋನ್‌ ಕಣಿವೆಯ ಅಂಚಿನಲ್ಲಿರೋ ಅರೋಯೇರ್‌+ ಪಟ್ಟಣದಿಂದ ಹಿಡಿದು (ಕಣಿವೆಯಲ್ಲಿರೋ ಪಟ್ಟಣವನ್ನೂ ಸೇರಿಸಿ) ಗಿಲ್ಯಾದಿನ ತನಕ ಯಾವ ಪಟ್ಟಣವನ್ನ ಸೋಲಿಸೋಕೂ ನಮಗೆ ಕಷ್ಟ ಆಗಲಿಲ್ಲ. ಯಾಕಂದ್ರೆ ನಮ್ಮ ದೇವರಾದ ಯೆಹೋವ ಆ ಎಲ್ಲ ಪಟ್ಟಣಗಳನ್ನ ನಮ್ಮ ವಶಕ್ಕೆ ಕೊಟ್ಟನು.+ 37 ಆದ್ರೆ ಅಮ್ಮೋನಿಯರಿಗೆ+ ಸೇರಿದ ಇಡೀ ಯಬ್ಬೋಕ್‌ ಕಣಿವೆ+ ಹತ್ರ, ಬೆಟ್ಟ ಪ್ರದೇಶದಲ್ಲಿರೋ ಪಟ್ಟಣಗಳ ಹತ್ರ ನಾವು ಹೋಗಲಿಲ್ಲ. ನಮ್ಮ ದೇವರಾದ ಯೆಹೋವ ಹೋಗಬಾರದು ಅಂತ ಹೇಳಿದ ಯಾವ ಪ್ರದೇಶದ ಹತ್ರನೂ ನಾವು ಹೋಗಲಿಲ್ಲ.

3 ಆಮೇಲೆ ನಾವು ಅಲ್ಲಿಂದ ತಿರುಗಿ ಬಾಷಾನಿನ ದಾರಿ ಹಿಡಿದ್ವಿ. ಬಾಷಾನಿನ ರಾಜ ಓಗ ಇಡೀ ಸೈನ್ಯದ ಜೊತೆ ನಮ್ಮ ಮೇಲೆ ಯುದ್ಧ ಮಾಡೋಕೆ ಎದ್ರೈ+ ಅನ್ನೋ ಜಾಗಕ್ಕೆ ಬಂದ. 2 ಆಗ ಯೆಹೋವ ‘ಇವನಿಗೆ ಹೆದರಬೇಡ. ಇವನನ್ನ ಇವನ ಸೈನ್ಯವನ್ನ ಇವನ ದೇಶವನ್ನ ನಿನ್ನ ಕೈಗೆ ಕೊಡ್ತೀನಿ. ಹೆಷ್ಬೋನಲ್ಲಿ ವಾಸವಾಗಿದ್ದ ಅಮೋರಿಯರ ರಾಜ ಸೀಹೋನನಿಗೆ ಒಂದು ಗತಿ ಕಾಣಿಸಿದ ತರ ನೀನು ಇವನಿಗೂ ಗತಿ ಕಾಣಿಸ್ತೀಯ’ ಅಂದನು. 3 ನಮ್ಮ ದೇವರಾದ ಯೆಹೋವ ಬಾಷಾನಿನ ರಾಜ ಓಗನನ್ನ ಎಲ್ಲಾ ಸೈನಿಕರನ್ನ ನಮ್ಮ ಕೈಗೆ ಕೊಟ್ಟನು. ಅವ್ರನ್ನ ಕೊಲ್ತಾ ಹೋದ್ವಿ, ಒಬ್ರನ್ನೂ ಉಳಿಸಲಿಲ್ಲ. 4 ಆಮೇಲೆ ಅವನ ಎಲ್ಲ ಪಟ್ಟಣಗಳನ್ನ ವಶ ಮಾಡ್ಕೊಂಡ್ವಿ. ಇಡೀ ಅರ್ಗೋಬ್‌ ಪ್ರದೇಶ ಅಂದ್ರೆ ಬಾಷಾನಿನ ರಾಜ ಓಗನ ರಾಜ್ಯದ 60 ಪಟ್ಟಣಗಳನ್ನ ವಶ ಮಾಡ್ಕೊಂಡ್ವಿ. ಅಲ್ಲಿ ನಾವು ಸೋಲಿಸದ ಪಟ್ಟಣ ಒಂದೂ ಇರಲಿಲ್ಲ.+ 5 ಈ ಎಲ್ಲ ಪಟ್ಟಣಗಳಿಗೆ ಎತ್ರವಾದ ಭದ್ರ ಕೋಟೆಗಳು, ಬಾಗಿಲುಗಳು, ಬಾಗಿಲಿಗೆ ಕಂಬಿಗಳು ಇದ್ವು. ತುಂಬ ಚಿಕ್ಕಚಿಕ್ಕ ಊರುಗಳನ್ನ ಸಹ ವಶ ಮಾಡ್ಕೊಂಡ್ವಿ. 6 ನಾವು ಹೆಷ್ಬೋನಿನ ರಾಜ ಸೀಹೋನನಿಗೂ ಅವನ ರಾಜ್ಯಕ್ಕೂ ಮಾಡಿದ ಹಾಗೇ ಬಾಷಾನಿನ ರಾಜ ಓಗನಿಗೂ ಮಾಡಿದ್ವಿ. ಅವನಿಗೆ ಸೇರಿದ ಈ ಎಲ್ಲ ಪಟ್ಟಣಗಳನ್ನ, ಅವುಗಳಲ್ಲಿದ್ದ ಸ್ತ್ರೀಪುರುಷರನ್ನ, ಮಕ್ಕಳನ್ನ ಪೂರ್ತಿ ನಾಶಮಾಡಿದ್ವಿ.+ 7 ಅಲ್ಲಿನ ಎಲ್ಲ ಪ್ರಾಣಿಗಳನ್ನ, ಕೊಳ್ಳೆಯನ್ನ ತಗೊಂಡ್ವಿ.

8 ಹೀಗೆ ನಾವು ಯೋರ್ದನ್‌ ಪ್ರದೇಶದಲ್ಲಿದ್ದ ಅಮೋರಿಯರ ಇಬ್ರು ರಾಜರ+ ಪ್ರದೇಶವನ್ನ ವಶ ಮಾಡ್ಕೊಂಡ್ವಿ. ಅವರ ಪ್ರದೇಶ ಅರ್ನೋನ್‌ ಕಣಿವೆಯಿಂದ ಹೆರ್ಮೋನ್‌ ಬೆಟ್ಟ+ ತನಕ ಇತ್ತು. 9 (ಸೀದೋನ್ಯರು ಹೆರ್ಮೋನ್‌ ಬೆಟ್ಟನ ಸಿರ್ಯೋನ್‌ ಅಂತ ಕರೀತಿದ್ರು. ಅಮೋರಿಯರು ಅದನ್ನ ಸೆನೀರ್‌ ಅಂತ ಕರೀತಿದ್ರು.) 10 ಹಾಗಾಗಿ ಪ್ರಸ್ಥಭೂಮಿಯ* ಎಲ್ಲ ಪಟ್ಟಣಗಳು, ಇಡೀ ಗಿಲ್ಯಾದ್‌, ಸಲ್ಕಾ ಮತ್ತೆ ಎದ್ರೈ+ ಪಟ್ಟಣಗಳ ತನಕ ಇಡೀ ಬಾಷಾನ್‌ ನಮ್ಮ ವಶ ಆಯ್ತು. ಸಲ್ಕಾ ಮತ್ತೆ ಎದ್ರೈ ಪಟ್ಟಣಗಳು ಬಾಷಾನಿನಲ್ಲಿದ್ದ ರಾಜ ಓಗನ ರಾಜ್ಯಕ್ಕೆ ಸೇರಿತ್ತು. 11 ಬಾಷಾನಿನ ರಾಜ ಓಗ ರೆಫಾಯರಲ್ಲಿ ಕೊನೆಯವನು. ಅವನಿಗೆ ಮಾಡಿದ ಕಬ್ಬಿಣದ* ಚಟ್ಟ* ಇನ್ನೂ ಅಮ್ಮೋನಿಯರ ರಬ್ಬಾ ಪಟ್ಟಣದಲ್ಲಿದೆ. ಅದು ಒಂಬತ್ತು ಮೊಳ* ಉದ್ದ, ನಾಲ್ಕು ಮೊಳ ಅಗಲ ಇತ್ತು. 12 ನಾವು ಇನ್ನೊಂದು ಪ್ರದೇಶವನ್ನ ಕೂಡ ವಶ ಮಾಡ್ಕೊಂಡ್ವಿ. ಅದ್ರ ಗಡಿ ಅರ್ನೋನ್‌ ಕಣಿವೆಯ ಪಕ್ಕದಲ್ಲಿರೋ ಅರೋಯೇರ್‌+ ಪಟ್ಟಣದಿಂದ ಶುರು ಆಗಿ ಗಿಲ್ಯಾದಿನ ಬೆಟ್ಟ ಪ್ರದೇಶದಲ್ಲಿ ಅರ್ಧ ಭಾಗ ತನಕ ಇದೆ. ನಾನು ಅಲ್ಲಿನ ಪಟ್ಟಣಗಳನ್ನ ರೂಬೇನ್ಯರಿಗೆ ಗಾದ್ಯರಿಗೆ ಕೊಟ್ಟೆ.+ 13 ಗಿಲ್ಯಾದಿನ ಉಳಿದ ಪ್ರದೇಶವನ್ನ ಓಗನ ರಾಜ್ಯವಾಗಿದ್ದ ಇಡೀ ಬಾಷಾನನ್ನ ಮನಸ್ಸೆ ಕುಲದ ಅರ್ಧ ಜನ್ರಿಗೆ ಕೊಟ್ಟೆ.+ ಬಾಷಾನಿಗೆ ಸೇರಿದ ಇಡೀ ಅರ್ಗೋಬ್‌ ಪ್ರದೇಶಕ್ಕೆ ರೆಫಾಯರ ದೇಶ ಅನ್ನೋ ಹೆಸ್ರಿತ್ತು.

14 ಮನಸ್ಸೆಯ ಕುಲದವನಾದ ಯಾಯೀರ+ ಗೆಷೂರ್ಯರ, ಮಾಕಾತ್ಯರ+ ಗಡಿ ತನಕ ಇದ್ದ ಇಡೀ ಅರ್ಗೋಬ್‌+ ಪ್ರದೇಶನ ವಶ ಮಾಡ್ಕೊಂಡ. ಬಾಷಾನಿನ ಆ ಹಳ್ಳಿಗಳಿಗೆ ತನ್ನ ಹೆಸ್ರನ್ನೇ ಇಟ್ಟು ಹವತ್‌-ಯಾಯೀರ್‌*+ ಅಂತ ಕರೆದ. ಇವತ್ತಿನ ತನಕ ಆ ಹಳ್ಳಿಗಳಿಗೆ ಅದೇ ಹೆಸ್ರಿದೆ. 15 ನಾನು ಮಾಕೀರನಿಗೆ ಗಿಲ್ಯಾದನ್ನ ಕೊಟ್ಟೆ.+ 16 ಅಷ್ಟೇ ಅಲ್ಲ ನಾನು ರೂಬೇನ್ಯರಿಗೆ ಗಾದ್ಯರಿಗೆ+ ಕೊಟ್ಟಿರೋ ಪ್ರದೇಶ ಗಿಲ್ಯಾದಿಂದ ಹಿಡಿದು ಅರ್ನೋನ್‌ ಕಣಿವೆ ತನಕ, (ಕಣಿವೆಯ ಮಧ್ಯಭಾಗ ತನಕ ಅದ್ರ ಗಡಿ ಇದೆ) ಯಬ್ಬೋಕ್‌ ಕಣಿವೆ ತನಕ, (ಇದು ಅಮ್ಮೋನಿಯರ ದೇಶದ ಗಡಿ) 17 ಅರಾಬಾ, ಯೋರ್ದನ್‌ ನದಿ, ಅದ್ರ ತೀರದ ತನಕ ಅಂದ್ರೆ ಕಿನ್ನೆರೆತಿಂದ ಅರಾಬಾ ಸಮುದ್ರದ ತನಕ ಇದೆ. ಅರಾಬಾ ಸಮುದ್ರ ಅಂದ್ರೆ ಲವಣ ಸಮುದ್ರ* ಪೂರ್ವದಲ್ಲಿರೋ ಪಿಸ್ಗಾ ಬೆಟ್ಟದ ಇಳಿಜಾರುಗಳ ಕೆಳಗಿದೆ.+

18 ಆಮೇಲೆ ನಾನು ‘ನಿಮ್ಮ ದೇವರಾದ ಯೆಹೋವ ಈ ದೇಶವನ್ನ ನಿಮಗೆ ಕೊಟ್ಟಿದ್ದಾನೆ, ಅದನ್ನ ವಶ ಮಾಡ್ಕೊಳ್ಳಿ. ನಿಮ್ಮಲ್ಲಿ ಶೂರರಾದ ಗಂಡಸರೆಲ್ಲ ಆಯುಧಗಳನ್ನ ತಗೊಂಡು ನಿಮ್ಮ ಸಹೋದರರಾದ ಇಸ್ರಾಯೇಲ್ಯರ ಮುಂದೆ ಹೋಗಿ ಯೋರ್ದನ್‌ ನದಿ ದಾಟಿ.+ 19 ನಿಮ್ಮ ಹೆಂಡತಿ ಮಕ್ಕಳು, ಪ್ರಾಣಿಗಳು ನಾನು ಕೊಟ್ಟಿರೋ ಪಟ್ಟಣಗಳಲ್ಲೇ ಇರಲಿ. ನಿಮ್ಮ ಹತ್ರ ದೊಡ್ಡದೊಡ್ಡ ಪ್ರಾಣಿ ಹಿಂಡು ಇದೆ ಅಂತ ನಂಗೊತ್ತು. 20 ನಿಮ್ಮ ತರ ನಿಮ್ಮ ಸಹೋದರರಿಗೆ ಯೆಹೋವ ವಿಶ್ರಾಂತಿ ಕೊಟ್ಟ ಮೇಲೆ, ನಿಮ್ಮ ದೇವರಾದ ಯೆಹೋವ ಯೋರ್ದನಿನ ಆಚೆ ಅವ್ರಿಗೆ ಕೊಡೋ ದೇಶವನ್ನ ವಶ ಮಾಡ್ಕೊಂಡ ಮೇಲೆ ನಿಮ್ಮಲ್ಲಿ ಪ್ರತಿಯೊಬ್ಬ ತನಗೆ ಆಸ್ತಿಯಾಗಿ ಸಿಕ್ಕಿರೋ ಪ್ರದೇಶಕ್ಕೆ ಹೋಗ್ಲಿ’+ ಅಂತ ಆಜ್ಞೆ ಕೊಟ್ಟೆ.

21 ಆಗ ನಾನು ಯೆಹೋಶುವನಿಗೆ+ ‘ನಿಮ್ಮ ದೇವರಾದ ಯೆಹೋವ ಆ ಇಬ್ರು ರಾಜರನ್ನ ಹೇಗೆ ನಾಶ ಮಾಡಿದ ಅಂತ ನೀನು ಕಣ್ಣಾರೆ ನೋಡಿದ್ಯಲ್ಲಾ. ಯೋರ್ದನಿನ ಆಕಡೆ ಇರೋ ಅಂದ್ರೆ ನೀನು ಹೋಗೋ ಎಲ್ಲ ರಾಜ್ಯಗಳನ್ನ ಯೆಹೋವ ಹಾಗೇ ನಾಶ ಮಾಡ್ತಾನೆ.+ 22 ನಿಮಗೋಸ್ಕರ ನಿಮ್ಮ ದೇವರಾದ ಯೆಹೋವನೇ ಯುದ್ಧ ಮಾಡ್ತಾನೆ.+ ಹಾಗಾಗಿ ಅವ್ರಿಗೆ ಹೆದರಬೇಡಿ’ ಅಂದೆ.

23 ಆ ಸಮಯದಲ್ಲಿ ನಾನು ಯೆಹೋವನ ಹತ್ರ ಬೇಡ್ಕೊಳ್ತಾ 24 ‘ವಿಶ್ವದ ರಾಜ ಯೆಹೋವನೇ, ನಿನ್ನ ಸೇವಕನಾದ ನನಗೆ ನಿನ್ನ ಶ್ರೇಷ್ಠತೆಯನ್ನ, ನಿನ್ನ ಕೈಗಳಿಗಿರೋ+ ಶಕ್ತಿನ ತೋರಿಸೋಕೆ ಶುರು ಮಾಡಿದ್ದೀಯ. ನಿನ್ನ ಹಾಗೆ ದೊಡ್ಡ ದೊಡ್ಡ ಅದ್ಭುತಗಳನ್ನ ಮಾಡೋಕೆ ಆಕಾಶದಲ್ಲಾಗ್ಲಿ ಭೂಮಿಯಲ್ಲಾಗ್ಲಿ ಬೇರೆ ಯಾವ ದೇವರಿಗಾದ್ರೂ ಆಗುತ್ತಾ?+ 25 ದೇವರೇ, ಈ ಯೋರ್ದನ್‌ ನದಿ ದಾಟಿ ಆ ಒಳ್ಳೇ ದೇಶಕ್ಕೆ ಹೋಗೋಕೆ ನನಗೆ ದಯವಿಟ್ಟು ಅನುಮತಿ ಕೊಡು. ಆ ಸುಂದರ ಬೆಟ್ಟ ಪ್ರದೇಶವನ್ನ ಲೆಬನೋನನ್ನ ನೋಡೋಕೆ ನನಗೆ ಒಂದು ಅವಕಾಶ ಕೊಡು’ + ಅಂತ ಬೇಡ್ಕೊಂಡೆ. 26 ಆದ್ರೆ ನಿಮ್ಮಿಂದಾಗಿ ಯೆಹೋವನಿಗೆ ಇನ್ನೂ ನನ್ನ ಮೇಲೆ ತುಂಬ ಕೋಪ ಇತ್ತು.+ ಹಾಗಾಗಿ ಆತನು ಒಪ್ಪಲಿಲ್ಲ. ಯೆಹೋವ ನನಗೆ ‘ಸಾಕು! ಈ ವಿಷ್ಯದ ಬಗ್ಗೆ ಇನ್ನು ಯಾವತ್ತೂ ನನ್ನ ಹತ್ರ ಮಾತಾಡಬೇಡ. 27 ನೀನು ಯೋರ್ದನನ್ನ ದಾಟಬಾರದು. ಆದ್ರೆ ಪಿಸ್ಗಾ ಬೆಟ್ಟದ+ ತುದಿಗೆ ಹೋಗಿ ಅಲ್ಲಿಂದ ಪಶ್ಚಿಮ, ಉತ್ತರ, ದಕ್ಷಿಣ, ಪೂರ್ವದಲ್ಲಿರೋ ಆ ದೇಶವನ್ನ ಕಣ್ತುಂಬ ನೋಡು.+ 28 ಯೆಹೋಶುವನಿಗೆ ಮುಂದಾಳತ್ವ ವಹಿಸೋ ಜವಾಬ್ದಾರಿ ಕೊಡು.+ ಅವನು ಜನ್ರನ್ನ ಕರ್ಕೊಂಡು ಯೋರ್ದನನ್ನ ದಾಟ್ತಾನೆ.+ ನೀನು ನೋಡೋ ಆ ದೇಶನ ಅವರು ಆಸ್ತಿಯಾಗಿ ಪಡಿಯೋಕೆ ಅವನು ಸಹಾಯ ಮಾಡ್ತಾನೆ. ಹಾಗಾಗಿ ಅವನನ್ನ ಪ್ರೋತ್ಸಾಹಿಸು, ಧೈರ್ಯ ತುಂಬು’ ಅಂದನು. 29 ನಾವು ಬೇತ್‌-ಪೆಗೋರಿಗೆ ಎದುರಲ್ಲಿರೋ ಕಣಿವೆಯಲ್ಲಿ ಇದ್ದಾಗ ಇಷ್ಟೆಲ್ಲ ಆಯ್ತು.+

4 ಇಸ್ರಾಯೇಲ್ಯರೇ, ನಾನು ನಿಮಗೆ ಕಲಿಸ್ತಿರೋ ನಿಯಮಗಳನ್ನ, ತೀರ್ಪುಗಳನ್ನ ಗಮನಕೊಟ್ಟು ಕೇಳಿ, ಅದ್ರ ಪ್ರಕಾರ ನಡೀರಿ. ಆಗ ತುಂಬ ವರ್ಷ ಬದುಕ್ತೀರ.+ ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಕೊಡೋ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಳ್ತೀರ. 2 ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ನಾನು ತಿಳಿಸ್ತಾ ಇದ್ದೀನಿ. ನೀವು ಅದನ್ನೆಲ್ಲ ಪಾಲಿಸಬೇಕು. ಆ ಆಜ್ಞೆಗಳಿಗೆ ಏನೂ ಸೇರಿಸಬಾರದು, ಏನೂ ತೆಗಿಬಾರದು.+

3 ಇಸ್ರಾಯೇಲ್ಯರಲ್ಲಿ ಯಾರೆಲ್ಲ ಪೆಗೋರದ ಬಾಳನನ್ನ ಆರಾಧಿಸಿದ್ರೋ+ ಅವ್ರಿಗೆ ಯೆಹೋವ ಏನು ಮಾಡಿದ ಅಂತ ಕಣ್ಣಾರೆ ನೋಡಿದ್ದೀರ. ನಿಮ್ಮ ದೇವರಾದ ಯೆಹೋವ ಅವ್ರನ್ನೆಲ್ಲ ನಾಶ ಮಾಡಿದನು. 4 ಆದ್ರೆ ನೀವು ದೇವರಾದ ಯೆಹೋವನನ್ನ ಗಟ್ಟಿಯಾಗಿ ಹಿಡ್ಕೊಂಡಿದ್ದೀರ. ಅದಕ್ಕೇ ಇವತ್ತಿನ ತನಕ ಬದುಕಿದ್ದೀರ. 5 ನನ್ನ ದೇವರಾದ ಯೆಹೋವ ನನಗೆ ಹೇಳಿದ ಹಾಗೇ ನಿಮಗೆ ಆತನ ಎಲ್ಲ ಆಜ್ಞೆಗಳನ್ನ, ತೀರ್ಪುಗಳನ್ನ ಕಲಿಸಿದ್ದೀನಿ.+ ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ಅದರ ಪ್ರಕಾರನೇ ನಡಿಬೇಕು. 6 ಗಮನಕೊಟ್ಟು ಅದನ್ನೆಲ್ಲ ಪಾಲಿಸಬೇಕು.+ ಆಗ ಆ ನಿಯಮಗಳ ಬಗ್ಗೆ ಕೇಳಿಸ್ಕೊಳ್ಳೋ ಜನ್ರಿಗೆ ನೀವೆಷ್ಟು ವಿವೇಕಿಗಳು,+ ತಿಳುವಳಿಕೆ+ ಇರೋರು ಅಂತ ಗೊತ್ತಾಗುತ್ತೆ. ಆ ಜನ ನಿಮ್ಮ ಬಗ್ಗೆ ‘ಈ ದೊಡ್ಡ ಜನಾಂಗದವರು ನಿಜಕ್ಕೂ ತುಂಬಾ ವಿವೇಕಿಗಳು, ತಿಳುವಳಿಕೆ ಇರೋರು’ + ಅಂತ ಮಾತಾಡ್ಕೊಳ್ತಾರೆ. 7 ನಮ್ಮ ದೇವರಾದ ಯೆಹೋವನಿಗೆ ಯಾವಾಗ ಬೇಡಿದ್ರೂ ಆತನು ಕೇಳಿಸ್ಕೊಳ್ತಾನೆ, ನಮಗೆ ಹತ್ರ ಇರ್ತಾನೆ. ಬೇರೆ ಯಾವ ದೊಡ್ಡ ಜನಾಂಗಕ್ಕಾದ್ರೂ ಅವ್ರ ದೇವರುಗಳು ಇಷ್ಟು ಹತ್ರ ಇದ್ದಾರಾ?+ 8 ನಾನು ಇವತ್ತು ನಿಮಗೆ ಕೊಡ್ತಿರೋ ನಿಯಮ ಪುಸ್ತಕದಲ್ಲಿ ಇರೋ ನೀತಿಯ ಎಲ್ಲಾ ನಿಯಮಗಳು, ತೀರ್ಪುಗಳು ಬೇರೆ ಯಾವ ದೊಡ್ಡ ಜನಾಂಗಕ್ಕಾದ್ರೂ ಇದ್ಯಾ?+

9 ನೀವು ಕಣ್ಣಾರೆ ನೋಡಿದ ವಿಷ್ಯಗಳನ್ನ ಮರಿಬೇಡಿ. ಆ ವಿಷ್ಯಗಳು ನಿಮ್ಮ ಜೀವನಪೂರ್ತಿ ಹೃದಯದಲ್ಲಿ ಇರೋ ತರ ನೋಡ್ಕೊಳ್ಳಿ. ಅದನೆಲ್ಲ ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೇಳಿ.+ 10 ಹೋರೇಬಿನಲ್ಲಿ ನಿಮ್ಮ ದೇವರಾದ ಯೆಹೋವನ ಮುಂದೆ ನಿಂತ ದಿನ ಯೆಹೋವ ನನಗೆ ‘ಜನ್ರನ್ನ ನನ್ನ ಹತ್ರ ಸೇರಿಸು. ಅವರು ನನ್ನ ಮಾತುಗಳನ್ನ ಕೇಳಿಸ್ಕೊಳ್ಳಲಿ.+ ಅವರು ಬದುಕಿರೋಷ್ಟು ದಿನ ನನಗೆ ಭಯಪಡೋಕೆ ಕಲಿತಾರೆ,+ ತಮ್ಮ ಮಕ್ಕಳಿಗೂ ಅದನ್ನ ಕಲಿಸ್ತಾರೆ’ + ಅಂದನು.

11 ನೀವು ಬೆಟ್ಟದ ಹತ್ರ ಬಂದು ಅದ್ರ ಬುಡದಲ್ಲಿ ನಿಂತ್ಕೊಂಡ್ರಿ. ಬೆಟ್ಟದಲ್ಲಿ ಬೆಂಕಿ ಹೊತ್ತಿ ಉರಿತಿತ್ತು. ಅದ್ರ ಜ್ವಾಲೆ ಆಕಾಶ ಮುಟ್ತಿತ್ತು. ಆಕಾಶದಲ್ಲಿ ಮೋಡ ಮುಚ್ಚಿತ್ತು, ಕತ್ತಲು ಕವಿದಿತ್ತು.+ 12 ಆಗ ಯೆಹೋವ ಬೆಂಕಿ ಒಳಗಿಂದ ನಿಮ್ಮ ಜೊತೆ ಮಾತಾಡಿದನು.+ ಆತನ ಮಾತು ಕೇಳಿಸಿದ್ರೂ+ ರೂಪ ಕಾಣಿಸಲಿಲ್ಲ.+ 13 ಆಮೇಲೆ ತನ್ನ ಒಪ್ಪಂದವನ್ನ*+ ಅಂದ್ರೆ 10 ಆಜ್ಞೆಗಳನ್ನ*+ ನಿಮಗೆ ಕೊಟ್ಟು ಪಾಲಿಸೋಕೆ ಹೇಳಿದನು. ಆ 10 ಆಜ್ಞೆಗಳನ್ನ ಆತನು ಎರಡು ಕಲ್ಲಿನ ಹಲಗೆ ಮೇಲೆ ಬರೆದನು.+ 14 ಆಗ ಯೆಹೋವ ಆತನ ನಿಯಮಗಳನ್ನ, ತೀರ್ಪುಗಳನ್ನ ನಿಮಗೆ ಕಲಿಸಬೇಕಂತ ನನಗೆ ಆಜ್ಞೆ ಕೊಟ್ಟನು. ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ಅದನ್ನ ಪಾಲಿಸಬೇಕು.

15 ಹೋರೇಬಿನಲ್ಲಿ ಯೆಹೋವ ಬೆಂಕಿ ಮಧ್ಯದಿಂದ ನಿಮ್ಮ ಜೊತೆ ಮಾತಾಡಿದಾಗ ಆತನ ರೂಪವನ್ನ ನೀವು ನೋಡಲಿಲ್ಲ. ಹಾಗಾಗಿ ತುಂಬ ಜಾಗ್ರತೆ ವಹಿಸಬೇಕು, 16 ಕೆತ್ತಿದ ಮೂರ್ತಿ ಮಾಡ್ಕೊಬೇಡಿ, ಅವುಗಳನ್ನ ಸಂಕೇತವಾಗಿ ಉಪಯೋಗಿಸಿ ಭ್ರಷ್ಟರಾಗಬೇಡಿ. ಗಂಡು ಅಥವಾ ಹೆಣ್ಣಿನ ರೂಪ ಆಗ್ಲಿ,*+ 17 ಭೂಮಿಯಲ್ಲಿರೋ ಯಾವುದೇ ಪ್ರಾಣಿ ರೂಪ ಆಗ್ಲಿ, ಹಾರಾಡೋ ಯಾವುದೇ ಪಕ್ಷಿ ರೂಪ ಆಗ್ಲಿ,+ 18 ನೆಲದ ಮೇಲೆ ಹರಿದಾಡೋ ಯಾವುದೇ ಜೀವಿ ರೂಪ ಆಗ್ಲಿ, ನೀರಲ್ಲಿರೋ ಯಾವುದೇ ಮೀನಿನ ರೂಪ ಆಗ್ಲಿ ಮಾಡ್ಕೊಬೇಡಿ.+ 19 ನೀವು ಕಣ್ಣೆತ್ತಿ ಆಕಾಶದ ಸೈನ್ಯವನ್ನ ಅಂದ್ರೆ ಸೂರ್ಯ, ಚಂದ್ರ, ನಕ್ಷತ್ರಗಳನ್ನ ನೋಡಿದಾಗ ಅವುಗಳಿಗೆ ಮರುಳಾಗಿ ಅಡ್ಡಬೀಳಬೇಡಿ, ಅವುಗಳ ಸೇವೆ ಮಾಡಬೇಡಿ.+ ನಿಮ್ಮ ದೇವರಾದ ಯೆಹೋವ ಅದನ್ನೆಲ್ಲ ಭೂಮಿಯಲ್ಲಿರೋ ಎಲ್ಲ ಜನ್ರಿಗೋಸ್ಕರ ಕೊಟ್ಟಿದ್ದಾನೆ. 20 ಕಬ್ಬಿಣ ಕರಗಿಸೋ ಕುಲುಮೆ ತರ ಇದ್ದ ಈಜಿಪ್ಟಲ್ಲಿ ತುಂಬ ಕಷ್ಟ ಪಟ್ಟಿದ್ರಿ. ಆದ್ರೆ ಯೆಹೋವ ನಿಮ್ಮನ್ನ ತನ್ನ ಸೊತ್ತಾಗಿ ಮಾಡ್ಕೊಳ್ಳೋಕೆ ಅಲ್ಲಿಂದ ಬಿಡಿಸ್ಕೊಂಡು ಬಂದನು.+ ಅದೇ ತರ ಇವತ್ತು ನೀವು ಆತನ ಸೊತ್ತಾಗಿದ್ದೀರ.

21 ನಿಮ್ಮಿಂದಾಗಿ ಯೆಹೋವ ನನ್ನ ಮೇಲೆ ಕೋಪ ಮಾಡ್ಕೊಂಡನು.+ ಯೋರ್ದನ್‌ ನದಿ ದಾಟಬಾರದು, ನಿಮಗೆ ಆಸ್ತಿಯಾಗಿ ಕೊಡೋ ಒಳ್ಳೇ ದೇಶಕ್ಕೆ ಹೋಗ್ಲೇ ಬಾರದು ಅಂತ ನಿಮ್ಮ ದೇವರಾದ ಯೆಹೋವ ನನಗೆ ಹೇಳ್ಬಿಟ್ಟಿದ್ದಾನೆ.+ 22 ನಾನು ಈ ದೇಶದಲ್ಲೇ ಸಾಯಬೇಕು. ನಾನು ಯೋರ್ದನ್‌ ನದಿ ದಾಟಿ ಬರಲ್ಲ.+ ಆದ್ರೆ ನೀವು ಯೋರ್ದನ್‌ ದಾಟಿ ಹೋಗಿ ಆ ಒಳ್ಳೇ ದೇಶವನ್ನ ವಶ ಮಾಡ್ಕೊಳ್ತೀರ. 23 ನಿಮ್ಮ ಜೊತೆ ನಿಮ್ಮ ದೇವರಾದ ಯೆಹೋವ ಮಾಡ್ಕೊಂಡ ಒಪ್ಪಂದನ ಯಾವತ್ತೂ ಮರಿಬೇಡಿ.+ ನಿಮ್ಮ ದೇವರಾದ ಯೆಹೋವ ಬೇಡ ಅಂತ ಹೇಳಿದ ಯಾವ ಕೆತ್ತಿದ ಮೂರ್ತಿನೂ ಯಾವುದ್ರ ರೂಪನೂ ಮಾಡ್ಕೊಬೇಡಿ. ಈ ವಿಷ್ಯದಲ್ಲಿ ತುಂಬ ಹುಷಾರಾಗಿರಿ.+ 24 ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಸುಡೋ ಬೆಂಕಿ ತರ.+ ತನ್ನನ್ನ ಮಾತ್ರ ಆರಾಧಿಸಬೇಕಂತ* ಬಯಸೋ* ದೇವರು.+

25 ನೀವು ಮಕ್ಕಳು-ಮೊಮ್ಮಕ್ಕಳನ್ನ ಪಡೆದು ಆ ದೇಶದಲ್ಲಿ ಹೆಚ್ಚು ವರ್ಷ ಬದುಕಿದ ಮೇಲೆ ನಾಶಕ್ಕೆ ನಡಿಸೋ ಕೆಲಸಗಳನ್ನ ಮಾಡಿದ್ರೆ, ಯಾವುದೇ ತರದ ಕೆತ್ತಿದ ಮೂರ್ತಿ ಮಾಡ್ಕೊಂಡ್ರೆ,+ ನಿಮ್ಮ ದೇವರಾದ ಯೆಹೋವನಿಗೆ ಇಷ್ಟ ಆಗದ್ದನ್ನ ಮಾಡಿ ಆತನಿಗೆ ಕೋಪ ಬರಿಸಿದ್ರೆ+ 26 ನಾನು ಇವತ್ತು ಭೂಮಿ, ಆಕಾಶ ಸಾಕ್ಷಿಯಾಗಿಟ್ಟು ಹೇಳ್ತಿನಿ, ನೀವು ಯೋರ್ದನ್‌ ದಾಟಿ ವಶ ಮಾಡ್ಕೊಳ್ಳೋ ಆ ದೇಶದಲ್ಲಿ ಬೇಗ ನಾಶ ಆಗ್ತೀರ. ಆ ದೇಶದಲ್ಲಿ ತುಂಬ ದಿನ ಬದುಕಲ್ಲ. ಪೂರ್ತಿ ನಾಶ ಆಗಿಹೋಗ್ತೀರ.+ 27 ಯೆಹೋವ ನಿಮ್ಮನ್ನ ಬೇರೆ ಜನಾಂಗಗಳಲ್ಲಿ ಚೆದರಿಸಿಬಿಡ್ತಾನೆ.+ ಯೆಹೋವ ನಿಮ್ಮನ್ನ ಯಾವ ದೇಶಗಳಿಗೆ ಓಡಿಸಿಬಿಡ್ತಾನೋ ಅಲ್ಲಿ ನೀವು ಸ್ವಲ್ಪ ಜನ ಮಾತ್ರ ಉಳಿತೀರ.+ 28 ಅಲ್ಲಿ ಮನುಷ್ಯರು ಮರದಿಂದ, ಕಲ್ಲಿಂದ ಮಾಡಿದ ದೇವರುಗಳನ್ನ ಅಂದ್ರೆ ನೋಡೋಕೆ, ಕೇಳೋಕೆ, ತಿನ್ನೋಕೆ, ವಾಸನೆ ತಿಳಿಯೋಕೆ ಆಗದ ದೇವರುಗಳ ಸೇವೆ ಮಾಡಬೇಕಾಗುತ್ತೆ.+

29 ಆದ್ರೆ ನೀವು ಅಲ್ಲಿರುವಾಗ ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್‌ ಬಂದ್ರೆ* ಮತ್ತೆ ನಿಮ್ಮ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ*+ ಆತನಿಗಾಗಿ ವಿಚಾರಿಸಿದ್ರೆ ಆತನು ನಿಮಗೆ ಖಂಡಿತ ಸಿಗ್ತಾನೆ.+ 30 ನೀವು ಆ ಕೆಟ್ಟ ಪರಿಣಾಮಗಳನ್ನೆಲ್ಲ ಅನುಭವಿಸಿ ತುಂಬ ಕಷ್ಟ ನೋವಲ್ಲಿ ಇರುವಾಗ ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್‌ ಬರ್ತಿರ, ಆತನ ಮಾತನ್ನ ಕೇಳ್ತೀರ.+ 31 ನಿಮ್ಮ ದೇವರಾದ ಯೆಹೋವ ಕರುಣಾಮಯಿ.+ ಆತನು ನಿಮ್ಮ ಕೈಬಿಡಲ್ಲ, ನಾಶವಾಗಿ ಹೋಗೋಕೆ ಬಿಡಲ್ಲ. ನಿಮ್ಮ ಪೂರ್ವಜರ ಜೊತೆ ಆತನು ಆಣೆ ಇಟ್ಟು ಮಾಡಿದ ಒಪ್ಪಂದವನ್ನ ಮರಿಯಲ್ಲ.+

32 ದೇವರು ಭೂಮಿ ಮೇಲೆ ಮನುಷ್ಯನನ್ನ ಸೃಷ್ಟಿ ಮಾಡಿದ ಸಮಯದಿಂದ ಇಲ್ಲಿ ತನಕ ಇಂಥ ಮಹಾನ್‌ ಕೆಲಸ ಯಾವತ್ತಾದ್ರೂ ನಡಿದಿದ್ಯಾ ಅಂತ ಯೋಚ್ನೆ ಮಾಡಿ. ಇಂಥ ವಿಷ್ಯನ ಯಾರಾದ್ರೂ ಯಾವತ್ತಾದ್ರೂ ಕೇಳಿಸ್ಕೊಂಡಿದ್ದಾರಾ ಅಂತ ಭೂಮಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ವಿಚಾರಿಸಿ ನೋಡಿ.+ 33 ದೇವರು ಬೆಂಕಿ ಒಳಗಿಂದ ಮಾತಾಡೋದನ್ನ ನೀವು ಕೇಳಿಸ್ಕೊಂಡ ಹಾಗೆ ಬೇರೆ ಯಾರಾದ್ರೂ ಕೇಳಿಸ್ಕೊಂಡು ಜೀವಂತ ಉಳಿದಿದ್ದಾರಾ?+ 34 ನಿಮ್ಮ ದೇವರಾದ ಯೆಹೋವ ಈಜಿಪ್ಟಲ್ಲಿ ನಿಮ್ಮ ಕಣ್ಮುಂದೆನೇ ಅವರಿಗೆ ಶಿಕ್ಷೆ* ಕೊಟ್ಟು, ಸೂಚಕ ಕೆಲಸಗಳನ್ನ ಅದ್ಭುತಗಳನ್ನ ಮಾಡಿ,+ ಯುದ್ಧ ಮಾಡಿ,+ ಮಹಾ ಶಕ್ತಿ+ ಬಲ ತೋರಿಸಿ,* ಭಯಹುಟ್ಟಿಸೋ ಕೆಲಸಗಳನ್ನ+ ಮಾಡಿ ನಿಮ್ಮನ್ನ ಬಿಡಿಸ್ಕೊಂಡು ಬಂದ್ನಲ್ಲಾ! ಒಂದು ಜನಾಂಗದ ಕೈಯಿಂದ ಇನ್ನೊಂದು ಜನಾಂಗವನ್ನ ಬಿಡಿಸೋಕೆ ದೇವರು ಹೀಗೆ ಯಾವತ್ತಾದ್ರೂ ಮಾಡಿದ್ದಾನಾ? ನಿಮ್ಮನ್ನ ಆರಿಸ್ಕೊಂಡ ಹಾಗೆ ಬೇರೆ ಯಾವ ಜನಾಂಗವನ್ನಾದ್ರೂ ತನಗಾಗಿ ಆರಿಸ್ಕೊಂಡಿದ್ದಾನಾ? 35 ಯೆಹೋವನೇ ಸತ್ಯ ದೇವರು, ಆತನನ್ನ ಬಿಟ್ಟು ಬೇರೆ ಯಾವ ದೇವರೂ ಇಲ್ಲ+ ಅಂತ ನೀವು ತಿಳ್ಕೊಳ್ಳಬೇಕು ಅಂತಾನೇ ಆ ಅದ್ಭುತಗಳನ್ನೆಲ್ಲ ಮಾಡಿದನು.+ 36 ಆತನು ನಿಮ್ಮನ್ನ ತಿದ್ದೋಕೆ ಸ್ವರ್ಗದಿಂದ ತನ್ನ ಸ್ವರ ನಿಮಗೆ ಕೇಳಿಸೋ ತರ, ಭೂಮಿಯಲ್ಲಿ ಆತನ ದೊಡ್ಡ ಬೆಂಕಿ ನಿಮಗೆ ಕಾಣಿಸೋ ತರ ಮಾಡಿದನು. ಬೆಂಕಿ ಒಳಗಿಂದ ಆತನ ಮಾತುಗಳನ್ನ ನೀವು ಕೇಳಿಸ್ಕೊಂಡ್ರಿ.+

37 ಆತನು ನಿಮ್ಮ ಪೂರ್ವಜರನ್ನ ಪ್ರೀತಿಸಿ ಅವ್ರ ಸಂತತಿಯವರನ್ನ ಆರಿಸ್ಕೊಂಡನು.+ ಹಾಗಾಗಿ ಆತನು ನಿಮ್ಮ ಜೊತೆ ಇದ್ದು ತನ್ನ ಮಹಾ ಶಕ್ತಿಯಿಂದ ನಿಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದನು. 38 ನಿಮಗಿಂತ್ಲೂ ದೊಡ್ಡದಾದ ಬಲಿಷ್ಠವಾದ ಜನಾಂಗಗಳು ವಾಸ ಮಾಡ್ತಿದ್ದ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಬಂದು ಆ ಜನಾಂಗಗಳನ್ನ ನಿಮ್ಮ ಎದುರಿಂದ ಓಡಿಸಿಬಿಟ್ಟನು. ಈ ದೇಶನ ನಿಮಗೆ ಆಸ್ತಿಯಾಗಿ ಕೊಡೋಕೆ ಹಾಗೆ ಮಾಡಿದನು. ಈಗ ಅದು ನಡಿತಿದ್ಯಲ್ಲಾ.+ 39 ಹಾಗಾಗಿ ಆಕಾಶದಲ್ಲೂ ಭೂಮಿಯಲ್ಲೂ ಯೆಹೋವನೇ ಸತ್ಯ ದೇವರು,+ ಬೇರೆ ಯಾವ ದೇವರೂ ಇಲ್ಲ+ ಅಂತ ಈಗ ನೀವು ತಿಳ್ಕೊಂಡು ಅದನ್ನ ನಿಮ್ಮ ಹೃದಯದಲ್ಲಿ ಅಚ್ಚೊತ್ತಿ. 40 ಇವತ್ತು ನಿಮಗೆ ಹೇಳಿರೋ ದೇವರ ನಿಯಮಗಳನ್ನ ಆಜ್ಞೆಗಳನ್ನ ನೀವು ಪಾಲಿಸಬೇಕು. ಆಗ ನಿಮಗೆ ನಿಮ್ಮ ಮಕ್ಕಳಿಗೆ ಒಳ್ಳೇದಾಗುತ್ತೆ, ನಿಮ್ಮ ದೇವರಾದ ಯೆಹೋವ ಕೊಡೋ ದೇಶದಲ್ಲಿ ನೀವು ಜಾಸ್ತಿ ವರ್ಷ ಇರ್ತಿರ.”+

41 ಆ ಸಮಯದಲ್ಲಿ ಮೋಶೆ ಯೋರ್ದನ್‌ ನದಿಯ ಪೂರ್ವದಲ್ಲಿ ಮೂರು ಪಟ್ಟಣಗಳನ್ನ ಆರಿಸ್ಕೊಂಡ.+ 42 ಒಬ್ಬ ಆಕಸ್ಮಿಕವಾಗಿ ಇನ್ನೊಬ್ಬನನ್ನ ಕೊಂದ್ರೆ ಸತ್ತವನ ಮೇಲೆ ಅವನಿಗೆ ಮುಂಚೆ ಯಾವುದೇ ದ್ವೇಷ ಇರದಿದ್ರೆ+ ಅವನು ಈ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ತನ್ನ ಜೀವ ಉಳಿಸ್ಕೊಳ್ಳಬೇಕು.+ 43 ಆ ಪಟ್ಟಣಗಳು ಯಾವುದಂದ್ರೆ, ರೂಬೇನ್ಯರಿಗಾಗಿ ಎತ್ರದ ಸಮತಟ್ಟಾದ ಕಾಡಲ್ಲಿರೋ ಬೆಚೆರ್‌,+ ಗಾದ್ಯರಿಗಾಗಿ ಗಿಲ್ಯಾದಿನಲ್ಲಿರೋ ರಾಮೋತ್‌,+ ಮನಸ್ಸೆಯವರಿಗಾಗಿ ಬಾಷಾನಿನಲ್ಲಿರೋ+ ಗೋಲಾನ್‌.+

44 ಮೋಶೆ ಇಸ್ರಾಯೇಲ್ಯರಿಗೆ ಹೇಳಿದ ನಿಯಮ ಪುಸ್ತಕ ಇದೇ.+ 45 ಇಸ್ರಾಯೇಲ್ಯರು ಈಜಿಪ್ಟಿಂದ ಬಂದ ಮೇಲೆ ಮೋಶೆ ಅವ್ರಿಗೆ ನೆನಪು ಮಾಡಿದ ನಿರ್ದೇಶನಗಳು, ಹೇಳಿದ ನಿಯಮಗಳು, ತೀರ್ಪುಗಳು ಇವೇ.+ 46 ಮೋಶೆ ಇದನ್ನೆಲ್ಲ ಯೋರ್ದನ್‌ ಪ್ರದೇಶದಲ್ಲಿ ಅಂದ್ರೆ ಬೇತ್‌-ಪೆಗೋರಿನ+ ಎದುರಲ್ಲಿರೋ ಕಣಿವೆಯಲ್ಲಿ ಹೇಳಿದನು. ಇದು ಹೆಷ್ಬೋನಿನಲ್ಲಿ+ ವಾಸವಾಗಿದ್ದ ಅಮೋರಿಯರ ರಾಜ ಸೀಹೋನನ ದೇಶದಲ್ಲಿ ಇತ್ತು. ಈಜಿಪ್ಟಿಂದ ಬಂದ ಮೇಲೆ ಮೋಶೆ, ಇಸ್ರಾಯೇಲ್ಯರು ಆ ರಾಜನನ್ನ ಸೋಲಿಸಿ+ 47 ಅವನ ದೇಶ ವಶ ಮಾಡ್ಕೊಂಡ್ರು. ಬಾಷಾನಿನ ರಾಜ ಓಗನ+ ದೇಶವನ್ನ ಕೂಡ ವಶ ಮಾಡ್ಕೊಂಡ್ರು. ಅಮೋರಿಯರ ಆ ಇಬ್ರು ರಾಜರು ಯೋರ್ದನಿನ ಪೂರ್ವದ ಪ್ರದೇಶದಲ್ಲಿದ್ರು. 48 ಆ ಪ್ರದೇಶ ಅರ್ನೋನ್‌ ಕಣಿವೆಯ ಅಂಚಿನಲ್ಲಿರೋ ಅರೋಯೇರ್‌+ ಪಟ್ಟಣದಿಂದ ಹಿಡಿದು ಸೀಯೋನ್‌ ಅಂದ್ರೆ ಹೆರ್ಮೋನ್‌ ಬೆಟ್ಟದ+ ತನಕ 49 ಮತ್ತು ಯೋರ್ದನಿನ ಪೂರ್ವದ ಪ್ರದೇಶದಲ್ಲಿರೋ ಇಡೀ ಅರಾಬಾ ಮತ್ತೆ ಪಿಸ್ಗಾ ಬೆಟ್ಟದ ಇಳಿಜಾರುಗಳ ಕೆಳಗಿರೋ ಅರಾಬಾ ಸಮುದ್ರದ ತನಕ* ಇತ್ತು.+

5 ಆಮೇಲೆ ಮೋಶೆ ಎಲ್ಲ ಇಸ್ರಾಯೇಲ್ಯರನ್ನ ಕರೆದು ಹೀಗಂದ: “ಇಸ್ರಾಯೇಲ್ಯರೇ, ಇವತ್ತು ನಾನು ನಿಮಗೆ ಹೇಳ್ತಿರೋ ನಿಯಮಗಳನ್ನ ತೀರ್ಪುಗಳನ್ನ ಕೇಳಿ. ಅದನ್ನೆಲ್ಲ ಅರ್ಥ ಮಾಡ್ಕೊಂಡು ತಪ್ಪದೆ ಪಾಲಿಸಿ. 2 ನಮ್ಮ ದೇವರಾದ ಯೆಹೋವ ಹೋರೇಬ್‌ ಬೆಟ್ಟದ ಹತ್ರ ನಮ್ಮ ಜೊತೆ ಒಂದು ಒಪ್ಪಂದ ಮಾಡ್ಕೊಂಡನು.+ 3 ಯೆಹೋವ ಆ ಒಪ್ಪಂದವನ್ನ ನಮ್ಮ ಪೂರ್ವಜರ ಜೊತೆ ಅಲ್ಲ, ಈಗ ಬದುಕಿರೋ ನಮ್ಮೆಲ್ರ ಜೊತೆ ಮಾಡ್ಕೊಂಡನು. 4 ಯೆಹೋವ ಆ ಬೆಟ್ಟದಲ್ಲಿ ಬೆಂಕಿ ಒಳಗಿಂದ ನಿಮ್ಮ ಜೊತೆ ನೇರವಾಗಿ ಮಾತಾಡಿದ್ದನ್ನ ನೆನಪಿಸ್ಕೊಳ್ಳಿ.+ 5 ನೀವು ಬೆಂಕಿ ನೋಡಿ ಹೆದರಿ ಬೆಟ್ಟ ಹತ್ತಲಿಲ್ಲ.+ ಹಾಗಾಗಿ ಯೆಹೋವನ ಮಾತುಗಳನ್ನ ನಿಮಗೆ ಹೇಳೋಕೆ ನಾನು ಯೆಹೋವನ ಮತ್ತು ನಿಮ್ಮ ಮಧ್ಯ ನಿಂತ್ಕೊಂಡೆ.+ ಆಗ ಆತನು ಹೇಳಿದ್ದು ಏನಂದ್ರೆ

6 ‘ನಾನು ನಿಮ್ಮ ದೇವರಾದ ಯೆಹೋವ. ನೀವು ಗುಲಾಮರಾಗಿದ್ದ ಈಜಿಪ್ಟ್‌ ದೇಶದಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದವನು ನಾನೇ.+ 7 ನಿಮಗೆ ಯಾವತ್ತೂ ನಾನಲ್ಲದೆ ಬೇರೆ ದೇವರುಗಳು ಇರಬಾರದು.*+

8 ಕೆತ್ತಿದ ಯಾವ ಮೂರ್ತಿಯನ್ನೂ ನೀವು ಮಾಡ್ಕೊಬಾರದು.+ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ನೀರಲ್ಲಾಗಲಿ ಇರೋ ಯಾವುದ್ರ ಮೂರ್ತಿನೂ ಮಾಡ್ಕೊಬಾರದು. 9 ಅವುಗಳಿಗೆ ಅಡ್ಡಬೀಳಬಾರದು. ಆರಾಧನೆ ಮಾಡ್ಲೂಬಾರದು.+ ಯಾಕಂದ್ರೆ ನಾನೇ ನಿಮ್ಮ ದೇವರಾದ ಯೆಹೋವ. ನನ್ನನ್ನ ಮಾತ್ರ ಆರಾಧಿಸಬೇಕಂತ ಬಯಸೋ* ದೇವರು ನಾನು.+ ನನ್ನನ್ನ ಬಿಟ್ಟು ಬೇರೆ ಯಾರನ್ನೂ ಆರಾಧನೆ ಮಾಡಬಾರದು. ತಂದೆಗಳು ನನ್ನನ್ನ ದ್ವೇಷಿಸಿದ್ರೆ ಅವರು ಮಾಡಿದ ಪಾಪದ ಪರಿಣಾಮಗಳನ್ನ ಅವ್ರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅನುಭವಿಸೋ ತರ ಬಿಡ್ತೀನಿ.+ 10 ಆದ್ರೆ ನನ್ನನ್ನ ಪ್ರೀತಿಸಿ ನನ್ನ ಆಜ್ಞೆಗಳನ್ನ ಪಾಲಿಸುವವರಿಗೆ ಸಾವಿರಾರು ಪೀಳಿಗೆ ತನಕ ಶಾಶ್ವತ ಪ್ರೀತಿ ತೋರಿಸ್ತೀನಿ.

11 ನೀವು ನಿಮ್ಮ ದೇವರಾದ ಯೆಹೋವನ ಹೆಸ್ರನ್ನ ಅಯೋಗ್ಯ ರೀತಿಯಲ್ಲಿ ಬಳಸಬಾರದು.+ ಯಾಕಂದ್ರೆ ತನ್ನ ಹೆಸ್ರನ್ನ ಅಯೋಗ್ಯವಾಗಿ ಬಳಸೋ ಯಾರನ್ನೂ ಯೆಹೋವ ಶಿಕ್ಷೆ ಕೊಡದೆ ಬಿಡಲ್ಲ.+

12 ನಿಮ್ಮ ದೇವರಾದ ಯೆಹೋವ ಹೇಳಿದ ಹಾಗೇ ನೀವು ಸಬ್ಬತ್‌ ದಿನ ಆಚರಿಸಬೇಕು. ಅವತ್ತು ದೇವರ ವಿಷ್ಯಗಳನ್ನ ಮಾಡಬೇಕಾದ ದಿನ.+ 13 ನಿಮಗೆ ಯಾವುದೇ ಕೆಲಸ ಇರಲಿ, ದುಡಿಮೆ ಇರಲಿ ನೀವದನ್ನ ಆರು ದಿನದಲ್ಲೇ ಮಾಡ್ಕೊಬೇಕು.+ 14 ಆದ್ರೆ ಏಳನೇ ದಿನ ನಿಮ್ಮ ದೇವರಾದ ಯೆಹೋವನಿಗೆ ಗೌರವ ಕೊಡೋಕೆ ಸಬ್ಬತ್ತನ್ನ ಆಚರಿಸಬೇಕು.+ ಆ ದಿನ ನೀವಾಗ್ಲಿ ನಿಮ್ಮ ಮಗನಾಗ್ಲಿ ಮಗಳಾಗ್ಲಿ ದಾಸನಾಗ್ಲಿ ದಾಸಿಯಾಗ್ಲಿ ಪಟ್ಟಣಗಳಲ್ಲಿ ವಾಸಿಸೋ ವಿದೇಶಿಯಾಗ್ಲಿ+ ಯಾವ ಕೆಲಸನೂ ಮಾಡಬಾರದು.+ ಇದ್ರಿಂದ ನಿಮ್ಮ ಹಾಗೆ ನಿಮ್ಮ ದಾಸದಾಸಿಯರಿಗೂ ವಿಶ್ರಾಂತಿ ಸಿಗುತ್ತೆ.+ ನಿಮ್ಮ ಹೋರಿ, ಕತ್ತೆ ಅಥವಾ ಬೇರೆ ಯಾವುದೇ ಸಾಕುಪ್ರಾಣಿಯಿಂದ ಯಾವ ಕೆಲಸನೂ ಮಾಡಿಸಬಾರದು. 15 ನೀವು ಈಜಿಪ್ಟಲ್ಲಿ ಗುಲಾಮರಾಗಿ ಇದ್ದದ್ದನ್ನ ನಿಮ್ಮ ದೇವರಾದ ಯೆಹೋವ ತನ್ನ ಮಹಾ ಶಕ್ತಿ ತೋರಿಸಿ*+ ನಿಮ್ಮನ್ನ ಅಲ್ಲಿಂದ ಕರ್ಕೊಂಡು ಬಂದಿದ್ದನ್ನ ಮರಿಬೇಡಿ. ಅದನ್ನ ಮರಿಬಾರದು ಅಂತಾನೇ ನಿಮ್ಮ ದೇವರಾದ ಯೆಹೋವ ಸಬ್ಬತ್‌ ದಿನ ಆಚರಿಸಬೇಕು ಅಂತ ಹೇಳಿದ್ದಾನೆ.

16 ನಿಮ್ಮ ದೇವರಾದ ಯೆಹೋವ ಆಜ್ಞೆ ಕೊಟ್ಟ ಹಾಗೇ ನಿಮ್ಮ ಅಪ್ಪಅಮ್ಮನಿಗೆ ಗೌರವ ಕೊಡಬೇಕು.+ ಗೌರವ ಕೊಟ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಜಾಸ್ತಿ ವರ್ಷ ಬದುಕ್ತೀರ, ನಿಮಗೆ ಒಳ್ಳೇದಾಗುತ್ತೆ.*+

17 ನೀವು ಕೊಲೆ ಮಾಡಬಾರದು.+

18 ವ್ಯಭಿಚಾರ* ಮಾಡಬಾರದು.+

19 ಕದಿಬಾರದು.+

20 ಇನ್ನೊಬ್ಬನ ವಿರುದ್ಧ ಸುಳ್ಳು ಸಾಕ್ಷಿ ಹೇಳಬಾರದು.+

21 ಇನ್ನೊಬ್ಬನ ಹೆಂಡತಿಗಾಗಿ ಆಸೆಪಡಬಾರದು.+ ಸ್ವಾರ್ಥದಿಂದ ಇನ್ನೊಬ್ಬನ ಮನೆ, ಹೊಲ, ದಾಸ, ದಾಸಿ, ಹೋರಿ, ಕತ್ತೆ, ಹೀಗೆ ಇನ್ನೊಬ್ಬನಿಗೆ ಸೇರಿದ ಯಾವುದಕ್ಕೂ ಆಸೆಪಡಬಾರದು.’+

22 ಯೆಹೋವನ ಈ ಆಜ್ಞೆಗಳನ್ನ ಎಲ್ಲಾ ಇಸ್ರಾಯೇಲ್ಯರಿಗೆ ಹೇಳಿದನು. ಆತನು ಬೆಟ್ಟದ ಮೇಲೆ ಬೆಂಕಿ, ಮೋಡ, ಕಾರ್ಗತ್ತಲಿನ+ ಮಧ್ಯದಿಂದ ಗಟ್ಟಿಯಾದ ಸ್ವರದಲ್ಲಿ ಅವುಗಳನ್ನ ನಿಮಗೆ ಹೇಳಿದನು. ಅವುಗಳನ್ನ ಬಿಟ್ಟು ಬೇರೆ ಆಜ್ಞೆಗಳನ್ನ ಆತನು ಕೊಡಲಿಲ್ಲ. ಆಮೇಲೆ ಆತನು ಆ ಆಜ್ಞೆಗಳನ್ನ ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದು ನನಗೆ ಕೊಟ್ಟನು.+

23 ಆದ್ರೆ ಬೆಟ್ಟ ಬೆಂಕಿಯಿಂದ ಉರೀತಾ ಇರುವಾಗ+ ಕಾರ್ಗತ್ತಲೆಯ ಮಧ್ಯದಿಂದ ನೀವು ಆತನ ಸ್ವರ ಕೇಳಿಸ್ಕೊಂಡು ತಕ್ಷಣ ನಿಮ್ಮ ಎಲ್ಲ ಕುಲಗಳ ಮುಖ್ಯಸ್ಥರು, ಹಿರಿಯರು ನನ್ನ ಹತ್ರ ಬಂದ್ರು. 24 ನೀವು ನನಗೆ ‘ನಮ್ಮ ದೇವರಾದ ಯೆಹೋವ ಆತನ ಮಹಿಮೆ, ಶ್ರೇಷ್ಠತೆಯನ್ನ ನಮಗೆ ತೋರಿಸಿದ್ದಾನೆ. ನಾವು ಬೆಂಕಿ ಒಳಗಿಂದ ಆತನ ಸ್ವರ ಕೇಳಿಸ್ಕೊಂಡ್ವಿ.+ ದೇವರು ಮನುಷ್ಯನ ಜೊತೆ ಮಾತಾಡೋಕೆ ಸಾಧ್ಯ, ಆತನ ಸ್ವರ ಕೇಳಿಸ್ಕೊಂಡ ಮೇಲೂ ಮನುಷ್ಯ ಜೀವಂತವಾಗಿ ಇರೋಕೆ ಸಾಧ್ಯ ಅಂತ ಇವತ್ತು ನಮಗೆ ಗೊತ್ತಾಯ್ತು.+ 25 ಆದ್ರೂ ಆ ದೊಡ್ಡ ಬೆಂಕಿ ನಮ್ಮನ್ನೆಲ್ಲಿ ಸುಟ್ಟುಬಿಡುತ್ತೋ, ನಾವೆಲ್ಲಿ ಸತ್ತು ಹೋಗ್ತೀವೋ ಅಂತ ಭಯ ಆಗ್ತಿದೆ. ನಮ್ಮ ದೇವರಾದ ಯೆಹೋವನ ಸ್ವರವನ್ನ ನಾವಿನ್ನೂ ಕೇಳಿಸ್ಕೊಳ್ತಾ ಇದ್ರೆ ಸಾಯೋದು ಖಂಡಿತ. 26 ಜೀವ ಇರೋ ದೇವರು ಬೆಂಕಿ ಒಳಗಿಂದ ಮಾತಾಡೋದನ್ನ ನಮ್ಮ ಹಾಗೆ ಬೇರೆ ಯಾವ ಮನುಷ್ಯರಾದ್ರೂ ಕೇಳಿಸ್ಕೊಂಡು ಬದುಕಿ ಉಳಿದಿದ್ದಾರಾ? 27 ಹಾಗಾಗಿ ನೀನೇ ನಮ್ಮ ದೇವರಾದ ಯೆಹೋವನ ಹತ್ರ ಹೋಗಿ ಆತನ ಮಾತನ್ನೆಲ್ಲ ಕೇಳಿಸ್ಕೊ. ನಮ್ಮ ದೇವರಾದ ಯೆಹೋವ ನಿನಗೆ ಏನೇನು ಹೇಳ್ತಾನೋ ಅದನ್ನೆಲ್ಲ ಬಂದು ನಮಗೆ ಹೇಳು. ಅದನ್ನ ಕೇಳಿ ಅದೇ ತರ ನಡಿತೀವಿ’ ಅಂದ್ರಿ.+

28 ನೀವು ನನಗೆ ಹೇಳಿದ ವಿಷ್ಯಗಳನ್ನ ಯೆಹೋವ ಕೇಳಿಸ್ಕೊಂಡನು. ಆಗ ಯೆಹೋವ ನನಗೆ ‘ಈ ಜನ ನಿನಗೆ ಹೇಳಿದ್ದನ್ನೆಲ್ಲ ನಾನು ಕೇಳಿಸ್ಕೊಂಡೆ. ಅವರು ಹೇಳಿದ್ದು ಸರಿ.+ 29 ನನಗೆ ಭಯಪಡೋ,+ ನನ್ನ ಎಲ್ಲ ಆಜ್ಞೆಗಳನ್ನ ಪಾಲಿಸೋ ಮನಸ್ಸು*+ ಅವ್ರಿಗೆ ಯಾವಾಗ್ಲೂ ಇದ್ರೆ ಚೆನ್ನಾಗಿರುತ್ತೆ. ಅದ್ರಿಂದ ಅವ್ರಿಗೆ ಅವ್ರ ಮಕ್ಕಳಿಗೆ ಯಾವಾಗ್ಲೂ ಒಳ್ಳೇದಾಗುತ್ತೆ!+ 30 ಎಲ್ರಿಗೂ ಅವ್ರವ್ರ ಡೇರೆಗೆ ಹೋಗೋಕೆ ಹೇಳು. 31 ಆದ್ರೆ ನೀನು ಇಲ್ಲೇ ನನ್ನ ಜೊತೆ ಇರು. ನನ್ನ ಎಲ್ಲ ಆಜ್ಞೆಗಳನ್ನ ನಿಯಮಗಳನ್ನ ತೀರ್ಪುಗಳನ್ನ ನಿನಗೆ ತಿಳಿಸ್ತೀನಿ. ನೀನು ಹೋಗಿ ಅವುಗಳನ್ನ ಅವ್ರಿಗೆ ಕಲಿಸಬೇಕು. ಅವ್ರಿಗೆ ಆಸ್ತಿಯಾಗಿ ಕೊಡೋ ದೇಶದಲ್ಲಿ ಅವರು ಅವುಗಳನ್ನ ಪಾಲಿಸಬೇಕು’ ಅಂದನು. 32 ಹೀಗೆ ನಿಮ್ಮ ದೇವರಾದ ಯೆಹೋವ ಹೇಳಿದ ಹಾಗೇ ಎಲ್ಲವನ್ನ ತಪ್ಪದೆ ಪಾಲಿಸಬೇಕು.+ ಅದನ್ನ ಬಿಟ್ಟು ಒಂದು ಆಜ್ಞೆಯನ್ನೂ ಮೀರಬಾರದು.+ 33 ಎಲ್ಲ ವಿಷ್ಯಗಳಲ್ಲಿ ನಿಮ್ಮ ದೇವರಾದ ಯೆಹೋವ ತೋರಿಸಿದ ದಾರಿಯಲ್ಲೇ ನೀವು ನಡೀಬೇಕು.+ ಹಾಗೆ ಮಾಡಿದ್ರೆ ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ಚೆನ್ನಾಗಿ ಇರ್ತಿರ, ಜಾಸ್ತಿ ವರ್ಷ ಬದುಕಿ ಬಾಳ್ತೀರ.+

6 ನಾನು ಮುಂದೆ ಹೇಳೋ ಆಜ್ಞೆ, ನಿಯಮ, ತೀರ್ಪುಗಳನ್ನ ನಿಮಗೆ ಕಲಿಸಬೇಕಂತ ನಿಮ್ಮ ದೇವರಾದ ಯೆಹೋವ ನನಗೆ ಹೇಳಿದ್ದಾನೆ. ನೀವು ಯೋರ್ದನ್‌ ದಾಟಿ ವಶ ಮಾಡ್ಕೊಳ್ಳೋ ದೇಶದಲ್ಲಿ ಇದನ್ನೆಲ್ಲ ಪಾಲಿಸಬೇಕು. 2 ನೀವು, ನಿಮ್ಮ ಮಕ್ಕಳು, ಮೊಮ್ಮಕ್ಕಳು ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು.+ ನೀವು ಜೀವನಪೂರ್ತಿ ಆತನ ನಿಯಮಗಳನ್ನ, ಆಜ್ಞೆಗಳನ್ನ ಪಾಲಿಸಬೇಕು. ಆಗ ಜಾಸ್ತಿ ವರ್ಷ ಬದುಕ್ತೀರ.+ 3 ಇಸ್ರಾಯೇಲ್ಯರೇ, ಗಮನಕೊಟ್ಟು ಕೇಳಿ, ತಪ್ಪದೆ ಪಾಲಿಸಿ. ಆಗ ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಮಾತುಕೊಟ್ಟ ಹಾಗೇ ಹಾಲೂ ಜೇನೂ ಹರಿಯೋ ದೇಶದಲ್ಲಿ ಸುಖಸಂತೋಷ ಇರುತ್ತೆ, ನಿಮ್ಮ ಸಂಖ್ಯೆ ಜಾಸ್ತಿ ಆಗುತ್ತೆ.

4 ಇಸ್ರಾಯೇಲ್ಯರೇ ಕೇಳಿ, ನಮ್ಮ ದೇವರಾದ ಯೆಹೋವ ಒಬ್ಬನೇ ಯೆಹೋವ.+ 5 ನಿಮ್ಮ ದೇವರಾದ ಯೆಹೋವನನ್ನ ನೀವು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ,*+ ಪೂರ್ಣ ಶಕ್ತಿಯಿಂದ* ಪ್ರೀತಿಸಬೇಕು.+ 6 ಇವತ್ತು ನಾನು ಹೇಳೋ ಈ ಮಾತುಗಳು ನಿಮ್ಮ ಹೃದಯದಲ್ಲಿ ಇರಬೇಕು. 7 ಇದನ್ನ ನಿಮ್ಮ ಮಕ್ಕಳ ಹೃದಯದಲ್ಲಿ ಅಚ್ಚೊತ್ತಬೇಕು.*+ ಮನೇಲಿ ಕೂತಿರುವಾಗ ದಾರೀಲಿ ನಡಿವಾಗ ಮಲಗುವಾಗ ಏಳುವಾಗ ನೀವು ಇದ್ರ ಬಗ್ಗೆ ಅವ್ರ ಹತ್ರ ಮಾತಾಡಬೇಕು.+ 8 ಇದನ್ನೆಲ್ಲ ನೆನಪಿನ ಪಟ್ಟಿ ತರ ನಿಮ್ಮ ಕೈಗೆ ಕಟ್ಕೊಬೇಕು, ಹಣೆಪಟ್ಟಿ ತರ ಹಣೆಗೆ ಕಟ್ಕೊಬೇಕು.+ 9 ನಿಮ್ಮ ಮನೆ ಬಾಗಿಲಿನ ಚೌಕಟ್ಟಿನ ಮೇಲೆ, ಬಾಗಿಲಿನ ಮೇಲೆ ಬರೀಬೇಕು.

10 ನಿಮ್ಮ ದೇವರಾದ ಯೆಹೋವ ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬನಿಗೆ ಆಣೆ ಮಾಡಿ ಕೊಡ್ತೀನಿ ಅಂತ ಹೇಳಿದ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಹೋಗ್ತಾನೆ.+ ನೀವು ಕಟ್ಟದಿದ್ದ ಅತ್ಯುತ್ತಮವಾದ ದೊಡ್ಡದೊಡ್ಡ ಪಟ್ಟಣಗಳನ್ನ ನಿಮಗೆ ಕೊಡ್ತಾನೆ.+ 11 ನೀವು ದುಡಿದು ಸಂಪಾದಿಸದೆ ಇದ್ದ ಎಲ್ಲ ತರದ ಒಳ್ಳೇ ವಸ್ತುಗಳು ತುಂಬಿರೋ ಮನೆ, ನೀವು ಅಗೆಯದಿದ್ದ ನೀರು ಗುಂಡಿ, ನೆಟ್ಟು ಬೆಳೆಸದಿದ್ದ ದಾಕ್ಷಿತೋಟ ಆಲಿವ್‌ ಮರಗಳನ್ನ ಕೊಡ್ತಾನೆ. ಇವನ್ನೆಲ್ಲ ನೀವು ಅನುಭವಿಸಿ ತೃಪ್ತಿ ಆದಾಗ+ 12 ನಿಮ್ಮನ್ನ ಈಜಿಪ್ಟಿನ ಗುಲಾಮಗಿರಿಯಿಂದ ಬಿಡಿಸ್ಕೊಂಡು ಬಂದ ಯೆಹೋವನನ್ನ ಮರಿಬೇಡಿ.+ ಈ ವಿಷ್ಯವನ್ನ ನೆನಪಿಟ್ಕೊಳ್ಳಿ. 13 ನಿಮ್ಮ ದೇವರಾದ ಯೆಹೋವನಿಗೆ ನೀವು ಭಯಪಡಬೇಕು.+ ಆತನ ಸೇವೆಯನ್ನೇ ಮಾಡಬೇಕು.+ ಆತನ ಹೆಸ್ರಲ್ಲೇ ಆಣೆ ಮಾಡಬೇಕು.+ 14 ನೀವು ಬೇರೆ ದೇವರುಗಳ ಅಂದ್ರೆ ನಿಮ್ಮ ಸುತ್ತಮುತ್ತ ಇರೋ ಜನಾಂಗಗಳು ಆರಾಧಿಸೋ ಯಾವ ದೇವರ ಹಿಂದೆನೂ ಹೋಗಬಾರದು.+ 15 ಯಾಕಂದ್ರೆ ನಿಮ್ಮ ಮಧ್ಯ ಇರೋ ದೇವರಾದ ಯೆಹೋವನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ* ದೇವರಾಗಿದ್ದಾನೆ.+ ನೀವು ಹಾಗೆ ಮಾಡದಿದ್ರೆ ನಿಮ್ಮ ದೇವರಾದ ಯೆಹೋವನ ಕೋಪ ನಿಮ್ಮ ಮೇಲೆ ಹೊತ್ತಿ ಉರಿಯುತ್ತೆ.+ ಆತನು ನಿಮ್ಮನ್ನ ಭೂಮಿ ಮೇಲೆ ಉಳಿಯದ ಹಾಗೆ ನಾಶ ಮಾಡ್ತಾನೆ.+

16 ನಿಮ್ಮ ದೇವರಾದ ಯೆಹೋವನನ್ನ ಪರೀಕ್ಷಿಸಬಾರದು.+ ಮಸ್ಸದಲ್ಲಿ ಆತನನ್ನ ಪರೀಕ್ಷಿಸಿದ ಹಾಗೆ ಇನ್ನು ಯಾವತ್ತೂ ಆತನನ್ನ ಪರೀಕ್ಷಿಸಬಾರದು.+ 17 ನಿಮ್ಮ ದೇವರಾದ ಯೆಹೋವ ಕೊಟ್ಟಿರೋ ಆಜ್ಞೆಗಳನ್ನ ನಿಯಮಗಳನ್ನ ಮತ್ತೆಮತ್ತೆ ನೆನಪು ಹುಟ್ಟಿಸಿರೋ ನಿರ್ದೇಶನಗಳನ್ನ ಶ್ರದ್ಧೆಯಿಂದ ಪಾಲಿಸಬೇಕು. 18 ಯೆಹೋವನ ದೃಷ್ಟಿಯಲ್ಲಿ ಸರಿಯಾದ ವಿಷ್ಯವನ್ನ, ಒಳ್ಳೇ ವಿಷ್ಯವನ್ನ ಮಾಡಬೇಕು. ಇದ್ರಿಂದ ನೀವು ಸಂತೋಷ ಸಂತೃಪ್ತಿಯಿಂದ ಇರ್ತಿರ. ಯೆಹೋವ ನಿಮ್ಮ ಪೂರ್ವಜರಿಗೆ ಆಣೆ ಮಾಡಿದ ಒಳ್ಳೇ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಳ್ತೀರ.+ 19 ಯೆಹೋವ ಮಾತುಕೊಟ್ಟ ಹಾಗೇ ಅಲ್ಲಿಂದ ನಿಮ್ಮ ಶತ್ರುಗಳನ್ನೆಲ್ಲ ಓಡಿಸಿಬಿಡ್ತೀರ.+

20 ಮುಂದೆ ಯಾವತ್ತಾದ್ರೂ ನಿಮ್ಮ ಮಕ್ಕಳು ‘ನಮ್ಮ ದೇವರಾದ ಯೆಹೋವ ಈ ನಿಯಮಗಳನ್ನ ತೀರ್ಪುಗಳನ್ನ ನೆನಪು ಹುಟ್ಟಿಸೋ ನಿರ್ದೇಶನಗಳನ್ನ ಯಾಕೆ ನಿಮಗೆ ಕೊಟ್ಟಿದ್ದಾನೆ?’ ಅಂತ ಕೇಳಿದ್ರೆ 21 ‘ನಾವು ಈಜಿಪ್ಟಲ್ಲಿ ಫರೋಹನಿಗೆ ಗುಲಾಮರಾಗಿದ್ವಿ. ಆದ್ರೆ ಯೆಹೋವ ತನ್ನ ಮಹಾ ಶಕ್ತಿ ತೋರಿಸಿ* ನಮ್ಮನ್ನ ಅಲ್ಲಿಂದ ಕರ್ಕೊಂಡು ಬಂದನು. 22 ಯೆಹೋವ ನಮ್ಮ ಕಣ್ಮುಂದೆನೇ ಈಜಿಪ್ಟಲ್ಲಿ ದೊಡ್ಡದೊಡ್ಡ ಸೂಚಕ ಕೆಲಸಗಳನ್ನ, ಅದ್ಭುತಗಳನ್ನ ಮಾಡ್ತಾ ಇದ್ದನು.+ ಹೀಗೆ ಇಡೀ ಈಜಿಪ್ಟಿಗೆ ಫರೋಹನಿಗೆ ಅವನ ಮನೆಯವರಿಗೆ ಶಿಕ್ಷೆ ಕೊಟ್ಟನು.+ 23 ನಮ್ಮ ಪೂರ್ವಜರಿಗೆ ಆಣೆ ಮಾಡಿದ ಈ ದೇಶಕ್ಕೆ ನಮ್ಮನ್ನ ಸೇರಿಸೋಕೆ ಆತನು ನಮ್ಮನ್ನ ಈಜಿಪ್ಟ್‌ ದೇಶದಿಂದ ಕರ್ಕೊಂಡು ಬಂದನು.+ 24 ಆಮೇಲೆ ನಾವು ಈ ನಿಯಮಗಳ ಪ್ರಕಾರ ನಡಿಬೇಕಂತ, ನಮ್ಮ ದೇವರಾದ ಯೆಹೋವನಿಗೆ ಭಯಪಡಬೇಕಂತ ಯೆಹೋವ ಆಜ್ಞೆ ಕೊಟ್ಟನು. ನಮಗೆ ಯಾವಾಗ್ಲೂ ಒಳ್ಳೇದಾಗಬೇಕು,+ ಬಾಳಿ ಬದುಕಬೇಕು+ ಅನ್ನೋ ಕಾರಣಕ್ಕಾಗಿ ಆ ಆಜ್ಞೆ ಕೊಟ್ಟನು. ಅದಕ್ಕೇ ಇವತ್ತು ಜೀವಂತವಾಗಿ ಇದ್ದೀವಿ. 25 ನಮ್ಮ ದೇವರಾದ ಯೆಹೋವ ಆಜ್ಞೆ ಕೊಟ್ಟ ಹಾಗೇ ನಾವು ಆತನ ಮಾತು ಕೇಳಿ ಈ ಆಜ್ಞೆಗಳನ್ನೆಲ್ಲ ತಪ್ಪದೆ ಪಾಲಿಸಿದ್ರೆ ಆತನ ದೃಷ್ಟಿಯಲ್ಲಿ ನೀತಿವಂತರಾಗಿ ಇರ್ತಿವಿ’ + ಅಂತ ಹೇಳಬೇಕು.

7 ನೀವು ಇನ್ನೇನು ವಶ ಮಾಡಬೇಕಾದ ದೇಶಕ್ಕೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಸೇರಿಸ್ತಾನೆ. ಆಮೇಲೆ+ ಅಲ್ಲಿ ನಿಮಗಿಂತ ಜಾಸ್ತಿ ಸಂಖ್ಯೆಯಲ್ಲಿರೋ, ಬಲಿಷ್ಠವಾಗಿರೋ ಏಳು ದೇಶದವರನ್ನ+ ಅಲ್ಲಿಂದ ಓಡಿಸಿಬಿಡ್ತಾನೆ.+ ಅವರು ಯಾರಂದ್ರೆ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು,+ ಕಾನಾನ್ಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು.+ 2 ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮ ಕೈಗೆ ಕೊಡ್ತಾನೆ, ನೀವು ಸೋಲಿಸ್ತೀರ.+ ಆಗ ಅವ್ರನ್ನ ಪೂರ್ತಿಯಾಗಿ ನಾಶ ಮಾಡಬೇಕು.+ ಅವ್ರ ಜೊತೆ ಯಾವುದೇ ಒಪ್ಪಂದ ಮಾಡ್ಕೊಬಾರದು, ಸ್ವಲ್ಪನೂ ದಯೆ ತೋರಿಸಬಾರದು.+ 3 ನಿಮ್ಮ ಹೆಣ್ಣು ಮಕ್ಕಳನ್ನ ಅವ್ರ ಗಂಡು ಮಕ್ಕಳಿಗೆ ಕೊಡಬಾರದು. ಅವ್ರ ಹೆಣ್ಣು ಮಕ್ಕಳನ್ನ ನಿಮ್ಮ ಗಂಡು ಮಕ್ಕಳಿಗೆ ತರಬಾರದು. ಹೀಗೆ ಅವ್ರ ಜೊತೆ ಸಂಬಂಧ* ಬೆಳೆಸಬಾರದು.+ 4 ಯಾಕಂದ್ರೆ ಅವರು ನಿಮ್ಮ ಮಕ್ಕಳನ್ನ ನಮ್ಮ ದೇವರಿಂದ ದೂರಮಾಡಿ ಬೇರೆ ದೇವರುಗಳನ್ನ ಆರಾಧನೆ ಮಾಡೋ ತರ ಮಾಡ್ತಾರೆ.+ ಆಗ ನಿಮ್ಮ ಮೇಲೆ ಯೆಹೋವನ ಕೋಪ ಹೊತ್ತಿ ಉರಿಯುತ್ತೆ, ನಿಮ್ಮನ್ನ ನಾಶ ಮಾಡೋಕೆ ಆತನಿಗೆ ಒಂದು ಕ್ಷಣ ಸಾಕು.+

5 ನೀವು ಅವ್ರ ಯಜ್ಞವೇದಿಗಳನ್ನ ನಾಶ ಮಾಡಬೇಕು, ವಿಗ್ರಹಸ್ತಂಭಗಳನ್ನ ಚೂರುಚೂರು ಮಾಡಬೇಕು,+ ಅವ್ರ ಪೂಜಾಕಂಬಗಳನ್ನ* ಕಡಿದುಹಾಕಬೇಕು.+ ಕೆತ್ತಿದ ಮೂರ್ತಿಗಳನ್ನ ಸುಟ್ಟುಬಿಡಬೇಕು.+ 6 ಯಾಕಂದ್ರೆ ನಿಮ್ಮ ದೇವರಾದ ಯೆಹೋವನಿಗೆ ನೀವು ಪವಿತ್ರ ಜನ್ರಾಗಿದ್ದೀರ. ನಿಮ್ಮ ದೇವರಾದ ಯೆಹೋವ ಭೂಮಿಯಲ್ಲಿರೋ ಎಲ್ಲ ಜನ್ರಿಂದ ನಿಮ್ಮನ್ನ ಆರಿಸ್ಕೊಂಡು ತನ್ನ ಜನ್ರಾಗಿ, ತನ್ನ ವಿಶೇಷ ಸೊತ್ತಾಗಿ* ಮಾಡ್ಕೊಂಡಿದ್ದಾನೆ.+

7 ಯೆಹೋವ ನಿಮಗೆ ಮಮತೆ ತೋರಿಸಿದ್ದು, ನಿಮ್ಮನ್ನ ಆರಿಸ್ಕೊಂಡಿದ್ದು ಭೂಮಿಯಲ್ಲೇ ನಿಮ್ಮದೇ ದೊಡ್ಡ ಜನಾಂಗ ಅಂತಲ್ಲ.+ ನೀವು ಎಲ್ಲ ಜನಾಂಗಗಳಿಗಿಂತ ತುಂಬ ಚಿಕ್ಕ ಜನಾಂಗ.+ 8 ನಿಮ್ಮ ಮೇಲೆ ಯೆಹೋವನಿಗೆ ಪ್ರೀತಿ ಇದೆ, ನಿಮ್ಮ ಪೂರ್ವಜರಿಗೆ ಆತನು ಕೊಟ್ಟ ಮಾತನ್ನ ಉಳಿಸ್ಕೊಂಡಿದ್ದಾನೆ.+ ಅದಕ್ಕೇ ನಿಮ್ಮನ್ನ ಈಜಿಪ್ಟ್‌ ದೇಶದಿಂದ ಬಿಡಿಸ್ಕೊಂಡು ಬಂದನು. ಯೆಹೋವ ತನ್ನ ಮಹಾ ಶಕ್ತಿ ತೋರಿಸಿ* ಈಜಿಪ್ಟಿನ ರಾಜ ಫರೋಹನ ಕೈಕೆಳಗೆ ಗುಲಾಮರಾಗಿದ್ದ ನಿಮ್ಮನ್ನ ಬಿಡುಗಡೆ ಮಾಡಿದನು.+ 9 ನಿಮ್ಮ ದೇವರಾದ ಯೆಹೋವ ಸತ್ಯ ದೇವರು, ನಂಬಿಗಸ್ತ ದೇವರು ಅಂತ ನಿಮಗೆ ಚೆನ್ನಾಗಿ ಗೊತ್ತು. ಆತನನ್ನ ಪ್ರೀತಿಸಿ ಆತನ ಆಜ್ಞೆಗಳ ಪ್ರಕಾರ ನಡಿಯೋರಿಗೆ ಸಾವಿರಾರು ಪೀಳಿಗೆಗಳ ತನಕ ಶಾಶ್ವತ ಪ್ರೀತಿ ತೋರಿಸ್ತಾನೆ, ಅವ್ರ ಜೊತೆ ತನ್ನ ಒಪ್ಪಂದದ ಪ್ರಕಾರನೇ ನಡ್ಕೊಳ್ತಾನೆ ಅಂತಾನೂ ನಿಮಗೆ ಗೊತ್ತು.+ 10 ಆದ್ರೆ ಆತನನ್ನ ದ್ವೇಷಿಸೋರಿಗೆ ನೇರವಾಗಿ ಸೇಡುತೀರಿಸಿ ನಾಶ ಮಾಡ್ತಾನೆ.+ ಆತನನ್ನ ದ್ವೇಷಿಸೋ ಜನ್ರಿಗೆ ಶಿಕ್ಷೆ ಕೊಡೋಕೆ ಆತನು ತಡಮಾಡಲ್ಲ. ಅವ್ರಿಗೆ ನೇರವಾಗಿ ಸೇಡು ತೀರಿಸ್ತಾನೆ. 11 ಹಾಗಾಗಿ ಇವತ್ತು ನಾನು ಕೊಡ್ತಿರೋ ಆಜ್ಞೆಗಳನ್ನ ನಿಯಮಗಳನ್ನ ತೀರ್ಪುಗಳನ್ನ ತಪ್ಪದೆ ಪಾಲಿಸಿ.

12 ನೀವು ಈ ತೀರ್ಪುಗಳನ್ನ ಗಮನಕೊಟ್ಟು ಕೇಳಿ ಅವುಗಳ ಪ್ರಕಾರ ನಡೀತಾ ಇದ್ರೆ ನಿಮ್ಮ ದೇವರಾದ ಯೆಹೋವ ನಿಮ್ಮ ಪೂರ್ವಜರಿಗೆ ಮಾತುಕೊಟ್ಟ ಹಾಗೆ ತನ್ನ ಒಪ್ಪಂದದ ಪ್ರಕಾರ ನಡ್ಕೊಳ್ತಾನೆ, ನಿಮಗೆ ಶಾಶ್ವತ ಪ್ರೀತಿ ತೋರಿಸ್ತಾನೆ. 13 ಆತನು ನಿಮ್ಮನ್ನ ಪ್ರೀತಿಸಿ, ಆಶೀರ್ವದಿಸಿ, ನಿಮ್ಮ ಜನಸಂಖ್ಯೆ ಜಾಸ್ತಿ ಮಾಡ್ತಾನೆ. ನಿಮ್ಮ ಪೂರ್ವಜರಿಗೆ ಆಣೆ ಮಾಡಿ ಕೊಡ್ತೀನಿ ಅಂತ ಹೇಳಿದ ದೇಶದಲ್ಲಿ+ ಆತನು ನಿಮ್ಮ ಮೇಲೆ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸ್ತಾನೆ. ನಿಮಗೆ ತುಂಬ ಮಕ್ಕಳಾಗ್ತಾರೆ,+ ಬೆಳೆ ಸಮೃದ್ಧವಾಗಿ ಇರುತ್ತೆ, ನಿಮ್ಮ ಹತ್ರ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ ಬೇಕಾದಷ್ಟು ಇರುತ್ತೆ.+ ನಿಮ್ಮ ಹಸುಗಳಿಗೆ ತುಂಬ ಕರುಗಳು, ಆಡು-ಕುರಿಗಳಿಗೆ ತುಂಬ ಮರಿಗಳು ಆಗುತ್ತೆ. 14 ಭೂಮಿಯಲ್ಲಿರೋ ಎಲ್ಲ ಜನ್ರಲ್ಲಿ ನೀವೇ ಜಾಸ್ತಿ ಆಶೀರ್ವಾದ ಪಡೆದ ಜನರಾಗ್ತೀರ.+ ನಿಮ್ಮಲ್ಲಿ ಯಾವ ಗಂಡಸರಿಗೂ ಹೆಂಗಸರಿಗೂ ಪ್ರಾಣಿಗೂ ಬಂಜೆತನ ಇರಲ್ಲ.+ 15 ಯೆಹೋವ ನಿಮ್ಮ ಎಲ್ಲ ಕಾಯಿಲೆಗಳನ್ನ ತೆಗೆದು ಹಾಕ್ತಾನೆ. ಈಜಿಪ್ಟಲ್ಲಿ ನೀವು ನೋಡಿದ ದೊಡ್ಡ ದೊಡ್ಡ ಕಾಯಿಲೆ ಯಾವುದೂ ನಿಮಗೆ ಬರೋಕೆ ಆತನು ಬಿಡಲ್ಲ.+ ನಿಮ್ಮನ್ನ ದ್ವೇಷಿಸೋರಿಗೆ ಆ ಕಾಯಿಲೆಗಳು ಬರೋ ತರ ಮಾಡ್ತಾನೆ. 16 ನಿಮ್ಮ ದೇವರಾದ ಯೆಹೋವ ನಿಮ್ಮ ಕೈಗೆ ಕೊಡೋ ಎಲ್ಲ ಜನಾಂಗಗಳನ್ನ ನೀವು ನಾಶ ಮಾಡಬೇಕು.+ ನೀವು ಅವ್ರಿಗೆ ಕನಿಕರ ತೋರಿಸಬಾರದು,+ ಅವ್ರ ದೇವರುಗಳ ಸೇವೆ ಮಾಡಬಾರದು.+ ಸೇವೆ ಮಾಡಿದ್ರೆ ಅದು ನಿಮಗೆ ಉರುಲಾಗುತ್ತೆ.+

17 ನಿಮ್ಮ ಮನಸ್ಸಲ್ಲಿ ‘ಈ ಜನಾಂಗಗಳನ್ನ ಓಡಿಸೋದು ಹೇಗೆ? ಇವರು ನಮಗಿಂತ ಜಾಸ್ತಿ ಇದ್ದಾರಲ್ಲಾ!’ ಅನ್ನೋ ಯೋಚನೆ ಬರಬಹುದು.+ 18 ಆದ್ರೆ ಹೆದರಬಾರದು.+ ನಿಮ್ಮ ದೇವರಾದ ಯೆಹೋವ ಫರೋಹನಿಗೆ ಇಡೀ ಈಜಿಪ್ಟಿಗೆ ಮಾಡಿದ್ದನ್ನ ನೆನಪಿಸ್ಕೊಳ್ಳಿ.+ 19 ನಿಮ್ಮ ದೇವರಾದ ಯೆಹೋವ ಈಜಿಪ್ಟಿಗೆ ಕಠಿಣ ಶಿಕ್ಷೆ* ಕೊಟ್ಟು, ಸೂಚಕ ಕೆಲಸಗಳನ್ನ ಅದ್ಭುತಗಳನ್ನ ಮಾಡಿ,+ ತನ್ನ ಮಹಾ ಶಕ್ತಿ ತೋರಿಸಿ* ನಿಮ್ಮನ್ನ ಬಿಡಿಸ್ಕೊಂಡು ಬಂದಿದ್ದನ್ನ ಕಣ್ಣಾರೆ ನೋಡಿದ್ರಲ್ಲಾ.+ ನೀವು ನೋಡಿ ಹೆದರಿಕೊಳ್ಳೋ ಈ ಎಲ್ಲ ಜನಾಂಗಗಳಿಗೆ ಸಹ ನಿಮ್ಮ ದೇವರಾದ ಯೆಹೋವ ಅದೇ ತರ ಮಾಡ್ತಾನೆ.+ 20 ಅಷ್ಟೇ ಅಲ್ಲ ಅವ್ರಲ್ಲಿ ನಿಮ್ಮ ಮಧ್ಯ ಉಳಿದಿರೋ, ಬಚ್ಚಿಟ್ಕೊಂಡಿರೋ ಜನ ಕಂಗಾಲಾಗಿ ಹೋಗೋ ತರ ನಿಮ್ಮ ದೇವರಾದ ಯೆಹೋವ ಮಾಡ್ತಾನೆ.+ ಅವರು ಪೂರ್ತಿ ನಾಶ ಆಗೋ ತನಕ ಆತನು ಹಾಗೆ ಮಾಡ್ತಾನೆ. 21 ನೀವು ಅವ್ರಿಗೆ ಹೆದರಬೇಡಿ. ಯಾಕಂದ್ರೆ ನಿಮ್ಮ ದೇವರಾದ ಯೆಹೋವ+ ನಿಮ್ಮ ಜೊತೆ ಇದ್ದಾನೆ. ಆತನು ಮಹಾನ್‌ ದೇವರು. ಭಯವಿಸ್ಮಯ ಹುಟ್ಟಿಸೋ ದೇವರು.+

22 ನಿಮ್ಮ ದೇವರಾದ ಯೆಹೋವ ಖಂಡಿತ ಈ ಜನಾಂಗಗಳನ್ನ ಸ್ವಲ್ಪಸ್ವಲ್ಪವಾಗಿ ನಿಮ್ಮ ಮುಂದಿಂದ ಓಡಿಸಿಬಿಡ್ತಾನೆ.+ ನೀವು ಅವ್ರನ್ನ ತಕ್ಷಣ ನಾಶ ಮಾಡಬಾರದು. ಹಾಗೆ ನಾಶ ಮಾಡಿದ್ರೆ, ಕಾಡುಪ್ರಾಣಿಗಳು ಹೆಚ್ಚಿ ನಿಮಗೆ ಹಾನಿ ಮಾಡುತ್ತೆ. 23 ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮ ಕೈಗೆ ಕೊಡ್ತಾನೆ. ಅವರು ಪೂರ್ತಿ ನಾಶ ಆಗೋ ತನಕ ಅವ್ರನ್ನ ಸೋಲಿಸ್ತಾ ಇರ್ತಾನೆ.+ 24 ಅವ್ರ ರಾಜರನ್ನ ನಿಮ್ಮ ಕೈಗೆ ಒಪ್ಪಿಸ್ತಾನೆ.+ ಭೂಮಿ ಮೇಲೆ ಅವ್ರ ಹೆಸ್ರು ಸಹ ಇಲ್ಲದ ಹಾಗೆ ನೀವು ಮಾಡ್ತೀರ.+ ಆ ಜನಾಂಗಗಳನ್ನ ನೀವು ಬೇರು ಸಹಿತ ಕಿತ್ತುಹಾಕೋ+ ತನಕ ಯಾರೂ ನಿಮ್ಮ ಮುಂದೆ ನಿಲ್ಲೋಕೆ ಆಗಲ್ಲ.+ 25 ನೀವು ಅವ್ರ ದೇವರುಗಳ ಮೂರ್ತಿಗಳನ್ನ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ ಅವುಗಳ ಮೇಲಿರೋ ಚಿನ್ನಬೆಳ್ಳಿಯನ್ನ ಆಸೆಪಟ್ಟು ತಗೊಳ್ಳಬಾರದು.+ ತಗೊಂಡ್ರೆ ಅದು ನಿಮಗೆ ಉರುಲಾಗುತ್ತೆ. ಯಾಕಂದ್ರೆ ನಿಮ್ಮ ದೇವರಾದ ಯೆಹೋವನಿಗೆ ಅದು ಅಸಹ್ಯ.+ 26 ಅಂಥ ವಸ್ತುಗಳನ್ನ ನಿಮ್ಮ ಮನೆ ಒಳಗೆ ತರಬಾರದು. ತಂದ್ರೆ ಆ ವಸ್ತುಗಳ ತರ ನೀವು ಸಹ ನಾಶ ಆಗ್ತೀರ. ಅವು ನಾಶ ಮಾಡಬೇಕಾದ ವಸ್ತುಗಳು, ಹಾಗಾಗಿ ನೀವು ಅದನ್ನೆಲ್ಲ ತುಂಬ ಅಸಹ್ಯವಾಗಿ, ಗಲೀಜಾಗಿ ನೋಡಬೇಕು.

8 ಇವತ್ತು ನಾನು ಕೊಡ್ತಿರೋ ಎಲ್ಲ ಆಜ್ಞೆಗಳನ್ನ ನೀವು ತಪ್ಪದೆ ಪಾಲಿಸಬೇಕು. ಆಗ ನೀವು ತುಂಬ ವರ್ಷ ಬದುಕ್ತೀರ,+ ನಿಮ್ಮ ಜನಸಂಖ್ಯೆ ಜಾಸ್ತಿ ಆಗ್ತಾ ಹೋಗುತ್ತೆ. ಯೆಹೋವ ನಿಮ್ಮ ಪೂರ್ವಜರಿಗೆ ಆಣೆ ಮಾಡಿದ ದೇಶಕ್ಕೆ ನೀವು ಹೋಗಿ ಅದನ್ನ ವಶ ಮಾಡ್ಕೊಳ್ತೀರ.+ 2 ನಿಮ್ಮ ದೇವರಾದ ಯೆಹೋವ ಈ 40 ವರ್ಷ ನಿಮ್ಮನ್ನ ಕಾಡಲ್ಲಿ+ ತುಂಬ ದೂರ ನಡೆಸ್ಕೊಂಡು ಬಂದಿದ್ದನ್ನ ಯಾವತ್ತೂ ಮರಿಬೇಡಿ. ನಿಮಗೆ ದೀನತೆ ಕಲಿಸೋಕೆ, ನಿಮ್ಮ ಹೃದಯದಲ್ಲಿ ಏನಿದೆ,+ ಆತನ ಆಜ್ಞೆಗಳನ್ನ ಪಾಲಿಸ್ತೀರಾ ಇಲ್ವಾ ಅಂತ ಪರೀಕ್ಷೆ ಮಾಡಿ ತಿಳ್ಕೊಳ್ಳೋಕೆ ಆತನು ಹಾಗೆ ಮಾಡಿದನು.+ 3 ಮನುಷ್ಯ ಬರೀ ಆಹಾರ ತಿನ್ನೋದ್ರಿಂದ ಅಲ್ಲ ಯೆಹೋವನ ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕ್ತಾನೆ+ ಅನ್ನೋದನ್ನ ನೀವು ಅರ್ಥ ಮಾಡ್ಕೋಬೇಕಂತ ಆತನು ನಿಮ್ಮನ್ನ ಹಸಿವೆಯಿಂದ ಇರೋಕೆ ಬಿಟ್ಟನು.+ ನಿಮಗೆ ನಿಮ್ಮ ತಾತ-ಮುತ್ತಾತರಿಗೆ ಗೊತ್ತೇ ಇಲ್ಲದ ಮನ್ನ+ ಕೊಟ್ಟು ಸಾಕಿದನು. ನಿಮಗೆ ದೀನತೆ ಕಲಿಸಿದನು. 4 ಈ 40 ವರ್ಷಗಳಲ್ಲಿ ನೀವು ಹಾಕಿದ್ದ ಬಟ್ಟೆ ಹಳೇದಾಗಿ ಹರಿದುಹೋಗಲಿಲ್ಲ. ನಿಮ್ಮ ಕಾಲು ಊದ್ಕೊಳ್ಳಲಿಲ್ಲ.*+ 5 ಅಪ್ಪ ಮಗನನ್ನ ತಿದ್ದೋ ತರ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ತಿದ್ತಾ ಬಂದ ಅನ್ನೋದು ನಿಮಗೆ ಚೆನ್ನಾಗಿ ಗೊತ್ತು.+

6 ನಿಮ್ಮ ದೇವರಾದ ಯೆಹೋವ ತೋರಿಸಿದ ದಾರೀಲಿ ನಡೀರಿ, ಆತನಿಗೆ ಭಯಪಟ್ಟು ಆತನ ಆಜ್ಞೆಗಳನ್ನ ಪಾಲಿಸಿ. 7 ಯಾಕಂದ್ರೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಒಳ್ಳೇ ದೇಶಕ್ಕೆ ಕರ್ಕೊಂಡು ಹೋಗ್ತಿದ್ದಾನೆ.+ ಅಲ್ಲಿನ ಕಣಿವೆ ಬಯಲಲ್ಲಿ, ಬೆಟ್ಟ ಪ್ರದೇಶದಲ್ಲಿ ತೊರೆ ಒರತೆ ಬುಗ್ಗೆ* ಉಕ್ಕಿ ಹರಿಯುತ್ತೆ. 8 ಗೋದಿ, ಬಾರ್ಲಿ,* ದ್ರಾಕ್ಷಿಬಳ್ಳಿ, ಅಂಜೂರ ಮರ, ದಾಳಿಂಬೆ,+ ಆಲಿವ್‌ ಎಣ್ಣೆ, ಜೇನು+ ಅಲ್ಲಿ ಬೇಕಾದಷ್ಟು ಇದೆ. 9 ಅಲ್ಲಿ ಯಾವತ್ತೂ ಆಹಾರಕ್ಕೆ ಬರ ಬರಲ್ಲ. ಯಾವುದಕ್ಕೂ ಕೊರತೆ ಇರಲ್ಲ. ಅಲ್ಲಿರೋ ಕಲ್ಲುಗಳಲ್ಲಿ ಕಬ್ಬಿಣ ತುಂಬಿದೆ. ಅಲ್ಲಿರೋ ಬೆಟ್ಟಗಳನ್ನ ಅಗೆದ್ರೆ ತಾಮ್ರ ಸಿಗುತ್ತೆ.

10 ಅಲ್ಲಿ ಹೊಟ್ಟೆ ತುಂಬಾ ತಿಂದು ಖುಷಿಯಾಗಿ ಇರುವಾಗ ಆ ಒಳ್ಳೇ ದೇಶನ ಕೊಟ್ಟಿದ್ದಕ್ಕಾಗಿ ನಿಮ್ಮ ದೇವರಾದ ಯೆಹೋವನನ್ನ ನೀವು ಹೊಗಳಬೇಕು.+ 11 ನಾನು ಇವತ್ತು ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ತೀರ್ಪುಗಳನ್ನ ನಿಯಮಗಳನ್ನ ನೀವು ಪಾಲಿಸಬೇಕು, ಆತನನ್ನ ಮರಿಬಾರದು. 12 ನೀವು ಅಲ್ಲಿ ಹೊಟ್ಟೆ ತುಂಬ ತಿಂದು ಖುಷಿಯಿಂದ ಇರುವಾಗ, ಒಳ್ಳೊಳ್ಳೇ ಮನೆಗಳನ್ನ ಕಟ್ಕೊಂಡು ಇರುವಾಗ,+ 13 ನಿಮ್ಮ ಹತ್ರ ಹಸು-ಹೋರಿ, ಆಡು-ಕುರಿ, ಚಿನ್ನಬೆಳ್ಳಿ ಹೆಚ್ಚಾದಾಗ, ಯಾವುದಕ್ಕೂ ಕೊರತೆನೇ ಇಲ್ಲದಾಗ 14 ನಿಮ್ಮ ಹೃದಯ ಹೆಮ್ಮೆಯಿಂದ ಉಬ್ಬಿಹೋಗಬಾರದು.+ ಈಜಿಪ್ಟ್‌ ದೇಶದ ಗುಲಾಮಗಿರಿಯಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನನ್ನ ಮರಿಬಾರದು.+ 15 ಆತನು ನಿಮ್ಮನ್ನ ತುಂಬ ದೊಡ್ಡದಾದ, ಭಯಾನಕ ಕಾಡಲ್ಲಿ+ ನಡಿಸ್ಕೊಂಡು ಬಂದಿದ್ದನ್ನ ಮರಿಬೇಡಿ. ಅಲ್ಲಿ ವಿಷ ಹಾವುಗಳು, ಚೇಳುಗಳು ಇತ್ತು, ನೆಲ ನೀರಿಲ್ಲದೆ ಬತ್ತಿಹೋಗಿತ್ತು. ಅಲ್ಲಿ ದೇವರು ಗಟ್ಟಿಯಾದ ಬಂಡೆಯಿಂದ ನೀರು ಬರೋ ತರ ಮಾಡಿದನು.+ 16 ನಿಮ್ಮ ತಾತ-ಮುತ್ತಾತರಿಗೆ ಗೊತ್ತಿಲ್ಲದ ಮನ್ನವನ್ನ ಕಾಡಲ್ಲಿ ಕೊಟ್ಟು ನಿಮ್ಮನ್ನ ಸಾಕಿದನು.+ ನಿಮಗೆ ದೀನತೆ ಕಲಿಸೋಕೆ,+ ನಿಮ್ಮನ್ನ ಪರೀಕ್ಷಿಸೋಕೆ ಆ ಆಹಾರ ಕೊಟ್ಟನು. ಮುಂದೆ ನಿಮಗೆ ಪ್ರಯೋಜನ ಆಗಬೇಕು ಅಂತ ಹಾಗೆ ಮಾಡಿದನು.+ 17 ‘ನಮ್ಮ ಶಕ್ತಿ ಸಾಮರ್ಥ್ಯದಿಂದಾನೇ ಇಷ್ಟೊಂದು ಹಣ-ಆಸ್ತಿ ಗಳಿಸಿದ್ದೀವಿ’ ಅಂತ ನಿಮ್ಮ ಮನಸ್ಸು ಹೇಳಿದ್ರೆ+ 18 ಹಣ-ಆಸ್ತಿ ಗಳಿಸೋಕೆ ಶಕ್ತಿ ಕೊಡೋದು ನಿಮ್ಮ ದೇವರಾದ ಯೆಹೋವನೇ ಅಂತ ನೆನಪು ಮಾಡ್ಕೊಳ್ಳಿ.+ ಆತನು ನಿಮ್ಮ ಪೂರ್ವಜರಿಗೆ ಆಣೆ ಮಾಡಿ ಅವ್ರ ಜೊತೆ ಮಾಡ್ಕೊಂಡ ಒಪ್ಪಂದದ ಪ್ರಕಾರ ನಡಿಯೋಕೆ ನಿಮಗೆ ಹೀಗೆ ಸಹಾಯ ಮಾಡ್ತಾ ಇದ್ದಾನೆ. ಇವತ್ತಿನ ತನಕ ಆತನು ಆ ಒಪ್ಪಂದದ ಪ್ರಕಾರ ನಡೀತಿದ್ದಾನೆ.+

19 ಯಾವತ್ತಾದ್ರೂ ನಿಮ್ಮ ದೇವರಾದ ಯೆಹೋವನನ್ನ ನೀವು ಮರ್ತು ಬೇರೆ ದೇವರುಗಳ ಹಿಂದೆ ಹೋದ್ರೆ, ಅವುಗಳ ಸೇವೆ ಮಾಡಿದ್ರೆ, ಅಡ್ಡಬಿದ್ರೆ ಖಂಡಿತ ನಾಶ ಆಗ್ತೀರ ಅಂತ ಇವತ್ತೇ ಎಚ್ಚರಿಕೆ ಕೊಡ್ತಾ ಇದ್ದೀನಿ.+ 20 ನಿಮ್ಮ ದೇವರಾದ ಯೆಹೋವನ ಮಾತನ್ನ ಕೇಳದೆ ಹೋದ್ರೆ ಯೆಹೋವ ಈಗ ನಿಮ್ಮ ಮುಂದೆ ನಾಶ ಮಾಡ್ತಿರೋ ಜನಾಂಗಗಳ ಹಾಗೇ ನೀವೂ ನಾಶ ಆಗ್ತೀರ.+

9 ಇಸ್ರಾಯೇಲ್ಯರೇ, ಇವತ್ತು ನೀವು ಯೋರ್ದನನ್ನ+ ದಾಟ್ತೀರ. ನಿಮಗಿಂತ ಬಲಿಷ್ಠವಾದ, ದೊಡ್ಡದಾದ ಜನಾಂಗಗಳ ದೇಶವನ್ನ,+ ಅಲ್ಲಿನ ಆಕಾಶ ಮುಟ್ಟೋಷ್ಟು ಎತ್ರವಾದ ಕೋಟೆಗಳಿರೋ ದೊಡ್ಡದೊಡ್ಡ ಪಟ್ಟಣಗಳನ್ನ ವಶ ಮಾಡ್ಕೊತೀರ.+ 2 ನಿಮಗಿಂತ ಎತ್ರ ಇರೋ, ಹೆಚ್ಚು ಜನಸಂಖ್ಯೆಯಲ್ಲಿರೋ ಅನಾಕ್ಯರನ್ನ+ ಸೋಲಿಸ್ತೀರ. ಅವ್ರ ಬಗ್ಗೆ ನಿಮಗೆ ಗೊತ್ತೇ ಇದೆ. ‘ಅನಾಕ್ಯರನ್ನ ಸೋಲಿಸೋಕೆ ಯಾರಿಂದ್ಲೂ ಆಗಲ್ಲ’ ಅಂತ ಜನ ಮಾತಾಡೋದನ್ನ ಕೇಳಿಸ್ಕೊಂಡಿದ್ದೀರ. 3 ಹಾಗಾಗಿ ಇವತ್ತು ಒಂದು ವಿಷ್ಯನ ಚೆನ್ನಾಗಿ ನೆನಪಿಟ್ಕೊಳ್ಳಿ. ಏನಂದ್ರೆ ನಿಮ್ಮ ದೇವರಾದ ಯೆಹೋವ ನಿಮ್ಮ ಮುಂದೆ ಹೋಗಿ ಯೋರ್ದನನ್ನ ದಾಟ್ತಾನೆ.+ ಸುಡೋ ಬೆಂಕಿ ತರ ಇರೋ+ ಅವ್ರನ್ನ ನಾಶ ಮಾಡ್ತಾನೆ. ನಿಮ್ಮ ಕಣ್ಮುಂದೆನೇ ಅವ್ರನ್ನ ಸೋಲಿಸ್ತಾನೆ. ಯೆಹೋವ ನಿಮಗೆ ಮಾತು ಕೊಟ್ಟ ಹಾಗೆ ನೀವು ಅವ್ರನ್ನ ಆ ದೇಶದಿಂದ ಓಡಿಸಿ ನಾಶ ಮಾಡಿಬಿಡ್ತೀರ.+

4 ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮ ಎದುರಿಂದ ಓಡಿಸಿಬಿಟ್ಟ ಮೇಲೆ ನೀವು ಮನಸ್ಸಲ್ಲಿ ‘ನಾವು ನೀತಿವಂತರಾಗಿ ಇರೋದ್ರಿಂದಾನೇ ಯೆಹೋವ ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದು ಈ ದೇಶನ ಆಸ್ತಿಯಾಗಿ ಕೊಟ್ಟಿದ್ದಾನೆ’ + ಅಂತ ನೆನಸಬೇಡಿ. ಯೆಹೋವ ಈ ಜನ್ರನ್ನ ನಿಮ್ಮ ಎದುರಿಂದ ಓಡಿಸ್ತಿರೋದು ಅವರು ಕೆಟ್ಟವರಾಗಿ ಇರೋದ್ರಿಂದ.+ 5 ಈ ದೇಶ ನಿಮಗೆ ಆಸ್ತಿಯಾಗಿ ಸಿಗ್ತಿರೋದು ನೀವು ತುಂಬ ನೀತಿವಂತರು, ಪ್ರಾಮಾಣಿಕ ಜನ್ರು ಅಂತಲ್ಲ. ಆ ಜನ್ರು ಕೆಟ್ಟವರು ಆಗಿರೋದ್ರಿಂದ ನಿಮ್ಮ ದೇವರಾದ ಯೆಹೋವ ಆ ಜನಾಂಗಗಳನ್ನ ನಿಮ್ಮ ಎದುರಿಂದ ಓಡಿಸ್ತಿದ್ದಾನೆ.+ ಅಷ್ಟೇ ಅಲ್ಲ ನಿಮ್ಮ ಪೂರ್ವಜರಾದ ಅಬ್ರಹಾಮ,+ ಇಸಾಕ,+ ಯಾಕೋಬರಿಗೆ+ ಕೊಟ್ಟ ಮಾತನ್ನ ಯೆಹೋವ ನೆರವೇರಿಸಬೇಕು ಅಂತಿದ್ದಾನೆ. 6 ಹಾಗಾಗಿ ತಿಳ್ಕೊಳ್ಳಿ, ಈ ಒಳ್ಳೇ ದೇಶನ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡ್ತಿರೋದು ನೀವು ನೀತಿವಂತರು ಅಂತಲ್ಲ. ಯಾಕಂದ್ರೆ ನೀವು ಹಠಮಾರಿಗಳು.+

7 ಕಾಡಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಕೋಪಬರೋ ತರ ನಡ್ಕೊಂಡಿದ್ದನ್ನ ನೆನಪಿಸ್ಕೊಳ್ಳಿ.+ ಅದನ್ನ ಯಾವತ್ತೂ ಮರಿಬೇಡಿ. ನೀವು ಈಜಿಪ್ಟನ್ನ ಬಿಟ್ಟು ಬಂದ ದಿನದಿಂದ ಈ ಸ್ಥಳಕ್ಕೆ ಬರೋ ತನಕ ಯೆಹೋವನ ವಿರುದ್ಧ ದಂಗೆ ಏಳ್ತಾನೇ ಇದ್ದೀರ.+ 8 ಹೋರೇಬಿನಲ್ಲಿ ಇದ್ದಾಗ್ಲೂ ನೀವು ಯೆಹೋವನ ಕೋಪ ಕೆರಳಿಸಿದ್ರಿ. ಯೆಹೋವನಿಗೆ ನಿಮ್ಮನ್ನ ನಾಶ ಮಾಡಬೇಕು ಅನ್ನೋಷ್ಟು ಕೋಪ ಬಂತು.+ 9 ನಾನಾಗ ಯೆಹೋವ ನಿಮ್ಮ ಜೊತೆ ಮಾಡ್ಕೊಂಡಿದ್ದ ಒಪ್ಪಂದದ+ ಮಾತುಗಳಿರೋ ಕಲ್ಲಿನ ಹಲಗೆಗಳನ್ನ+ ತರೋಕೆ ಹೋರೇಬ್‌ ಬೆಟ್ಟ ಹತ್ತಿ ಹೋಗಿದ್ದೆ. 40 ದಿನ ಹಗಲೂರಾತ್ರಿ+ ಏನೂ ತಿನ್ನದೆ, ನೀರೂ ಕುಡಿಯದೆ ಅಲ್ಲೇ ಬೆಟ್ಟದ ಮೇಲಿದ್ದೆ. 10 ಆಗ ಯೆಹೋವ ದೇವರು ತನ್ನ ಕೈಯಿಂದಾನೇ* ಬರೆದ ಎರಡು ಕಲ್ಲಿನ ಹಲಗೆ ಕೊಟ್ಟನು. ನೀವು ಬೆಟ್ಟದ ಹತ್ರ ಸೇರಿ ಬಂದಿದ್ದಾಗ ಯೆಹೋವ ಬೆಟ್ಟದ ಮೇಲಿಂದ ಬೆಂಕಿ ಒಳಗಿಂದ ಮಾತಾಡಿ ನಿಮಗೆ ಹೇಳಿದ ಎಲ್ಲ ಮಾತುಗಳನ್ನ ಆ ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದನು.+ 11 40 ದಿನ ಹಗಲೂರಾತ್ರಿ ಕಳೆದ ಮೇಲೆ ಒಪ್ಪಂದದ ಮಾತುಗಳಿರೋ ಆ ಕಲ್ಲಿನ ಹಲಗೆಗಳನ್ನ ಯೆಹೋವ ನನಗೆ ಕೊಟ್ಟನು. 12 ಆಗ ಯೆಹೋವ ನನಗೆ ‘ನೀನು ಬೇಗ ಬೆಟ್ಟ ಇಳಿದು ಹೋಗು. ಈಜಿಪ್ಟಿಂದ ನೀನು ಕರ್ಕೊಂಡು ಬಂದ ನಿನ್ನ ಜನ ಕೆಟ್ಟು ಹೋಗಿದ್ದಾರೆ.+ ನಾನು ಕೊಟ್ಟ ಆಜ್ಞೆಗಳನ್ನ* ಅವರು ಎಷ್ಟು ಬೇಗ ಮೀರಿ ನಡೆದಿದ್ದಾರೆ ನೋಡು! ಅವರು ತಮಗಾಗಿ ಅಚ್ಚಲ್ಲಿ ಲೋಹ ಹೊಯ್ದು ಮೂರ್ತಿ ಮಾಡ್ಕೊಂಡಿದ್ದಾರೆ’ + ಅಂದನು. 13 ಆಮೇಲೆ ಯೆಹೋವ ನನಗೆ ‘ಈ ಜನ ತುಂಬ ಹಠಮಾರಿಗಳು ಅಂತ ನಂಗೊತ್ತು.+ 14 ನನ್ನನ್ನ ತಡಿಬೇಡ. ಅವ್ರನ್ನೆಲ್ಲ ನಾಶಮಾಡಿ ಭೂಮಿ ಮೇಲಿಂದ ಅವ್ರ ಹೆಸ್ರೇ ಇಲ್ಲದ ಹಾಗೆ ಮಾಡ್ತೀನಿ. ಅವ್ರಿಗೆ ಬದ್ಲು ನಿನ್ನ ವಂಶದವರನ್ನೇ ಅವ್ರಿಗಿಂತ ಬಲಿಷ್ಠವಾದ, ದೊಡ್ಡದಾದ ಜನಾಂಗ ಆಗೋ ತರ ಮಾಡ್ತೀನಿ’ + ಅಂದನು.

15 ಆಮೇಲೆ ನಾನು ಒಪ್ಪಂದದ ಮಾತುಗಳಿದ್ದ ಆ ಹಲಗೆಗಳನ್ನ ಕೈಗಳಲ್ಲಿ ಹಿಡ್ಕೊಂಡು+ ಉರಿತಿದ್ದ ಆ ಬೆಟ್ಟದಿಂದ+ ಇಳಿದು ಬಂದೆ. 16 ಆಗ ನೀವು ಅಚ್ಚಲ್ಲಿ ಹೊಯ್ದು ಮಾಡ್ಕೊಂಡಿದ್ದ ಲೋಹದ ಕರುವನ್ನ ನೋಡಿದೆ. ನೀವು ನಿಮ್ಮ ದೇವರಾದ ಯೆಹೋವನ ವಿರುದ್ಧ ಪಾಪ ಮಾಡಿದ್ರಿ. ಯೆಹೋವ ನಿಮಗೆ ಕೊಟ್ಟ ಆಜ್ಞೆಗಳನ್ನ* ಪಾಲಿಸೋದನ್ನ ಅಷ್ಟು ಬೇಗ ಬಿಟ್ಟುಬಿಟ್ಟಿದ್ರಿ.+ 17 ಆಗ ನಿಮ್ಮ ಕಣ್ಮುಂದೆನೇ ನನ್ನ ಕೈಯಲ್ಲಿದ್ದ ಆ ಎರಡು ಹಲಗೆಗಳನ್ನ ಕೆಳಗೆ ಎಸೆದುಬಿಟ್ಟೆ, ಅವು ಚೂರುಚೂರು ಆದ್ವು.+ 18 ನಾನು ಮೊದ್ಲು ಮಾಡಿದ ಹಾಗೇ ಯೆಹೋವನ ಮುಂದೆ ಅಡ್ಡಬಿದ್ದೆ. 40 ದಿನ ಹಗಲೂರಾತ್ರಿ ಹೀಗೆ ಮಾಡ್ತಾ ಇದ್ದೆ. ಆ ಸಮಯದಲ್ಲಿ ಏನೂ ತಿನ್ನಲಿಲ್ಲ, ನೀರೂ ಕುಡಿಲಿಲ್ಲ.+ ನೀವು ಯೆಹೋವನಿಗೆ ಇಷ್ಟ ಆಗದ್ದನ್ನ ಮಾಡಿ ಪಾಪ ಮಾಡಿದ್ರಿಂದ, ಆತನನ್ನ ರೇಗಿಸಿದ್ರಿಂದ ನಾನು ಹೀಗೆ ಮಾಡಬೇಕಾಯ್ತು. 19 ನಾನು ತುಂಬ ಹೆದರಿದ್ದೆ. ಯಾಕಂದ್ರೆ ಯೆಹೋವನಿಗೆ ನಿಮ್ಮ ಮೇಲೆ ಎಷ್ಟು ಕೋಪ ಬಂದಿತ್ತೆಂದ್ರೆ+ ಆತನು ನಿಮ್ಮನ್ನ ನಾಶ ಮಾಡಬೇಕು ಅಂತ ಇದ್ದನು. ಆದ್ರೆ ಆಗ್ಲೂ ಯೆಹೋವ ನನ್ನ ಪ್ರಾರ್ಥನೆ ಕೇಳಿದನು.+

20 ಆರೋನನ ಮೇಲೂ ಯೆಹೋವನಿಗೆ ತುಂಬ ಕೋಪ ಬಂತು. ಅವನನ್ನ ನಾಶ ಮಾಡ್ತೀನಿ ಅಂದನು.+ ಆಗ್ಲೂ ನಾನು ಆರೋನನಿಗಾಗಿ ಅಂಗಲಾಚಿ ಬೇಡ್ಕೊಂಡೆ. 21 ಆಮೇಲೆ ನಾನು ನಿಮ್ಮ ಪಾಪಕ್ಕೆ ಸಾಕ್ಷಿಯಾಗಿದ್ದ ಕರುವಿನ ಮೂರ್ತಿಯನ್ನ+ ತೆಗೆದು ಬೆಂಕಿಯಲ್ಲಿ ಸುಟ್ಟುಬಿಟ್ಟೆ. ಅದನ್ನ ಜಜ್ಜಿ ಚೆನ್ನಾಗಿ ಅರೆದು ಧೂಳಿನ ಹಾಗೆ ಪುಡಿಪುಡಿ ಮಾಡಿ ಬೆಟ್ಟದಿಂದ ಹರಿದು ಬರೋ ತೊರೆಯಲ್ಲಿ ಚೆಲ್ಲಿದೆ.+

22 ಆಮೇಲೆ ತಬೇರಾ,+ ಮಸ್ಸ+ ಮತ್ತು ಕಿಬ್ರೋತ್‌-ಹತಾವಾದಲ್ಲಿ+ ಕೂಡ ನೀವು ಯೆಹೋವನಿಗೆ ಕೋಪ ಬರೋ ತರ ಮಾಡಿದ್ರಿ. 23 ಕಾದೇಶ್‌-ಬರ್ನೇಯದಿಂದ+ ಯೆಹೋವ ನಿಮ್ಮನ್ನ ಕಳಿಸಿದಾಗ ‘ಆ ದೇಶವನ್ನ ನಿಮಗೆ ಖಂಡಿತ ಕೊಡ್ತೀನಿ. ಹೋಗಿ ಅದನ್ನ ವಶ ಮಾಡ್ಕೊಳ್ಳಿ’ ಅಂತ ಹೇಳಿದನು. ಆದ್ರೆ ನಿಮ್ಮ ದೇವರಾದ ಯೆಹೋವ ಹೇಳಿದ ಹಾಗೆ ಮಾಡದೆ ಮತ್ತೆ ದಂಗೆಯೆದ್ರಿ.+ ಆತನ ಮೇಲೆ ನಂಬಿಕೆ ಇಡಲಿಲ್ಲ,+ ಆತನ ಮಾತು ಕೇಳಲಿಲ್ಲ. 24 ನಂಗೆ ನಿಮ್ಮ ಪರಿಚಯ ಆದ ದಿನದಿಂದ ನೀವು ಯೆಹೋವನ ವಿರುದ್ಧ ತಿರುಗಿ ಬೀಳ್ತಾ ಇದ್ದೀರ.

25 ಯೆಹೋವ ನಿಮ್ಮನ್ನ ನಾಶ ಮಾಡ್ತಾನೆ ಅಂತ ಹೇಳಿದ್ರಿಂದ ನಾನು 40 ದಿನ ಹಗಲೂರಾತ್ರಿ+ ಯೆಹೋವನ ಮುಂದೆ ಅಡ್ಡಬಿದ್ದು ಬಿದ್ದು 26 ಯೆಹೋವನ ಹತ್ರ ಅಂಗಲಾಚಿ ಬೇಡ್ತಾ ‘ವಿಶ್ವದ ರಾಜ ಯೆಹೋವನೇ ನಿನ್ನ ಜನ್ರನ್ನ ನಾಶ ಮಾಡಬೇಡ. ಅವರು ನಿನ್ನ ಸೊತ್ತು.+ ನಿನ್ನ ಶ್ರೇಷ್ಠತೆ, ಮಹಾ ಶಕ್ತಿ ತೋರಿಸಿ* ಅವ್ರನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದೆ.+ 27 ನಿನ್ನ ಸೇವಕರಾದ ಅಬ್ರಹಾಮ, ಇಸಾಕ, ಯಾಕೋಬರನ್ನ ನೆನಪು ಮಾಡ್ಕೊ.+ ಈ ಜನ್ರ ಹಠಮಾರಿತನ, ಕೆಟ್ಟತನ, ಪಾಪವನ್ನ ಗಮನಕ್ಕೆ ತಗೊಬೇಡ.+ 28 ನೀನು ಇವ್ರನ್ನ ನಾಶ ಮಾಡಿದ್ರೆ, ಯಾವ ದೇಶದಿಂದ ನೀನು ನಮ್ಮನ್ನ ಕರ್ಕೊಂಡು ಬಂದ್ಯೋ ಆ ದೇಶದವರು “ಮಾತು ಕೊಟ್ಟ ದೇಶಕ್ಕೆ ಅವ್ರನ್ನ ಕರ್ಕೊಂಡು ಹೋಗೋಕೆ ಯೆಹೋವನ ಕೈಯಲ್ಲಿ ಆಗಲಿಲ್ಲ. ಅವ್ರ ಮೇಲೆ ದ್ವೇಷ ಇದ್ದ ಕಾರಣ ಅವ್ರನ್ನ ಇಲ್ಲಿಂದ ಕರ್ಕೊಂಡು ಹೋಗಿ ಕಾಡಲ್ಲಿ ಸಾಯಿಸಿಬಿಟ್ಟ”+ ಅಂತ ಹೇಳಬಹುದು. 29 ಇವರು ನಿನ್ನ ಜನ್ರು, ನಿನ್ನ ಸೊತ್ತು.+ ನೀನೇ ಇವ್ರನ್ನ ನಿನ್ನ ಮಹಾ ಶಕ್ತಿಯಿಂದ* ಕರ್ಕೊಂಡು ಬಂದೆ’ + ಅಂತ ಹೇಳ್ದೆ.

10 ಆಗ ಯೆಹೋವ ‘ಈ ಮುಂಚೆ ನಾನು ನಿನಗೆ ಕೊಟ್ಟ ಕಲ್ಲಿನ ಹಲಗೆಗಳ ತರ ಬೇರೆ ಎರಡು ಕಲ್ಲಿನ ಹಲಗೆಗಳನ್ನ ಕೆತ್ತು.+ ಮರದ ಒಂದು ಮಂಜೂಷವನ್ನ* ಸಹ ಮಾಡು. ಬೆಟ್ಟ ಹತ್ತಿ ನನ್ನ ಹತ್ರ ಬಾ. 2 ನೀನು ಒಡೆದುಬಿಟ್ಟ ಕಲ್ಲಿನ ಹಲಗೆಗಳ ಮೇಲಿದ್ದ ಮಾತುಗಳನ್ನ ನಾನು ಅವುಗಳ ಮೇಲೂ ಬರಿತೀನಿ. ಆ ಕಲ್ಲಿನ ಹಲಗೆಗಳನ್ನ ಆ ಮರದ ಪೆಟ್ಟಿಗೆ ಒಳಗೆ ಇಡಬೇಕು’ ಅಂದನು. 3 ಹಾಗಾಗಿ ನಾನು ಅಕೇಶಿಯ ಮರದಿಂದ ಮಂಜೂಷ ಮಾಡ್ದೆ, ಮೊದಲಿನ ಕಲ್ಲಿನ ಹಲಗೆಗಳ ತರ ಎರಡು ಕಲ್ಲಿನ ಹಲಗೆಗಳನ್ನ ಕೆತ್ತಿ ಅವುಗಳನ್ನ ಕೈಯಲ್ಲಿ ಹಿಡ್ಕೊಂಡು ಬೆಟ್ಟ ಹತ್ತಿ ಹೋದೆ.+ 4 ನೀವು ಹೋರೇಬ್‌ ಬೆಟ್ಟದ ಹತ್ರ ಸೇರಿಬಂದಿದ್ದ+ ದಿನ ಯೆಹೋವ ಬೆಟ್ಟದ ಮೇಲಿಂದ ಬೆಂಕಿ ಒಳಗಿಂದ ಮಾತಾಡಿ+ ಹೇಳಿದ ಆಜ್ಞೆಗಳನ್ನ ಅಂದ್ರೆ 10 ಆಜ್ಞೆಗಳನ್ನ*+ ಆ ಹಲಗೆಗಳ ಮೇಲೆ ಮತ್ತೆ ಬರೆದು+ ಯೆಹೋವ ಅದನ್ನ ನನಗೆ ಕೊಟ್ಟನು. 5 ನಾನು ಬೆಟ್ಟದಿಂದ ಇಳಿದು ಬಂದು+ ಯೆಹೋವ ಆಜ್ಞೆ ಕೊಟ್ಟ ಹಾಗೇ ಆ ಹಲಗೆಗಳನ್ನ ನಾನು ಮಾಡಿದ ಮಂಜೂಷದಲ್ಲಿ ಇಟ್ಟೆ. ಅವು ಇವತ್ತಿಗೂ ಅದ್ರಲ್ಲೇ ಇದೆ.

6 ಆಮೇಲೆ ಇಸ್ರಾಯೇಲ್ಯರು ಬೇರೋತ್‌ ಬೆನೇ-ಯಾಕಾನ್‌ ಬಿಟ್ಟು ಮೋಸೇರಕ್ಕೆ ಬಂದ್ರು. ಅಲ್ಲಿ ಆರೋನ ತೀರಿಹೋದ, ಅವನನ್ನ ಸಮಾಧಿ ಮಾಡಿದ್ರು.+ ಅವನ ಜಾಗದಲ್ಲಿ ಅವನ ಮಗ ಎಲ್ಲಾಜಾರ ಪುರೋಹಿತನಾಗಿ ಸೇವೆ ಮಾಡೋಕೆ ಶುರು ಮಾಡಿದ.+ 7 ಮೋಸೇರದಿಂದ ಇಸ್ರಾಯೇಲ್ಯರು ಗುದ್ಗೋದಕ್ಕೆ ಬಂದ್ರು. ಗುದ್ಗೋದದಿಂದ ತೊರೆಗಳು ಹರಿಯೋ ಪ್ರದೇಶವಾದ ಯೊಟ್ಬಾತಕ್ಕೆ ಬಂದ್ರು.+

8 ಆ ಸಮಯದಲ್ಲಿ ಯೆಹೋವನ ಒಪ್ಪಂದದ ಮಂಜೂಷ ಹೊತ್ಕೊಂಡು ಹೋಗೋಕೆ,+ ಯೆಹೋವನ ಮುಂದೆ ನಿಂತು ಆತನ ಸೇವೆ ಮಾಡೋಕೆ, ಆತನ ಹೆಸ್ರಲ್ಲಿ ಆಶೀರ್ವಾದ ಮಾಡೋಕೆ+ ಯೆಹೋವ ಲೇವಿ ಕುಲದವರನ್ನ+ ಪ್ರತ್ಯೇಕಿಸಿದನು. ಅವರು ಇವತ್ತಿಗೂ ಆ ಕೆಲಸಗಳನ್ನೇ ಮಾಡ್ತಿದ್ದಾರೆ. 9 ಅದಕ್ಕೇ ಅವ್ರ ಸಹೋದರರಿಗೆ ಸಿಕ್ಕಿದ ಹಾಗೆ ಲೇವಿಯರಿಗೆ ಯಾವುದೇ ಪಾಲು ಅಥವಾ ಆಸ್ತಿ ಸಿಕ್ಕಿಲ್ಲ. ನಿಮ್ಮ ದೇವರಾದ ಯೆಹೋವ ಅವ್ರಿಗೆ ಹೇಳಿದ ಹಾಗೆ ಯೆಹೋವನೇ ಅವ್ರ ಆಸ್ತಿ.+ 10 ನಾನು ಮೊದಲ್ನೇ ಸಲ ಬೆಟ್ಟದ ಮೇಲಿದ್ದ ಹಾಗೇ ಈ ಸಲನೂ 40 ದಿನ ಹಗಲೂರಾತ್ರಿ+ ಬೆಟ್ಟದ ಮೇಲಿದ್ದೆ. ಯೆಹೋವ ಈ ಸಾರಿನೂ ನಾನು ಬೇಡ್ಕೊಂಡಾಗ ಕೇಳಿದನು.+ ಹಾಗಾಗಿ ಯೆಹೋವ ನಿಮ್ಮನ್ನ ನಾಶ ಮಾಡದೆ ಇರೋಕೆ ತೀರ್ಮಾನಿಸಿದನು. 11 ಆಮೇಲೆ ಯೆಹೋವ ನನಗೆ ‘ಇಲ್ಲಿಂದ ಹೋಗೋಕೆ ಜನ್ರನ್ನ ಸಿದ್ಧಮಾಡು. ಅವ್ರನ್ನ ಮುನ್ನಡೆಸು. ಈ ಜನ್ರಿಗೆ ಕೊಡ್ತೀನಿ ಅಂತ ಅವ್ರ ಪೂರ್ವಜರಿಗೆ ಆಣೆ ಮಾಡಿದ ದೇಶಕ್ಕೆ ಅವರು ಹೋಗಿ ಅದನ್ನ ವಶ ಮಾಡ್ಕೊಳ್ಳಲಿ’ + ಅಂದನು.

12 ಇಸ್ರಾಯೇಲ್ಯರೇ, ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?+ ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು,+ ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರೀಲೇ ನಡಿಬೇಕು,+ ಆತನನ್ನ ಪ್ರೀತಿಸಬೇಕು, ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನ ಸೇವೆ ಮಾಡಬೇಕು,+ 13 ನಾನು ಇವತ್ತು ಹೇಳ್ತಿರೋ ಯೆಹೋವನ ಆಜ್ಞೆಗಳನ್ನೂ ನಿಯಮಗಳನ್ನೂ ಪಾಲಿಸಬೇಕು, ಇಷ್ಟೆ ತಾನೇ? ಅವುಗಳನ್ನ ಪಾಲಿಸಿದ್ರೆ ನಿಮಗೇ ಒಳ್ಳೇದಾಗುತ್ತೆ.+ 14 ನೋಡಿ, ಉನ್ನತೋನ್ನತವಾದ ಆಕಾಶ, ಈ ಭೂಮಿ, ಅದ್ರಲ್ಲಿ ಇರೋದೆಲ್ಲ ನಿಮ್ಮ ದೇವರಾದ ಯೆಹೋವನದ್ದೇ.+ 15 ಯೆಹೋವ ನಿಮ್ಮ ಪೂರ್ವಜರಿಗೆ ಮಾತ್ರ ಆಪ್ತನಾಗಿ ಅವ್ರಿಗೆ ಪ್ರೀತಿ ತೋರಿಸಿದನು. ಅದಕ್ಕೆ ಭೂಮಿಯಲ್ಲಿ ಎಷ್ಟೋ ಜನ್ರಿದ್ರೂ ಅವ್ರ ಸಂತತಿಯವರಾದ ನಿಮ್ಮನ್ನೇ ಆತನು ತನ್ನ ಜನ್ರಾಗಿ ಆರಿಸ್ಕೊಂಡನು.+ ಹಾಗಾಗಿ ನೀವು ಇವತ್ತು ಆತನ ಜನ್ರಾಗಿ ಇದ್ದೀರ. 16 ನೀವೀಗ ನಿಮ್ಮ ಹೃದಯ ಶುದ್ಧ* ಮಾಡ್ಕೊಳ್ಳಿ.+ ಹಠಮಾರಿತನ ಬಿಟ್ಟುಬಿಡಿ.+ 17 ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಬೇರೆಲ್ಲ ದೇವರುಗಳಿಗಿಂತ ತುಂಬಾ ದೊಡ್ಡವನು,+ ಒಡೆಯರ ಒಡೆಯನು. ಶ್ರೇಷ್ಠ, ಬಲಶಾಲಿ, ಭಯವಿಸ್ಮಯ ಹುಟ್ಟಿಸೋ ದೇವರು. ಆತನು ಯಾರಿಗೂ ಭೇದಭಾವ ಮಾಡಲ್ಲ.+ ಲಂಚ ತಗೊಳ್ಳಲ್ಲ. 18 ಅನಾಥ* ಮಕ್ಕಳಿಗೆ, ವಿಧವೆಯರಿಗೆ+ ಆತನು ನ್ಯಾಯ ಕೊಡಿಸ್ತಾನೆ. ನಿಮ್ಮ ಮಧ್ಯ ಇರೋ ವಿದೇಶಿಯರನ್ನ+ ಪ್ರೀತಿಸ್ತಾನೆ, ಅವ್ರಿಗೆ ಊಟಬಟ್ಟೆ ಕೊಡ್ತಾನೆ. 19 ಅದೇ ತರ ನೀವು ಸಹ ನಿಮ್ಮ ಮಧ್ಯ ಇರೋ ವಿದೇಶಿಯರನ್ನ ಪ್ರೀತಿಸಬೇಕು. ಯಾಕಂದ್ರೆ ನೀವೂ ಈಜಿಪ್ಟಲ್ಲಿ ವಿದೇಶಿಯರಾಗಿ ಇದ್ರಲ್ಲಾ.+

20 ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು, ಆತನ ಸೇವೆಯನ್ನೇ ಮಾಡಬೇಕು,+ ಆತನಿಗೆ ಆಪ್ತರಾಗಿ ಇರಬೇಕು. ಆತನ ಹೆಸ್ರಲ್ಲೇ ಆಣೆ ಮಾಡಬೇಕು. 21 ಆತನನ್ನ ಮಾತ್ರ ಹಾಡಿ ಹೊಗಳಬೇಕು.+ ಆತನೇ ನಿಮ್ಮ ದೇವರು. ನಿಮ್ಮ ಕಣ್ಮುಂದೆ ಅದ್ಭುತಗಳನ್ನ, ಭಯವಿಸ್ಮಯ ಹುಟ್ಟಿಸೋ ವಿಷ್ಯಗಳನ್ನ ಮಾಡಿದ್ದು ಆತನೇ.+ 22 ನಿಮ್ಮ ಪೂರ್ವಜರು ಈಜಿಪ್ಟಿಗೆ ಹೋದಾಗ 70 ಜನ ಮಾತ್ರ ಇದ್ರು.+ ಆದ್ರೆ ಈಗ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಆಕಾಶದ ನಕ್ಷತ್ರಗಳ ಹಾಗೆ ಲೆಕ್ಕ ಮಾಡೋಕೆ ಆಗದಷ್ಟು ಹೆಚ್ಚು ಮಾಡಿದ್ದಾನೆ.+

11 ನೀವು ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು.+ ಆತನು ಹೇಳಿದ ಹಾಗೆ ನಿಮ್ಮ ಕರ್ತವ್ಯವನ್ನ ಯಾವಾಗ್ಲೂ ಮಾಡಬೇಕು. ಆತನ ನಿಯಮಗಳನ್ನ ತೀರ್ಪುಗಳನ್ನ ಆಜ್ಞೆಗಳನ್ನ ಸದಾ ಪಾಲಿಸಬೇಕು. 2 ಇವತ್ತು ನಾನು ನಿಮ್ಮ ಮಕ್ಕಳ ಜೊತೆ ಅಲ್ಲ, ನಿಮ್ಮ ಜೊತೆ ಮಾತಾಡ್ತಾ ಇದ್ದೀನಿ. ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಕೊಟ್ಟ ಶಿಸ್ತನ್ನ+ ಆತನ ಶ್ರೇಷ್ಠತೆಯನ್ನ+ ಆತನ ಮಹಾ ಶಕ್ತಿಯನ್ನ*+ ನೀವು ನೋಡಿದ್ದೀರ. ಆದ್ರೆ ನಿಮ್ಮ ಮಕ್ಕಳು ನೋಡಿಲ್ಲ, ಅದ್ರ ಬಗ್ಗೆ ಗೊತ್ತಿಲ್ಲ. 3 ಆತನು ಈಜಿಪ್ಟಿನ ರಾಜ ಫರೋಹನಿಗೆ, ಅವನ ಇಡೀ ದೇಶಕ್ಕೆ ಮಾಡಿದ್ದನ್ನ, ಅಲ್ಲಿ ಮಾಡಿದ ಅದ್ಭುತಗಳನ್ನ ಅವರು ನೋಡಿಲ್ಲ.+ 4 ಈಜಿಪ್ಟಿನ ಸೈನ್ಯ ನಿಮ್ಮನ್ನ ಬೆನ್ನಟ್ಟಿ ಬಂದಾಗ ದೇವರು ಫರೋಹನ ಕುದುರೆಗಳಿಗೆ, ಯುದ್ಧ ರಥಗಳಿಗೆ, ಸೈನಿಕರಿಗೆ ಏನು ಮಾಡಿದ, ಅವ್ರನ್ನ ಹೇಗೆ ಕೆಂಪು ಸಮುದ್ರದ ನೀರಲ್ಲಿ ಮುಳುಗಿಸಿದ, ಯೆಹೋವ ಅವ್ರನ್ನೆಲ್ಲ ಹೇಗೆ ಸರ್ವನಾಶ ಮಾಡಿದ ಅಂತ ನಿಮ್ಮ ಮಕ್ಕಳು ನೋಡಿಲ್ಲ.+ 5 ಕಾಡಲ್ಲಿ ಇದ್ದಾಗಿಂದ ಇಲ್ಲಿ ಬರೋ ತನಕ ಆತನು ನಿಮಗೋಸ್ಕರ ಏನೆಲ್ಲ ಮಾಡಿದ ಅಂತ ಅವರು ನೋಡಿಲ್ಲ. 6 ಅಷ್ಟೇ ಅಲ್ಲ ರೂಬೇನನ ವಂಶದವನಾದ ಎಲೀಯಾಬನ ಮಕ್ಕಳಾದ ದಾತಾನ್‌, ಅಬೀರಾಮನನ್ನ, ಅವ್ರ ಕುಟುಂಬದವರನ್ನ, ಡೇರೆಗಳನ್ನ, ಅವ್ರ ಜೊತೆ ಇದ್ದ ಜನ್ರನ್ನ, ಪ್ರಾಣಿಗಳನ್ನ ಎಲ್ಲ ಇಸ್ರಾಯೇಲ್ಯರ ಕಣ್ಮುಂದೆನೇ ಭೂಮಿ ಹೇಗೆ ಬಾಯಿ ತೆರೆದು ನುಂಗಿಬಿಡ್ತು ಅನ್ನೋದನ್ನೂ ನಿಮ್ಮ ಮಕ್ಕಳು ನೋಡಿಲ್ಲ.+ 7 ಆದ್ರೆ ಯೆಹೋವ ಮಾಡಿದ ಆ ಎಲ್ಲ ಮಹಾ ಅದ್ಭುತಗಳನ್ನ ಕಣ್ಣಾರೆ ನೋಡಿದ್ದೀರ!

8 ನಾನು ಇವತ್ತು ನಿಮಗೆ ಕೊಡ್ತಿರೋ ಎಲ್ಲ ಆಜ್ಞೆಗಳನ್ನ ಪಾಲಿಸಬೇಕು. ಆಗ ಮಾತ್ರ ನೀವು ಬಲಶಾಲಿ ಆಗ್ತೀರ, ಯೋರ್ದನ್‌ ದಾಟಿ ಆ ದೇಶವನ್ನ ವಶ ಮಾಡ್ಕೊಳ್ತೀರ. 9 ಯೆಹೋವ ನಿಮ್ಮ ಪೂರ್ವಜರಿಗೆ, ಅವ್ರ ಸಂತತಿಯವರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟ ದೇಶದಲ್ಲಿ ಅಂದ್ರೆ ಹಾಲೂ ಜೇನೂ ಹರಿಯೋ ದೇಶದಲ್ಲಿ+ ಜಾಸ್ತಿ ವರ್ಷ ಬದುಕ್ತೀರ.+

10 ನೀವು ವಶ ಮಾಡ್ಕೊಳ್ಳೋ ದೇಶ ಈಜಿಪ್ಟಿನ ತರ ಇಲ್ಲ. ನೀವು ಬಿಟ್ಟು ಬಂದ ಆ ಈಜಿಪ್ಟಲ್ಲಿ ಬೀಜ ಬಿತ್ತಬೇಕಿತ್ತು, ತರಕಾರಿ ತೋಟಕ್ಕೆ ಮಾಡೋ ತರ ಹೊಲಗದ್ದೆಗೆಲ್ಲ ತುಂಬ ಕಷ್ಟಪಟ್ಟು ನೀರು ಬಿಡಬೇಕಿತ್ತು.* 11 ಆದ್ರೆ ಯೋರ್ದನ್‌ ದಾಟಿ ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ಬೆಟ್ಟ, ಕಣಿವೆ, ಬಯಲು ಇದೆ.+ ಆಕಾಶದಿಂದ ಬೀಳೋ ಮಳೆ ಅದಕ್ಕೆ ನೀರು ಕೊಡುತ್ತೆ.+ 12 ಅದು ನಿಮ್ಮ ದೇವರಾದ ಯೆಹೋವ ನೋಡ್ಕೊಳ್ತಿರೋ ದೇಶ. ವರ್ಷದ ಆರಂಭದಿಂದ ಕೊನೆ ತನಕ ನಿಮ್ಮ ದೇವರಾದ ಯೆಹೋವ ಅದನ್ನ ಯಾವಾಗ್ಲೂ ಕಾಯ್ತಾನೆ.*

13 ನಾನು ಇವತ್ತು ಕೊಡ್ತಿರೋ ಆಜ್ಞೆಗಳನ್ನ ನೀವು ಶ್ರದ್ಧೆಯಿಂದ ಪಾಲಿಸಿದ್ರೆ, ನಿಮ್ಮ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಿ, ಆತನ ಸೇವೆ ಮಾಡಿದ್ರೆ+ 14 ಆತನು ನಿಮ್ಮ ದೇಶದಲ್ಲಿ ಕಾಲಕಾಲಕ್ಕೆ ಮಳೆ ಸುರಿಸ್ತಾನೆ. ಶರತ್ಕಾಲದಲ್ಲೂ ವಸಂತಕಾಲದಲ್ಲೂ ಮಳೆ ಬೀಳೋ ಹಾಗೆ ಮಾಡ್ತಾನೆ. ಇದ್ರಿಂದ ನಿಮಗೆ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ ಸಿಗ್ತಾ ಇರುತ್ತೆ.+ 15 ಹೊಲಗಳಲ್ಲಿ ನಿಮ್ಮ ಪ್ರಾಣಿಗಳಿಗೆ ಬೇಕಾದ ಮೇವನ್ನ ಆತನು ಕೊಡ್ತಾನೆ. ನಿಮಗೂ ಆಹಾರ ಬೇಕಾದಷ್ಟು ಇರುತ್ತೆ, ನೀವು ತಿಂದು ತೃಪ್ತರಾಗ್ತೀರ.+ 16 ಆದ್ರೆ ನೀವು* ಮರುಳಾಗಿ ಬೇರೆ ದೇವರುಗಳನ್ನ ಆರಾಧಿಸಿ, ಅಡ್ಡಬಿದ್ದು ತಪ್ಪು ದಾರಿ ಹಿಡಿಬೇಡಿ. ಈ ವಿಷ್ಯದಲ್ಲಿ ಜಾಗ್ರತೆ ವಹಿಸಿ.+ 17 ಇಲ್ಲಾಂದ್ರೆ ಯೆಹೋವನ ಕೋಪ ನಿಮ್ಮ ಮೇಲೆ ಹೊತ್ತಿ ಉರಿಯುತ್ತೆ, ಮಳೆ ಬರದ ಹಾಗೆ ಆಕಾಶ ಮುಚ್ಚಿಬಿಡ್ತಾನೆ.+ ಆಗ ಭೂಮೀಲಿ ಬೆಳೆ ಬೆಳೆಯಲ್ಲ. ಯೆಹೋವ ನಿಮಗೆ ಕೊಡೋ ಆ ಒಳ್ಳೇ ದೇಶದಿಂದ ಬೇಗ ನಾಶ ಆಗ್ತೀರ.+

18 ನನ್ನ ಈ ಮಾತುಗಳನ್ನ ನಿಮ್ಮ ಹೃದಯದಲ್ಲಿ ಅಚ್ಚೊತ್ತಬೇಕು, ನಿಮ್ಮ ಜೀವನದಲ್ಲಿ* ಅನ್ವಯಿಸಬೇಕು. ಇವುಗಳನ್ನ ಜ್ಞಾಪಕ ಪಟ್ಟಿ ತರ ಕೈಗೆ, ಹಣೆಪಟ್ಟಿ ತರ ಹಣೆಗೆ ಕಟ್ಕೊಬೇಕು.+ 19 ಇವುಗಳನ್ನ ನಿಮ್ಮ ಮಕ್ಕಳಿಗೆ ಕಲಿಸಬೇಕು. ಮನೇಲಿ ಕೂತಿರುವಾಗ, ದಾರೀಲಿ ನಡಿವಾಗ, ಮಲಗುವಾಗ ಏಳುವಾಗ ಇವುಗಳ ಬಗ್ಗೆ ಅವ್ರ ಜೊತೆ ಮಾತಾಡಬೇಕು.+ 20 ನಿಮ್ಮ ಮನೇಬಾಗಿಲಿನ ಚೌಕಟ್ಟುಗಳ ಮೇಲೆ, ಬಾಗಿಲ ಮೇಲೆ ಬರೀಬೇಕು. 21 ಹೀಗೆ ಮಾಡಿದ್ರೆ ಯೆಹೋವ ನಿಮ್ಮ ಪೂರ್ವಜರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟ ದೇಶದಲ್ಲಿ ಜಾಸ್ತಿ ವರ್ಷ ಬದುಕ್ತೀರ.+ ಭೂಮಿ ಮೇಲೆ ಆಕಾಶ ಎಷ್ಟು ಕಾಲ ಇರುತ್ತೋ ಅಷ್ಟು ಕಾಲ ನೀವೂ ನಿಮ್ಮ ಮಕ್ಕಳೂ* ಅಲ್ಲಿ ಇರ್ತಿರ.

22 ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು,+ ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರೀಲಿ ನಡಿಬೇಕು, ಆತನಿಗೆ ಆಪ್ತರಾಗಿ ಇರಬೇಕು+ ಅಂತ ನಾನು ಕೊಟ್ಟಿರೋ ಆಜ್ಞೆಗಳನ್ನ ನೀವು ಚಾಚೂತಪ್ಪದೆ ಪಾಲಿಸಿ. 23 ಆಗ ಯೆಹೋವ ಆ ಎಲ್ಲ ಜನಾಂಗಗಳನ್ನ ನಿಮ್ಮ ಮುಂದಿಂದ ಓಡಿಸಿಬಿಡ್ತಾನೆ.+ ಅಷ್ಟೇ ಅಲ್ಲ ನೀವು ನಿಮಗಿಂತ ದೊಡ್ಡದಾದ, ಹೆಚ್ಚು ಸಂಖ್ಯೆಯಲ್ಲಿ ಇರೋ ಆ ಜನಾಂಗಗಳ ದೇಶವನ್ನ ವಶ ಮಾಡ್ಕೊಳ್ತೀರ.+ 24 ನೀವು ಕಾಲಿಡೋ ಜಾಗವೆಲ್ಲ ನಿಮ್ಮದಾಗುತ್ತೆ.+ ನಿಮ್ಮ ದೇಶದ ಗಡಿ ಕಾಡಿಂದ ಲೆಬನೋನಿನ ತನಕ ಮಹಾನದಿ ಯೂಫ್ರೆಟಿಸಿಂದ ಪಶ್ಚಿಮದ ಸಮುದ್ರದ ತನಕ* ಇರುತ್ತೆ.+ 25 ಯಾರೂ ನಿಮ್ಮ ಮುಂದೆ ನಿಲ್ಲಲ್ಲ.+ ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನೀವು ಹೋಗೋ ದೇಶದಲ್ಲೆಲ್ಲ ಅಲ್ಲಿನ ಜನ ನಿಮಗೆ ಹೆದರಿ ನಡುಗೋ ತರ ಆತನು ಮಾಡ್ತಾನೆ.+

26 ನೋಡಿ, ನಾನು ಇವತ್ತು ನಿಮ್ಮ ಮುಂದೆ ಆಶೀರ್ವಾದ ಬೇಕಾ, ಶಾಪ ಬೇಕಾ ಅಂತ ಆಯ್ಕೆ ಮಾಡೋ ಅವಕಾಶ ಇಡ್ತೀನಿ.+ 27 ನಾನು ಇವತ್ತು ನಿಮಗೆ ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ಪಾಲಿಸಿದ್ರೆ ಆಶೀರ್ವಾದ ಸಿಗುತ್ತೆ.+ 28 ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ಪಾಲಿಸದೇ ಇದ್ರೆ,+ ನಾನು ಇವತ್ತು ಕೊಡ್ತಿರೋ ಆಜ್ಞೆಗಳನ್ನ* ಪಾಲಿಸದೆ ಬಿಟ್ಟುಬಿಟ್ರೆ, ಇಲ್ಲಿ ತನಕ ನಿಮಗೆ ಗೊತ್ತಿಲ್ಲದ ದೇವರುಗಳನ್ನ ಆರಾಧಿಸಿದ್ರೆ ನಿಮ್ಮ ಮೇಲೆ ಶಾಪ ಬರುತ್ತೆ.

29 ನಿಮ್ಮ ದೇವರಾದ ಯೆಹೋವ ನೀವು ವಶ ಮಾಡ್ಕೊಳ್ಳೋ ದೇಶಕ್ಕೆ ನಿಮ್ಮನ್ನ ಸೇರಿಸಿದ ಮೇಲೆ ನೀವು ಗೆರಿಜ್ಜೀಮ್‌ ಬೆಟ್ಟದಿಂದ ಆಶೀರ್ವಾದ ಮಾಡಿ. ಏಬಾಲ್‌ ಬೆಟ್ಟದಿಂದ ಶಾಪ ಹಾಕಿ.+ 30 ಆ ಬೆಟ್ಟಗಳು ಯೋರ್ದನ್‌ ನದಿ ಆಚೆ ಪಶ್ಚಿಮದ ಕಡೆ ಅರಾಬಾದಲ್ಲಿರೋ ಕಾನಾನ್ಯರ ದೇಶದಲ್ಲಿ, ಗಿಲ್ಗಾಲಿನ ಮುಂದೆ, ದೊಡ್ಡ ಮರಗಳಿದ್ದ ಮೋರೆ+ ಅನ್ನೋ ಸ್ಥಳದ ಹತ್ರ ಇವೆ. 31 ಈಗ ನೀವು ಯೋರ್ದನನ್ನ ದಾಟಿ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಳ್ಳಿ.+ ಆ ದೇಶವನ್ನ ವಶ ಮಾಡ್ಕೊಂಡು ಅದ್ರಲ್ಲಿ ಜೀವಿಸುವಾಗ 32 ನಾನು ಇವತ್ತು ಕೊಡ್ತಿರೋ ಎಲ್ಲ ನಿಯಮಗಳನ್ನ ತೀರ್ಪುಗಳನ್ನ ತಪ್ಪದೆ ಪಾಲಿಸಬೇಕು.+

12 ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮ್ಮ ವಶಕ್ಕೆ ಕೊಡೋ ಆ ದೇಶದಲ್ಲಿ ನೀವು ಬದುಕಿರೋ ತನಕ ಎಲ್ಲ ದಿನ ಈ ನಿಯಮಗಳನ್ನ ತೀರ್ಪುಗಳನ್ನ ತಪ್ಪದೆ ಪಾಲಿಸಬೇಕು. 2 ನಿಮ್ಮ ಕೈಯಲ್ಲಿ ಸೋತು ಹೋಗೋ ದೇಶಗಳು ದೊಡ್ಡ ಪರ್ವತಗಳ ಮೇಲೆ, ಬೆಟ್ಟಗಳ ಮೇಲೆ, ಹಚ್ಚಹಸುರಾದ ಮರಗಳ ಕೆಳಗೆ ತಮ್ಮ ದೇವರುಗಳ ಸೇವೆ ಮಾಡುತ್ತೆ.+ ಆ ಎಲ್ಲಾ ಜಾಗಗಳನ್ನ ಪೂರ್ತಿ ನಾಶ ಮಾಡಬೇಕು. 3 ಅವ್ರ ಯಜ್ಞವೇದಿಗಳನ್ನ ನಾಶ ಮಾಡಬೇಕು, ವಿಗ್ರಹಸ್ತಂಭಗಳನ್ನ+ ಚೂರುಚೂರು ಮಾಡಬೇಕು, ಪೂಜಾಕಂಬಗಳನ್ನ* ಸುಟ್ಟುಬಿಡಬೇಕು, ಮೂರ್ತಿಗಳನ್ನ ಕಡಿದು ಹಾಕಬೇಕು.+ ಆ ಜಾಗದಲ್ಲಿ ಆ ದೇವರುಗಳ ಹೆಸ್ರೇ ಇಲ್ಲದ ಹಾಗೆ ಮಾಡಬೇಕು.+

4 ಅಲ್ಲಿನ ಜನ ತಮ್ಮ ದೇವರುಗಳನ್ನ ಆರಾಧಿಸೋ ತರ ನೀವು ನಿಮ್ಮ ದೇವರಾದ ಯೆಹೋವನನ್ನ ಆರಾಧಿಸಬಾರದು.+ 5 ನಿಮ್ಮ ಎಲ್ಲ ಕುಲಗಳಿಗೆ ಸಿಕ್ಕಿರೋ ಪ್ರದೇಶಗಳಲ್ಲಿ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ, ವಾಸಕ್ಕಾಗಿ ಒಂದು ಜಾಗ ಆರಿಸ್ಕೊಳ್ತಾನೆ. ನೀವು ಅಲ್ಲಿಗೇ ಹೋಗಿ ಆತನನ್ನ ಆರಾಧಿಸಬೇಕು.+ 6 ಅಲ್ಲಿಗೆ ಸರ್ವಾಂಗಹೋಮ ಬಲಿ,+ ಬೇರೆ ಬಲಿ, ದಶಮಾಂಶ,*+ ಕಾಣಿಕೆ,+ ಹರಕೆಯ ಕಾಣಿಕೆ, ಸ್ವಇಷ್ಟದ ಕಾಣಿಕೆ ತರಬೇಕು.+ ಹಸು ಆಡು ಕುರಿಗಳ ಮೊದಲ ಮರಿಗಳನ್ನ ಆ ಜಾಗಕ್ಕೇ ತರಬೇಕು.+ 7 ಅಲ್ಲಿ ನಿಮ್ಮ ಕುಟುಂಬದ ಜೊತೆ ನಿಮ್ಮ ದೇವರಾದ ಯೆಹೋವನ ಮುಂದೆ ಊಟ ಮಾಡಬೇಕು.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಆಶೀರ್ವಾದ ಮಾಡೋದ್ರಿಂದ ನೀವು ಮಾಡಿದ ಎಲ್ಲ ಕೆಲಸಗಳಿಗೆ ಆತನ ಮುಂದೆ ಸಂತೋಷ ಸಂಭ್ರಮದಿಂದ ಇರಬೇಕು.+

8 ನೀವು ಆ ದೇಶಕ್ಕೆ ಹೋದ ಮೇಲೆ ನಿಮ್ಮ ದೃಷ್ಟಿಯಲ್ಲಿ ಸರಿ ಅನಿಸಿದ್ದನ್ನ ಮಾಡಬಾರದು. ಈಗ ನಮ್ಮಲ್ಲಿ ಎಲ್ರೂ ಅದನ್ನೇ ಮಾಡ್ತಾ ಇದ್ದಾರೆ. 9 ಯಾಕಂದ್ರೆ ನೀವಿನ್ನೂ ನಿಮ್ಮ ವಾಸಸ್ಥಳಕ್ಕೆ+ ಅಂದ್ರೆ ನಿಮ್ಮ ದೇವರಾದ ಯೆಹೋವ ಆಸ್ತಿಯಾಗಿ ಕೊಡೋ ದೇಶಕ್ಕೆ ಹೋಗಿಲ್ಲ. 10 ಯೋರ್ದನ್‌ ದಾಟಿ+ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋದ್ಮೇಲೆ ಆತನು ಖಂಡಿತ ಸುತ್ತ ಇರೋ ಶತ್ರುಗಳಿಂದ ನಿಮ್ಮನ್ನ ಕಾಪಾಡ್ತಾನೆ. ಆಗ ಸಮಾಧಾನದಿಂದ, ಸುರಕ್ಷಿತವಾಗಿ ಜೀವಿಸ್ತೀರ.+ 11 ನಾನು ಹೇಳಿದ್ದನ್ನೆಲ್ಲ ಅಂದ್ರೆ ಸರ್ವಾಂಗಹೋಮ ಬಲಿ, ಬೇರೆ ಬಲಿ, ಹತ್ತರ ಒಂದು ಭಾಗ,+ ಕಾಣಿಕೆ, ಯೆಹೋವನಿಗೆ ಮಾಡಿದ ಹರಕೆ ತೀರಿಸೋಕೆ ಕೊಡೋ ಎಲ್ಲ ಕಾಣಿಕೆ ಇದನ್ನೆಲ್ಲ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಜಾಗಕ್ಕೆ+ ನೀವು ತರಬೇಕು. 12 ಆಗ ನೀವು, ಮಕ್ಕಳು, ನಿಮ್ಮ ದಾಸದಾಸಿಯರು, ಯಾವುದೇ ಪಾಲು, ಆಸ್ತಿ ಸಿಗದೆ+ ನಿಮ್ಮ ಪಟ್ಟಣಗಳಲ್ಲಿ ವಾಸಿಸ್ತಿರೋ ಲೇವಿಯರು ನಿಮ್ಮ ದೇವರಾದ ಯೆಹೋವನ ಮುಂದೆ ಸಂತೋಷ ಸಂಭ್ರಮದಿಂದ ಇರಬೇಕು.+ 13 ನಿಮಗೆ ಇಷ್ಟ ಆಗೋ ಜಾಗದಲ್ಲಿ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬಾರದು, ಈ ವಿಷ್ಯದಲ್ಲಿ ಜಾಗ್ರತೆ ವಹಿಸಿ!+ 14 ಯೆಹೋವ ಯಾವ ಕುಲದ ಪ್ರದೇಶದಿಂದ ತನಗಾಗಿ ಒಂದು ಜಾಗ ಆರಿಸ್ಕೊಳ್ತಾನೋ ಅಲ್ಲಿ ಮಾತ್ರ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬೇಕು. ನಾನು ಹೇಳಿದ್ದನ್ನೆಲ್ಲ ಅದೇ ಜಾಗದಲ್ಲಿ ಮಾಡಬೇಕು.+

15 ನಿಮಗೆ ಮಾಂಸ ತಿನ್ನೋಕೆ ಮನಸ್ಸಾದಾಗೆಲ್ಲ ನಿಮ್ಮ ಪಟ್ಟಣಗಳಲ್ಲಿ ಪ್ರಾಣಿಯನ್ನ ಕಡಿದು ಅದ್ರ ಮಾಂಸ ತಿನ್ನಬಹುದು.+ ನಿಮ್ಮ ದೇವರಾದ ಯೆಹೋವನ ಆಶೀರ್ವಾದದಿಂದ ನಿಮ್ಮ ಹತ್ರ ಇರೋ ಪ್ರಾಣಿಗಳಲ್ಲಿ ನಿಮಗೆ ಬೇಕಾದಷ್ಟು ಕಡಿದು ತಿನ್ನಬಹುದು. ಜಿಂಕೆಯ ಮಾಂಸದ ತರ* ಈ ಮಾಂಸವನ್ನ ಸಹ ಶುದ್ಧರಾಗಿರೋ ಮತ್ತು ಅಶುದ್ಧರಾಗಿರೋ ವ್ಯಕ್ತಿಗಳೆಲ್ಲ ತಿನ್ನಬಹುದು. 16 ಆದ್ರೆ ನೀವು ರಕ್ತ ತಿನ್ನಬಾರದು.+ ಅದನ್ನ ನೀರಿನ ಹಾಗೆ ನೆಲಕ್ಕೆ ಸುರಿಬೇಕು.+ 17 ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ, ಇವುಗಳಲ್ಲಿ ಹತ್ತನೇ ಒಂದು ಭಾಗ, ಹಸು ಆಡು ಕುರಿಗಳ ಮೊದಲ ಮರಿಗಳನ್ನ,+ ಕಾಣಿಕೆಗಳನ್ನ, ಹರಕೆ ತೀರಿಸೋಕೆ ಕೊಡೋ ಯಾವುದೇ ಕಾಣಿಕೆಯನ್ನ, ಸ್ವಇಷ್ಟದ ಕಾಣಿಕೆಗಳನ್ನ ನಿಮ್ಮ ಪಟ್ಟಣಗಳಲ್ಲಿ ತಿನ್ನಬಾರದು. 18 ಇದನ್ನೆಲ್ಲ ನೀವು ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲೇ+ ತಿನ್ನಬೇಕು. ನೀವು, ನಿಮ್ಮ ಮಕ್ಕಳು, ದಾಸದಾಸಿಯರು, ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ಲೇವಿಯರು ಇವುಗಳನ್ನ ನಿಮ್ಮ ದೇವರಾದ ಯೆಹೋವನ ಮುಂದೆ ತಿನ್ನಬೇಕು. ನೀವು ಮಾಡಿದ ಎಲ್ಲ ಕೆಲಸಗಳಿಗಾಗಿ ನಿಮ್ಮ ದೇವರಾದ ಯೆಹೋವನ ಮುಂದೆ ಸಂತೋಷ ಸಂಭ್ರಮದಿಂದ ಇರಬೇಕು. 19 ನಿಮ್ಮ ದೇಶದಲ್ಲಿ ಜೀವಿಸೋಷ್ಟು ಕಾಲ ಲೇವಿಯರನ್ನ ಅಸಡ್ಡೆ ಮಾಡಬಾರದು.+ ಈ ವಿಷ್ಯದಲ್ಲಿ ಜಾಗ್ರತೆ ವಹಿಸಿ.

20 ನಿಮ್ಮ ದೇವರಾದ ಯೆಹೋವ ತಾನು ಮಾತುಕೊಟ್ಟ+ ಹಾಗೆ ನಿಮ್ಮ ಪ್ರದೇಶವನ್ನ ವಿಸ್ತರಿಸಿದ+ ಮೇಲೆ ನಿಮಗೆ ಮಾಂಸ ತಿನ್ನಬೇಕಂತ ಆಸೆಯಾದಾಗೆಲ್ಲ ನೀವು ಮಾಂಸ ತಿನ್ನಬಹುದು.+ 21 ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳ+ ನೀವು ವಾಸವಾಗಿರೋ ಸ್ಥಳದಿಂದ ದೂರ ಇದ್ರೆ ಯೆಹೋವ ನಿಮಗೆ ಕೊಟ್ಟಿರೋ ಹಸು-ಹೋರಿಗಳಲ್ಲಿ ಅಥವಾ ಆಡು-ಕುರಿಗಳಲ್ಲಿ ಕೆಲವನ್ನ ನೀವು ಕಡಿದು ನಿಮ್ಮನಿಮ್ಮ ಪಟ್ಟಣಗಳಲ್ಲೇ ತಿನ್ನಬಹುದು. ನಿಮಗೆ ಮಾಂಸ ತಿನ್ನೋಕೆ ಆಸೆಯಾದಾಗೆಲ್ಲ ನಾನು ಕೊಟ್ಟ ಆಜ್ಞೆ ಪ್ರಕಾರನೇ ಮಾಡಬೇಕು. 22 ಜಿಂಕೆಯ+ ಮಾಂಸದ ತರ* ಈ ಮಾಂಸವನ್ನ ಸಹ ಶುದ್ಧರಾಗಿರೋ ಮತ್ತು ಅಶುದ್ಧರಾಗಿರೋ ವ್ಯಕ್ತಿಗಳೆಲ್ಲ ತಿನ್ನಬಹುದು. 23 ಆದ್ರೆ ರಕ್ತ ತಿನ್ಲೇಬಾರದು+ ಅಂತ ದೃಢ ತೀರ್ಮಾನ ಮಾಡಿ. ಯಾಕಂದ್ರೆ ರಕ್ತ ಜೀವವಾಗಿದೆ.+ ನೀವು ಒಂದು ಪ್ರಾಣಿಯ ಮಾಂಸದ ಜೊತೆ ಅದ್ರ ಜೀವವನ್ನ ತಿನ್ನಬಾರದು. 24 ನೀವು ರಕ್ತ ತಿನ್ನಬಾರದು. ಅದನ್ನ ನೀರಿನ ಹಾಗೆ ನೆಲದಲ್ಲಿ ಸುರಿಬೇಕು.+ 25 ನೀವು ರಕ್ತ ತಿನ್ಲೇಬಾರದು. ಹೀಗೆ ನೀವು ಯೆಹೋವನ ದೃಷ್ಟಿಯಲ್ಲಿ ಸರಿಯಾದನ್ನ ಮಾಡಿದ್ರೆ ನಿಮಗೂ ನಿಮ್ಮ ಮಕ್ಕಳಿಗೂ ಒಳ್ಳೇದಾಗುತ್ತೆ. 26 ಯೆಹೋವ ಆರಿಸ್ಕೊಳ್ಳೋ ಸ್ಥಳಕ್ಕೆ ಹೋಗುವಾಗ ನಿಮ್ಮ ಪವಿತ್ರ ಉಡುಗೊರೆಗಳನ್ನ, ನಿಮ್ಮ ಹರಕೆಯ ಕಾಣಿಕೆಗಳನ್ನ ಮಾತ್ರ ತಗೊಂಡು ಹೋಗಬೇಕು. 27 ಅಲ್ಲಿ ನಿಮ್ಮ ಸರ್ವಾಂಗಹೋಮ ಬಲಿಯ ಪ್ರಾಣಿಗಳ ಮಾಂಸವನ್ನ, ರಕ್ತವನ್ನ+ ನಿಮ್ಮ ದೇವರಾದ ಯೆಹೋವನ ಯಜ್ಞವೇದಿ ಮೇಲೆ ಅರ್ಪಿಸಬೇಕು. ಬೇರೆ ಬಲಿಗಳಿಗಾಗಿ ನೀವು ಅರ್ಪಿಸೋ ಪ್ರಾಣಿಗಳ ರಕ್ತವನ್ನ ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯ ಪಕ್ಕದಲ್ಲಿ ಸುರಿಬೇಕು.+ ಅವುಗಳ ಮಾಂಸ ತಿನ್ನಬಹುದು.

28 ನಾನು ಹೇಳಿರೋ ಎಲ್ಲಾ ವಿಷ್ಯಗಳನ್ನ ತಪ್ಪದೆ ಪಾಲಿಸಬೇಕು. ಹೀಗೆ ನಿಮ್ಮ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೇದನ್ನೂ ಸರಿಯಾದದ್ದನ್ನೂ ಮಾಡ್ತಾ ಇರೋದಾದ್ರೆ ನಿಮಗೆ ನಿಮ್ಮ ಮಕ್ಕಳಿಗೆ ಯಾವಾಗ್ಲೂ ಒಳ್ಳೇದಾಗುತ್ತೆ.

29 ನೀವು ವಶ ಮಾಡ್ಕೊಳ್ಳೋ ದೇಶದ ಜನ್ರನ್ನ ನಿಮ್ಮ ದೇವರಾದ ಯೆಹೋವ ನಾಶ ಮಾಡಿ+ ಆ ದೇಶದಲ್ಲಿ ನೀವು ವಾಸ ಮಾಡ್ತಿರುವಾಗ 30 ಆ ಜನ್ರ ಬಲೆಗೆ ಬೀಳಬೇಡಿ. ಈ ವಿಷ್ಯದಲ್ಲಿ ಹುಷಾರಾಗಿರಿ. ಅವ್ರ ದೇವರುಗಳ ಬಗ್ಗೆ ತಿಳ್ಕೊಳ್ಳೋಕೆ ಹೋಗಬೇಡಿ. ‘ಅವರು ತಮ್ಮ ದೇವರುಗಳನ್ನ ಹೇಗೆ ಆರಾಧಿಸ್ತಿದ್ರು? ನಾನೂ ಅದನ್ನೇ ಮಾಡ್ತೀನಿ’ + ಅನ್ನಬೇಡಿ. 31 ಆ ಜನ ತಮ್ಮ ದೇವರುಗಳನ್ನ ಆರಾಧಿಸೋ ತರ ನಿಮ್ಮ ದೇವರಾದ ಯೆಹೋವನನ್ನ ಆರಾಧಿಸಬಾರದು. ಯಾಕಂದ್ರೆ ಯೆಹೋವ ದ್ವೇಷಿಸೋ ಎಲ್ಲ ಅಸಹ್ಯ ವಿಷ್ಯಗಳನ್ನ ಅವರು ತಮ್ಮ ದೇವರುಗಳಿಗಾಗಿ ಮಾಡ್ತಾರೆ. ಎಷ್ಟರ ಮಟ್ಟಿಗಂದ್ರೆ ಆ ದೇವರುಗಳಿಗೆ ಬಲಿ ಅರ್ಪಿಸೋಕೆ ತಮ್ಮ ಮಕ್ಕಳನ್ನೇ ಬೆಂಕಿಯಲ್ಲಿ ಸುಡ್ತಾರೆ.+ 32 ನಾನು ಹೇಳಿರೋ ಪ್ರತಿಯೊಂದು ವಿಷ್ಯವನ್ನ ನೀವು ಜಾಗ್ರತೆಯಿಂದ ಪಾಲಿಸಬೇಕು.+ ಆ ಆಜ್ಞೆಗಳಿಗೆ ಏನನ್ನೂ ಸೇರಿಸಬಾರದು, ಏನನ್ನೂ ತೆಗಿಬಾರದು.+

13 ಯಾರಾದ್ರೂ ನಾನು ಪ್ರವಾದಿ ಅಥವಾ ಕನಸು ನೋಡಿ ಭವಿಷ್ಯ ಹೇಳ್ತೀನಿ ಅಂತ ನಿಮ್ಮ ಹತ್ರ ಬರಬಹುದು. ಅವನು ಒಂದು ಚಿಹ್ನೆಯನ್ನ ಅಥವಾ ಭವಿಷ್ಯದ ಬಗ್ಗೆ ಏನೋ ಒಂದು ವಿಷ್ಯವನ್ನ ಹೇಳಿದ್ರೆ, 2 ಅವನು ಹೇಳಿದ ಹಾಗೇ ನಡೆದುಬಿಟ್ರೆ, ಅವನು ನಿಮಗೆ ಗೊತ್ತಿಲ್ಲದ ಬೇರೆ ದೇವರುಗಳ ಬಗ್ಗೆ ಮಾತಾಡ್ತಾ, ‘ಬನ್ನಿ, ಆ ದೇವರುಗಳನ್ನ ಆರಾಧಿಸೋಣ, ಅವುಗಳ ಸೇವೆ ಮಾಡೋಣ’ ಅನ್ನಬಹುದು. 3 ನೀವು ಅಂಥ ಪ್ರವಾದಿಯ ಮಾತನ್ನ ಅಥವಾ ಕನಸು ನೋಡಿ ಭವಿಷ್ಯ ಹೇಳೋನ ಮಾತನ್ನ ಕೇಳಬಾರದು.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವನನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ಪ್ರೀತಿಸ್ತೀರಾ+ ಇಲ್ವಾ ಅಂತ ತಿಳ್ಕೊಳ್ಳೋಕೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಪರೀಕ್ಷೆ ಮಾಡ್ತಿದ್ದಾನೆ.+ 4 ನಿಮ್ಮ ದೇವರಾದ ಯೆಹೋವ ಹೇಳೋ ದಾರಿಯಲ್ಲೇ ನೀವು ನಡೀಬೇಕು, ಭಯಪಡಬೇಕು, ಆತನ ಆಜ್ಞೆಗಳನ್ನೇ ಪಾಲಿಸಬೇಕು. ಆತನು ಹೇಳೋದನ್ನ ಕೇಳಿ, ಆತನ ಸೇವೆಯನ್ನ ಮಾತ್ರ ಮಾಡಬೇಕು, ಆತನನ್ನೇ ಗಟ್ಟಿಯಾಗಿ ಹಿಡ್ಕೊಬೇಕು.+ 5 ಆದ್ರೆ ಆ ಪ್ರವಾದಿಯನ್ನ ಅಥವಾ ಕನಸು ನೋಡಿ ಭವಿಷ್ಯ ಹೇಳೋರನ್ನ ಸಾಯಿಸಬೇಕು.+ ಯಾಕಂದ್ರೆ ಈಜಿಪ್ಟಲ್ಲಿ ಗುಲಾಮರಾಗಿದ್ದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನ ವಿರುದ್ಧನೇ ನೀವು ತಿರುಗಿ ಬಿಳೋ ತರ ಅವರು ಮಾಡಿಬಿಡ್ತಾರೆ. ನಿಮ್ಮ ದೇವರಾದ ಯೆಹೋವ ನಿಮಗೆ ಆಜ್ಞೆ ಕೊಟ್ಟ ದಾರಿಯಲ್ಲಿ ನೀವು ನಡಿಯೋದನ್ನ ಬಿಟ್ಟುಬಿಡಬೇಕು ಅಂತ ಹಾಗೆ ಮಾಡ್ತಾರೆ. ನಿಮ್ಮ ಮಧ್ಯದಿಂದ ಕೆಟ್ಟತನ ತೆಗೆದುಹಾಕಬೇಕು.+

6 ನಿಮ್ಮ ಒಡಹುಟ್ಟಿದ ಅಣ್ಣತಮ್ಮ ಆಗ್ಲಿ ಮಗಮಗಳು ಆಗ್ಲಿ ನೀವು ತುಂಬ ಪ್ರೀತಿಸೋ ನಿಮ್ಮ ಹೆಂಡತಿ ಆಗ್ಲಿ ನಿಮ್ಮ ಆಪ್ತ ಸ್ನೇಹಿತ ಆಗ್ಲಿ ಗುಟ್ಟಾಗಿ ನಿಮಗೆ ‘ಬಾ, ನಾವು ಬೇರೆ ದೇವರುಗಳನ್ನ ಆರಾಧನೆ ಮಾಡೋಣ’ + ಅಂತ ಹೇಳಿ ನಿಮಗಾಗ್ಲಿ ನಿಮ್ಮ ಪೂರ್ವಜರಿಗಾಗ್ಲಿ ಗೊತ್ತಿಲ್ಲದ ದೇವರುಗಳನ್ನ ಆರಾಧಿಸೋ ತರ ನಿಮ್ಮನ್ನ ಮರಳು ಮಾಡೋಕೆ ಪ್ರಯತ್ನಿಸಿದ್ರೆ, 7 ನಿಮ್ಮ ಹತ್ರದಲ್ಲಿ, ದೂರದಲ್ಲಿ ಅಥವಾ ಭೂಮಿಯ ಯಾವುದೇ ಮೂಲೆಯಲ್ಲಿ ವಾಸಿಸೋ ಜನಾಂಗಗಳ ದೇವರುಗಳ ಸೇವೆ ಮಾಡೋಣ ಅಂತ ಹೇಳಿದ್ರೆ 8 ನೀವು ಒಪ್ಪಬಾರದು, ಅವನು ಹೇಳಿದ ತರ ಮಾಡಬಾರದು.+ ಅವನಿಗೆ ದಯೆ, ಅನುಕಂಪ ತೋರಿಸಬಾರದು, ಕಾಪಾಡಬಾರದು. 9 ಅವನನ್ನ ಸಾಯಿಸ್ಲೇಬೇಕು.+ ಅದಕ್ಕಾಗಿ ನೀವೇ ಅವನ ಮೇಲೆ ಮೊದ್ಲು ಕಲ್ಲೆಸಿಬೇಕು. ಆಮೇಲೆ ಬೇರೆಲ್ಲ ಜನ್ರು ಕಲ್ಲೆಸಿಬೇಕು.+ 10 ನೀವು ಗುಲಾಮರಾಗಿದ್ದ ಈಜಿಪ್ಟಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನನ್ನ ಬಿಟ್ಟು ದೂರ ಹೋಗೋ ತರ ಮಾಡೋಕೆ ಪ್ರಯತ್ನಿಸಿದ್ರಿಂದ ಅವನನ್ನ ಕಲ್ಲೆಸೆದು ಸಾಯಿಸಬೇಕು.+ 11 ಆಗ ಎಲ್ಲ ಇಸ್ರಾಯೇಲ್ಯರು ಇದನ್ನ ಕೇಳಿ ಹೆದರ್ತಾರೆ, ಇಂಥ ಕೆಟ್ಟ ಕೆಲಸವನ್ನ ಮುಂದೆ ಯಾವತ್ತೂ ಮಾಡಲ್ಲ.+

12 ನಿಮ್ಮ ದೇವರಾದ ಯೆಹೋವ ನಿಮ್ಮ ನಿವಾಸಕ್ಕಾಗಿ ಕೊಡೋ ಯಾವುದಾದ್ರೂ ಒಂದು ಪಟ್ಟಣದಿಂದ ನಿಮಗೆ ಒಂದು ಸುದ್ದಿ ಸಿಕ್ಕಿದ್ರೆ ಅಂದ್ರೆ 13 ಯಾವ ಕೆಲಸಕ್ಕೂ ಬಾರದ ಅಲ್ಲಿನ ಗಂಡಸರು ತಮ್ಮ ಪಟ್ಟಣದ ಜನ್ರಿಗೆ ‘ಬನ್ನಿ, ಬೇರೆ ದೇವರುಗಳ ಸೇವೆ ಮಾಡೋಣ’ ಅಂತ ಹೇಳಿ ಅವ್ರಿಗೆ ಗೊತ್ತಿಲ್ಲದ ದೇವರುಗಳನ್ನ ಆರಾಧಿಸೋಕೆ ಪ್ರೇರೇಪಿಸ್ತಾ ತಪ್ಪುದಾರಿಗೆ ಎಳಿತಿದ್ದಾರೆ ಅನ್ನೋ ಸುದ್ದಿ ಸಿಕ್ಕಿದ್ರೆ 14 ನೀವು ಅದ್ರ ಬಗ್ಗೆ ಪರಿಶೀಲಿಸಿ, ಪೂರ್ತಿ ತನಿಖೆ ಮಾಡಿ, ಚೆನ್ನಾಗಿ ವಿಚಾರಿಸಬೇಕು.+ ಆಗ ನಿಮ್ಮ ಮಧ್ಯ ಆ ಅಸಹ್ಯ ವಿಷ್ಯ ನಡೆದದ್ದು ನಿಜ ಅಂತ ಗೊತ್ತಾದ್ರೆ 15 ಆ ಪಟ್ಟಣದ ಜನ್ರನ್ನ ನೀವು ಕತ್ತಿಯಿಂದ ಸಾಯಿಸ್ಲೇಬೇಕು.+ ಆ ಪಟ್ಟಣವನ್ನ, ಅದ್ರಲ್ಲಿರೋ ಎಲ್ಲವನ್ನ ಪೂರ್ತಿ ನಾಶ ಮಾಡಬೇಕು. ಪ್ರಾಣಿಗಳನ್ನೂ ಕೊಲ್ಲಬೇಕು.+ 16 ಎಲ್ಲ ಕೊಳ್ಳೆಯನ್ನ ಪಟ್ಟಣದ ಮುಖ್ಯಸ್ಥಳದಲ್ಲಿ* ಕೂಡಿಸಿ ಇಡೀ ಪಟ್ಟಣವನ್ನ ಬೆಂಕಿಯಿಂದ ಸುಟ್ಟುಬಿಡಬೇಕು. ಆ ಎಲ್ಲ ಕೊಳ್ಳೆ ನಿಮ್ಮ ದೇವರಾದ ಯೆಹೋವನಿಗೆ ಅರ್ಪಿಸೋ ಸರ್ವಾಂಗಹೋಮ ಬಲಿ ತರ ಇರುತ್ತೆ. ಅದು ಯಾವಾಗ್ಲೂ ಪಾಳುಬಿದ್ದ ಪಟ್ಟಣ ಆಗಿರುತ್ತೆ. ಅದನ್ನ ಮತ್ತೆ ಯಾವತ್ತೂ ಕಟ್ಟಬಾರದು. 17 ನಾಶಕ್ಕಾಗಿ ಇಟ್ಟ ಯಾವುದೇ ವಸ್ತುವನ್ನ ನೀವು ತಗೊಳ್ಳಬಾರದು.+ ಆಗ ಯೆಹೋವ ಕಡುಕೋಪನ ಬಿಟ್ಟುಬಿಡ್ತಾನೆ. ನಿಮ್ಮ ಪೂರ್ವಜರಿಗೆ ಮಾತು ಕೊಟ್ಟ ಹಾಗೆ ನಿಮಗೆ ಕರುಣೆ, ಕನಿಕರ ತೋರಿಸ್ತಾನೆ, ನಿಮ್ಮ ಸಂಖ್ಯೆಯನ್ನ ತುಂಬ ಹೆಚ್ಚಿಸ್ತಾನೆ.+ 18 ನೀವು ನಿಮ್ಮ ದೇವರಾದ ಯೆಹೋವನ ಮಾತು ಕೇಳಬೇಕು. ನಾನು ಇವತ್ತು ನಿಮಗೆ ಹೇಳ್ತಿರೋ ಆತನ ಎಲ್ಲ ಆಜ್ಞೆಗಳನ್ನ ಪಾಲಿಸಬೇಕು. ಹೀಗೆ ನಿಮ್ಮ ದೇವರಾದ ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿನೋ ಅದನ್ನೇ ಮಾಡ್ತಾ ಇರಬೇಕು.+

14 ನೀವು ನಿಮ್ಮ ದೇವರಾದ ಯೆಹೋವನ ಮಕ್ಕಳು. ಹಾಗಾಗಿ ಯಾರಾದ್ರೂ ತೀರಿಹೋದಾಗ ನಿಮ್ಮ ಹುಬ್ಬುಗಳನ್ನ* ಬೋಳಿಸ್ಕೊಬೇಡಿ,+ ದೇಹಕ್ಕೆ ಗಾಯ ಮಾಡ್ಕೊಬೇಡಿ.+ 2 ಯಾಕಂದ್ರೆ ನಿಮ್ಮ ದೇವರಾದ ಯೆಹೋವನಿಗೆ ನೀವು ಪವಿತ್ರ ಜನ್ರಾಗಿದ್ದೀರ.+ ಯೆಹೋವ ಭೂಮಿಯಲ್ಲಿರೋ ಎಲ್ಲ ಜನ್ರಿಂದ ನಿಮ್ಮನ್ನ ಆರಿಸ್ಕೊಂಡು ತನ್ನ ಜನ್ರಾಗಿ, ತನ್ನ ವಿಶೇಷ ಸೊತ್ತಾಗಿ ಮಾಡ್ಕೊಂಡಿದ್ದಾನೆ.+

3 ಅಸಹ್ಯವಾದ ಯಾವುದನ್ನೂ ನೀವು ತಿನ್ನಬಾರದು.+ 4 ಯಾವ ಪ್ರಾಣಿಗಳನ್ನ ನೀವು ತಿನ್ನಬಹುದಂದ್ರೆ+ ಹಸು, ಕುರಿ, ಆಡು, 5 ಜಿಂಕೆ, ಎರಳೆ, ಕಡವೆ, ಕಾಡುಮೇಕೆ, ಸಾರಂಗ, ಕಾಡುಕುರಿ, ಬೆಟ್ಟದ ಕುರಿ. 6 ಕಾಲಿನ ಗೊರಸು ಪೂರ್ತಿ ಸೀಳಿ ಎರಡು ಭಾಗವಾಗಿರೋ ಮೆಲುಕು ಹಾಕೋ ಯಾವುದೇ ಪ್ರಾಣಿನ ನೀವು ತಿನ್ನಬಹುದು. 7 ಆದ್ರೆ ಮೆಲುಕು ಹಾಕಿದ್ರೂ ಕಾಲಿನ ಗೊರಸು ಸೀಳಿರದ ಪ್ರಾಣಿನ ಅಥವಾ ಕಾಲಿನ ಗೊರಸು ಸೀಳಿದ್ರೂ ಮೆಲುಕು ಹಾಕದಿರೋ ಪ್ರಾಣಿನ ನೀವು ತಿನ್ನಬಾರದು. ಒಂಟೆ, ಮೊಲ, ಬಿಲಕರಡಿ ಮೆಲುಕು ಹಾಕುತ್ತೆ, ಆದ್ರೆ ಅವುಗಳ ಕಾಲಿನ ಗೊರಸು ಸೀಳಿರಲ್ಲ. ಹಾಗಾಗಿ ಅವು ನಿಮಗೆ ಅಶುದ್ಧ.+ 8 ಹಂದಿಯ ಗೊರಸು ಸೀಳಿರುತ್ತೆ, ಆದ್ರೆ ಮೆಲುಕು ಹಾಕಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ. ನೀವು ಇವುಗಳಲ್ಲಿ ಯಾವುದ್ರ ಮಾಂಸವನ್ನೂ ತಿನ್ನಬಾರದು. ಅವು ಸತ್ತಾಗ ಮುಟ್ಲೂಬಾರದು.

9 ಜಲಚರಗಳಲ್ಲಿ ಯಾವ ಜೀವಿಗಳಿಗೆ ಈಜು ರೆಕ್ಕೆಗಳು, ಹುರುಪೆಗಳು ಇರುತ್ತೋ ಆ ಎಲ್ಲ ಜೀವಿಗಳನ್ನ ತಿನ್ನಬಹುದು.+ 10 ಆದ್ರೆ ಯಾವುದಕ್ಕೆ ಈಜು ರೆಕ್ಕೆಗಳು, ಹುರುಪೆಗಳು ಇಲ್ವೋ ಅಂಥ ಜೀವಿಗಳನ್ನ ತಿನ್ನಬಾರದು. ಅವು ನಿಮಗೆ ಅಶುದ್ಧ.

11 ಶುದ್ಧವಾದ ಎಲ್ಲ ಪಕ್ಷಿಗಳನ್ನ ತಿನ್ನಬಹುದು. 12 ಆದ್ರೆ ತಿನ್ನಬಾರದ ಪಕ್ಷಿಗಳು ಯಾವುದಂದ್ರೆ ಹದ್ದು, ಕಡಲ ಗಿಡುಗ, ಕಪ್ಪು ರಣಹದ್ದು,+ 13 ಕೆಂಪು ಗಿಡುಗ, ಕಪ್ಪು ಗಿಡುಗ, ಎಲ್ಲ ಜಾತಿಯ ಹದ್ದುಗಳು, 14 ಎಲ್ಲ ಜಾತಿಯ ಕಾಗೆಗಳು, 15 ಉಷ್ಟ್ರಪಕ್ಷಿ, ಗೂಬೆ, ಕಡಲ ಹಕ್ಕಿ, ಎಲ್ಲ ಜಾತಿಯ ಗಿಡುಗಗಳು, 16 ಚಿಕ್ಕ ಗೂಬೆ, ಉದ್ದ ಕಿವಿಯ ಗೂಬೆ, ಹಂಸ, 17 ನೇರೆಹಕ್ಕಿ,* ರಣಹದ್ದು, ನೀರುಕಾಗೆ, 18 ಕೊಕ್ಕರೆ, ಎಲ್ಲ ಜಾತಿಯ ಕ್ರೌಂಚ, ಚಂದ್ರಮುಕುಟ ಹಕ್ಕಿ ಮತ್ತು ಬಾವಲಿ. 19 ರೆಕ್ಕೆ ಇರೋ ಗುಂಪು ಗುಂಪಾಗಿರೋ ಕೀಟಗಳೂ ನಿಮಗೆ ಅಶುದ್ಧ, ಅದನ್ನ ತಿನ್ನಬಾರದು. 20 ಹಾರೋ ಜೀವಿಗಳಲ್ಲಿ ಶುದ್ಧವಾದ ಎಲ್ಲವನ್ನ ತಿನ್ನಬಹುದು.

21 ಸತ್ತುಬಿದ್ದಿರೋ ಪ್ರಾಣಿನ ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ವಿದೇಶಿಯರಿಗೆ ಕೊಡಬಹುದು, ಅವರು ಅದನ್ನ ತಿನ್ನಬಹುದು. ನೀವು ವಿದೇಶಿಯರಿಗೆ ಮಾರಲೂಬಹುದು. ಆದ್ರೆ ಸತ್ತುಬಿದ್ದಿರೋ ಪ್ರಾಣಿನ ನೀವು ತಿನ್ನಬಾರದು.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವನಿಗೆ ನೀವು ಪವಿತ್ರ ಜನ್ರಾಗಿದ್ದೀರ.

ನೀವು ಆಡುಮರಿಯ ಮಾಂಸನ ಅದ್ರ ತಾಯಿ ಹಾಲಲ್ಲಿ ಬೇಯಿಸಬಾರದು.+

22 ನೀವು ಪ್ರತಿವರ್ಷ ಹೊಲದಲ್ಲಿ ಬೀಜ ಬಿತ್ತಿ ಬೆಳೆದ ಎಲ್ಲ ಬೆಳೆಯಲ್ಲಿ ಹತ್ತನೇ ಒಂದು ಭಾಗ* ಕಾಣಿಕೆಯಾಗಿ ಕೊಡ್ಲೇಬೇಕು.+ 23 ನೀವು ಬೆಳೆದ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ ಇವುಗಳಲ್ಲಿ ಹತ್ತನೇ ಒಂದು ಭಾಗನ ಮತ್ತು ಹಸು, ಆಡು-ಕುರಿಗಳ ಮೊದಲ ಮರಿಗಳನ್ನ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಜಾಗಕ್ಕೆ ತಂದು ಅಲ್ಲಿ ಆತನ ಮುಂದೆ ತಿನ್ನಬೇಕು.+ ಇದ್ರಿಂದ ನೀವು ನಿಮ್ಮ ದೇವರಾದ ಯೆಹೋವನಿಗೆ ಯಾವಾಗ್ಲೂ ಭಯಪಡೋಕೆ ಕಲಿತೀರ.+

24 ಆದ್ರೆ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳ+ ತುಂಬ ದೂರದಲ್ಲಿದ್ರೆ, ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಆಶೀರ್ವಾದ ಮಾಡಿರೋದ್ರಿಂದ ನಿಮಗೆ ಸಿಕ್ಕಿರೋ ಸಮೃದ್ಧಿಯಲ್ಲಿ ಹತ್ತನೇ ಒಂದು ಭಾಗವನ್ನ, ಮೊದಲ ಮರಿಗಳನ್ನ ಅಷ್ಟು ದೂರ ತಗೊಂಡು ಹೋಗೋಕೆ ಆಗದಿದ್ರೆ 25 ಅವನ್ನ ಮಾರಿ ಅದ್ರಿಂದ ಸಿಕ್ಕಿದ ಹಣ ತಗೊಂಡು ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳಕ್ಕೆ ಹೋಗಬೇಕು. 26 ಅಲ್ಲಿ ಆ ಹಣದಿಂದ ಹಸು, ಕುರಿ, ಆಡು, ದ್ರಾಕ್ಷಾಮದ್ಯ, ಬೇರೆ ಮದ್ಯ ಅಥವಾ ನಿಮಗೆ ಇಷ್ಟವಾದ ಯಾವುದನ್ನ ಬೇಕಾದ್ರೂ ಕೊಂಡ್ಕೊಳ್ಳಬಹುದು. ಅದನ್ನ ನೀವು, ನಿಮ್ಮ ಕುಟುಂಬದವರು ನಿಮ್ಮ ದೇವರಾದ ಯೆಹೋವನ ಮುಂದೆ ತಿಂದು ಸಂತೋಷ ಸಂಭ್ರಮದಿಂದ ಇರಬೇಕು.+ 27 ಆಗ ನಿಮ್ಮ ಪಟ್ಟಣದಲ್ಲಿರೋ ಲೇವಿಯರನ್ನ ಅಸಡ್ಡೆ ಮಾಡಬಾರದು.+ ಯಾಕಂದ್ರೆ ನಿಮಗೆ ಸಿಕ್ಕಿದ ಹಾಗೆ ಅವ್ರಿಗೆ ಯಾವ ಪಾಲು ಅಥವಾ ಆಸ್ತಿ ಸಿಗಲಿಲ್ಲ.+

28 ಪ್ರತಿ ಮೂರು ವರ್ಷಗಳ ಕೊನೇಲಿ ನೀವು ಆ ವರ್ಷದ ಬೆಳೆಯ ಹತ್ತನೇ ಒಂದು ಭಾಗವನ್ನ ಪೂರ್ತಿಯಾಗಿ ತಂದು ನಿಮ್ಮ ಪಟ್ಟಣಗಳ ಒಳಗೆ ಶೇಖರಿಸಿಡಬೇಕು.+ 29 ನಿಮ್ಮ ಜೊತೆ ಯಾವ ಪಾಲು ಅಥವಾ ಆಸ್ತಿ ಸಿಗದಿರೋ ಮತ್ತು ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ಲೇವಿಯರು, ನಿಮ್ಮ ಪಟ್ಟಣಗಳಲ್ಲಿರೋ ವಿದೇಶಿಯರು, ಅನಾಥ ಮಕ್ಕಳು,* ವಿಧವೆಯರು ಅದನ್ನ ತಗೊಂಡು ತೃಪ್ತಿ ಆಗೋಷ್ಟು ತಿಂತಾರೆ.+ ಆಗ ನಿಮ್ಮ ದೇವರಾದ ಯೆಹೋವ ನೀವು ಮಾಡೋ ಎಲ್ಲ ಕೆಲಸಗಳನ್ನ ಆಶೀರ್ವಾದ ಮಾಡ್ತಾನೆ.+

15 ಪ್ರತಿ ಏಳನೇ ವರ್ಷದಲ್ಲಿ ಸಾಲ ಮನ್ನಾ ಮಾಡಬೇಕು.+ 2 ಹೇಗಂದ್ರೆ, ತನ್ನ ನೆರೆಯವನಿಗೆ ಅಥವಾ ತನ್ನ ಸಹೋದರನಿಗೆ ಸಾಲ ಕೊಟ್ಟಿರೋ ಎಲ್ರೂ ಆ ಸಾಲ ಮನ್ನಾ ಮಾಡಬೇಕು. ಅದನ್ನ ತೀರಿಸ್ಲೇಬೇಕು ಅಂತ ಒತ್ತಾಯ ಮಾಡಬಾರದು. ಯಾಕಂದ್ರೆ ಯೆಹೋವನ ಗೌರವಕ್ಕಾಗಿ ಆ ಏಳನೇ ವರ್ಷವನ್ನ ಬಿಡುಗಡೆಯ ವರ್ಷ ಅಂತ ಪ್ರಕಟಿಸಲಾಗಿರುತ್ತೆ.+ 3 ನೀವು ವಿದೇಶಿಯರಿಗೆ ಸಾಲ ಕೊಟ್ಟಿರೋದಾದ್ರೆ ಅದನ್ನ ತೀರಿಸೋಕೆ ಅವ್ರಿಗೆ ಹೇಳಬಹುದು.+ ಆದ್ರೆ ನಿಮ್ಮ ಸಹೋದರ ನಿಮಗೆ ಏನಾದ್ರೂ ಕೊಡಬೇಕಾಗಿದ್ರೆ ಅದನ್ನ ಬಿಟ್ಟುಬಿಡಬೇಕು. 4 ನಿಮ್ಮಲ್ಲಿ ಯಾರೂ ಬಡತನಕ್ಕೆ ಬರಬಾರದು. ಯಾಕಂದ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶದಲ್ಲಿ ಯೆಹೋವ ನಿಮ್ಮನ್ನ ಖಂಡಿತ ಆಶೀರ್ವದಿಸ್ತಾನೆ.+ 5 ಆದ್ರೆ ಆಶೀರ್ವಾದ ಸಿಗಬೇಕಾದ್ರೆ ನಿಮ್ಮ ದೇವರಾದ ಯೆಹೋವನ ಮಾತನ್ನ ಚಾಚೂತಪ್ಪದೆ ಕೇಳಬೇಕು. ನಾನು ಇವತ್ತು ಕೊಡ್ತಿರೋ ಈ ಎಲ್ಲ ಆಜ್ಞೆಗಳನ್ನ ತಪ್ಪದೆ ಪಾಲಿಸಬೇಕು.+ 6 ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನಿಮ್ಮನ್ನ ಆಶೀರ್ವದಿಸ್ತಾನೆ. ಹಾಗಾಗಿ ನೀವು ಬೇರೆ ಜನಾಂಗಗಳಿಗೆ ಸಾಲ ಕೊಡ್ತೀರೇ ಹೊರತು ಅವ್ರಿಂದ ಸಾಲ ತಗೊಳ್ಳೋ ಸ್ಥಿತಿ ಬರಲ್ಲ.+ ನೀವು ತುಂಬ ಜನಾಂಗಗಳ ಮೇಲೆ ಅಧಿಕಾರ ನಡೆಸ್ತೀರ, ಅವರು ನಿಮ್ಮ ಮೇಲೆ ಅಧಿಕಾರ ನಡೆಸಲ್ಲ.+

7 ನಿಮ್ಮ ದೇವರಾದ ಯೆಹೋವ ಕೊಡೋ ದೇಶದ ಯಾವುದಾದ್ರೂ ಒಂದು ಪಟ್ಟಣದಲ್ಲಿ ನಿಮ್ಮ ಸಹೋದರನೊಬ್ಬ ಬಡವನಾದ್ರೆ ಅವನ ಜೊತೆ ನೀವು ಕಲ್ಲು ಹೃದಯದವನ ತರ ನಡ್ಕೊಬಾರದು, ಜಿಪುಣತನ ತೋರಿಸಬಾರದು.+ 8 ನೀವು ಕೈಬಿಚ್ಚಿ ಉದಾರವಾಗಿ ಕೊಡಬೇಕು.+ ಅವನಿಗೆ ಅಗತ್ಯ ಇರೋದನ್ನ ಅಥವಾ ಅವನ ಹತ್ರ ಇಲ್ಲದಿರೋದನ್ನ ಅವನಿಗೆ ಸಾಲವಾಗಿ* ಕೊಡೋಕೆ ಹಿಂದೆಮುಂದೆ ನೋಡಬಾರದು. 9 ನೀವು ‘ಏಳನೇ ವರ್ಷ ಅಂದ್ರೆ ಬಿಡುಗಡೆಯ ವರ್ಷ ಬರೋಕೆ ಇನ್ನೇನು ಸ್ವಲ್ಪನೇ ಸಮಯ ಇದೆ’ + ಅಂತ ಆಲೋಚಿಸಿ ನಿಮ್ಮ ಬಡ ಸಹೋದರನಿಗೆ ಏನೂ ಕೊಡದೆ ಇರಬಾರದು, ಸಹಾಯ ಮಾಡದೇ ಇರಬಾರದು. ನಿಮ್ಮ ಮನಸ್ಸಲ್ಲಿ ಇಂಥ ಕೆಟ್ಟ ಯೋಚನೆ ಬರದ ಹಾಗೆ ನೋಡ್ಕೊಳ್ಳಿ. ಆ ಬಡ ಸಹೋದರ ನಿಮ್ಮ ಬಗ್ಗೆ ದೂರುತ್ತಾ ಯೆಹೋವನ ಹತ್ರ ಹೇಳ್ಕೊಂಡ್ರೆ ದೇವರ ದೃಷ್ಟಿಯಲ್ಲಿ ನೀವು ಪಾಪಿಗಳಾಗ್ತೀರ.+ 10 ನೀವು ಉದಾರವಾಗಿ ಕೊಡಬೇಕು,+ ಒಲ್ಲದ ಮನಸ್ಸಿಂದ ಕೊಡಬಾರದು. ಉದಾರವಾಗಿ ಕೊಟ್ರೆ ನಿಮ್ಮ ದೇವರಾದ ಯೆಹೋವ ನೀವು ಮಾಡೋ ಪ್ರತಿಯೊಂದು ಕೆಲಸವನ್ನ ಪ್ರಯಾಸವನ್ನ ಆಶೀರ್ವದಿಸ್ತಾನೆ.+ 11 ನಿಮ್ಮ ದೇಶದಲ್ಲಿ ಬಡವರು ಇದ್ದೇ ಇರ್ತಾರೆ.+ ಹಾಗಾಗಿ ‘ನಿಮ್ಮ ದೇಶದಲ್ಲಿ ಕಷ್ಟದಲ್ಲಿರೋ, ಬಡವನಾಗಿರೋ ನಿಮ್ಮ ಸಹೋದರನಿಗೆ ನೀವು ಧಾರಾಳ ಮನಸ್ಸಿಂದ ಕೈಬಿಚ್ಚಿ ಕೊಡಬೇಕು’ + ಅಂತ ನಿಮಗೆ ಆಜ್ಞೆ ಕೊಡ್ತಾ ಇದ್ದೀನಿ.

12 ನಿಮಗೆ ಮಾರಿರೋ ಒಬ್ಬ ಇಬ್ರಿಯ ಪುರುಷ ಅಥವಾ ಸ್ತ್ರೀ ನಿಮ್ಮ ಹತ್ರ ಆರು ವರ್ಷ ಕೆಲಸ ಮಾಡಿದ್ರೆ ಏಳನೇ ವರ್ಷ ಆ ಇಬ್ರಿಯನನ್ನ ಬಿಡುಗಡೆ ಮಾಡಬೇಕು.+ 13 ಅವನನ್ನ ಬಿಡುಗಡೆ ಮಾಡುವಾಗ ಬರಿಗೈಲಿ ಕಳಿಸಬಾರದು. 14 ಅವನಿಗೆ ಆಡು-ಕುರಿ, ದವಸಧಾನ್ಯ, ಎಣ್ಣೆ, ದ್ರಾಕ್ಷಾಮದ್ಯ ಎಲ್ಲವನ್ನ ಧಾರಾಳವಾಗಿ ಕೊಟ್ಟು ಕಳಿಸಬೇಕು. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಎಷ್ಟು ಆಶೀರ್ವಾದ ಮಾಡಿದ್ದಾನೋ ಅದಕ್ಕೆ ತಕ್ಕ ಹಾಗೆ ಅವನಿಗೆ ಕೊಡಬೇಕು. 15 ಈಜಿಪ್ಟಲ್ಲಿ ಗುಲಾಮರಾಗಿ ನೀವು ಇದ್ರಿ ಅನ್ನೋದನ್ನ ಯಾವತ್ತೂ ಮರಿಬೇಡಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದ್ನಲ್ಲಾ. ಹಾಗಾಗಿ ನಾನು ಇವತ್ತು ನಿಮಗೆ ಈ ಆಜ್ಞೆ ಕೊಡ್ತಾ ಇದ್ದೀನಿ.

16 ಆದ್ರೆ ಆ ದಾಸ ನಿಮ್ಮನ್ನೂ ನಿಮ್ಮ ಮನೆಯವರನ್ನೂ ಪ್ರೀತಿಸೋದ್ರಿಂದ, ನಿಮ್ಮ ಹತ್ರ ಇದ್ದಾಗ ಅವನು ತುಂಬ ಖುಷಿಯಾಗಿ ಇದ್ದಿದ್ರಿಂದ ‘ನಾನು ಹೋಗಲ್ಲ, ಇಲ್ಲೇ ಇರ್ತೀನಿ’ ಅಂದ್ರೆ+ 17 ನೀವು ಅವನನ್ನ ಬಾಗಿಲಿನ ಮುಂದೆ ಕರ್ಕೊಂಡು ಬಂದು ದೊಡ್ಡ ಸೂಜಿಯಿಂದ ಅವನ ಕಿವಿ ಚುಚ್ಚಬೇಕು. ಆಗ ಅವನು ಜೀವನವಿಡೀ ನಿಮ್ಮ ದಾಸನಾಗಿ ಇರ್ತಾನೆ. ನಿಮ್ಮ ದಾಸಿಯ ವಿಷ್ಯದಲ್ಲೂ ನೀವು ಹೀಗೇ ಮಾಡಬೇಕು. 18 ಒಬ್ಬ ದಾಸನನ್ನ ಬಿಡುಗಡೆ ಮಾಡುವಾಗ ‘ಅವನನ್ನ ಕಳಿಸಿದ್ರೆ ತುಂಬ ಕಷ್ಟನಷ್ಟ ಅನುಭವಿಸಬೇಕಾಗುತ್ತೆ’ ಅಂತ ನೆನಸಬೇಡಿ. ಯಾಕಂದ್ರೆ ಅವನು ಕೆಲಸ ಮಾಡಿದ ಆ ಆರು ವರ್ಷಗಳಲ್ಲಿ ನಿಮಗೆ ಕೂಲಿಯವನು ಕೆಲಸ ಮಾಡಿದಾಗ ಸಿಗೋ ಲಾಭಕ್ಕಿಂತ ಎರಡು ಪಟ್ಟು ಜಾಸ್ತಿ ಲಾಭ ಸಿಕ್ಕಿದೆ. ಅಷ್ಟೇ ಅಲ್ಲ ಆ ಸಮಯದಲ್ಲಿ ನಿಮ್ಮ ಎಲ್ಲ ಕೆಲಸವನ್ನ ಯೆಹೋವ ಆಶೀರ್ವಾದ ಮಾಡಿದ್ದಾನೆ.

19 ನಿಮ್ಮ ಹಸು, ಆಡು-ಕುರಿಗಳ ಮೊದಲ ಗಂಡುಮರಿಗಳನ್ನ ನಿಮ್ಮ ದೇವರಾದ ಯೆಹೋವನಿಗೆ ಅಂತಾನೇ ಮೀಸಲಿಡಬೇಕು.*+ ಹಸುಗಳ ಮೊದಲ ಕರುಗಳಿಂದ ಯಾವ ಕೆಲಸವನ್ನೂ ಮಾಡಿಸಬಾರದು, ಆಡು-ಕುರಿಗಳ ಮೊದಲ ಮರಿಗಳ ಉಣ್ಣೆ ಕತ್ತರಿಸಬಾರದು. 20 ಪ್ರತಿ ವರ್ಷ ನೀವು ಅವುಗಳ ಮಾಂಸವನ್ನ ನಿಮ್ಮ ಕುಟುಂಬದವರ ಜೊತೆ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ ನಿಮ್ಮ ದೇವರಾದ ಯೆಹೋವನ ಮುಂದೆ ತಿನ್ನಬೇಕು.+ 21 ಆದ್ರೆ ಕುಂಟಾಗಿರೋ, ಕುರುಡಾಗಿರೋ ಅಥವಾ ಬೇರೆ ಯಾವುದೇ ಗಂಭೀರ ದೋಷ ಇರೋ ಮೊದಲ ಮರಿಗಳನ್ನ ನಿಮ್ಮ ದೇವರಾದ ಯೆಹೋವನಿಗೆ ಬಲಿಯಾಗಿ ಅರ್ಪಿಸಬಾರದು.+ 22 ಅಂಥ ಮೊದಲ ಮರಿಗಳನ್ನ ನಿಮ್ಮ ಪಟ್ಟಣಗಳಲ್ಲಿ ಕಡಿದು ತಿನ್ನಬೇಕು. ಜಿಂಕೆಯ ಮಾಂಸದ ತರ ಅವುಗಳ ಮಾಂಸವನ್ನ ಶುದ್ಧರಾಗಿರೋ ಅಶುದ್ಧರಾಗಿರೋ ವ್ಯಕ್ತಿಗಳೆಲ್ಲ ತಿನ್ನಬಹುದು.+ 23 ಆದ್ರೆ ಅವುಗಳ ರಕ್ತ ತಿನ್ನಬಾರದು.+ ಅದನ್ನ ನೀರಿನ ಹಾಗೆ ನೆಲಕ್ಕೆ ಸುರಿಬೇಕು.+

16 ಅಬೀಬ್‌* ತಿಂಗಳು ನಿಮಗೆ ತುಂಬ ಪ್ರಾಮುಖ್ಯ ಅನ್ನೋದನ್ನ ಮರಿಬೇಡಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ರಾತ್ರಿ ಹೊತ್ತಲ್ಲಿ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದು ಆ ತಿಂಗಳಲ್ಲೇ ಅಲ್ವಾ?+ ಹಾಗಾಗಿ ಆ ತಿಂಗಳಲ್ಲಿ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ಪಸ್ಕ ಹಬ್ಬ ಆಚರಿಸಬೇಕು.+ 2 ನಿಮ್ಮ ದೇವರಾದ ಯೆಹೋವನಿಗೆ ಪಸ್ಕದ ಬಲಿ ಕೊಡೋಕೆ+ ನಿಮ್ಮ ಆಡು-ಕುರಿ, ಹೋರಿ-ದನಗಳಲ್ಲಿ+ ಒಂದು ಪ್ರಾಣಿಯನ್ನ ಆರಿಸ್ಕೊಳ್ಳಬೇಕು. ಅದನ್ನ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳದಲ್ಲಿ ಅರ್ಪಿಸಬೇಕು.+ 3 ಆ ಮಾಂಸದ ಜೊತೆ ಹುಳಿ ಸೇರಿಸಿರೋ ಯಾವುದನ್ನೂ ತಿನ್ನಬಾರದು.+ ಅವತ್ತಿಂದ ಏಳು ದಿನ ತನಕ ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು. ಈಜಿಪ್ಟಿಂದ ಅವಸರ ಅವಸರವಾಗಿ+ ಹೊರಟ ದಿನ ಹುಳಿ ಇಲ್ಲದ ರೊಟ್ಟಿಗಳನ್ನ ತಿಂದ ಹಾಗೇ ಈಗ್ಲೂ ಹುಳಿ ಇಲ್ಲದ ರೊಟ್ಟಿಗಳನ್ನೇ ತಿನ್ನಬೇಕು. ಅವು ಈಜಿಪ್ಟಲ್ಲಿ ಪಟ್ಟ ಕಷ್ಟನ ನಿಮಗೆ ನೆನಪಿಸುತ್ತೆ. ಈಜಿಪ್ಟಿಂದ ಹೊರಗೆ ಬಂದ ದಿನವನ್ನ ಜೀವನಪೂರ್ತಿ ನೆನಪಲ್ಲಿಡೋಕೆ ಹೀಗೆ ಮಾಡಬೇಕು.+ 4 ಆ ಏಳು ದಿನ ನಿಮ್ಮ ಪ್ರದೇಶದಲ್ಲೆಲ್ಲೂ ಹುಳಿ ಸೇರಿಸಿದ ಹಿಟ್ಟು ಇರಬಾರದು.+ ಮೊದಲ್ನೇ ದಿನ ಸಂಜೆ ಅರ್ಪಿಸಿದ ಬಲಿಯ ಮಾಂಸದಲ್ಲಿ ಸ್ವಲ್ಪನೂ ಮಾರನೇ ದಿನ ಬೆಳಿಗ್ಗೆ ತನಕ ಇಡಬಾರದು.+ 5 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಪಸ್ಕದ ಪ್ರಾಣಿಯನ್ನ ನಿಮಗೆ ಇಷ್ಟಬಂದ ಪಟ್ಟಣದಲ್ಲಿ ಬಲಿ ಅರ್ಪಿಸಬಾರದು. 6 ಅದನ್ನ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳದಲ್ಲೇ ಅರ್ಪಿಸಬೇಕು. ನೀವು ಈಜಿಪ್ಟನ್ನ ಬಿಟ್ಟು ಬಂದ ದಿನ ಮಾಡಿದ ಹಾಗೇ, ಸಂಜೆ ಸೂರ್ಯ ಮುಳುಗಿದ ತಕ್ಷಣ+ ಪಸ್ಕದ ಪ್ರಾಣಿಯನ್ನ ಅರ್ಪಿಸಬೇಕು. 7 ಅದನ್ನ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ+ ಬೆಂಕಿಯಿಂದ ಸುಟ್ಟು ತಿನ್ನಬೇಕು.+ ಬೆಳಿಗ್ಗೆ ನಿಮ್ಮನಿಮ್ಮ ಡೇರೆಗಳಿಗೆ ವಾಪಸ್‌ ಹೋಗಬಹುದು. 8 ಆರು ದಿನ ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು. ಏಳನೇ ದಿನ ನಿಮ್ಮ ದೇವರಾದ ಯೆಹೋವನ ಆರಾಧನೆಗಾಗಿ ನೀವು ಕೂಡಿ ಬರಬೇಕಾದ ವಿಶೇಷ ದಿನ. ಆ ದಿನ ಯಾವ ಕೆಲಸನೂ ಮಾಡಬಾರದು.+

9 ಕೊಯ್ಲಿಗೆ ಸಿದ್ಧವಾಗಿರೋ ಬೆಳೆನ ಕುಡುಗೋಲಿಂದ* ಕೊಯ್ಯೋಕೆ ಶುರು ಮಾಡೋ ದಿನದಿಂದ ಏಳು ವಾರಗಳನ್ನ ಲೆಕ್ಕ ಮಾಡಬೇಕು.+ 10 ಆ ಏಳು ವಾರಗಳಾದ ಮೇಲೆ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ವಾರಗಳ ಹಬ್ಬ ಆಚರಿಸಬೇಕು.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಎಷ್ಟರ ಮಟ್ಟಿಗೆ ಆಶೀರ್ವಾದ ಮಾಡಿದ್ದಾನೋ ಅದಕ್ಕೆ ತಕ್ಕ ಹಾಗೆ ಸ್ವಇಷ್ಟದ ಕಾಣಿಕೆ ತರಬೇಕು.+ 11 ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳದಲ್ಲಿ ನೀವು, ನಿಮ್ಮ ಗಂಡುಹೆಣ್ಣು ಮಕ್ಕಳು, ದಾಸದಾಸಿಯರು, ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ಲೇವಿಯರು, ನಿಮ್ಮ ಮಧ್ಯ ವಾಸಿಸೋ ವಿದೇಶಿಯರು, ಅನಾಥ ಮಕ್ಕಳು,* ವಿಧವೆಯರು ಎಲ್ರೂ ನಿಮ್ಮ ದೇವರಾದ ಯೆಹೋವನ ಮುಂದೆ ಸಂತೋಷ ಸಂಭ್ರಮದಿಂದ ಇರಬೇಕು.+ 12 ನೀವು ಈಜಿಪ್ಟಲ್ಲಿ ಗುಲಾಮರಾಗಿ ಇದ್ರಿ ಅನ್ನೋದನ್ನ ನೆನಪು ಮಾಡ್ಕೊಳ್ಳಿ.+ ಈ ಎಲ್ಲ ನಿಯಮಗಳನ್ನ ಪಾಲಿಸಿ, ಅದೇ ಪ್ರಕಾರ ನಡೀರಿ.

13 ನಿಮ್ಮ ಕಣದಿಂದ ಬೆಳೆಯನ್ನ, ದ್ರಾಕ್ಷಿತೊಟ್ಟಿಯಿಂದ ದ್ರಾಕ್ಷಾಮದ್ಯವನ್ನ, ಎಣ್ಣೆ ಗಾಣದಿಂದ ಎಣ್ಣೆನ ಕೂಡಿಸಿದಾಗ ಏಳು ದಿನ ಚಪ್ಪರಗಳ* ಹಬ್ಬ* ಆಚರಿಸಬೇಕು.+ 14 ಆ ಸಮಯದಲ್ಲಿ ನೀವು, ನಿಮ್ಮ ಗಂಡುಹೆಣ್ಣು ಮಕ್ಕಳು, ದಾಸದಾಸಿಯರು, ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ಲೇವಿಯರು, ವಿದೇಶಿಯರು, ಅನಾಥ ಮಕ್ಕಳು, ವಿಧವೆಯರು ಎಲ್ರೂ ಸಂತೋಷ ಸಂಭ್ರಮದಿಂದ ಇರಬೇಕು.+ 15 ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ ಆ ಹಬ್ಬವನ್ನ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ಏಳು ದಿನ ಆಚರಿಸಬೇಕು.+ ನಿಮ್ಮ ದೇವರಾದ ಯೆಹೋವ ನಿಮ್ಮ ಬೆಳೆಗಳನ್ನ, ನೀವು ಮಾಡೋ ಎಲ್ಲ ಕೆಲಸಗಳನ್ನ ಆಶೀರ್ವದಿಸೋದ್ರಿಂದ+ ತುಂಬ ಸಂತೋಷವಾಗಿ ಇರ್ತಿರ.+

16 ವರ್ಷದಲ್ಲಿ ಮೂರು ಸಲ ಅಂದ್ರೆ ಹುಳಿ ಇಲ್ಲದ ರೊಟ್ಟಿ ಹಬ್ಬ,+ ವಾರಗಳ ಹಬ್ಬ,+ ಚಪ್ಪರಗಳ ಹಬ್ಬದ+ ಸಮಯದಲ್ಲಿ ನಿಮ್ಮಲ್ಲಿರೋ ಗಂಡಸ್ರೆಲ್ಲ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ ಆತನ ಮುಂದೆ ಬರಬೇಕು. ಒಬ್ಬ ಕೂಡ ಕೈಯಲ್ಲಿ ಕಾಣಿಕೆ ಇಲ್ಲದೆ ಯೆಹೋವನ ಮುಂದೆ ಬರಬಾರದು. 17 ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಎಷ್ಟು ಆಶೀರ್ವಾದ ಮಾಡಿದ್ದಾನೋ ಅದಕ್ಕೆ ತಕ್ಕ ಹಾಗೆ ನಿಮ್ಮಲ್ಲಿ ಪ್ರತಿಯೊಬ್ಬ ಉಡುಗೊರೆ ತರಬೇಕು.+

18 ನೀವು ಪ್ರತಿಯೊಂದು ಕುಲಕ್ಕೋಸ್ಕರ ನ್ಯಾಯಾಧೀಶರನ್ನ+ ಅಧಿಕಾರಿಗಳನ್ನ ನೇಮಿಸಬೇಕು. ನಿಮ್ಮ ದೇವರಾಗಿರೋ ಯೆಹೋವ ಕೊಡೋ ಎಲ್ಲ ಪಟ್ಟಣಗಳಲ್ಲೂ ಹೀಗೆ ಮಾಡಬೇಕು. ಅವರು ಜನ್ರಿಗೆ ನ್ಯಾಯವಾಗಿ ತೀರ್ಪು ಮಾಡಬೇಕು. 19 ನ್ಯಾಯವನ್ನ ತಿರುಚಬಾರದು,+ ಭೇದಭಾವ ಮಾಡಬಾರದು.+ ಲಂಚ ತಗೊಳ್ಳಬಾರದು. ಯಾಕಂದ್ರೆ ಲಂಚ ವಿವೇಕಿಯ ಕಣ್ಣುಗಳನ್ನ ಕುರುಡು ಮಾಡುತ್ತೆ.+ ನೀತಿವಂತ ಮಾತು ಬದಲಾಯಿಸೋ ತರ ಮಾಡುತ್ತೆ. 20 ನೀವು ಯಾವಾಗ್ಲೂ ನ್ಯಾಯವಾಗಿರೋದನ್ನೇ ಮಾಡಬೇಕು.+ ಹಾಗೆ ಮಾಡಿದ್ರೆ ನೀವು ಬಾಳ್ತೀರ, ನಿಮ್ಮ ದೇವರಾದ ಯೆಹೋವ ಕೊಡೋ ದೇಶವನ್ನ ವಶ ಮಾಡ್ಕೊಳ್ತೀರ.

21 ನಿಮ್ಮ ದೇವರಾದ ಯೆಹೋವನಿಗಾಗಿ ಕಟ್ಟೋ ಯಜ್ಞವೇದಿ ಪಕ್ಕದಲ್ಲಿ ಯಾವುದೇ ವಿಧದ ಮರ ಬೆಳೆಸಿ ಅದನ್ನ ಪೂಜಾಕಂಬವಾಗಿ*+ ಮಾಡಬಾರದು.

22 ವಿಗ್ರಹಸ್ತಂಭವನ್ನ ಕೂಡ ನಿಲ್ಲಿಸಬಾರದು.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಅದನ್ನ ದ್ವೇಷಿಸ್ತಾನೆ.

17 ದೋಷ, ಕುಂದುಕೊರತೆ ಇರೋ ಹೋರಿ ಅಥವಾ ಕುರಿಯನ್ನ ನಿಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸಬಾರದು. ಯಾಕಂದ್ರೆ ಅದು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.+

2 ನಿಮ್ಮ ದೇವರಾದ ಯೆಹೋವ ಕೊಡೋ ದೇಶದ ಯಾವುದಾದ್ರೂ ಒಂದು ಪಟ್ಟಣದಲ್ಲಿ ಒಬ್ಬ ಪುರುಷ ಅಥವಾ ಸ್ತ್ರೀ ನಿಮ್ಮ ದೇವರಾದ ಯೆಹೋವನಿಗೆ ಇಷ್ಟ ಆಗದನ್ನ ಮಾಡಿದ್ರೆ, ಆತನ ಒಪ್ಪಂದವನ್ನ ಮುರಿದ್ರೆ,+ 3 ತಪ್ಪು ದಾರಿ ಹಿಡಿದು ನಾನು ಹೇಳದೆ ಇರೋದನ್ನ ಮಾಡಿದ್ರೆ+ ಅಂದ್ರೆ ಬೇರೆ ದೇವರುಗಳಿಗೆ ಅಡ್ಡಬಿದ್ದು ಅವುಗಳನ್ನ ಆರಾಧಿಸಿದ್ರೆ ಅಥವಾ ಸೂರ್ಯ, ಚಂದ್ರ, ಆಕಾಶದ ಇಡೀ ಸೈನ್ಯಕ್ಕೆ ಅಡ್ಡಬಿದ್ರೆ+ ಹೀಗೆ ಮಾಡಬೇಕು: 4 ಯಾರಾದ್ರೂ ಬಂದು ಆ ವಿಷ್ಯ ನಿಮಗೆ ಹೇಳಿದಾಗ ಅಥವಾ ಆ ಸುದ್ದಿ ಕೇಳಿಸ್ಕೊಂಡಾಗ ಅದ್ರ ಬಗ್ಗೆ ಪೂರ್ತಿ ತನಿಖೆ ನಡಿಸಬೇಕು. ಇಸ್ರಾಯೇಲ್ಯರ ಮಧ್ಯ ಆ ಅಸಹ್ಯ ವಿಷ್ಯ ನಡೆದಿದ್ದು ನಿಜ ಅಂತ ಸಾಬೀತಾದ್ರೆ+ 5 ಆ ಕೆಟ್ಟ ಕೆಲಸ ಮಾಡಿದವ್ರನ್ನ ಪಟ್ಟಣದ ಬಾಗಿಲಗಳ ಹತ್ರ ಕರ್ಕೊಂಡು ಬಂದು ಕಲ್ಲೆಸೆದು ಸಾಯಿಸಬೇಕು.+ 6 ಆದ್ರೆ ಒಬ್ಬನೇ ಒಬ್ಬ ಸಾಕ್ಷಿಯ ಹೇಳಿಕೆಯ ಆಧಾರದ ಮೇಲೆ ಅವನಿಗೆ ಮರಣಶಿಕ್ಷೆ ಕೊಡಬಾರದು. ಇಬ್ರು ಅಥವಾ ಮೂವರು ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಮರಣಶಿಕ್ಷೆ ಕೊಡಬೇಕು.+ 7 ಸಾಕ್ಷಿ ಹೇಳಿದವ್ರೇ ಅವನನ್ನ ಸಾಯಿಸೋಕೆ ಮೊದ್ಲು ಕಲ್ಲೆಸಿಬೇಕು. ಆಮೇಲೆ ಬೇರೆಲ್ಲ ಜನ್ರು ಕಲ್ಲೆಸಿಬೇಕು. ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನವನ್ನ ತೆಗೆದುಹಾಕಬೇಕು.+

8 ನಿಮ್ಮ ದೇಶದ ಯಾವುದಾದ್ರೂ ಒಂದು ಪಟ್ಟಣದಲ್ಲಿ ಕೊಲೆ,+ ಮೊಕದ್ದಮೆ, ಹಿಂಸಾಕೃತ್ಯ, ಜಗಳ ಅಥವಾ ಬೇರೆ ಯಾವುದೇ ಜಗಳ ಆದಾಗ ನ್ಯಾಯ ತೀರಿಸೋಕೆ ತುಂಬ ಕಷ್ಟವಾದ್ರೆ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಜಾಗಕ್ಕೆ ನೀವು ಹೋಗಬೇಕು.+ 9 ಆ ಜಗಳವನ್ನ ಲೇವಿಯರಾದ ಪುರೋಹಿತರ, ಆ ಸಮಯದಲ್ಲಿರೋ ನ್ಯಾಯಾಧೀಶನ ಮುಂದೆ ಇಡಬೇಕು.+ ಅವರು ನಿಮಗೆ ತೀರ್ಪು ಹೇಳ್ತಾರೆ.+ 10 ಯೆಹೋವ ಆರಿಸ್ಕೊಂಡಿರೋ ಜಾಗದಿಂದ ಅವರು ಕೊಡೋ ಆ ತೀರ್ಪಿನ ತರಾನೇ ಮಾಡಬೇಕು. ಅವರು ಏನೇ ನಿರ್ದೇಶನ ಕೊಟ್ರೂ ತಪ್ಪದೆ ಅದೇ ತರ ನಡಿಬೇಕು. 11 ಅವರು ನಿಮಗೆ ತೋರಿಸೋ ನಿಯಮದ ಹಾಗೇ, ಕೊಡೋ ತೀರ್ಪಿನ ಹಾಗೇ ಮಾಡಬೇಕು.+ ಅವರು ಕೊಡೋ ತೀರ್ಪನ್ನ ಬಿಟ್ಟು ನಿಮಗೆ ಸರಿ ಅನಿಸಿದ್ದನ್ನ ಮಾಡಬಾರದು.+ 12 ನಿಮ್ಮ ದೇವರಾದ ಯೆಹೋವನ ಸೇವೆ ಮಾಡೋ ಪುರೋಹಿತನ, ನ್ಯಾಯಾಧೀಶನ ಮಾತನ್ನ ಕೇಳದೆ ಯಾರು ದುರಹಂಕಾರ ತೋರಿಸ್ತಾರೋ ಅವ್ರನ್ನ ಸಾಯಿಸಬೇಕು.+ ಹೀಗೆ ಇಸ್ರಾಯೇಲ್ಯರಿಂದ ಆ ಕೆಟ್ಟತನವನ್ನ ತೆಗೆದುಹಾಕಬೇಕು.+ 13 ಆಗ ಜನ್ರೆಲ್ಲ ಇದನ್ನ ಕೇಳಿ ಹೆದರ್ತಾರೆ, ಮುಂದೆ ಯಾವತ್ತೂ ಅವರು ದುರಹಂಕಾರ ತೋರಿಸಲ್ಲ.+

14 ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಂಡು ಅದ್ರಲ್ಲಿ ವಾಸಿಸುವಾಗ ‘ನಮ್ಮ ಸುತ್ತ ಇರೋ ಎಲ್ಲ ಜನಾಂಗಗಳ ಹಾಗೇ ನಮಗೂ ಒಬ್ಬ ರಾಜ ಬೇಕು’ ಅಂತ ಅನಿಸಿದ್ರೆ+ 15 ನಿಮ್ಮ ದೇವರಾದ ಯೆಹೋವ ಆರಿಸೋ ವ್ಯಕ್ತಿಯನ್ನೇ ರಾಜನಾಗಿ ಮಾಡಬೇಕು.+ ನಿಮ್ಮ ಸಹೋದರರಾದ ಇಸ್ರಾಯೇಲ್ಯರಲ್ಲಿ ಒಬ್ಬನನ್ನ ರಾಜನಾಗಿ ಮಾಡಬೇಕೇ ಹೊರತು ನಿಮ್ಮ ಸಹೋದರನಲ್ಲದ ವಿದೇಶಿಯನ್ನ ರಾಜನಾಗಿ ಮಾಡಬಾರದು. 16 ಆ ರಾಜ ತುಂಬ ಕುದುರೆಗಳನ್ನ ಇಟ್ಕೊಬಾರದು.+ ಕುದುರೆಗಳನ್ನ ಕೊಂಡ್ಕೊಳ್ಳೋಕೆ ಜನ್ರನ್ನ ಈಜಿಪ್ಟಿಗೆ ಕಳಿಸಬಾರದು.+ ಯಾಕಂದ್ರೆ ‘ನೀವು ಯಾವತ್ತೂ ಈಜಿಪ್ಟಿಗೆ ವಾಪಸ್‌ ಹೋಗಬಾರದು’ ಅಂತ ಯೆಹೋವ ಹೇಳಿದ್ದಾನೆ. 17 ರಾಜ ತುಂಬ ಸ್ತ್ರೀಯರನ್ನ ಮದುವೆ ಮಾಡ್ಕೊಬಾರದು. ಮಾಡ್ಕೊಂಡ್ರೆ ಅವನ ಹೃದಯ ಅವನನ್ನ ತಪ್ಪು ದಾರಿಗೆ ನಡಿಸುತ್ತೆ.+ ಅವನು ತನಗಾಗಿ ಸಿಕ್ಕಾಪಟ್ಟೆ ಚಿನ್ನ, ಬೆಳ್ಳಿ ಕೂಡಿಸ್ಕೊಬಾರದು.+ 18 ಅವನು ರಾಜನಾಗಿ ಆಳ್ವಿಕೆ ಶುರು ಮಾಡಿದಾಗ ಲೇವಿಯರಾದ ಪುರೋಹಿತರ ಹತ್ರ ಇರೋ ನಿಯಮ ಪುಸ್ತಕ ತಗೊಂಡು ಅದ್ರಲ್ಲಿರೋ ಎಲ್ಲ ವಿಷ್ಯಗಳನ್ನ ಒಂದು ಪುಸ್ತಕದಲ್ಲಿ* ಬರಿಬೇಕು. ಹೀಗೆ ತನಗೋಸ್ಕರ ನಿಯಮ ಪುಸ್ತಕದ ಒಂದು ಪ್ರತಿಯನ್ನ ಮಾಡಿಟ್ಕೊಬೇಕು.+

19 ಅವನು ಆ ಪುಸ್ತಕವನ್ನ ತನ್ನ ಹತ್ರ ಇಟ್ಕೊಂಡು ತನ್ನ ಜೀವನಪೂರ್ತಿ ದಿನಾಲೂ ಅದನ್ನ ಓದಬೇಕು.+ ಅದ್ರಿಂದ ಅವನು ತನ್ನ ದೇವರಾದ ಯೆಹೋವನಿಗೆ ಭಯಪಡೋಕೆ ಕಲಿತಾನೆ, ಆ ನಿಯಮ ಪುಸ್ತಕದಲ್ಲಿರೋ ಎಲ್ಲ ಮಾತು, ನಿಯಮಗಳನ್ನ ಪಾಲಿಸ್ತಾನೆ.+ 20 ಆಗ ಅವನ ಹೃದಯ ಜಂಬದಿಂದ ಉಬ್ಬಿಕೊಳ್ಳಲ್ಲ. ತನ್ನ ಸಹೋದರರಿಗಿಂತ ತಾನು ಶ್ರೇಷ್ಠ ಅಂತ ಭಾವಿಸಲ್ಲ. ದೇವರು ಕೊಟ್ಟ ಆಜ್ಞೆಗಳನ್ನ ಮೀರದೆ ಪೂರ್ತಿ ಪಾಲಿಸ್ತಾನೆ. ಹೀಗೆ ಮಾಡಿದ್ರೆ ಅವನೂ ಅವನ ವಂಶದವರೂ ಇಸ್ರಾಯೇಲಿನಲ್ಲಿ ತುಂಬ ವರ್ಷ ರಾಜರಾಗಿ ಇರ್ತಾರೆ.

18 ಪುರೋಹಿತರಾಗಿ ಸೇವೆ ಮಾಡೋ ಲೇವಿಯರಿಗೆ, ಲೇವಿ ಕುಲಕ್ಕೆ ಇಸ್ರಾಯೇಲ್ಯರಿಗೆ ಸಿಗೋ ತರ ಯಾವ ಪಾಲೂ ಆಸ್ತಿನೂ ಸಿಗಲ್ಲ. ಬೆಂಕಿ ಮೂಲಕ ಯೆಹೋವನಿಗೆ ಮಾಡೋ ಅರ್ಪಣೆಗಳೇ ಅಂದ್ರೆ ಆತನಿಗೆ ಸಿಗೋ ಪಾಲೇ ಅವ್ರಿಗೆ ಆಹಾರ.+ 2 ಹಾಗಾಗಿ ಅವ್ರ ಅಣ್ಣತಮ್ಮಂದ್ರಿಗೆ ಸಿಗೋ ತರ ಲೇವಿಯರಿಗೆ ಯಾವ ಆಸ್ತಿನೂ ಸಿಗಲ್ಲ. ಯೆಹೋವನೇ ಅವ್ರ ಆಸ್ತಿ. ಆತನೇ ಅವ್ರಿಗೆ ಆ ಮಾತು ಕೊಟ್ಟಿದ್ದಾನೆ.

3 ಯಾರಾದ್ರೂ ಹೋರಿ, ಕುರಿ ಬಲಿ ಕೊಟ್ರೆ ಅದ್ರ ಮುಂದಿನ ಕಾಲು, ದವಡೆ, ಹೊಟ್ಟೆನ ಪುರೋಹಿತರಿಗೆ ಕೊಡಬೇಕು. ಜನ್ರಿಂದ ಇವನ್ನ ಪಡಿಯೋ ಹಕ್ಕು ಅವ್ರಿಗಿದೆ. 4 ಅಷ್ಟೇ ಅಲ್ಲ ನೀವು ಧಾನ್ಯದ ಮೊದಲ ಬೆಳೆ, ಹೊಸ ದ್ರಾಕ್ಷಾಮದ್ಯ, ಮೊದ್ಲು ತೆಗೆದ ಎಣ್ಣೆ ಮತ್ತು ಮೊದಲ್ನೇ ಸಾರಿ ಕತ್ತರಿಸಿದ ಆಡು-ಕುರಿಗಳ ಉಣ್ಣೆಯನ್ನ ಪುರೋಹಿತರಿಗೆ ಕೊಡಬೇಕು. ಇವನ್ನೂ ಪಡಿಯೋ ಹಕ್ಕು ಅವ್ರಿಗಿದೆ.+ 5 ನಿಮ್ಮ ದೇವರಾದ ಯೆಹೋವ ನಿಮ್ಮ ಎಲ್ಲ ಕುಲಗಳಿಂದ ಅವ್ರನ್ನ, ಅವ್ರ ಮಕ್ಕಳನ್ನ ಯೆಹೋವನ ಹೆಸ್ರಲ್ಲಿ ಯಾವಾಗ್ಲೂ ಸೇವೆ ಮಾಡೋಕೆ ಆರಿಸ್ಕೊಂಡಿದ್ದಾನೆ.+

6 ಇಸ್ರಾಯೇಲ್ಯರ ಯಾವುದಾದ್ರೂ ಒಂದು ಪಟ್ಟಣದಲ್ಲಿ ಇರೋ+ ಒಬ್ಬ ಲೇವಿ ಯೆಹೋವ ಆರಿಸ್ಕೊಳ್ಳೋ ಜಾಗಕ್ಕೆ*+ ಹೋಗೋಕೆ ಇಷ್ಟಪಟ್ರೆ 7 ಅವನು ಅಲ್ಲಿಗೆ ಹೋಗಬಹುದು. ಯೆಹೋವನ ಸೇವೆ ಮಾಡ್ತಿರೋ ತನ್ನ ಎಲ್ಲ ಲೇವಿ ಅಣ್ಣತಮ್ಮಂದಿರ ತರ ಅವನು ಕೂಡ ಅಲ್ಲಿ ತನ್ನ ದೇವರಾದ ಯೆಹೋವನ ಹೆಸ್ರಲ್ಲಿ ಸೇವೆ ಮಾಡಬಹುದು.+ 8 ಆ ಜಾಗದಲ್ಲಿ ಅವನ ಅಣ್ಣತಮ್ಮಂದಿರಿಗೆ ಸಿಗೋಷ್ಟೇ ಆಹಾರ ಅವನಿಗೂ ಸಿಗುತ್ತೆ.+ ತಂದೆ-ತಾತಂದಿರಿಂದ ಸಿಕ್ಕಿದ ವಸ್ತುಗಳನ್ನ ಅವನು ಮಾರಿದ್ರಿಂದ ಬಂದ ಹಣ ಕೂಡ ಅವನಿಗೆ ಸಿಗುತ್ತೆ.

9 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶಕ್ಕೆ ಹೋದ್ಮೇಲೆ ಆ ದೇಶದಲ್ಲಿರೋ ಜನ್ರು ಮಾಡೋ ಅಸಹ್ಯ ಕೆಲಸಗಳನ್ನ ನೀವು ಮಾಡಬಾರದು.+ 10 ನಿಮ್ಮಲ್ಲಿ ಯಾರೂ ನಿಮ್ಮ ಮಗನನ್ನಾಗಲಿ ಮಗಳನ್ನಾಗಲಿ ಬೆಂಕಿಯಲ್ಲಿ ಆಹುತಿ ಕೊಡಬಾರದು.+ ಕಣಿಹೇಳೋರು,+ ಮಾಟಮಂತ್ರ ಮಾಡೋರು,+ ಶಾಸ್ತ್ರ ಹೇಳೋರು,+ ಮಂತ್ರವಾದಿಗಳು,+ 11 ವಶೀಕರಣ ಮಾಡೋರು, ಭವಿಷ್ಯ ಹೇಳೋರು,+ ಸತ್ತವ್ರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ಳೋರು+ ಅಥವಾ ಸತ್ತವ್ರನ್ನ ವಿಚಾರಿಸೋರು,+ ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. 12 ಇಂಥವರು ಯೆಹೋವನಿಗೆ ಅಸಹ್ಯ. ಬೇರೆ ಜನ್ರು ಇಂಥ ಅಸಹ್ಯ ಕೆಲಸಗಳನ್ನ ಮಾಡಿದ್ರಿಂದಾನೇ ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮಿಂದ ಓಡಿಸಿಬಿಡ್ತಾ ಇದ್ದಾನೆ. 13 ನೀವು ಯೆಹೋವ ದೇವರ ಮುಂದೆ ಕಳಂಕ ಇಲ್ಲದವರು ಅಂತ ತೋರಿಸಿ ಕೊಡಬೇಕು.+

14 ನೀವು ಮುಂದೆ ಯಾರನ್ನ ಸೋಲಿಸ್ತೀರೋ ಆ ಜನ್ರು ಕಣಿ ಹೇಳೋರ ಹತ್ರ,+ ಮಾಟಮಂತ್ರ+ ಮಾಡೋರ ಹತ್ರ ಹೋಗಿ ಅವರು ಹೇಳೋ ಹಾಗೆ ಮಾಡ್ತಿದ್ದಾರೆ. ಆದ್ರೆ ನೀವು ಅಂಥ ಯಾವ ಕೆಲಸಾನೂ ಮಾಡೋಕೆ ನಿಮ್ಮ ದೇವರಾದ ಯೆಹೋವ ನಿಮಗೆ ಅನುಮತಿ ಕೊಟ್ಟಿಲ್ಲ. 15 ನಿಮ್ಮ ದೇವರಾದ ಯೆಹೋವ ನಿಮ್ಮ ಸಹೋದರರಿಂದಾನೇ ನನ್ನಂಥ ಒಬ್ಬ ಪ್ರವಾದಿನ ನಿಮಗಾಗಿ ನೇಮಿಸ್ತಾನೆ. ನೀವು ಅವನು ಹೇಳೋ ಹಾಗೆ ನಡೀಬೇಕು.+ 16 ಯಾಕಂದ್ರೆ ನೀವು ಹೋರೇಬಲ್ಲಿ ಸೇರಿ ಬಂದಾಗ+ ‘ನಮ್ಮ ದೇವರಾದ ಯೆಹೋವನ ಸ್ವರನ ನಾವು ಇನ್ನೂ ಕೇಳಿಸ್ಕೊಂಡ್ರೆ, ಈ ದೊಡ್ಡ ಬೆಂಕಿನ ಇನ್ನೂ ನೋಡಿದ್ರೆ ಸತ್ತು ಹೋಗ್ತೀವಿ’ + ಅಂತ ನಿಮ್ಮ ದೇವರಾದ ಯೆಹೋವನಿಗೆ ಹೇಳಿದ್ರಲ್ವಾ? 17 ಆಗ ಯೆಹೋವ ನನಗೆ ಹೀಗೆ ಹೇಳಿದನು: ‘ಅವರು ಹೇಳಿದ್ದು ಸರಿ. 18 ನಾನು ಅವ್ರ ಸಹೋದರರಿಂದಾನೇ ನಿನ್ನಂಥ ಒಬ್ಬ ಪ್ರವಾದಿನ ಅವ್ರಿಗಾಗಿ ನೇಮಿಸ್ತೀನಿ.+ ನನ್ನ ಮಾತುಗಳನ್ನ ಅವನಿಗೆ ಹೇಳ್ತೀನಿ,+ ನಾನು ಹೇಳೋ ಎಲ್ಲ ಆಜ್ಞೆಗಳನ್ನ ಅವನು ಅವ್ರಿಗೆ ಹೇಳ್ತಾನೆ.+ 19 ನನ್ನ ಹೆಸ್ರಲ್ಲಿ ಆ ಪ್ರವಾದಿ ಹೇಳೋ ನನ್ನ ಮಾತುಗಳನ್ನ ಯಾರು ಕೇಳಲ್ವೋ ಅವ್ನಿಂದ ಲೆಕ್ಕ ಕೇಳ್ತೀನಿ.+

20 ಒಬ್ಬ ಪ್ರವಾದಿ ನಾನು ಹೇಳದೇ ಇರೋದನ್ನ ದುರಹಂಕಾರದಿಂದ ನನ್ನ ಹೆಸ್ರಲ್ಲಿ ಹೇಳಿದ್ರೆ, ಬೇರೆ ದೇವರುಗಳ ಹೆಸ್ರಲ್ಲಿ ಭವಿಷ್ಯವಾಣಿ ಹೇಳಿದ್ರೆ ಅವನನ್ನ ಸಾಯಿಸಬೇಕು.+ 21 ಆದ್ರೆ “ಅವನು ಯೆಹೋವನ ಮಾತುಗಳನ್ನ ಹೇಳ್ತಿದ್ದಾನಾ ಇಲ್ವಾ ಅಂತ ಹೇಗೆ ತಿಳ್ಕೊಳ್ಳೋದು?” ಅನ್ನೋ ಯೋಚ್ನೆ ನಿಮಗೆ ಬಂದ್ರೆ ಇದನ್ನ ಮನಸ್ಸಲ್ಲಿಡಿ, 22 ಒಬ್ಬ ಪ್ರವಾದಿ ಯೆಹೋವನ ಹೆಸ್ರಲ್ಲಿ ಭವಿಷ್ಯ ಹೇಳಿ ಅವನು ಹೇಳಿದ ಹಾಗೆ ನಡಿಯದಿದ್ರೆ ಅದು ಯೆಹೋವನ ಮಾತಲ್ಲ, ಅವನು ಅದನ್ನ ದುರಹಂಕಾರದಿಂದ ಮಾತಾಡಿದ್ದಾನೆ. ಹಾಗಾಗಿ ನೀವು ಅವನಿಗೆ ಹೆದರಬಾರದು.’

19 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡಬೇಕಂತಿರೋ ದೇಶದಲ್ಲಿ ವಾಸಿಸ್ತಿರೋ ಜನ್ರನ್ನ ನಾಶ ಮಾಡಿ ಅವ್ರ ದೇಶನ ಯೆಹೋವ ನಿಮಗೆ ಕೊಡ್ತಾನೆ. ಅದನ್ನ ನಿಮ್ಮದಾಗಿ ಮಾಡ್ಕೊಂಡು ಅವ್ರ ಪಟ್ಟಣಗಳಲ್ಲಿ, ಮನೆಗಳಲ್ಲಿ ವಾಸಿಸ್ತೀರ.+ 2 ನಿಮ್ಮ ದೇವರಾದ ಯೆಹೋವ ಕೊಡೋ ಆ ದೇಶದಲ್ಲಿ ನೀವು ಆಶ್ರಯನಗರ ಮಾಡೋಕೆ ಮೂರು ಪಟ್ಟಣಗಳನ್ನ ಆರಿಸ್ಕೊಳ್ಳಬೇಕು.+ 3 ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ಆ ದೇಶನ ಮೂರು ಭಾಗ ಮಾಡಿ ಒಂದೊಂದು ಭಾಗದಲ್ಲಿ ಒಂದೊಂದು ಆಶ್ರಯನಗರ ಇರಬೇಕು. ಅಲ್ಲಿಗೆ ಹೋಗೋಕೆ ರಸ್ತೆನೂ ಮಾಡ್ಬೇಕು. ಆಗ ಯಾರನ್ನಾದ್ರು ಸಾಯಿಸಿದವನು ಅಲ್ಲಿ ಓಡಿಹೋಗೋಕೆ ಸುಲಭ ಆಗುತ್ತೆ.

4 ಆಶ್ರಯನಗರದ ವಿಷ್ಯದಲ್ಲಿ ಈ ನಿಯಮ ಪಾಲಿಸಬೇಕು: ಯಾರಾದ್ರು ಅಪ್ಪಿತಪ್ಪಿ ಇನ್ನೊಬ್ಬನನ್ನ ಕೊಂದ್ರೆ ಸತ್ತವನ ಮೇಲೆ ಈ ಹಿಂದೆ ಅವನಿಗೆ ಯಾವುದೇ ದ್ವೇಷ ಇರದಿದ್ರೆ ಅವನು ಆಶ್ರಯನಗರಕ್ಕೆ ಓಡಿಹೋಗಿ ಜೀವ ಉಳಿಸ್ಕೊಬಹುದು.+ 5 ಉದಾಹರಣೆಗೆ, ಇಬ್ರು ಕಟ್ಟಿಗೆ ತರೋಕೆ ಕಾಡಿಗೆ ಹೋಗಿ, ಒಬ್ಬ ಕೊಡಲಿಯಿಂದ ಮರ ಕಡಿತಾ ಇರುವಾಗ ಆ ಕೊಡಲಿ ಜಾರಿ ಇನ್ನೊಬ್ಬನ ಮೇಲೆ ಬಿದ್ದು ಅವನು ಸತ್ರೆ, ಸಾಯಿಸಿದ ಆ ವ್ಯಕ್ತಿ ಯಾವುದಾದ್ರೂ ಆಶ್ರಯನಗರಕ್ಕೆ ಓಡಿಹೋಗಿ ಜೀವ ಉಳಿಸ್ಕೊಬಹುದು.+ 6 ಆ ಆಶ್ರಯನಗರ ತುಂಬ ದೂರ ಇದ್ರೆ ಸೇಡು ತೀರಿಸ್ಕೊಳ್ಳಬೇಕು ಅಂತಿರೋ ವ್ಯಕ್ತಿ+ ಕೋಪದಿಂದ ಅವನನ್ನ ಅಟ್ಟಿಸ್ಕೊಂಡು ದಾರಿಯಲ್ಲೇ ಕೊಲ್ಲೋ ಸಾಧ್ಯತೆ ಇದೆ. ಆದ್ರೆ ಹಾಗೆ ಆಗಬಾರದು. ಆ ವ್ಯಕ್ತಿಗೆ ಸತ್ತವನ ಮೇಲೆ ಈ ಹಿಂದೆ ಯಾವ ದ್ವೇಷನೂ ಇಲ್ದೆ ಇರೋದ್ರಿಂದ ಅವನನ್ನ ಸಾಯಿಸೋದು ಸರಿಯಲ್ಲ.+ 7 ಹಾಗಾಗಿ ಆಶ್ರಯನಗರ ಮಾಡೋಕೆ ಮೂರು ಪಟ್ಟಣಗಳನ್ನ ಆರಿಸಬೇಕು ಅಂತ ನಿಮಗೆ ಆಜ್ಞೆ ಕೊಟ್ಟಿದ್ದೀನಿ.

8 ನಿಮ್ಮ ದೇವರಾದ ಯೆಹೋವ ನಿಮ್ಮ ಪೂರ್ವಜರಿಗೆ ಮಾತುಕೊಟ್ಟ+ ಹಾಗೆ ನಿಮ್ಮ ಪ್ರದೇಶದ ಗಡಿನ ವಿಶಾಲ ಮಾಡಿ ಈ ಇಡೀ ದೇಶನ ನಿಮ್ಮ ವಶಕ್ಕೆ ಕೊಟ್ಟ ಮೇಲೆ+ 9 ಇನ್ನೂ ಮೂರು ಪಟ್ಟಣಗಳನ್ನ ನೀವು ಆಶ್ರಯನಗರಗಳಾಗಿ ಆರಿಸ್ಕೊಳ್ಳಬೇಕು.+ ನಾನು ಇವತ್ತು ಕೊಟ್ಟ ಆಜ್ಞೆ ಪ್ರಕಾರ ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಿದ್ರೆ, ಎಲ್ಲ ವಿಷ್ಯದಲ್ಲಿ ಆತನು ಹೇಳೋ ರೀತಿ ನಡ್ಕೊಂಡ್ರೆ+ ಮಾತ್ರ ನಿಮಗೆ ಈ ಇಡೀ ದೇಶ ಕೊಡ್ತಾನೆ. 10 ನೀವು ಈ ರೀತಿ ಆಶ್ರಯನಗರಗಳನ್ನ ಆರಿಸ್ಕೊಂಡ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶದಲ್ಲಿ ನಿರಪರಾಧಿಗಳ ಕೊಲೆ ಆಗಲ್ಲ.+ ನಿಮ್ಮ ಮೇಲೆನೂ ಕೊಲೆಯ ಅಪರಾಧ ಬರಲ್ಲ.+

11 ಒಬ್ಬನಿಗೆ ಇನ್ನೊಬ್ಬನ ಮೇಲೆ ದ್ವೇಷ ಇದ್ದು+ ಅವನ ಮೇಲೆ ದಾಳಿ ಮಾಡೋಕೆ ಕಾಯ್ತಾ ಅವಕಾಶ ಸಿಕ್ಕಾಗ ಅವನನ್ನ ಸಾಯೋ ಹಾಗೆ ಹೊಡೆದ್ರೆ, ಅದ್ರಿಂದ ಅವನು ಸತ್ರೆ, ಹೊಡೆದವನು ಆಶ್ರಯನಗರಕ್ಕೆ ಓಡಿಹೋದ್ರೆ 12 ಅವನ ಪಟ್ಟಣದ ಹಿರಿಯರು ಅವನನ್ನ ಆಶ್ರಯನಗರದಿಂದ ಕರೆಸಿ ಸೇಡು ತೀರಿಸ್ಕೊಳ್ಳೋನ ಕೈಗೆ ಒಪ್ಪಿಸಬೇಕು. ಅವನು ಸಾಯಬೇಕು.+ 13 ನೀವು ಅವನಿಗೆ ಕನಿಕರ ತೋರಿಸಬಾರದು. ನಿರಪರಾಧಿಯ ರಕ್ತ ಸುರಿಸಿದ ಅಪರಾಧವನ್ನ ಇಸ್ರಾಯೇಲ್ಯರ ಮಧ್ಯದಿಂದ ತೆಗೆದುಹಾಕಬೇಕು.+ ಆಗ ನಿಮಗೆ ಒಳ್ಳೇದಾಗುತ್ತೆ.

14 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ನಿಮಗೆ ಆಸ್ತಿ ಸಿಕ್ಕಾಗ ನಿಮ್ಮ ಪೂರ್ವಜರು ಹಾಕಿದ ಗಡಿ ಸರಿಸಿ* ನಿಮ್ಮ ಅಕ್ಕಪಕ್ಕದವರ ಆಸ್ತಿ ಒಳಗೆ ಹಾಕಬಾರದು.+

15 ಒಬ್ಬ ತಪ್ಪನ್ನ ಅಥವಾ ಪಾಪವನ್ನ ಮಾಡಿದ್ದಾನೆ ಅಂತ ತೀರ್ಮಾನಿಸೋಕೆ ಒಬ್ಬನೇ ಒಬ್ಬ ಸಾಕ್ಷಿ ಹೇಳಿದ್ರೆ ಸಾಕಾಗಲ್ಲ.+ ಇಬ್ರು ಅಥವಾ ಮೂರು ಜನ ಸಾಕ್ಷಿ ಹೇಳಿದ ಮೇಲೆನೇ ತೀರ್ಮಾನ ತಗೊಬೇಕು.+ 16 ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಕೆಟ್ಟದು ಮಾಡಬೇಕು ಅಂತ ಸುಳ್ಳು ಸಾಕ್ಷಿ ಹೇಳಿ ಅವನ ಮೇಲೆ ದೊಡ್ಡ ಆರೋಪ ಹೊರಿಸಿದ್ರೆ+ 17 ಆ ಇಬ್ರೂ ಯೆಹೋವನ ಮುಂದೆ ಅಂದ್ರೆ ಪುರೋಹಿತರ, ನ್ಯಾಯಾಧೀಶರ ಮುಂದೆ ಬರಬೇಕು.+ 18 ಆ ನ್ಯಾಯಾಧೀಶರು ಅದ್ರ ಬಗ್ಗೆ ಚೆನ್ನಾಗಿ ತನಿಖೆ ಮಾಡಬೇಕು.+ ಆಗ ಆ ವ್ಯಕ್ತಿ ಸುಳ್ಳು ಸಾಕ್ಷಿ ಹೇಳಿ ಅವನ ಮೇಲೆ ಸುಳ್ಳಾರೋಪ ಹಾಕಿದ್ದಾನೆ ಅಂತ ಗೊತ್ತಾದ್ರೆ 19 ಆ ವ್ಯಕ್ತಿ ಅವನಿಗೆ ಏನು ಮಾಡಬೇಕಂತ ಸಂಚು ಮಾಡಿದ್ದನೋ ಅದನ್ನೇ ನೀವು ಆ ವ್ಯಕ್ತಿಗೆ ಮಾಡಬೇಕು.+ ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನವನ್ನ ತೆಗಿಬೇಕು.+ 20 ಆಗ ಇದನ್ನ ಕೇಳಿಸ್ಕೊಂಡ ಜನ್ರು ಹೆದರಿ ಮುಂದೆ ಯಾವತ್ತೂ ಅಂಥ ಕೆಟ್ಟ ಕೆಲಸ ಮಾಡಲ್ಲ.+ 21 ನೀವು ಅಂಥವ್ರಿಗೆ ಕನಿಕರ ತೋರಿಸಬಾರದು.+ ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ತೆಗಿಬೇಕು.+

20 ನಿಮ್ಮ ಶತ್ರುಗಳ ವಿರುದ್ಧ ಯುದ್ಧ ಮಾಡೋಕೆ ಹೋದಾಗ ನಿಮ್ಮ ಹತ್ರ ಇರೋದಕ್ಕಿಂತ ಅವ್ರ ಹತ್ರ ಜಾಸ್ತಿ ಕುದುರೆ, ರಥ, ಸೈನಿಕರು ಇರೋದನ್ನ ನೋಡಿ ಹೆದರಬಾರದು. ಯಾಕಂದ್ರೆ ನಿಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವ ನಿಮ್ಮ ಜೊತೆ ಇರ್ತಾನೆ.+ 2 ನೀವು ಯುದ್ಧಕ್ಕೆ ಹೋಗುವಾಗ ಪುರೋಹಿತ ಸೈನ್ಯದ ಮುಂದೆ ಬಂದು ಅವ್ರಿಗೆ+ 3 ‘ಇಸ್ರಾಯೇಲ್ಯರೇ ಕೇಳಿ, ನೀವು ಇನ್ನೇನು ನಿಮ್ಮ ಶತ್ರುಗಳ ವಿರುದ್ಧ ಯುದ್ಧಕ್ಕೆ ಹೋಗ್ತೀರ. ಧೈರ್ಯವಾಗಿರಿ! ಅವ್ರನ್ನ ನೋಡಿ ಭಯಪಡಬೇಡಿ, ಹೆದರಿ ನಡುಗಬೇಡಿ. 4 ಯಾಕಂದ್ರೆ ನಿಮ್ಮ ದೇವರಾದ ಯೆಹೋವನೇ ನಿಮ್ಮ ಜೊತೆ ಬರ್ತಿದ್ದಾನೆ. ಆತನೇ ನಿಮ್ಮ ಶತ್ರುಗಳ ವಿರುದ್ಧ ಹೋರಾಡಿ ನಿಮ್ಮನ್ನ ರಕ್ಷಿಸ್ತಾನೆ’ + ಅಂತ ಹೇಳಬೇಕು.

5 ಅಧಿಕಾರಿಗಳು ಸೈನಿಕರಿಗೆ ‘ನಿಮ್ಮಲ್ಲಿ ಯಾರಾದ್ರೂ ಹೊಸ ಮನೆ ಕಟ್ಟಿ ಅದ್ರಲ್ಲಿ ಇನ್ನೂ ಇರೋಕೆ ಶುರುಮಾಡಿಲ್ಲ ಅಂದ್ರೆ ಅವನು ಮನೆಗೆ ಹೋಗ್ಲಿ. ಯಾಕಂದ್ರೆ ಅವನು ಯುದ್ಧದಲ್ಲಿ ಸತ್ರೆ ಆ ಮನೆಗೆ ಬೇರೆಯವನು ಬರ್ತಾನೆ. 6 ನಿಮ್ಮಲ್ಲಿ ಯಾರಾದ್ರೂ ದ್ರಾಕ್ಷಿತೋಟ ಮಾಡಿ ಅದ್ರ ಹಣ್ಣು ತಿಂದಿಲ್ಲಾಂದ್ರೆ ಮನೆಗೆ ವಾಪಸ್‌ ಹೋಗ್ಲಿ. ಯಾಕಂದ್ರೆ ಅವನು ಯುದ್ಧದಲ್ಲಿ ಸತ್ರೆ ಆ ಹಣ್ಣನ್ನ ಇನ್ನೊಬ್ಬ ತಿಂತಾನೆ. 7 ನಿಮ್ಮಲ್ಲಿ ಯಾರಿಗಾದ್ರೂ ಮದುವೆ ನಿಶ್ಚಯವಾಗಿ ಇನ್ನೂ ಮದುವೆ ಆಗಿಲ್ಲಾಂದ್ರೆ ಅವನೂ ಮನೆಗೆ ಹೋಗ್ಲಿ.+ ಯಾಕಂದ್ರೆ ಅವನು ಯುದ್ಧದಲ್ಲಿ ಸತ್ರೆ ಅವ್ನಿಗೆ ನಿಶ್ಚಯವಾಗಿದ್ದ ಹುಡುಗಿಯನ್ನ ಇನ್ನೊಬ್ಬ ಮದುವೆ ಆಗ್ತಾನೆ’ ಅಂತ ಹೇಳಬೇಕು. 8 ಅಷ್ಟೇ ಅಲ್ಲ ಅಧಿಕಾರಿಗಳು ಸೈನಿಕರಿಗೆ ‘ನಿಮ್ಮಲ್ಲಿ ಯಾರಿಗಾದ್ರೂ ಯುದ್ಧಕ್ಕೆ ಹೋಗೋಕೆ ಭಯ ಆಗ್ತಿದ್ರೆ,+ ಧೈರ್ಯ ಇಲ್ಲದಿದ್ರೆ ಅವನೂ ಮನೆಗೆ ಹೋಗ್ಲಿ. ಯಾಕಂದ್ರೆ ಅವನು ಹೆದರೋದು ಅಲ್ದೆ ಅವನು ಬೇರೆಯವರನ್ನೂ ಹೆದರೋ ತರ ಮಾಡ್ತಾನೆ. ಹಾಗೆ ಆಗೋದು ಬೇಡ’ ಅಂತ ಹೇಳಬೇಕು.+ 9 ಅಧಿಕಾರಿಗಳು ಹೀಗೆ ಹೇಳಿದ ಮೇಲೆ ಸೈನ್ಯ ಮುನ್ನಡೆಸೋಕೆ ಸೇನಾಪತಿಗಳನ್ನ ನೇಮಿಸಬೇಕು.

10 ನೀವು ಒಂದು ಪಟ್ಟಣವನ್ನ ವಶ ಮಾಡ್ಕೊಳ್ಳೋಕೆ ಹೋದಾಗ ಮೊದ್ಲು ಅಲ್ಲಿ ಇರೋರನ್ನ ಶಾಂತಿ ಒಪ್ಪಂದ ಮಾಡ್ಕೊಳ್ಳೋಕೆ ಕರೀಬೇಕು.+ 11 ಅವರು ಅದಕ್ಕೆ ಒಪ್ಪಿ ತಮ್ಮ ಪಟ್ಟಣದ ಬಾಗಿಲನ್ನ ತೆರೆದ್ರೆ ಅಲ್ಲಿನ ಜನ್ರೆಲ್ಲ ನಿಮ್ಮ ಗುಲಾಮರಾಗ್ತಾರೆ, ನಿಮ್ಮ ಸೇವೆ ಮಾಡ್ತಾರೆ.+ 12 ಆದ್ರೆ ಅವರು ನಿಮ್ಮ ಜೊತೆ ಶಾಂತಿ ಒಪ್ಪಂದ ಮಾಡ್ಕೊಳ್ಳೋಕೆ ಒಪ್ಪದೆ ಯುದ್ಧಕ್ಕೆ ಬಂದ್ರೆ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು. 13 ನಿಮ್ಮ ದೇವರಾದ ಯೆಹೋವ ನಿಮಗೆ ಖಂಡಿತ ಆ ಪಟ್ಟಣ ಕೊಡ್ತಾನೆ. ಆಗ ನೀವು ಅಲ್ಲಿರೋ ಎಲ್ಲ ಗಂಡಸ್ರನ್ನ ಕತ್ತಿಯಿಂದ ಸಾಯಿಸಬೇಕು. 14 ಆದ್ರೆ ಅಲ್ಲಿರೋ ಸ್ತ್ರೀಯರನ್ನ, ಮಕ್ಕಳನ್ನ, ಪ್ರಾಣಿಗಳನ್ನ, ಎಲ್ಲ ಆಸ್ತಿಯನ್ನ ತಗೊಳ್ಳಬಹುದು.+ ನಿಮ್ಮ ದೇವರಾದ ಯೆಹೋವ ನಿಮ್ಮ ಕೈಗೆ ಕೊಟ್ಟ ಶತ್ರುಗಳ ಕೊಳ್ಳೆಯನ್ನ ನೀವು ತಗೊಂಡು ಬಳಸಬಹುದು.+

15 ತುಂಬ ದೂರದಲ್ಲಿರೋ ಯಾವುದೇ ಪಟ್ಟಣವನ್ನ ವಶ ಮಾಡ್ಕೊಳ್ಳುವಾಗ ನೀವು ಹೀಗೇ ಮಾಡಬೇಕು. ಆದ್ರೆ ಹತ್ರ ಇರೋ ಈ ಪಟ್ಟಣಗಳ ವಿಷ್ಯದಲ್ಲಿ ಹಾಗಲ್ಲ. 16 ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ಈ ದೇಶದ ಪಟ್ಟಣಗಳಲ್ಲಿ ನೀವು ಒಬ್ರನ್ನೂ* ಜೀವಂತ ಉಳಿಸಬಾರದು.+ 17 ನಿಮ್ಮ ದೇವರಾದ ಯೆಹೋವ ನಿಮಗೆ ಆಜ್ಞೆ ಕೊಟ್ಟ ಹಾಗೇ ಅಲ್ಲಿರೋ ಹಿತ್ತಿಯರನ್ನ, ಅಮೋರಿಯರನ್ನ, ಕಾನಾನ್ಯರನ್ನ, ಪೆರಿಜೀಯರನ್ನ, ಹಿವ್ವಿಯರನ್ನ, ಯೆಬೂಸಿಯರನ್ನ+ ಪೂರ್ತಿ ನಾಶಮಾಡಬೇಕು. 18 ಇಲ್ಲಾಂದ್ರೆ ತಮ್ಮ ದೇವರುಗಳನ್ನ ಆರಾಧನೆ ಮಾಡುವಾಗ ಅವರು ಮಾಡೋ ಎಲ್ಲ ಅಸಹ್ಯ ಕೆಲಸಗಳನ್ನ ನಿಮಗೂ ಕಲಿಸಿ ನೀವು ನಿಮ್ಮ ದೇವರಾದ ಯೆಹೋವನ ವಿರುದ್ಧ ಪಾಪ ಮಾಡೋ ತರ ಮಾಡಿಬಿಡ್ತಾರೆ.+

19 ನೀವು ಒಂದು ಪಟ್ಟಣವನ್ನ ವಶ ಮಾಡ್ಕೊಳ್ಳೋಕೆ ಅದಕ್ಕೆ ಮುತ್ತಿಗೆ ಹಾಕುವಾಗ ಮತ್ತು ತುಂಬ ದಿನ ಅಲ್ಲಿ ಯುದ್ಧ ಮಾಡುವಾಗ ಅಲ್ಲಿರೋ ಮರಗಳನ್ನ ಕಡೀಬಾರದು. ನೀವು ಆ ಮರದ ಹಣ್ಣುಗಳನ್ನ ತಿನ್ನಬಹುದು, ಆದ್ರೆ ಆ ಮರಗಳನ್ನ ನಾಶ ಮಾಡಬಾರದು.+ ಆ ಮರಗಳು ನಿಮ್ಮ ಶತ್ರುಗಳಲ್ಲ ಅಲ್ವಾ! ಹಾಗಾಗಿ ಅವನ್ನ ನಾಶ ಮಾಡೋದು ಸರಿಯಲ್ಲ. 20 ಯಾವ ಮರದ ಹಣ್ಣನ್ನ ತಿನ್ನೋಕೆ ಆಗಲ್ವೋ ಅಂಥ ಮರವನ್ನ ಮಾತ್ರ ನೀವು ಕಡಿಬಹುದು. ಆ ಪಟ್ಟಣ ನಿಮ್ಮ ವಶಕ್ಕೆ ಬರೋ ತನಕ ಅದಕ್ಕೆ ಮುತ್ತಿಗೆ ಹಾಕೋಕೆ ಆ ಮರಗಳನ್ನ ಬಳಸಬಹುದು.

21 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಯಾರಾದ್ರೂ ಕೊಲೆಯಾಗಿ ಬಯಲಲ್ಲಿ ಬಿದ್ದಿರೋದನ್ನ ನೀವು ನೋಡಿದ್ರೆ, ಕೊಲೆಗಾರ ಯಾರು ಅಂತ ನಿಮಗೆ ಗೊತ್ತಿಲ್ಲಾಂದ್ರೆ 2 ನಿಮ್ಮ ಹಿರಿಯರು, ನ್ಯಾಯಾಧೀಶರು+ ಅಲ್ಲಿ ಹೋಗಿ ಶವ ಬಿದ್ದಿರೋ ಜಾಗದಿಂದ ಸುತ್ತಮುತ್ತ ಇರೋ ಪಟ್ಟಣಗಳು ಎಷ್ಟು ದೂರ ಇದೆ ಅಂತ ಅಳತೆ ಮಾಡಬೇಕು. 3 ಆ ಶವ ಬಿದ್ದಿರೋ ಜಾಗಕ್ಕೆ ತುಂಬ ಹತ್ರ ಇರೋ ಪಟ್ಟಣದ ಹಿರಿಯರು ಒಂದು ಎಳೇ ಹಸು ತಗೊಂಡು ಬರಬೇಕು. ಆ ಹಸು ಇಲ್ಲಿ ತನಕ ಯಾವ ಕೆಲಸನೂ ಮಾಡಿರಬಾರದು, ಅದು ಯಾವತ್ತೂ ನೊಗ ಎಳೆದಿರಬಾರದು. 4 ಆ ಪಟ್ಟಣದ ಹಿರಿಯರು ಆ ಎಳೇ ಹಸುನ ನೀರು ಹರಿತಿರೋ ಕಣಿವೆಗೆ ಕರ್ಕೊಂಡು ಹೋಗಬೇಕು. ಆ ಕಣಿವೆಯಲ್ಲಿ ಉಳುಮೆ ಮಾಡಿರಬಾರದು, ಬಿತ್ತನೆ ಮಾಡಿರಬಾರದು. ಅಲ್ಲಿ ಆ ಹಸುನ ಕುತ್ತಿಗೆ ಮುರಿದು ಸಾಯಿಸಬೇಕು.+

5 ಆಮೇಲೆ ಲೇವಿಯರಾದ ಪುರೋಹಿತರು ಅಲ್ಲಿಗೆ ಬರ್ತಾರೆ. ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಅವ್ರನ್ನ ತನ್ನ ಸೇವೆಗಾಗಿ ಆರಿಸ್ಕೊಂಡಿದ್ದಾನೆ.+ ಅವರು ಯೆಹೋವನ ಹೆಸ್ರಲ್ಲಿ ಜನ್ರಿಗೆ ಆಶೀರ್ವಾದ ಮಾಡ್ತಾರೆ.+ ಹಿಂಸೆ ಹೊಡೆದಾಟ ನಡೆದಾಗೆಲ್ಲ ಅದನ್ನ ಹೇಗೆ ಇತ್ಯರ್ಥ ಮಾಡಬೇಕು ಅಂತ ಹೇಳ್ತಾರೆ.+ 6 ಆಮೇಲೆ, ಶವ ಬಿದ್ದಿರೋ ಜಾಗಕ್ಕೆ ತುಂಬ ಹತ್ರ ಇರೋ ಪಟ್ಟಣದ ಹಿರಿಯರು ಕಣಿವೆಯಲ್ಲಿ ಕುತ್ತಿಗೆ ಮುರಿದು ಸಾಯಿಸಿದ ಎಳೇ ಹಸು ಮೇಲೆ ಕೈ ತೊಳೀಬೇಕು.+ 7 ಅವರು ‘ನಾವು ಈ ಕೊಲೆ ಮಾಡಿಲ್ಲ, ಈ ಕೊಲೆ ಆಗಿದ್ದೂ ನಾವು ನೋಡಿಲ್ಲ. 8 ಯೆಹೋವನೇ, ನೀನು ಬಿಡಿಸ್ಕೊಂಡು ಬಂದಿರೋ ನಿನ್ನ ಜನ್ರಾದ ಇಸ್ರಾಯೇಲ್ಯರನ್ನ+ ಈ ಕೊಲೆಗೆ ಹೊಣೆಗಾರರಾಗಿ ಮಾಡಬೇಡ. ಅನ್ಯಾಯವಾಗಿ ಸತ್ತಿರೋ ಈ ವ್ಯಕ್ತಿಯ ಕೊಲೆ ಅಪರಾಧ ನಮ್ಮ ಮೇಲೆ ಬರೋಕೆ ಬಿಡಬೇಡ’+ ಅನ್ನಬೇಕು. ಆಗ ಆ ಕೊಲೆ ಅಪರಾಧ ಅವ್ರ ಮೇಲೆ ಬರಲ್ಲ. 9 ಹೀಗೆ ನೀವು ಯೆಹೋವನಿಗೆ ಸರಿ ಅನಿಸಿದ್ದನ್ನ ಮಾಡೋ ಮೂಲಕ ಅನ್ಯಾಯವಾಗಿ ಸತ್ತ ವ್ಯಕ್ತಿಯ ಕೊಲೆ ಅಪರಾಧವನ್ನ ನಿಮ್ಮಿಂದ ತೆಗೆದುಹಾಕ್ತೀರ.

10 ನಿಮ್ಮ ಶತ್ರುಗಳ ವಿರುದ್ಧ ಯುದ್ಧಕ್ಕೆ ಹೋದಾಗ ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮಗೋಸ್ಕರ ಸೋಲಿಸಿದ್ದಾನೆ. ನೀವು ಅವ್ರನ್ನ ಬಂಧಿಸಿದ್ದೀರ ಅಂದ್ಕೊಳ್ಳಿ.+ 11 ನಿಮ್ಮಲ್ಲಿ ಯಾರಾದ್ರೂ ಆ ಕೈದಿಗಳಲ್ಲಿ ಒಬ್ಬ ಸುಂದರ ಸ್ತ್ರೀಯನ್ನ ನೋಡಿ, ಅವಳ ಅಂದಕ್ಕೆ ಮನಸೋತು ಮದುವೆ ಆಗೋಕೆ ಇಷ್ಟಪಟ್ರೆ 12 ಅವಳನ್ನ ನಿಮ್ಮ ಮನೆಗೆ ಕರ್ಕೊಂಡು ಹೋಗಬಹುದು. ಆಮೇಲೆ ಅವಳು ತನ್ನ ತಲೆ ಬೋಳಿಸ್ಕೊಳ್ಳಬೇಕು, ಉಗುರು ಕತ್ತರಿಸ್ಕೊಳ್ಳಬೇಕು, 13 ಕೈದಿಯಾಗಿ ಬರುವಾಗ ಹಾಕಿದ್ದ ಬಟ್ಟೆ ಬದಲಾಯಿಸಿ ಅವನ ಮನೇಲಿ ಇರಬೇಕು. ತೀರಿಹೋದ ತನ್ನ ಅಪ್ಪಅಮ್ಮಗಾಗಿ ಅವಳು ಒಂದು ಇಡೀ ತಿಂಗಳು ಗೋಳಾಡಬೇಕು.+ ಆಮೇಲೆ ಅವನು ಅವಳನ್ನ ಮದುವೆಯಾಗಿ ತನ್ನ ಹೆಂಡತಿಯಾಗಿ ಮಾಡ್ಕೊಬಹುದು. 14 ಅವಳು ಇಷ್ಟವಾಗದೇ ಹೋದ್ರೆ ಅವಳಿಗೆ ಎಲ್ಲಿ ಇಷ್ಟಾನೋ ಅಲ್ಲಿಗೆ ಕಳಿಸಿಬಿಡಬೇಕು.+ ಅವಳನ್ನ ಒತ್ತಾಯದಿಂದ ಮದುವೆ ಆಗಿರೋದ್ರಿಂದ ಅವಳನ್ನ ಮಾರಬಾರದು, ಕ್ರೂರವಾಗಿ ನಡ್ಕೊಬಾರದು.

15 ಒಬ್ಬನಿಗೆ ಎರಡು ಹೆಂಡತಿ ಇದ್ರೆ ಒಬ್ಬಳನ್ನ ತುಂಬ ಪ್ರೀತಿಸಿ ಇನ್ನೊಬ್ಬಳನ್ನ ಪ್ರೀತಿಸದಿದ್ರೆ, ಆ ಇಬ್ರು ಹೆಂಡತಿಯರಿಗೂ ಗಂಡು ಮಕ್ಕಳಾಗಿ ಯಾರ ಮೇಲೆ ಅವನಿಗೆ ಜಾಸ್ತಿ ಪ್ರೀತಿ ಇಲ್ವೋ ಅವಳ ಮಗನೇ ಮೊದಲನೇ ಮಗ ಆಗಿದ್ರೆ+ 16 ಅವನು ಆಸ್ತಿ ಪಾಲುಮಾಡಿ ಕೊಡುವಾಗ ಇದನ್ನ ನೆನಪಲ್ಲಿ ಇಟ್ಕೊಬೇಕು: ಅವನು ಆ ಮೊದಲ ಮಗನನ್ನ ಬಿಟ್ಟು ತನಗೆ ಯಾರ ಮೇಲೆ ಜಾಸ್ತಿ ಪ್ರೀತಿ ಇದ್ಯೋ ಅವಳ ಮಗನಿಗೆ ಮೊದಲ ಮಗನ ಸ್ಥಾನ ಕೊಡಬಾರದು. 17 ಯಾರ ಮೇಲೆ ಜಾಸ್ತಿ ಪ್ರೀತಿ ಇಲ್ವೋ ಆ ಹೆಂಡತಿಯ ಮಗನನ್ನೇ ಮೊದಲ ಮಗ ಅಂತ ಒಪ್ಕೊಂಡು ತನ್ನ ಹತ್ರ ಏನೆಲ್ಲ ಇದ್ಯೋ ಅದ್ರಲ್ಲಿ ಎರಡು ಭಾಗ ಅವನಿಗೆ ಕೊಡಬೇಕು. ಯಾಕಂದ್ರೆ ಆ ಮಗನೇ ತಂದೆಯ ಮೊದಲ ಸಂತಾನ.* ಜೇಷ್ಠಪುತ್ರನ ಹಕ್ಕು ಇರೋದು ಆ ಮಗನಿಗೇ.+

18 ಯಾರ ಮಗನಾದ್ರೂ ಹಠಮಾರಿ ಆಗಿದ್ರೆ ದಂಗೆ ಏಳೋ ಸ್ವಭಾವ ಇದ್ರೆ ಅಪ್ಪಅಮ್ಮನ ಮಾತು ಕೇಳದಿದ್ರೆ+ ಅವನನ್ನ ತಿದ್ದೋಕೆ ಎಷ್ಟೇ ಪ್ರಯತ್ನ ಮಾಡಿದ್ರೂ ಬಗ್ಗದಿದ್ರೆ+ 19 ಅವನ ಅಪ್ಪಅಮ್ಮ ಅವನನ್ನ ಹಿಡ್ಕೊಂಡು ಅವನಿರೋ ಪಟ್ಟಣದ ಬಾಗಿಲ ಹತ್ರ ಇರೋ ಹಿರಿಯರ ಹತ್ರ ಕರ್ಕೊಂಡು ಬರಬೇಕು. 20 ಆ ಹಿರಿಯರಿಗೆ ‘ನಮ್ಮ ಮಗ ತುಂಬ ಹಠಮಾರಿ, ದಂಗೆಕೋರ. ನಮ್ಮ ಮಾತು ಕೇಳೋದೇ ಇಲ್ಲ. ಅವನು ಹೊಟ್ಟೆಬಾಕ+ ಕುಡುಕ’ + ಅಂತ ಹೇಳಬೇಕು. 21 ಆಗ ಆ ಪಟ್ಟಣದ ಎಲ್ಲ ಜನ್ರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು. ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಬಿಡಬೇಕು. ಇದನ್ನ ಕೇಳಿ ಎಲ್ಲ ಇಸ್ರಾಯೇಲ್ಯರೂ ಹೆದರ್ತಾರೆ.+

22 ಒಬ್ಬ ಮರಣದಂಡನೆಗೆ ತಕ್ಕ ಪಾಪ ಮಾಡಿದ್ರೆ ಅವನನ್ನ ಸಾಯಿಸಿ+ ಮರದಕಂಬಕ್ಕೆ ಅವನ ಶವ ನೇತುಹಾಕಬೇಕು.+ 23 ಆದ್ರೆ ಆ ಶವನ ಅದೇ ದಿನ ಸಮಾಧಿ ಮಾಡಬೇಕು. ಕಂಬಕ್ಕೆ ನೇತುಹಾಕಿದ ವ್ಯಕ್ತಿ ಮೇಲೆ ದೇವರ ಶಾಪ ಇದೆ.+ ಹಾಗಾಗಿ ಇಡೀ ರಾತ್ರಿ ಕಂಬದ ಮೇಲೆನೇ ಶವ ಇರೋಕೆ ಬಿಡಬಾರದು.+ ಬಿಟ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶ ಅಪವಿತ್ರ ಆಗುತ್ತೆ.+ ಹಾಗೆ ಅಪವಿತ್ರ ಆಗೋಕೆ ಬಿಡಬಾರದು.

22 ನಿಮ್ಮ ಸಹೋದರನ ಹೋರಿ ಅಥವಾ ಕುರಿ ತಪ್ಪಿಸ್ಕೊಂಡು ಹೋಗ್ತಿರೋದು ನಿಮ್ಮ ಕಣ್ಣಿಗೆ ಬಿದ್ರೆ ಅದನ್ನ ನೋಡಿನೂ ನೋಡದ ಹಾಗೆ ಹೋಗಬಾರದು.+ ನೀವು ಅದನ್ನ ಹೊಡ್ಕೊಂಡು ಹೋಗಿ ನಿಮ್ಮ ಸಹೋದರನಿಗೆ ಕೊಡ್ಲೇಬೇಕು. 2 ನಿಮ್ಮ ಸಹೋದರ ತುಂಬ ದೂರದಲ್ಲಿದ್ರೆ ಅಥವಾ ಆ ಪ್ರಾಣಿ ಯಾರದು ಅಂತ ನಿಮಗೆ ಗೊತ್ತಿಲ್ಲಾಂದ್ರೆ ಅದನ್ನ ನಿಮ್ಮ ಮನೆಗೆ ಹೊಡ್ಕೊಂಡು ಹೋಗಿ ಇಟ್ಕೊಬೇಕು. ನಿಮ್ಮ ಸಹೋದರ ಅದನ್ನ ಹುಡ್ಕೊಂಡು ಬರೋ ತನಕ ಅದು ನಿಮ್ಮ ಮನೆಲೇ ಇರಬೇಕು. ಅವನು ಬಂದ್ಮೇಲೆ ಅದನ್ನ ವಾಪಾಸ್‌ ಕೊಡಬೇಕು.+ 3 ನಿಮ್ಮ ಸಹೋದರನ ಕತ್ತೆ, ಬಟ್ಟೆ ಅಥವಾ ಬೇರೆ ಏನೇ ವಸ್ತು ಕಳೆದುಹೋಗಿದ್ರೂ ನಿಮಗೆ ಅದು ಸಿಕ್ಕಿದಾಗ ನೋಡಿನೂ ನೋಡದ ಹಾಗೆ ಇರಬಾರದು. ಅವನಿಗೆ ಹಿಂದೆ ಕೊಡಬೇಕು.

4 ನಿಮ್ಮ ಸಹೋದರನ ಕತ್ತೆ ಅಥವಾ ಹೋರಿ ದಾರೀಲಿ ಬಿದ್ದಿರೋದಾದ್ರೆ ಅದನ್ನ ನೋಡಿನೂ ನೋಡದ ಹಾಗೆ ಹೋಗಬಾರದು. ಆ ಪ್ರಾಣಿನ ಎತ್ತೋಕೆ ಅವನಿಗೆ ಸಹಾಯ ಮಾಡ್ಲೇಬೇಕು.+

5 ಸ್ತ್ರೀ ಪುರುಷನ ಬಟ್ಟೆ ಹಾಕೊಳ್ಳಬಾರದು. ಪುರುಷ ಸ್ತ್ರೀಯ ಬಟ್ಟೆ ಹಾಕೊಳ್ಳಬಾರದು. ಹಾಗೆ ಹಾಕೊಳ್ಳೋರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.

6 ನೀವು ದಾರಿಲಿ ಹೋಗುವಾಗ ಮರದ ಮೇಲೆ ಅಥವಾ ನೆಲದ ಮೇಲೆ ಒಂದು ಹಕ್ಕಿ ಗೂಡನ್ನ ನೋಡಿದ್ರೆ, ಅದ್ರೊಳಗೆ ತಾಯಿಹಕ್ಕಿ ಮರಿಗಳ ಮೇಲೆ ಅಥವಾ ಮೊಟ್ಟೆಗಳ ಮೇಲೆ ಕೂತಿದ್ರೆ ನೀವು ಆ ಮರಿಗಳ ಜೊತೆ ತಾಯಿ ಹಕ್ಕಿಯನ್ನೂ ತಗೊಬಾರದು.+ 7 ತಾಯಿ ಹಕ್ಕಿಯನ್ನ ಹಾರಿಹೋಗೋಕೆ ಬಿಟ್ಟು ಮರಿಗಳನ್ನ ಮಾತ್ರ ತಗೊಬಹುದು. ಹೀಗೆ ಮಾಡಿದ್ರೆ ನಿಮಗೆ ಒಳ್ಳೇದಾಗುತ್ತೆ, ಜಾಸ್ತಿ ವರ್ಷ ಬದುಕ್ತೀರ.

8 ನೀವು ಒಂದು ಹೊಸ ಮನೆ ಕಟ್ಟಿದ್ರೆ ಮನೆ ಮಾಳಿಗೆ* ಸುತ್ತ ಒಂದು ಸಣ್ಣ ಗೋಡೆ ಕಟ್ಟಬೇಕು.+ ಇಲ್ಲಾಂದ್ರೆ ಯಾರಾದ್ರೂ ನಿಮ್ಮ ಮನೆ ಮಾಳಿಗೆಯಿಂದ ಕೆಳಗೆ ಬೀಳಬಹುದು. ಆಗ ಆ ಕೊಲೆ ಅಪರಾಧ ನಿಮ್ಮ ಕುಟುಂಬದ ಮೇಲೆ ಬರುತ್ತೆ.

9 ನಿಮ್ಮ ದ್ರಾಕ್ಷಿತೋಟದಲ್ಲಿ ದ್ರಾಕ್ಷಿ ಜೊತೆ ಬೇರೆ ಯಾವ ಬೀಜವನ್ನೂ ಬಿತ್ತಬಾರದು.+ ಬಿತ್ತಿದ್ರೆ ಆ ಬೆಳೆಯನ್ನೂ ದ್ರಾಕ್ಷಿ ಬೆಳೆಯನ್ನೂ ಆರಾಧನಾ ಸ್ಥಳಕ್ಕೆ ಕೊಡಬೇಕಾಗುತ್ತೆ.

10 ಹೋರಿ ಮತ್ತೆ ಕತ್ತೆ ಎರಡನ್ನೂ ಒಂದೇ ನೇಗಿಲಿಗೆ ಕಟ್ಟಿ ಹೊಲ ಉಳಬಾರದು.+

11 ಉಣ್ಣೆ ಮತ್ತೆ ನಾರು ಎರಡನ್ನೂ ಸೇರಿಸಿ ಮಾಡಿರೋ ಬಟ್ಟೆ ಹಾಕೊಳ್ಳಬಾರದು.+

12 ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಕುಚ್ಚುಗಳನ್ನ ಕಟ್ಟಬೇಕು.+

13 ಒಬ್ಬ ಪುರುಷ ಒಬ್ಬ ಸ್ತ್ರೀಯನ್ನ ಮದುವೆಯಾಗಿ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಅವಳನ್ನ ದ್ವೇಷಿಸಿ* 14 ಅವಳ ನಡತೆ ಸರಿಯಿಲ್ಲ ಅಂತ ಹೇಳ್ತಾ ‘ನಾನು ಇವಳನ್ನ ಮದುವೆ ಆದೆ. ಆದ್ರೆ ಇವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಇವಳು ಕನ್ಯೆ ಅಲ್ಲ ಅಂತ ಗೊತ್ತಾಯ್ತು’ ಅಂತ ಹೇಳಿ ಅವಳ ಹೆಸ್ರನ್ನ ಹಾಳು ಮಾಡಿದ್ರೆ 15 ಅವಳ ತಂದೆತಾಯಿ ಪಟ್ಟಣದ ಬಾಗಿಲ ಹತ್ರ ಇರೋ ಹಿರಿಯರ ಹತ್ರ ಹೋಗಿ ತಮ್ಮ ಮಗಳು ಕನ್ಯೆ ಆಗಿರೋದಕ್ಕೆ ಪುರಾವೆ ತೋರಿಸಬೇಕು. 16 ಅವಳ ತಂದೆ ಆ ಹಿರಿಯರಿಗೆ ‘ನನ್ನ ಮಗಳನ್ನ ಇವನಿಗೆ ಕೊಟ್ಟು ಮದುವೆ ಮಾಡ್ದೆ. ಆದ್ರೆ ಇವನು ಅವಳನ್ನ ದ್ವೇಷಿಸ್ತಿದ್ದಾನೆ.* 17 “ಇವಳು ಕನ್ಯೆ ಅಲ್ಲ ಅಂತ ಗೊತ್ತಾಯ್ತು” ಅಂತ ಹೇಳಿ ಅವಳ ನಡತೆ ಸರಿಯಿಲ್ಲ ಅಂತ ಆರೋಪ ಹಾಕ್ತಿದ್ದಾನೆ. ಆದ್ರೆ ನಮ್ಮ ಮಗಳು ಕನ್ಯೆ ಆಗಿದ್ದಳು ಅನ್ನೋದಕ್ಕೆ ಪುರಾವೆ ಇಲ್ಲಿದೆ ನೋಡಿ’ ಅಂತ ಹೇಳಬೇಕು. ಆಮೇಲೆ ಅವಳ ತಂದೆತಾಯಿ ಪುರಾವೆಯಾಗಿ ತಂದಿರೋ ಬಟ್ಟೆನ ಪಟ್ಟಣದ ಹಿರಿಯರ ಮುಂದೆ ಹಾಸಬೇಕು. 18 ಆಗ ಪಟ್ಟಣದ ಹಿರಿಯರು+ ಆ ಪುರುಷನನ್ನ ಹಿಡಿದು ಅವನಿಗೆ ಶಿಕ್ಷೆ ಕೊಡಬೇಕು.+ 19 ಅವನು ಇಸ್ರಾಯೇಲಿನ ಒಬ್ಬ ಕನ್ಯೆಯ ಹೆಸ್ರನ್ನ ಹಾಳು ಮಾಡಿದ್ರಿಂದ+ ಆ ಹಿರಿಯರು ಅವನಿಗೆ 100 ಬೆಳ್ಳಿ ಶೆಕೆಲ್‌* ದಂಡ ಹಾಕಿ ಆ ಹಣನ ಅವಳ ತಂದೆಗೆ ಕೊಡಬೇಕು. ಅವಳು ಅವನ ಹೆಂಡತಿಯಾಗೇ ಇರಬೇಕು. ಅವನು ಸಾಯೋ ತನಕ ಅವಳಿಗೆ ವಿಚ್ಛೇದನ ಕೊಡೋ ಹಾಗಿಲ್ಲ.

20 ಅವನ ಆರೋಪ ನಿಜ ಆಗಿದ್ರೆ, ಅವಳು ಕನ್ಯೆಯಾಗಿದ್ದಳು ಅನ್ನೋದಕ್ಕೆ ಯಾವ ಪುರಾವೆನೂ ಇಲ್ಲದಿದ್ರೆ 21 ಅವಳನ್ನ ಅವಳ ತಂದೆ ಮನೆ ಬಾಗಿಲ ಮುಂದೆ ತಂದು ನಿಲ್ಲಿಸಬೇಕು. ಅವಳು ತಂದೆ ಮನೇಲಿ ಇರುವಾಗ ಲೈಂಗಿಕ ಅನೈತಿಕತೆ ನಡೆಸಿ*+ ಇಸ್ರಾಯೇಲಿಗೆ ಕಳಂಕ ತರೋ ಕೆಲಸ ಮಾಡಿದ್ರಿಂದ+ ಆ ಪಟ್ಟಣದವರೆಲ್ಲ ಅವಳನ್ನ ಕಲ್ಲು ಹೊಡೆದು ಸಾಯಿಸಬೇಕು. ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.+

22 ಒಬ್ಬ ಪುರುಷ ಇನ್ನೊಬ್ಬನ ಹೆಂಡತಿ ಜೊತೆ ಮಲಗಿಕೊಂಡಿರುವಾಗ ಸಿಕ್ಕಿಬಿದ್ರೆ ಆ ಪುರುಷ ಮತ್ತು ಸ್ತ್ರೀ ಇಬ್ರನ್ನೂ ಸಾಯಿಸಬೇಕು.+ ಹೀಗೆ ಇಸ್ರಾಯೇಲ್ಯರ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.

23 ಒಬ್ಬನಿಗೆ ನಿಶ್ಚಯ ಆಗಿರೋ ಕನ್ಯೆನ ಇನ್ನೊಬ್ಬ ಪುರುಷ ಪಟ್ಟಣದಲ್ಲಿ ನೋಡಿ ಅವಳ ಜೊತೆ ಮಲಗಿಕೊಂಡ್ರೆ 24 ಅವರಿಬ್ರನ್ನೂ ಆ ಪಟ್ಟಣದ ಬಾಗಿಲಿಗೆ ಕರ್ಕೊಂಡು ಬಂದು ಕಲ್ಲುಹೊಡೆದು ಸಾಯಿಸಬೇಕು. ಅವಳು ಪಟ್ಟಣದಲ್ಲಿದ್ರೂ ಕೂಗಿಕೊಳ್ಳದೆ ಇದ್ದಿದ್ರಿಂದ, ಆ ಪುರುಷ ಇನ್ನೊಬ್ಬನ ಹೆಂಡತಿಯ ಶೀಲ ಕೆಡಿಸಿದ್ರಿಂದ ಅವರಿಬ್ರನ್ನೂ ಸಾಯಿಸಬೇಕು.+ ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.

25 ಒಬ್ಬ ಪುರುಷ ಇನ್ನೊಬ್ಬನಿಗೆ ನಿಶ್ಚಯ ಆಗಿರೋ ಹೆಣ್ಣನ್ನ ಬಯಲಲ್ಲಿ ನೋಡಿ ಬಲಾತ್ಕಾರ ಮಾಡಿದ್ರೆ ಅವನನ್ನ ಸಾಯಿಸಬೇಕು. 26 ಅವಳನ್ನ ಸಾಯಿಸಬಾರದು. ಯಾಕಂದ್ರೆ ಅವಳು ಪಾಪ ಮಾಡಲಿಲ್ಲ. ಇದು, ನಿರಪರಾಧಿ ಮೇಲೆ ಒಬ್ಬ ದಾಳಿ ಮಾಡಿ ಕೊಲ್ಲೋದಕ್ಕೆ ಸಮ.+ 27 ಅವಳು ಬಯಲಲ್ಲಿದ್ದಾಗ ಅವನು ಹಾಗೆ ಮಾಡಿದ್ರಿಂದ, ಅವಳು ಕೂಗ್ಕೊಂಡ್ರೂ ಅವಳನ್ನ ಕಾಪಾಡೋಕೆ ಅಲ್ಲಿ ಯಾರೂ ಇಲ್ಲದಿದ್ರಿಂದ ಅವಳು ನಿರಪರಾಧಿ.

28 ಯಾರಿಗೂ ನಿಶ್ಚಯ ಆಗಿರದ ಕನ್ಯೆಯನ್ನ ಒಬ್ಬ ಪುರುಷ ನೋಡಿ ಬಲಾತ್ಕಾರ ಮಾಡಿ ಆ ವಿಷ್ಯ ಬೆಳಕಿಗೆ ಬಂದ್ರೆ+ 29 ಅವನು ಅವಳ ತಂದೆಗೆ 50 ಬೆಳ್ಳಿ ಶೆಕೆಲ್‌ ಕೊಟ್ಟು ಅವಳನ್ನ ಮದುವೆ ಆಗಬೇಕು.+ ಅವನು ಅವಳನ್ನ ಕೆಡಿಸಿದ್ರಿಂದ ಅವನು ಸಾಯೋ ತನಕ ಅವಳಿಗೆ ವಿಚ್ಛೇದನ ಕೊಡೋ ಹಾಗಿಲ್ಲ.

30 ಯಾವ ಪುರುಷನೂ ತನ್ನ ತಂದೆಯ ಹೆಂಡತಿಯನ್ನ ಮದುವೆ ಆಗಬಾರದು. ಹಾಗೆ ಮಾಡಿದ್ರೆ ಅವನು ತನ್ನ ತಂದೆಗೆ ಅವಮಾನ ಮಾಡಿದ ಹಾಗೆ.+

23 ಯಾರಾದ್ರೂ ತನ್ನನ್ನ ನಪುಂಸಕ ಮಾಡ್ಕೊಳ್ಳೋಕೆ ಜನನಾಂಗ ಕತ್ತರಿಸಿಕೊಂಡ್ರೆ ಅಥವಾ ಬೀಜಗಳನ್ನ ಒಡೆಸಿಕೊಂಡ್ರೆ ಅಂಥವನು ಯೆಹೋವನ ಸಭೆಯ ಸದಸ್ಯ ಆಗಬಾರದು.+

2 ಅನೈತಿಕ ಸಂಬಂಧದಿಂದ ಹುಟ್ಟಿದ ಯಾವನೂ ಯೆಹೋವನ ಸಭೆಯ ಸದಸ್ಯ ಆಗಬಾರದು.+ ಅವನ ವಂಶದಲ್ಲಿ 10 ಪೀಳಿಗೆ ಕಳೆದ್ರೂ ಅವ್ರಲ್ಲಿ ಯಾರೂ ಯೆಹೋವನ ಸಭೆಯ ಸದಸ್ಯರು ಆಗಬಾರದು.

3 ಅಮ್ಮೋನಿಯರಲ್ಲಿ, ಮೋವಾಬ್ಯರಲ್ಲಿ ಯಾರೂ ಯೆಹೋವನ ಸಭೆಯ ಸದಸ್ಯರಾಗಬಾರದು.+ 10 ಪೀಳಿಗೆ ಕಳೆದ್ರೂ ಅವ್ರ ವಂಶದಲ್ಲಿ ಯಾರೂ ಯಾವತ್ತೂ ಯೆಹೋವನ ಸಭೆಯ ಸದಸ್ಯರಾಗಬಾರದು. 4 ಯಾಕಂದ್ರೆ ನೀವು ಈಜಿಪ್ಟನ್ನ ಬಿಟ್ಟು ಬರ್ತಿದ್ದಾಗ ಅವರು ಊಟ ನೀರು ಕೊಟ್ಟು ಸಹಾಯ ಮಾಡಲಿಲ್ಲ.+ ಅಷ್ಟೇ ಅಲ್ಲ ನಿಮ್ಮ ಮೇಲೆ ಶಾಪ ಹಾಕೋಕೆ* ಅವರು ಮೆಸಪಟೇಮ್ಯದ ಪೆತೋರಿನಿಂದ ಬೆಯೋರನ ಮಗ ಬಿಳಾಮನನ್ನ ಹಣಕೊಟ್ಟು ಕರೆಸಿದ್ರು.+ 5 ಆದ್ರೆ ಬಿಳಾಮನ ಮಾತನ್ನ ನಿಮ್ಮ ದೇವರಾದ ಯೆಹೋವ ಕೇಳಿಸ್ಕೊಳ್ಳಲಿಲ್ಲ.+ ಬಿಳಾಮ ಶಾಪಕ್ಕೆ ಬದ್ಲು ಆಶೀರ್ವಾದ ಹೇಳೋ ತರ ನಿಮ್ಮ ದೇವರಾದ ಯೆಹೋವ ಮಾಡಿದನು.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಪ್ರೀತಿಸೋದ್ರಿಂದ ಹಾಗೆ ಮಾಡಿದನು.+ 6 ಅಮ್ಮೋನಿಯರು, ಮೋವಾಬ್ಯರು ಚೆನ್ನಾಗಿರೋಕೆ, ಸಮಾಧಾನವಾಗಿ ಜೀವನ ಮಾಡೋಕೆ ನೀವು ಸಹಾಯ ಮಾಡಬಾರದು.+

7 ನೀವು ಎದೋಮ್ಯರನ್ನ ದ್ವೇಷಿಸಬಾರದು. ಯಾಕಂದ್ರೆ ಅವರು ನಿಮ್ಮ ಸಹೋದರರು.+

ನೀವು ಈಜಿಪ್ಟಿನ ಜನ್ರನ್ನ ದ್ವೇಷಿಸಬಾರದು. ಯಾಕಂದ್ರೆ ಅವ್ರ ದೇಶದಲ್ಲಿ ವಿದೇಶಿಗಳಾಗಿ ಇದ್ರಿ.+ 8 ಅವ್ರ ಮರಿಮಕ್ಕಳು ಯೆಹೋವನ ಸಭೆಯ ಸದಸ್ಯರಾಗಬಹುದು.

9 ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೋಗಿ ಪಾಳೆಯ ಹಾಕಿದಾಗ ಯಾವುದೇ ವಿಧದಲ್ಲೂ ಅಶುದ್ಧರಾಗಬಾರದು.+ 10 ರಾತ್ರಿ ಸಮಯದಲ್ಲಿ ಒಬ್ಬ ಪುರುಷನಿಗೆ ವೀರ್ಯ ಬಂದು ಅಶುದ್ಧನಾದ್ರೆ+ ಅವನು ಪಾಳೆಯದ ಹೊರಗೆ ಹೋಗಿ ಅಲ್ಲೇ ಇರಬೇಕು. 11 ಸಂಜೆ ಆದಾಗ ಸ್ನಾನ ಮಾಡಬೇಕು. ಸೂರ್ಯ ಮುಳುಗಿದ ಮೇಲೆ ಅವನು ಪಾಳೆಯದ ಒಳಗೆ ಬರಬಹುದು.+ 12 ಪಾಳೆಯದ ಹೊರಗೆ ಬಯಲಿಗೆ ಹೋಗೋಕೆ* ನೀವು ಒಂದು ಜಾಗ ಗೊತ್ತು ಮಾಡಿ ಅಲ್ಲೇ ಹೋಗಬೇಕು. 13 ಯುದ್ಧ ಸಾಮಾಗ್ರಿಗಳ ಜೊತೆ ಒಂದು ಗೂಟ ಇಟ್ಕೊಬೇಕು. ಬಯಲಿಗೆ ಹೋದಾಗ ಆ ಗೂಟದಿಂದ ನೆಲ ಅಗೆದು ಗುಂಡಿ ಮಾಡಿ ಮಲವನ್ನ ಮಣ್ಣಿಂದ ಮುಚ್ಚಿಬಿಡಬೇಕು. 14 ನಿಮ್ಮ ಪಾಳೆಯ ಪವಿತ್ರವಾಗಿರಬೇಕು.+ ಯಾಕಂದ್ರೆ ನಿಮ್ಮನ್ನ ಕಾಪಾಡೋಕೆ, ಶತ್ರುಗಳನ್ನ ನಿಮ್ಮ ವಶ ಮಾಡೋಕೆ ನಿಮ್ಮ ದೇವರಾದ ಯೆಹೋವ ಪಾಳೆಯದಲ್ಲಿ ನಡೆದಾಡ್ತಾ ಇರ್ತಾನೆ.+ ನಿಮ್ಮ ಮಧ್ಯ ಅಸಹ್ಯವಾದ ಏನನ್ನಾದ್ರೂ ಆತನು ನೋಡಿದ್ರೆ ನಿಮ್ಮನ್ನ ಬಿಟ್ಟು ಹೋಗ್ತಾನೆ.

15 ಒಬ್ಬ ದಾಸ ಯಜಮಾನನಿಂದ ತಪ್ಪಿಸ್ಕೊಂಡು ನಿಮ್ಮ ಹತ್ರ ಬಂದ್ರೆ ಅವನನ್ನ ಯಜಮಾನನಿಗೆ ಒಪ್ಪಿಸಬಾರದು. 16 ಅವನು ನಿಮ್ಮ ಪಟ್ಟಣದಲ್ಲಿ ಎಲ್ಲಿ ಬೇಕಾದ್ರೂ ವಾಸ ಮಾಡಬಹುದು. ನೀವು ಅವನಿಗೆ ಕಿರುಕುಳ ಕೊಡಬಾರದು.+

17 ಇಸ್ರಾಯೇಲ್ಯರಲ್ಲಿ ಯಾವ ಹೆಣ್ಣುಮಕ್ಕಳೂ ವೇಶ್ಯೆ ಆಗಬಾರದು.*+ ಇಸ್ರಾಯೇಲ್ಯರಲ್ಲಿ ಯಾವ ಗಂಡಸರೂ ವೇಶ್ಯಾವಾಟಿಕೆಗೆ* ಇಳಿಬಾರದು.+ 18 ವೇಶ್ಯಾವಾಟಿಕೆಯಲ್ಲಿ ಒಬ್ಬ ಪುರುಷ ಅಥವಾ ಸ್ತ್ರೀಗೆ ಸಿಕ್ಕಿದ* ಹಣನ ಯಾರೂ ಹರಕೆ ತೀರಿಸೋಕೆ ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬಾರದು. ಯಾಕಂದ್ರೆ ವೇಶ್ಯಾವಾಟಿಕೆ ಮಾಡೋರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.

19 ನೀವು ಹಣ, ಆಹಾರವಸ್ತುಗಳನ್ನ ಅಥವಾ ಬೇರೆ ಇನ್ನೇನಾದ್ರೂ ನಿಮ್ಮ ಸಹೋದರನಿಗೆ ಸಾಲ ಕೊಟ್ರೆ ಅವನಿಂದ ಬಡ್ಡಿ ತಗೊಬಾರದು.+ 20 ನೀವು ವಿದೇಶಿಯರಿಂದ ಬಡ್ಡಿ ತಗೊಬಹುದು,+ ಆದ್ರೆ ನಿಮ್ಮ ಸಹೋದರನಿಂದ ಬಡ್ಡಿ ತಗೊಬಾರದು.+ ಆಗ ನಿಮಗೆ ಸಿಗೋ ದೇಶದಲ್ಲಿ ನೀವು ಮಾಡೋ ಎಲ್ಲ ಕೆಲಸಗಳನ್ನ ನಿಮ್ಮ ದೇವರಾದ ಯೆಹೋವ ಆಶೀರ್ವದಿಸ್ತಾನೆ.+

21 ನಿಮ್ಮ ದೇವರಾದ ಯೆಹೋವನಿಗೆ ಒಂದು ಹರಕೆ ಮಾಡ್ಕೊಂಡ್ರೆ+ ಅದನ್ನ ತೀರಿಸೋಕೆ ತಡಮಾಡಬಾರದು.+ ಅದನ್ನ ತೀರಿಸ್ಲೇಬೇಕು ಅಂತ ನಿಮ್ಮ ದೇವರಾದ ಯೆಹೋವ ಬಯಸ್ತಾನೆ. ಹರಕೆ ತೀರಿಸದೇ ಇರೋದು ಪಾಪ.+ 22 ಹರಕೆಯನ್ನೇ ಮಾಡ್ಕೊಳ್ಳದೆ ಇದ್ರೆ ಅದು ಪಾಪ ಅಲ್ಲ.+ 23 ಮಾತುಕೊಟ್ಟ ಮೇಲೆ ಅದ್ರ ಪ್ರಕಾರ ನಡೀಬೇಕು.+ ನೀವು ಮಾಡೋ ಹರಕೆ ಸ್ವಇಷ್ಟದ ಕಾಣಿಕೆ ತರ ಇದೆ. ನಿಮ್ಮ ದೇವರಾದ ಯೆಹೋವನಿಗೆ ಮಾಡಿದ ಹರಕೆ ತೀರಿಸ್ಲೇಬೇಕು.+

24 ನೀವು ಇನ್ನೊಬ್ಬನ ದ್ರಾಕ್ಷಿತೋಟಕ್ಕೆ ಹೋದಾಗ ಹಸಿವಾದ್ರೆ ಆ ತೋಟದಲ್ಲಿ ಬೇಕಾದಷ್ಟು ದ್ರಾಕ್ಷಿ ತಿನ್ನಬಹುದು. ಆದ್ರೆ ಒಂದೇ ಒಂದು ದ್ರಾಕ್ಷಿನೂ ತಗೊಂಡು ಹೋಗಬಾರದು.+

25 ನೀವು ಇನ್ನೊಬ್ಬನ ಹೊಲಕ್ಕೆ ಹೋದಾಗ ಅಲ್ಲಿ ಪೈರು ಬೆಳೆದು ನಿಂತಿದ್ರೆ ತೆನೆಗಳನ್ನ ಕಿತ್ತು ತಿನ್ನಬಹುದು. ಆದ್ರೆ ಪೈರನ್ನ ಕುಡುಗೋಲಿಂದ* ಕೊಯ್ಯಬಾರದು.+

24 ಒಬ್ಬ ಪುರುಷ ಮದುವೆಯಾದ ಮೇಲೆ ಅವನ ಹೆಂಡತಿ ಅಸಹ್ಯವಾಗಿ ನಡ್ಕೊಂಡಿದ್ದು ಗೊತ್ತಾಗಿ ಅವಳ ಜೊತೆ ಜೀವನ ಮಾಡೋಕೆ ಇಷ್ಟ ಇಲ್ಲದಿದ್ರೆ ಅವನು ವಿಚ್ಛೇದನ ಪತ್ರ ಬರೆದು+ ಕೊಟ್ಟು ಅವಳನ್ನ ಮನೆಯಿಂದ ಕಳಿಸಿಬಿಡಬೇಕು.+ 2 ಅವಳು ಅವನ ಮನೆ ಬಿಟ್ಟು ಬಂದ್ಮೇಲೆ ಇನ್ನೊಬ್ಬನನ್ನ ಮದುವೆ ಆಗಬಹುದು.+ 3 ಎರಡನೇ ಗಂಡಾನೂ ಅವಳನ್ನ ದ್ವೇಷಿಸಿ,* ವಿಚ್ಛೇದನ ಪತ್ರ ಬರೆದು ಕೊಟ್ಟು ಮನೆಯಿಂದ ಕಳಿಸಿಬಿಟ್ರೆ ಅಥವಾ ಅವನು ಸತ್ತುಹೋದ್ರೆ 4 ಅವಳನ್ನ ಈ ಮುಂಚೆ ಮನೆಯಿಂದ ಕಳಿಸಿಬಿಟ್ಟ ಅವಳ ಮೊದಲ್ನೇ ಗಂಡ ಅವಳನ್ನ ಮತ್ತೆ ಮದುವೆ ಆಗೋ ಹಾಗಿಲ್ಲ. ಯಾಕಂದ್ರೆ ಈಗಾಗ್ಲೇ ಅವಳು ಅಶುದ್ಧಳು. ಹಾಗೆ ಮದುವೆ ಆಗೋದು ಯೆಹೋವನಿಗೆ ಅಸಹ್ಯ. ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶದಲ್ಲಿ ನೀವು ಇಂಥ ಪಾಪ ಮಾಡಬಾರದು.

5 ಹೊಸದಾಗಿ ಮದುವೆಯಾದ ಪುರುಷ ಸೈನ್ಯಕ್ಕೆ ಸೇರಬಾರದು, ಅವನಿಗೆ ಬೇರೆ ಯಾವ ಕೆಲಸಾನೂ ಕೊಡಬಾರದು. ಒಂದು ವರ್ಷ ಮನೆಯಲ್ಲೇ ಇರೋಕೆ ಅವನನ್ನ ಬಿಡಬೇಕು. ಅವನು ಆ ವರ್ಷ ಮನೆಯಲ್ಲಿದ್ದು ತನ್ನ ಹೆಂಡತಿನ ಖುಷಿಪಡಿಸಬೇಕು.+

6 ಇನ್ನೊಬ್ಬನಿಗೆ ಸಾಲ ಕೊಡುವಾಗ ಯಾರೂ ಬೀಸೋ ಕಲ್ಲಾಗ್ಲಿ ಅದ್ರ ಮೇಲಿನ ಕಲ್ಲಾಗ್ಲಿ ಅಡ ಇಟ್ಕೊಬಾರದು.+ ಅದನ್ನ ಅಡ ಇಟ್ಕೊಂಡ್ರೆ ಅವನ ತಿನ್ನೋ ಊಟನೇ* ಕಿತ್ಕೊಂಡ ಹಾಗೆ.

7 ಒಬ್ಬ ತನ್ನ ಇಸ್ರಾಯೇಲ್ಯ ಸಹೋದರನನ್ನ ಅಪಹರಿಸಿ ಅವನಿಗೆ ಕಷ್ಟಕೊಟ್ಟು ಅವನನ್ನ ಮಾರಿದ್ದಾನೆ+ ಅಂತ ಗೊತ್ತಾದ್ರೆ ಅಪಹರಿಸಿದವನನ್ನ ಸಾಯಿಸಬೇಕು.+ ನಿಮ್ಮ ಮಧ್ಯದಿಂದ ಆ ಕೆಟ್ಟತನನ ತೆಗೆದುಹಾಕಬೇಕು.+

8 ಕುಷ್ಠರೋಗ* ಬಂದ್ರೆ ಲೇವಿಯರಾದ ಪುರೋಹಿತರು ನಿಮಗೆ ಏನೆಲ್ಲ ನಿರ್ದೇಶನ ಕೊಡ್ತಾರೋ ಅದನ್ನೆಲ್ಲ ಸರಿಯಾಗಿ ಪಾಲಿಸಬೇಕು.+ ನಾನು ಅವರಿಗೆ ಆಜ್ಞೆ ಕೊಟ್ಟ ಪ್ರಕಾರನೇ ನೀವೂ ಮಾಡಬೇಕು. 9 ನೀವು ಈಜಿಪ್ಟಿಂದ ಬರ್ತಿದ್ದಾಗ ದಾರಿಯಲ್ಲಿ ನಿಮ್ಮ ದೇವರಾದ ಯೆಹೋವ ಮಿರ್ಯಾಮಗೆ ಏನು ಮಾಡಿದ ಅಂತ ಮರಿಬೇಡಿ.+

10 ನೀವು ಒಬ್ಬನಿಗೆ ಸಾಲ ಕೊಟ್ರೆ+ ಅವನು ಅಡ ಇಡ್ತೀನಿ ಅಂತ ಹೇಳಿರೋ ವಸ್ತುನ ನೀವೇ ಅವನ ಮನೆ ಒಳಗೆ ಹೋಗಿ ತಗೊಬಾರದು. 11 ನೀವು ಮನೆ ಹೊರಗೆ ನಿಂತ್ಕೊಬೇಕು. ನಿಮ್ಮಿಂದ ಸಾಲ ತಗೊಂಡವನೇ ಆ ವಸ್ತು ತಂದು ಕೊಡಬೇಕು. 12 ಸಾಲ ತಗೊಂಡವನು ಬಡವನಾಗಿದ್ರೆ ಅವನು ಅಡ ಇಟ್ಟ ಕಂಬಳಿನ ನೀವು ಮಾರನೇ ದಿನದ ತನಕ ನಿಮ್ಮ ಹತ್ರ ಇಟ್ಕೊಬಾರದು.+ 13 ಅದನ್ನ ಅದೇ ದಿನ ಸೂರ್ಯ ಮುಳುಗಿದ ತಕ್ಷಣ ಅವನಿಗೆ ಕೊಟ್ಟುಬಿಡಬೇಕು. ಆಗ ಅವನು ಮಲಗೋವಾಗ ಅದನ್ನ ಹೊದ್ಕೊಂಡು+ ನಿಮ್ಮನ್ನ ಆಶೀರ್ವದಿಸ್ತಾನೆ. ಹೀಗೆ ಮಾಡಿದ್ರೆ ನಿಮ್ಮ ದೇವರಾದ ಯೆಹೋವನ ಮುಂದೆ ನೀವು ನೀತಿವಂತರಾಗಿ ಇರ್ತಿರ.

14 ಕಷ್ಟದಲ್ಲಿರೋ, ಬಡವನಾಗಿರೋ ಕೂಲಿ ಕೆಲಸ ಮಾಡೋನಿಗೆ ನೀವು ಮೋಸ ಮಾಡಬಾರದು. ಅವನು ನಿಮ್ಮ ಸಹೋದರ ಆಗಿದ್ರೂ, ನಿಮ್ಮ ಪಟ್ಟಣದಲ್ಲಿ ವಾಸಿಸೋ ವಿದೇಶಿ ಆಗಿದ್ರೂ ಹಾಗೆ ಮಾಡಬಾರದು.+ 15 ಕಷ್ಟದಲ್ಲಿರೋ ವ್ಯಕ್ತಿಗೆ ಆ ಕೂಲಿಯಿಂದಾನೇ ಜೀವನ ನಡೀಬೇಕು. ಹಾಗಾಗಿ ಅವನ ಕೂಲಿನ ಅದೇ ದಿನ ಸೂರ್ಯ ಮುಳುಗೋ ಮುಂಚೆ ಕೊಟ್ಟುಬಿಡಬೇಕು.+ ಅವನಿಗೆ ಕೂಲಿ ಕೊಡಲಿಲ್ಲಾಂದ್ರೆ ಅವನು ನಿಮ್ಮನ್ನ ಬೈತಾ ಯೆಹೋವನಿಗೆ ಪ್ರಾರ್ಥಿಸ್ತಾನೆ, ನೀವು ಆತನ ದೃಷ್ಟಿಯಲ್ಲಿ ಪಾಪಿಗಳಾಗ್ತೀರ.+

16 ಮಕ್ಕಳು ಮಾಡಿದ ಪಾಪಕ್ಕೆ ತಂದೆಗೆ ಮರಣಶಿಕ್ಷೆ ಆಗಬಾರದು. ತಂದೆ ಮಾಡಿದ ಪಾಪಕ್ಕೆ ಮಕ್ಕಳಿಗೆ ಮರಣಶಿಕ್ಷೆ ಆಗಬಾರದು.+ ಪಾಪ ಮಾಡಿದವ್ರಿಗೇ ಮರಣಶಿಕ್ಷೆ ಆಗಬೇಕು.+

17 ನ್ಯಾಯವಿಚಾರಣೆ ಮಾಡುವಾಗ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೆ, ಅನಾಥ ಮಕ್ಕಳಿಗೆ*+ ಅನ್ಯಾಯವಾಗಿ ತೀರ್ಪು ಕೊಡಬಾರದು. ವಿಧವೆಗೆ ಸಾಲ ಕೊಡುವಾಗ ಅವಳ ಬಟ್ಟೆ ಅಡ ಇಟ್ಕೊಬಾರದು.+ 18 ನೀವು ಈಜಿಪ್ಟಲ್ಲಿ ಗುಲಾಮರಾಗಿದ್ರಿ ಅನ್ನೋದನ್ನ ಮರಿಬೇಡಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದನು.+ ಅದಕ್ಕೇ ನಿಮಗೆ ಈ ಆಜ್ಞೆಗಳನ್ನ ಕೊಡ್ತಾ ಇದ್ದೀನಿ.

19 ನೀವು ಹೊಲದಲ್ಲಿ ಕೊಯ್ಲು ಮಾಡಿ ಒಂದು ತೆನೆ ಕಟ್ಟನ್ನ ಮರೆತು ಬಂದಿದ್ರೆ ಅದನ್ನ ತರೋಕೆ ಮತ್ತೆ ಹೊಲಕ್ಕೆ ಹೋಗಬಾರದು. ಅದನ್ನ ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ ಬಿಟ್ಟುಬಿಡಬೇಕು.+ ಹೀಗೆ ಮಾಡಿದ್ರೆ ನಿಮ್ಮ ದೇವರಾದ ಯೆಹೋವ ನೀವು ಮಾಡೋ ಎಲ್ಲ ಕೆಲಸನ ಆಶೀರ್ವದಿಸ್ತಾನೆ.+

20 ಆಲಿವ್‌ ಮರದ ಕೊಂಬೆಗಳನ್ನ ಹೊಡೆದು ಒಂದು ಸಲ ಕಾಯಿ ಉದುರಿಸಿದ ಮೇಲೆ ಮತ್ತೆ ಕೊಂಬೆಗಳನ್ನ ಹೊಡೆದು ಕಾಯಿ ಉದುರಿಸಬಾರದು. ಮರದಲ್ಲಿ ಉಳಿದ ಕಾಯಿಗಳನ್ನ ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ ಬಿಟ್ಟುಬಿಡಬೇಕು.+

21 ನಿಮ್ಮ ದ್ರಾಕ್ಷಿತೋಟದಲ್ಲಿ ಹಣ್ಣುಗಳನ್ನ ಒಂದುಸಲ ಕೂಡಿಸ್ಕೊಂಡು ಬಂದ ಮೇಲೆ ಮತ್ತೆ ಹೋಗಿ ಉಳಿದ ಹಣ್ಣುಗಳನ್ನ ಕೂಡಿಸ್ಕೊಬಾರದು. ಅವನ್ನ ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ ಬಿಟ್ಟುಬಿಡಬೇಕು. 22 ನೀವು ಈಜಿಪ್ಟ್‌ ದೇಶದಲ್ಲಿ ಗುಲಾಮರಾಗಿದ್ರಿ ಅನ್ನೋದನ್ನ ಮರಿಬೇಡಿ. ಅದಕ್ಕೇ ನಿಮಗೆ ಈ ಆಜ್ಞೆಗಳನ್ನ ಕೊಡ್ತಾ ಇದ್ದೀನಿ.

25 ಇಬ್ರ ಮಧ್ಯ ಜಗಳ ಆದ್ರೆ ನ್ಯಾಯಾಧೀಶರ ಹತ್ರ ಹೋಗಬೇಕು.+ ಅವರು ವಿಚಾರಣೆ ಮಾಡಿ ತಪ್ಪಿಲ್ಲದವನನ್ನ ನಿರಪರಾಧಿ ಅಂತ, ಕೆಟ್ಟವನನ್ನ ಅಪರಾಧಿ ಅಂತ ತೀರ್ಪು ಕೊಡಬೇಕು.+ 2 ಆ ಕೆಟ್ಟವನಿಗೆ ಏಟು ಕೊಡಬೇಕು ಅಂತ ತೀರ್ಮಾನ ಮಾಡಿದ್ರೆ+ ನ್ಯಾಯಾಧೀಶ ತನ್ನ ಕಣ್ಮುಂದೆನೇ ಅವನನ್ನ ಬೋರಲು ಮಲಗಿಸಿ ಹೊಡೆಸಬೇಕು. ಅಪರಾಧಕ್ಕೆ ತಕ್ಕ ಹಾಗೆ ಅವನಿಗೆ ಎಷ್ಟು ಏಟು ಕೊಡಬೇಕು ಅಂತ ತೀರ್ಮಾನ ಮಾಡಬೇಕು. 3 ಜಾಸ್ತಿ ಅಂದ್ರೆ 40 ಏಟು ಕೊಡಬಹುದು,+ ಅದಕ್ಕಿಂತ ಜಾಸ್ತಿ ಕೊಡಬಾರದು. ಜಾಸ್ತಿ ಏಟು ಕೊಡ್ತಾ ಇದ್ರೆ ಆ ನಿಮ್ಮ ಸಹೋದರನಿಗೆ ಅವಮಾನ ಆಗುತ್ತೆ.

4 ಹೋರಿ ಕಣ ತುಳಿವಾಗ ಧಾನ್ಯ ತಿನ್ನುತ್ತೆ ಅಂತ ಬಾಯಿ ಕಟ್ಟಬಾರದು.+

5 ಒಡಹುಟ್ಟಿದ ಅಣ್ಣತಮ್ಮಂದಿರು ಒಂದೇ ಜಾಗದಲ್ಲಿ ಇದ್ದು ಅವ್ರಲ್ಲಿ ಒಬ್ಬ ತೀರಿಹೋದ್ರೆ ಅವನಿಗೆ ಮಗ ಇಲ್ಲದಿದ್ರೆ ಅವನ ಹೆಂಡತಿ ಗಂಡನ ಕುಟುಂಬಕ್ಕೆ ಸೇರಿರದ ಯಾವ ಪುರುಷನನ್ನೂ ಮದುವೆ ಆಗಬಾರದು. ತೀರಿಹೋದ ಅವಳ ಗಂಡನ ಒಡಹುಟ್ಟಿದವನು ತನ್ನ ಕರ್ತವ್ಯ ಪೂರೈಸಬೇಕು. ಆ ವಿಧವೆನ ಮದುವೆ ಆಗಬೇಕು.+ 6 ಅವನಿಗೆ ಅವಳಿಂದ ಹುಟ್ಟೋ ಮೊದಲ ಮಗನನ್ನ ತೀರಿಹೋದ ಅವನ ಸಹೋದರನ ಮಗ ಅಂತ ಅನ್ಕೊಬೇಕು.+ ಆಗ ತೀರಿಹೋದವನ ಹೆಸ್ರು ಇಸ್ರಾಯೇಲ್ಯರ ಮಧ್ಯದಿಂದ ಅಳಿಸಿ ಹೋಗಲ್ಲ.+

7 ತೀರಿಹೋದವನ ಸಹೋದರನಿಗೆ ಆ ವಿಧವೆನ ಮದುವೆ ಆಗೋಕೆ ಇಷ್ಟ ಇಲ್ಲದಿದ್ರೆ ಅವಳು ಪಟ್ಟಣದ ಬಾಗಿಲ ಹತ್ರ ಇರೋ ಹಿರಿಯರ ಹತ್ರ ಹೋಗಿ ‘ನನ್ನ ಗಂಡನ ಸಹೋದರ ತನ್ನ ಕರ್ತವ್ಯ ಮಾಡೋಕೆ, ನನ್ನ ಮದುವೆ ಆಗೋಕೆ ಒಪ್ತಿಲ್ಲ. ತನ್ನ ಒಡಹುಟ್ಟಿದವನ ಹೆಸ್ರನ್ನ ಇಸ್ರಾಯೇಲ್ಯರ ಮಧ್ಯ ಉಳಿಸೋಕೆ ಅವನಿಗಿಷ್ಟ ಇಲ್ಲ’ ಅಂತ ಹೇಳಬೇಕು. 8 ಆಗ ಆ ಪಟ್ಟಣದ ಹಿರಿಯರು ಅವನನ್ನ ಕರೆದು ಮಾತಾಡಬೇಕು. ಆಗ್ಲೂ ಅವನು ಒಪ್ಪದೆ ‘ನನಗೆ ಅವಳನ್ನ ಮದುವೆ ಆಗೋಕೆ ಇಷ್ಟ ಇಲ್ಲ’ ಅಂದ್ರೆ 9 ಅವಳು ಆ ಹಿರಿಯರ ಮುಂದೆನೇ ಅವನ ಕಾಲಿಂದ ಚಪ್ಪಲಿ ತೆಗೆದು,+ ಅವನ ಮುಖದ ಮೇಲೆ ಉಗುಳಿ ‘ಸಹೋದರನ ವಂಶ ಉಳಿಸೋಕೆ ಇಷ್ಟ ಇಲ್ಲದವನಿಗೆ ಹೀಗೇ ಆಗಬೇಕು’ ಅಂತ ಹೇಳಬೇಕು. 10 ಮುಂದೆ ಅವನ ಕುಟುಂಬದ ಹೆಸ್ರು, ‘ಚಪ್ಪಲಿ ಬಿಚ್ಚಿಸ್ಕೊಂಡವನ ಮನೆಯವರು’ ಅಂತಾಗುತ್ತೆ.

11 ಇಬ್ರು ಪುರುಷರು ಹೊಡೆದಾಡ್ತಾ ಇರುವಾಗ ಒಬ್ಬನ ಹೆಂಡತಿ ಮಧ್ಯ ಬಂದು ತನ್ನ ಗಂಡನನ್ನ ಹೊಡೆತದಿಂದ ತಪ್ಪಿಸೋಕೆ ಕೈಚಾಚಿ ಇನ್ನೊಬ್ಬನ ಗುಪ್ತಾಂಗ ಹಿಡಿದ್ರೆ 12 ಅವಳ ಕೈಯನ್ನ ಕತ್ತರಿಸಿ ಹಾಕಬೇಕು. ನೀವು ಅವಳಿಗೆ ಕನಿಕರ ತೋರಿಸಬಾರದು.

13 ತೂಕದಲ್ಲಿ ಹೆಚ್ಚುಕಮ್ಮಿ ಇರೋ ಎರಡು ತರದ ತೂಕದ ಕಲ್ಲನ್ನ ನಿಮ್ಮ ಚೀಲದಲ್ಲಿ ಇಟ್ಕೊಬಾರದು.+ 14 ಅಳತೆಯಲ್ಲಿ ಹೆಚ್ಚುಕಮ್ಮಿ ಇರೋ ಎರಡು ತರದ ಅಳತೆ ಪಾತ್ರೆನ* ನಿಮ್ಮ ಮನೇಲಿ ಇಟ್ಕೊಬಾರದು.+ 15 ಸರಿಯಾದ ತೂಕದ ಕಲ್ಲನ್ನ, ಅಳತೆ ಪಾತ್ರೆನ ಇಟ್ಕೊಬೇಕು. ಆಗ ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಜಾಸ್ತಿ ವರ್ಷ ಜೀವಿಸ್ತೀರ.+ 16 ಈ ವಿಷ್ಯದಲ್ಲಿ ಅನ್ಯಾಯ ಮಾಡೋ ಪ್ರತಿಯೊಬ್ಬನೂ ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.+

17 ನೀವು ಈಜಿಪ್ಟನ್ನ ಬಿಟ್ಟು ಬರ್ತಿದ್ದಾಗ ದಾರೀಲಿ ಅಮಾಲೇಕ್ಯರು ನಿಮಗೆ ಏನು ಮಾಡಿದ್ರು ಅಂತ ನೆನಪಿಸ್ಕೊಳ್ಳಿ.+ 18 ಪ್ರಯಾಣ ಮಾಡಿ ಬಳಲಿ ಬೆಂಡಾಗಿ ನಿಮ್ಮ ಹಿಂದೆ ನಿಧಾನವಾಗಿ ಬರ್ತಾ ಇದ್ದವ್ರ ಮೇಲೆ ಆ ಅಮಾಲೇಕ್ಯರು ದಾಳಿ ಮಾಡಿದ್ರು. ಅವ್ರಿಗೆ ದೇವರ ಮೇಲೆ ಸ್ವಲ್ಪನೂ ಭಯ ಇರಲಿಲ್ಲ. 19 ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶಕ್ಕೆ ಹೋದ್ಮೇಲೆ, ನಿಮ್ಮ ಸುತ್ತ ಇರೋ ಶತ್ರುಗಳಿಂದ ಯೆಹೋವ ನಿಮ್ಮನ್ನ ರಕ್ಷಿಸಿ ನೆಮ್ಮದಿಯಿಂದ ಬದುಕೋ ತರ ಮಾಡಿದ ಮೇಲೆ+ ನೀವು ಅಮಾಲೇಕ್ಯರನ್ನ ನಾಶ ಮಾಡಬೇಕು. ಭೂಮಿ ಮೇಲೆ ಹೆಸ್ರೇ ಇಲ್ಲದ ಹಾಗೆ ಅವ್ರನ್ನ ನಾಶ ಮಾಡೋಕೆ+ ಮರಿಬಾರದು.

26 ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಂಡು ಅದ್ರಲ್ಲಿ ವಾಸಿಸೋಕೆ ಶುರುಮಾಡಿದ ಮೇಲೆ 2 ನಿಮ್ಮ ದೇವರಾದ ಯೆಹೋವ ಕೊಟ್ಟ ಆ ದೇಶದ ಜಮೀನಲ್ಲಿ ಬೆಳೆ ಬೆಳೆಸಿದಾಗ ಹೀಗೆ ಮಾಡಬೇಕು: ನೀವು ಎಲ್ಲ ಬೆಳೆಗಳ ಮೊದಲ ಬೆಳೆಯಲ್ಲಿ ಸ್ವಲ್ಪನ ಬುಟ್ಟಿಯಲ್ಲಿ ಹಾಕೊಂಡು ಅದನ್ನ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಜಾಗಕ್ಕೆ ತಗೊಂಡು ಹೋಗಬೇಕು.+ 3 ಆಗ ಅಲ್ಲಿ ಯಾರು ಪುರೋಹಿತನಾಗಿ ಇರ್ತಾನೋ ಅವನ ಹತ್ರ ಹೋಗಿ ‘ನಮ್ಮ ದೇವರಾದ ಯೆಹೋವ ತಾನು ಕೊಟ್ಟ ಮಾತನ್ನ ನೆರವೇರಿಸಿದ್ದಾನೆ ಅಂತ ನಾನು ಇವತ್ತು ಒಪ್ಕೊಳ್ತೀನಿ. ಯೆಹೋವ ಕೊಡ್ತೀನಿ ಅಂತ ನಮ್ಮ ಪೂರ್ವಜರಿಗೆ ಮಾತು ಕೊಟ್ಟ ದೇಶದಲ್ಲಿ ನಾನು ಇವತ್ತು ಇದ್ದೀನಿ’ + ಅಂತ ಹೇಳಬೇಕು.

4 ಪುರೋಹಿತ ನಿಮ್ಮ ಕೈಯಿಂದ ಆ ಬುಟ್ಟಿ ತಗೊಂಡು ನಿಮ್ಮ ದೇವರಾದ ಯೆಹೋವನ ಯಜ್ಞವೇದಿ ಮುಂದೆ ಇಡಬೇಕು. 5 ಆಮೇಲೆ ನೀವು ನಿಮ್ಮ ದೇವರಾದ ಯೆಹೋವನ ಮುಂದೆ ‘ಅರಾಮ್ಯನಾದ+ ನನ್ನ ಪೂರ್ವಜ ಅಲೆಮಾರಿಯಾಗಿದ್ದ.* ಆಮೇಲೆ ಈಜಿಪ್ಟಿಗೆ+ ಹೋಗಿ ಅಲ್ಲಿ ವಿದೇಶಿಯಾಗಿ ವಾಸಿಸಿದ. ಆಗ ಅವನ ಕುಟುಂಬದಲ್ಲಿ ಸ್ವಲ್ಪಾನೇ ಜನ ಇದ್ರು.+ ಅಲ್ಲಿ ಅವನ ವಂಶದ ಸಂಖ್ಯೆ ತುಂಬ ಜಾಸ್ತಿ ಆಗಿ ಅವರು ಬಲಿಷ್ಠವಾದ ಒಂದು ದೊಡ್ಡ ಜನಾಂಗ ಆದ್ರು.+ 6 ಆಗ ಈಜಿಪ್ಟಿನವರು ನಮಗೆ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಅವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿ, ನಮ್ಮನ್ನ ಗುಲಾಮರಾಗಿ ಮಾಡ್ಕೊಂಡು ಕಷ್ಟ ಕೊಟ್ಟು ದುಡಿಸ್ಕೊಂಡ್ರು.+ 7 ಹಾಗಾಗಿ ನಮ್ಮ ಪೂರ್ವಜರ ದೇವರಾಗಿರೋ ಯೆಹೋವನಾದ ನಿನಗೆ ನಾವು ಪ್ರಾರ್ಥಿಸೋಕೆ ಶುರು ಮಾಡಿದ್ವಿ. ಯೆಹೋವನಾದ ನೀನು ನಮ್ಮ ಕೂಗನ್ನ ಕೇಳಿದೆ. ಅಷ್ಟೇ ಅಲ್ಲ ನಾವೆಷ್ಟು ಕಷ್ಟದಲ್ಲಿದ್ವಿ, ಎಂಥ ನೋವು ಅನುಭವಿಸ್ತಿದ್ವಿ. ನಮ್ಮ ಮೇಲೆ ಈಜಿಪ್ಟಿನವರು ಯಾವ ತರ ದಬ್ಬಾಳಿಕೆ ಮಾಡ್ತಿದ್ರು ಅಂತ ನೋಡ್ದೆ.+ 8 ಕೊನೆಗೆ ಯೆಹೋವನಾದ ನೀನು ಈಜಿಪ್ಟಲ್ಲಿ ನಿನ್ನ ಮಹಾ ಶಕ್ತಿ ತೋರಿಸಿ,*+ ಅವರಿಗೆ ಭಯಹುಟ್ಟಿಸಿ, ಅದ್ಭುತಗಳನ್ನೂ ಮಾಡಿ ನಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದೆ.+ 9 ಆಮೇಲೆ ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದು ಹಾಲೂ ಜೇನೂ ಹರಿಯೋ ಈ ದೇಶನ ನಮಗೆ ಕೊಟ್ಟೆ.+ 10 ಯೆಹೋವನಾದ ನೀನು ನನಗೆ ಕೊಟ್ಟ ಜಮೀನಿನ ಮೊದಲ ಬೆಳೆನ ನಾನೀಗ ತಂದಿದ್ದೀನಿ’ + ಅಂತ ಹೇಳಬೇಕು.

ಆಮೇಲೆ ನೀವು ಆ ಬುಟ್ಟಿನ ನಿಮ್ಮ ದೇವರಾದ ಯೆಹೋವನ ಮುಂದೆ ಇಟ್ಟು ಯೆಹೋವನ ಮುಂದೆ ಅಡ್ಡಬೀಳಬೇಕು. 11 ನಿಮ್ಮ ದೇವರಾದ ಯೆಹೋವ ನಿಮಗೂ ನಿಮ್ಮ ಕುಟುಂಬದವರಿಗೂ ಇಷ್ಟೆಲ್ಲಾ ಒಳ್ಳೇ ವಿಷ್ಯಗಳನ್ನ ಮಾಡಿದ್ದಿಕ್ಕೆ ನೀವು ಸಂತೋಷ ಸಂಭ್ರಮದಿಂದ ಇರಬೇಕು. ನೀವು ನಿಮ್ಮ ಮಧ್ಯ ಇರೋ ಲೇವಿಯರ ಜೊತೆ, ವಿದೇಶಿಯರ ಜೊತೆ ಖುಷಿಪಡಬೇಕು.+

12 ನೀವು ಮೂರನೇ ವರ್ಷ ಅಂದ್ರೆ ಹತ್ತನೇ ಒಂದು ಭಾಗ+ ಕೊಡಬೇಕಾದ ವರ್ಷದಲ್ಲಿ ನಿಮ್ಮ ಎಲ್ಲ ಬೆಳೆಯ ಹತ್ತನೇ ಒಂದು ಭಾಗನ ತೆಗೆದು ಇಡಬೇಕು. ಆಮೇಲೆ ಅದನ್ನ ನಿಮ್ಮ ಪಟ್ಟಣದಲ್ಲಿರೋ ಲೇವಿಯರಿಗೆ, ವಿದೇಶಿಯರಿಗೆ, ಅನಾಥ ಮಕ್ಕಳಿಗೆ,* ವಿಧವೆಯರಿಗೆ ಕೊಡಬೇಕು. ಅವರು ಅದನ್ನ ತೃಪ್ತಿ ಆಗೋಷ್ಟು ತಿನ್ಲಿ.+ 13 ಆಮೇಲೆ ನೀವು ನಿಮ್ಮ ದೇವರಾದ ಯೆಹೋವನಿಗೆ ‘ದೇವರೇ, ನೀನು ನನಗೆ ಕೊಟ್ಟ ಆಜ್ಞೆ ಪ್ರಕಾರ ಪವಿತ್ರ ಭಾಗನ ಪೂರ್ತಿಯಾಗಿ ತಗೊಂಡು ಹೋಗಿ ಲೇವಿಯರಿಗೆ, ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ+ ಕೊಟ್ಟಿದ್ದೀನಿ. ನಾನು ನಿನ್ನ ಆಜ್ಞೆಗಳನ್ನ ಮೀರಿ ನಡೀಲಿಲ್ಲ, ಬಿಟ್ಟುಬಿಡಲಿಲ್ಲ. 14 ನಾನು ಗೋಳಾಡುವಾಗ ಆ ಪವಿತ್ರ ಭಾಗದಿಂದ ತಿನ್ನಲಿಲ್ಲ. ಅಶುದ್ಧನಾಗಿದ್ದಾಗ ಮುಟ್ಟಲಿಲ್ಲ ಅಥವಾ ಸತ್ತವರಿಗಾಗಿ ಕೊಡಲಿಲ್ಲ. ನನ್ನ ದೇವರಾದ ಯೆಹೋವನೇ, ನಿನ್ನ ಮಾತನ್ನ ನಾನು ಕೇಳ್ದೆ, ನೀನು ಕೊಟ್ಟ ಎಲ್ಲಾ ಆಜ್ಞೆಗಳನ್ನ ಪಾಲಿಸ್ದೆ. 15 ಈಗ ನೀನಿರೋ ಪವಿತ್ರ ಸ್ವರ್ಗದಿಂದ ಕೆಳಗೆ ನೋಡಿ ನಿನ್ನ ಜನ್ರಾದ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡು. ನೀನು ನಮ್ಮ ಪೂರ್ವಜರಿಗೆ ಮಾತು ಕೊಟ್ಟ+ ಹಾಗೆ ನಮಗೆ ಕೊಟ್ಟಿರೋ ಈ ಹಾಲೂ ಜೇನೂ ಹರಿಯೋ ದೇಶಕ್ಕೂ+ ಆಶೀರ್ವಾದ ಮಾಡು’ + ಅಂತ ಹೇಳಬೇಕು.

16 ಈ ಎಲ್ಲ ನಿಯಮಗಳನ್ನ ತೀರ್ಪುಗಳನ್ನ ನೀವು ಪಾಲಿಸಬೇಕು ಅಂತ ನಿಮ್ಮ ದೇವರಾದ ಯೆಹೋವ ಇವತ್ತು ನಿಮಗೆ ಆಜ್ಞೆ ಕೊಟ್ಟಿದ್ದಾನೆ. ನೀವು ನಿಮ್ಮ ಪೂರ್ಣ ಹೃದಯದಿಂದ+ ಪೂರ್ಣ ಪ್ರಾಣದಿಂದ* ಅದನ್ನೆಲ್ಲ ಮನಸ್ಸಲ್ಲಿಟ್ಟು ಅದ್ರ ಪ್ರಕಾರ ನಡೀಬೇಕು. 17 ಇವತ್ತು ಯೆಹೋವ ನಿಮಗೆ, ಆತನು ನಿಮ್ಮ ದೇವರಾಗಿದ್ದಾನೆ ಅಂತ ಭರವಸೆ ಕೊಟ್ಟಿದ್ದಾನೆ. ನೀವು ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರಿಲಿ ನಡೆದು, ಆತನ ಮಾತನ್ನ ಕೇಳಬೇಕು, ಆತನ ನಿಯಮಗಳನ್ನ+ ಆಜ್ಞೆಗಳನ್ನ+ ತೀರ್ಪುಗಳನ್ನ+ ಕೇಳಿ ಅದ್ರ ಪ್ರಕಾರ ನಡೀಬೇಕು ಅಂತ ನಿಮಗೆ ಹೇಳಿದ್ದಾನೆ. 18 ಯೆಹೋವ ನಿಮಗೆ ಮಾತು ಕೊಟ್ಟ ಹಾಗೆ, ನೀವು ಆತನ ಜನರಾಗ್ತೀರ, ಆತನ ವಿಶೇಷ ಸೊತ್ತಾಗ್ತೀರ,+ ಆತನ ಎಲ್ಲ ಆಜ್ಞೆಗಳನ್ನ ಪಾಲಿಸ್ತೀರ ಅಂತ ಇವತ್ತು ಆತನಿಗೆ ಹೇಳಿದ್ದೀರ. 19 ನಿಮ್ಮ ದೇವರಾದ ಯೆಹೋವನಿಗೆ ಪವಿತ್ರ ಜನರಾಗಿ ಇರಬೇಕು.+ ಆಗ ಆತನು ಮಾತುಕೊಟ್ಟ ಹಾಗೇ ನಿಮ್ಮನ್ನ ತಾನು ಮಾಡಿದ ಬೇರೆ ಎಲ್ಲ ಜನ್ರಿಗಿಂತ ಶ್ರೇಷ್ಠವಾಗಿಟ್ಟು ನಿಮಗೆ ಹೊಗಳಿಕೆ, ಕೀರ್ತಿ, ಗೌರವ ಸಿಗೋ ತರ ಮಾಡ್ತಾನೆ.”+

27 ಆಮೇಲೆ ಮೋಶೆ ಮತ್ತು ಇಸ್ರಾಯೇಲ್ಯರ ಹಿರಿಯರು ಜನ್ರ ಮುಂದೆ ನಿಂತ್ರು. ಮೋಶೆ ಜನ್ರಿಗೆ “ನಾನು ಇವತ್ತು ಕೊಡೋ ಎಲ್ಲಾ ಆಜ್ಞೆಗಳನ್ನ ನೀವು ಪಾಲಿಸಬೇಕು. 2 ನೀವು ಯೋರ್ದನ್‌ ನದಿ ದಾಟಿ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋದ ತಕ್ಷಣ ದೊಡ್ಡ ದೊಡ್ಡ ಕಲ್ಲುಗಳನ್ನ ನಿಲ್ಲಿಸಿ ಸುಣ್ಣ ಹಚ್ಚಬೇಕು.*+ 3 ನೀವು ಯೋರ್ದನ್‌ ನದಿ ದಾಟಿದಾಗ ಆ ಕಲ್ಲುಗಳ ಮೇಲೆ ಈ ನಿಯಮ ಪುಸ್ತಕದಲ್ಲಿ ಇರೋ ಎಲ್ಲಾ ನಿಯಮಗಳನ್ನ ಬರಿಬೇಕು. ಹಾಗೆ ಮಾಡಿದ್ರೆ ಮಾತ್ರ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಅಂದ್ರೆ ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಕೊಡ್ತೀನಿ ಅಂತ ಮಾತುಕೊಟ್ಟ ಹಾಲೂ ಜೇನೂ ಹರಿಯೋ ದೇಶಕ್ಕೆ ಹೋಗ್ತೀರ.+ 4 ಯೋರ್ದನ್‌ ನದಿ ದಾಟಿ ಹೋದ್ಮೇಲೆ ನಾನು ಇವತ್ತು ನಿಮಗೆ ಹೇಳಿದ ಹಾಗೇ ದೊಡ್ಡ ದೊಡ್ಡ ಕಲ್ಲುಗಳನ್ನ ಏಬಾಲ್‌ ಬೆಟ್ಟದ+ ಮೇಲೆ ನಿಲ್ಲಿಸಿ ಸುಣ್ಣ ಹಚ್ಚಬೇಕು. 5 ಅಲ್ಲಿ ನಿಮ್ಮ ದೇವರಾದ ಯೆಹೋವನಿಗಾಗಿ ಕಲ್ಲುಗಳಿಂದ ಒಂದು ಯಜ್ಞವೇದಿ ಕಟ್ಟಬೇಕು. ಆ ಕಲ್ಲುಗಳನ್ನ ಕಬ್ಬಿಣದ ಸಾಧನಗಳಿಂದ ಕೆತ್ತಿರಬಾರದು.+ 6 ಉಳಿ ತಾಗದ ಇಡೀ ಕಲ್ಲುಗಳಿಂದ ನಿಮ್ಮ ದೇವರಾದ ಯೆಹೋವನಿಗಾಗಿ ಆ ಯಜ್ಞವೇದಿ ಕಟ್ಟಬೇಕು. ಅದ್ರ ಮೇಲೆ ನಿಮ್ಮ ದೇವರಾದ ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬೇಕು. 7 ಸಮಾಧಾನ ಬಲಿಗಳನ್ನ+ ಅರ್ಪಿಸಿ ಅಲ್ಲೇ ತಿನ್ನಬೇಕು.+ ನಿಮ್ಮ ದೇವರಾದ ಯೆಹೋವನ ಮುಂದೆ ಸಂತೋಷವಾಗಿ ಇರಬೇಕು.+ 8 ನಿಯಮ ಪುಸ್ತಕದಲ್ಲಿ ಇರೋ ಎಲ್ಲ ಮಾತುಗಳನ್ನ ಆ ಕಲ್ಲುಗಳ ಮೇಲೆ ಸ್ಪಷ್ಟವಾಗಿ ಬರಿಬೇಕು”+ ಅಂದ.

9 ಆಮೇಲೆ ಎಲ್ಲ ಇಸ್ರಾಯೇಲ್ಯರಿಗೆ ಮೋಶೆ ಮತ್ತೆ ಲೇವಿಯರಾದ ಪುರೋಹಿತರು “ಇಸ್ರಾಯೇಲ್ಯರೇ, ಮೌನವಾಗಿದ್ದು ಹೇಳೋದಕ್ಕೆ ಗಮನ ಕೊಡಿ. ಇವತ್ತು ನೀವು ನಿಮ್ಮ ದೇವರಾದ ಯೆಹೋವನ ಜನರಾಗಿದ್ದೀರ.+ 10 ನಿಮ್ಮ ದೇವರಾದ ಯೆಹೋವ ಹೇಳೋ ಮಾತನ್ನ ಕೇಳಿ. ಇವತ್ತು ನಿಮಗೆ ಹೇಳೋ ಆತನ ಆಜ್ಞೆಗಳನ್ನ ನಿಯಮಗಳನ್ನ ಪಾಲಿಸಬೇಕು”+ ಅಂದ್ರು.

11 ಆ ದಿನ ಮೋಶೆ ಜನ್ರಿಗೆ ಹೇಳಿದ್ದು ಏನಂದ್ರೆ 12 “ಯೋರ್ದನ್‌ ನದಿ ದಾಟಿದ ಮೇಲೆ ಸಿಮೆಯೋನ್‌, ಲೇವಿ, ಯೆಹೂದ, ಇಸ್ಸಾಕಾರ್‌, ಯೋಸೇಫ್‌, ಬೆನ್ಯಾಮೀನ್‌ ಕುಲದವರು ಗೆರಿಜ್ಜೀಮ್‌ ಬೆಟ್ಟದ+ ಹತ್ರ ನಿಂತು ಜನ್ರಿಗೆ ಆಶೀರ್ವಾದ ಮಾಡಬೇಕು. 13 ರೂಬೇನ್‌, ಗಾದ್‌, ಅಶೇರ್‌, ಜೆಬುಲೂನ್‌, ದಾನ್‌, ನಫ್ತಾಲಿ ಕುಲದವರು ಏಬಾಲ್‌ ಬೆಟ್ಟದ+ ಹತ್ರ ನಿಂತು ಶಾಪ ಹಾಕಬೇಕು. 14 ಲೇವಿಯರು ಇಸ್ರಾಯೇಲ್ಯರಿಗೆ ಗಟ್ಟಿಯಾಗಿ ಹೀಗೆ ಹೇಳಬೇಕು:+

15 ‘ಯೆಹೋವ ಅಸಹ್ಯಪಡೋ+ ವಸ್ತುಗಳನ್ನ ಅಂದ್ರೆ ಕರಕುಶಲಗಾರರ* ಕೈಕೆಲಸ ಆಗಿರೋ ಕೆತ್ತಿದ ಮೂರ್ತಿಗಳನ್ನ,+ ಅಚ್ಚಲ್ಲಿ ಲೋಹ ಹೊಯ್ದು ಮೂರ್ತಿಗಳನ್ನ+ ಮಾಡೋನಿಗೆ ಶಾಪ ತಟ್ಲಿ. ಅವುಗಳನ್ನ ಗುಟ್ಟಾಗಿ ಇಡುವವನಿಗೂ ಶಾಪ ತಟ್ಲಿ.’ (ಅದಕ್ಕೆ ಜನ್ರೆಲ್ಲ ‘ಆಮೆನ್‌’* ಅನ್ನಬೇಕು.)

16 ‘ಅಪ್ಪಅಮ್ಮನನ್ನ ಕೀಳಾಗಿ ನೋಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

17 ‘ನೆರೆಯವನ ಜಮೀನಿನ ಗಡಿ ಸರಿಸುವವನಿಗೆ* ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

18 ‘ಕುರುಡನನ್ನ ದಾರಿ ತಪ್ಪಿಸುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

19 ‘ವಿದೇಶಿಯರಿಗೆ, ಅನಾಥರಿಗೆ* ಅಥವಾ ವಿಧವೆಯರಿಗೆ+ ಅನ್ಯಾಯವಾಗಿ ತೀರ್ಪು ಕೊಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

20 ‘ತಂದೆಯ ಹೆಂಡತಿಯನ್ನ ಕೂಡಿ ತನ್ನ ತಂದೆಗೆ ಅವಮಾನ ಮಾಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

21 ‘ಪ್ರಾಣಿ ಜೊತೆ ಸಂಭೋಗ ಮಾಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

22 ‘ಅಕ್ಕತಂಗಿಯನ್ನ ಕೂಡುವವನಿಗೆ, ತಂದೆಯ ಮಗಳನ್ನ ಅಥವಾ ತಾಯಿಯ ಮಗಳನ್ನ ಕೂಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

23 ‘ಹೆಂಡತಿಯ ತಾಯಿಯನ್ನ ಕೂಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

24 ‘ಹೊಂಚುಹಾಕಿ ಒಬ್ಬನನ್ನ ಕೊಲ್ಲುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

25 ‘ನಿರಪರಾಧಿಯನ್ನ ಕೊಲ್ಲೋಕೆ ಲಂಚ ತಗೊಳ್ಳುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

26 ‘ಈ ನಿಯಮ ಪುಸ್ತಕದಲ್ಲಿ ಇರೋ ನಿಯಮಗಳನ್ನ ಪಾಲಿಸದೇ ಇರುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

28 “ನಾನು ಇವತ್ತು ನಿಮಗೆ ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ ತಪ್ಪದೆ ಪಾಲಿಸಬೇಕು. ಹೀಗೆ ಮಾಡಿದ್ರೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಭೂಮಿಯಲ್ಲಿರೋ ಬೇರೆಲ್ಲ ಜನ್ರಿಗಿಂತ ಉನ್ನತ ಸ್ಥಾನಕ್ಕೆ ಏರಿಸ್ತಾನೆ.+ 2 ನಿಮ್ಮ ದೇವರಾದ ಯೆಹೋವನ ಮಾತನ್ನ ಯಾವಾಗ್ಲೂ ಕೇಳಿದ್ರೆ ಆತನು ನಿಮ್ಮ ಮೇಲೆ ತುಂಬ ಆಶೀರ್ವಾದಗಳ ಸುರಿಮಳೆ ಸುರಿಸ್ತಾನೆ.+ ಹೇಗಂದ್ರೆ,

3 ನೀವು ಪಟ್ಟಣದಲ್ಲಿ ಇದ್ರೂ ಹಳ್ಳಿಯಲ್ಲಿ ಇದ್ರೂ ನಿಮ್ಮನ್ನ ಆಶೀರ್ವದಿಸ್ತಾನೆ.+

4 ತುಂಬ ಮಕ್ಕಳಾಗೋ ಹಾಗೆ,+ ಜಮೀನಲ್ಲಿ ಸಮೃದ್ಧ ಬೆಳೆ ಆಗೋ ಹಾಗೆ, ಕುರಿ-ಹಸುಗಳಿಗೆ ತುಂಬ ಮರಿಗಳಾಗೋ ಹಾಗೆ ಆಶೀರ್ವದಿಸ್ತಾನೆ.+

5 ಆತನ ಆಶೀರ್ವಾದದಿಂದ ನಿಮ್ಮ ಬುಟ್ಟಿ,+ ಹಿಟ್ಟು ನಾದೋ ಪಾತ್ರೆ+ ಯಾವಾಗ್ಲೂ ತುಂಬಿರುತ್ತೆ.

6 ನೀವೆಲ್ಲೇ ಹೋದ್ರೂ ಏನೇ ಕೆಲಸ ಮಾಡಿದ್ರೂ ಅದನ್ನೆಲ್ಲ ಆಶೀರ್ವದಿಸ್ತಾನೆ.

7 ನಿಮ್ಮ ವಿರುದ್ಧ ಬರೋ ಶತ್ರುಗಳು ನಿಮ್ಮಿಂದ ಸೋತುಹೋಗೋ ಹಾಗೆ ಯೆಹೋವ ಮಾಡ್ತಾನೆ.+ ಅವರು ನಿಮ್ಮ ಮೇಲೆ ದಾಳಿ ಮಾಡೋಕೆ ಒಂದು ದಾರಿಯಿಂದ ಬರ್ತಾರೆ. ಆದ್ರೆ ಸೋತು ದಿಕ್ಕುಪಾಲಾಗಿ ಏಳು ದಾರಿಯಿಂದ ಓಡಿಹೋಗ್ತಾರೆ.+ 8 ನಿಮ್ಮ ಗೋಡೌನ್‌ಗಳು ತುಂಬಿರಬೇಕು,+ ನೀವು ಮಾಡೋ ಪ್ರತಿಯೊಂದು ಕೆಲಸದ ಮೇಲೆ ಆಶೀರ್ವಾದ ಇರಬೇಕು ಅಂತ ಯೆಹೋವ ಆಜ್ಞೆ ಕೊಡ್ತಾನೆ. ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ನಿಮ್ಮನ್ನ ಆತನು ಖಂಡಿತ ಆಶೀರ್ವದಿಸ್ತಾನೆ. 9 ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ಯಾವಾಗ್ಲೂ ಪಾಲಿಸ್ತಾ ಇದ್ರೆ, ಎಲ್ಲ ವಿಷ್ಯಗಳಲ್ಲಿ ಆತನು ಹೇಳಿದ ಹಾಗೆ ಮಾಡಿದ್ರೆ ಯೆಹೋವ ಮಾತು ಕೊಟ್ಟ ಹಾಗೇ+ ನಿಮ್ಮನ್ನ ತನ್ನ ಪವಿತ್ರ ಜನ್ರಾಗಿ ಮಾಡ್ತಾನೆ.+ 10 ನೀವು ಯೆಹೋವನ ಹೆಸ್ರಿರೋ ಜನ್ರು* ಅಂತ ಭೂಮಿಯ ಎಲ್ಲ ಜನ್ರಿಗೂ ಗೊತ್ತಾಗುತ್ತೆ,+ ಅವರು ನಿಮಗೆ ಭಯಪಡ್ತಾರೆ.+

11 ಯೆಹೋವ ನಿಮಗೆ ಕೊಡ್ತೀನಿ ಅಂತ ನಿಮ್ಮ ಪೂರ್ವಜರಿಗೆ ಮಾತು ಕೊಟ್ಟ ದೇಶದಲ್ಲಿ+ ನಿಮ್ಮ ವಂಶ ಬೆಳೆದು ತುಂಬ ಜನ ಆಗೋ ತರ, ತುಂಬ ಪ್ರಾಣಿಗಳು ಇರೋ ತರ, ಜಮೀನಲ್ಲಿ ಬೆಳೆ ಜಾಸ್ತಿ ಆಗೋ ತರ+ ಯೆಹೋವ ಮಾಡ್ತಾನೆ. 12 ತುಂಬಿದ ಗೋಡೌನ್‌ ತರ ಇರೋ ಆಕಾಶ ತೆರೆದು ಯೆಹೋವ ನಿಮ್ಮ ದೇಶದಲ್ಲಿ ಕಾಲಕಾಲಕ್ಕೆ ಮಳೆ ಸುರಿಸ್ತಾನೆ.+ ನೀವು ಮಾಡೋ ಎಲ್ಲ ಕೆಲಸಗಳನ್ನ ಆಶೀರ್ವದಿಸ್ತಾನೆ. ನೀವು ಬೇರೆ ಜನ್ರಿಗೆ ಸಾಲ ಕೊಡ್ತೀರ. ಅವ್ರಿಂದ ಸಾಲ ತಗೊಳ್ಳೋ ಸ್ಥಿತಿಗೆ ಬರಲ್ಲ.+ 13 ನಿಮ್ಮ ದೇವರಾದ ಯೆಹೋವ ಕೊಟ್ಟ ಆಜ್ಞೆಗಳನ್ನ ಪಾಲಿಸ್ತಾ ಇದ್ರೆ ನೀವು ಬೇರೆಯವ್ರಿಗಿಂತ ಮೇಲೆ ಇರ್ತಿರ.+ ಬೇರೆಯವರು ನಿಮ್ಮ ಮೇಲೆ ಅಧಿಕಾರ ಚಲಾಯಿಸೋಕೆ ಯೆಹೋವ ಬಿಡಲ್ಲ. ನೀವು ಎಲ್ರಿಗಿಂತ ಶ್ರೇಷ್ಠರಾಗಿ ಇರ್ತಿರ, ಕೀಳಾಗಿ ಇರಲ್ಲ. 14 ನಾನು ಇವತ್ತು ನಿಮಗೆ ಕೊಡ್ತಿರೋ ಆಜ್ಞೆಗಳಲ್ಲಿ ಒಂದನ್ನೂ ಮೀರಿ ನಡೀಬಾರದು.+ ಬೇರೆ ದೇವರುಗಳನ್ನ ಆರಾಧನೆ ಮಾಡಬಾರದು, ಅವುಗಳಿಗೆ ಸೇವೆ ಮಾಡ್ಲೂಬಾರದು.+

15 ನಾನು ಇವತ್ತು ನಿಮಗೆ ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ, ನಿಯಮಗಳನ್ನ ನೀವು ಪಾಲಿಸದೆ ಹೋದ್ರೆ, ದೇವರ ಮಾತನ್ನ ಕೇಳದೇ ಹೋದ್ರೆ ನಾನು ನಿಮಗೆ ಹೇಳೋ ಎಲ್ಲ ಶಾಪಗಳು ನಿಮಗೆ ಬರುತ್ತೆ. ಅದ್ರಿಂದ ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ.+

16 ನೀವು ಪಟ್ಟಣದಲ್ಲಿದ್ರೂ ಹಳ್ಳಿಯಲ್ಲಿದ್ರೂ ಶಾಪ ತಟ್ಟುತ್ತೆ.+

17 ನಿಮ್ಮ ಬುಟ್ಟಿ,+ ಹಿಟ್ಟು ನಾದೋ ಪಾತ್ರೆಗೆ ಶಾಪ ತಟ್ಟುತ್ತೆ.+

18 ನಿಮ್ಮ ಮಕ್ಕಳು,+ ಬೆಳೆ, ಕರುಗಳು, ಕುರಿಮರಿಗಳಿಗೆ ಶಾಪ ತಟ್ಟುತ್ತೆ.+

19 ನೀವೆಲ್ಲೇ ಹೋದ್ರೂ ಏನೇ ಕೆಲಸ ಮಾಡಿದ್ರೂ ಶಾಪ ತಟ್ಟುತ್ತೆ.

20 ಕೆಟ್ಟ ಕೆಲಸ ಮಾಡಿದ್ರೆ ದೇವರನ್ನ* ಬಿಟ್ಟುಬಿಟ್ರೆ ನೀವು ಮಾಡೋ ಪ್ರತಿಯೊಂದು ಕೆಲಸವನ್ನ ಯೆಹೋವ ಶಪಿಸ್ತಾನೆ. ಗಲಿಬಿಲಿ ಮಾಡಿ ಶಿಕ್ಷೆ ಕೊಡ್ತಾನೆ. ನೀವು ಬೇಗ ಪೂರ್ತಿ ನಾಶ ಆಗೋ ತನಕ ಹಾಗೇ ಮಾಡ್ತಾನೆ.+ 21 ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ನಿಮಗೆ ಕಾಯಿಲೆಗಳು ಬರೋ ಹಾಗೆ, ನೀವು ಅಳಿದು ಹೋಗೋ ತನಕ ಅವು ನಿಮ್ಮನ್ನ ಬಿಟ್ಟುಹೋಗದ ಹಾಗೆ ಯೆಹೋವ ಮಾಡ್ತಾನೆ.+ 22 ಕ್ಷಯರೋಗ, ತುಂಬ ಜ್ವರ,+ ಜ್ವರದಿಂದ ಮೈ ಬಿಸಿ, ಉರಿಯೂತ ಬರೋ ಹಾಗೆ, ಶತ್ರುಗಳ ದಾಳಿಗೆ+ ಗುರಿ ಆಗೋ ಹಾಗೆ ಯೆಹೋವ ಮಾಡ್ತಾನೆ. ಬೆಳೆಗಳಿಗೆ ಬಿಸಿಗಾಳಿ ಬೀಸೋ ಹಾಗೆ, ರೋಗ ಬಂದು ಬೆಳೆ ನಾಶ ಆಗೋ ತರ ಮಾಡ್ತಾನೆ.+ ನೀವು ಸರ್ವನಾಶ ಆಗೋ ತನಕ ಇದ್ಯಾವುದೂ ನಿಮ್ಮನ್ನ ಬಿಟ್ಟು ಹೋಗಲ್ಲ. 23 ನಿಮ್ಮ ಮೇಲಿರೋ ಆಕಾಶ ತಾಮ್ರದ ಹಾಗೆ* ಕೆಳಗಿರೋ ಭೂಮಿ ಕಬ್ಬಿಣದ ಹಾಗೆ* ಆಗುತ್ತೆ.+ 24 ಯೆಹೋವ ನಿಮ್ಮ ದೇಶದಲ್ಲಿ ಆಕಾಶದಿಂದ ಮಳೆ ಬದ್ಲು ಧೂಳು, ಮರಳು ಸುರಿಸ್ತಾನೆ. ನೀವು ನಾಶ ಆಗೋ ತನಕ ಹಾಗೆ ಮಾಡ್ತಾನೆ. 25 ಶತ್ರುಗಳ ಮುಂದೆ ಸೋಲೋ ತರ ಯೆಹೋವ ಮಾಡ್ತಾನೆ.+ ನೀವು ಅವ್ರನ್ನ ದಾಳಿ ಮಾಡೋಕೆ ಒಂದು ದಾರಿಯಲ್ಲಿ ಹೋಗ್ತೀರ. ಆದ್ರೆ ಸೋತು ದಿಕ್ಕುಪಾಲಾಗಿ ಏಳು ದಾರಿಯಲ್ಲಿ ಓಡಿಹೋಗ್ತೀರ. ನಿಮ್ಮ ಪಾಡನ್ನ ನೋಡಿ ಭೂಮಿಯಲ್ಲಿರೋ ಎಲ್ಲ ರಾಜ್ಯಗಳಿಗೆ ಗಾಬರಿ ಆಗುತ್ತೆ.+ 26 ನಿಮ್ಮ ಶವಗಳನ್ನ ಆಕಾಶದ ಪ್ರತಿಯೊಂದು ಪಕ್ಷಿ, ಭೂಮಿಯಲ್ಲಿರೋ ಪ್ರತಿಯೊಂದು ಪ್ರಾಣಿ ತಿಂದುಬಿಡುತ್ತೆ. ಆ ಪ್ರಾಣಿಪಕ್ಷಿಗಳನ್ನ ಹೆದರಿಸಿ ಓಡಿಸೋಕೆ ಯಾರೂ ಇರಲ್ಲ.+

27 ಈಜಿಪ್ಟ್‌ ಜನ್ರಿಗೆ ಬರೋ ಹುಣ್ಣು ನಿಮಗೂ ಬರೋ ಹಾಗೆ ಯೆಹೋವ ಮಾಡ್ತಾನೆ. ಜೊತೆಗೆ ವಾಸಿಯಾಗದ ಮೂಲವ್ಯಾಧಿ, ಇಸಬು, ಚರ್ಮ ದದ್ದುಗಳು ಬರೋ ಹಾಗೆ ಮಾಡ್ತಾನೆ. 28 ನಿಮಗೆ ಹುಚ್ಚು ಹಿಡಿಯೋ ಹಾಗೆ, ಕಣ್ಣು ಕಾಣದ ಹಾಗೆ,+ ಗಲಿಬಿಲಿ ಆಗೋ ಹಾಗೆ ಯೆಹೋವ ಮಾಡ್ತಾನೆ. 29 ನೀವು ನಡುಹಗಲಲ್ಲಿ ಕುರುಡರ ತರ ತಡಕಾಡ್ತೀರ.+ ಏನೇ ಕೆಲಸ ಮಾಡಿದ್ರು ಯಶಸ್ಸು ಸಿಗಲ್ಲ. ಬೇರೆಯವರು ಯಾವಾಗ್ಲೂ ನಿಮಗೆ ಮೋಸ ಮಾಡ್ತಾರೆ, ನಿಮ್ಮಿಂದ ಕಿತ್ಕೊಳ್ತಾರೆ. ನಿಮ್ಮನ್ನ ಕಾಪಾಡೋಕೆ ಒಬ್ರೂ ಇರಲ್ಲ.+ 30 ನಿಮಗೆ ನಿಶ್ಚಯವಾದ ಹೆಣ್ಣಿನ ಮೇಲೆ ಇನ್ನೊಬ್ಬ ಅತ್ಯಾಚಾರ ಮಾಡ್ತಾನೆ. ನೀವು ಮನೆ ಕಟ್ತೀರ, ಆದ್ರೆ ವಾಸ ಮಾಡಲ್ಲ.+ ದ್ರಾಕ್ಷಿ ತೋಟ ಮಾಡ್ತೀರ, ಆದ್ರೆ ಅದ್ರ ಹಣ್ಣು ಸಿಗಲ್ಲ.+ 31 ನಿಮ್ಮ ಹೋರಿಯನ್ನ ನಿಮ್ಮ ಕಣ್ಮುಂದೆನೇ ಕಡಿತಾರೆ. ಆದ್ರೆ ಅದ್ರ ಮಾಂಸದಲ್ಲಿ ಸ್ವಲ್ಪನೂ ನಿಮಗೆ ಸಿಗಲ್ಲ. ನಿಮ್ಮ ಕತ್ತೆನ ನಿಮ್ಮ ಕಣ್ಮುಂದೆನೇ ಕದಿತಾರೆ. ಅದು ನಿಮಗೆ ಸಿಗೋದೆ ಇಲ್ಲ. ನಿಮ್ಮ ಕುರಿಗಳು ನಿಮ್ಮ ಶತ್ರುಗಳ ವಶ ಆಗುತ್ತೆ. ಆದ್ರೆ ಅವುಗಳನ್ನ ಬಿಡಿಸೋಕೆ ಯಾರೂ ಬರಲ್ಲ. 32 ನಿಮ್ಮ ಗಂಡು ಹೆಣ್ಣುಮಕ್ಕಳನ್ನ ನಿಮ್ಮ ಮುಂದೆನೇ ಬೇರೆಯವರು ತಗೊಂಡು ಹೋಗ್ತಾರೆ.+ ನಿಮ್ಮ ಮಕ್ಕಳನ್ನ ನೋಡಬೇಕು ಅಂತ ತುಂಬ ಆಸೆ ಆಗುತ್ತೆ. ಆದ್ರೆ ನಿಮ್ಮಿಂದ ಏನೂ ಮಾಡಕ್ಕಾಗಲ್ಲ. 33 ನಿಮ್ಮ ಬೆಳೆ, ಎಲ್ಲ ಆಹಾರ ನಿಮಗೆ ಗೊತ್ತಿಲ್ಲದ ಜನ್ರ ಪಾಲಾಗುತ್ತೆ.+ ಬೇರೆಯವರು ಯಾವಾಗ್ಲೂ ನಿಮಗೆ ಮೋಸ ಮಾಡ್ತಾರೆ, ದಬ್ಬಾಳಿಕೆ ಮಾಡ್ತಾರೆ. 34 ನಿಮ್ಮ ಮುಂದೆ ನಡೆಯೋ ವಿಷ್ಯಗಳನ್ನೆಲ್ಲ ನೋಡಿ ನಿಮಗೆ ಹುಚ್ಚು ಹಿಡಿಯುತ್ತೆ.

35 ನಿಮ್ಮ ಮಂಡಿ ಮೇಲೆ, ಕಾಲು ಮೇಲೆ ಗುಣವಾಗದ ತುಂಬ ನೋವು ಇರೋ ಹುಣ್ಣುಗಳು ಬರೋ ತರ ಯೆಹೋವ ಮಾಡ್ತಾನೆ. ಆ ಹುಣ್ಣುಗಳು ನಿಮ್ಮ ಪಾದದಿಂದ ನೆತ್ತಿ ತನಕ ಹರಡುತ್ತೆ. 36 ಯೆಹೋವ ನಿಮ್ಮನ್ನ, ನಿಮ್ಮ ಮೇಲೆ ನೀವು ನೇಮಿಸ್ಕೊಂಡ ರಾಜನನ್ನ ನಿಮಗೆ ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ದೇಶಕ್ಕೆ ಓಡಿಸಿಬಿಡ್ತಾನೆ.+ ಅಲ್ಲಿ ಮರಕಲ್ಲುಗಳಿಂದ ಮಾಡಿದ ದೇವರುಗಳ ಸೇವೆ ಮಾಡ್ತೀರ.+ 37 ಯೆಹೋವ ನಿಮ್ಮನ್ನ ಎಲ್ಲಿಗೆ ಓಡಿಸಿಬಿಟ್ನೋ ಆ ದೇಶದ ಜನ್ರಿಗೆ ನಿಮ್ಮ ಪಾಡು ನೋಡಿ ಗಾಬರಿ ಆಗುತ್ತೆ, ನಿಮ್ಮನ್ನ ನೋಡಿ ಗೇಲಿ* ಮಾಡ್ತಾರೆ, ಗೇಲಿ ಮಾಡಿ ನಗ್ತಾರೆ.+

38 ಹೊಲದಲ್ಲಿ ತುಂಬ ಬೀಜ ಬಿತ್ತುತ್ತೀರ, ಆದ್ರೆ ಮಿಡತೆಗಳು ಬೆಳೆ ತಿಂದುಬಿಡುತ್ತೆ, ನಿಮಗೆ ಸ್ವಲ್ಪಾನೇ ಬೆಳೆ ಸಿಗುತ್ತೆ.+ 39 ದ್ರಾಕ್ಷಿತೋಟಗಳನ್ನ ಮಾಡ್ತೀರ ಆದ್ರೆ ಹುಳಗಳು ದ್ರಾಕ್ಷಿ ಬೆಳೆ ಹಾಳು ಮಾಡುತ್ತೆ. ಆಗ ನಿಮಗೆ ದ್ರಾಕ್ಷಿಹಣ್ಣುಗಳು ಸಿಗಲ್ಲ, ದ್ರಾಕ್ಷಾಮದ್ಯ ಮಾಡೋಕ್ಕೂ ಆಗಲ್ಲ.+ 40 ನಿಮ್ಮ ಪ್ರದೇಶದಲ್ಲೆಲ್ಲ ಆಲಿವ್‌ ಮರಗಳು ಇರುತ್ತೆ. ಆದ್ರೆ ಕಾಯಿಗಳು ಉದುರಿ ಹೋಗುತ್ತೆ. ಹಾಗಾಗಿ ಮೈಗೆ ಹಚ್ಕೊಳ್ಳೋಕೆ ಎಣ್ಣೆ ಇರಲ್ಲ. 41 ನಿಮಗೆ ಗಂಡು ಹೆಣ್ಣು ಮಕ್ಕಳು ಹುಟ್ತಾರೆ. ಆದ್ರೆ ಅವರು ನಿಮ್ಮ ಹತ್ರ ಇರಲ್ಲ, ಕೈದಿಯಾಗಿ ಹೋಗ್ತಾರೆ.+ 42 ಕ್ರಿಮಿಕೀಟಗಳು ಗುಂಪುಗುಂಪಾಗಿ ಬಂದು ನಿಮ್ಮ ಮರಗಳ, ಬೆಳೆಗಳ ಮೇಲೆ ದಾಳಿ ಮಾಡಿ ಹಾಳು ಮಾಡುತ್ತೆ. 43 ನಿಮ್ಮ ಮಧ್ಯ ವಾಸಿಸೋ ವಿದೇಶಿಯರು ನಿಮಗಿಂತ ಬಲಿಷ್ಠರಾಗ್ತಾ ಹೋಗ್ತಾರೆ. ಆದ್ರೆ ನೀವು ಬಲಹೀನರಾಗ್ತಾ ಹೋಗ್ತೀರ. 44 ನೀವು ಅವ್ರಿಗೆ ಸಾಲ ಕೊಡೋ ಸ್ಥಿತಿಯಲ್ಲಿ ಇರಲ್ಲ. ಅವ್ರೇ ನಿಮಗೆ ಸಾಲ ಕೊಡಬೇಕಾಗುತ್ತೆ.+ ಅವರು ನಿಮಗಿಂತ ಮೇಲೆ ಇರ್ತಾರೆ, ನೀವು ಅವ್ರ ಅಧಿಕಾರದ ಕೆಳಗೆ ಇರ್ತಿರ.+

45 ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ಆಜ್ಞೆಗಳನ್ನ ನಿಯಮಗಳನ್ನ ಪಾಲಿಸದೆ ಇದ್ರೆ,+ ಆತನ ಮಾತು ಕೇಳದೆ ಇದ್ರೆ ಎಲ್ಲ ಶಾಪಗಳು+ ತಟ್ಟಿ ನೀವು ಪೂರ್ತಿ ನಾಶ ಆಗ್ತೀರ. ಅವುಗಳಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.+ 46 ಆ ಶಾಪಗಳು ನಿಮ್ಮ ಮೇಲೆ, ನಿಮ್ಮ ವಂಶದವರ ಮೇಲೆ ಬರುತ್ತೆ. ಅವು ಎಲ್ಲರಿಗೂ ಗುರುತಾಗಿ, ಎಚ್ಚರಿಕೆಯಾಗಿ ಇರುತ್ತೆ.+ 47 ಯಾಕಂದ್ರೆ ಎಲ್ಲನೂ ಸಮೃದ್ಧಿಯಾಗಿ ಇರುವಾಗ ನೀವು ಸಂತೋಷದಿಂದ, ಖುಷಿಯಿಂದ ನಿಮ್ಮ ದೇವರಾದ ಯೆಹೋವನ ಸೇವೆ ಮಾಡಲಿಲ್ಲ.+ 48 ಯೆಹೋವ ನಿಮ್ಮ ವಿರುದ್ಧ ಶತ್ರುಗಳನ್ನ ಕಳಿಸ್ತಾನೆ. ನೀವು ಏನೂ ತಿನ್ನದೆ,+ ಬಾಯಾರಿ, ಹರಕಲು ಬಟ್ಟೆ ಹಾಕೊಂಡು ಅವ್ರ ಸೇವೆ ಮಾಡ್ತೀರ.+ ನಿಮ್ಮ ಹತ್ರ ಏನೂ ಇರಲ್ಲ. ನಿಮ್ಮನ್ನ ಪೂರ್ತಿ ನಾಶ ಮಾಡೋ ತನಕ ಆ ಶತ್ರುಗಳು ನಿಮ್ಮನ್ನ ಗುಲಾಮರಾಗಿ ಮಾಡ್ಕೊಂಡು ತುಂಬ ದುಡಿಸ್ಕೊಳ್ತಾರೆ.*

49 ಭೂಮಿಯ ಯಾವುದೋ ಮೂಲೆಯಲ್ಲಿರೋ ಒಂದು ಜನಾಂಗ ನಿಮ್ಮ ವಿರುದ್ಧ ಬರೋ ಹಾಗೆ ಯೆಹೋವ ಮಾಡ್ತಾನೆ.+ ಹದ್ದು ತನ್ನ ಬೇಟೆ ಮೇಲೆ ತಟ್ಟನೆ ಬೀಳೋ ತರ+ ಆ ಜನಾಂಗ ನಿಮ್ಮ ಮೇಲೆ ದಿಢೀರಂತ ದಾಳಿ ಮಾಡುತ್ತೆ. ಅವರ ಭಾಷೆ ನಿಮಗೆ ಅರ್ಥ ಆಗಲ್ಲ.+ 50 ಕ್ರೂರಿಗಳಾದ ಆ ಜನ್ರು ವಯಸ್ಸಾದವರ ಮೇಲೆ, ಮಕ್ಕಳ ಮೇಲೆ ದಯೆ ತೋರಿಸಲ್ಲ.+ 51 ನೀವು ಪೂರ್ತಿ ನಾಶ ಆಗೋ ತನಕ ನಿಮ್ಮ ಪ್ರಾಣಿಗಳನ್ನ, ಮರಿಗಳನ್ನ, ಬೆಳೆಯನ್ನ ತಿಂತಾರೆ. ಧಾನ್ಯ ಆಗ್ಲಿ, ಹೊಸ ದ್ರಾಕ್ಷಾಮದ್ಯ ಆಗ್ಲಿ, ಎಣ್ಣೆ ಆಗ್ಲಿ, ಕರುಗಳನ್ನಾಗ್ಲಿ, ಕುರಿಮರಿಗಳನ್ನಾಗ್ಲಿ ಸ್ವಲ್ಪನೂ ಉಳಿಸಲ್ಲ.+ 52 ನಿಮ್ಮ ದೇಶದ ಎಲ್ಲ ಪಟ್ಟಣಗಳಿಗೆ ಮುತ್ತಿಗೆ ಹಾಕ್ತಾರೆ. ಆಗ ನಿಮ್ಮ ಪಟ್ಟಣಗಳಲ್ಲೇ ನೀವು ಕೈದಿಗಳು ಆಗ್ತೀರ. ನಿಮ್ಮನ್ನ ಕಾಪಾಡುತ್ತೆ ಅಂತ ನೀವು ಕಟ್ಟಿದ ಎತ್ರವಾದ ಗಟ್ಟಿಯಾದ ಗೋಡೆಗಳನ್ನ ಕೆಡವಿ ಹಾಕೋ ತನಕ ಅವರು ಮುತ್ತಿಗೆ ಹಾಕ್ತಾರೆ. ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ದೇಶದ ಎಲ್ಲ ಪಟ್ಟಣಗಳಿಗೆ ಮುತ್ತಿಗೆ ಹಾಕ್ತಾರೆ.+ 53 ಹಾಗೆ ಮುತ್ತಿಗೆ ಹಾಕಿ ಶತ್ರುಗಳು ನಿಮಗೆ ತುಂಬ ಕಷ್ಟಕೊಡ್ತಾರೆ. ಎಷ್ಟು ಕಷ್ಟ ಕೊಡ್ತಾರಂದ್ರೆ, ನಿಮ್ಮ ಸ್ವಂತ ಮಕ್ಕಳನ್ನೇ ಅಂದ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಗಂಡು ಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನಬೇಕಾಗುತ್ತೆ.+

54 ನಿಮ್ಮಲ್ಲಿ ತುಂಬ ಮೃದುಸ್ವಭಾವದ, ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದ ವ್ಯಕ್ತಿನೂ ತನ್ನ ಅಣ್ಣತಮ್ಮನಿಗೆ, ತುಂಬ ಪ್ರೀತಿಸೋ ತನ್ನ ಹೆಂಡತಿಗೆ, ಉಳಿದಿರೋ ತನ್ನ ಮಕ್ಕಳಿಗೆ ಒಂಚೂರೂ ಕನಿಕರ ತೋರಿಸಲ್ಲ. 55 ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆಹಾಕಿ ಮಾಡೋ ನಾಶ ಹೇಗಿರುತ್ತೆ ಅಂದ್ರೆ, ಅವನಿಗೆ ತಿನ್ನೋಕೆ ಏನೂ ಇರಲ್ಲ. ಹಾಗಾಗಿ ತನ್ನ ಮಕ್ಕಳ ಮಾಂಸವನ್ನೇ ತಿಂತಾನೆ. ಬೇರೆಯವರಿಗೆ ಸ್ವಲ್ಪನೂ ಕೊಡಲ್ಲ.+ 56 ಕಾಲು ನೆಲಕ್ಕೆ ಸೋಕದ ಹಾಗೆ ಬೆಳೆದ ಮೃದುವಾದ ಸ್ತ್ರೀ+ ಕೂಡ ತನ್ನ ಪ್ರಾಣಪ್ರಿಯನಾದ ಗಂಡನಿಗೆ, ತನ್ನ ಗಂಡುಹೆಣ್ಣು ಮಕ್ಕಳಿಗೆ ಕನಿಕರ ತೋರಿಸಲ್ಲ. 57 ಅವಳು ತಾನು ಆಗಷ್ಟೇ ಹೆತ್ತ ಕೂಸಿಗೂ ಕನಿಕರ ತೋರಿಸದೆ ಆ ಕೂಸನ್ನೂ ಹೆರಿಗೆ ಸಮಯದಲ್ಲಿ ಗರ್ಭದಿಂದ ಹೊರಗೆ ಬಂದ ಎಲ್ಲಾನೂ ಕದ್ದುಮುಚ್ಚಿ ತಿಂತಾಳೆ. ಶತ್ರುಗಳು ನಿಮ್ಮ ಪಟ್ಟಣಗಳಿಗೆ ಹಾಕೋ ಮುತ್ತಿಗೆಯಿಂದ, ಅವರು ನಿಮಗೆ ಕೊಡೋ ಕಷ್ಟಗಳಿಂದ ನಿಮಗೆ ಸಾಕಾಗಿ ಹೋಗುತ್ತೆ.

58 ಈ ನಿಯಮ ಪುಸ್ತಕದಲ್ಲಿ ಬರೆದಿರೋ ಎಲ್ಲ ನಿಯಮಗಳನ್ನ ನೀವು ಪಾಲಿಸದೇ ಇದ್ರೆ,+ ನಿಮ್ಮ ದೇವರಾದ ಯೆಹೋವನ+ ಮಹಿಮೆಯಿಂದ ತುಂಬಿದ, ವಿಸ್ಮಯಕಾರಿ ಹೆಸ್ರಿಗೆ ಭಯಪಡದಿದ್ರೆ+ 59 ಯೆಹೋವ ನಿಮಗೆ, ನಿಮ್ಮ ವಂಶದವರಿಗೆ ದೊಡ್ಡ ದೊಡ್ಡ ಕಾಯಿಲೆಗಳು ತುಂಬ ದಿನ ಕಾಡೋ ತರ ಮಾಡ್ತಾನೆ.+ ಜೀವನಪೂರ್ತಿ ವಾಸಿಯಾಗದ, ಸಹಿಸಕ್ಕಾಗದ ಕಾಯಿಲೆಗಳು ಬರೋ ಹಾಗೆ ಮಾಡ್ತಾನೆ. 60 ನೀವು ಈಜಿಪ್ಟಲ್ಲಿ ಇದ್ದಾಗ ಯಾವ ಕಾಯಿಲೆಗಳು ನಿಮಗೆ ಬರಬಾರದು ಅಂದ್ಕೊಂಡ್ರೋ ಆ ಕಾಯಿಲೆಗಳೇ ನಿಮಗೆ ಬರೋ ಹಾಗೆ ಮಾಡ್ತಾನೆ. ಆ ಕಾಯಿಲೆಗಳು ನಿಮ್ಮನ್ನ ಬಿಟ್ಟು ಹೋಗಲ್ಲ. 61 ಈ ನಿಯಮ ಪುಸ್ತಕದಲ್ಲಿ ಹೇಳಿರೋ ಬೇರೆಲ್ಲ ಕಾಯಿಲೆಗಳು ಬರೋ ಹಾಗೆ ಯೆಹೋವ ಮಾಡ್ತಾನೆ. ನೀವು ಪೂರ್ತಿ ನಾಶ ಆಗೋ ತನಕ ಆ ಕಾಯಿಲೆಗಳು ನಿಮಗೆ ಬರ್ತಾ ಇರುತ್ತೆ. 62 ನಿಮ್ಮ ಸಂಖ್ಯೆ ಆಕಾಶದ ನಕ್ಷತ್ರಗಳಷ್ಟು ಜಾಸ್ತಿ ಇದ್ರೂ+ ಕೊನೆಗೆ ಸ್ವಲ್ಪ ಜನ ಮಾತ್ರ ಉಳಿತೀರ.+ ನಿಮ್ಮ ದೇವರಾದ ಯೆಹೋವನ ಮಾತು ಕೇಳದೆ ಹೋದ್ರೆ ಹೀಗೆಲ್ಲ ಆಗುತ್ತೆ.

63 ಈಗ ಯೆಹೋವ ನಿಮ್ಮ ಸಂಖ್ಯೆಯನ್ನ ಖುಷಿಯಿಂದ ಜಾಸ್ತಿ ಮಾಡಿದ ಹಾಗೇ ಆಗ ಯೆಹೋವ ಖುಷಿಯಿಂದಾನೇ ನಿಮ್ಮನ್ನ ಪೂರ್ತಿ ನಾಶ ಮಾಡ್ತಾನೆ. ನೀವು ವಶ ಮಾಡ್ಕೊಳ್ಳೋ ದೇಶದಿಂದ ನಿಮ್ಮನ್ನ ಕಿತ್ತುಹಾಕ್ತಾನೆ.

64 ಯೆಹೋವ ನಿಮ್ಮನ್ನ ಭೂಮಿಯ ಒಂದು ಕಡೆಯಿಂದ ಇನ್ನೊಂದು ಕಡೆ ತನಕ ಎಲ್ಲ ಜನ್ರ ಮಧ್ಯ ಚದರಿಸಿಬಿಡ್ತಾನೆ.+ ಅಲ್ಲಿ ನಿಮಗೆ, ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ಅಂದ್ರೆ ಮರಕಲ್ಲುಗಳಿಂದ ಮಾಡಿದ ದೇವರುಗಳ ಸೇವೆ ಮಾಡಬೇಕಾಗುತ್ತೆ.+ 65 ಆ ಜನ್ರ ಮಧ್ಯ ಇರುವಾಗ ನಿಮಗೆ ನೆಮ್ಮದಿ ಇರಲ್ಲ,+ ವಾಸ ಮಾಡೋಕೆ ಜಾಗನೂ ಇರಲ್ಲ. ನಿಮ್ಮ ಹೃದಯದಲ್ಲಿ ಭಯ ಮನೆಮಾಡೋ ಹಾಗೆ,+ ದೃಷ್ಟಿ ಮಂದ ಆಗೋ ಹಾಗೆ, ಬೇಜಾರಲ್ಲಿ ಕೈಚೆಲ್ಲಿ ಕೂರೋ ಹಾಗೆ ಯೆಹೋವ ಮಾಡ್ತಾನೆ.+ 66 ನಿಮ್ಮ ಜೀವ ಗಂಡಾಂತರದಲ್ಲಿ ಇರುತ್ತೆ. ಹಗಲೂರಾತ್ರಿ ಭಯದಲ್ಲೇ ಜೀವಿಸ್ತೀರ. ನೀವು ಬದುಕಿ ಉಳಿತೀರಾ ಇಲ್ವಾ ಅಂತ ನಿಮಗೇ ಗೊತ್ತಿರಲ್ಲ. 67 ನಿಮ್ಮ ಹೃದಯದಲ್ಲಿ ಎಷ್ಟೊಂದು ಭಯ, ಗಾಬರಿ ತುಂಬಿರುತ್ತೆ ಅಂದ್ರೆ, ನಿಮ್ಮ ಕಣ್ಮುಂದೆ ಎಂಥೆಂಥ ವಿಷ್ಯ ನಡಿಯುತ್ತೆ ಅಂದ್ರೆ ಬೆಳಗಾದ್ರೆ ‘ಯಾವಾಗ ಸಂಜೆ ಆಗುತ್ತೋ’ ಅಂತೀರ. ಸಂಜೆ ಆದ್ರೆ ‘ಯಾವಾಗ ಬೆಳಗಾಗುತ್ತೋ’ ಅಂತೀರ. 68 ನೀವು ಯಾವ ದೇಶವನ್ನ ಇನ್ಯಾವತ್ತೂ ನೋಡಲ್ಲ ಅಂತ ನಾನು ಹೇಳಿದ್ನೋ ಆ ಈಜಿಪ್ಟಿಗೆ ಯೆಹೋವ ನಿಮ್ಮನ್ನ ಹಡಗುಗಳಲ್ಲಿ ಕರ್ಕೊಂಡು ಹೋಗ್ತಾನೆ. ಅಲ್ಲಿ ನಿಮ್ಮನ್ನ ಶತ್ರುಗಳಿಗೆ ದಾಸದಾಸಿಯರಾಗಿ ಮಾರಿಕೊಳ್ಳಬೇಕಾಗುತ್ತೆ. ಆದ್ರೆ ಯಾರೂ ನಿಮ್ಮನ್ನ ಖರೀದಿಸಲ್ಲ.”

29 ದೇವರು ಇಸ್ರಾಯೇಲ್ಯರ ಜೊತೆ ಹೋರೇಬಲ್ಲಿ ಒಂದು ಒಪ್ಪಂದ ಮಾಡ್ಕೊಂಡಿದ್ದನು. ಮೋವಾಬ್‌ ದೇಶದಲ್ಲಿದ್ದಾಗ ಅವ್ರ ಜೊತೆ ಇನ್ನೊಂದು ಒಪ್ಪಂದ ಮಾಡ್ಕೊಳ್ಳಬೇಕು ಅಂತ ಯೆಹೋವ ಮೋಶೆಗೆ ಹೇಳಿದನು. ಆ ಒಪ್ಪಂದದ ಮಾತುಗಳು ಹೀಗಿತ್ತು.+

2 ಮೋಶೆ ಇಸ್ರಾಯೇಲ್‌ ಜನ್ರನ್ನೆಲ್ಲ ಕರೆದು ಹೀಗಂದ: “ಯೆಹೋವ ಈಜಿಪ್ಟ್‌ ದೇಶದಲ್ಲಿ ನಿಮ್ಮ ಕಣ್ಮುಂದೆನೇ ಫರೋಹನಿಗೆ, ಅವನ ಎಲ್ಲ ಸೇವಕರಿಗೆ, ಇಡೀ ದೇಶಕ್ಕೆ ಏನೆಲ್ಲ ಮಾಡಿದನು ಅಂತ ನೀವೇ ನೋಡಿದ್ರಿ.+ 3 ಅವ್ರಿಗೆ ಕಠಿಣ ಶಿಕ್ಷೆ* ಕೊಟ್ಟದ್ದನ್ನ, ಅಲ್ಲಿ ಆತನು ಮಾಡಿದ ದೊಡ್ಡ ಸೂಚಕಕೆಲಸ, ಅದ್ಭುತಗಳನ್ನ ನೋಡಿದ್ರಿ.+ 4 ಆದ್ರೆ ಕಣ್ಣಿಂದ ನೋಡಿದ್ದನ್ನಾಗ್ಲಿ, ಕಿವಿಯಿಂದ ಕೇಳಿದ್ದನ್ನಾಗ್ಲಿ ಅರ್ಥ ಮಾಡ್ಕೊಳ್ಳೋ ಶಕ್ತಿಯನ್ನ* ಯೆಹೋವ ನಿಮಗೆ ಇವತ್ತಿನ ತನಕ ಕೊಟ್ಟಿಲ್ಲ.+ 5 ಆತನು ನಿಮಗೆ ಹೀಗಂದ: ‘ನಾನು 40 ವರ್ಷ ನಿಮ್ಮನ್ನ ಕಾಡಲ್ಲಿ ನಡಿಸ್ಕೊಂಡು ಬರ್ತಾ+ ಇದ್ದಾಗ ನಿಮ್ಮ ಮೈಮೇಲಿದ್ದ ಬಟ್ಟೆ ಹಳೆದಾಗಿ ಹರಿದುಹೋಗಲಿಲ್ಲ, ನಿಮ್ಮ ಚಪ್ಪಲಿ ಸವೆದು ಹೋಗಲಿಲ್ಲ.+ 6 ನಿಮಗೆ ತಿನ್ನೋಕೆ ರೊಟ್ಟಿ ಇಲ್ಲದಿದ್ರೂ ಕುಡಿಯೋಕೆ ದ್ರಾಕ್ಷಾಮದ್ಯ, ಬೇರೆ ಮದ್ಯ ಇಲ್ಲದಿದ್ರೂ ನಿಮ್ಮನ್ನ ನೋಡ್ಕೊಂಡೆ. ನಾನು ನಿಮ್ಮ ದೇವರಾದ ಯೆಹೋವ ಅಂತ ನೀವು ತಿಳ್ಕೊಳ್ಳಬೇಕು ಅಂತ ನಾನು ನಿಮ್ಮನ್ನ ಚೆನ್ನಾಗಿ ನೋಡ್ಕೊಂಡೆ.’ 7 ನೀವು ಪ್ರಯಾಣ ಮಾಡ್ತಾ ಮಾಡ್ತಾ ಈ ಜಾಗಕ್ಕೆ ಬಂದು ತಲುಪಿದಾಗ ಹೆಷ್ಬೋನಿನ+ ರಾಜ ಸೀಹೋನ, ಬಾಷಾನಿನ ರಾಜ ಓಗ+ ನಮ್ಮ ಮೇಲೆ ಯುದ್ಧಕ್ಕೆ ಬಂದ್ರು. ಆದ್ರೆ ಅವ್ರನ್ನ ಸೋಲಿಸಿದ್ವಿ.+ 8 ಆಮೇಲೆ ಅವ್ರ ದೇಶ ವಶ ಮಾಡ್ಕೊಂಡು ಅದನ್ನ ರೂಬೇನ್ಯರಿಗೆ, ಗಾದ್ಯರಿಗೆ ಮತ್ತು ಮನಸ್ಸೆ ಕುಲದ ಅರ್ಧ ಜನ್ರಿಗೆ ಆಸ್ತಿಯಾಗಿ ಕೊಟ್ವಿ.+ 9 ಹಾಗಾಗಿ ಈ ಒಪ್ಪಂದದ ನಿಯಮಗಳನ್ನ ಪಾಲಿಸಿ. ಆಗ ನೀವು ಮಾಡೋ ಎಲ್ಲ ಕೆಲಸದಲ್ಲಿ ಯಶಸ್ಸು ಸಿಗುತ್ತೆ.+

10 ಇವತ್ತು ನೀವೆಲ್ಲ ನಿಮ್ಮ ದೇವರಾದ ಯೆಹೋವನ ಮುಂದೆ ಬಂದಿದ್ದೀರ. ಕುಲಗಳ ಮುಖ್ಯಸ್ಥರು, ಹಿರಿಯರು, ಅಧಿಕಾರಿಗಳು, ಇಸ್ರಾಯೇಲಿನ ಎಲ್ಲ ಗಂಡಸರು, 11 ಅವರ ಹೆಂಡತಿ,+ ಮಕ್ಕಳು, ಕಟ್ಟಿಗೆ ಕೂಡಿಸೋ ವಿದೇಶಿಯರಿಂದ+ ಹಿಡಿದು ನೀರು ಸೇದೋ ವಿದೇಶಿಯರ ತನಕ ನಿಮ್ಮ ಪಾಳೆಯದಲ್ಲಿರೋ ಎಲ್ಲ ವಿದೇಶಿಯರು ಸೇರಿ ಬಂದಿದ್ದೀರ. 12 ನಿಮ್ಮ ದೇವರಾದ ಯೆಹೋವ ನಿಮ್ಮ ಜೊತೆ ಮಾಡ್ಕೊಳ್ಳೋ ಒಪ್ಪಂದದಲ್ಲಿ ಸೇರೋಕೆ ನೀವಿಲ್ಲಿ ಬಂದಿದ್ದೀರ. ಇವತ್ತು ನಿಮ್ಮ ದೇವರಾದ ಯೆಹೋವ ಆಣೆ ಮಾಡಿ ಈ ಒಪ್ಪಂದ ಮಾಡ್ಕೊಳ್ತಾನೆ.+ 13 ನಿಮಗೆ, ನಿಮ್ಮ ಪೂರ್ವಜರಾದ ಅಬ್ರಹಾಮ,+ ಇಸಾಕ,+ ಯಾಕೋಬರಿಗೆ+ ಆತನು ಮಾತು ಕೊಟ್ಟ ಹಾಗೆ ನೀವು ಆತನ ಜನ್ರಾಗಿ ಇರೋಕೆ,+ ಆತನು ನಿಮ್ಮ ದೇವರಾಗಿ ಇರೋಕೆ+ ಈ ಒಪ್ಪಂದ ಮಾಡ್ಕೊಳ್ತಾ ಇದ್ದಾನೆ.

14 ನಾನು ಆಣೆ ಮಾಡಿ ಈ ಒಪ್ಪಂದ ಮಾಡ್ಕೊಳ್ತಾ ಇರೋದು ನಿಮ್ಮ ಜೊತೆ ಮಾತ್ರ ಅಲ್ಲ. 15 ಇವತ್ತು ನಮ್ಮ ದೇವರಾದ ಯೆಹೋವನ ಮುಂದೆ ನಿಂತಿರೋ ನಿಮ್ಮ ಜೊತೆ, ಮುಂದೆ ಬರೋ ನಿಮ್ಮ ವಂಶದವರ ಜೊತೆ* ನಾನು ಇದನ್ನ ಮಾಡ್ಕೊಳ್ತಾ ಇದ್ದೀನಿ. 16 (ನಾವು ಈಜಿಪ್ಟ್‌ ದೇಶದಲ್ಲಿ ಹೇಗಿದ್ವಿ, ಬೇರೆ ಬೇರೆ ಜನ್ರ ಮಧ್ಯ ಹೇಗೆ ಆಣೆ ಮಾಡಿ ಬಂದ್ವಿ+ ಅಂತ ನಿಮಗೆ ಚೆನ್ನಾಗಿ ಗೊತ್ತು. 17 ಅವರು ಮಾಡ್ತಿದ್ದ ಕೆಟ್ಟ ವಿಷ್ಯಗಳನ್ನ ಅಂದ್ರೆ ಮರ, ಕಲ್ಲು, ಬೆಳ್ಳಿ, ಚಿನ್ನದಿಂದ ಮಾಡ್ತಿದ್ದ ಅಸಹ್ಯ ಮೂರ್ತಿಗಳನ್ನ*+ ನೀವು ನೋಡಿದ್ದೀರ.) 18 ಆ ದೇವರುಗಳ ಸೇವೆ ಮಾಡೋಕೆ ಮನಸ್ಸಿರೋ, ನಮ್ಮ ದೇವರಾದ ಯೆಹೋವನಿಂದ ದೂರ ಹೋಗಬೇಕು ಅಂತ ಮನಸ್ಸಿರೋ* ಯಾವ ವ್ಯಕ್ತಿನೂ ಇವತ್ತು ನಿಮ್ಮ ಮಧ್ಯ ಇರಬಾರದು.+ ಅಂಥವನು ಕಹಿಯಾದ,* ವಿಷ ಇರೋ ಹಣ್ಣು ಕೊಡೋ ಗಿಡದ ಬೇರು ತರ ಇದ್ದಾನೆ.+ ಅಂಥ ಒಬ್ಬ ಗಂಡಸು, ಸ್ತ್ರೀ, ಒಂದು ಕುಟುಂಬ, ಒಂದು ಕುಲನೇ ಇರಲಿ ಇವತ್ತು ನಿಮ್ಮ ಮಧ್ಯ ಇರಬಾರದು, ಎಚ್ಚರಿಕೆ!

19 ಆದ್ರೆ ಯಾರಾದ್ರೂ ಈ ನಿಯಮಗಳನ್ನ ಕೇಳಿಸ್ಕೊಂಡು ಮನಸ್ಸಲ್ಲಿ ‘ನಾನು ಇಷ್ಟಬಂದ ಹಾಗೆ ನಡ್ಕೊಂಡ್ರೂ ನನಗೆ ಒಳ್ಳೇದೇ ಆಗುತ್ತೆ’ ಅಂತ ಅಹಂಕಾರದಿಂದ ಅಂದ್ಕೊಂಡ್ರೆ ಅವನು ನಾಶ ಆಗೋದು ಮಾತ್ರ ಅಲ್ಲ ಬೇರೆ ಎಲ್ರನ್ನ ನಾಶ ಮಾಡ್ತಾನೆ. 20 ಅವನನ್ನ ಯೆಹೋವ ಕ್ಷಮಿಸಲ್ಲ.+ ಅವನ ಮೇಲೆ ಯೆಹೋವನ ಕೋಪಾಗ್ನಿ ಹೊತ್ತಿ ಉರಿಯುತ್ತೆ. ಈ ಪುಸ್ತಕದಲ್ಲಿ ಬರೆದಿರೋ ಎಲ್ಲ ಶಾಪ ಅವನ ಮೇಲೆ ಬಂದೇ ಬರುತ್ತೆ.+ ಯೆಹೋವ ಅವನ ಹೆಸ್ರನ್ನ ಭೂಮಿ ಮೇಲಿಂದ ಅಳಿಸಿ ಹಾಕ್ತಾನೆ. 21 ಯೆಹೋವ ಅವನನ್ನ ಇಸ್ರಾಯೇಲಿನ ಎಲ್ಲ ಕುಲಗಳಿಂದ ಬೇರೆ ಮಾಡಿ ಅವನಿಗೆ ಕಷ್ಟಗಳು ಬರೋ ತರ ಅಂದ್ರೆ ನಿಯಮ ಪುಸ್ತಕದಲ್ಲಿರೋ ಒಪ್ಪಂದದ ಪ್ರಕಾರ ಎಲ್ಲ ಶಾಪಗಳು ತಟ್ಟೋ ಹಾಗೆ ಮಾಡ್ತಾನೆ.

22 ನಿಮ್ಮ ಮಕ್ಕಳ ಪೀಳಿಗೆಯವರು, ದೂರದ ದೇಶದಿಂದ ಬಂದ ವಿದೇಶಿಯರು ನಿಮ್ಮ ದೇಶದಲ್ಲಿ ಯೆಹೋವ ತಂದಿರೋ ಬಾಧೆ, ಕಷ್ಟಗಳನ್ನ ನೋಡ್ತಾರೆ. ಅಂದ್ರೆ 23 ಯೆಹೋವ ತನ್ನ ಕೋಪಾಗ್ನಿಯಿಂದ ಸೊದೋಮ್‌, ಗೊಮೋರ,+ ಅದ್ಮಾ, ಚೆಬೋಯೀಮನ್ನ+ ನಾಶ ಮಾಡುವಾಗ ಮಾಡಿದ ಹಾಗೆ ನಿಮ್ಮ ದೇಶದಲ್ಲಿ ಸಹ ಗಂಧಕ, ಉಪ್ಪು, ಬೆಂಕಿ ಸುರಿಸಿ ಇಡೀ ದೇಶದಲ್ಲಿ ಬೀಜ ಬಿತ್ತೋಕೆ, ಮೊಳಕೆ ಒಡಿಯೋಕೆ ಆಗದ ಹಾಗೆ, ಯಾವುದೇ ಗಿಡ ಬೆಳೆಯದ ಹಾಗೆ ಮಾಡಿದ್ದನ್ನ ನೋಡ್ತಾರೆ. 24 ಆಗ ಅವರು, ಎಲ್ಲ ಜನ್ರೂ ‘ಯೆಹೋವ ಈ ದೇಶಕ್ಕೆ ಯಾಕೆ ಇಂಥಾ ಗತಿ ತಂದನು?+ ಆತನು ಇಷ್ಟು ಕೋಪದಿಂದ ಕೆಂಡಾಮಂಡಲ ಆಗೋಕೆ ಕಾರಣ ಏನು?’ ಅಂತ ಕೇಳ್ತಾರೆ. 25 ಅದಕ್ಕೆ ಜನ್ರು ‘ಆ ಜನ್ರ ಪೂರ್ವಜರ ದೇವರಾದ ಯೆಹೋವ ಅವ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದ+ ಮೇಲೆ ಅವ್ರ ಜೊತೆ ಮಾಡ್ಕೊಂಡ ಒಪ್ಪಂದವನ್ನ ಮೀರಿ ನಡೆದ್ರು.+ 26 ತಮಗೆ ಗೊತ್ತಿಲ್ಲದ ದೇವರುಗಳಿಗೆ, ಆರಾಧನೆ ಮಾಡಬಾರದು ಅಂತ ಹೇಳಿದ್ದ ದೇವರುಗಳಿಗೆ ಅಡ್ಡಬಿದ್ದು ಅವುಗಳ ಸೇವೆ ಮಾಡಿದ್ರು.+ 27 ಹಾಗಾಗಿ ಯೆಹೋವನ ಕೋಪಾಗ್ನಿ ಹೊತ್ತಿ ಉರಿತು, ನಿಯಮ ಪುಸ್ತಕದಲ್ಲಿರೋ ಎಲ್ಲ ಶಾಪ+ ಆ ದೇಶದ ಮೇಲೆ ಬಂತು. 28 ಯೆಹೋವ ಕೋಪ, ಕ್ರೋಧ, ರೋಷದಿಂದ ಅವ್ರನ್ನ ಆ ದೇಶದಿಂದ ಕಿತ್ತುಹಾಕಿ ಬೇರೆ ದೇಶಕ್ಕೆ ಗಡೀಪಾರು ಮಾಡಿದನು.+ ಅವರು ಇವತ್ತಿಗೂ ಅಲ್ಲೇ ಇದ್ದಾರೆ’ + ಅಂದ್ರು.

29 “ನಮ್ಮ ದೇವರಾದ ಯೆಹೋವನಿಗೆ ಎಲ್ಲ ಗುಟ್ಟು ಗೊತ್ತು.+ ಆದ್ರೆ ಆತನು ಹೇಳೋಕೆ ಬಯಸೋ ವಿಷ್ಯಗಳನ್ನ ನಮಗೆ, ನಮ್ಮ ವಂಶದವರಿಗೆ ಹೇಳಿದ್ದಾನೆ. ನಿಯಮ ಪುಸ್ತಕದಲ್ಲಿರೋ ಎಲ್ಲ ವಿಷ್ಯಗಳನ್ನ ನಾವು ಯಾವಾಗ್ಲೂ ಪಾಲಿಸಬೇಕು+ ಅಂತ ಅವುಗಳನ್ನ ನಮಗೆ ಹೇಳಿದ್ದಾನೆ.

30 ಆರಿಸ್ಕೊಳ್ಳೋಕೆ ನಿಮ್ಮ ಮುಂದೆ ಇಟ್ಟಿರೋ ಆಶೀರ್ವಾದ, ಶಾಪಗಳನ್ನೆಲ್ಲ ನೀವು ಅನುಭವಿಸ್ತೀರ.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಎಲ್ಲ ಜನ್ರ ಮಧ್ಯ ಚದರಿಸಿಬಿಟ್ಟಾಗ+ ಅಲ್ಲಿ ಇದನ್ನೆಲ್ಲ ನೆನಪು ಮಾಡ್ಕೊಳ್ಳಬೇಕು.+ 2 ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್‌ ಬರಬೇಕು.+ ನಾನು ಇವತ್ತು ಹೇಳಿರೋ ಪ್ರಕಾರ ನೀವು, ನಿಮ್ಮ ಮಕ್ಕಳು ಆತನ ಮಾತನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ಪಾಲಿಸಬೇಕು.+ 3 ಆಗ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಬಂದಿವಾಸದಿಂದ ಬಿಡುಗಡೆ ಮಾಡಿ+ ಕರುಣೆ ತೋರಿಸ್ತಾನೆ.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಚದರಿಸಿಬಿಟ್ಟ ಎಲ್ಲ ಕಡೆಯಿಂದ ಸೇರಿಸಿ ನಿಮ್ಮ ದೇಶಕ್ಕೆ ವಾಪಸ್‌ ಕರ್ಕೊಂಡು ಬರ್ತಾನೆ.+ 4 ನೀವು ಭೂಮಿಯ ಯಾವುದೇ ಮೂಲೆಗೆ ಚದರಿ ಹೋಗಿದ್ರೂ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಅಲ್ಲಿಂದ ವಾಪಸ್‌ ಕರ್ಕೊಂಡು ಬರ್ತಾನೆ.+ 5 ನಿಮ್ಮ ಪೂರ್ವಜರು ವಶ ಮಾಡ್ಕೊಂಡ ದೇಶಕ್ಕೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಮತ್ತೆ ಸೇರಿಸ್ತಾನೆ. ನೀವು ಅದನ್ನ ಮತ್ತೆ ವಶ ಮಾಡ್ಕೊಳ್ತೀರ. ಅಲ್ಲಿ ದೇವರು ನಿಮ್ಮನ್ನ ನಿಮ್ಮ ಪೂರ್ವಜರಿಗಿಂತ ಜಾಸ್ತಿ ಸಂಖ್ಯೆ ಆಗೋ ತರ ಮಾಡ್ತಾನೆ.+ 6 ನಿಮ್ಮ ದೇವರಾದ ಯೆಹೋವ ನಿಮ್ಮ, ನಿಮ್ಮ ಮಕ್ಕಳ ಹೃದಯಗಳನ್ನ ಶುದ್ಧ ಮಾಡ್ತಾನೆ.*+ ಆಗ ನೀವು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸ್ತೀರ, ಬದುಕಿ ಬಾಳ್ತೀರ.+ 7 ನಿಮ್ಮನ್ನ ದ್ವೇಷಿಸಿ ಹಿಂಸಿಸಿದ ನಿಮ್ಮ ಶತ್ರುಗಳ ಮೇಲೆ ನಿಮ್ಮ ದೇವರಾದ ಯೆಹೋವ ಈ ಎಲ್ಲ ಶಾಪಗಳು ಬರೋ ಹಾಗೆ ಮಾಡ್ತಾನೆ.+

8 ನೀವು ಮತ್ತೆ ಯೆಹೋವನ ಮಾತು ಕೇಳೋಕೆ, ನಾನು ಇವತ್ತು ನಿಮಗೆ ಕೊಡೋ ಎಲ್ಲ ಆಜ್ಞೆಗಳನ್ನ ಪಾಲಿಸೋಕೆ ಶುರುಮಾಡಿದ್ರೆ 9 ನೀವು ಕೈಹಾಕಿದ ಕೆಲಸವನ್ನೆಲ್ಲ ನಿಮ್ಮ ದೇವರಾದ ಯೆಹೋವ ಆಶೀರ್ವದಿಸ್ತಾನೆ.+ ನಿಮಗೆ ಬೇಕಾಗಿರೋ ಎಲ್ಲ ಕೊಡ್ತಾನೆ. ನಿಮ್ಮ ವಂಶ ತುಂಬ ಬೆಳೆಯುತ್ತೆ, ಪ್ರಾಣಿಗಳು ಹೆಚ್ಚಾಗುತ್ತೆ, ಜಮೀನಲ್ಲಿ ತುಂಬ ಬೆಳೆ ಬರುತ್ತೆ. ನಿಮ್ಮ ಪೂರ್ವಜರು ಸಂತೋಷವಾಗಿ ಇರೋ ತರ ಮಾಡಿದ ಹಾಗೆ ನೀವು ಕೂಡ ಸಂತೋಷವಾಗಿ ಇರೋ ತರ ಯೆಹೋವ ಮಾಡ್ತಾನೆ.+ 10 ನಿಮ್ಮ ದೇವರಾದ ಯೆಹೋವ ಹೇಳಿದನ್ನ, ನಿಯಮ ಪುಸ್ತಕದಲ್ಲಿರೋ ಆತನ ಆಜ್ಞೆಗಳನ್ನ, ನಿಯಮಗಳನ್ನ, ಪಾಲಿಸಿದ್ರೆ ಮತ್ತು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್‌ ಬಂದ್ರೆ ಆತನು ನಿಮ್ಮನ್ನ ಆ ರೀತಿ ಆಶೀರ್ವದಿಸ್ತಾನೆ.+

11 ನಾನು ಇವತ್ತು ನಿಮಗೆ ಕೊಟ್ಟ ಈ ಆಜ್ಞೆಗಳು ನಿಮಗೆ ಪಾಲಿಸೋಕೆ ತುಂಬ ಕಷ್ಟ ಆಗಲ್ಲ. ಅವು ನಿಮಗೆ ಕೈಗೆಟುಕದಷ್ಟು ದೂರನೂ ಇಲ್ಲ.+ 12 ‘ನಮಗೋಸ್ಕರ ಸ್ವರ್ಗಕ್ಕೆ ಹೋಗಿ ಅವುಗಳನ್ನ ಯಾರು ತಗೊಂಡು ಬರ್ತಾರೆ? ತಂದ್ರೆ ನಾವು ಪಾಲಿಸಬಹುದಿತ್ತಲ್ಲಾ’+ ಅಂತ ಹೇಳೋಕೆ ಅವುಗಳೇನು ಸ್ವರ್ಗದಲ್ಲಿಲ್ಲ. 13 ಅಥವಾ ‘ನಮಗೋಸ್ಕರ ಸಮುದ್ರ ದಾಟಿ ಹೋಗಿ ಯಾರು ತಗೊಂಡು ಬರ್ತಾರೆ? ತಂದ್ರೆ ನಾವು ಪಾಲಿಸಬಹುದಿತ್ತಲ್ಲಾ’ ಅಂತ ಹೇಳೋಕೆ ಅವುಗಳೇನು ಸಮುದ್ರದ ಆಕಡೆ ಇಲ್ಲ. 14 ನಿಯಮ ಪುಸ್ತಕದಲ್ಲಿರೋ ಮಾತುಗಳು ನಿಮ್ಮ ಹತ್ರನೇ ಇದೆ, ನಿಮ್ಮ ಬಾಯಲ್ಲೇ ಹೃದಯದಲ್ಲೇ ಇದೆ.+ ಹಾಗಾಗಿ ನಿಮಗೆ ಅದನ್ನೆಲ್ಲ ಪಾಲಿಸೋಕೆ ಆಗುತ್ತೆ.+

15 ನೋಡಿ, ಜೀವ ಅಥವಾ ಮರಣ, ಒಳ್ಳೇದು ಅಥವಾ ಕೆಟ್ಟದು ಆಯ್ಕೆ ಮಾಡೋ ಅವಕಾಶನ ಇವತ್ತು ನಿಮ್ಮ ಮುಂದೆ ಇಟ್ಟಿದ್ದೀನಿ.+ 16 ನಾನು ಇವತ್ತು ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ಪಾಲಿಸಿದ್ರೆ, ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಿದ್ರೆ,+ ಎಲ್ಲ ವಿಷ್ಯದಲ್ಲಿ ಆತನು ಹೇಳಿದ ಹಾಗೆ ಕೇಳಿದ್ರೆ, ಆತನ ಆಜ್ಞೆ, ನಿಯಮ, ತೀರ್ಪುಗಳನ್ನ ಪಾಲಿಸ್ತಾ ಇದ್ರೆ ಬದುಕಿ ಬಾಳ್ತೀರ.+ ನಿಮ್ಮ ಸಂಖ್ಯೆ ಜಾಸ್ತಿ ಆಗುತ್ತೆ. ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಆಶೀರ್ವದಿಸ್ತಾನೆ.+

17 ಆದ್ರೆ ನಿಮ್ಮ ದೇವರಿಂದ ದೂರ ಹೋಗಿ+ ಆತನ ಮಾತು ಕೇಳದೆ, ಬೇರೆ ದೇವರುಗಳಿಗೆ ಮರುಳಾಗಿ ಅಡ್ಡಬಿದ್ದು ಅವುಗಳ ಸೇವೆ ಮಾಡಿದ್ರೆ+ 18 ನಾಶವಾಗಿ ಹೋಗ್ತೀರ+ ಅಂತ ಇವತ್ತೇ ನಿಮಗೆ ಹೇಳ್ತಾ ಇದ್ದೀನಿ. ನೀವು ಯೋರ್ದನ್‌ ನದಿ ದಾಟಿ ವಶ ಮಾಡ್ಕೊಳ್ಳೋ ದೇಶದಲ್ಲಿ ಜಾಸ್ತಿ ಕಾಲ ಬದುಕಲ್ಲ. 19 ಜೀವ ಅಥವಾ ಮರಣ, ಆಶೀರ್ವಾದ ಅಥವಾ ಶಾಪ ಆಯ್ಕೆ ಮಾಡೋ ಅವಕಾಶ ಇವತ್ತು ನಿಮ್ಮ ಮುಂದೆ ಇಟ್ಟಿದ್ದೀನಿ.+ ನೀವೇನು ಮಾಡ್ತಿರೋ ಅದಕ್ಕೆ ಭೂಮಿ, ಆಕಾಶನೇ ಸಾಕ್ಷಿ. ನೀವು, ನಿಮ್ಮ ವಂಶದವರು+ ಬದುಕಿ ಬಾಳೋ ತರ ಜೀವವನ್ನೇ ಆರಿಸ್ಕೊಳ್ಳಿ.+ 20 ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು,+ ಆತನ ಮಾತು ಕೇಳಬೇಕು, ಆತನಿಗೆ ಯಾವಾಗ್ಲೂ ನಿಷ್ಠೆಯಿಂದ ಇರಬೇಕು.+ ಯಾಕಂದ್ರೆ ನಿಮಗೆ ಜೀವ ಕೊಡೋನು, ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟ ದೇಶದಲ್ಲಿ ನಿಮ್ಮನ್ನ ತುಂಬ ವರ್ಷ ಬದುಕೋ ತರ ಮಾಡೋನು ಯೆಹೋವನೇ.”

31 ಮೋಶೆ ಹೋಗಿ ಎಲ್ಲ ಇಸ್ರಾಯೇಲ್ಯರಿಗೆ 2 ಹೀಗಂದ: “ನನಗೀಗ 120 ವರ್ಷ.+ ನಾನು ಇನ್ನು ಮುಂದೆ ನಿಮ್ಮನ್ನ ಕರ್ಕೊಂಡು ಹೋಗೋಕೆ ಆಗಲ್ಲ. ಯಾಕಂದ್ರೆ ಯೆಹೋವ ನನಗೆ ‘ನೀನು ಯೋರ್ದನ್‌ ನದಿ ದಾಟಬಾರದು’ + ಅಂತ ಹೇಳಿದ್ದಾನೆ. 3 ನಿಮ್ಮ ದೇವರಾದ ಯೆಹೋವ ನಿಮಗಿಂತ ಮುಂಚೆ ಹೋಗಿ ಯೋರ್ದನ್‌ ನದಿ ದಾಟಿ, ನಿಮ್ಮ ಮುಂದೆ ಇರೋ ಆ ಜನ್ರನ್ನ ನಾಶ ಮಾಡ್ತಾನೆ. ನೀವು ಅವರ ದೇಶ ವಶ ಮಾಡ್ಕೊಳ್ತೀರ.+ ಯೆಹೋವ ಹೇಳಿದ ಹಾಗೆ ಇನ್ನು ಮುಂದೆ ಯೆಹೋಶುವ ಮುಂದಾಳತ್ವ ವಹಿಸಿ ನಿಮ್ಮನ್ನ ಯೋರ್ದನ್‌ ನದಿಯ ಆ ಕಡೆಗೆ ಕರ್ಕೊಂಡು ಹೋಗ್ತಾನೆ.+ 4 ಯೆಹೋವ ಅಮೋರಿಯರ ರಾಜರಾದ ಸೀಹೋನ,+ ಓಗರನ್ನ+ ಅವರ ದೇಶವನ್ನ ನಾಶ ಮಾಡಿದ ಹಾಗೆ ಈ ಜನ್ರನ್ನ ಕೂಡ ನಾಶ ಮಾಡ್ತಾನೆ.+ 5 ನಿಮಗೋಸ್ಕರ ಯೆಹೋವನೇ ಅವ್ರನ್ನ ಸೋಲಿಸ್ತಾನೆ. ಆಗ ನಾನು ಈಗಾಗ್ಲೇ ಕೊಟ್ಟ ಎಲ್ಲ ಆಜ್ಞೆಗಳ ಪ್ರಕಾರ ನೀವು ಅವ್ರಿಗೆ ಮಾಡಬೇಕು.+ 6 ಧೈರ್ಯವಾಗಿ, ದೃಢವಾಗಿ ಇರಿ.+ ಆ ಜನ್ರಿಗೆ ಹೆದರಬೇಡಿ, ಹೆದರಿ ಕಂಗಾಲಾಗಬೇಡಿ.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವನೇ ನಿಮ್ಮ ಜೊತೆ ಬರ್ತಾನೆ. ಆತನು ಕೈಬಿಡಲ್ಲ, ನಿಮ್ಮನ್ನ ಬಿಟ್ಟುಬಿಡಲ್ಲ.”+

7 ಆಮೇಲೆ ಮೋಶೆ ಯೆಹೋಶುವನನ್ನ ಕರೆದು ಎಲ್ಲ ಇಸ್ರಾಯೇಲ್ಯರ ಮುಂದೆ ಅವನಿಗೆ “ನೀನು ಧೈರ್ಯವಾಗಿರು, ದೃಢವಾಗಿರು.+ ಯಾಕಂದ್ರೆ ಯೆಹೋವ ಈ ಜನ್ರ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟಿರೋ ಆ ದೇಶಕ್ಕೆ ಇವ್ರನ್ನ ನೀನೇ ಕರ್ಕೊಂಡು ಹೋಗ್ತಿಯ. ಆ ದೇಶವನ್ನ ನೀನೇ ಇವ್ರಿಗೆ ಆಸ್ತಿಯಾಗಿ ಕೊಡ್ತೀಯ.+ 8 ಯೆಹೋವನೇ ನಿನ್ನ ಮುಂದೆ ಹೋಗ್ತಾನೆ. ಆತನು ಯಾವಾಗ್ಲೂ ನಿನ್ನ ಜೊತೆ ಇರ್ತಾನೆ.+ ಆತನು ನಿನ್ನ ಕೈಬಿಡಲ್ಲ, ನಿನ್ನನ್ನ ಬಿಟ್ಟುಬಿಡಲ್ಲ. ಹೆದರಬೇಡ, ಹೆದರಿ ಕಂಗಾಲಾಗಬೇಡ”+ ಅಂದ.

9 ಆಮೇಲೆ ಮೋಶೆ ಈ ನಿಯಮ ಪುಸ್ತಕವನ್ನ ಬರೆದ.+ ಅದನ್ನ ಯೆಹೋವನ ಒಪ್ಪಂದದ ಮಂಜೂಷವನ್ನ ಹೊತ್ಕೊಂಡು ಹೋಗೋ ಲೇವಿಯರಾದ ಪುರೋಹಿತರಿಗೆ, ಇಸ್ರಾಯೇಲ್ಯರ ಎಲ್ಲ ಹಿರಿಯರಿಗೆ ಕೊಟ್ಟ. 10 ಮೋಶೆ ಅವ್ರಿಗೆ “ನೀವು ಬಿಡುಗಡೆಯ ವರ್ಷ ಅಂದ್ರೆ ಪ್ರತಿ ಏಳನೇ ವರ್ಷ+ ಚಪ್ಪರಗಳ ಹಬ್ಬ*+ ಆಚರಿಸುವಾಗ ಗೊತ್ತು ಮಾಡ್ಕೊಂಡ ಸಮಯದಲ್ಲಿ 11 ಈ ನಿಯಮ ಪುಸ್ತಕವನ್ನ ಓದಬೇಕು. ಇದನ್ನ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಜಾಗದಲ್ಲಿ ಎಲ್ಲ ಇಸ್ರಾಯೇಲ್ಯರು ಆತನ ಸನ್ನಿಧಿಯಲ್ಲಿ ಸೇರಿಬಂದಾಗ+ ಎಲ್ರಿಗೂ ಕೇಳಿಸೋ ಹಾಗೆ ಓದಬೇಕು.+ 12 ಗಂಡಸರು, ಸ್ತ್ರೀಯರು, ಮಕ್ಕಳು,* ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ವಿದೇಶಿಯರು ಹೀಗೆ ಎಲ್ರನ್ನ ಸೇರಿಸಬೇಕು.+ ಅವ್ರೆಲ್ಲ ನಿಮ್ಮ ದೇವರಾದ ಯೆಹೋವನ ಬಗ್ಗೆ ಕೇಳಿಸ್ಕೊಂಡು ಕಲಿತು ಆತನಿಗೆ ಭಯಪಡೋಕೆ, ಈ ನಿಯಮ ಪುಸ್ತಕದಲ್ಲಿರೋ ಎಲ್ಲ ಮಾತುಗಳನ್ನ ಶ್ರದ್ಧೆಯಿಂದ ಪಾಲಿಸೋಕೆ ನೀವು ಹೀಗೆ ಮಾಡಬೇಕು. 13 ಆಗ ಈ ನಿಯಮ ಪುಸ್ತಕದ ಬಗ್ಗೆ ಗೊತ್ತಿಲ್ದೆ ಇರೋ ಅವ್ರ ಮಕ್ಕಳು ಅದನ್ನ ಕೇಳಿಸ್ಕೊಳ್ತಾರೆ,+ ಈ ಯೋರ್ದನ್‌ ನದಿ ದಾಟಿ ನೀವು ವಶ ಮಾಡ್ಕೊಳ್ಳೋ ಆ ದೇಶದಲ್ಲಿ ಬದುಕಿರೋ ತನಕ ಎಲ್ಲ ದಿನ ನಿಮ್ಮ ದೇವರಾದ ಯೆಹೋವನಿಗೆ ಭಯಪಡೋಕೆ ಕಲಿತಾರೆ”+ ಅಂದ.

14 ಆಮೇಲೆ ಯೆಹೋವ ಮೋಶೆಗೆ “ನೀನು ಸಾಯೋ ಸಮಯ ಹತ್ರ ಆಗ್ತಿದೆ.+ ನೀನು ಯೆಹೋಶುವನನ್ನ ಕರ್ಕೊಂಡು ದೇವದರ್ಶನ ಡೇರೆ ಹತ್ರ ಬಾ.* ಅವನಿಗೆ ಮುಂದಾಳತ್ವ ವಹಿಸೋ ನೇಮಕ ಕೊಡ್ತೀನಿ”+ ಅಂತ ಹೇಳಿದನು. ಹಾಗಾಗಿ ಮೋಶೆ, ಯೆಹೋಶುವ ದೇವದರ್ಶನ ಡೇರೆ ಹತ್ರ ಹೋದ್ರು. 15 ಆ ಡೇರೆ ಹತ್ರ ಯೆಹೋವ ಮೋಡದಲ್ಲಿ ಕಾಣಿಸ್ಕೊಂಡನು. ಮೋಡ ಡೇರೆಯ ಬಾಗಿಲ ಹತ್ರ ನಿಲ್ತು.+

16 ಆಗ ಯೆಹೋವ ಮೋಶೆಗೆ ಹೀಗಂದನು: “ನೀನು ಬೇಗ ಸಾಯ್ತಿಯ. ಈ ಜನ್ರು ತಾವು ವಶ ಮಾಡ್ಕೊಳ್ಳೋ ದೇಶಕ್ಕೆ ಹೋದ್ಮೇಲೆ ಸುತ್ತಮುತ್ತ ಇರೋ ದೇಶಗಳ ದೇವರುಗಳನ್ನ ಆರಾಧಿಸೋಕೆ* ಶುರು ಮಾಡ್ತಾರೆ.+ ಅವರು ನನ್ನನ್ನ ಬಿಟ್ಟುಬಿಡ್ತಾರೆ,+ ನಾನು ಅವ್ರ ಜೊತೆ ಮಾಡ್ಕೊಂಡಿರೋ ಒಪ್ಪಂದ ಮೀರಿ ನಡೀತಾರೆ.+ 17 ಆ ಸಮಯದಲ್ಲಿ ನನಗೆ ಅವ್ರ ಮೇಲೆ ತುಂಬ ಕೋಪ ಬರುತ್ತೆ,+ ನಾನು ಅವ್ರ ಕೈಬಿಡ್ತೀನಿ.+ ನಾಶ ಆಗೋ ತನಕ ನಾನು ಅವ್ರಿಗೆ ಸಹಾಯ ಮಾಡಲ್ಲ.*+ ಆಮೇಲೆ ಅವರು ತುಂಬ ಕಷ್ಟ, ನೋವು ಅನುಭವಿಸುವಾಗ+ ‘ನಮ್ಮ ದೇವರು ನಮ್ಮ ಮಧ್ಯ ಇಲ್ಲ, ಅದಕ್ಕೇ ಇಷ್ಟೆಲ್ಲಾ ಕಷ್ಟನೋವು’ + ಅಂತಾರೆ. 18 ಆದ್ರೆ ಆ ದಿನ ನಾನಂತೂ ಅವ್ರಿಗೆ ಸಹಾಯ ಮಾಡಲ್ಲ.* ಅವರು ನನ್ನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧನೆ ಮಾಡಿ ಆ ಎಲ್ಲ ಕೆಟ್ಟ ಕೆಲಸ ಮಾಡಿರ್ತಾರೆ. ಅದಕ್ಕೇ ನಾನು ಅವ್ರಿಗೆ ಸಹಾಯ ಮಾಡೋದೇ ಇಲ್ಲ.+

19 ನೀನೀಗ ಈ ಹಾಡು ಬರಿ,+ ಇದನ್ನ ಇಸ್ರಾಯೇಲ್ಯರಿಗೆ ಕಲಿಸು,+ ಅವರು ಕಲೀಲಿ. ದೇವರ ಮಾತು ಕೇಳದೇ ಹೋದ್ರೆ ಪರಿಣಾಮ ಏನಾಗುತ್ತೆ ಅಂತ ಈ ಹಾಡು ಅವ್ರಿಗೆ ನೆನಪಿಸುತ್ತೆ.+ 20 ನಾನು ಅವ್ರ ಪೂರ್ವಜರಿಗೆ ಮಾತು ಕೊಟ್ಟ ಹಾಗೆ+ ಹಾಲೂ ಜೇನೂ ಹರಿಯುವ ದೇಶಕ್ಕೆ+ ಅವ್ರನ್ನ ಕರ್ಕೊಂಡು ಹೋದ್ಮೇಲೆ ಅವರು ತಿಂದುಕುಡಿದು ಖುಷಿಯಾಗಿ ಇರುವಾಗ*+ ನನ್ನನ್ನ ಬಿಟ್ಟು ಬೇರೆ ದೇವರುಗಳ ಸೇವೆ ಮಾಡಿ ನನಗೆ ಅಗೌರವ ತೋರಿಸ್ತಾರೆ, ನನ್ನ ಒಪ್ಪಂದ ಮುರೀತಾರೆ.+ 21 ಅವ್ರಿಗೆ ತುಂಬ ಕಷ್ಟ ಬಂದಾಗ+ ದೇವರ ಮಾತು ಕೇಳದಿದ್ರೆ ಪರಿಣಾಮ ಏನಾಗುತ್ತೆ ಅಂತ ಈ ಹಾಡು ನೆನಪಿಸುತ್ತೆ. (ಅವ್ರ ವಂಶದವರು ಈ ಹಾಡು ಮರಿಬಾರದು.) ನಾನು ಅವ್ರಿಗೆ ಯಾವ ದೇಶ ಕೊಡ್ತೀನಿ ಅಂತ ಮಾತು ಕೊಟ್ಟಿದ್ದೀನೋ ಆ ದೇಶಕ್ಕೆ ಅವ್ರನ್ನ ಕರ್ಕೊಂಡು ಹೋಗೋ ಮುಂಚೆನೇ ಅವರು ಯಾವ ಗುಣ ಬೆಳೆಸ್ಕೊಂಡಿದ್ದಾರೆ ಅಂತ ನನಗೆ ಈಗ್ಲೇ ಗೊತ್ತು.”+

22 ಹಾಗಾಗಿ ಆ ದಿನ ಮೋಶೆ ಆ ಹಾಡು ಬರೆದು ಇಸ್ರಾಯೇಲ್ಯರಿಗೆ ಕಲಿಸಿದ.

23 ಆಮೇಲೆ ಆತನು* ನೂನನ ಮಗ ಯೆಹೋಶುವನನ್ನ ಮುಂದಾಳತ್ವ ವಹಿಸೋಕೆ ನೇಮಿಸಿ+ “ನಾನು ಇಸ್ರಾಯೇಲ್ಯರಿಗೆ ಕೊಡ್ತೀನಿ ಅಂತ ಹೇಳಿದ ಆ ದೇಶಕ್ಕೆ+ ನೀನೇ ಅವ್ರನ್ನ ಕರ್ಕೊಂಡು ಹೋಗಬೇಕು. ಹಾಗಾಗಿ ನೀನು ಧೈರ್ಯವಾಗಿರು ದೃಢವಾಗಿರು.+ ನಾನು ಯಾವಾಗ್ಲೂ ನಿನ್ನ ಜೊತೆ ಇರ್ತಿನಿ” ಅಂದ.

24 ಮೋಶೆ ಒಂದು ಪುಸ್ತಕದಲ್ಲಿ ನಿಯಮ ಪುಸ್ತಕದ ಎಲ್ಲ ಮಾತನ್ನ ಬರೆದು ಮುಗಿಸಿದ ಕೂಡ್ಲೇ+ 25 ಯೆಹೋವನ ಒಪ್ಪಂದದ ಮಂಜೂಷ ಹೊರೋ ಲೇವಿಯರಿಗೆ ಆಜ್ಞೆ ಕೊಡ್ತಾ 26 “ಈ ನಿಯಮ ಪುಸ್ತಕವನ್ನ ನೀವು ತಗೊಂಡು+ ಹೋಗಿ ನಿಮ್ಮ ದೇವರಾದ ಯೆಹೋವನ ಒಪ್ಪಂದದ ಮಂಜೂಷದ ಪಕ್ಕದಲ್ಲಿಡಿ.+ ಇಸ್ರಾಯೇಲ್ಯರ ವಿರುದ್ಧವಾಗಿ ಇದೇ ಸಾಕ್ಷಿಕೊಡ್ಲಿ. 27 ಯಾಕಂದ್ರೆ ದಂಗೆ ಏಳೋ,+ ಹಠಹಿಡಿಯೋ ಗುಣ+ ಈ ಜನ್ರಲ್ಲಿದೆ ಅಂತ ನನಗೆ ಚೆನ್ನಾಗಿ ಗೊತ್ತು. ನಾನು ಬದುಕಿರುವಾಗ್ಲೇ ಯೆಹೋವನ ವಿರುದ್ಧ ಇಷ್ಟು ದಂಗೆ ಏಳ್ತಾರೆ ಅಂದ್ರೆ ನಾನು ಸತ್ತ ಮೇಲೆ ಇನ್ನೆಷ್ಟು ದಂಗೆ ಏಳಬಹುದು! 28 ಇಸ್ರಾಯೇಲ್ಯರ ಕುಲಗಳ ಎಲ್ಲ ಹಿರಿಯರನ್ನ, ಅಧಿಕಾರಿಗಳನ್ನ ನನ್ನ ಹತ್ರ ಬರೋಕೆ ಹೇಳಿ. ನಾನು ಅವ್ರ ವಿರುದ್ಧ ಭೂಮಿ ಆಕಾಶವನ್ನ ಸಾಕ್ಷಿಯಾಗಿ ಇಟ್ಟು+ ಅವ್ರಿಗೆ ಈ ಮಾತುಗಳನ್ನ ಹೇಳಬೇಕು. 29 ನಾನು ಸತ್ತ ಮೇಲೆ ಈ ಜನ್ರು ಕೆಟ್ಟ ಕೆಲಸಗಳನ್ನ ಮಾಡೇ ಮಾಡ್ತಾರೆ.+ ನಾನು ಅವ್ರಿಗೆ ಕೊಟ್ಟ ಆಜ್ಞೆಗಳನ್ನ ಪಾಲಿಸಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ಅವರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದಾಗಿರೋದನ್ನ ಮಾಡೋದ್ರಿಂದ, ಆತನಿಗೆ ಕೋಪಬರಿಸೋ ಕೆಲಸಗಳಿಗೆ ಕೈಹಾಕೋದ್ರಿಂದ ಮುಂದೆ ಖಂಡಿತ ಅವ್ರ ಮೇಲೆ ಕಷ್ಟಗಳು ಬರುತ್ತೆ ಅಂತ ನನಗೆ ಗೊತ್ತು”+ ಅಂದ.

30 ಆಮೇಲೆ ಎಲ್ಲ ಇಸ್ರಾಯೇಲ್ಯರಿಗೆ ಕೇಳಿಸೋ ಹಾಗೆ ಮೋಶೆ ಈ ಹಾಡಿನ ಪದಗಳನ್ನ ಆರಂಭದಿಂದ ಕೊನೆ ತನಕ ಹೇಳಿದ.+

32 “ಆಕಾಶವೇ, ನಾನು ಹೇಳೋದನ್ನ ಕೇಳು,

ಭೂಮಿಯೇ, ನನ್ನ ಮಾತು ಕೇಳು.

 2 ನನ್ನ ಬೋಧನೆ ಮೆಲ್ಲಗೆ ಸುರಿಯೋ ಮಳೆ ತರ,

ನನ್ನ ಮಾತು ಹನಿಹನಿಯಾಗಿ ಬೀಳೋ ಮಂಜು ತರ,

ಅದು ಹುಲ್ಲಿನ ಮೇಲೆ ಕೂತ್ಕೊಳ್ಳೋ ತುಂತುರು ತರ,

ಗಿಡಮರಗಳ ಮೇಲೆ ಹೇರಳವಾಗಿ ಸುರಿಯೋ ಮಳೆ ತರ.

 3 ನಾನು ಯೆಹೋವನ ಹೆಸ್ರನ್ನ ಸಾರಿಹೇಳ್ತೀನಿ.+

ನಮ್ಮ ದೇವರ ಶ್ರೇಷ್ಠತೆಯನ್ನ ತಿಳಿಸ್ತೀನಿ!+

 4 ಆತನು ಬಂಡೆ ತರ ಇದ್ದಾನೆ, ಆತನ ಕೆಲಸದಲ್ಲಿ ಯಾವುದೇ ತಪ್ಪು ಇರಲ್ಲ,*+

ಯಾಕಂದ್ರೆ ಆತನು ಮಾಡೋದೆಲ್ಲಾ ನ್ಯಾಯ.+

ಆತನು ಯಾವತ್ತೂ ಅನ್ಯಾಯ ಮಾಡಲ್ಲ,+ ಆತನು ನಂಬಿಗಸ್ತ ದೇವರು,+

ಆತನು ನೀತಿವಂತ ನ್ಯಾಯವಂತ ದೇವರು.+

 5 ಕೆಟ್ಟವರ ತರ ನಡ್ಕೊಂಡಿದ್ದು ಅವ್ರೇ,+

ಅವರು ಆತನ ಮಕ್ಕಳಲ್ಲ, ತಪ್ಪೆಲ್ಲಾ ಅವ್ರದ್ದೇ,+

ಅವರು ಅಡ್ಡದಾರಿ ಹಿಡಿದ ವಕ್ರ ಸಂತತಿನೇ!+

 6 ಬುದ್ಧಿಹೀನರೇ, ಅವಿವೇಕಿಗಳೇ,+

ನೀವು ಯೆಹೋವನಿಗೆ ಕೃತಜ್ಞತೆ ತೋರಿಸೋದು ಹೀಗೇನಾ?+

ಆತನು ನಿಮ್ಮ ತಂದೆ ತಾನೇ? ಆತನಿಂದಾನೇ ನೀವು ಇವತ್ತು ಇದ್ದೀರ ತಾನೇ?+

ನಿಮ್ಮನ್ನ ಸೃಷ್ಟಿಸಿ ಒಂದು ಜನಾಂಗವಾಗಿ ಮಾಡಿದ್ದು ಆತನೇ ಅಲ್ವಾ?

 7 ಹಿಂದಿನ ದಿನಗಳನ್ನ ನೆನಪಿಸ್ಕೊಳ್ಳಿ,

ಹಿಂದಿನ ಪೀಳಿಗೆ ಬಗ್ಗೆ ಯೋಚಿಸಿ,

ನಿಮ್ಮ ತಂದೆನ ಕೇಳಿ, ಅವನು ನಿಮಗೆ ಹೇಳ್ತಾನೆ,+

ಹಿರಿಯರನ್ನ ವಿಚಾರಿಸಿ, ಅವರು ನಿಮಗೆ ವಿವರಿಸ್ತಾರೆ.

 8 ಸರ್ವೋನ್ನತ ದೇವರು ಎಲ್ಲ ಜನಾಂಗಗಳಿಗೆ ಆಸ್ತಿ ಹಂಚಿದಾಗ,+

ಆದಾಮನ ವಂಶನ* ವಿಂಗಡಿಸಿದಾಗ,+

ಇಸ್ರಾಯೇಲ್ಯರ ಸಂಖ್ಯೆನ ಮನಸ್ಸಲ್ಲಿಟ್ಟು+

ಎಲ್ಲ ಜನಾಂಗಗಳಿಗೆ ಗಡಿ ನಿರ್ಧರಿಸಿದ.+

 9 ಆತನ ಜನ್ರೇ ಯೆಹೋವನಿಗೆ ಸ್ವತ್ತು,+

ಯಾಕೋಬನೇ ಆತನಿಗೆ ಆಸ್ತಿ.+

10 ಆತನಿಗೆ ಯಾಕೋಬ ಸಿಕ್ಕಿದ್ದು ಒಂದು ಕಾಡಲ್ಲಿ,+

ವಿಚಿತ್ರ ಶಬ್ದ ಮಾಡೋ ಪ್ರಾಣಿಗಳಿದ್ದ ಬರಡು ಮರುಭೂಮಿಯಲ್ಲಿ.+

ಆತನು ಅವನನ್ನ ಸುತ್ತುವರಿದು ಕಾದು ಕಾಪಾಡಿದ,+

ಅವನನ್ನ ತನ್ನ ಕಣ್ಣುಗುಡ್ಡೆ ತರ ನೋಡ್ಕೊಂಡ.+

11 ಹದ್ದು ತನ್ನ ಮರಿಗಳಿಗೆ ಹಾರೋದನ್ನ ಕಲಿಸೋಕೆ ಅವನ್ನ ಗೂಡಿಂದ ತಳ್ಳಿ,

ಮರಿಗಳ ಪಕ್ಕದಲ್ಲೇ ಹಾರುತ್ತಾ,

ಹೇಗೆ ತನ್ನ ರೆಕ್ಕೆಗಳನ್ನ ಚಾಚಿ ಮರಿಗಳನ್ನ ತಗೊಳ್ಳುತ್ತೋ,

ಹೇಗೆ ತನ್ನ ಗರಿಗಳ ಮೇಲೆ ಅವನ್ನ ಹೊತ್ಕೊಂಡು ಬರುತ್ತೋ+

12 ಅದೇ ತರ ಯಾಕೋಬನನ್ನ ಯೆಹೋವನೊಬ್ಬನೇ ಮಾರ್ಗದರ್ಶಿಸ್ತಾ ಬಂದ.+

ಬೇರೆ ಯಾವ ದೇವರೂ ಆತನ ಜೊತೆ ಇರಲಿಲ್ಲ.+

13 ಭೂಮಿಯ ಎತ್ತರ ಜಾಗಗಳು ವಶವಾಗೋ ತರ ಆತನು ಮಾಡಿದ,+

ಹೀಗೆ ಹೊಲದ ಬೆಳೆನ ಉಣ್ಣೋ ಹಾಗೆ ಮಾಡಿದ,+

ಕಡಿದಾದ ಬಂಡೆಯಿಂದ ಜೇನನ್ನೂ

ಗಡಸು ಬಂಡೆಯಿಂದ ಎಣ್ಣೆಯನ್ನೂ ಕೊಟ್ಟು ಸಾಕಿದ,

14 ಹಸುಗಳ ಹಾಲಿಂದ ಬೆಣ್ಣೆ, ಆಡು-ಕುರಿಗಳ ಹಾಲು,

ಕೊಬ್ಬಿದ ಕುರಿಗಳ, ಹೋತಗಳ, ಬಾಷಾನಿನ ಟಗರುಗಳ ಮಾಂಸ,

ಶ್ರೇಷ್ಠವಾದ ಗೋದಿ ಕೊಟ್ಟು ಸಾಕಿದ.+

ಅಷ್ಟೇ ಅಲ್ಲ ಅವನು ಕೆಂಪು ದ್ರಾಕ್ಷಿಯ ಮದ್ಯ ಕುಡಿದ.

15 ಯೆಶುರೂನ* ಚೆನ್ನಾಗಿ ತಿಂದು ಕೊಬ್ಬಿದಾಗ ದಂಗೆ ಎದ್ದು ತನ್ನ ಧಣಿನ ಒದ್ದ.

ಅವನು ಕೊಬ್ಬಿ ದಡಿಯನಾಗಿ ಊದ್ಕೊಂಡ.+

ತನ್ನನ್ನ ಸೃಷ್ಟಿ ಮಾಡಿದ ದೇವರನ್ನೇ ಬಿಟ್ಟುಬಿಟ್ಟ.+

ಬಂಡೆ ತರ ಇದ್ದು ರಕ್ಷಿಸಿದ ದೇವರನ್ನೇ ತಿರಸ್ಕರಿಸಿದ.

16 ಅವರು ಬೇರೆ ದೇವರುಗಳನ್ನ ಆರಾಧಿಸಿ ಆತನಿಗೆ ತುಂಬ ಕೋಪ ಬರಿಸಿದ್ರು,+

ಅಸಹ್ಯ ಕೆಲಸಗಳನ್ನ ಮಾಡಿ ಸಿಟ್ಟು ತರಿಸಿದ್ರು.+

17 ಅವರು ದೇವರಿಗಲ್ಲ, ಕೆಟ್ಟ ದೇವದೂತರಿಗೆ ಬಲಿ ಕೊಟ್ರು,+

ಅವ್ರಿಗೂ ಅವ್ರ ಪೂರ್ವಜರಿಗೂ ಗೊತ್ತಿಲ್ಲದ,

ನಿನ್ನೆಮೊನ್ನೆ ಬಂದ ಹೊಸ ಹೊಸ ದೇವರುಗಳಿಗೆ ಬಲಿ ಕೊಟ್ರು.

18 ಅವರು ತಮ್ಮ ಹೆತ್ತ ಅಪ್ಪನ್ನ, ಆಶ್ರಯವಾಗಿದ್ದ ದೇವ್ರನ್ನ ಮರೆತುಬಿಟ್ರು,+

ಅವ್ರನ್ನ ಹುಟ್ಟಿಸಿದ ದೇವರನ್ನೇ ಅವರು ನೆನಪಿಸ್ಕೊಳ್ಳಲಿಲ್ಲ.+

19 ಯೆಹೋವ ಅದನ್ನ ನೋಡಿದ,

ತನ್ನ ಮಕ್ಕಳು ತನಗೆ ಕೋಪ ಬರಿಸಿದ್ರಿಂದ ಅವ್ರನ್ನ ಬಿಟ್ಟುಬಿಟ್ಟ.+

20 ಆತನು ಹೀಗಂದ: ‘ನಾನು ಅವ್ರಿಗೆ ಸಹಾಯ ಮಾಡಲ್ಲ,*+

ಅವ್ರಿಗೆ ಎಂಥ ಗತಿ ಬರುತ್ತೆ ಅಂತ ನೋಡ್ತೀನಿ.

ಅವರು ಕೆಟ್ಟ ಪೀಳಿಗೆಯವರು,+

ಅವರು ನಂಬಿಕೆ ದ್ರೋಹ ಬಗೆದ ಮಕ್ಕಳು.+

21 ದೇವರು ಅಲ್ಲದ್ದನ್ನ ಆರಾಧಿಸಿ ನನಗೆ ರೋಷ ಬರಿಸಿದ್ರು,*+

ಪ್ರಯೋಜನಕ್ಕೆ ಬಾರದ ಮೂರ್ತಿಗಳನ್ನ ಆರಾಧಿಸಿ ನನ್ನ ಮನನೋಯಿಸಿದ್ರು.+

ಹಾಗಾಗಿ ನಾನೂ ಅವ್ರನ್ನ ಪ್ರಯೋಜನಕ್ಕೆ ಬಾರದ ಜನ್ರಿಂದ ಗಲಿಬಿಲಿ ಮಾಡ್ತೀನಿ,+

ಒಂದು ಮೂರ್ಖ ಜನಾಂಗದಿಂದ ಅವ್ರ ಮನನೋಯಿಸ್ತೀನಿ,+

22 ನನ್ನ ಕೋಪ ಬೆಂಕಿ ತರ ಹೊತ್ತಿ ಉರಿಯುತ್ತೆ,+

ಸಮಾಧಿಯ* ತಳದ ತನಕ ಹೋಗಿ ಉರಿಯುತ್ತೆ,+

ಭೂಮಿನ ಅದ್ರ ಬೆಳೆನ ಸುಟ್ಟುಬಿಡುತ್ತೆ,

ಬೆಟ್ಟಗಳ ಬುಡಕ್ಕೆ ಬೆಂಕಿ ಹತ್ಕೊಳ್ಳುತ್ತೆ.

23 ಅವ್ರ ಮೇಲೆ ಒಂದ್ರ ಮೇಲೊಂದು ಕಷ್ಟ ತರ್ತಿನಿ,

ಅವ್ರ ಮೇಲೆ ನನ್ನ ಬಾಣಗಳನ್ನ ಬಿಡ್ತೀನಿ.

24 ಅವರು ಹಸಿದು ಬಳಲಿ ಬಲಹೀನರಾಗ್ತಾರೆ,+

ವಿಪರೀತ ಜ್ವರ ಬಂದು ಸಾಯ್ತಾರೆ, ಅವ್ರ ವಿನಾಶ ಘೋರವಾಗಿರುತ್ತೆ,+

ಅವ್ರನ್ನ ಕೊಲ್ಲೋಕೆ ಕ್ರೂರ ಪ್ರಾಣಿಗಳನ್ನ+

ನೆಲದಲ್ಲಿ ಹರಿದಾಡೋ ವಿಷಹಾವುಗಳನ್ನ ಕಳಿಸ್ತೀನಿ.

25 ಮನೆ ಹೊರಗೆ ಇರೋರು ಕತ್ತಿಯಿಂದ ಸಾಯ್ತಾರೆ,+

ಒಳಗೆ ಇರೋರು ಹೆದರಿ ಸಾಯ್ತಾರೆ,+

ಯುವಕನಾಗ್ಲಿ ಕನ್ಯೆಯಾಗ್ಲಿ ಮಗುವಾಗ್ಲಿ

ಹಣ್ಣು ಮುದುಕನಾಗ್ಲಿ ಎಲ್ರಿಗೂ ಅದೇ ಗತಿ ಆಗುತ್ತೆ.+

26 “ಅವ್ರನ್ನ ನಾನು ಚೆಲ್ಲಾಪಿಲ್ಲಿ ಮಾಡ್ತೀನಿ,

ಯಾರೂ ಯಾವತ್ತೂ ಅವ್ರನ್ನ ನೆನಪಿಸ್ಕೊಳ್ಳದ ತರ ಮಾಡ್ತೀನಿ” ಅಂತ ಹೇಳಬೇಕಂತಿದ್ದೆ.

27 ಆದ್ರೆ ಶತ್ರುಗಳು ತಪ್ಪರ್ಥ ಮಾಡ್ಕೊಂಡು,+

“ನಾವು ಗೆದ್ದಿದ್ದು ನಮ್ಮ ಸ್ವಂತ ಬಲದಿಂದಾನೇ,+

ಯೆಹೋವನಿಂದಲ್ಲ” ಅಂತ ಹಂಗಿಸಬಹುದು ಅಂತ ಯೋಚಿಸಿ+ ಹಾಗೆ ಹೇಳಲಿಲ್ಲ.

28 ಇಸ್ರಾಯೇಲ್ಯರು ಬುದ್ಧಿ ಇಲ್ಲದವರು,*

ಸ್ವಲ್ಪನೂ ತಿಳುವಳಿಕೆ ಇಲ್ಲದವರು.+

29 ಅವ್ರಿಗೆ ಬುದ್ಧಿ ಇದ್ದಿದ್ರೆ+ ಇದ್ರ ಬಗ್ಗೆ ಸ್ವಲ್ಪನಾದ್ರೂ ಯೋಚಿಸ್ತಿದ್ರು.+

ನಮಗೆ ಎಂಥ ಗತಿ ಬರಬಹುದು ಅಂತ ಆಲೋಚಿಸ್ತಿದ್ರು.+

30 ಇಸ್ರಾಯೇಲ್ಯರ ಬಂಡೆಯಾಗಿರೋ ಅವ್ರ ದೇವರೇ ಅವ್ರನ್ನ ಮಾರಿಬಿಟ್ಟ,+

ಯೆಹೋವ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದ.

ಅದಕ್ಕೇ ಅವ್ರಲ್ಲಿ 1,000 ಜನ್ರನ್ನ ಒಬ್ಬನೇ ಅಟ್ಟಿಸ್ಕೊಂಡು ಹೋಗಕ್ಕಾಯ್ತು,

ಅವ್ರಲ್ಲಿ 10,000 ಜನ್ರನ್ನ ಇಬ್ರೇ ಓಡಿಸಿಬಿಟ್ರು.+

31 ಬಂಡೆ ತರ ಇರೋ ನಮ್ಮ ದೇವರ ಹಾಗೆ ಶತ್ರುಗಳ ದೇವರುಗಳು* ಇಲ್ಲ,+

ಇದು ನಮ್ಮ ಶತ್ರುಗಳಿಗೂ ಅರ್ಥ ಆಗಿದ್ಯಲ್ಲಾ.+

32 ಅವರು ಸೊದೋಮಿನಲ್ಲಿ,

ಗೊಮೋರದ ತೋಟದಲ್ಲಿ* ಬೆಳೆದ ದ್ರಾಕ್ಷಿಬಳ್ಳಿ ತರ ಇದ್ದಾರೆ.+

ಅವ್ರ ದ್ರಾಕ್ಷಿ ವಿಷ,

ದ್ರಾಕ್ಷಿಗೊಂಚಲು ಕಹಿ.+

33 ಅವ್ರ ದ್ರಾಕ್ಷಾಮದ್ಯ ಹಾವಿನ ವಿಷ ತರ,

ಅದು ಜೀವ ತೆಗಿಯೋ ನಾಗರಹಾವಿನ ವಿಷ ತರ.

34 ನಾನು ಅವರು ಮಾಡಿದ್ದನ್ನೆಲ್ಲ* ಕೂಡಿಟ್ಟಿದ್ದೀನಿ,

ಅವುಗಳನ್ನ ನನ್ನ ಕಣಜದಲ್ಲಿ ಭದ್ರವಾಗಿ ಇಟ್ಟಿದ್ದೀನಿ.+

35 ಸೇಡು ತೀರಿಸೋದು, ಪ್ರತೀಕಾರ ಮಾಡೋದು ನನ್ನ ಕೆಲಸ,+

ಸಮಯ ಬಂದಾಗ ಅವರು ಕಾಲು ಜಾರಿ ಬೀಳ್ತಾರೆ,+

ಅವರು ನಾಶವಾಗಿ ಹೋಗೋ ದಿನ ಹತ್ರ ಇದೆ,

ಅವರಿಗಾಗಿ ಕಾಯ್ತಾ ಇರೋ ದುರ್ಗತಿ ಬೇಗ ಬರ್ತಿದೆ.’

36 ಯೆಹೋವ ತನ್ನ ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+

ತನ್ನ ಸೇವಕರ ಶಕ್ತಿ ಕಮ್ಮಿ ಆಗಿರೋದನ್ನ,

ನಿಸ್ಸಹಾಯಕ, ಬಲಹೀನ ಪರಿಸ್ಥಿತಿಯಲ್ಲಿ ಇರೋರನ್ನ

ನೋಡಿ ಆತನು ಅವ್ರಿಗೆ ಕನಿಕರ ತೋರಿಸ್ತಾನೆ.*+

37 ಆಗ ಆತನು ಹೀಗಂತಾನೆ: ‘ಅವ್ರ ದೇವರುಗಳು ಎಲ್ಲಿ?+

ಅವರು ಆಶ್ರಯವನ್ನ ಹುಡುಕಿದ ಆ ಬಂಡೆ ಎಲ್ಲಿ?

38 ಬಲಿಪ್ರಾಣಿಯ ಕೊಬ್ಬನ್ನ* ತಿಂತಿದ್ದ,

ಪಾನ ಅರ್ಪಣೆಗಳ ದ್ರಾಕ್ಷಾಮದ್ಯ ಕುಡಿತಿದ್ದ ಆ ದೇವರುಗಳು ಎಲ್ಲಿ?+

ಅವು ಎದ್ದು ಬಂದು ನಿಮಗೆ ಸಹಾಯ ಮಾಡ್ಲಿ,

ಅವು ನಿಮಗೆ ಆಶ್ರಯ ಕೊಡ್ಲಿ.

39 ಈಗ್ಲಾದ್ರೂ ತಿಳ್ಕೊಳ್ಳಿ, ನಾನೇ, ನಾನೇ ದೇವರು,+

ನನ್ನ ಬಿಟ್ಟು ಬೇರೆ ಯಾವ ದೇವರೂ ಇಲ್ಲ.+

ಜೀವ ತೆಗೆಯೋದೂ ನಾನೇ, ಜೀವ ಕೊಡೋದೂ ನಾನೇ.+

ಗಾಯ ಮಾಡೋದೂ ನಾನೇ,+ ವಾಸಿ ಮಾಡೋದೂ ನಾನೇ.+

ನನ್ನ ಕೈಯಿಂದ ಯಾರಿಗೂ ಯಾರನ್ನೂ ಬಿಡಿಸಕ್ಕಾಗಲ್ಲ.+

40 ನಾನು ನನ್ನ ಕೈಯೆತ್ತಿ,*

“ಶಾಶ್ವತಕ್ಕೂ ಜೀವಿಸೋ ನನ್ನ ಮೇಲೆ” ಆಣೆ ಇಟ್ಟು,+

41 ಪಳಪಳ ಹೊಳೆಯೋ ನನ್ನ ಕತ್ತಿನ ಚೂಪಾಗಿ ಮಾಡಿ,

ನ್ಯಾಯತೀರ್ಪು ಮಾಡೋಕೆ ಸಿದ್ಧನಾಗಿ,+

ನನ್ನ ಶತ್ರುಗಳಿಗೆ ಸೇಡು ತೀರಿಸ್ತೀನಿ,+

ನನ್ನನ್ನ ದ್ವೇಷಿಸೋರಿಗೆ ಶಿಕ್ಷೆ ಕೊಡ್ತೀನಿ.

42 ನನ್ನ ಕೈಯಿಂದ ಸತ್ತವರ, ಸೆರೆಸಿಕ್ಕವರ ರಕ್ತದಿಂದ

ನನ್ನ ಬಾಣಗಳು ಮತ್ತೇರೋ ತರ ಮಾಡ್ತೀನಿ.

ಶತ್ರುಗಳಲ್ಲಿರುವ ನಾಯಕರ ರುಂಡಗಳನ್ನ ಚೆಂಡಾಡಿ,

ನನ್ನ ಕತ್ತಿ ಅವರ ಮಾಂಸ ತಿನ್ನೋ ತರ ಮಾಡ್ತೀನಿ.’

43 ಜನಾಂಗಗಳೇ, ದೇವರ ಜನ್ರ ಜೊತೆ ಹರ್ಷಿಸಿ,+

ಆತನು ತನ್ನ ಸೇವಕರ ರಕ್ತನ ಚೆಲ್ಲಿದವರಿಗೆ ಸೇಡು ತೀರಿಸ್ತಾನೆ.+

ತನ್ನ ಶತ್ರುಗಳಿಗೆ ಪ್ರತೀಕಾರ ಮಾಡ್ತಾನೆ,+

ತನ್ನ ಜನ್ರ ದೇಶಕೋಸ್ಕರ ಪ್ರಾಯಶ್ಚಿತ್ತ ಮಾಡ್ತಾನೆ.”*

44 ಹೀಗೆ ಮೋಶೆ ಬಂದು ಈ ಹಾಡಿನ ಪದಗಳನ್ನ ಜನ್ರಿಗೆ ಕೇಳಿಸೋ ಹಾಗೆ ಹೇಳಿದ.+ ಅವನಿಗೆ ನೂನನ ಮಗ ಹೋಷೇಯ*+ ಸಹಾಯ ಮಾಡಿದ. 45 ಮೋಶೆ ಇದನ್ನೆಲ್ಲ ಇಸ್ರಾಯೇಲ್ಯರಿಗೆ ಹೇಳಿ ಮುಗಿಸಿದ ಮೇಲೆ 46 ಅವರಿಗೆ “ನಾನು ಇವತ್ತು ನಿಮಗೆ ಹೇಳಿದ ಎಚ್ಚರಿಕೆ ಮಾತುಗಳನ್ನೆಲ್ಲ ಹೃದಯದಲ್ಲಿ ಇಟ್ಕೊಳ್ಳಿ.+ ಆಗ, ಈ ನಿಯಮ ಪುಸ್ತಕದ ಎಲ್ಲ ನಿಯಮಗಳನ್ನ ಪಾಲಿಸಬೇಕು ಅಂತ ನೀವು ನಿಮ್ಮ ಮಕ್ಕಳಿಗೆ ಹೇಳಕ್ಕಾಗುತ್ತೆ.+ 47 ಇವೆಲ್ಲ ಸುಳ್ಳಲ್ಲ, ಇವುಗಳನ್ನ ಪಾಲಿಸೋದ್ರಿಂದ ನೀವು ಬದುಕಿ ಬಾಳ್ತೀರ.+ ಇವುಗಳ ಪ್ರಕಾರ ನಡೆದ್ರೆ ನೀವು ಯೋರ್ದನ್‌ ನದಿ ದಾಟಿ ವಶ ಮಾಡ್ಕೊಳ್ಳೋ ದೇಶದಲ್ಲಿ ಹೆಚ್ಚು ವರ್ಷ ಬದುಕ್ತೀರ” ಅಂದ.

48 ಅದೇ ದಿನ ಯೆಹೋವ ಮೋಶೆಗೆ 49 “ನೀನು ಯೆರಿಕೋ ಮುಂದೆ ಇರೋ ಮೋವಾಬ್‌ ದೇಶದ ಅಬಾರೀಮ್‌ ಬೆಟ್ಟಕ್ಕೆ+ ಹೋಗು. ಅಲ್ಲಿ ನೆಬೋ ಬೆಟ್ಟ+ ಹತ್ತು. ಅಲ್ಲಿಂದ, ನಾನು ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಕೊಡೋ ಕಾನಾನ್‌ ದೇಶನ+ ನೋಡು. 50 ಆ ಬೆಟ್ಟದ ಮೇಲೆ ನೀನು ಸಾಯ್ತೀಯ. ನಿನ್ನ ಅಣ್ಣ ಆರೋನ ಹೋರ್‌ ಬೆಟ್ಟದ+ ಮೇಲೆ ಸತ್ತಮೇಲೆ ಅವನಿಗೆ ಸಮಾಧಿ ಆದ ಹಾಗೆ ನಿನಗೂ ಸಮಾಧಿ ಆಗುತ್ತೆ. 51 ಯಾಕಂದ್ರೆ ನೀವಿಬ್ರೂ ಚಿನ್‌ ಕಾಡು ಪ್ರದೇಶದ ಕಾದೇಶಿನಲ್ಲಿದ್ದಾಗ ಮೆರೀಬಾ ನೀರಿನ+ ಹತ್ರ ನನಗೆ ನಂಬಿಗಸ್ತರಾಗಿ ನಡ್ಕೊಳ್ಳಲಿಲ್ಲ. ನೀವು ಇಸ್ರಾಯೇಲ್ಯರ ಮುಂದೆ ನನಗೆ ಗೌರವ ಕೊಡಲಿಲ್ಲ.+ 52 ನಾನು ಇಸ್ರಾಯೇಲ್ಯರಿಗೆ ಕೊಡೋ ದೇಶನ ನೀನು ಈಗ ದೂರದಿಂದ ನೋಡು. ಆದ್ರೆ ಆ ದೇಶಕ್ಕೆ ಹೋಗಬಾರದು”+ ಅಂದನು.

33 ಸತ್ಯದೇವರ ಮನುಷ್ಯನಾದ ಮೋಶೆ ಸಾಯೋ ಮುಂಚೆ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡ್ತಾ+ 2 ಹೀಗೆ ಹೇಳಿದ:

“ಯೆಹೋವ ಸಿನಾಯಿ ಬೆಟ್ಟದಿಂದ ಬಂದ,+

ಸೇಯೀರಿನಿಂದ ಅವ್ರ ಮೇಲೆ ಬೆಳಕು ಬೀರಿದ.

ಪಾರಾನಿನ ಬೆಟ್ಟದಿಂದ ಮಹಿಮೆ ತೋರಿಸಿದ,+

ಆತನ ಜೊತೆ ಕೋಟ್ಯಾನುಕೋಟಿ ಪವಿತ್ರ ದೇವದೂತರು ಇದ್ರು,+

ಬಲಗಡೆ ಆತನ ಯುದ್ಧವೀರರು ಇದ್ರು.+

 3 ಆತನು ತನ್ನ ಜನ್ರನ್ನ ಪ್ರೀತಿಸಿದ,+

ಆ ಪವಿತ್ರ ಜನ್ರೆಲ್ಲ ನಿನ್ನ ಕೈಯಲ್ಲಿದ್ದಾರೆ.+

ಅವರು ನಿನ್ನ ಪಾದದ ಹತ್ರ ಕೂತು+

ನಿನ್ನ ಮಾತನ್ನ ಕೇಳ್ತಿದ್ದಾರೆ.+

 4 (ಮೋಶೆ ನಮಗೆ ಆಜ್ಞೆ, ನಿಯಮ ಪುಸ್ತಕ ಕೊಟ್ಟ,+

ಅದು ಯಾಕೋಬನ ವಂಶದವರ ಆಸ್ತಿ.)+

 5 ಜನ್ರ ಮುಖ್ಯಸ್ಥರು, ಇಸ್ರಾಯೇಲ್ಯರ ಎಲ್ಲ ಕುಲದವರು+ ಸೇರಿಬಂದ್ರು,+

ಆಗ ದೇವರು ಯೆಶುರೂನಿನಲ್ಲಿ*+ ರಾಜನಾದ.

 6 ರೂಬೇನ್‌ ಸಾಯದೆ ಸದಾ ಬದುಕ್ಲಿ,+

ಅವನ ಜನ್ರ ಸಂಖ್ಯೆ ಕಮ್ಮಿ ಆಗದಿರಲಿ.”+

 7 ಮೋಶೆ ಯೆಹೂದನಿಗೆ ಹೀಗೆ ಆಶೀರ್ವಾದ ಮಾಡಿದ:+

“ಯೆಹೋವನೇ, ಯೆಹೂದನ ವಿನಂತಿ ಕೇಳಿಸ್ಕೊ,+

ಅವನನ್ನ ಮತ್ತೆ ಅವನ ಜನ್ರ ಜೊತೆ ಸೇರಿಸು.

ಅವನು ತನಗೆ ಸೇರಬೇಕಾಗಿದ್ದನ್ನ ತನ್ನ ತೋಳು ಬಲದಿಂದ ಉಳಿಸ್ಕೊಂಡ,

ತನ್ನ ಶತ್ರುಗಳನ್ನ ಸೋಲಿಸೋಕೆ ಅವನಿಗೆ ನೀನೇ ಸಹಾಯ ಮಾಡು.”+

 8 ಲೇವಿ ಬಗ್ಗೆ ಮೋಶೆ ಹೀಗಂದ:+

“ದೇವರೇ, ನಿನ್ನ ತುಮ್ಮೀಮ್‌ ಮತ್ತು ಊರೀಮ್‌*+ ನಿನ್ನ ನಿಷ್ಠಾವಂತರಿಗೆ ಸೇರಿದೆ,+

ನೀನು ಅವನನ್ನ ಮಸ್ಸದಲ್ಲಿ ಪರೀಕ್ಷಿಸಿದೆ,+

ಅವನ ಜೊತೆ ಮೆರೀಬಾದ ನೀರಿನ ಹತ್ರ ಹೋರಾಡಿದೆ.+

 9 ಅವನು ತನ್ನ ಅಪ್ಪಅಮ್ಮನನ್ನೂ ಲೆಕ್ಕಿಸಲಿಲ್ಲ,

ಅಣ್ಣತಮ್ಮಂದಿರು ಅಂತಾನೂ ನೋಡಲಿಲ್ಲ,+

ಸ್ವಂತ ಮಕ್ಕಳ ಪಕ್ಷ ವಹಿಸಲಿಲ್ಲ.

ಅವರು ನಿನ್ನ ಮಾತು ಕೇಳಿದ್ರು,

ನಿನ್ನ ಒಪ್ಪಂದನ ಪಾಲಿಸಿದ್ರು.+

10 ಅವರು ನಿನ್ನ ತೀರ್ಪುಗಳನ್ನ ಯಾಕೋಬನಿಗೆ ಕಲಿಸ್ಲಿ,+

ನಿನ್ನ ನಿಯಮ ಪುಸ್ತಕನ ಇಸ್ರಾಯೇಲನಿಗೆ ಕಲಿಸ್ಲಿ.+

ನಿನ್ನನ್ನ ಖುಷಿಪಡಿಸೋಕೆ ಸುವಾಸನೆ ಬರೋ ಧೂಪ ಅರ್ಪಿಸ್ಲಿ,+

ನಿನ್ನ ಯಜ್ಞವೇದಿ ಮೇಲೆ ಸರ್ವಾಂಗಹೋಮ ಬಲಿ ಕೊಡ್ಲಿ.+

11 ಯೆಹೋವನೇ, ಅವನಿಗೆ ಹೆಚ್ಚು ಬಲ ಕೊಡು,

ಅವನ ಕೈಕೆಲಸ ನೋಡಿ ನೀನು ಆನಂದ ಪಡು.

ಅವನ ಶತ್ರುಗಳ ಕಾಲುಗಳನ್ನ* ಮುರಿದುಹಾಕು,

ಅವನನ್ನ ದ್ವೇಷಿಸೋರು ಇನ್ಯಾವತ್ತೂ ಅವನ ವಿರುದ್ಧ ಬರದೇ ಇರೋ ತರ ಮಾಡು.”

12 ಬೆನ್ಯಾಮೀನಿನ ಬಗ್ಗೆ ಮೋಶೆ ಹೀಗಂದ:+

“ಯೆಹೋವನಿಗೆ ಇಷ್ಟವಾದ ಇವನನ್ನ ಆತನು ಸಂರಕ್ಷಿಸಲಿ,

ದಿನವಿಡೀ ಆತನ ಆಶ್ರಯದಲ್ಲಿರಲಿ,

ಆತನ ಭುಜಗಳ ಮಧ್ಯ ವಾಸಿಸಲಿ.”

13 ಯೋಸೇಫನ ಬಗ್ಗೆ ಮೋಶೆ ಹೀಗಂದ:+

“ಯೆಹೋವ ಅವನ ಜಮೀನನ್ನ ಆಶೀರ್ವದಿಸಲಿ,+

ಆಕಾಶದಿಂದ ಇಬ್ಬನಿ, ಆಶೀರ್ವಾದ ಅಲ್ಲಿ ಸುರಿಲಿ,

ಬುಗ್ಗೆಗಳಿಂದ ನೀರು ಉಕ್ಕಿ ಹರಿಲಿ,+

14 ಸೂರ್ಯನ ಕಿರಣಗಳಿಂದ ಒಳ್ಳೊಳ್ಳೇ ಗಿಡಮರ ಬೆಳೀಲಿ,

ಪ್ರತಿ ತಿಂಗಳು ಒಳ್ಳೇ ಬೆಳೆ ಸಿಗಲಿ,+

15 ಜಮಾನದ ಬೆಟ್ಟಗಳು,*+ ಶಾಶ್ವತ ಬೆಟ್ಟಗಳು

ಅತ್ಯುತ್ತಮ ವಸ್ತುಗಳನ್ನ ಕೊಡ್ಲಿ,

16 ಭೂಮಿಯ ಸಿರಿಸಂಪತ್ತು ಅವನಿಗೆ ಸೇರಲಿ,+

ಮುಳ್ಳಿನ ಪೊದೆಯಲ್ಲಿ ಕಾಣಿಸ್ಕೊಂಡ ದೇವರು ಅವನನ್ನ ಮೆಚ್ಚಲಿ.+

ಈ ಆಶೀರ್ವಾದಗಳು ಯೋಸೇಫನ ತಲೆ ಮೇಲೆ ಸುರಿಲಿ,

ತನ್ನ ಅಣ್ಣತಮ್ಮಂದಿರಲ್ಲಿ ಆರಿಸ್ಕೊಂಡವನ ಮೇಲೆ ಅವು ಯಾವಾಗ್ಲೂ ಇರಲಿ.+

17 ಅವನ ಹಿರಿಮೆ ಮೊದ್ಲು ಹುಟ್ಟಿದ ಹೋರಿಯ ಹಿರಿಮೆ ತರ,

ಅವನ ಕೊಂಬುಗಳು ಕಾಡು ಕೋಣದ ಕೊಂಬುಗಳ ತರ.

ಅವನು ತನ್ನ ಕೊಂಬುಗಳಿಂದ ದೇಶ ದೇಶದ ಜನ್ರನ್ನ

ಭೂಮಿಯ ಕಟ್ಟಕಡೆಯ ತನಕನೂ ನೂಕ್ತಾನೆ.

ಆ ಕೊಂಬುಗಳೇ ಎಫ್ರಾಯೀಮಿನ ಸಾವಿರಾರು ವೀರರು,+

ಮನಸ್ಸೆಯ ಸಾವಿರಾರು ಶೂರರು.”

18 ಜೆಬುಲೂನನ ಬಗ್ಗೆ ಮೋಶೆ ಹೀಗಂದ:+

“ಜೆಬುಲೂನನೇ, ನಿನ್ನ ವ್ಯಾಪಾರದಲ್ಲಿ ಖುಷಿಪಡು,

ಇಸ್ಸಾಕಾರನೇ, ನಿನ್ನ ಡೇರೆಗಳಲ್ಲಿ ಸಂತೋಷಿಸು.+

19 ಅವರಿಬ್ರು ಸಮುದ್ರಗಳ ಸಮೃದ್ಧ ಸಿರಿಸಂಪತ್ತನ್ನ ಬಾಚ್ಕೊಳ್ತಾರೆ,

ಮರಳಲ್ಲಿ ಅಡಗಿರೋ ನಿಧಿನಿಕ್ಷೇಪಗಳನ್ನ ತಗೊಳ್ತಾರೆ.

ಹಾಗಾಗಿ ಅವರು ಜನ್ರನ್ನ ಬೆಟ್ಟಕ್ಕೆ ಕರೀತಾರೆ.

ಅಲ್ಲಿ ನೀತಿಯ ಬಲಿಗಳನ್ನ ಕೊಡ್ತಾರೆ.”

20 ಗಾದನ ಬಗ್ಗೆ ಮೋಶೆ ಹೀಗಂದ:+

“ಗಾದನ ಗಡಿಗಳನ್ನ ವಿಸ್ತರಿಸೋನು ಆಶೀರ್ವಾದ ಪಡೀತಾನೆ.+

ಅವನು ಸಿಂಹದ ತರ ಹೊಂಚು ಹಾಕಿದ್ದಾನೆ,

ತನ್ನ ಬೇಟೆಯ ತೋಳನ್ನ ಸೀಳೋಕೆ, ತಲೆ ಛಿದ್ರ ಮಾಡೋಕೆ ಕಾಯ್ತಾ ಇದ್ದಾನೆ.

21 ದೇಶದ ಒಳ್ಳೇ ಭಾಗನ ಅವನು ಆರಿಸ್ಕೊಳ್ತಾನೆ,+

ನಿಯಮದಾತ ಇದನ್ನೇ ಅವನಿಗಾಗಿ ಕಾದಿರಿಸಿಟ್ಟ.+

ಅವನು ಜನ್ರ ಮುಖ್ಯಸ್ಥರ ಜೊತೆ ಸೇರ್ತಾನೆ.

ಯೆಹೋವನ ಪರವಾಗಿ ನ್ಯಾಯ ಸ್ಥಾಪಿಸ್ತಾನೆ,

ಆತನ ತೀರ್ಪುಗಳನ್ನ ಇಸ್ರಾಯೇಲಿನಲ್ಲಿ ಜಾರಿಗೆ ತರ್ತಾನೆ.”

22 ದಾನನ ಬಗ್ಗೆ ಮೋಶೆ ಹೀಗಂದ:+

“ದಾನ ಸಿಂಹದ ಮರಿ.+

ಅವನು ಬಾಷಾನಿನಿಂದ ಜಿಗಿತಾನೆ.”+

23 ನಫ್ತಾಲಿಯ ಬಗ್ಗೆ ಮೋಶೆ ಹೀಗಂದ:+

“ನಫ್ತಾಲಿಗೆ ಯೆಹೋವನ ಆಶೀರ್ವಾದ ಹೆಚ್ಚಾಗಿ ಸಿಗ್ಲಿ,

ಆತನ ಮೆಚ್ಚಿಕೆ ಪಡೆದು ಸಂತೃಪ್ತನಾಗಲಿ.

ನೀನು ಪಶ್ಚಿಮ, ದಕ್ಷಿಣದಲ್ಲಿರೋ ದೇಶನ ವಶ ಮಾಡ್ಕೋ.”

24 ಅಶೇರನ ಬಗ್ಗೆ ಮೋಶೆ ಹೀಗಂದ:+

“ಅಶೇರನ ವಂಶ ಬೆಳೀಲಿ.

ಅವನು ಅಣ್ಣತಮ್ಮಂದಿರ ಮೆಚ್ಚಿಕೆ ಪಡಿಲಿ,

ಅವನು ಎಣ್ಣೆಯಲ್ಲಿ ಸ್ನಾನ ಮಾಡ್ಲಿ.*

25 ನಿನ್ನ ಬಾಗಿಲ ಬೀಗಗಳು ಕಬ್ಬಿಣ ಮತ್ತು ತಾಮ್ರದ್ದು,+

ನೀನು ಜೀವನಪೂರ್ತಿ ಸುರಕ್ಷಿತನಾಗಿ ಇರ್ತಿಯ.

26 ಯೆಶುರೂನನ+ ಸತ್ಯ ದೇವರ ತರ ಬೇರೆ ಯಾರೂ ಇಲ್ಲ,+

ನಿನಗೆ ಸಹಾಯ ಮಾಡೋಕೆ ಆತನು ಆಕಾಶದಿಂದ ಸವಾರಿ ಮಾಡಿ ಬರ್ತಾನೆ,

ಮೋಡಗಳ ಮೇಲೆ ಸವಾರಿ ಮಾಡ್ತಾ ವೈಭವದಿಂದ ಬರ್ತಾನೆ.+

27 ದೇವರು ಆಗಿನ ಕಾಲದಿಂದಾನೂ ನಿನ್ನ ಆಶ್ರಯ ಆಗಿದ್ದಾನೆ,+

ಆತನ ಕೈಗಳು ಯಾವಾಗ್ಲೂ ನಿನಗೆ ಆಧಾರವಾಗಿ ಇರುತ್ತೆ.+

ಆತನು ಶತ್ರುಗಳನ್ನ ನಿನ್ನ ಮುಂದಿನಿಂದ ಓಡಿಸಿಬಿಟ್ಟು,+

‘ಅವರನ್ನ ನಾಶ ಮಾಡು!’ ಅಂತ ಹೇಳ್ತಾನೆ.+

28 ಆ ದೇಶದಲ್ಲಿ ಇಸ್ರಾಯೇಲ ಸುರಕ್ಷಿತವಾಗಿ ವಾಸಿಸ್ತಾನೆ,

ಅಲ್ಲಿ ಯಾಕೋಬನ ವಂಶ* ಮಾತ್ರ ಇರುತ್ತೆ,

ಧಾನ್ಯ, ಹೊಸ ದ್ರಾಕ್ಷಾಮದ್ಯ ತುಂಬ ಇರುತ್ತೆ,+

ಆಕಾಶದಿಂದ ಇಬ್ಬನಿ ಬೀಳ್ತಾ ಇರುತ್ತೆ.+

29 ಇಸ್ರಾಯೇಲ್ಯರೇ, ನೀವು ಸಂತೋಷವಾಗಿ ಇರ್ತಿರ!+

ಯೆಹೋವನ ರಕ್ಷಣೆನ ಅನುಭವಿಸೋ ಜನ್ರು ನೀವೇ,+

ನಿಮ್ಮನ್ನು ರಕ್ಷಿಸೋ ಗುರಾಣಿ ಆತನೇ,+

ನಿಮ್ಮ ಅತಿಶ್ರೇಷ್ಠ ಕತ್ತಿ ಆತನೇ,

ಇಂಥ ಸೌಭಾಗ್ಯ ಯಾರಿಗಿದೆ ಹೇಳಿ?+

ನಿಮ್ಮ ಶತ್ರುಗಳು ನಿಮ್ಮ ಮುಂದೆ ಭಯದಿಂದ ಮುದುರಿಕೊಳ್ತಾರೆ,+

ನೀವು ಅವ್ರ ಬೆನ್ನ ಮೇಲೆ* ಹತ್ತಿ ಅವ್ರನ್ನ ತುಳಿದುಬಿಡ್ತೀರ.”

34 ಆಮೇಲೆ ಮೋಶೆ ಮೋವಾಬಿನ ಬಯಲು ಪ್ರದೇಶಗಳಿಂದ ಹೊರಟು ಯೆರಿಕೋವಿನ ಮುಂದೆ+ ಇರೋ ನೆಬೋ ಬೆಟ್ಟ+ ಹತ್ತಿ, ಪಿಸ್ಗಾದ ತುದಿಗೆ+ ಹೋದ. ಯೆಹೋವ ಅವನಿಗೆ ಅಲ್ಲಿಂದ ಇಡೀ ದೇಶ ಅಂದ್ರೆ ಗಿಲ್ಯಾದಿಂದ ದಾನಿನ+ ತನಕ, 2 ನಫ್ತಾಲಿಯ ಎಲ್ಲ ಪ್ರದೇಶ, ಎಫ್ರಾಯೀಮ್‌, ಮನಸ್ಸೆಯ ಪ್ರದೇಶ, ಪಶ್ಚಿಮ ಸಮುದ್ರದ ತನಕ* ಇರೋ ಯೆಹೂದದ ಇಡೀ ಪ್ರದೇಶ,+ 3 ನೆಗೆಬ್‌,+ ಖರ್ಜೂರ ಮರಗಳ ಪಟ್ಟಣವಾಗಿದ್ದ ಯೆರಿಕೋವಿನ ಕಣಿವೆ ಬಯಲಿಂದ ಚೋಗರ್‌+ ಪಟ್ಟಣ ತನಕ ಇದ್ದ ಯೋರ್ದನ್‌ ಪ್ರದೇಶವನ್ನೆಲ್ಲ+ ತೋರಿಸಿದನು.

4 ಆಮೇಲೆ ಯೆಹೋವ ಮೋಶೆಗೆ “ನಾನು ಅಬ್ರಹಾಮ, ಇಸಾಕ, ಯಾಕೋಬರಿಗೆ ಮಾತು ಕೊಟ್ಟ ಹಾಗೆ ಅವರ ಸಂತತಿಯವರಿಗೆ ಕೊಡ್ತೀನಿ+ ಅಂತ ಹೇಳಿದ ದೇಶ ಇದೇ. ಇದನ್ನ ಕಣ್ಣಾರೆ ನೋಡೋ ಅವಕಾಶ ನಿನಗೆ ಕೊಟ್ಟಿದ್ದೀನಿ. ಆದ್ರೆ ನೀನು ಯೋರ್ದನ್‌ ದಾಟಿ ಅಲ್ಲಿಗೆ ಹೋಗಬಾರದು”+ ಅಂದನು.

5 ಯೆಹೋವನ ಸೇವಕನಾದ ಮೋಶೆ ಯೆಹೋವ ಹೇಳಿದ ಹಾಗೆ ಮೋವಾಬ್‌ ದೇಶದಲ್ಲಿ ತೀರಿಹೋದ.+ 6 ದೇವರು ಅವನನ್ನ ಮೋವಾಬ್‌ ದೇಶದ ಕಣಿವೆಯಲ್ಲಿ, ಬೇತ್‌-ಪೆಗೋರಿನ ಮುಂದೆ ಸಮಾಧಿ ಮಾಡಿದನು. ಅವನ ಸಮಾಧಿ ಎಲ್ಲಿದೆ ಅಂತ ಇವತ್ತಿನ ತನಕ ಯಾರಿಗೂ ಗೊತ್ತಿಲ್ಲ.+ 7 ಮೋಶೆ ತೀರಿಕೊಂಡಾಗ ಅವನಿಗೆ 120 ವರ್ಷ.+ ಆ ವಯಸ್ಸಲ್ಲೂ ಅವನ ದೃಷ್ಟಿ ಸ್ವಲ್ಪನೂ ಕಮ್ಮಿ ಆಗಿರಲಿಲ್ಲ, ಶಕ್ತಿ ಕುಂದಿರಲಿಲ್ಲ. 8 ಇಸ್ರಾಯೇಲ್ಯರು ಮೋವಾಬಿನ ಬಯಲು ಪ್ರದೇಶಗಳಲ್ಲಿ ಮೋಶೆಗಾಗಿ 30 ದಿನದ ತನಕ ಅತ್ರು.+ ಆಮೇಲೆ ಆ ಶೋಕಾಚರಣೆ ಮುಗಿತು.

9 ಮೋಶೆ ನೂನನ ಮಗ ಯೆಹೋಶುವನ ಮೇಲೆ ಕೈ ಇಟ್ಟು ಅವನನ್ನ ನಾಯಕನಾಗಿ ನೇಮಿಸಿದ್ರಿಂದ+ ಅವನಲ್ಲಿ ತುಂಬ ವಿವೇಕ ಇತ್ತು.* ಇಸ್ರಾಯೇಲ್ಯರು ಅವನು ಹೇಳಿದ ಹಾಗೆ ನಡಿಯೋಕೆ ಶುರುಮಾಡಿದ್ರು. ಮೋಶೆ ಮೂಲಕ ಯೆಹೋವ ಹೇಳಿದ ಹಾಗೆ ಅವರು ಮಾಡಿದ್ರು.+ 10 ಮೋಶೆ ಯೆಹೋವನ ಬಗ್ಗೆ ತುಂಬ ಚೆನ್ನಾಗಿ ತಿಳ್ಕೊಂಡಿದ್ದ.*+ ಮೋಶೆಯಂಥ ಒಬ್ಬ ಪ್ರವಾದಿ+ ಇವತ್ತಿನ ತನಕ ಇಸ್ರಾಯೇಲ್ಯರಲ್ಲಿ ಇರಲೇ ಇಲ್ಲ. 11 ಈಜಿಪ್ಟ್‌ ದೇಶದಲ್ಲಿ ಫರೋಹನ ಮುಂದೆ, ಅವನ ಸೇವಕರ ಮುಂದೆ, ಅವನ ಇಡೀ ದೇಶದಲ್ಲಿ ಯಾವ ಯಾವ ಸೂಚಕಕೆಲಸ, ಅದ್ಭುತ ಮಾಡೋಕೆ ಯೆಹೋವ ಮೋಶೆಯನ್ನ ಕಳಿಸಿದ್ದನೋ ಅದನ್ನೆಲ್ಲ ಅವನು ಮಾಡಿದ.+ 12 ಮೋಶೆ ಎಲ್ಲ ಇಸ್ರಾಯೇಲ್ಯರ ಮುಂದೆ ಅವರು ಆಶ್ಚರ್ಯ ಪಡೋ ತರ ಅದ್ಭುತಗಳನ್ನ ಮಾಡಿದ.+

ಪದವಿವರಣೆ ನೋಡಿ.

ಅದು, ಯೆಹೋವನ ಶಕ್ತಿಯಿಂದ.

ಅಥವಾ “‘ದಕ್ಷಿಣಕ್ಕೆ’ ಅಂದ್ರೆ ಕಾನಾನ್‌ ದೇಶದ ದಕ್ಷಿಣ ದಿಕ್ಕಿಗೆ.”

ಇದು ಲೆಬನೋನ್‌ ಪರ್ವತ ಶ್ರೇಣಿ ಆಗಿರಬೇಕು.

ಅಥವಾ “ಐಗುಪ್ತದಿಂದ.”

ಅಥವಾ “ಪೂರ್ಣ ಹೃದಯದಿಂದ.” ಅಕ್ಷ. “ಸಂಪೂರ್ಣವಾಗಿ.”

ಬಹುಶಃ, “ದೇವರು ಅವನನ್ನ ಬಲಪಡಿಸಿದ್ದಾನೆ.”

ಅಥವಾ “ಅವರಿಗೆ ಕೋಪ ಬರಿಸಬೇಡಿ.”

ಇದು ಮೋವಾಬಿನ ಒಂದು ಪಟ್ಟಣ. ಬಹುಶಃ ಅದ್ರ ರಾಜಧಾನಿ.

ಅದು, ಕ್ರೇತ.

ಅಥವಾ “ಹೆರಿಗೆ ನೋವಿನಷ್ಟು ನೋವು ಅನುಭವಿಸ್ತಾರೆ.”

ಅಂದ್ರೆ, ಸುತ್ತಮುತ್ತ ಇರೋ ಭೂಭಾಗಕ್ಕಿಂತ ಎತ್ರದಲ್ಲಿರೋ ವಿಸ್ತಾರವಾದ ಚಪ್ಪಟೆಭೂಮಿ.

ಬಹುಶಃ, “ಅಗ್ನಿಶಿಲೆಯಿಂದ.”

ಅಥವಾ “ಶವಪೆಟ್ಟಿಗೆ.”

ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.

ಅರ್ಥ “ಡೇರೆಗಳಿರೋ ಯಾಯೀರನ ಹಳ್ಳಿಗಳು.”

ಅಂದ್ರೆ, ಮೃತ ಸಮುದ್ರ.

ಅಥವಾ “ಒಡಂಬಡಿಕೆಯನ್ನ.”

ಅಥವಾ “ದಶಾಜ್ಞೆಗಳನ್ನ.”

ಅಥವಾ “ಪ್ರತೀಕವನ್ನಾಗಲಿ.”

ಅಥವಾ “ಅನನ್ಯ ಭಕ್ತಿಯನ್ನ.”

ಅಥವಾ “ಕೇಳೋ ಹಕ್ಕಿರೋ.”

ಅಕ್ಷ. “ಯೆಹೋವನನ್ನ ಹುಡುಕಿದ್ರೆ.”

ಪದವಿವರಣೆ ನೋಡಿ.

ಅಥವಾ “ಕಷ್ಟ.”

ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”

ಇದು, ಮೃತ ಸಮುದ್ರ.

ಅಥವಾ “ನನ್ನನ್ನ ವಿರೋಧಿಸಿ ನೀವು ಬೇರೆ ದೇವರುಗಳನ್ನ ಆರಾಧಿಸಬಾರದು.”

ಅಥವಾ “ಅನನ್ಯ ಭಕ್ತಿ ಕೇಳೋ ಹಕ್ಕಿರೋ.”

ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”

ಅಥವಾ “ಅಭಿವೃದ್ಧಿ ಆಗ್ತೀರ.”

ಪದವಿವರಣೆ ನೋಡಿ.

ಅಕ್ಷ. “ಹೃದಯ.”

ಪದವಿವರಣೆ ನೋಡಿ.

ಅಥವಾ “ನಿನ್ನ ಹತ್ರ ಇರೋದ್ರಿಂದ.”

ಅಥವಾ “ಮತ್ತೆಮತ್ತೆ ಹೇಳಬೇಕು; ಮನಸ್ಸಿಗೆ ನಾಟಿಸಬೇಕು.”

ಅಥವಾ “ಅನನ್ಯ ಭಕ್ತಿ ಕೇಳೋ ಹಕ್ಕಿರೋ.”

ಅಕ್ಷ. “ತನ್ನ ಬಲಿಷ್ಠ ಕೈಯಿಂದ.”

ಅಥವಾ “ಅಂತರ್ವಿವಾಹ ಆಗಬಾರದು.”

ಪದವಿವರಣೆ ನೋಡಿ.

ಅಥವಾ “ಅಮೂಲ್ಯ ಆಸ್ತಿಯಾಗಿ.”

ಅಕ್ಷ. “ಬಲಿಷ್ಠ ಕೈಯಿಂದ.”

ಅಥವಾ “ಕಷ್ಟ.”

ಅಕ್ಷ. “ಬಲಿಷ್ಠ ಕೈಯಿಂದ ಮತ್ತು ಚಾಚಿದ ತೋಳಿಂದ.”

ಅಥವಾ “ಬಾತುಹೋಗಲಿಲ್ಲ.”

ಅಥವಾ “ಆಳವಾದ ನೀರಿರೋ ಸ್ಥಳಗಳು.”

ಅಥವಾ “ಜವೆಗೋದಿ.”

ಅಕ್ಷ. “ಬೆರಳಿಂದ.”

ಅಕ್ಷ. “ಮಾರ್ಗ.”

ಅಥವಾ “ಮಾರ್ಗ.”

ಅಕ್ಷ. “ನಿನ್ನ ಬಲಿಷ್ಠ ಕೈಯಿಂದ.”

ಅಕ್ಷ. “ನಿನ್ನ ತೋಳು ಚಾಚಿ.”

ಅಥವಾ “ಪೆಟ್ಟಿಗೆಯನ್ನ.”

ಅಥವಾ “ದಶಾಜ್ಞೆಗಳನ್ನ.”

ಪದವಿವರಣೆ ನೋಡಿ.

ಅಕ್ಷ. “ಹೃದಯಕ್ಕೆ ಸುನ್ನತಿ.”

ಅಥವಾ “ತಂದೆ ಇಲ್ಲದ.”

ಅಕ್ಷ. “ಬಲಿಷ್ಠ ಕೈಯನ್ನ ಮತ್ತು ಚಾಚಿದ ತೋಳನ್ನ.”

ಅಥವಾ “ಕಾಲುಗಳಿಂದ” ಅಂದ್ರೆ ಕಾಲಿಂದ ನೀರಿನ ಚಕ್ರ ತುಳಿಯೋ ಮೂಲಕ ಅಥವಾ ಕಾಲಿಂದ ಕಾಲುವೆ ತೆರಿಯೋ ಮೂಲಕ ಬಿಡಬೇಕಿತ್ತು.

ಅಥವಾ “ಯೆಹೋವನ ದೃಷ್ಟಿ ಅದ್ರ ಮೇಲಿರುತ್ತೆ.”

ಪದವಿವರಣೆ ನೋಡಿ.

ಅಥವಾ “ನಿಮ್ಮ ಹೃದಯ.”

ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಅಕ್ಷ. “ಗಂಡು ಮಕ್ಕಳೂ.”

ಅದು, ಮಹಾ ಸಮುದ್ರ ಅಂದ್ರೆ ಮೆಡಿಟರೇನಿಯನ್‌ ಸಮುದ್ರ.

ಅಕ್ಷ. “ಮಾರ್ಗ.”

ಪದವಿವರಣೆ ನೋಡಿ.

ಅಥವಾ “ಹತ್ತನೇ ಒಂದು ಭಾಗ.”

ಅಂದ್ರೆ, ಬೇಟೆಯಾಡಿ ಹಿಡಿದು ಮನೆಗೆ ತಂದು ತಿನ್ನೋ ಜಿಂಕೆ ತರದ ಪ್ರಾಣಿಗಳ ಮಾಂಸ.

ವಚನ 15ರ ಪಾದಟಿಪ್ಪಣಿ ನೋಡಿ.

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಅಥವಾ “ಹಣೆಯನ್ನ.”

ಅಂದ್ರೆ, ಪೆಲಿಕನ್‌.

ಅಥವಾ “ದಶಮಾಂಶ.”

ಅಥವಾ “ತಂದೆ ಇಲ್ಲದ ಮಕ್ಕಳು.”

ಅಥವಾ “ಅಡ ಇಟ್ಕೊಂಡು ಸಾಲವಾಗಿ.”

ಅಕ್ಷ. “ಪವಿತ್ರೀಕರಿಸು.”

ಅಥವಾ “ನೈಸಾನ್‌.” ಪರಿಶಿಷ್ಟ ಬಿ15 ನೋಡಿ.

ಅಂದ್ರೆ, ಕೊಯ್ಲು ಮಾಡೋಕೆ ಬಳಸೋ ಕತ್ತಿ.

ಅಥವಾ “ತಂದೆ ಇಲ್ಲದ ಮಕ್ಕಳು.”

ಅಥವಾ “ತಾತ್ಕಾಲಿಕ ವಸತಿ.”

ಅಥವಾ “ಪರ್ಣಶಾಲೆಗಳ ಹಬ್ಬ.” ಪದವಿವರಣೆಯಲ್ಲಿ “ಚಪ್ಪರಗಳ ಹಬ್ಬ” ನೋಡಿ.

ಪದವಿವರಣೆ ನೋಡಿ.

ಅಥವಾ “ಸುರುಳಿಯಲ್ಲಿ.”

ಅದು, ಯೆಹೋವ ತನ್ನ ಆರಾಧನೆಗಾಗಿ ಆರಿಸ್ಕೊಳ್ಳೋ ಜಾಗ.

ಅಥವಾ “ಕಲ್ಲು ಜರಗಿಸಿ.”

ಅಥವಾ “ಉಸಿರಿರೋ ಯಾವುದನ್ನೂ.”

ಅಕ್ಷ. “ಸಂತಾನಶಕ್ತಿಯ ಪ್ರಥಮಫಲ.”

ಅಥವಾ “ತಾರಸಿಯ.”

ಅಥವಾ “ತಿರಸ್ಕರಿಸಿ.”

ಅಥವಾ “ತಿರಸ್ಕರಿಸ್ತಾ ಇದ್ದಾನೆ.”

ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಅಥವಾ “ವೇಶ್ಯೆಯಾಗಿ ನಡ್ಕೊಂಡು.”

ಅಥವಾ “ಕೇಡಾಗ್ಲಿ ಅಂತ ಬೈಯೋಕೆ.”

ಅದು, ಪಾಯಿಖಾನೆ.

ಅಥವಾ “ದೇವದಾಸಿ ಆಗಬಾರದು.” ಕಾನಾನ್ಯರು ಆರಾಧನೆಯ ಭಾಗವಾಗಿ ವೇಶ್ಯಾವಾಟಿಕೆ ಮಾಡ್ತಿದ್ರು.

ಅಂದ್ರೆ, ವಿಕೃತ ಕಾಮಕ್ಕಾಗಿ ಬಳಸ್ಕೊಳ್ಳೋ ಹುಡುಗರು.

ಅಥವಾ “ಅವರು ಸಂಪಾದಿಸಿದ.”

ಅಂದ್ರೆ, ಕೊಯ್ಲು ಮಾಡೋಕೆ ಬಳಸೋ ಕತ್ತಿ.

ಅಥವಾ “ತಿರಸ್ಕರಿಸಿ.”

ಅಥವಾ “ಜೀವನಾಧಾರನೇ; ಜೀವಾನೇ.”

“ಕುಷ್ಠರೋಗ” ಅನ್ನೋದ್ರ ಹೀಬ್ರು ಪದಕ್ಕೆ ತುಂಬ ಅರ್ಥ ಇದೆ. ಆ ಪದ, ಒಬ್ರಿಂದ ಇನ್ನೊಬ್ರಿಗೆ ಹರಡೋ ವಿಧವಿಧವಾದ ಚರ್ಮರೋಗಗಳಿಗೆ, ಬಟ್ಟೆ ಮತ್ತು ಮನೆಗಳ ಮೇಲೆ ಕಾಣಿಸೋ ಕೆಲವು ಸೋಂಕುಗಳಿಗೆ ಸೂಚಿಸುತ್ತೆ.

ಅಥವಾ “ತಂದೆ ಇಲ್ಲದ ಮಕ್ಕಳಿಗೆ.”

ಅಕ್ಷ. “ಒಂದು ಏಫಾ ಅಳತೆಯ ಪಾತ್ರೆ.” ಪರಿಶಿಷ್ಟ ಬಿ14 ನೋಡಿ.

ಬಹುಶಃ, “ಪ್ರಾಣಾಪಾಯದಲ್ಲಿದ್ದ.”

ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”

ಅಥವಾ “ತಂದೆ ಇಲ್ಲದ ಮಕ್ಕಳಿಗೆ.”

ಪದವಿವರಣೆ ನೋಡಿ.

ಅಥವಾ “ಗಿಲಾವು ಮಾಡಬೇಕು.”

ಅಥವಾ “ಲೋಹದ ಕೆಲಸ, ಮರದ ಕೆಲಸ ಮಾಡುವವನ.”

ಅಥವಾ “ಹಾಗೇ ಆಗ್ಲಿ.”

ಅಥವಾ “ಅವನ ಆಸ್ತಿಯನ್ನ ಅತಿಕ್ರಮಿಸುವವನಿಗೆ.”

ಅಥವಾ “ತಂದೆ ಇಲ್ಲದ ಮಕ್ಕಳಿಗೆ.”

ಅಥವಾ “ಯೆಹೋವನ ಜನ್ರು.”

ಅಕ್ಷ. “ನನ್ನನ್ನ.”

ಅರ್ಥ, ಮಳೆ ಬರದ ಹಾಗೆ.

ಅರ್ಥ, ಬರಡಾಗೋ ಹಾಗೆ.

ಅಕ್ಷ. “ಗಾದೆ.”

ಅಕ್ಷ. “ನಿಮ್ಮ ಮೇಲೆ ಕಬ್ಬಿಣದ ನೊಗ ಹೊರಿಸ್ತಾರೆ.”

ಅಥವಾ “ಕಷ್ಟ.”

ಅಕ್ಷ. “ಹೃದಯವನ್ನ.”

ಅಕ್ಷ. “ಇವತ್ತು ನಮ್ಮ ಜೊತೆಗೆ ಇಲ್ಲದವ್ರ ಜೊತೆ.”

ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.

ಅಕ್ಷ. “ಹೃದಯ ಇರೋ.”

ಅಕ್ಷ. “ಮಾಚಿಪತ್ರೆ.” ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಅಕ್ಷ. “ಹೃದಯಕ್ಕೇ ಸುನ್ನತಿ ಮಾಡ್ತಾನೆ.”

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಅಥವಾ “ಪರ್ಣಶಾಲೆಗಳ ಹಬ್ಬ.” ಪದವಿವರಣೆಯಲ್ಲಿ “ಚಪ್ಪರಗಳ ಹಬ್ಬ” ನೋಡಿ.

ಅಕ್ಷ. “ಚಿಕ್ಕ ಮಕ್ಕಳು.”

ಅಥವಾ “ನಿಮ್ಮ ನಿಮ್ಮ ಜಾಗದಲ್ಲಿ ನಿಲ್ಲಿ.”

ಅಥವಾ “ವೇಶ್ಯೆ ತರ ನಡ್ಕೊಳ್ಳೋಕೆ.”

ಅಕ್ಷ. “ಅವ್ರಿಂದ ನನ್ನ ಮುಖ ಮರೆಮಾಡ್ತೀನಿ.”

ಅಕ್ಷ. “ಅವ್ರಿಂದ ನನ್ನ ಮುಖ ಮರೆಮಾಡ್ತೀನಿ.”

ಅಕ್ಷ. “ಕೊಬ್ಬಿದಾಗ.”

ಬಹುಶಃ “ದೇವರು” ಆಗಿರಬೇಕು.

ಅಥವಾ “ಕೆಲಸಗಳು ಪರಿಪೂರ್ಣ.”

ಬಹುಶಃ “ಮಾನವಕುಲನ.”

ಅರ್ಥ “ನೀತಿವಂತ.” ಇದು ಇಸ್ರಾಯೇಲ್ಯರಿಗಿದ್ದ ಗೌರವಾನ್ವಿತ ಬಿರುದು.

ಅಕ್ಷ. “ನನ್ನ ಮುಖವನ್ನ ಅವ್ರಿಂದ ಮರೆಮಾಡ್ತೀನಿ.”

ತನ್ನನ್ನ ಮಾತ್ರ ಜನ್ರು ಆರಾಧಿಸಬೇಕಂತ ದೇವರು ಬಯಸೋ ಕಾರಣ, ತನ್ನನ್ನ ಬಿಟ್ಟು ಬೇರೆ ದೇವರನ್ನ ಅವರು ಆರಾಧಿಸಿದಾಗ ಆತನಿಗೆ ಬರೋ ಕೋಪಕ್ಕೆ ಇದು ಸೂಚಿಸುತ್ತೆ. (ವಿಮೋ 20:5)

ಪದವಿವರಣೆ ನೋಡಿ.

ಬಹುಶಃ, “ಬುದ್ಧಿಮಾತನ್ನ ಕೇಳದವರು.”

ಅಕ್ಷ. “ಬಂಡೆ.”

ಅಕ್ಷ. “ಮೆಟ್ಟಿಲುಪಾತಿಗಳಲ್ಲಿ.”

ಅಥವಾ “ಅವರ ತೀರ್ಪುಗಳನ್ನೆಲ್ಲ.”

ಅಥವಾ “ಮನಸ್ಸು ಬದಲಾಯಿಸ್ಕೊಳ್ತಾನೆ.”

ಅಥವಾ “ಅತ್ಯುತ್ತಮ ಭಾಗವನ್ನ.”

ಅಕ್ಷ. “ಸ್ವರ್ಗದ ಕಡೆಗೆ ಕೈಯೆತ್ತಿ.”

ಅಥವಾ “ದೇಶವನ್ನ ಶುದ್ಧ ಮಾಡ್ತಾನೆ.”

ಇದು ಯೆಹೋಶುವನಿಗೆ ಮೊದಲಿದ್ದ ಹೆಸ್ರು. ಹೋಷಾಯ ಹೆಸ್ರಿನ ಸಂಕ್ಷಿಪ್ತರೂಪ ಹೋಷೇಯ. ಹೋಷಾಯ ಅಂದ್ರೆ “ಯಾಹು ರಕ್ಷಿಸಿದ್ದಾನೆ.”

ಅರ್ಥ “ನೀತಿವಂತ.” ಇದು ಇಸ್ರಾಯೇಲ್ಯರಿಗಿದ್ದ ಗೌರವಾನ್ವಿತ ಬಿರುದು.

ಪದವಿವರಣೆ ನೋಡಿ.

ಅಥವಾ “ಸೊಂಟವನ್ನ.”

ಬಹುಶಃ, “ಪೂರ್ವದ ಬೆಟ್ಟಗಳು.”

ಅಕ್ಷ. “ಕಾಲು ಅದ್ದಲಿ.”

ಅಕ್ಷ. “ಬುಗ್ಗೆ.”

ಬಹುಶಃ, “ದೇವಸ್ಥಾನಗಳನ್ನ.”

ಅದು, ಮೆಡಿಟರೇನಿಯನ್‌ ಸಮುದ್ರ.

ಅಥವಾ “ಪವಿತ್ರಶಕ್ತಿಯಿಂದ ಸಿಕ್ಕಿದ ವಿವೇಕ ಇತ್ತು.”

ಅಕ್ಷ. “ಮುಖಾಮುಖಿಯಾಗಿ ಗೊತ್ತಿತ್ತು.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ